ತೈತ್ತಿರೀಯೋಪನಿಷತ್ ದ್ವಿತೀಯಾಬ್ರಹ್ಮಾನಂದವಲ್ಲೀ ನವಮೋಽನುವಾಕಃ

[ಆಧಾರಗ್ರಂಥಗಳು: (1) ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು, ಶ್ರೀಶಾಂಕರಭಾಷ್ಯಸಮೇತ ತೈತ್ತಿರೀಯೋಪನಿಷತ್ತು, ಅಧ್ಯಾತ್ಮಪ್ರಕಾಶಕಾರ್ಯಾಲಯ, ಹೊಳೆನರಸೀಪುರ, 1998; (2) ಸ್ವಾಮಿ ಸೋಮನಾಥಾನಂದ, ಉಪನಿಷತ್ ಭಾವಧಾರೆ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು, 2021]

ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ಆನಂದಂ ಬ್ರಹ್ಮಣೋ ವಿದ್ವಾನ್ ನ ಬಿಭೇತಿ ಕುತಶ್ಚನೇತಿ ।। 1 ।। ಏತಗ್ಂ ಹ ವಾವ ನ ತಪತಿ ಕಿಮಹಗ್ಂ ಸಾಧು ನಾಕರವಮ್ ಕಿಮಹಂ ಪಾಪಮಕರವಮಿತಿ ಸ ಯ ಏವಂ ವಿದ್ವಾನೇತೇ ಆತ್ಮಾನಗ್ಂ ಸ್ಪೃಣುತೇ ಉಭೇ ಹ್ಯೇವೈಷ ಏತೇ ಆತ್ಮಾನಗ್ಂ ಸ್ಪೃಣುತೇ ಯ ಏವಂ ವೇದ ।। 2 ।। ಇತ್ಯುಪನಿಷತ್ ।। 3 ।। ಇತಿ ನವಮೋಽನುವಾಕಃ ।। 9 ।। ಇತಿ ಬ್ರಹ್ಮಾನಂದವಲ್ಲೀ ಸಮಾಪ್ತಾ ।।

ಯಾವುದರಿಂದ ವಾಕ್ಕುಗಳು ಮನಸ್ಸಿನೊಡನೆ ಅದನ್ನು ಮುಟ್ಟಲಾರದೇ ಹಿಂದಿರುಗುವವೋ ಆ ಬ್ರಹ್ಮದ ಆನಂದವನ್ನು ತಿಳಿದವನು ಯಾವುದಕ್ಕೂ ಅಂಜುವುದಿಲ್ಲ. “ನಾನು ಒಳ್ಳೆಯದನ್ನೇಕೆ ಮಾಡಲಿಲ್ಲ? ನಾನು ಪಾಪವನ್ನೇಕೆ ಮಾಡಿದೆ?” ಎಂಬ ಯೋಚನೆಯು ಇವನನ್ನು ಸುಡುವುದೇ ಇಲ್ಲ. ಹೀಗೆ ಅರಿತುಕೊಂಡಿರುವವನು ಈ ಎರಡನ್ನೂ ಆತ್ಮನನ್ನಾಗಿ ಮಾಡಿಕೊಂಡಿರುತ್ತಾನೆ. ಹೀಗೆಂದು ತಿಳಿಯುವವನು ಈ ಎರಡನ್ನೂ ಆತ್ಮನನ್ನಾಗಿ ಮಾಡಿಕೊಳ್ಳುತ್ತಾನಲ್ಲವೇ? ಇಂತು ಉಪನಿಷತ್ತು.

