ಶ್ರೀಮದ್ಭಾಗವತಮಹಾಪುರಾಣ: ಅಷ್ಟಮ ಸ್ಕಂಧ: ಅಧ್ಯಾಯ 9
ಶ್ರೀಶುಕ ಉವಾಚ । ತೇಽನ್ಯೋನ್ಯತೋಽಸುರಾಃ ಪಾತ್ರಂ ಹರಂತಸ್ತ್ಯಕ್ತಸೌಹೃದಾಃ । ಕ್ಷಿಪಂತೋ ದಸ್ಯುಧರ್ಮಾಣ ಆಯಾಂತೀಂ ದದೃಶುಃ ಸ್ತ್ರಿಯಮ್ ।। 1 ।। ಅಹೋ ರೂಪಮಹೋ ಧಾಮ ಅಹೋ ಅಸ್ಯಾ ನವಂ ವಯಃ । ಇತಿ ತೇ ತಾಮಭಿದ್ರುತ್ಯ ಪಪ್ರಚ್ಛುರ್ಜಾತಹೃಚ್ಛಯಾಃ ।। 2 ।। ಕಾ ತ್ವಂ ಕಂಜಪಲಾಶಾಕ್ಷಿ ಕುತೋ ವಾ ಕಿಂ ಚಿಕೀರ್ಷಸಿ । ಕಸ್ಯಾಸಿ ವದ ವಾಮೋರು ಮಥ್ನತೀವ ಮನಾಂಸಿ ನಃ ।। 3 ।। ನ ವಯಂ ತ್ವಾಮರೈರ್ದೈತ್ಯೈಃ ಸಿದ್ಧಗಂಧರ್ವಚಾರಣೈಃ । ನಾಸ್ಪೃಷ್ಟಪೂರ್ವಾಂ ಜಾನೀಮೋ ಲೋಕೇಶೈಶ್ಚ ಕುತೋ ನೃಭಿಃ ।। 4 ।।
ಶ್ರೀಶುಕನು ಹೇಳಿದನು: “ಅಸುರರು ದಸ್ಯುಧರ್ಮವನ್ನು ಪ್ರದರ್ಶಿಸುತ್ತಾ ಸೌಹಾರ್ದತೆಯನ್ನು ಬದಿಗೊತ್ತಿ ಅನ್ಯೋನ್ಯರಿಂದ ಅಮೃತಪಾತ್ರೆಯನ್ನು ಕಸಿದುಕೊಳ್ಳುತ್ತಿದ್ದಾಗ ತಮ್ಮ ಕಡೆ ಬರುತ್ತಿದ್ದ ಸ್ತ್ರೀಯನ್ನು ನೋಡಿದರು. “ಆಹಾ! ಎಂತಹ ರೂಪ! ಎಂತಹ ತೇಜಸ್ಸು! ಎಂತಹ ನವಯೌವನ!” ಎಂದು ಉದ್ಗರಿಸುತ್ತಾ ಕಾಮೋದ್ದೀಪ್ತರಾದ ಆ ದಾನವರು ಅವಳ ಬಳಿ ಓಡಿಬಂದು ಕೇಳಿದರು: “ಪದ್ಮಪತ್ರಾಕ್ಷೀ! ವಾಮೋರು! ನಮ್ಮ ಮನಸ್ಸನ್ನು ಅತೀವವಾಗಿ ಕದಡುತ್ತಿರುವ ನೀನು ಯಾರು? ಎಲ್ಲಿಂದ ಬಂದಿರುವೆ? ಏನನ್ನು ಬಯಸಿ ಇಲ್ಲಿಗೆ ಬಂದಿರುವೆ? ಹೇಳು. ಅಮರರಾಗಲೀ ದೈತ್ಯರಾಗಲೀ ಸಿದ್ಧ-ಗಂಧರ್ವ-ಚಾರಣರಾಗಲೀ ನಿನ್ನನ್ನು ಈ ಮೊದಲು ಸ್ಪರ್ಶಿಸಿದ್ದಾರೆಂದು ನಮಗನ್ನಿಸುವುದಿಲ್ಲ. ಇನ್ನು ಮನುಷ್ಯರು ಹೇಗೆ ನಿನ್ನನ್ನು ಸ್ಪರ್ಶಿಸಿದ್ದಾರು?
