ಛಾಂದೋಗ್ಯೋಪನಿಷತ್: ಷಷ್ಠೋಽಧ್ಯಾಯಃ ದ್ವಿತೀಯಃ ಖಂಡಃ

 

ಸದೇವ ಸೋಮ್ಯೇದಮಗ್ರ ಆಸೀದೇಕಮೇವಾದ್ವಿತೀಯಮ್ ತದ್ಧೈಕ ಆಹುರಸದೇವೇದಮಗ್ರ ಆಸೀದೇಕಮೇವಾದ್ವಿತೀಯಂ ತಸ್ಮಾದಸತಃ ಸಜ್ಜಾಯತ ।। 1 ।। ಕುತಸ್ತು ಖಲು ಸೋಮ್ಯೈವಗ್ಂ ಸ್ಯಾದಿತಿ ಹೋವಾಚ ಕಥಮಸತಃ ಸಜ್ಜಾಯೇತೇತಿ ಸತ್ತ್ವೇವ ಸೋಮ್ಯೇದಮಗ್ರ ಆಸೀದೇಕಮೇವಾದ್ವಿತೀಯಮ್ ।। 2 ।।

“ಮಗೂ! ಮೊಟ್ಟಮೊದಲು “ಸತ್” ಎಂಬ ಒಂದೇ ಒಂದು ಇತ್ತು. ಎರಡನೆಯದೇನೂ ಆಗ ಇರಲಿಲ್ಲ. ಮೊಟ್ಟಮೊದಲು “ಅಸತ್” ಎನ್ನುವುದೊಂದೇ ಇತ್ತು, ಎರಡನೆಯದು ಇರಲಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಸೋಮ್ಯ! ಇದು ಹೇಗೆ ಆದೀತು? ಅಸತ್ತಿನಿಂದ ಸತ್ತು ಹೇಗೆ ಉಂಟಾದೀತು? ಆದ್ದರಿಂದ ಸತ್ ಎನ್ನುವುದೊಂದೇ ಮೊಟ್ಟಮೊದಲು ಇತ್ತು. ಎರಡನೆಯದು ಯಾವುದೂ ಇರಲಿಲ್ಲ.

