ಶ್ರೀಮದ್ಭಾಗವತಮಹಾಪುರಾಣ: ಅಷ್ಟಮ ಸ್ಕಂಧ: ಅಧ್ಯಾಯ 5
ಶ್ರೀಶುಕ ಉವಾಚ । ರಾಜನ್ನುದಿತಮೇತತ್ತೇ ಹರೇಃ ಕರ್ಮಾಘನಾಶನಮ್ । ಗಜೇಂದ್ರಮೋಕ್ಷಣಂ ಪುಣ್ಯಂ ರೈವತಂ ತ್ವಂತರಂ ಶೃಣು ।। 1 ।। ಪಂಚಮೋ ರೈವತೋ ನಾಮ ಮನುಸ್ತಾಮಸಸೋದರಃ । ಬಲಿವಿಂಧ್ಯಾದಯಸ್ತಸ್ಯ ಸುತಾ ಹಾರ್ಜುನಪೂರ್ವಕಾಃ ।। 2 ।। ವಿಭುರಿಂದ್ರಃ ಸುರಗಣಾ ರಾಜನ್ಭೂತರಯಾದಯಃ । ಹಿರಣ್ಯರೋಮಾ ವೇದಶಿರಾ ಊರ್ಧ್ವಬಾಹ್ವಾದಯೋ ದ್ವಿಜಾಃ ।। 3 ।।
ಶ್ರೀಶುಕನು ಹೇಳಿದನು: “ರಾಜನ್! ನಾಲ್ಕನೇ ತಾಮಸ ಮನ್ವಂತರದಲ್ಲಿ ಗಜೇಂದ್ರಮೋಕ್ಷವೆಂಬ ಅಘನಾಶನ ಹರಿಯ ಕರ್ಮವನ್ನು ಹೇಳಿದೆನು. ಈಗ ರೈವತ ಮನ್ವಂತರದ ಕುರಿತು ಕೇಳು. ಐದನೆಯ ಮನುವಿನ ಹೆಸರು ರೈವತ. ಇವನು ತಾಮಸನ ಸೋದರನು. ಅವನಿಗೆ ಅರ್ಜುನ, ಬಲಿ, ವಿಂಧ್ಯ ಮೊದಲಾದ ಮಕ್ಕಳಿದ್ದರು. ರಾಜನ್! ಈ ಮನ್ವಂತರದಲ್ಲಿ ವಿಭುವು ಇಂದ್ರನಾಗಿದ್ದನು. ಭೂತರಯ ಮೊದಲಾದವರು ಸುರಗಣದಲ್ಲಿದ್ದರು. ಹಿರಣ್ಯರೋಮಾ, ವೇದಶಿರಾ, ಮತ್ತು ಊರ್ಧ್ವಬಾಹು ಮೊದಲಾದವರು ಸಪ್ತರ್ಷಿಗಳಾಗಿದ್ದರು.
ಪತ್ನೀ ವಿಕುಂಠಾ ಶುಭ್ರಸ್ಯ ವೈಕುಂಠೈಃ ಸುರಸತ್ತಮೈಃ । ತಯೋಃ ಸ್ವಕಲಯಾ ಜಜ್ಞೇ ವೈಕುಂಠೋ ಭಗವಾನ್ಸ್ವಯಮ್ ।। 4 ।। ವೈಕುಂಠಃ ಕಲ್ಪಿತೋ ಯೇನ ಲೋಕೋ ಲೋಕನಮಸ್ಕೃತಃ । ರಮಯಾ ಪ್ರಾರ್ಥ್ಯಮಾನೇನ ದೇವ್ಯಾ ತತ್ಪ್ರಿಯಕಾಮ್ಯಯಾ ।। 5 ।। ತಸ್ಯಾನುಭಾವಃ ಕಥಿತೋ ಗುಣಾಶ್ಚ ಪರಮೋದಯಾಃ । ಭೌಮಾನ್ರೇಣೂನ್ಸ ವಿಮಮೇ ಯೋ ವಿಷ್ಣೋರ್ವರ್ಣಯೇದ್ಗುಣಾನ್ ।। 6 ।।
ಶುಭ್ರನ ಪತ್ನಿ ವಿಕುಂಠಾಳ ಗರ್ಭದಲ್ಲಿ ವೈಕುಂಠರೆಂಬ ಸುರಸತ್ತಮ-ರೊಂದಿಗೆ ಸ್ವಯಂ ಭಗವಾನನು ತನ್ನ ಅಂಶದಿಂದ ಜನಿಸಿದನು. ರಮಾದೇವಿಯು ಪ್ರಾರ್ಥಿಸಲು ಅವಳಿಗೆ ಪ್ರಿಯವನ್ನು ಬಯಸಿ ಅವನು ಲೋಕನಮಸ್ಕೃತ ವೈಕುಂಠಲೋಕವನ್ನು ಕಲ್ಪಿಸಿದನು. ಅವನ ಕಲ್ಯಾಣಗುಣಗಳನ್ನು ಮತ್ತು ಮಹಿಮೆಯನ್ನು ಹಿಂದೆಯೇ ವರ್ಣಿಸಿದ್ದೇನೆ. ಭೂಮಿಯಲ್ಲಿರುವ ಧೂಳಿನ ಕಣಗಳನ್ನು ಎಣಿಸಬಲ್ಲವನೇ ವಿಷ್ಣುವಿನ ಗುಣಗಳನ್ನು ವರ್ಣಿಸಬಲ್ಲನು.