ನೂನಂ ತ್ವಂ ವಿಧಿನಾ ಸುಭ್ರೂಃ ಪ್ರೇಷಿತಾಸಿ ಶರೀರಿಣಾಮ್ । ಸರ್ವೇಂದ್ರಿಯಮನಃಪ್ರೀತಿಂ ವಿಧಾತುಂ ಸಘೃಣೇನ ಕಿಮ್ ।। 5 ।। ಸಾ ತ್ವಂ ನಃ ಸ್ಪರ್ಧಮಾನಾನಾಮೇಕವಸ್ತುನಿ ಮಾನಿನಿ । ಜ್ಞಾತೀನಾಂ ಬದ್ಧವೈರಾಣಾಂ ಶಂ ವಿಧತ್ಸ್ವ ಸುಮಧ್ಯಮೇ ।। 6 ।। ವಯಂ ಕಶ್ಯಪದಾಯಾದಾ ಭ್ರಾತರಃ ಕೃತಪೌರುಷಾಃ । ವಿಭಜಸ್ವ ಯಥಾನ್ಯಾಯಂ ನೈವ ಭೇದೋ ಯಥಾ ಭವೇತ್ ।। 7 ।। ಇತ್ಯುಪಾಮಂತ್ರಿತೋ ದೈತ್ಯೈರ್ಮಾಯಾಯೋಷಿದ್ವಪುರ್ಹರಿಃ । ಪ್ರಹಸ್ಯ ರುಚಿರಾಪಾಂಗೈರ್ನಿರೀಕ್ಷನ್ನಿದಮಬ್ರವೀತ್ ।। 8 ।।
ಸುಂದರ ಹುಬ್ಬಿನವಳೇ! ಶರೀರಿಗಳ ಸರ್ವ ಇಂದ್ರಿಯಗಳನ್ನೂ ಮನಸ್ಸನ್ನೂ ತೃಪ್ತಿಗೊಳಿಸುವುದಕ್ಕಾಗಿ ವಿಧಾತನೇ ದಯೆಯಿಂದ ನಿನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆಯೇ? ಸುಂದರ ಹುಬ್ಬಿನವಳೇ! ಶರೀರಿಗಳ ಸರ್ವ ಇಂದ್ರಿಯಗಳನ್ನೂ ಮನಸ್ಸನ್ನೂ ತೃಪ್ತಿಪಡಿಸುವುದಕ್ಕಾಗಿ ದಯಾಳು ವಿಧಾತನೇ ನಿನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆಯೇ? ನಾವು ಕಶ್ಯಪನ ಮಕ್ಕಳು. ಅಣ್ಣ-ತಮ್ಮಂದಿರು. ಪೌರುಷ ಕಾರ್ಯಗಳನ್ನು ಮಾಡಿದ್ದೇವೆ. ಯಥಾನ್ಯಾಯವಾಗಿ ಯಾರಿಗೂ ಭೇದವಾಗದಂತೆ ಇದನ್ನು ಹಂಚು.” ದೈತ್ಯರು ಹೀಗೆ ಪ್ರಾರ್ಥಿಸಿಕೊಂಡಾಗ ಮಾಯಾಸ್ತ್ರೀಯ ವೇಷಧರಿಸಿದ್ದ ಹರಿಯು ನಗುತ್ತಾ ಸುಂದರ ಕಣ್ಣುನೋಟದಿಂದ ಅವರ ಕಡೆ ನೋಡುತ್ತಾ ಹೇಳಿದನು.
