ಶ್ರೀಮದ್ಭಾಗವತಮಹಾಪುರಾಣ: ಅಷ್ಟಮ ಸ್ಕಂಧ: ಅಧ್ಯಾಯ 8
ಶ್ರೀಶುಕ ಉವಾಚ । ಪೀತೇ ಗರೇ ವೃಷಾಂಕೇಣ ಪ್ರೀತಾಸ್ತೇಽಮರದಾನವಾಃ । ಮಮಂಥುಸ್ತರಸಾ ಸಿಂಧುಂ ಹವಿರ್ಧಾನೀ ತತೋಽಭವತ್ ।। 1 ।। ತಾಮಗ್ನಿಹೋತ್ರೀಮೃಷಯೋ ಜಗೃಹುರ್ಬ್ರಹ್ಮವಾದಿನಃ । ಯಜ್ಞಸ್ಯ ದೇವಯಾನಸ್ಯ ಮೇಧ್ಯಾಯ ಹವಿಷೇ ನೃಪ ।। 2 ।।
ಶ್ರೀಶುಕನು ಹೇಳಿದನು: “ವೃಷಾಂಕ ಶಿವನು ವಿಷವನ್ನು ಕುಡಿಯಲು ಅಮರ-ದಾನವರು ಪ್ರೀತರಾಗಿ ಉತ್ಸಾಹದಿಂದ ಸಮುದ್ರವನ್ನು ಕಡೆಯತೊಡಗಿದರು. ಆಗ ಅಲ್ಲಿ ಹವಿರ್ಧಾನಿಯು ಪ್ರಕಟವಾದಳು. ನೃಪ! ಆ ಅಗ್ನಿಹೋತ್ರಿಯನ್ನು ದೇವಯಾನದ ಯಜ್ಞಗಳ ಹವಿಸ್ಸಿಗಾಗಿ ಬ್ರಹ್ಮವಾದೀ ಋಷಿಗಳು ಸ್ವೀಕರಿಸಿದರು.
ತತ ಉಚ್ಚೈಃಶ್ರವಾ ನಾಮ ಹಯೋಽಭೂಚ್ಚಂದ್ರಪಾಂಡುರಃ । ತಸ್ಮಿನ್ಬಲಿಃ ಸ್ಪೃಹಾಂ ಚಕ್ರೇ ನೇಂದ್ರ ಈಶ್ವರಶಿಕ್ಷಯಾ ।। 3 ।। ತತ ಐರಾವತೋ ನಾಮ ವಾರಣೇಂದ್ರೋ ವಿನಿರ್ಗತಃ । ದಂತೈಶ್ಚತುರ್ಭಿಃ ಶ್ವೇತಾದ್ರೇರ್ಹರನ್ಭಗವತೋ ಮಹಿಮ್ ।। 4 ।।[1] ಕೌಸ್ತುಭಾಖ್ಯಮಭೂದ್ರತ್ನಂ ಪದ್ಮರಾಗೋ ಮಹೋದಧೇಃ । ತಸ್ಮಿನ್ಮಣೌ ಸ್ಪೃಹಾಂ ಚಕ್ರೇ ವಕ್ಷೋಽಲಂಕರಣೇ ಹರಿಃ ।। 5 ।।
ನಂತರ ಚಂದ್ರನಂತೆ ಬಿಳುಪಾದ ಉಚ್ಚೈಃಶ್ರವ ಎಂಬ ಕುದುರೆಯು ಉತ್ಪನ್ನವಾಯಿತು. ಅದನ್ನು ಬಲಿಯು ಬಯಸಿದನು. ಈಶ್ವರನು ಹೇಳಿದ್ದಂತೆ ಇಂದ್ರನು ಅದನ್ನು ಬಯಸಲಿಲ್ಲ. ನಂತರ ಐರಾವತವೆಂಬ ಗಜರಾಜನು ಹುಟ್ಟಿದನು. ನಾಲ್ಕುದಂತಗಳಿಂದ ಮತ್ತು ಬಿಳೀ ದೇಹದಿಂದ ಕೂಡಿದ್ದ ಅವನು ಭಗವಂತನ ಕೈಲಾಸಪರ್ವತದಂತೆ ತೋರುತ್ತಿದ್ದನು. ನಂತರ ಸಮುದ್ರದಿಂದ ಕೌಸ್ತುಭವೆಂಬ ಪದ್ಮರಾಗ ರತ್ನವು ಉತ್ಪನ್ನವಾಯಿತು. ಆ ಮಣಿಯನ್ನು ಹರಿಯು ತನ್ನ ವಕ್ಷಸ್ಥಲದಲ್ಲಿ ಅಲಂಕಾರಕ್ಕೆಂದು ಸ್ವೀಕರಿಸಿದನು.
