ಛಾಂದೋಗ್ಯೋಪನಿಷತ್: ಷಷ್ಠೋಽಧ್ಯಾಯಃ ಪ್ರಥಮಃ ಖಂಡಃ ಆತ್ಮೈಕತ್ವಜ್ಞಾನ
ಶ್ವೇತಕೇತುರ್ಹಾರುಣೇಯ ಆಸ ತಗ್ಂ ಹ ಪಿತೋವಾಚ ಶ್ವೇತಕೇತೋ ವಸ ಬ್ರಹ್ಮಚರ್ಯಂ ನ ವೈ ಸೋಮ್ಯಾಸ್ಮತ್ಕುಲೀನೋಽನನೂಚ್ಯ ಬ್ರಹ್ಮಬಂಧುರಿವ ಭವತೀತಿ ।। 1 ।।
ಆರುಣಿಯ ಮಗ ಶ್ವೇತಕೇತು ಎನ್ನುವವನಿದ್ದನು. ಅವನ ತಂದೆಯು ಅವನಿಗೆ ಹೇಳಿದನು: “ಶ್ವೇತಕೇತೋ! ಮಗೂ! ಬ್ರಹ್ಮಚರ್ಯವನ್ನು ಜೀವಿಸು. ನಮ್ಮ ಕುಲದವನ್ಯಾರೂ ಅಧ್ಯಯನ ಮಾಡದೇ ಹೆಸರಿಗೆ ಮಾತ್ರ ಬ್ರಾಹ್ಮಣನಾಗಿ ಇರುವುದಿಲ್ಲ.”
ಶ್ವೇತಕೇತು ಎನ್ನುವುದು ಮಗನ ಹೆಸರು. ಆರುಣನ ಮೊಮ್ಮಗನು (ಆರುಣೇಯ). ತಂದೆ ಆರುಣಿಯು (ಆರುಣನ ಮಗ) ಮಗನು ಯೋಗ್ಯನು, ವಿದ್ಯೆಗೆ ತಕ್ಕವನು ಎಂದು ಎಣಿಸಿ, ಉಪನಯನದ ಕಾಲವು ಮೀರುತ್ತಿದೆ ಎಂದು ಕಂಡು, ಮಗನಿಗೆ ಹೇಳಿದನು: “ಶ್ವೇತಕೇತೋ! ನಮ್ಮ ಕುಲಕ್ಕೆ ಅನುರೂಪನಾಗಿರುವ ಗುರುವಿನ ಬಳಿ ಹೋಗಿ ಬ್ರಹ್ಮಚರ್ಯವನ್ನು ಮಾಡಿಕೊಂಡಿರು. ನಮ್ಮ ಕುಲದಲ್ಲಿ ಹುಟ್ಟಿದವನು ಅನುವಚನ ಅಂದರೆ ಅಧ್ಯಯನ ಮಾಡದೇ ಬ್ರಹ್ಮಬಂಧುವಿನಂತೆ ಇರುವುದು ಯುಕ್ತವಲ್ಲ. ಬ್ರಹ್ಮಬಂಧು ಎಂದರೆ ಬ್ರಾಹ್ಮಣರನ್ನು ತನ್ನ ಬಂಧುಗಳೆಂದು ಮಾತ್ರ ಹೇಳಿಕೊಂಡು ತಾನು ಬ್ರಾಹ್ಮಣನ ನಡೆ-ನುಡಿಗಳಿಲ್ಲದವನು. ಆ ತಂದೆಯು ಇಲ್ಲಿಂದ ದೇಶಾಂತರಕ್ಕೆ ಹೋಗುವವನಿದ್ದನೆಂದು ಕಲ್ಪಿಸಬೇಕಾಗುತ್ತದೆ. ಏಕೆಂದರೆ ತಾನು ಗುಣವಂತನಾಗಿದ್ದರೂ ಮಗನಿಗೆ ಉಪನಯನ ಮಾಡಿಸಲಿಲ್ಲ.