ಶ್ರೀಭಗವಾನುವಾಚ । ಕಥಂ ಕಶ್ಯಪದಾಯಾದಾಃ ಪುಂಶ್ಚಲ್ಯಾಂ ಮಯಿ ಸಂಗತಾಃ । ವಿಶ್ವಾಸಂ ಪಂಡಿತೋ ಜಾತು ಕಾಮಿನೀಷು ನ ಯಾತಿ ಹಿ ।। 9 ।। ಸಾಲಾವೃಕಾಣಾಂ ಸ್ತ್ರೀಣಾಂ ಚ ಸ್ವೈರಿಣೀನಾಂ ಸುರದ್ವಿಷಃ । ಸಖ್ಯಾನ್ಯಾಹುರನಿತ್ಯಾನಿ ನೂತ್ನಂ ನೂತ್ನಂ ವಿಚಿನ್ವತಾಮ್ ।। 10 ।।
ಶ್ರೀಭಗವಂತನು ಹೇಳಿದನು: “ಕಶ್ಯಪನ ಮಕ್ಕಳು ಪುಂಶ್ಚಲಿ[1]ಯಾದ ನನ್ನ ಜೊತೆಯಾಗುವುದೆಂದರೇನು? ಪಂಡಿತರು ಯಾವಾಗಲೂ ಕಾಮಿನಿಯರ ಮೇಲೆ ವಿಶ್ವಾಸವಿಡುವುದಿಲ್ಲ. ಸುರದ್ವಿಷರೇ! ತೋಳ ಮತ್ತು ಸ್ವೈರಿಣಿ ಸ್ತ್ರೀಯರ ಸ್ನೇಹವು ಅನಿತ್ಯವಾದುದೆಂದು ಹೇಳುತ್ತಾರೆ. ಅವರಿಬ್ಬರೂ ನಿತ್ಯವೂ ಹೊಸ ಹೊಸ ಬೇಟೆಯನ್ನು ಹುಡುಕುತ್ತಿರುತ್ತಾರೆ.””
ಶ್ರೀಶುಕ ಉವಾಚ । ಇತಿ ತೇ ಕ್ಷ್ವೇಲಿತೈಸ್ತಸ್ಯಾ ಆಶ್ವಸ್ತಮನಸೋಽಸುರಾಃ । ಜಹಸುರ್ಭಾವಗಂಭೀರಂ ದದುಶ್ಚಾಮೃತಭಾಜನಮ್ ।। 11 ।। ತತೋ ಗೃಹೀತ್ವಾಮೃತಭಾಜನಂ ಹರಿರ್ಬಭಾಷ ಈಶತ್ಸ್ಮಿತಶೋಭಯಾ ಗಿರಾ । ಯದ್ಯಭ್ಯುಪೇತಂ ಕ್ವ ಚ ಸಾಧ್ವಸಾಧು ವಾ ಕೃತಂ ಮಯಾ ವೋ ವಿಭಜೇ ಸುಧಾಮಿಮಾಮ್ ।। 12 ।। ಇತ್ಯಭಿವ್ಯಾಹೃತಂ ತಸ್ಯಾ ಆಕರ್ಣ್ಯಾಸುರಪುಂಗವಾಃ । ಅಪ್ರಮಾಣವಿದಸ್ತಸ್ಯಾಸ್ತತ್ತಥೇತ್ಯನ್ವಮಂಸತ ।। 13 ।।
ಶ್ರೀಶುಕನು ಹೇಳಿದನು: “ಅವಳ ಈ ಹುಡುಗಾಟದ ಮಾತುಗಳಿಂದ ಅಸುರರ ಮನಸ್ಸಿನಲ್ಲಿ ಅವಳ ಕುರಿತು ವಿಶ್ವಾಸವು ಹೆಚ್ಚಿತು. ಅವರೆಲ್ಲರೂ ಗಂಭೀರವಾಗಿ ನಕ್ಕು ಅಮೃತಕಲಶವನ್ನು ಅವಳ ಕೈಗಿತ್ತರು. ಈಶ ಹರಿಯು ಅಮೃತದ ಕಲಶವನ್ನು ತನ್ನ ಕೈಯಲ್ಲಿ ಹಿಡಿದು ಸ್ವಲ್ಪ ನಸುನಗುತ್ತಾ ಮಧುರ ಸ್ವರದಲ್ಲಿ ಹೇಳಿದನು: “ನಾನು ಹಂಚುವ ವಿಧಾನವು ಸರಿಯಿರಲಿ ಅಥವಾ ಸರಿಯಲ್ಲದಿರಲಿ, ನೀವು ಅದನ್ನು ಸಮ್ಮತಿಸುವುದಾದರೆ ನಿಮ್ಮ ಕೇಳಿಕೆಯಂತೆ ಈ ಕಲಶದಲ್ಲಿರುವ ಅಮೃತವನ್ನು ನಾನು ಹಂಚುತ್ತೇನೆ.” ಅವಳ ಈ ಸವಿಮಾತುಗಳನ್ನು ಕೇಳಿ ಅಸುರಪುಂಗವರು ಅವಳ ಅಪ್ರಮಾಣಿಕತೆಯನ್ನು ತಿಳಿಯದೇ ಅವಳಿಗೆ ಸಮ್ಮತಿಯನ್ನಿತ್ತರು.
