ಋಗ್ವೇದ ಸಂಹಿತೆ ಮಂಡಲ 10, ಅನುವಾಕ 11, ಸೂಕ್ತ 130
[ಋಗ್ವೇದ ಸಂಹಿತಾ (ಸಾಯಣಭಾಷ್ಯ ಸಮೇತ, ಕರ್ಣಾಟಕ ಭಾಷಾರ್ಥಾನುವಾದವಿವರಣೆಗಳೊಂದಿಗೆ) ಭಾಗ 30 ಎಂಟನೆಯ ಅಷ್ಟಕದ ಅಧ್ಯಾಯಗಳು 5-8 ಹತ್ತನೆಯ ಮಂಡಲದ ಸೂಕ್ತಗಳು 95-191, ಅನುವಾದಕರು ಆಸ್ಥಾನಮಹಾವಿದ್ವಾನ್ ಹೆಚ್. ಪಿ. ವೆಂಕಟರಾವ್, ಶ್ರೀ ಜಯಚಾಮರಾಜೇಂದ್ರ ವೇದರತ್ನಮಾಲಾ, ಸಂಖ್ಯೆ 30, ಶ್ರೀ ಶಾರದಾ ಪ್ರೆಸ್, ಮೈಸೂರು, 1955]
[ಸೂಕ್ತದಲ್ಲಿರುವ ಋಕ್ಸಂಖ್ಯೆ 7; ಋಷಿಃ – ಯಜ್ಞಃ ಪ್ರಾಜಾಪತ್ಯಃ । ದೇವತಾ – ಭಾವವೃತ್ತಂ । ಛಂದಃ – 1 ಜಗತೀ । 2-7 ತ್ರಿಷ್ಟುಪ್]
ಯೋ ಯಜ್ಞೋ ವಿಶ್ವತಸ್ತಂತುಭಿಸ್ತತ ಏಕಶತಂ ದೇವಕರ್ಮೇಭಿರಾಯತಃ । ಇಮೇ ವಯಂತಿ ಪಿತರೋ ಯ ಆಯುಯುಃ ಪ್ರ ವಯಾಪ ವಯೇತ್ಯಾಸತೇ ತತೇ ।। 1 ।।
ಯಃ – ಯಾವ ಸೃಷ್ಟ್ಯಾತ್ಮಕವಾದ । ಯಜ್ಞಃ – ಯಜ್ಞವು । ತಂತುಭಿಃ – ವಿಯದಾದಿರೂಪದ ದಾರಗಳಿಂದ । ವಿಶ್ವತಃ – ಎಲ್ಲಾ ಕಡೆಯಲ್ಲಿಯೂ । ತತಃ – ವಿಸ್ತರಿಸಲ್ಪಡುವುದೋ । ದೇವಕರ್ಮೇಭಿಃ – ದೇವತೆಗಳನ್ನುದ್ದೇಶಿಸಿ ಜನರು ಮಾಡುವ ಕರ್ಮಗಳಿಂದ । ಏಕಶತಂ – ನೂರೊಂದು ಸಂವತ್ಸರಗಳ ವರೆಗೆ । ಆಯತಃ – ದೀರ್ಘವಾಗಿ ಅನುಷ್ಟಿಸಲ್ಪಡುವುದೋ ಅಂತಹ ಯಜ್ಞವನ್ನು । ಇಮೇ - ಈ । ಪಿತರಃ - ಪ್ರಜಾಪತಿಯ ಪ್ರಾಣಭೂತರಾದ ವಿಶ್ವಸೃಷ್ಟಿ ಮಾಡುವ ದೇವತೆಗಳು । ವಯಂತಿ – ನೇಯ್ದು ನಿರ್ಮಿಸುತ್ತಾರೆ । ಯೇ ದೇವಾಃ – ಯಾವ ದೇವತೆಗಳು । ಪ್ರ ವಯ – ಉತ್ಕೃಷ್ಟಚೇತನವಾದ ಭೋಕ್ತೃವಿನ ಸೃಷ್ಟಿಯನ್ನೂ । ಅಪ ವಯ – ನಿಕೃಷ್ಟ ಅಚೇತನವಾದ ಭೋಗ್ಯ ಪ್ರಪಂಚದ ಸೃಷ್ಟಿಯನ್ನೂ । ಆಯಯುಃ – ಸೃಷ್ಟಿಕಾರ್ಯದಿಂದ ವ್ಯಾಪಿಸಿದರೋ ಆ ದೇವತೆಗಳು । ತತೇ – ವಿಸ್ತಾರವಾದ ಸತ್ಯಲೋಕದಲ್ಲಿ । ಅಸತೇ – ಪ್ರಾಣರೂಪದಿಂದ ಪ್ರಜಾಪತಿಯನ್ನು ಪೂಜಿಸುತ್ತಾರೆ ।
ಯಾವ ಸೃಷ್ಟ್ಯಾತ್ಮಕವಾದ ಯಜ್ಞಗಳು ವಿಯದಾದಿ ಪಂಚಭೂತಗಳೆಂಬ ದಾರಗಳಿಂದ ಎಲ್ಲಕಡೆಯೂ ವಿಸ್ತರಿಸಲ್ಪಡುವುದೋ, ದೇವತೆಗಳನ್ನು ಉದ್ದೇಶಿಸಿ ಮಾಡುವ ಕರ್ಮಗಳಿಂದ ನೂರು ವರ್ಷಗಳ ವರೆಗೆ ನಡೆಸಲ್ಪಡುವುದೋ, ಅಂತಹ ಯಜ್ಞವನ್ನು ಪ್ರಜಾಪತಿಯ ಪ್ರಾಣಭೂತರಾದವರೂ, ಸೃಷ್ಟಿಯನ್ನು ಮುಂದುವರೆಸುವವರೂ ಆದ ದೇವತೆಗಳು ಬಟ್ಟೆಯನ್ನು ನೇಯುವಂತೆ ನಿರ್ಮಿಸುತ್ತಾರೆ. ಮತ್ತು ಯಾವ ದೇವತೆಗಳು ಉತ್ಕೃಷ್ಟಚೇತನಾದ ಭೋಕ್ತೃವಿನ ಸೃಷ್ಟಿಯನ್ನೂ ನಿಕೃಷ್ಟವಾದುದೂ ಅಚೇತನವಾದುದೂ ಆದ ಭೋಗ್ಯ ವಸ್ತುಗಳ ಸೃಷ್ಟಿಯನ್ನೂ ಮಾಡುತ್ತಾರೋ ಆ ದೇವತೆಗಳು ವಿಸ್ತಾರವಾದ ಸತ್ಯಲೋಕದಲ್ಲಿ ಪ್ರಜಾಪತಿಯನ್ನು ಧ್ಯಾನಾದಿಗಳಿಂದ ಉಪಾಸಿಸುತ್ತಾರೆ.
ಈ ಋಕ್ಕಿನಲ್ಲಿ ಸೃಷ್ಟಿಕ್ರಮವನ್ನು ಯಜ್ಞಕ್ಕೂ ಬಟ್ಟೆಗೂ ಹೋಲಿಸಿ ವರ್ಣಿಸಿದೆ. ಸೃಷ್ಟಿಯೇ ಒಂದು ಯಜ್ಞವು. ದಾರಗಳಿಂದ ಬಟ್ಟೆಯನ್ನು ನೇಯುವಂತೆ ಸೃಷ್ಟಿಯನ್ನು ನಾನಾ ವಿಧದ ಯಜ್ಞಕರ್ಮಗಳಿಂದ ದೇವತೆಗಳು ನೆರವೇರಿಸುತ್ತಾರೆ. ಪ್ರಜಾಪತಿಯು ಮೊದಲು ಪಂಚಭೂತಾತ್ಮಕವಾದ ಈ ಪ್ರಪಂಚವನ್ನು ಸೃಷ್ಟಿಸಿದನು. ನಂತರ ದೇವತೆಗಳನ್ನು ಸೃಷ್ಟಿಸಿ, ಮುಂದೆ ಮಾಡಬೇಕಾದ ಸೃಷ್ಟಿಯನ್ನು ದೇವತೆಗಳೇ ಮುಂದುವರಿಸಿಕೊಂಡು ಹೋಗುವಂತೆ ಮಾಡಿದನು. ಇದನ್ನೇ ಇಲ್ಲಿ ಹೇಳಿದೆ.