ಸತ್ತು ಎಂದರೆ ಕೇವಲ ಇರವಾಗಿರುವ ವಸ್ತು. ಸೂಕ್ಷ್ಮವೂ, ನಿರ್ವಿಶೇಷವೂ, ಸರ್ವಗತವೂ, ಒಂದೇ ಒಂದೂ, ಮತ್ತೊಂದರ ಅಂಟಿಲ್ಲದ್ದೂ, ಯಾವ ಅವಯವಗಳಿಲ್ಲದ್ದೂ ಆದ ಚೈತನ್ಯವು. ಸರ್ವವೇದಾಂತಗಳೂ ತಿಳಿಸಿಕೊಡುವ ಆತ್ಮವಸ್ತುವೇ ಇದು. ನಾಮರೂಪಕರ್ಮಗಳುಳ್ಳದ್ದಾಗಿರುವ, ವಿಕಾರ ರೂಪವಾಗಿ ಕಾಣುತ್ತಿರುವ ಈ ಜಗತ್ತು, ಅದು ಹುಟ್ಟುವ ಮೊದಲು, ಸತ್ತೇ ಆಗಿತ್ತು. ಮೊದಲು ಸತ್ತೇ ಆಗಿದ್ದ ಈ ಜಗತ್ತು ಈಗ ಸತ್ತಲ್ಲವೇನು? “ಮೊದಲು” ಎಂಬ ವಿಶೇಷಣವನ್ನೇಕೆ ಹೇಳಿದೆ? ಹಾಗೇನಲ್ಲ. ಈಗಲೂ ಈ ಜಗತ್ತು ಸತ್ತೇ. ಅದರೆ ಈಗ ಇದು ಶಬ್ದ-ಬುದ್ಧಿಗಳಿಗೆ ವಿಷಯವಾಗಿರುವ ನಾಮ-ರೂಪಗಳೆಂಬ ವಿಶೇಷಣಗಳಿಂದ ಕೂಡಿದೆ. ಇದು ಉತ್ಪತ್ತಿಯಾಗುವ ಮೊದಲು ಇದು, ಶಬ್ದ-ಬುದ್ಧಿಗಳಿಗೆ ನಿಲುಕದ, ಸತ್ತೇ ಆಗಿತ್ತು. ನಾಮ-ರೂಪಗಳಿಲ್ಲದೇ ಗ್ರಹಿಸಲು ಶಕ್ಯವಿಲ್ಲದ್ದಾಗಿತ್ತು. ಸುಷುಪ್ತಿಕಾಲದಲ್ಲಿ ಹೇಗೋ ಹಾಗೆಯೇ ಇದು. ಸುಷುಪ್ತಿಯಿಂದ ಎಚ್ಚೆತ್ತವನು “ತನಿನಿದ್ರೆಯಲ್ಲಿ ವಸ್ತುವು ಸನ್ಮಾತ್ರವಾಗಿಯೇ ಆಗಿತ್ತು” ಎಂದು ಹೇಗೆ ಇರವನ್ನು ಮಾತ್ರ ನಿಶ್ಚಯಿಸುತ್ತಾನೋ ಹಾಗೆ ಜಗತ್ತಿನ ಉತ್ಪತ್ತಿಯ ಮೊದಲೂ ವಸ್ತುವು ಇತ್ತು ಎಂದೇ ಗ್ರಹಿಸಬೇಕು. ಗಡಿಗೆಯನ್ನು ಮಾಡಬೇಕೆಂದು ಬಯಸಿದ ಕುಂಬಾರನು ಬೆಳಿಗ್ಗೆ ಮಣ್ಣನ್ನು ಹರಡಿದ್ದುದನ್ನು ನೋಡಿದವನು ಪರವೂರಿಗೆ ಹೋಗಿ ಹಿಂದಿರುಗಿದಾಗ ಮಣ್ಣಿನ ಬದಲಾಗಿ ಅಲ್ಲಿ ಗಡಿಗೆಗಳಿರುವುದನ್ನು ಕಂಡು “ಇವೆಲ್ಲಾ ಬೆಳಿಗ್ಗೆ ಮಣ್ಣೇ ಆಗಿದ್ದವು” ಎಂದು ಹೇಗೆ ಹೇಳುತ್ತಾನೋ ಹಾಗೆಯೇ ಇಲ್ಲಿ ಕೂಡ “ಇದು ಮೊದಲು ಸತ್ತೇ ಆಗಿತ್ತು” ಎಂದು ಹೇಳಿದೆ.

ತನ್ನ ಕಾರ್ಯದೊಳಗೆ ಸೇರಿರುವ ಮತ್ತೊಂದು ವಸ್ತುವು ಇಲ್ಲವಾದ್ದರಿಂದ “ಅದು ಒಂದೇ” ಆಗಿತ್ತು ಎಂದು ಇಲ್ಲಿ ಹೇಳಿದೆ. ಎರಡನೆಯದಿಲ್ಲದ ಅಂದರೆ ಮಣ್ಣನ್ನು ಗಡಿಗೆಯನ್ನಾಗಿ ಮಾಡಲು ಮಣ್ಣಿಗಿಂತ ಬೇರೆಯಾದ ಕುಂಬಾರನಿದ್ದಾನಲ್ಲ ಎಂದು ಜಗತ್ತಿಗೆ ಬೇರೊಂದು ನಿಮಿತ್ತ ಕಾರಣವಿರುತ್ತದೆಯೋ ಎಂದರೆ ಅದು ಇಲ್ಲ ಎಂದು “ಅದ್ವಿತೀಯ” ಶಬ್ದದಿಂದ ಸ್ಪಷ್ಟೀಕರಿಸಿದೆ.

ಈ ಜಗತ್ತು, ಹುಟ್ಟುವ ಮೊದಲು, ತನಗೆರಡನೆಯದಿಲ್ಲದ ಒಂದೇ ಆದ ಅಸತ್ತೇ – ಅಂದರೆ ಸತ್ತಿನ ಅಭಾವಮಾತ್ರ – ಆಗಿತ್ತು; ಹುಟ್ಟುವ ಮುಂಚೆ ಸತ್ತಿನ ಅಭಾವಮಾತ್ರವೇ ತತ್ತ್ವವಾಗಿತ್ತು ಎಂದು ಬೌದ್ಧರು ಕಲ್ಪಿಸುತ್ತಾರೆ.

