ಶ್ರೀ ಕೂರ್ಮಪುರಾಣ: ಅಧ್ಯಾಯ 4 - ಪ್ರಾಕೃತ ಸರ್ಗಃ
[ಇದರ ಹಿಂದಿನ ಅಧ್ಯಾಯದಲ್ಲಿ ಕೂರ್ಮನು ಮುನಿಗಳಿಗೆ ಹೇಳಿದ ವರ್ಣಾಶ್ರಮಕ್ರಮದ ವರ್ಣನೆಯನ್ನು ಸೂತನು ಋಷಿಗಳಿಗೆ ಹೇಳಿದುದು ಇದೆ.]
[76] ಸೂತ ಉವಾಚ । ಶ್ರುತ್ವಾಽಶ್ರಮವಿಧಿಂ ಕೃತ್ಸ್ನಮೃಷಯೋ ಹೃಷ್ಟಚೇತಸಃ । ನಮಸ್ಕೃತ್ಯ ಹೃಷೀಕೇಶಂ ಪುನರ್ವಚನಮಬ್ರುವನ್ ।। 1 ।।
ಸೂತನು ಹೇಳಿದನು: “ಸಂಪೂರ್ಣ ಆಶ್ರಮವಿಧಿಯನ್ನು ಕೇಳಿ ಹೃಷ್ಟಚೇತಸರಾದ ಋಷಿಗಳು ಹೃಷೀಕೇಶನನ್ನು ನಮಸ್ಕರಿಸಿ ಪುನಃ ಈ ಮಾತನ್ನಾಡಿದರು.
ಮುನಯ ಊಚುಃ । ಭಾಷಿತಂ ಭವತಾ ಸರ್ವಂ ಚಾತುರಾಶ್ರಮ್ಯಮುತ್ತಮಮ್ । ಇದಾನೀಂ ಶ್ರೋತುಮಿಚ್ಛಾಮೋ ಯಥಾ ಸಂಭವತೇ ಜಗತ್ ।। 2 ।। ಕುತಃ ಸರ್ವಮಿದಂ ಜಾತಂ ಕಸ್ಮಿಂಶ್ಚ ಲಯಮೇಷ್ಯತಿ । ನಿಯಂತಾ ಕಶ್ಚ ಸರ್ವೇಷಾಂ ವದಸ್ವ ಪುರುಷೋತ್ತಮ ।। 3 ।। ಶ್ರುತ್ವಾ ನಾರಾಯಣೋ ವಾಕ್ಯಮೃಷೀಣಾಂ ಕೂರ್ಮರೂಪಧೃಕ್ । ಪ್ರಾಹ ಗಂಭೀರಯಾ ವಾಚಾ ಭೂತಾನಾಂ ಪ್ರಭವೋಽವ್ಯಯಃ ।। 4 ।।
ಮುನಿಗಳು ಹೇಳಿದರು: “ನೀನು ಉತ್ತಮವಾದ ನಾಲ್ಕು ಆಶ್ರಮಗಳ ಕುರಿತು ಸರ್ವವನ್ನೂ ಹೇಳಿದೆ. ಈಗ ನಾವು ಈ ಜಗತ್ತು ಹೇಗೆ ಹುಟ್ಟಿತೆಂದು ಕೇಳ ಬಯಸುತ್ತೇವೆ. ಪುರುಷೋತ್ತಮ! ಇದೆಲ್ಲವೂ ಯಾವುದರಿಂದ ಹುಟ್ಟಿದೆ ಮತ್ತು ಯಾವುದರಲ್ಲಿ ಲಯವಾಗುತ್ತದೆ? ಇದೆಲ್ಲವನ್ನೂ ಯಾರು ನಿಯಂತ್ರಿಸುತ್ತಾನೆ? ಅದನ್ನು ಹೇಳು.” ಋಷಿಗಳ ಮಾತನ್ನು ಕೇಳಿ ಕೂರ್ಮರೂಪವನ್ನು ಧರಿಸಿದ್ದ, ಯಾರಿಂದ ಭೂತಗಳು ಹುಟ್ಟಿವೆಯೋ ಆ ಅವ್ಯಯ ನಾರಾಯಣನು, ಗಂಭೀರಧ್ವನಿಯಲ್ಲಿ ಹೇಳಿದನು.
ಕೂರ್ಮ ಉವಾಚ । ಮಹೇಶ್ವರಃ ಪರೋಽವ್ಯಕ್ತಶ್ಚತುರ್ವ್ಯೂಹಃ ಸನಾತನಃ । ಅನಂತಶ್ಚಾಪ್ರಮೇಯಶ್ಚ ನಿಯಂತಾ ಸರ್ವತೋಮುಖಃ ।। 5 ।। ಅವ್ಯಕ್ತಂ ಕಾರಣಂ ಯತ್ತನ್ನಿತ್ಯಂ ಸದಸದಾತ್ಮಕಮ್ । ಪ್ರಧಾನಂ ಪ್ರಕೃತಿಶ್ಚೇತಿ ಯದಾಹುಸ್ತತ್ತ್ವಚಿಂತಕಾಃ ।। 6 ।। ಗಂಧವರ್ಣರಸೈರ್ಹೀನಂ ಶಬ್ದಸ್ಪರ್ಶವಿವರ್ಜಿತಮ್ । ಅಜರಂ ಧ್ರುವಮಕ್ಷಯ್ಯಂ ನಿತ್ಯಂ ಸ್ವಾತ್ಮನ್ಯವಸ್ಥಿತಮ್ ।। 7 ।। ಜಗದ್ಯೋನಿರ್ಮಹಾಭೂತಂ ಪರಬ್ರಹ್ಮ ಸನಾತನಮ್ । ವಿಗ್ರಹಃ ಸರ್ವಭೂತಾನಾಮಾತ್ಮನಾಧಿಷ್ಠಿತಂ ಮಹತ್ ।। 8 ।। ಅನಾದ್ಯಂತಮಜಂ ಸೂಕ್ಷ್ಮಂ ತ್ರಿಗುಣಂ ಪ್ರಭವಾಪ್ಯಯಮ್ । ಅಸಾಂಪ್ರತಮವಿಜ್ಞೇಯಂ ಬ್ರಹ್ಮಾಗ್ರೇ ಸಮವರ್ತತ ।। 9 ।।
ಕೂರ್ಮನು ಹೇಳಿದನು: “ಜಗನ್ಮೂಲ ತತ್ತ್ವಸ್ವರೂಪನಾದ ಪರಮಾತ್ಮನು ಮಹೇಶ್ವರನೂ, ಸರ್ವಾತೀತನೂ, ಅವ್ಯಕ್ತನೂ, ನಾಲ್ಕು ವ್ಯೂಹಗಳಿಂದ ಕೂಡಿದವನೂ, ಅನಾದಿಯೂ, ಅನಂತನೂ, ಸಕಲ ಪ್ರಮಾಣ ಗೋಚರನೂ, ನಿಯಾಮಕನೂ ಮತ್ತು ಸರ್ವತೋಮುಖನೂ ಆಗಿದ್ದಾನೆ. ಅಂತಹ ಜಗತ್ಕಾರಣ ವನ್ನು ಬೇರೆ ಬೇರೆ ತತ್ತ್ವಚಿಂತಕರು ಅವ್ಯಕ್ತ, ಕಾರಣ, ನಿತ್ಯ, ಸತ್-ಅಸತ್ ಸ್ವರೂಪ, ಪ್ರಧಾನ, ಪ್ರಕೃತಿ ಮೊದಲಾದ ವಿಶೇಷಣ ನಾಮವಾಚಕ ಶಬ್ದಗಳಿಂದ ವಿವಿಧವಾಗಿ ಹೇಳುತ್ತಾರೆ. ಅಂತಹ ಪ್ರಧಾನವು ಗಂಧ-ರೂಪ-ರಸ-ಶಬ್ದ-ಸ್ಪರ್ಶಗಳೆಂಬ ಭೌತಿಕ ಗುಣಗಳಿಂದ ರಹಿತವೂ, ಜರಾವರ್ಜಿತವೂ, ಸ್ಥಿರವೂ, ಅಕ್ಷಯವೂ, ನಿತ್ಯವೂ ಆಗಿ ಸ್ವಾತ್ಮಸ್ವರೂಪದಲ್ಲಿ ವ್ಯವಸ್ಥಿತವಾಗಿದೆ. ಆ ಪ್ರಧಾನ ತತ್ತ್ವವು ಜಗತ್ತಿಗೆ ಯೋನಿಯೂ, ಮಹಾಭೂತ ಸ್ವರೂಪವೂ, ಪರಬ್ರಹ್ಮಸ್ವರೂಪವೂ, ಸನಾತನವೂ, ಸರ್ವಭೂತ ಗಳ ನಿಗ್ರಹರೂಪವೂ, ಮಹತ್ತರವೂ ಆಗಿ ಆತ್ಮನಲ್ಲಿ ಅಧಿಷ್ಠಿತವಾಗಿದೆ. ಆದಿ-ಅಂತ್ಯಗಳಿಲ್ಲದ, ಜನ್ಮರಹಿತವಾದ, ಸೂಕ್ಷ್ಮವೂ, ಗುಣತ್ರಯ ಸಮಷ್ಟಿರೂಪವೂ, ಉತ್ಪತ್ತಿ-ಲಯಗಳಿಗೆ ಆಧಾರವೂ, ತ್ರಿಕಾಲವ್ಯಾಪಿಯೂ ಆದ ಅದು ದುರ್ಜ್ಞೇಯವು. ಅದರಿಂದಲೇ ಮೊದಲು ಬ್ರಹ್ಮ ಅಥವಾ ಮಹತ್ತತ್ತ್ವವು ಜನಿಸಿತು.