ತತೋಽಭವತ್ಪಾರಿಜಾತಃ ಸುರಲೋಕವಿಭೂಷಣಮ್ । ಪೂರಯತ್ಯರ್ಥಿನೋ ಯೋಽರ್ಥೈಃ ಶಶ್ವದ್ಭುವಿ ಯಥಾ ಭವಾನ್ ।। 6 ।। ತತಶ್ಚಾಪ್ಸರಸೋ ಜಾತಾ ನಿಷ್ಕಕಂಠ್ಯಃ ಸುವಾಸಸಃ । ರಮಣ್ಯಃ ಸ್ವರ್ಗಿಣಾಂ ವಲ್ಗು ಗತಿಲೀಲಾವಲೋಕನೈಃ ।। 7 ।। ತತಶ್ಚಾವಿರಭೂತ್ಸಾಕ್ಷಾಚ್ಛ್ರೀ ರಮಾ ಭಗವತ್ಪರಾ । ರಂಜಯಂತೀ ದಿಶಃ ಕಾಂತ್ಯಾ ವಿದ್ಯುತ್ಸೌದಾಮನೀ ಯಥಾ ।। 8 ।।
ನಂತರ ಸುರಲೋಕವಿಭೂಷಣ ಪಾರಿಜಾತವು ಹುಟ್ಟಿತು. ನೀನು ಭುವಿಯಲ್ಲಿ ಹೇಗೆ ಎಲ್ಲರ ಇಚ್ಛೆಗಳನ್ನೂ ಪೂರೈಸುತ್ತೀಯೋ ಹಾಗೆ ಇದು ಸಕಲ ಇಷ್ಟಾರ್ಥಗಳನ್ನೂ ಪೂರೈಸುತ್ತದೆ. ನಂತರ ಸುವರ್ಣದ ಹಾರಗಳಿಂದ ಸಮಲಂಕೃತರಾದ, ಸ್ವರ್ಗವಾಸಿಗಳನ್ನು ರಮಿಸುವ, ಮಧುರ ನಡುಗೆ-ಬೆಡಗುಗಳಿಂದ ಕೂಡಿದ್ದ ಸುಂದರ ಅಪ್ಸರೆಯರು ಹುಟ್ಟಿದರು. ನಂತರ ಭಗವಂತನ ನಿತ್ಯಶಕ್ತಿ ಸಾಕ್ಷಾತ್ ಶ್ರೀ ರಮೆಯು ಮಿಂಚಿನಂತಿದ್ದ ತನ್ನ ಕಾಂತಿಯಿಂದ ದಿಕ್ಕುಗಳನ್ನು ಬೆಳಗಿಸುತ್ತಾ ಹುಟ್ಟಿದಳು.
ತಸ್ಯಾಂ ಚಕ್ರುಃ ಸ್ಪೃಹಾಂ ಸರ್ವೇ ಸಸುರಾಸುರಮಾನವಾಃ । ರೂಪೌದಾರ್ಯವಯೋವರ್ಣ ಮಹಿಮಾಕ್ಷಿಪ್ತಚೇತಸಃ ।। 9 ।। ತಸ್ಯಾ ಆಸನಮಾನಿನ್ಯೇ ಮಹೇಂದ್ರೋ ಮಹದದ್ಭುತಮ್ । ಮೂರ್ತಿಮತ್ಯಃ ಸರಿಚ್ಛ್ರೇಷ್ಠಾ ಹೇಮಕುಂಭೈರ್ಜಲಂ ಶುಚಿ ।। 10 ।। ಆಭಿಷೇಚನಿಕಾ ಭೂಮಿರಾಹರತ್ಸಕಲೌಷಧೀಃ । ಗಾವಃ ಪಂಚ ಪವಿತ್ರಾಣಿ ವಸಂತೋ ಮಧುಮಾಧವೌ ।। 11 ।। ಋಷಯಃ ಕಲ್ಪಯಾಂ ಚಕ್ರುರಾಭಿಷೇಕಂ ಯಥಾವಿಧಿ । ಜಗುರ್ಭದ್ರಾಣಿ ಗಂಧರ್ವಾ ನಟ್ಯಶ್ಚ ನನೃತುರ್ಜಗುಃ ।। 12 ।। ಮೇಘಾ ಮೃದಂಗಪಣವ ಮುರಜಾನಕಗೋಮುಖಾನ್ । ವ್ಯನಾದಯನ್ಶಂಖವೇಣು ವೀಣಾಸ್ತುಮುಲನಿಃಸ್ವನಾನ್ ।। 13 ।।
ಅವಳ ರೂಪ, ಔದಾರ್ಯ, ವಯಸ್ಸು, ವರ್ಣ ಮತ್ತು ಮಹಿಮೆಗಳಿಂದ ಮನಸೆಳೆದುಹೋದ ಸುರಾಸುರಮಾನವರೆಲ್ಲರೂ ಅವಳನ್ನು ಬಯಸಿದರು. ಮಹೇಂದ್ರನು ಅವಳಿಗೆ ಮಹಾ ಅದ್ಭುತವಾದ ಆಸನವನ್ನು ನೀಡಿದನು. ಶ್ರೇಷ್ಠನದಿಗಳು ಮೂರ್ತಿಮತ್ತಾಗಿ ಹೇಮಕುಂಭಗಳಿಂದ ಶುದ್ಧ ನೀರನ್ನು ತಂದರು. ಅಭಿಷೇಕಕ್ಕೆ ಭೂಮಿಯು ಸಕಲ ಓಷಧಿಗಳನ್ನು ಒಟ್ಟುಗೂಡಿಸಿದಳು. ಗೋವುಗಳು ಪವಿತ್ರಪಂಚಗವ್ಯವನ್ನೂ, ವಸಂತನು ಚೈತ್ರ-ವೈಶಾಖದ ಫಲ-ಪುಷ್ಪಗಳನ್ನು ಅರ್ಪಿಸಿದನು. ಋಷಿಗಳು ಯಥಾವಿಧಿಯಾಗಿ ಅವಳಿಗೆ ಅಭಿಷೇಕವನ್ನು ಮಾಡಿದರು. ಗಂಧರ್ವರು ಮಂಗಳ ಗೀತೆಗಳನ್ನು ಹಾಡಿದರು, ನರ್ತಕಿಯರು ಹಾಡಿ ನರ್ತಿಸಿದರು. ಮೇಘಗಳು ಮೃದಂಗ, ಪಣವ, ಆನಕ, ಗೋಮುಖ, ಶಂಖ, ಕೊಳಲು, ವೀಣೆಗಳನ್ನು ನುಡಿಸಿದರು. ತುಮುಲಧ್ವನಿಗಳುಂಟಾದವು.