ಆದ್ದರಿಂದ “ಸತ್ಯಂ ಜ್ಞಾನಮನಂತಂ ಬ್ರಹ್ಮ” - ಸತ್ಯವೂ ಜ್ಞಾನವೂ ಅನಂತವೂ ಆದ ಬ್ರಹ್ಮವು (2-1) ಎಂದು ಹಿಂದೆ ಹೇಳಿದ ಲಕ್ಷಣವಿರುವ ಆತ್ಮನನ್ನು ತಿಳಿಯುವುದಕ್ಕೋಸ್ಕರವೇ ಬಹುವಾಗುವಿಕೆ, ಸೃಷ್ಟಿ, ಪ್ರವೇಶ, ರಸವನ್ನು ಹೊಂದುವಿಕೆ, ಅಭಯ, ಸಂಕ್ರಮಣ – ಮೊದಲಾದ ಎಲ್ಲವನ್ನೂ ವ್ಯವಹಾರದೃಷ್ಟಿಯಿಂದ ಬ್ರಹ್ಮದಲ್ಲಿ ಕಲ್ಪಿಸಲಾಗಿದೆ. ಆದರೆ ನಿರ್ವಿಕಲ್ಪವಾಗಿರುವ ಬ್ರಹ್ಮದಲ್ಲಿ ನಿಜವಾಗಿ ಯಾವುದೊಂದು ವಿಕಲ್ಪವೂ ಇಲ್ಲ. ಆ ನಿರ್ಮಿಕಲ್ಪನಾದ ಆತ್ಮನನ್ನು ಈ ಕ್ರಮದಿಂದ ಪಡೆದುಕೊಂಡರೆ ಎಂದರೆ ಅರಿತುಕೊಂಡರೆ ಯಾವುದಕ್ಕೂ ಅಂಜುವುದಿಲ್ಲ. ಅಭಯವಾಗಿ ಪ್ರತಿಷ್ಠೆಯನ್ನು ಹೊಂದುತ್ತಾನೆ – ಎಂಬ ಅರ್ಥದಲ್ಲಿಯೇ ಈ ಶ್ಲೋಕವಿದೆ. ಆನಂದವಲ್ಲಿಯ ಅರ್ಥವಾದ ಈ ಪ್ರಕರಣಗಳೆಲ್ಲವನ್ನೂ ಸಂಗ್ರಹವಾಗಿ ತಿಳಿಸುವುದಕ್ಕಾಗಿ ಈ ಮಂತ್ರವು ಬಂದಿದೆ.

ಯಾವುದರಿಂದ ಅಂದರೆ ಯಾವ ನಿರ್ವಿಕಲ್ಪವಾದ, ಅದ್ವಯಾನಂದವಾದ ಆತ್ಮನಿಂದ, ವಾಕ್ಕುಗಳು, ಎಂದರೆ ದ್ರವ್ಯವೇ ಮೊದಲಾದ ಸವಿಕಲ್ಪ ವಸ್ತುಗಳನ್ನು ಹೆಸರಿಸುವ ಶಬ್ದವನ್ನು ಇದೂ ವಸ್ತುವೆಂಬ ಹೋಲಿಕೆಯಲ್ಲಿ ಅದ್ವಯವಾದ ಬ್ರಹ್ಮದ ವಿಷಯದಲ್ಲಿಯೂ ಪ್ರಯೋಗಿಸಿದಾಗ ಆ ಶಬ್ದವು ಅದನ್ನು ಮುಟ್ಟಲಾರದೇ ಅಂದರೆ ಅದನ್ನು ತಿಳಿಸಲಾಗದೇ, ಪ್ರಕಾಶಿಸಲಾರದೇ ಹಿಂದಿರುಗುವವೋ – ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುವವೋ ಆ ಬ್ರಹ್ಮದ ಆನಂದವನ್ನು ಶ್ರೋತ್ರಿಯನೂ ಅವೃಜಿನನೂ ಅಕಾಮಹತನೂ ಆದ, ಎಲ್ಲ ಏಷಣೆಗಳನ್ನೂ ಬಿಟ್ಟಿರುವ ಜ್ಞಾನಿಯ ಸ್ವರೂಪವೇ ಆಗಿದೆ. ವಿಷಯ-ವಿಷಯಿಗಳ ಸಂಬಂಧವಿಲ್ಲದೇ ಸ್ವಾಭಾವಿಕವೂ ನಿತ್ಯವೂ ವಿಂಗಡಗಳಿಲ್ಲದ್ದೂ ಆಗಿರುವ ಬ್ರಹ್ಮದ ಪರಮಾನಂದವನ್ನು ಪಡೆದವನು ಯಾವುದಕ್ಕೂ ಅಂಜುವುದಿಲ್ಲ. ಏಕೆಂದರೆ ಭಯಕ್ಕೆ ನಿಮಿತ್ತವೇ ಇರುವುದಿಲ್ಲ.