ಗುಣಸಾಮ್ಯೇ ತದಾ ತಸ್ಮಿನ್ ಪುರುಷೇ ವಾತ್ಮನಿ ಸ್ಥಿತೇ । ಪ್ರಾಕೃತಃ ಪ್ರಲಯೋ ಜ್ಞೇಯೋ ಯಾವದ್ವಿಶ್ವಸಮುದ್ಭವಃ ।। 10 ।। ಬ್ರಾಹ್ಮೀ ರಾತ್ರಿರಿಯಂ ಪ್ರೋಕ್ತಾ ಹ್ಯಹಃ ಸೃಷ್ಟಿರುದಾಹೃತಾ । ಅಹರ್ನವಿದ್ಯತೇ ತಸ್ಯ ನ ರಾತ್ರಿರ್ಹ್ಯುಪಚಾರತಃ ।। 11 ।। ನಿಶಾಂತೇ ಪ್ರತಿಬುದ್ಧೋಽಸೌ ಜಗದಾದಿರನಾದಿಮಾನ್ । ಸರ್ವಭೂತಮಯೋಽವ್ಯಕ್ತಾದಂತರ್ಯಾಮೀಶ್ವರಃ ಪರಃ ।। 12 ।। ಪ್ರಕೃತಿಂ ಪುರುಷಂ ಚೈವ ಪ್ರವಿಶ್ಯಾಶು ಮಹೇಶ್ವರಃ । ಕ್ಷೋಭಯಾಮಾಸ ಯೋಗೇನ ಪರೇಣ ಪರಮೇಶ್ವರಃ ।। 13 ।। ಯಥಾ ಮದೋ ನರಸ್ತ್ರೀಣಾಂ ಯಥಾ ವಾ ಮಾಧವೋಽನಿಲಃ । ಅನುಪ್ರವಿಷ್ಟಃ ಕ್ಷೋಭಾಯ ತಥಾಽಸೌ ಯೋಗಮೂರ್ತಿಮಾನ್ ।। 14 ।। ಸ ಏವ ಕ್ಷೋಭಕೋ ವಿಪ್ರಾಃ ಕ್ಷೋಭ್ಯಶ್ಚ ಪರಮೇಶ್ವರಃ । ಸ ಸಂಕೋಚವಿಕಾಸಾಭ್ಯಾಂ ಪ್ರಧಾನತ್ವೇ ವ್ಯವಸ್ಥಿತಃ ।। 15 ।।
ಯಾವಾಗ ಪ್ರಧಾನವು ತನ್ನ ನಿಜಸ್ವರೂಪದಿಂದ ಆತ್ಮನಾಗಿರು ತ್ತಾನೋ ಆಗ ತ್ರಿಗುಣಗಳ ಸಾಮ್ಯಾವಸ್ಥೆಯಿರುತ್ತದೆ. ಅಂದಿನಿಂದ ವಿಶ್ವವು ಹುಟ್ಟುವವರೆಗಿನ ಅವಸ್ಥೆಯನ್ನು ಪ್ರಾಕೃತ ಪ್ರಳಯ ಎಂದು ತಿಳಿಯಬೇಕು. ಇಂತಹ ಪ್ರಳಯವನ್ನು ಬ್ರಹ್ಮನ ರಾತ್ರಿಯೆಂದು ಹೇಳುತ್ತಾರೆ. ಹಾಗೆಯೇ ಸೃಷ್ಟಿಯು ಬ್ರಹ್ಮನ ಹಗಲೆಂದು ಹೇಳುತ್ತಾರೆ. ಆದರೆ ವಾಸ್ತವವಾಗಿ ಬ್ರಹ್ಮನಿಗೆ ಹಗಲು-ರಾತ್ರಿ ಯಾವುದೂ ಇಲ್ಲ. ಇವೆಲ್ಲವೂ ಔಪಚಾರಿಕವಾದ ಕಲ್ಪನೆ ಮಾತ್ರ. ರಾತ್ರಿಯು ಕಳೆಯಲು ಜಗತ್ತಿಗೆ ಆದಿಯಾದ, ಸ್ವತಃ ಅನಾದಿಯಾದ ಮತ್ತು ಅವ್ಯಕ್ತದ ಮೂಲಕ ಸರ್ವಭೂತಗಳಿಗೆ ಅಂತರ್ಯಾಮಿಯಾದ ಪರಮಾತ್ಮನು ಎಚ್ಚರಗೊಳ್ಳುತ್ತಾನೆ. ಪರಮೇಶ್ವರ ಮಹೇಶ್ವರನು ಪ್ರಕೃತಿ ಮತ್ತು ಪುರುಷರನ್ನು ತನ್ನ ಪರಮ ಯೋಗದಿಂದ ಶೀಘ್ರವಾಗಿ ಪ್ರವೇಶಿಸಿ ಕ್ಷೋಭೆಯನ್ನುಂಟು ಮಾಡಿದನು. ಆ ಯೋಗಮೂರ್ತಿಯು ಹಾಗೆ ಪ್ರವೇಶಿಸಿಸಲು ಅಲ್ಲಿ ಪುರುಷ ಮತ್ತು ಸ್ತ್ರೀಯರ ಸಂಗದಲ್ಲಿ ಉಂಟಾಗುವ ಮದ ಅಥವಾ ವಸಂತಮಾಸದ ಗಾಳಿಯಲ್ಲಿರುವ ಮತ್ತಿನಂತಹ ಕ್ಷೋಭೆಯುಂಟಾ ಯಿತು. ವಿಪ್ರರೇ! ಆ ಪರಮೇಶ್ವರನೇ ಕ್ಷೋಭಕನೂ, ಕ್ಷೋಭ್ಯನೂ ಆಗಿದ್ದಾನೆ. ಅವನು ಸಂಕಲ್ಪಮಾತ್ರದಿಂದಲೇ ಸಂಕೋಚ-ವಿಕಾಸ ಭಾವಗಳನ್ನು ಹೊಂದಿ ಪ್ರಧಾನರೂಪದಲ್ಲಿ ವ್ಯವಸ್ಥಿತನಾಗಿದ್ದಾನೆ.