ತತೋಽಭಿಷಿಷಿಚುರ್ದೇವೀಂ ಶ್ರಿಯಂ ಪದ್ಮಕರಾಂ ಸತೀಮ್ । ದಿಗಿಭಾಃ ಪೂರ್ಣಕಲಶೈಃ ಸೂಕ್ತವಾಕ್ಯೈರ್ದ್ವಿಜೇರಿತೈಃ ।। 14 ।। ಸಮುದ್ರಃ ಪೀತಕೌಶೇಯ ವಾಸಸೀ ಸಮುಪಾಹರತ್ । ವರುಣಃ ಸ್ರಜಂ ವೈಜಯಂತೀಂ ಮಧುನಾ ಮತ್ತಷಟ್ಪದಾಮ್ ।। 15 ।। ಭೂಷಣಾನಿ ವಿಚಿತ್ರಾಣಿ ವಿಶ್ವಕರ್ಮಾ ಪ್ರಜಾಪತಿಃ । ಹಾರಂ ಸರಸ್ವತೀ ಪದ್ಮಮಜೋ ನಾಗಾಶ್ಚ ಕುಂಡಲೇ ।। 16 ।।
ದ್ವಿಜರು ಸೂಕ್ತವಾಕ್ಯಗಳನ್ನು ಪಠಿಸುತ್ತಿರಲು ದಿಗ್ಗಜಗಳು ಪೂರ್ಣಕುಂಭಗ-ಳಿಂದ ಪದ್ಮಗಳನ್ನು ಹಿಡಿದಿದ್ದ ಸತೀ ದೇವೀ ಶ್ರೀಯನ್ನು ಅಭಿಷೇಕಿಸಿದವು. ಸಮುದ್ರನು ರೇಷ್ಮೆಯ ಪೀತಾಂಬರಗಳನ್ನು ಅರ್ಪಿಸಿದನು. ವರುಣನು ಮದದುಂಬಿಗಳಿಂದ ಕೂಡಿದ ವೈಜಯಂತೀ ಮಾಲೆಯನ್ನು ನೀಡಿದನು. ಪ್ರಜಾಪತಿ ವಿಶ್ವಕರ್ಮನು ವಿಚಿತ್ರ ಭೂಷಣಗಳನ್ನೂ, ಸರಸ್ವತಿಯು ಹಾರವನ್ನೂ, ಬ್ರಹ್ಮನು ಕಮಲವನ್ನೂ, ನಾಗಗಳು ಕುಂಡಲಗಳನ್ನೂ ನೀಡಿದರು.
ತತಃ ಕೃತಸ್ವಸ್ತ್ಯಯನೋತ್ಪಲಸ್ರಜಂ ನದದ್ದ್ವಿರೇಫಾಂ ಪರಿಗೃಹ್ಯ ಪಾಣಿನಾ । ಚಚಾಲ ವಕ್ತ್ರಂ ಸುಕಪೋಲಕುಂಡಲಂ ಸವ್ರೀಡಹಾಸಂ ದಧತೀ ಸುಶೋಭನಮ್ ।। 17 ।। ಸ್ತನದ್ವಯಂ ಚಾತಿಕೃಶೋದರೀ ಸಮಂ ನಿರಂತರಂ ಚಂದನಕುಂಕುಮೋಕ್ಷಿತಮ್ । ತತಸ್ತತೋ ನೂಪುರವಲ್ಗು ಶಿಂಜಿತೈರ್ವಿಸರ್ಪತೀ ಹೇಮಲತೇವ ಸಾ ಬಭೌ ।। 18 ।।
ಸ್ವಸ್ತಿವಾಚನಗಳು ಆದನಂತರ ಕುಂಡಲಗಳ ಕಾಂತಿಯಿಂದ ಕಪೋಲಗಳು ಕೆಂಪಾಗಿದ್ದ ಸುಶೋಭನೆ ಶ್ರೀಯು ದುಂಬಿಗಳು ಝೇಂಕರಿಸುತ್ತಿದ್ದ ಕನ್ನೈದಿಲಿಯ ಮಾಲೆಯನ್ನು ಹಿಡಿದು ನಾಚಿಕೆಯಿಂದ ಕಿರುನಗೆಯನ್ನು ಸೂಸುತ್ತಾ ಮೆಲ್ಲನೆ ಹೊರಟಳು. ಸೊಂಟವು ಸೂಕ್ಷ್ಮವಾಗಿದ್ದ, ಕುಂಕುಮ-ಕೇಸರೀ ಗಂಧದಿಂದ ಲೇಪಿಸಲ್ಪಟ್ಟಿದ್ದ ಸ್ತನಗಳು ಒಂದಕ್ಕೊಂದು ಸೇರಿ ತುಂಬಿಕೊಂಡಿದ್ದ, ಕಾಲ್ಬಳೆಗಳ ಝಣ-ಝಣ ಶಬ್ದದೊಡನೆ ಅತ್ತಿಂದಿತ್ತ ಸುಳಿದಾಡುತ್ತಿದ್ದ ರಮೆಯು ಚಿನ್ನದ ಬಳ್ಳಿಯಂತೆಯೇ ಕಾಣುತ್ತಿದ್ದಳು.