ಷಷ್ಠಶ್ಚ ಚಕ್ಷುಷಃ ಪುತ್ರಶ್ಚಾಕ್ಷುಷೋ ನಾಮ ವೈ ಮನುಃ । ಪೂರುಪೂರುಷಸುದ್ಯುಮ್ನ ಪ್ರಮುಖಾಶ್ಚಾಕ್ಷುಷಾತ್ಮಜಾಃ ।। 7 ।। ಇಂದ್ರೋ ಮಂತ್ರದ್ರುಮಸ್ತತ್ರ ದೇವಾ ಆಪ್ಯಾದಯೋ ಗಣಾಃ । ಮುನಯಸ್ತತ್ರ ವೈ ರಾಜನ್ಹವಿಷ್ಮದ್ವೀರಕಾದಯಃ ।। 8 ।। ತತ್ರಾಪಿ ದೇವಸಂಭೂತ್ಯಾಂ ವೈರಾಜಸ್ಯಾಭವತ್ಸುತಃ । ಅಜಿತೋ ನಾಮ ಭಗವಾನಂಶೇನ ಜಗತಃ ಪತಿಃ ।। 9 ।। ಪಯೋಧಿಂ ಯೇನ ನಿರ್ಮಥ್ಯ ಸುರಾಣಾಂ ಸಾಧಿತಾ ಸುಧಾ । ಭ್ರಮಮಾಣೋಽಂಭಸಿ ಧೃತಃ ಕೂರ್ಮರೂಪೇಣ ಮಂದರಃ ।। 10 ।।
ಆರನೆಯ ಮನುವು ಚಕ್ಷುಷುವಿನ ಪುತ್ರ ಚಾಕ್ಷುಷನೆನ್ನುವವನು. ಪೂರು, ಪೂರುಷ ಮತ್ತು ಸುದ್ಯುಮ್ನರು ಪ್ರಮುಖ ಚಾಕ್ಷುಷಾತ್ಮಜರು. ಆಗ ಮಂತ್ರದ್ರುಮನೆನ್ನುವವನು ಇಂದ್ರನಾಗಿದ್ದನು. ಆಪ್ಯಾದಿಗಳು ದೇವಗಣದಲ್ಲಿದ್ದರು. ರಾಜನ್! ಹವಿಷ್ಮಾನ್, ವೀರಕ ಮೊದಲಾದವರು ಸಪ್ತರ್ಷಿಗಳಾಗಿದ್ದರು. ಆಗಲೂ ಕೂಡ ಜಗತ್ಪತಿ ದೇವ ಭಗವಂತನು ತನ್ನ ಅಂಶದಿಂದ ವೈರಾಜನ ಪತ್ನಿಯಲ್ಲಿ ಅಜಿತ ಎಂಬ ಹೆಸರಿನ ಮಗನಾಗಿ ಹುಟ್ಟಿದನು.ಅವನೇ ಸುರರಿಂದ ಕ್ಷೀರಸಾಗರವನ್ನು ಮಥಿಸಿಸಿ ಅವರಿಗೆ ಅಮೃತವನ್ನು ಕೊಡಿಸಿದ್ದನು. ಸಮುದ್ರವನ್ನು ಕಡೆಯುತ್ತಿದ್ದಾಗ ಗಿರಗಿರನೆ ತಿರುಗುತ್ತಿದ್ದ ಮಂದರವನ್ನು ಕೂರ್ಮರೂಪದಿಂದ ಬೆನ್ನಲ್ಲಿ ಹೊತ್ತಿದ್ದನು.”
ಶ್ರೀರಾಜೋವಾಚ । ಯಥಾ ಭಗವತಾ ಬ್ರಹ್ಮನ್ಮಥಿತಃ ಕ್ಷೀರಸಾಗರಃ । ಯದರ್ಥಂ ವಾ ಯತಶ್ಚಾದ್ರಿಂ ದಧಾರಾಂಬುಚರಾತ್ಮನಾ ।। 11 ।। ಯಥಾಮೃತಂ ಸುರೈಃ ಪ್ರಾಪ್ತಂ ಕಿಂ ಚಾನ್ಯದಭವತ್ತತಃ । ಏತದ್ಭಗವತಃ ಕರ್ಮ ವದಸ್ವ ಪರಮಾದ್ಭುತಮ್ ।। 12 ।। ತ್ವಯಾ ಸಂಕಥ್ಯಮಾನೇನ ಮಹಿಮ್ನಾ ಸಾತ್ವತಾಂ ಪತೇಃ । ನಾತಿತೃಪ್ಯತಿ ಮೇ ಚಿತ್ತಂ ಸುಚಿರಂ ತಾಪತಾಪಿತಮ್ ।। 13 ।।
ಶ್ರೀರಾಜನು ಹೇಳಿದನು: “ಬ್ರಹ್ಮನ್! ಭಗವಂತನು ಕ್ಷೀರಸಾಗರವನ್ನು ಹೇಗೆ ಮಥಿಸಿದನು? ಅವನು ಯಾವ ಕಾರಣಕ್ಕಾಗಿ ಅಥವಾ ಯಾವ ಉದ್ದೇಶದಿಂದ ಪರ್ವತವನ್ನು ತನ್ನ ಬೆನ್ನಮೇಲೆ ಹೊತ್ತನು?ಸುರರಿಗೆ ಹೇಗೆ ಅಮೃತವು ಪ್ರಾಪ್ತವಾಯಿತು? ಬೇರೆ ಏನೇನು ಅಲ್ಲಿ ಉದ್ಭವಿಸಿದವು? ಪರಮಾದ್ಭುತವಾದ ಭಗವಂತನ ಈ ಕರ್ಮದ ಕುರಿತು ಹೇಳು. ಸಾತ್ವತಪತಿಯ ಮಹಿಮೆಯನ್ನು ನೀನು ಹೇಳುತ್ತಿರುವುದನ್ನು ಕೇಳಿ ತೃಪ್ತಿ-ಯೇ ಆಗುತ್ತಿಲ್ಲ. ನನ್ನ ಚಿತ್ತವು ಬಹುಕಾಲದಿಂದ ಸಂಸಾರತಾಪದಿಂದ ತವಕಿಸುತ್ತಿದೆ.”
ಶ್ರೀಸೂತ ಉವಾಚ । ಸಂಪೃಷ್ಟೋ ಭಗವಾನೇವಂ ದ್ವೈಪಾಯನಸುತೋ ದ್ವಿಜಾಃ । ಅಭಿನಂದ್ಯ ಹರೇರ್ವೀರ್ಯಮಭ್ಯಾಚಷ್ಟುಂ ಪ್ರಚಕ್ರಮೇ ।। 14 ।।
ಶ್ರೀಸೂತನು ಹೇಳಿದನು: “ದ್ವಿಜರೇ! ಹೀಗೆ ಕೇಳಲು ಭಗವಾನ್ ದ್ವೈಪಾಯನಸುತನು ಹರಿಯನ್ನು ಅಭಿನಂದಿಸಿ ಅವನ ವೀರ್ಯವನ್ನು ವರ್ಣಿಸತೊಡಗಿದನು.
