ಶ್ರೀಮದ್ಭಾಗವತಮಹಾಪುರಾಣ: ಅಷ್ಟಮ ಸ್ಕಂಧ: ಅಧ್ಯಾಯ 6
ಶ್ರೀಶುಕ ಉವಾಚ । ಏವಂ ಸ್ತುತಃ ಸುರಗಣೈರ್ಭಗವಾನ್ ಹರಿರೀಶ್ವರಃ । ತೇಷಾಮಾವಿರಭೂದ್ರಾಜನ್ಸಹಸ್ರಾರ್ಕೋದಯದ್ಯುತಿಃ ।। 1 ।। ತೇನೈವ ಸಹಸಾ ಸರ್ವೇ ದೇವಾಃ ಪ್ರತಿಹತೇಕ್ಷಣಾಃ । ನಾಪಶ್ಯನ್ಖಂ ದಿಶಃ ಕ್ಷೌಣೀಮಾತ್ಮಾನಂ ಚ ಕುತೋ ವಿಭುಮ್ ।। 2 ।। ವಿರಿಂಚೋ ಭಗವಾಂದೃಷ್ಟ್ವಾ ಸಹ ಶರ್ವೇಣ ತಾಂ ತನುಮ್ । ಸ್ವಚ್ಛಾಂ ಮರಕತಶ್ಯಾಮಾಂ ಕಂಜಗರ್ಭಾರುಣೇಕ್ಷಣಾಮ್ ।। 3 ।। ತಪ್ತಹೇಮಾವದಾತೇನ ಲಸತ್ಕೌಶೇಯವಾಸಸಾ । ಪ್ರಸನ್ನಚಾರುಸರ್ವಾಂಗೀಂ ಸುಮುಖೀಂ ಸುಂದರಭ್ರುವಮ್ ।। 4 ।। ಮಹಾಮಣಿಕಿರೀಟೇನ ಕೇಯೂರಾಭ್ಯಾಂ ಚ ಭೂಷಿತಾಮ್ । ಕರ್ಣಾಭರಣನಿರ್ಭಾತ ಕಪೋಲಶ್ರೀಮುಖಾಂಬುಜಾಮ್ ।। 5 ।। ಕಾಂಚೀಕಲಾಪವಲಯ ಹಾರನೂಪುರಶೋಭಿತಾಮ್ । ಕೌಸ್ತುಭಾಭರಣಾಂ ಲಕ್ಷ್ಮೀಂ ಬಿಭ್ರತೀಂ ವನಮಾಲಿನೀಮ್ ।। 6 ।। ಸುದರ್ಶನಾದಿಭಿಃ ಸ್ವಾಸ್ತ್ರೈರ್ಮೂರ್ತಿಮದ್ಭಿರುಪಾಸಿತಾಮ್ । ತುಷ್ಟಾವ ದೇವಪ್ರವರಃ ಸಶರ್ವಃ ಪುರುಷಂ ಪರಮ್ । ಸರ್ವಾಮರಗಣೈಃ ಸಾಕಂ ಸರ್ವಾಂಗೈರವನಿಂ ಗತೈಃ ।। 7 ।।
ಶ್ರೀಶುಕನು ಹೇಳಿದನು: “ರಾಜನ್! ಹೀಗೆ ಸುರಗಣಗಳು ಸ್ತುತಿಸಲು ಭಗವಾನ್ ಹರಿ ಈಶ್ವರನು ಅವರ ಮಧ್ಯದಲ್ಲಿ ಸಹಸ್ರ ಸೂರ್ಯರು ಒಮ್ಮೆಲೇ ಉದಯಿಸಿದಂತೆ ಪ್ರಕಟನಾದನು. ಕೂಡಲೇ ಆ ಉಜ್ವಲ ಪ್ರಕಾಶದಿಂದ ಸರ್ವ ದೇವತೆಗಳ ಕಣ್ಣುಗಳು ಕೋರೈಸಿದವು. ವಿಭುವನ್ನು ನೋಡುವುದಿರಲಿ, ಭೂಮಿ-ಆಕಾಶಗಳನ್ನಾ-ಗಲೀ ದಿಕ್ಕುಗಳನ್ನಾಗಲೀ ಕಡೆಗೆ ತಮ್ಮ ಶರೀರಗಳನ್ನಾಗಲೀ ನೋಡಲಾರದೇ ಹೋದರು. ಕೇವಲ ಭಗವಾನ್ ಶರ್ವನೊಡನೆ ವಿರಂಚಿ ಬ್ರಹ್ಮನು ದೇವನ ಶರೀರವನ್ನು ನೋಡಿದರು. ಸ್ವಚ್ಛವಾಗಿದ್ದ ಅವನ ಅಂಗಕಾಂತಿಯು ಮರಕತಮಣಿಯಂತೆ ಶ್ಯಾಮವರ್ಣದ್ದಾಗಿತ್ತು. ಅವನ ಕಣ್ಣುಗಳು ಕಮಲದ ಪರಾಗದಂತೆ ಎಣ್ಣೆಗಂಪಿನ ವರ್ಣದ್ದಾಗಿದ್ದವು. ಪುಟವಿಟ್ಟ ಚಿನ್ನದಂತೆ ಥಳಥಳಿಸುತ್ತಿದ್ದ ರೇಷ್ಮೆಯ ಪೀತಾಂಬರವನ್ನುಟ್ಟಿದ್ದ ಅವನ ಸುಂದರ ಶರೀರದ ರೋಮರೋಮಗಳಲ್ಲಿ ಪ್ರಸನ್ನತೆಯು ಉಕ್ಕುತ್ತಿತ್ತು. ಸುಂದರ ಹುಬ್ಬುಗಳು ಧನುಸ್ಸಿನಂತೆ ಬಾಗಿದ್ದವು. ಶಿರವು ಮಹಾಮಣಿಯ ಕಿರೀಟದಿಂದ ಮತ್ತು ಭುಜಗಳು ಕೇಯೂರಗಳಿಂದ ಭೂಷಿತಗೊಂಡಿದ್ದವು. ಓಲಾಡುತ್ತಿದ್ದ ಕರ್ಣಾಭರಣದಿಂದ ಬೆಳಗುತ್ತಿದ್ದ ಕೆನ್ನೆಗಳಿಂದ ಅವನ ಮುಖಾಂಬುಜವೂ ಇನ್ನೂ ಶೋಭಿಸುತ್ತಿತ್ತು. ಒಡ್ಯಾಣ, ಕೈಕಡಗ, ಕಾಲಂದುಗೆ, ಕೊರಳಲ್ಲಿ ಮುತ್ತಿನ ಹಾರಗಳಿಂದ ಶೋಭಿತನಾಗಿದ್ದನು. ವಕ್ಷಃಸ್ಥಳದಲ್ಲಿ ಲಕ್ಷ್ಮೀ ಮತ್ತು ಕೊರಳಲ್ಲಿ ಕೌಸ್ತುಭಮಣಿ ವನಮಾಲೆಗಳು ಶೋಭಿಸುತ್ತಿದ್ದವು. ಸುದರ್ಶನಾದಿ ಆಯುಧಗಳು ಮೂರ್ತಿಮತ್ತಾಗಿ ಉಪಾಸನೆಗೈಯುತ್ತಿದ್ದವು. ಎಲ್ಲ ದೇವತೆಗಳು ಸಾಷ್ಟಾಂಗ ನಮಸ್ಕರಿಸಲು ದೇವತೆಗಳೊಡನೆ ಮತ್ತು ಶರ್ವನೊಡನೆ ದೇವಪ್ರವರ ಬಹ್ಮನು ಪರಮಪುರುಷನನ್ನು ಸ್ತುತಿಸಿದನು.
ಶ್ರೀಬ್ರಹ್ಮೋವಾಚ । ಅಜಾತಜನ್ಮಸ್ಥಿತಿಸಂಯಮಾಯಾ ಗುಣಾಯ ನಿರ್ವಾಣಸುಖಾರ್ಣವಾಯ । ಅಣೋರಣಿಮ್ನೇಽಪರಿಗಣ್ಯಧಾಮ್ನೇ ಮಹಾನುಭಾವಾಯ ನಮೋ ನಮಸ್ತೇ ।। 8 ।। ರೂಪಂ ತವೈತತ್ಪುರುಷರ್ಷಭೇಜ್ಯಂ ಶ್ರೇಯೋಽರ್ಥಿಭಿರ್ವೈದಿಕತಾಂತ್ರಿಕೇಣ । ಯೋಗೇನ ಧಾತಃ ಸಹ ನಸ್ತ್ರಿಲೋಕಾನ್ಪಶ್ಯಾಮ್ಯಮುಷ್ಮಿನ್ನು ಹ ವಿಶ್ವಮೂರ್ತೌ ।। 9 ।।
ಶ್ರೀಬ್ರಹ್ಮನು ಹೇಳಿದನು: “ಜನ್ಮ-ಸ್ಥಿತಿ-ಪ್ರಳಯಗಳೊಂದಿಗೆ ಯಾವುದೇ ಸಂಬಂಧವಿರಿಸಿಕೊಂಡಿರದ, ಪ್ರಾಕೃತ ಗುಣಗಳಿಂದ ರಹಿತನಾಗಿರುವ, ಮೋಕ್ಷಸ್ವರೂಪ ಪರಮಾನಂದ ಮಹಾಸಮುದ್ರನಾಗಿರುವ, ಸೂಕ್ಷ್ಮಕ್ಕೂ ಸೂಕ್ಷ್ಮನಾಗಿರುವ, ಅನಂತರೂಪೀ ಮಹಾನುಭಾವನಿಗೆ ನಮೋ ನಮಸ್ತೇ. ಪುರುಷರ್ಷಭ! ಶ್ರೇಯೋರ್ಥಿಗಳು ವೈದಿಕತಂತ್ರಗಳಿಂದ ನಿನ್ನ ಇದೇ ರೂಪವನ್ನು ಉಪಾಸಿಸುತ್ತಾರೆ. ವಿಶ್ವಮೂರ್ತೇ! ನಿನ್ನಲ್ಲಿ ನಾನು ಸಮಸ್ತ ದೇವತೆಗಳೊಡನೆ ಮೂರೂ ಲೋಕಗಳನ್ನು ಕಾಣುತ್ತಿದ್ದೇನೆ.
