ತೈತ್ತಿರೀಯೋಪನಿಷತ್ ದ್ವಿತೀಯಾಬ್ರಹ್ಮಾನಂದವಲ್ಲೀ ಷಷ್ಠೋಽನುವಾಕಃ

[ಆಧಾರಗ್ರಂಥಗಳು: (1) ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು, ಶ್ರೀಶಾಂಕರಭಾಷ್ಯಸಮೇತ ತೈತ್ತಿರೀಯೋಪನಿಷತ್ತು, ಅಧ್ಯಾತ್ಮಪ್ರಕಾಶಕಾರ್ಯಾಲಯ, ಹೊಳೆನರಸೀಪುರ, 1998; (2) ಸ್ವಾಮಿ ಸೋಮನಾಥಾನಂದ, ಉಪನಿಷತ್ ಭಾವಧಾರೆ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು, 2021]

ಅಸನ್ನೇವ ಸ ಭವತಿ ಅಸದ್ಬ್ರಹ್ಮೇತಿ ವೇದ ಚೇತ್ ಅಸ್ತಿ ಬ್ರಹ್ಮೇತಿ ಚೇದ್ವೇದ ಸಂತಮೇನಂ ತತೋ ವಿದುರಿತಿ ।। 1 ।। ತಸ್ಯೈಷ ಏವ ಶಾರೀರ ಆತ್ಮಾ ಯಃ ಪೂರ್ವಸ್ಯ ।। 2 ।। ಅಥಾತೋಽನುಪ್ರಶ್ನಾಃ ಉತಾವಿದ್ವಾನಮುಂ ಲೋಕಂ ಪ್ರೇತ್ಯ ಕಶ್ಚನ ಗಚ್ಛತೀ ೩ ಆಹೋ ವಿದ್ವಾನಮುಂ ಲೋಕಂ ಪ್ರೇತ್ಯ ಕಶ್ಚಿತ್ಸಮಶ್ನುತಾ ೩ ಉ ।। 3 ।।

ಅಸತ್ತಾಗಿಯೇ ಅವನಾಗುತ್ತಾನೆ. ಬ್ರಹ್ಮವು ಅಸತ್ತು ಎಂದೂ ತಿಳಿಯಬಹುದು. ಸತ್ ಎಂದೂ ತಿಳಿಯಬಹುದು. ಇದನ್ನು ಸತ್ ಎಂದೇ ತಿಳಿಯಬೇಕು. ಅವಿದ್ಯೆಯಿಂದ ಕಲ್ಪಿತವಾದ ದ್ವೈತಕ್ಕೆಲ್ಲ ಕೊನೆಯಾಗಿರುವ, ಅದ್ವೈತ ಬ್ರಹ್ಮವೇ ಆನಂದಮಯನ ಪ್ರತಿಷ್ಠೆಯು. ಏಕೆಂದರೆ ಆನಂದಮಯನು ಏಕತ್ವದಲ್ಲಿ ಕೊನೆಗಂಡಿರುತ್ತಾನೆ. ಆನಂದಮಯನಿಗೆ ಸತ್ಯಜ್ಞಾನಾನಂತರೂಪವಾದ ಬ್ರಹ್ಮವೇ ಪ್ರತಿಷ್ಠೆಯೆಂದೂ, ಅದು ಆನಂದಸ್ವರೂಪವೆಂದೂ ಹೇಳಿದೆ. ಅವಿದ್ಯೆಯಿಂದ ಕಲ್ಪಿತವಾಗಿರುವ ದ್ವೈತಕ್ಕೆ ಅವಸಾನವಾಗಿರುವ ಪ್ರತಿಷ್ಠೆಯಾಗಿರುವ ಪುಚ್ಛವಾಗಿ ಅದ್ವೈತಬ್ರಹ್ಮವು ಇದೆ.

ಆ ಹಿಂದಿನವನಿಗೆ, ಅಂದರೆ ವಿಜ್ಞಾನಮಯನಿಗೆ ಇವನೇ ಶಾರೀರ ಆತ್ಮನು. ಈ ಆನಂದಮಯಾತ್ಮನ ವಿಷಯದಲ್ಲಿ ಅವನು ಇಲ್ಲ ಎಂಬ ಶಂಕೆಯು ಉಂಟಾಗುವ ಹಾಗಿಲ್ಲ. ಆದರೆ ಬ್ರಹ್ಮವು ಯಾವ ವಿಶೇಷಗಳೂ ಇಲ್ಲದ್ದಾದ್ದರಿಂದ ಅದು ಇಲ್ಲ ಎಂಬ ಶಂಕೆಯುಂಟಾಗುವುದು ಯುಕ್ತವೇ ಆಗಿದೆ. ಬ್ರಹ್ಮವು ಎಲ್ಲರಿಗೂ ಸಮಾನವಾಗಿರುವುದರಿಂದಲೂ ಅದು ಇಲ್ಲ ಎಂಬ ಶಂಕೆಯುಂಟಾಗಬಹುದು.

ಆದ್ದರಿಂದ ಅಲ್ಲಿ ಈ ಪ್ರಶ್ನೆಗಳುಂಟಾಗುತ್ತವೆ: ಅಜ್ಞಾನಿಯು ಸತ್ತು ಹೋದ ನಂತರ ಆ ಲೋಕಕ್ಕೆ ಹೋಗುತ್ತಾನೆಯೇ? ಅಥಾವಾ ಯಾರಾದರೂ ಜ್ಞಾನಿಯು ಸತ್ತ ನಂತರ ಆ ಲೋಕವನ್ನು ಪಡೆಯುತ್ತಾನೋ?

ಬ್ರಹ್ಮನು ಆಕಾಶವೇ ಮೊದಲಾದವುಗಳಿಗೆ ಕಾರಣವಾಗಿರುವುದರಿಂದ ಜ್ಞಾನಿಗೂ ಅಜ್ಞಾನಿಗೂ ಯಾವ ವ್ಯತ್ಯಾಸವೂ ಇರಬಾರದು. ಇಬ್ಬರೂ ಸಮಾನರೇ ಆಗಿರಬೇಕು. ಹಾಗಿದ್ದರೆ ಅಜ್ಞಾನಿಗೂ ಬ್ರಹ್ಮಪ್ರಾಪ್ತಿಯಾಗಬಹುದಲ್ಲ ಎಂದು ಶಿಷ್ಯನು ಇಲ್ಲಿ ಶಂಕಿಸಿದ್ದಾನೆ. ಅಜ್ಞನೂ ಕೂಡ ಪರಮಾತ್ಮನಲ್ಲಿಗೆ ಹೋಗುತ್ತಾನೋ ಎಲ್ಲವೋ? ಎಂದು ಎರಡನೆಯ ಪ್ರಶ್ನೆಯನ್ನು ಕಲ್ಪಿಸಬೇಕು.

