ತೈತ್ತಿರೀಯೋಪನಿಷತ್ ದ್ವಿತೀಯಾಬ್ರಹ್ಮಾನಂದವಲ್ಲೀ ತೃತೀಯೋಽನುವಾಕಃ
[ಆಧಾರಗ್ರಂಥಗಳು: (1) ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು, ಶ್ರೀಶಾಂಕರಭಾಷ್ಯಸಮೇತ ತೈತ್ತಿರೀಯೋಪನಿಷತ್ತು, ಅಧ್ಯಾತ್ಮಪ್ರಕಾಶಕಾರ್ಯಾಲಯ, ಹೊಳೆನರಸೀಪುರ, 1998; (2) ಸ್ವಾಮಿ ಸೋಮನಾಥಾನಂದ, ಉಪನಿಷತ್ ಭಾವಧಾರೆ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು, 2021]
ಪ್ರಾಣಂ ದೇವಾ ಅನು ಪ್ರಾಣಂತಿ । ಮನುಷ್ಯಾಃ ಪಶವಶ್ಚ ಯೇ । ಪ್ರಾಣೋ ಹಿ ಭೂತಾನಾಮಾಯುಃ । ತಸ್ಮಾತ್ ಸರ್ವಾಯುಷಮುಚ್ಯತೇ । ಸರ್ವಮೇವ ತ ಆಯುರ್ಯಂತಿ । ಯೇ ಪ್ರಾಣಂ ಬ್ರಹ್ಮೋಪಾಸತೇ । ಪ್ರಾಣೋ ಹಿ ಭೂತಾನಾಮಾಯುಃ । ತಸ್ಮಾತ್ ಸರ್ವಾಯುಷಮುಚ್ಯತ ಇತಿ ।। 1 ।।
ಪ್ರಾಣವನ್ನು ಅನುಸರಿಸಿ ದೇವತೆಗಳು ಜೀವಿಸಿರುತ್ತಾರೆ. ಮನುಷ್ಯರೂ ಮತ್ತು ಪಶುಗಳೂ ಕೂಡ ಹಾಗೆಯೇ ಜೀವಿಸಿರುತ್ತಾರೆ. ಪ್ರಾಣಿಗಳಿಗೆ ಪ್ರಾಣವೇ ಆಯಸ್ಸು. ಆದ್ದರಿಂದಲೇ ಇದು ಸರ್ವಾಯುಷ ಎನಿಸಿಕೊಳ್ಳುತ್ತದೆ. ಪ್ರಾಣವನ್ನು ಬ್ರಹ್ಮವೆಂದು ಉಪಾಸನೆ ಮಾಡುವವರು ಅವರು ಸಂಪೂರ್ಣ ಆಯುಸ್ಸನ್ನು ಪಡೆಯುತ್ತಾರೆ. ಪ್ರಾಣನೇ ಭೂತಗಳಿಗೆ ಆಯುಸ್ಸು. ಆದ್ದರಿಂದ ಸರ್ವಾಯುಷ ಎನಿಸಿಕೊಂಡಿದೆ.
ಪ್ರಾಣಂ ದೇವಾ ಅನು ಪ್ರಾಣಂತಿ – ದೇವತೆಗಳು, ಅಂದರೆ ಅಗ್ನಿ ಮೊದಲಾದವರು, ಪ್ರಾಣ ಎಂದರೆ ಪ್ರಾಣನ ಶಕ್ತಿಯಿಂದ ಕೂಡಿರುವ ವಾಯ್ವಾತ್ಮನನ್ನೇ ಅನುಸರಿಸಿ ಅವನ ಸ್ವರೂಪವನ್ನೇ ಹೊಂದಿದವರಾಗಿ ಜೀವಿಸುತ್ತಾರೆ. ಪ್ರಾಣನ ಎಂಬ ಕ್ರಿಯೆಯನ್ನು ಮಾಡಿ ಅದರಿಂದ ಕ್ರಿಯಾವಂತರಾಗಿರುತ್ತಾರೆ[1]. ಹಾಗೆಯೇ ಮನುಷ್ಯರೂ ಮತ್ತು ಪಶುಗಳೆಲ್ಲವೂ ಪ್ರಾಣನ ಕರ್ಮದಿಂದಲೇ ವ್ಯಾಪಾರವಂತರಾಗಿರುತ್ತವೆ.
