ಛಾಂದೋಗ್ಯೋಪನಿಷತ್: ಷಷ್ಠೋಽಧ್ಯಾಯಃ ತೃತೀಯಃ ಖಂಡಃ
ತೇಷಾಂ ಖಲ್ವೇಷಾಂ ಭೂತಾನಾಂ ತ್ರೀಣ್ಯೇವ ಬೀಜಾನಿ ಭವಂತ್ಯಾಂಡಜಂ ಜೀವಜಮುದ್ಭಿಜ್ಜಮಿತಿ ।। 1 ।।
ಆ ಎಲ್ಲ ಭೂತಗಳಿಗೂ ಮೂರೇ ಬೀಜಗಳಿವೆ: ಆಂಡಜ, ಜೀವಜ ಮತ್ತು ಉದ್ಭಿಜ್ಜ.
ಇಲ್ಲಿ ಭೂತಗಳು ಎಂದರೆ ಜೀವಾವಿಷ್ಟವಾಗಿರುವ ಪಕ್ಷಿಯೇ ಮೊದಲಾದ ಪ್ರತ್ಯಕ್ಷ ಕಾಣುವ ಪಕ್ಷಿ-ಪ್ರಾಣಿ-ಸಸ್ಯಾದಿ ಭೂತಗಳೇ ಹೊರತು ತೇಜಸ್ಸೇ ಮೊದಲಾದ ಭೂತಗಳಲ್ಲ. ಇಲ್ಲಿ ಶರೀರಸಹಿತವಾದ ಜೀವಿಗಳನ್ನೇ ಭೂತಗಳೆಂದು ಹೇಳಿದೆ. ಈ ಪಶು-ಪಕ್ಷಿ-ಸ್ಥಾವರಾದಿ ಭೂತಗಳಿಗೆ ಮೂರೇ, ಹೆಚ್ಚಲ್ಲ, ಬೀಜಗಳು ಕಾರಣವು. ಬೀಜಗಳು ಎಂದರೆ ಹಾವಿನಿಂದ ಹಾವೇ ಹುಟ್ಟುತ್ತದೆ, ಮನುಷ್ಯನಿಂದ ಮನುಷ್ಯನೇ ಹುಟ್ಟುತ್ತಾನೆ, ಸಸ್ಯಗಳಿಂದ ಸಸ್ಯಗಳೇ ಹುಟ್ಟುತ್ತವೆ, ಇತ್ಯಾದಿ. ಅಂಡದಿಂದ ಹುಟ್ಟಿದ್ದುದು ಆಂಡಜವು. ಪಕ್ಷಿ, ಹಾವು ಮೊದಲಾದವುಗಳು ಆಂಡಜವು. ಪಕ್ಷಿಯು ಪಕ್ಷಿಗಳಿಗೂ, ಹಾವುಗಳಿಗೆ ಹಾವೂ ಬೀಜವು. ಹಾಗೆಯೇ ಇನ್ನೂ ಇತರ ಅಂಡದಿಂದ ಹುಟ್ಟಿದ ಪ್ರಾಣಿಯು ತನ್ನ ಜಾತಿಯ ಪ್ರಾಣಿಗಳಿಗೆ ಕಾರಣವು ಎಂದರ್ಥ. ಅಂಡಜಾದಿಗಳಿಗೆ ಅಂಡಜಾದಿಗಳೇ ಬೀಜವು. ಇದರಂತೆ ಜೀವಜದಿಂದ ಹುಟ್ಟಿದ್ದುದು ಜೀವಜವು. ಮನುಷ್ಯ-ಪಶು ಮೊದಲಾದ ಜರಾಯುಜಗಳು ಎಂದರ್ಥ. ಉದ್ಭಿಜ್ಜ ಎಂದರೆ ಮೇಲೆ ಒಡೆದುಕೊಂಡು ಬಂದದ್ದು. ಬೀಜದಿಂದ ಹುಟ್ಟಿದ ಸಸ್ಯ-ವೃಕ್ಷ ಮೊದಲಾದ ಸ್ಥಾವರ ಜೀವಿಗಳು. ಸ್ಥಾವರ ಬೀಜವು ಸ್ಥಾವರಗಳಿಗೆ ಕಾರಣವು ಎಂದರ್ಥ. ಸ್ವೇದಜಗಳು ಅಂಡಜೋದ್ಭಿಜ್ಜಗಳಲ್ಲಿಯೇ ಸೇರಿಕೊಂಡಿವೆ. ಹೀಗಾಗಿಯೇ ಶ್ರುತಿಯು ಮೂರೇ ಬೀಜಗಳು ಎಂದಿದೆ.
