ತೈತ್ತಿರೀಯೋಪನಿಷತ್ ದ್ವಿತೀಯಾಬ್ರಹ್ಮಾನಂದವಲ್ಲೀ ಚತುರ್ಥೋಽನುವಾಕಃ

 

[ಆಧಾರಗ್ರಂಥಗಳು: (1) ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು, ಶ್ರೀಶಾಂಕರಭಾಷ್ಯಸಮೇತ ತೈತ್ತಿರೀಯೋಪನಿಷತ್ತು, ಅಧ್ಯಾತ್ಮಪ್ರಕಾಶಕಾರ್ಯಾಲಯ, ಹೊಳೆನರಸೀಪುರ, 1998; (2) ಸ್ವಾಮಿ ಸೋಮನಾಥಾನಂದ, ಉಪನಿಷತ್ ಭಾವಧಾರೆ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು, 2021]

ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ಆನಂದಂ ಬ್ರಹ್ಮಣೋ ವಿದ್ವಾನ್ ನ ಬಿಭೇತಿ ಕದಾಚನೇತಿ ।। 1 ।। ತಸ್ಯೈಷ ಏವ ಶಾರೀರ ಆತ್ಮಾ ಯಃ ಪೂರ್ವಸ್ಯ ।। 2 ।। ತಸ್ಮಾದ್ವಾ ಏತಸ್ಮಾನ್ಮನೋಮಯಾತ್ ಅನ್ಯೋಽಂತರ ಆತ್ಮಾ ವಿಜ್ಞಾನಮಯಃ ತೇನೈಷ ಪೂರ್ಣಃ ।। 3 ।। ಸ ವಾ ಏಷ ಪುರುಷವಿಧ ಏವ ತಸ್ಯ ಪುರುಷವಿಧತಾಮ್ ಅನ್ವಯಂ ಪುರುಷವಿಧಃ ತಸ್ಯ ಶ್ರದ್ಧೈವ ಶಿರಃ ಋತಂ ದಕ್ಷಿಣಃ ಪಕ್ಷಃ ಸತ್ಯಮುತ್ತರಃ ಪಕ್ಷಃ ಯೋಗ ಆತ್ಮಾ ಮಹಃ ಪುಚ್ಛಂ ಪ್ರತಿಷ್ಠಾ ತದಪ್ಯೇಷ ಶ್ಲೋಕೋ ಭವತಿ ।। 4 ।। ಇತಿ ಚತುರ್ಥೋಽನುವಾಕಃ ।। 4 ।।

ಯಾವುದರಿಂದ ವಾಕ್ಕು ಮತ್ತು ಅದರೊಡನೆ ಮನಸ್ಸು ಅದನ್ನು ಮುಟ್ಟದೇ ಹಿಂದಿರುಗುತ್ತವೆಯೋ ಆ ಬ್ರಹ್ಮದ ಆನಂದವನ್ನು ಅರಿತುಕೊಂಡವನು ಎಂದಿಗೂ ಹೆದರುವುದಿಲ್ಲ. ತಸ್ಯೈಷ ಏವ ಶಾರೀರ ಆತ್ಮಾ - ಆ ಹಿಂದಿನವನಿಗೆ ಇವನೇ ಶಾರೀರನಾದ ಆತ್ಮನು. ಪ್ರಾಣಮಯನೆಂಬ ಶರೀರದಲ್ಲಿ ಇರುವುದರಿಂದ ಇವನು “ಶಾರೀರ” ಎಂದೆನಿಸಿಕೊಳ್ಳುತ್ತಾನೆ.

ಆ ಮನೋಮಯನಿಗಿಂತ ಇನ್ನೊಬ್ಬ ವಿಜ್ಞಾನಮಯನಾದ ಒಳಗಿನ ಆತ್ಮನಿದ್ದಾನೆ. ಅವನಿಂದ ಇವನು ತುಂಬಿದ್ದಾನೆ. ಮನೋಮಯನ ಒಳಗಿರುವವನು ವಿಜ್ಞಾನಮಯನು. ಮನೋಮಯನು ವೇದಾತ್ಮನು. ವೇದಾರ್ಥದ ವಿಷಯಗಲ್ಲಿ ಉಂಟಾಗುವ ನಿಶ್ಚಯರೂಪ ಬುದ್ಧಿಗೆ ವಿಜ್ಞಾನವೆಂದು ಹೆಸರು. ಆ ವಿಜ್ಞಾನವು ನಿಶ್ಚಯರೂಪವಾಗಿರುವುದರಿಂದ ಅಂತಃಕರಣದ ಧರ್ಮವಾಗಿರುತ್ತದೆ. ತನ್ಮಯನಾಗಿರುವ, ಅಂದರೆ, ಪ್ರಮಾಣಸ್ವರೂಪವಾದ ನಿಶ್ಚಯ-ವಿಜ್ಞಾನಗಳಿಂದ ಉಂಟಾಗಿರುವ ಆತ್ಮನು ವಿಜ್ಞಾನಮಯನು. ಏಕೆಂದರೆ ಪ್ರಮಾಣ ವಿಜ್ಞಾನವನ್ನಿಟ್ಟುಕೊಂಡೇ ಯಜ್ಞವೇ ಮೊದಲಾದ ಕರ್ಮಗಳನ್ನು ಮಾಡುತ್ತಾರೆ.