ಯಃ ಯಜ್ಞಃ ವಿಶ್ವತಃ ತಂತುಭಿಃ ತತಃ – ಇಲ್ಲಿ ಸೃಷ್ಟಿಯನ್ನು ಯಜ್ಞಕ್ಕೆ ಹೋಲಿಸಿದೆ. ಆ ಯಜ್ಞವನ್ನು ಬಟ್ಟೆಯ ನಿರ್ಮಾಣಕ್ಕೆ ಹೋಲಿಸಿದೆ. ಇಲ್ಲಿ ಪಂಚಭೂತಗಳೇ ದಾರಗಳು.
ಏಕಶತಂ ದೇವಕರ್ಮೇಭಿಃ ಆಯತಃ – ಪ್ರಜಾಪತಿಯ ಆಯುಸ್ಸನ್ನು ಇಲ್ಲಿ ನೂರೊಂದು ವರ್ಷಗಳೆಂದು ಹೇಳಿದೆ. ಅಂದರೆ, ಚತುರ್ಮುಖ ಬ್ರಹ್ಮನು ತನ್ನದೇ ಆದ ದೇವಮಾನ ರೀತಿಯಿಂದ ನೂರು ಸಂವತ್ಸರದ ವರೆಗೆ ಜೀವಿಸುವನೆಂದು ಪುರಾಣಾದಿಗಳಲ್ಲಿ ಹೇಳಿದೆ. ಇಲ್ಲಿ ಏಕಶತಂ ಎಂಬ ಶಬ್ದಕ್ಕೆ ನೂರೊಂದು ವರ್ಷಗಳ ವರೆಗೆ ಎಂದು ಅರ್ಥಮಾಡುವುದಕ್ಕೆ ಬದಲಾಗಿ ಬ್ರಹ್ಮನು ತನ್ನ ಆಯುಃಪರಿಮಾಣದಲ್ಲಿ ಅಥವಾ ಬಹುಕಾಲದವರೆಗೆ ಎಂದು ಅರ್ಥಮಾಡಬಹುದು. ಯಜ್ಞದಲ್ಲಿ ಅಗ್ನಿಮಥನ, ಸೋಮಾಹರಣ, ದೇವತಾಹ್ವಾನ ಮೊದಲಾದ ನಾನಾ ಉಪಕರ್ಮಗಳಿರುವಂತೆ ಸೃಷ್ಟಿಕರ್ಮದಲ್ಲಿಯೂ ಜಗತ್ಸೃಷ್ಟಿಯಾದ ನಂತರ ಓಷಧಿ-ವನಸ್ಪತಿಗಳು, ಚೇತನಾಚೇತನಗಳು ಮೊದಲಾದವುಗಳ ಸೃಷ್ಟಿಯಾಗಬೇಕು. ಇಂತಹ ಉಪಸೃಷ್ಟಿಗಳಿಂದ ಕೂಡಿದ ಸೃಷ್ಟಿಯು ಅತಿ ವಿಸ್ತಾರವಾಗಿದೆ ಎಂಬ ಅಭಿಪ್ರಾಯವು.
ಇಮೇ ವಯಂತಿ ಪಿತರಃ – ಇಲ್ಲಿ ಪಿತರ ಶಬ್ದಕ್ಕೆ ಪಾಲಕರೂ, ಪ್ರಜಾಪತಿಯ ಅಂಶಭೂತರೂ ಆದ ದೇವತೆಗಳು ಎಂದು ಅರ್ಥೈಸಿದ್ದಾರೆ.
ಯೇ ಆಯಯುಃ ಪ್ರ ವಯ ಅಪ ವಯ ಇತಿ ಆಸತೇ ತೇ – ಇಲ್ಲಿ ಪ್ರವಯ ಎಂದರೆ ಉತ್ಕೃಷ್ಟವೂ ಚೇತನಾಯುಕ್ತವೂ ಆದ ಭೋಕ್ತೃವಿನ ಅಂದರೆ ಪ್ರಾಣಿಯ ಸೃಷ್ಟಿ ಎಂದು ಅರ್ಥವು. ಅದರಂತೆ ಅಪ ವಯ ಎಂದರೆ ನಿಕೃಷ್ಟವೂ ಅಚೇತವೂ ಆದ ಇತರ ಭೋಗಸಾಧಕ ವಸ್ತುಗಳು ಎಂದರ್ಥ. ಈ ಎರಡು ವಿಧವಾದ ಸೃಷ್ಟಿಯನ್ನು ಮಾಡುವ ದೇವತೆಗಳು ವಿಸ್ತಾರವಾದ ಸತ್ಯಲೋಕದಲ್ಲಿ ಬ್ರಹ್ಮನನ್ನು ಉಪಾಸಿಸುತ್ತಾರೆ ಎಂಬ ಅಭಿಪ್ರಾಯವು.
ಪುಮಾನ್ ಏನಂ ತನುತ ಉತ್ಕೃಣತ್ತಿ ಪುಮಾನ್ವಿ ತತ್ನೇ ಅಧಿ ನಾಕೇ ಅಸ್ಮಿನ್ । ಇಮೇ ಮಯೂಖಾ ಉಪ ಸೇದುರೂ ಸದಃ ಸಾಮಾನಿ ಚಕ್ರುಸ್ತಸರಾಣ್ಯೋತವೇ ।। 2 ।।
ಪುಮಾನ್ – ಆದಿಪುರುಷನಾದ ಪ್ರಜಾಪತಿಯು । ಏನಂ – ಈ ಯಜ್ಞವನ್ನು । ತನುತೇ – ಸೃಷ್ಟಿಮಾಡಿದ್ದಾನೆ (ಆ ಪ್ರಜಾಪತಿಯೇ) । ಉತ್ಕೃಣತ್ತಿ – ಆ ಯಜ್ಞವನ್ನು ಸಮಾಪ್ತಿಗೊಳಿಸುತ್ತಾನೆ । ಪುಮಾನ್ – ಆ ಪ್ರಜಾಪತಿಯು । ಅಸ್ಮಿನ್ – ಈ ಭೂಲೋಕದಲ್ಲಿಯೂ । ಅಧಿ ನಾಕೇ – ಸ್ವರ್ಗಲೋಕದಲ್ಲಿಯೂ । ವಿ ತತ್ನೇ – ವಿಸ್ತಾರಮಾಡುತ್ತಾನೆ । ಇಮೇ – ಈ । ಮಯೂಖಾಃ – ಪ್ರಜಾಪತಿಯ ರಶ್ಮಿಭೂತರೂ ಪ್ರಾಣಾತ್ಮಕರೂ ಆದ ವಿಶ್ವಸೃಷ್ಟಿಯಲ್ಲಿ ನಿರತರಾದ ದೇವತೆಗಳು । ಸದಃ ಉ – ದೇವತೆಗಳು ಆರಾಧಿಸುವ ಯಜ್ಞಗೃಹವನ್ನು । ಉಪ ಸೇದುಃ – ವಿಶ್ವಸೃಷ್ಟಿರೂಪವಾದ ವಿಶ್ವಸೃಜಾಮಯವೆಂಬ ಯಜ್ಞಮಾಡಲು ಸಮೀಪಿಸಿ ಅಲ್ಲಿ ಕುಳಿತುಕೊಂಡರು (ನಂತರ) । ಓತವೇ – ಯಜ್ಞವೆಂಬ ವಸ್ತ್ರವನ್ನು ನೇಯುವುದಕ್ಕಾಗಿ । ಸಾಮಾನಿ – ರಥಂತರಾದಿ ಸಾಮಮಂತ್ರಗಳನ್ನು । ತಸರಾಣಿ - ಅಡ್ಡಲಾಗಿ ಸೇರಿಸಿ ನೇಯುವ ದಾರಗಳನ್ನಾಗಿ । ಚಕ್ರುಃ – ಮಾಡಿದರು ।
ವಸ್ತ್ರವನ್ನು ನೇಯುವ ನೇಗೆಕಾರನು ವಸ್ತ್ರವನ್ನು ನೇಯುವಾಗ ಅದನ್ನು ಅಗಲವಾಗಿ ಹರಡಿ ಹಾಸು-ಹೊಕ್ಕುಗಳೆಂಬ ಉದ್ದ ಮತ್ತು ಅಡ್ಡ ದಾರಗಳಿಂದ ಸೇರಿಸಿ ನೇಯುತ್ತಾನೆ. ವಸ್ತ್ರನಿರ್ಮಾಣವು ಮುಗಿದ ನಂತರ ಅದನ್ನು ಸುತ್ತಿ ತೆಗೆದಿಡುತ್ತಾನೆ. ಅದರಂತೆಯೇ ಇಲ್ಲಿ ಪ್ರಜಾಪತಿಯು ಮೊದಲು ಯಜ್ಞವನ್ನು ಸೃಷ್ಟಿಸಿ ಅದನ್ನು ಎಲ್ಲರೂ ಅನುಷ್ಠಾನ ಮಾಡುವಂತೆ ವಿಸ್ತರಿಸಿ ಪ್ರಸಿದ್ಧಿಪಡಿಸುತ್ತಾನೆ. ಯಜ್ಞಾನುಷ್ಠಾನದ ನಂತರ ಅದನ್ನು ಸಮಾಪ್ತಿಗೊಳಿಸುತ್ತಾನೆ.