ಹೀಗಿರುವುದರಿಂದಲೇ ಪ್ರಾಣಿಗಳು ಅಳತೆಯಿರುವ, ಆಕಾರದ ಕಟ್ಟಿರುವ, ಬರಿಯ ಅನ್ನಮಯದಿಂದಲೇ ಆತ್ಮವಂತರಾಗಿಲ್ಲ. ಆ ಅನ್ನಮಯನ ಒಳಗಿರುವ, ಎಲ್ಲರಿಗೂ ಸಾಧಾರಣನಾಗಿ ಎಲ್ಲಾ ಶರೀರಗಳನ್ನೂ ವ್ಯಾಪಿಸಿಕೊಂಡಿರುವ ಪ್ರಾಣಮಯನಿಂದಲೂ ಆತ್ಮವಂತರಾಗಿರುತ್ತಾರೆ. ಇದರಂತೆ ಹಿಂದು ಹಿಂದಿನ ಆತ್ಮನನ್ನು ವ್ಯಾಪಿಸಿಕೊಂಡಿರುವ ಮುಂದು ಮುಂದಿನ, ಸೂಕ್ಷ್ಮವಾಗಿರುವ ಮನೋಮಯನೇ ಮೊದಲಾಗಿ ಆನಂದಮಯದ ವರೆಗಿನ ಆಕಾಶಾದಿ ಭೂತಗಳಿಂದ ಆಗಿರುವ ಅವಿದ್ಯಾಕಲ್ಪಿತವಾದ ಆತ್ಮರುಗಳಿಂದ ಪ್ರಾಣಿಗಳೆಲ್ಲವೂ ಆತ್ಮವಂತರಾಗಿವೆ. ಹಾಗೂ ಸ್ವಾಭಾವಿಕವಾಗಿರುವ, ಆಕಾಶವೇ ಮೊದಲಾದವುಗಳಿಗೆ ಕಾರಣವಾಗಿರುವ, ನಿತ್ಯನಾದ, ಯಾವ ವಿಕಾರವೂ ಇಲ್ಲದ, ಸರ್ವಗತನಾಗಿರುವ, ಐದು ಕೋಶಗಳನ್ನೂ ಮೀರಿರುವ, ಎಲ್ಲರಿಗೂ ಆತ್ಮನಾಗಿರುವ ಸತ್ಯಜ್ಞಾನಾನಂತವೆಂಬ ಲಕ್ಷಣವಿರುವ ಬ್ರಹ್ಮದಿಂದ ಆತ್ಮವಂತವಾಗಿವೆ. ಏಕೆಂತರೆ ಆ ಆತ್ಮನೇ ನಿಜವಾಗಿ ಎಲ್ಲರಿಗೂ ಆತ್ಮನಾಗಿರುವನು.
ಪ್ರಾಣೋ ಹಿ ಭೂತಾನಾಮಾಯುಃ – ಅಂದರೆ “ಯಾವದ್ವಸ್ಮಿನ್ ಶರೀರೇ ಪ್ರಾಣೋ ವಸತಿ ತಾವದಾಯುಃ” ಅರ್ಥಾತ್ ಎಲ್ಲಿಯವರೆಗೆ ಈ ಶರೀರದಲ್ಲಿ ಪ್ರಾಣವಿರುತ್ತದೆಯೋ ಅಲ್ಲಿಯವರೆಗೇ ಆಯುಸ್ಸು (ಕೌಷೀತಕೀ 3-2). ಪ್ರಾಣವು ಹೋದರೆ ಸಾವು ಸಿದ್ಧವಾಗಿದೆ ಎಂಬ ಕಾರಣದಿಂದ ಪ್ರಾಣವು ಸರ್ವಾಯುಸ್ಸು.
