ಛಾಂದೋಗ್ಯೋಪನಿಷತ್: ಷಷ್ಠೋಽಧ್ಯಾಯಃ ಚತುರ್ಥಃ ಖಂಡಃ

 

ಯದಗ್ನೇ ರೋಹಿತಗ್ಂ ರೂಪಂ ತೇಜಸಸ್ತದ್ರೂಪಂ ಯಚ್ಛುಕ್ಲಂ ತದಪಾಂ ಯತ್ಕೃಷ್ಣಂ ತದನ್ನಸ್ಯಾಪಾಗಾದಗ್ನೇರಗ್ನಿತ್ವಂ ವಾಚಾರಂಭಣಂ ವಿಕಾರೋ ನಾಮಧೇಯಂ ತ್ರೀಣಿ ರೂಪಾಣೀತ್ಯೇವ ಸತ್ಯಮ್ ।। 1 ।।

ಅಗ್ನಿಯ ಕೆಂಪು ರೂಪವು ತೇಜಸ್ಸಿನ ರೂಪವು. ಬಿಳಿಯ ರೂಪವು ಅಪ್ಪಿನ ರೂಪವು. ಕರಿಯ ರೂಪವು ಅನ್ನದ ರೂಪವು. ಇವುಗಳಿಲ್ಲದೇ ಅಗ್ನಿಯ ಅಗ್ನಿತ್ವವೇ ಇಲ್ಲದಂತಾಗುತ್ತದೆ. ಮಿಕ್ಕಿದ್ದೆಲ್ಲಾ ವಾಗ್ಜಾಲವು. ವಿಕಾರವು. ನಾಮಮಾತ್ರವು. ಈ ಮೂರು ರೂಪಗಳೇ ಸತ್ಯವು.

ಮೇಲೆ ಹೇಳಿದ ದೇವತೆಗಳ ತ್ರಿವೃತ್ಕರಣವನ್ನು ಇಲ್ಲಿ ಉದಾಹರಣೆಯ ಮೂಲಕ ತಿಳಿಸಿಕೊಟ್ಟಿದೆ. ಲೋಕದಲ್ಲಿ ಪ್ರಸಿದ್ಧವಾಗಿರುವ ಅಗ್ನಿಯ ಕೆಂಪು ರೂಪವು ತ್ರಿವೃತ್ಕೃತವಾಗದೇ ಇರುವ ತೇಜಸ್ಸಿನ ರೂಪವು. ಹಾಗೆಯೇ ಅಗ್ನಿಗೆ ಇರುವ ಬಿಳಿಯ ರೂಪವು ತ್ರಿವೃತ್ಕೃತವಾಗದೇ ಇರುವ ಅಪ್ಪಿನ ರೂಪವು. ಅದೇ ಅಗ್ನಿಯ ಕರಿಯ ರೂಪವು ಆನ್ನದ್ದು ಎಂದರೆ ತ್ರಿವೃತ್ಕೃತವಾಗದೇ ಇರುವ ಪೃಥಿವಿಯದು.

