ಛಾಂದೋಗ್ಯೋಪನಿಷತ್: ಷಷ್ಠೋಽಧ್ಯಾಯಃ ಸಪ್ತಮಃ ಖಂಡಃ

ಛಾಂದೋಗ್ಯೋಪನಿಷತ್: ಷಷ್ಠೋಽಧ್ಯಾಯಃ ಸಪ್ತಮಃ ಖಂಡಃ

 

ಷೋಡಶಕಲಃ ಸೋಮ್ಯ ಪುರುಷಃ ಪಂಚದಶಾಹಾನಿ ಮಾಶೀಃ ಕಾಮಮಪಃ ಪಿಬಾಽಽಪೋಮಯಃ ಪ್ರಾಣೋ ನ ಪಿಬತೋ ವಿಚ್ಛೇತ್ಸ್ಯತ ಇತಿ ।। 1 ।। ಸ ಹ ಪಂಚದಶಾಹಾನಿ ನಾಽಽಶಾಥ ಹೈನಮುಪಸಸಾದ ಕಿಂ ಬ್ರವೀಮಿ ಭೋ ಇತ್ಯೃಚಃ ಸೋಮ್ಯ ಯಜೂಗ್ಂಷಿ ಸಾಮಾನೀತಿ ಸ ಹೋವಾಚ ನ ವೈ ಮಾ ಪ್ರತಿಭಾಂತಿ ಭೋ ಇತಿ ।। 2 ।। ಗ್ಂ ಹೋವಾಚ ಯಥಾ ಸೋಮ್ಯ ಮಹತೋಽಭ್ಯಾಹಿತಸ್ಯೈಕೋಽಂಗಾರಃ ಖದ್ಯೋತಮಾತ್ರಃ ಪರಿಶಿಷ್ಟಃ ಸ್ಯಾತ್ತೇನ ತತೋಽಪಿ ನ ಬಹು ದಹೇದೇವಗ್ಂ ಸೋಮ್ಯ ತೇ ಷೋಡಶಾನಾಂ ಕಲಾನಾಮೇಕಾ ಕಲಾತಿಶಿಷ್ಟಾ ಸ್ಯಾತ್ತಯೈತರ್ಹಿ ವೇದಾನ್ನಾನುಭವಸ್ಯಶಾನಾಥ ಮೇ ವಿಜ್ಞಾಸ್ಯಸೀತಿ ।। 3 ।। ಹಾಽಽಶಾಥ ಹೈನಮುಪಸಸಾದ ತಗ್ಂ ಹ ಯತ್ಕಿಂಚ ಪಪ್ರಚ್ಛ ಸರ್ವಗ್ಂ ಹ ಪ್ರತಿಪೇದೇ ।। 4 ।। ಗ್ಂ ಹೋವಾಚ ಯಥಾ ಸೋಮ್ಯ ಮಹತೋಽಭ್ಯಾಹಿತಸ್ಯೈಕಮಂಗಾರಂ ಖದ್ಯೋತಮಾತ್ರಂ ಪರಿಶಿಷ್ಟಂ ತಂ ತೃಣೈರುಪಸಮಾಧಾಯ ಪ್ರಾಜ್ವಲಯೇತ್ತೇನ ತತೋಽಪಿ ಬಹು ದಹೇತ್ ।। 5 ।।  ಏವಗ್ಂ ಸೋಮ್ಯ ತೇ ಷೋಡಶಾನಾಂ ಕಲಾನಾಮೇಕಾ ಕಲಾತಿಶಿಷ್ಟಾಭೂತ್ಸಾನ್ನೇನೋಪಸಮಾಹಿತಾ ಪ್ರಾಜ್ವಾಲೀ ತಯೈತರ್ಹಿ ವೇದಾನನುಭವಸ್ಯನ್ನಮಯಗ್ಂ ಹಿ ಸೋಮ್ಯ ಮನ ಆಪೋಮಯಃ ಪ್ರಾಣಸ್ತೇಜೋಮಯೀ ವಾಗಿತಿ ತದ್ಧಾಸ್ಯ ವಿಜಜ್ಞಾವಿತಿ ವಿಜಜ್ಞಾವಿತಿ ।। 6 ।।

