ಶ್ರೀವರಾಹಮಹಾಪುರಾಣ: ಅಧ್ಯಾಯ 11

 

ಶ್ರೀವರಾಹ ಉವಾಚ । ತತಸ್ತಮೀದೃಶಂ ದೃಷ್ಟ್ವಾ ತದಾ ಗೌರಮುಖಾಶ್ರಮಮ್ । ದುರ್ಜಯಶ್ಚಿಂತಯಾಮಾಸ ರಮ್ಯಮಾಶ್ರಮಮಂಡಲಮ್ ।। 1 ।। ಪ್ರವಿಶಾಮ್ಯತ್ರ ಪಶ್ಯಾಮಿ ಋಷೀನ್ ಪರಮಧಾರ್ಮಿಕಾನ್ । ಚಿಂತಯಿತ್ವಾ ತದಾ ರಾಜಾ ಪ್ರವಿವೇಶ ತಮಾಶ್ರಮಮ್ ।। 2 ।। ತಸ್ಯ ಪ್ರವಿಷ್ಟಸ್ಯ ತತೋ ರಾಜ್ಞಃ ಪರಮಹರ್ಷಿತಃ । ಚಕಾರ ಪೂಜಾಂ ಧರ್ಮಾತ್ಮಾ ತದಾ ಗೌರಮುಖೋ ಮುನಿಃ ।। 3 ।। ಸ್ವಾಗತಾದಿಕ್ರಿಯಾಃ ಕೃತ್ವಾ ಕಥಾಂತೇ ತಂ ಮಹಾಮುನಿಃ । ಸ್ವಶಕ್ತ್ಯಾಽಹಂ ನೃಪಶ್ರೇಷ್ಠ ಸಾನುಗಸ್ಯ ಚ ಭೋಜನಮ್ ।। 4 ।। ಕರಿಷ್ಯಾಮಿ ಪ್ರಮುಚ್ಯಂತಾಂ ಸಾಧು ವಾಹಾ ಇತಿ ದ್ವಿಜಃ । ಏವಮುಕ್ತ್ವಾ ಸ್ಥಿತಸ್ತೂಷ್ಣೀಂ ಸ ಮುನಿಃ ಸಂಶಿತವ್ರತಃ ।। 5 ।। ರಾಜಾಽಪಿ ತಸ್ಥೌ ತದ್ಭಕ್ತ್ಯಾ ಸ್ವಸಹಾಯೈಃ ಸಮನ್ವಿತಃ ।

ಶ್ರೀವರಾಹನು ಹೇಳಿದನು: “ನಂತರ ರಾಜಾ ದುರ್ಜಯನು ಇಂತಹ ಗೌರಮುಖಾಶ್ರಮವನ್ನು ನೋಡಿ “ರಮ್ಯವಾದ ಈ ಆಶ್ರಮಕ್ಕೆ ಹೋಗಿ ರಮಧಾರ್ಮಿಕ ಋಷಿಗಳನ್ನು ನೋಡುತ್ತೇನೆ” ಎಂದು ಯೋಚಿಸಿ ಆ ಆಶ್ರಮವನ್ನು ಪ್ರವೇಶಿಸಿದನು. ಆಗ ಪ್ರವೇಶಿಸಿದ ರಾಜನನ್ನು ಧರ್ಮಾತ್ಮಾ ಗೌರಮುಖ ಮುನಿಯು ಪರಮಹರ್ಷಿತನಾಗಿ ಪೂಜೆಯನ್ನು ಮಾಡಿದನು. ಸ್ವಾಗತಾದಿ ಕ್ರಿಯೆಗಳನ್ನು ಮಾಡಿ ಕೊನೆಯಲ್ಲಿ ಆ ದ್ವಿಜ ಮಹಾಮುನಿಯು ಅವನಿಗೆ ಹೇಳಿದನು: “ನೃಪಶ್ರೇಷ್ಠ! ಸ್ವಶಕ್ತಿಯಿಂದ ಪರಿವಾರಸಮೇತನಾದ ನಿನಗೆ ಭೋಜನವನ್ನು ಮಾಡಿಸುತ್ತೇನೆ. ವಾಹನಗಳು ಸರಿಯಾಗಿ ಇಳಿಯಲಿ” ಹೀಗೆ ಹೇಳಿ ಸಂಶಿತವ್ರತ ಮುನಿಯು ಸುಮ್ಮನಾದನು. ರಾಜನೂ ಕೂಡ ಭಕ್ತಿಯಿಂದ ತನ್ನ ಸಹಾಯಕರೊಡನೆ ಅಲ್ಲಿ ತಂಗಿದನು.

ಅಕ್ಷೌಹಿಣ್ಯೋ ಬಲಸ್ಯಾಸ್ಯ ಪಂಚಮಾತ್ರಾಸ್ತದಾ ಸ್ಥಿತಾಃ । ಅಯಂ ಚ ತಾಪಸಃ ಕಿಂ ಮೇ ದಾಸ್ಯತೇ ಭೋಜನಂ ತ್ವಿಹ ।। 6 ।। ನಿಮಂತ್ರ್ಯ ದುರ್ಜಯಂ ವಿಪ್ರಸ್ತದಾ ಗೌರಮುಖೋ ನೃಪಮ್ । ಚಿಂತಯಾಮಾಸ ಕಿಂ ಚಾಸ್ಯ ಮಯಾ ದೇಯಂ ತು ಭೋಜನಮ್ ।। 7 ।। ಏವಂ ಚಿಂತಯತಸ್ತಸ್ಯ ಮಹರ್ಷೇರ್ಭಾವಿತಾತ್ಮನಃ । ಸ್ಥಿತೋ ಮನಸಿ ದೇವೇಶೋ ಹರಿರ್ನಾರಾಯಣಃ ಪ್ರಭುಃ ।। 8 ।। ತತಃ ಸಂಸ್ಮೃತ್ಯ ಮನಸಾ ದೇವಂ ನಾರಾಯಣಂ ತದಾ । ತೋಷಯಾಮಾಸ ಗಂಗಾಯಾಂ ಪ್ರವಿಶ್ಯ ಮುನಿಸತ್ತಮಃ ।। 9 ।।

ಅವನ ಸೈನ್ಯವು ಆಗ ಐದು ಅಕ್ಷೋಹಿಣಿಯಿದ್ದಿತು. “ಇವನಾದರೋ ತಪಸ್ವಿ. ಇಲ್ಲಿ ಇವನು ನಮಗೆ ಏನು ಊಟಮಾಡಿಸಿಯಾನು! ಎಂದು ಯೋಚಿಸಿದನು. ವಿಪ್ರ ಗೌರಮುಖನು ನೃಪನಿಗೆ ಊಟಕ್ಕೆ ಹೇಳಿ “ಅವನಿಗೆ ನಾನೇನು ಊಟಮಾಡಿಸಲಿ!” ಎಂದು ಯೋಚಿಸಿದನು. ಹಾಗೆ ಆಲೋಚಿಸುತ್ತಿರಲು ಪವಿತ್ರಾತ್ಮನಾದ ಆ ಮಹರ್ಷಿಗೆ ಪ್ರಭು ದೇವೇಶ ಹರಿ ನಾರಾಯಣನು ಮನಸ್ಸಿಗೆ ಬಂದನು. ಆ ಮುನಿಸತ್ತಮನು ಗಂಗೆಯಲ್ಲಿ ಸ್ನಾನಮಾಡಿ ದೇವ ನಾರಾಯಣನನ್ನು ಮನಸಾಅ ಸ್ಮರಿಸಿ ಸಂತೋಷಪಡಿಸಿದನು.

ಧರಣ್ಯುವಾಚ । ಕಥಂ ಗೌರಮುಖೋ ವಿಷ್ಣುಂ ತೋಷಯಾಮಾಸ ಭೂಧರ । ಏತನ್ಮೇ ಕೌತುಕಂ ಶ್ರೋತುಂ ಸಮ್ಯಗಿಚ್ಛಾ ಪ್ರವರ್ತ್ತತೇ ।। 10 ।।

ಧರಣಿಯು ಹೇಳಿದಳು: “ಭೂಧರ! ಗೌರಮುಖನು ವಿಷ್ಣುವನ್ನು ಹೇಗೆ ಸಂತೋಷಪಡಿಸಿದನು ಎನ್ನುವುದನ್ನು ಕೇಳಲು ನನಗೆ ಬಹಳ ಆಸೆಯೂ ಕುತೂಹಲವೂ ಉಂಟಾಗಿದೆ.”

ವರಾಹ ಉವಾಚ । ನಮೋಽಸ್ತು ವಿಷ್ಣವೇ ನಿತ್ಯಂ ನಮಸ್ತೇ ಪೀತವಾಸಸೇ । ನಮಸ್ತೇ ಚಾದ್ಯರೂಪಾಯ ನಮಸ್ತೇ ಜಲರೂಪಿಣೇ ।। 11 ।। ನಮಸ್ತೇ ಸರ್ವಸಂಸ್ಥಾಯ ನಮಸ್ತೇ ಜಲಶಾಯಿನೇ । ನಮಸ್ತೇ ಕ್ಷಿತಿರೂಪಾಯ ನಮಸ್ತೇ ತೇಜಸಾತ್ಮನೇ ।। 12 ।। ನಮಸ್ತೇ ವಾಯುರೂಪಾಯ ನಮಸ್ತೇ ವ್ಯೋಮರೂಪಿಣೇ । ತ್ವಂ ದೇವಃ ಸರ್ವಭೂತಾನಾಂ ಪ್ರಭುಸ್ತ್ವಮಸಿ ಹೃಚ್ಛಯಃ ।। 13 ।। ತ್ವಮೋಂಕಾರೋ ವಷಟ್ಕಾರಃ ಸರ್ವತ್ರೈವ ಚ ಸಂಸ್ಥಿತಃ । ತ್ವಮಾದಿಃ ಸರ್ವದೇವಾನಾಂ ತವ ಚಾದಿರ್ನ ವಿದ್ಯತೇ ।। 14 ।। ತ್ವಂ ಭೂಸ್ತ್ವಂ ಚ ಭುವಃ ಸ್ವಸ್ತ್ವಂ ಜನಸ್ತ್ವಂ ಮಹಸ್ಮೃತಃ । ತ್ವಂ ತಪಸ್ತ್ವಂ ಚ ಸತ್ಯಂ ಚ ತ್ವಯಿ ದೇವ ಚರಾಚರಮ್ ।। 15 ।। ತ್ವತ್ತೋ ಭೂತಮಿದಂ ಸರ್ವಂ ವಿಶ್ವಂ ತ್ವತ್ತೋ ಋಗಾದಯಃ । ತ್ವತ್ತಃ ಶಾಸ್ತ್ರಾಣಿ ಜಾತಾನಿ ತ್ವತ್ತೋ ಯಜ್ಞಾಃ ಪ್ರತಿಷ್ಠಿತಾಃ ।। 16 ।। ತ್ವತ್ತೋ ವೃಕ್ಷಾ ವೀರುಧಶ್ಚ ತ್ವತ್ತಃ ಸರ್ವಾ ವನೌಷಧೀಃ । ಪಶವಃ ಪಕ್ಷಿಣಃ ಸರ್ಪಾಸ್ತ್ವತ್ತ ಏವ ಜನಾರ್ದನ ।। 17 ।।