ಶ್ರೀಶುಕ ಉವಾಚ । ಯದಾ ಯುದ್ಧೇಽಸುರೈರ್ದೇವಾ ಬಾಧ್ಯಮಾನಾಃ ಶಿತಾಯುಧೈಃ । ಗತಾಸವೋ ನಿಪತಿತಾ ನೋತ್ತಿಷ್ಠೇರನ್ಸ್ಮ ಭೂಯಶಃ ।। 15 ।। ಯದಾ ದುರ್ವಾಸಃ ಶಾಪೇನ ಸೇಂದ್ರಾ ಲೋಕಾಸ್ತ್ರಯೋ ನೃಪ । ನಿಃಶ್ರೀಕಾಶ್ಚಾಭವಂಸ್ತತ್ರ ನೇಶುರಿಜ್ಯಾದಯಃ ಕ್ರಿಯಾಃ ।। 16 ।। ನಿಶಾಮ್ಯೈತತ್ಸುರಗಣಾ ಮಹೇಂದ್ರವರುಣಾದಯಃ । ನಾಧ್ಯಗಚ್ಛನ್ಸ್ವಯಂ ಮಂತ್ರೈರ್ಮಂತ್ರಯಂತೋ ವಿನಿಶ್ಚಯಮ್ ।। 17 ।। ತತೋ ಬ್ರಹ್ಮಸಭಾಂ ಜಗ್ಮುರ್ಮೇರೋರ್ಮೂರ್ಧನಿ ಸರ್ವಶಃ । ಸರ್ವಂ ವಿಜ್ಞಾಪಯಾಂ ಚಕ್ರುಃ ಪ್ರಣತಾಃ ಪರಮೇಷ್ಠಿನೇ ।। 18 ।। ಸ ವಿಲೋಕ್ಯೇಂದ್ರವಾಯ್ವಾದೀನ್ನಿಃಸತ್ತ್ವಾನ್ವಿಗತಪ್ರಭಾನ್ । ಲೋಕಾನಮಂಗಲಪ್ರಾಯಾನಸುರಾನಯಥಾ ವಿಭುಃ ।। 19 ।।
ಶ್ರೀಶುಕನು ಹೇಳಿದನು: “ಆಗ ಯುದ್ಧದಲ್ಲಿ ಅಸುರರ ತೀಕ್ಷ್ಣ ಆಯುಧಗಳಿಂದ ಬಾಧಿತರಾಗಿ ಸತ್ತು ಬಿದ್ದಿದ್ದ ದೇವತೆಗಳು ಪುನಃ ಮೇಲಕ್ಕೇಳುತ್ತಿರಲಿಲ್ಲ. ನೃಪ! ಆಗ ದುರ್ವಾಸನ ಶಾಪದಿಂದ ಇಂದ್ರನೊಂದಿಗೆ ಮೂರೂ ಲೋಕಗಳೂ ಶ್ರೀಹೀನಗೊಂಡಿದ್ದವು. ಇದರಿಂದ ಯಜ್ಞ-ಯಾಗಾದಿ ಧರ್ಮಕರ್ಮಗಳೂ ನಿಂತುಹೋಗಿದ್ದವು. ಇದನ್ನು ಕಂಡು ಮಹೇಂದ್ರ-ವರುಣಾದಿಗಳು ವಿಚಾರಮಾಡಿದರೂ ಸ್ವಯಂ ಯಾವ ನಿಶ್ಚಯಕ್ಕೂ ಬರಲಿಲ್ಲ. ಆಗ ಎಲ್ಲರೂ ಮೇರುಶಿಖರದಲ್ಲಿದ್ದ ಬ್ರಹ್ಮಸಭೆಗೆ ಹೋಗಿ ಪರಮೇಷ್ಠಿಗೆ ನಮಸ್ಕರಿಸಿ ಎಲ್ಲವನ್ನು ವಿಜ್ಞಾಪಿಸಿದರು. ಇಂದ್ರ-ವಾಯು ಮೊದಲಾದವರು ನಿಃಸತ್ತ್ವರೂ, ಪ್ರಭಾಹೀನರೂ ಆಗಿದ್ದುದನ್ನು ಮತ್ತು ಅಸುರರು ಲೋಕಗಳಿಗೆ ಅಮಂಗಲಕರರಾದುದನ್ನು ವಿಭುವು ಅವಲೋಕಿಸಿದನು.
ಸಮಾಹಿತೇನ ಮನಸಾ ಸಂಸ್ಮರನ್ಪುರುಷಂ ಪರಮ್ । ಉವಾಚೋತ್ಫುಲ್ಲವದನೋ ದೇವಾನ್ಸ ಭಗವಾನ್ಪರಃ ।। 20 ।। ಅಹಂ ಭವೋ ಯೂಯಮಥೋಽಸುರಾದಯೋ ಮನುಷ್ಯತಿರ್ಯಗ್ದ್ರುಮಘರ್ಮಜಾತಯಃ । ಯಸ್ಯಾವತಾರಾಂಶಕಲಾವಿಸರ್ಜಿತಾ ವ್ರಜಾಮ ಸರ್ವೇ ಶರಣಂ ತಮವ್ಯಯಮ್ ।। 21 ।। ನ ಯಸ್ಯ ವಧ್ಯೋ ನ ಚ ರಕ್ಷಣೀಯೋ ನೋಪೇಕ್ಷಣೀಯಾದರಣೀಯಪಕ್ಷಃ । ತಥಾಪಿ ಸರ್ಗಸ್ಥಿತಿಸಂಯಮಾರ್ಥಂ ಧತ್ತೇ ರಜಃಸತ್ತ್ವತಮಾಂಸಿ ಕಾಲೇ ।। 22 ।। ಅಯಂ ಚ ತಸ್ಯ ಸ್ಥಿತಿಪಾಲನಕ್ಷಣಃ ಸತ್ತ್ವಂ ಜುಷಾಣಸ್ಯ ಭವಾಯ ದೇಹಿನಾಮ್ । ತಸ್ಮಾದ್ವ್ರಜಾಮಃ ಶರಣಂ ಜಗದ್ಗುರುಂ ಸ್ವಾನಾಂ ಸ ನೋ ಧಾಸ್ಯತಿ ಶಂ ಸುರಪ್ರಿಯಃ ।। 23 ।।
ಮನಸ್ಸನ್ನು ಏಕಾಗ್ರಗೊಳಿಸಿ ಪರಮ ಪುರುಷನನ್ನು ಸಂಸ್ಮರಿಸಿ, ಭಗವಂತನು ವಿಕಸಿತಮುಖನಾಗಿ ದೇವತೆಗಳಿಗೆ ಹೇಳಿದನು: “ನಾನು, ಭವ, ನೀವು, ಅಸುರರು, ಮನುಷ್ಯರು, ಪಶು-ಪಕ್ಷಿಗಳು, ವೃಕ್ಷಗಳು, ಮತ್ತು ಸ್ವೇದಜ ಪ್ರಾಣಿಗಳು ಎಲ್ಲರೂ ಯಾರ ಸ್ವಲ್ಪಾತಿಸ್ವಲ್ಪ ಅಂಶದಿಂದ ರಚಿತಗೊಂಡಿವೆಯೋ ಆ ಅವ್ಯಯ ಪ್ರಭುವಿಗೆ ಶರಣುಹೋಗೋಣ. ಅವನಿಗೆ ವಧ್ಯನೂ ರಕ್ಷಣೀಯನೂ ಅಥವಾ ಉಪೇಕ್ಷಣೀಯನೂ, ಆದರಣೀಯನೂ, ಯಾರೂ ಇಲ್ಲದಿದ್ದರೂ ಅವನು ಸಮಯಬಂದಾಗ ಪ್ರಪಂಚದ ಸೃಷ್ಟಿ-ಸ್ಥಿತಿ-ಲಯಕ್ಕಾಗಿ ರಜಃ-ಸತ್ತ್ವ-ತಮೋಗುಣವನ್ನು ಸ್ವೀಕರಿಸುತ್ತಾನೆ. ಇದು ಅವನ ಸ್ಥಿತಿಪಾಲನೆಯ ಕ್ಷಣವಾಗಿರುವುದರಿಂದ ಪ್ರಾಣಿಗಳ ಕಲ್ಯಾಣಕ್ಕಾಗಿ ಸತ್ತ್ವಗುಣವನ್ನು ಸ್ವೀಕರಿಸಿದ್ದಾನೆ. ಆದುದರಿಂದ ಆ ಜಗದ್ಗುರುವಿನ ಶರಣು ಹೋಗೋಣ. ನಮ್ಮವನಾದ ಮತ್ತು ಸುರಪ್ರಿಯನಾದ ಅವನು ನಮ್ಮನ್ನು ಖಂಡಿತವಾಗಿ ರಕ್ಷಿಸುತ್ತಾನೆ.””
