ಶ್ರೀಮದ್ವಾಲ್ಮೀಕೀರಾಮಾಯಣ: ಬಾಲಕಾಂಡ, ಸರ್ಗ 45

 

[ಶ್ಲೋಕ 15-45, ವಿಶ್ವಾಮಿತ್ರನು ರಾಮನಿಗೆ ಹೇಳಿದುದು]

ಪೂರ್ವಂ ಕೃತಯುಗೇ ರಾಮ ದಿತೇಃ ಪುತ್ರಾ ಮಹಾಬಲಾಃ । ಅದಿತೇಶ್ಚ ಮಹಾಭಾಗಾ ವೀರ್ಯವಂತಃ ಸುಧಾರ್ಮಿಕಾಃ ।। 15 ।। ತತಸ್ತೇಷಾಂ ನರವ್ಯಾಘ್ರ ಬುದ್ಧಿರಾಸೀನ್ಮಹಾತ್ಮನಾಮ್ । ಅಮರಾ ಅಜರಾಶ್ಚೈವ ಕಥಂ ಸ್ಯಾಮ ನಿರಾಮಯಾಃ ।। 16 ।। ತೇಷಾಂ ಚಿಂತಯತಾಂ ರಾಮ ಬುದ್ಧಿರಾಸೀನ್ಮಹಾತ್ಮನಾಮ್ । ಕ್ಷೀರೋದಮಥನಂ ಕೃತ್ವಾ ರಸಂ ಪ್ರಾಪ್ಸ್ಯಾಮ ತತ್ರ ವೈ ।। 17 ।। ತತೋ ನಿಶ್ಚಿತ್ಯ ಮಥನಂ ಯೋಕ್ತ್ರಂ ಕೃತ್ವಾ ಚ ವಾಸುಕಿಮ್ । ಮಂಥಾನಂ ಮಂದರಂ ಕೃತ್ವಾ ಮಮಂಥುರಮಿತೌಜಸಃ ।। 18 ।।

ಇದು ಕೃತಯುಗದ ವಿಷಯ. ದಿತಿ ಮತ್ತು ಅದಿತಿಯರಿಗೆ ಬಹುಮಂದಿ ಬಲಶಾಲೀ ಪುತ್ರರಿದ್ದರು. ಅವರಲ್ಲಿ ಅದಿತಿಯ ಮಕ್ಕಳು ಧಾರ್ಮಿಕರು. ಹೀಗಿರುವಾಗ ಅವರ ಮನಸ್ಸಿನಲ್ಲಿ “ನಾವು ಮರಣ, ಮುಪ್ಪು, ರೋಗ – ಈ ಮೂರನ್ನು ಜಯಿಸಬೇಕು. ಇದು ಹೇಗೆ ಸಾಧ್ಯ?” ಎಂಬ ಆಲೋಚನೆಯು ಹುಟ್ಟಿತು. ಆ ಧೀರರು “ಕ್ಷೀರಸಮುದ್ರವನ್ನು ಕಡೆದು ರಸಾಯನವನ್ನು ತೆಗೆಯಬೇಕು” ಎಂದು ನಿಶ್ಚಯಿಸಿದರು. ವಾಸುಕಿಯನ್ನು ಹಗ್ಗವಾಗಿ, ಮಂದರವನ್ನು ಕಡೆಗೋಲಾಗಿ ಮಾಡಿಕೊಂಡು ಆ ವೀರರು ಕ್ಷೀರಸಮುದ್ರವನ್ನು ಕಡೆಯಲಾರಂಭಿಸಿದರು.