ಅಥೋಪೋಷ್ಯ ಕೃತಸ್ನಾನಾ ಹುತ್ವಾ ಚ ಹವಿಷಾನಲಮ್ । ದತ್ತ್ವಾ ಗೋವಿಪ್ರಭೂತೇಭ್ಯಃ ಕೃತಸ್ವಸ್ತ್ಯಯನಾ ದ್ವಿಜೈಃ ।। 14 ।। ಯಥೋಪಜೋಷಂ ವಾಸಾಂಸಿ ಪರಿಧಾಯಾಹತಾನಿ ತೇ । ಕುಶೇಷು ಪ್ರಾವಿಶನ್ಸರ್ವೇ ಪ್ರಾಗಗ್ರೇಷ್ವಭಿಭೂಷಿತಾಃ ।। 15 ।। ಪ್ರಾಙ್ಮುಖೇಷೂಪವಿಷ್ಟೇಷು ಸುರೇಷು ದಿತಿಜೇಷು ಚ । ಧೂಪಾಮೋದಿತಶಾಲಾಯಾಂಜುಷ್ಟಾಯಾಂ ಮಾಲ್ಯದೀಪಕೈಃ ।। 16 ।। ತಸ್ಯಾಂ ನರೇಂದ್ರ ಕರಭೋರುರುಶದ್ದುಕೂಲ ಶ್ರೋಣೀತಟಾಲಸಗತಿರ್ಮದವಿಹ್ವಲಾಕ್ಷೀ । ಸಾ ಕೂಜತೀ ಕನಕನೂಪುರಶಿಂಜಿತೇನ ಕುಂಭಸ್ತನೀ ಕಲಶಪಾಣಿರಥಾವಿವೇಶ ।। 17 ।। ತಾಂ ಶ್ರೀಸಖೀಂ ಕನಕಕುಂಡಲಚಾರುಕರ್ಣ ನಾಸಾಕಪೋಲವದನಾಂ ಪರದೇವತಾಖ್ಯಾಮ್ । ಸಂವೀಕ್ಷ್ಯ ಸಮ್ಮುಮುಹುರುತ್ಸ್ಮಿತವೀಕ್ಷಣೇನ ದೇವಾಸುರಾ ವಿಗಲಿತಸ್ತನಪಟ್ಟಿಕಾಂತಾಮ್ ।। 18 ।।
ಆಗ ಅವರೆಲ್ಲರೂ ಒಂದು ದಿವಸದ ಉಪವಾಸವನ್ನು ಮಾಡಿ, ಸ್ನಾನಮಾಡಿ, ಹವಿಸ್ಸಿನಿಂದ ಅಗ್ನಿಯಲ್ಲಿ ಹೋಮಮಾಡಿ, ವಿಪ್ರರಿಗೆ ಗೋವುಗಳನ್ನಿತ್ತು, ದ್ವಿಜರಿಂದ ಸ್ವಸ್ತಿವಾಚನವನ್ನು ಮಾಡಿಸಿಕೊಂಡು, ತಮಗಿಷ್ಟವಾದ ನೂತನ ವಸ್ತ್ರಗಳನ್ನು