ಶ್ರೀಬ್ರಹ್ಮಾಂಡಪುರಾಣ: ಅಧ್ಯಾಯ 2
ಪ್ರತ್ಯವೋಚನ್ಪುನಃ ಸೂತಮೃಷಯಸ್ತೇ ತಪೋಧನಾಃ । ಕುತ್ರ ಸತ್ರಂ ಸಮಭತ್ತೇವಷಾಮದ್ಭುತಕರ್ಮಣಾಮ್ ।। 1 ।। ಕಿಯಂತಂ ಚೈವ ತತ್ಕಾಲಂ ಕಥಂ ಚ ಸಮವರ್ತ್ತತ । ಆಚಚಕ್ಷೇ ಪುರಾಣಂ ಚ ಕಥಂ ತತ್ಸಪ್ರಭಂಜನಃ ।। 2 ।। ಆಚಕ್ಷ್ವ ವಿಸ್ತರೇಣೈವ ಪರಂ ಕೌತೂಹಲಂ ಹಿ ನಃ । ಇತಿ ಸಂಚೋದಿತಃ ಸೂತಃ ಪ್ರತ್ಯುವಾಚ ಶುಭಂ ವಚಃ ।। 3 ।।
ಆ ತಪೋಧನ ಋಷಿಗಳು ಪುನಃ ಸೂತನಿಗೆ ಹೇಳಿದರು: “ಆ ಅದ್ಭುತಕರ್ಮಿಗಳ ಸತ್ರವು ಎಲ್ಲಿ ನಡೆಯಿತು? ಮತ್ತು ಅದು ಎಷ್ಟುಕಾಲದ ವರೆಗೆ ನಡೆಯಿತು. ಪ್ರಭಂಜನ ವಾಯುದೇವನು ಆ ಪುರಾಣವನ್ನು ಹೇಗೆ ಹೇಳಿದನು? ವಿಸ್ತಾರವಾಗಿಯೇ ಹೇಳು. ನಮಗೆ ಪರಮ ಕುತೂಹಲವಿದೆ.” ಹೀಗೆ ಪ್ರಶ್ನಿಸಲ್ಪಟ್ಟ ಸೂತನು ಈ ಶುಭಮಾತುಗಳನ್ನಾಡಿದನು:
ಶೃಣುಧ್ವಂ ಯತ್ರ ತೇ ಧೀರಾ ಮೇನಿರೇ ಸತ್ರಮುತ್ತಮಮ್ । ಯಾವಂತಂ ಚಾಭವತ್ಕಾಲಂ ಯಥಾ ಚ ಸಮವರ್ತತ ।। 4 ।। ಸಿಸೃಕ್ಷಮಾಣೋ ವಿಶ್ವಂ ಹಿ ಯಜತೇ ವಿಶ್ವಸೃಟ್ ಪುರಾ । ಸತ್ರಂ ಹಿ ತೇಽತಿಪುಣ್ಯಂ ಚ ಸಹಸ್ರಪರಿವತ್ಸರಾನ್ ।। 5 ।। ತಪೋ ಗೃಹಪತಿರ್ಯತ್ರ ಬ್ರಹ್ಮಾ ಚೈವಾಭವತ್ಸ್ವಯಮ್ । ಇಡಾಯಾ ಯತ್ರ ಪತ್ನೀತ್ವಂ ಶಾಮಿತ್ರಂ ಯತ್ರ ಬುದ್ಧಿಮಾನ್ ।। 6 ।। ಮೃತ್ಯುಶ್ಚಕ್ರೇ ಮಹಾತೇಜಾಸ್ತಸ್ಮಿನ್ಸತ್ರೇ ಮಹಾತ್ಮನಾಮ್ । ವಿಬುಧಾಶ್ಚೋಷಿರೇ ತತ್ರ ಸಹಸ್ರಪರಿವತ್ಸರಾನ್ ।। 7 ।।
ಧೀರರೇ! ಈ ಉತ್ತಮ ಸತ್ರವು ಎಲ್ಲಿ ಎಷ್ಟುಕಾಲದವರೆಗೆ ಹೇಗೆ ನಡೆಯಿತು ಎನ್ನುವುದನ್ನು ಕೇಳಿ. ಪೂರ್ವಕಾಲದಲ್ಲಿ ವಿಶ್ವದ ಸೃಷ್ಟಿಕರ್ತನು ವಿಶ್ವವನ್ನು ಸೃಷ್ಟಿಸುವಾಗ ಈ ಪುಣ್ಯ ಸತ್ರವನ್ನು ಸಹಸ್ರಸಂವತ್ಸರಗಳವರೆಗೆ ಯಜಿಸಿದನು. ಅದರಲ್ಲಿ ಸ್ವಯಂ ಬ್ರಹ್ಮನು ಯಜಮಾನನಾಗಿದ್ದನು. ಇಡೆಯು ಪತ್ನಿಯಾಗಿದ್ದಳು. ಬುದ್ಧಿಮಾನ್ ಮಹಾತೇಜಸ್ವೀ ಮೃತ್ಯುವು ಮಹಾತ್ಮರ ಆ ಸತ್ರದಲ್ಲಿ ಶಾಮಿತ್ರ[1]ನ ಕರ್ಮವನ್ನು ಮಾಡಿದನು. ದೇವತೆಗಳು ಅಲ್ಲಿ ಒಂದು ಸಾವಿರ ವರ್ಷ ಅಲ್ಲಿ ವಾಸಿಸಿದರು.