ವರಾಹನು ಹೇಳಿದನು: “ವಿಷ್ಣುವಿಗೆ ನಮಸ್ಕಾರ! ಪೀತಾಂಬರಧಾರಿಯಾದ ನಿನಗೆ ನಿತ್ಯವೂ ನಮಸ್ಕರಿಸುತ್ತೇನೆ. ಆದಿರೂಪನೂ ಜಲಮತ್ಸ್ಯರೂಪಿಯೂ ಆದ ನಿನಗೆ ನಮಸ್ಕಾರ. ಸರ್ವವ್ಯಾಪಕನೂ ಜಲಶಾಯಿನಿಯೂ ಆದ ನಿನಗೆ ನಮಸ್ಕಾರ. ಭೂರೂಪನೂ ತೇಜೋರೂಪನೂ ಆದ ನಿನಗೆ ನಮಸ್ಕಾರ. ವಾಯುರೂಪನಾದ ನಿನಗೆ ನಮಸ್ಕಾರ. ಆಕಾಶರೂಪನಾದ ನಿನಗೆ ನಮಸ್ಕಾರ. ಸರ್ವಭೂತಗಳ ದೇವನು ನೀನು. ಹೃದದಯಲ್ಲಿ ಮಲಗಿರುವ ಪ್ರಭುವೂ ನೀನೇ. ಓಂಕಾರವು ನೀನೇ. ವಷಟ್ಕಾರವೂ ನೀನೇ. ಎಲ್ಲೆಡೆಯಲ್ಲಿಯೂ ಎಲ್ಲರಲ್ಲೂ ಇರುವವನು ನೀನೇ. ದೇವತೆಗಳೆಲ್ಲರಿಗೂ ನೀನು ಆದಿಯು. ಆದರೆ ನಿನಗೆ ಆದಿಯಿಲ್ಲ. ಭೂ, ಭುವ, ಸುವ, ಮಹ, ಜನ, ತಪ ಮತ್ತು ಸತ್ಯ ಎಂಬ ಲೋಕವೆಲ್ಲವೂ ನೀನೇ. ದೇವ! ಚರಾಚರವೆಲ್ಲವೂ ನಿನ್ನಲ್ಲಿದೆ. ಇರುವ ಈ ಎಲ್ಲವೂ, ವಿಶ್ವವೆಲ್ಲವೂ ನಿನ್ನಿಂದಲೇ ಆಗಿವೆ. ಋಗಾದಿ ವೇದಗಳೂ ಸರ್ವಶಾಸ್ತ್ರಗಳೂ ನಿನ್ನಿಂದಲೇ ಉದಿಸಿವೆ. ಯಜ್ಞಗಳೂ ನಿನ್ನಿಂದಲೇ ನೆಲೆಸಿವೆ. ಜನಾರ್ದನ! ಮರಗಳೂ, ಪೊದೆಗಳೂ, ಎಲ್ಲ ವನೌಷಧಿಗಳೂ, ಪಶು-ಪಕ್ಷಿಗಳೂ ಎಲ್ಲವೂ ನಿನ್ನಿಂದಲೇ ಆಗಿವೆ.

ಮಮಾಪಿ ದೇವದೇವೇಶ ರಾಜಾ ದುರ್ಜಯಸಂಜ್ಞಿತಃ । ಆಗತೋಽಭ್ಯಾಗತಸ್ತಸ್ಯ ಆತಿಥ್ಯಂ ಕರ್ತುಮುತ್ಸಹೇ ।। 18 ।। ತಸ್ಯ ಮೇ ನಿರ್ಧನಸ್ಯಾದ್ಯ ದೇವದೇವ ಜಗತ್ಪತೇ । ಭಕ್ತಿನಮ್ರಸ್ಯ ದೇವೇಶ ಕುರುಷ್ವಾನ್ನಾದ್ಯಸಂಚಯಮ್ ।। 19 ।। ಯಂ ಯಂ ಸ್ಪೃಶಾಮಿ ಹಸ್ತೇನ ಯಂ ಯಂ ಪಶ್ಯಾಮಿ ಚಕ್ಷುಷಾ । ಕಾಷ್ಠಂ ವಾ ತೃಣಕಂದಂ ವಾ ತತ್ತದನ್ನಂ ಚತುರ್ವಿಧಮ್ ।। 20 ।। ತಥಾ ತ್ವನ್ಯತಮಂ ವಾಽಪಿ ಯದ್ಧ್ಯಾತಂ ಮನಸಾ ಮಯಾ । ತತ್ಸರ್ವಂ ಸಿದ್ಧ್ಯತಾಂ ಮಹ್ಯಂ ನಮಸ್ತೇ ಪರಮೇಶ್ವರ ।। 21 ।।

ದೇವದೇವೇಶ! ದುರ್ಜಯನೆಂಬ ರಾಜನು ನನ್ನ ಅಭ್ಯಾಗತನಾಗಿ ಬಂದಿದ್ದಾನೆ. ಅವನ ಆತಿಥ್ಯವನ್ನು ಮಾಡಬಯಸುತ್ತೇನೆ. ದೇವದೇವ! ಜಗತ್ಪತೇ! ಇಂದು ನಿರ್ಧನನೂ, ಅತಿಥಿಸತ್ಕಾರವನ್ನುಂಟು ಮಾಡಬಯಸಿದವನೂ, ನಿನ್ನ ಭಕ್ತಿಭಾರದಿಂದ ಬಾಗಿದವನೂ ಆದ ನನಗೆ ಅನ್ನ ಪಾನೀಯಗಳನ್ನು ಕರುಣಿಸು. ನಾನು ಕಡ್ಡಿಯನ್ನಾಗಲೀ, ಹುಲ್ಲನ್ನಾಗಲೀ, ಗೆಡ್ಡೆಯನ್ನಾಗಲೀ ಯಾವ್ಯಾವುದನ್ನು ಕೈಯಿಂದ ಮುಟ್ಟುತ್ತೇನೋ, ಕಣ್ಣಿಂದ ನೋಡುತ್ತೇನೋ, ಅವೆಲ್ಲವೂ ಚತುರ್ವಿಧದ ಭಕ್ಷ್ಯಭೋಜ್ಯಾದಿಗಳಾಗಲಿ. ಅಲ್ಲದೇ ಮನಸ್ಸಿನಲ್ಲಿ ನಾನು ಬೇರೆ ಯಾವುದನ್ನು ಸ್ಮರಿಸಿದರೂ ಅವೆಲ್ಲವೂ ನನಗೆ ಸಿದ್ಧಿಸಲಿ. ಪರಮೇಶ್ವರ! ನಿನಗೆ ನಮಸ್ಕಾರ!””

ವರಾಹ ಉವಾಚ । ಇತಿ ಸ್ತುತ್ಯಾ ತು ದೇವೇಶಸ್ತುತೋಷ ಜಗತಾಂ ಪತಿಃ । ಮುನೇಸ್ತಸ್ಯ ಸ್ವಕಂ ರೂಪಂ ದರ್ಶಯಾಮಾಸ ಕೇಶವಃ ।। 22 ।। ಉವಾಚ ಸುಪ್ರಸನ್ನಾತ್ಮಾ ಬ್ರೂಹಿ ವಿಪ್ರ ವರಂ ಪರಮ್ । ಏವಂ ಶ್ರುತ್ವಾಽಕ್ಷಿಣೀ ಯಾವದುನ್ಮೀಲಯತಿ ವೈ ಮುನಿಃ ।। 23 ।। ತದಾ ಶಂಖಗದಾಪಾಣಿಃ ಪೀತವಾಸಾ ಜನಾರ್ದನಃ । ಗರುಡಸ್ಥೋಽಪಿ ತೇಜಸ್ವೀ ದ್ವಾದಶಾದಿತ್ಯಸುಪ್ರಭಃ ।। 24 ।। ದಿವಿ ಸೂರ್ಯಸಹಸ್ರಸ್ಯ ಭವೇದ್ಯುಗಪದುತ್ಥಿತಿಃ । ಯದಿ ಭಾಃ ಸದೃಶೀ ಸಾ ಸ್ಯಾದ್ಭಾಸಸ್ತಸ್ಯ ಮಹಾತ್ಮನಃ ।। 25 ।। ತತ್ರೈಕಸ್ಥಂ ಜಗತ್ ಕೃತ್ಸ್ನಂ ಪ್ರವಿಭಕ್ತಮನೇಕಧಾ । ದದರ್ಶ ಸ ಮುನಿರ್ದೇವಿ ವಿಸ್ಮಯೋತ್ಫುಲ್ಲಲೋಚನಃ ।। 26 ।। ನನಾಮ ಶಿರಸಾ ದೇವಂ ಕೃತಾಂಜಲಿರಥಾಬ್ರವೀತ್ । ಯದಿ ಮೇ ವರದೋ ದೇವೋ ಭೂಯಾದ್ ಭಕ್ತಸ್ಯ ಕೇಶವಃ ।। 27 ।। ಇದಾನೀಮೇಷ ನೃಪತಿರ್ಯಥಾ ಸಬಲವಾಹನಃ । ಮಮಾಶ್ರಮೇ ಕೃತಾಹಾರಃ ಶ್ವಃ ಪ್ರಯಾತಾ ಸ್ವಕಂ ಗೃಹಮ್ ।। 28 ।। ಇತ್ಯುಕ್ತಸ್ತಸ್ಯ ದೇವೇಶೋ ವರದಃ ಸಂಬಭೂವ ಹ । ಚಿತ್ತಸಿದ್ಧಿಂ ದದೌ ತಸ್ಮೈ ಮಣಿಂ ಚ ಸುಮಹಾಪ್ರಭಮ್ ।। 29 ।। ತಂ ದತ್ತ್ವಾಽಂತರ್ದಧೇ ದೇವಃ ಸ ಚ ಗೌರಮುಖೋ ಮುನಿಃ । ಜಗಾಮ ಚಾಶ್ರಮಂ ಪುಣ್ಯಂ ನಾನಾ ಋಷಿನಿಷೇವಿತಮ್ ।। 30 ।।

ವರಾಹನು ಹೇಳಿದನು: “ಹೀಗೆ ಮಾಡಿದ ಸ್ತುತಿಯಿಂದ ಜಗದೊಡೆಯ ದೇವೇಶನು ಸಂತೋಷಗೊಂಡು ಆ ಮುನಿಗೆ ತನ್ನ ರೂಪವನ್ನು ತೋರಿಸಿದನು. ಸುಪ್ರಸನ್ನಾತ್ಮನಾಗಿ ಹೇಳಿದನು: “ವಿಪ್ರ! ಬೇರೆ ವರವನ್ನು ಕೇಳು” ಎಂದನು. ಅದನ್ನು ಕೇಳಿ ಆ ಮುನಿಯು ಕಣ್ಣುಗಳನ್ನು ತೆರೆದು ನೋಡಿದಾಗ ಶಂಖ-ಚಕ್ರಗದೆಗಳನ್ನು ಕೈಯಲ್ಲಿ ಹಿಡಿದವನೂ, ಪೀತಾಂಬರಧಾರಿಯೂ, ಗರುಡ-ವನ್ನೇರಿದವನೂ, ತೇಜಸ್ವಿಯೂ, ದ್ವಾದಶಾದಿತ್ಯರಂತೆ ಕಾಂತಿಯುಳ್ಳವನೂ, ಆಕಾಶದಲ್ಲಿ ಸಹಸ್ರ ಸೂರ್ಯರು ಏಕಕಾಲದಲ್ಲಿ ಉದಯಿಸಿದರೆ ಹೇಗೋ ಹಾಗೆ ಹೊಳೆಯುವವನೂ, ಅನೇಕವಾಗಿ ವಿಭಜನೆಗೊಂಡಿದ್ದರೂ ಅಲ್ಲಿ ಒಂದೆಡೆಯಲ್ಲಿ ಸೇರಿರುವ ಸಮಸ್ತ ಜಗದ್ರೂಪನಾದ ಜನಾರ್ದನನನ್ನು ಆಶ್ಚರ್ಯದಿಂದ ಕಣ್ಣುಗಳನ್ನು ಅರಳಿಸಿ ನೋಡಿದನು. ಮುನಿಯು ದೇವನಿಗೆ ತಲೆಬಾಗಿ ವಂದಿಸಿ, ಕೈಮುಗಿದುಕೊಂಡು ಹೇಳಿದನು: “ಕೇಶವ! ದೇವ! ಭಕ್ತನಿಗೆ ವರವನ್ನು ಕೊಡುವಂತಿದ್ದರೆ ನಾಳೆ ತನ್ನ ಮನೆಗೆ ಹೋಗುವ ದುರ್ಜಯ ರಾಜನು ಸಬಲವಾಹನನಾಗಿ ನನ್ನ ಆಶ್ರಮದಲ್ಲಿ ಈಗಲೇ ಊಟಮಾಡುವಂತಾಗಲು ಅನುಗ್ರಹಿಸು.” ಹೀಗೆ ಪ್ರಾರ್ಥಿಸಿದ ಅವನಿಗೆ ದೇವೇಶನು ವರದನಾದನು. ಚಿತ್ತಸಿದ್ಧಿಯನ್ನುಂಟುಮಾಡುವ ಮಹಾಪ್ರಭೆಯ ಮಣಿಯೊಂದನ್ನು ಅವನಿಗಿತ್ತನು. ಅದನ್ನು ಕೊಟ್ಟು ದೇವನು ಅಂತರ್ಧಾನನಾದನು. ಮುನಿ ಗೌರಮುಖನು ನಾನಾ ಋಷಿಸಂಸೇವಿತವಾದ ತನ್ನ ಪುಣ್ಯ ಆಶ್ರಮಕ್ಕೆ ಮರಳಿದನು.

ತತ್ರ ಗತ್ವಾ ಸ ವಿಪ್ರೇಂದ್ರಶ್ಚಿಂತಯಮಾಸ ವೈ ಮುನಿಃ । ಹಿಮವಚ್ಛಿಖರಾಕಾರಂ ಮಹಾಭ್ರಮಿವ ಚೋನ್ನತಮ್ । ಶಶಾಂಕರಶ್ಮಿಸಂಕಾಶಂ ಗೃಹಂ ವೈಶಿಕಭೂಮಿಕಮ್ ।। 31 ।। ತಾದೃಶಾನಾಂ ಸಹಸ್ರಾಣಿ ಲಕ್ಷಕೋಟ್ಯಶ್ಚ ಸರ್ವಶಃ । ಗೃಹಾಣಿ ನಿರ್ಮಮೇ ವಿಪ್ರೋ ವಿಷ್ಣೋರ್ಲಬ್ಧವರಸ್ತದಾ ।। 32 ।। ಪ್ರಾಕಾರಾಣಿ ತತೋಪಾಂತೇ ತಲ್ಲಗ್ನೋದ್ಯಾನಕಾನಿ ಚ । ಕೋಕಿಲಾಕುಲಘುಷ್ಟಾನಿ ನಾನಾದ್ವಿಜವರಾಣಿ ಚ । ಚಂಪಕಾಶೋಕಪುನ್ನಾಗನಾಗಕೇಸರವಂತಿ ಚ ।। 33 ।। ನಾನಾಜಾತ್ಯಸ್ತಥಾ ವೃಕ್ಷಾ ಗೃಹೋದ್ಯಾನೇಷು ಸರ್ವಶಃ । ಹಸ್ತಿನಾಂ ಹಸ್ತಿಶಾಲಾಶ್ಚ ತುರಗಾಣಾಂ ಚ ಮಂದುರಾಃ ।। 34 ।। ಚಕಾರ ಸಂ ಚಯಾನ್ವಿಪ್ರೋ ನಾನಾಭಕ್ಷ್ಯಸ್ಯ ಸರ್ವಶಃ । ಭಕ್ಷ್ಯಂ ಭೋಜ್ಯಂ ತಥಾ ಲೇಹ್ಯಂ ಚೋಷ್ಯಂ ಬಹುವಿಧಂ ತಥಾ । ಚಕಾರಾನ್ನಾದ್ಯನಿಚಯಂ ಹೇಮಪಾತ್ರಾಣಿ ಸರ್ವತಃ ।। 35 ।। ಏವಂ ಕೃತ್ವಾ ಸ ವಿಪ್ರಸ್ತು ರಾಜಾನಂ ಭೂರಿತೇಜಸಮ್ । ಉವಾಚ ಸರ್ವಸೈನ್ಯಾನಿ ಪ್ರವಿಶಂತು ಗೃಹಾನಿತಿ ।। 36 ।।

ವಿಷ್ಣುವಿನಿಂದ ವರವನ್ನು ಪಡೆದಿದ್ದ ಆ ಮುನಿಯು ಅಲ್ಲಿಗೆ ಹೋಗಿ, ಆಲೋಚಿಸಿ, ಹಿಮವತ್ಪರ್ವತ ಶಿಖರಾಕಾರವೂ ದೊಡ್ಡ ಮೋಡದಂತೆ ಉನ್ನತವೂ ಚಂದ್ರಕಾಂತಿಗೆ ಸಮಾನ ಕಾಂತಿಯುಳ್ಳದ್ದೂ, ನೂರು ಅಂತಸ್ತುಗಳುಳ್ಳದ್ದೂ ಆದ ಕೋಟಿ ಸಂಖ್ಯೆಯ ಮನೆಗಳನ್ನು ಎಲ್ಲೆಲ್ಲೂ ನಿರ್ಮಿಸಿದನು. ಆ ಮನೆಗಳಿಗೆ ಪ್ರಾಕಾರಗಳೂ, ಸಮೀಪದಲ್ಲಿಯೇ ಅವಕ್ಕೆ ಸಂಬಂಧಿಸಿ-ದಂತೆ ಗುಂಪುಕೂಡಿದ ಕೋಗಿಲೆಗಳ ಧ್ವನಿಯುಳ್ಳವೂ, ಬಗೆ ಬಗೆಯ ಸುಂದರ ಹಕ್ಕಿಗಳುಳ್ಳವೂ, ಸಂಪಿಗೆ, ಅಶೋಕ, ಪುನ್ನಾಗ, ನಾಗಕೇಸರಾದಿ ವೃಕ್ಷಗಳಿದ್ದ ಉದ್ಯಾನವನಗಳೂ ಇದ್ದವು. ಆನೆಗಳಿಗೆ ಗಜಶಾಲೆಗಳೂ, ಕುದುರೆಗಳಿಗೆ ಲಾಯಗಳೂ ಇದ್ದವು. ಆ ವಿಪ್ರನು ಎಲ್ಲೆಲ್ಲೂ ನಾನಾ ಭಕ್ಷ್ಯಗಳ ರಾಶಿಗಳನ್ನು ಸಿದ್ಧಪಡಿಸಿದನು. ಭಕ್ಷ್ಯ, ಭೋಜ್ಯ, ಲೇಹ್ಯ, ಚೋಷ್ಯ, ಪಾನೀಯಗಳೆಂಬ ಬಹುವಿಧದ ಆಹಾರಪದಾರ್ಥಗಳನ್ನೂ ಅನ್ನವೇ ಮೊದಲಾದುವನ್ನಿರಿಸಲೂ ಬಡಿಸಲೂ ಬೇಕಾದ ಚಿನ್ನದ ಪಾತ್ರೆಗಳನ್ನೂ ಎಲ್ಲೆಲ್ಲೂ ಏರ್ಪಡಿಸಿದನು. ಹೀಗೆ ಮಾಡಿ ವಿಪ್ರನು ಭೂರಿತೇಜಸ ರಾಜನಿಗೆ “ಸರ್ವಸೇನೆಗಳೂ ಮನೆಗಳೊಳಕ್ಕೆ ಹೋಗಲಿ” ಎಂದು ಹೇಳಿದನು.

ಏವಮುಕ್ತಸ್ತತೋ ರಾಜಾ ತದ್ಗೃಹಂ ಪರ್ವತೋಪಮಮ್ । ಪ್ರವಿವೇಶಾಂತರೇಷ್ವನ್ಯೇ ಭೃತ್ಯಾ ವಿವಿಶುರಾಶು ವೈ ।। 37 ।। ತತಸ್ತೇಷು ಪ್ರವಿಷ್ಟೇಷು ತದಾ ಗೌರಮುಖೋ ಮುನಿಃ । ಪ್ರಗೃಹ್ಯ ತಂ ಮಣಿಂ ದಿವ್ಯಂ ರಾಜಾನಂ ಚೇದಮಬ್ರವೀತ್ ।। 38 ।। ಮಜ್ಜನಾಭ್ಯವಹಾರಾರ್ಥಂ ಪಥಿ ಶ್ರಮಕೃತೇ ತಥಾ । ವಿಲಾಸಿನೀಸ್ತಥಾ ದಾಸಾನ್ ಪ್ರೇಷಯಿಷ್ಯಾಮಿ ತೇ ನೃಪ ।। 39 ।। ಏವಮುಕ್ತ್ವಾ ಸ ವಿಪ್ರೇಂದ್ರಸ್ತಂ ಮಣಿಂ ವೈಷ್ಣವಂ ಶುಭಮ್ । ಏಕಾಂತೇ ಸ್ಥಾಪಯಾಮಾಸ ರಾಜ್ಞಸ್ತಸ್ಯ ಪ್ರಪಶ್ಯತಃ ।। 40 ।।

ಹೀಗೆ ಹೇಳಲು ರಾಜನು ಪರ್ವತೋಪಮವಾದ ಆ ಗೃಹವನ್ನು ಪ್ರವೇಶಿಸಿದನು. ಅನ್ಯ ಗೃಹಗಳಲ್ಲಿ ಬೇರೆಯ ಪರಿವಾರದವರು ಮತ್ತು ಸೇವಕರು ಹೋಗಿ ಸೇರಿದರು. ಅವರು ಪ್ರವೇಶಿಸಿದ ನಂತರ ಗೌರಮುಖ ಮುನಿಯು ಆ ದಿವ್ಯಮಣಿಯನ್ನು ತೆಗೆದುಕೊಂಡು ರಾಜನಿಗೆ ಹೇಳಿದನು: “ನೃಪ! ಪ್ರಯಾಣದ ಶ್ರಮವನ್ನು ಹೋಗಲಾಡಿಸಲಸ್ನಾನಭೋಜನೆಗಳಿಗೆ ಹೊರಡುವ ನಿನಗೆ ಉಪಚಾರಮಾಡಲು ವಿಲಾಸಿನಿಯರನ್ನೂ ಸೇವಕರನ್ನೂ ಕಳುಹಿಸುತ್ತೇನೆ.” ಹೀಗೆ ಹೇಳಿ ವಿಪ್ರೇಂದ್ರನು ವಿಷ್ಣುವಿತ್ತಿದ್ದ ಆ ಮಣಿಯನ್ನು ರಾಜನ ನೋಡುತ್ತಿದ್ದಂತೆಯೇ ಏಕಾಂತದಲ್ಲಿಟ್ಟನು.

ತಸ್ಮಿನ್ ಸ್ಥಾಪಿತಮಾತ್ರೇ ತು ಮಣೌ ಶುದ್ಧಸಮಪ್ರಭೇ । ನಿಶ್ಚೇರುರ್ಯೋಷಿತಸ್ತತ್ರ ದಿವ್ಯರೂಪಾಃ ಸಹಸ್ತ್ರಶಃ ।। 41 ।। ಸುಕುಮಾರಾಂಗರಾಗಾದ್ಯಾಃ ಸುಕುಮಾರವರಾಂಗನಾಃ । ಸುಕಪೋಲಾಃ ಸುಚಾರ್ವಂಗ್ಯಃ ಸುಕೇಶಾಂತಾಃ ಸುಲೋಚನಾಃ । ಕಾಶ್ಚಿತ್ಸೌವರ್ಣಪಾತ್ರೀಶ್ಚ ಗೃಹೀತ್ವಾ ಸಂಪ್ರತಸ್ಥಿರೇ ।। 42 ।। ಏವಂ ಯೋಷಿದ್ಗಣಾಸ್ತತ್ರ ನರಾಃ ಕರ್ಮಕರಾಸ್ತಥಾ । ನಿರ್ಜಗ್ಮುಸ್ತಸ್ಯ ನೃಪತೇಃ ಸರ್ವೇ ಭೃತ್ಯಾ ನೃಪಸ್ಯ ಹ । ಕೇವಲಂ ಭೋಜನಂ ಪೂರ್ವಂ ಪರಿಧಾನಂ ಚ ಸರ್ವಶಃ ।। 43 ।। ತಾಃ ಸ್ತ್ರಿಯಃ ಸರ್ವಭೃತ್ಯಾನಾಂ ರಾಜಮಾರ್ಗೇಣ ಮಜ್ಜನಮ್ । ದದುಸ್ತೇ ಚ ನರಾಶ್ವಾನಾಂ ಹಸ್ತಿನಾಂ ಚ ತ್ವರಾನ್ವಿತಾಃ ।। 44 ।। ನಾನಾವಿಧಾನಿ ತೂರ್ಯಾಣಿ ತತ್ರಾವಾದ್ಯಂತ ಸರ್ವಶಃ । ಮಜ್ಜನೇ ನೃಪತೇಸ್ತತ್ರ ನನೃತುಶ್ಚಾನ್ಯಯೋಷಿತಃ । ಅಪರಾಶ್ಚ ಜಗುಸ್ತತ್ರ ಶಕ್ರಸ್ಯೇವ ಪ್ರಮಜ್ಜತಃ ।। 45 ।। ಏವಂ ದಿವ್ಯೋಪಚಾರೇಣ ಸ್ನಾತ್ವಾ ರಾಜಾ ಮಹಾಮನಾಃ । ಚಿಂತಯಾಮಾಸ ರಾಜೇಂದ್ರೋ ವಿಸ್ಮಯಾವಿಷ್ಟಚೇತನಃ । ಕಿಮಿದಂ ಮುನಿಸಾಮರ್ಥ್ಯಂ ತಪಸೋ ವಾಽಥ ವಾ ಮಣೇಃ ।। 46 ।।