ಪುಮಾನ್ ವಿ ತತ್ನೇ ಅಧಿ ನಾಕೇ ಅಸ್ಮಿನ್ – ಇಲ್ಲಿ ಪುಮಾನ್ ಎಂದರೆ ಆದಿಪುರುಷನಾದ ಪ್ರಜಾಪತಿಯು. ಆ ಪ್ರಜಾಪತಿಯು ಭೂಮಿಯಲ್ಲಿಯೂ ಸ್ವರ್ಗಲೋಕದಲ್ಲಿಯೂ ಸೃಷ್ಟಿಯು ವಿಸ್ತೃತವಾಗುವಂತೆ ಮಾಡುತ್ತಾನೆ.
ಇಮೇ ಮಯೂಖಾ ಉಪ ಸೇದುಃ ಸದಃ – ಇಲ್ಲಿ ಮಯೂಖಾಃ ಎಂದರೆ ರಶ್ಮಿಗಳು. ಅಂದರೆ ಪ್ರಜಾಪತಿಯಿಂದ ಸೃಷ್ಟಿಸಲ್ಪಟ್ಟ ಅವನ ಪ್ರಾಣಭೂತರಾದ ದೇವತೆಗಳು. ಸೂರ್ಯನಿಂದ ರಶ್ಮಿಗಳು ಹೇಗೆ ಉತ್ಪನ್ನವಾಗುವವೋ ಹಾಗೆ ಪ್ರಜಾಪತಿಯಿಂದ ಅವನ ಚೈತನ್ಯಾಂಶಯುಕ್ತರಾದ ದೇವತೆಗಳು ಉತ್ಪನ್ನರಾಗುತ್ತಾರೆ. ಸದಃ ಎಂದರೆ ಯಜ್ಞಶಾಲೆ. ಪ್ರಜಾಪತಿಯ ಪ್ರಾಣಭೂತರೂ ಸೃಷ್ಟಿಕಾರ್ಯದಲ್ಲಿ ತೊಡಗಿರುವವರೂ ಆದ ಈ ದೇವತೆಗಳು ವಿಶ್ವಸೃಷ್ಟಿ ಎಂಬ ಯಜ್ಞವನ್ನು ಮಾಡಲು ಯಜ್ಞಗೃಹಕ್ಕೆ ಬಂದು ಅಲ್ಲಿ ಕುಳಿತರು.
ಸಾಮಾನಿ ಚಕ್ರುಃ ತಸರಾಣಿ ಓತವೇ – ಯಜ್ಞಗೃಹದಲ್ಲಿ ಬಂದು ಕುಳಿತು ಅವರು ಬಟ್ಟೆಯನ್ನು ನೇಯ್ದರು. ಬಟ್ಟೆಯನ್ನು ನೇಯುವುದಕ್ಕಾಗಿ ಮೊದಲು ಉದ್ದವಾದ ದಾರಗಳನ್ನು ಒಂದರ ಪಕ್ಕದಲ್ಲೊಂದರಂತೆ ಸಮನಾಗಿ ಹರಡುತ್ತಾರೆ. ಇವುಗಳಿಗೆ ಹಾಸುದಾರಗಳೆಂದು ಹೆಸರು. ನಂತರ ಆ ದಾರಗಳ ಮಧ್ಯದಲ್ಲಿ ಅಡ್ಡಲಾಗಿ ಬೇರೆ ದಾರಗಳನ್ನು ಒಂದೊಂದಾಗಿ ಸೇರಿಸಿ ನೇಯುತ್ತಾರೆ. ಈ ಅಡ್ಡ ದಾರಗಳಿಗೆ ಹೊಕ್ಕುದಾರಗಳೆಂದು ಹೆಸರು. ವಸ್ತ್ರನಿರ್ಮಾಣದಲ್ಲಿ ಹಾಸುದಾರ ಮತ್ತು ಹೊಕ್ಕು ದಾರ ಇವೆರಡೂ ಅವಶ್ಯಕವು. ಅದರಂತೆಯೇ ಯಜ್ಞಕರ್ಮವನ್ನು ನೆರವೇರಿಸುವಾಗ ದೇವತೆಗಳು ಋಙ್ಮಂತ್ರಗಳ ಜೊತೆಗೆ ರಥಂತರಾದಿ ಸಾಮಮಂತ್ರಗಳನ್ನೂ ಪಠಿಸಿದರು. ಋಙ್ಮಂತ್ರಗಳು ಹಾಸುದಾರಗಳು. ಸಾಮಮಂತ್ರಗಳು ಹೊಕ್ಕುದಾರಗಳು. ಪ್ರಜಾಪತಿಯು ಮೊದಲು ಸೃಷ್ಟಿಸಿದ ವಿಷಯಾದಿ ಪಂಚಭೂತಗಳೂ ಜಗದಾದಿಗಳೂ ಹಾಸುದಾರಗಳಾದವು. ದೇವತೆಗಳು ಸೃಷ್ಟಿಸಿದ ಇತರ ವಸ್ತುಜಾತಿಗಳು ಹೊಕ್ಕುದಾರಗಳಾದವು. ವಸ್ತ್ರನಿರ್ಮಾಣಕ್ಕೆ ಹಾಸು ಮತ್ತು ಹೊಕ್ಕು ದಾರಗಳೆರಡೂ ಅವಶ್ಯಕವಾಗಿರುವಂತ ಸೃಷ್ಟಿಕಾರ್ಯಕ್ಕೆ ಪ್ರಜಾಪತಿಯ ಮತ್ತು ದೇವತೆಗಳ ಸೃಷ್ಟಿಗಳು ಅವಶ್ಯಕವಾಗಿವೆ.
ಕಾಸೀತ್ಪ್ರಮಾ ಪ್ರತಿಮಾ ಕಿಂ ನಿದಾನಮಾಜ್ಯಂ ಕಿಮಾಸೀತ್ಪರಿಧಿಃ ಕ ಆಸೀತ್ । ಛಂದಃ ಕಿಮಾಸೀತ್ಪ್ರಉಗಂ ಕಿಮುತ್ಥಂ ಯದ್ದೇವಾ ದೇವಮಯಜಂತ ವಿಶ್ವೇ ।। 3 ।।
ಯತ್ - ಯಾವಾಗ । ದೇವಾಃ – ಸಾಧ್ಯರೇ ಮೊದಲಾದ ದೇವತೆಗಳು । ದೇವಂ – ಪ್ರಜಾಪತಿಯನ್ನು । ಅಯಜಂತ – ಯಜ್ಞಾನುಷ್ಠಾನದಿಂದ ಆರಾಧಿಸಿದರೋ ಆಗ (ಈ ಯಜ್ಞದ) । ಪ್ರಮಾ – ಪ್ರಮಾಣವು (ಯಾವರೀತಿ ಎಷ್ಟುಕಾಲದ ವರೆಗೆ ಮಾಡಬೇಕೆಂದು) । ಕಾ ಆಸೀತ್ – ಯಾವುದಾಗುತ್ತು? ಅಥವಾ ಹೀಗಿತ್ತು? ಪ್ರತಿಮಾ – ದೇವತೆಯು ಯಾವುದು । ನಿದಾನಂ – ಕಾರಣವು ಎಂದರೆ ಯಜ್ಞಮಾಡಿದ ಫಲವು । ಕಿಂ ಆಸೀತ್ -ಏನಾಗಿತ್ತು? ಆಜ್ಯಂ – ಹವಿಸ್ಸಿಗಾಗಿ ಉಪಯೋಗಿಸುವ ಘೃತವು । ಕಿಂ ಆಸೀತ್ – ಯಾವುದಾಗಿತ್ತು? ಪರಿಧಿಃ – ಅಗ್ನಿಕುಂಡದ ನಾಲ್ಕೂ ದಿಕ್ಕುಗಳಲ್ಲಿ ರಕ್ಷೋಬಾಧನಿಮಿತ್ತವಾಗಿ ಇಡುವ ಪಲಾಶಾದಿ ಕಾಷ್ಠಗಳು । ಕಿಂ ಆಸೀತ್ – ಯಾವುದು? ಛಂದಃ – ಮಂತ್ರಗಳ ಛಂದಸ್ಸುಗಳು । ಕಿಂ ಆಸೀತ್ – ಯಾವುದು? ಪ್ರಉಗಂ ಉಕ್ಥಂ - ಆಜ್ಯಪ್ರಉಗ ಮೊದಲಾದ ಉಕ್ಥಮಂತ್ರಗಳೂ ಶಸ್ತ್ರಮಂತ್ರಗಳೂ । ಕಿಂ – ಯಾವುದು?
