ಶ್ರೀಮದ್ಭಾಗವತಮಹಾಪುರಾಣ: ಅಷ್ಟಮ ಸ್ಕಂಧ: ಅಧ್ಯಾಯ 7

 

 

ಶ್ರೀಶುಕ ಉವಾಚ । ತೇ ನಾಗರಾಜಮಾಮಂತ್ರ್ಯ ಫಲಭಾಗೇನ ವಾಸುಕಿಮ್ । ಪರಿವೀಯ ಗಿರೌ ತಸ್ಮಿನ್ನೇತ್ರಮಬ್ಧಿಂ ಮುದಾನ್ವಿತಾಃ ।। 1 ।। ಆರೇಭಿರೇ ಸುರಾ ಯತ್ತಾ ಅಮೃತಾರ್ಥೇ ಕುರೂದ್ವಹ । ಹರಿಃ ಪುರಸ್ತಾಜ್ಜಗೃಹೇ ಪೂರ್ವಂ ದೇವಾಸ್ತತೋಽಭವನ್ ।। 2 ।।

ಶ್ರೀಶುಕನು ಹೇಳಿದನು: “ಕುರೂದ್ವಹ! ಫಲಭಾಗದ ಭರವಸೆಯನ್ನಿತ್ತು ನಾಗರಾಜ ವಾಸುಕಿಯನ್ನು ಆಹ್ವಾನಿಸಿ ಮುದಾನ್ವಿತ ಸುರರು ಅವನನ್ನು ಮಂದರ ಪರ್ವತಕ್ಕೆ ಸುತ್ತಿ ಅಮೃತಕ್ಕಾಗಿ ಸಮುದ್ರವನ್ನು ಮಥಿಸತೊಡಗಿದರು. ಮೊದಲು ಹರಿಯು ವಾಸುಕಿಯ ಹೆಡೆಯನ್ನು ಹಿಡಿದುಕೊಂಡನು. ದೇವತೆಗಳೂ ಹಾಗೆಯೇ ಮಾಡಿದರು.

ತನ್ನೈಚ್ಛಂದೈತ್ಯಪತಯೋ ಮಹಾಪುರುಷಚೇಷ್ಟಿತಮ್ । ನ ಗೃಹ್ಣೀಮೋ ವಯಂ ಪುಚ್ಛಮಹೇರಂಗಮಮಂಗಲಮ್ ।। 3 ।। ಸ್ವಾಧ್ಯಾಯಶ್ರುತಸಂಪನ್ನಾಃ ಪ್ರಖ್ಯಾತಾ ಜನ್ಮಕರ್ಮಭಿಃ । ಇತಿ ತೂಷ್ಣೀಂ ಸ್ಥಿತಾಂದೈತ್ಯಾನ್ವಿಲೋಕ್ಯ ಪುರುಷೋತ್ತಮಃ । ಸ್ಮಯಮಾನೋ ವಿಸೃಜ್ಯಾಗ್ರಂ ಪುಚ್ಛಂ ಜಗ್ರಾಹ ಸಾಮರಃ ।। 4 ।।

ಆದರೆ ಮಹಾಪುರುಷನು ಮಾಡಿದ ಈ ಕೃತ್ಯವು ದೈತ್ಯಪತಿಗಳಿಗೆ ಇಷ್ಟವಾಗಲಿಲ್ಲ. “ನಾವು ಸಾಧ್ಯಾಯ-ಶ್ರುತಿ ಸಂಪನ್ನರು. ಜನ್ಮ-ಕರ್ಮಗಳಿಂದ ಪ್ರಖ್ಯಾತರು. ಅಮಂಗಲ ಬಾಲವನ್ನು ನಾವು ಹಿಡಿಯುವುದಿಲ್ಲ!” ಎಂದು ಹೇಳಿ ಸುಮ್ಮನೇ ನಿಂತರು. ಆ ದೈತ್ಯರನ್ನು ನೋಡಿ ಪುರುಷೋತ್ತಮನು ನಸುನಕ್ಕು ಅಮರರೊಂದಿಗೆ ವಾಸುಕಿಯ ತಲೆಯನ್ನು ಬಿಟ್ಟು ಬಾಲವನ್ನು ಹಿಡಿದುಕೊಂಡನು.

ಕೃತಸ್ಥಾನವಿಭಾಗಾಸ್ತ ಏವಂ ಕಶ್ಯಪನಂದನಾಃ । ಮಮಂಥುಃ ಪರಮಂ ಯತ್ತಾ ಅಮೃತಾರ್ಥಂ ಪಯೋನಿಧಿಮ್ ।। 5 ।। ಮಥ್ಯಮಾನೇಽರ್ಣವೇ ಸೋಽದ್ರಿರನಾಧಾರೋ ಹ್ಯಪೋಽವಿಶತ್ । ಧ್ರಿಯಮಾಣೋಽಪಿ ಬಲಿಭಿರ್ಗೌರವಾತ್ಪಾಂಡುನಂದನ ।। 6 ।। ತೇ ಸುನಿರ್ವಿಣ್ಣಮನಸಃ ಪರಿಮ್ಲಾನಮುಖಶ್ರಿಯಃ । ಆಸನ್ಸ್ವಪೌರುಷೇ ನಷ್ಟೇ ದೈವೇನಾತಿಬಲೀಯಸಾ ।। 7 ।।

ಹೀಗೆ ತಮ್ಮ ಸ್ಥಾನವಿಭಾಗಗಳನ್ನು ಮಾಡಿಕೊಂಡು ಕಶ್ಯಪನಂದನರು ಅಮೃತಕ್ಕಾಗಿ ಪರಮ ಪ್ರಯತ್ನಪಟ್ಟು ಕ್ಷೀರಸಾಗರವನ್ನು ಮಥಿಸಿದರು. ಪಾಂಡುನಂದನ! ವಾಸುಕಿಯನ್ನು ಸುತ್ತಿ ಭದ್ರವಾಗಿ ಹಿಡಿದುಕೊಂಡಿದ್ದರೂ ಮಥಿಸುತ್ತಿದ್ದಾಗ ಅದರ ಭಾರದಿಂದ ಯಾವಾ ಆಧಾರವೂ ಇಲ್ಲದಿದ್ದ ಆ ಪರ್ವತವು ಮುಳುಗತೊಡಗಿತು. ಹೀಗೆ ಅತಿಬಲಶಾಲೀ ದೈವದಿಂದ ಪುರುಷಪ್ರಯತ್ನವು ನಷ್ಟವಾಗುತ್ತಿದ್ದುದನ್ನು ನೋಡಿ ದೇವ-ದಾನವರು ನಿರ್ವಿಣ್ಣಮನಸ್ಕರಾದರು ಮತ್ತು ಮುಖದ ಕಾಂತಿಯನ್ನೇ ಕಳೆದುಕೊಂಡರು.