ಸ ಹ ದ್ವಾದಶವರ್ಷ ಉಪೇತ್ಯ ಚತುರ್ವಿಂಶತಿವರ್ಷಃ ಸರ್ವಾನ್ವೇದಾನಧೀತ್ಯ ಮಹಾಮನಾ ಅನೂಚಾನಮಾನೀ ಸ್ತಬ್ಧ ಏಯಾಯ ತಗ್ಂ ಹ ಪಿತೋವಾಚ ।। 2 ।।
ಶ್ವೇತಕೇತುವು ಹನ್ನೆರಡು ವರ್ಷದವನಾಗಿದ್ದಾಗ ಆಚಾರ್ಯನ ಬಳಿ ಹೋಗಿದ್ದು ಇಪ್ಪತ್ನಾಲ್ಕು ವರ್ಷವಾಗುವಾಗ ಸರ್ವವೇದಗಳನ್ನೂ ಅಧ್ಯಯನಮಾಡಿ ತಾನು ದೊಡ್ಡವನು, ದೊಡ್ಡ ವಿದ್ವಾಂಸನು ಎಂದು ತಿಳಿದು ಗರ್ವಿಷ್ಠನಾಗಿ ಮನೆಗೆ ಬಂದನು. ಆಗ ತಂದೆಯು ಅವನನ್ನು ಹೀಗೆ ಕೇಳಿದನು.
ಇಲ್ಲಿ ಮಹಾಮನಾ ಎಂದರೆ ಗಂಭೀರವಾದ ಮನಸ್ಸುಳ್ಳವನು. ಉಳಿದವರಿಗೆ ತಾನು ಸಮಾನಮಾತ್ರವಲ್ಲ ಎಂದು ತಿಳಿದುಕೊಂಡವನು. ಅನೂಚಾನಮಾನೀ ಎಂದರೆ ತಾನು ಅನೂಚಾನನು ಅಥವಾ ಅಧ್ಯಯನ ಸಮರ್ಥನು ಎಂದು ಅಭಿಮಾನಪಡುವವನು. ಸ್ತಬ್ಧ ಎಂದರೆ ತಲೆಬಾಗದ ಸ್ವಭಾವದವನು. ಹೀಗೆ ತನಗೆ ಅನುರೂಪವಲ್ಲದ ಶೀಲವುಳ್ಳ, ಸ್ತಬ್ಧನಾಗಿ ಅಭಿಮಾನಿಯಾಗಿರುವ ಮಗನನ್ನು ಕಂಡು ತಂದೆಯು ಸದ್ಧರ್ಮಕ್ಕೆ ಅವನ ಬುದ್ಧಿಯನ್ನು ಇಳಿಸಬೇಕೆಂದು ಮಗನನ್ನು ಪ್ರಶ್ನಿಸಿದನು.
ಶ್ವೇತಕೇತೋ ಯನ್ನು ಸೋಮ್ಯೇದಂ ಮಹಾಮನಾ ಅನೂಚಾನಮಾನೀ ಸ್ತಬ್ಧೋಽಸ್ಯುತ ತಮಾದೇಶಮಪ್ರಾಕ್ಷ್ಯೋ ಯೇನಾಶ್ರುತಗ್ಂ ಶ್ರುತಂ ಭವತ್ಯಮತಂ ಮತಮವಿಜ್ಞಾತಂ ವಿಜ್ಞಾತಮಿತಿ ಕಥಂ ನು ಭಗವಃ ಸ ಆದೇಶೋ ಭವತೀತಿ ।। 3 ।।
“ಶ್ವೇತಕೇತೋ! ಮಗೂ! ಹೀಗೆ ಮಹಾಮನನೂ, ಅನೂಚಾನಮಾನಿಯೂ, ಸ್ತಬ್ಧನೂ ಆಗಿರುವೆಯಲ್ಲ! ಯಾವುದರಿಂದ ಅಶ್ರುತವಾದದ್ದು ಶ್ರುತವಾಗುತ್ತದೆಯೋ, ಅಮತವಾದದ್ದು ಮತವಾಗುತ್ತದೆಯೋ ಮತ್ತು ಅವಿಜ್ಞಾತವಾದದ್ದು ಜ್ಞಾತವಾಗುತ್ತದೆಯೋ ಆ ಆದೇಶವನ್ನು ಕೇಳಿ ತಿಳಿದುಕೊಂಡಿದ್ದೀಯಾ?” ಅದಕ್ಕೆ ಮಗನು ಕೇಳುತ್ತಾನೆ: “ಭಗವನ್! ಆ ಆದೇಶವು ಹೇಗಿರುತ್ತದೆ?”