ಆದ್ದರಿಂದ ಹೊರಗಿನ ಸಾಧಾರಣನಲ್ಲದ ಅನ್ನಮಯ ಆತ್ಮನನ್ನು ಬಿಟ್ಟು ಅದರ ಒಳಗೆ ಎಲ್ಲರಿಗೂ ಸಾಧಾರಣನಾಗಿರುವ ಪ್ರಾಣಮಯನೆಂಬ ಆತ್ಮನನ್ನು ಬ್ರಹ್ಮವೆಂದು ಯಾರು ಉಪಾಸನೆ ಮಾಡುತ್ತಾರೋ - ಅಹಮಸ್ಮಿ ಪ್ರಾಣಃ ಸರ್ವಭೂತಾನಾಂ ಆತ್ಮಾ ಆಯುಃ ಜೀವನ ಹೇತುತ್ವಾತ್” ಅರ್ಥಾತ್ ಎಲ್ಲ ಭೂತಗಳಿಗೂ ಆತ್ಮನಾಗಿರುವ ಪ್ರಾಣನು ನಾನು. ಎಲ್ಲರಿಗೂ ಬದುಕಿರುವುದ್ಕಕೆ ಕಾರಣವಾದುದರಿಂದ ಆಯುಸ್ಸು ನಾನಾಗಿರುತ್ತೇನೆ – ಎಂದು ಉಪಾಸನೆ ಮಾಡುವವರು ಎಲ್ಲ ಆಯುಸ್ಸನ್ನೂ ಪಡೆದುಕೊಳ್ಳುತ್ತಾರೆ. ಅಂದರೆ ತಾವು ಪಡೆದುಕೊಂಡಿರುವ ಆಯುಸ್ಸಿಗಿಂತ ಮುಂಚೆಯೇ ಅಪಮೃತ್ಯು ಹೋದುವುದಿಲ್ಲ ಎಂದು ಅರ್ಥವು. ಆದರೆ ಇಲ್ಲಿ ಪೂರ್ಣ ಆಯುಸ್ಸು ಎಂದರೆ ನೂರುವರ್ಷಗಳ ಆಯುಸ್ಸು ಎಂದು ಅರ್ಥಮಾಡಿಕೊಳ್ಳುವುದೇ ಹೆಚ್ಚು ಯುಕ್ತವಾಗಿದೆ.
ತಸ್ಯೈಷ ಏವ ಶಾರೀರ ಆತ್ಮಾ । ಯಃ ಪೂರ್ವಸ್ಯ ।। 2 ।। ತಸ್ಮಾದ್ವಾ ಏತಸ್ಮಾತ್ ಪ್ರಾಣಮಯಾತ್ । ಅನ್ಯೋಽಂತರ ಆತ್ಮಾ ಮನೋಮಯಃ । ತೇನೈಷ ಪೂರ್ಣಃ ।। 3 ।। ಸ ವಾ ಏಷ ಪುರುಷವಿಧ ಏವ । ತಸ್ಯ ಪುರುಷವಿಧತಾಮ್ । ಅನ್ವಯಂ ಪುರುಷವಿಧಃ । ತಸ್ಯ ಯಜುರೇವ ಶಿರಃ । ಋಗ್ದಕ್ಷಿಣಃ ಪಕ್ಷಃ । ಸಾಮೋತ್ತರಃ ಪಕ್ಷಃ । ಆದೇಶ ಆತ್ಮಾ । ಅಥರ್ವಾಂಗಿರಸಃ ಪುಚ್ಛಂ ಪ್ರತಿಷ್ಠಾ ।। 4 ।। ತದಪ್ಯೇಷ ಶ್ಲೋಕೋ ಭವತಿ ।। 5 ।। ಇತಿ ತೃತೀಯೋಽನುವಾಕಃ ।। 3 ।।
ಆ ಹಿಂದಿನವನಿಗೆ ಇವನೇ ಶಾರೀರನಾದ ಆತ್ಮನು. ಹಿಂದಿನ ಅನ್ನಮಯನಿಗೆ ಅನ್ನಮಯಶರೀರದಲ್ಲಿರುವ ಪ್ರಾಣವೇ ಆತ್ಮನು. ಆದರೆ ಹಿಂದಿನವನಿಗೆ ಯಾರು ಆತ್ಮನೋ ಅವನೇ ಇವನಿಗೂ ಆತ್ಮನು. ಎಲ್ಲರಿಗೂ ಪರಮಾರ್ಥವಾದ ಆತ್ಮನು. ಈ ಪ್ರಾಣಮಯನಿಗಿಂತ ಇನ್ನೊಬ್ಬ ಮನೋಮಯನಾದ ಒಳಗಿನ ಆತ್ಮನಿದ್ದಾನೆ. ಆ ಮನೋಮಯನಿಂದ ಪ್ರಾಣಮಯ ಶರೀರವು ತುಂಬಿಕೊಂಡಿದೆ. ಇಲ್ಲಿ ಮನಸ್ಸೆಂದರೆ ಸಂಕಲ್ಪವೇ ಮೊದಲಾದ ರೂಪದಲ್ಲಿರುವ ಅಂತಃಕರಣವು. ಈ ಮನೋಮಯನು ಪ್ರಾಣಮಯನಿಗೆ ಒಳಗಿನ ಅಂತರಾತ್ಮನು.