ವಿಲೋಕ್ಯ ವಿಘ್ನೇಶವಿಧಿಂ ತದೇಶ್ವರೋ ದುರಂತವೀರ್ಯೋಽವಿತಥಾಭಿಸಂಧಿಃ । ಕೃತ್ವಾ ವಪುಃ ಕಚ್ಛಪಮದ್ಭುತಂ ಮಹತ್ಪ್ರವಿಶ್ಯ ತೋಯಂ ಗಿರಿಮುಜ್ಜಹಾರ ।। 8 ।। ತಮುತ್ಥಿತಂ ವೀಕ್ಷ್ಯ ಕುಲಾಚಲಂ ಪುನಃ ಸಮುದ್ಯತಾ ನಿರ್ಮಥಿತುಂ ಸುರಾಸುರಾಃ । ದಧಾರ ಪೃಷ್ಠೇನ ಸ ಲಕ್ಷಯೋಜನ ಪ್ರಸ್ತಾರಿಣಾ ದ್ವೀಪ ಇವಾಪರೋ ಮಹಾನ್ ।। 9 ।।

ವಿಘ್ನೇಶನ ವಿಧಿಯನ್ನು ನೋಡಿ ಈಶ್ವರನು ವಿಶಾಲವೂ ಅದ್ಭುತವೂ ಆದ ಆಮೆಯ ರೂಪವನ್ನು ಧರಿಸಿ ಸಮುದ್ರದಲ್ಲಿ ಮುಳುಗಿ ಮಂದರಾಚಲವನ್ನು ಮೇಲಕ್ಕೆತ್ತಿದನು. ಅನಂತ ವೀರ್ಯನೂ ಸತ್ಯಸಂಕಲ್ಪನೂ ಆದ ಅವನಿಗೆ ಇದೇನೂ ದೊಡ್ಡಕೆಲಸವಾಗಿರಲಿಲ್ಲ. ಕುಲಾಚಲ ಮಂದರವು ಮೇಲೆ ಬಂದುದನ್ನು ನೋಡಿ ಸುರಾಸುರರು ಪುನಃ ಮಥಿಸತೊಡಗಿದರು. ಆಗ ಭಗವಂತನು ಇನ್ನೊಂದು ದ್ವೀಪದಂತೆ ಒಂದು ಲಕ್ಷಯೋಜನ ವಿಸ್ತಾರದ ತನ್ನ ಬೆನ್ನ ಮೇಲೆ ಮಂದರವನ್ನು ಹೊತ್ತಿದ್ದನು.

ಸುರಾಸುರೇಂದ್ರೈರ್ಭುಜವೀರ್ಯವೇಪಿತಂ ಪರಿಭ್ರಮಂತಂ ಗಿರಿಮಂಗ ಪೃಷ್ಠತಃ । ಬಿಭ್ರತ್ತದಾವರ್ತನಮಾದಿಕಚ್ಛಪೋ ಮೇನೇಽಂಗಕಂಡೂಯನಮಪ್ರಮೇಯಃ ।। 10 ।। ತಥಾಸುರಾನಾವಿಶದಾಸುರೇಣ ರೂಪೇಣ ತೇಷಾಂ ಬಲವೀರ್ಯಮೀರಯನ್ । ಉದ್ದೀಪಯಂದೇವಗಣಾಂಶ್ಚ ವಿಷ್ಣುರ್ದೈವೇನ ನಾಗೇಂದ್ರಮಬೋಧರೂಪಃ ।। 11 ।।

ಸುರಾಸುರೇಂದ್ರರ ಭುಜವೀರ್ಯದಿಂದ ಬೆನ್ನಮೇಲೆ ತಿರುಗುತ್ತಿದ್ದ ಆ ಪರ್ವತವು ಅಪ್ರಮೇಯ ಆದಿಕಚ್ಛಪನಿಗೆ ಯಾರೋ ತನ್ನ ಬೆನ್ನನ್ನು ತುರಿಸುತ್ತಿರುವರೋ ಎಂದೆನಿಸಿತು. ಹಾಗೆಯೇ ವಿಷ್ಣುವು ಅಸುರರ ಬಲವೀರ್ಯವನ್ನು ಹೆಚ್ಚಿಸಲು ಅಸುರರೂಪದಿಂದ ಅವರನ್ನು ಪ್ರವೇಶಿಸಿದನು. ದೇವಗಣಗಳನ್ನು ಉದ್ದೀಪನಗೊಳಿಸಲು ದೈವರೂಪದಿಂದ ಹಾಗೂ ನಾಗೇಂದ್ರನನ್ನು ನಿದ್ರಾರೂಪದಿಂದ ಪ್ರವೇಶಿಸಿದನು.

ಉಪರ್ಯಗೇಂದ್ರಂ ಗಿರಿರಾಡಿವಾನ್ಯ ಆಕ್ರಮ್ಯ ಹಸ್ತೇನ ಸಹಸ್ರಬಾಹುಃ । ತಸ್ಥೌ ದಿವಿ ಬ್ರಹ್ಮಭವೇಂದ್ರಮುಖ್ಯೈರಭಿಷ್ಟುವದ್ಭಿಃ ಸುಮನೋಽಭಿವೃಷ್ಟಃ ।। 12 ।। ಉಪರ್ಯಧಶ್ಚಾತ್ಮನಿ ಗೋತ್ರನೇತ್ರಯೋಃ ಪರೇಣ ತೇ ಪ್ರಾವಿಶತಾ ಸಮೇಧಿತಾಃ । ಮಮಂಥುರಬ್ಧಿಂ ತರಸಾ ಮದೋತ್ಕಟಾ ಮಹಾದ್ರಿಣಾ ಕ್ಷೋಭಿತನಕ್ರಚಕ್ರಮ್ ।। 13 ।।

ಮಂದರಾಚಲದ ತುದಿಯಲ್ಲಿ ಸಹಸ್ರಬಾಹುವು ತನ್ನ ಹಸ್ತವನ್ನಿರಿಸಿ ಅದನ್ನು ಕೆಳಗೆ ಅದುಮಿ ಹಿಡಿದುಕೊಂಡನು. ಆಗ ದಿವಿಯಲ್ಲಿ ನಿಂತಿದ್ದ ಬ್ರಹ್ಮ-ಭವ-ಇಂದ್ರಪ್ರಮುಖರು ಅವನನ್ನು ಸ್ತುತಿಸುತ್ತಾ ಹೂಮಳೆಗರೆದರು. ಮೇಲಿನಿಂದ ಅದನ್ನು ಒತ್ತಿಹಿಡಿದು, ಕೆಳಗಿನಿಂದ ಅದಕ್ಕೆ ಆಧಾರವಾಗಿದ್ದುಕೊಂಡು, ದೇವ-ದಾನವರನ್ನು ಶಕ್ತಿರೂಪವಾಗಿ, ಪರ್ವತದಲ್ಲಿ ದೃಢತೆಯ ರೂಪದಿಂದ, ವಾಸುಕಿಯಲ್ಲಿ ನಿದ್ದೆಯ ರೂಪದಿಂದ ಪ್ರವೇಶಿಸಲು ಎಲ್ಲರೂ ಸಮುದ್ರವನ್ನು ಕಡೆಯತೊಡಗಿದರು. ಇದರಿಂದಾಗಿ ಜಲಚರಪ್ರಾಣಿಗಳು ಕ್ಷೋಭೆಗೊಂಡವು.