ತ್ವಯ್ಯಗ್ರ ಆಸೀತ್ತ್ವಯಿ ಮಧ್ಯ ಆಸೀತ್ತ್ವ ಯ್ಯಂತ ಆಸೀದಿದಮಾತ್ಮತಂತ್ರೇ । ತ್ವಮಾದಿರಂತೋ ಜಗತೋಽಸ್ಯ ಮಧ್ಯಂ ಘಟಸ್ಯ ಮೃತ್ಸ್ನೇವ ಪರಃ ಪರಸ್ಮಾತ್ ।। 10 ।। ತ್ವಂ ಮಾಯಯಾತ್ಮಾಶ್ರಯಯಾ ಸ್ವಯೇದಂ ನಿರ್ಮಾಯ ವಿಶ್ವಂ ತದನುಪ್ರವಿಷ್ಟಃ । ಪಶ್ಯಂತಿ ಯುಕ್ತಾ ಮನಸಾ ಮನೀಷಿಣೋ ಗುಣವ್ಯವಾಯೇಽಪ್ಯಗುಣಂ ವಿಪಶ್ಚಿತಃ ।। 11 ।।
ಈ ವಿಶ್ವವು ಮೊದಲು ನಿನ್ನಲ್ಲೇ ಇತ್ತು. ಮಧ್ಯದಲ್ಲಿಯೂ ನಿನ್ನಲ್ಲಿದೆ. ಅಂತ್ಯದಲ್ಲಿಯೂ ನಿನ್ನಲ್ಲಿಯೇ ಇರುತ್ತದೆ. ಕಾರ್ಯ-ಕಾರಣಗಳಿಂದ ಅತೀತನಾದ ನೀನು ಪರಮ ಸ್ವತಂತ್ರನು. ಘಟದಲ್ಲಿ ಮಣ್ಣು ಹೇಗೋ ಹಾಗೆ ನೀನು ಈ ಜಗತ್ತಿನ ಆದಿ, ಅಂತ್ಯ ಮತ್ತು ಮಧ್ಯ. ನಿನ್ನದೇ ಮಾಯೆಯಿಂದ ಈ ಪ್ರಪಂಚವನ್ನು ರಚಿಸಿ ಇದರಲ್ಲಿ ಪ್ರವೇಶಿಸಿ ಅಂತರ್ಯಾಮಿಯಾಗಿದ್ದೀಯೆ. ಆದ್ದರಿಂದ ಮನೀಷಿಣರು ಮನಸ್ಸನ್ನು ಏಕಾಗ್ರಗೊಳಿಸಿ ವಿಷಯಗಳ ಮಧ್ಯದಲ್ಲಿಯೂ ನಿನ್ನ ನಿರ್ಗುಣ ಸ್ವರೂಪವನ್ನೇ ಸಾಕ್ಷಾತ್ಕರಿಸಿಕೊಳ್ಳುತ್ತಾರೆ.
ಯಥಾಗ್ನಿಮೇಧಸ್ಯಮೃತಂ ಚ ಗೋಷು ಭುವ್ಯನ್ನಮಂಬೂದ್ಯಮನೇ ಚ ವೃತ್ತಿಮ್ । ಯೋಗೈರ್ಮನುಷ್ಯಾ ಅಧಿಯಂತಿ ಹಿ ತ್ವಾಂ ಗುಣೇಷು ಬುದ್ಧ್ಯಾ ಕವಯೋ ವದಂತಿ ।। 12 ।। ತಂ ತ್ವಾಂ ವಯಂ ನಾಥ ಸಮುಜ್ಜಿಹಾನಂ ಸರೋಜನಾಭಾತಿಚಿರೇಪ್ಸಿತಾರ್ಥಮ್ । ದೃಷ್ಟ್ವಾ ಗತಾ ನಿರ್ವೃತಮದ್ಯ ಸರ್ವೇ ಗಜಾ ದವಾರ್ತಾ ಇವ ಗಾಂಗಮಂಭಃ ।। 13 ।।
ಮನುಷ್ಯನು ಕಟ್ಟಿಗೆಯಿಂದ ಅಗ್ನಿ, ಗೋವುಗಳಿಂದ ಹಾಲು, ಭೂಮಿಯಿಂದ ನೀರು ಮತ್ತು ವೃತ್ತಿಯಿಂದ ಜೀವನಿರ್ವಹಣೆಯನ್ನು ಹೇಗೆ ಪಡೆದುಕೊಳ್ಳು-ತ್ತಾನೋ ಹಾಗೆ ಬುದ್ಧಿವಂತರು ಯೋಗಗಳಿಂದ ನಿನ್ನನ್ನು ಪಡೆದುಕೊಳ್ಳು-ತ್ತಾರೆ ಮತ್ತು ಬುದ್ಧಿಯಿಂದ ನಿನ್ನ ಗುಣಗಳನ್ನು ವರ್ಣಿಸುತ್ತಾರೆ. ಸರೋಜನಾಭ! ಕಾಡ್ಗಿಚ್ಚಿನಿಂದ ಆರ್ತಗೊಂಡ ಆನೆಯು ಗಂಗೆಯ ನೀರಿನ-ಲ್ಲಿ ಮುಳುಗಿ ಸುಖ-ಸಂತೋಷಪಡುವಂತೆ ನಿನ್ನ ಆವಿರ್ಭಾವದಿಂದ ನಾವು ಪರಮ ಸುಖ-ಶಾಂತಿಯನ್ನು ಹೊಂದಿದ್ದೇವೆ. ನಾಥ! ಬಹುಕಾಲದಿಂದ ನಾವು ನಿನ್ನ ದರ್ಶನಕ್ಕೆ ಕಾತರರಾಗಿದ್ದೇವೆ.