ಮೊಳಕೆಯು ಹುಟ್ಟಿದ್ದಾಗ ಬೀಜವು ನಷ್ಟವಾಗುವುದಿಲ್ಲ. ಬೀಜದ ಆಕಾರದಿಂದೊಡಗೂಡಿದ ಬೀಜದ ಅವಯವಗಳು ಮೊಳಕೆಯಲ್ಲಿಯೂ ಇರುತ್ತವೆ. ಸತ್ತಿನಿಂದಲೇ ಸತ್ತು ಉಂಟಾಗುತ್ತದೆ. ಅಸತ್ತಿನಿಂದ ಸತ್ತು ಉಂಟಾಗುತ್ತದೆ ಎನ್ನುವುದಕ್ಕೆ ಯಾವ ದೃಷ್ಟಾಂತವೂ ಇಲ್ಲ. ಮಣ್ಣುಮುದ್ದೆಯಿಂದ ಗಡಿಗೆಯು ಉಂಟಾಗುವುದು ಕಂಡುಬರುತ್ತದೆ. ಏಕೆಂದರೆ ಅದು ಇದ್ದರೆ ಗಡಿಗೆ ಇರುತ್ತದೆ. ಅದು ಇಲ್ಲದಿದ್ದರೆ ಗಡಿಗೆಯೂ ಇರುವುದಿಲ್ಲ. ಅಭಾವದಿಂದಲೇ ಗಡಿಗೆಯು ಉಂಟಾಗುವುದಾದರೆ, ಗಡಿಗೆ ಬೇಕಾದವನು ಅದಕ್ಕಾಗಿ ಮಣ್ಣಿನ ಮುದ್ದೆಯನ್ನು ತೆಗೆದುಕೊಳ್ಳಬೇಕಾಗುತ್ತಿರಲಿಲ್ಲ. ಅಲ್ಲದೇ ಇಲ್ಲವೆಂಬ ಶಬ್ದವೂ ಬುದ್ಧಿಯೂ ಗಡಿಗೆಯಲ್ಲಿ ಇರಬೇಕಾಗಿತ್ತು. ಆದರೆ ಹಾಗಿಲ್ಲ. ಆದ್ದರಿಂದ ಅಸತ್ತಿನಿಂದ ಸತ್ತು ಉತ್ಪನ್ನವಾಗುವುದಿಲ್ಲ.

ಆದರೆ ಸತ್ತಿನಿಂದ ಸತ್ತು ಉಂಟಾಗುತ್ತದೆ ಎನ್ನುವುದಕ್ಕೂ ದೃಷ್ಟಾಂತವಿಲ್ಲ. ಏಕೆಂದರೆ ಒಂದು ಗಡಿಗೆಯಿಂದ ಮತ್ತೊಂದು ಗಡಿಗೆಯು ಹುಟ್ಟುವುದಿಲ್ಲ. ಇದು ನಿಜ. ಸತ್ತಿನಿಂದ ಮತ್ತೊಂದು ಸತ್ತು ಹುಟ್ಟುವುದಿಲ್ಲ. ಸತ್ತೇ ಮತ್ತೊಂದು ಆಕಾರದಿಂದ ತೋರಿಕೊಳ್ಳುತ್ತದೆ. ಹಾವೇ ಹೇಗೆ ಮಂಡಲವನ್ನು ಹಾಕಿಕೊಳ್ಳುವುದೋ, ಮಣ್ಣೇ ಹೇಗೆ ಹುಡಿ, ಮುದ್ದೆ, ಗಡಿಗೆ, ಹೋಳುಗಳು – ಮೊದಲಾದ ಪ್ರಕಾರಗಳಲ್ಲಿ ತೋರಿಕೊಳ್ಳುವುದೋ ಹಾಗೆ.