ಸೃಷ್ಟಿಕಾಲದಲ್ಲಿ ಸಾಧ್ಯರೇ ಮೊದಲಾದ ದೇವತೆಗಳು ಸೃಷ್ಟಿಯನ್ನು ಮುಂದುವರಿಸಲು ಪ್ರಜಾಪತಿಯನ್ನು ಉದ್ದೇಶಿಸಿ ಯಜ್ಞಮಾಡಿದಾಗ ಪ್ರಪಂಚಸೃಷ್ಟಿಯು ಪೂರ್ತಿಯಾಗಿರಲಿಲ್ಲವಾದ್ದರಿಂದ ಯಜ್ಞಸಾಮಗ್ರಿಗಳು ಎಲ್ಲಿದ್ದವು? ಅವು ಯಾವುವು? ಯಜ್ಞದ ಪರಿಮಿತಿಯೆಷ್ಟು? ಅಂದರೆ ಯಜ್ಞವನ್ನು ಎಷ್ಟುಕಾಲ ಮಾಡಬೇಕು? ಅದಕ್ಕೆ ದೇವತೆಯಾವುದು? ಯಜ್ಞಫಲ ಯಾವುದು? ಯಜ್ಞದಲ್ಲಿ ಉಪಯೋಗಿಸುವ ಆಜ್ಯ, ಪರಿಧಿಗಳೆಂಬ ಸಮಿತ್ತುಗಳು ಯಾವುವು? ಛಂದಸ್ಸುಗಳು ಯಾವುವು? ಪ್ರಉಗ ಮೊದಲಾದ ಉಕ್ಥಮಂತ್ರಗಳೂ ಶಸ್ತ್ರಮಂತ್ರಗಳೂ ಯಾವುವು?
ಅಗ್ನೇರ್ಗಾಯತ್ರ್ಯಭವತ್ಸಯುಗ್ವೋಷ್ಣಿಹಯಾ ಸವಿತಾ ಸಂ ಬಭೂವ । ಅನುಷ್ಟುಭಾ ಸೋಮ ಉಕ್ಥೈರ್ಮಹಸ್ವಾನ್ಬೃಹಸ್ಪತೇರ್ಬೃಹತೀ ವಾಚಮಾವತ್ ।। 4 ।।
ಅಗ್ನೇಃ - ಅಗ್ನಿಗೆ । ಗಾಯತ್ರೀ – ಗಾಯತ್ರೀ ಛಂದಸ್ಸು । ಸಯುಗ್ವಾ – ಸಹಾಯಭೂತಮಂತ್ರವಾಗಿ । ಅಭವತ್ - ಆಯಿತು । ಸವಿತಾ – ಸವಿತೃದೇವನು । ಉಷ್ಣಿಹಯಾ – ಉಷ್ಣಿಕ್ ಛಂದಸ್ಸಿನಿಂದ ಸಹಿತವಾಗಿ । ಸಂ ಬಭೂವ - ಆದನು । ಮಹಸ್ವಾನ್ – ತೇಜಸ್ವಿಯಾದ । ಸೋಮಃ – ಸೋಮನು । ಉಕ್ಥೈಃ – ಉಕ್ಥಮಂತ್ರಗಳಿಂದಲೂ । ಅನುಷ್ಟುಭಾ – ಅನುಷ್ಟುಪ್ ಛಂದಸ್ಸಿನಿಂದಲೂ ಯುಕ್ತನಾದನು (ಹಾಗೆಯೇ) । ಬೃಹಸ್ಪತೇಃ ವಾಚಂ – ಬ್ರಹಸ್ಪತಿಯನ್ನು ಸ್ತುತಿಸುವ ಮಂತ್ರವು । ಬೃಹತೀ – ಬೃಹತೀ ಛಂದಸ್ಸಿನದಾಗಿ । ಆವತ್ – ಆಯಿತು.
ಅಗ್ನಿಗೆ ಗಾಯತ್ರೀ ಛಂದಸ್ಸು, ಎಂದರೆ ಗಾಯತ್ರೀ ಛಂದಸ್ಸಿನ ಮಂತ್ರವು ಸಹಾಯಕವಾಯಿತು. ಸವಿತೃವಿಗೆ ಉಷ್ಣಕ್ ಛಂದಸ್ಸು, ತೇಜಸ್ವಿಯಾದ ಸೋಮನಿಗೆ ಉಕ್ಥ ಮಂತ್ರಗಳೂ ಮತ್ತು ಅನುಷ್ಟುಪ್ ಛಂದಸ್ಸೂ, ಬೃಹಸ್ಪತಿಗೆ ಬೃಹತೀ ಛಂದಸ್ಸೂ ಅವರನ್ನು ಸ್ತುತಿಸಲು ಸಹಾಯಕ ಮಂತ್ರಗಳಾದವು.
ಹಿಂದಿನ ಋಕ್ಕಿನಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರವಾಗಿ ಈ ಋಕ್ಕಿನಲ್ಲಿ ಯಾವ ಛಂದಸ್ಸುಗಳನ್ನು ಬಳಸಿದರು ಎಂದು ಮಾತ್ರ ಹೇಳಿದೆ. ಆಜ್ಯ, ಪರಿಧಿ ಮೊದಲಾದ ಸಾಮಗ್ರಿಗಳ ಪ್ರಸ್ತಾಪವಿಲ್ಲ. ಏಕೆಂದರೆ ಛಂದಸ್ಸೇ ಯಜ್ಞದ ಸಾರವು. ಛಂದಸ್ಸುಗಳನ್ನು ವರ್ಣಿಸುವುದರಿಂದ ಯಜ್ಞದ ಸಮಸ್ತ ಅಂಗಗಳನ್ನೂ ವಿವರಿಸಿದಂತಾಯಿತು ಎಂಬ ಭಾವನೆಯಿಂದ ಋಷಿಯು ಇದನ್ನು ಮಾತ್ರ ವಿವರಿಸಿರಬಹುದು. ಅಲ್ಲದೇ ಆಜ್ಯಂ ಕಿಮಾಸೀತ್? ಪರಿಧಿಃ ಕ ಆಸೀತ್? ಎಂಬ ಎರಡು ಪ್ರಶ್ನೆಗಳಿಗೆ ಪುರುಷಸೂಕ್ತದಲ್ಲಿ ಉತ್ತರವಿದೆ. [1]
ಯಜ್ಞಕ್ಕೂ ಛಂದಸ್ಸುಗಳಿಗೂ ಇರುವ ಸಂಬಂಧವನ್ನು ತೈತ್ತರೀಯ ಸಂಹಿತೆಯಲ್ಲಿ ಹೇಳಿದೆ: ಪೂರ್ವದಲ್ಲಿ ಪ್ರಜಾಪತಿಯು ದೇವತೆಗಳನ್ನೂ ಅಸುರರನ್ನು ಸೃಷ್ಟಿಮಾಡಿದನು. ನಂತರ ಯಜ್ಞವನ್ನು ಸೃಷ್ಟಿಸಿ, ಛಂದಸ್ಸುಗಳನ್ನು ಸೃಷ್ಟಿಸಿದನು. ಬಳಿಕ ದೇವಾಸುರರು ಪ್ರಜಾಪತಿಯ ಬಳಿ ಬಂದಾಗ ಯಜ್ಞವು ಪ್ರಜಾಪತಿಯನ್ನು ಬಿಟ್ಟು ಅಸುರರನ್ನು ಹಿಂಬಾಲಿಸಿ ಹೊರಟುಹೋಯಿತು. ಯಜ್ಞವು ಹೋಗಲು, ಛಂದಸ್ಸುಗಳೂ ಯಜ್ಞವನ್ನನುಸರಿಸಿ ಹೊರಟುಹೋದವು. ಇದನ್ನು ನೋಡಿ ದೇವತೆಗಳು ಯಜ್ಞವು ನಮ್ಮನ್ನು ಬಿಟ್ಟು ಅಸುರರಲ್ಲಿ ಸೇರಿದ್ದರಿಂದ ಇನ್ನು ಮುಂದೆ ಯುದ್ಧಾದಿಗಳಲ್ಲಿ ಅಸುರರು ನಮ್ಮನ್ನು ಸೋಲಿಸಿ ಜಯಶಾಲಿಗಳಾಗುತ್ತಾರೆ ಎಂದು ಯೋಚಿಸಿ ಪ್ರಜಾಪತಿಯ ಬಳಿ ಓಡಿ ಬಂದು ತಿಳಿಸಲು ಪ್ರಜಾಪತಿಯು