ಅಹೀಂದ್ರಸಾಹಸ್ರಕಠೋರದೃಂಮುಖ ಶ್ವಾಸಾಗ್ನಿಧೂಮಾಹತವರ್ಚಸೋಽಸುರಾಃ । ಪೌಲೋಮಕಾಲೇಯಬಲೀಲ್ವಲಾದಯೋ ದವಾಗ್ನಿದಗ್ಧಾಃ ಸರಲಾ ಇವಾಭವನ್ ।। 14 ।। ದೇವಾಂಶ್ಚ ತಚ್ಛ್ವಾಸಶಿಖಾಹತಪ್ರಭಾಂಧೂಮ್ರಾಂಬರಸ್ರಗ್ವರಕಂಚುಕಾನನಾನ್ । ಸಮಭ್ಯವರ್ಷನ್ಭಗವದ್ವಶಾ ಘನಾ ವವುಃ ಸಮುದ್ರೋರ್ಮ್ಯುಪಗೂಢವಾಯವಃ ।। 15 ।।

ವಾಸುಕಿಯ ಸಹಸ್ರ ಕಣ್ಣುಗಳು, ಮುಖಗಳು ಮತ್ತು ನಿಟ್ಟುಸಿರುನಿಂದ ವಿಷಜ್ವಾಲೆಗಳು ಹೊರಹೊಮ್ಮಿದವು. ಆಗ ಮುಖದ ಭಾಗವನ್ನು ಹಿಡಿದಿದ್ದ ಪೌಲೋಮ-ಕಾಲೇಯರು, ಬಲಿ-ಇಲ್ವಲಾದಿ ಅಸುರರು ನಿಸ್ತೇಜರಾಗಿ, ಕಾಡ್ಗಿಚ್ಚಿನಿಂದ ಸುಟ್ಟ ಸಾಲವೃಕ್ಷಗಳಂತೆ ಕಂಡರು. ದೇವತೆಗಳೂ ಕೂಡ ಆ ಶ್ವಾಸದ ವಿಷಜ್ವಾಲೆಯಿಂದ ತಪ್ಪಿಸಿಕೊಳ್ಳಲಾರದೇ ಹೋದರು. ಅದರಿಂದ ಅವರ ತೇಜಸ್ಸು, ವಸ್ತ್ರಗಳು ಮಾಲೆಗಳು, ಕವಚಗಳು ಮತ್ತು ಮುಖಗಳು ಕಳೆಗುಂದಿದವು. ಆಗ ಭಗವದ್ವಶವಾದ ಘನ ಮೋಡಗಳು ಮಳೆಸುರಿಸಿದವು ಮತ್ತು ವಾಯುವು ಸಮುದ್ರದ ಅಲೆಗಳ ಮೇಲೆ ಬೀಸಿ ತಂತನ್ನೂ ಸುಗಂಧವನ್ನೂ ನೀಡಿದನು.

ಮಥ್ಯಮಾನಾತ್ತಥಾ ಸಿಂಧೋರ್ದೇವಾಸುರವರೂಥಪೈಃ । ಯದಾ ಸುಧಾ ನ ಜಾಯೇತ ನಿರ್ಮಮಂಥಾಜಿತಃ ಸ್ವಯಮ್ ।। 16 ।। ಮೇಘಶ್ಯಾಮಃ ಕನಕಪರಿಧಿಃ ಕರ್ಣವಿದ್ಯೋತವಿದ್ಯುನ್ ಮೂರ್ಧ್ನಿ ಭ್ರಾಜದ್ವಿಲುಲಿತಕಚಃ ಸ್ರಗ್ಧರೋ ರಕ್ತನೇತ್ರಃ । ಜೈತ್ರೈರ್ದೋರ್ಭಿರ್ಜಗದಭಯದೈರ್ದಂದಶೂಕಂ ಗೃಹೀತ್ವಾ । ಮಥ್ನನ್ಮಥ್ನಾ ಪ್ರತಿಗಿರಿರಿವಾಶೋಭತಾಥೋ ಧೃತಾದ್ರಿಃ ।। 17 ।।

ಹೀಗೆ ದೇವಾಸುರರು ಸಮುದ್ರಮಥನವನ್ನು ಮುಂದುವರಿಸಲು ಅಮೃತವು ಬಾರದಿರಲು ಭಗವಾನ್ ಅಜಿತನೇ ಸ್ವಯಂ ಕಡೆಯಲು ಪ್ರಾರಂಭಿಸಿದನು. ಕನಕವರ್ಣದ ಪೀತಾಂಬರವನ್ನುಟ್ಟಿದ್ದ, ಕರ್ಣಕುಂಡಲಗಳು ಓಲಾಡು-ತ್ತಿದ್ದ, ತಲೆಯಲ್ಲಿ ಹೊಳೆಯುತ್ತಿದ್ದ ಗುಂಗುರು ಕೂದಲುಗಳಿದ್ದ, ಕಮನೀಯ ರಕ್ತನೇತ್ರ ಮೇಘಶ್ಯಾಮನ ಕೊರಳಲ್ಲಿ ವನಮಾಲೆಯು ಶೋಭಿಸುತ್ತಿತ್ತು. ಸಮಸ್ತ ಜಗತ್ತಿಗೆ ಅಭಯವನ್ನೀಯುವ ಆ ಭಗವಂತನು ಭುಜದಂಡಗ-ಳಿಂದ ವಾಸುಕಿಯನ್ನು ಹಿಡಿದು, ಕೂರ್ಮರೂಪದಿಂದ ಪರ್ವತವನ್ನು ಹೊತ್ತುಕೊಂಡು, ಮಂದರಾಚಲವೆಂಬ ಕಡಗೋಲಿನಿಂದ ಸಮುದ್ರವನ್ನು ಕಡೆಯುತ್ತಿದ್ದಾಗ ಇನ್ನೊಂದು ಪರ್ವತದಂತೆಯೇ ಸುಂದರನಾಗಿ ಕಾಣುತ್ತಿದ್ದನು.