ಶ್ರೀಶುಕ ಉವಾಚ । ಇತ್ಯಾಭಾಷ್ಯ ಸುರಾನ್ವೇಧಾಃ ಸಹ ದೇವೈರರಿಂದಮ । ಅಜಿತಸ್ಯ ಪದಂ ಸಾಕ್ಷಾಜ್ಜಗಾಮ ತಮಸಃ ಪರಮ್ ।। 24 ।। ತತ್ರಾದೃಷ್ಟಸ್ವರೂಪಾಯ ಶ್ರುತಪೂರ್ವಾಯ ವೈ ಪ್ರಭುಃ । ಸ್ತುತಿಮಬ್ರೂತ ದೈವೀಭಿರ್ಗೀರ್ಭಿಸ್ತ್ವವಹಿತೇಂದ್ರಿಯಃ ।। 25 ।।
ಶ್ರೀಶುಕನು ಹೇಳಿದನು: “ಅರಿಂದಮ! ಸುರರಿಗೆ ಹೀಗೆ ಹೇಳಿ ಬ್ರಹ್ಮನು ದೇವತೆಗಳೊಂದಿಗೆ ತಮಸ್ಸಿನ ಆಚೆಯಿರುವ ಸಾಕ್ಷಾತ್ ಅಜಿತನ ವೈಕುಂಠ ಪದಕ್ಕೆ ಹೋದನು. ವೈಕುಂಠದ ಸ್ವರೂಪದ ಕುರಿತು ಹಿಂದೆ ಕೇಳಿದ್ದರೂ ಬ್ರಹ್ಮನು ಅಲ್ಲಿ ಏನನ್ನೂ ಕಾಣಲಿಲ್ಲ. ಆಗ ಏಕಾಗ್ರಚಿತ್ತನಾಗಿ ದಿವ್ಯ ವೇದವಾಣಿಯ ಮೂಲಕ ಅವನನ್ನು ಸ್ತುತಿಸಿದನು.
ಶ್ರೀಬ್ರಹ್ಮೋವಾಚ । ಅವಿಕ್ರಿಯಂ ಸತ್ಯಮನಂತಮಾದ್ಯಂ ಗುಹಾಶಯಂ ನಿಷ್ಕಲಮಪ್ರತರ್ಕ್ಯಮ್ । ಮನೋಽಗ್ರಯಾನಂ ವಚಸಾನಿರುಕ್ತಂ ನಮಾಮಹೇ ದೇವವರಂ ವರೇಣ್ಯಮ್ ।। 26 ।।
ಶ್ರೀಬ್ರಹ್ಮನು ಹೇಳಿದನು: “ಅವಿಕ್ರಿಯನೂ, ಸತ್ಯನೂ, ಅನಂತನೂ, ಆದ್ಯನೂ, ಗುಹಾಶಯನೂ, ನಿಷ್ಕಲನೂ, ತರ್ಕಕ್ಕೆ ಸಿಗದವನೂ, ಮನಸ್ಸಿಗೆ ದೊರಕದವನೂ, ಮಾತಿನಿಂದ ವರ್ಣಿಸಲಸಾಧ್ಯನೂ ಆದ ದೇವವರ ವರೇಣ್ಯನಿಗೆ ನಮಸ್ಕರಿಸುತ್ತೇನೆ.
ವಿಪಶ್ಚಿತಂ ಪ್ರಾಣಮನೋಧಿಯಾತ್ಮನಾಮರ್ಥೇಂದ್ರಿಯಾಭಾಸಮನಿದ್ರಮವ್ರಣಮ್ । ಛಾಯಾತಪೌ ಯತ್ರ ನ ಗೃಧ್ರಪಕ್ಷೌ ತಮಕ್ಷರಂ ಖಂ ತ್ರಿಯುಗಂ ವ್ರಜಾಮಹೇ ।। 27 ।।
ಪ್ರಾಣ-ಬುದ್ಧಿ-ಅಹಂಕಾರಗಳನ್ನು ತಿಳಿದಿರುವ, ಇಂದ್ರಿಯಗಳು ಅವುಗಳ ವಿಷಯಗಳನ್ನು ಪ್ರಕಾಶಿಸುವ, ಅಜ್ಞಾನದ ಸೋಂಕಿಲ್ಲದ, ಜನ್ಮ-ಮರಣಾದಿ ವಿಕಾರಗಳಿರುವ ಶರೀರ ರಹಿತನಾಗಿರುವ, ಜೀವಿಯ ಎರಡು ರೆಕ್ಕೆಗಳಾದ ವಿದ್ಯೆ-ಅವಿದ್ಯಗಳು ಇಲ್ಲದಿರುವ, ಅವಿನಾಶಿಯೂ, ಸುಖಸ್ವರೂಪನೂ ಆಗಿರುವ ಮತ್ತು ಕೃತ-ತ್ರೇತ-ದ್ವಾಪರಗಳಲ್ಲಿ ಅವತರಿಸುವ ನಿನಗೆ ನಾವೆಲ್ಲರೂ ಶರಣುಬಂದಿದ್ದೇವೆ.
ಅಜಸ್ಯ ಚಕ್ರಂ ತ್ವಜಯೇರ್ಯಮಾಣಂ ಮನೋಮಯಂ ಪಂಚದಶಾರಮಾಶು । ತ್ರಿನಾಭಿ ವಿದ್ಯುಚ್ಚಲಮಷ್ಟನೇಮಿ ಯದಕ್ಷಮಾಹುಸ್ತಮೃತಂ ಪ್ರಪದ್ಯೇ ।। 28 ।।
ಜೀವಿಯ ಶರೀರವು ಒಂದು ಮನೋಮಯ ಚಕ್ರವು. ಹತ್ತು ಇಂದ್ರಿಯಗಳು ಮತ್ತು ಐದು ಪ್ರಾಣಗಳು – ಹೀಗೆ ಹದಿನೈದು ಆರೆಕಾಲುಗಳನ್ನು ಅದು ಹೊಂದಿದೆ. ಸತ್ತ್ವ-ರಜ-ತಮಗಳೆಂಬ ಮೂರು ಗುಣಗಳು ಆ ಚಕ್ರದ ನಾಭಿ. ಪೃಥ್ವಿ, ಜಲ, ತೇಜ, ವಾಯು, ಆಕಾಶ, ಮನ, ಬುದ್ಧಿ ಮತ್ತು ಅಹಂಕಾರ ಇವು ಆ ಚಕ್ರದ ಅಂಚು. ಮಾಯೆಯೇ ಈ ಚಕ್ರವನ್ನು ನಡೆಸುತ್ತದೆ. ಮಿಂಚಿಗಿಂತಲೂ ಹೆಚ್ಚು ಶೀಘ್ರವಾಗಿ ಹೋಗುತ್ತಿರುವ ಈ ಚಕ್ರಕ್ಕೆ ಸ್ವಯಂ ಪರಮಾತ್ಮನೇ ಅಚ್ಚುಪರನು. ಏಕಮಾತ್ರ ಸತ್ಯಸ್ವರೂಪನಾದ ಅವನಿಗೆ ನಾವು ಶರಣಾಗಿದ್ದೇವೆ.