ಅವರಿಗೆ “ಭಯಪಡಬೇಡಿ! ಆ ಛಂದಸ್ಸುಗಳ ವೀರ್ಯವನ್ನು ಸಂಗ್ರಹಿಸಿ ನಿಮಗೆ ಕೊಡುತ್ತೇನೆ. ಅದರಿಂದ ನೀವು ಜಯಶಾಲಿಗಳಾಬಹುದು” ಎಂದು ಹೇಳಿ ಛಂದಸ್ಸುಗಳ ಸಾರವನ್ನು ತೆಗೆದು ದೇವತೆಗಳಿಗೆ ಕೊಟ್ಟನು. ಛಂದಸ್ಸುಗಳು ಅಸುರರನ್ನು ಬಿಟ್ಟು ಪುನಃ ದೇವತೆಗಳ ಬಳಿ ಬಂದವು. ಯಜ್ಞವೂ ಆ ಛಂದಸ್ಸುಗಳನ್ನೇ ಅನುಸರಿಸಿ ದೇವತೆಗಳ ಬಳಿ ಬಂದಿತು. ತಮ್ಮ ಬಳಿ ಬಂದ ಯಜ್ಞದ ಅನುಷ್ಠಾನ ಮಾಡಿ ದೇವತೆಗಳು ಅಸುರರನ್ನು ಸೋಲಿಸಿದರು. ಆಶ್ರಾವಯ, ಅಸ್ತು ಶ್ರೌಷಟ್, ಯಜ, ಯೇ ಯಜಾಮಹೇ, ವಷಟ್ಕಾರಃ ಇವೇ ಛಂದಸ್ಸುಗಳ ವೀರ್ಯ ಅಥವಾ ಸಾರಾಂಶ ಮಂತ್ರಗಳು[2].
ಅಗ್ನೇಃ ಗಾಯತ್ರೀ ಅಭವತ್ ಸಯುಗ್ವಾ – ಅಗ್ನಿಗೆ ಗಾಯತ್ರೀ ಛಂದಸ್ಸಿನ ಮಂತ್ರಗಳೇ ಹಿತಕರವು. ಪ್ರಜಾಪತಿಯು ಸೃಷ್ಟಿಮಾಡುವಾಗ ತನ್ನ ಮುಖದಿಂದ ತ್ರಿವೃತ್ಸ್ತೋಮ, ಅಗ್ನಿ, ಗಾಯತ್ರೀ ಛಂದಸ್ಸು- ಇವುಗಳನ್ನು ಸೃಷ್ಟಿಸಿದನು. ಆದ್ದರಿಂದ ಅಗ್ನಿಗೆ ತ್ರಿವೃತ್ಸ್ತೋಮವೂ, ಗಾಯತ್ರೀ ಛಂದಸ್ಸೂ ಹಿತಕರವು. ಇದಲ್ಲದೇ ಸಾಮಮಂತ್ರಗಳಲ್ಲಿ ರಥಂತರಸಾಮವೂ, ಮನುಷ್ಯರಲ್ಲಿ ಬ್ರಾಹ್ಮಣನೂ, ಪಶುಗಳಲ್ಲಿ ಆಡೂ ಪ್ರಜಾಪತಿಯ ಮುಖದಿಂದ ಉತ್ಪನ್ನವಾದ್ದರಿಂದ ಇವುಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ[3].
ಉಷ್ಣಿಹಾ ಸವಿತಾ ಸಂಬಭುವ – ಉಷ್ಣಿಕ್ ಛಂದಸ್ಸಿನ ಮಂತ್ರಗಳು ಸವಿತೃದೇವನಿಗೆ ಪ್ರಿಯವಾದವುಗಳು. ಆದ್ದರಿಂದ ಈ ಛಂದಸ್ಸಿನ ಮಂತ್ರಗಳಿಂದ ಸವಿತೃದೇವನನ್ನು ಸ್ತುತಿಸಬೇಕು.
ಅನುಷ್ಟುಭಾ ಸೋಮಃ ಉಕ್ಥೈಃ ಮಹಸ್ವಾನ್ – ತೇಜಸ್ವಿಯಾದ ಸೋಮದೇವನಿಗೆ ಅನುಷ್ಟುಪ್ ಛಂದಸ್ಸು ಪ್ರಿಯವು. ಆದ್ದರಿಂದ ಈ ಛಂದಸ್ಸಿನ ಮಂತ್ರಗಳಿಂದ ಮತ್ತು ಉಕ್ಥ ಮಂತ್ರಗಳಿಂದ ಮಾಧ್ಯಂದಿನ ಸವನದಲ್ಲಿ ಸೋಮನನ್ನು ಸ್ತುತಿಸುತ್ತಾರೆ.
ಬೃಹಸ್ಪತೇಃ ಬೃಹತೀ ವಾಚಂ ಆವತ್ – ಬೃಹಸ್ಪತಿಗೆ ಬೃಹತೀ ಛಂದಸ್ಸು ಪ್ರಿಯವಾಯಿತು. ಆದ್ದರಿಂದ ಬೃಹಸ್ಪತಿಯನ್ನು ಬೃಹತೀ ಛಂದಸ್ಸಿನ ಮಂತ್ರಗಳಿಂದ ಸ್ತುತಿಸಬೇಕು.
ವಿರಾಣ್ಮಿತ್ರಾವರುಣಯೋರಭಿಶ್ರೀರಿಂದ್ರಸ್ಯ ತ್ರಿಷ್ಟುಬಿಹ ಭಾಗೋ ಅಹ್ನಃ । ವಿಶ್ವಾನ್ದೇವಾನ್ಜಗತ್ಯಾ ವಿವೇಶ ತೇನ ಚಾಕ್ಲೃಪ್ರಋಷಯೋ ಮನುಷ್ಯಾಃ ।। 5 ।।
ಮಿತ್ರಾವರುಣಯೋಃ – ಮಿತ್ರಾವರುಣರಿಗೆ । ವಿರಾಟ್ – ವಿರಾಟ್ ಎಂಬ ಛಂದಸ್ಸು । ಅಭಿಶ್ರೀಃ – ಆಶ್ರಯಭೂತವಾಗಿದ್ದಿತು । ಇಹ – ಈ ಯಜ್ಞದಲ್ಲಿ । ತ್ರಿಷ್ಟುಪ್ – ತ್ರಿಷ್ಟುಪ್ ಛಂದಸ್ಸು । ಇಂದ್ರಸ್ಯ - ಇಂದ್ರನ । ಅಹ್ನಃ – ಹಗಲಿನ । ಭಾಗಃ – ಮಾಧ್ಯಂದಿನ ಸವನದ ಅಂಶವಾಗಿತ್ತು । ಜಗತೀ – ಜಗತೀ ಛಂದಸ್ಸು । ವಿಶ್ವಾನ್ ದೇವಾನ್ – ವಿಶ್ವೇದೇವತೆಗಳನ್ನು । ಆ ವಿವೇಶ – ಪ್ರವೇಶಿಸಿ ಅವರಲ್ಲಿ ವ್ಯಾಪ್ತವಾಯಿತು । ತೇನ – ಆ ಯಜ್ಞದಿಂದ । ಋಷಯಃ – ಋಷಿಗಳೂ । ಮನುಷ್ಯಾಃ - ಮನುಷ್ಯರೂ । ಚಾಪ್ಲೃಪ್ರೇ – ಸೃಷ್ಟಿಸಲ್ಪಟ್ಟರು ।
ಮಿತ್ರಾವರುಣರಿಗೆ ವಿರಾಟ್ ಛಂದಸ್ಸು ಆಶ್ರಯವಾಯಿತು. ಯಜ್ಞದಲ್ಲಿ ಮಧ್ಯಾಹ್ನಕಾಲದಲ್ಲಿ ನಡೆಯುವ ಮಾಧ್ಯಂದಿನ ಸವನದ ಭಾಗವೇ ತ್ರಿಷ್ಟುಪ್ ಛಂದಸ್ಸಾಯಿತು. ವಿಶ್ವೇದೇವತೆಗಳನ್ನು ಜಗತೀ ಛಂದಸ್ಸು ಪ್ರವೇಶಿಸಿತು. ದೇವತೆಗಳು ಸೃಷ್ಟ್ಯರ್ಥವಾಗಿ ನೆರವೇರಿಸಿದ ಆ ಯಜ್ಞದಿಂದ ಋಷಿಗಳೂ ಮನುಷ್ಯರೂ ಉತ್ಪನ್ನರಾದರು.