ಪ್ರಧಾನಾತ್ಕ್ಷೋಭ್ಯಮಾನಾಚ್ಚ ತಥಾ ಪುಂಸಃ ಪುರಾತನಾತ್ । ಪ್ರಾದುರಾಸೀನ್ಮಹದ್ಬೀಜಂ ಪ್ರಧಾನಪುರುಷಾತ್ಮಕಮ್ ।। 16 ।। ಮಹಾನಾತ್ಮಾ ಮತಿರ್ಬ್ರಹ್ಮಾ ಪ್ರಬುದ್ಧಿಃ ಖ್ಯಾತಿರೀಶ್ವರಃ । ಪ್ರಜ್ಞಾ ಧೃತಿಃ ಸ್ಮೃತಿಃ ಸಂವಿದೇತಸ್ಮಾದಿತಿ ತತ್ ಸ್ಮೃತಮ್ ।। 17 ।।
ಪುರಾತನ ಪುರುಷನಿಂದಲೂ ಮತ್ತು ಕ್ಷೋಭೆಗೊಂಡಿರುವ ಪ್ರಧಾನದಿಂದಲೂ, ಪ್ರಧಾನ-ಪುರುಷರ ಅಂಶದ್ವಯಗರ್ಭಿತ ವಾದ ಮಹತ್ತತ್ತ್ವವೆಂಬ ಬೀಜವು ಪ್ರಾದುರ್ಭವಿಸಿತು. ಆ ಬೀಜದಿಂದಲೇ ಸರ್ವಚೇತನಾಂಶ ಸಮಷ್ಟಿರೂಪದ ಮಹತ್ತತ್ತ್ವ, ಆತ್ಮಾ, ಮತಿ, ಬ್ರಹ್ಮಾ, ಪ್ರಬುದ್ಧಿ, ಖ್ಯಾತಿ, ಈಶ್ವರ, ಪ್ರಜ್ಞಾ, ಧೃತಿ, ಸ್ಮೃತಿ, ಸಂವಿತ್ ಎಂಬ ಅಂಶಗಳು ಸ್ಫುರಿಸುತ್ತವೆ ಎಂದು ಹೇಳಿದ್ದಾರೆ.
ವೈಕಾರಿಕಸ್ತೈಜಸಶ್ಚ ಭೂತಾದಿಶ್ಚೈವ ತಾಮಸಃ । ತ್ರಿವಿಧೋಽಯಮಹಂಕಾರೋ ಮಹತಃ ಸಂಬಭೂವ ಹ ।। 18 ।। ಅಹಂಕಾರೋಽಬಿಮಾನಶ್ಚ ಕರ್ತಾ ಮಂತಾ ಚ ಸ ಸ್ಮೃತಃ । ಆತ್ಮಾ ಚ ಮತ್ಪರೋ ಜೀವೋ ಗತಃ ಸರ್ವಾಃ ಪ್ರವೃತ್ತಯಃ ।। 19 ।।
ಮುಂದೆ ಮಹತ್ತತ್ತ್ವದಿಂದ ವೈಕಾರಿಕ, ತೈಜಸ ಮತ್ತು ತಾಮಸ ಎಂಬ ಮೂರು ಪ್ರಭೇದಗಳಿಂದ ಕೂಡಿದ ಭೂತಾದಿ ಅಥವಾ ಅಹಂಕಾರವು ಉತ್ಪನ್ನವಾಯಿತು. ಆ ಅಹಂಕಾರವು ಅಭಿಮಾನ ಸ್ವರೂಪವೂ, ಕರ್ತೃತ್ವ, ಮಂತೃತ್ವ ಮೊದಲಾದ ಧರ್ಮಗಳು ಳ್ಳದ್ದೂ ಆಗಿದೆ. ಆತ್ಮವು ಇಂತಹ ಅಹಂಕಾರದ ಶರಣುಹೊಕ್ಕು ತನ್ಮೂಲಕವಾಗಿ ಜೀವದ ಸರ್ವ ಪ್ರವೃತ್ತಿಗಳೂ ನಡೆಯುತ್ತವೆ.
ಪಂಚಭೂತಾನ್ಯಹಂಕಾರಾತ್ತನ್ಮಾತ್ರಾಣಿ ಚ ಜಜ್ಞಿರೇ । ಇಂದ್ರಿಯಾಣಿ ಚ ಸರ್ವಾಣಿ ಸರ್ವಂ ತಸ್ಯಾತ್ಮಜಂ ಜಗತ್ ।। 20 ।। ಮನಸ್ತ್ವವ್ಯಕ್ತಜಂ ಪ್ರೋಕ್ತಂ ವಿಕಾರಃ ಪ್ರಥಮಃ ಸ್ಮೃತಃ । ಯೇನಾಸೌ ಜಾಯತೇ ಕರ್ತಾ ಭೂತಾದೀಂಶ್ಚಾನುಪಶ್ಯತಿ ।। 21 ।। ವೈಕಾರಿಕಾದಹಂಕಾರಾತ್ಸರ್ಗೋ ವೈಕಾರಿಕೋಽಭವತ್ । ತೈಜಸಾನೀಂದ್ರಿಯಾಣಿ ಸ್ಯುರ್ದೇವಾ ವೈಕಾರಿಕಾ ದಶ ।। 22 ।। ಏಕಾದಶಂ ಮನಸ್ತತ್ರ ಸ್ವಗುಣೇನೋಭಯಾತ್ಮಕಮ್ । ಭೂತತನ್ಮಾತ್ರಸರ್ಗೋಽಯಂ ಭೂತಾದೇರಭವದ್ವಿಜಾಃ ।। 23 ।।
ಆ ಅಹಂಕಾರದಿಂದ ಪಂಚಭೂತ ತನ್ಮಾತ್ರೆಗಳೂ ಮತ್ತು ಸಮಸ್ತ ಇಂದ್ರಿಯಗಳೂ ಹುಟ್ಟಿದವು. ಸಾಮಾನ್ಯವಾಗಿ ಸರ್ವ ಜಗತ್ತೂ ಈ ಅಹಂಕಾರದ ರೂಪವಾಗಿದೆ. ಮನಸ್ಸು ಅವ್ಯಕ್ತತತ್ತ್ವದಿಂದ ಮೊದಲನೆಯ ವಿಕಾರರೂಪವಾಗಿ ಹುಟ್ಟಿತೆಂದು ಹೇಳುತ್ತಾರೆ. ಅಂತಹ ಪ್ರಥಮ ವಿಕಾರಪರನಾದ ಆತ್ಮನು ಕರ್ತೃರೂಪದಿಂದ ಪರಿಣತನಾಗಿ ಭೂತಾದಿ ಮೊದಲಾದವುಗಳಿಗೆ ಸಾಕ್ಷಿಯಾಗು ತ್ತಾನೆ. ವೈಕಾರಿಕ ಅಹಂಕಾರದಿಂದ ವೈಕಾರಿಕ ಸೃಷ್ಟಿಯು ಉಂಟಾಯಿತು. ಜ್ಞಾನೇಂದ್ರಿಯ-ಕರ್ಮೇಂದ್ರಿಯಗಳೆಂಬ ತೈಜಸ ಪ್ರಕಾಶರೂಪವಾದ ಹತ್ತು ಇಂದ್ರಿಯಗಳು ವೈಕಾರಿಕ ಸೃಷ್ಟಿಯಲ್ಲಿ ಸೇರಿವೆ. ಹತ್ತು ಇಂದ್ರಿಯಗಳ ಸಮಷ್ಟಿಗೆ ಹನ್ನೊಂದನೆಯದಾದ ಮನಸ್ಸು ತನ್ನ ಅಸಾಧಾರಣ ಗುಣದಿಂದ ಜ್ಞಾನ-ಕ್ರಿಯಾಶಕ್ತಿ ಗಳಿಂದ ಕೂಡಿದೆ. ದ್ವಿಜರೇ! ಭೂತತನ್ಮಾತ್ರಗಳ ಸೃಷ್ಟಿಯು ಭೂತಾದಿ ಎಂಬ ಅಹಂಕಾರದಿಂದ ಉಂಟಾಯಿತು.