ಸೇಯಂ ದೇವತೈಕ್ಷತ ಹಂತಾಹಮಿಮಾಸ್ತಿಸ್ರೋ ದೇವತಾ ಅನೇನ ಜೀವೇನಾತ್ಮನಾನುಪ್ರವಿಶ್ಯ ನಾಮರೂಪೇ ವ್ಯಾಕರವಾಣೀತಿ ।। 2 ।।
ಆ ಸತ್ ಎಂಬ ದೇವತೆಯು “ಒಳ್ಳೆಯದು! ಇನ್ನು ನಾನು ಜೀವಾತ್ಮ ರೂಪದಿಂದ ಈ ಮೂರು – ತೇಜಸ್ಸು, ಆಪ ಮತ್ತು ಅನ್ನ – ದೇವತೆಗಳಲ್ಲಿ ಅಥವಾ ಶಕ್ತಿಗಳಲ್ಲಿ ಪ್ರವೇಶಮಾಡಿ ನಾಮರೂಪಗಳನ್ನು ಅಥವಾ ವಿವಿಧ ದೃಷ್ಟಿಯನ್ನು ವ್ಯಕ್ತಮಾಡಬೇಕು” ಎಂದು ಆಲೋಚಿಸಿ ನೋಡಿತು.
ಇಲ್ಲಿ ದೇವತೆಯೆಂದರೆ ಪ್ರಕೃತವಾಗಿರುವ ಸತ್ತೆಂಬ ಹೆಸರಿನ ತೇಜೋಬನ್ನಗಳಿಗೆ ಕಾರಣವಾದ ಮೇಲೆ ಹೇಳಿದ ದೇವತೆಯು. ಇನ್ನೂ ಬಹು ಎಂಬ ಪ್ರಯೋಜನವಾಗದೇ ಇದ್ದುದರಿಂದ ಮತ್ತೆ ಇಚ್ಛಿಸಿತು: “ಈಗ ನಾನು ಈ ತೇಜಸ್ಸೇ ಮೊದಲಾದ ಮೇಲೆ ಹೇಳಿರುವ ಮೂರು ದೇವತೆಗಳನ್ನು ಈ ಜೀವನೆಂಬ – ಅಂದರೆ ತನ್ನ ಬುದ್ಧಿಯಲ್ಲಿದ್ದ ಪೂರ್ವಸೃಷ್ಟಿಯಲ್ಲಿ ಅನುಭವಿಸಿದ್ದ ಪ್ರಾಣಧಾರಿಯಾದ ಆತ್ಮನನ್ನೇ ಸ್ಮರಿಸಿಕೊಂಡು ಈ ಜೀವನಾದ ಆತ್ಮನ ರೂಪದಿಂದ – ಪ್ರಾಣಧಾರಣ ಕರ್ತೃರೂಪದಿಂದ – ಪ್ರವೇಶಿಸುತ್ತೇನೆ.” ಜೀವನೆಂದರೆ ಪ್ರಾಣಧಾರಣ ಮಾಡುವವನು ಎಂದರ್ಥ. ವಾಗಾದಿಕರಣಗಳನ್ನು ಧರಿಸುವ ವಿಶೇಷರೂಪದಿಂದ ಪ್ರವೇಶ. ಇಲ್ಲಿ ಬಳಸಿರುವ “ಆತ್ಮನಾ” ಎಂಬ ಶಬ್ದವು ತನ್ನ ಆತ್ಮಕ್ಕಿಂತ ಬೇರೆಯಲ್ಲದ, ಚೈತನ್ಯಸ್ವರೂಪವೇ ಆಗಿರುವ, ಸಮಾನ ರೂಪದಿಂದ – ಎಂದು ತಿಳಿಸುತ್ತದೆ. ಜೀವರೂಪದಿಂದ ಪ್ರವೇಶಮಾಡಿದ್ದರೂ ಜೀವನಿಗೆ ಆಗಲೂ ಆತ್ಮಸ್ವರೂಪವು ತಪ್ಪಿರುವುದಿಲ್ಲ ಎನ್ನುವುದನ್ನು “ಆತ್ಮನಾ” ಎಂಬ ಮಾತು