ನಿರ್ಮಥ್ಯಮಾನಾದುದಧೇರಭೂದ್ವಿಷಂ ಮಹೋಲ್ಬಣಂ ಹಾಲಹಲಾಹ್ವಮಗ್ರತಃ । ಸಂಭ್ರಾಂತಮೀನೋನ್ಮಕರಾಹಿಕಚ್ಛಪಾ ತ್ತಿಮಿದ್ವಿಪಗ್ರಾಹತಿಮಿಂಗಿಲಾಕುಲಾತ್ ।। 18 ।। ತದುಗ್ರವೇಗಂ ದಿಶಿ ದಿಶ್ಯುಪರ್ಯಧೋ ವಿಸರ್ಪದುತ್ಸರ್ಪದಸಹ್ಯಮಪ್ರತಿ । ಭೀತಾಃ ಪ್ರಜಾ ದುದ್ರುವುರಂಗ ಸೇಶ್ವರಾ ಅರಕ್ಷ್ಯಮಾಣಾಃ ಶರಣಂ ಸದಾಶಿವಮ್ ।। 19 ।। ವಿಲೋಕ್ಯ ತಂ ದೇವವರಂ ತ್ರಿಲೋಕ್ಯಾ ಭವಾಯ ದೇವ್ಯಾಭಿಮತಂ ಮುನೀನಾಮ್ । ಆಸೀನಮದ್ರಾವಪವರ್ಗಹೇತೋಸ್ತಪೋ ಜುಷಾಣಂ ಸ್ತುತಿಭಿಃ ಪ್ರಣೇಮುಃ ।। 20 ।।

ಹೀಗೆ ಮಥಿಸುತ್ತಿದ್ದಾಗ ಸಮುದ್ರದಲ್ಲಿ ಕೋಲಾಹಲವುಂಟಾಗಿ ಮೀನು, ಮೊಸಳೆ, ಹಾವುಗಳು, ಆಮೆಗಳು, ತಿಮಿ-ತಿಮಿಂಗಿಲಗಳು, ನೀರಾನೆಗಳು ಮತ್ತು ಮೊಸಳೆಗಳು ಭಯಗೊಂಡು ಮೇಲೆ ಬಂದು ಇಲ್ಲಿಂದಲ್ಲಿಗೆ ಓಡತೊಡಗಿದವು. ಆಗ ಕ್ಷೀರಸಾಗರದಿಂದ ಮೊದಲು ಹಾಲಹಲವೆಂಬ ಉಗ್ರ ವಿಷವು ಹೊರಹೊಮ್ಮಿತು. ಆ ಉಗ್ರವೇಗದ ವಿಷವು ದಿಕ್ಕು-ಉಪದಿಕ್ಕುಗಳಲ್ಲಿ ಭೂಮ್ಯಂತರಿಕ್ಷಗಳಲ್ಲಿ ಸರ್ವತ್ರ ವ್ಯಾಪಿಸತೊಡಗಿತು. ಅಪ್ರತಿಮವೂ ಅಸಹ್ಯವೂ ಆದ ಅದರಿಂದ ಭಯಗೊಂಡ ಪ್ರಜೆಗಳು ಪ್ರಜಾಪತಿಗಳೂ ರಕ್ಷಕರನ್ನು ಕಾಣದೇ ಸದಾಶಿವನಿಗೆ ಶರಣುಹೋದರು. ಪಾರ್ವತಿಯೊಡನೆ ಕೈಲಾಸದಲ್ಲಿ ವಿರಾಜಮಾನನಾಗಿದ್ದ, ಮಹಾಮುನಿ-ಗಳು ಸೇವಿಗೈಯುತ್ತಿದ್ದ, ತ್ರಿಲೋಕಗಳ ಅಭ್ಯುದಯಕ್ಕಾಗಿ ಮತ್ತು ಮೋಕ್ಷ-ಕ್ಕಾಗಿ ತಪಸ್ಸನ್ನಾಚರಿಸುತ್ತಿದ್ದ ದೇವವರನನ್ನು ಕಂಡು ಪ್ರಜಾಪತಿಗಳು ಸ್ತುತಿಸುತ್ತಾ ಸಾಷ್ಟಾಂಗ ಪ್ರಣಾಮ ಮಾಡಿದರು.

ಶ್ರೀಪ್ರಜಾಪತಯ ಊಚುಃ । ದೇವದೇವ ಮಹಾದೇವ ಭೂತಾತ್ಮನ್ಭೂತಭಾವನ । ತ್ರಾಹಿ ನಃ ಶರಣಾಪನ್ನಾಂಸ್ತ್ರೈಲೋಕ್ಯದಹನಾದ್ವಿಷಾತ್ ।। 21 ।। ತ್ವಮೇಕಃ ಸರ್ವಜಗತ ಈಶ್ವರೋ ಬಂಧಮೋಕ್ಷಯೋಃ । ತಂ ತ್ವಾಮರ್ಚಂತಿ ಕುಶಲಾಃ ಪ್ರಪನ್ನಾರ್ತಿಹರಂ ಗುರುಮ್ ।। 22 ।।

ಶ್ರೀಪ್ರಜಾಪತಿಗಳು ಹೇಳಿದರು: “ದೇವದೇವ! ಮಹಾದೇವ! ಭೂತಾತ್ಮನ್! ಭೂತಭಾವನ! ಶರಣುಬಂದಿರುವ ನಮ್ಮನ್ನು ಮತ್ತು ತ್ರೈಲೋಕ್ಯವನ್ನೂ ಈ ವಿಷದಿಂದ ದಹಿಸಿಹೋಗದಂತೆ ರಕ್ಷಿಸು. ಸರ್ವಜಗತ್ತಿಗೂ, ಬಂಧನ-ಮೋಕ್ಷಗಳಿಗೂ ನೀನೊಬ್ಬನೇ ಈಶ್ವರನು. ಆದ್ದರಿಂದ ಕುಶಲರಾದವರು ಶರಣಾಗತರ ಕಷ್ಟವನ್ನು ಪರಿಹರಿಸುವ ಗುರು ನಿನ್ನನ್ನೇ ಅರ್ಚಿಸುತ್ತಾರೆ.