ಭೂತಾದಿಸ್ತು ವಿಕುರ್ವಾಣಃ ಶಬ್ದಮಾತ್ರಂ ಸಸರ್ಜ ಹ । ಆಕಾಶೋ ಜಾಯತೇ ತಸ್ಮಾತ್ತಸ್ಯ ಶಬ್ದೋ ಗುಣೋ ಮತಃ ।। 24 ।। ಆಕಾಶಸ್ತು ವಿಕುರ್ವಾಣಃ ಸ್ಪರ್ಶಮಾತ್ರಂ ಸಸರ್ಜ ಹ । ವಾಯುರುತ್ಪದ್ಯತೇ ತಸ್ಮಾತ್ತಸ್ಯ ಸ್ಪರ್ಶಂ ಗುಣಂ ವಿದುಃ ।। 25 ।। ವಾಯುಶ್ಚಾಪಿ ವಿಕುರ್ವಾಣೋ ರೂಪಮಾತ್ರಂ ಸಸರ್ಜ ಹ । ಜ್ಯೋತಿರುತ್ಪದ್ಯತೇ ವಾಯೋಸ್ತದ್ರೂಪಗುಣಮುಚ್ಯತೇ ।। 26 ।। ಜ್ಯೋತಿಶ್ಚಾಪಿ ವಿಕುರ್ವಾಣಂ ರಸಮಾತ್ರಂ ಸಸರ್ಜ ಹ । ಸಂಭವಂತಿ ತತೋಽಂಭಾಂಸಿ ರಸಾಧಾರಾಣಿ ತಾನಿ ತು ।। 27 ।। ಆಪಶ್ಚಾಪಿ ವಿಕುರ್ವಾಣಾ ಗಂಧಮಾತ್ರಂ ಸಸರ್ಜಿರೇ । ಸಂಘಾತೋ ಜಾಯತೇ ತಸ್ಮಾತ್ತಸ್ಯ ಗಂಧೋ ಗುಣೋ ಮತಃ ।। 28 ।।
ಭೂತಾದಿಯು ವಿಕಾರಗೊಳ್ಳಲು ಶಬ್ದತನ್ಮಾತ್ರವನ್ನು ಸೃಷ್ಟಿಸಿತು. ಅದರಿಂದ ಆಕಾಶ ಮಹಾಭೂತವು ಜನಿಸುತ್ತದೆ. ಆದ್ದರಿಂದ ಆಕಾಶಕ್ಕೆ ಶಬ್ದವು ಸ್ವಗುಣವೆಂದು ಹೇಳುತ್ತಾರೆ. ಆಕಾಶವು ವಿಕಾರಹೊಂದಲು ಸ್ಪರ್ಶತನ್ಮಾತ್ರವನ್ನು ಸೃಷ್ಟಿಸಿತು. ಅದರಿಂದ ವಾಯು ಮಹಾಭೂತವು ಉತ್ಪನ್ನವಾಗುತ್ತದೆ. ಆದ್ದರಿಂದ ವಾಯುವಿಗೆ ಸ್ಪರ್ಶವು ಗುಣ ಎಂದು ತಿಳಿದಿದೆ. ವಾಯುವೂ ಕೂಡ ವಿಕಾರಗೊಳ್ಳಲು ರೂಪತನ್ಮಾತ್ರವನ್ನು ಸೃಷ್ಟಿಸಿತು. ವಾಯುವಿನಿಂದ ಜ್ಯೋತಿಯು ಹುಟ್ಟುತ್ತದೆ. ತೇಜಸ್ಸಿಗೆ ರೂಪವು ಗುಣ ಎಂದು ಹೇಳುತ್ತಾರೆ. ಜ್ಯೋತಿಯೂ ವಿಕಾರಗೊಳ್ಳಲು ರಸತನ್ಮಾತ್ರವನ್ನು ಸೃಷ್ಟಿಸಿತು. ಅದರಿಂದ ಜಲಗಳು ಹುಟ್ಟಿದವು. ಜಲಗಳು ರಸಗುಣಕ್ಕೆ ಆಧಾರವಾಗಿವೆ. ಜಲವೂ ವಿಕಾರ ಹೊಂದಲು ಗಂಧತನ್ಮಾತ್ರೆಯನ್ನು ಸೃಷ್ಟಿಸಿತು. ಅದರಿಂದ ಕಾಠಿಣ್ಯಗುಣವುಳ್ಳ ಪೃಥ್ವಿಯೆಂಬ ಸಂಘಾತ ಮಹಾಭೂತವು ಹುಟ್ಟಿತು. ಪೃಥ್ವಿಗೆ ಗಂಧವು ಗುಣ ಎಂದು ಸಮ್ಮತವಾಗಿದೆ.
ಆಕಾಶಂ ಶಬ್ದಮಾತ್ರಂ ತು ಸ್ಪರ್ಶಮಾತ್ರಂ ಸಮಾವೃಣೋತ್ । ದ್ವಿಗುಣಸ್ತು ತತೋ ವಾಯುಃ ಶಬ್ದಸ್ಪರ್ಶಾತ್ಮಕೋಽಭವತ್ ।। 29 ।। ರೂಪಂ ತಥೈವಾವಿಶತಃ ಶಬ್ದಸ್ಪರ್ಶೌ ಗುಣಾವುಭೌ । ತ್ರಿಗುಣಃ ಸ್ಯಾತ್ತತೋ ವಹ್ನಿಃ ಸ ಶಬ್ದಸ್ಪರ್ಶರೂಪವಾನ್ ।। 30 ।। ಶಬ್ದ ಸ್ಪರ್ಶಶ್ಚ ರೂಪಂ ಚ ರಸಮಾತ್ರಂ ಸಮಾವಿಶತ್ । ತಸ್ಮಾಚ್ಚತುರ್ಗುಣಾ ಆಪೋ ವಿಜ್ಞೇಯಾಸ್ತು ರಸಾತ್ಮಿಕಾಃ ।। 31 ।। ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧಂ ಸಮಾವಿಶತ್ । ತಸ್ಮಾತ್ಪಂಚಗುಣಾ ಭೂಮಿಃ ಸ್ಥೂಲಾ ಭೂತೇಷು ಶಬ್ದ್ಯತೇ ।। 32 ।।
ಆಕಾಶದ ಶಬ್ದತನ್ಮಾತ್ರವು ಸ್ಪರ್ಶತನ್ಮಾತ್ರವನ್ನು ಆವರಿಸಿತು. ಆದ್ದರಿಂದ ವಾಯುವು ಶಬ್ದ-ಸ್ಪರ್ಶಗಳೆಂಬ ಎರಡು ಗುಣಗಳುಳ್ಳ ದ್ದಾಯಿತು. ಹಾಗೆಯೇ ಶಬ್ದ-ಸ್ಪರ್ಶಗಳೆಂಬ ಎರಡು ಗುಣಗಳು ರೂಪತನ್ಮಾತ್ರವನ್ನು ಆವರಿಸಿದವು. ಆದ್ದರಿಂದ ಅಗ್ನಿಯು ಶಬ್ದ-ಸ್ಪರ್ಶ-ರೂಪ ಎನ್ನುವ ತ್ರಿಗುಣಗಳನ್ನು ಪಡೆಯಿತು. ಶಬ್ದ-ಸ್ಪರ್ಶ-ರೂಪ ತನ್ಮಾತ್ರಗಳು ರಸತನ್ಮಾತ್ರವನ್ನು ಆವೇಶಿಸಿದವು. ಆದ್ದರಿಂದ ರಸಾತ್ಮಿಕವಾದ ಜಲವು ಶಬ್ದ-ಸ್ಪರ್ಶ-ರೂಪ-ರಸ ಎಂಬ ನಾಲ್ಕು ಗುಣಗಳಿಂದ ಕೂಡಿದೆ ಎಂದು ಅರಿಯಬೇಕು. ಶಬ್ದ-ಸ್ಪರ್ಶ-ರೂಪ-ರಸ ತನ್ಮಾತ್ರಗಳು ಗಂಧತನ್ಮಾತ್ರವನ್ನು ಆವೇಶಿಸಿದವು. ಆದ್ದರಿಂದ ಭೂಮಿಯು ಶಬ್ದ-ಸ್ಪರ್ಶ-ರೂಪ-ರಸ-ಗಂಧಗಳೆಂಬ ಐದು ಗುಣಗಳಿಂದ ಕೂಡಿ, ಮಹಾಭೂತಗಳಲ್ಲಿ ಸ್ಥೂಲವಾದುದು ಎಂದು ಕರೆಯಲ್ಪಡುತ್ತದೆ.