ಹೀಗೆ ಮಹಾಮನನೂ, ಅನೂಚಾನಮಾನಿಯೂ, ಸ್ತಬ್ಧನೂ ಆಗಿರುವೆಯಲ್ಲ, ಉಪಾಧ್ಯಾಯರಿಂದ ಯಾವ ಹೆಚ್ಚುಗಾರಿಕೆಯು ನಿನಗೆ ದೊರಕಿದೆ? ಇಲ್ಲಿ ಆದೇಶ ಅಂದರೆ ಕೇವಲ ಶಾಸ್ತ್ರಾಚಾರ್ಯರ ಉಪದೇಶದಿಂದಲೇ ತಿಳಿಯಬರುವಂಥದ್ದು ಎಂದು ಅಭಿಪ್ರಾಯ. ಅಥವಾ ಯಾವುದರಿಂದ ಬ್ರಹ್ಮವನ್ನು ತಿಳಿಸಬಹುದೋ ಆ ಉಪದೇಶವೇ ಆದೇಶವು. ಇದನ್ನು ಆಚಾರ್ಯರಿಂದ ಕೇಳಿ ತಿಳಿದುಕೊಂಡಿರುವೆಯೇನು? ಈ ಉಪದೇಶಕ್ಕೆ ವಿಶೇಷಣವನ್ನು ಕೊಡುತ್ತಾನೆ. ಯಾವುದನ್ನು ಕೇಳಿ ಅಶ್ರುತವಾದದ್ದು ಅಂದರೆ ಕೇಳದೇ ಇದ್ದುದನ್ನೂ ಶ್ರುತವಾಗುತ್ತದೆಯೋ ಅಂದರೆ ಕೇಳಿದಂದಾಗುತ್ತದೆಯೋ ಅದು. ಅಮತವಾದದ್ದು ಅಂದರೆ ತರ್ಕಮಾಡದೇ ಇದ್ದದ್ದು ಮತವಾಗುತ್ತದೆಯೋ – ತರ್ಕಿಸಿದಂತಾಗುತ್ತದೆಯೋ ಅದು. ಅವಿಜ್ಞಾತವಾದದ್ದು ಅಂದರೆ ಅನಿಶ್ಚಿತವಾದದ್ದು ಅಥವಾ ತಿಳಿಯದೇ ಇದ್ದದ್ದು ಜ್ಞಾತವಾಗುತ್ತದೆಯೋ ಅಂದರೆ ನಿಶ್ಚಿತವಾಗುತ್ತದೆಯೋ ಅಥವಾ ತಿಳಿಯುತ್ತದೆಯೋ ಅದು. ಸರ್ವವೇದಗಳನ್ನೂ ಅಧ್ಯಯನ ಮಾಡಿ ತಿಳಿಯತಕ್ಕ ಬೇರೆ ಎಲ್ಲವನ್ನೂ ತಿಳಿದುಕೊಂಡರೂ ಆತ್ಮತತ್ತ್ವವನ್ನು ತಿಳಿದುಕೊಳ್ಳದೇ ಇರುವವರೆಗೆ ಅಕೃತಾರ್ಥನೇ -ಅವಿದ್ಯಾವಂತನೇ – ಆಗಿರುತ್ತಾನೆ ಎಂದು ಈ ಪ್ರಶ್ನೆಯ ಅಭಿಪ್ರಾಯ. ಈ ಅದ್ಭುತವನ್ನು ಕೇಳಿ – ಒಂದನ್ನು ಅರಿತರೆ ಮತ್ತೊಂದನ್ನು ಅರಿತುಕೊಂಡಂತೆ ಆಗುವುದು ಅದ್ಭುತವೇ – ಇದು ಹೇಗಾದೀತು? ಎಂದುಕೊಂಡು ಶ್ವೇತಕೇತುವು ತಂದೆಗೆ “ಭಗವನ್! ಆ ಆದೇಶವು ಹೇಗೆ ಯಾವ ಪ್ರಕಾರದಿಂದ ಇರುತ್ತದೆ?” ಎಂದು ಕೇಳುತ್ತಾನೆ.