ತಿಳಿಸುತ್ತದೆ. ಅನುಪ್ರವೇಶಮಾಡಿ, ತೇಜೋಬನ್ನಗಳ ಮಾತ್ರೆಗಳ ಸಂಬಂಧದಿಂದ ವಿಶೇಷಜ್ಞಾನವನ್ನು ಪಡೆದುಕೊಂಡು (ಮಾತ್ರೆಗಳ ಸಂಸರ್ಗದಿಂದ ಜಾಗ್ರತ್ಸ್ವಪ್ನಗಳಲ್ಲಿ ವಿಶೇಷಜ್ಞಾನವುಂಟಾಗುತ್ತದೆ. ಅದಿಲ್ಲದ ಸುಷುಪ್ತಿ ಕೈವಲ್ಯಗಳಲ್ಲಿ ವಿಶೇಷಜ್ಞಾನವಿರುವುದಿಲ್ಲ.) ನಾಮರೂಪಗಳನ್ನು ನಾಮವನ್ನೂ ರೂಪವನ್ನೂ ವ್ಯಾಕರಣ ಮಾಡುತ್ತೇನೆ – ಅಂದರೆ ಇದು ಇಂಥ ಹೆಸರಿನದ್ದು, ಇದು ಇಂಥ ರೂಪವುಳ್ಳದ್ದು – ಎಂದು ವಿಂಗಡಿಸುತ್ತೇನೆ ಎಂದು ಆಲೋಚಿಸಿತು ಎಂದರ್ಥ. ಅವ್ಯಾಕೃತ ಎಂದರೆ ಮಣ್ಣಿನಂತೆ ಒಂದಾಗಿರುವುದು. ವ್ಯಾಕರಣಮಾಡುವುದು ಎಂದರೆ ಮಡಿಕೆ, ಕುಡಿಕೆ ಎಂಬಂತೆ ವಿಸೃಷ್ಟವಾದ ಬೇರೆಬೇರೆ ರೂಪದಿಂದ ವಿಂಗಡಿಸಿ ತೋರಿಸುವುದು.
ಅಸಂಸಾರಿಯೂ ಸರ್ವಜ್ಞನೂ ಆಗಿರುವ ದೇವತೆಯು ಬುದ್ಧಿಪೂರ್ವಕವಾಗಿ ಅನೇಕ ಶತಸಹಸ್ರ ಅನರ್ಥಗಳಿಗೆ ಆಶ್ರಯವಾಗಿರುವ ದೇಹವನ್ನು ಒಳಹೊಕ್ಕು ದುಃಖವನ್ನು ಅನುಭವಿಸುತ್ತೇನೆ ಎಂದು ಸಂಕಲ್ಪಿಸುವುದೂ, ಸ್ವತಂತ್ರವಿದ್ದರೂ ಪ್ರವೇಶಮಾಡುವುದು – ಎನ್ನುವುದು ಹೇಗಾಗುತ್ತದೆ? ತನ್ನ ಅವಿಕೃತವಾದ ರೂಪದಿಂದ ಒಳಹೊಕ್ಕು ದುಃಖವನ್ನು ಅನುಭವಿಸುತ್ತೇನೆ ಎಂದು ಸಂಕಲ್ಪಿಸಿದ್ದರೆ ಹೀಗೆ ಅಯುಕ್ತವಾಗುತ್ತಿತ್ತು. ಆದರೆ ಹಾಗಿಲ್ಲ. ಏಕೆಂದರೆ ಈ ಜೀವಾತ್ಮರೂಪದಿಂದ ಒಳಹೊಕ್ಕು ಎಂದಿದೆ. ಜೀವನೆಂದರೆ ಬುದ್ಧಿಯೇ ಮೊದಲಾದ ಭೂತಮಾತ್ರೆಗಳ ಸಂಬಂಧದಿಂದಾಗಿರುವ ದೇವತೆಯ ಆಭಾಸಮಾತ್ರವಾಗಿರುತ್ತದೆ. ಅವನು ಕನ್ನಡಿಯೊಳಗೆ ಹೊಕ್ಕಿರುವ ಮನುಷ್ಯನ ಪ್ರತಿಬಿಂಬದಂತೆಯೂ, ನೀರು ಮೊದಲಾದವುಗಳಲ್ಲಿ ಹೊಕ್ಕಿರುವ ಚಂದ್ರ-ಸೂರ್ಯಾದಿಗಳ ಪ್ರತಿಬಿಂಬದಂತೆಯೂ ಇರುತ್ತಾನೆ. ಅಚಿಂತ್ಯವಾದ ಅನಂತ ಶಕ್ತಿಗಳಿರುವ ದೇವತೆಗೆ ಬುದ್ಧ್ಯಾದಿಗಳ ಸಂಬಂಧದಿಂದ ಚೈತನ್ಯದ ಆಭಾಸವುಂಟಾಗುವುದು ದೇವತೆಯ ಸ್ವರೂಪವನ್ನು ವಿಂಗಡಿಸಿ ಗ್ರಹಿಸದೆ ಇರುವ ನಿಮಿತ್ತದಿಂದಾಗಿ ಸುಖಿ, ದುಃಖಿ, ಮೂಢ – ಮೊದಲಾದ ಅನೇಕ ವಿಕಲ್ಪಪ್ರತ್ಯಯಗಳಿಗೆ ಕಾರಣವಾಗಿರುತ್ತದೆ. ಹೀಗೆ ಬರಿಯ ನೆರಳಿನಂತಿರುವ ಜೀವರೂಪದಿಂದ ಒಳಹೊಕ್ಕಿರುವುದರಿಂದ ದೇವತೆಯು ತಾನೇ ದೇಹದ ಸಂಬಂಧದಿಂದಾದ ಸುಖದುಃಖಗಳ ಸಂಬಂಧವನ್ನು ಪಡೆಯುವುದಿಲ್ಲ. ಹೇಗೆ ಮನುಷ್ಯ, ಸೂರ್ಯ ಮೊದಲಾದವರು ಕನ್ನಡಿ, ನೀರು ಮೊದಲಾದವುಗಳಲ್ಲಿ ಬರಿಯ ನೆರಳಿನ ರೂಪದಿಂದ ಹೊಕ್ಕಿರುವುದರಿಂದ ಆ ಕನ್ನಡಿ, ನೀರು ಮೊದಲಾದವುಗಳ ದೋಷಗಳಿಂದ ಹೇಗೆ ಸಂಬದ್ಧರಾಗುವುದಿಲ್ಲವೋ ಹಾಗೆ ದೇವತೆಯೂ ಕೂಡ ಸಂಬದ್ಧವಾಗುವುದಿಲ್ಲ. “ಸೂರ್ಯೋ ಯಥಾ ಸರ್ವಲೋಕಸ್ಯ ಚಕ್ಷುರ್ನ ಲಿಪ್ಯತೇ ಚಾಕ್ಷುಷೈರ್ಬಾಹ್ಯದೋಷೈಃ । ಏಕಸ್ತಥಾ ಸರ್ವಭೂತಾಂತರಾತ್ಮಾ ನ ಲಿಪ್ಯತೇ ಲೋಕದುಃಖೇನ ಬಾಹ್ಯಃ ।। – ಎಲ್ಲರಿಗೂ ಚಕ್ಷುವಾಗಿರುವ ಸೂರ್ಯನು ಹೇಗೆ ಚಕ್ಷುಸ್ಸಿನ ಸಂಬಂಧದಿಂದಾಗಿರುವ ಹೊರಗಿನ ದೋಷಗಳಿಂದ ಲಿಪ್ತನಾಗುವುದಿಲ್ಲವೋ ಹಾಗೆಯೇ ಸರ್ವಭೂತಗಳಿಗೂ ಅಂತರಾತ್ಮನಾಗಿರುವ ಒಬ್ಬನೇ ಆದ ಪರಮಾತ್ಮನು ಲೋಕದುಃಖದಿಂದ ಲಿಪ್ತನಾಗುವುದಿಲ್ಲ. ಏಕೆಂದರೆ ಅವನು ಅವಕ್ಕೆ ಹೂರಗಿನವನಾಗಿರುತ್ತಾನೆ.” (ಕಠೋಪನಿಷತ್ತು, 1-3-1).
ತಾಸಾಂ ತ್ರಿವೃತಂ ತ್ರಿವೃತಮೇಕೈಕಾಂ ಕರವಾಣೀತಿ ಸೇಯಂ ದೇವತೇಮಾಸ್ತಿಸ್ರೋ ದೇವತಾ ಅನೇನೈವ ಜೀವೇನಾಽಽತ್ಮನಾಽನುಪ್ರವಿಶ್ಯ ನಾಮರೂಪೇ ವ್ಯಾಕರೋತ್ ।। 3 ।। ತಾಸಾಂ ತ್ರಿವೃತಂ ತ್ರಿವೃತಮೇಕೈಕಾಮಕರೋದ್ಯಥಾ ತು ಖಲು ಸೋಮ್ಯೇಮಾಸ್ತಿಸ್ರೋ ದೇವತಾಸ್ತ್ರಿವೃತ್ತ್ರಿವೃದೇಕೈಕಾ ಭವತಿ ತನ್ಮೇ ವಿಜಾನೀಹೀತಿ ।। 4 ।।
ಅವುಗಳಲ್ಲಿ ಒಂದೊಂದನ್ನೂ ತ್ರಿವೃತ ತ್ರಿವೃತವನ್ನಾಗಿ ಮಾಡುತ್ತೇನೆ ಎಂದು ಆಲೋಚಿಸಿ ನೋಡಿತು. ಆ ದೇವತೆಯು ಈ ಮೂರೂ ದೇವತೆಗಳನ್ನು ಇದೇ ಜೀವಾತ್ಮನ ರೂಪದಿಂದ ಅನುಪ್ರವೇಶಮಾಡಿ ನಾಮ-ರೂಪಗಳನ್ನು ವ್ಯಾಕರಣಮಾಡಿತು. ಆ ದೇವತೆಗಳಲ್ಲಿ ಒಂದೊಂದನ್ನೂ ತ್ರಿವೃತ ತ್ರಿವೃತವಾಗಿ ಮಾಡಿತು. ಈ ಮೂರು ದೇವತೆಗಳು ಒಂದೊಂದೂ ಹೇಗೆ ತ್ರಿವೃತ ತ್ರಿವೃತವಾಗುತ್ತವೆ ಎನ್ನುವುದನ್ನು ನನ್ನಿಂದ ತಿಳಿದುಕೋ.
ಆ ದೇವತೆಯು ಮೂರು ದೇವತೆಗಳನ್ನೂ ಒಳಹೊಕ್ಕು ತನ್ನಲ್ಲಿ ಬೀಜರೂಪವಾಗಿದ್ದ ಅವ್ಯಾಕೃತನಾಮರೂಪಗಳನ್ನು – ಅಂದರೆ ನೀರಿನಲ್ಲಿ ಅವ್ಯಕ್ತವಾಗಿರುವ ನೊರೆಯಂತೆ ಸೃಷ್ಟಿಯ ಮೊದಲು ಆತ್ಮರೂಪದಲ್ಲಿಯೇ ಅವ್ಯಕ್ತವಾಗಿದ್ದ ನಾಮರೂಪಗಳನ್ನು – ವ್ಯಾಕರಣಮಾಡುತ್ತೇನೆ ಎಂದು ನೋಡಿ ಆ ಮೂರು ದೇವತೆಗಳಲ್ಲಿ ಒಂದೊಂದನ್ನೂ ತ್ರಿವೃತತ್ರಿವೃತವನ್ನಾಗಿ ಮಾಡುತ್ತೇನೆ ಎಂದು ಆಲೋಚಿಸಿ ಪ್ರವೇಶಮಾಡಿತು. ಇಲ್ಲಿ ತ್ರಿವೃತ್ಕರಣ ಎಂದರೆ ಮೂರು ಮೂರರ ಕಟ್ಟಾಗಿರುವಂತೆ ಮಾಡುವುದು. ಒಂದೊಂದರಲ್ಲಿಯೂ ಮೂರೂ ಸೇರಿರುವಂತೆ ಮಾಡುವುದು. ಒಂದು ತ್ರಿವೃತ್ಕರಣದಲ್ಲಿ ಒಂದು ಪ್ರಾಧಾನ್ಯವಾಗಿದ್ದರೆ ಮಿಕ್ಕ ಎರಡು