ಭ್ರಮತೋ ಧರ್ಮಚಕ್ರಸ್ಯ ಯತ್ರ ನೇಮಿರಶೀರ್ಯತ । ಕರ್ಮಣಾ ತೇನ ವಿಖ್ಯಾತಂ ನೈಮಿಷಂ ಮುನಿಪೂಜಿತಮ್ ।। 8 ।। ಯತ್ರ ಸಾ ಗೋಮತೀ ಪುಣ್ಯಾ ಸಿದ್ಧಚಾರಣಸೇವಿತಾ । ರೋಹಿಣೀ ಸಸುತಾ ತತ್ರ ಗೋಮತೀ ಸಾಭವತ್ ಕ್ಷಣಾತ್ ।। 9 ।। ಶಕ್ತಿರ್ಜ್ಯೇಷ್ಠಾ ಸಮಭವದ್ವಸಿಷ್ಠಸ್ಯ ಮಹಾತ್ಮನಃ । ಅರುಂಧತ್ಯಾಃ ಸುತಾ ಯಾತ್ರಾದಾನಮುತ್ತಮತೇಜಸಃ ।। 10 ।। ಕಲ್ಮಾಷಪಾದೋ ನೃಪತಿರ್ಯತ್ರ ಶಕ್ರಶ್ಚ ಶಕ್ತಿನಾ । ಯತ್ರ ವೈರಂ ಸಮಭವದ್ವಿಶ್ವಾಮಿತ್ರವಸಿಷ್ಠಯೋಃ ।। 11 ।। ಅದೃಶ್ಯಂತ್ಯಾಂ ಸಮಭವನ್ಮುನಿರ್ಯತ್ರ ಪರಾಶರಃ । ಪರಾಭವೋ ವಸಿಷ್ಠಸ್ಯ ಯಸ್ಯ ಜ್ಞಾನೇ ಹ್ಯವರ್ತಯತ್ ।। 12 ।। ತತ್ರ ತೇ ಮೇನಿರೇ ಶೈಲಂ ನೈಮಿಷೇ ಬ್ರಹ್ಮವಾದಿನಃ । ನೈಮಿಷಂ ಜಜ್ಞಿರೇ ಯಸ್ಮಾನ್ನೈಮಿಷೀಯಾಸ್ತತಃ ಸ್ಮೃತಾಃ ।। 13 ।।
ಆ ನೈಮಿಷದಲ್ಲಿ ಬ್ರಹ್ಮವಾದಿಗಳು ಬೆಟ್ಟವನ್ನು ಕಂಡರು. ಅದು ನೈಮಿಷಾರಣ್ಯ ಸಂಬಂಧವಾದುದರಿಂದ ಅವರೆಲ್ಲರೂ ಭ್ರಮಿಸುತ್ತಿದ್ದ ಧರ್ಮಚಕ್ರದ ನೇಮಿಯು ಅಲ್ಲಿ ಶೀರ್ಣವಾದುದರಿಂದ ಆ ಮುನಿಪೂಜಿತ ಸ್ಥಳವು ನೈಮಿಷವೆಂದು ವಿಖ್ಯಾತವಾಯಿತು. ಸಿದ್ಧಚಾರಣ ಸೇವಿತೆ ಪುಣ್ಯ ನದಿ ಗೋಮತಿಯು ಅಲ್ಲಿದೆ. ಅಲ್ಲಿ ಗೋಮತಿಯು ಕ್ಷಣದಲ್ಲಿಯೇ ರೋಹಿಣಿಯೆಂಬ ಪುತ್ರಿಸಹಿತಳಾದಳು. ಅಲ್ಲಿಯೇ ಮಹಾತ್ಮನ ವಸಿಷ್ಠನಿಗೆ ಅರುಂಧತಿಯಲ್ಲಿ ಉತ್ತಮತೇಜಸ್ವೀ ಶಕ್ತಿಯೆಂಬ ಜ್ಯೇಷ್ಠ ಪುತ್ರನು ಜನಿಸಿದನು.[2] ಅಲ್ಲಿಯೇ ನೃಪತಿ ಕಲ್ಮಾಷಪಾದನು ಶಕ್ರ[3] ಮತ್ತು ಶಕ್ತಿಯನ್ನು ಭೇಟಿಯಾದನು ಮತ್ತು ಅಲ್ಲಿಯೇ ವಿಶ್ವಾಮಿತ್ರ-ವಸಿಷ್ಠರ ನಡುವೆ ವೈರವುಂಟಾಯಿತು. ಅಲ್ಲಿಯೇ ಶಕ್ತಿಯ ಪತ್ನಿ ಅದೃಶ್ಯಂತಿಯಲ್ಲಿ ಮುನಿ ಪರಾಶರನು ಹುಟ್ಟಿದ್ದನು. ಪರಾಶರನ ಜ್ಞಾನವು ವಸಿಷ್ಠನ ಜ್ಞಾನವನ್ನೂ ಮೀರಿಸಿತ್ತು.[4] ನೈಮಿಷೀಯರಾದರು.