ವಿಲೋಕಯಂತೀ ನಿರವದ್ಯಮಾತ್ಮನಃ ಪದಂ ಧ್ರುವಂ ಚಾವ್ಯಭಿಚಾರಿಸದ್ಗುಣಮ್ । ಗಂಧರ್ವಸಿದ್ಧಾಸುರಯಕ್ಷಚಾರಣ ತ್ರೈಪಿಷ್ಟಪೇಯಾದಿಷು ನಾನ್ವವಿಂದತ ।। 19 ।। ನೂನಂ ತಪೋ ಯಸ್ಯ ನ ಮನ್ಯುನಿರ್ಜಯೋ ಜ್ಞಾನಂ ಕ್ವಚಿತ್ತಚ್ಚ ನ ಸಂಗವರ್ಜಿತಮ್ । ಕಶ್ಚಿನ್ಮಹಾಂಸ್ತಸ್ಯ ನ ಕಾಮನಿರ್ಜಯಃ ಸ ಈಶ್ವರಃ ಕಿಂ ಪರತೋ ವ್ಯಪಾಶ್ರಯಃ ।। 20 ।।
ದೋಷರಹಿತನಾದ, ಸಮಸ್ತ ಉತ್ತಮಗುಣಸಂಪನ್ನನಾದ, ಅವಿನಾಶಿಯಾದ ಪುರುಷನ ಆಶ್ರಯವನ್ನು ಬಯಸಿ ಹೊರಟಿದ್ದ ಅವಳಿಗೆ ಗಂಧರ್ವ-ಸಿದ್ಧ-ಅಸುರ-ಯಕ್ಷ-ಚಾರಣ-ದೇವತೆಗಳೇ ಮೊದಲಾದವರಲ್ಲಿ ಅಂತಹ ಪುರುಷನು ಸಿಗಲೇ ಇಲ್ಲ. ಅವಳು ಯೋಚಿಸಿದಳು: “ಕೆಲವರು ತಪಸ್ವಿಗಳೇನೋ ಹೌದು. ಆದರೆ ಕ್ರೋಧವನ್ನು ಜಯಿಸಿಲ್ಲ. ಕೆಲವರಲ್ಲಿ ಜ್ಞಾನವೇನೋ ಇದೆ. ಆದರೆ ಅವರು ಸಂಗವರ್ಜಿತರಲ್ಲ. ಕೆಲವರು ಮಹಾತ್ಮರು. ಆದರೆ ಕಾಮವನ್ನು ಗೆದ್ದವರಲ್ಲ. ಇನ್ನೊಬ್ಬರನ್ನು ಆಶ್ರಯಿಸಿರುವವನು ಈಶ್ವರನಾಗುತ್ತಾನೆಯೇ?
ಧರ್ಮಃ ಕ್ವಚಿತ್ತತ್ರ ನ ಭೂತಸೌಹೃದಂ ತ್ಯಾಗಃ ಕ್ವಚಿತ್ತತ್ರ ನ ಮುಕ್ತಿಕಾರಣಮ್ । ವೀರ್ಯಂ ನ ಪುಂಸೋಽಸ್ತ್ಯಜವೇಗನಿಷ್ಕೃತಂ ನ ಹಿ ದ್ವಿತೀಯೋ ಗುಣಸಂಗವರ್ಜಿತಃ ।। 21 ।। ಕ್ವಚಿಚ್ಚಿರಾಯುರ್ನ ಹಿ ಶೀಲಮಂಗಲಂ ಕ್ವಚಿತ್ತದಪ್ಯಸ್ತಿ ನ ವೇದ್ಯಮಾಯುಷಃ ।। ಯತ್ರೋಭಯಂ ಕುತ್ರ ಚ ಸೋಽಪ್ಯಮಂಗಲಃ ಸುಮಂಗಲಃ ಕಶ್ಚ ನ ಕಾಂಕ್ಷತೇ ಹಿ ಮಾಮ್ ।। 22 ।।
ಕೆಲವರಲ್ಲಿ ಧರ್ಮವಿದೆ, ಆದರೆ ಭೂತದಯೆ ಇಲ್ಲ. ಕೆಲವರಲ್ಲಿ ತ್ಯಾಗವಿದೆ, ಆದರೆ ಅದು ಮೋಕ್ಷಕ್ಕೆ ಕಾರಣವಲ್ಲ. ಕೆಲವು ಪುರುಷರಲ್ಲಿ ವೀರ್ಯವಿದೆ. ಆದರೆ ಅವರು ಕಾಲಕ್ಕೆ ಅತೀತರಾದವರಲ್ಲ. ಕೆಲವರಲ್ಲಿ ವಿಷಯಾಸಕ್ತಿ-ಯಿಲ್ಲ. ಆದರೆ ಅವರು ನಿರಂತರ ಅದ್ವೈತ-ಸಮಾಧಿಯಲ್ಲಿಯೇ ಇರುತ್ತಾರೆ. ಕೆಲವರು ಚಿರಾಯುಗಳು. ಆದರೆ ಅವರಲ್ಲಿ ಮಂಗಲ ನಡತೆಯಿಲ್ಲ. ಕೆಲವರು ಮಂಗಲಕರ ನಡತೆಯುಳ್ಳವರಗಿದ್ದರೂ ಚಿರಾಯುಗಳಲ್ಲ. ಕೆಲವರಲ್ಲಿ ಈ ಎರಡೂ ಇದೆ. ಆದರೆ ಅವರು ಅಮಂಗಲ ರೂಪದಲ್ಲಿಯೇ ಇರುತ್ತಾರೆ. ಇನ್ನು ಉಳಿದವನೆಂದರೆ ಸುಮಂಗಲನಾದ ವಿಷ್ಣುವು. ಆದರೆ ಅವನು ನನ್ನನ್ನು ಬಯಸುವುದಿಲ್ಲ.”