ಶಾಂತಾ ಘೋರಾಶ್ಚ ಮೂಢಾಶ್ಚ ವಿಶೇಷಾಸ್ತೇನ ತೇ ಸ್ಮೃತಾಃ । ಪರಸ್ಪರಾನುಪ್ರವೇಶಾದ್ಧಾರಯಂತಿ ಪರಸ್ಪರಮ್ ।। 33 ।। ಏತೇ ಸಪ್ತ ಮಹಾತ್ಮಾನೋ ಹ್ಯನ್ಯೋನ್ಯಸ್ಯ ಸಮಾಶ್ರಯಾತ್ । ನಾಶಕ್ನುವನ್ ಪ್ರಜಾಃ ಸ್ರಷ್ಟುಮಸಮಾಗಮ್ಯ ಕೃತ್ಸ್ನಶಃ ।। 34 ।।
ಹೀಗೆ ಹುಟ್ಟಿದ ವಿಶೇಷ ಅಥವಾ ವಿಕಾರಗಳು ಶಾಂತ, ಘೋರ ಮತ್ತು ಮೂಢ ಎಂದು ಮೂರು ಬಗೆಯಲ್ಲಿವೆ. ಇವುಗಳು ಪರಸ್ಪರ ಅನುಪ್ರವೇಶ ಮಾಡಿದ್ದುದರಿಂದ ಪರಸ್ಪರರ ತತ್ತ್ವಗಳನ್ನು ಧರಿಸಿಕೊಂಡಿವೆ. ಮಹತ್ತತ್ತ್ವ ಆದಿಯಾಗಿ ಭೂತಾಂತವಾದ ಈ ಏಳು ಮಹಾತತ್ತ್ವಗಳು ಅನ್ಯೋನ್ಯವಾಗಿ ಸಹಾಯಾಕಾಂಕ್ಷೆಯಲ್ಲಿ ಇರುವುದರಿಂದ ಸಂಪೂರ್ಣ ಸಂಘಾತ ರೂಪವನ್ನು ಹೊಂದದೇ ಪ್ರಜೆಗಳನ್ನು ಸೃಷ್ಟಿಸಲು ಸಮರ್ಥರಾಗಲಿಲ್ಲ.
ಪುರುಷಾಧಿಷ್ಠಿತಾತ್ವಾಚ್ಚ ಅವ್ಯಕ್ತಾನುಗ್ರಹೇಣ ಚ । ಮಹಾದಾದಯೋ ವಿಶೇಷಾಂತಾಃ ಹ್ಯಂಡಮುತ್ಪಾದಯಂತಿ ತೇ ।। 35 ।। ಏಕಕಾಲಸಮುತ್ಪನ್ನಂ ಜಲಬುದ್ಬುದವಚ್ಚ ತತ್ । ವಿಶೇಷೇಭ್ಯೋಽಂಡಮಭವತ್ ಬೃಹತ್ತದುದಕೇಶಯಮ್ ।। 36 ।। ತಸ್ಮಿನ್ ಕಾರ್ಯಸ್ಯ ಕರಣಂ ಸಂಸಿದ್ಧಂ ಪರಮೇಷ್ಠಿನಃ । ಪ್ರಾಕೃತೇಽಂಡೇ ವಿವೃದ್ಧೇ ತು ಕ್ಷೇತ್ರಜ್ಞೋ ಬ್ರಹ್ಮಸಂಜ್ಞಿತಃ ।। 37 ।। ಸ ವೈ ಶರೀರೀ ಪ್ರಥಮಃ ಸ ವೈ ಪುರುಷ ಉಚ್ಯತೇ । ಆದಿಕರ್ತಾ ಸ ಭೂತಾನಾಂ ಬ್ರಹ್ಮಾಗ್ರೇ ಸಮವರ್ತತ ।। 38 ।। ಯಮಾಹುಃ ಪುರುಷಂ ಹಂಸಂ ಪ್ರಧಾನಾತ್ಪರತಃ ಸ್ಥಿತಮ್ । ಹಿರಣ್ಯಗರ್ಭಂ ಕಪಿಲಂ ಛಂದೋಮೂರ್ತಿಂ ಸನಾತನಮ್ ।। 39 ।।
ಆದರೆ ಪುರುಷನ ಅಧಿಷ್ಠಾನದಿಂದಾಗಿ ಮತ್ತು ಅವ್ಯಕ್ತತತ್ತ್ವದ ಅನುಗ್ರಹದಿಂದ ಮಹತ್ತಾದಿ ವಿಶೇಷಾಂತಗಳು ಅಂಡವನ್ನು ಉತ್ಪಾದಿಸುತ್ತವೆ. ಆಗ ಏಕಕಾಲದಲ್ಲಿಯೇ ಈ ವಿಶೇಷಗಳಿಂದ ನೀರಿನಲ್ಲಿ ನೆಲೆಸಿದ ಬೃಹತ್ತಾದ ಅಂಡವು ಉಂಟಾಯಿತು. ಆ ಅಂಡದಲ್ಲಿ ಪರಮೇಷ್ಠೀ ಬ್ರಹ್ಮನ ಕಾರ್ಯ-ಕಾರಣಗಳು ಆವಿರ್ಭವಿಸಿದವು. ಅಂತಹ ಪ್ರಾಕೃತ ಅಂಡವು ಬೆಳೆದು ಬ್ರಹ್ಮ ಎಂಬ ಹೆಸರಿನ ಕ್ಷೇತ್ರಜ್ಞನ ಆವಿರ್ಭಾವವಾಯಿತು. ಆ ಬ್ರಹ್ಮನನ್ನೇ ಪ್ರಥಮ ಶರೀರಿ, ಪುರುಷ ಎಂದು ಕರೆಯುತ್ತಾರೆ. ಆದಿಯಲ್ಲಿ ಜನಿಸಿದ ಆ ಬ್ರಹ್ಮನೇ ಮುಂದೆ ಹುಟ್ಟುವ ಪ್ರಾಣಿಗಳಿಗೆ ಆದಿಕರ್ತನು. ಅವನನ್ನೇ ಪುರುಷ, ಹಂಸ, ಪ್ರಧಾನಕ್ಕಿಂತಲೂ ಪರತರ, ಹಿರಣ್ಯಗರ್ಭ, ಕಪಿಲ, ಛಂದೋಮೂರ್ತಿ ಮತ್ತು ಸನಾತನ ಎಂದು ಕರೆಯುತ್ತಾರೆ.
ಮೇರುರುಲ್ಬಮಭೂತ್ತಸ್ಯ ಜರಾಯುಶ್ಚಾಪಿ ಪರ್ವತಾಃ । ಗರ್ಭೋದಕಂ ಸಮುದ್ರಾಶ್ಚ ತಸ್ಯಾಸನ್ ಪರಮಾತ್ಮನಃ ।। 40 ।। ತಸ್ಮಿನ್ನಂಡೇಽಭವದ್ವಿಶ್ವಂ ಸದೇವಾಸುರಮಾನುಷಮ್ । ಚಂದ್ರಾದಿತ್ಯೌ ಸನಕ್ಷತ್ರೌ ಸಗ್ರಹೌ ಸಹವಾಯುನಾ ।। 41 ।।
ಆ ಪರಮಾತ್ಮನಿಗೆ ಮೇರು ಪರ್ವತವೇ ಗರ್ಭಕೋಶವೂ, ಸಮುದ್ರಗಳು ಗರ್ಭೋದಕವೂ ಆಗಿದ್ದವು. ಆ ಅಂಡದೊಳಗೆ ದೇವ-ಅಸುರ ಮತ್ತು ಮನುಷ್ಯರಿಂದ ಕೂಡಿದ ವಿಶ್ವವು ಉಂಟಾಯಿತು. ಚಂದ್ರ, ಆದಿತ್ಯ, ನಕ್ಷತ್ರ, ಗ್ರಹ ಗಣಗಳಿಂದ ಕೂಡಿದ ತೇಜೋಮಂಡಲ ಮತ್ತು ವಾಯುಮಂಡಲಗಳು ಈ ಅಂಡದೊಳಗೇ ಉಂಟಾದವು.