ರಾಜನ ಸರ್ವ ಸೇವಕರೂ ರಾಜನೊಡನೆ ಸ್ನಾನಭೋಜನಗಳಿಗೆ ಹೊರಟರು. ಮೊದಲು ಊಟದ ಪದಾರ್ಥಗಳೂ ನಂತರ ಎಲ್ಲ ಆ ಶುದ್ಧಸಮಪ್ರಭೆಯ ಮಣಿಯನ್ನು ಹಾಗೆ ಇಟ್ಟಕೂಡಲೇ ಅದರಿಂದ ದಿವ್ಯರೂಪೀ ಸಾವಿರಾರು ಸ್ತ್ರೀಯರು ಹೊರಬಂದರು. ಕೋಮಲ ಅಂಗರಾಗಗಳುಳ್ಳ ಕೋಮಲೆಯರಾದ ಉತ್ತಮಾಂಗನೆಯರೂ, ಸುಕಪೋಲಗಳುಳ್ಳವರೂ, ಅತಿಕಾಂತಿವಂತರೂ, ಮನೋಹರವಾದ ತಲೆ-ಗೂದಲುಗಳುಳ್ಳವರೂ ಸುಲೋಚನೆಯರೂ ಆದ ಆ ವನಿತೆಯರಲ್ಲಿ ಕೆಲ-ವರು ಚಿನ್ನದ ಪಾತ್ರೆಗಳನ್ನು ಹಿಡಿದು ರಾಜಸೇವೆಗಾಗಿ ಉಪಸ್ಥಿತರಾದರು. ಆ ಸ್ತ್ರೀಯರ ಗುಂಪುಗಳಲ್ಲದೇ ಕೆಲಸಮಾಡುವ ಪುರುಷರೂ ಇದ್ದರು. ಉಡಿಗೆಗಳೂ ಸಿದ್ಧವಾದವು. ಆ ಸ್ತ್ರೀಯರು ರಾಜಸೇವಕರೆಲ್ಲರಿಗೂ ರಾಜಮಾರ್ಗದಿಂದ ಸ್ನಾನಮಾಡಿಸಿದರು. ಅಂದವಾದ ನಡೆಯಿದ್ದ ಆನೆಗಳ ಕುದುರೆಗಳ ಉಪಚಾರವನ್ನು ಗಂಡಾಳುಗಳು ನೋಡಿಕೊಂಡರು. ಅಲ್ಲಿ ಎಲ್ಲ ಕಡೆ ನಾನಾವಿಧದ ವಾದ್ಯಗಳು ದನಿಗೈದವು. ರಾಜನು ಸ್ನಾನಮಾಡುತ್ತಿರುವಾಗ ಅನ್ಯ ವನಿತೆಯರು ನರ್ತಿಸಿದರು. ಕೆಲವರು ಇಂದ್ರನ ಸ್ನಾನಕಾಲದಲ್ಲಿ ಹಾಡುವಂತೆ ಹಾಡಿದರು. ಮಹಾಮನಸ್ವೀ ರಾಜನು ಹೀಗೆ ದಿವ್ಯೋಪಚಾರಗಳಿಂದ ಸ್ನಾನಮಾಡಿ ವಿಸ್ಮಯಾವಿಷ್ಟಚೇತಸನಾಗಿ “ಇದೇನು ಮುನಿಯ ಸಾಮರ್ಥ್ಯವೋ, ತಪಶ್ಶಕ್ತಿಯೋ ಅಥವಾ ಮಣಿಯ ಶಕ್ತಿಯೋ” ಎಂದು ಆಲೋಚಿಸಿದನು.

ಏವಂ ಸ್ನಾತ್ವಾ ಶುಭೇ ವಸ್ತ್ರೇ ಪರಿಧಾಯೋತ್ತಮೇ ತಥಾ । ವಿವಿಧಾನ್ನಂ ತು ವಿಧಿನಾ ಬುಭುಜೇ ಸ ನೃಪೋತ್ತಮಃ ।। 47 ।। ಯಥಾ ಚ ನೃಪತೇಃ ಪೂಜಾ ಕೃತಾ ತೇನ ಮಹರ್ಷಿಣಾ । ತದ್ವದ್ ಭೃತ್ಯಜನಸ್ಯಾಪಿ ಚಕಾರ ಮುನಿಸತ್ತಮಃ ।। 48 ।। ಯಾವತ್ಸ ರಾಜಾ ಬುಭುಜೇ ಸಭೃತ್ಯಬಲವಾಹನಃ । ತಾವದಸ್ತಗಿರಿಂ ಭಾನುರ್ಜಗಾಮಾರುಣಸಪ್ರಭಃ ।। 49 ।। ತತಸ್ತು ರಾತ್ರಿಃ ಸಮಪದ್ಯತಾಽಧುನಾ ಶರಚ್ಛಶಾಂಕೋಜ್ಜ್ವಲಋಕ್ಷಮಂಡಿತಾ । ಕರೋತಿ ರಾಗಂ ಸ ಚ ರೋಹಿಣೀಧವಃ ಸುಸಂಗತಂ ಸೌಮ್ಯಗುಣೇಷು ತಾಪಿ ಚ ।। 50 ।। ಭೃಗೂದ್ವಹಃ ಕೃಷ್ಣತರಾಂಕ ಭಾನುನಾ ಸಹೋದ್ಯತೋ ದೈತ್ಯಗುರುಃ ಸುರಾಧಿಕಃ । ಅಥಾನ್ಯಥಾ ಪಕ್ಷಗತೋ ನ ರಾಜತೇ ಸ್ವಭಾವಯೋಗೇನ ಮತಿಸ್ತು ದೇಹಿನಾಮ್ ।। 51 ।। ಸುರಕ್ತತಾಂ ಭೂಮಿಸುತೋ ನ ಮುಂಚತೇ ಸಹೋಷಿತಶ್ಚಂದ್ರಮಸೋಂಶುಭಿಃ ಸಿತೈಃ । ಯುಕ್ತಸ್ವಭಾವಾ ಭುವನೇಸುರಾಸುರಾ ನರಸ್ವಭಾವೋ ಬಲವೀರ್ಯಕೃನ್ನೃಪಃ ।। 52 ।। ರಾತ್ರೀಶ್ವರಾಖ್ಯಾಪಿತರಶ್ಮಿಮಂಡಲೇ ಸೂರ್ಯಾಗ್ರಸಿದ್ಧಾಂತಕಥೇವ ನಿರ್ಮಲೇ । ಕರೋತಿ ರಾಹುರ್ನಪರೋ ಮಹತ್ತಮಃ ಸದಾ ಕುಶೀಲೇಷು ಗತಿಶ್ಚ ನಿರ್ಮಲಾ ।। 53 ।। ಬುಧೋವಬೋಧಂ ಜಗತೋ ವಿಭಾವಯನ್ ರರಾಜ ರಾಜ್ಞಸ್ತನಯಃ ಸ್ವರಶ್ಮಿಭಿಃ । ಭೃತೀಚ್ಛುಕಃ ಕಕ್ಷವಿವಾಹಿತಶ್ಚಿರಾದ್ ಭವೇದಯಂ ಸಾಧುಷು ಸನ್ಮತೇರ್ಧ್ರುವಮ್ ।। 54 ।। ಕರೋತಿ ಕೇತುಃ ಕಪಿಲಂ ವಿಯಚ್ಚಿರಂ ರಾಜ್ಞಃ ಸುರಾಣಾಂ ಪಥಿ ಸಂಸ್ಥಿತಂ ಭೃಶಮ್ । ನ ದುರ್ಜನಃ ಸಜ್ಜನಸಂಸದಿ ಕ್ವಚಿತ್ ಕರೋತಿ ಶುದ್ಧಂ ನಿಜಕರ್ಮಕೌಶಲಮ್ ।। 55 ।। ಶಶಾಂಕರಶ್ಮಿಪ್ರತಿಭಾಸಿತಾ ಅಪಿ ಪ್ರಕಾಶಮೀಯುರ್ನಿರತಾಂ ಪದೇ ಪದೇ । ಸತ್ಸಂಗತಾಃ ಸಪ್ತಸ ಧರ್ಮಪತ್ನ್ಯೋ ಮಹತ್ಪ್ರಯೋಗಾನ್ಮಹತಃ ಸಮುನ್ನತಿಃ ।। 56 ।। ತ್ರಿದೋಷಸಂಕ್ರಾಂತಿ ಕೃತೋಽಸ್ಯ ಸರ್ವಶಃ ಸುತೇನ ರಾಜ್ಞೋ ವರುಣಸ್ಯ ಸೂರ್ಯಜಃ । ಚಿರಂಜಿತಾ ಕೌಶಿಕಸನ್ನಿವೇಶಿತಾ ನ ವೇದಕರ್ಮ ಕ್ವಚಿದನ್ಯಥಾ ಭವೇತ್ ।। 57 ।। ಸುಧೀಃ ಸ್ವಮಾತ್ರಾನುಮತಃ ಶಿಶುಃ ಪುರಾ ಹರಿಂ ಯ ಆರಾಧಿತವಾನ್ನೃಪಾಸನಮ್ । ಲಭಾಮಿ ಬುದ್ಧ್ಯಾ ಸಚಿರಂ ಪ್ರಕಾಶತೇ ಧ್ರುವೋ ಹಿ ವಿಷ್ಣುಸ್ಮರಣೇ ನ ದುರ್ಲಭಮ್ ।। 58 ।।