ಏವಂ ವಿಮೃಶ್ಯಾವ್ಯಭಿಚಾರಿಸದ್ಗುಣೈರ್ವರಂ ನಿಜೈಕಾಶ್ರಯತಯಾಗುಣಾಶ್ರಯಮ್ । ವವ್ರೇ ವರಂ ಸರ್ವಗುಣೈರಪೇಕ್ಷಿತಂ ರಮಾ ಮುಕುಂದಂ ನಿರಪೇಕ್ಷಮೀಪ್ಸಿತಮ್ ।। 23 ।। ತಸ್ಯಾಂಸದೇಶ ಉಶತೀಂ ನವಕಂಜಮಾಲಾಂ ಮಾದ್ಯನ್ಮಧುವ್ರತವರೂಥಗಿರೋಪಘುಷ್ಟಾಮ್ । ತಸ್ಥೌ ನಿಧಾಯ ನಿಕಟೇ ತದುರಃ ಸ್ವಧಾಮ ಸವ್ರೀಡಹಾಸವಿಕಸನ್ನಯನೇನ ಯಾತಾ ।। 24 ।।
ಹೀಗೆ ವಿಮರ್ಶಿಸಿ ರಮೆಯು ತಾನು ಬಯಸಿದ ಸರ್ವಗುಣಗಳಿಂದ ಕೂಡಿದ ಮುಕುಂದನನ್ನೇ ವರನನ್ನಾಗಿ ವರಿಸಿದಳು. ಏಕೆಂದರೆ ಸಮಸ್ತ ಸದ್ಗುಣಗಳಿಂದ ಕೂಡಿದ್ದ ಅವನನ್ನು ಪ್ರಾಕೃತಗುಣಗಳು ಎಂದೂ ಸ್ಪರ್ಶಿಸಲಾರವು. ಅಣಿಮಾದಿ ಅಷ್ಟಸಿದ್ಧಿಗಳೂ ಅವನನ್ನೇ ಅಪೇಕ್ಷಿಸುತ್ತಿದ್ದವು. ಆದರೆ ಅವನು ಮಾತ್ರ ಏನನ್ನೂ ಅಪೇಕ್ಷಿಸುತ್ತಿರಲಿಲ್ಲ. ಹೀಗೆ ರಮೆಯು ಕೈಯಲ್ಲಿದ್ದ ನವಕಂಜಮಾಲೆಯನ್ನು ಮುಕುಂದನ ಕೊರಳಲ್ಲಿ ಹಾಕಿದಳು. ನಾಚಿಕೆಯಿಂದ ಕೂಡಿದ ಕಿರುನಗೆಯ ನೋಟದಿಂದ ತನ್ನ ವಾಸಸ್ಥಳವಾದ ಹರಿಯ ವಕ್ಷಃಸ್ಥಳವನ್ನೇ ವೀಕ್ಷಿಸುತ್ತಾ ಅವನ ಬಳಿಹೋಗಿ ನಿಂತಳು.
ತಸ್ಯಾಃ ಶ್ರಿಯಸ್ತ್ರಿಜಗತೋ ಜನಕೋ ಜನನ್ಯಾ ವಕ್ಷೋ ನಿವಾಸಮಕರೋತ್ಪರಮಂ ವಿಭೂತೇಃ । ಶ್ರೀಃ ಸ್ವಾಃ ಪ್ರಜಾಃ ಸಕರುಣೇನ ನಿರೀಕ್ಷಣೇನ ಯತ್ರ ಸ್ಥಿತೈಧಯತ ಸಾಧಿಪತೀಂಸ್ತ್ರಿಲೋಕಾನ್ ।। 25 ।।
ತ್ರಿಲೋಕಗಳ ಜನಕನು ತ್ರಿಲೋಕಗಳ ಜನನಿ ಶ್ರೀಗೆ ತನ್ನ ವಕ್ಷಃಸ್ಥಳದಲ್ಲಿಯೇ ನಿರಂತರ ವಾಸಿಸಿರಲು ಸ್ಥಾನವನ್ನು ಕಲ್ಪಿಸಿಕೊಟ್ಟನು. ಶ್ರೀಯು ಅಲ್ಲಿಯೇ ಇದ್ದುಕೊಂಡು ತನ್ನ ಕರುಣಾಕಟಾಕ್ಷದಿಂದ ಮೂರುಲೋಕಗಳನ್ನೂ, ಲೋಕಪತಿಗಳನ್ನೂ, ಅವರ ಪ್ರಜೆಗಳನ್ನೂ ವೃದ್ಧಿಪಡಿಸಿದಳು.
ಶಂಖತೂರ್ಯಮೃದಂಗಾನಾಂ ವಾದಿತ್ರಾಣಾಂ ಪೃಥುಃ ಸ್ವನಃ । ದೇವಾನುಗಾನಾಂ ಸಸ್ತ್ರೀಣಾಂ ನೃತ್ಯತಾಂ ಗಾಯತಾಮಭೂತ್ ।। 26 ।। ಬ್ರಹ್ಮರುದ್ರಾಂಗಿರೋಮುಖ್ಯಾಃ ಸರ್ವೇ ವಿಶ್ವಸೃಜೋ ವಿಭುಮ್ । ಈಡಿರೇಽವಿತಥೈರ್ಮಂತ್ರೈಸ್ತಲ್ಲಿಂಗೈಃ ಪುಷ್ಪವರ್ಷಿಣಃ ।। 27 ।। ಶ್ರಿಯಾವಲೋಕಿತಾ ದೇವಾಃ ಸಪ್ರಜಾಪತಯಃ ಪ್ರಜಾಃ । ಶೀಲಾದಿಗುಣಸಂಪನ್ನಾ ಲೇಭಿರೇ ನಿರ್ವೃತಿಂ ಪರಾಮ್ ।। 28 ।। ನಿಃಸತ್ತ್ವಾ ಲೋಲುಪಾ ರಾಜನ್ನಿರುದ್ಯೋಗಾ ಗತತ್ರಪಾಃ । ಯದಾ ಚೋಪೇಕ್ಷಿತಾ ಲಕ್ಷ್ಮ್ಯಾ ಬಭೂವುರ್ದೈತ್ಯದಾನವಾಃ ।। 29 ।।
ಆಗ ಜೋರಾದ ಶಂಖ, ಮೃದಂಗ, ಭೇರಿ ಮೊದಲಾದ ವಾದ್ಯಗಳ ಶಬ್ದಗಳೊಂದಿಗೆ ದೇವಾನುಗರು ಸ್ತ್ರೀಯರೊಂದಿಗೆ ಹಾಡಿ ನರ್ತಿಸಿದರು. ಬ್ರಹ್ಮ-ರುದ್ರ-ಆಂಗಿರಸ ಮೊದಲಾದವರೆಲ್ಲರೂ ವಿಶ್ವಕರ್ತ ವಿಭುವನ್ನು ಅವನ ಯಥಾರ್ಥ ಗುಣಗಳನ್ನು ವರ್ಣಿಸುವ ಮಂತ್ರಗಳಿಂದ ಸ್ತುತಿಸಿ ಪುಷ್ಪವೃಷ್ಟಿಯನ್ನು ಸುರಿಸಿದರು. ಶ್ರೀಯ ಕೃಪಾಕಟಾಕ್ಷದಿಂದ ದೇವತೆಗಳು ಮತ್ತು ಪ್ರಜಾಪತಿಗಳೊಂದಿಗೆ ಪ್ರಜೆಗಳು ಶೀಲಾದಿಗುಣಸಂಪನ್ನರಾಗಿ ಪರಮಾನಂದವನ್ನು ಹೊಂದಿದರು. ರಾಜನ್! ಲಕ್ಷ್ಮಿಯಿಂದ ಉಪೇಕ್ಷಿತರಾದ ದೈತ್ಯ-ದಾನವರು ನಿಃಸತ್ತ್ವರೂ, ಲೋಲುಪರೂ, ನಿರುದ್ಯೋಗಿಗಳೂ, ನಿರ್ಲಜ್ಜರೂ ಆದರು.
