ಋಗ್ವೇದ ಸಂಹಿತೆ ಮಂಡಲ 10, ಅನುವಾಕ 11, ಸೂಕ್ತ 190

[ಋಗ್ವೇದ ಸಂಹಿತಾ (ಸಾಯಣಭಾಷ್ಯ ಸಮೇತ, ಕರ್ಣಾಟಕ ಭಾಷಾರ್ಥಾನುವಾದವಿವರಣೆಗಳೊಂದಿಗೆ) ಭಾಗ 30 ಎಂಟನೆಯ ಅಷ್ಟಕದ ಅಧ್ಯಾಯಗಳು 5-8 ಹತ್ತನೆಯ ಮಂಡಲದ ಸೂಕ್ತಗಳು 95-191, ಅನುವಾದಕರು ಆಸ್ಥಾನಮಹಾವಿದ್ವಾನ್ ಹೆಚ್. ಪಿ. ವೆಂಕಟರಾವ್, ಶ್ರೀ ಜಯಚಾಮರಾಜೇಂದ್ರ ವೇದರತ್ನಮಾಲಾ, ಸಂಖ್ಯೆ 30, ಶ್ರೀ ಶಾರದಾ ಪ್ರೆಸ್, ಮೈಸೂರು, 1955]

[ಸೂಕ್ತದಲ್ಲಿರುವ ಋಕ್ಸಂಖ್ಯೆ 3; ಋಷಿಃ – ಅಘಮರ್ಷಣೋ ಮಾಧುಚ್ಛಂದಸಃ । ದೇವತಾ – ಭಾವವೃತ್ತಂ । ಛಂದಃ – ಅನುಷ್ಟುಪ್]

ಋತಂ ಚ ಸತ್ಯಂ ಚಾಭೀದ್ಧಾತ್ತಪಸೋಽಧ್ಯಜಾಯತತತೋ ರಾತ್ರ್ಯಜಾಯತ ತತಃ ಸಮುದ್ರೋ ಆರ್ಣವಃ ।। 1 ।।

ಅಭೀದ್ಧಾತ್ – ಸೃಷ್ಟಿಮಾಡಬೇಕೆಂದು ತಪಸ್ಸನ್ನು ಮಾಡುತ್ತಿದ್ದ ಬ್ರಹ್ಮನಿಂದ । ಋತಂ – ಮಾನಸ ಸಂಕಲ್ಪ ರೂಪವಾದ ಸತ್ಯವೂ । ಚ - ಮತ್ತು । ಸತ್ಯಂ – ಭಾಷಣರೂಪವಾದ ಸತ್ಯವೂ । ಅಧ್ಯಜಾಯತ – ಉತ್ಪತ್ತಿಯಾದವು (ಅಥವಾ) । ಅಭೀದ್ಧಾತ್ – ಸರ್ವತ್ರ ಪ್ರಕಾಶಮಾನನಾಗಿ ಬೆಳಗುತ್ತಿರುವ ಪರಮಾತ್ಮನಿಂದ । ಋತಂ – ಮಾಯಾಧಿಷ್ಠಾನರೂಪದಿಂದ ಋತವೂ । ಸತ್ಯಂ – ಉಪಾದಾನಭೂತರೂಪದಿಂದ ಸತ್ಯವೂ । ಅಧ್ಯಜಾಯತ – ಉತ್ಪತ್ತಿಯಾದವು । ತತಃ – ಆ ಬ್ರಹ್ಮನಿಂದಲೇ ಅಥವಾ ಪರಮಾತ್ಮನಿಂದಲೇ । ರಾತ್ರಿಃ – ಹಗಲು ರಾತ್ರಿಗಳು । ಅಜಾಯತ – ಉಂಟಾದವು । ತತಃ – ಆ ಬ್ರಹ್ಮನಿಂದಲೇ । ಆರ್ಣವಃ – ಉದಕಪೂರಿತವಾದ । ಸಮುದ್ರಃ – ಸಮುದ್ರವು ಉಂಟಾಯಿತು.

ಸೃಷ್ಟಿಮಾಡಬೇಕೆಂಬ ಇಚ್ಛೆಯಿಂದ ತಪಸ್ಸನ್ನು ಮಾಡುತ್ತಿದ್ದ ಬ್ರಹ್ಮನಿಂದ ಮಾನಸ ಸಂಕಲ್ಪರೂಪವಾದ ಸತ್ಯವೂ (ಋತಂ), ಭಾಷಣ ರೂಪವಾದ ಸತ್ಯವೂ (ಸತ್ಯಂ) ಉತ್ಪತ್ತಿಯಾದವು. ಅಥವಾ ಅವ್ಯಕ್ತಸ್ವರೂಪದಿಂದಿದ್ದ ಪರಮಾತ್ಮನಿಂದ ಸಂಕಲ್ಪರೂಪವಾದ ಋತವೂ, ವ್ಯಕ್ತರೂಪದಿಂದಿರುವ ಪರಮಾತ್ಮನಿಂದ ಭಾಷಣರೂಪವಾದ ಸತ್ಯವೂ ಉತ್ಪನ್ನವಾದವು. ನಂತರ ಆ ಬ್ರಹ್ಮನಿಂದಲೇ ಹಗಲು-ರಾತ್ರಿಗಳೂ, ಉದಕಪೂರ್ಣವಾದ ಸಮುದ್ರವೂ ಉಂಟಾದವು.