ಧರಿಸಿ, ಗಂಧಮಾಲ್ಯಾದಿಗಳಿಂದ ಅಲಂಕರಿಸಿಕೊಂಡು ಪೂರ್ವಾಗ್ರವಾಗಿದ್ದ ದರ್ಭಾಸನಗಳಲ್ಲಿ ಕುಳಿತುಕೊಂಡರು. ನರೇಂದ್ರ! ಸುರರು ಮತ್ತು ದೈತ್ಯರು ಹಾಗೆ ಧೂಪದಿಂದ ಸುಗಂಧಿತವಾದ, ಮಾಲೆಗಳು ಮತ್ತು ದೀಪಗಳಿಂದ ಅಲಂಕೃತವಾದ ಭವ್ಯಭವನದಲ್ಲಿ ಪೂರ್ವಾಭಿಮುಖವಾಗಿ ಕುಳಿತುಕೊಂಡಿರಲು, ಕಮನೀಯ ಪೀತಾಂಬರವನ್ನುಟ್ಟಿದ್ದ ಮೋಹಿನಿಯು ಮೃದು ನಿತಂಬಗಳ ಭಾರದಿಂದ ಮೆಲ್ಲ-ಮೆಲ್ಲನೇ ನಡೆಯುತ್ತಾ ಅಮೃತಕಲಶವನ್ನೆತ್ತಿಕೊಂಡು ಚಿನ್ನದ ಕಾಲ್ಗೆಜ್ಜೆಗಳಿಂದ ಝಣ-ಝಣ ಶಬ್ದಮಾಡುತ್ತಾ ಅಮೃತಹಸ್ತಳಾಗಿ ಆ ಸಭಾಭವನಕ್ಕೆ ಆಗಮಿಸಿದಳು. ಅವಳ ಕಣ್ಣುಗಳು ಮದದಿಂದ ವಿಹ್ವಲವಾಗಿದ್ದವು. ಕಲಶಗಳಂತಿದ್ದ ಸ್ತನಗಳು ಉನ್ನತವಾಗಿದ್ದವು. ಆನೆಮರಿಯ ಸೊಂಡಲಿನಂತೆ ತೊಡೆಗಳು ದುಂಡಾಗಿದ್ದವು. ಶ್ರೀಯ ಸಖಿಯಂತಿದ್ದ ಅವಳ ಸುಂದರ ಕಿವಿಗಳಲ್ಲಿ ಸ್ವರ್ಣಕುಂಡಲಗಳು ಶೋಭಿಸುತ್ತಿದ್ದವು. ಅವಳ ಮುಖ ಮೂಗು-ಕೆನ್ನೆಗಳು ಸುಂದರವಾಗಿದ್ದವು. ಸೆರಗನ್ನು ಸ್ತನಗಳ ಕೆಳಗೆ ಸ್ವಲ್ಪ ಜಾರಿಸಿದ್ದ ಅವಳು ತನ್ನ ಮಂದಹಾಸಯುಕ್ತ ಓರೆನೋಟದಿಂದ ದೇವ-ದಾನವರನ್ನು ನೋಡಲು ಅವರೆಲ್ಲರೂ ಮೋಹಿತರಾಗಿಬಿಟ್ಟರು.
