ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 5
ಮೈತ್ರೇಯ ಉವಾಚ । ಯಥಾ ಸಸರ್ಜ ದೇವೋಽಸೌ ದೇವರ್ಷಿಪಿತೃದಾನವಾನ್ । ಮನುಷ್ಯತಿರ್ಯಗ್ವೃಕ್ಷಾದೀನ್ ಭೂವ್ಯೋಮಸಲಿಲೌಕಸಃ ।। 1 ।। ಯದ್ಗುಣಂ ಯತ್ಸ್ವಭಾವಂ ಚ ಯತ್ಸ್ವರೂಪಂ ಚ ಜಗದ್ದ್ವಿಜ । ಸರ್ಗಾದೌ ಸೃಷ್ಟವಾನ್ ಬ್ರಹ್ಮಾ ತನ್ಮಮಾಚಕ್ಷ್ವ ವಿಸ್ತರಾತ್ ।। 2 ।।
ಮೈತ್ರೇಯನು ಹೇಳಿದನು: “ದ್ವಿಜ! ಸೃಷ್ಟಿಯ ಆದಿಯಲ್ಲಿ ಬ್ರಹ್ಮನು ದೇವತೆಗಳು, ದೇವರ್ಷಿಗಳು, ಪಿತೃಗಳು, ದಾನವರು, ಮನುಷ್ಯರು, ಯಕ್ಷರು, ವೃಕ್ಷಾದಿಗಳು, ಭೂಮಿ-ಆಕಾಶ-ಜಲಗಳಲ್ಲಿ ವಾಸಿಸುವವುಗಳನ್ನು ಹೇಗೆ ಸೃಷ್ಟಿಸಿದನು? ಅವುಗಳ ಗುಣ, ಸ್ವಭಾವ ಮತ್ತು ರೂಪಗಳೇನು? ಇದನ್ನು ನನಗೆ ವಿಸ್ತಾರವಾಗಿ ಹೇಳು.”
ಪರಾಶರ ಉವಾಚ । ಮೈತ್ರೇಯ ಕಥಯಾಮ್ಯೇತಚ್ಛೃಣುಷ್ವ ಸುಸಮಾಹಿತಃ । ಯಥಾ ಸಸರ್ಜ ದೇವೋಽಸೌ ದೇವಾದೀನಖಿಲಾನ್ವಿಭುಃ ।। 3 ।। ಸೃಷ್ಟಿಂ ಚಿಂತಯತಸ್ತಸ್ಯ ಸರ್ಗಾದಿಷು ಯಥಾ ಪುರಾ । ಅಬುದ್ಧಿಪೂರ್ವಕಃ ಸರ್ಗಃ ಪ್ರಾದುರ್ಭೂತಸ್ತಮೋಮಯಃ ।। 4 ।। ತಮೋ ಮೋಹೋ ಮಹಾಮೋಹಸ್ತಾಮಿಸ್ರೋ ಹ್ಯಂಧಸಂಜ್ಞಿತಃ । ಅವಿದ್ಯಾ ಪಂಚಪರ್ವೈಷಾ ಪ್ರಾದುರ್ಭೂತಾ ಮಹಾತ್ಮನಃ ।। 5 ।। ಪಂಚಧಾವಸ್ಥಿತಃ ಸರ್ಗೋ ಧ್ಯಾಯತೋ ಪ್ರತಿಬೋಧವಾನ್ । ಬಹಿರಂತಶ್ಚಾಪ್ರಕಾಶಃ ಸಂವೃತಾತ್ಮಾ ನಗಾತ್ಮಕಃ ।। 6 ।। ಮುಖ್ಯಾ ನಗಾ ಯತಶ್ಚೋಕ್ತಾ ಮುಖ್ಯಸರ್ಗಸ್ತತಸ್ಮೃತಃ ।। 7 ।।
ಪರಾಶರನು ಹೇಳಿದನು: “ಮೈತ್ರೇಯ! ವಿಭು ದೇವನು ದೇವತೆಗಳೇ ಮೊದಲಾದವರನ್ನು ಹೇಗೆ ಸೃಷ್ಟಿಸಿದನು ಎನ್ನುವುದನ್ನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು. ಸೃಷ್ಟಿಯ ಪ್ರಾರಂಭದಲ್ಲಿ ಹಿಂದಿನ ಕಲ್ಪದಂತೆಯೇ ಸೃಷ್ಟಿಮಾಡಬೇಕೆಂದು ಯೋಚಿಸುತ್ತಿದ್ದ ಪರಮಾತ್ಮನಿಗೆ ಅನಾಸಕ್ತಿಯಿಂದ ಕೂಡಿದ ಅವಿದ್ಯಾವೃತ್ತಿರೂಪವಾದ ಸೃಷ್ಟಿಯು ವ್ಯಕ್ತವಾಯಿತು. ಆ ಮಹಾತ್ಮನಲ್ಲಿ ತಮ, ಮೋಹ, ಮಹಾಮೋಹ, ತಾಮಿಸ್ರ ಮತ್ತು ಅಂಧತಾಮಿಸ್ರ ಎಂಬ ಐದು ಪ್ರಕಾರದ ಅವಿದ್ಯಾ ಪ್ರವೃತ್ತಿಗಳು[1] ಉಂಟಾದವು. ಪರಮಾತ್ರನು ಸೃಷ್ಟಿಮಾಡಬೇಕೆಂದು ಯೋಚಿಸುತ್ತಿದ್ದಾಗ ಸ್ಥಾವರರೂಪವಾದ ಐದು ವಿಧದ ಸೃಷ್ಟಿಯಾಯಿತು[2]. ನಾನು ಇಂಥವನೆಂಬ ತಿಳುವಳಿಕೆಯಿಲ್ಲದ, ಹೊರಗಿನ ಶಬ್ದಾದಿ ವಿಷಯಗಳಲ್ಲಿಯೂ ಒಳಗಿನ ಸುಖಾದಿ ವಿಷಯಗಳಲ್ಲಿಯೂ ಜ್ಞಾನವಿಲ್ಲದ ಮೂಢ ಸ್ವಭಾವವೇ ಸ್ಥಾವರರೂಪವು. ಬ್ರಹ್ಮಸೃಷ್ಟಿಯಲ್ಲಿ ಸ್ಥಾವರಸೃಷ್ಟಿಯೇ ಮೊದಲಾದ್ದರಿಂದ ಇದನ್ನೇ ಮುಖ್ಯ ಸೃಷ್ಟಿಯೆಂದು ಹೇಳಿದೆ.
ತಂ ದೃಷ್ಟ್ವಾಽಸಾಧಕಂ ಸರ್ಗಮಮನ್ಯತ ಪರಂ ಪುನಃ ।। 8 ।। ತಸ್ಯಾಭಿಧ್ಯಾಯತಃ ಸರ್ಗಸ್ತಿರ್ಯಕ್ಸ್ರೋತಾಭ್ಯವರ್ತತ । ಯಸ್ಮಾತ್ತಿರ್ಯಕ್ಪ್ರವೃತ್ತಿಸ್ಸ ತಿರ್ಯಕ್ಸ್ರೋತಾಸ್ತತಃ ಸ್ಮೃತಃ ।। 9 ।। ಪಶ್ವಾದಯಸ್ತೇ ವಿಖ್ಯಾತಾಸ್ತಮಃಪ್ರಾಯಾ ಹ್ಯವೇದಿನಃ । ಉತ್ಪಥಗ್ರಾಹಿಣಶ್ಚೈವ ತೇಽಜ್ಞಾನೇ ಜ್ಞಾನಮಾನಿನಃ ।। 10 ।। ಅಹಂಕೃತಾ ಅಹಂಮಾನಾ ಅಷ್ಟಾವಿಂಶದ್ವಧಾತ್ಮಕಾಃ । ಅಂತಃ ಪ್ರಕಾಶಾಸ್ತೇ ಸರ್ವೇ ಆವೃತಾಶ್ಚ ಪರಸ್ಪರಮ್ ।। 11 ।।
ಸ್ಥಾವರ ಸೃಷ್ಟಿಯು ಪುರುಷಾರ್ಥಸಾಧಕವಲ್ಲ ಎಂದು ತಿಳಿದು ಬ್ರಹ್ಮನು ಬೇರೆ ಸೃಷ್ಟಿಯನ್ನು ಮಾಡಬೇಕೆಂದು ಯೋಚಿಸಿದನು. ಹೀಗೆ ಯೋಚಿಸುತ್ತಿದ್ದಾಗ ಆಹಾರ-ಪಾನಗಳಲ್ಲಿ ಆಸಕ್ತಿಯಿರುವ ಪಶ್ವಾದಿಗಳು ವ್ಯಕ್ತವಾದವು. ಕೆಳಮುಖವಾಗಿ ಆ ಸೃಷ್ಟಿಯು ಹರಿದುದರಿಂದ ಅದಕ್ಕೆ ತಿರ್ಯಕ್ಸ್ರೋತವೆಂಬ ಹೆಸರಾಯಿತು. ಈ ತಿರ್ಯಗ್ಯೋನಿಗಳಾದ ಪಶು-ಪಕ್ಷಿ-ಮೃಗಾದಿಗಳು ತಮೋಗುಣ ಪ್ರಧಾನವಾದವುಗಳು. ತಿಳುವಳಿಕೆಯಿಲ್ಲದವುಗಳು. ಯುಕ್ತಾಯುಕ್ತ ಪರಿಜ್ಞಾನವಿಲ್ಲದೇ ಮನಬಂದಂತೆ ನಡೆಯತಕ್ಕವು. ಅಜ್ಞಾನವನ್ನೇ ಜ್ಞಾನವೆಂದು ತಿಳಿದುಕೊಂಡಿರುವವು. ಅಹಂಕಾರದಿಂದ ತಾನೇ ಹೆಚ್ಚೆಂದು ತಿಳಿದುಕೊಂಡಿರುವವು. ಇಪ್ಪತ್ತೆಂಟು ಬಗೆಯ ನಾಶಸ್ವಭಾವವುಳ್ಳವುಗಳು[3]. ತಂತಮ್ಮ ಸುಖವಿಷಯಗಳ ಜ್ಞಾನ ಮಾತ್ರ ಉಳ್ಳವುಗಳು. ತಂತಮ್ಮಲ್ಲಿ ಪರಸ್ಪರ ಸುಗುಣ-ದುರ್ಗುಣಗಳನ್ನೂ, ಪಿತೃ-ಪುತ್ರಾದಿ ಸಂಬಂಧಗಳನ್ನೂ ಅರಿಯದವು.
ತಮಪ್ಯಸಾಧಕಂ ಮತ್ವಾ ಧ್ಯಾಯತೋಽನ್ಯಸ್ತತೋಽಭವತ್ । ಊರ್ಧ್ವಸ್ರೋತಸ್ತೃತೀಯಸ್ತು ಸಾತ್ತ್ವಿಕೋರ್ಧ್ವಮವರ್ತತ ।। 12 ।। ತೇ ಸುಖಪ್ರೀತಿಬಹುಲಾ ಬಹಿರಂತಶ್ಚ ನಾವೃತಾಃ । ಪ್ರಕಾಶಾ ಬಹಿರಂತಶ್ಚ ಊರ್ಧ್ವಸ್ರೋತೋದ್ಭವಾಃ ಸ್ಮೃತಾಃ ।। 13 ।। ತುಷ್ಟಾತ್ಮನಸ್ತೃತೀಯಸ್ತು ದೇವಸರ್ಗಶ್ಚ ಸಸ್ಮೃತಃ । ತಸ್ಮಿನ್ಸರ್ಗೇಽಭವತ್ಪ್ರೀತಿರ್ನಿಷ್ಪನ್ನೇ ಬ್ರಹ್ಮಣಸ್ತದಾ ।। 14 ।।
ತಿರ್ಯಗ್ಯೋನಿಯ ಪ್ರಾಣಿಗಳನ್ನು ಸೃಷ್ಟಿಸಿ ಬ್ರಹ್ಮನು ಇವೂ ಪುರುಷಾರ್ಥ ಸಾಧಕವಲ್ಲವೆಂದು ತಿಳಿದು ಧ್ಯಾನಾಸಕ್ತನಾಗಲು ಮೂರನೆಯದಾದ ಸುಖಾಧಿಕ್ಯವಾದ ಊರ್ಧ್ವಸ್ರೋತ ಪ್ರಾಣಿಗಳು ಅಂದರೆ ದೇಹದ ಹೊರಗೇ ಆಹಾರಗಳನ್ನು ಗ್ರಹಣಮಾಡುವ[4] ಅಥವಾ ಭೂಮಿಸ್ಪರ್ಶವಿಲ್ಲದ ದೇವಯೋನಿ ವಿಶೇಷಗಳು ವ್ಯಕ್ತವಾದವು. ಆ ದೇವತೆಗಳು ಸತ್ತ್ವಗುಣಾಧಿಕ್ಯವುಳ್ಳವರಾದ್ದರಿಂದ ವಿಷಯೇಂದ್ರಿಯ ಸಂಯೋಗದಿಂದುಂಟಾದ ಸಂತೋಷವನ್ನು ವಿಶೇಷವಾಗಿ ಹೊಂದುತ್ತಾರೆ. ಅವರು ಹೊರಗೂ ಒಳಗೂ ಪ್ರಕಾಶಸ್ವರೂಪರಾಗಿ ಆವರಣವಿಲ್ಲದವರಾಗಿತ್ತಾರೆ. ಸಂತೋಷ ಸ್ವಭಾವದವರಾದ್ದರಿಂದ ಊರ್ಧ್ವಸ್ರೋತವೆಂಬ ಆ ಮೂರನೆಯ ದೇವತೆಗಳ ಸೃಷ್ಟಿಯಿಂದ ಬ್ರಹ್ಮನಿಗೆ ಸಂತೋಷವೂ ಪ್ರೀತಿಯೂ ಉಂಟಾಯಿತು.
ತತೋಽನ್ಯಂ ಸ ತದಾ ದಧ್ಯೌ ಸಾಧಕಂ ಸರ್ಗಮುತ್ತಮಮ್ । ಅಸಾಧಕಾಂಸ್ತು ತಾನ್ ಜ್ಞಾತ್ವಾ ಮುಖ್ಯಸರ್ಗಾದಿಸಂಭವಾನ್ ।। 15 ।। ತಥಾಭಿಧ್ಯಾಯತಸ್ತಸ್ಯ ಸತ್ಯಾಭಿಧ್ಯಾಯಿನಸ್ತತಃ । ಪ್ರಾದುರ್ಭೂತಸ್ತದಾವ್ಯಕ್ತಾದರ್ವಾಕ್ಸ್ರೋತಾಸ್ತು ಸಾಧಕಃ ।। 16 ।। ಯಸ್ಮಾದರ್ವಾಗ್ವ್ಯವರ್ಧಂತ ತತೋಽರ್ವಾಕ್ಸ್ರೋತಸಃ ಸ್ಮೃತಾಃ । ತೇ ಚ ಪ್ರಕಾಶಬಹುಲಾಸ್ತಮೋದ್ರಿಕ್ತಾ ರಜೋಽಧಿಕಾಃ ।। 17 ।। ತಸ್ಮಾತ್ತೇ ದುಃಖಬಹುಲಾ ಭೂಯೋ ಭೂಯಶ್ಚ ಕಾರಿಣಃ । ಪ್ರಕಾಶಾ ಬಹಿರಂತಶ್ಚ ಮನುಷ್ಯಾಃ ಸಾಧಕಾಸ್ತು ತೇ ।। 18 ।।
ನಂತರ ಬ್ರಹ್ಮನು ಆ ಸೃಷ್ಟಿಯೂ ಪುರುಷಾರ್ಥ ಸಾಧಕವಲ್ಲವೆಂದು ತಿಳಿದು ಇನ್ನೂ ಉತ್ತಮ ಸೃಷ್ಟಿಯನ್ನು ಮಾಡಬೇಕೆಂದು ಧ್ಯಾನಾಸಕ್ತನಾದನು. ಸತ್ಯಸಂಕಲ್ಪನಾದ ಬ್ರಹ್ಮನು ಧ್ಯಾನಮಾಡುತ್ತಿದ್ದಾಗ ಅವ್ಯಕ್ತವೆಂಬ ಪ್ರಕೃತಿಯಿಂದ ಪುರುಷಾರ್ಥಸಾಧಕವಾದ ಅರ್ವಾಕ್ ಸ್ರೋತ – ಭೂಮಿಯ ಮೇಲೆ ಆಹಾರಾದಿಗಳಿಂದ ಜೀವಿಸುವ ಮನುಷ್ಯಯೋನಿಗಳು ವ್ಯಕ್ತವಾದವು. ಭೂಮಿಯ ಮೇಲೆ ವಾಸಿಸುತ್ತಾ ಆಹಾರವು ಶರೀರದೊಳಗೆ ಪ್ರವೇಶಿಸುವುದರಿಂದ ಅಭಿವೃದ್ಧಿಹೊಂದುವ ಆ ಮನುಷ್ಯರ ಸೃಷ್ಟಿಗೆ ಆರ್ವಾಕ್ಸ್ರೋತ ಸೃಷ್ಟಿಯೆಂದು ಹೆಸರು. ಮನುಷ್ಯರು ಸತ್ತ್ವರಜಸ್ತಮೋಗುಣಗಳ ಅಧಿಕ್ಯದಿಂದ ಕೂಡಿದವರು. ತಮೋಗುಣದ ಹೆಚ್ಚಿಗೆಯಿಂದ ವಿಶೇಷವಾದ ದುಃಖವುಳ್ಳವರೂ, ರಜೋಗುಣದ ಹೆಚ್ಚಿಗೆಯಿಂದ ವಿಶೇಷಕಾರ್ಯಗಳನ್ನು ಮಾಡಬಲ್ಲವರೂ ಹಾಗೂ ಸತ್ತ್ವಗುಣಾಧಿಕ್ಯದಿಂದ ವಿಶೇಷ ಜ್ಞಾನವುಳ್ಳವರಾಗಿಯೂ, ಕರ್ಮ-ಜ್ಞಾನಗಳಿಗೆ ಅಧಿಕಾರಿಗಳಾದುದರಿಂದ ಇಷ್ಟಾರ್ಥಗಳನ್ನು ಸಾಧಿಸಬಲ್ಲವರೂ ಆಗಿರುತ್ತಾರೆ.
ಇತ್ಯೇತೇ ಕಥಿತಾಃ ಸರ್ಗಾಃ ಷಡೇತೇ ಮುನಿಸತ್ತಮ । ಪ್ರಥಮೋ ಮಹತಃ ಸರ್ಗೋ ವಿಜ್ಞೇಯೋ ಬ್ರಹ್ಮಣಸ್ತು ಸಃ ।। 19 ।। ತನ್ಮಾತ್ರಾಣಾಂ ದ್ವಿತೀಯಶ್ಚ ಭೂತಸರ್ಗಸ್ತು ಸಂಸ್ಮೃತಃ । ವೈಕಾರಿಕಸ್ತೃತೀಯಸ್ತು ಸರ್ಗ ಐಂದ್ರಿಯಕಃ ಸ್ಮೃತಃ ।। 20 ।। ಇತ್ಯೇಷ ಪ್ರಾಕೃತಃ ಸರ್ಗಃ ಸಂಭೂತೋ ಬುದ್ಧಿಪೂರ್ವಕಃ । ಮುಖ್ಯಸರ್ಗಶ್ಚತುರ್ಥಸ್ತು ಮುಖ್ಯಾ ವೈ ಸ್ಥಾವರಾಃ ಸ್ಮೃತಾಃ ।। 21 ।। ಪಂಚಮಶ್ಚ ಹಿ ಯಃ ಪ್ರೋಕ್ತಸ್ತೈರ್ಯಗ್ಯೋನ್ಯಃ ಸ ಉಚ್ಯತೇ । ತತೋರ್ಧ್ವಸ್ರೋತಸಾಂ ಷಷ್ಠೋ ದೇವಸರ್ಗಸ್ತು ಸಂಸ್ಮೃತಃ ।। 22 ।। ತತೋಽರ್ವಾಕ್ಸ್ರೋತಸಾಂ ಸರ್ಗಃ ಸಪ್ತಮಃ ಸ ತು ಮಾನುಷಃ ।। 23 ।। ಅಷ್ಟಮೋಽನುಗ್ರಹಃ ಸರ್ಗಃ ಸಾತ್ತ್ವಿಕಸ್ತಾಮಸಶ್ಚ ಸಃ । ಪಂಚೈತೇ ವೈಕೃತಾಃ ಸರ್ಗಾಃ ಪ್ರಾಕೃತಾಸ್ತು ತ್ರಯಃ ಸ್ಮೃತಾಃ ।। 24 ।। ಪ್ರಾಕೃತೋ ವೈಕೃತಶ್ಚೈವ ಕೌಮಾರೋ ನವಮಃ ಸ್ಮೃತಃ । ಇತ್ಯೇತೇ ವೈ ಸಮಾಖ್ಯಾತಾ ನವ ಸರ್ಗಾಃ ಪ್ರಜಾಪತೇಃ ।। 25 ।। ಪ್ರಾಕೃತಾ ವೈಕೃತಾಶ್ಚೈವ ಜಗತೋ ಮೂಲಹೇತವಃ । ಸೃಜತೋ ಜಗದೀಶಸ್ಯ ಕಿಮನ್ಯಚ್ಛ್ರೋತುಮಿಚ್ಚಸಿ ।। 26 ।।
ಮುನಿಸತ್ತಮ! ಹೀಗೆ ನಾನು ಆರು[5] ವಿಧದ ಸೃಷ್ಟಿಯ ಕುರಿತು ಹೇಳಿದ್ದೇನೆ. ಮಹತ್ತಿನ ಸೃಷ್ಟಿಯೇ ಬ್ರಹ್ಮನ ಮೊದಲನೇ ಸೃಷ್ಟಿಯೆಂದು ತಿಳಿಯಬೇಕು. ಎರಡನೆಯದು ತನ್ಮಾತ್ರಗಳ ಭೂತಸೃಷ್ಟಿ. ಮೂರನೆಯದು ಇಂದ್ರಿಯಗಳ ವೈಕಾರಿಕ ಸೃಷ್ಟಿ. ಇವುಗಳು ಅವಿದ್ಯಾಪೂರ್ವಕವಾದ ಪ್ರಾಕೃತಸೃಷ್ಟಿಗಳು. ಮುಖ್ಯ ಸೃಷ್ಟಿಯೆಂಬ ಸ್ಥಾವರ ಸೃಷ್ಟಿಯು ನಾಲ್ಕನೆಯದು. ತ್ರಿರ್ಯಗ್ಯೋನಿಗಳ ಸೃಷ್ಟಿಯು ಐದನೆಯದು. ಊರ್ಧ್ವಸ್ರೋತದ ದೇವಸೃಷ್ಟಿಯು ಆರನೆಯದು. ನಂತರ ಅರ್ವಾಕ್ಸ್ರೋತದ ಮಾನುಷ ಸೃಷ್ಟಿಯು ಏಳನೆಯದು. ಎಂಟನೆಯದು ಅನುಗ್ರಹಸೃಷ್ಟಿಯು. ಇದು ಸಾತ್ತ್ವಿಕ-ತಾಮಸ ಸ್ವಭಾವದ ಮತ್ತೊಂದು ದೇವಸೃಷ್ಟಿಯು. ಇವುಗಳಲ್ಲಿ ಐದನ್ನು ವೈಕೃತ ಸೃಷ್ಟಿಗಳೆಂದೂ ಮೂರನ್ನು ಪ್ರಾಕೃತ ಸೃಷ್ಟಿಗಳೆಂದೂ ಹೇಳಿದ್ದಾರೆ. ಪ್ರಾಕೃತ-ವೈಕೃತರೂಪದ ಕೌಮಾರ ಸೃಷ್ಟಿಯು ಒಂಬತ್ತನೆಯ ಸೃಷ್ಟಿಯೆಂದು ಹೇಳಿದ್ದಾರೆ. ಹೀಗೆ ಪ್ರಜಾಪತಿಯ ಒಂಬತ್ತು ಸೃಷ್ಟಿಗಳ ಕುರಿತು ಹೇಳಿದ್ದೇನೆ. ಸೃಷ್ಟಿಸುವ ಜಗದೀಶನ ಪ್ರಾಕೃತ-ವೈಕೃತ ಸೃಷ್ಟಿಗಳೇ ಜಗತ್ತಿನ ಮೂಲಕಾರಣಗಳು. ಇನ್ನೂ ಏನನ್ನು ಕೇಳ ಬಯಸುತ್ತೀಯೆ?”