ಗುಣಮಯ್ಯಾ ಸ್ವಶಕ್ತ್ಯಾಸ್ಯ ಸರ್ಗಸ್ಥಿತ್ಯಪ್ಯಯಾನ್ವಿಭೋ । ಧತ್ಸೇ ಯದಾ ಸ್ವದೃಗ್ಭೂಮನ್ಬ್ರಹ್ಮವಿಷ್ಣುಶಿವಾಭಿಧಾಮ್ ।। 23 ।। ತ್ವಂ ಬ್ರಹ್ಮ ಪರಮಂ ಗುಹ್ಯಂ ಸದಸದ್ಭಾವಭಾವನಮ್ । ನಾನಾಶಕ್ತಿಭಿರಾಭಾತಸ್ತ್ವಮಾತ್ಮಾ ಜಗದೀಶ್ವರಃ ।। 24 ।।

ಅನಂತನೂ ಏಕರಸನೂ ಆಗಿದ್ದರೂ ಈ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳನ್ನು ಮಾಡಲು ನೀನು ನಿನ್ನ ಗುಣಮಯ ಶಕ್ತಿಯಿಂದ ಬ್ರಹ್ಮ-ವಿಷ್ಣು-ಶಿವ ಮೊದಲಾದ ನಾಮಗಳನ್ನು ಧರಿಸಿರುವೆ.ನೀನು ಪರಮಗುಹ್ಯವಾದ ಬ್ರಹ್ಮತತ್ತ್ವವು. ಕಾರ್ಯ-ಕಾರಣಗಳ ರೂಪದಿಂದ ದೇವತೆಗಳನ್ನೂ, ಮನುಷ್ಯರನ್ನೂ, ಪಶುಪಕ್ಷಿಗಳನ್ನೂ ಸೃಷ್ಟಿಸಿ ಪೋಷಿಸುವವನೂ ನೀನೇ. ಜಗದೀಶ್ವರ! ಅನೇಕ ಶಕ್ತಿಗಳ ರೂಪದಲ್ಲಿ ಕಾಣಿಸುವ ನೀನು ಆತ್ಮಸ್ವರೂಪನೂ ಆಗಿರುವೆ.

ತ್ವಂ ಶಬ್ದಯೋನಿರ್ಜಗದಾದಿರಾತ್ಮಾ ಪ್ರಾಣೇಂದ್ರಿಯದ್ರವ್ಯಗುಣಃ ಸ್ವಭಾವಃ । ಕಾಲಃ ಕ್ರತುಃ ಸತ್ಯಮೃತಂ ಚ ಧರ್ಮಸ್ತ್ವಯ್ಯಕ್ಷರಂ ಯತ್ತ್ರಿವೃದಾಮನಂತಿ ।। 25 ।। ಅಗ್ನಿರ್ಮುಖಂ ತೇಽಖಿಲದೇವತಾತ್ಮಾ ಕ್ಷಿತಿಂ ವಿದುರ್ಲೋಕಭವಾಂಘ್ರಿಪಂಕಜಮ್ । ಕಾಲಂ ಗತಿಂ ತೇಽಖಿಲದೇವತಾತ್ಮನೋ ದಿಶಶ್ಚ ಕರ್ಣೌ ರಸನಂ ಜಲೇಶಮ್ ।। 26 ।।

ನೀನು ಶಬ್ದಯೋನಿಯು. ಜಗತ್ತಿನ ಆದಿರಾತ್ಮನು. ಪ್ರಾಣ-ಇಂದ್ರಿಯ-ಪಂಚಭೂತಗಳ ಗುಣಸ್ವಭಾವವೂ ನೀನು. ಕಾಲ, ಕರ್ತ, ಸತ್ಯ, ಅಸತ್ಯ್ ಧರ್ಮ, ಮೂರು ಅಕ್ಷರಗಳ ಓಂಕಾರನೂ ನೀನೇ. ಅಖಿಲ ದೇವತಾತ್ಮಾ! ಅಗ್ನಿಯು ನಿನ್ನ ಮುಖ. ಕ್ಷಿತಿಯು ನಿನ್ನ ಚರಣಕಮ-ಲ. ಲೋಕಭಾವನ! ಕಾಲವು ನಿನ್ನ ಗತಿ. ಅಖಿಲ ದೇವತಾತ್ಮಾ! ದಿಕ್ಕುಗಳು ನಿನ್ನ ಕಿವಿಗಳು ಮತ್ತು ಜಲೇಶ ವರುಣನು ನಿನ್ನ ರಸನೇಂದ್ರಿಯನು.

ನಾಭಿರ್ನಭಸ್ತೇ ಶ್ವಸನಂ ನಭಸ್ವಾನ್ಸೂರ್ಯಶ್ಚ ಚಕ್ಷೂಂಷಿ ಜಲಂ ಸ್ಮ ರೇತಃ । ಪರಾವರಾತ್ಮಾಶ್ರಯಣಂ ತವಾತ್ಮಾ ಸೋಮೋ ಮನೋ ದ್ಯೌರ್ಭಗವನ್ಶಿರಸ್ತೇ ।। 27 ।। ಕುಕ್ಷಿಃ ಸಮುದ್ರಾ ಗಿರಯೋಽಸ್ಥಿಸಂಘಾ ರೋಮಾಣಿ ಸರ್ವೌಷಧಿವೀರುಧಸ್ತೇ । ಛಂದಾಂಸಿ ಸಾಕ್ಷಾತ್ತವ ಸಪ್ತ ಧಾತವಸ್ತ್ರಯೀಮಯಾತ್ಮನ್ ಹೃದಯಂ ಸರ್ವಧರ್ಮಃ ।। 28 ।।

ನಿನ್ನ ನಾಭಿಯು ನಭವು. ವಾಯುವು ನಿನ್ನ ಉಸಿರು. ಸೂರ್ಯನು ಕಣ್ಣುಗಳು. ಜಲವು ರೇತಸ್ಸು. ನಿನ್ನ ಅಹಂಕಾರವು ಸಮಸ್ತ ಪ್ರಾಣಿಗಳಿಗೂ ಮರಮಾಶ್ರಯವು. ಚಂದ್ರನೇ ನಿನ್ನ ಮನಸ್ಸು. ಸ್ವರ್ಗವೇ ನಿನ್ನ ಶಿರಸ್ಸು. ಸಮುದ್ರಗಳು ನಿನ್ನ ಹೊಟ್ಟೆ. ಗಿರಿಗಳು ಮೂಳೆಗಳು. ಸರ್ವ ಔಷಧಿ-ವೀರುಧಗಳು ನಿನ್ನ ರೋಮಗಳು. ಛಂದಸ್ಸುಗಳು ಸಾಕ್ಷಾತ್ ನಿನ್ನ ಸಪ್ತ-ಧಾತುಗಳು. ವೇದಮಯಾತ್ಮನೇ! ಸರ್ವಧರ್ಮಗಳೂ ನಿನ್ನ ಹೃದಯವು.