ಇಲ್ಲಿ “ಅಗ್ನಿಯಿಂದ ಅಗ್ನಿತ್ವವು ಹೋಯಿತು” ಎಂದರೆ ರೂಪತ್ರಯವನ್ನು ವಿಂಗಡಿಸಿ ಅರಿಯುವುದಕ್ಕೆ ಮೊದಲು ಇದ್ದ ಅಗ್ನಿಬುದ್ಧಿಯು ಹೊರಟುಹೋಯಿತು, ಅಗ್ನಿ ಶಬ್ದವೂ ಹೋಯಿತು ಎಂದರ್ಥ. ಹೇಗೆ ರಕ್ತವೆಂಬ ಉಪಾಧಿಯೊಡನೆ ಕೂಡಿದ್ದ ಸ್ಫಟಿಕವನ್ನು ಗ್ರಹಿಸುವಾಗ ಇದು ಪದ್ಮರಾಗ ಎಂದು ಮೊದಲು ಇದ್ದ ಶಬ್ದ-ಬುದ್ಧಿಗಳು ಉಪಾಧಿ ಮತ್ತು ಸ್ಫಟಿಕಗಳನ್ನು ಬೇರೆ ಬೇರೆಯಾಗಿ ಗ್ರಹಿಸಿಕೊಂಡಾಗ ಹೇಗೆ ಹೊರಟುಹೋಗುತ್ತವೆಯೋ ಹಾಗೆ ಎಂದರ್ಥ. ಏಕೆಂದರೆ ಅಗ್ನಿ ಎನ್ನುವುದು ಶಬ್ದ-ಬುದ್ಧಿ ಮಾತ್ರ. ಹಿಂದೆ ಹೇಳಿದಂತೆ ಅಗ್ನಿ ಎನ್ನುವುದು ವಾಕ್ಕಿನಿಂದಾದ ನಾಮಧೇಯವು, ನಾಮ ಮಾತ್ರವು. ಆದ್ದರಿಂದ ಅಗ್ನಿ ಬುದ್ಧಿಯೂ ತಪ್ಪೇ. ಹಾಗಾದರೆ ಇಲ್ಲಿ ಸತ್ಯವಾದದ್ದು ಏನು? ಮೂರು ರೂಪಗಳು ಎನ್ನುವುದೇ ಸತ್ಯ. ರೂಪತ್ರಯಕ್ಕಿಂತ ಬೇರೆಯಾಗಿ ಒಂದಿಷ್ಟೂ ಸತ್ಯವಾದದ್ದು ಇಲ್ಲ ಎನ್ನುವುದು ಅವಧಾರಣೆಯ ಅರ್ಥ.

ಯದಾದಿತ್ಯಸ್ಯ ರೋಹಿತಗ್ಂ ರೂಪಂ ತೇಜಸಸ್ತದ್ರೂಪಂ ಯಚ್ಛುಕ್ಲಂ ತದಪಾಂ ಯತ್ಕೃಷ್ಣಂ ತದನ್ನಸ್ಯಾಪಾಗಾದಾದಿತ್ಯಾದಾದಿತ್ಯತ್ವಂ ವಾಚಾರಂಭಣಂ ವಿಕಾರೋ ನಾಮಧೇಯಂ ತ್ರೀಣಿ ರೂಪಾಣೀತ್ಯೇವ ಸತ್ಯಮ್ ।। 2 ।। ಚ್ಚಂದ್ರಮಸೋ ರೋಹಿತಗ್ಂ ರೂಪಂ ತೇಜಸಸ್ತದ್ರೂಪಂ ಯಚ್ಛುಕ್ಲಂ ತದಪಾಂ ಯತ್ಕೃಷ್ಣಂ ತದನ್ನಸ್ಯಾಪಾಗಾಚ್ಚಂದ್ರಾಚ್ಚಂದ್ರತ್ವಂ ವಾಚಾರಂಭಣಂ ವಿಕಾರೋ ನಾಮಧೇಯಂ ತ್ರೀಣಿ ರೂಪಾಣೀತ್ಯೇವ ಸತ್ಯಮ್ ।। 3 ।। ಯದ್ವಿದ್ಯುತೋ ರೋಹಿತಗ್ಂ ರೂಪಂ ತೇಜಸಸ್ತದ್ರೂಪಂ ಯಚ್ಛುಕ್ಲಂ ತದಪಾಂ ಯತ್ಕೃಷ್ಣಂ ತದನ್ನಸ್ಯಾಪಾಗಾದ್ವಿದ್ಯುತೋ ವಿದ್ಯುತ್ತ್ವಂ ವಾಚಾರಂಭಣಂ ವಿಕಾರೋ ನಾಮಧೇಯಂ ತ್ರೀಣಿ ರೂಪಾಣೀತ್ಯೇವ ಸತ್ಯಮ್ ।। 4 ।। ಏತದ್ಧ ಸ್ಮ ವೈ ತದ್ವಿದ್ವಾಗ್ಂಸ ಆಹುಃ ಪೂರ್ವೇ ಮಹಾಶಾಲಾ ಮಹಾಶ್ರೋತ್ರಿಯಾ ನ ನೋಽದ್ಯ ಕಶ್ಚನಾಶ್ರುತಮಮತಮ ವಿಜ್ಞಾತಮುದಾಹರಿಷ್ಯತೀತಿ ಹ್ಯೇಭ್ಯೋ ವಿದಾಂಚಕ್ರುಃ ।। 5 ।।