ಮೈತ್ರೇಯ ಉವಾಚ । ಸಂಕ್ಷೇಪಾತ್ಕಥಿತಃ ಸರ್ಗೋ ದೇವಾದೀನಾಂ ತ್ವಯಾ ಮುನೇ । ವಿಸ್ತರಾಚ್ಛ್ರೋತುಮಿಚ್ಚಾಮಿ ತ್ವತ್ತೋ ಮುನಿವರೋತ್ತಮ ।। 27 ।।
ಮೈತ್ರೇಯನು ಹೇಳಿದನು: “ಮುನೇ! ಮುನಿವರೋತ್ತಮ! ನೀನು ದೇವಾದಿಗಳ ಸೃಷ್ಟಿಯನ್ನು ಸಂಕ್ಷಿಪ್ತವಾಗಿ ಹೇಳಿದ್ದೀಯೆ. ಅದನ್ನು ನಿನ್ನಿಂದ ವಿಸ್ತಾರವಾಗಿ ಕೇಳಬಯಸುತ್ತೇನೆ.”
ಪರಾಶರ ಉವಾಚ । ಕರ್ಮಭಿರ್ಭಾವಿತಾಃ ಪೂರ್ವೈಃ ಕುಶಲಾಕುಶಲೈಸ್ತು ತಾಃ । ಖ್ಯಾತ್ಯಾ ತಯಾ ಹ್ಯನಿರ್ಮುಕ್ತಾಃ ಸಂಹಾರೇಽಪ್ಯುಪಸಂಹೃತಾಃ ।। 28 ।। ಸ್ಥಾವರಾಂತಾಃ ಸುರಾದ್ಯಾಶ್ಚ ಪ್ರಜಾ ಬ್ರಹ್ಮಂಶ್ಚತುರ್ವಿಧಾಃ । ಬ್ರಹ್ಮಣಃ ಕುರ್ವತಃ ಸೃಷ್ಟಿಂ ಜಜ್ಞಿರೇ ಮಾನಸಾಸ್ತು ತಾಃ ।। 29 ।।
ಪರಾಶರನು ಹೇಳಿದನು: “ಬ್ರಹ್ಮನ್! ಹಿಂದಿನ ಕಲ್ಪದ ಅಂತ್ಯದಲ್ಲಿ ಉಂಟಾದ ಪ್ರಾಕೃತ ಪ್ರಳಯದಲ್ಲಿ ಉಪಸಂಹೃತರಾದರೂ ಬಿಡದೇ ಇದ್ದ ಪೂರ್ವಜನ್ಮದ ಶುಭಾಶುಭ ಕರ್ಮಗಳ ಸಂಸ್ಕಾರದಿಂದ ಕೂಡಿದ ಸುರ-ನರ-ತಿರ್ಯಕ್-ಸ್ಥಾವರವೆಂಬ ನಾಲ್ಕು ವಿಧವಾದ ಸೃಷ್ಟಿಯನ್ನು ಈ ಕಲ್ಪದಲ್ಲಿಯೂ ಮಾಡಬೇಕೆಂದು ಇಚ್ಛಿಸಿದ ಬ್ರಹ್ಮನಿಗೆ ಮಾನಸಪುತ್ರರು ಜನಿಸಿದರು.
ತತೋ ದೇವಾಸುರಪಿತೄನ್ಮನುಷ್ಯಾಂಶ್ಚ ಚತುಷ್ಟಯಮ್ । ಸಿಸೃಕ್ಷುರಂಭಾಂಸ್ಯೇತಾನಿ ಸ್ವಮಾತ್ಮಾನಮಯೂಯುಜತ್ ।। 30 ।। ಯುಕ್ತಾತ್ಮನಸ್ತಮೋಮಾತ್ರಾ ಹ್ಯುದ್ರಿಕ್ತಾಭೂತ್ಪ್ರಜಾಪತೇಃ । ಸಿಸೃಕ್ಷೋರ್ಜಘನಾತ್ಪೂರ್ವಮಸುರಾ ಜಜ್ಞಿರೇ ತತಃ ।। 31 ।। ಉತ್ಸಸರ್ಜ ತತಸ್ತಾಂ ತು ತಮೋಮಾತ್ರಾತ್ಮಿಕಾಂ ತನುಮ್ । ಸಾ ತು ತ್ಯಕ್ತಾ ತತಸ್ತೇನ ಮೈತ್ರೇಯಾಭೂದ್ವಿಭಾವರೀ ।। 32 ।।
ನಂತರ ಬ್ರಹ್ಮನು ಅಂಭಸ್[6] ಎಂಬ ಸಂಜ್ಞೆಯುಳ್ಳ ದೇವ-ಅಸುರ-ಪಿತೃ-ಮನುಷ್ಯ ಎಂಬ ನಾಲ್ಕು ವಿಧದ ಪ್ರಾಣಿಗಳನ್ನು ತನ್ನ ಶರೀರದಿಂದ ಸೃಷ್ಟಿಮಾಡಬೇಕೆಂದು ಮನಸ್ಸುಮಾಡಿದನು. ಹೀಗೆ ಸೃಷ್ಟಿಮಾಡಬೇಕೆಂದಿದ್ದ ಪ್ರಜಾಪತಿಯ ತಮೋಗುಣದ ಆವೇಶದಿಂದ ಅವನ ಸೊಂಟದಿಂದ ಮೊದಲು ಅಸುರರು ಹುಟ್ಟಿದರು. ನಂತರ ಬ್ರಹ್ಮನು ತನ್ನ ತಮೋಮಯ ಶರೀರವನ್ನು ತೊರೆದನು. ಮೈತ್ರೇಯ! ಬಿಟ್ಟ ಆ ಶರೀರವೇ ರಾತ್ರಿಯಾಯಿತು.
ಸಿಸೃಕ್ಷುರನ್ಯದೇಹಸ್ಥಃ ಪ್ರೀತಿಮಾಪ ತತಃ ಸುರಾಃ । ಸತ್ತ್ವೋದ್ರಿಕ್ತಾಃ ಸಮುದ್ಭೂತಾ ಮುಖತೋ ಬ್ರಹ್ಮಣೋ ದ್ವಿಜ ।। 33 ।। ತ್ಯಕ್ತಾ ಸಾಪಿ ತನುಸ್ತೇನ ಸತ್ತ್ವಪ್ರಾಯಮಭೂದ್ದಿನಮ್ । ತತೋ ಹಿ ಬಲಿನೋ ರಾತ್ರಾವಸುರಾ ದೇವತಾ ದಿವಾ ।। 34 ।।
ದ್ವಿಜ! ನಂತರ ಬ್ರಹ್ಮನು ಮತ್ತೊಂದು ಶರೀರದಿಂದ ಸೃಷ್ಟಿಮಾಡ ಬಯಸಿ ಸತ್ತ್ವಗುಣಾಧಿಕ್ಯದಿಂದ ಕೂಡಿರಲು ಅವನ ಮುಖದಿಂದ ದೇವತೆಗಳು ಹುಟ್ಟಿದರು. ನಂತರ ಬ್ರಹ್ಮನು ಸತ್ತ್ವಗುಣಾಧಿಕವಾದ ಶರೀರವನ್ನು ತೊರೆಯಲು ಅದು ಪ್ರಕಾಶಸ್ವರೂಪವಾದ ಹಗಲಾಯಿತು. ಆ ಕಾರಣದಿಂದ ರಾತ್ರಿಯಲ್ಲಿ ಅಸುರರೂ ಹಗಲಿನಲ್ಲಿ ದೇವತೆಗಳೂ ಬಲವುಳ್ಳವರಾದರು.
ಸತ್ತ್ವಮಾತ್ರಾತ್ಮಿಕಾಮೇವ ತತೋಽನ್ಯಾಂ ಜಗೃಹೇ ತನುಮ್ । ಪಿತೃವನ್ಮನ್ಯಮಾನಸ್ಯ ಪಿತರಸ್ತಸ್ಯ ಜಜ್ಞಿರೇ ।। 35 ।। ಉತ್ಸಸರ್ಜ ಪಿತೄನ್ಸೃಷ್ಟ್ವಾ ತತಸ್ತಾಮಪಿ ಸ ಪ್ರಭುಃ । ಸಾ ಚೋತ್ಸೃಷ್ಟಾಭವತ್ ಸಂಧ್ಯಾ ದಿನನಕ್ತಾಂತರಸ್ಥಿತಃ ।। 36 ।।
ನಂತರ ಪ್ರಭು ಬ್ರಹ್ಮನು ಸತ್ತ್ವಗುಣಮಾತ್ರವೇ ಪ್ರಧಾನವಾದ ಮತ್ತೊಂದು ಶರೀರವನ್ನು ಪಡೆದು ತಾನೇ ಪಿತೃವೆಂದು ತಿಳಿದುಕೊಳ್ಳಲು ಅವನ ಪಾರ್ಶ್ವಗಳಿಂದ ಪಿತೃದೇವತೆಗಳು ಹುಟ್ಟಿದರು. ಪಿತೃಗಳನ್ನು ಸೃಷ್ಟಿಸಿದ ನಂತರ ಬ್ರಹ್ಮನು ಆ ಶರೀರವನ್ನೂ ತೊರೆದನು. ಬಿಟ್ಟ ಆ ಶರೀರವು ಹಗಲು-ರಾತ್ರಿಗಳ ನಡುವಿನ ಸಂಧ್ಯಾಕಾಲವಾಯಿತು.
ರಜೋಮಾತ್ರಾತ್ಮಿಕಾಮನ್ಯಾಂ ಜಗೃಹೇ ಸ ತನುಂ ತತಃ । ರಜೋಮಾತ್ರೋತ್ಕಟಾ ಜಾತಾ ಮನುಷ್ಯಾ ದ್ವಿಜಸತ್ತಮ ।। 37 ।। ತಾಮಪ್ಯಾಶು ಸ ತತ್ಯಾಜ ತನುಂ ಸದ್ಯಃ ಪ್ರಜಾಪತಿಃ । ಜ್ಯೋತ್ಸ್ನಾ ಸಮಭವಚ್ಚಾಪಿ ಪ್ರಾಕ್ಸಂಧ್ಯಾ ಯಾಭಿಧೀಯತೇ ।। 38 ।। ಜ್ಯೋತ್ಸ್ನಾಗಮೇ ತು ಬಲಿನೋ ಮನುಷ್ಯಾಃ ಪಿತರಸ್ತಥಾ । ಮೈತ್ರೇಯ ಸಂಧ್ಯಾಸಮಯೇ ತಸ್ಮಾದೇತೇ ಭವಂತಿ ವೈ ।। 39 ।। ಜ್ಯೋತ್ಸ್ನಾ ರಾತ್ರ್ಯಹನೀ ಸಂಧ್ಯಾ ಚತ್ವಾರ್ಯೇತಾನಿ ವೈ ವಿಭೋಃ । ಬ್ರಹ್ಮಣಸ್ತು ಶರೀರಾಣಿ ತ್ರಿಗುಣೋಪಾಶ್ರಯಾಣಿ ತು ।। 40 ।।
ದ್ವಿಜಸತ್ತಮ! ನಂತರ ಬ್ರಹ್ಮನು ರಜೋಗುಣಮಾತ್ರ ಪ್ರಧಾನವಾದ ಮತ್ತೊಂದು ಶರೀರವನ್ನು ಪಡೆದು, ಸೃಷ್ಟಿಸಂಕಲ್ಪವನ್ನು ಮಾಡಲು, ಆ ಶರೀರದಿಂದ ರಜೋಗುಣವೇ ಅಧಿಕವಾಗಿರುವ ಮನುಷ್ಯರು ಹುಟ್ಟಿದರು. ಆ ಕ್ಷಣದಲ್ಲಿಯೇ ಪ್ರಜಾಪತಿ ಬ್ರಹ್ಮನು ಆ ಶರೀರವನ್ನೂ ತೊರೆದನು. ಅದು ಪ್ರಾತಃಕಾಲದ ಬೆಳದಿಂಗಳಾಯಿತು. ಆದ್ದರಿಂದ ಮನುಷ್ಯರು ಪ್ರಾತಃಕಾಲದಲ್ಲಿಯೂ ಪಿತೃಗಳು ಸಂಧ್ಯಾಕಾಲದಲ್ಲಿಯೂ ಬಲಿಷ್ಠರಾಗಿರುತ್ತಾರೆ. ಪ್ರಾತಃಕಾಲ, ರಾತ್ರಿ, ಹಗಲು, ಮತ್ತು ಸಂಧ್ಯಾ – ಈ ನಾಲ್ಕೂ ಸೃಷ್ಟಿಕರ್ತ ಬ್ರಹ್ಮನ ತ್ರಿಗುಣಾತ್ಮಕವಾದ ಶರೀರಗಳು.