ಅವನು ಪುರುಷವಿಧನಾಗಿಯೇ ಇದ್ದಾನೆ. ಅವನ ಪುರುಷವಿಧತ್ವವನ್ನು ಅನುಸರಿಸಿ ಅವನಿಗೆ ಶ್ರದ್ಧೆಯೇ ತಲೆ. ಋತವು ಬಲತೋಳು. ಸತ್ಯವು ಎಡತೋಳು. ಯೋಗವು ಆತ್ಮ. ಮಹಃ ಎನ್ನುವುದು ಪುಚ್ಛವು, ಪ್ರತಿಷ್ಠೆಯು.

ವೇದಾರ್ಥದ ನಿಶ್ಚಯವಾದ ವಿಜ್ಞಾನವುಂಟಾಗಲು ಮೊದಲು ಬೇಕಾದುದು ಶ್ರದ್ಧೆ. ಅದು ವಿಜ್ಞಾನಮಯನ ಶಿರ. ಋತವೆಂದರೆ ಶಾಸ್ತ್ರದಲ್ಲಿ ಹೇಳಿರುವಂತೆ ಮಾಡಬೇಕೆಂಬ ಬುದ್ಧಿ. ಸತ್ಯ ಎಂದರೆ ಮಾತಿನಿಂದಲೂ ಶರೀರದಿಂದಲೂ ಮಾಡತಕ್ಕದ್ದು. ಯೋಗ ಎಂದರೆ ಕೂಡಿಸುವುದು. ಮನಸ್ಸನ್ನು ಸಮಾಧಾನದಲ್ಲಿಟ್ಟುಕೊಳ್ಳುವುದು. ಅದು ಆತ್ಮನಂತೆಯೇ ಇರುವುದರಿಂದ ಆತ್ಮನೆನಿಸಿಕೊಳ್ಳುತ್ತದೆ. ಮನಸ್ಸನ್ನು ಕೂಡಿಸಿಕೊಂಡು ಆತ್ಮವಂತನಾಗಿರುವ ಸಮಾಧಾನವಂತನಿಗೆ ಶ್ರದ್ಧಾದಿಗಳು ಅಂಗಗಳಂತೆ, ಇದ್ದುದನ್ನು ಇದ್ದಹಾಗೆಯೇ ಅರಿಯುವುದಕ್ಕೆ ಶಕ್ತವಾಗುತ್ತವೆ. ಆದ್ದರಿಂದ ಸಮಾಧಾನರೂಪವಾದ ಯೋಗವು ವಿಜ್ಞಾನಮಯನ ಆತ್ಮನು. ಮಹಃ ಎಂದರೆ ಮೊದಲು ಹುಟ್ಟಿದ ಮಹತ್ತತ್ತ್ವವು. ಈ ಮಹತ್ತು ವಿಜ್ಞಾನಮಯನ ಪುಚ್ಛವು, ಪ್ರತಿಷ್ಠೆಯು. ಏಕೆಂದರೆ ಮಹತ್ತು ವಿಜ್ಞಾನಕ್ಕೆ ಕಾರಣವಾಗಿದೆ. ಬುದ್ಧಿಯ ಎಲ್ಲಾ ವಿಜ್ಞಾನಗಳಿಗೂ ಮಹತ್ತತ್ತ್ವವು ಕಾರಣವಾಗಿರುತ್ತದೆ. ಆದ್ದರಿಂದ ಆ ಮಹತ್ತು ವಿಜ್ಞಾನಮಯನೆಂಬ ಆತ್ಮನಿಗೆ ಪ್ರತಿಷ್ಠೆಯು. ಅದೇ ವಿಷಯದಲ್ಲಿ ಈ ಶ್ಲೋಕವಿದೆ.

Leave a Reply

Your email address will not be published. Required fields are marked *