ಮುಖಾನಿ ಪಂಚೋಪನಿಷದಸ್ತವೇಶ ಯೈಸ್ತ್ರಿಂಶದಷ್ಟೋತ್ತರಮಂತ್ರವರ್ಗಃ । ಯತ್ತಚ್ಛಿವಾಖ್ಯಂ ಪರಮಾತ್ಮತತ್ತ್ವಂ ದೇವ ಸ್ವಯಂಜ್ಯೋತಿರವಸ್ಥಿತಿಸ್ತೇ ।। 29 ।। ಛಾಯಾ ತ್ವಧರ್ಮೋರ್ಮಿಷು ಯೈರ್ವಿಸರ್ಗೋ ನೇತ್ರತ್ರಯಂ ಸತ್ತ್ವರಜಸ್ತಮಾಂಸಿ । ಸಾಂಖ್ಯಾತ್ಮನಃ ಶಾಸ್ತ್ರಕೃತಸ್ತವೇಕ್ಷಾ ಛಂದೋಮಯೋ ದೇವ ಋಷಿಃ ಪುರಾಣಃ ।। 30 ।।

ಈಶ! ಪಂಚ ಉಪನಿಷತ್ತುಗಳು ನಿನ್ನ ಪಂಚಮುಖಗಳು. ಅವುಗಳ ಪದಚ್ಛೇದದಿಂದಲೇ ಮೂವತ್ತೆಂಟು ಕಲಾತ್ಮಕ ಮಂತ್ರಗಳು ಉಂಟಾಗುತ್ತವೆ. ಶಿವ ಎಂಬ ನಿನ್ನ ಹೆಸರೇ ಪರಮಾತ್ಮತತ್ತ್ವವು. ದೇವ! ನೀನು ಸ್ವಯಂ ಜ್ಯೋತಿಸ್ಥಿತಿಯಲ್ಲಿದ್ದೀಯೆ. ಅಧರ್ಮವು ನಿನ್ನ ನೆರಳು. ಸತ್ತ್ವ-ರಜ-ತಮೋಗುಣಗಳು ನಿನ್ನ ಮೂರು ಕಣ್ಣುಗಳು. ದೇವ! ಛಂದೋಮಯ ವೇದಗಳು ಸಾಂಖ್ಯಾತ್ಮನಾದ ನೀನೇ ಶಾಸ್ತ್ರಗಳ ಕರ್ತೃ ಮತ್ತು ಸನಾತನ ಋಷಿ ಎಂದು ಹೇಳುತ್ತವೆ.

ನ ತೇ ಗಿರಿತ್ರಾಖಿಲಲೋಕಪಾಲ ವಿರಿಂಚವೈಕುಂಠಸುರೇಂದ್ರಗಮ್ಯಮ್ । ಜ್ಯೋತಿಃ ಪರಂ ಯತ್ರ ರಜಸ್ತಮಶ್ಚ ಸತ್ತ್ವಂ ನ ಯದ್ಬ್ರಹ್ಮ ನಿರಸ್ತಭೇದಮ್ ।। 31 ।। ಕಾಮಾಧ್ವರತ್ರಿಪುರಕಾಲಗರಾದ್ಯನೇಕ ಭೂತದ್ರುಹಃ ಕ್ಷಪಯತಃ ಸ್ತುತಯೇ ನ ತತ್ತೇ । ಯಸ್ತ್ವಂತಕಾಲ ಇದಮಾತ್ಮಕೃತಂ ಸ್ವನೇತ್ರ ವಹ್ನಿಸ್ಫುಲಿಂಗಶಿಖಯಾ ಭಸಿತಂ ನ ವೇದ ।। 32 ।।

ಗಿರಿತ್ರ! ಅಖಿಲಲೋಕಪಾಲ! ಬ್ರಹ್ಮ, ವಿಷ್ಣು ಮತ್ತು ಇಂದ್ರರಿಗೂ ಸಿಲುಕದ ಹಾಗೂ ರಜಸ್ತಮಸತ್ತ್ವಗಳು ಇಲ್ಲದ, ಭೇದಗಳಿಲ್ಲ ಬ್ರಹ್ಮತತ್ತ್ವದ ಪರಮ ಜ್ಯೋತಿಯು ನೀನು. ಕಾಮದಹನ, ದಕ್ಷಯಜ್ಞ ವಿಧ್ವಂಸ, ತ್ರಿಪುರಸಂಹಾರ, ಜೀವದ್ರೋಹೀ ಅನೇಕ ರಾಕ್ಷಸರ ಸಂಹಾರ ಮೊದಲಾದ ಪ್ರಪಂಚಕ್ಕೆ ಹಿತವಾದ ಕಾರ್ಯಗಳನ್ನು ನೀನು ಮಾಡಿದ್ದೀಯೆ. ಇದನ್ನು ಸ್ತುತಿಸಲು ಮಾತ್ರ ಹೇಳುತ್ತಿಲ್ಲ. ಅಂತ್ಯಕಾಲದಲ್ಲಿ ನಿನ್ನ ಮೂರನೇ ಕಣ್ಣಿನಿಂದ ಹೊರಡುವ ಅಗ್ನಿಯ ಕಿಡಿಯ ಜ್ವಾಲಿಯಿಂದ ಜಗತ್ತು ಭಸ್ಮವಾಗುತ್ತದೆ.

ಯೇ ತ್ವಾತ್ಮರಾಮಗುರುಭಿರ್ಹೃದಿ ಚಿಂತಿತಾಂಘ್ರಿ ದ್ವಂದ್ವಂ ಚರಂತಮುಮಯಾ ತಪಸಾಭಿತಪ್ತಮ್ । ಕತ್ಥಂತ ಉಗ್ರಪರುಷಂ ನಿರತಂ ಶ್ಮಶಾನೇ ತೇ ನೂನಮೂತಿಮವಿದಂಸ್ತವ ಹಾತಲಜ್ಜಾಃ ।। 33 ।। ತತ್ತಸ್ಯ ತೇ ಸದಸತೋಃ ಪರತಃ ಪರಸ್ಯ ನಾಂಜಃ ಸ್ವರೂಪಗಮನೇ ಪ್ರಭವಂತಿ ಭೂಮ್ನಃ । ಬ್ರಹ್ಮಾದಯಃ ಕಿಮುತ ಸಂಸ್ತವನೇ ವಯಂ ತು ತತ್ಸರ್ಗಸರ್ಗವಿಷಯಾ ಅಪಿ ಶಕ್ತಿಮಾತ್ರಮ್ ।। 34 ।।