ಆದಿತ್ಯನ ಕೆಂಪು ರೂಪವು ತೇಜಸ್ಸಿನ ರೂಪವು. ಬಿಳಿಯ ರೂಪವು ಅಪ್ಪಿನ ರೂಪವು. ಕರಿಯ ರೂಪವು ಅನ್ನದ ರೂಪವು. ಇವುಗಳನ್ನು ತೆಗೆದರೆ ಆದಿತ್ಯನ ಆದಿತ್ಯತ್ವವೇ ಇಲ್ಲದಂತಾಗುತ್ತದೆ. ಮಿಕ್ಕಿದ್ದೆಲ್ಲಾ ವಾಗ್ಜಾಲವು. ವಿಕಾರವು. ನಾಮಮಾತ್ರವು. ಈ ಮೂರು ರೂಪಗಳೇ ಸತ್ಯವು. ಚಂದ್ರನ ಕೆಂಪು ರೂಪವು ತೇಜಸ್ಸಿನ ರೂಪವು. ಬಿಳಿಯ ರೂಪವು ಅಪ್ಪಿನ ರೂಪವು. ಕರಿಯ ರೂಪವು ಅನ್ನದ ರೂಪವು. ಇವುಗಳನ್ನು ತೆಗೆದರ ಚಂದ್ರನ ಚಂದ್ರತ್ವವೇ ಇಲ್ಲದಂತಾಗುತ್ತದೆ. ಮಿಕ್ಕಿದ್ದೆಲ್ಲಾ ವಾಗ್ಜಾಲವು. ವಿಕಾರವು. ನಾಮಮಾತ್ರವು. ಈ ಮೂರು ರೂಪಗಳೇ ಸತ್ಯವು. ವಿದ್ಯುತ್ತಿನ ಕೆಂಪು ರೂಪವು ತೇಜಸ್ಸಿನ ರೂಪವು. ಬಿಳಿಯ ರೂಪವು ಅಪ್ಪಿನ ರೂಪವು. ಕರಿಯ ರೂಪವು ಅನ್ನದ ರೂಪವು. ಈ ಮೂರನ್ನು ತೆಗೆದರೆ ವಿದ್ಯುತ್ತಿನ ವಿದ್ಯುತ್ವವು ಹೊರಟುಹೋಗುತ್ತೆ. ಮಿಕ್ಕಿದ್ದೆಲ್ಲಾ ವಾಗ್ಜಾಲವು. ವಿಕಾರವು. ನಾಮಮಾತ್ರವು. ಈ ಮೂರು ರೂಪಗಳೇ ಸತ್ಯವು. ಪೂರ್ವಕಾಲದಲ್ಲಿ ವಿದ್ವಾಂಸರು, ಮಹಾಗೃಹಸ್ಥರು, ಮತ್ತು ವೇದಜ್ಞರು ಇದು ಹೇಗೆ ಇದೆ ಎಂಬ ಜ್ಞಾನವನ್ನು ಪಡೆದುಕೊಂಡಿದ್ದರು. ಆದ್ದರಿಂದಲೇ ನಮ್ಮ ಕುಲದಲ್ಲಿ ಯಾರಿಗೂ ಕೇಳದೇ ಇದ್ದುದು, ವಿಚಾರಿಸದೇ ಇದ್ದುದು, ಮತ್ತು ತಿಳಿಯದೇ ಇದ್ದುದು ಯಾವುದೂ ಉಳಿಯಲಿಲ್ಲ ಎಂದು ತಿಳಿದಿದ್ದರು.

ಅಗ್ನಿಯಂತೆಯೇ “ಆದಿತ್ಯನ”, “ಚಂದ್ರಮಸನ” ಮತ್ತು “ವಿದ್ಯುತ್ತಿನ” ರೂಪಗಳಿರುತ್ತವೆ. ಅವುಗಳಲ್ಲಿ ಅತ್ರಿವೃತ್ಕೃತವಾದ ಭೂತಗಳ ರೂಪಗಳೇ ಸತ್ಯವಾಗಿರುತ್ತವೆ ಎಂದು ಅರ್ಥಮಾಡಿಕೊಳ್ಳಬೇಕು.