ಅಸುರಾಣಾಂ ಸುಧಾದಾನಂ ಸರ್ಪಾಣಾಮಿವ ದುರ್ನಯಮ್ । ಮತ್ವಾ ಜಾತಿನೃಶಂಸಾನಾಂ ನ ತಾಂ ವ್ಯಭಜದಚ್ಯುತಃ ।। 19 ।। ಕಲ್ಪಯಿತ್ವಾ ಪೃಥಕ್ಪಂಕ್ತೀರುಭಯೇಷಾಂ ಜಗತ್ಪತಿಃ । ತಾಂಶ್ಚೋಪವೇಶಯಾಮಾಸ ಸ್ವೇಷು ಸ್ವೇಷು ಚ ಪಂಕ್ತಿಷು ।। 20 ।। ದೈತ್ಯಾನ್ಗೃಹೀತಕಲಶೋ ವಂಚಯನ್ನುಪಸಂಚರೈಃ । ದೂರಸ್ಥಾನ್ಪಾಯಯಾಮಾಸ ಜರಾಮೃತ್ಯುಹರಾಂ ಸುಧಾಮ್ ।। 21 ।।
ಕ್ರೂರಸ್ವಭಾವದವರಾದ ಅಸುರರಿಗೆ ಅಮೃತವನ್ನು ಕೊಟ್ಟರೆ ಹಾವಿಗೆ ಹಾಲೆರೆದಂತೆ ಅನ್ಯಾಯವಾಗುತ್ತದೆ ಎಂದು ಯೋಚಿಸಿ ಅಚ್ಯುತನು ಅವರಿಗೆ ಅಮೃತವನ್ನು ಹಂಚಲಿಲ್ಲ. ಸುರರು ಮತ್ತು ಅಸುರರ ಪ್ರತ್ಯೇಕವಾದ ಎರಡು ಪಂಕ್ತಿಗಳನ್ನು ಜಗತ್ಪತಿಯು ಕಲ್ಪಿಸಲು ಅವರೆಲ್ಲರೂ ತಮ್ಮ-ತಮ್ಮವರೊಂದಿಗೆ ಎರಡು ಪಂಕ್ತಿಗಳಲ್ಲಿ ಕುಳಿತುಕೊಂಡರು. ಕಲಶವನ್ನು ಹಿಡಿದುಕೊಂಡು ಹಾವ-ಭಾವ ಕಟಾಕ್ಷ-ವೀಕ್ಷಣೆಗಳಿಂದ ಮೋಹಿತರನ್ನಾಗಿಸಿ, ದೂರದಲ್ಲಿ ಕುಳಿತಿದ್ದ ಸುರರಿಗೆ ಅವನು ಜರಾ-ಮೃತ್ಯುಗಳನ್ನು ಅಪಹರಿಸುವ ಸುಧೆಯನ್ನು ಕುಡಿಸಿದನು.
ತೇ ಪಾಲಯಂತಃ ಸಮಯಮಸುರಾಃ ಸ್ವಕೃತಂ ನೃಪ । ತೂಷ್ಣೀಮಾಸನ್ಕೃತಸ್ನೇಹಾಃ ಸ್ತ್ರೀವಿವಾದಜುಗುಪ್ಸಯಾ ।। 22 ।। ತಸ್ಯಾಂ ಕೃತಾತಿಪ್ರಣಯಾಃ ಪ್ರಣಯಾಪಾಯಕಾತರಾಃ । ಬಹುಮಾನೇನ ಚಾಬದ್ಧಾ ನೋಚುಃ ಕಿಂಚನ ವಿಪ್ರಿಯಮ್ ।। 23 ।। ದೇವಲಿಂಗಪ್ರತಿಚ್ಛನ್ನಃ ಸ್ವರ್ಭಾನುರ್ದೇವಸಂಸದಿ । ಪ್ರವಿಷ್ಟಃ ಸೋಮಮಪಿಬಚ್ಚಂದ್ರಾರ್ಕಾಭ್ಯಾಂ ಚ ಸೂಚಿತಃ ।। 24 ।।
ನೃಪ! ಅವಳೊಂದಿಗೆ ತಾವು ಮಾಡಿಕೊಂಡ ಒಪ್ಪಂದವನ್ನು ಪಾಲಿಸುತ್ತಾ ಅಸುರರು ಅವಳ ಮೇಲಿದ್ದ ಅತೀವ ಸ್ನೇಹದಿಂದ ಮತ್ತು ಸ್ತ್ರೀಯೊಂದಿಗೆ ಜಗಳವಾಡುವುದು ನಿಂದನೀಯವೆಂದು ತಿಳಿದು ಸುಮ್ಮನಿದ್ದರು. ಬಹಳ ಸಮ್ಮಾನಗಳಿಂದ ಬಂಧಿಸಿದ್ದ ಅವಳ ಮೇಲಿದ್ದ ಅತಿ ಪ್ರೇಮದ ಸಂಬಂಧವು ಕಡಿದುಹೋದೀತೆಂಬ ಭಯದಿಂದ ಅವರು ಯಾವುದೇ ಅಪ್ರಿಯ ಮಾತನ್ನೂ ಆಡಲಿಲ್ಲ. ಆಗ ದೇವತೆಗಳ ವೇಷವನ್ನು ಧರಿಸಿ ಪ್ರವೇಶಿಸಿದ್ದ ಸ್ವರ್ಭಾನುವು ಅಮೃತವನ್ನು ಕುಡಿಯಲು ಚಂದ್ರ-ಸೂರ್ಯರು ಅವನನ್ನು ಸೂಚಿಸಿದರು.