ವಿರಾಟ್ ಮಿತ್ರಾವರುಣಯೋಃ ಅಭಿಶ್ರೀಃ – ವಿರಾಟ್ ಛಂದಸ್ಸು ಮಿತ್ರಾವರುಣರ ಜೊತೆಯಲ್ಲಿಯೇ ಪ್ರಜಾಪತಿಯಿಂದ ಉತ್ಪನ್ನವಾಯಿತು.
ಇಂದ್ರಸ್ಯ ತ್ರಿಷ್ಟುಪ್ ಇಹ ಭಾಗಃ ಅಹ್ನಃ – ಮಾಧ್ಯಂದಿನ ಸವನದಲ್ಲಿ ಇಂದ್ರನಿಗೆ ಮುಖ್ಯವಾದ ಭಾಗವಿದೆ. ಆ ಸವನದಲ್ಲಿ ತ್ರಿಷ್ಟುಪ್ ಛಂದಸ್ಸಿನ ಮಂತ್ರಗಳನ್ನು ಪಠಿಸಬೇಕಾಗುತ್ತದೆ. ಏಕೆಂದರೆ ಪ್ರಾತಃಸವನದಲ್ಲಿ ಗಾಯತ್ರೀ ಛಂದಸ್ಸಿನ ಮಂತ್ರಗಳನ್ನೂ, ಮಾಧ್ಯಂದಿನ ಸವನದಲ್ಲಿ ತ್ರಿಷ್ಟುಪ್ ಛಂದಸ್ಸಿನ ಮಂತ್ರಗಳನ್ನೂ, ತೃತೀಯ ಸವನದಲ್ಲಿ ಜಗತೀ ಛಂದಸ್ಸಿನ ಮಂತ್ರಗಳನ್ನೂ ಪಠಿಸಬೇಕೆಂಬ ನಿಯಮವಿದೆ. ತೈತ್ತರೀಯ ಸಂಹಿತೆಯ ಪ್ರಕಾರ – ಪ್ರಜಾಪತಿಯು ತನ್ನ ಎದೆಯಿಂದಲೂ ಬಾಹುಗಳಿಂದಲೂ ಪಂಚದಶ ಸ್ತೋಮವನ್ನು ನಿರ್ಮಿಸಿದನು. ನಂತರ ಇಂದ್ರನನ್ನೂ, ತ್ರಿಷ್ಟುಪ್ ಛಂದಸ್ಸನ್ನೂ, ಬೃಹತ್ಸಾಮವೆಂಬ ಸಾಮಮಂತ್ರವನ್ನೂ ಸೃಷ್ಟಿಸಿದನು. ಪ್ರಜಾಪತಿಯ ಬಾಹುಗಳಿಂದ ಉತ್ಪನ್ನನಾದ್ದರಿಂದ ಇಂದ್ರನು ಎಲ್ಲರಿಗಿಂತಲೂ ಶ್ರೇಷ್ಠನಾದನು. ಆದ್ದರಿಂದ ಮನುಷ್ಯರಲ್ಲಿ ಕ್ಷತ್ರಿಯರು ಬಲಿಷ್ಠರಾದರು. ಪಶುಗಳಲ್ಲಿ ಕುರಿಯು ಯಜ್ಞಾರ್ಹವಾಯಿತು.[4]
ವಿಶ್ವಾನ್ ದೇವಾನ್ ಜಗತೀ ಆ ವಿವೇಶ – ವಿಶ್ವೇದೇವತೆಗಳನ್ನು ಜಗತೀ ಛಂದಸ್ಸು ಪ್ರವೇಶಿಸಿತು. ವಿಶ್ವೇದೇವತೆಗಳನ್ನೂ ಜಗತೀ ಛಂದಸ್ಸನ್ನೂ ಪ್ರಜಾಪತಿಯು ಒಟ್ಟಿಗೇ ಸೃಷ್ಟಿಸಿದುದರಿಂದ ಜಗತೀ ಛಂದಸ್ಸು ವಿಶ್ವೇದೇವತೆಗಳಿಗೆ ಪ್ರಿಯವಾಯಿತು. ತೈತ್ತರೀಯ ಸಂಹಿತೆಯ ಪ್ರಕಾರ – ಪ್ರಜಾಪತಿಯು ತನ್ನ ಉದರ ಭಾಗದಿಂದ ಸಪ್ತದಶಸ್ತೋಮವನ್ನು ಸೃಷ್ಟಿಸಿದನು. ಅನಂತರ ವಿಶ್ವೇದೇವತೆಗಳನ್ನೂ, ಜಗತೀ ಛಂದಸ್ಸನ್ನೂ, ವೈರೂಪ ಸಾಮಮಂತ್ರವನ್ನೂ ಸೃಷ್ಟಿಸಿದನು. ಹಾಗೆಯೇ ವೈಶ್ಯರನ್ನೂ, ಗೋವುಗಳನ್ನೂ ಸೃಷ್ಟಿಸಿದನು. ಪ್ರಜಾಪತಿಯ ಉದರದಿಂದ ಹುಟ್ಟಿದವರಾದ್ದರಿಂದ ವೈಶ್ಯರು ಮನುಷ್ಯರಲ್ಲಿ ಅನ್ನಧಾನ ಎಂದರೆ ಆಹಾರಾದಿ ಧನ-ಧಾನ್ಯವಸ್ತುಗಳಲ್ಲಿ ಎಲ್ಲ ಮನುಷ್ಯರಿಗಿಂತಲೂ ಅನುಕೂಲವಾಗಿದ್ದರು. ಹಾಗೆಯೇ ಗೋವುಗಳು ಆಹಾರಾರ್ಥವಾಗಿ ಹಾಲನ್ನು ಉತ್ಪಾದಿಸುವ ಪಶುಗಳಲ್ಲಿ ಶ್ರೇಷ್ಠವಾದವು.[5]
ಚಾಕ್ಲೃಪ್ರೇ ತೇನ ಋಷಯೋ ಮನುಷ್ಯಾ ಯಜ್ಞೇ ಜಾತೇ ಪಿತರೋ ನಃ ಪುರಾಣೇ । ಪಶ್ಯನ್ಮನೇ ಮನಸಾ ಚಕ್ಷುಶಾ ತಾನ್ಯ ಇಮಂ ಯಜ್ಞಮಯಂತ ಪೂರ್ವೇ ।। 6 ।।
ಪುರಾಣೇ – ಅತಿ ಪುರಾತನ ಕಾಲದಲ್ಲಿ ನಡೆದ । ಯಜ್ಞೇ – ಈ ಯಜ್ಞವನ್ನು । ಜಾತೇ (ಸತಿ) – ವಿಶ್ವಸೃಷ್ಟಿಮಾಡ ಬಯಸಿದ ದೇವತೆಗಳು ನೆರವೇರಿಸಿದಾಗ । ತೇನ – ಆ ಯಜ್ಞದಿಂದ । ಋಷಯಃ – ಋಷಿಗಳೂ । ಮನುಷ್ಯಾಃ - ಮನುಷ್ಯರೂ । ನಃ - ನಮ್ಮ । ಪಿತರಃ – ಪಿತೃಭೂತರಾದ ಪೂರ್ವಪುರುಷರೂ । ಚಾಕ್ಲೃಪ್ರೇ – ಸೃಷ್ಟಿಸಲ್ಪಟ್ಟರು । ಇಮಂ ಯಜ್ಞಂ – ಈ ಯಜ್ಞವನ್ನು । ಯೇ ಪೂರ್ವೇ – ಪ್ರಜಾಪತಿಯ ಪ್ರಾಣಭೂತರಾದ ಸಾಧ್ಯರೆಂಬ ಪೂರ್ವಕಾಲದ ಯಾವ ದೇವತೆಗಳು । ಅಯಜಂತ – ಅನುಷ್ಠಾನ ಮಾಡಿದರೋ । ತಾನ್ – ಪ್ರಾಣರೂಪದಿಂದ ಸರ್ವತ್ರ ಇರುವ ಆ ದೇವತೆಗಳನ್ನು । ಚಕ್ಷಸಾ – ನೋಡಿ ತಿಳಿದುಕೊಳ್ಳಲು ಸಮರ್ಥವಾದ । ಮನಸಾ - ಮನಸ್ಸಿನಿಂದ । ಪಶ್ಯನ್ - ತಿಳಿದು । ಮನ್ಯೇ – ಆ ವಿಶ್ವಸ್ರಷ್ಟೃಗಳಾದ ದೇವತೆಗಳನ್ನು ಸ್ತುತಿಸುತ್ತೇನೆ.