ತತ್ಸತ್ರಮಭವತ್ತೇಷಾಂ ಸಮಾ ದ್ವಾದಶ ಧೀಮತಾಮ್ । ಪುರೂರವಸಿ ವಿಕ್ರಾಂತೇ ಪ್ರಶಾಸತಿ ವಸುಂಧರಾಮ್ ।। 14 ।। ಅಷ್ಟಾದಶ ಸಮುದ್ರಸ್ಯ ದ್ವೀಪಾನಶ್ನನ್ ಪುರೂರವಾಃ । ತುತೋಷ ನೈವ ರತ್ನಾನಾಂ ಲೋಭಾದಿತಿ ಹಿ ನಃ ಶ್ರುತಮ್ ।। 15 ।। ಉರ್ವಶೀ ಚಕಮೇ ತಂ ಚ ದೇವದೂತಪ್ರಚೋದಿತಾ । ಆಜಹಾರ ಚ ತತ್ಸತ್ರಮುರ್ವಶ್ಯಾ ಸಹ ಸಂಗತಃ ।। 16 ।। ತಸ್ಮಿನ್ನರಪತೌ ಸತ್ರೇ ನೈಮಿಷೀಯಾಃ ಪ್ರಚಕ್ರಿರೇ । ಯಂ ಗರ್ಭಂ ಸುಷುವೇ ಗಂಗಾ ಪಾವಕಾದ್ದೀಪ್ತತೇಜಸಮ್ ।। 17 ।। ತತ್ತುಲ್ಯಂ ಪರ್ವತೇ ನ್ಯಸ್ತಂ ಹಿರಣ್ಯಂ ಸಮಪದ್ಯತ । ಹಿರಣ್ಮಯಂ ತತಶ್ಚಕ್ರೇ ಯಜ್ಞವಾಟಂ ಮಹಾತ್ಮನಾಮ್ ।। 18 ।। ವಿಶ್ವಕರ್ಮಾ ಸ್ವಯಂ ದೇವೋ ಭಾವನೋ ಲೋಕಭಾವನಃ । ಸ ಪ್ರವಿಶ್ಯ ತತಃ ಸತ್ರೇ ತೇಷಾಮಮಿತತೇಜಸಾಮ್ ।। 19 ।। ಐಡಃ ಪುರೂರವಾ ಭೇಜೇ ತಂ ದೇಶಂ ಮೃಗಯಾಂ ಚರನ್ । ತಂ ದೃಷ್ಟ್ವಾ ಮಹಾದಾಶ್ಚರ್ಯಂ ಯಜ್ಞವಾಟಂ ಹಿರಣ್ಮಯಮ್ ।। 20 ।। ಲೋಭೇನ ಹತವಿಜ್ಞಾನಸ್ತದಾದಾತುಮುಪಾಕ್ರಮತ್ । ನೈಮಿಷೇಯಾಸ್ತತಸ್ತಸ್ಯ ಚುಕ್ರುಧುರ್ನೃಪತಿಂ ಭೃಶಮ್ ।। 21 ।। ನಿಜಘ್ನುಶ್ಚಾಪಿ ತಂ ಕ್ರುದ್ಧಾಃ ಕುಶವಜ್ರೈರ್ಮನೀಷಿಣಃ । ತಪೋನಿಷ್ಠಾಶ್ಚ ರಾಜಾನಂ ಮುನಯೋ ದೇವಚೋದಿತಾಃ ।। 22 ।। ಕುಶವಜ್ರೈರ್ವಿನಿಷ್ಪಿಷ್ಟಃ ಸ ರಾಜಾ ವ್ಯಜಹಾತ್ತನುಮ್ ।