ಹೀಗೆ ಸ್ನಾನಮಾಡಿ ನೃಪೋತ್ತಮನು ಶುಭ ವಸ್ತ್ರಗಳನ್ನುಟ್ಟು ವಿವಿಧ ಅನ್ನವನ್ನು ವಿಧಿಪೂರ್ವಕವಾಗಿ ಭುಂಜಿಸಿದನು. ರಾಜನಿಗೆ ಸತ್ಕಾರಮಾಡಿದಂತೆಯೇ ಮಹರ್ಷಿ ಮುನಿಸತ್ತಮನು ಅವನ ಸೇವಕರಿಗೂ ಮಾಡಿದನು. ಸೇವಕ-ಸೇನಾ-ವಾಹನ ಸಮೇತನಾಗಿ ಯಾವಾಗ ರಾಜನು ಊಟಮಾಡಿ ಮುಗಿಸಿದನೋ ಅಷ್ಟರಲ್ಲಿ ಸೂರ್ಯನು ಕೆಂಪಗೆ ಹೊಳೆಯುತ್ತ ಅಸ್ತಂಗಿರಿಯನ್ನೈದಿದನು. ನಂತರ ಶರತ್ಕಾಲದ ಚಂದ್ರನ ಹೊಳೆಯುವ ಲಾಂಛನದಿಂದೊಪ್ಪುವ ರಾತ್ರಿಯು ಒದಗಿತು. ರೋಹಿಣೀರಮಣ ಸೌಮ್ಯಗುಣಯುತ ಚಂದ್ರನು ಹೃದಯಂಗಮ ಅನುರಾಗವನ್ನುಂಟುಮಾಡುತ್ತಿದ್ದನು. ಸುರಶ್ರೇಷ್ಠ ಶುಕ್ರನು ನಿಷ್ಕಳಂಕನಾಗಿದ್ದರೂ ದೈತ್ಯಗುರುವಾಗಿ ಬೇರೆ ಪಕ್ಷಕ್ಕೆ ಸೇರಿದುದರಿಂದ ಬಹಳ ಕಪ್ಪಾದ ಮಚ್ಚೆಯಿಂದ ಕೂಡಿ, ಕಳಂಕಿತನಾದ ಚಂದ್ರನೊಡನೆ ಉದಯಿಸಿಯೂ ಆ ಚಂದ್ರನಷ್ಟು ಪ್ರಕಾಶಿಸುತ್ತಿರಲಿಲ್ಲ. ಲೋಕದಲ್ಲಿ ದೇಹಿಗಳಿಗೆ ಸಹವಾಸದಂತೆ ಮತಿಯುಂಟಾಗುತ್ತದೆ. ಭೂಮಿಸುತ ಕುಜ (ಮಂಗಳ) ನು, ಬೆಳ್ಳಗಿರುವ ಚಂದ್ರಕಿರಣಗಳ ಜೊತೆಯಲ್ಲಿಯೇ ಇದ್ದರೂ ತನ್ನ ಹೆಚ್ಚುಕೆಂಪಾಗಿರುವಿಕೆಯನ್ನು ಬಿಡಲಿಲ್ಲ. ಲೋಕದಲ್ಲಿ ಸುರರೂ ಅಸುರರೂ ನರರೂ ನಿಯತವಾದ ಸ್ವಭಾವವುಳ್ಳವರು. ಅಕೃತ್ರಿಮ ಸ್ವಭಾವವು ಬಲವೀರ್ಯವಲ್ಲವೇ? ಸೂರ್ಯಾಗ್ರಸಿದ್ಧಾಂತಕಥೆಯಂತೆ ನಿರ್ಮಲವೂ ಪ್ರಸಿದ್ಧವೂ ಆದ ಚಂದ್ರಕಿರಣಗಳ ಸಮೂಹದಲ್ಲಿಯೇ ಇದ್ದರೂ ವೈರಿಯಾದ ರಾಹುವು ತನ್ನ ಮಹಾ ತಮಸ್ಸ್ವಭಾವವನ್ನು ತೋರಿಸುತ್ತಲೇ ಇದ್ದನು. ದುಶ್ಶೀಲರ ಗತಿಯು ಎಂದೂ ನಿರ್ಮಲವಾದದಲ್ಲ. ಚಂದ್ರಸುತನಾದ ಬುಧನು ತನ್ನ ಕಿರಣಗಳಿಂದ ಲೋಕಕ್ಕೆ ಜ್ಞಾನವನ್ನುಂಟುಮಾಡುತ್ತಾ ಹೊಳೆಯುತ್ತಿದ್ದನು. ಒಳ್ಳೆಯ ಬುದ್ಧಿಯುಳ್ಳವನು ಸಾಧುಗಳೊಡನೆ ಸೇರಿದರೆ ಹೀಗಾಗುವುದು ಸ್ವಭಾವವಾಗಿದೆ. ಕೇತುವು ತಾನು ದೇವತೆಗಳ ರಾಜನ ಮಾರ್ಗದಲ್ಲಿ ಬಹುಕಾಲವಿದ್ದರೂ ತನ್ನ ಮಸುಕಾದ ಕಾಂತಿಯಿಂದ ಆಕಾಶವನ್ನು ಹೆಚ್ಚಾಗಿ ಕಪಿಲವರ್ಣದ್ದಾಗಿ ಮಾಡುತ್ತಿದ್ದನು. ಲೋಕದಲ್ಲಿ ದುಷ್ಟನು ಸಜ್ಜನರ ಗುಂಪಿನಲ್ಲಿ ಸೇರಿದರೂ ತನ್ನ ಕಾರ್ಯಕುಶಲತೆಯನ್ನು ಪರಿಶುದ್ಧ ಮಾಡಿಕೊಳ್ಳುವುದಿಲ್ಲ. ಚಂದ್ರನ ಕಾಂತಿಯು ತಮಗಿಂತ ಅಧಿಕವಾಗಿ ಹೊಳೆಯುತ್ತಿದ್ದರೂ, ಸತ್ಸಹವಾಸವುಳ್ಳ ಸಪ್ತರ್ಷಿಗಳು ತಮ್ಮ ಧರ್ಮಪತ್ನಿಯರೊಡನೆ ಆಕಾಶದಲ್ಲಿ ಅಡಿಗಡಿಗೆ ಹೆಚ್ಚಾಗಿ ಪ್ರಕಾಶಿಸುತ್ತಲೇ ಇದ್ದರು. ಅದು ಯುಕ್ತವಾದುದೇ ಸರಿ. ಮಹಾತ್ಮರ ಜತೆಯಲ್ಲಿ ಸೇರುವುದರಿಂದ ಮಹಾತ್ಮರಿಗೆ ಮತ್ತಷ್ಟು ಮೇಲ್ಮೆಯೇ ಉಂಟಾಗುವುದಲ್ಲವೇ! ವೇದಕರ್ಮವು ಎಂದಿಗೂ ಕೆಟ್ಟುದಲ್ಲ. ವಿರೋಧವಾಗುವುದಿಲ್ಲ. ಸುಬುದ್ಧಿಯುಳ್ಳವನೂ ತಾಯಿಯ ಅನುಮತಿಯನ್ನು ಪಡೆದವನೂ ಆದ ಯಾವ ಶಿಶುವು ತನ್ನ ತಂದೆಯ ಸಿಂಹಾಸನವನ್ನು ಪಡೆಯಬೇಕೆಂದು ಹರಿ-ಯನ್ನು ಪೂಜಿಸಿದನೋ ಆ ಧ್ರುವನು ಆಕಾಶದಲ್ಲಿ ಶಾಶ್ವತನಾಗಿ ಹೊಳೆ-ಯುತ್ತಿದ್ದನು. ವಿಷ್ಣುಸ್ಮರಣೆಯಿಂದ ದುರ್ಲಭವಾದುದು ಯಾವುದಿದೆ?

ಇತೀವ ಸಾ ರಾತ್ರಿರಭೂನ್ಮುನೇಃ ಶುಭೇ ವರಾಶ್ರಮೇ ದುರ್ಜಯಭೂಪತೇಃ ಶುಭಾ । ಸುಭೃತ್ಯವರ್ಗಃ ಸ ಗಜಾಶ್ವವಂದಿನಾಂ ಸುಭಕ್ತವಸ್ತ್ರಾಭರಣಾದಿಪೂಜಯಾ ।। 59 ।। ಇತೀದೃಶೋ ಯೇ ವರರತ್ನಚಿತ್ರಿತಾಃ ಸುಪಟ್ಟಸಂವೀತವರಾಸ್ತೃತಾಃ ಸದಾ । ಗೃಹೇಷು ಪರ್ಯಂಕವರಾಃ ಸಮಾಸ್ಥಿತಾಃ ಸುರೂಪಯೋಷಿದ್ಗಣಸಂಗಭಾಸುರಾಃ ।। 60 ।। ಸ ತತ್ರ ರಾಜಾ ವಿಸಸರ್ಜ ಭೂಭೃತಃ ಸ್ವಯಂ ಸುಭೃತ್ಯಾನಪಿ ಸರ್ವತೋ ಗೃಹಮ್ । ಗತೇಷು ಸುಷ್ವಾಪ ವರಸ್ತ್ರಿಯಾವೃತಃ ಸುರೇಶವತ್ಸ್ವರ್ಗ ಇವ ಪ್ರತಾಪವಾನ್ ।। 61 ।। ಏವಂ ಸುಮನಸಸ್ತಸ್ಯ ಸುಭೃತ್ಯಸ್ಯ ಮಹಾತ್ಮನಃ । ಋಷೇಸ್ತಸ್ಯ ಪ್ರಭಾವೇನ ಹೃಷ್ಟಾಸ್ತು ಪ್ರಸುಷುಪುಸ್ತದಾ ।। 62 ।।

ಹೀಗೆ ಗೌರಮುಖ ಮುನಿಯು ಆ ಶುಭ ರಾತ್ರಿಯಲ್ಲಿ ಶ್ರೇಷ್ಠ ಆಶ್ರಮದಲ್ಲಿ ದುರ್ಜಯರಾಜನಿಗೆ – ಅವನ ಉತ್ತಮ ಸೇವಕವರ್ಗ ಮತ್ತು ಆನೆ-ಕುದುರೆ ಮೊದಲಾದವುಗಳೊಂದಿಗೆ – ಮೃಷ್ಟಾನ್ನವಸ್ತ್ರಾಭರಣಾದಿಗಳಿಂದ ಸತ್ಕರಿಸಿದನು. ಸಪರಿವಾರನಾದ ಆ ದುರ್ಜಯರಾಜನಿಗೆ ಮುನಿಯು ಏರ್ಪಡಿಸಿದ ಮನೆಗಳಲ್ಲಿ ದಿವ್ಯ ಮಂಚಗಳು ಉತ್ತಮ ರತ್ನಗಳಿಂದ ಅಲಂಕೃತವಾಗಿದ್ದವು. ಉತ್ತಮ ಪಟ್ಟೆಯವಸ್ತ್ರದ ತೆರೆಮರೆಗಳಿಂದ ಕೂಡಿದ್ದವು. ರೂಪವತೀ ಯುವತಿಯರಿಂದ ಮನೋಹರವಾಗಿದ್ದವು. ಅಲ್ಲಿ ಆ ರಾಜನು ಸಾಮಂತರಾಜರನ್ನೂ ಸೇವಕರನ್ನೂ ತಾನೇ ಎಲ್ಲಾ ಮನೆಗಳಿಗೂ ಮಲಗಲು ಕಳುಹಿಸಿದನು. ಅವರೆಲ್ಲರೂ ಹೋಗಲು ತಾನು ಸ್ವರ್ಗದಲ್ಲಿರುವ ದೇವೇಂದ್ರನಂತೆ ಉತ್ತಮ ವನಿತೆಯರಿಂದ ಕೂಡಿ ನಿದ್ದೆಗೈದನು. ಉತ್ತಮ ಮನಸ್ಸಿನವನೂ ಮಹಾತ್ಮನೂ ಆದ ಆ ಋಷಿಯ ಪ್ರಭಾವ-ದಿಂದ ರಾಜನ ಉತ್ತಮ ಸೇವಕರೂ ಆಗ ಸಂತೋಷದಿಂದ ಸುಖವಾಗಿ ನಿದ್ದೆಮಾಡಿದರು.