ಸ ತ್ವಂ ವಿಧತ್ಸ್ವಾಖಿಲಲೋಕಪಾಲಾ ವಯಂ ಯದರ್ಥಾಸ್ತವ ಪಾದಮೂಲಮ್ । ಸಮಾಗತಾಸ್ತೇ ಬಹಿರಂತರಾತ್ಮನ್ಕಿಂ ವಾನ್ಯವಿಜ್ಞಾಪ್ಯಮಶೇಷಸಾಕ್ಷಿಣಃ ।। 14 ।। ಅಹಂ ಗಿರಿತ್ರಶ್ಚ ಸುರಾದಯೋ ಯೇ ದಕ್ಷಾದಯೋಽಗ್ನೇರಿವ ಕೇತವಸ್ತೇ । ಕಿಂ ವಾ ವಿದಾಮೇಶ ಪೃಥಗ್ವಿಭಾತಾ ವಿಧತ್ಸ್ವ ಶಂ ನೋ ದ್ವಿಜದೇವಮಂತ್ರಮ್ ।। 15 ।।
ಬಹಿರಂತರಾತ್ಮನೇ! ನಾವೆಲ್ಲ ಲೋಕಪಾಲರೂ ಯಾವ ಉದ್ದೇಶದಿಂದ ನಿನ್ನ ಪಾದಮೂಲಕ್ಕೆ ಬಂದಿದ್ದೇವೆ ಎನ್ನುವುದು ನಿನಗೆ ತಿಳಿದಿದೆ. ಎಲ್ಲವ-ಕ್ಕೂ ಸಾಕ್ಷಿಯಾಗಿರುವ ನಿನಗೆ ನಾವು ಏನು ವಿಜ್ಞಾಪನೆ ಮಾಡಿಕೊಳ್ಳಬೇಕು? ನಾನು, ಶಂಕರ, ಬೇರೆ ದೇವತೆಗಳೂ, ಋಷಿಗಳೂ, ದಕ್ಷಾದಿಗಳು ಎಲ್ಲರೂ ಬೆಂಕಿಯಿಂದ ಸಿಡಿದ ಕಿಡಿಗಳಂತೆ ನಿನ್ನ ಅಂಶರೇ ಆಗಿದ್ದೇವೆ. ಹೀಗಿರುವಾಗ ನಾವೇನು ಬಲ್ಲೆವು? ದ್ವಿಜರು ಮತ್ತು ದೇವತೆಗಳ ಕಲ್ಯಾಣಕ್ಕೆ ಏನು ಮಾಡಬೇಕು ಅದನ್ನು ನೀನೇ ಹೇಳು ಮತ್ತು ಸ್ವಯಂ ಹಾಗೆಯೇ ಮಾಡು.””
ಶ್ರೀಶುಕ ಉವಾಚ । ಏವಂ ವಿರಿಂಚಾದಿಭಿರೀಡಿತಸ್ತದ್ವಿಜ್ಞಾಯ ತೇಷಾಂ ಹೃದಯಂ ಯಥೈವ । ಜಗಾದ ಜೀಮೂತಗಭೀರಯಾ ಗಿರಾ ಬದ್ಧಾಂಜಲೀನ್ಸಂವೃತಸರ್ವಕಾರಕಾನ್ ।। 16 ।। ಏಕ ಏವೇಶ್ವರಸ್ತಸ್ಮಿನ್ಸುರಕಾರ್ಯೇ ಸುರೇಶ್ವರಃ । ವಿಹರ್ತುಕಾಮಸ್ತಾನಾಹ ಸಮುದ್ರೋನ್ಮಥನಾದಿಭಿಃ ।। 17 ।।
ಶ್ರೀಶುಕನು ಹೇಳಿದನು: “ಹೀಗೆ ವಿರಿಂಚಾದಿಗಳು ಸ್ತುತಿಸಲು ಅವರ ಹೃದಯದಲ್ಲಿರುವುದನ್ನು ತಿಳಿದ ದೇವನು ಜಿತೇಂದ್ರಿಯರಾಗಿ ಬದ್ಧಾಂಜಲಿಗಳಾಗಿದ್ದ ಎಲ್ಲರಿಗೂ ಮೇಘಗಂಭೀರ ಧ್ವನಿಯಲ್ಲಿ ಹೇಳಿದನು. ಏಕಮಾತ್ರ ಈಶ್ವರನಾದ ಸುರೇಶ್ವರನು ಸುರಕಾರ್ಯದಲ್ಲಿ ಸಮುದ್ರಮಥ-ನವೇ ಮೊದಲಾದವುಗಳ ಮೂಲಕ ವಿಹರಿಸಲು ಇಚ್ಛಿಸಿ ಹೇಳಿದನು.