ಯಥಾ ಸೋಮ್ಯೈಕೇನ ಮೃತ್ಪಿಂಡೇನ ಸರ್ವಂ ಮೃನ್ಮಯಂ ವಿಜ್ಞಾತಗ್ಂ ಸ್ಯಾದ್ವಾಚಾರಂಭಣಂ ವಿಕಾರೋ ನಾಮಧೇಯಂ ಮೃತ್ತಿಕೇತ್ಯೇವ ಸತ್ಯಮ್ ।। 4 ।। ಯಥಾ ಸೋಮ್ಯೈಕೇನ ಲೋಹಮಣಿನಾ ಸರ್ವಂ ಲೋಹಮಯಂ ವಿಜ್ಞಾತಗ್ಂ ಸ್ಯಾದ್ವಾಚಾರಂಭಣಂ ವಿಕಾರೋ ನಾಮಧೇಯಂ ಲೋಹಮಿತ್ಯೇವ ಸತ್ಯಮ್ ।। 5 ।। ಯಥಾ ಸೋಮ್ಯೈಕೇನ ನಖನಿಕೃಂತನೇನ ಸರ್ವಂ ಕಾರ್ಷ್ಣಾಯಸಂ ವಿಜ್ಞಾತಗ್ಂ ಸ್ಯಾದ್ವಾಚಾರಂಭಣಂ ವಿಕಾರೋ ನಾಮಧೇಯಂ ಕೃಷ್ಣಾಯಸಮಿತ್ಯೇವ ಸತ್ಯಮೇವಗ್ಂ ಸೋಮ್ಯ ಸ ಆದೇಶೋ ಭವತೀತಿ ।। 6 ।।
“ಮಗೂ! ಒಂದು ಮಣ್ಣಿನ ಹೆಂಟೆಯನ್ನು ಅರಿತುಕೊಂಡಿದ್ದರಿಂದ ಮಣ್ಣಿನಿಂದ ಆದ ಎಲ್ಲವನ್ನೂ ಅರಿತಂತಾಗುವುದೋ ಮತ್ತು ನಂತರ ಮಣ್ಣಿನಿಂದ ಆದ ಎಲ್ಲ ಪದಾರ್ಥಗಳೂ ಕೇವಲ ಮಾತಿನ ಶಬ್ದಗಳು, ಮಣ್ಣಿನ ವಿಕಾರಗಳು, ಕೇವಲ ಹೆಸರುಗಳು ಮಾತ್ರ – ಮಣ್ಣು ಒಂದೇ ಸತ್ಯ ಎಂದು ಹೇಗೆ ತಿಳಿಯುತ್ತದೆಯೋ ಹಾಗೆ ಆ ಉಪದೇಶವನ್ನು ಪಡೆದುಕೊಂಡರೆ ಎಲ್ಲವನ್ನೂ ತಿಳಿದುಕೊಂಡಂತಾಗುತ್ತದೆ. ಮಗೂ! ಒಂದೇ ಲೋಹಮಣಿಯ ಜ್ಞಾನದಿಂದ ಲೋಹದಿಂದಾದ ಎಲ್ಲ ಪದಾರ್ಥಗಳ ಜ್ಞಾನವುಂಟಾಗುತ್ತದೆಯೋ ಮತ್ತು ನಂತರ ಲೋಹದಿಂದ ಆದ ಎಲ್ಲ ಪದಾರ್ಥಗಳೂ ಕೇವಲ ಮಾತಿನ ಶಬ್ದಗಳು, ಲೋಹದ ವಿಕಾರಗಳು, ಕೇವಲ ಹೆಸರುಗಳು ಮಾತ್ರ – ಲೋಹವೊಂದೇ ಸತ್ಯ ಎಂದು ಹೇಗೆ ತಿಳಿಯುತ್ತದೆಯೋ ಹಾಗೆ ಆ ಆದೇಶವನ್ನು ತಿಳಿದುಕೊಂಡರೆ ಎಲ್ಲವನ್ನೂ ತಿಳಿದುಕೊಂಡಂತಾಗುತ್ತದೆ. ಮಗೂ! ಹೇಗೆ ಒಂದೇ ಉಗುರುಕತ್ತರಿಯ ಜ್ಞಾನವಾಯಿತೆಂದರೆ ಉಕ್ಕಿನ ಎಲ್ಲ ಪದಾರ್ಥಗಳ ಜ್ಞಾನವಾಗುತ್ತದೆಯೋ, ಮತ್ತು ನಂತರ ಉಕ್ಕಿನ ಎಲ್ಲ ಪದಾರ್ಥಗಳು ಬರಿಯ ಬಾಯಿಮಾತುಗಳು, ಉಕ್ಕನ ವಿಕಾರಗಳು, ಬೇರೆ ಬೇರೆ ಹೆಸರುಗಳು ಮಾತ್ರ – ಉಕ್ಕಿನ ಎಲ್ಲ ಪದಾರ್ಥಗಳಲ್ಲಿ ಉಕ್ಕು ಒಂದೇ ಸತ್ಯ ಎಂದು ತಿಳಿಯುತ್ತದೆಯೋ ಅದೇ ನಾನು ನಿರ್ದೇಶಿಸುವ ಉಪದೇಶವು.”
ಲೋಕದಲ್ಲಿ ಹೇಗೆ ಗಡಿಗೆಯೇ ಮೊದಲಾದವುಗಳಿಗೆ ಕಾರಣವಾಗಿರುವ ಮಣ್ಣಿನ ಮುದ್ದೆಯೊಂದನ್ನೇ ತಿಳಿದುಕೊಂಡರೆ ಮಣ್ಣಿನಿಂದಾದ, ಮಣ್ಣಿನ ವಿಕಾರದಿಂದುಂಟಾದ ಎಲ್ಲವನ್ನೂ ಅರಿತುಕೊಂಡಂತಾಗುವುದೋ ಅಂತಹ ಉಪದೇಶ. ಆದರೆ, ಮಣ್ಣಿನ ಮುದ್ದೆಯೆಂಬ ಕಾರಣವನ್ನು ಅರಿತುಕೊಂಡರೆ ಅದರ ಕಾರ್ಯಗಳೆಲ್ಲವನ್ನೂ ಹೇಗೆ ಅರಿತುಕೊಂಡಂತಾಗುತ್ತದೆ? ಇದು ಸಾಧ್ಯ. ಏಕೆಂದರೆ ಕಾರ್ಯವು ಕಾರಣಕ್ಕಿಂತ ಬೇರೆಯಲ್ಲ. ಕಾರ್ಯವು ಕಾರಣಕ್ಕಿಂತ ಬೇರೆಯೇ ಆಗಿದ್ದಿದ್ದರೆ ಒಂದನ್ನು ಅರಿತರೆ ಮತ್ತೊಂದನ್ನು ಅರಿತಂತಾಗುವುದಿಲ್ಲ ಎನ್ನುವುದು ನಿಜವಾಗುತ್ತಿತ್ತು. ಆದರೆ ಹಾಗೆ ಕಾರಣಕ್ಕಿಂತ ಕಾರ್ಯವು ಬೇರೆಯಲ್ಲ. ಆದರೆ ಲೋಕದಲ್ಲಿ ಇದು ಕಾರಣವು, ಇದು ಅದರ ವಿಕಾರವು ಎಂದಿದೆಯಲ್ಲ! ಅದು ಹೇಗೆ ಸರಿಯಾಗುತ್ತದೆ?