ತತೋ ರಾತ್ರ್ಯಾಂ ವ್ಯತೀತಾಯಾಂ ಸ ರಾಜಾ ತಾಃ ಪುನಃ ಸ್ತ್ರಿಯಃ । ಅಂತರ್ಧಾನಂ ಗತಾಸ್ತತ್ರ ದೃಷ್ಟ್ವಾ ತಾನಿ ಗೃಹಾಣಿ ವಾ ।। 63 ।। ಅದೃಶ್ಯಾನಿ ಮಹಾರ್ಹಾಣಿ ವರಾಸನಗತಾನಿ ಚ । ಸ ರಾಜಾ ವಿಸ್ಮಯಾವಿಷ್ಟಃ ಚಿಂತಯಾಮಾಸ ದುಃಖಿತಃ ।। 64 ।। ಕಥಮೇವಂ ಮಣಿರ್ಮಹ್ಯಂ ಭವತೀತಿ ಪುನಃ ಪುನಃ । ಚಿಂತಯನ್ನಧಿಗಮ್ಯಾಥ ಸ ರಾಜಾ ದುರ್ಜಯಸ್ತದಾ ।। 65 ।। ಚಿಂತಾಮಣಿಮಿಮಂ ಚಾಸ್ಯ ಹರಾಮೀತಿ ವಿಚಿಂತ್ಯ ಚ । ಪ್ರಯಾಣಂ ಚೋದಯಾಮಾಸ ಸ ರಾಜಾಶ್ರಮಬಾಹ್ಯತಃ । ಆಶ್ರಮಸ್ಯ ಬಹಿರ್ಗತ್ವಾ ನಾತಿದೂರೇ ಸವಾಹನಃ ।। 66 ।। ತತೋ ವಿರೋಚನಾಖ್ಯಂ ವೈ ಪ್ರೇಷಯಾಮಾಸ ಮಂತ್ರಿಣಮ್ । ಋಷೇರ್ಗೌರಮುಖಸ್ಯಾಪಿ ಮಣೇರ್ಯಾಚನಕರ್ಮಣಿ ।। 67 ।। ಋಷಿಂ ತಂ ಚ ಸಮಾಗತ್ಯ ಮಣಿಂ ಯಾಚಿತುಮುದ್ಯತಃ । ರತ್ನಾನಾಂ ಭಾಜನಂ ರಾಜಾ ಮಣಿಂ ತಸ್ಮೈ ಪ್ರದೀಯತಾಮ್ ।। 68 ।।

ರಾತ್ರಿಯು ಕಳೆಯಲು ಆ ಸ್ತ್ರೀಯರೂ, ಉತ್ತಮಾಸನಗಳಿಂದ ಕೂಡಿದ ದಿವ್ಯಗೃಹಗಳೂ ಅದೃಶ್ಯವಾಗಿರುವುದನ್ನು ನೋಡಿ ರಾಜನು ಆಶ್ಚರ್ಯದಿಂದಲೂ ದುಃಖದಿಂದಲೂ ಕೂಡಿದವನಾಗಿ “ಈ ಮಣಿಯು ನನಗೆ ಹೇಗೆ ದೊರಕೀತು?” ಎಂದು ಪುನಃ ಪುನಃ ಚಿಂತಿಸಿದನು. ಆಲೋಚಿಸಿ ರಾಜಾ ದುರ್ಜಯನು ಆಗ ಒಂದು ತೀರ್ಮಾನಕ್ಕೆ ಬಂದನು. “ಈ ಚಿಂತಾಮಣಿಯನ್ನು ಇವನಿಂದ ಅಪಹರಿಸುತ್ತೇನೆ” ಎಂದು ಆಲೋಚಿಸಿ ತನ್ನವರೆಲ್ಲರೂ ಆಶ್ರಮದ ಹೊರ ಹೊರಡಬೇಕೆಂದು ಅಪ್ಪಣೆಮಾಡಿದನು. ವಾಹನಗಳೊಡನೆ ಆಶ್ರಮದ ಹೊರಗೆ ಸ್ವಲ್ಪ ದೂರ ಹೋಗಿ, ಅಲ್ಲಿಂದ ವಿರೋಚನನೆಂಬ ಹೆಸರಿನ ತನ್ನ ಮಂತ್ರಿಯನ್ನು ಋಷಿ ಗೌರಮುಖನ ಬಳಿ ಮಣಿಯನ್ನು ಬೇಡಲು ಕಳುಹಿಸಿದನು. ಅವನು ಋಷಿಯ ಬಳಿಬಂದು ಮಣಿಯನ್ನು ಬೇಡಲು ಉದ್ಯುಕ್ತನಾಗಿ “ರತ್ನಗಳಿಗೆ ರಾಜನು ಅರ್ಹನು. ಆದುದರಿಂದ ಮಣಿಯನ್ನು ಅವನಿಗೆ ಕೊಡಬೇಕು” ಎಂದನು.

ಅಮಾತ್ಯೇನೈವಮುಕ್ತಸ್ತು ಕ್ರುದ್ಧೋ ಗೌರಮುಖೋಽಬ್ರವೀತ್ । ಪ್ರತಿಗ್ರಾಹೀತಿ ವಿಪ್ರಸ್ತು ರಾಜಾ ಚೈವ ದದಾತಿ ಚ । ತ್ವಂ ಚ ರಾಜಾ ಪುನರ್ಭೂತ್ವಾ ಯಾಚಸೇ ದೀನವತ್ಕಥಮ್ ।। 69 ।। ಏವಂ ಬ್ರೂಹಿ ದುರಾಚಾರಂ ರಾಜಾನಂ ದುರ್ಜಯಂ ಸ್ವಯಮ್ । ಗಚ್ಛ ದ್ರುತಂ ದುರಾಚಾರಂ ಮಾ ತ್ವಾಂ ಲೋಕೋಽತ್ಯಗಾದಿತಿ ।। 70 ।। ಏವಮುಕ್ತಸ್ತದಾ ದೂತೋ ಜಗಾಮ ಚ ನೃಪಾಂತಿಕಮ್ । ಕಥಯಾಮಾಸ ತತ್ಸರ್ವಂ ಯದುಕ್ತಂ ಬ್ರಾಹ್ಮಣೇನ ಚ ।। 75 ।। ತತಃ ಕ್ರೋಧಪರೀತಾತ್ಮಾ ಶ್ರುತ್ವಾ ಬ್ರಾಹ್ಮಣಭಾಷಿತಮ್ । ದುರ್ಜಯಃ ಪ್ರಾಹ ನೀಲಾಖ್ಯಂ ಸಾಮಂತಂ ಗಚ್ಛ ಮಾಚಿರಮ್ ।। 76 ।। ಬ್ರಾಹ್ಮಣಸ್ಯ ಮಣಿಂ ಗೃಹ್ಯ ತೂರ್ಣಮೇಹಿ ಯದೃಚ್ಛಯಾ ।। 77 ।। ಏವಮುಕ್ತಸ್ತದಾ ನೀಲೋ ಬಹುಸೇನಾಪರಿಚ್ಛದಃ । ಜಗಾಮ ಸ ಚ ವಿಪ್ರಸ್ಯ ವನ್ಯಮಾಶ್ರಮಮಂಡಲಮ್ ।। 78 ।। ತತ್ರಾಗ್ನಿಹೋತ್ರಶಾಲಾಯಾಂ ದೃಷ್ಟ್ವಾ ತಂ ಮಣಿಮಾಹಿತಮ್ । ಉತ್ತೀರ್ಯ ಸ್ಯಂದನಾನ್ನೀಲಃ ಸೋಽವರೋಹತ ಭೂತಲೇ ।। 79 ।।

ಅಮಾತ್ಯನು ಹೀಗೆ ಹೇಳಲು ಕ್ರುದ್ಧನಾದ ಗೌರಮುಖನು ಹೇಳಿದನು: ““ಬ್ರಾಹ್ಮಣನು ತೆಗೆದುಕೊಳ್ಳಬೇಕು. ರಾಜನು ಕೊಡಬೇಕು. ನೀನು ರಾಜನಾಗಿದ್ದೂ ಬಡವನಂತೆ ಹೇಗೆ ಬೇಡುವೆ?” ಎಂದು ನೀನೇ ಆ ದುರಾಚಾರೀ ರಾಜನಿಗೆ ಹೇಳು. ದುರ್ನಡತೆಯ ಅವನೆಡೆಗೆ ಬೇಗನೆ ಹೋಗು. ಲೋಕವು ನಿನ್ನನ್ನು ಮೀರದಿರಲಿ!" ಹೀಗೆ ಹೇಳಿಸಿಕೊಂಡ ದೂತನು ರಾಜನ ಬಳಿಹೋಗಿ ಬ್ರಾಹ್ಮಣನು ಹೇಳಿದುದೆಲ್ಲವನ್ನೂ ತಿಳಿಸಿದನು. ಆಗ ಬ್ರಾಹ್ಮಣನ ಮಾತನ್ನು ಕೇಳಿ ಕ್ರೋಧಪರೀತಾತ್ಮನಾದ ದುರ್ಜಯನು ನೀಲನೆಂಬ ಸಾಮಂತನಿಗೆ ಹೇಳಿದನು: “ಬೇಗನೇ ಹೋಗು. ಬ್ರಾಹ್ಮಣನ ಮಣಿಯನ್ನು ತೆಗೆದುಕೊಂಡು ಬೇಗನೇ ಬಾ!” ಹೀಗೆ ಹೇಳಲು ನೀಲನು ದೊಡ್ಡಸೇನೆಯಿಂದ ಕೂಡಿಕೊಂಡು ವಿಪ್ರನ ವನ್ಯ ಆಶ್ರಮಮಂಡಲಕ್ಕೆ ಹೋದನು. ಅಲ್ಲಿ ಅಗ್ನಿಹೋತ್ರಶಾಲೆಯಲ್ಲಿಟ್ಟಿದ್ದ ಆ ಮಣಿಯನ್ನು ನೋಡಿ ನೀಲನು ರಥದಿಂದ ಭೂಮಿಗೆ ಇಳಿದನು.

ಅವತೀರ್ಣೇ ತತಸ್ತಸ್ಮಿನ್ನೀಲೇ ಪರಮದಾರುಣೇ । ಕ್ರೂರಬುದ್ಧ್ಯಾ ಮಣೇಸ್ತಸ್ಮಾನ್ನಿರ್ಜಗ್ಮುಃ ಶಸ್ತ್ರಪಾಣಯಃ ।। 80 ।। ಸರಥಾಃ ಸಧ್ವಜಾಃ ಸಾಶ್ವಾಃ ಸಬಾಣಾಃ ಸಾಸಿಚರ್ಮಿಣಃ । ಸಧನುಷ್ಕಾಃ ಸತೂಣೀರಾ ಯೋಧಾಃ ಪರಮದುರ್ಜಯಾಃ ।। 81 ।। ನಿಶ್ಚೇರುಸ್ತಂ ಮಣಿಂ ಭಿತ್ವಾ ಅಸಂಖ್ಯೇಯಾ ಮಹಾಬಲಾಃ । ತತ್ರ ಸಜ್ಜಾ ಮಹಾಶೂರಾ ದಶಪಂಚ ಚ ಸಂಖ್ಯಯಾ ।। 82 ।। ನಾಮಭಿಸ್ತಾನ್ಮಹಾಭಾಗೇ ಕಥಯಾಮಿ ಶೃಣುಷ್ವ ತತ್ । ಸುಪ್ರಭೋ ದೀಪ್ತತೇಜಾಶ್ಚ ಸುರಶ್ಮಿಃ ಶುಭದರ್ಶನಃ ।। 83 ।। ಸುಕಾಂತಿಃ ಸುಂದರಃ ಸುಂದಃ ಪ್ರದ್ಯುಮ್ನಃ ಸುಮನಾಃ ಶುಭಃ । ಸುಶೀಲಃ ಸುಖದಃ ಶಂಭುಃ ಸುದಾಂತಃ ಸೋಮ ಏವ ಚ । ಏತೇ ಪಂಚದಶ ಪ್ರೋಕ್ತಾ ನಾಯಕಾ ಮಣಿತೋತ್ಥಿತಾಃ ।। 84 ।। ತತೋ ವಿರೋಚನಂ ದೃಷ್ಟ್ವಾ ಬಹುಸೈನ್ಯಪರಿಷ್ಕೃತಮ್ । ಯೋಧಯಾಮಾಸುರವ್ಯಗ್ರಾ ವಿವಿಧಾಯುಧಪಾಣಯಃ ।। 85 ।। ಧನೂಂಷಿ ತೇಷಾಂ ಕನಕಪ್ರಭಾಣಿ ಶರಾನ್ ಸುಜಾಂಬೂನದಪುಂಖನದ್ಧಾನ್ । ಪತಂತಿ ಖಡ್ಗಾನಿ ವಿಭೀಷಣಾನಿ ಭುಶುಂಡಿಶೂಲಾಃ ಪರಮಪ್ರಧಾನಾಃ ।। 86 ।। ರಥೋ ರಥಂ ಸಂಪರಿವಾರ್ಯ ತಸ್ಥೌ ಗಜೋ ಗಜಸ್ಯಾಪಿ ಹಯೋ ಹಯಸ್ಯ । ಪದಾತಿರತ್ಯುಗ್ರಪರಾಕ್ರಮಶ್ಚ ಪದಾತಿಮೇವ ಪ್ರಸಸಾರ ಚಾಗ್ರ್ಯಮ್ ।। 87 ।। ದ್ವಂದ್ವಾನ್ಯನೇಕಾನಿ ತಥೈವ ಯುದ್ಧೇ ದ್ರವಂತಿ ಶೂರಾಃ ಪರಿಭರ್ತ್ಸಯಂತಃ । ವಿಭೀಷಣಂ ನಿರ್ಗತಚಾಪಮಾರ್ಗಂ ಬಭೂವ ರಕ್ತಪ್ರಭವಂ ಸುಘೋರಮ್ ।। 88 ।।