ಶ್ರೀಭಗವಾನುವಾಚ । ಹಂತ ಬ್ರಹ್ಮನ್ನಹೋ ಶಂಭೋ ಹೇ ದೇವಾ ಮಮ ಭಾಷಿತಮ್ । ಶೃಣುತಾವಹಿತಾಃ ಸರ್ವೇ ಶ್ರೇಯೋ ವಃ ಸ್ಯಾದ್ಯಥಾ ಸುರಾಃ ।। 18 ।। ಯಾತ ದಾನವದೈತೇಯೈಸ್ತಾವತ್ಸಂಧಿರ್ವಿಧೀಯತಾಮ್ । ಕಾಲೇನಾನುಗೃಹೀತೈಸ್ತೈರ್ಯಾವದ್ವೋ ಭವ ಆತ್ಮನಃ ।। 19 ।। ಅರಯೋಽಪಿ ಹಿ ಸಂಧೇಯಾಃ ಸತಿ ಕಾರ್ಯಾರ್ಥಗೌರವೇ । ಅಹಿಮೂಷಿಕವದ್ದೇವಾ ಹ್ಯರ್ಥಸ್ಯ ಪದವೀಂ ಗತೈಃ ।। 20 ।।
ಶ್ರೀಭಗವಂತನು ಹೇಳಿದನು: “ಅಹೋ ಬ್ರಹ್ಮನ್! ಹೇ ಶಂಭೋ! ದೇವ-ತೆಗಳೇ! ಸುರರೆಲ್ಲರಿಗೂ ಶ್ರೇಯಸ್ಸಾಗುವ ಉಪಾಯವನ್ನು ಏಕಾಗ್ರಚಿತ್ತ-ರಾಗಿ ಕೇಳಿ. ಅವರಿಗೆ ಇದು ಅನುಗೃಹೀತ ಕಾಲವಾಗಿದೆ. ಆದ್ದರಿಂದ ನಿಮ್ಮ ಉನ್ನತಿಯ ಕಾಲವು ಬರುವವರೆಗೆ ದಾನವ-ದೈತ್ಯರೊಂದಿಗೆ ಸಂಧಿಮಾಡಿಕೊಳ್ಳಿ. ದೇವತೆಗಳೇ! ಘನಕಾರ್ಯಸಿದ್ಧಿಗಾಗಿ ಅರಿಗಳೊಂದಿಗೂ ಸಂಧಿಮಾಡಿಕೊ-ಳ್ಳಬೇಕು. ಉದ್ದೇಶ ಸಾಧಿಸಿದ ಬಳಿಕ ಹಾವು-ಇಲಿಯಂತೆ[1] ವರ್ತಿಸಬೇಕು.
ಅಮೃತೋತ್ಪಾದನೇ ಯತ್ನಃ ಕ್ರಿಯತಾಮವಿಲಂಬಿತಮ್ । ಯಸ್ಯ ಪೀತಸ್ಯ ವೈ ಜಂತುರ್ಮೃತ್ಯುಗ್ರಸ್ತೋಽಮರೋ ಭವೇತ್ ।। 21 ।। ಕ್ಷಿಪ್ತ್ವಾ ಕ್ಷೀರೋದಧೌ ಸರ್ವಾ ವೀರುತ್ತೃಣಲತೌಷಧೀಃ । ಮಂಥಾನಂ ಮಂದರಂ ಕೃತ್ವಾ ನೇತ್ರಂ ಕೃತ್ವಾ ತು ವಾಸುಕಿಮ್ ।। 22 ।। ಸಹಾಯೇನ ಮಯಾ ದೇವಾ ನಿರ್ಮಂಥಧ್ವಮತಂದ್ರಿತಾಃ । ಕ್ಲೇಶಭಾಜೋ ಭವಿಷ್ಯಂತಿ ದೈತ್ಯಾ ಯೂಯಂ ಫಲಗ್ರಹಾಃ ।। 23 ।। ಯೂಯಂ ತದನುಮೋದಧ್ವಂ ಯದಿಚ್ಛಂತ್ಯಸುರಾಃ ಸುರಾಃ । ನ ಸಂರಂಭೇಣ ಸಿಧ್ಯಂತಿ ಸರ್ವಾರ್ಥಾಃ ಸಾಂತ್ವಯಾ ಯಥಾ ।। 24 ।। ನ ಭೇತವ್ಯಂ ಕಾಲಕೂಟಾದ್ವಿಷಾಜ್ಜಲಧಿಸಂಭವಾತ್ । ಲೋಭಃ ಕಾರ್ಯೋ ನ ವೋ ಜಾತು ರೋಷಃ ಕಾಮಸ್ತು ವಸ್ತುಷು ।। 25 ।।