ತದೈಕ್ಷತ ಬಹು ಸ್ಯಾಂ ಪ್ರಜಾಯೇಯೇತಿ ತತ್ತೇಜೋಽಸೃಜತ ತತ್ತೇಜ ಐಕ್ಷತ ಬಹು ಸ್ಯಾಂ ಪ್ರಜಾಯೇಯೇತಿ ತದಪೋಽಸೃಜತ ತಸ್ಮಾದ್ಯತ್ರ ಕ್ವಚ ಶೋಚತಿ ಸ್ವೇದತೇ ವಾ ಪುರುಷಸ್ತೇಜಸ ಏವ ತದಧ್ಯಾಪೋ ಜಾಯಂತೇ ।। 3 ।।

ಆ ಸತ್ “ನಾನು ಬಹಳವಾಗಬೇಕು: ಎಂದು ಆಲೋಚಿಸಿ ನೋಡಿತು. ಈ ಸಂಕಲ್ಪದಿಂದ ಅದು ತನ್ನಿಂದಲೇ ತೇಜಸ್ಸನ್ನು ಹುಟ್ಟಿಸಿತು. ನಂತರ ಆ ತೇಜಸ್ಸು “ನಾನು ಬಹಳವಾಗಬೇಕು” ಎಂದು ಆಲೋಚಿಸಿ ನೋಡಿತು. ತನ್ನಿಂದ ಅದು ಜಲವನ್ನು ಸೃಷ್ಟಿಸಿತು. ಆದ್ದರಿಂದ ಪುರುಷನು ಎಲ್ಲೆಲ್ಲಿ ಶೋಕಿಸುತ್ತಾನೋ ಅಥವಾ ಬೆವರುತ್ತಾನೋ ಅಲ್ಲಲ್ಲಿ ತೇಜಸ್ಸಿನಿಂದ ಜಲವು ಉತ್ಪನ್ನವಾಗುತ್ತದೆ.

ಆ ಸತ್ತು ನೋಡಿತು. ಆದ್ದರಿಂದಲೇ ಸಾಂಖ್ಯರು ಕಲ್ಪಿಸಿರುವ ಪ್ರಧಾನವು ಈ ಜಗತ್ತಿಗೆ ಕಾರಣವಲ್ಲ. ಏಕೆಂದರೆ ಅವರ ಪ್ರಕಾರ ಪ್ರಧಾನವು ಅಚೇತನವು. ಆದರೆ ಈ ಸತ್ತು ಚೇತನವು. ಏಕೆಂದರೆ ಇದು ಯೋಚಿಸಿ ನೋಡುಬಲ್ಲದ್ದಾಗಿದೆ. ಅದು ಹೇಗೆ ಆಲೋಚಿಸಿ ನೋಡಿತು ಎಂದರೆ ನಾನು ಅನೇಕವಾಗುತ್ತೇನೆ. ಪ್ರಜಾಯೇಯ – ಪ್ರಕರ್ಷದಿಂದ ಹುಟ್ಟುತ್ತೇನೆ. ಮಣ್ಣು ಹೇಗೆ ಘಟವೇ ಮೊದಲಾದ ಆಕಾರದಿಂದ ಹುಟ್ಟುವುದೋ, ಅಥವಾ ಹೇಗೆ ಹಗ್ಗವೇ ಮೊದಲಾದವುಗಳು ಬುದ್ಧಿಪರಿಕಲ್ಪಿತವಾದ ಹಾವೇ ಮೊದಲಾದವುಗಳ ಆಕಾರವನ್ನು ಪಡೆಯುವುದೋ, ಹಾಗೆ.

ಹಾಗಾದರೆ, ನಮಗೆ ಕಂಡುಬರುವ ಎಲ್ಲವೂ ಹಗ್ಗವು ಹಾವಾಗಿ ತೋರುವಂತೆ ಸುಳ್ಳೆಂದೇ ಆಯಿತಲ್ಲ! ಹಾಗಲ್ಲ. ಏಕೆಂದರೆ ಸತ್ತೇ ದ್ವೈತವೆಂಬ ವಿಶೇಷವಾಗಿ ತಪ್ಪಾಗಿ ತಿಳಿದುಬರುವುದರಿಂದ ಯಾವುದೂ ಎಂದಿಗೂ ಅಸತ್ತಲ್ಲ ಎಂದು ಇಲ್ಲಿ ಹೇಳಿದೆ.