ಅದ್ಭಿರ್ದಶಗುಣಾಭಿಶ್ಚ ಬಾಹ್ಯತೋಽಂಡಂ ಸಮಾವೃತಮ್ । ಆಪೋ ದಶಗುಣೇನೈವ ತೇಜಸಾ ಬಾಹ್ಯತೋ ವೃತಾಃ ।। 42 ।। ತೇಜೋ ದಶಗುಣೇನೈವ ಬಾಹ್ಯತೋ ವಾಯುನಾ ವೃತಮ್ । ಆಕಾಶೇನಾವೃತೋ ವಾಯುಃ ಖಂ ತು ಭೂತಾದಿನಾ ವೃತಮ್ ।। 43 ।। ಭೂತಾದಿರ್ಮಹತಾ ತದ್ವದವ್ಯಕ್ತೇನಾವೃತೋ ಮಹಾನ್ । ಏತೇ ಲೋಕಾ ಮಹಾತ್ಮನಃ ಸರ್ವೇ ತತ್ತ್ವಾಭಿಮಾನಿನಃ ।। 44 ।। ವಸಂತಿ ತತ್ರ ಪುರುಷಾಸ್ತದಾತ್ಮಾನೋ ವ್ಯವಸ್ಥಿತಾಃ । ಈಶ್ವರಾ ಯೋಗಧರ್ಮಾಣೋ ಯೇ ಚಾನ್ಯೇ ತತ್ತ್ವಚಿಂತಕಾಃ ।। 45 ।। ಸರ್ವಜ್ಞಾಃ ಶಾಂತರಜಸೋ ನಿತ್ಯಂ ಮುದಿತಮಾನಸಾಃ । ಏತೈರಾವರಣೈರಂಡಂ ಪ್ರಾಕೃತೈಃ ಸಪ್ತಭಿರ್ವೃತಮ್ ।। 46 ।।
ಈ ಅಂಡವು ಇದರ ದಶಗುಣಾಧಿಕವಾದ ಜಲಗಳಿಂದ ಬಾಹ್ಯ ಭಾಗದಲ್ಲಿ ಆವರಿಸಲ್ಪಟ್ಟಿದೆ. ಹಾಗೆಯೇ ಜಲವು ದಶಗುಣಾಧಿಕ ತೇಜಸ್ಸಿನಿಂದ ಹೊರಗಡೆ ಆವೃತಗೊಂಡಿದೆ. ತೇಜೋಮಂಡಲ ವು ಅದಕ್ಕಿಂತ ದಶಗುಣದ ವಾಯುಮಂಡಲದಿಂದ ಬಾಹ್ಯ ಪ್ರದೇಶದಲ್ಲಿ ವ್ಯಾಪಿಸಲ್ಪಟ್ಟಿದೆ. ವಾಯುವು ಆಕಾಶದ ವ್ಯಾಪ್ತಿ ಯಿಂದ ಮತ್ತು ಆಕಾಶವು ಭೂತಾದಿಯಿಂದ ಸುತ್ತಲ್ಪಟ್ಟಿದೆ. ಹೀಗೆಯೇ ಭೂತಾದಿಯು ಮಹತ್ತತ್ತ್ವದಿಂದಲೂ, ಮಹತ್ತತ್ತ್ವವು ಅವ್ಯಕ್ತ ತತ್ತ್ವದಿಂದಲೂ ವ್ಯಾಪಿಸಲ್ಪಟ್ಟಿದೆ. ಹೀಗೆ ಲೋಕತತ್ತ್ವ ಗಳಿಗೆ ಅಭಿಮಾನಿಗಳಾಗಿ ಅನೇಕ ಮಹಾತ್ಮರು ಪ್ರತಿಷ್ಠಾಪಕರಾಗಿ ದ್ದಾರೆ. ಅವುಗಳಲ್ಲಿ ಚೇತನಾತ್ಮರಾದ ಪುರುಷರು ಆಯಾಯಾ ತತ್ತ್ವಾತ್ಮಕರಾಗಿ ವ್ಯವಸ್ಥೆಯಿಂದ ಇರುತ್ತಾರೆ. ಅವರು ಈಶ್ವರ ರೂಪರೂ, ಯೋಗ-ಧರ್ಮಾವಲಂಬಿಗಳೂ ಮತ್ತು ತತ್ತ್ವ ಚಿಂತಕರೂ ಆಗಿರುತ್ತಾರೆ. ಆ ಅಭಿಮಾನಿ ಪುರುಷರು ಸರ್ವಜ್ಞರೂ, ಶಾಂತವಾದ ರಜೋಗುಣವುಳ್ಳವರೂ, ಸಂತುಷ್ಟ ಮನಸ್ಸುಳ್ಳವರೂ ಆಗಿದ್ದಾರೆ. ಪ್ರಕೃತಿ ಧರ್ಮವಾಗಿರುವ ಈ ಏಳು ಆವರಣಗಳಿಂದ ಅಂಡವು ಆವೃತವಾಗಿದೆ.
ಏತಾವಚ್ಛಕ್ಯತೇ ವಕ್ತುಂ ಮಾಯೈಷಾ ಗಹನಾ ದ್ವಿಜಾಃ । ಏತತ್ಪ್ರಾಧಾನಿಕಂ ಕಾರ್ಯಂ ಯನ್ಮಯಾ ಬೀಜಮೀರಿತಮ್ ।। 47 ।। ಪ್ರಜಾಪತೇಃ ಪರಾ ಮೂರ್ತಿರಿತೀಯಂ ವೈದಿಕೀ ಶ್ರುತಿಃ । ಬ್ರಹ್ಮಾಂಡಮೇತತ್ಸಕಲಂ ಸಪ್ತಲೋಕಬಲಾನ್ವಿತಮ್ ।। 48 ।। ದ್ವಿತೀಯಂ ತಸ್ಯ ದೇವಸ್ಯ ಶರೀರಂ ಪರಮೇಷ್ಠಿನಃ । ಹಿರಣ್ಯಗರ್ಭೋ ಭಗವಾನ್ ಬ್ರಹ್ಮಾ ವೈ ಕನಕಾಂಡಜಃ ।। 49 ।। ತೃತೀಯಂ ಭಗವದ್ರೂಪಂ ಪ್ರಾಹುರ್ವೇದಾರ್ಥವೇದಿನಃ । ರಜೋಗುಣಮಯಂ ಚಾನ್ಯದ್ರೂಪಂ ತಸ್ಯೈವ ಧೀಮತಃ ।। 50 ।। ಚತುರ್ಮುಖಸ್ತು ಭಗವಾನ್ ಜಗತ್ಸೃಷ್ಟೌ ಪ್ರವರ್ತತೇ । ಸೃಷ್ಟಂ ಚ ಪಾತಿ ಸಕಲಂ ವಿಶ್ವಾತ್ಮಾ ವಿಶ್ವತೋಮುಖಃ ।। 51 ।। ಸತ್ತ್ವಂ ಗುಣಮುಪಾಶ್ರಿತ್ಯ ವಿಷ್ಣುರ್ವಿಶ್ವೇಶ್ವರಃ ಸ್ವಯಮ್ । ಅಂತಕಾಲೇ ಸ್ವಯಂ ದೇವಃ ಸರ್ವಾತ್ಮಾ ಪರಮೇಶ್ವರಃ ।। 