ತಡಮಾಡದೇ ಅಮೃತದ ಉತ್ಪತ್ತಿಗೆ ಪ್ರಯತ್ನಿಸಿ. ಅದನ್ನು ಕುಡಿದ ಜಂತುವು ಮೃತ್ಯುಗ್ರಸ್ತನಾಗಿದ್ದರೂ ಅಮರವಾಗುತ್ತದೆ. ದೇವತೆಗಳೇ! ಕ್ಷೀರಸಾಗರದಲ್ಲಿ ಸರ್ವ ಬೇರು-ತೃಣ-ಲತೆ-ಓಷಧಿಗಳನ್ನು ಹಾಕಿ, ಮಂದರವನ್ನು ಕಡೆಗೋಲನ್ನಾಗಿ ಮಾಡಿಕೊಂಡು, ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು, ನನ್ನ ಸಹಾಯದಿಂದ ದಾನವರೊಡಗೂಡಿ ಕಡೆಯಿರಿ. ಆಲಸ್ಯಮಾಡಬೇಡಿ. ದೈತ್ಯರಿಗೆ ಕ್ಲೇಶಮಾತ್ರ ದೊರೆಯುತ್ತದೆ ಮತ್ತು ನಿಮಗೆ ಉತ್ತಮ ಫಲವು ದೊರೆಯುತ್ತದೆ. ಸುರರೇ! ಅಸುರರು ಬಯಸಿದುದೆಲ್ಲವನ್ನೂ ಸ್ವೀಕರಿಸಿರಿ. ಶಾಂತಿಯಿಂದ ಎಲ್ಲ ಕೆಲಸಗಳೂ ಕೈಗೂಡುತ್ತವೆ. ಕ್ರೋಧದಿಂದ ಏನೂ ಆಗುವುದಿಲ್ಲ. ಜಲಧಿಯಿಂದ ಹುಟ್ಟುವ ಕಾಲಕೂಟಕ್ಕೆ ಭಯಪಡಬೇಡಿ. ಅದರಿಂದ ಹುಟ್ಟುವ ಯಾವುದಕ್ಕೂ ಆಸೆಪಡಬೇಡಿ. ಯಾವುದೇ ವಸ್ತುವಿನ ಕಾಮನೆಯಿಲ್ಲದಿರಲಿ. ಕಾಮವು ಪೂರ್ಣವಾಗದಿದ್ದರೆ ರೋಷವೂ ಇಲ್ಲದಿರಲಿ.””
ಶ್ರೀಶುಕ ಉವಾಚ । ಇತಿ ದೇವಾನ್ಸಮಾದಿಶ್ಯ ಭಗವಾನ್ಪುರುಷೋತ್ತಮಃ । ತೇಷಾಮಂತರ್ದಧೇ ರಾಜನ್ಸ್ವಚ್ಛಂದಗತಿರೀಶ್ವರಃ ।। 26 ।। ಅಥ ತಸ್ಮೈ ಭಗವತೇ ನಮಸ್ಕೃತ್ಯ ಪಿತಾಮಹಃ । ಭವಶ್ಚ ಜಗ್ಮತುಃ ಸ್ವಂ ಸ್ವಂ ಧಾಮೋಪೇಯುರ್ಬಲಿಂ ಸುರಾಃ ।। 27 ।। ದೃಷ್ಟ್ವಾರೀನಪ್ಯಸಂಯತ್ತಾನ್ಜಾತಕ್ಷೋಭಾನ್ಸ್ವನಾಯಕಾನ್ । ನ್ಯಷೇಧದ್ದೈತ್ಯರಾಟ್ ಶ್ಲೋಕ್ಯಃ ಸಂಧಿವಿಗ್ರಹಕಾಲವಿತ್ ।। 28 ।।
ಶ್ರೀಶುಕನು ಹೇಳಿದನು: “ರಾಜನ್! ದೇವತೆಗಳಿಗೆ ಹೀಗೆ ಆದೇಶವನ್ನಿತ್ತು ಭಗವಾನ್ ಪುರುಷೋತ್ತಮ ಸ್ವಚ್ಛಂದಗತಿ ಈಶ್ವರನು ಅಂತರ್ಧಾನನಾ-ದನು. ಆ ಭಗವಂತನಿಗೆ ನಮಸ್ಕರಿಸಿ ಪಿತಾಮಹ ಬ್ರಹ್ಮ ಮತ್ತು ಭವರು ತಮ್ಮ ತಮ್ಮ ಧಾಮಗಳಿಗೆ ತೆರಳಿದರು. ಸುರರು ಬಲಿಯ ಬಳಿ ಹೋದರು. ಶಸ್ತ್ರಾಸ್ತ್ರಗಳಿಲ್ಲದೇ ತಮ್ಮ ಬಳಿ ಶತ್ರುಗಳು ಬಂದಿದ್ದನ್ನು ನೋಡಿ ದೈತ್ಯನಾಯಕರಲ್ಲಿ ತಳಮಳವುಂಟಾಯಿತು. ಆದರೂ ಸಂಧಿ-ಯುದ್ಧಗಳ ಕಾಲವನ್ನು ತಿಳಿದಿದ್ದ ದೈತ್ಯರಾಜ ಬಲಿಯು ಅವರನ್ನು ಬಂಧಿಸಲಿಲ್ಲ.