ತೈತ್ತಿರೀಯೋಪನಿಷತ್ತಿನಲ್ಲಿ “ತಸ್ಮಾತ್ವಾ ಏತಸ್ಮಾದಾತ್ಮನ ಆಕಾಶಃ ಸಂಭೂತಃ – ಈ ಆತ್ಮನಿಂದ ಆಕಾಶವು ಉಂಟಾಯಿತು” (ತೈತ್ತಿರೀಯೋಪನಿಷತ್ತು 2-1) ಎಂದು ಹೇಳಿ ಆಕಾಶದಿಂದ ವಾಯು, ಮತ್ತು ವಾಯುವಿನಿಂದ ತೇಜಸ್ಸು ಎಂದು ಹೇಳಿದೆಯಲ್ಲ? ಇಲ್ಲಿ ಹೇಗೆ ಮೊದಲು ತೇಜಸ್ಸೇ ಸೃಷ್ಟಿಯಾಯಿತು ಎಂದು ಹೇಳಿದೆ? ಇಲ್ಲಿ ಆಕಾಶ-ವಾಯುಗಳ ನಂತರ ತೇಜಸ್ಸಿನ ಸೃಷ್ಟಿಯಾಯಿತು ಎಂದೇ ಕಲ್ಪಿಸಿಕೊಳ್ಳಬೇಕು. ಬಹುಷಃ ಇಲ್ಲಿ ಸೃಷ್ಟಿಕ್ರಮವು ಮುಖ್ಯವಲ್ಲ. ಇವೆಲ್ಲವೂ ಸತ್ತಿನ ಕಾರ್ಯವಾಗಿರುವುದರಿಂದ ಸತ್ತು ಅದ್ವಿತೀಯವಾದುದು ಎನ್ನುವುದೇ ಮುಖ್ಯವು. ಈ ಅಧ್ಯಾಯಲ್ಲಿ ಮುಂದೆ ತ್ರಿವೃತ್ಕರಣವನ್ನು ಹೇಳಬೇಕೆಂದಿರುವುದರಿಂದ ತೇಜಸ್ಸು ಮತ್ತು ಅಪ್ಪುವಿನ ಸೃಷ್ಟಿಯ ಕುರಿತಾಗಿ ಮಾತ್ರ ಹೇಳಿದೆ ಎಂದೂ ತಿಳಿದುಕೊಳ್ಳಬಹುದು.

ತೇಜಸ್ಸು ಅಂದರೆ ಸುಡುವುದು, ಬೇಯಿಸುವುದು, ಬೆಳಗುವುದು ಮತ್ತು ಕೆಂಪಾಗಿರುವುದು. ಸತ್ತಿನಿಂದಾದ ತೇಜಸ್ಸು ತಾನು ಬಹುವಾಗಬೇಕು, ಹುಟ್ಟಿಸಬೇಕು ಎಂದು ಆಲೋಚಿಸಿ ನೋಡಿ ಆಪ್ಪನ್ನು ಹುಟ್ಟಿಸಿತು. ಆಪ್ಪು ಎಂದರೆ ನೀರಾಗಿ ಜಿಗಟಾಗಿ ಹರಿಯುವ ಶುಭ್ರವಾದ ವಸ್ತು. ಅಪ್ಪು ಹೀಗೆ ತೇಜಸ್ಸಿನ ಕಾರ್ಯವಾದ್ದರಿಂದ ಎಲ್ಲೆಲ್ಲಿ ಯಾವ ಯಾವ ದೇಶದಲ್ಲಿ ಅಥವಾ ಕಾಲದಲ್ಲಿ ಮನುಷ್ಯನು ಶೋಕಿಸುತ್ತಾನೋ ಸಂತಪ್ತನಾಗುತ್ತಾನೋ ಅಥವಾ ಬೆವರುತ್ತಾನೋ ಆಗ ತೇಜಸ್ಸಿನಿಂದಲೇ ಅಪ್ಪು ಉಂಟಾಗುತ್ತದೆ.