“ಸೋಮ್ಯ! ಪುರುಷನು ಷೋಡಶಕಲನು – 16 ಕಲೆಗಳುಳ್ಳವನು. ಹದಿನೈದು ದಿನಗಳವರೆಗೆ ಏನೂ ತಿನ್ನದಿರು. ನೀರು ಮಾತ್ರ ಬೇಕಾದಷ್ಟು ಕುಡಿ. ಪ್ರಾಣನು ಆಪೋಮಯನು. ನೀರು ಕುಡಿಯದೇ ಹೋದರೆ ಪ್ರಾಣವು ನಷ್ಟವಾಗುತ್ತದೆ. ಮಗನು ಹದಿನೈದು ದಿನಗಳ ವರೆಗೆ ಉಪವಾಸ ಮಾಡಿದನು. ನಂತರ ತಂದೆಯ ಬಳಿ ಬಂದು “ಭೋ! ಏನು ಹೇಳಲಿ?” ಎಂದು ಕೇಳಿದನು. ತಂದೆಯು ಅವನಿಗೆ “ಋಕ್, ಯಜುಸ್ ಮತ್ತು ಸಾಮಗಳನ್ನು ಹೇಳು” ಎಂದನು. ಅದಕ್ಕೆ ಮಗನು “ಸ್ವಾಮೀ! ಅವು ನನಗೆ ನೆನಪಾಗುತ್ತಿಲ್ಲ” ಎಂದು ಹೇಳಿದನು. ನಂತರ ತಂದೆಯು “ಮಗನೇ! ಪ್ರಜ್ವಲಿತವಾದ ಅಗ್ನಿಯು ಆರಿ ಅದರ ಒಂದೇ ಕಿಡಿಯು ಉಳಿಯಿತೆಂದರೆ ಅದು ಹೇಗೆ ವಿಶೇಷವಾಗಿ ಸುಡಲಾರದೋ ಹಾಗೆ ನಿನ್ನ 16 ಕಲೆಗಳಲ್ಲಿ ಒಂದೇ ಅವಶಿಷ್ಟವು ಉಳಿದಿರುವುದರಿಂದ ನಿನಗೆ ವೇದಗಳು ನೆನಪಾಗುತ್ತಿಲ್ಲ. ಇನ್ನು ನಾನು ಹೇಳಿದಂತೆ ಊಟಮಾಡು. ಆಗ ನಿನಗೆ ಪುನಃ ಎಲ್ಲಾ ನೆನಪಾಗುತ್ತವೆ.” ಮಗನು ಊಟಮಾಡಿದನು ಮತ್ತು ತಂದೆಯ ಬಳಿ ಹೋದನು. ಅವನು ಕೇಳಿದುದೆಲ್ಲವನ್ನೂ ಹೇಳಲು ಸಮರ್ಥನಾದನು. ಆಗ ತಂದೆಯು ಮಗನಿಗೆ ಹೇಳಿದನು: “ಸೋಮ್ಯ! ದೊಡ್ಡ ಬೆಂಕಿಯು ಆರಿ ಒಂದೇ ಕಿಡಿಯು ಉಳಿದರೆ ಹುಲ್ಲುಹಾಕಿ ಪುನಃ ಅದನ್ನು ಹೊತ್ತಿಸುವಂತೆ ಮತ್ತು ನಂತರ ಅದು ಬಹಳ ಸುಡಲು ಸಮರ್ಥವಾಗುವಂತೆ ನಿನ್ನ 16 ಕಲೆಗಳಲ್ಲಿ ಅವಶಿಷ್ಟವಾದ ಒಂದೇ ಕಲೆಯನ್ನು ನೀನು ಅನ್ನದಿಂದ ಪುನಃ ಹೊತ್ತಿಸಿದ್ದೀಯೆ. ಆದ್ದರಿಂದ ವೇದಗಳನ್ನು ಹೇಳಬಲ್ಲೆ. ಸೋಮ್ಯ! ಮನಸ್ಸು ಅನ್ನಮಯವು. ಪ್ರಾಣವು ಆಪೋಮಯವು. ವಾಣಿಯು ತೇಜೋಮಯವು.” ಹೀಗೆ ಹೇಳಲು ಶ್ವೇತಕೇತುವು “ತಿಳಿಯಿತು. ಅದೆಲ್ಲ ತಿಳಿಯಿತು” ಎಂದನು.

ಈ ಖಂಡದಲ್ಲಿ ಶ್ವೇತಕೇತುವಿನ ತಂದೆಯು ಉಂಡ ಅನ್ನದ ಸೂಕ್ಷ್ಮತಮ ಧಾತುವು ಮನಸ್ಸಿನಲ್ಲಿ ಶಕ್ತಿಯನ್ನುಂಟುಮಾಡುತ್ತದೆ ಮತ್ತು ಆ ಅನ್ನದಿಂದ ಬೆಳೆಯುವ ಮನಸ್ಸಿನ ಶಕ್ತಿಯನ್ನು ಹದಿನಾರುಪಾಲಾಗಿ ವಿಭಾಗಿಸಿ ಪುರುಷನ ಕಲೆಗಳನ್ನು ತೋರಿಸುತ್ತಾನೆ. ಆ ಮನಸ್ಸಿನಲ್ಲಿರುವ ಅನ್ನದಿಂದ ಬೆಳೆದ ಶಕ್ತಿಯನ್ನು ಹದಿನಾರುಭಾಗವಾಗಿ ಮಾಡಿ, ಅದರಿಂದ, ಕೂಡಿದ ಜೀವವಿಶಿಷ್ಟವಾದ ಕಾರ್ಯಕರಣ ಸಂಘಾತರೂಪನಾದ ಪುರುಷನನ್ನು ಇಲ್ಲಿ ಷೋಡಶಕಲನೆಂದಿರುತ್ತದೆ. ಈ ಶಕ್ತಿಯಿದ್ದರೆ ದ್ರಷ್ಟ, ಶ್ರೋತೃ, ಮಂತೃ, ಬೋದ್ಧ, ಕರ್ತೃ, ವಿಜ್ಞಾತೃ – ಹೀಗೆ ಸರ್ವಕ್ರಿಯೆಗಳನ್ನೂ ಮಾಡಲು ಪುರುಷನು ಸಮರ್ಥನಾಗಿರುತ್ತಾನೆ. ಅದು ನಾಶವಾದರೆ ಸಾಮರ್ಥ್ಯವೂ ನಾಶವಾಗಿಬಿಡುತ್ತದೆ. ಎಲ್ಲಾ ಕಾರ್ಯಕಾರಣದ ಸಾಮರ್ಥ್ಯವೂ ಮನಸ್ಸಿನಿಂದದ್ಲೇ ಆದದ್ದು. ಮಾನಸಬಲದಿಂದ ಕೂಡಿದವರಲ್ಲವೇ ಲೋಕದಲ್ಲಿ ಬಲವುಳ್ಳವರೂ ಆಗಿರುತ್ತಾರೆ? ಕೆಲವರು ಧ್ಯಾನಾಹಾರವುಳ್ಳವರೂ ಆಗಿರುತ್ತಾರೆ. ಏಕೆಂದರೆ ಅನ್ನವು ಸರ್ವಾತ್ಮಕವಾಗಿರುತ್ತದೆ. ಆದ್ದರಿಂದ ಮಾನಸವೀರ್ಯವು ಅನ್ನದಿಂದಲೇ ಆದದ್ದು.