ಉಳಿದ ಎರಡು ಪ್ರಶ್ನೆಗಳು ಜ್ಞಾನಿಗಳ ಕುರಿತಾಗಿವೆ. ಇಬ್ಬರಿಗೂ ಸಮಾನವಾಗಿರುವ ಬ್ರಹ್ಮವನ್ನು ಅಜ್ಞನೂ ಕೂಡ ಹೋಗಿ ಸೇರುವುದಿಲ್ಲ ಎಂದಾದರೆ ಜ್ಞಾನಿಯೂ ಕೂಡ ಬ್ರಹ್ಮವನ್ನು ಹೋಗಿ ಸೇರುವುದಿಲ್ಲ ಎಂದೇ ಶಂಕಿಸಬೇಕಾಗುತ್ತದೆ. ಆದ್ದರಿಂದ ಅವನ ಕುರಿತು “ಅಹೋ ವಿದ್ವಾನ್” ಅಥವಾ ಜ್ಞಾನಿಯು ಯಾವುದಾದರೂ ಲೋಕವನ್ನು ಪಡೆಯುತ್ತಾನೆಯೇ ಎಂಬ ಪ್ರಶ್ನೆಯನ್ನು ಹಾಕಿರುತ್ತದೆ. ಜ್ಞಾನಿ ಅಂದರೆ ಬ್ರಹ್ಮವನ್ನು ಅರಿತವನೂ ಕೂಡ ಇಲ್ಲಿಂದ ಹೊರಟುಹೋದ ಬಳಿಕ ಈ ಲೋಕವನ್ನು ಪಡೆಯುತ್ತಾನೆಯೇ? ಸೇರುತ್ತಾನೆಯೇ? ’ಸಮಶ್ನುತೇ ಉ’ ಎಂದು ಇರುವಲ್ಲಿ ಏಕಾರಕ್ಕೆ “ಅಯ” ಎಂಬ ಆದೇಶವನ್ನೂ ಯ ಕಾರಲೋಪವನ್ನೂ ಮಾಡಿದ ನಂತರ ಅಕಾರಕ್ಕೆ ಪ್ಲುತವಾಗಿ ’ಸಮಶ್ನುತೇ ಉ’ ಎಂದಾಗಿದೆ.

ಇಲ್ಲಿ ಬ್ರಹ್ಮವೆಂಬುದೇ ಇಲ್ಲವೇ ಇಲ್ಲ ಎಂದು ಶಂಕಿಸಬಹುದು. ಏಕೆಂದರೆ ಯಾವುದು ಇರುತ್ತದೆಯೋ ಅದು ಅದರ ವಿಶೇಷ ರೂಪದಿಂದ ತಿಳಿಯಬರುತ್ತದೆ. ಯಾವುದಾದರೂ ವಿಶೇಷಣದಿಂದ ಅದನ್ನು ವರ್ಣಿಸಬಹುದು. ಉದಾಹರಣೆಗೆ, ಗಡಿಗೆಯೇ ಮೊದಲಾದ ವಸ್ತುಗಳು ಅವುಗಳ ವಿಶೇಷ ರೂಪಗಳಿಂದ ತಿಳಿಯಬರುತ್ತದೆ. ಆದರೆ ಯಾವುದು ಇರುವುದಿಲ್ಲವೊ ಅದು ಹಾಗೆ ತಿಳಿಯಬರುವುದಿಲ್ಲ. ಉದಾಹರಣೆಗೆ ಮೊಲದ ಕೊಂಬು ವಿಶೇಷರೂಪದಿಂದ ತಿಳಿಯಬರುವುದಿಲ್ಲ. ಅದರಂತೆ ಬ್ರಹ್ಮವೂ ತಿಳಿಯಬರುವುದಿಲ್ಲ. ಆದ್ದರಿಂದ ಅದು ಇಲ್ಲ.

ಅದರೆ ಅದು ಸರಿಯಲ್ಲ. ಏಕೆಂದರೆ ಬ್ರಹ್ಮವು ಆಕಾಶಾದಿಗಳಿಗೆ ಕಾರಣವಾಗಿರುತ್ತದೆ. ಬ್ರಹ್ಮವು ಇಲ್ಲವೆನ್ನುವುದು ಸರಿಯಲ್ಲ. ಏಕೆಂದರೆ ಆಕಾಶವೇ ಮೊದಲಾದ ಎಲ್ಲ ಕಾರ್ಯಗಳೂ ಬ್ರಹ್ಮನಿಂದಲೇ ಹುಟ್ಟಿವೆ ಎನ್ನುವುದು ಕಂಡುಬರುತ್ತಿದೆ. ಯಾವುದರಿಂದ ಏನಾದರೂ ಹುಟ್ಟಿದರೆ, ಅದು ಇದ್ದೆ ಇದೆ ಎಂದು ಲೋಕದಲ್ಲಿ ಕಂಡುಬರುತ್ತದೆ. ಉದಾಹರಣೆಗೆ, ಗಡಿಗೆ, ಮೊಳಕೆ ಮೊದಲಾದವುಗಳಿಗೆ ಕಾರಣವಾಗಿರುವ ಮಣ್ಣು, ಬೀಜ ಮೊದಲಾದವುಗಳು ಇವೆ. ಆದ್ದರಿಂದ ಆಕಾಶಾದಿಗಳಿಗೆ ಕಾರಣವಾಗಿರುವುದರಿಂದ ಬ್ರಹ್ಮವೂ ಇದೆ.