52 ।। ತಮೋಗುಣಂ ಸಮಾಶ್ರಿತ್ಯ ರುದ್ರಃ ಸಂಹರತೇ ಜಗತ್ । ಏಕೋಽಪಿ ಸನ್ಮಹಾದೇವಸ್ತ್ರಿಧಾಸೌ ಸಮವಸ್ಥಿತಃ ।। 53 ।। ಸರ್ಗರಕ್ಷಾಲಯಗುಣೈರ್ನಿರ್ಗುಣೋಽಪಿ ನಿರಂಜನಃ । ಏಕಧಾ ಸ ದ್ವಿಧಾ ಚೈವ ತ್ರಿಧಾ ಚ ಬಹುಧಾ ಗುಣೈಃ ।। 54 ।। ಯೋಗೇಶ್ವರಃ ಶರೀರಾಣಿ ಕರೋತಿ ವಿಕರೋತಿ ಚ । ನಾನಾಕೃತಿಕ್ರಿಯಾರೂಪನಾಮವಂತಿ ಸ್ವಲೀಲಯಾ ।। 55 ।। ಹಿತಾಯ ಚೈವ ಭಕ್ತಾನಾಂ ಸ ಏವ ಗ್ರಸತೇ ಪುನಃ । ತ್ರಿಧಾ ವಿಭಜ್ಯ ಚಾತ್ಮಾನಂ ತ್ರೈಲೋಕ್ಯೇ[1] ಸಂಪ್ರವರ್ತತೇ ।। 56 ।। ಸೃಜತೇ ಗ್ರಸತೇ ಚೈವ ವೀಕ್ಷತೇ ಚ ವಿಶೇಷತಃ । ಯಸ್ಮಾತ್ಸೃಷ್ಟ್ವಾನುಗೃಹ್ಣಾತಿ ಗ್ರಸತೇ ಚ ಪುನಃ ಪ್ರಜಾಃ ।। 57 ।। ಗುಣಾತ್ಮಕತ್ವಾತ್ತ್ರೈಕಾಲ್ಯೇ ತಸ್ಮಾದೇಕಃ ಸ ಉಚ್ಯತೇ ।
ದ್ವಿಜರೇ! ಈ ಮಾಯಾಸ್ವರೂಪವು ಅತಿ ಗಹನವಾಗಿರುವುದ ರಿಂದ ಇಷ್ಟು ಮಾತ್ರ ವರ್ಣಿಸಲು ಶಕ್ಯವಾಗಿದೆ. ಹೀಗೆ ನಾನು ಪ್ರಧಾನದ ಕಾರ್ಯಜಾಲವು ಬೀಜರೂಪವಾಗಿದೆ ಎಂದು ಹೇಳಿದ್ದೇನೆ. ಸಪ್ತಲೋಕಬಲಾನ್ವಿತವಾಗಿರುವ ಈ ಸಕಲ ಬ್ರಹ್ಮಾಂಡವೂ ಪ್ರಜಾಪತಿಯ ಪರಮ ಮೂರ್ತಿಯೆಂದು ವೇದ ವಚನವು ಹೇಳುತ್ತದೆ. ಆ ಪರಮೇಷ್ಟಿಯ ಎರಡನೇ ದೇಹವೇ ಹಿರಣ್ಯಗರ್ಭ, ಕನಕಾಂಡಜ, ಭಗವಾನ್ ಬ್ರಹ್ಮ. ವೇದಾರ್ಥ ಗಳನ್ನು ತಿಳಿದವರು ರಜೋಗುಣಮಯವಾದ ಸರ್ವಜ್ಞವಾದ ಅನ್ಯ ರೂಪವನ್ನು ಮೂರನೆಯ ಭಗವದ್ರೂಪವೆಂದು ಹೇಳುತ್ತಾರೆ. ಭಗವಂತನು ಆ ರೂಪದಲ್ಲಿ ಚತುರ್ಮುಖನಾಗಿದ್ದು ಜಗತ್ತಿನ ಸೃಷ್ಟಿಯಲ್ಲಿ ತೊಡಗುತ್ತಾನೆ. ಹೀಗೆ ಸೃಷ್ಟಿಮಾಡಿದ ಸಕಲವನ್ನೂ ಸ್ವಯಂ ವಿಶ್ವಾತ್ಮಾ ವಿಶ್ವತೋಮುಖ ವಿಶ್ವೇಶ್ವರ ವಿಷ್ಣುವು ಸತ್ತ್ವಗುಣವನ್ನು ಆಶ್ರಯಿಸಿ ಕಾಪಾಡುತ್ತಾನೆ. ಅಂತ್ಯಕಾಲದಲ್ಲಿ ಸ್ವಯಂ ದೇವ, ಸರ್ವಾತ್ಮಾ ಪರಮೇಶ್ವರ ರುದ್ರನು ತಮೋಗುಣವನ್ನು ಆಶ್ರಯಿಸಿ ಜಗತ್ತನ್ನು ಸಂಹರಿಸುತ್ತಾನೆ. ಹೀಗೆ ಒಬ್ಬನೇ ಆಗಿದ್ದರೂ ಮಹಾದೇವನು ಮೂರು ರೂಪಗಳಲ್ಲಿ ವ್ಯವಸ್ಥಿತನಾಗಿದ್ದಾನೆ. ಸೃಷ್ಟಿ-ರಕ್ಷೆ-ಲಯಗಳೆಂಬ ಗುಣಗಳಿಲ್ಲದೇ ನಿರ್ಗುಣನೂ ನಿರಂಜನನೂ ಆಗಿರುವ ಅವನು ಸಂಕಲ್ಪ ಮಾತ್ರದಿಂದಲೇ ಏಕರೂಪ, ದ್ವಿರೂಪ ಅಥವಾ ಬಹುರೂಪನಾ ಗುತ್ತಾನೆ. ಆ ಯೋಗೇಶ್ವರನು ತನ್ನದೇ ಲೀಲೆಯಿಂದ, ಭಕ್ತರ ಹಿತಕ್ಕಾಗಿ, ನಾನಾ ಆಕೃತಿ, ಕ್ರಿಯೆ ಮತ್ತು ನಾಮ-ರೂಪಗಳಿರುವ ಶರೀರಗಳನ್ನುಂಟುಮಾಡಿ ವಿಕಾರಹೊಂದುತ್ತಾನೆ. ಮತ್ತೆ ತಾನೇ ಅದನ್ನು ನುಂಗಿಬಿಡುತ್ತಾನೆ. ಪರಮಾತ್ಮನು ತನ್ನನ್ನು ತಾನೇ ಮೂರಾಗಿ ವಿಂಗಡಿಸಿಕೊಂಡು ಮೂರು ಕಾಲಗಳಲ್ಲಿ ಸೃಷ್ಟಿಸುತ್ತಾನೆ, ವಿಶೇಷವಾಗಿ ಕಾಪಾಡುತ್ತಾನೆ ಮತ್ತು ನುಂಗುವ ಪ್ರಕ್ರಿಯೆಗಳನ್ನು ಮಾಡುತ್ತಾನೆ. ಗುಣಾತ್ಮಕತ್ವದಿಂದ ಅವನು ಮೂರು ಕಾಲಗಳಲ್ಲಿ ಸೃಷ್ಟಿ, ಅನುಗ್ರಹ ಮತ್ತು ಪುನಃ ಪ್ರಜೆಗಳ ಗ್ರಸನಗಳನ್ನು ಮಾಡುತ್ತಾನಾದರೂ ಅವನು ಒಬ್ಬನೇ ಎಂದು ಹೇಳಿದ್ದಾರೆ.