ಚಕ್ರೇಣ ಕ್ಷುರಧಾರೇಣ ಜಹಾರ ಪಿಬತಃ ಶಿರಃ । ಹರಿಸ್ತಸ್ಯ ಕಬಂಧಸ್ತು ಸುಧಯಾಪ್ಲಾವಿತೋಽಪತತ್ ।। 25 ।। ಶಿರಸ್ತ್ವಮರತಾಂ ನೀತಮಜೋ ಗ್ರಹಮಚೀಕ್ಲೃಪತ್ । ಯಸ್ತು ಪರ್ವಣಿ ಚಂದ್ರಾರ್ಕಾವಭಿಧಾವತಿ ವೈರಧೀಃ ।। 26 ।। ಪೀತಪ್ರಾಯೇಽಮೃತೇ ದೇವೈರ್ಭಗವಾನ್ಲೋಕಭಾವನಃ । ಪಶ್ಯತಾಮಸುರೇಂದ್ರಾಣಾಂ ಸ್ವಂ ರೂಪಂ ಜಗೃಹೇ ಹರಿಃ ।। 27 ।।
ಹರಿಯು ಅಮೃತವನ್ನು ಕುಡಿದ ಶಿರವನ್ನು ತೀಕ್ಷ್ಣ ಚಕ್ರದಿಂದ ಕತ್ತರಿಸಿದನು. ಅಮೃತವು ಇಳಿಯದಿದ್ದ ಅವನ ಕಬಂಧವು ಕೆಳಗೆ ಬಿದ್ದಿತು. ಶಿರವಾದರೋ ಅಮರವಾಯಿತು. ಬ್ರಹ್ಮನು ಅವನನ್ನು ಗ್ರಹವನ್ನಾಗಿ ಮಾಡಿ ಎಸೆದನು. ಅದೇ ವೈರಬುದ್ಧಿಯಿಂದ ಪರ್ವದಿನಗಳಲ್ಲಿ ಚಂದ್ರ-ಸೂರ್ಯರನ್ನು ನುಂಗಲು ಹೋಗುತ್ತದೆ. ಎಲ್ಲ ದೇವತೆಗಳಿಗೂ ಅಮೃತವನ್ನು ಕುಡಿಸಿದ ನಂತರ ಭಗವಾನ್ ಲೋಕಭಾವನ ಹರಿಯು ಅಸುರೇಂದ್ರರಿಗೆ ತನ್ನ ಸ್ವರೂಪವನ್ನು ತೋರಿಸಿದನು.