ಯಾವ ಕಾರ್ಯವೇ ಆಗಲೀ ಅಸತ್ತಿನಿಂದ ಹುಟ್ಟಿರುವುದು ಲೋಕದಲ್ಲಿ ಕಂಡುಬರುವುದಿಲ್ಲ. ನಾಮ-ರೂಪ ಮೊದಲಾದ ಕಾರ್ಯವು ಅಸತ್ತಿನಿಂದ ಬಂದಿದ್ದರೆ ಅದಕ್ಕೆ ಆತ್ಮವೇ ಇಲ್ಲದ್ದರಿಂದ ಅದು ಕಂಡುಬರುತ್ತಲೇ ಇರಲಿಲ್ಲ. ಆದರೆ ಕಾಣಬರುತ್ತಿದೆ. ಆದ್ದರಿಂದ ಬ್ರಹ್ಮವು ಇದೆ. ಅಸತ್ತಿನಿಂದ ಕಾರ್ಯವು ಹುಟ್ಟಿದ್ದಿದ್ದರೆ ಅಸತ್ತಿನಿಂದ ಕೂಡಿಕೊಂಡೇ ಕಾಣಬೇಕಾಗುತ್ತಿತ್ತು. ಆದರೆ ಹಾಗಿಲ್ಲ. ಆದ್ದರಿಂದ ಬ್ರಹ್ಮವು ಇದೆ. ಆದ್ದರಿಂದ ಬ್ರಹ್ಮವು ಸತ್ ಇದೆ ಎನ್ನುವುದು ಯುಕ್ತವಾಗಿದೆ.

ಮಣ್ಣು, ಬೀಜ ಮೊದಲಾದವುಗಳಿಗೆ ಕಾರಣ ಎಂದು ಹೇಳಿದರೆ ಬ್ರಹ್ಮವು ಅಚೇತನವೆಂದಾಯಿತು. ಹಾಗಿಲ್ಲ. ಏಕೆಂದರೆ ಅದು ಕಾಮಿಸುತ್ತದೆ. ಲೋಕದಲ್ಲಿ ಕಾಮಿಸುವುದು ಅಚೇತನವಲ್ಲವಷ್ಟೇ? ಬ್ರಹ್ಮವು ಸರ್ವಜ್ಞವಾಗಿದೆಯಾದ್ದರಿಂದ ಅದು ಕಾಮಿಸಲೂ ಬಹುದು.

ಬ್ರಹ್ಮವು ಕಾಮಿಸುವುದಾದ್ದರಿಂದ ನಮ್ಮಂತೆ ಪಡೆಯದೇ ಇರುವ ಕಾಮಗಳೂ ಅದಕ್ಕಿವೆ ಎಂದಾಯಿತಲ್ಲವೇ? ಹಾಗಲ್ಲ. ಏಕೆಂದರೆ ಬ್ರಹ್ಮಕ್ಕೆ ಸ್ವಾತ್ರಂತ್ರ್ಯವಿದೆ. ಮಿಕ್ಕವರನ್ನು ಕಾಮವೇ ಮೊದಲಾದ ದೋಷಗಳು ಹೇಗೆ ತಮ್ಮ ಅಧೀನಕ್ಕೆ ತಂದುಕೊಂಡು ವಿಷಯಗಳಲ್ಲಿ ತೊಡಗಿಸುತ್ತವೆಯೋ ಹಾಗೆ ಕಾಮಗಳು ಬ್ರಹ್ಮವನ್ನು ತೊಡಗಿಸುವುದಿಲ್ಲ.  ಬ್ರಹ್ಮನ ಕಾಮನೆಗಳು ಸತ್ಯಜ್ಞಾನರೂಪವಾಗಿರುತ್ತವೆ. ಅದರ ಆತ್ಮವೇ ಆಗಿರುವುದರಿಂದ[1] ಬಹುಶುದ್ಧವಾಗಿರುತ್ತವೆ. ಅವುಗಳಿಂದ ಬ್ರಹ್ಮವು ತೂಡಗಿಸಲ್ಪಡುವುದಿಲ್ಲ. ಆದರೆ ಅವುಗಳನ್ನೇ ಬ್ರಹ್ಮವು ಪ್ರಾಣಿಗಳ ಕರ್ಮಕ್ಕೆ ತಕ್ಕಂತೆ ತೊಡಗಿಸುತ್ತದೆ. ಆದ್ದರಿಂದ ಕಾಮಗಳ ವಿಷಯದಲ್ಲಿ ಆತ್ಮಕ್ಕೆ ಸ್ವಾತಂತ್ರ್ಯವಿರುತ್ತದೆ. ಆದ್ದರಿಂದ ಬ್ರಹ್ಮವು ಪಡೆಯದೇ ಇರುವ ಕಾಮಗಳಿಲ್ಲ.

ಸೋಽಕಾಮಯತ ಬಹುಸ್ಯಾಂ ಪ್ರಜಾಯೇಯೇತಿ ಸ ತಪೋಽತಪ್ಯತ ।। 4 ।।

ಅವನು ಬಹುವಾಗಿ ಹುಟ್ಟುತ್ತೇನೆ ಎಂದು ಕಾಮಿಸಿದನು. ಅವನು ತಪಸ್ಸು ಮಾಡಿದನು. ಇಲ್ಲಿ ಅವನು ಎಂದರೆ ಯಾರಿಂದ ಆಕಾಶವು ಉಂಟಾಯಿತೋ ಅವನು. ಆತ್ಮನು ಕಾಮಿಸಿದನು ಎಂದರ್ಥ. ಏನೆಂದು ಕಾಮಿಸಿದನು? ಬಹುವಾಗುತ್ತೇನೆ, ಬಹು ಎಂದರೆ, ಹೇರಳವಾಗುತ್ತೇನೆ, ಹೇರಳವಾಗಬೇಕು ಎಂದು.