ಅಥ ವರ್ಷಸಹಸ್ರೇಣ ಯೋಕ್ತ್ರಸರ್ಪಶಿರಾಂಸಿ ಚ । ವಮಂತ್ಯತಿವಿಷಂ ತತ್ರ ದದಂಶುರ್ದಶನೈಃ ಶಿಲಾಃ ।। 19 ।। ಉತ್ಪಪಾತಾಗ್ನಿಸಂಕಾಶಂ ಹಾಲಾಹಲಮಹಾವಿಷಮ್ । ತೇನ ದಗ್ಧಂ ಜಗತ್ ಸರ್ವಂ ಸದೇವಾಸುರಮಾನುಷಮ್ ।। 20 ।। ಅಥ ದೇವಾ ಮಹಾದೇವಂ ಶಂಕರಂ ಶರಣಾರ್ಥಿನಃ । ಜಗ್ಮುಃ ಪಶುಪತಿಂ ರುದ್ರ ತ್ರಾಹಿ ತ್ರಾಹೀತಿ ತುಷ್ಟುವುಃ ।। 21 ।।

ಹೀಗೆ ಸಾವಿರ ವರ್ಷ ಕಳೆಯಿತು. ಹಗ್ಗವಾಗಿದ್ದ ವಾಸುಕಿಸರ್ಪವು ಘರ್ಷಣೆಯನ್ನು ತಡೆಯಲಾರದೆ ಹೆಡೆಗಳಿಂದ ವಿಷವನ್ನು ಕಕ್ಕುತ್ತ ಹಲ್ಲುಗಳಿಂದ ಬಂಡೆಗಳನ್ನು ಕಚ್ಚಿತು. ಆಗ ಬೆಂಕಿಯಂತೆ ಉಗ್ರವಾದ ಹಾಲಾಹಲವೆಂಬ ಘೋರವಿಷವು ಹೊರಹೊಮ್ಮಿತು. ಅದು ದೇವಾಸುರಮನುಷ್ಯರ ಮೂರು ಲೋಕಗಳನ್ನೂ ಸುಡಲಾರಂಭಿಸಿತು. ದೇವತೆಗಳು ಮಹಾದೇವ ಶಂಕರನನ್ನು ಮೊರೆಹೊಕ್ಕು “ತ್ರಾಹಿ! ತ್ರಾಹಿ!” ಎನ್ನುತ್ತಾ ಸ್ತುತಿಸಿದರು.

ಏವಮುಕ್ತಸ್ತತೋ ದೇವೈರ್ದೇವದೇವೇಶ್ವರಃ ಪ್ರಭುಃ । ಪ್ರಾದುರಾಸೀತ್ತತೋಽತ್ರೈವ ಶಂಖಚಕ್ರಧರೋ ಹರಿಃ ।। 22 ।। ಉವಾಚೈನಂ ಸ್ಮಿತಂ ಕೃತ್ವಾ ರುದ್ರಂ ಶೂಲಭೃತಂ ಹರಿಃ । ದೈವತೈರ್ಮಥ್ಯಮಾನೇ ತು ಯತ್ಪೂರ್ವಂ ಸಮುಪಸ್ಥಿತಮ್ ।। 23 ।। ತತ್ತ್ವದೀಯಂ ಸುರಶ್ರೇಷ್ಠ ಸುರಾಣಾಮಗ್ರತೋ ಹಿ ಯತ್ । ಅಗ್ರಪೂಜಾಮಿಮಾಂ ಮತ್ವಾ ಗೃಹಾಣೇದಂ ವಿಷಂ ಪ್ರಭೋ ।। 24 ।। ಇತ್ಯುಕ್ತ್ವಾ ಚ ಸುರಶ್ರೇಷ್ಠಸ್ತತ್ರೈವಾಂತರಧೀಯತ । ದೇವತಾನಾಂ ಭಯಂ ದೃಷ್ಟ್ವಾ ಶೃತ್ವಾವಾಕ್ಯಂ ತು ಶಾಂರ್ಙ್ಗಿಣಃ ।। 25 ।। ಹಾಲಾಹಲಂ ವಿಷಂ ಘೋರಂ ಸ ಜಗ್ರಾಹಾಮೃತೋಪಮಮ್ । ದೇವಾನ್ವಿಸೃಜ್ಯ ದೇವೇಶೋ ಜಗಾಮ ಭಗವಾನ್ ಹರಃ ।। 26 ।।