ವಿಕಾರ ಎನ್ನುವುದು ಒಂದು ನಾಮಧೇಯವು ಮಾತ್ರ. ವಾಕ್ಕಿಗೆ ಆಲಂಬಲವಾಗಿರುವುದು. ವಾಚಾರಂಭಣವು. ವಿಕಾರವೆಂಬ ವಸ್ತುವು ಕಾರಣಕ್ಕಿಂತ ಬೇರೆಯಾದ ಪರಮಾರ್ಥವಾಗಿಲ್ಲ. ಗಡಿಗೆಯಲ್ಲಿ ಮೃತ್ತಿಕ ಅಥವಾ ಮಣ್ಣೇ ಸತ್ಯವಾದ ವಸ್ತುವಾಗಿದೆ. ಅದೇರೀತಿ ಚಿನ್ನದ ಗಟ್ಟಿಯೊಂದರಿಂದಲೇ ಅದರಿಂದಾದ ಕಡಗ, ಕಿರೀಟ, ತೋಳಬಂದಿ ಮೊದಲಾದ ವಿಕಾರಜಾತವೆಲ್ಲವೂ ಅರಿಯಲ್ಪಡುತ್ತವೆಯೋ ಅಂತಹ ಆದೇಶ. ಹಾಗೆಯೇ ಒಂದು ಉಗುರುಗತ್ತಿಯನ್ನು ತಿಳಿದುಕೊಂಡರೆ ಕಬ್ಬಿಣದ ಎಲ್ಲ ವಸ್ತುಗಳನ್ನೂ ತಿಳಿದುಕೊಡುವಂತಹ ಆದೇಶ.
ಹೀಗೆ ಆ ಉಪದೇಶದ ಕುರಿತು ಹೇಳಲು ಮಗ ಶ್ವೇತಕೇತುವು ಹೇಳುತ್ತಾನೆ.
ನ ವೈ ನೂನಂ ಭಗವಂತಸ್ತ ಏತದವೇದಿಷುರ್ಯದ್ಧ್ಯೇತದವೇದಿಷ್ಯನ್ಕಥಂ ಮೇ ನಾವಕ್ಷ್ಯನ್ನಿತಿ ಭಗವಾಗ್ಂಸ್ತ್ವೇವ ಮೇ ತದ್ಬ್ರವೀತ್ವಿತಿ ತಥಾ ಸೋಮ್ಯೇತಿ ಹೋವಾಚ ।। 7 ।।
ಆಗ ಮಗನು ಹೇಳುತ್ತಾನೆ: “ಈ ಉಪದೇಶವು ನನ್ನ ಗುರುಗಳಿಗೆ ಗೊತ್ತಿರಲಿಲ್ಲವೇನೋ! ಗೊತ್ತಿದ್ದರೆ ಅವರು ಅದನ್ನು ನನಗೆ ಹೇಳದೇ ಇರುತ್ತಿದ್ದರೇ? ಭಗವನ್! ನೀನೇ ಅದನ್ನು ನನಗೆ ಹೇಳಬೇಕು.” ಅದಕ್ಕೆ ತಂದೆಯು “ಸೋಮ್ಯ! ಹಾಗೆಯೇ ಆಗಲಿ” ಎಂದನು.
ತನ್ನ ಗುರುವನ್ನು ಕೀಳಾಗಿ ತೋರಿಸಬಾರದಾದರೂ, ತಂದೆಯು ತನ್ನನ್ನು ಪುನಃ ಗುರುಕುಲಕ್ಕೆ ಕಳುಹಿಸಿಬಿಡುತ್ತಾನೋ ಎಂಬ ಭಯದಿಂದ ಶ್ವೇತಕೇತುವು ಇಲ್ಲಿ “ಗುರುವಿಗೆ ಈ ವಿಷಯವು ಬಹುಷಃ ತಿಳಿದಿಲ್ಲವೇನೋ, ನೀನೇ ಅದನ್ನು ನನಗೆ ಉಪದೇಶಿಸು” ಎಂದು ಹೇಳಿದಂತಿದೆ.
ಇತಿ ಪ್ರಥಮಃ ಖಂಡಃ ।।