ಒಬ್ಬನೇ ಆಗಿರುವ ಆತ್ಮನು ಇನ್ನೊಂದು ಪದಾರ್ಥವು ಸೇರಿಕೊಳ್ಳದೇ ಬಹುವಾಗುವುದು ಹೇಗೆ? ಹುಟ್ಟಿಸುವುದು. ಉಂಟಾಗುವುದು. ಮಗನು ಹುಟ್ಟು ಬಹುವಾಗುವಂತೆ. ಬಹುವಾಗುವುದು ಅಂದರೆ ಬೇರೆಯ ಪದಾರ್ಥಗಳನ್ನು ಸೃಷ್ಟಿಸುವುದಲ್ಲ. ತನ್ನಲ್ಲಿ ಅಭಿವ್ಯಕ್ತವಾಗದೇ ಇರುವ ನಾಮ-ರೂಪಗಳನ್ನು ವ್ಯಕ್ತಗೊಳಿಸುವುದರ ಮೂಲಕ ಬಹುವಾಗುವುದು. ತನ್ನಲ್ಲಿ ವ್ಯಕ್ತವಾಗದೇ ಇದ್ದ ನಾಮರೂಪಗಳು ವ್ಯಾಕೃತವಾದಾಗ (ಬಿಡಿ ಬಿಡಿಯಾಗಿ ವಿಂಗಡವಾದಾಗ) ಅವು ಅತ್ಮನ ಸ್ವರೂಪವನ್ನು ಬಿಡದೆಯೇ, ಬ್ರಹ್ಮಕ್ಕಿಂತ ಬೇರೆಯಾದ ದೇಶಕಾಲದಲ್ಲಿರದೇ, ಎಲ್ಲ ಅವಸ್ಥೆಗಳಲ್ಲಿಯೂ ವ್ಯಾಕೃತವಾಗುವವು. ಆಗ ಆ ನಾಮ-ರೂಪಗಳನ್ನು ವಿಂಗಡಿಸುವುದೇ ಬ್ರಹ್ಮವು ಬಹುವಾಗುವುದು ಎನ್ನುವುದು. ಹೇಗೆ ಆಕಾಶವು, ಅದು ಅಲ್ಪವಾಗಿರಲಿ ಅಥವಾ ಬಹುವಾಗಿರಲಿ, ಮತ್ತೊಂದು ವಸ್ತುವಿನಿಂದಲೇ ಆಗಿರುವುದೋ ಹಾಗೆಯೇ ಇದು. ಆದ್ದರಿಂದ ಆ ನಾಮ-ರೂಪಗಳ ದ್ವಾರದಿಂದಲೇ ಆತ್ಮನು ಬಹುವಾಗುತ್ತಾನೆ.

ಆತ್ಮನಿಗಿಂತ ಬೇರೆಯಾಗಿ, ಅನಾತ್ಮವಾಗಿರುವ, ಅದಕ್ಕಿಂತಲೂ ಬೇರೆಯ ದೇಶ ಅಥವಾ ಕಾಲದಲ್ಲಿರುವ, ಸೂಕ್ಷ್ಮವಾಗಿರುವ, ನಡುವೆ ಮರೆಯುಳ್ಳ, ದೂರವಾಗಿರುವ, ಹಿಂದಿನ, ಈಗಿನ ಅಥವಾ ಮುಂದಿನ ಕಾಲದ ವಸ್ತು ಇಲ್ಲವೇ ಇಲ್ಲ. ಆದ್ದರಿಂದ ನಾಮ-ರೂಪಗಳು ತಮ್ಮ ಎಲ್ಲ ಅವಸ್ಥೆಗಳಲ್ಲಿಯೂ ಬ್ರಹ್ಮದಿಂದಲೇ ಸ್ವರೂಪವುಳ್ಳವಾಗಿರುತ್ತವೆ[2]. ಆದರೆ ಬ್ರಹ್ಮವು ಅವುಗಳ ಸ್ವರೂಪವಾಗಿರುವುದಿಲ್ಲ. ನಾಮ-ರೂಪವಾಗಿ ತೋರುವ ಕಾಲದಲ್ಲಿಯೂ ಅದು ಬ್ರಹ್ಮವೆ. ನೀರು ನೊರೆಯಲ್ಲವಾದರೂ, ನೊರೆಯು ನೀರೇ ಆಗಿರುವಂತೆ. ನೀರನ್ನು ಬಿಟ್ಟು ನೊರೆಯಿಲ್ಲದಂತೆಯೂ, ಮಣ್ಣನ್ನು ಬಿಟ್ಟು ಬೇರೆಯಾಗಿ ಮಡಕೆ ಇಲ್ಲದಂತೆಯೂ, ಬ್ರಹ್ಮವನ್ನು ಬಿಟ್ಟು ನಾಮ-ರೂಪಗಳು ಇರುವುದೇ ಇಲ್ಲ.

ಆತ್ಮನು ಹೀಗೆ ಬಹುವಾಗಬೇಕೆಂಬ ಕಾಮನೆಯುಳ್ಳವನಾಗಿ ತಪಸ್ಸನ್ನು ತಪಿಸಿದನು. ತಪಸ್ಸು ಎಂದು ಇಲ್ಲಿ ಜ್ಞಾನವನ್ನು ಹೇಳಿದೆ. ಯಾರ ತಪಸ್ಸು ಜ್ಞಾನಮಯವಾಗಿದೆಯೋ ಅವನಿಂದ ನಾಮ-ರೂಪಗಳ ಜಗತ್ತುಂಟಾಗುತ್ತದೆ. ತಪಸ್ಸು ಮಾಡಿದನು ಎಂದರೆ ಸೃಷ್ಟಿಮಾಡಬೇಕಾಗಿರುವ ಜಗತ್ತಿನ ರಚನೆಯೇ ಮೊದಲಾದವುಗಳ ಕುರಿತು ಆತ್ಮನು ಆಲೋಚಿಸಿದನು ಎಂದರ್ಥ.

ಸ ತಪಸ್ತಪ್ತ್ವಾ ಇದಂಸರ್ವಮಸೃಜತ ಯದಿದಂ ಕಿಂಚ ।। 5 ।। ತತ್ಸೃಷ್ಟ್ವಾ ತದೇವಾನುಪ್ರಾವಿಶತ್ ।। 6 ।।

ಅವನು ತಪಸ್ಸನ್ನು ತಪಿಸಿದ ನಂತರ ಇದೆಲ್ಲವನ್ನೂ, ಏನೇನಿದೆಯೂ ಎಲ್ಲವನ್ನೂ, ಸೃಷ್ಟಿಸಿದನು. ಅದನ್ನು ಸೃಷ್ಟಿಸಿ ಅದನ್ನೇ ಅನುಪ್ರವೇಶ ಮಾಡಿದನು.

