ಛಾಂದೋಗ್ಯೋಪನಿಷತ್: ಷಷ್ಠೋಽಧ್ಯಾಯಃ ಷಷ್ಠಃ ಖಂಡಃ
ದಧ್ನಃ ಸೋಮ್ಯ ಮಥ್ಯಮಾನಸ್ಯ ಯೋಽಣಿಮಾ ಸ ಊರ್ಧ್ವಃ ಸಮುದೀಷತಿ ತತ್ಸರ್ಪಿರ್ಭವತಿ ।। 1 ।। ಏವಮೇವ ಖಲು ಸೋಮ್ಯಾಽನ್ನಸ್ಯಾಶ್ಯಮಾನಸ್ಯ ಯೋಽಣಿಮಾ ಸ ಊರ್ಧ್ವಃ ಸಮುದೀಷತಿ ತನ್ಮನೋ ಭವತಿ ।। 2 ।। ಅಪಾಗ್ಂ ಸೋಮ್ಯ ಪೀಯಮಾನಾನಾಂ ಯೋಽಣಿಮಾ ಸ ಉರ್ಧ್ವಃ ಸಮುದೀಷತಿ ಸಾ ಪ್ರಾಣೋ ಭವತಿ ।। 3 ।। ತೇಜಸಃ ಸೋಮ್ಯಾಶ್ಯಮಾನಸ್ಯ ಯೋಽಣಿಮಾ ಸ ಉರ್ಧ್ವಃ ಸಮುದೀಷತಿ ಸಾ ವಾಗ್ಭವತಿ ।। 4 ।। ಅನ್ನಮಯಗ್ಂ ಹಿ ಸೋಮ್ಯ ಮನ ಆಪೋಮಯಃ ಪ್ರಾಣಸ್ತೇಜೋಮಯೀ ವಾಗಿತಿ ಭೂಯ ಏವ ಮಾ ಭಗವಾನ್ವಿಜ್ಞಾಪಯತ್ವಿತಿ ತಥಾ ಸೋಮ್ಯೇತಿ ಹೋವಾಚ ।। 5 ।।
“ಸೋಮ್ಯ! ಕಡೆದ ಮೊಸರಿನ ಸೂಕ್ಷ್ಮ ಅಂಶವು ಕೆನೆಯಂತೆ ಮೇಲೆ ಕೂಡಿ ಬರುತ್ತದೆ. ಅದು ಬೆಣ್ಣೆಯಾಗುತ್ತದೆ. ಅದೇ ರೀತಿ ತಿಂದ ಅನ್ನದ ಅತ್ಯಂತ ಸೂಕ್ಷ್ಮಭಾಗವು ಮೇಲೆ ಕೂಡಿ ಬರುತ್ತದೆ. ಅದು ಮನಸ್ಸಾಗುತ್ತದೆ. ಕುಡಿದ ನೀರಿನ ಅತ್ಯಂತ ಸೂಕ್ಷ್ಮಭಾಗವು ಮೇಲೆ ಕೂಡಿ ಬರುತ್ತದೆ. ಅದು ಪ್ರಾಣವಾಗುತ್ತದೆ. ತಿಂದ ತೇಜದ (ಎಣ್ಣೆಯ) ಅತ್ಯಂತ ಸೂಕ್ಷ್ಮಭಾಗವು ಮೇಲೆ ಕೂಡಿ ಬರುತ್ತದೆ. ಅದು ವಾಣಿಯಾಗುತ್ತದೆ.