ಈ ಮನೋಮಯನು ಪುರುಷವಿಧನಾಗಿಯೇ ಇದ್ದಾನೆ. ಅವನಿಗೆ ಯಜುಸ್ಸೇ ತಲೆ. ಋಕ್ಕು ಬಲತೋಳು. ಸಾಮವು ಎಡತೋಳು. ಆದೇಶವು ಆತ್ಮ. ಅಥರ್ವಾಂಗಿರಸವು ಪುಚ್ಛವು. ಪ್ರತಿಷ್ಠೆಯು.
ಇಲ್ಲಿ ಯಜುಸ್ಸು ಎಂದರೆ ಇಷ್ಟೆಂಬ ಅಕ್ಷರಗಳ ನಿಯಮವಿಲ್ಲದೇ ಇರುವ ಪಾದದಲ್ಲಿ ಕೊನೆಗಾಣುವ ಒಂದು ಮಂತ್ರವು. ಯಜುಃ ಎಂಬ ಏಕವಚನವನ್ನು ಉಪಯೋಗಿಸಿರುವುದು ಒಂದಾನೊಂದು ನಿರ್ದಿಷ್ಟವಾದ ಯಜುಸ್ಸನ್ನು ತಿಳಿಸುವುದಕ್ಕಲ್ಲ. ಯಜುಸ್ಸಿನ ಜಾತಿಯ ಮಂತ್ರಗಳೆಲ್ಲವನ್ನೂ ತಿಳಿಸುವುದಕ್ಕೆ ಎಂದರ್ಥ. ಯಜುಸ್ಸು ಮನೋಮಯನ ಶಿರ ಎಂದರೆ ಅದು ಯಜುಸ್ಸಿನ ಮುಖ್ಯತ್ವದ ಕಾರಣದಿಂದಾಗಿ. ಯಜುಸ್ಸು ಯಾಗಾದಿಗಳಲ್ಲಿ ನೇರವಾಗಿ ಉಪಯೋಗಿಸಲ್ಪಡುತ್ತವೆ. ಏಕೆಂದರೆ ಸ್ವಾಹಾಕಾರವೇ ಮೊದಲಾದ ಯಜುಸ್ಸುಗಳಿಂದಲೇ ಹವಿಸ್ಸನ್ನು ಕೊಡುತ್ತಾರೆ. ಸ್ಥಾನ, ಪ್ರಯತ್ನ, ನಾದ, ಸ್ವರ, ವರ್ಣ, ಪದ, ವಾಕ್ಯ – ಇವುಗಳ ವಿಷಯವಾದ ಅವುಗಳ ಸಂಕಲ್ಪರೂಪವಾದ ಆ ಭಾವನೆಯಿಂದ ಕೂಡಿದ ಮನಸ್ಸಿನ ವೃತ್ತಿಯೇ ಶ್ರೋತ್ರವೇ ಮೊದಲಾದ ಕರಣಗಳ ದ್ವಾರವಾಗಿ ಯಜುಸ್ಸು ಎಂಬ ಸಂಕೇತದಿಂದ ಕೂಡಿ ಯಜುಸ್ಸು ಎನಿಸುತ್ತದೆ. ಋಕ್ಕೆಂಬುದೂ ಹೀಗೆಯೇ. ಸಾಮವೆಂಬುದೂ ಹೀಗೆಯೇ[2]. ಹೀಗೆ ಮಂತ್ರಗಳು ಮನೋವೃತ್ತಿಗಳಾಗಿರುವುದರಿಂದಲೇ ವೃತ್ತಿಯನ್ನು ಮಾತ್ರ ಆವರ್ತನೆ ಮಾಡಬಹುದಾದ್ದರಿಂದ ಅವುಗಳನ್ನು ಮನಸ್ಸಿನಲ್ಲಿ ಜಪ ಮಾಡಬಹುದು ಎನ್ನುವುದು ಹೊಂದುತ್ತದೆ. ಸರ್ವೇ ವೇದಾ ಯತ್ರೈಕಂ ಭವಂತಿ । ಸ ಮಾನಸೀನ ಆತ್ಮಾ – ಅರ್ಥಾತ್ ಎಲ್ಲ ವೇದಗಳೂ ಯಾರಲ್ಲಿ ಒಂದಾಗುವವೋ..,ಅವನೇ ಜನರ ಮನಸ್ಸಿನಲ್ಲಿರುವ ಆತ್ಮನು (ತೈತ್ತಿರೀಯ ಆರಣ್ಯಕ 3-11-1).