ಅವನು ತಪಸ್ಸುಮಾಡಿ ಎಂದರೆ ಹೀಗೆ ಆಲೋಚನೆಮಾಡಿ, ಪ್ರಾಣಿಗಳ ಕರ್ಮವೇ ಮೊದಲಾದ ನಿಮಿತ್ತಕ್ಕೆ ತಕ್ಕಂತೆ ಇವೆಲ್ಲವನ್ನೂ, ಅಂದರೆ, ದೇಶದಿಂದ, ಕಾಲದಿಂದ, ಮತ್ತು ರೂಪದಿಂದ ನಮ್ಮೆಲ್ಲರ ಅನುಭವದಲ್ಲಿರುವಂಥಹ ಈ ಜಗತ್ತನ್ನು, ಎಲ್ಲಾ ಪ್ರಾಣಿಗಳೂ ತಮ್ಮ ತಮ್ಮ ಬೇರೆ ಬೇರೆಯ ಅವಸ್ಥೆಗಳಲ್ಲೆಲ್ಲ ಅನುಭವಿಸುತ್ತಿರುವ ಇದೆಲ್ಲವನ್ನೂ, ಇಂಥದ್ದು ಎಂಬ ನಿಯಮವೇನೂ ಇಲ್ಲದೇ, ಎಲ್ಲವನ್ನೂ ಸೃಷ್ಟಿಸಿದನು.

ಜಗತ್ತನ್ನು ಸೃಷ್ಟಿಸಿ ಅದನ್ನೇ ಅನುಪ್ರವೇಶಮಾಡಿದನು ಎಂದರೆ ಹೇಗೆ? ಯಾರು ಸೃಷ್ಟಿಸಿದನೋ ಅವನು ಅದೇ ರೂಪದಿಂದ ಪ್ರವೇಶ ಮಾಡಿದನೇ ಅಥವಾ ಮತ್ತೊಂದು ರೂಪದಿಂದ ಪ್ರವೇಶ ಮಾಡಿದನೇ? ಯಾರು ಸೃಷ್ಟಿಸಿದನೋ ಅವನು ಅದೇ ರೂಪದಿಂದ ಪ್ರವೇಶಮಾಡಿದನು ಎನ್ನುವುದು ಸರಿ.

ಗಡಿಗೆಗೆ ಮಣ್ಣಿನಂತೆ ಜಗತ್ತಿಗೆ ಬ್ರಹ್ಮವು ಕಾರಣವಾದರೆ ಕಾರ್ಯವು ಅದರ ರೂಪವಾಗಿಯೇ ಇರುವುದಿಲ್ಲವ? ಕಾರಣವೇ ಕಾರ್ಯರೂಪವಾಗಿ ಪರಿಣಮಿಸಿದೆಯಾದ್ದರಿಂದ ಅದು ಮೊದಲು ಪ್ರವೇಶಿಸಿರಲಿಲ್ಲವೋ ಎನ್ನುವಂತೆ ಕಾರ್ಯವು ಆದಮೇಲೆ ಮತ್ತೆ ಪ್ರವೇಶಮಾಡಿತು ಎನ್ನುವುದು ಹೇಗೆ ಸರಿಯಾಗುತ್ತದೆ? ಗಡಿಗೆಯಾಗಿ ಪರಿಣಮಿಸುವುದಲ್ಲದೇ ಮಣ್ಣು ಗಡಿಗೆಯಲ್ಲಿ ಬೇರೆಯಾಗಿ ಪ್ರವೇಶಿಸಿತು ಎನ್ನುವುದಿಲ್ಲವಲ್ಲ!

ಮಣ್ಣು ಹುಡಿಯ ರೂಪದಿಂದ ಹೇಗೆ ಗಡಿಗೆಯೊಳಕ್ಕೆ ಪ್ರವೇಶಿಸಬಹುದೋ ಹಾಗೆಯೇ ಆತ್ಮನು ಮತ್ತೊಂದು ರೂಪದಿಂದ ನಾಮ-ರೂಪಗಳೆಂಬ ಕಾರ್ಯಗಳಲ್ಲಿ ಪ್ರವೇಶಿಸಿರುತ್ತಾನೆ. ಇದಕ್ಕೆ “ಅನೇನ ಜೀವೇನಾತ್ಮನಾನುಪ್ರವಿಶ್ಯ” – ಈ ಜೀವನ ರೂಪದಿಂದ ಒಳಹೊಕ್ಕು” (ಛಾಂದೋಗ್ಯೋಪನಿಷತ್ತು, 6-3-2) ಎಂಬ ಶ್ರುತಿವಾಕ್ಯವು ಪ್ರಮಾಣವಾಗಿರುತ್ತದೆ.

ಆದರೆ ಆತ್ಮನು ಒಬ್ಬನೇ ಆಗಿ ಯಾವ ಅವಯವಗಳೂ ಇಲ್ಲದವನಾಗಿದ್ದುದರಿಂದ ಮತ್ತು ಅವನು ಪ್ರವೇಶಮಾಡದೇ ಇರುವ ಸ್ಥಳವ್ಯಾವುದೂ ಇಲ್ಲದೇ ಇದ್ದುದರಿಂದ ಅವನು ಪ್ರಪಂಚವನ್ನು ಪ್ರವೇಶಿಸಿದನು ಎನ್ನುವುದು ಹೇಗೆ ಸರಿಯಾಗುತ್ತದೆ? ಹೀಗೆ ತದೇವಾನುಪ್ರಾವಿಶತ್ ಎನ್ನುವುದಕ್ಕೆ ಅನೇಕ ಆಕ್ಷೇಪಗಳು ಹೊಳೆಯಬಹುದು. ಈ ವಾಕ್ಯಕ್ಕೆ ವಿವಕ್ಷಿತವಾಗಿರುವ ಪ್ರಕೃತವಾದ ಬೇರೆಯ ಒಂದು ಅರ್ಥವಿದೆ. ಇಲ್ಲಿ “ಬ್ರಹ್ಮವಿದಾಪ್ನೋತಿ ಪರಮ್...ಸತ್ಯಂ ಜ್ಞಾನಮನಂತಂ ಬ್ರಹ್ಮ । ಯೋ ನಿಹಿತಂ ಗುಹಾಯಾಮ್” ಎಂಬ ಇದೆ ಉಪನಿಷತ್ತಿನ ಪ್ರಥಮೋನುವಾಕ್ಕಿನ ಮೊದಲನೇ ಮಂತ್ರವನ್ನು ನೆನಪಿಸಿಕೊಳ್ಳಬೇಕು. ಆ ಬ್ರಹ್ಮದ ಜ್ಞಾನವೇ ವಿವಕ್ಷಿತವಾಗಿರುತ್ತದೆ. ಅದು ಪ್ರಕೃತವೂ ಆಗಿರುತ್ತದೆ.