ಆಗ ದೇವದೇವೇಶ್ವರ ಸ್ವಾಮಿಯು ಪ್ರತ್ಯಕ್ಷನಾದನು. ಅಷ್ಟರಲ್ಲಿ ಶಂಖಚಕ್ರಧಾರಿ ಹರಿಯು ಕಾಣಿಸಿಕೊಂಡು ನಗುತ್ತ ರುದ್ರನಿಗೆ “ದೇವೋತ್ತಮ! ಸಮುದ್ರಮಥನದಲ್ಲಿ ಮೊದಲು ಹುಟ್ಟಿದ್ದುದು ನಿನಗೆ ಸಲ್ಲಬೇಕು. ಏಕೆಂದರೆ, ನೀನು ದೇವತೆಗಳಲ್ಲಿ ಶ್ರೇಷ್ಠನಾದವನು. ಇದೇ ಅಗ್ರಪೂಜೆ! ವಿಷವನ್ನು ಸ್ವೀಕರಿಸು!” ಎಂದು ಹೇಳಿ ಅಂತರ್ಧಾನನಾದನು. ದೇವತೆಗಳು ಕಂಗಾಲಾಗಿರುವುದನ್ನು ಕಂಡು ಭಗವಾನ್ ಶಂಕರನು ಹರಿಯ ಮಾತಿನಂತೆ ಘೋರ ಹಾಲಾಹಲ ವಿಷವನ್ನು ಅಮೃತದಂತೆ ಕುಡಿದು ದೇವತೆಗಳನ್ನು ಕಳುಹಿಸಿ ಅಂತರ್ಧಾನನಾದನು.

ತತೋ ದೇವಾಸುರಾಃ ಸರ್ವೇ ಮಮಂಥೂ ರಘುನಂದನ । ಪ್ರವಿವೇಶಾಥ ಪಾತಾಲಂ ಮಂಥಾನಃ ಪರ್ವತೋತ್ತಮಃ ।। 27 ।। ತತೋ ದೇವಾಃ ಸಗಂಧರ್ವಾಸ್ತುಷ್ಟುವುರ್ಮಧುಸೂದನಮ್ । ತ್ವಂ ಗತಿಃ ಸರ್ವಭೂತಾನಾಂ ವಿಶೇಷೇಣ ದಿವೌಕಸಾಮ್ ।। 28 ।। ಪಾಲಯಾಸ್ಮಾನ್ ಮಹಾಬಾಹೋ ಗಿರಿಮುದ್ಧರ್ತುಮರ್ಹಸಿ । ಇತಿ ಶ್ರುತ್ವಾ ಹೃಷೀಕೇಶಃ ಕಾಮಠಂ ರೂಪಮಾಸ್ಥಿತಃ ।। 29 ।। ಪರ್ವತಂ ಪೃಷ್ಠತಃ ಕೃತ್ವಾ ಶಿಶ್ಯೇ ತತ್ರೋದಧೌ ಹರಿಃ । ಪರ್ವತಾಗ್ರಂ ತು ಲೋಕಾತ್ಮಾ ಹಸೇನಾಕ್ರಮ್ಯ ಕೇಶವಃ ।। 30 ।। ದೇವಾನಾಂ ಮಧ್ಯತಃ ಸ್ಥಿತ್ವಾ ಮಮಂಥ ಪುರುಷೋತ್ತಮಃ

ದೇವಾಸುರರು ಮತ್ತೆ ಕಡೆಯಲಾರಂಭಿಸಿದರು. ಮಂದರ ಪರ್ವತವು ಪಾತಾಳಕ್ಕೆ ಇಳಿದುಹೋಯಿತು. ದೇವ-ಗಂಧರ್ವರು ವಿಷ್ಣುವನ್ನು “ದೇವ! ಸರ್ವಜಂತುಗಳಿಗೂ ನೀನೇ ಗತಿ. ನಮಗೆ ನೀನೇ ಪರಮಗತಿ. ನಮ್ಮನ್ನು ಕಾಪಾಡು. ಈ ಬೆಟ್ಟವನ್ನು ಮೇಲೆತ್ತು” ಎಂದು ಪ್ರಾರ್ಥಿಸಿದರು. ಆಗ ವಿಷ್ಣುವು ಕೂರ್ಮರೂಪವನ್ನು ಧರಿಸಿ ಮಂದರಗಿರಿಯನ್ನು ಬೆನ್ನಮೇಲೇರಿಸಿ ಸಮುದ್ರದಲ್ಲಿ ನಿಂತನು. ದೇವತೆಗಳ ಮಧ್ಯದಲ್ಲಿ ನಿಂತು ಗಿರಿಶಿಖರವನ್ನು ಕೈಯಲ್ಲಿ ಹಿಡಿದು ತಾನೂ ಸಮುದ್ರವನ್ನು ಕಡೆಯುತ್ತಿದ್ದನು.