ಅಥಾಸೀದ್ವಾರುಣೀ ದೇವೀ ಕನ್ಯಾ ಕಮಲಲೋಚನಾ । ಅಸುರಾ ಜಗೃಹುಸ್ತಾಂ ವೈ ಹರೇರನುಮತೇನ ತೇ ।। 30 ।। ಅಥೋದಧೇರ್ಮಥ್ಯಮಾನಾತ್ಕಾಶ್ಯಪೈರಮೃತಾರ್ಥಿಭಿಃ । ಉದತಿಷ್ಠನ್ಮಹಾರಾಜ ಪುರುಷಃ ಪರಮಾದ್ಭುತಃ ।। 31 ।। ದೀರ್ಘಪೀವರದೋರ್ದಂಡಃ ಕಂಬುಗ್ರೀವೋಽರುಣೇಕ್ಷಣಃ । ಶ್ಯಾಮಲಸ್ತರುಣಃ ಸ್ರಗ್ವೀ ಸರ್ವಾಭರಣಭೂಷಿತಃ ।। 32 ।। ಪೀತವಾಸಾ ಮಹೋರಸ್ಕಃ ಸುಮೃಷ್ಟಮಣಿಕುಂಡಲಃ । ಸ್ನಿಗ್ಧಕುಂಚಿತಕೇಶಾಂತ ಸುಭಗಃ ಸಿಂಹವಿಕ್ರಮಃ ।। 33 ।। ಅಮೃತಾಪೂರ್ಣಕಲಶಂ ಬಿಭ್ರದ್ವಲಯಭೂಷಿತಃ । ಸ ವೈ ಭಗವತಃ ಸಾಕ್ಷಾದ್ವಿಷ್ಣೋರಂಶಾಂಶಸಂಭವಃ ।। 34 ।। ಧನ್ವಂತರಿರಿತಿ ಖ್ಯಾತ ಆಯುರ್ವೇದದೃಗಿಜ್ಯಭಾಕ್ ।
ಆಗ ಕಮಲಲೋಚನೆ ಕನ್ಯೆ ವಾರುಣೀದೇವಿಯು ಉತ್ಪನ್ನಳಾದಳು. ಹರಿಯ ಅನುಮತಿಯಂತೆ ಅಸುರರು ಅವಳನ್ನು ಪಡೆದುಕೊಂಡರು. ಮಹಾರಾಜ! ಅಮೃತಾರ್ಥಿಗಳಾದ ಕಾಶ್ಯಪರು ಮಹೋದಧಿಯನ್ನು ಮಥಿಸುತ್ತಿದ್ದಾಗ ಪರಮಾದ್ಭುತ ಪುರುಷನೋರ್ವನು ಮೇಲೆದ್ದನು. ಅವನ ತೋಳುಗಳು ನೀಳವಾಗಿ ದಪ್ಪವಾಗಿದ್ದವು. ಕುತ್ತಿಗೆಯು ಶಂಖವನ್ನು ಹೋಲುತ್ತಿತ್ತು. ಕಡೆಗಣ್ಣುಗಳು ಕೆಂಪಾಗಿದ್ದವು. ಶ್ಯಾಮಲ ವರ್ಣದ ಆ ತರುಣನು ಸರ್ವಾಭರಣಭೂಷಿತನಾಗಿದ್ದನು. ಮಾಲೆಯನ್ನು ಧರಿಸಿದ್ದನು. ವಿಶಾಲ ವಕ್ಷಃಸ್ಥಳದ ಅವನು ಪೀತಾಂಬರವನ್ನುಟ್ಟಿದ್ದನು. ಹೊಳೆಯುವ ಮಣಿಕುಂಡಲಗಳನ್ನು ಧರಿಸಿದ್ದನು. ನುಣುಪಾದ ಗುಂಗುರುಕೂದಲುಗಳು ಹಾರಾಡುತ್ತಿದ್ದ ಆ ಸಿಂಹವಿಕ್ರಮನು ಅನುಪಮ ರೂಪವಂತನಾಗಿದ್ದನು. ಆಯುರ್ವೇದದ ಪ್ರವರ್ತಕನೂ, ಯಜ್ಞಭೋಕ್ತೃವೂ ಆಗಿದ್ದ, ಹಾಗೂ ಧನ್ವಂತರಿಯೆಂದು ಖ್ಯಾತನಾಗಿದ್ದ ಅವನು ಭಗವಂತ ಸಾಕ್ಷಾತ್ ವಿಷ್ಣುವಿನ ಅಂಶಸಂಭೂತನಾಗಿದ್ದನು. ಕಂಕಣಗಳನ್ನು ತೊಟ್ಟಿದ್ದ ಕೈಗಳಲ್ಲಿ ಅವನು ಅಮೃತದಿಂದ ತುಂಬಿದ್ದ ಕಲಶವನ್ನು ಹಿಡಿದಿದ್ದನು.