ಪರಮದಾರುಣನಾದ ನೀಲನು ಕ್ರೂರಬುದ್ಧಿಯಿಂದ ಕೆಳಗಿಳಿಯಲು ಆ ಮಣಿಯಿಂದ ಆಯುಧಪಾಣಿಗಳು ಹೊರಬಂದರು. ರಥ-ಧ್ವಜ-ಅಶ್ವ-ಬಾಣಗಳು-ಖಡ್ಗ-ಗುರಾಣಿಗಳು, ಧನುಸ್ಸು-ಬತ್ತಳಿಕೆಗಳಿಂದ ಕೂಡಿದ ಅತಿಬಲರೂ ಪರಮದುರ್ಜಯರೂ ಆದ ಲೆಕ್ಕವಿಲ್ಲದಷ್ಟು ಮಂದಿ ಯೋಧರು ಆ ಮಣಿಯನ್ನು ಭೇದಿಸಿ ಹೊರಬಂದರು. ಅವರಲ್ಲಿ 15 ಮಹಾಶೂರ ನಾಯಕರು ಸಜ್ಜಾಗಿದ್ದರು. ಮಹಾಭಾಗೇ! ಅವರ ಹೆಸರುಗಳನ್ನು ಹೇಳುತ್ತೇನೆ. ಕೇಳು. ಸುಪ್ರಭ, ದೀಪ್ತತೇಜಸ್ವೀ, ಸುರಶ್ಮಿ, ಶುಭದರ್ಶನ, ಸುಕಾಂತಿ, ಸುಂದರ, ಸುಂದ, ಪ್ರದ್ಯುಮ್ನ, ಸುಮನ, ಶುಭ, ಸುಶೀಲ, ಸುಖದ, ಶಂಭು, ಸುದಾಂತ, ಮತ್ತು ಸೋಮ. ಇವರೇ ಮಣಿಯಿಂದ ಹೊರಬಂದ 15 ನಾಯಕರು. ಬಹುಸೈನ್ಯದಿಂದ ಕೂಡಿದ್ದ ವಿರೋಚನನನ್ನು ನೋಡಿ ವಿವಿಧ ಆಯುಧಗಳನ್ನು ಹಿಡಿದಿದ್ದ ಆ ಅವ್ಯಗ್ರ ಯೋಧರು ಯುದ್ಧಮಾಡಿದರು. ಚಿನ್ನದಂತೆ ಹೊಳೆಯುತ್ತಿದ್ದ ಅವರ ಬಿಲ್ಲುಗಳು ಚಿನ್ನದ ಗರಿಗಳಿಂದೊಪ್ಪುವ ಬಾಣಗಳನ್ನು ಸುರಿಸುತ್ತಿದ್ದವು. ಭಯಂಕರ ಖಡ್ಗಗಳೂ ಅತ್ಯುತ್ತಮ ಭುಶುಂಡಿ-ಶೂಲಗಳೂ ವೇಗದಿಂದ ಬೀಳುತ್ತಿದ್ದವು. ರಥವು ರಥವನ್ನೂ, ಆನೆಯು ಆನೆಯನ್ನೂ, ಕುದುರೆಯು ಕುದುರೆಯನ್ನೂ, ಅತಿಪರಾಕ್ರಮಿ ಕಾಲಾಳು ಕಾಲಾಳನ್ನೂ ಎದುರಿಸಿ ನಿಂತು ಯುದ್ಧಮಾಡಿತು. ಅನೇಕ ದ್ವಂದ್ವಯುದ್ದಗಳು ನಡೆದವು. ಶೂರರು ಎದುರಿರುವವರನ್ನು ಬೆದರಿಸುತ್ತಾ ಮುಂದುವರೆಯುತ್ತಿದ್ದರು. ಸಾಧುಮಾರ್ಗವನ್ನು ತ್ಯಜಿಸಿ ರಕ್ತಪ್ರವಾಹಕ್ಕೆ ಕಾರಣವಾದ ಭಯಂಕರ ಘೋರ ಯುದ್ಧವು ನಡೆಯಿತು.

ತಥಾ ಪ್ರವೃತ್ತೇ ತುಮುಲೇಽಥ ಯುದ್ಧೇ ಹತಃ ಸ ರಾಜ್ಞಃ ಸಚಿವೋ ವಿಸಂಜ್ಞಃ । ಸಹಾನುಗಃ ಸರ್ವಬಲೈರುಪೇತೋ ಜಗಾಮ ವೈವಸ್ವತಮಂದಿರಾಯ ।। 89 ।। ತಸ್ಮಿನ್ ಹತೇ ದುರ್ಜಯರಾಜಮಂತ್ರಿಣಿ ಉಪಾಯಯೌ ಸ್ವೇನ ಬಲೇನ ರಾಜಾ । ಸ ದುರ್ಜಯಃ ಸಾಶ್ವರಥೋಽತಿತೀವ್ರಃ ಪ್ರತಾಪವಾಂಸ್ತೈರ್ಮಣಿಜೈರ್ಯುಯೋಧ ।। 90 ।। ತತಸ್ತಸ್ಮಿನ್ ಮಹಾರಾಜ್ಞೋ ಮಹತ್ಕದನಮಾಬಭೌ । ತತೋ ಹೇತೃಪ್ರಹೇತಾರೌ ಶ್ರುತ್ವಾ ಜಾಮಾತರಂ ರಣೇ । ಯುಧ್ಯಮಾನಂ ಮಹಾಬಾಹುಂ ತತಸ್ತ್ವಾಯಯತುಶ್ಚಮೂಃ ।। 91 ।। ತಸ್ಮಿನ್ ಬಲೇ ತು ದೈತೇಯಾಸ್ತಾಂಚ್ಛೃಣುಷ್ವ ಧರೇರಿತಾನ್ ।। 92 ।।

ಹಾಗೆ ನಡೆಯುತ್ತಿದ್ದ ಆ ತುಮುಲ ಯುಧದಲ್ಲಿ ದುರ್ಜಯರಾಜನ ಸಚಿವನು ಏಟುತಿಂದು ಮೂರ್ಛೆಗೊಂಡು ಎಲ್ಲಾ ಅನುಚರಸೈನಿಕರೊಡನೆ ಕಾಲನ ಮನೆಯನ್ನು ಸೇರಿದನು. ಮಂತ್ರಿಯು ಸಾಯಲು ದುರ್ಜಯರಾಜನೇ ತನ್ನ ಸೇನೆಯೊಡನೆ ಕುದುರೆಯನ್ನು ಹೂಡಿ ಸಿದ್ಧವಾದ ರಥದಲ್ಲಿ ಅಲ್ಲಿಗೆ ಬಂದನು. ಆ ಪ್ರತಾಪಶಾಲಿಯು ಕಠಿಣವಾದ ಆ ಮಣಿಯಿಂದ ಉದಿಸಿದ ಯೋದ್ಧರೊಂದಿಗೆ ಯುದ್ಧಮಾಡಿದನು. ಆಗ ಅಲ್ಲಿ ಮಹಾರಾಜನ ಮಹಾಯುದ್ಧವು ನಡೆಯಿತು. ಬಳಿಕ ಹೇತೃ-ಪ್ರಹೇತೃಗಳು ತಮ್ಮ ಮಹಾಬಾಹು ಅಳಿಯನು ರಣದಲ್ಲಿ ಹೋರಾಡುತ್ತಿದ್ದಾನೆಂದು ಕೇಳಿ, ತಮ್ಮ ಸೈನ್ಯವನ್ನು ಅಲ್ಲಿಗೆ ತಂದರು. ಧರೇ! ಆ ಸೇನೆಯಲ್ಲಿದ್ದ ರಾಕ್ಷಸವೀರರ ಕುರಿತು ಹೇಳುತ್ತೇನೆ. ಕೇಳು.

ಪ್ರಘಸೋ ವಿಘಸಶ್ಚೈವ ಸಂಘಸೋಽಶನಿಸಪ್ರಭಃ । ವಿದ್ಯುತ್ಪ್ರಭಃ ಸುಘೋಷಶ್ಚ ಉನ್ಮತ್ತಾಕ್ಷೋ ಭಯಂಕರಃ ।। 93 ।। ಅಗ್ನಿದತ್ತೋಽಗ್ನಿತೇಜಾಶ್ಚ ಬಾಹುಃ ಶಕ್ರಃ ಪ್ರತರ್ದನಃ । ವಿರೋಧೋ ಭೀಮಕರ್ಮಾಚ ವಿಪ್ರಚಿತ್ತಿಸ್ತಥೈವ ಚ ।। 94 ।। ಏತೇ ಪಂಚದಶ ಶ್ರೇಷ್ಠಾ ಅಸುರಾಃ ಪರಮಾಯುಧಾಃ । ಅಕ್ಷೌಹಿಣೀಪರೀವಾರ ಏಕೈಕೋಽತ್ರ ಪೃಥಕ್ಪೃಥಕ್ ।। 95 ।। ಮಹಾಮಾತ್ಯಾಸ್ತು ಸಮರೇ ದುರ್ಜಯಸ್ಯ ದುರಾತ್ಮನಃ । ಯುಯುಧುರ್ಮಣಿಜೈಃ ಸಾರ್ದ್ಧಂ ಮಹಾಸೈನ್ಯಪರಿಚ್ಛದಾಃ ।। 96 ।। ತಂ ಸತೇಜಾಸ್ತ್ರಿಭಿರ್ಬಾಣೈರ್ವಿಘಸಂ ಸಂಪ್ರವಿಧ್ಯಚ । ಸಂಘಂ ಸ ದಶಭಿರ್ಬಾಣೈಃ ಸುರಶ್ಮಿಃ ಪ್ರತ್ಯವಿಧ್ಯತ ।। 97 ।। ಅಶನಿಪ್ರಭಂ ರಣೇಽವಿಧ್ಯತ್ ಪಂಚಭಿಃ ಶುಭದರ್ಶನಃ । ವಿದ್ಯುತ್ಪ್ರಭಂ ಸುಕಾಂತಿಸ್ತು ಸುಘೋಷಂ ಸುಂದರಸ್ತಥಾ ।। 98 ।। ಉನ್ಮತ್ತಾಕ್ಷಂ ತಥಾವಿಧ್ಯತ್ಸುಂದಃ ಪಂಚಭಿರಾಶುಗೈಃ । ಚಕರ್ತ ಚ ಧನುಸ್ತಸ್ಯ ಶಿತೇನ ನತಪರ್ವಣಾ ।। 99 ।। ಸುಮನಾ ಅಗ್ನಿದಂಷ್ಟ್ರಂ ತು ಸುವೇದಶ್ಚಾಗ್ನಿತೇಜಸಮ್ । ಸುನಲೋ ವಾಯುಶಕ್ರೌತು ಸುಮುಖಶ್ಚ ಪ್ರತರ್ದನಮ್ ।। 100 ।। ಪರಸ್ಪರಂ ಸುಯುದ್ಧೇನ ಯೋಧಯಿತ್ವಾಽಸ್ತ್ರಲಾಘವಾತ್ । ಯಥಾಸಂಖ್ಯೇನ ತೇ ದೈತ್ಯಾಃ ಪುನರ್ಮಣಿಭವೈರ್ಹತಾಃ ।। 101 ।।