ಆ ಜ್ಞಾನಿಗಿಂತ ಮತ್ತೊಂದಾದ, ತಾನೇ ಬೇರೆಯಾಗಿರುವ ಬೇರೆ ಯಾವ ವಸ್ತುವೂ ಇಲ್ಲ. ಹಾಗೆ ಇದ್ದಿದ್ದರಲ್ಲವೇ ಅವನು ಅದಕ್ಕೆ ಹೆದರುತ್ತಿದ್ದನು? “ಉದರಮಂತರಂ ಕುರುತೇ । ಅಥ ತಸ್ಯ ಭಯಂ ಭವತಿ – ಸ್ವಲ್ಪವಾದರೂ ಭೇದವನ್ನು ಮಾಡಿಕೊಂಡವನಿಗೆ ಭಯವುಂಟಾಗುತ್ತದೆ” (2-7) ಎಂದಲ್ಲವೇ ಹಿಂದೆ ಹೇಳಿದೆ. ಬ್ರಹ್ಮಜ್ಞಾನಿಗೆ ಎರಡು ಚಂದ್ರನನ್ನು ತೋರಿಸುತ್ತಿದ್ದ ಕಣ್ಪರೆಯಂತಿದ್ದ ಅವಿದ್ಯೆಯ ಕಾರ್ಯವೇ ಭಯಕ್ಕೆ ಕಾರಣವು. ಆದ್ದರಿಂದಲೇ “ನ ಬಭೇತಿ ಕದಾಚನ – ಅವನು ಯಾವುದಕ್ಕೂ ಹೆದರುವುದಿಲ್ಲ” ಎನ್ನುವುದು ಯುಕ್ತವಾಗುತ್ತದೆ. ಈ ಮಂತ್ರವನ್ನು ಮನೋಮಯನ ವಿಷಯದಲ್ಲಿಯೂ ಉದಾಹರಿಸಿತ್ತು. ಮನಸ್ಸು ಬ್ರಹ್ಮಜ್ಞಾನಕ್ಕೆ ಸಾಧನವಾಗಿರುವುದರಿಂದ ಅದರಲ್ಲಿ ಬ್ರಹ್ಮಭಾವವನ್ನು ಕಲ್ಪಿಸಿ ಅದನ್ನು ಹೊಗಳುವುದಕ್ಕಾಗಿ “ನ ಬಿಭೇತಿ ಕುತಶ್ಚನ – ಎಂದಿಗೂ ಹೆದರುವುದಿಲ್ಲ” (2-4) ಎಂದು ಭಯವನ್ನು ಮಾತ್ರ ಅಲ್ಲಗಳೆದಿತ್ತು. ಇಲ್ಲಿ ದ್ವೈತವನ್ನು ಕುರಿತು ಹೇಲುತ್ತಿರುವುದರಿಂದ “ನ ಬಿಭೇತಿ ಕುತಶ್ಚನ - ಯಾವುದಕ್ಕೂ ಹೆದರುವುದಿಲ್ಲ” ಎಂಬ ಭಯದ ಕಾರಣವೇ ಇಲ್ಲವೆಂದಿರುತ್ತದೆ.