ಇಲ್ಲಿ ತೇಜಸ್ಸಿನ ಉದಾಹರಣೆಯನ್ನು ಕೊಟ್ಟು ಹೇಳಿರುವ ತ್ರಿವೃತ್ಕರಣದಂತೆಯೇ ಅಪ್ಪು ಮತ್ತು ಅನ್ನಗಳ ತ್ರಿವೃತ್ಕರಣವಾಗುತ್ತದೆ ಎಂದು ತಿಳಿಯಬೇಕು. ಅಗ್ನ್ಯಾದಿಗಳಂತೆ ಜಗತ್ತೆಲ್ಲವೂ ತ್ರಿವೃತ್ಕೃತವಾಗಿರುವುದರಿಂದ ಮೂರು ರೂಪಗಳೇ ಸತ್ಯವೆಂದಾದರೆ, ಅಗ್ನಿಯ ಅಗ್ನಿತ್ವವು ಹೋದಂತೆ ಜಗತ್ತಿನ ಜಗತ್ವವು ಹೋಯಿತು ಎಂದಾಗುತ್ತದೆ. ಹೀಗೆ ಅನ್ನವೂ ಅಪ್ಪಿನ ಶುಂಗವಾದ್ದರಿಂದ ಅಪ್ಪೆಂಬುದೇ ಸತ್ಯ, ಅನ್ನವು ವಾಚಾರಂಭಣ ಮಾತ್ರ. ಹಾಗೆಯೇ ಅಪ್ಪು ತೇಜಸ್ಸಿನ ಶುಂಗವಾದ್ದರಿಂದ ಅದೂ ವಾಚಾರಂಭಣವೇ. ತೇಜಸ್ಸೆಂಬುದೇ ಸತ್ಯವು. ತೇಜಸ್ಸೂ ಸತ್ತಿನ ಶುಂಗವಾದ್ದರಿಂದ ಅದೂ ವಾಚಾರಂಭಣವೇ. ಸತ್ತೆಂಬುದೇ ಸತ್ಯವು. ಈ ಅರ್ಥವು ಇಲ್ಲಿ ಅಡಗಿಕೊಂಡಿದೆ. ಶುಂಗ ಎಂದರೆ ಕಾರ್ಯವು. ಕಾರ್ಯವು ಕಾರಣಕ್ಕಿಂತ ಅನನ್ಯವಾಗಿರುವುದರಿಂದ ಆಯಾ ಕಾರ್ಯದಿಂದ ಕಾರಣವನ್ನು ಹುಡುಕಿ ತೆಗೆಯುತ್ತಾ ಪರಮಕಾರಣವಾದ ಸತ್ತನ್ನು ಅರಿತುಕೊಳ್ಳಬೇಕು ಎಂಬ ಅಭಿಪ್ರಾಯ.

ಆದರೆ ತ್ರಿವೃತ್ಕವಾಗಿಲ್ಲದ ವಾಯು-ಆಕಾಶಗಳು ತೇಜಸ್ಸೇ ಮೊದಲಾದವುಗಳಲ್ಲಿ ಅಡಕವಾಗದೇ ಇರುವುದರಿಂದ ಉಳಿದುಕೊಂಡಿವೆಯಲ್ಲ! ಹೀಗೆಯೇ ಗಂಧ, ರಸ, ಶಬ್ದ, ಸ್ಪರ್ಶ – ಇವುಗಳೂ ಇಲ್ಲಿ ಹೇಳದೇ ಇರುವುದರಿಂದ ಉಳಿದುಕೊಂಡುಬಿಟ್ಟಿವೆ. ಹೀಗಿರುವುದರಿಂದ ಸತ್ತನ್ನು ಅರಿತುಕೊಂಡರೆ ಅರಿತುಕೊಳ್ಳದೇ ಇರುವ ಉಳಿದ ಎಲ್ಲವೂ ವಿಜ್ಞಾತವಾಗುತ್ತದೆ ಎಂದು ಹೇಳುವುದಾದರೂ ಹೇಗೆ? ಅಥವಾ ಅವುಗಳನ್ನು ತಿಳಿದುಕೊಳ್ಳುವುದಕ್ಕೆ ತ್ರಿವೃತ್ಕರಣಕ್ಕಿಂತ ಬೇರೆ ಕಾರ್ಯವನ್ನಾದರೂ ಹೇಳಬೇಕಾಗುತ್ತದೆಯಲ್ಲವೇ?