ತಮಾಲೋಕ್ಯಾಸುರಾಃ ಸರ್ವೇ ಕಲಶಂ ಚಾಮೃತಾಭೃತಮ್ ।। 35 ।। ಲಿಪ್ಸಂತಃ ಸರ್ವವಸ್ತೂನಿ ಕಲಶಂ ತರಸಾಹರನ್ । ನೀಯಮಾನೇಽಸುರೈಸ್ತಸ್ಮಿನ್ಕಲಶೇಽಮೃತಭಾಜನೇ ।। 36 ।। ವಿಷಣ್ಣಮನಸೋ ದೇವಾ ಹರಿಂ ಶರಣಮಾಯಯುಃ । ಇತಿ ತದ್ದೈನ್ಯಮಾಲೋಕ್ಯ ಭಗವಾನ್ಭೃತ್ಯಕಾಮಕೃತ್ । ಮಾ ಖಿದ್ಯತ ಮಿಥೋಽರ್ಥಂ ವಃ ಸಾಧಯಿಷ್ಯೇ ಸ್ವಮಾಯಯಾ ।। 37 ।।
ಅಮೃತದಿಂದ ತುಂಬಿದ್ದ ಆ ಕಲಶವನ್ನು ನೋಡಿ, ಸರ್ವವಸ್ತುಗಳನ್ನೂ ಬಯಸುತ್ತಿದ್ದ ಅಸುರರೆಲ್ಲರೂ ಆ ಕಲಶವನ್ನು ಕೂಡಲೇ ಕಸಿದುಕೊಂಡರು. ಅಮೃತದಿಂದ ತುಂಬಿದ್ದ ಆ ಕಲಶವನ್ನು ಅಸುರರು ಕೊಂಡೊಯ್ಯಲು ವಿಷಣ್ಣಮನಸ್ಕರಾದ ದೇವತೆಗಳು ಹರಿಯ ಶರಣುಹೊಕ್ಕರು. ಹೀಗೆ ಆ ದೀನರನ್ನು ಕಂಡು ಭಕ್ತರ ಕಲ್ಪತರು ಭಗವಂತನು ಹೇಳಿದನು: “ದುಃಖಿಸಬೇಡಿ. ನನ್ನ ಮಾಯೆಯಿಂದ ಅವರಲ್ಲಿ ಕಲಹವುಂಟಾಗುವಂತೆ ಮಾಡಿ ನಿಮ್ಮ ಕಾರ್ಯವನ್ನು ಸಾಧಿಸುತ್ತೇನೆ.”
ಮಿಥಃ ಕಲಿರಭೂತ್ತೇಷಾಂ ತದರ್ಥೇ ತರ್ಷಚೇತಸಾಮ್ । ಅಹಂ ಪೂರ್ವಮಹಂ ಪೂರ್ವಂ ನ ತ್ವಂ ನ ತ್ವಮಿತಿ ಪ್ರಭೋ ।। 38 ।। ದೇವಾಃ ಸ್ವಂ ಭಾಗಮರ್ಹಂತಿ ಯೇ ತುಲ್ಯಾಯಾಸಹೇತವಃ । ಸತ್ರಯಾಗ ಇವೈತಸ್ಮಿನ್ನೇಷ ಧರ್ಮಃ ಸನಾತನಃ ।। 39 ।। ಇತಿ ಸ್ವಾನ್ಪ್ರತ್ಯಷೇಧನ್ವೈ ದೈತೇಯಾ ಜಾತಮತ್ಸರಾಃ । ದುರ್ಬಲಾಃ ಪ್ರಬಲಾನ್ರಾಜನ್ಗೃಹೀತಕಲಶಾನ್ಮುಹುಃ ।। 40 ।।
ಅಮೃತಕಾಗಿ ತರಸುತ್ತಿದ್ದ ಅವರಲ್ಲಿ ಪರಸ್ಪರ ಜಗಳವುಂಟಾಯಿತು. ಪ್ರಭೋ! ನಾನು ಮೊದಲು ನಾನು ಮೊದಲು, ನೀನಲ್ಲ ನೀನಲ್ಲ ಎಂದು ಎಲ್ಲರೂ ಹೇಳತೊಡಗಿದರು. ರಾಜನ್! ದುರ್ಬಲರು ಪ್ರಬಲರನ್ನು ವಿರೋಧಿಸತೊಡಗಿದರು. ಕಲಶವನ್ನು ಕಿತ್ತುಕೊಂಡವರು ಈರ್ಷೆಯಿಂದ “ದೇವತೆಗಳೂ ತಮ್ಮ ಭಾಗಗಳಿಗೆ ಅರ್ಹರಾಗಿದ್ದಾರೆ. ಅವರೂ ಸಮನಾಗಿಯೇ ಶ್ರಮಪಟ್ಟಿದ್ದಾರೆ. ಸತ್ರಯಾಗದಂತೆ ಅವರೂ ಇದರ ಭಾಗಕ್ಕೆ ಅರ್ಹರಾಗಿದ್ದಾರೆ. ಇದೇ ಸನಾತನ ಧರ್ಮವು” ಎಂದರು.