ಹದಿನಾರು ಕಲೆಗಳು ಈ ಪುರುಷನಿಗಿರುವುದರಿಂದ ಈ ಪುರುಷನು ಷೋಡಶಕಲನು. ಇದನ್ನು ಪ್ರತ್ಯಕ್ಷ ತೋರಿಸಿಕೊಡಬೇಕೆಂದು ಆರುಣಿಯು ಶ್ವೇತಕೇತುವಿಗೆ ಹದಿನೈದು ದಿನಗಳವರೆಗೆ ಏನನ್ನೂ ತಿನ್ನದೇ ಇರಬೇಕೆಂದೂ, ಬೇಕಾದಷ್ಟು ನೀರನ್ನು ಕುಡಿಯಬಹುದೆಂದೂ ಹೇಳುತ್ತಾನೆ. ನೀರುಕುಡಿಯುವುದಕ್ಕೆ ಹೇಳಿದ್ದುದೇಕೆಂದರೆ ನೀರನ್ನು ಕುಡಿಯದೇ ಇದ್ದರೇ ಪ್ರಾಣಕ್ಕೇ ಅಪಾಯವಾಗುತ್ತದೆ. ತಂದೆಯ ಮಾತಿನಂತೆ ಶ್ವೇತಕೇತುವು ಹದಿನೈದು ದಿನಗಳವರೆಗೆ ಏನನ್ನೂ ತಿನ್ನಲಿಲ್ಲ. ಹದಿನೈದು ದಿನಗಳ ನಂತರ ತಂದೆಯ ಬಳಿಬಂದು “ಏನು ಹೇಳಲಿ?” ಎಂದು ಕೇಳಿದಾಗ ಆರುಣಿಯು ಮಗನಿಗೆ “ವೇದಗಳನ್ನು ಹೇಳು” ಎನ್ನುತ್ತಾನೆ. ಆಗ ಶ್ವೇತಕೇತುವು “ನನಗೆ ವೇದಗಳು ತೋಚುತ್ತಲೇ ಇಲ್ಲ” ಎನ್ನುತ್ತಾನೆ. ಹಸಿವಿನ ಸಂಕಟದಿಂದ ಹೇಳಲಿಕ್ಕೂ ತೋಚದೇ ಇದ್ದುದಕ್ಕೆ ಕಾರಣವನ್ನು ಕೊಡುತ್ತಾ ಆರುಣಿಯು – “ದೊಡ್ಡ ಬೆಂಕಿಯಲ್ಲಿರುವ ಉರಿಯುವ ಕೆಂಡಗಳಲ್ಲಿ ಒಂದು ಚಿಕ್ಕ ಕಿಡಿ ಮಾತ್ರ ಉಳಿದರೆ ಅದರಿಂದ ಹೆಚ್ಚು ದಹನವಾಗಲಾರದು. ಹಾಗೆಯೇ ನಿನ್ನಲ್ಲಿ ಇರುವ ಹದಿನಾರು ಕಲಾ ಅಥವಾ ಶಕ್ತಿಗಳು ಅಥವಾ ಜೀವನಾಂಗಗಳಲ್ಲಿ ಒಂದು ಕಲಾ ಮಾತ್ರ ಉಳಿದಿದೆಯಾದ್ದರಿಂದ ವೇದಗಳು ನಿನಗೆ ಹೊಳೆಯುತ್ತಿಲ್ಲ.

ಇತಿ  ಸಪ್ತಮಃ ಖಂಡಃ ।।

Leave a Reply

Your email address will not be published. Required fields are marked *