ಪ್ರಘಸ, ವಿಘಸ, ಸಂಘಸ, ಅಶನಿಪ್ರಭ, ವಿದ್ಯುತ್ಪ್ರಭ, ಸುಘೋಷ, ಭಯಂಕರನಾದ ಉನ್ಮತ್ತಾಕ್ಷ, ಅಗ್ನಿದತ್ತ, ಅಗ್ನಿತೇಜ, ಬಾಹು (ವಾಯು), ಶಕ್ರ, ಪ್ರತರ್ದನ, ವಿರೋಧ, ಭೀಮಕರ್ಮ ಮತ್ತು ವಿಪ್ರಚಿತ್ತಿ – ಈ ಹದಿನೈದು ಅಸುರ ಶ್ರೇಷ್ಠರು ಪರಮಾಯುಧಗಳನ್ನು ಹಿಡಿದು ಒಬ್ಬೊಬ್ಬರೂ ಪ್ರತ್ಯೇಕ ಅಕ್ಷೋಹಿಣೀ ಸೇನೆಗಳಿಂದ ಪರಿವೃತರಾಗಿದ್ದರು. ಮಹಾಸೇನೆಗಳಿಂದೊಡಗೂಡಿದ ದುರ್ಜಯನ ಆ ಮಹಾ ಅಮಾತ್ಯರು ಸಮರದಲ್ಲಿ ಮಣಿಯಿಂದ ಹುಟ್ಟಿದವರೊಂದಿಗೆ ಯುದ್ಧಮಾಡಿದರು. ದೀಪ್ತತೇಜನು ಮೂರು ಬಾಣಗಳಿಂದ ವಿಘಸನನ್ನು ಹೊಡೆದನು. ಸುರಶ್ಮಿಯು ಹತ್ತು ಬಾಣಗಳಿಂದ ಸಂಘನನ್ನು ಹೊಡೆದನು. ಶುಭದರ್ಶನನು ಅಶನಿಪ್ರಭನನ್ನು ಐದು ಬಾಣಗಳಿಂದ ಹೊಡೆದನು. ವಿದ್ಯುತ್ಪ್ರಭನನ್ನು ಸುಕಾಂತಿಯೂ ಸುಘೋಷನನ್ನು ಸುಂದರನೂ ಹೊಡೆದರು. ಸುಂದನು ಉನ್ಮತ್ತಾಕ್ಷನನ್ನು ಐದು ಬಾಣಗಳಿಂದ ಹೊಡೆದುದಲ್ಲದೇ ಅವನ ಬಿಲ್ಲನ್ನೂ ಹರಿತ ಬಾಣದಿಂದ ಕತ್ತರಿಸಿದನು. ಸುಮನನು ಅಗ್ನಿದಂಷ್ಟ್ರನನ್ನೂ, ಸುವೇದನು ಅಗ್ನಿತೇಜನನ್ನೂ, ಸುನಲನು ವಾಯು-ಶಕ್ರರನ್ನೂ, ಸುಖದನು ಪ್ರತರ್ದನನನ್ನೂ ಹೊಡೆದರು. ಹೀಗೆ ಪರಸ್ಪರ ಅಸ್ತ್ರಕುಶಲತೆಯಿಂದ ಚೆನ್ನಾಗಿ ಯುದ್ಧಮಾಡಿ ಮಣಿಯಿಂದ ಉದಿಸಿದವರು ಅನುಕ್ರಮವಾಗಿ ಆ ರಾಕ್ಷಸರನ್ನು ಕೊಂದರು.

ಯಾವತ್ ಸಂಗರೋ ಘೋರೋ ಮಹಾಂಸ್ತೇಷಾಂ ವ್ಯವರ್ಧತ । ತಾವತ್ ಸಮಿತ್ಕುಶಾದೀನಿ ಕೃತ್ವಾ ಗೌರಮುಖೋ ಮುನಿಃ ।। 102 ।। ಆಗತೋ ಮಹದಾಶ್ಚರ್ಯಂ ಸಂಗ್ರಾಮಂ ಭಯದರ್ಶನಮ್ । ಬಹುಸೈನ್ಯಪರೀವಾರಂ ಸ್ಥಿತಂ ತಂ ಚಾಪಿ ದುರ್ಜಯಮ್ ।। 103 ।। ತದ್ದೃಷ್ಟ್ವಾ ಸ ಮುನಿರ್ದ್ವಾರಿ ಚಿಂತಾಸಂಲಗ್ನ ಚೇತನಃ । ಉಪವಿಶ್ಯಾಧಿಗಮ್ಯಾಥ ಮಣೇಃ ಕಾರಣಮೇವ ಹ ।। ಏವಂ ಕೃತ್ವಾ ಮಣಿಕೃತಂ ರೌದ್ರಂ ಗಾಢಂ ಚ ಸಂಯುಗಮ್ । ಚಿಂತಯಾಮಾಸ ದೇವೇಶಂ ಹರಿಂ ಗೌರಮುಖೋ ಮುನಿಃ ।। 104 ।। ಸ ದೇವಃ ಪುರತಸ್ತಸ್ಯ ಪೀತವಾಸಾಃ ಖಗಾಸನಃ । ಕಿಮತ್ರ ತೇ ಮಯಾ ಕಾರ್ಯಮಿತಿ ವಾಣೀಮುದೀರಯನ್ ।। 105 ।। ಸ ಋಷಿಃ ಪ್ರಾಂಜಲಿರ್ಭೂತ್ವಾ ಪ್ರೋವಾಚ ಪುರುಷೋತ್ತಮಮ್ । ಜಹೀಮಂ ದುರ್ಜಯಂ ಪಾಪಂ ಸಸೈನ್ಯಂ ಪರಿವಾರಿತಮ್ ।। 106 ।।

ಅವರ ಆ ಯುದ್ಧವು ಅತಿ ಘೋರವಾಗಿ ಹೆಚ್ಚುತ್ತಿರುವಾಗ ದರ್ಭೆ-ಸಮಿತ್ತು ಮೊದಲಾದವುಗಳನ್ನು ತೆಗೆದುಕೊಂಡು ಮುನಿ ಗೌರಮುಖನು ಅಲ್ಲಿಗೆ ಬಂದನು. ಅತ್ಯಾಶ್ಚರ್ಯಕರವೂ ಭಯಂಕರವೂ ಆದ ಆ ಯುದ್ಧವನ್ನೂ, ಅಧಿಕ ಸೇನೆಯಿಂದೊಡಗೂಡಿದ್ದ ದುರ್ಜಯನನ್ನೂ ನೋಡಿ, ಚಿಂತೆಯಿಂದ ಕೂಡಿದ ಗೌರಮುಖ ಮುನಿಯು ಬಾಗಿಲಲ್ಲೇ ಕುಳಿತು ಆಲೋಚಿಸಿ, ಈ ರೌದ್ರ ಗಾಢ ಯುದ್ಧವು ಮಣಿಗೋಸ್ಕರವಾಗಿಯೇ ನಡೆಯುತ್ತಿದೆಯೆಂದು ತಿಳಿದು, ದೇವೇಶ ಹರಿಯನ್ನು ಸ್ಮರಿಸಿದನು. ಪೀತಾಂಬರಧಾರಿಯೂ ಗರುಡವಾಹನನೂ ಆದ ಆ ದೇವನು ತಾನೇ ಎದುರಿಗೆ ಬಂದು “ಇಲ್ಲಿ ನಾನು ಮಾಡಬೇಕಾದುದು ಏನು?” ಎಂದನು. ಆ ಋಷಿಯು ಕೈಮುಗಿದುಕೊಂಡು ಪುರುಷೋತ್ತಮನಿಗೆ “ಸೈನ್ಯದಿಂ-ದೊಡಗೂಡಿದ ಪಾಪಿ ದುರ್ಜಯನನ್ನು ಕೊಲ್ಲು” ಎಂದನು.

ಏವಮುಕ್ತಂ ತದಾ ತೇನ ಚಕ್ರಂ ಜ್ವಲನಸನ್ನಿಭಮ್ । ತೇನ ಚಕ್ರೇಣ ತತ್ಸೈನ್ಯಮಸುರೈಃ ದುರ್ಜಯಂ ಬಲಾತ್ ।। 107 ।। ನಿಮೇಷಾಂತರಮಾತ್ರೇಣ ಸಮಗ್ರಂ ಭಸ್ಮಸಾತ್ಕೃತಮ್ ।। 108 ।। ಏವಂ ಕೃತ್ವಾ ತತೋ ದೇವೋ ಮುನಿಂ ಗೌರಮುಖಂ ತದಾ । ಉವಾಚ ನಿಮಿಷೇಣೇದಂ ನಿಹತಂ ದಾನವಂ ಕುಲಮ್ ।। 109 ।। ಅರಣ್ಯೇಽಸ್ಮಿಂಸ್ತತಸ್ವೇವಂ ನೈಮಿಷಾರಣ್ಯಸಂಜ್ಞಿತಮ್ । ಭವಿಷ್ಯತಿ ಯಥಾರ್ಥಂ ವೈ ಬ್ರಾಹ್ಮಣಾನಾಂ ನಿವೇಶನಮ್ । ಅಹಂ ಚ ಯಜ್ಞಪುರುಷ ಏತಸ್ಮಿನ್ ವನಗೋಚರೇ ।। 110 ।। ನಾಮ್ನಾ ಯಾಜ್ಯೋ ಸದಾ ಚೇಮೇ ದಶ ಪಂಚ ಚ ನಾಯಕಾಃ । ಕೃತೇ ಯುಗೇ ಭವಿಷ್ಯಂತಿ ರಾಜಾನೋ ಮಣಿಜಾ ಇಮೇ ।। 111 ।। ಏವಮುಕ್ತ್ವಾ ತತೋ ದೇವೋ ಗತೋಽಂತರ್ಧಾನಮೀಶ್ವರಃ । ದ್ವಿಜೋಽಪಿ ಸ್ವಾಶ್ರಮೇ ತಸ್ಥೌ ಮುದಾ ಪರಮಯಾ ಯುತಃ ।। 111 ।।

ಹೀಗೆ ಹೇಳಲು ಹರಿಯು ಅಗ್ನಿಯಂತಿದ್ದ ಚಕ್ರವನ್ನು ಬಿಡಲು ಆ ಚಕ್ರವು ಅಸುರರೊಡನೆ ದುರ್ಜಯನ ಸೇನೆಯನ್ನು ಸಮಗ್ರವಾಗಿ ನಿಮಿಷಮಾತ್ರದಲ್ಲಿ ಭಸ್ಮವನ್ನಾಗಿಸಿತು. ಹಾಗೆ ಮಾಡಿ ದೇವನು ಗೌರಮುಖನಿಗೆ ಹೇಳಿದನು: “ಈ ಅರಣ್ಯದಲ್ಲಿ ನಿಮಿಷಮಾತ್ರದಲ್ಲಿಯೇ ಈ ದಾನವ ಕುಲವು ನಾಶವಾಯಿತು. ಆದ್ದರಿಂದ ಇದು ನೈಮಿಷಾರಣ್ಯವೆಂದಾಗುವುದು. ಯಥಾರ್ಥವಾಗಿ ಇದು ಬ್ರಾಹ್ಮಣರ ವಸತಿಯಾಗುತ್ತದೆ. ನಾನೂ ಕೂಡ ಯಜ್ಞಪುರುಷನಾಗಿ ಈ ವನದಲ್ಲಿ ಕಾಣಿಸಿಕೊಳ್ಳುತ್ತೇನೆ. ನನ್ನ ಹೆಸರಿನಲ್ಲಿ ಸದಾ ಯಜ್ಞಗಳು ನಡೆಯಲಿ. ಮಣಿಯಿಂದ ಹುಟ್ಟಿದ ಈ ಹದಿನೈದು ನಾಯಕರು ಕೃತಯುಗದಲ್ಲಿ ರಾಜರಾಗುತ್ತಾರೆ.” ಹೀಗೆ ಹೇಳಿ ದೇವ ಈಶ್ವರನು ಅಂತರ್ಧಾನನಾದನು. ದ್ವಿಜನೂ ಕೂಡ ಪರಮಮುದದಿಂದ ತನ್ನ ಆಶ್ರಮದಲ್ಲಿ ನೆಲೆಸಿದನು.”

ಇತಿ ಶ್ರೀವರಾಹಪುರಾಣೇ ಆದಿಕೃತವೃತ್ತಾಂತೇ ಸೃಷ್ಟಿವರ್ಣನೇ ದುರ್ಜಯಚರಿತಂ ನಾಮ ಏಕಾದಶೋಽಧ್ಯಾಯಃ ।।

Leave a Reply

Your email address will not be published. Required fields are marked *