ಸಮುದ್ರಾದರ್ಣವಾದಧಿ ಸಂವತ್ಸರೋ ಅಜಾಯತ । ಅಹೋರಾತ್ರಾಣಿ ವಿದಧದ್ವಿಶ್ವಸ್ಯ ಮಿಷತೋ ವಶೀ ।। 2 ।।

ಆರ್ಣವಾತ್ – ಉದಕಪೂರ್ಣವಾದ । ಸಮುದ್ರಾತ್ – ಸಮುದ್ರದಿಂದ । ಸಂವತ್ಸರಃ – ಸಂವತ್ಸರವೇ ಮೊದಲಾದ ಕಾಲವಿಭಾಗಗಳು । ಅಧಿ ಅಜಾಯತ – ಉತ್ಪನ್ನವಾದವು (ನಂತರ ಪರಮಾತ್ಮನು) । ಅಹೋರಾತ್ರಾಣಿ – ಹಗಲು-ರಾತಿ ಮೊದಲಾದ ಕಾಲವಿಭಾಗಗಳನ್ನೂ (ಸಮಸ್ತ ಪ್ರಾಣಿಗಳನ್ನೂ) । ವಿದಧತ್ - ಸೃಷ್ಟಿಸುತ್ತಾ । ವಿಶ್ವಸ್ಯ – ಸಮಸ್ತವಾದ । ಮಿಷತಃ – ಕಾಲಕ್ಕೂ । ವಶೀ – ಸ್ವಾಮಿಯಾಗಿ ಇರುತ್ತಾನೆ ।

ಉದಕಪೂರ್ಣವಾದ ಸಮುದ್ರದಿಂದ ಸಂವತ್ಸರವೇ ಮೊದಲಾದ ಕಾಲವಿಭಾಗಗಳು ಉತ್ಪನ್ನವಾದವು. ನಂತರ ಆಹೋರಾತ್ರಗಳನ್ನೂ (ಸಮಸ್ತ ಪ್ರಾಣಿಗಳನ್ನೂ) ಸೃಷ್ಟಿಸುತ್ತಾ ಆ ಪರಮೇಶ್ವರನು ಸಮಸ್ತ ಕಾಲಕ್ಕೆ ಅಧಿಪತಿಯಾಗಿರುತ್ತಾನೆ.

ಸೂರ್ಯಚಂದ್ರಮಸೌ ಧಾತಾ ಯಥಾಪೂರ್ವಮಕಲ್ಪಯತ್ । ದಿವಂ ಚ ಪೃಥಿವೀಂ ಚಾಂತರಿಕ್ಷಮಥೋ ಸ್ವಃ ।। 3 ।।

ಧಾತಾ – ಸೃಷ್ಟಿಕರ್ತನಾದ ಪರಮೇಶ್ವರನು । ಯಥಾಪೂರ್ವಂ - ಹಿಂದಿನ ಕಲ್ಪದಲ್ಲಿ ಸೃಷ್ಟಿಸಿದ್ದಂತೆಯೇ ಈಗಲೂ । ಸೂರ್ಯಚಂದ್ರಮಸೌ – ಕಾಲಕ್ಕೆ ಅಲಂಕಾರಪ್ರಾಯರಾದ ಸೂರ್ಯ-ಚಂದ್ರರನ್ನೂ । ಸ್ವಃ – ಸುಖಪ್ರದವಾದ । ದಿವಂ ಚ – ಸ್ವರ್ಗಲೋಕವನ್ನೂ । ಪೃಥಿವೀಂ – ಭೂಲೋಕವನ್ನೂ । ಅಂತರಿಕ್ಷಂ ಚ – ಮಧ್ಯಮಲೋಕವಾದ ಅಂತರಿಕ್ಷವನ್ನೂ (ಈ ರೀತಿ ಮೂರು ಲೋಕಗಳನ್ನೂ) । ಅಕಲ್ಪಯತ್ – ಸೃಷ್ಟಿಸಿದನು ।

ಸೃಷ್ಟಿಕರ್ತನಾದ ಪರಮಾತ್ಮನು ಹಿಂದಿನ ಕಲ್ಪದಲ್ಲಿ ಸೃಷ್ಟಿಸಿದ್ದಂತೆಯೇ ಈಗಲೂ ಸಹ ಕಾಲಕ್ಕೆ ಭೂಷಣಪ್ರಾಯರಾದ ಸೂರ್ಯ-ಚಂದ್ರರನ್ನೂ, ಸುಖಕರವಾದ ಸ್ವರ್ಗ, ಭೂಮಿ, ಅಂತರಿಕ್ಷಗಳೆಂಬ ಮೂರು ಲೋಕಗಳನ್ನೂ ಸೃಷ್ಟಿಸಿದನು (ಮುಂದಿನ ಕಲ್ಪದಲ್ಲಿಯೂ ಇದೇ ರೀತಿ ಸೃಷ್ಟಿಸುತ್ತಾನೆ).

Leave a Reply

Your email address will not be published. Required fields are marked *