ತಾ ಆಪ ಐಕ್ಷಂತ ಬಹ್ವ್ಯಃ ಸ್ಯಾಮ ಪ್ರಜಾಯೇಮಹೀತಿ ತಾ ಅನ್ನಮಸೃಜಂತ ತಸ್ಮಾದ್ಯತ್ರ ಕ್ವ ಚ ವರ್ಷತಿ ತದೇವ ಭೂಯಿಷ್ಠಮನ್ನಂ ಭವತ್ಯದ್ಭ್ಯ ಏವ ತದಧ್ಯನ್ನಾದ್ಯಂ ಜಾಯತೇ ।। 4 ।।

ಆ ತೇಜೋ-ಆಪಗಳು “ನಾವು ಬಹಳ ಆಗಬೇಕು” ಎಂದು ಆಲೋಚಿಸಿ ನೋಡಿದವು. ತಮ್ಮಿಂದ ಅನ್ನವನ್ನು ಹುಟ್ಟಿಸಿದವು. ಆದ್ದರಿಂದ ಎಲ್ಲೆಲ್ಲಿ ಮಳೆಯಾಗುತ್ತದೆಯೋ ಆವಾಗ ಮತ್ತು ಅಲ್ಲಿ ಅನ್ನವು ಅಧಿಕವಾಗುತ್ತದೆ. ಆಪಗಳಿಂದಲೇ ತಿನ್ನಲು ಯೋಗ್ಯವಾದ ಆಹಾರವು ಹುಟ್ಟುತ್ತದೆ.

ಆ ತೇಜೋ-ಅಪ್ಪುಗಳು ಆಲೋಚಿಸಿ ನೋಡಿದವು ಎಂದರೆ ಹಿಂದಿನಂತೆ ಇಲ್ಲಿಯೂ ಕೂಡ ತೇಜೋ-ಅಪ್ಪಿನ ಆಕಾರದ ಸತ್ತೇ ನೋಡಿತು ಎಂದರ್ಥ. ಅನ್ನವು ಪಾರ್ಥಿವವು. ಅನ್ನವು ಅಪ್ಪಿನ ಕಾರ್ಯ. ಆದ್ದರಿಂದ ಯಾವ ಯಾವ ದೇಶದಲ್ಲಿ ಮಳೆಯಾಗುತ್ತದೆಯೋ ಅಲ್ಲಿಯೇ ಹೆಚ್ಚಿನ ಅನ್ನವುಂಟಾಗುತ್ತದೆ. ಆದ್ದರಿಂದ ನೀರಿನಿಂದಲೇ ಅನ್ನಾದಿಗಳು – ಗೋಧಿ, ಜವೆ ಮೊದಲಾದವುಗಳು – ಉಂಟಾಗುತ್ತವೆ. ಅನ್ನವೆನ್ನುವುದು ಭಾರವಾಗಿಯೂ, ಗಟ್ಟಿಯಾಗಿಯೂ, ಧಾರಕವಾಗಿಯೂ, ಕಪ್ಪುಬಣ್ಣದ್ದಾಗಿಯೂ ಇರುವ ವಸ್ತು.

ಈ ಖಂಡದಲ್ಲಿ ಬಂದಿರುವ ಈಕ್ಷತೇ – ಆಲೋಚಿಸಿ ನೋಡುವುದು ಎಂಬ ಶಬ್ದವನ್ನು ಏಕೆ ಬಳಸಿದ್ದಾರೆ? ಸತ್ತು ಮಣ್ಣಿನಂತೆ ಕಾರಣವಾಗಿರುವುದರಿಂದ ಅದೂ ಅಚೇತನವೇ ಎಂದು ಕಲ್ಪಿಸಬಹುದಲ್ಲಾ? ಆದ್ದರಿಂದ ಅಚೇತನವಾದ ವಸ್ತುವು ಹೇಗೆ ಯೋಚಿಸಿ ನೋಡುತ್ತದೆ? ಹಾಗಲ್ಲ. “ತತ್ಸತ್ಯಂ ತದಾತ್ಮಾ – ಅದೇ ಸತ್ಯವು. ಅದೇ ಆತ್ಮವು” (6-14-3) ಎಂದು ಹೇಳಿರುವಂತೆ ಸತ್ತೇ ಆತ್ಮವೆಂದೂ ಇದೆ. ಆದ್ದರಿಂದ ಅದು ಯೋಚಿಸಿ ನೋಡಬಲ್ಲ ಚೇತನವೇ. 

ಇತಿ  ದ್ವಿತೀಯಃ ಖಂಡಃ ।।

Leave a Reply

Your email address will not be published. Required fields are marked *