ಏವಂ ಸುರಾಸುರಗಣಾಃ ಸಮದೇಶಕಾಲ ಹೇತ್ವರ್ಥಕರ್ಮಮತಯೋಽಪಿ ಫಲೇ ವಿಕಲ್ಪಾಃ । ತತ್ರಾಮೃತಂ ಸುರಗಣಾಃ ಫಲಮಂಜಸಾಪುರ್ಯತ್ಪಾದಪಂಕಜರಜಃಶ್ರಯಣಾನ್ನ ದೈತ್ಯಾಃ ।। 28 ।। ಯದ್ಯುಜ್ಯತೇಽಸುವಸುಕರ್ಮಮನೋವಚೋಭಿರ್ದೇಹಾತ್ಮಜಾದಿಷು ನೃಭಿಸ್ತದಸತ್ಪೃಥಕ್ತ್ವಾತ್ । ತೈರೇವ ಸದ್ಭವತಿ ಯತ್ಕ್ರಿಯತೇಽಪೃಥಕ್ತ್ವಾತ್ ಸರ್ವಸ್ಯ ತದ್ಭವತಿ ಮೂಲನಿಷೇಚನಂ ಯತ್ ।। 29 ।।
ಹೀಗೆ ಸುರಾಸುರಗಣಗಳು ಒಂದೇ ಕಡೆಯಲ್ಲಿ, ಒಂದೇ ಕಾಲದಲ್ಲಿ ಅಮೃತವೆಂಬ ಒಂದೇ ಫಲಕ್ಕಾಗಿ ಒಂದೇ ವಸ್ತುವಿಗಾಗಿ ಒಂದೇ ವಿಚಾರದಿಂದ ಒಂದೇ ಕರ್ಮವನ್ನು ಎಸಗಿದ್ದರು. ಆದರೆ ಫಲದಲ್ಲಿ ದೊಡ್ಡ ಭೇದವೇ ಉಂಟಾಯಿತು. ಭಗವಂತನ ಚರಣಧೂಳನ್ನು ಆಶ್ರಯಿಸಿದ್ದ ಸುರಗಣಗಳು ಸುಲಭವಾಗಿ ಅಮೃತವನ್ನು ಪಡೆದುಕೊಂಡರು. ಹಾಗೆ ಮಾಡದಿದ್ದ ದೈತ್ಯರು ಅಮೃತದಿಂದ ವಂಚಿತರಾದರು. ಮನುಷ್ಯನು ತನ್ನ ಪ್ರಾಣ, ಧನ, ಕರ್ಮ, ಮನಸ್ಸು, ಮಾತು ಮೊದಲಾದವುಗಳಿಂದ ದೇಹ ಮತ್ತು ಪುತ್ರಾದಿಗಳಿಗಾಗಿ ಮಾಡುವುದೆಲ್ಲವೂ ವ್ಯರ್ಥವೇ ಸರಿ. ಏಕೆಂದರೆ ಅದರ ಮೂಲದಲ್ಲಿ ಭೇದಬುದ್ಧಿಯಿರುತ್ತದೆ. ಆದರೆ ಅದೇ ಪ್ರಾಣ ಮೊದಲಾದವುಗಳಿಂದ ಭಗವಂತನಿಗಾಗಿ ಮಾಡುವುದೆಲ್ಲವೂ ಭೇದಭಾವದಿಂದ ರಹಿತವಾಗಿರುವ ತನ್ನ ಶರೀರ, ಪುತ್ರರು ಮತ್ತು ಸಮಸ್ತ ಜಗತ್ತಿಗೇ ಸಫಲವಾಗಿ ಹೋಗುತ್ತದೆ. ವೃಕ್ಷದ ಬೇರಿಗೇ ನೀರುಣಿಸಿದರೆ ಅದರ ಶಾಖೋಪಶಾಖೆಗಳಿಗೂ ನೀರು ಸಿಗುವಂತೆ ಭಗವಂತನಿಗಾಗಿ ಕರ್ಮಮಾಡುವುದರಿಂದ ಅವು ಎಲ್ಲರಿಗೂ ಆಗಿ ಹೋಗುತ್ತವೆ.”
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ಅಮೃತಮಥನೇ ನವಮೋಽಧ್ಯಾಯಃ ।।
[1] ಅನೇಕ ಬೇರೆ ಬೇರೆ ಪುರುಷರೊಂದಿಗೆ ಕೂಡುವ ಚಾಳಿಯಿರುವವಳು.