ಯ ಏಕವರ್ಣಂ ತಮಸಃ ಪರಂ ತತ್ ಅಲೋಕಮವ್ಯಕ್ತಮನಂತಪಾರಮ್ । ಆಸಾಂ ಚಕಾರೋಪಸುಪರ್ಣಮೇನಮುಪಾಸತೇ ಯೋಗರಥೇನ ಧೀರಾಃ ।। 29 ।।
ಏಕಮಾತ್ರ ಜ್ಞಾನಸ್ವರೂಪನೂ, ಪ್ರಕೃತಿಗೆ ಅತೀತನೂ, ಅದೃಶ್ಯನೂ ಆಗಿರುವ, ಸಮಸ್ತ ವಸ್ತುಗಳ ಮೂಲದಲ್ಲಿ ಅವ್ಯಕ್ತನಾಗಿರುವ, ದೇಶ-ಕಾಲಗಳಿಗೆ ಒಳಪಡದಿರುವ ಆ ಪ್ರಭುವೇ ಜೀವಿಯ ಹೃದಯದಲ್ಲಿ ಅಂತರ್ಯಾಮಿಯಾಗಿ ವಿರಾಜಿಸುತ್ತಾನೆ. ಧೀರರು ಭಕ್ತಿಯೋಗದ ಮೂಲಕ ಅವನನ್ನೇ ಆರಾಧಿಸುತ್ತಾರೆ.
ನ ಯಸ್ಯ ಕಶ್ಚಾತಿತಿತರ್ತಿ ಮಾಯಾಂ ಯಯಾ ಜನೋ ಮುಹ್ಯತಿ ವೇದ ನಾರ್ಥಮ್ । ತಂ ನಿರ್ಜಿತಾತ್ಮಾತ್ಮಗುಣಂ ಪರೇಶಂ ನಮಾಮ ಭೂತೇಷು ಸಮಂ ಚರಂತಮ್ ।। 30 ।।
ಅವನದೇ ಮಾಯೆಯಿಂದ ಮೋಹಿತನಾಗಿ ಜೀವನು ತನ್ನ ವಾಸ್ತವಿಕ ಲಕ್ಷ್ಯ ಅಥವಾ ಸ್ವರೂಪವನ್ನು ಮರೆಯುತ್ತಾನೆ. ಆ ಮಾಯೆಯನ್ನು ಯಾರೂ ದಾಟಲಾರರು. ಆದರೆ ಸರ್ವಶಕ್ತಿಸಂಪನ್ನನಾದ ಪ್ರಭುವು ತನ್ನ ಆ ಮಾಯೆಯನ್ನು ಮತ್ತು ಅದರ ಗುಣಗಳನ್ನು ತನ್ನ ವಶದಲ್ಲಿರಿಸಿಕೊಂಡು ಸಮಸ್ತ ಪ್ರಾಣಿಗಳ ಹೃದಯದಲ್ಲಿ ಸಮಭಾವದಿಂದ ಸಂಚರಿಸುತ್ತಾನೆ. ತನ್ನ ಪುರುಷಾರ್ಥದಿಂದ ಪಡೆಯಲಾಗದ ಅವನನ್ನು ಪುರುಷನು ಅವನ ಕೃಪೆಯಿಂದಲೇ ಪಡೆದುಕೊಳ್ಳಬಲ್ಲನು. ಅವನ ಚರಣಗಳಿಗೆ ನಾವು ನಮಸ್ಕರಿಸುತ್ತೇವೆ.
ಇಮೇ ವಯಂ ಯತ್ಪ್ರಿಯಯೈವ ತನ್ವಾ ಸತ್ತ್ವೇನ ಸೃಷ್ಟಾ ಬಹಿರಂತರಾವಿಃ । ಗತಿಂ ನ ಸೂಕ್ಷ್ಮಾಮೃಷಯಶ್ಚ ವಿದ್ಮಹೇ ಕುತೋಽಸುರಾದ್ಯಾ ಇತರಪ್ರಧಾನಾಃ ।। 31 ।।
ಅವನ ಸತ್ತ್ವಮಯ ಶರೀರದಿಂದ ಉತ್ಪನ್ನರಾಗಿರುವ ನಾವೇ ಅವನ ಒಳ-ಹೊರಗೆ ಏಕತ್ರವಾಗಿರುವ ಸ್ವರೂಪವನ್ನು ತಿಳಿಯಲಾರೆವು. ಇನ್ನು ರಜೋ-ತಮೋಗುಣ ಪ್ರಧಾನರಾದ ಅಸುರಾದಿಗಳು ಹೇಗೆ ಅವನನ್ನು ತಿಳಿಯಬಲ್ಲರು?
ಪಾದೌ ಮಹೀಯಂ ಸ್ವಕೃತೈವ ಯಸ್ಯ ಚತುರ್ವಿಧೋ ಯತ್ರ ಹಿ ಭೂತಸರ್ಗಃ । ಸ ವೈ ಮಹಾಪೂರುಷ ಆತ್ಮತಂತ್ರಃ ಪ್ರಸೀದತಾಂ ಬ್ರಹ್ಮ ಮಹಾವಿಭೂತಿಃ ।। 32 ।।
ತಾನೇ ಮಾಡಿದ ಈ ಭೂಮಿಯು ಯಾರ ಪಾದವೋ, ಆ ಭೂಮಿಯ-ಲ್ಲಿಯೇ ಯಾರು ಚತುರ್ವಿಧದ ಭೂತಸೃಷ್ಟಿಯನ್ನು ಮಾಡಿದನೋ, ಆ ಪರಮ ಸ್ವತಂತ್ರ ಮಹಾವಿಭೂತಿ ಮಹಾಪುರುಷ ಪರಬ್ರಹ್ಮನು ಪ್ರಸನ್ನನಾಗಲಿ.
ಅಂಭಸ್ತು ಯದ್ರೇತ ಉದಾರವೀರ್ಯಂ ಸಿಧ್ಯಂತಿ ಜೀವಂತ್ಯುತ ವರ್ಧಮಾನಾಃ । ಲೋಕಾ ಯತೋಽಥಾಖಿಲಲೋಕಪಾಲಾಃ ಪ್ರಸೀದತಾಂ ನಃ ಸ ಮಹಾವಿಭೂತಿಃ ।। 33 ।।
ಈ ಜಲವು ಯಾರ ವೀರ್ಯವೋ, ಅಖಿಲ ಲೋಕಗಳು ಮತ್ತು ಲೋಕಪಾಲಕರು ಯಾವ ಉದಾರವೀರ್ಯನಿಂದ ಹುಟ್ಟಿ, ಜೀವಿಸಿ, ವರ್ಧಿಸುತ್ತಾರೋ ಆ ಮಹಾವಿಭೂತಿಯು ನಮ್ಮ ಮೇಲೆ ಪ್ರಸನ್ನನಾಗಲಿ.