ಆದರೆ ಬ್ರಹ್ಮಜ್ಞಾನಿಗೂ ಪುಣ್ಯಕರ್ಮವನ್ನು ಮಾಡದೇ ಇರುವುದು, ಪಾಪ ಕರ್ಮವನ್ನು ಮಾಡದೇ ಇರುವುದು ಎಂಬ ಭಯವಾದರೂ ಇದೆಯಲ್ಲ! ಹಾಗಲ್ಲ. ಪಾಪ-ಪುಣ್ಯಗಳ ಭಯವಾದರೂ ಅವರಿಗೆ ಇರಬೇಕಲ್ಲ. ಹಾಗಲ್ಲವೆಂದು ಶ್ರುತಿಯು ಹೇಳುತ್ತದೆ. ಪುಣ್ಯವನ್ನು ಮಾಡಲಿಲ್ಲವಲ್ಲ ಅಥವಾ ಪಾಪವನ್ನು ಮಾಡಿಬಿಟ್ಟೆನಲ್ಲ ಎಂಬ ಎರಡೂ ಭಾವನೆಗಳು ಬ್ರಹ್ಮಜ್ಞಾನಿಗೆ ಬರುವುದಿಲ್ಲ. ಅದಕ್ಕಾಗಿ ಅವನು ತಪಿಸುವುದಿಲ್ಲ. ಕಳವಳಪಡುವುದಿಲ್ಲ. ಬೇಗುದಿಗೊಳ್ಳುವುದಿಲ್ಲ. ಸಾಯುವ ಕಾಲವು ಹತ್ತಿರವಾದಾಗ ಅಜ್ಞನಿಗೆ ಪಶ್ಚಾತ್ತಾಪವಾಗುತ್ತದೆ: ಪಾಪವನ್ನು ಎಂದರೆ ಶಾಸ್ತ್ರದಲ್ಲಿ ಮಾಡಬಾರದೆಂದು ಹೇಳಿರುವ ಕರ್ಮವನ್ನು ಮಾಡಿದ್ದೇನೆ. ಇನ್ನು ನರಕಕ್ಕೆ ಬೀಳುವುದೇ ಸರಿ ಎಂದು ಮೊದಲಾದ ಅಂಜಿಕೆಯಿಂದ ಅವನಿಗೆ ತಾಪವಾಗುತ್ತದೆ. ಪುಣ್ಯವನ್ನು ಮಾಡಲಿಲ್ಲವೆಂದೂ ಪಾಪವನ್ನು ಮಾಡಿದ್ದೇನೆಂದೂ ಎರಡೂ ಅಜ್ಞನನ್ನು ಹೇಗೆ ತಪಿಸುತ್ತವೆಯೋ ಹಾಗೆ ಬ್ರಹ್ಮಜ್ಞಾನಿಯನ್ನು ತಪಿಸುವುದಿಲ್ಲ.

ಯಾಕೆಂದರೆ, ಬ್ರಹ್ಮಜ್ಞಾನಿಯು ಈ ಒಳ್ಳೆಯ ಮತ್ತು ಕೆಟ್ಟ ಕರ್ಮಗಳೆರಡನ್ನೂ ಪರಮಾತ್ಮರೂಪದಿಂದ ಕಾಣುತ್ತಾನೆ. ಈ ಪುಣ್ಯ-ಪಾಪ ಎರಡನ್ನೂ ವಿಶೇಷರೂಪವಿಲ್ಲವುಗಳೆಂದು ನೋಡಿ, ಆತ್ಮನನ್ನು ಆತ್ಮರೂಪದಿಂದಲೇ ಕಂಡುಕೊಂಡು ತನ್ನನ್ನು ತಾನು ಸಂತೋಷಗೊಳಿಸಿಕೊಳ್ಳುತ್ತಾನೆ. ಅದ್ವೈತಾನಂದರೂಪವಾದ ಬ್ರಹ್ಮವನ್ನು ತಿಳಿದುಕೊಂಡವನು ಆತ್ಮರೂಪದಿಂದ ಕಂಡುಕೊಂಡ ತನ್ನ ಪುಣ್ಯ-ಪಾಪಗಳೆಲ್ಲವೂ ಫಲವನ್ನು ಕೊಡುವ ಸಾಮರ್ಥ್ಯವಿಲ್ಲದೇ ಇರುವುದರಿಂದ ಅವನನ್ನು ಸಂತಾಪಗೊಳಿಸುವುದಿಲ್ಲ. ಆ ಪುಣ್ಯ-ಪಾಪಗಳು ಅವನಿಗೆ ಜನ್ಮಾಂತರವನ್ನುಂಟು ಮಾಡುವುದಿಲ್ಲ.

ಹೀಗೆ ಈ ವಲ್ಲಿಯಲ್ಲಿ ಹಿಂದೆ ಹೇಳಿದ ಬ್ರಹ್ಮವಿದ್ಯೆಯೆಂಬ ಈ ಉಪನಿಷತ್ತು. ಎಲ್ಲ ವಿದ್ಯೆಗಳಿಗಿಂತಲೂ ಹೆಚ್ಚಿನ ರಹಸ್ಯವನ್ನು ತಿಳಿಸಿದ್ದಾಯಿತು. ಇದರಲ್ಲಿ ಅತ್ಯಂತ ಹೆಚ್ಚಿನ ಶ್ರೇಯಸ್ಸು ಇರುವುದರಿಂದ ಇದು ಉಪನಿಷತ್ತು.

 

Leave a Reply

Your email address will not be published. Required fields are marked *