ಅಥ ವರ್ಷಸಹಸ್ರೇಣ ಆಯುರ್ವೇದಮಯಃ ಪುಮಾನ್ ।। 31 ।। ಉದತಿಷ್ಠತ್ಸುಧರ್ಮಾತ್ಮಾ ಸದಂಡಃ ಸಕಮಂಡಲುಃ । ಪೂರ್ವಂ ಧನ್ವಂತರೀ ರಾಮ ಅಪ್ಸರಾಶ್ಚ ಸುವರ್ಚಸಃ ।। 32 ।। ಅಪ್ಸು ನಿರ್ಮಥನಾದೇವ ರಸಾತ್ತಸ್ಮಾದ್ವರಾಃ ಸ್ತ್ರಿಯಃ । ಉತ್ಪೇತುರ್ಮನುಜಶ್ರೇಷ್ಠ ತಸ್ಮಾದಪ್ಸರಸೋಽಭವನ್ ।। 33 ।। ಷಷ್ಟಿಃ ಕೋಟ್ಯೋಽಭವಂಸ್ತಾಸಾಮಪ್ಸರಾಣಾಂ ಸುವರ್ಚಸಾಮ್ । ಅಸಂಖ್ಯೇಯಾಸ್ತು ಕಾಕುತ್ಸ್ಥ ಯಾಸ್ತಾಸಾಂ ಪರಿಚಾರಿಕಾಃ ।। 34 ।। ನ ತಾಃ ಸ್ಮ ಪ್ರತಿಗೃಹ್ಣಂತಿ ಸರ್ವೇ ತೇ ದೇವದಾನವಾಃ । ಅಪ್ರತಿಗ್ರಹಣಾತ್ತಾಶ್ಚ ಸರ್ವಾಃ ಸಾಧಾರಣಾಃ ಸ್ಮೃತಾಃ ।। 35 ।।

ಹೀಗೆ ಒಂದು ಸಾವಿರವರ್ಷವಾದಮೇಲೆ ಆಯುರ್ವೇದಕ್ಕೆ ಅಧಿಪುರುಷನಾದ ಧನ್ವಂತರಿಯು ದಂಡಕಮಂಡಲುಧಾರಿಯಾಗಿ ಉದ್ಭವಿಸಿದನು. ಆಮೇಲೆ ಸುಂದರಿಯರಾದ ಅಪ್ಸರಃಸ್ತ್ರೀಯರು ಹುಟ್ಟಿದರು. ಅಪ್ಸು=ಹಾಲಿನ ರೂಪದ ನೀರಿನಲ್ಲಿ ಕಡೆದು ಹುಟ್ಟಿದ ರಸ=ರಸದಿಂದ ಉದ್ಭವಿಸಿದ ಕಾರಣ ಅವರಿಗೆ ಅಪ್ಸರಸ್ ಎಂಬ ಹೆಸರಾಯಿತು. ಅವರ ಸಂಖ್ಯೆ ಅರವತ್ತು ಕೋಟಿ. ಅವರಿಗೆ ಪರಿಚಾರಿಕೆಯರು ಲೆಕ್ಕವಿಲ್ಲದಷ್ಟು ಹುಟ್ಟಿದರು. ಅಪ್ಸರೆಯರನ್ನು ದೇವದಾನವರಲ್ಲಿ ಯಾರೂ ಪ್ರತ್ಯೇಕವಾಗಿ ಸ್ವೀಕರಿಸಲಿಲ್ಲ. ಆದ್ದರಿಂದ ಅವರು ಎಲ್ಲರಿಗೂ ಸಾಧಾರಣ ಸ್ತ್ರೀಯರಾಗಿ ವೇಶ್ಯೆಯರೆನಿಸಿದರು.