ಅತಿ ಪುರಾತನ ಕಾಲದಲ್ಲಿ ವಿಶ್ವಸೃಷ್ಟಿ ಮಾಡಲಿಚ್ಛಿಸಿದ ದೇವತೆಗಳು ಈ ಯಜ್ಞವನ್ನು ಮಾಡಿದಾಗ ಆ ಯಜ್ಞದಿಂದ ಋಷಿಗಳೂ, ಮನುಷ್ಯರೂ, ಮತ್ತು ನಮ್ಮ ಪೂರ್ವಿಕರಾದ ಪಿತೃಗಳೂ ಹುಟ್ಟಿಕೊಂಡರು. ಪ್ರಜಾಪತಿಯ ಪ್ರಾಣರೂಪದಿಂದ ಸಾಧ್ಯರೆಂಬ ಯಾವ ಪೂರ್ವದೇವತೆಗಳು ಈ ಯಜ್ಞವನ್ನು ಅನುಷ್ಠಾನಮಾಡಿದರೋ ಆ ದೇವತೆಗಳನ್ನು ವಿಮರ್ಶೆಮಾಡಿ ನೋಡಿ ತಿಳಿಯಲು ಸಮರ್ಥವಾದ ಮನಸ್ಸಿನಿಂದ ತಿಳಿದು ಸ್ತುತಿಸುತ್ತೇನೆ.
ಸಹಸ್ತೋಮಾಃ ಸಹಚ್ಛಂದಸ ಅವೃತಃ ಸಹಪ್ರಮಾ ಋಷಯಃ ಸಪ್ತದೈವ್ಯಾಃ । ಪೂರ್ವೇಷಾಂ ಪಂಥಾಮನುದೃಶ್ಯ ಧೀರಾ ಅನ್ವಾಲೇಭಿರೇ ರಥ್ಯೋ ನ ರಶ್ಮೀನ್ ।। 7 ।।
ಸಹಸ್ತೋಮಾಃ – ತ್ರಿವೃತ್ಪಂಚದಶಾದಿ ಸ್ತೋಮ ಪಠನದಿಂದ ಸಹಿತರಾದವರೂ । ಸಹಚ್ಛಂದಸಃ – ಗಾಯತ್ರ್ಯಾದಿ ಸಪ್ತ ಛಂದಸ್ಸುಗಳ ಮಂತ್ರಪಠನಯುಕ್ತರೂ । ಆವೃತಃ – ಮಂತ್ರಗಳನ್ನು ಪಠಿಸುವವರೂ । ಸಹಪ್ರಮಾಃ – ಯಜ್ಞಾನುಷ್ಠಾನ ಪರಿಜ್ಞಾನವುಳ್ಳವರೂ । ದೈವ್ಯಾಃ – ದೇವನಾದ ಪ್ರಜಾಪತಿಗೆ ಸಂಬಂಧಪಟ್ಟವರೂ ಅಥವಾ ದೇವತೆಗಳಿಗೆ ಸಂಬಂಧಪಟ್ಟವರೂ ಆದ । ಸಪ್ತ ಋಷಯಃ – ಮರೀಚ್ಯಾದಿ ಸಪ್ತ ಋಷಿಗಳು ಅಥವಾ ಹೋತ್ರಾದಿ ಸಪ್ತವಷಟ್ಕರ್ತರು । ಪೂರ್ವೇಶಾಂ – ಪೂರ್ವ ಪುರುಷರ್ದ ಅಂಗಿರಸರೇ ಮೊದಲಾದವರ ಅಥವಾ ವಿಶ್ವಸ್ರಷ್ಟೃಗಳಾದ ದೇವತೆಗಳ । ಪಂಥಾಂ – ಯಜ್ಞಾನುಷ್ಠಾನಮಾರ್ಗವನ್ನು । ಅನುದೃಶ್ಯ – ಕ್ರಮವಾಗಿ ತಿಳಿದು । ಧೀರಾಃ – ಬುದ್ಧಿವಂತರಾಗಿ । ರಥ್ಯಃ – ರಥವನ್ನು ನಡೆಸುವ ಸಾರಥಿಯ್ । ರಶ್ಮೀನ್ ನ – ಅಶ್ವಗಳ ಲಗಾಮುಗಳನ್ನು ಹಿಡಿಯುವಂತೆ । ಅನ್ವಾಲೇಭಿರೇ – ಕ್ರಮವಾಗಿ ಯಜ್ಞಾನುಷ್ಠಾನವನ್ನು ಆರಂಭಿಸಿದರು ಎಂದರೆ ಪ್ರವೃತ್ತರಾದರು ।
ತ್ರಿವೃತ್ಪಂಚದಶಾದಿ ಸ್ತೋಮ ಮಂತ್ರಗಳನ್ನೂ, ಗಾಯತ್ರ್ಯಾದಿ ಸಪ್ತ ಛಂದಸ್ಸುಗಳಿಂದ ಕೂಡಿದ ಮಂತ್ರಗಳನ್ನೂ ಪಠಿಸುತ್ತಾ ಯಾಗಾನುಷ್ಠಾನ ಪರಿಜ್ಞಾವಿರುವ ದೇವತೆಗಳಿಗೆ ಸಂಬಂಧಿಸಿ ಮರೀಚ್ಯಾದಿ ಸಪ್ತಋಷಿಗಳು ಅಥವಾ ಸಪ್ತ ವಷಟ್ಕಾರ ಕರ್ತರು ಹಿಂದಿನ ವಿಶ್ವಸೃಷ್ಟೃಗಳಾದ ದೇವತೆಗಳ ಅಥವಾ ಅಂಗಿರಾಪ್ರಭೃತಿಗಳ ಯಜ್ಞಾನುಷ್ಠಾನ ಮಾರ್ಗವನ್ನು ತಿಳಿದು ಬುದ್ಧಿವಂತರಾಗಿ ರಥವನ್ನು ನಡೆಸುವ ಸಾರಥಿಯು ಅಶ್ವಗಳ ಲಗಾಮನ್ನು ಹಿಡಿದು ರಥವನ್ನು ನಡೆಸುವಂತೆ ಯಜ್ಞಾನುಷ್ಠಾನ ಪ್ರವೃತ್ತರಾದರು.
ಸಹಾಸ್ತೋಮಾಃ – ಸ್ತೋಮಗಳಲ್ಲಿ ಒಂಬತ್ತು ವಿಧಗಳಿವೆ: (1) ತ್ರಿವೃತ್ಸ್ತೋಮ (2) ಪಂಚದಶಸ್ತೋಮ (3) ಸಪ್ತದಶಸ್ತೋಮ (4) ಏಕವಿಂಶಸ್ತೋಮ (5) ತ್ರಿಣವಸ್ತೋಮ (6) ತ್ರಯಸ್ತ್ರಿಂಶಸ್ತೋಮ (7) ಚತುರ್ವಿಂಶಸ್ತೋಮ (8) ಚತುಶ್ಚತ್ವಾರಿಂಶತ್ಸ್ತೋಮ ಮತ್ತು (9) ಅಷ್ಟಾಚತ್ವಾರಿಂಶಸ್ತೋಮ.
ಸಹಚ್ಛಂದಸಃ – ಛಂದಸ್ಸುಗಳಲ್ಲಿ ಅನೇಕ ವಿಧವಿದ್ದರೂ ಯಜ್ಞಾದಿಗಳಲ್ಲಿ ಏಳು ವಿಧದ ಛಂದಸ್ಸುಗಳ ಮಂತ್ರಗಳನ್ನೇ ಮುಖ್ಯವಾಗಿ ಪಠಿಸುತ್ತಾರೆ: (1) ಗಾಯತ್ರೀ (2) ತ್ರಿಷ್ಟುಪ್ (3) ಜಗತೀ (4) ಅನುಷ್ಟುಪ (5) ಪಂಕ್ತಿ (6) ಉಷ್ಣಿಕ್ (7) ಬೃಹತೀ.
ಸಹಪ್ರಮಾಃ – ಇಂತಹ ಯಜ್ಞವನ್ನು ಇಷ್ಟು ದಿನಗಳ ವರೆಗೆ ಮಾಡಬೇಕೆಂಬ ವಿಷಯವನ್ನೂ ಯಜ್ಞಾನುಷ್ಠಾನ ಕ್ರಮಗಳನ್ನೂ ತಿಳಿದ ಋಷಿಗಳು.
ದೈವ್ಯಾಃ – ದೇವದೇವನಾದ ಪ್ರಜಾಪತಿಗೆ ಪ್ರಾಣಭೂತರಾದ ಸಾಧ್ಯರೆಂಬ ಪೂರ್ವಕಾಲೀನ ದೇವತೆಗಳು, ಅಥವಾ
ಋಷಯಃ ಸಪ್ತ – ಭರದ್ವಾಜ, ಕಶ್ಯಪ, ಗೋತಮ, ಅತ್ರಿ, ವಿಶ್ವಾಮಿತ್ರ, ಜಮದಗ್ನಿ, ವಸಿಷ್ಠ – ಈ ಸಪ್ತಋಷಿಗಳು ಅಥವಾ ಸಪ್ತ ವಷಟ್ಕಾರ ಕರ್ತರಾದ ಹೋತೃವೇ ಮೊದರಾದ ಋತ್ವಿಕ್ಕುಗಳು
ರಥ್ಯೋ ನ ರಶ್ಮೀನ್ – ರಥವನ್ನು ನಡೆಸುವ ಸಾರಥಿಯು ರಥವನ್ನು ನಡೆಸುವಾಗ ಕುದುರೆಯ ಲಗಾಮುಗಳನ್ನು ಕೈಯಲ್ಲಿ ಹಿಡಿದು ಯಾವ ರೀತಿಯಲ್ಲಿ ರಥವನ್ನು ನಡೆಸಲು ಪ್ರವೃತ್ತನಾಗುತ್ತಾನೋ ಅದರಂತೆ ಸಪ್ತಋಷಿಗಳು, ಹಿಂದಿನ ದೇವತೆಗಳು ಅಂತವಾ ಅಂಗಿರಾ ಋಷಿಗಳು ಅನುಸರಿಸಿದ ಯಜ್ಞಾನುಷ್ಠಾನ ಮಾರ್ಗವನ್ನೇ ಅನುಸರಿಸಿ ತಾವೂ ಯಜ್ಞಾನುಷ್ಠಾನದಲ್ಲಿ ಪ್ರವೃತ್ತರಾದರು.
[1] ದೇವಾ ಯಜ್ಞಮತನ್ವತ । ವಸಂತೋ ಅಸ್ಯಾಸೀದಾಜ್ಯಂ ಗ್ರೀಷ್ಮಇಧ್ಮಃ ಶರದ್ಧವಿಃ । ಸಪ್ತಾಸ್ಯಾಸನ್ಪರಿಧಯಸ್ತ್ರಿಃಸಪ್ತ ಸಮಿಧಃ ಕೃತಾಃ ।। (ಋಗ್ವೇದಸಂಹಿತೆ 10-90-6 ಮತ್ತು 15)
[2] ಪ್ರಜಾಪತಿರ್ದೇವಾಸುರಾನಸೃಜತ ತದನು ಯಜ್ಞೋಽಸೃಜ್ಯತ ಯಜ್ಞಂ ಛಂದಾಗ್ಂಸಿ ತೇ ವಿಷ್ವಂಚೋ ವ್ಯಕ್ರಾಮಂತ್ಸೋಽಸುರಾನನು ಯಜ್ಞೋಪಾಕ್ರಾಮದ್ಯಜ್ಞಂ ಛಂದಾಗ್ಂಸಿ ತೇ ದೇವಾ ಅಮನ್ಯಂತಾಮೀ ವಾ ಇದಮಭೂವನ್ ಯದ್ವಯಗ್ಗ್ ಸ್ಮ ಇತಿ ತೇ ಪ್ರಜಾಪತಿಮುಪಧಾವಂತ್ಸೋಽಬ್ರವೀತ್ಪ್ರಜಾಪತಿಶ್ಛಂದಸಾಂ ವೀರ್ಯಮಾದಾಯ ತದ್ವಃ ಪ್ರದಾಸ್ಯಾಮೀತಿ ಸ ಛಂದಸಾಂ ವೀರ್ಯಮಾದಾಯ ತದೇಭ್ಯಃ ಪ್ರಾಯಚ್ಛತ್ತದನು ಛಂದಾಗ್ ಸ್ಯಪಾಕ್ರಾಮನ್ ಛಂದಾಗ್ಂಸಿ ಯಜ್ಞಸ್ತತೋ ದೇವಾ ಅಭವನಪರಾಸುರಾ ಯ ಏವಂ ಛಂದಸಾಂ ವೀರ್ಯಂ ವೇದಾ ಶ್ರಾವಮಾನಸ್ತು ಶ್ರೌಷಡ್ಯಜ ಯೇ ಯಜಾಮಹೇ ವಷಟ್ಕಾರೋ ಭವತ್ಯಾತ್ಮನಾ ಪರಾಸ್ಯ ಭ್ರಾತೃವ್ಯೋ ಭವತಿ । (ತೈತ್ತರೀಯ ಸಂಹಿತೆ 3-3-7-1, 2)
[3] ಪ್ರಜಾಪತಿರಕಾಮಯತ ಪ್ರಾಜಾಯೇಯೇತಿ ಸ ಮುಖತಸ್ತ್ರಿವೃತಂ ನಿರಮಿಮೀತ ತಮಗ್ನಿರ್ದೇವತಾನ್ವಸೃಜ್ಯತ ಗಾಯತ್ರೀಛಂದೋ ರಥಂತರಗ್ಂ ಸಾಮ ಬ್ರಾಹ್ಮಣೋ ಮನುಷ್ಯಾಣಾಮಜಃ ಪಶೂನಾಂ ತಸ್ಮಾತ್ತೇ ಮುಖ್ಯಾ ಮುಖತೋಽಹ್ಯಸೃಜ್ಯಂತ । (ತೈತ್ತರೀಯ ಸಂಹಿತೆ 7-1-1-4)
[4] ಉರಸೋ ಬಾಹುಭ್ಯಾಂ ಪಂಚದಶಂ ನಿರಮಿಮೀತ ತಮಿಂದ್ರೋ ದೇವತಾನ್ವಸೃಜ್ಯತ ತ್ರಿಷ್ಟುಪ್ ಛಂದೋ ಬೃಹತ್ಸಾಮ ರಾಜನ್ಯೋ ಮನುಷ್ಯಾಣಾಮವಿಃ ಪಶೂನಾಂ ತಸ್ಮಾತ್ತೇ ವೀರ್ಯಾವಂತೋ ವೀರ್ಯಾದ್ಧ್ಯಸೃಜ್ಯಂತ । (ತೈತ್ತರೀಯ ಸಂಹಿತೆ 7-1-1-4)
[5] ಮಧ್ಯತಃ ಸಪ್ತದಶಂ ನಿರಮಿಮೀತ ತಂ ವಿಶ್ವೇದೇವಾ ದೇವತಾ ಅನ್ವಸೃಜ್ಯಂತ ಜಗತೀಛಂದೋ ವೈರೂಪಗ್ಂ ವೈಶ್ಯೋ ಮನುಷ್ಯಾಣಾಂ ಗಾವಃ ಪಶೂನಾಂ ತಸ್ಮಾತ್ತ ಆದ್ಯಾ ಅನ್ನಧಾನಾದ್ಧ್ಯಸೃಜ್ಯಂತ । (ತೈತ್ತರೀಯ ಸಂಹಿತೆ 7-1-1-5)