ಆತ್ಮಾರಾಮ ಗುರುಗಳು ಹೃದಯದಲ್ಲಿ ನಿನ್ನ ಚರಣಾಂಘ್ರಿಗಳನ್ನೇ ಧ್ಯಾನಿಸುತ್ತಿರುತ್ತಾರೆ. ನೀನು ಕಠೋರ ತಪಸ್ಸನ್ನಾಚರಿಸುತ್ತೀಯೆ, ಉಮೆಯೊಡನೆ ಸಂಚರಿಸುತ್ತೀಯೆ ಮತ್ತು ನಿರಂತರವೂ ಶ್ಮಶಾನದಲ್ಲಿರುವ ಉಗ್ರಪುರುಷ ಎಂದು ಹೇಳುತ್ತಾರೆ. ಲಜ್ಜೆಯಿಲ್ಲದೆ ಅವರಿಗೆ ನಿನ್ನ ಮಹಿಮೆಯೇನಾದರೂ ತಿಳಿದಿದೆಯೇ? ಪ್ರಪಂಚವನ್ನು ಮೀರಿರುವ ಮಾಯೆಗೂ ಅತೀತನಾಗಿ ನೀನಿರುವೆ. ನಿನ್ನ ಅನಂತ ಸ್ವರೂಪವನ್ನು ಸಾಕ್ಷಾತ್ಕಾರಮಾಡಿಕೊಳ್ಳಲು ಬ್ರಹ್ಮಾದಿಗಳೂ ಅಸಮರ್ಥರೇ ಸರಿ. ನಿನ್ನ ಸ್ವರೂಪವೇ ತಿಳಿಯದಿದ್ದವರಿಗೆ ನಿನ್ನನ್ನು ಸ್ತುತಿಸುವುದಾದರೂ ಹೇಗೆ ಸಾಧ್ಯ? ಬ್ರಹ್ಮನ ಅಂಶದಿಂದಲೇ ಹುಟ್ಟಿದ ನಾವು ಶಕ್ತಿಯಿದ್ದಷ್ಟು ನಿನ್ನನ್ನು ಸ್ತುತಿಸುತ್ತಿದ್ದೇವೆ.

ಏತತ್ಪರಂ ಪ್ರಪಶ್ಯಾಮೋ ನ ಪರಂ ತೇ ಮಹೇಶ್ವರ । ಮೃಡನಾಯ ಹಿ ಲೋಕಸ್ಯ ವ್ಯಕ್ತಿಸ್ತೇಽವ್ಯಕ್ತಕರ್ಮಣಃ ।। 35 ।।

ನಾವಾದರೋ ಕೇವಲ ನಿನ್ನ ಲೀಲಾವಿಹಾರೀ ಸ್ವರೂಪವನ್ನೇ ಕಾಣುತ್ತಿದ್ದೇವೆ. ನಿನ್ನ ಪರಮಾತ್ಮಸ್ವರೂಪವನ್ನು ತಿಳಿಯಲಾರೆವು. ಮಹೇಶ್ವರ! ಅವ್ಯಕ್ತನಾಗಿದ್ದರೂ ಜಗತ್ತಿನ ಹಿತಕ್ಕಾಗಿ ವ್ಯಕ್ತರೂಪದಿಂದಲೂ ನೀನು ಇರುತ್ತೀಯೆ.””

ಶ್ರೀಶುಕ ಉವಾಚ । ತದ್ವೀಕ್ಷ್ಯ ವ್ಯಸನಂ ತಾಸಾಂ ಕೃಪಯಾ ಭೃಶಪೀಡಿತಃ । ಸರ್ವಭೂತಸುಹೃದ್ದೇವ ಇದಮಾಹ ಸತೀಂ ಪ್ರಿಯಾಮ್ ।। 36 ।।

ಶ್ರೀಶುಕನು ಹೇಳಿದನು: “ಅವರ ವ್ಯಸನವನ್ನು ವೀಕ್ಷಿಸಿ ಕೃಪೆಯಿಂದ ಅತ್ಯಂತ ಪೀಡಿತನಾಗಿ ಸರ್ವಭೂತಗಳ ಹಿತೈಷಿಯು ಪ್ರಿಯ ಸತಿಗೆ ಇದನ್ನು ಹೇಳಿದನು.

ಶ್ರೀಶಿವ ಉವಾಚ । ಅಹೋ ಬತ ಭವಾನ್ಯೇತತ್ಪ್ರಜಾನಾಂ ಪಶ್ಯ ವೈಶಸಮ್ । ಕ್ಷೀರೋದಮಥನೋದ್ಭೂತಾತ್ಕಾಲಕೂಟಾದುಪಸ್ಥಿತಮ್ ।। 37 ।। ಆಸಾಂ ಪ್ರಾಣಪರೀಪ್ಸೂನಾಂ ವಿಧೇಯಮಭಯಂ ಹಿ ಮೇ । ಏತಾವಾನ್ ಹಿ ಪ್ರಭೋರರ್ಥೋ ಯದ್ದೀನಪರಿಪಾಲನಮ್ ।। 38 ।। ಪ್ರಾಣೈಃ ಸ್ವೈಃ ಪ್ರಾಣಿನಃ ಪಾಂತಿ ಸಾಧವಃ ಕ್ಷಣಭಂಗುರೈಃ । ಬದ್ಧವೈರೇಷು ಭೂತೇಷು ಮೋಹಿತೇಷ್ವಾತ್ಮಮಾಯಯಾ ।। 39 ।। ಪುಂಸಃ ಕೃಪಯತೋ ಭದ್ರೇ ಸರ್ವಾತ್ಮಾ ಪ್ರೀಯತೇ ಹರಿಃ । ಪ್ರೀತೇ ಹರೌ ಭಗವತಿ ಪ್ರೀಯೇಽಹಂ ಸಚರಾಚರಃ । ತಸ್ಮಾದಿದಂ ಗರಂ ಭುಂಜೇ ಪ್ರಜಾನಾಂ ಸ್ವಸ್ತಿರಸ್ತು ಮೇ ।। 40 ।।