ಸೋಮಂ ಮನೋ ಯಸ್ಯ ಸಮಾಮನಂತಿ ದಿವೌಕಸಾಂ ಯೋ ಬಲಮಂಧ ಆಯುಃ । ಈಶೋ ನಗಾನಾಂ ಪ್ರಜನಃ ಪ್ರಜಾನಾಂ ಪ್ರಸೀದತಾಂ ನಃ ಸ ಮಹಾವಿಭೂತಿಃ ।। 34 ।।
ಸಮಸ್ತ ದೇವತೆಗಳ ಅನ್ನ, ಬಲ, ಆಯುಸ್ಸಾಗಿರುವ, ವೃಕ್ಷಗಳ ಒಡೆಯನೂ ಪ್ರಜೆಗಳನ್ನು ವೃದ್ಧಿಸುವವನೂ ಆಗಿರುವ ಸೋಮನು ಯಾರ ಮನಸ್ಸೆಂದು ವೇದಗಳು ಹೇಳುತ್ತವೆಯೋ ಆ ಮಹಾವಿಭೂತಿಯು ನಮ್ಮ ಮೇಲೆ ಪ್ರಸನ್ನಗಾಗಲಿ.
ಅಗ್ನಿರ್ಮುಖಂ ಯಸ್ಯ ತು ಜಾತವೇದಾ ಜಾತಃ ಕ್ರಿಯಾಕಾಂಡನಿಮಿತ್ತಜನ್ಮಾ । ಅಂತಃಸಮುದ್ರೇಽನುಪಚನ್ಸ್ವಧಾತೂನ್ಪ್ರಸೀದತಾಂ ನಃ ಸ ಮಹಾವಿಭೂತಿಃ ।। 35 ।।
ವೇದದ ಯಜ್ಞ-ಯಾಗಾದಿ ಕರ್ಮಕಾಂಡವನ್ನು ಸಾಂಗವಾಗಿ ನೆರವೇರ-ಲೆಂದು ಹುಟ್ಟಿದ, ಶರೀರದೊಳಗೆ ಜಠರಾಗ್ನಿಯ ರೂಪದಿಂದ ಮತ್ತು ಸಮುದ್ರದೊಳಗೆ ವಡವಾನಲ ರೂಪದಿಂದ ಅನ್ನ-ಜಲ ಮೊದಲಾದ ಧಾತುಗಳನ್ನು ಜೀರ್ಣವಾಗಿಸುವ ಜಾತವೇದ ಅಗ್ನಿಯು ಯಾರ ಮುಖವೋ ಆ ಮಹಾವಿಭೂತಿಯು ನಮ್ಮ ಮೇಲೆ ಪ್ರಸನ್ನನಾಗಲಿ.
ಯಚ್ಚಕ್ಷುರಾಸೀತ್ತರಣಿರ್ದೇವಯಾನಂ ತ್ರಯೀಮಯೋ ಬ್ರಹ್ಮಣ ಏಷ ಧಿಷ್ಣ್ಯಮ್ । ದ್ವಾರಂ ಚ ಮುಕ್ತೇರಮೃತಂ ಚ ಮೃತ್ಯುಃ ಪ್ರಸೀದತಾಂ ನಃ ಸ ಮಹಾವಿಭೂತಿಃ ।। 36 ।।
ಯಾರ ಮೂಲಕ ಜೀವಭಾವ ತೊರೆದ ನಿಷ್ಕಾಮ ಕರ್ಮಯೋಗಿಗಳು ದೇವಯಾನಮಾರ್ಗದಲ್ಲಿ ಬ್ರಹ್ಮಲೋಕವನ್ನು ಸೇರುತ್ತಾರೋ, ಯಾರು ವೇದಗಳ ಸಾಕ್ಷಾತ್ ಮೂರ್ತಿಯಾಗಿದ್ದು ಭಗವಂತನನ್ನು ಧ್ಯಾನಿಸಲು ಯೋಗ್ಯವಾದ ಧಾಮನಾಗಿರುವನೋ, ಯಾವ ಪುಣ್ಯಲೋಕಸ್ವರೂಪನು ಮುಕ್ತಿಯ ದ್ವಾರನೋ, ಯಾರು ಅಮೃತ್ಯಮಯನೂ ಕಾಲಸ್ವರೂಪನೂ ಆಗಿದ್ದರಿಂದ ಮೃತ್ಯುವೂ ಆಗಿರುವನೋ ಆ ಸೂರ್ಯನೇ ಕಣ್ಣಾಗಿರುವ ಮಹಾವಿಭೂತಿಯು ನಮ್ಮ ಮೇಲೆ ಪ್ರಸನ್ನನಾಗಲಿ.
ಪ್ರಾಣಾದಭೂದ್ಯಸ್ಯ ಚರಾಚರಾಣಾಂ ಪ್ರಾಣಃ ಸಹೋ ಬಲಮೋಜಶ್ಚ ವಾಯುಃ । ಅನ್ವಾಸ್ಮ ಸಮ್ರಾಜಮಿವಾನುಗಾ ವಯಂ ಪ್ರಸೀದತಾಂ ನಃ ಸ ಮಹಾವಿಭೂತಿಃ ।। 37 ।।
ಚರಾಚರಗಳ ಪ್ರಾಣ, ಬಲ ತೇಜಸ್ಸುಗಳನ್ನೀಯುವ ವಾಯುವು ಯಾರಿಂದ ಹುಟ್ಟಿದನೋ ಮತ್ತು ಸಾಮ್ರಾಟನಾದ ಯಾರನ್ನು ನಾವು ಸೇವರಕರಂತೆ ಹಿಂಬಾಲಿಸುತ್ತೇವೋ ಆ ಮಹಾವಿಭೂತಿಯು ನಮ್ಮ ಮೇಲೆ ಪ್ರಸನ್ನನಾಗಲಿ.
ಶ್ರೋತ್ರಾದ್ದಿಶೋ ಯಸ್ಯ ಹೃದಶ್ಚ ಖಾನಿ ಪ್ರಜಜ್ಞಿರೇ ಖಂ ಪುರುಷಸ್ಯ ನಾಭ್ಯಾಃ । ಪ್ರಾಣೇಂದ್ರಿಯಾತ್ಮಾಸುಶರೀರಕೇತಃ ಪ್ರಸೀದತಾಂ ನಃ ಸ ಮಹಾವಿಭೂತಿಃ ।। 38 ।।
ಯಾರ ಕಿವಿಗಳಿಂದ ದಿಕ್ಕುಗಳು, ಹೃದಯದಿಂದ ಇಂದ್ರಿಯಗಳು, ನಾಭಿಯಿಂದ ಆಕಾಶವು ಉಂಟಾಯಿತೋ ಮತ್ತು ಯಾರು ಪ್ರಾಣ-ಇಂದ್ರಿಯ-ಮನಸ್ಸು-ಶರೀರಗಳಿಗೆ ಆಶ್ರಯನೋ ಆ ಮಹಾವಿಭೂತಿಯು ನಮ್ಮ ಮೇಲೆ ಪ್ರಸನ್ನನಾಗಲಿ.