ತೇ ವೈರೋಚನಿಮಾಸೀನಂ ಗುಪ್ತಂ ಚಾಸುರಯೂಥಪೈಃ । ಶ್ರಿಯಾ ಪರಮಯಾ ಜುಷ್ಟಂ ಜಿತಾಶೇಷಮುಪಾಗಮನ್ ।। 29 ।। ಮಹೇಂದ್ರಃ ಶ್ಲಕ್ಷ್ಣಯಾ ವಾಚಾ ಸಾಂತ್ವಯಿತ್ವಾ ಮಹಾಮತಿಃ । ಅಭ್ಯಭಾಷತ ತತ್ಸರ್ವಂ ಶಿಕ್ಷಿತಂ ಪುರುಷೋತ್ತಮಾತ್ ।। 30 ।। ತತ್ತ್ವರೋಚತ ದೈತ್ಯಸ್ಯ ತತ್ರಾನ್ಯೇ ಯೇಽಸುರಾಧಿಪಾಃ । ಶಂಬರೋಽರಿಷ್ಟನೇಮಿಶ್ಚ ಯೇ ಚ ತ್ರಿಪುರವಾಸಿನಃ ।। 31 ।। ತತೋ ದೇವಾಸುರಾಃ ಕೃತ್ವಾ ಸಂವಿದಂ ಕೃತಸೌಹೃದಾಃ । ಉದ್ಯಮಂ ಪರಮಂ ಚಕ್ರುರಮೃತಾರ್ಥೇ ಪರಂತಪ ।। 32 ।। ತತಸ್ತೇ ಮಂದರಗಿರಿಮೋಜಸೋತ್ಪಾಟ್ಯ ದುರ್ಮದಾಃ । ನದಂತ ಉದಧಿಂ ನಿನ್ಯುಃ ಶಕ್ತಾಃ ಪರಿಘಬಾಹವಃ ।। 33 ।।
ಅಸುರಸೇನೆಗಳಿಂದ ರಕ್ಷಿತನಾಗಿ ಪರಮವೈಭವದಿಂದ ಕುಳಿತಿದ್ದ ವಿರೋಚನ ಪುತ್ರ ಬಲಿಯನ್ನು ಅವರು ಸಂಧಿಸಿದರು. ಮಹಾಮತಿ ಮಹೇಂದ್ರನು ಪುರುಷೋತ್ತಮನು ಹೇಳಿಕೊಟ್ಟಿದ್ದಂತೆ ಸಾಂತ್ವನಪೂರ್ವಕ ಮಧುರ ಮಾತುಗಳಿಂದ ಎಲ್ಲವನ್ನೂ ಹೇಳಿದನು. ಅವನ ಮಾತು ಅಲ್ಲಿದ್ದ ಶಂಬರ, ಅರಿಷ್ಟನೇಮಿ, ತ್ರಿಪುರವಾಸೀ ದೈತ್ಯರಿಗೂ ಅನ್ಯ ಅಸುರಾಧಿಪರಿಗೂ ಇಷ್ಟವಾಯಿತು. ಪರಂತಪ! ನಂತರ ದೇವಾಸುರರು ಸೌಹಾರ್ದತೆ-ಸಂಧಿಗಳನ್ನು ಮಾಡಿಕೊಂಡು ಅಮೃತಕ್ಕಾಗಿ ಪರಮ ಪ್ರಯತ್ನಕ್ಕೆ ತೊಡಗಿದರು. ಪರಿಘದಂಥಹ ಮಹಾಶಕ್ತಿವಂತ ಬಾಹುಗಳಿದ್ದ ಆ ದುರ್ಮದರು ಮಂದರಗಿರಿಯನ್ನು ಬಲಪರಾಕ್ರಮದಿಂದ ಕಿತ್ತು ಎತ್ತಿಕೊಂಡು ಗರ್ಜಿಸುತ್ತಾ ಕ್ಷೀರಸಾಗರದೆಡೆಗೆ ಹೋದರು.
ದೂರಭಾರೋದ್ವಹಶ್ರಾಂತಾಃ ಶಕ್ರವೈರೋಚನಾದಯಃ । ಅಪಾರಯಂತಸ್ತಂ ವೋಢುಂ ವಿವಶಾ ವಿಜಹುಃ ಪಥಿ ।। 34 ।। ನಿಪತನ್ಸ ಗಿರಿಸ್ತತ್ರ ಬಹೂನಮರದಾನವಾನ್ । ಚೂರ್ಣಯಾಮಾಸ ಮಹತಾ ಭಾರೇಣ ಕನಕಾಚಲಃ ।। 35 ।। ತಾಂಸ್ತಥಾ ಭಗ್ನಮನಸೋ ಭಗ್ನಬಾಹೂರುಕಂಧರಾನ್ । ವಿಜ್ಞಾಯ ಭಗವಾಂಸ್ತತ್ರ ಬಭೂವ ಗರುಡಧ್ವಜಃ ।। 36 ।।
ದೂರ-ಭಾರಗಳಿಂದ ಬಳಲಿದ ಶಕ್ರ-ವೈರೋಚನಾದಿಗಳು ಎತ್ತಿಕೊಂಡು ಮುಂದೆ ಸಾಗಲಾರದೇ ಮಾರ್ಗದಲ್ಲಿಯೇ ಅದನ್ನು ಇರಿಸಿದರು. ಆ ಗಿರಿಯು ಕೆಳಕ್ಕೆ ಬೀಳುವಾಗ ಕನಕಾಚಲದ ಮಹಾಭಾರದಿಂದ ಅನೇಕ ಅಮರ-ದಾನವರು ನುಚ್ಚುನೂರಾದರು. ಬಾಹು-ಸೊಂಟ-ಭುಜಗಳು ಮುರಿದಿದ್ದ ಅವರ ಉತ್ಸಾಹಭಂಗವನ್ನು ತಿಳಿದ ಗರುಡಧ್ವಜ ಭಗವಂತನು ಅಲ್ಲಿ ಕಾಣಿಸಿಕೊಂಡನು.