ಅಣಿಮೆಯಿದೆಯಲ್ಲ ಅದು ಮೇಲಕ್ಕೆ ಏಳುತ್ತದೆ. ಅದು ಬೆಣ್ಣೆಯಾಗುತ್ತದೆ. ಹೀಗೆಯೇ ಉಂಡ ಅನ್ನದ ಅಣಿಮೆಯು ಮೇಲಕ್ಕೆ ಕೂಡಿಕೊಂಡು ಹೋಗಿ ಮನಸ್ಸಾಗುತ್ತದೆ. ಕುಡಿದ ನೀರಿನ ಅಣಿಮೆಯು ಮೇಲಕ್ಕೆದ್ದು ಪ್ರಾಣವಾಗುತ್ತದೆ. ಉಂಡ ತೇಜಸ್ಸಿನ ಅಣಿಮೆಯು ಮೇಲಕ್ಕೆದ್ದು ವಾಕ್ಕಾಗುತ್ತದೆ. ಸೋಮ್ಯ! ಮನಸ್ಸು ಅನ್ನಮಯವೇ. ಪ್ರಾಣವು ಆಮ್ಮಯವೇ. ವಾಕ್ಕು ತೇಜೋಮಯವೇ.” “ಭಗವನ್! ನನಗೆ ಇನ್ನೂ ತಿಳಿಸಬೇಕು” ಎನ್ನಲು “ಸೋಮ್ಯ! ಹಾಗೆಯೇ ಆಗಲಿ!” ಎಂದನು.
ಕಡೆದ ಮೊಸರಿನ ಅಣುಭಾವವು ಅದು ಬೆಣ್ಣೆಯ ರೂಪದಲ್ಲಿ ಮುದ್ದೆಯಾಗಿ ಕೂಡಿಕೊಂಡು ಹೋಗಿ ಬೆಣ್ಣೆಯಾಗುತ್ತದೆ. ಹಾಗೆಯೇ ತಿಂದ ಆಹಾರದ ಅಣುಭಾವವು ಹೊಟ್ಟೆಯಲ್ಲಿರುವ ವಾಯುಸಹಿತವಾದ ಅಗ್ನಿಯಿಂದ ಕಡೆಗೋಲಿನಿಂದ ಹೇಗೋ ಹಾಗೆ ಕಡೆಯಲ್ಪಟ್ಟಾಗ ಅದರ ಸೂಕ್ಷ್ಮಸತ್ತ್ವವು ಮೇಲಕ್ಕೆದ್ದು ಮನಸ್ಸಾಗುತ್ತದೆ. ಮನಸ್ಸಿನ ಅವಯವಗಳೊಡನೆ ಸೇರಿಕೊಂಡು ಮನಸ್ಸನ್ನು ಬೆಳೆಸುತ್ತದೆ. ಹೀಗೆಯೇ ಕುಡಿದ ನೀರಿನ ಅಣಿಮೆ ಮತ್ತ ಉಂಡ ಜಿಡ್ಡಿನ ಸೂಕ್ಷ್ಮಭಾಗಗಳು ಮೇಲಕ್ಕೆ ಹೋಗಿ ಪ್ರಾಣ ಮತ್ತು ವಾಕ್ಕುಗಳಾಗುತ್ತವೆ.
ಶ್ವೇತಕೇತುವಿನ ಪ್ರಶ್ನೆಯೇನೆಂದರೆ – ಆಪ್ತೇಜಸ್ಸುಗಳು ಹೀಗೆಯೇ ಆಗುತ್ತದೆ ಎಂದು ಇಟ್ಟುಕೊಂಡರೂ ಮನಸ್ಸು ಅನ್ನಮಯವೇ ಎನ್ನುವುದರಲ್ಲಿ ನನಗೆ ನಿಯತವಾಗಿ ನಿಶ್ಚಯವಾಗುತ್ತಿಲ್ಲ. ಆದ್ದರಿಂದ ಮತ್ತೊಮ್ಮೆ ಮನಸ್ಸು ಅನ್ನಮಯವೆನ್ನುವುದನ್ನು ದೃಷ್ಟಾಂತದ ಮುಲಕ ತಿಳಿಸಿಕೊಡಬೇಕು. ಆಗ ಅವನ ತಂದೆಯು “ಹಾಗೆಯೇ ಆಗಲಿ” ಎಂದು ಮುಂದುವರಿಸುತ್ತಾನೆ.
ಇತಿ ಷಷ್ಠಃ ಖಂಡಃ ।।