ಬಲಾನ್ಮಹೇಂದ್ರಸ್ತ್ರಿದಶಾಃ ಪ್ರಸಾದಾನ್ಮನ್ಯೋರ್ಗಿರೀಶೋ ಧಿಷಣಾದ್ವಿರಿಂಚಃ । ಖೇಭ್ಯಸ್ತು ಛಂದಾಂಸ್ಯೃಷಯೋ ಮೇಢ್ರತಃ ಕಃ ಪ್ರಸೀದತಾಂ ನಃ ಸ ಮಹಾವಿಭೂತಿಃ ।। 39 ।।
ಯಾರ ಬಲದಿಂದ ಮಹೇಂದ್ರನೂ, ಪ್ರಸನ್ನತೆಯಿಂದ ದೇವತೆಗಳೂ, ಕ್ರೋಧದಿಂದ ಗಿರೀಶನೂ, ಬುದ್ಧಿಯಿಂದ ಬ್ರಹ್ಮನೂ, ಇಂದ್ರಿಯಗಳಿಂದ ಋಷಿ-ವೇದಗಳು, ಹಾಗೂ ಲಿಂಗದಿಂದ ಪ್ರಜಾಪತಿಯು ಉತ್ಪನ್ನರಾ-ದರೋ ಆ ಮಹಾವಿಭೂತಿಯು ನಮ್ಮ ಮೇಲೆ ಪ್ರಸನ್ನನಾಗಲಿ.
ಶ್ರೀರ್ವಕ್ಷಸಃ ಪಿತರಶ್ಛಾಯಯಾಸಂಧರ್ಮಃ ಸ್ತನಾದಿತರಃ ಪೃಷ್ಠತೋಽಭೂತ್ । ದ್ಯೌರ್ಯಸ್ಯ ಶೀರ್ಷ್ಣೋಽಪ್ಸರಸೋ ವಿಹಾರಾತ್ಪ್ರಸೀದತಾಂ ನಃ ಸ ಮಹಾವಿಭೂತಿಃ ।। 40 ।।
ಯಾರ ವಕ್ಷಃಸ್ಥಳದಿಂದ ಶ್ರೀಯೂ, ನೆರಳಿನಿಂದ ಪಿತೃಗಳೂ, ಸ್ತನದಿಂದ ಧರ್ಮವೂ, ಬೆನ್ನಿನಿಂದ ಅಧರ್ಮವೂ, ತಲೆಯಿಂದ ಆಕಾಶವೂ, ವಿಹಾರದಿಂದ ಅಪ್ಸರೆಯರೂ ಹುಟ್ಟಿದರೋ ಆ ಮಹಾವಿಭೂತಿಯು ನಮ್ಮ ಮೇಲೆ ಪ್ರಸನ್ನನಾಗಲಿ.
ವಿಪ್ರೋ ಮುಖಾದ್ಬ್ರಹ್ಮ ಚ ಯಸ್ಯ ಗುಹ್ಯಂ ರಾಜನ್ಯ ಆಸೀದ್ಭುಜಯೋರ್ಬಲಂ ಚ । ಊರ್ವೋರ್ವಿಡೋಜೋಽಂಘ್ರಿರವೇದಶೂದ್ರೌ ಪ್ರಸೀದತಾಂ ನಃ ಸ ಮಹಾವಿಭೂತಿಃ ।। 41 ।।
ಯಾರ ಮುಖದಿಂದ ಬ್ರಾಹ್ಮಣರು ಮತ್ತು ಗುಹ್ಯ ವೇದಗಳು, ಭುಜಗಳಿಂದ ಕ್ಷತ್ರಿಯರು ಮತ್ತು ಬಲಗಳು, ತೊಡೆಗಳಿಂದ ವೈಶ್ಯರೂ, ವೃತ್ತಿ-ವ್ಯಾಪಾರ ಕುಶಲತೆಗಳೂ, ಹಾಗೂ ಯಾರ ಚರಣಗಳಿಂದ ಶೂದ್ರರೂ ಮತ್ತು ಸೇವಾವೃತ್ತಿಯು ಪ್ರಕಟಗೊಂಡರೋ ಆ ಮಹಾವಿಭೂತಿಯು ನಮ್ಮ ಮೇಲೆ ಪ್ರಸನ್ನನಾಗಲಿ.
ಲೋಭೋಽಧರಾತ್ಪ್ರೀತಿರುಪರ್ಯಭೂದ್ದ್ಯುತಿರ್ನಸ್ತಃ ಪಶವ್ಯಃ ಸ್ಪರ್ಶೇನ ಕಾಮಃ । ಭ್ರುವೋರ್ಯಮಃ ಪಕ್ಷ್ಮಭವಸ್ತು ಕಾಲಃ ಪ್ರಸೀದತಾಂ ನಃ ಸ ಮಹಾವಿಭೂತಿಃ ।। 42 ।।
ಯಾರ ಕೆಳ ತುಟಿಯಿಂದ ಲೋಭವೂ, ಮೇಲ್ತುಟಿಯಿಂದ ಪ್ರೀತಿಯೂ, ಮೂಗಿನಿಂದ ಕಾಂತಿಯೂ, ಸ್ಪರ್ಷದಿಂದ ಪಶುಗಳಿಗೆ ಪ್ರಿಯವಾದ ಕಾಮವೂ, ಹುಬ್ಬುಗಳಿಂದ ಯಮನೂ, ರೆಪ್ಪೆಗಳಿಂದ ಕಾಲವೂ ಹುಟ್ಟಿರುವರೋ ಆ ಮಹಾವಿಭೂತಿಯು ನಮ್ಮ ಮೇಲೆ ಪ್ರಸನ್ನನಾಗಲಿ.
ದ್ರವ್ಯಂ ವಯಃ ಕರ್ಮ ಗುಣಾನ್ವಿಶೇಷಂ ಯದ್ಯೋಗಮಾಯಾವಿಹಿತಾನ್ವದಂತಿ । ಯದ್ದುರ್ವಿಭಾವ್ಯಂ ಪ್ರಬುಧಾಪಬಾಧಂ ಪ್ರಸೀದತಾಂ ನಃ ಸ ಮಹಾವಿಭೂತಿಃ ।। 43 ।।
ಪಂಚಭೂತಗಳು, ಕಾಲ, ಕರ್ಮ ಮತ್ತು ಗುಣಗಳು, ಗುಣವಿಶೇಷಗಳು ಯಾರ ಯೋಗಮಾಯೆಯಿಂದ ಉಂಟಾಗಿವೆ ಎಂದು ಶಾಸ್ತ್ರಗಳು ಹೇಳುತ್ತವೆಯೋ ಆ ಮಹಾವಿಭೂತಿಯು ನಮ್ಮ ಮೇಲೆ ಪ್ರಸನ್ನನಾಗಲಿ.