ಬ್ರಹ್ಮಸ್ವರೂಪವನ್ನು ಹಿಂಬಾಲಿಸಿ ಹೋಗಿ ಅದನ್ನು ತಿಳಿಯುವುದಕ್ಕಾಗಿ ಇಲ್ಲಿಯವರೆಗೆ ಆಕಾಶವೇ ಮೊದಲಾದ ಅನ್ನಮಯದವರೆಗಿನ ಕಾರ್ಯವನ್ನು ತಿಳಿಸಿ, ಬ್ರಹ್ಮದ ಅನುಗಮನವನ್ನೂ ತಿಳಿಸಿದ್ದಾಯಿತು. ಅಲ್ಲಿ ’ಅನ್ನಮಯನಾದ ಆತ್ಮನಿಗಿಂತ ಬೇರೆಯವನಾಅದ ಒಳಗಿನ ಆತ್ಮನಾದ ಪ್ರಾಣಮಯನು, ಅವನ ಒಳಗೆ ಮನೋಮಯನು, ಅವನ ಒಳಗೆ ವಿಜ್ಞಾನಮಯನು ಇರುತ್ತಾನೆ’ ಎಂದು ಆತ್ಮನನ್ನು ವಿಜ್ಞಾನದ ಗುಹೆಯೊಳಗೆ ಹೊಗಿಸಿದ್ದಾಯಿತು. ಮತ್ತು ಅಲ್ಲಿ ಆನಂದಮಯನೆಂಬ ಅಸಾಧಾರಣ ಆತ್ಮನನ್ನು ತೋರಿಸಿ ಕೊಟ್ಟಾಯಿತು. ಅಲ್ಲಿಂದ ಮುಂದೆ, ಆನಂದಮಯನೆಂಬ ಗುರುತನ್ನು ಅರಿತುಕೊಳ್ಳುವ ಮೂಲಕ ಆನಂದವು ಹೆಚ್ಚುವುದರ ಕೊನೆಯಾಗಿರುವ ಆತ್ಮನು, ಆನಂದಮಯನಿಗೆ ಪುಚ್ಛವೂ ಪ್ರತಿಷ್ಠೆಯೂ ಆಗಿರುವ ಬ್ರಹ್ಮವು, ಎಲ್ಲಾ ವಿಕಲ್ಪಗಳಿಗೂ ಆಶ್ರಯವಾಗಿರುವ ನಿರ್ವಿಕಲ್ಪವು, ಅದೇ ಗುಹೆಯಲ್ಲಿ ಅರಿಯಬಲ್ಲದ್ದು ಎಂದು ಅದರ ಪ್ರವೇಶವನ್ನು ಇಲ್ಲಿ ಕಲ್ಪಿಸಿದೆ.

ಬ್ರಹ್ಮವು ಮತ್ತೆಲ್ಲಿಯೂ ಕಾಣಬರುವುದಿಲ್ಲ. ಏಕೆಂದರೆ ಅದು ಯಾವ ವಿಶೇಷವೂ ಇಲ್ಲದ್ದು. ವಿಶೇಷವಸ್ತುವಿನ ಸಂಬಂಧವೇ ನಿರ್ವಿಶೇಷವಾದದ್ದನ್ನು ಅರಿಯುವುದಕ್ಕೆ ಕಾರಣವಾಗುತ್ತದೆ ಎನ್ನುವುದು ಲೋಕ ಸಿದ್ಧ. ಉದಾಹರಣೆಗೆ ರಾಹುವಿಗೆ ಚಂದ್ರ ಮತ್ತು ಸೂರ್ಯ ಎಂಬ ವಿಶೇಷ ವಸ್ತುಗಳ ಸಂಬಂಧವುಂಟಾಗುವುದು ಅದನ್ನು ಅರಿಯುವುದಕ್ಕೆ ಕಾರಣವಾಗುತ್ತದೆ. ಇದೇ ರೀತಿ, ಅಂತಃಕರಣವೆಂಬ ಗುಹೆಯ ಸಂಬಂಧವು ಬ್ರಹ್ಮವನ್ನು ಅರಿತುಕೊಳ್ಳಲು ಕಾರಣವಾಗಿರುತ್ತದೆ. ಏಕೆಂದರೆ ಅಂತಃಕರಣವು ಅತ್ಮನಿಗೆ ಹತ್ತಿರವಿರುತ್ತದೆ ಮತ್ತು ಬ್ರಹ್ಮವು ಪ್ರಕಾಶಾತ್ಮಕವಾಗಿರುತ್ತದೆ. ಹೇಗೆ ಬೆಳಕಿದ್ದರೇ ಗಡಿಗೆಯೇ ಮೊದಲಾದವುಗಳ ಅರಿವು ಉಂಟಾಗುತ್ತದೆಯೋ ಹಾಗೆಯೇ ಬುದ್ಧಿಯ ಪ್ರತ್ಯಯವೆಂಬ ಬೆಳಕಿನಿಂದ ಕೂಡಿದರೆ ಆತ್ಮದ ಅರಿವು ಉಂಟಾಗುತ್ತದೆ. ಆದ್ದರಿಂದ ಅರಿವಿಗೆ ಕಾರಣವಾದ ಅಂತಃಕರಣವೆಂಬ ಗುಹೆಯಲ್ಲಿ ಬ್ರಹ್ಮವು ಇಡಲ್ಪಟ್ಟಿದೆ ಎನ್ನುವುದು ಪ್ರಕೃತವೇ ಆಗಿದೆ.