ಇದಕ್ಕೆ ಪರಿಹಾರವೇನೆಂದರೆ – ರೂಪವುಳ್ಳ ದ್ರವ್ಯದಲ್ಲಿ ಎಲ್ಲವೂ ಕಂಡುಬರುತ್ತದೆ. ಹೇಗೆಂದರೆ – ಮೊದಲನೆಯದಾಗಿ – ರೂಪವಿರುವ ತೇಜಸ್ಸಿನಲ್ಲಿ ಶಬ್ದಸ್ಪರ್ಶಗಳೂ ಕಾಣುವುದರಿಂದ ಸ್ಪರ್ಶ, ಶಬ್ದ ಎಂಬ ಗುಣವಿರುವ ವಾಯು-ಆಕಾಶಗಳೂ ಇದರಲ್ಲಿ ಸೇರಿವೆಯೆಂದು ತಿಳಿಯಬೇಕು. ಇದರಂತೆ ರೂಪವಿರುವ ಅಪ್ಪು-ಅನ್ನಗಳಲ್ಲಿ ರಸ-ಗಂಧಗಳೂ ಅಡಕವಾಗಿವೆ. ಆದ್ದರಿಂದ ರೂಪವಿರುವ ಈ ತೇಜಸ್ಸು-ಅಪ್ಪು-ಅನ್ನಗಳೆಂಬ (ತೇಜೋಬನ್ನಗಳೆಂಬ) ಮೂರಕ್ಕೂ ತ್ರಿವೃತ್ಕರಣವನ್ನು ತೋರಿಸಿಕೊಟ್ಟಿದ್ದರಿಂದ ಅವುಗಳಲ್ಲಿ ಅಡಕವಾಗಿರುವ ಎಲ್ಲವೂ ಸತ್ತಿನ ಕಾರ್ಯವಾಗಿರುವುದರಿಂದ ಮೂರೇ ರೂಪಗಳು ಎಂದು ಶ್ರುತಿಯ ಅಭಿಪ್ರಾಯವು.

ಮೂರ್ತವಾದ ರೂಪವಿರುವ ದ್ರವ್ಯವನ್ನು ಬಿಟ್ಟು ವಾಯು-ಆಕಾಶಗಳನ್ನಾಗಲೀ ಅವುಗಳ ಗುಣಗಳನ್ನಾಗಲೀ ಗಂಧರಸಗಳನ್ನಾಗಲೀ ಗ್ರಹಿಸಲು ಸಾಧ್ಯವಿಲ್ಲ. ತ್ರಿವೃತ್ಕೃತವಾದಾಗ ಹೇಗೆ ಮೂರು ರೂಪಗಳೇ ಸತ್ಯವೆಂದಾಗುತ್ತದೆಯೋ ಹಾಗೆಯೇ ಪಂಚೀಕರಣವಾದರೂ ನ್ಯಾಯವು ಸಮಾನವಾಗಿಯೇ ಇರುತ್ತದೆ. ಪಂಚೀಕೃತವಾದ ಪದಾರ್ಥಗಳಲ್ಲಿ ಅಪಂಚೀಕೃತವಾದ ಐದು ಭೂತಗಳ ಧರ್ಮವು ಇರುತ್ತವೆ. ಅವು ಸತ್ತಿನಿಂದಲೇ ಆಗಿರುತ್ತವೆ ಎಂಬ ನ್ಯಾಯವು ಅಲ್ಲಿಯೂ ಇದೆ. ಆದ್ದರಿಂದ ಎಲ್ಲವೂ ಸತ್ತಿನ ವಿಕಾರವಾಗಿರುವುದರಿಂದ ಸತ್ತನ್ನು ಅರಿತುಕೊಂಡರೆ ಇದೆಲ್ಲವನ್ನೂ ಅರಿತುಕೊಂಡಂತೆ ಆಗುತ್ತದೆ. ಸತ್ತೊಂದನ್ನು ಅರಿತುಕೊಂಡರೆ ಇದೆಲ್ಲವೂ ವಿಜ್ಞಾತವಾಗುತ್ತದೆ ಎಂದು ಹೇಳಿದುದು ಸರಿಯೇ ಆಗಿದೆ. 