ನಮೋಽಸ್ತು ತಸ್ಮಾ ಉಪಶಾಂತಶಕ್ತಯೇ ಸ್ವಾರಾಜ್ಯಲಾಭಪ್ರತಿಪೂರಿತಾತ್ಮನೇ । ಗುಣೇಷು ಮಾಯಾರಚಿತೇಷು ವೃತ್ತಿಭಿರ್ನ ಸಜ್ಜಮಾನಾಯ ನಭಸ್ವದೂತಯೇ ।। 44 ।।
ಮಾಯಾನಿರ್ಮಿತ ಗುಣಗಳಲ್ಲಿ ಆಸಕ್ತನಾಗಿಲ್ಲದ, ವಾಯುವಿನಂತೆ ಸದಾಕಾಲ ಅಸಂಗನಾಗಿರುವ, ಸಮಸ್ತ ಶಕ್ತಿಗಳೂ ಶಾಂತವಾಗಿ ತನ್ನ ಆತ್ಮಾನಂದದಿಂದ ಪರಿಪೂರ್ಣನೂ ಆತ್ಮಸ್ವರೂಪನೂ ಆದವನಿಗೆ ನಮ್ಮ ನಮಸ್ಕಾರಗಳು.
ಸ ತ್ವಂ ನೋ ದರ್ಶಯಾತ್ಮಾನಮಸ್ಮತ್ಕರಣಗೋಚರಮ್ । ಪ್ರಪನ್ನಾನಾಂ ದಿದೃಕ್ಷೂಣಾಂ ಸಸ್ಮಿತಂ ತೇ ಮುಖಾಂಬುಜಮ್ ।। 45 ।। ತೈಸ್ತೈಃ ಸ್ವೇಚ್ಛಾಭೂತೈ ರೂಪೈಃ ಕಾಲೇ ಕಾಲೇ ಸ್ವಯಂ ವಿಭೋ । ಕರ್ಮ ದುರ್ವಿಷಹಂ ಯನ್ನೋ ಭಗವಾಂಸ್ತತ್ಕರೋತಿ ಹಿ ।। 46 ।। ಕ್ಲೇಶಭೂರ್ಯಲ್ಪಸಾರಾಣಿ ಕರ್ಮಾಣಿ ವಿಫಲಾನಿ ವಾ । ದೇಹಿನಾಂ ವಿಷಯಾರ್ತಾನಾಂ ನ ತಥೈವಾರ್ಪಿತಂ ತ್ವಯಿ ।। 47 ।।
ನಿನ್ನಲ್ಲಿ ಶರಣುಬಂದಿರುವ ಮತ್ತು ನಿನ್ನ ಮಂದಹಾಸಯುಕ್ತ ಮುಖಾಂಬುಜವನ್ನು ನೋಡಲು ಕಾತರರಾಗಿರುವ ನಮಗೆ ನಿನ್ನ ದರ್ಶನವನ್ನು ನೀಡು. ವಿಭೋ! ಕಾಲಕಾಲದಲ್ಲಿ ನೀನು ಸ್ವಯಂ ಅನೇಕ ರೂಪಗಳಲ್ಲಿ ನಮಗೆ ಕಠಿಣವಾದವುಗಳನ್ನೂ ಸುಲಭಗೊಳಿಸುತ್ತೀಯೆ. ಭಗವನ್! ನಿನಗೆ ಯಾವುದೂ ಕಷ್ಟವಲ್ಲ. ವಿಷಯಾರ್ತ ದೇಹಿಗಳಿಗೆ ಕರ್ಮಮಾಡುವುದು ಕಷ್ಟಕರವೆನಿಸುತ್ತದೆ. ಅಲ್ಪಫಲವನ್ನು ಕೊಡುತ್ತವೆ ಅಥವಾ ವಿಫಲವೂ ಆಗುತ್ತದೆ. ಆದರೆ ನಿನಗೆ ಅರ್ಪಿಸಿ ಮಾಡುವ ಕರ್ಮಗಳು ಸುಖಕರವಾಗುತ್ತವೆ ಮತ್ತು ಫಲರೂಪಗಳಾಗುತ್ತವೆ.
ನಾವಮಃ ಕರ್ಮಕಲ್ಪೋಽಪಿ ವಿಫಲಾಯೇಶ್ವರಾರ್ಪಿತಃ । ಕಲ್ಪತೇ ಪುರುಷಸ್ಯೈವ ಸ ಹ್ಯಾತ್ಮಾ ದಯಿತೋ ಹಿತಃ ।। 48 ।। ಯಥಾ ಹಿ ಸ್ಕಂಧಶಾಖಾನಾಂ ತರೋರ್ಮೂಲಾವಸೇಚನಮ್ । ಏವಮಾರಾಧನಂ ವಿಷ್ಣೋಃ ಸರ್ವೇಷಾಮಾತ್ಮನಶ್ಚ ಹಿ ।। 49 ।। ನಮಸ್ತುಭ್ಯಮನಂತಾಯ ದುರ್ವಿತರ್ಕ್ಯಾತ್ಮಕರ್ಮಣೇ । ನಿರ್ಗುಣಾಯ ಗುಣೇಶಾಯ ಸತ್ತ್ವಸ್ಥಾಯ ಚ ಸಾಂಪ್ರತಮ್ ।। 50 ।।
ಈಶ್ವರಾರ್ಪಿತ ಕರ್ಮವು ಅಲ್ಪವಾದರೂ ವಿಫಲವಾಗುವುದಿಲ್ಲ. ಏಕೆಂದರೆ ಅವನು ಜೀವರ ಪರಮ ಹಿತೈಷಿ, ಪ್ರಿಯ, ಮತ್ತು ಆತ್ಮ. ಮರದ ಬೇರಿಗೆ ನೀರೆರದರೆ ಅದರ ಕಾಂಡ-ರೆಂಬೆಗಳಿಗೆ ಹೇಗೆ ನೀರೆರದಂತಾಗುತ್ತದೆಯೋ ಹಾಗೆ ವಿಷ್ಣುವಿನ ಆರಾಧನೆಯಿಂದ ತನ್ನನ್ನೂ ಸೇರಿಸಿಕೊಂಡು ಎಲ್ಲವನ್ನೂ ಆರಾಧಿಸಿದಂತೆ. ಅನಂತನೂ, ದುರ್ವಿತರ್ಕನೂ, ಆತ್ಮಕರ್ಮಣಿಯೂ, ನಿರ್ಗುಣನೂ, ಗುಣೇಶನೂ, ಸತ್ತ್ವಸ್ಥಾಯಿಯೂ ಆದ ನಿನಗೆ ಪುನಃ ಪುನಃ ನಮಸ್ಕರಿಸುತ್ತೇನೆ.””
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮಸ್ಕಂಧೇ ಅಮೃತಮಥನೇ ಪಂಚಮೋಽಧ್ಯಾಯಃ।।