ಅದೇಶ ಆತ್ಮಾ – ಇಲ್ಲಿ ಆದೇಶ ಎಂದರೆ ಬ್ರಾಹ್ಮಣವು. ಯಾವ್ಯಾವಾಗ ಯಾವ್ಯಾವ ಕರ್ಮಗಳನ್ನು ಮಾಡಬೇಕೆಂದು ವಿಧಿಸುತ್ತದೆಯೋ ಅಪ್ಪಣೆ ಮಾಡುತ್ತದೆಯೋ ಅದು ಆದೇಶ. ಅಥರ್ವಾಂಗಿರಸಃ ಎಂದರೆ ಅಥರ್ವನೂ ಅಂಗಿರಸ್ಸೂ ಕಂಡುಹಿಡಿದಿರುವ ಮಂತ್ರಗಳೂ ಬ್ರಾಹ್ಮಣವೂ ಶಾಂತಿ-ಪುಷ್ಟಿಗಳನ್ನು ಕೊಡುವ ಕರ್ಮಗಳ ಪ್ರತಿಷ್ಠೆಗೆ ಹೇತುವಾಗಿರುವುದರಿಂದ ಕರ್ಮಗಳೇ ಮುಖ್ಯವಾಗಿರುವ ಆ ಮಂತ್ರಗಳು ಪುಚ್ಛವು, ಪ್ರತಿಷ್ಠೆಯು. ಅದೇ ವಿಷಯದಲ್ಲಿ ಈ ಶ್ಲೋಕವಿರುವುದು.
[1] ಈ ಪ್ರಕರಣವು ಆಧ್ಯಾತ್ಮ ವಿಷಯಗಳನ್ನು ಕುರಿತಾಗಿರುವುದರಿಂದ ದೇವತೆಗಳು ಅಂದರೆ ಇಂದ್ರಿಯಗಳೂ ಇಂದು ಆಗಬಹುದು. ಅಂದರೆ ಇಂದ್ರಿಯಗಳು ಪ್ರಾಣವನ್ನು ಅನುಸರಿಸಿ ಜೀವಿಸಿರುತ್ತವೆ. ಮುಖ್ಯ ಪ್ರಾಣವನ್ನು ಅನುಸರಿಸಿ ತಮ್ಮ ವ್ಯಾಪಾರವನ್ನು ಮಾಡುತ್ತವೆ ಎಂದೂ ಅರ್ಥೈಸಬಹುದು.
[2] ಗೊತ್ತಾದ ಇಂತಿಷ್ಟು ವರ್ಣಗಳ ಇಂತಿಷ್ಟು ಪಾದಗಳುಳ್ಳದ್ದು- ಛಂದಸ್ಸಿರುವುದು – ಋಕ್ಕು. ಗೀತರೂಪದಲ್ಲಿರುವ ಋಕ್ಕು ಸಾಮವು. ಇವೆರಡಕ್ಕೂ ಯಜುಸ್ಸಿನಂತೆ ವೃತ್ತಿಯೇ ಮೂಲವಾಗಿರುವುದರಿಂದ ಇವುಗಳನ್ನು ಮನೋಮಯನ ಪಕ್ಷಗಳೆಂದು ಕರೆದಿದೆ.