ಅಗ್ರೇ ಹಿರಣ್ಯಗರ್ಭಃ ಸ ಪ್ರಾದುರ್ಭೂತಃ ಸನಾತನಃ ।। 58 ।। ಆದಿತ್ವಾದಾದಿದೇವೋಽಸಾವಜಾತತ್ವಾದಜಃ ಸ್ಮೃತಃ । ಪಾತಿ ಯಸ್ಮಾತ್ಪ್ರಜಾಃ ಸರ್ವಾಃ ಪ್ರಜಾಪತಿರಿತಿ ಸ್ಮೃತಃ ।। 59 ।। ದೇವೇಷು ಚ ಮಹಾದೇವೋ ಮಹಾದೇವ ಇತಿ ಸ್ಮೃತಃ । ಬೃಹತ್ತ್ವಾಚ್ಚ ಸ್ಮೃತೋ ಬ್ರಹ್ಮಾ ಪರತ್ವಾತ್ಪರಮೇಶ್ವರಃ ।। 60 ।। ವಶಿತ್ವಾದಪ್ಯವಶ್ಯತ್ವಾದೀಶ್ವರಃ ಪರಿಭಾಷಿತಃ । ಋಷಿಃ ಸರ್ವತ್ರಗತ್ವೇನ ಹರಿಃ ಸರ್ವಹರೋ ಯತಃ ।। 61 ।। ಅನುತ್ಪಾದಾಚ್ಚ ಪೂರ್ವತ್ವಾತ್ಸ್ವಯಂಭೂರಿತಿ ಸ ಸ್ಮೃತಃ । ನರಾಣಾಮಯನೋ ಯಸ್ಮಾತ್ತೇನ ನಾರಾಯಣಃ ಸ್ಮೃತಃ ।। 62 ।। ಹರಃ ಸಂಸಾರಹರಣಾದ್ವಿಭುತ್ವಾದ್ವಿಷ್ಣುರುಚ್ಯತೇ । ಭಗವಾನ್ ಸರ್ವವಿಜ್ಞಾನಾದವನಾದೋಮಿತಿ ಸ್ಮೃತಃ ।। 63 ।। ಸರ್ವಜ್ಞಃ ಸರ್ವವಿಜ್ಞಾನಾತ್ ಸರ್ವಃ ಸರ್ವಮಯೋ ಯತಃ । ಶಿವಃ ಸ್ಯಾನ್ನಿರ್ಮಲೋ ಯಸ್ಮಾದ್ವಿಭುಃ ಸರ್ವಗತೋ ಯತಃ ।। 64 ।। ತಾರಣಾತ್ ಸರ್ವದುಃಖಾನಾಂ ತಾರಕಃ ಪರಿಗೀಯತೇ । ಬಹುನಾಽತ್ರ ಕಿಮುಕ್ತೇನ ಸರ್ವಂ ಬ್ರಹ್ಮಮಯಂ ಜಗತ್ ।। 65 ।। ಅನೇಕಭೇದಭಿನ್ನಸ್ತು ಕ್ರೀಡತೇ ಪರಮೇಶ್ವರಃ । ಇತ್ಯೇಷ ಪ್ರಾಕೃತಃ ಸರ್ಗಃ ಸಂಕ್ಷೇಪಾತ್ಕಥಿತೋ ಮಯಾ । ಅಬುದ್ಧಿಪೂರ್ವಕೋ ವಿಪ್ರಾ ಬ್ರಾಹ್ಮೀಂ ಸೃಷ್ಟಿಂ ನಿಬೋಧತ ।। 66 ।।
ಮೊದಲು ಸನಾತನ ಹಿರಣ್ಯಗರ್ಭನು ಪ್ರಾದುರ್ಭವಿಸಿದನು. ಆದಿತ್ವದಿಂದಾಗಿ ಅವನು ಆದಿದೇವನೆಂದಾದನು. ಹುಟ್ಟಿಲ್ಲದ್ದ ರಿಂದ ಅವನು ಅಜನೆಂದಾದನು. ಸರ್ವ ಪ್ರಜೆಗಳನ್ನೂ ಪಾಲಿಸು ವುದರಿಂದ ಪ್ರಜಾಪತಿ ಎಂದಾದನು. ದೇವತೆಗಳಲ್ಲಿ ಮಹಾದೇವ ನಾದ್ದರಿಂದ ಮಹಾದೇವ ಎಂದಾದನು. ಬ್ರಹತ್ತ್ವದಿಂದ ಬ್ರಹ್ಮನೆಂದೆನಿಸಿಕೊಂಡನು. ಪರಮತ್ವದಿಂದ ಪರಮೇಶ್ವರನಾ ದನು. ಎಲ್ಲದಕ್ಕೂ ನಿಯಾಮಕನಾಗಿ ಆದರೆ ತಾನು ಮಾತ್ರ ಯಾರ ನಿಯಾಮಕತ್ವಕ್ಕೂ ಒಳಗಾಗದೇ ಇರುವುದರಿಂದ ಈಶ್ವರನೆಂದು ಕರೆಯಲ್ಪಡುತ್ತಾನೆ. ಸರ್ವವ್ಯಾಪಿಯಾಗಿರುವುದರಿಂದ ಋಷಿ ಎಂದೂ, ಸರ್ವವನ್ನೂ ಹರಣ ಮಾಡುವುದರಿಂದ ಹರಿ ಎಂದೂ ಕರೆಯಲ್ಪಡುತ್ತಾನೆ. ತನಗಿಂತಲೂ ಮೊದಲು ಇದ್ದ ಯಾವುದೇ ವಸ್ತುವಿನಿಂದ ಉತ್ಪನ್ನನಾಗಿಲ್ಲವಾದ್ದರಿಂದ ಇವನು ಸ್ವಯಂಭೂ ಎಂದು ಹೇಳುತ್ತಾರೆ. ನರರಿಗೆ ಪರಮ ಗತಿಯಾದ್ದರಿಂದ ಇವನು ನಾರಾಯಣ ಎಂದೂ ಹೇಳುತ್ತಾರೆ. ಹಾಗೆಯೇ ಸಂಸಾರದುಃಖ ವನ್ನು ಅಪಹರಿಸುವುದರಿಂದ ಹರನೆಂದೂ, ವಿಭುತ್ವದಿಂದ ವಿಷ್ಣುವೆಂದೂ ಕರೆಯುತ್ತಾರೆ. ಎಲ್ಲದರ ವಿಶೇಷ ಜ್ಞಾನವಿರುವುದ ರಿಂದ ಭಗವಂತನೆಂದೂ ಓಂಕಾರನೆಂದೂ ಕರೆಯಲ್ಪಟ್ಟಿದ್ದಾನೆ. ಸರ್ವವಿಜ್ಞಾನದಿಂದ ಇವನು ಸರ್ವಜ್ಞನು. ಸರ್ವತೋಮಯನಾಗಿ ರುವುದರಿಂದ ಸರ್ವನು. ನಿರ್ಮಲನಾಗಿರುವುದರಿಂದ ಶಿವನು. ಸರ್ವವ್ಯಾಪಕನಾಗಿರುವುದರಿಂದ ವಿಭುವು. ಸರ್ವದುಃಖಗಳಿಂದ ಪಾರುಮಾಡಿಸುವವನಾದ್ದರಿಂದ ತಾರಕ ಎಂದು ಕರೆಯಲ್ಪಡು ತ್ತಾನೆ. ಇನ್ನು ಹೆಚ್ಚೇನು ಹೇಳುವುದಿದೆ? ಸರ್ವ ಜಗತ್ತೂ ಬ್ರಹ್ಮಮಯವೇ. ಅನೇಕ ಭೇದಗಳ ಭಿನ್ನ ರೂಪಗಳನ್ನು ಧರಿಸಿ ಪರಮೇಶ್ವರನು ಆಟವಾಡುತ್ತಾನೆ. ಹೀಗೆ ನಾನು ಪ್ರಾಕೃತ ಸೃಷ್ಟಿಯನ್ನು ಸಂಕ್ಷಿಪ್ತವಾಗಿ ಹೇಳಿದ್ದೇನೆ. ಇನ್ನು ಮುಂದೆ ಅಬುದ್ಧಿಪೂರ್ವಕವಾದ ಬ್ರಹ್ಮಸೃಷ್ಟಿಯನ್ನು ತಿಳಿಯಿರಿ.”
ಇತಿ ಶ್ರೀಕೂರ್ಮಪುರಾಣೇ ಚತುರ್ಥೋಽಧ್ಯಾಯಃ ।।
ಇದು ಶ್ರೀಕೂರ್ಮಪುರಾಣದಲ್ಲಿ ನಾಲ್ಕನೇ ಅಧ್ಯಾಯವು.
[1] (ಪಾಠಾಂತರ) ತ್ರೈಕಾಲ್ಯೇ.