ಇದನ್ನು ತಿಳಿದುಕೊಂಡ ಮಹಾಶಾಲರೂ ಮಹಾಶ್ರೋತ್ರಿಯರೂ “ಈಗ ನಮ್ಮಲ್ಲಿ ಯಾರೂ ಅಶ್ರುತವಾದದ್ದನ್ನು ಅಮತವಾದದ್ದನ್ನು ಅವಿಜ್ಞಾತವಾದದ್ದನ್ನು ಉದಾಹರಿಸುವುದಿಲ್ಲ” ಎಂದರು. ಇವುಗಳಿಂದಲೇ ಅರಿತುಕೊಂಡರು.

ಇಲ್ಲಿ ಮಹಾಶಾಲರು ಎಂದರೆ ಮಹಾಗೃಹಸ್ಥರು ಎಂದರ್ಥ. ತ್ರಿವೃತ್ಕರಣವನ್ನು ಅರಿತುಕೊಂಡ, ಹಿಂದೆ ಆಗಿಹೋದ, ಮಹಾಗೃಹಸ್ಥರೂ ಮಹಾಶ್ರೋತ್ರಿಯರೂ “ನಮ್ಮ ಕುಲದಲ್ಲಿ ತ್ರಿವೃತ್ಕರಣವನ್ನು ತಿಳಿದುಕೊಂಡ ಎಲ್ಲರಿಗೂ ಸತ್ತಿನ ವಿಜ್ಞಾನವುಳ್ಳವರಾದ್ದರಿಂದ ಎಲ್ಲವೂ ವಿಜ್ಞಾತವೇ ಆಗಿರುತ್ತದೆ” ಎಂದುಕೊಂಡರು. ತ್ರಿವೃತ್ಕೃತವಾದ ರೋಹಿತಾದಿರೂಪಗಳಿಂದ ಈ ಮೂರನ್ನು ಅರಿತುಕೊಂಡಿದ್ದರಿಂದ ಉಳಿದ ಬೇರೆ ಎಲ್ಲವೂ ಹೀಗೆಯೇ ಎಂದು ಅರಿತುಕೊಂಡರು ಎಂದರ್ಥ.

ಯದು ರೋಹಿತಮಿವಾಭೂದಿತಿ ತೇಜಸಸ್ತದ್ರೂಪಮಿತಿ ತದ್ವಿದಾಂಚಕ್ರುರ್ಯದು ಶುಕ್ಲಮಿವಾಭೂದಿತ್ಯಪಾಗ್ಂ ರೂಪಮಿತಿ ತದ್ವಿದಾಂಚಕ್ರುರ್ಯದು ಕೃಷ್ಣಮಿವಾಭೂದಿತ್ಯನ್ನಸ್ಯ ರೂಪಮಿತಿ ತದ್ವಿದಾಂಚಕ್ರುಃ ।। 6 ।। ಯದ್ವವಿಜ್ಞಾತಮಿವಾಭೂದಿತ್ಯೇತಾಸಾಮೇವ ದೇವತಾನಾಗ್ಂ ಸಮಾಸ ಇತಿ ತದ್ವಿದಾಂಚಕ್ರುರ್ಯಥಾ ತು ಖಲು ಸೋಮ್ಯೇಮಾಸ್ತಿಸ್ರೋ ದೇವತಾಃ ಪುರುಷಂ ಪ್ರಾಪ್ಯ ತ್ರಿವೃತ್ತ್ರಿವೃದೇಕೈಕಾ ಭವತಿ ತನ್ಮೇ ವಿಜಾನೀಹೀತಿ ।। 7 ।।