ರಜೋಮಾತ್ರಾತ್ಮಿಕಾಮೇವ ತತೋಽನ್ಯಾಂ ಜಗೃಹೇ ತನುಮ್ । ತತಃ ಕ್ಷುದ್ಬ್ರಹ್ಮಣೋ ಜಾತಾ ಜಜ್ಞೇ ಕೋಪಸ್ತಯಾ ತತಃ ।। 41 ।। ಕ್ಷುತ್ಕ್ಷಾಮಾನಂಧಕಾರೇಽಥ ಸೋಽಸೃಜದ್ಭಗವಾನ್ ಪ್ರಭುಃ । ವಿರೂಪಾಃ ಶ್ಮಶ್ರುಲಾ ಜಾತಾಸ್ತೇಽಭ್ಯಧಾವಂಸ್ತತಃ ಪ್ರಭುಮ್ ।। 42 ।। ಮೈವಂ ಭೋ ರಕ್ಷ್ಯತಾಮೇಷ ಯೈರುಕ್ತಂ ರಾಕ್ಷಸಾಸ್ತು ತೇ । ಊಚುರ್ಜಕ್ಷಾಮ ಇತ್ಯನ್ಯೇ ಯೇ ತೇ ಯಕ್ಷಾಸ್ತು ಜಕ್ಷಣಾತ್ ।। 43 ।।
ನಂತರ ಬ್ರಹ್ಮನು ರಜೋಗುಣಮಾತ್ರವಾದ ಇನ್ನೊಂದು ಶರೀರವನ್ನು ಪಡೆದುಕೊಂಡನು. ಅದರಿಂದ ಬ್ರಹ್ಮನಿಗೆ ಹಸಿವೆಯುಂಟಾಯಿತು. ಹಸಿವೆಯಿಂದ ಕೋಪವೂ ಉಂಟಾಯಿತು. ಆಗ ಬ್ರಹ್ಮನು ಆ ಶರೀರದಿಂದ ಕತ್ತಲೆಯಲ್ಲಿ ಹಸಿವೆಯಿಂದ ಕೃಶವಾದ ಪ್ರಾಣಿಗಳನ್ನು ಸೃಷ್ಟಿಸಿದನು. ಆ ಪ್ರಾಣಿಗಳು ವಿಕಾರವಾಗಿಯೂ, ಮುಖದಲ್ಲಿ ವಿಶೇಷವಾದ ಮೀಸೆ-ಗಡ್ಡಗಳುಳ್ಳವರೂ ಆಗಿ ಹುಟ್ಟಿದರು. ಅವರು ಬ್ರಹ್ಮನನ್ನೇ ತಿನ್ನಬೇಕೆಂದು ಓಡಿಬಂದರು. ಅವರಲ್ಲಿ “ಭೋ! ಇವನನ್ನು ತಿನ್ನಬೇಡಿ! ರಕ್ಷಿಸಿ!” ಎಂದು ಹೇಳಿದವರು ರಾಕ್ಷಸರಾದರು. “ಜಕ್ಷಾಮಃ” ಅಂದರೆ “ತಿನ್ನೋಣ” ಎಂದು ಹೇಳಿದವರು ಯಕ್ಷರಾದರು.[7]
ಅಪ್ರಿಯೇಣ ತು ತಾನ್ದೃಷ್ಟ್ವಾ ಕೇಶಾಃ ಶೀರ್ಯಂತ ವೇಧಸಃ । ಹೀನಾಶ್ಚ ಶಿರಸೋ ಭೂಯಃ ಸಮಾರೋಹಂತ ತಚ್ಛಿರಃ ।। 44 ।। ಸರ್ಪಣಾತ್ತೇಽಭವನ್ಸರ್ಪಾ ಹೀನತ್ವಾದಹಯಃ ಸ್ಮೃತಾಃ । ತತಃ ಕ್ರುದ್ಧೋ ಜಗತ್ಸ್ರಷ್ಟಾ ಕ್ರೋಧಾತ್ಮಾನೋ ವಿನಿರ್ಮಮೇ । ವರ್ಣೇನ ಕಪಿಶೇನೋಗ್ರಾ ಭೂತಾಸ್ತೇ ಪಿಶಿತಾಶನಾಃ ।। 45 ।। ಧ್ಯಾಯತೋಽಂಗಾತ್ಸಮುತ್ಪನ್ನಾ ಗಂಧರ್ವಾಸ್ತಸ್ಯ ತತ್ಕ್ಷಣಾತ್ । ಪಿಬಂತೋ ಜಜ್ಞಿರೇ ಗಾಂ ವೈ ಗಂಧರ್ವಾಸ್ತೇನ ತೇ ದ್ವಿಜ ।। 46 ।।
ಸೃಷ್ಟಿಸಿದ ಆ ಪ್ರಾಣಿಗಳನ್ನು ನೋಡಿ ಬ್ರಹ್ಮನು ಅಪ್ರೀತನಾದನು. ಅದರಿಂದಾಗಿ ಅವನ ತಲೆಯ ಕೂದಲುಗಳು ಬಿದ್ದುಹೋದವು. ಪುನಃ ಅವು ತಲೆಯನ್ನೇರಿದವು. ತಲೆಯಿಂದಿಳಿದು ಹೀನವಾದುದರಿಂದ ಅವನ ತಲೆಗೂದಲುಗಳು ಅಹಿಗಳೆಂದೂ, ತಲೆಯನ್ನೇರಿದುದರಿಂದ ಸರ್ಪಗಳೆಂದೂ ಹೆಸರನ್ನು ಪಡೆದವು. ಬ್ರಹ್ಮನು ಕೋಪದಿಂದ ಇವುಗಳನ್ನು ಸೃಷ್ಟಿಸಿದನು. ದ್ವಿಜ! ಗಾಂ ಎಂದರೆ ವಾಣಿಯನ್ನು ಧಯತಃ ಎಂದರೆ ಪಾನಮಾಡುವವರು ಅರ್ಥಾತ್ ಗಾನಮಾಡುವವರು. ಈ ಅರ್ಥದಿಂದ ಬ್ರಹ್ಮನ ಶರೀರದಿಂದ ಗಂಧರ್ವರು ಹುಟ್ಟಿದರು.
ಏತಾನಿ ಸೃಷ್ಟ್ವಾ ಭಗವಾನ್ ಬ್ರಹ್ಮಾ ತಚ್ಛಕ್ತಿಚೋದಿತಃ । ತತಃ ಸ್ವಚ್ಚಂದತೋಽನ್ಯಾನಿ ವಯಾಂಸಿ ವಯಸೋಽಸೃಜತ್ ।। 47 ।। ಅವಯೋ ವಕ್ಷಸಶ್ಚಕ್ರೇ ಮುಖತೋಽಜಾಃ ಸ ಸೃಷ್ಟವಾನ್ । ಸೃಷ್ಟವಾನುದರಾದ್ಗಾಶ್ಚ ಪಾರ್ಶ್ವಾಭ್ಯಾಂ ಚ ಪ್ರಜಾಪತಿಃ ।। 48 ।। ಪದ್ಭ್ಯಾಂ ಚಾಶ್ವಾನ್ಸಮಾತಂಗಾನ್ರಾಸಭಾನ್ಗವಯಾನ್ಮೃಗಾನ್ । ಉಷ್ಟ್ರಾನಶ್ವತರಾಂಶ್ಚೈವ ನ್ಯಂಕೂನನ್ಯಾಶ್ಚ ಜಾತಯಃ ।। 49 ।। ಓಷಧ್ಯಃ ಫಲಮೂಲಿನ್ಯೋ ಲೋಮಭ್ಯಸ್ತಸ್ಯ ಜಜ್ಞಿರೇ ।
ಪೂರ್ವಕರ್ಮ ರೂಪವಾದ ಶಕ್ತಿಗಳಿಂದ ಪ್ರೇರಿತನಾಗಿ ಈ ಪ್ರಾಣಿಗಳನ್ನು ಸೃಷ್ಟಿಸಿ ಭಗವಾನ್ ಬ್ರಹ್ಮನು ಸ್ವಚ್ಚಂದದಿಂದ ಆಕಾಶದಲ್ಲಿ ಹಾರಬಲ್ಲ ಪಕ್ಷಿಗಳನ್ನು ಸೃಷ್ಟಿಸಿದನು. ತನ್ನ ವಕ್ಷಸ್ಥಳದಿಂದ ಕುರಿಗಳನ್ನೂ, ಮುಖದಿಂದ ಆಡುಗಳನ್ನೂ, ಉದರ-ಪಕ್ಕೆಗಳಿಂದ ಗೋವುಗಳನ್ನೂ, ಪಾದಗಳಿಂದ ಕುದುರೆ-ಆನೆ-ಕತ್ತೆ-ಗವಯ-ಜಿಂಕೆ-ಒಂಟೆ-ಹೇಸರಗತ್ತೆ-ಸಾರಂಗ ಮೊದಲಾದ ಮೃಗಗಳನ್ನೂ ಸೃಷ್ಟಿಸಿದನು. ಅವನ ರೋಮಗಳಿಂದ ಓಷಧಿಗಳೂ, ಫಲ-ಮೂಲಗಳೂ ಹುಟ್ಟಿದವು.
ತ್ರೇತಾಯುಗಮುಖೇ ಬ್ರಹ್ಮಾ ಕಲ್ಪಸ್ಯಾದೌ ದ್ವಿಜೋತ್ತಮ । ಸೃಷ್ಟ್ವಾ ಪಶ್ವೋಷಧೀಃ ಸಮ್ಯಗ್ಯುಯೋಜ ಸ ತದಾಧ್ವರೇ ।। 50 ।। ಗೌರಜಃ ಪುರುಷೋ ಮೇಷಶ್ಚಾಶ್ವಾಶ್ವತರಗರ್ದಭಾಃ । ಏತಾನ್ಗ್ರಾಮ್ಯಾನ್ಪಶೂನಾಹುರಾರಣ್ಯಾಂಶ್ಚ ನಿಬೋಧ ಮೇ ।। 51 ।। ಶ್ವಾಪದಾ ದ್ವಿಖುರಾ ಹಸ್ತಿ ವಾನರಾಃ ಪಕ್ಷಿಪಂಚಮಾಃ । ಔದಕಾಃ ಪಶವಃ ಷಷ್ಠಾಃ ಸಪ್ತಮಾಸ್ತು ಸರೀಸೃಪಾಃ ।। 52 ।।
ದ್ವಿಜೋತ್ತಮ! ಕಲ್ಪದ ಆದಿಯಲ್ಲಿ ತ್ರೇತಾಯುಗದ ಆರಂಭದಲ್ಲಿ[8] ಬ್ರಹ್ಮನು ಯಜ್ಞಕ್ಕಾಗಿ ಪಶು-ಔಷಧಿಗಳನ್ನು ಸೃಷ್ಟಿಸಿ ಅವುಗಳನ್ನು ಅಧ್ವರಗಳಲ್ಲಿ ಬಳಸಿದನು. ಪಶುಗಳಲ್ಲಿ ಎರಡು ವಿಧ: ಗ್ರಾಮ್ಯ ಮತ್ತು ಅರಣ್ಯ. ಗೋವು, ಆಡು, ಮನುಷ್ಯ, ಕುರಿ, ಕುದುರೆ, ಹೇಸರಗತ್ತೆ, ಕತ್ತೆ – ಇವು ಗ್ರಾಮ್ಯ ಪಶುಗಳೆಂದು ಹೇಳುತ್ತಾರೆ. ಅರಣ್ಯ ಪಶುಗಳ ಕುರಿತು ನನ್ನಿಂದ ಕೇಳು. ಹುಲಿ-ಸಿಂಹ-ಚಿರತೆ ಮೊದಲಾದ ಕ್ರೂರಪ್ರಾಣಿಗಳು, ಎರಡು ಗೊರಸುಗಳ ಜಿಂಕೆ ಮೊದಲಾದ ಪ್ರಾಣಿಗಳು, ಆನೆಗಳು, ವಾನರರು, ಐದನೆಯದಾಗಿ ಪಕ್ಷಿಗಳು, ಆರನೆಯದಾಗಿ ಮೀನು-ಆಮೆ ಮೊದಲಾದ ನೀರಿನಲ್ಲಿ ವಾಸಿಸುವ ಪ್ರಾಣಿಗಳು, ಹಾಗೂ ಏಳನೆಯದಾಗಿ ಹಾವು ಮೊದಲಾದ ಸರೀಸೃಪಗಳು – ಇವು ಅರಣ್ಯ ಪ್ರಾಣಿಗಳು.