ಏತಸ್ಮಿನ್ನಂತರೇ ವಿಷ್ಣುಃ ಸರ್ವೋಪಾಯವಿದೀಶ್ವರಃ । ಯೋಷಿದ್ರೂಪಮನಿರ್ದೇಶ್ಯಂ ದಧಾರಪರಮಾದ್ಭುತಮ್ ।। 41 ।। ಪ್ರೇಕ್ಷಣೀಯೋತ್ಪಲಶ್ಯಾಮಂ ಸರ್ವಾವಯವಸುಂದರಮ್ । ಸಮಾನಕರ್ಣಾಭರಣಂ ಸುಕಪೋಲೋನ್ನಸಾನನಮ್ ।। 42 ।। ನವಯೌವನನಿರ್ವೃತ್ತ ಸ್ತನಭಾರಕೃಶೋದರಮ್ । ಮುಖಾಮೋದಾನುರಕ್ತಾಲಿ ಝಂಕಾರೋದ್ವಿಗ್ನಲೋಚನಮ್ ।। 43 ।। ಬಿಭ್ರತ್ಸುಕೇಶಭಾರೇಣ ಮಾಲಾಮುತ್ಫುಲ್ಲಮಲ್ಲಿಕಾಮ್ । ಸುಗ್ರೀವಕಂಠಾಭರಣಂ ಸುಭುಜಾಂಗದಭೂಷಿತಮ್ ।। 44 ।। ವಿರಜಾಂಬರಸಂವೀತ ನಿತಂಬದ್ವೀಪಶೋಭಯಾ । ಕಾಂಚ್ಯಾ ಪ್ರವಿಲಸದ್ವಲ್ಗು ಚಲಚ್ಚರಣನೂಪುರಮ್ ।। 45 ।। ಸವ್ರೀಡಸ್ಮಿತವಿಕ್ಷಿಪ್ತ ಭ್ರೂವಿಲಾಸಾವಲೋಕನೈಃ । ದೈತ್ಯಯೂಥಪಚೇತಃಸು ಕಾಮಮುದ್ದೀಪಯನ್ಮುಹುಃ ।। 46 ।।
ಈ ಮಧ್ಯೆ ಸರ್ವ ಉಪಾಯಗಳನ್ನೂ ತಿಳಿದಿದ್ದ ಈಶ್ವರ ವಿಷ್ಣುವು ಅನಿರ್ದೇಶ್ಯವಾದ ಪರಮಾದ್ಭುತವಾದ ಸ್ತ್ರೀರೂಪವನ್ನು ತಾಳಿದನು. ಪ್ರೇಕ್ಷಣೀಯಳಾಗಿದ್ದ ಅವಳ ಶರೀರವು ನೈದಿಲೆಯಂತೆ ಶ್ಯಾಮಲವರ್ಣದ್ದಾಗಿತು. ಸರ್ವ ಅವಯವಗಳೂ ಸುಂದರವಾಗಿದ್ದವು. ಸಮಾನ ಕರ್ಣಾಭರಣಗಳನ್ನು ತೊಟ್ಟಿದ್ದಳು. ಸುಂದರ ಕೆನ್ನೆಗಳು ಮತ್ತು ನೀಳ ಮೂಗಿನಿಂದ ಮುಖವು ಸುಂದರವಾಗಿತ್ತು. ನವಯೌವನಿಯ ದುಂಡಾದ ಸ್ತನಭಾರಕ್ಕೆ ತೆಳ್ಳಗಿನ ಸೊಂಟವು ಬಳುಕಿ-ದ್ದಂತೆ ತೋರುತ್ತಿತ್ತು. ಮುಖದ ಸುವಾಸನೆಯಿಂದ ಪುಷ್ಪವೆಂದು ಭ್ರಮಿಸಿ ಮುತ್ತಿಡುತ್ತಿದ ಝೇಂಕಾರದಿಂದ ಕಣ್ಣಾಲಿಗಳು ಉದ್ವಿಗ್ನವಾಗಿದ್ದವು. ಜೋಲುಬಿದ್ದಿದ್ದ ತುರುಬಿನಲ್ಲಿ ಅರಳಿದ ಮಲ್ಲಿಗೆಯ ಹಾರವು ಕಂಗೊಳಿಸುತ್ತಿತ್ತು. ಕಂಠಾಭರಣದಿಂದ ಕಂಠವೂ ಅಂಗದ ಕೇಯೂರಗಳಿಂದ ಭುಜಗಳು ಭೂಷಿತಗೊಂಡಿದ್ದವು. ದ್ವೀಪಗಳಂತಿದ್ದ ನಿತಂಬಗಳು ಸ್ವಚ್ಛ ವಸ್ತ್ರದಿಂದಲೂ ಡಾಬಿನಿಂದಲೂ ಸಮಲಂಕೃತವಾಗಿದ್ದವು. ಕಾಲ್ಗೆಜ್ಜೆಗಳು ಸಮಧುರವಾಗಿ ಝಣ-ಝಣಿಸುತ್ತಿದ್ದವು. ಆ ಮೋಹಿನಿಯು ನಾಚಿಕೆಯಿಂದ ಕೂಡಿದ ಮುಗುಳ್ನಗೆಯಿಂದ ಹುಬ್ಬುಗಳನ್ನು ಹಾರಿಸುತ್ತಾ ವೈಯಾರದ ನೋಟಗಳಿಂದ ದೈತ್ಯನಾಯಕರ ಮನಸ್ಸಿನಲ್ಲಿದ್ದ ಕಾಮವನ್ನು ಉದ್ದೀಪನಗೊಳಿಸಿದಳು.”
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮಸ್ಕಂಧೇ ಭಗವನ್ಮಾಯೋಪಲಂಭನಂ ನಾಮಾಷ್ಟಮೋಽಧ್ಯಾಯಃ ।।
[1] ಇಲ್ಲಿ ಅಧಿಕ ಶ್ಲೋಕವಿದೆ: ಐರಾವಣಾದಯಸ್ತ್ವಷ್ಟೌ ದಿಗ್ಗಜಾ ಅಭವಂಸ್ತತಃ । ಅಭ್ರಮುಪ್ರಭೃತಯೋಽಷ್ಟೌ ಚ ಕರಿಣ್ಯಸ್ತ್ವಭವನ್ನೃಪ ।। ಅರ್ಥಾತ್: ಐರಾವತದಂತೆಯೇ ಎಂಟು ದಿಗ್ಗಜಗಳು ಹುಟ್ಟಿದವು. ನೃಪ! ಮೋಡಗಳಂತಿದ್ದ ಆ ಎಂಟು ಆನೆಗಳು ಹುಟ್ಟಿದವು.