ವರುಣಸ್ಯ ತತಃ ಕನ್ಯಾ ವಾರುಣೀ ರಘುನಂದನ । ಉತ್ಪಪಾತ ಮಹಾಭಾಗಾ ಮಾರ್ಗಮಾಣಾ ಪರಿಗ್ರಹಮ್ ।। 36 ।। ದಿತೇಃ ಪುತ್ರಾ ನ ತಾಂ ರಾಮ ಜಗೃಹುರ್ವರುಣಾತ್ಮಜಾಮ್ । ಅದಿತೇಸ್ತು ಸುತಾ ವೀರ ಜಗೃಹುಸ್ತಾಮನಿಂದಿತಾಮ್ ।। 37 ।। ಅಸುರಾಸ್ತೇನ ದೈತೇಯಾಃ ಸುರಾಸ್ತೇನಾದಿತೇಃ ಸುತಾಃ । ಹೃಷ್ಟಾಃ ಪ್ರಮುದಿತಾಶ್ಚಾಸನ್ವಾರುಣೀಗ್ರಹಣಾತ್ ಸುರಾಃ ।। 38 ।।

ನಂತರ ವರುಣನ ಕನ್ಯೆಯಾಗಿ ವಾರುಣಿ ಎಂದು ಪ್ರಸಿದ್ಧಳಾದ ಸುರಾಧಿದೇವತೆಯು ಜನಿಸಿದಳು. ಅವಳು ತನ್ನನ್ನು ವರಿಸುವವರು ಯಾರೆಂದು ನೋಡುತ್ತಿದ್ದಳು. ದಿತಿಪುತ್ರರಾದ ದೈತ್ಯರು ಅವಳನ್ನು ಪರಿಗ್ರಹಿಸಲಿಲ್ಲ. ಅದಿತಿಪುತ್ರರಾದ ದೇವತೆಗಳು ಆ ಸುರಾಧಿದೇವತೆಯನ್ನು ವರಿಸಿದರು. ಆದ್ದರಿಂದ ದಿತಿಪುತ್ರರು ಅಸುರರಾದರು. ಅದಿತಿಪುತ್ರರು ಸುರರಾದರು. ಸುರರಿಗೆ ವಾರುಣಿಯು ಲಭಿಸಿದ್ದರಿಂದ ಬಹಳ ಹರ್ಷವಾಯಿತು.