ಗುಣಭಾವದಲ್ಲಿರುತ್ತವೆ. ಅಂದರೆ: ಅರ್ಧ ತೇಜಸ್ಸು + ಕಾಲುಭಾಗ ಅಪ್ಪು + ಕಾಲುಭಾಗ ಅನ್ನ – ತೇಜಸ್ಸು ಹೆಚ್ಚಾಗಿದ್ದರೆ ಅಪ್ಪು ಮತ್ತು ಅನ್ನಗಳು ಕಮ್ಮಿಯಾಗಿರುತ್ತವೆ. ಇದು ತ್ರಿವೃತ್ಕೃತ ತೇಜಸ್ಸು. ಹಾಗೆಯೇ ಉಳಿದ ಎರಡನ್ನೂ ತಿಳಿಯಬೇಕು. ಅರ್ಧ ಅಪ್ಪು + ಕಾಲುಭಾಗ ತೇಜಸ್ಸು + ಕಾಲುಭಾಗ ಅನ್ನ – ಇದು ತ್ರಿವೃತ್ಕೃತ ಅಪ್ಪು. ಅರ್ಧ ಅನ್ನ + ಕಾಲುಭಾಗ ತೇಜಸ್ಸು + ಕಾಲುಭಾಗ ಅಪ್ಪು – ಇದು ತಿವೃತ್ಕೃತ ಅನ್ನ. ಹಾಗೆ ಮಾಡದೇ ಇದ್ದರೆ ಒಂದೇ ತ್ರಿವೃತ್ಕರಣವಾಗುತ್ತದೆಯೇ ಹೊರತು ಮೂರಾಗುವುದಿಲ್ಲ. ಮೂರು ಸಮಾನ ಪ್ರಮಾಣಗಳಾದ ಬೇರೆಬೇರೆ ಬಣ್ಣದ ಹುರಿಗಳಿಂದ ಮಾಡಿದ ಹಗ್ಗದಂತೆ ಆಗುತ್ತದೆ. ಅಂಥಹ ಹಗ್ಗವು ಇಂಥಹ ಬಣ್ಣದ ಹಗ್ಗವೆಂದು ಹೇಳಲಿಕ್ಕಾಗುವುದಿಲ್ಲ. ಒಂದೊಂದನ್ನೂ ಬೇರೆ ಬೇರೆಯಾಗಿ ತ್ರಿವೃತ್ಕರಣ ಮಾಡಿದಂತೆ ಆಗುವುದಿಲ್ಲ. ಹೀಗೆ ಒಂದೊಂದೂ ತ್ರಿವೃತ್ಕೃತವಾಗದೇ ಇದ್ದಿದ್ದರೆ ಇದು ತೇಜಸ್ಸು, ಇದು ಅಪ್ಪು, ಇದು ಅನ್ನ ಎಂದು ತೇಜೋಬನ್ನಗಳಿಗೆ ಒಂದೊಂದಕ್ಕೂ ಬೇರೆ ಬೇರೆ ಹೆಸರುಂಟಾಗುತ್ತಿರಲಿಲ್ಲ.
ಹೀಗೆಂದು ಆಲೋಚಿಸಿ ಆ ದೇವತೆಯು ಈ ಮೂರು ದೇವತೆಗಳನ್ನು ಮೇಲೆ ಹೇಳಿದ ಜೀವಾತ್ಮರೂಪದಿಂದ ಸೂರ್ಯಬಿಂಬದಂತೆ ಒಳಹೊಕ್ಕು, ಮೊದಲು ವಿರಾಟ್ಪುರುಷನ ದೇಹವನ್ನು ಮತ್ತು ನಂತರ ದೇವತೆಗಳೇ ಮೊದಲಾದವರ ದೇಹಗಳನ್ನು, ಅಂದರೆ ಎಲ್ಲ ಶರೀರಗಳನ್ನು, ಒಳಹೊಕ್ಕು, ತಾನು ಸಂಕಲ್ಪಿಸಿದಂತೆಯೇ ಇದು ಈ ಹೆಸರಿನದು, ಇದು ಈ ರೂಪದ್ದು ಎಂದು ನಾಮರೂಪಗಳನ್ನು ವ್ಯಾಕರಣಮಾಡಿತು.
ಇತಿ ತೃತೀಯಃ ಖಂಡಃ ।।