ಗಿರಿಪಾತವಿನಿಷ್ಪಿಷ್ಟಾನ್ವಿಲೋಕ್ಯಾಮರದಾನವಾನ್ । ಈಕ್ಷಯಾ ಜೀವಯಾಮಾಸ ನಿರ್ಜರಾನ್ನಿರ್ವ್ರಣಾನ್ಯಥಾ ।। 37 ।। ಗಿರಿಂ ಚಾರೋಪ್ಯ ಗರುಡೇ ಹಸ್ತೇನೈಕೇನ ಲೀಲಯಾ । ಆರುಹ್ಯ ಪ್ರಯಯಾವಬ್ಧಿಂ ಸುರಾಸುರಗಣೈರ್ವೃತಃ ।। 38 ।। ಅವರೋಪ್ಯ ಗಿರಿಂ ಸ್ಕಂಧಾತ್ಸುಪರ್ಣಃ ಪತತಾಂ ವರಃ । ಯಯೌ ಜಲಾಂತ ಉತ್ಸೃಜ್ಯ ಹರಿಣಾ ಸ ವಿಸರ್ಜಿತಃ ।। 39 ।।
ಗಿರಿಪಾತದಿಂದ ಮುದ್ದೆಯಾಗಿದ್ದ ಆ ಅಮರ-ದಾನವರನ್ನು ನೋಡಿ ಅವನು ದೃಷ್ಟಿಮಾತ್ರದಿಂದಲೇ ಅವರ ಗಾಯಗಳನ್ನು ವಾಸಿಪಡಿಸಿ ಸಂಕಟರಹಿತರನ್ನಾಗಿ ಮಾಡಿದನು. ಒಂದೇ ಕೈಯಿಂದ ಲೀಲಾಜಾಲವಾಗಿ ಆ ಗಿರಿಯನ್ನು ಗರುಡನ ಮೇಲೇರಿ-ಸಿಕೊಂಡು ಸುರಾಸುರಗಣಗಳಿಂದ ಆವೃತನಾಗಿ ಕ್ಷೀರಸಾಗರ ತಟಕ್ಕೆ ಬಂದನು. ಪಕ್ಷಿಶ್ರೇಷ್ಠ ಸುಪರ್ಣನು ತನ್ನ ಹೆಗಲಮೇಲಿಂದ ಗಿರಿಯನ್ನು ಸಮುದ್ರದ ಮಧ್ಯದಲ್ಲಿ ಕೆಳಗಿರಿಸಿ ಹರಿಯಿಂದ ಬೀಳ್ಕೊಂಡು ಹೊರಟುಹೋದನು.”
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮಸ್ಕಂಧೇ ಅಮೃತಮಥನೇ ಮಂದರಾಚಲಾನಯನಂ ನಾಮ ಷಷ್ಠೋಽಧ್ಯಾಯಃ ।।
[1] ಅಹಿಮೂಷಿಕನ್ಯಾಯ: ಹಾವಾಡಿಗನ ಬುಟ್ಟಿಯಲ್ಲಿ ಅಕಸ್ಮಾತ್ತಾಗಿ ಒಂದು ಇಲಿಯು ಬಂದು ಸೇರಿಕೊಂಡಿತು. ಇಲಿಯು ಭಯಗೊಂಡಿದ್ದರೂ ಹಾವು ಅದಕ್ಕೆ ಪ್ರೇಮದಿಂದ – “ನೀನು ಈ ಬುಟ್ಟಿಯನ್ನು ಕಡಿದು ತೂತು ಮಾಡು. ಇದರಿಂದ ನಾವಿಬ್ಬರೂ ಇಲ್ಲಿಂದ ಹೊರಗೆ ಹೋಗಬಹುದು” ಎಂದಿತು. ಮೊದಲು ಇಲಿಗೆ ಹಾವಿನ ಮೇಲೆ ವಿಶ್ವಾಸ ಮೂಡಲಿಲ್ಲ. ಆದರೂ ಕೊನೆಯಲ್ಲಿ ಅದು ಬುಟ್ಟಿಯನ್ನು ಕೊರೆದು ರಂಧ್ರಮಾಡಿತು. ಹೀಗೆ ತನ್ನ ಕೆಲಸ ಸಾಧಿಸಿದಾಗ ಹಾವು ಇಲಿಯನ್ನು ನುಂಗಿಹಾಕಿ ಬುಟ್ಟಿಯಿಂದ ಹೊರಗೆ ಹೊರಟುಹೋಯಿತು.