ಉಚ್ಚೈಃಶ್ರವಾ ಹಯಶ್ರೇಷ್ಠೋ ಮಣಿರತ್ನಂ ಚ ಕೌಸ್ತುಭಮ್ । ಉದತಿಷ್ಠನ್ನರಶ್ರೇಷ್ಠ ತಥೈವಾಮೃತಮುತ್ತಮಮ್ ।। 39 ।। ಅಥ ತಸ್ಯ ಕೃತೇ ರಾಮ ಮಹಾನಾಸೀತ್ಕುಲಕ್ಷಯಃ । ಅದಿತೇಸ್ತು ತತಃ ಪುತ್ರಾ ದಿತೇಃ ಪುತ್ರಾನಸೂದಯನ್ ।। 40 ।। ಏಕತೋಽಭ್ಯಾಗಮನ್ ಸರ್ವೇ ಹ್ಯಸುರಾ ರಾಕ್ಷಸೈಃ ಸಹ । ಯುದ್ಧಮಾಸೀನ್ಮಹಾಘೋರಂ ವೀರ ತ್ರೈಲೋಕ್ಯಮೋಹನಮ್ ।। 41 ।। ಯದಾ ಕ್ಷಯಂ ಗತಂ ಸರ್ವಂ ತದಾ ವಿಷ್ಣುರ್ಮಹಾಬಲಃ । ಅಮೃತಂ ಸೋಽಹರತ್ತೂರ್ಣಂ ಮಾಯಾಮಾಸ್ಥಾಯ ಮೋಹಿನೀಮ್ ।। 42 ।। ಯೇ ತದಾಭಿಮುಖಂ ವಿಷ್ಣುಮಕ್ಷಯ್ಯಂ ಪುರುಷೋತ್ತಮಮ್ । ಸಂಪಿಷ್ಟಾಸ್ತೇ ತದಾ ಯುದ್ಧೇ ವಿಷ್ಣುನಾ ಪ್ರಭವಿಷ್ಣುನಾ ।। 43 ।। ಅದಿತೇರಾತ್ಮಜಾ ವೀರಾ ದಿತೇಃ ಪುತ್ರಾನ್ನಿಜಘ್ನಿರೇ । ತಸ್ಮಿನ್ಯುದ್ಧೇ ಮಹಾಘೋರೇ ದೈತೇಯಾದಿತ್ಯಯೋರ್ಭೃಶಮ್ ।। 44 ।। ನಿಹತ್ಯ ದಿತಿಪುತ್ರಾಂಸ್ತು ರಾಜ್ಯಂ ಪ್ರಾಪ್ಯ ಪುರಂದರಃ । ಶಶಾಸ ಮುದಿತೋ ಲೋಕಾನ್ಸರ್ಷಿಸಂಘಾನ್ಸಚಾರಣಾನ್ ।। 45 ।।

ಅನಂತರ ಉಚ್ಛೈಃಶ್ರವಸ್ಸೆಂಬ ಶ್ರೇಷ್ಠ ಅಶ್ವವೂ, ಕೌಸ್ತುಭವೆಂಬ ಉತ್ತಮ ಮಣಿಯೂ ಹುಟ್ಟಿದವು. ಕೊನೆಗೆ ದಿವ್ಯವಾದ ಅಮೃತವು ಹುಟ್ಟಿತು. ಅಮೃತಕ್ಕಾಗಿ ದೊಡ್ಡ ಕುಲಕ್ಷಯವೇ ಆಯಿತು. ದೇವತೆಗಳು ಅಮೃತಕ್ಕೋಸ್ಕರ ದೈತ್ಯರೊಂಡನೆ ಯುದ್ಧಕ್ಕೆ ನಿಂತರು. ರಾಕ್ಷಸರು ಯುದ್ಧದಲ್ಲಿ ದೈತ್ಯರೊಂಡನೆ ಸೇರಿಕೊಂಡರು. ಉಭಯರಿಗೂ ಮೂರುಲೋಕವು ತಲ್ಲಣಿಸುವ ಯುದ್ಧವು ಪ್ರಾರಂಭಿಸಿತು. ಎರಡು ಪಕ್ಷಗಳೂ ನಾಶವಾಗತೊಡಗಿದವು. ಆಗ ಮಹಾವಿಷ್ಣುವು ಮಾಯೆಯಿಂದ ಮೋಹಿನೀರೂಪವನ್ನು ಧರಿಸಿ ಅಮೃತವನ್ನು ಅಪಹರಿಸಿಬಿಟ್ಟನು. ಯುದ್ಧಕ್ಕೆ ಬಂದವರನ್ನು ಮಹಾವಿಷ್ಣುವು ತನ್ನ ಸಾಮರ್ಥ್ಯದಿಂದ ಧ್ವಂಸಮಾಡಿದನು. ಅದಿತಿಪುತ್ರರಾದ ದೇವತೆಗಳು ದೈತ್ಯರನ್ನು ವಧಿಸಿದರು. ಆ ಘೋರಯುದ್ಧದಲ್ಲಿ ದೇವೇಂದ್ರನು ದೈತ್ಯರನ್ನು ಸಂಹರಿಸಿ ಋಷಿಚಾರಣರಿಂದ ಸಮೇತ ಸ್ವರ್ಗವನ್ನು ಆಳಿದನು.

Leave a Reply

Your email address will not be published. Required fields are marked *