ಕೆಂಪಾಗಿದ್ದುದು ತೇಜಸ್ಸಿನ ರೂಪವೆಂದೂ, ಬೆಳ್ಳಗಿದ್ದುದು ಅಪ್ಪಿನ ರೂಪವೆಂದೂ ಮತ್ತು ಕಪ್ಪಾಗಿದುದು ಅನ್ನದ ರೂಪವೆಂದು ಅವರು ಅರಿತುಕೊಂಡರು. ತಿಳಿಯದೇ ಇದ್ದ ರೂಪವು ಈ ತೇಜಾದಿ ದೇವತೆಗಳ ಸಂಯೋಗದಿಂದ ಆದುದೆಂದು ಅವರು ಅರಿತುಕೊಂಡರು. ಸೋಮ್ಯ! ಇನ್ನು ಈ ಮೂರು ದೇವತೆಗಳೂ ಪುರುಷನಲ್ಲಿ ಸೇರಿ ಹೇಗೆ ಒಂದೊಂದೂ ತ್ರಿವೃತ-ತ್ರಿವೃತವಾಗುತ್ತದೆ ಎನ್ನುವುದನ್ನು ನನ್ನಿಂದ ತಿಳಿದುಕೋ.

ಉದಾಹರಣೆಯಿಂದ ಎಲ್ಲವನ್ನೂ ಹೇಗೆ ಅರಿತುಕೊಂಡರು? ಯಾವುದು ಮತ್ತೊಂದು ರೂಪವೆಂದು ಸಂದೇಹವುಂಟಾಗಿರುವ ಚಿತ್ರರೂಪವೇ ಮೊದಲಾದವುಗಳಲ್ಲಿ ಯಾವುದು ಕೆಂಪಾಗಿದೆ ಎಂದು ಆ ಹಿಂದಿನ ಬ್ರಹ್ಮಜ್ಞಾನಿಗಳಿಗೆ ತಿಳಿಯಿತೋ ಅದು ತೇಜಸ್ಸಿನ ರೂಪ ಎಂದುಕೊಂಡರು. ಹಾಗೆಯೇ ಯಾವುದು ಬಿಳಿಯಾಗಿ ಕಂಡಿತೋ ಅದು ಅಪ್ಪಿನ ರೂಪವೆಂದು ಮತ್ತು ಯಾವುದು ಕಪ್ಪಾಗಿ ಕಂಡಿತೋ ಅದು ಅನ್ನದ ರೂಪವೆಂದು ತಿಳಿದುಕೊಂಡರು. ಹಾಗೆಯೇ ಯಾವುದು ಕಾಣಿಸದೇ ಅವಿಜ್ಞಾತವಾದಂತೆ ತೋರಿತೋ ಅದನ್ನು ಈ ಮೂರು ದೇವತೆಗಳ ಸಮಾಸ ಎಂದು ಅರಿತುಕೊಂಡರು. ಹೀಗೆ ಮೊದಲನೆಯದಾಗಿ ಹೊರಗೆ ಕಾಣುವ ವಸ್ತುವನ್ನು ಅಗ್ನಾದಿಗಳಂತೆ ತ್ರಿವೃತ್ಕೃತತೇಜಾದಿ ರೂಪವುಳ್ಳದ್ದೆಂದು ಅರಿತುಕೊಂಡರು. ಇನ್ನು ಮೇಲೆ ಹೇಳಿದ ಮೂರು ದೇವತೆಗಳು ಪುರುಷನ ತಲೆ, ಕೈ-ಕಾಲು ಮೊದಲಾದ ರೂಪದ ಕಾರ್ಯಕರಣಸಂಘಾತವನ್ನು ಸೇರಿ ಆ ಪುರುಷನು ಅದನ್ನು ಬಳಸಿಕೊಂಡಾಗ ಹೇಗೆ ತ್ರಿವೃತತ್ರಿವೃತವಾಗುತ್ತದೆ ಎನ್ನುವ ಆ ಆಧ್ಯಾತ್ಮಿಕತ್ರಿವೃತ್ಕರಣ ಕುರಿತು ನಾನು ಹೇಳುತ್ತೇನೆ.


ಇತಿ  ಚತುರ್ಥಃ ಖಂಡಃ ।।

Leave a Reply

Your email address will not be published. Required fields are marked *