ಕ್ಷಣಭಂಗುರವಾದ ತಮ್ಮ ಪ್ರಾಣಗಳನ್ನು ಕೊಟ್ಟಾದರೂ ಸತ್ಪುರುಷರು ಶ್ರೀಶಿವನು ಹೇಳಿದನು: “ಭವಾನಿ! ಅಯ್ಯೋ ಈ ಪ್ರಜೆಗಳ ಕಷ್ಟವನ್ನು ನೋಡು! ಕ್ಷೀರಸಾಗರಮಥನದಿಂದ ಕಾಲಕೂಟವು ಉತ್ಪನ್ನವಾಯಿತು! ಪ್ರಾಣವನ್ನುಳಿಸಿಕೊಳ್ಳ ಬಯಸಿದ ಇವರಿಗೆ ಅಭಯವನ್ನು ನೀಡುವುದೇ ನನ್ನ ಕರ್ತವ್ಯವು. ಏಕೆಂದರೆ ದೀನರ ಪರಿಪಾಲನೆಯೇ ಪ್ರಭುವಿನ ಉದ್ದೇಶವು. ಪ್ರಾಣಿಗಳನ್ನು ಕಾಪಾಡುತ್ತಾರೆ. ತಮ್ಮದೇ ಮಾಯೆಯಲ್ಲಿ ಸಿಲುಕಿ ಮೋಹದಿಂದಾಗಿ ಪ್ರಾಣಿಗಳು ಬದ್ಧವೈರಿಗಳಾಗುತ್ತಾರೆ. ಭದ್ರೇ! ಕೃಪೆದೋರುವವನ ಮೇಲೆ ಸರ್ವಾತ್ಮಾ ಹರಿಯು ಪ್ರಸನ್ನನಾಗುತ್ತಾನೆ. ಭಗವಂತ ಅರಿಯು ಪ್ರೀತನಾದರೆ ಚರಾಚರಗಳೊಂದಿಗೆ ನಾನೂ ಪ್ರೀತನಾಗುತ್ತೇನೆ. ಆದ್ದರಿಂದ ಈ ವಿಷವನ್ನು ಕುಡಿಯುತ್ತೇನೆ. ನನ್ನ ಪ್ರಜೆಗಳಿಗೆ ಕ್ಷೇಮವಾಗಲಿ!””

ಶ್ರೀಶುಕ ಉವಾಚ । ಏವಮಾಮಂತ್ರ್ಯ ಭಗವಾನ್ಭವಾನೀಂ ವಿಶ್ವಭಾವನಃ । ತದ್ವಿಷಂ ಜಗ್ಧುಮಾರೇಭೇ ಪ್ರಭಾವಜ್ಞಾನ್ವಮೋದತ ।। 41 ।। ತತಃ ಕರತಲೀಕೃತ್ಯ ವ್ಯಾಪಿ ಹಾಲಾಹಲಂ ವಿಷಮ್ । ಅಭಕ್ಷಯನ್ಮಹಾದೇವಃ ಕೃಪಯಾ ಭೂತಭಾವನಃ ।। 42 ।। ತಸ್ಯಾಪಿ ದರ್ಶಯಾಮಾಸ ಸ್ವವೀರ್ಯಂ ಜಲಕಲ್ಮಷಃ । ಯಚ್ಚಕಾರ ಗಲೇ ನೀಲಂ ತಚ್ಚ ಸಾಧೋರ್ವಿಭೂಷಣಮ್ ।। 43 ।।

ಶ್ರೀಶುಕನು ಹೇಳಿದನು: “ಹೀಗೆ ಭವಾನಿಗೆ ಹೇಳಿ ಭಗವಾನ್ ವಿಶ್ವಭಾವನನು ಆ ವಿಷವನ್ನು ಕುಡಿಯಲು ಸಿದ್ಧನಾದನು. ಅವನ ಪ್ರಭಾವವನ್ನು ತಿಳಿದಿದ್ದ ಉಮೆಯು ಅದನ್ನು ಅನುಮೋದಿಸಿದಳು. ಆಗ ಮಹಾದೇವ ಭೂತಭಾವನನು ಕೃಪೆಯಿಂದ ಆ ಹಾಲಾಹಲ ವಿಷವನ್ನು ಅಂಗೈಯಲ್ಲಿ ಎತ್ತಿಕೊಂಡು ಕುಡಿದುಬಿಟ್ಟನು. ಜಲಕಲ್ಮಷವಾಗಿದ್ದ ಆ ವಿಷವೂ ಕೂಡ ಅವನ ಕಂಠವನ್ನು ನೀಲವರ್ಣ-ವನ್ನಾಗಿ ಮಾಡಿ ತನ್ನ ವೀರ್ಯವನ್ನು ತೋರಿಸಿತು. ಆದರೆ ಅದು ಅವನಿಗೆ ಉತ್ತಮ ಅಲಂಕಾರವೇ ಆಯಿತು.

ತಪ್ಯಂತೇ ಲೋಕತಾಪೇನ ಸಾಧವಃ ಪ್ರಾಯಶೋ ಜನಾಃ । ಪರಮಾರಾಧನಂ ತದ್ಧಿ ಪುರುಷಸ್ಯಾಖಿಲಾತ್ಮನಃ ।। 44 ।। ನಿಶಮ್ಯ ಕರ್ಮ ತಚ್ಛಂಭೋರ್ದೇವದೇವಸ್ಯ ಮೀಢುಷಃ । ಪ್ರಜಾ ದಾಕ್ಷಾಯಣೀ ಬ್ರಹ್ಮಾ ವೈಕುಂಠಶ್ಚ ಶಶಂಸಿರೇ ।। 45 ।। ಪ್ರಸ್ಕನ್ನಂ ಪಿಬತಃ ಪಾಣೇರ್ಯತ್ಕಿಂಚಿಜ್ಜಗೃಹುಃ ಸ್ಮ ತತ್ । ವೃಶ್ಚಿಕಾಹಿವಿಷೌಷಧ್ಯೋ ದಂದಶೂಕಾಶ್ಚ ಯೇಽಪರೇ ।। 46 ।।

ಲೋಕದ ದುಃಖವನ್ನು ನಿವಾರಿಸಲು ಕೆಲವು ಸತ್ಪುರುಷರು ಸ್ವಯಂ ದುಃಖಪಡುತ್ತಾರೆ. ಅದು ಅಖಿಲಾತ್ಮ ಪರಮಪುರುಷನ ಆರಾಧನೆಯೆಂದೇ ತಿಳಿಯಬೇಕು. ಪ್ರಜೆಗಳನ್ನು ರಕ್ಷಿಸಲು ಮಾಡಿದ ದೇವದೇವನ ಆ ಕರ್ಮವನ್ನು ನೋಡಿ ದಾಕ್ಷಾಯಣೀ, ಬ್ರಹ್ಮ ಮತ್ತು ವಿಷ್ಣುವು ಪ್ರಶಂಸಿಸಿದರು. ಶಂಕರನು ವಿಷಪಾನಮಾಡುವಾಗ ಅವನ ಕೈಯಿಂದ ಬಿದ್ದ ಸ್ವಲ್ಪ ವಿಷವನ್ನು ಚೇಳುಗಳೂ, ಹಾವುಗಳೂ, ಇತರ ವಿಷಜಂತುಗಳೂ, ಕೆಲವು ವಿಷೌಷಧಿಗಳೂ ಸ್ವೀಕರಿಸಿದವು.”

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮಸ್ಕಂಧೇ ಅಮೃತಮಥನೇ ಸಪ್ತಮೋಽಧ್ಯಾಯಃ ।।

Leave a Reply

Your email address will not be published. Required fields are marked *