ಆಕಾಶಾದಿಗಳಿಗೆ ಕಾರಣವಾದ ಅದೇ ಬ್ರಹ್ಮವು ಕಾರ್ಯವನ್ನು ಸೃಷ್ಟಿಸಿ ಅದರೊಳಕ್ಕೆ ಅನುಪ್ರವೇಶ ಮಾಡಿರುವಂತೆ ಒಳಗಿನ ಗುಹೆಯಾದ ಬುದ್ಧಿಯಲ್ಲಿ ದೃಷ್ಟೃ (ನೋಡುತ್ತದೆ), ಶ್ರೋತೃ (ಕೇಳುತ್ತದೆ), ಮಂತೃ (ಆಲೋಚಿಸುತ್ತದೆ), ವಿಜ್ಞಾತೃ (ಅರಿಯುತ್ತದೆ) – ಎಂದೀ ಪರಿಯಲ್ಲಿ ವಿಶೇಷ ರೂಪಗಳುಳ್ಳದ್ದಾಗಿ ಕಂಡುಬರುತ್ತದೆ. ಇದೇ ಅದರ ಪ್ರವೇಶವು. ಅದು ಹೀಗೇ ಎಂದು ತಿಳಿಯತಕ್ಕದ್ದು. ಬ್ರಹ್ಮವು ಅಂತಃಕರಣದ ಒಳಗೆ ಹೊಕ್ಕಿರುವಂತೆ ಕಾಣುತ್ತಿದೆ, ಹೊರಗಿನಿಂದ ನಿಜವಾಗಿ ಒಳಹೊಕ್ಕಿತು ಎಂಬ ಅರ್ಥವಲ್ಲ ಎಂದು ಅಭಿಪ್ರಾಯ.

ತದನು ಪ್ರವಿಶ್ಯ ಸಚ್ಚ ತ್ಯಚ್ಚಾಭವತ್ ನಿರುಕ್ತಂ ಚಾನಿರುಕ್ತಂ ಚ ನಿಲಯನಂ ಚಾನಿಲಯನಂ ಚ ವಿಜ್ಞಾನಂ ಚಾವಿಜ್ಞಾನಂ ಸತ್ಯಂ ಚಾನೃತಂ ಚ ಸತ್ಯಮಭವತ್ ಯದಿದಂ ಕಿಂಚ ತತ್ಸತ್ಯಮಿತ್ಯಾಚಕ್ಷತೇ ।। 7 ।।  ತದಪ್ಯೇಷ ಶ್ಲೋಕೋ ಭವತಿ ।। 8 ।। ಇತಿ ಷಷ್ಠೋಽನುವಾಕಃ ।। 6 ।।

ಅದನ್ನು ಒಳಹೊಕ್ಕು ಸತ್ತೂ ತ್ಯತ್ತೂ ಆಯಿತು. ನಿರುಕ್ತವೂ ಅನುರುಕ್ತವೂ, ನಿಲಯನವೂ ಅನಿಲಯನವೂ, ವಿಜ್ಞಾನವೂ ಅವಿಜ್ಞಾನವೂ, ಸತ್ಯವೂ ಅನೃತವೂ ಸತ್ಯವು ಆಯಿತು. ಇದು ಏನೇನಿದೆಯೋ ಎಲ್ಲವೂ ಆಯಿತು. ಅದನ್ನು ಸತ್ಯವೆಂದು ಕರೆಯುತ್ತಾರೆ.

ಇಲ್ಲಿ ಸತ್ತೂ ಎಂದರೆ ಮೂರ್ತವೂ ತ್ಯತ್ತೂ ಎಂದರೆ ಅಮೂರ್ತವೂ ಆಯಿತು ಎಂದರ್ಥ. ಮೂರ್ತಾಮೂರ್ತಗಳು ಅವ್ಯಾಕೃತವಾದ ನಾಮ-ರೂಪಗಳಾಗಿ ಆತ್ಮನಲ್ಲಿದ್ದು ಒಳಗಿರುವ ಆತ್ಮನಿಂದ ವ್ಯಾಕೃತವಾಗಿ ಮಾಡಲ್ಪಡುತ್ತವೆ. ವ್ಯಾಕೃತವಾದ ನಂತರ ಅವು ಮೂರ್ತ ಮತ್ತು ಅಮೂರ್ತ ಎಂಬ ಶಬ್ದಗಳಿಂದ ಕರೆಯಲ್ಪಡುತ್ತವೆ. ಅವು ಆತ್ಮನಿಗಿಂತ ಬೇರೆಯಾಗಿರದೇ, ಬೇರೆ ದೇಶ-ಕಾಲಗಳಲ್ಲಿ ಇರುವುದಿಲ್ಲ. ಆತ್ಮನೇ ಅವೆರಡೂ ಆದನು ಎನ್ನಿಸಿಕೊಳ್ಳುತ್ತಾನೆ. ಆತ್ಮನು ಕೂಟಸ್ಥನಾಗಿರುವುದರಿಂದ ಅವನು ನಿಜವಾಗಿ ನಾಮ-ರೂಪಗಳಾಗಿ ಪರಿಣಮಿಸಿದನು ಎಂಬ ಅಭಿಪ್ರಾಯವೂ ಇಲ್ಲ.

ಹಾಗೆಯೇ ಆತ್ಮನು ನಿರುಕ್ತವೂ ಅನಿರುಕ್ತವೂ ಆದನು. ನಿರುಕ್ತ ಎಂದರೆ ತನಗೆ ಸಮಾನವಾದ ಮತ್ತು ಸಮಾನವಲ್ಲದ ಜಾತಿಯ ಪದಾರ್ಥಗಳಿಂದ ವಿಂಗಡಿಸಿ ಗೊತ್ತುಮಾಡಿ ದೇಶ, ಕಾಲ ಇವುಗಳಿಂದ ಕೂಡಿ ಅದು ಇದು ಎಂದು ಉಕ್ತವಾಗಿರುವುದು. ಅನಿರುಕ್ತ ಎಂದರೆ ಅದಕ್ಕೆ ವಿರುದ್ಧವಾದುದು. ಈ ನಿರುಕ್ತ-ಅನಿರುಕ್ತ ಎನ್ನುವವೂ ಮೂರ್ತಾಮೂರ್ತಗಳ ವಿಶೇಷಣಗಳೇ. ಹೇಗೆ ಸತ್ತು-ತ್ಯತ್ತು ಅಂದರೆ ಪ್ರತ್ಯಕ್ಷವಾದುದು-ಪರೋಕ್ಷವಾದುದು ಎರಡೂ ಹೇಗೆ ಮೂರ್ತಾಮೂರ್ತಗಳ ಧರ್ಮಗಳೋ ನಿರುಕ್ತಾನಿರುಕ್ತಗಳೂ ಹಾಗೆಯೇ.