ಗಾಯತ್ರಂ ಚ ಋಚಶ್ಚೈವ ತ್ರಿವೃತ್ಸೋಮಂ ರಥಂತರಮ್ । ಅಗ್ನಿಷ್ಟೋಮಂ ಚ ಯಜ್ಞಾನಾಂ ನಿರ್ಮಮೇ ಪ್ರಥಮಾನ್ಮುಖಾತ್ ।। 53 ।। ಯಜೂಂಷಿ ತ್ರೈಷ್ಟುಭಂ ಛಂದಃ ಸ್ತೋಮಂ ಪಂಚದಶಂ ತಥಾ । ಬೃಹತ್ಸಾಮ ತಥೋಕ್ಥ್ಯಂ ಚ ದಕ್ಷಿಣಾದಸೃಜನ್ಮುಖಾತ್ ।। 54 ।। ಸಾಮಾನಿ ಜಗತೀಛಂದಸ್ತೋಮಂ ಸಪ್ತದಶಂ ತಥಾ । ವೈರೂಪಮತಿರಾತ್ರಂ ಚ ಪಶ್ಚಿಮಾದಸೃಜನ್ಮುಖಾತ್ ।। 55 ।। ಏಕವಿಂಶಮಥರ್ವಾಣಮಾಪ್ತೋರ್ಯಾಮಾಣಮೇವ ಚ । ಅನುಷ್ಟುಭಂಚಾವೈರಾಜಮುತ್ತರಾದಸೃಜನ್ಮುಖಾತ್ ।। 56 ।।
ಅವನು ತನ್ನ ಪ್ರಥಮ ಮುಖದಿಂದ[9] ಗಾಯತ್ರೀ ಛಂದಸ್ಸು[10], ಋಕ್ಕುಗಳು[11], ತ್ರಿವೃತ್ ಸ್ತೋಮ[12], ರಥಂತರ ಸಾಮ[13], ಮತ್ತು ಅಗ್ನಿಷ್ಟೋಮ ಯಾಗವನ್ನು[14] ನಿರ್ಮಿಸಿದನು. ದಕ್ಷಿಣದಿಕ್ಕಿನ ಮುಖದಿಂದ ಯಜು, ತ್ರಿಷ್ಟುಪ್ ಛಂದಸ್ಸು, ಪಂಚದಶಸ್ತೋಮ, ಬೃಹತ್ ಸಾಮ, ಮತ್ತು ಉಕ್ಥ್ಯ[15]ವನ್ನು ಸೃಷ್ಟಿಸಿದನು. ಪಶ್ಚಿಮದಿಕ್ಕಿನ ಮುಖದಿಂದ ಸಾಮವೇದ, ಜಗತೀ ಛಂದಸ್ಸು, ಸಪ್ತದಶಸ್ತೋಮ, ವೈರೂಪವೆಂಬ ಸಾಮ, ಅತಿರಾತ್ರವೆಂಬ ಯಜ್ಞ – ಇವುಗಳನ್ನು ಸೃಷ್ಟಿಸಿದನು. ಉತ್ತರದಿಕ್ಕಿನ ಮುಖದಿಂದ ಅಥರ್ವವೇದ, ಏಕವಿಂಶತಿಸ್ತೋಮ, ಅನುಷ್ಟುಪ್ ಛಂದಸ್ಸು, ಅಪ್ತೋರ್ಯಾಮ ಯಜ್ಞ, ಮತ್ತು ವೈರಾಜವೆಂಬ ಸಾಮಗಳನ್ನು ಸೃಷ್ಟಿಸಿದನು.
ಉಚ್ಚಾವಚಾನಿ ಭೂತಾನಿ ಗಾತ್ರೇಭ್ಯಸ್ತಸ್ಯ ಜಜ್ಞಿರೇ । ದೇವಾಸುರಪಿತೄನ್ಸೃಷ್ಟ್ವಾ ಮನುಷ್ಯಾಂಶ್ಚ ಪ್ರಜಾಪತಿಃ ।। 57 ।। ತತಃ ಪುನಃ ಸಸರ್ಜಾದೌ ಸಂಕಲ್ಪ್ಯ ಸ ಪಿತಾಮಹಃ । ಯಕ್ಷಾನ್ಪಿಶಾಚಾನ್ಗಂಧರ್ವಾಂಸ್ತಥೈವಾಪ್ಸರಸಾಂ ಗಣಾನ್ ।। 58 ।। ನರಕಿನ್ನರಯಕ್ಷಾಂಸಿ ವಯಃ ಪಶುಮೃಗೋರಗಾನ್ । ಅವ್ಯಯಂ ಚ ವ್ಯಯಂ ಚೈವ ಯದಿದಂ ಸ್ಥಾಣುಜಂಗಮಮ್ ।। 59 ।। ತತ್ಸಸರ್ಜ ತದಾ ಬ್ರಹ್ಮಾ ಭಗವಾನಾದಿಕೃದ್ವಿಭುಃ ।
ನಂತರ ಬ್ರಹ್ಮನ ಶರೀರದಿಂದ ಉಚ್ಚ-ನೀಚರಾದ ಭೂತಗಳು ಹುಟ್ಟಿದವು. ದೇವ-ಅಸುರ-ಪಿತೃಗಳು ಮತ್ತು ಮನುಷ್ಯರನ್ನು ಸೃಷ್ಟಿಸಿ ವಿಭು, ಆದಿಕೃತ್, ಭಗವಾನ್ ಬ್ರಹ್ಮನು ಪುನಃ ಸಂಕಲ್ಪರೂಪದಿಂದ ಯಕ್ಷರು, ಪಿಶಾಚರು, ಗಂಧರ್ವರು, ಅಪ್ಸರಗಣಗಳು, ನರರು, ಕಿನ್ನರರು, ಯಕ್ಷರು, ರಾಕ್ಷಸರು, ಪಶುಗಳು, ಮೃಗ-ಪಕ್ಷಿಗಳು, ಉರಗರು, ಬಹುಕಾಲ ಬದುಕುವ ಮತ್ತು ಸ್ವಲ್ಪಕಾಲ ಜೀವಿಸುವ ಚರಾಚರ ಪ್ರಾಣಿಗಳನ್ನು ಸೃಷ್ಟಿಸಿದನು.
ತೇಷಾಂ ಯೇ ಯಾನಿ ಕರ್ಮಾಣಿ ಪ್ರಾಕ್ಸೃಷ್ಟ್ಯಾಂ ಪ್ರತಿಪೇದಿರೇ । ತಾನ್ಯೇವ ತೇ ಪ್ರಪದ್ಯಂತೇ ಸೃಜ್ಯಮಾನಾಃ ಪುನಃ ಪುನಃ ।। 60 ।। ಹಿಂಸ್ರಾಹಿಂಸ್ರೇ ಮೃದುಕ್ರೂರೇ ಧರ್ಮಾಧರ್ಮಾವೃತಾನೃತೇ । ತದ್ಭಾವಿತಾಃ ಪ್ರಪದ್ಯಂತೇ ತಸ್ಮಾತ್ತತ್ತಸ್ಯ ರೋಚತೇ ।। 61 ।। ಇಂದ್ರಿಯಾರ್ಥೇಷು ಭೂತೇಷು ಶರೀರೇಷು ಚ ಸ ಪ್ರಭುಃ । ನಾನಾತ್ವಂ ವಿನಿಯೋಗಂ ಚ ತಥೈವ ವ್ಯಸೃಜತ್ಸ್ವಯಮ್ ।। 62 ।। ನಾಮರೂಪಂ ಚ ಭೂತಾನಾಂ ಕೃತ್ಯಾನಾಂ ಚ ಪ್ರಪಂಚನಮ್ । ವೇದಶಬ್ದೇಭ್ಯ ಏವಾದೌ ದೇವಾದೀನಾಂ ಚಕಾರ ಸಃ ।। 63 ।। ಋಷೀಣಾಂ ನಾಮಧೇಯಾನಿ ಯಥಾ ವೇದಶ್ರುತಾನಿ ವೈ । ತಥಾ ನಿಯೋಗಯೋಗ್ಯಾನಿ ಹ್ಯನ್ಮೇಷಾಮಪಿ ಸೋಽಕರೋತ್ ।। 64 ।। ಯಥರ್ತುಷ್ವೃತುಲಿಂಗಾನಿ ನಾನಾರೂಪಾಣಿ ಪರ್ಯಯೇ । ದೃಶ್ಯಂತೇ ತಾನಿ ತಾನ್ಯೇವ ತಥಾಭಾವ ಯುಗಾದಿಷು ।। 65 ।। ಕರೋತ್ಯೇವಂ ವಿಧಾಂ ಸೃಷ್ಟಿಂ ಕಲ್ಪಾದೌ ಸ ಪುನಃ ಪುನಃ । ಸಿಸೃಕ್ಷಾಶಕ್ತಿಯುಕ್ತೋಽಸೌ ಸೃಜ್ಯಶಕ್ತಿಪ್ರಚೋದಿತಃ ।। 66 ।।
ಬ್ರಹ್ಮಸೃಷ್ಟಿಯಿಂದ ಉಂಟಾದ ಜೀವರುಗಳು ಹಿಂದಿನ ಸೃಷ್ಟಿಯಲ್ಲಿ ಯಾವ ಯಾವ ಕರ್ಮಫಲಗಳನ್ನು ಪಡೆದರೋ ಆ ಫಲಗಳನ್ನೇ ಅನುಸರಿಸಿ ಪುನಃ ಪುನಃ ಆಗುವ ಸೃಷ್ಟಿಯಲ್ಲಿ ಆ ಫಲಗಳನ್ನೇ ಪಡೆಯುತ್ತಾರೆ. ಹಿಂಸೆ-ಅಹಿಂಸೆ ಇವೆರಡೂ ಶಾರೀರಿಕ ಕರ್ಮಗಳು. ಮೃದು-ಕ್ರೂರ ಇವೆರಡೂ ಮಾನಸಿಕ ಕರ್ಮಗಳು. ಸತ್ಯ-ಸುಳ್ಳು ಇವೆರಡೂ ವಾಚಕ ಕರ್ಮಗಳು. ಇವು ಸಂದರ್ಭಾನುಸಾರವಾಗಿ ಧರ್ಮ-ಅಧರ್ಮಗಳಾಗುತ್ತವೆ. ಹೇಗೆಂದರೆ ಅಗ್ನಿಷ್ಟೋಮ ಯಾಗದಲ್ಲಿ ಪಶ್ವಾಲಂಭನವು ಹಿಂಸೆಯಾದರೂ ಧರ್ಮವಾಗುತ್ತದೆ. ಪರಸ್ತ್ರೀಗಮನವು ಅಹಿಂಸೆಯಾದರೂ ಅಧರ್ಮವಾಗುತ್ತದೆ. ರಾಜರು ಕಳ್ಳರೇ ಮೊದಲಾದವರನ್ನು ರಕ್ಷಿಸುವುದು ಮೃದು ಸ್ವಭಾವವಾದರೂ ಅಧರ್ಮವಾಗುತ್ತದೆ. ದುಷ್ಟರನ್ನು ದಂಡಿಸುವುದು ಕ್ರೂರವಾದರೂ ಧರ್ಮವಾಗುತ್ತದೆ. ಬ್ರಾಹ್ಮಣಾದಿಗಳ ವಧೆಯ ಸಂದರ್ಭವು ಬಂದಾಗ ಸುಳ್ಳುಹೇಳಿ ಅವನನ್ನು ಉಳಿಸುವುದು ಧರ್ಮವಾಗುತ್ತದೆ. ಈ ಸಂದರ್ಭದಲ್ಲಿ ನಿಜವನ್ನು ಹೇಳುವುದು ಅಧರ್ಮವಾಗುತ್ತದೆ. ಜೀವರು ಹಿಂದಿನ ಸಂಸ್ಕಾರಕ್ಕನುಸಾರವಾಗಿ ಆ ಪೂರ್ವಜನ್ಮವಾಸನಾನುಸಾರವಾಗಿ ಈ ಜನ್ಮದಲ್ಲಿಯೂ ಅದೇ ಸ್ವಭಾವವನ್ನು ಪಡೆಯುತ್ತಾರೆ. ಹೀಗೆ ಆ ಪ್ರಭುವು ಜೀವರ ಕರ್ಮಫಲಾನುಸಾರವಾಗಿ ಇಂದ್ರಿಯಾರ್ಥಗಳಾದ ಆಹಾರಾದಿ ವಿಷಯಗಳನ್ನೂ, ಅಂದರೆ ಅಮೃತ-ಅನ್ನ-ಫಲ-ಹುಲ್ಲು ಇತ್ಯಾದಿಗಳನ್ನೂ, ಭೂತಗಳಲ್ಲಿ ಜಲಚರ-ಸ್ಥಳಚರಗಳನ್ನೂ, ಶರೀರಗಳಲ್ಲಿ ದ್ವಿಪಾದ-ಚತುಷ್ಪಾದಗಳನ್ನೂ ಅನುಸರಿಸಿ ಅನೇಕ ರೂಪಗಳನ್ನು ಸೃಷ್ಟಿಸಿದನು. ಮತ್ತು ಅವನು ದೇವತೆಗಳಲ್ಲಿ ಇಂದ್ರ-ಅಗ್ನಿ-ಯಮ ಮೊದಲಾದ ಹೆಸರುಗಳನ್ನೂ, ವಜ್ರಹಸ್ತಾದಿ ರೂಪಗಳನ್ನೂ, ಮಳೆ ಮೊದಲಾದ ಕಾರ್ಯಗಳನ್ನೂ, ವೇದಶಬ್ದಗಳನ್ನು ಅನುಸರಿಸಿ ವಿಸ್ತರಿಸಿದನು. ಋಷಿಗಳ ಹೆಸರುಗಳನ್ನೂ ವೇದದ ಸೂಕ್ತಗಳಲ್ಲಿ ಇರುವಂತೆಯೇ ಗೊತ್ತುಮಾಡಿದನು. ವಸಂತಾದಿ ಋತುಗಳು ಬಂದರೆ ಆ ಋತುವನ್ನು ಅನುಸರಿಸಿ ಹೂ-ಹಣ್ಣು ಮೊದಲಾದವುಗಳು ಪುನಃ ಅವುಗಳೇ ಬರುವಂತೆ ಕಲ್ಪ-ಮನ್ವಂತರಗಳ ಆದಿಯಲ್ಲಿ ದೇವತೆಗಳು ಅನಿತ್ಯರಾದರೂ ನಿತ್ಯವಾಗಿರುವ ವೇದದಲ್ಲಿ ಹೇಳಿದ ಹೆಸರುಗಳೇ ಬರುತ್ತವೆ. ಹೀಗೆ ಬ್ರಹ್ಮನು ಸೃಷ್ಟಿಯ ಪ್ರಾರಂಭದಲ್ಲಿ ಸೃಷ್ಟಿಶಕ್ತಿಯಿಂದ ಕೂಡಿ ಸೃಷ್ಟಿಸಬೇಕಾದ ಜೀವರ ಕರ್ಮವಾಸನಾ ಶಕ್ತಿಯಿಂದ ಪ್ರೇರಿತನಾಗಿ ಬಗೆ ಬಗೆಯ ಸೃಷ್ಟಿಯನ್ನು ಮತ್ತೆ ಮತ್ತೆ ಮಾಡುತ್ತಿರುತ್ತಾನೆ.”
ಇತಿ ಶ್ರೀವಿಷ್ಣುಪುರಾಣೇ ಪ್ರಥಮೇಽಂಶೇ ಪಂಚಮೋಽಧ್ಯಾಯಃ ।।
ಇದು ಶ್ರೀವಿಷ್ಣುಪುರಾಣದ ಪ್ರಥಮಾಂಶದಲ್ಲಿ ಐದನೇ ಅಧ್ಯಾಯವು.
[1] ಇಲ್ಲಿ ತಮ ಎನ್ನುವುದು ಅನಾತ್ಮರೂಪವಾದ ದೇಹಾದಿಗಳಲ್ಲಿ ಆತ್ಮಾಭಿಮಾನವು. ಮೋಹವೆನ್ನುವುದು ತನ್ನ ಸಂಬಂಧಿಗಳಾದ ಪುತ್ರಾದಿಗಳಿಗೆ ತಾನೇ ರಕ್ಷಕನೆಂಬ ಅಭಿಮಾನವು. ಮಹಾಮೋಹವು ಇಂದ್ರಿಯ ಸುಖಗಳ ಅಭಿಲಾಷೆಯು. ತಾಮಿಸ್ರವು ಸುಖಪ್ರತಿಬಂಧಕ ವಾದಾಗ ಉಂಟಾಗುವ ಕ್ರೋಧವು. ಅಂಧತಾಮಿಸ್ರವು ಸುಖಸಾಧನವಾದ ಪದಾರ್ಥಗಳು ನಾಶವಾದೀತು ಎಂಬ ಸಂದೇಹದಿಂದ ಅವುಗಳನ್ನು ರಕ್ಷಣೆಮಾಡಿಕೊಳ್ಳುವುದೇ ಮೊದಲಾದವುಗಳಲ್ಲಿ ಇರುವ ಆಸಕ್ತಿ. ಈ ಐದನ್ನೂ ಪತಂಜಲಿಯ ಯೋಗಸೂತ್ರದಲ್ಲಿ “ಅವಿದ್ಯಾ ಮಮತಾಸ್ಮಿತರಾಗ ದ್ವೇಷಾಭಿನಿವ್ಶಾಃ ಪಂಚಕ್ಲೇಷಾಃ” ಎಂದು ಹೇಳಿದೆ.
[2] ವೃಕ್ಷ, ಗುಲ್ಮ, ಲತಾ, ವೀರುತ್, ತೃಣ – ಇವೇ ಐದು ವಿಧದ ಸ್ಥಾವರ ಸೃಷ್ಟಿಯು. ಪರ್ವತಗಳು ಸ್ಥಾವರಗಳೇ ಆಗಿದ್ದರೂ ಬ್ರಹ್ಮಸೃಷ್ಟಿಗಿಂತ ಮೊದಲೇ ವರಾಹರೂಪಿಯಾದ ವಿಷ್ಣುವಿನಿಂದ ಸೃಷ್ಟಿಯಾದುದರಿಂದ ಅವುಗಳನ್ನು ಈ ಗುಂಪಿನಲ್ಲಿ ಸೇರಿಸಿಲ್ಲ.
[3] ಜ್ಞಾನ-ಕರ್ಮೇಂದ್ರಿಯ ಮತ್ತು ಮನಸ್ಸು ಎಂಬ ಹನ್ನೊಂದು ಇಂದ್ರಿಯ ವಧ ಅರ್ಥಾತ್ ಇಂದ್ರಿಯಗಳ ಶಕ್ತಿಯಿಲ್ಲದಿರುವುದು, ಕಿವುಡು-ಕುರುಡು ಮೊದಲಾದವುಗಳು. ನವತುಷ್ಟಿಗಳು ಮತ್ತು ಅಷ್ಟಸಿದ್ಧಿಗಳು ಸೇರಿ ಹದಿನೇಳು. ಇವೆರಡೂ ಕೂಡಿ ಇಪ್ಪತ್ತೆಂಟು. ಇವುಗಳಲ್ಲಿ ಹದಿನೇಳು ಬುದ್ಧಿವಧಾರೂಪವಾದವು. ನವತುಷ್ಟಿಗಳು: (1) ಪ್ರಕೃತಿತುಷ್ಟಿ – ಚಿತ್ತಲಯದಿಂದ ಮುಕ್ತನಾದೆನೆಂದು ತಿಳಿಯುವುದು (2) ಉಪಾದಾನತುಷ್ಟಿ – ಸನ್ಯಾಸವೇಷಗ್ರಹಣಮಾತ್ರದಿಂದ ಮುಕ್ತನಾದೆನೆಂದು ತಿಳಿಯುವುದು (3) ಕಾಲತುಷ್ಟಿ – ಕಾಲಬಂದಾಗ ಮುಕ್ತಿಯಾಗುತ್ತದೆ. ಧ್ಯಾನಾದಿಗಳಿಂದ ಏನು ಪ್ರಯೋಜನ ಎಂದು ತಿಳಿಯುವುದು (4) ಭಾಗ್ಯತುಷ್ಟಿ. ಈ ನಾಲ್ಕು ಆಧ್ಯಾತ್ಮಿಕ ತುಷ್ಟಿಗಳು. (5-9) ಶಬ್ದಾದಿ ಪಂಚ ವಿಷಯಗಳನ್ನು ತ್ಯಜಿಸುವುದರಿಂದ ಆಗುವ ತುಷ್ಟಿ – ಇವು ಬಾಹ್ಯತುಷ್ಟಿಗಳು. ಅಷ್ಟಸಿದ್ಧಿಗಳು (1) ಊಹಾಸಿದ್ಧಿ – ಉಪದೇಶವಿಲ್ಲದೇ ಅರ್ಥವನ್ನು ತಿಳಿಯುವುದು (2) ಶಬ್ದಸಿದ್ಧಿ – ಶಬ್ದವನ್ನು ಕೇಳುವುದರಿಂದ ಅರ್ಥಜ್ಞಾನವುಂಟಾಗುವುದು (3) ಅಧ್ಯಯನಸಿದ್ಧಿ – ಗುರುವಿನ ಉಪದೇಶದಿಂದಲೇ ಹೆಚ್ಚು ವಿಷಯಗಳನ್ನು ತಿಳಿಯುವುದು (4-6) ಆಧ್ಯಾತ್ಮಿಕಾದಿ ದುಃಖತ್ರಯನಾಶದಿಂದ ಮೂರು ಸಿದ್ಧಿಗಳು (7) ಅರ್ಥಸಿದ್ಧಿ – ಮಿತ್ರನ ಪ್ರಾರ್ಥನೆಯಿಂದ ಅರ್ಥಸಿದ್ಧಿ (8) ತಪಸ್ವಿಗಳು, ವಿದ್ವಾಂಸರು ಮೊದಲಾದವರ ಸೇವೆಯಿಂದ ಆಗುವ ಅರ್ಥಸಿದ್ಧಿ.