ಇದರಂತೆ ನಿಲಯನವೂ ಅನಿಲಯನವೂ ಆದನು. ನಿಲಯನ ಎಂದರೆ ಗೂಡು, ಆಶ್ರಯ. ಇದೂ ಮೂರ್ತದ್ದೇ ಧರ್ಮವು. ಅನಿಲಯನ ಎಂದರೆ ಅದಕ್ಕೆ ವಿರುದ್ಧವಾದುದು. ಇದೂ ಅಮೂರ್ತಕ್ಕೆ ಧರ್ಮವು. ಹೀಗೆ, ತ್ಯತ್, ಅನಿರುಕ್ತ, ಅನಿಲಯನ ಎನ್ನುವವು ಅಮೂರ್ತಕ್ಕೆ ಧರ್ಮವಾದರೂ ವ್ಯಾಕೃತ (ಅಥವಾ ಮೂರ್ತ) ಕ್ಕೇ ಸಂಬಂಧಿಸಿವೆ. ಏಕೆಂದರೆ ಅವು ಸೃಷ್ಟಿಯಾದ ನಂತರ ಉಂಟಾಗುವವು ಎಂದು ಶ್ರುತಿಯು ಹೇಳಿದೆ. ತ್ಯತ್ ಎಂದರೆ ಪ್ರಾಣವೇ ಮೊದಲಾದದ್ದು. ಅನಿರುಕ್ತವೆಂದರೂ ಅದೇ, ಅನಿಲಯನ ಎಂದರೂ ಅದೇ ಆದ್ದರಿಂದ ಈ ಅಮೂರ್ತದ ವಿಶೇಷಣಗಳು ವ್ಯಾಕೃತಕ್ಕೆ ಸಂಬಂಧಿಸಿದವೇ ಆಗಿವೆ. ಚೇತನಾಚೇತನಗಳೂ, ಸತ್ಯಾನೃತಗಳೂ ಬ್ರಹ್ಮವೇ.

ವಿಜ್ಞಾನವೆಂದರೆ ಚೇತನವು. ಅವಿಜ್ಞಾನ ಎಂದರೆ ಅದು ಇಲ್ಲದ್ದು, ಅಚೇತನವು. ಕಲ್ಲು ಮೊದಲಾದವುಗಳು. ಸತ್ಯ ಎಂದರೆ ವ್ಯವಹಾರಕ್ಕೆ ಬರುವ ವಿಷಯ. ಅದಕ್ಕೆ ವಿರುದ್ಧವಾದುದು ಅನೃತ. ಬಿಸಿಲುಕುದುರೆಯ ನೀರೆಂಬ ಅನೃತಕ್ಕೆ ಹೋಲಿಸಿದರೆ ಬಾಯಾರಿಕೆಯನ್ನು ನೀಗಿಸುವ ನೀರೇ ಸತ್ಯವೆಂದು ಕರೆಯಲ್ಪಡುತ್ತದೆ.  ಆದ್ದರಿಂದ ಇವೆಲ್ಲವೂ ಆದದ್ದು ಸತ್ಯವು. ಪರಮಾರ್ಥ ಸತ್ಯವು. ಈ ಪರಮಾರ್ಥ ಸತ್ಯವೇ ಸತ್ಯವೂ, ಜ್ಞಾನವೂ, ಅನಂತವೂ ಆದ ಬ್ರಹ್ಮವು. ಸತ್ತು, ತ್ಯತ್ತು ಮೊದಲಾದ ಮೂರ್ತಾಮೂರ್ತಗಳ ಧರ್ಮಸಮೂಹವೆಲ್ಲವೂ, ಯಾವ ಯಾವ ಈ ಕಾರ್ಯಸಮೂಹವೆನ್ನುವುದು ಇದೆಯೋ ಅವೆಲ್ಲವೂ, ಒಂದನ್ನೂ ಬಿಡದೇ ಎಲ್ಲವೂ, ಆ ಬ್ರಹ್ಮಕ್ಕಿಂತ ಬೇರೆಯಾಗಿ ಇರುವುದಿಲ್ಲ. ನಾಮ-ರೂಪ ಕಾರ್ಯವು ಬ್ರಹ್ಮಕ್ಕಿಂತ ಬೇರೆಯಾಗಿ ಇಲ್ಲದೇ ಇರುವುದರಿಂದ ಸತ್ ಎಂಬ ಶಬ್ದಕ್ಕೆ ವಾಚ್ಯವಾಗಿರುವ ಬ್ರಹ್ಮವೊಂದೇ ಎಲ್ಲವೂ ಆಗಿರುತ್ತದೆ. ಆ ಕಾರಣದಿಂದ ಅದನ್ನು ಸತ್ಯ ಎಂದು ಬ್ರಹ್ಮಜ್ಞಾನಿಗಳು ಕರೆಯುತ್ತಾರೆ. ಅದೇ ವಿಷಯದಲ್ಲಿ ಈ ಶ್ಲೋಕವಿರುವುದು.

[1] ಸೃಷ್ಟಿಗೆ ಪೂರ್ವದಲ್ಲಿ ನಾಮ-ರೂಪಗಳೆಲ್ಲವೂ ಆತ್ಮನೇ ಆಗಿದ್ದುದರಿಂದ ಕಾಮಗಳೂ ಪರಮಾತ್ಮನೇ ಆಗಿರುತ್ತವೆ.

[2] ನಾಮ-ರೂಪವಾಗಿ ತೋರುವ ಕಾಲದಲ್ಲಿಯೂ ಬ್ರಹ್ಮವೇ. ನೀರು ನೊರೆಯಲ್ಲವಾದರೂ ನೊರೆಯು ನೀರೇ ಆಗಿರುವಂತೆ.

Leave a Reply

Your email address will not be published. Required fields are marked *