[4] ನಹವೈದೇವಾ ಅಶ್ನಂತಿ ನಪಿಬಂತ್ಯೇತದೇವಾಮೃತಂ ದೃಷ್ಟ್ವಾತೃಪ್ಯಂತಿ । ಅರ್ಥಾತ್: ದೇವತೆಗಳಿಗೆ ಅಮೃತದರ್ಶನದಿಂದಲೇ ತೃಪ್ತಿಯಾಗುತ್ತದೆ. (ಶ್ರುತಿವಾಕ್ಯ)
[5] (1) ಪಂಚಭೂತಗಳ ಸೃಷ್ಟಿ (2) ಇಂದ್ರಿಯಗಳ ಸೃಷ್ಟಿ (3) ಮುಖ್ಯ ಅಥವಾ ಸ್ಥಾವರ ಸೃಷ್ಟಿ (4) ತಿರ್ಯಕ್ಸ್ರೋತ ಅಥವಾ ಪಶುಸೃಷ್ಟಿ (5) ಊರ್ಧ್ವಸ್ರೋತ ಅಥವಾ ದೇವಸೃಷ್ಟಿ (6) ಅರ್ವಾಕ್ಸ್ರೋತ ಅಥವಾ ಮನುಷ್ಯಸೃಷ್ಟಿ.
[6] ತಾನಿವಾ ಏತಾನಿ ಚತ್ವಾರ್ಯಂಭಾಂಸಿ ದೇವಾ ಮನುಷ್ಯಾಪಿತರೋಽಸುರಾ । ಇತಿ (ವೇದವಚನ).
[7] ಇಲ್ಲಿ “ಪರೋಕ್ಷ ಪ್ರಿಯಾ ಇವಹಿ ದೇವಾಃ ।” ಎಂಬ ಶ್ರುತಿಯಂತೆ ಜಕಾರ ಸ್ಥಾನದಲ್ಲಿ ಯಕಾರವು ಬಂದಿದೆ. ಆ ಕಾರಣದಿಂದಲೇ ಜಕ್ಷರೆಂದು ಹೇಳುವುದಕ್ಕೆ ಬದಲಾಗಿ ಯಕ್ಷರೆಂದು ಹೇಳುತ್ತಾರೆ.
[8] ಅಂದರೆ ಈ ಕಲ್ಪದ ಮೊದಲ ಕೃತಯುಗದಲ್ಲಿ ಯಜ್ಞವು ಇರಲಿಲ್ಲ. ಕಲ್ಪದ ಮೊದಲ ತ್ರೇತಾಯುಗದಲ್ಲಿ ಅಂದರೆ - ಮನ್ವಂತರದ ಮೊದಲ ತ್ರೇತಾಯುಗದಲ್ಲಿ – ಯಜ್ಞವನ್ನು ಮಾಡಿದನು.
[9] ಪ್ರಥಮಾನ್ಮುಖಾತ್ ಎನ್ನುವುದಕ್ಕೆ ಬ್ರಹ್ಮನ ಪೂರ್ವದಿಕ್ಕಿನ ಮುಖ ಎಂದೂ ಅನುವಾದಿಸಿದ್ದಾರೆ.
[10] ಛಂದಸ್ಸು ಎಂದರೆ ಋಕ್ಕಿನ ಛಂದೋವಿನ್ಯಾಸ, ಅಂದರ ಅದರ ಓಟ, ಲಯ, ಅಕ್ಷರಸಂಖ್ಯೆಯ ಕ್ರಮಬದ್ಧ ವಿನ್ಯಾಸ. ಸಾಧಾರಣವಾಗಿ ಹೇಳುವುದಾದರೆ ಛಂದಸ್ಸು ಎಂದರೆ ಪದ್ಯದ ಲಯ ಅಥವಾ ಛಂದೋಮಾಪನ (metrical pattern or rhythm). ಛಾದನ ಎಂಬ ಧಾತುವಿನಿಂದ ಛಂದಸ್ಸು ಎಂಬ ಪದವು ಬಂದಿದೆ. ಆವರಣ ಅಥವಾ ಸುಂದರವಾದ ವಿನ್ಯಾಸ ಎಂದರ್ಥ. ಋಕ್ಕಿನ ಛಂದಸ್ಸು ಅದರ ಸೌಂದರ್ಯವನ್ನು ಆವರಿಸುತ್ತದೆ. ಆದ್ದರಿಂದ ಅದು ಛಂದಸ್ಸು ಎನ್ನುತ್ತಾರೆ. ಋಕ್ಕುಗಳು ಅಥವಾ ವೇದಮಂತ್ರಗಳು ಎಲ್ಲವೂ ಒಂದೊಂದು ಛಂದಸ್ಸಿನಲ್ಲಿ (metre) ರಚಿಸಲ್ಪಟ್ಟಿವೆ. ಋಗ್ವೇದದ ಮಂತ್ರಗಳು ಬಹುತೇಕ. ಗಾಯತ್ರಿ, ತ್ರಿಷ್ಟುಪ್, ಜಗತಿ ಇತ್ಯಾದಿ ಛಂದಸ್ಸಿನಲ್ಲಿವೆ. ಯಜುರ್ವೇದದಲ್ಲಿ ಕೆಲವು ಮಿಶ್ರಛಂದಸ್ಸುಗಳಿವೆ. ಸಾಮವೇದದಲ್ಲಿ ಗಾನಕ್ಕೆ ಹೊಂದುವ ಛಂದಸ್ಸುಗಳಿವೆ. ವೇದಗಳಲ್ಲಿ ಅನೇಕ ಛಂದಸ್ಸುಗಳಿವೆ. ಅವುಗಳಲ್ಲಿ ಮುಖ್ಯವಾಗಿ ಋಗ್ವೇದದಲ್ಲಿ ಉಲ್ಲೇಖವಾಗಿರುವ ಏಳು ಪ್ರಮುಖ ಛಂದಸ್ಸುಗಳು ವೇದಾಧ್ಯಯನದ ಆಧಾರವಾಗಿವೆ.
| ಛಂದಸ್ಸಿನ ಹೆಸರು | ಪ್ರತಿ ಪಾದದ ಅಕ್ಷರಸಂಖ್ಯೆ | ಒಟ್ಟು ಅಕ್ಷರಗಳು | ವೇದದ ಉದಾಹರಣೆ |
| ಗಾಯತ್ರಿ | 8 | 24 | ಅಗ್ನಿಮೀಳೇ ಪುರೋಹಿತಮ್... (ಋಗ್ವೇದ 1.1.1) |
| ಉಷ್ಣಿಕ್ | 8,8,12 | 28 | ಇಂದ್ರಂ ವೋ ವೀರಂ ಹವಾಮಹೇ... |
| ಅನುಷ್ಟುಪ್ | 8,8,8,8 | 32 | ಪುರಾಣ ಇತಿಹಾಸಗಳಲ್ಲಿ ಸಾಮಾನ್ಯವಾಗಿ ಇರುವ ಶ್ಲೋಕಗಳು |
| ಬೃಹತೀ | 8,8,12,8 | 36 | ಇಂದ್ರಂ ಮದೇಶೂ... |
| ಪಂಕ್ತಿ | 8,8,8,8,8 | 40 | ಅಗ್ನಯೇ ಸ್ವಾಹಾ... |
| ತ್ರಿಷ್ಟುಪ್ | 11 | 44 | ಇಂದ್ರಂ ವೃತ್ರಹರಣಂ ವಜ್ರಿಣಂ... |
| ಜಗತೀ | 12 | 48 | ಅಗ್ನಿರ್ಮೂರ್ಧಾ ದಿವಃ ಕಕುದ್ |
ಇವೂ ಅಲ್ಲದೇ ವೇದ, ಪುರಾಣ, ಇತಿಹಾಸಗಳಲ್ಲಿ ಇನ್ನೂ ಹಲವು ವಿಶೇಷ ಛಂದಸ್ಸುಗಳಿವೆ. ಉದಾಹರಣೆಗೆ ಹೆಚ್ಚು ಅಕ್ಷರಗಳಿರುವ ಅತಿಜಗತೀ, ಅತಿಶಕ್ವರೀ, ಮೊದಲಾದವುಗಳು; ವಿಭಿನ್ನ ಗಾನ ಅಥವಾ ಪ್ರಯೋಗಶೈಲಿಗಳಿರುವ ಮಹಾತಿ, ದ್ವಿಪದಾ, ಆರ್ಷ, ರಥಂತರೀ, ಪವಮಾನೀ ಮೊದಲಾದವು. ಛಂದಸ್ಸುಗಳು ದೇವತೆಗಳ ರೂಪಕ ಎಂದು ವೇದಗಳು ಹೇಳುತ್ತವೆ. ಉದಾಹರಣೆಗೆ, ಛಂದೋಭ್ಯೋ ಹ ವ್ಯಾಹೃತಯಃ । ವ್ಯಾಹೃತಿಭ್ಯೋ ಲೋಕಾಃ । ಅರ್ಥಾತ್: ಛಂದಸ್ಸಿನಿಂದಲೇ ಬ್ರಹ್ಮಾಂಡದ ವ್ಯವಹಾರವು ಉಂಟಾಗಿದೆ.
[11] ಋಕ್ ಮತ್ತು ಯಜುಸ್ ಎಂಬ ಎರಡು ಶಬ್ದಗಳು ವೇದಗಳ ಅತ್ಯಂತ ಮೂಲಭೂತವಾದ ಮಂತ್ರಗಳು. ಇವು ವೇದಮಂತ್ರಗಳ ಸ್ವರೂಪವನ್ನು ಸೂಚಿಸುತ್ತವೆ. (1) ಋಕ್ ಎನ್ನುವುದು ಸ್ತೋತ್ರರೂಪದ ಮಂತ್ರ. ಅಂದರೆ ದೇವತೆಯನ್ನು ಸ್ತುತಿಮಾಡುವ ಕಾವ್ಯಮಯ ಮಂತ್ರ. ಇದರಲ್ಲಿ ಛಂಧೋಮಯವಾಗಿದೆ ಮತ್ತು ಅಲಂಕಾರಯುಕ್ತ ಭಾಷೆಯಲ್ಲಿದೆ. ಪ್ರತಿಯೊಂದು ಋಕ್ ಒಂದು ಛಂದಸ್ಸಿನೊಳಗೆ ಬರುವ ಪದ್ಯ. ಇವು ದೇವತೆಗಳ ಸ್ತುತಿ, ಪ್ರಾರ್ಥನೆ, ಮತ್ತು ಯಾಚನೆ ಮೊದಲಾದವುಗಳನ್ನು ಒಳಗೊಂಡಿದೆ. ಈಗ ಈ ಮಂತ್ರಗಳು ಋಗ್ವೇದದಲ್ಲಿ ಸಂಗ್ರಹಿತಗೊಂಡಿವೆ. ಉದಾಹರಣೆಗೆ – ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಮ್ । (ಋಗ್ವೇದ 1.1.1) ಇದು ಅಗ್ನಿದೇವನನ್ನು ಸ್ತುತಿಸುವ ಮೊದಲನೆಯ ಋಕ್. (2) ಯಜುಸ್ ಎನ್ನುವುದು ಕ್ರಿಯಾರೂಪದ ಮಂತ್ರ. ಅಂದರೆ ಯಜ್ಞದ ಆಚರಣೆಗೆ ಸಂಬಂಧಿಸಿದ ವಿಧಿವಚನಗಳು. ಇವು ಕಾವ್ಯ ರೂಪದಲ್ಲಿಲ್ಲ. ಪ್ರಾಯೋಗಿಕವಾಗಿ (prose or semi-prose) ಇರುತ್ತವೆ. ಯಜುಸ್ಸುಗಳು ಯಜ್ಞದ ಕ್ರಿಯೆಯನ್ನು ಮಾರ್ಗದರ್ಶನ ಮಾಡುವ ಮಂತ್ರಗಳು. ಉದಾಹರಣೆಗೆ – ಹೋಮದ ವೇಳೆ, ಆವರಣದ ಸಮಯದಲ್ಲಿ, ಆಹ್ವಾನ, ಅರ್ಪಣೆ ಇತ್ಯಾದಿ. ಇವು ಈಗ ಯಜುರ್ವೇದದಲ್ಲಿ ಸಂಗ್ರಹಿತವಾಗಿವೆ. ಬಹು ಸಮಯ ಇವು “ಇದಂ ನ ಮಮ” (ಇದು ನನ್ನದಲ್ಲ, ದೇವತೆಯದು; ಅರ್ಪಣಾರ್ಥವಾಕ್ಯ) ಎಂದು ಕೊನೆಗೊಳ್ಳುತ್ತವೆ. ಒಟ್ಟಿನಲ್ಲಿ - ಋಕ್ ದೇವರನ್ನು ಸ್ತುತಿಸುತ್ತದೆ. ಯಜುಸ್ಸು ಯಜ್ಞವನ್ನು ನಡೆಸುವ ಕ್ರಮವನ್ನು ಹೇಳುತ್ತದೆ. ಋಕ್=ಸ್ತುತಿ; ಯಜುಸ್=ಕ್ರಿಯೆ.
[12] ಸ್ತೋಮವು ವೇದಯಜ್ಞಗಳಲ್ಲಿ, ವಿಶೇಷವಾಗಿ ಸೋಮಯಾಗಗಳಲ್ಲಿ, ಸ್ತೋತ್ರಗಳ ವಿನ್ಯಾಸ (pattern) ಅಥವಾ ಗಾನಪದ್ಧತಿಯು ಅಥವಾ ಹಾಡಿನ ವಿನ್ಯಾಸ. ಸೋಮಯಾಗದಲ್ಲಿ ಋಗ್ವೇದ ಮಂತ್ರಗಳನ್ನು ಸ್ತೋತ್ರವಾಗಿ ಪಠಿಸಲ್ಪಡುತ್ತವೆ. ಅವುಗಳನ್ನು ಸಾಮಗಾನ ರೂಪದಲ್ಲಿ ಹಾಡಲಾಗುತ್ತದೆ. ಈ ಗಾಯನದ ವಿಧಾನಗಳನ್ನು ಸ್ತೋಮಗಳು ಎನ್ನುತ್ತಾರೆ. ವೇದಗಳಲ್ಲಿ ಅನೇಕ ಸ್ತೋಮಗಳು ಉಲ್ಲೇಖವಾಗಿವೆ. ಉದಾಹರಣೆಗೆ: (1) ಏಕವಿಂಶ ಸ್ತೋಮ – 21 ಸ್ತೋತ್ರಗಳಿರುವುದು (2) ತ್ರಿವಿಂಶಸ್ತೋಮ – 33 ಸ್ತೋತ್ರಗಳಿರುವವು (3) ಪಂಚದಶಸ್ತೋಮ – 15 ಸ್ತೋತ್ರಗಳಿರುವವು (4) ಸಪ್ತದಶಸ್ತೋಮ – 17 ಸ್ತೋತ್ರಗಳಿರುವವು (5) ಚತುರ್ವಿಂಶ ಸ್ತೋಮ – 24 ಸ್ತೋತ್ರಗಳಿರುವವು (6) ಶೋಧಶಿ ಸ್ತೋಮ (7) ಏಕತ್ರಿಂಶಸ್ತೋಮ – 31 ಸ್ತೋತ್ರಗಳಿರುವವು. ಪ್ರತಿ ಸ್ತೋಮದಲ್ಲಿ ನಿರ್ದಿಷ್ಟ ಸಂಖ್ಯೆ ಅಥವಾ ಕ್ರಮದ ಸ್ತೋತ್ರಗಳು (chants) ಇರುತ್ತವೆ. ಪ್ರತಿ ಯಜ್ಞದಲ್ಲಿ ಯಾವ ಸ್ತೋಮವನ್ನು ಉಪಯೋಗಿಸಬೇಕು ಎನ್ನುವುದನ್ನು ಶ್ರೌತಸೂತ್ರಗಳು ನಿಯಮಿಸುತ್ತವೆ. ಸಂಗೀತದಲ್ಲಿ ರಾಗವು ಹೇಗೆ ಭಿನ್ನವಾಗಿದೆಯೋ ಹಾಗೆ ಯಜ್ಞಗಳಲ್ಲಿ ಸ್ತೋಮಗಳು ಹೀಗೆ ವಿಭಿನ್ನ ಸ್ತೋತ್ರಗಾನಶೈಲಿಗಳನ್ನು ಹೊಂದಿವೆ.
[13] ಸಾಮ ಎಂದರೆ ಗಾನರೂಪದ ಋಕ್ ಅಥವಾ ಮಂತ್ರ. ಅಂದರೆ ಹಾಡಿನ ಶೈಲಿಯಲ್ಲಿ ಉಚ್ಚರಿಸುವ ಸ್ತೋತ್ರ. ಇದು ಸಂಗಾನಂ ಎಂಬ ಮೂಲದಿಂದ ಬಂದಿದ್ದು, ಅರ್ಥ “ಸುಮಧುರವಾಗಿ ಹಾಡುವುದು”. ಋಗ್ವೇದಗಳಲ್ಲಿನ ಋಕ್ಕುಗಳನ್ನೇ ಸಾಮವೇದದಲ್ಲಿ ಗಾನರೂಪದಲ್ಲಿ ಪರಿವರ್ತಿಸಿ ಬಳಸಲಾಗುತ್ತದೆ. ಸಾಮಗರು (ಸಾಮವೇದದ ಪಂಡಿತರು) ಯಜ್ಞದಲ್ಲಿ ಸ್ತೋತ್ರಗಾನ ಮಾಡುತ್ತಾರೆ. ಉದಾಹರಣೆಗೆ: ಸಾಮಗಾನದಲ್ಲಿ “ಓಂ ಅಗ್ನಾಯೇ ಸ್ವಾಹಾ” ಎಂಬ ಋಕ್ಕನ್ನು ಸಂಗೀತಮಯವಾಗಿ “ಓಂಮಾ ಅಘ್ನಾಯೇಯೇ ಸ್ವಾಹಾ” ಎಂದು ಗಾನರೂಪದಲ್ಲಿ ಉಚ್ಚರಿಸುತ್ತಾರೆ. ವೇದಗಳಲ್ಲಿ ಕೆಲವು ಪ್ರಮುಖ ಸಾಮಗಳು ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿವೆ. ಅವುಗಳಲ್ಲಿ ಕೆಲವುಗಳ ಹೆಸರು ಮತ್ತು ಅರ್ಥ/ದೇವತೆಗಳು ಹೀಗಿವೆ: (1) ರಥಂತರ ಸಾಮ – ಸೂರ್ಯ/ಪ್ರಜಾಪತಿ – ಪ್ರಾಣಸ್ವರೂಪ (2) ಬೃಹದ್ ಸಾಮ – ಇಂದ್ರ/ವಿಶ್ವದ ವ್ಯಾಪಕತೆಯ ಪ್ರತೀಕ (3) ವಾಮದೇವ್ಯ ಸಾಮ – ವಾಮದೇವಋಷಿಯು ಪಠಿಸಿದ ಸಾಮ (4) ಆರ್ಯ ಸಾಮ – ಆರ್ಯ ಋಷಿಗಳಿಂದ ಪ್ರಸಿದ್ಧವಾದ ಸಾಮ (5) ದೇವರಥ ಸಾಮ – ದೇವತೆಯ ಸ್ತುತಿಗಾನ (6) ವೈರೂಪ ಸಾಮ (7) ವೈಶ್ವದೇವ ಸಾಮ (8) ಅಘಮರ್ಷಣ ಸಾಮ, ಮೊದಲಾದವುಗಳು.
[14] ಅಗ್ನಿಷ್ಟೋಮ ಯಾಗವು ಏಳು ವಿಧದ ಸೋಮಯಾಗಗಳ ಮೂಲಯಾಗ. ಅಂದರೆ ಇತರ ಸೋಮಯಾಗಗಳಲ್ಲೆವೂ ಇದರ ಆಧಾರದಿಂದಲೇ ರೂಪಗೊಂಡಿವೆ. ಅಗ್ನಿ ಎಂದರೆ ಅಗ್ನಿ ದೇವತೆ. ಷ್ಟೋಮ ಎಂದರೆ ಸ್ತುತಿ ಅಥವಾ ಸ್ತೋತ್ರಗಾನ (ಗಾನರೂಪದ ಸ್ತುತಿ). ಹೀಗಾಗಿ ಅಗ್ನಿಷ್ಟೋಮ ಎಂದರೆ ಅಗ್ನಿದೇವನಿಗೆ ಸ್ತುತಿಗಾನಮಾಡುವ ಯಜ್ಞ ಅಥವಾ ಅಗ್ನಿಯ ಸ್ತುತಿಯೊಂದಿಗೆ ನಡೆಯುವ ಸೋಮಯಾಗ. ಅಗ್ನಿಷ್ಟೋಮವು ಒಂದು ಸೋಮಯಾಗ. ಸೋಮಯಾಗ ಎಂದರೆ ಸೋಮಲತೆಯಿಂದ ಪಡೆದ ಸೋಮರಸವನ್ನು ದೇವತೆಗಳಿಗೆ ಅರ್ಪಿಸುವ ಯಜ್ಞ. ಏಳು ವಿಧದ ಸೋಮಯಾಗಳು: (1) ಅಗ್ನಿಷ್ಟೋಮ (2) ಅತ್ಯಗ್ನಿಷ್ಟೋಮ (3) ಉಕ್ಥ್ಯ (4) ಶೋದಶೀ (5) ವಾಜಪೇಯ (6) ಅತಿರಾತ್ರ (7) ಅಪ್ತೋರ್ಯಾಮ. ಈ ಎಲ್ಲ ಸೋಮಯಾಗಗಳಲ್ಲಿ ಅಗ್ನಿಷ್ಟೋಮವು ಪ್ರಥಮ ಮತ್ತು ಮೂಲರೂಪ. ಇದಕ್ಕಿಂತಲೂ ದೊಡ್ಡದಾಗಿರುವ ಉಕ್ಥ್ಯ, ಶೋದಶೀ, ವಾಜಪೇಯೀ, ಅತಿರಾತ್ರ ಮೊದಲಾದ ಎಲ್ಲವೂ ಅಗ್ನಿಷ್ಟೋಮದ ವಿಸ್ತಾರರೂಪಗಳೇ. ವೇದಸಾರದಲ್ಲಿ ಅಗ್ನಿಷ್ಟೋಮಯಾಗವನ್ನು ಜೀವನದ ಪರಿವರ್ತನೆಯ ಯಜ್ಞ ಎಂದು ಹೇಳುತ್ತಾರೆ. ಇದು ಮನಸ್ಸು, ಪ್ರಾಣ, ವಚನ, ಕ್ರಿಯೆ, ಜ್ಞಾನ ಇವುಗಳನ್ನು ದೇವತ್ವದತ್ತ ಏರಿಸುವ ಒಂದು ಉಪಚಾರ. ಬ್ರಹ್ಮಸೂತ್ರ ಮತ್ತು ಉಪನಿಷತ್ತುಗಳು ಹೇಳುವಂತೆ ಅಗ್ನಿಷ್ಟೋಮೇನ ಸ್ವರ್ಗಕಾಮೋ ಯಜೇತ । ಅರ್ಥಾತ್: ಸ್ವರ್ಗಕಾಮಿಯು ಅಗ್ನಿಷ್ಟೋಮದಿಂದ ಯಜ್ಞಮಾಡಲಿ.
[15] ಉಕ್ಥ್ಯ ಎಂಬ ಪದವು ಉಕ್ತ (ಉಚ್ಚರಿಸು, ಪಠಿಸು) ಎಂಬ ಧಾತುವಿನಿಂದ ಬಂದಿದೆ. ಏಳು ವಿಧದ ಸೋಮಯಾಗಗಳಲ್ಲಿ ಉಕ್ಥ್ಯ ಎನ್ನುವ ಯಾಗವು ಮೂರನೆಯದು. ಅಗ್ನಿಷ್ಟೋಮಯಾಗದಂತೆಯೇ ಇರುವ ಉಕ್ಥ್ಯ ಯಾಗದಲ್ಲಿ ಮೂರು ಉಕ್ತಿಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತವೆ. ಉಕ್ಥ್ಯ ಯಾಗವು ಸಾಮಾನ್ಯವಾಗಿ ದೇವತಾಪ್ರೀತ್ಯರ್ಥಂ, ಸ್ವರ್ಗಲಾಭ ಅಥವಾ ಪುಣ್ಯವರ್ಧನೆಗಾಗಿ ಮಾಡಲಾಗುತ್ತದೆ.