ಪುರೂರವನು ವಿಕ್ರಾಂತದಿಂದ ವಸುಂಧರೆಯನ್ನು ಆಳುತ್ತಿದ್ದ ಕಾಲದಲ್ಲಿ ಅಲ್ಲಿ ಧೀಮತರ ಹನ್ನೆರಡು ವರ್ಷಗಳ ಸತ್ರವು ಅಲ್ಲಿ ನಡೆಯಿತು. ಸಮುದ್ರಗಳ ಮಧ್ಯದ 18 ದ್ವೀಪಗಳನ್ನು ಭೋಗಿಸುತ್ತಿದ್ದ ಪುರೂರವನು ರತ್ನಗಳ ಲೋಭದಿಂದ ಸಂತುಷ್ಟನಾಗಲಿಲ್ಲವೆಂದು ನಾವು ಕೇಳಿದ್ದೇವೆ. ದೇವದೂತನಿಂದ ಪ್ರಚೋದಿತಳಾದ ಊರ್ವಶಿಯು ರಾಜನನ್ನು ಕಾಮಿಸಿದಳು. ಊರ್ವಶಿಯೊಡನೆಯೇ ಅವನು ಆ ಸತ್ರವನ್ನು ನಡೆಸಿದನು. ಅವನ ಆಳ್ವಿಕೆಯಲ್ಲಿಯೇ ನೈಮಿಷೀಯರು ಸತ್ರವನ್ನು ಪ್ರಾರಂಭಿಸಿದರು. ಆಗ ಪರ್ವತದಲ್ಲಿ ಹಾಕಿದ್ದ ಹಿರಣ್ಯವು ಅಗ್ನಿಯಿಂದ ಗಂಗೆಯು ಹುಟ್ಟಿಸಿದ್ದ ದೀಪ್ತತೇಜಸ ಗರ್ಭದಂತೆಯೇ ತೋರುತ್ತಿತ್ತು. ಸ್ವಯಂ ಲೋಕಭಾವನ ದೇವ ವಿಶ್ವಕರ್ಮನು ಹಿರಣ್ಮಯ ಯಜ್ಞವಾಟಿಕೆಯನ್ನು ನಿರ್ಮಿಸಿದನು. ಅಮಿತತೇಜಸ್ವಿಗಳ ಆ ಸತ್ರವು ನಡೆಯುತ್ತಿರಲು ಆ ಪ್ರದೇಶದಲ್ಲಿ ಬೇಟೆಯಾಡುತ್ತಿದ್ದ ಇಳಾಪುತ್ರ ಪುರೂರವನು ಅಲ್ಲಿ ಪ್ರವೇಶಿಸಿದನು. ಹಿರಣ್ಮಯವಾದ ಯಜ್ಞವಾಟಿಕೆಯ ಮಹದಾಶ್ಚರ್ಯವನ್ನು ಕಂಡು ಲೋಭದಿಂದ ವಿವೇಕಭ್ರಷ್ಟನಾಗಿ ಅದನ್ನು ಪಡೆದುಕೊಳ್ಳಲು ಯತ್ನಿಸಿದನು. ಆಗ ಮನೀಷಿಣ ನೈಮಿಷೇಯರು ಮಹರ್ಷಿಗಳು ಕ್ರುದ್ಧರಾಗಿ ದರ್ಭೆಗಳ ರೂಪದ ವಜ್ರಾಯುಧಗಳಿಂದ ನೃಪತಿಯನ್ನು ಪ್ರಹರಿಸಿದರು. ದೇವಚೋದಿತರಾದ ತಪೋನಿಷ್ಠ ಮುನಿಗಳು ಕುಶವಜ್ರಗಳಿಂದ ಅವನನ್ನು ಹೊಡೆಯಲು ರಾಜನು ದೇಹತ್ಯಾಗಮಾಡಿದನು.
ಔರ್ವಶೇಯೈಸ್ತತಸ್ತಸ್ಯ ಯುದ್ಧಂ ಚಕ್ರೇ ನೃಪೋ ಭುವಿ ।। 23 ।। ನಹುಷಸ್ಯ ಮಹಾತ್ಮಾನಂ ಪಿತರಂ ಯಂ ಪ್ರಚಕ್ಷತೇ । ಸ ತೇಷ್ವವಭೃಥೇಷ್ವೇವ ಧರ್ಮಶೀಲೋ ಮಹೀಪತಿಃ ।। 24 ।। ಆಯುರಾಯಭವಾಯಾಗ್ರ್ಯಮಸ್ಮಿನ್ ಸತ್ರೇ ನರೋತ್ತಮಃ । ಶಾಂತಯಿತ್ವಾ ತು ರಾಜಾನಂ ತದಾ ಬ್ರಹ್ಮವಿದಸ್ತಥಾ ।। 25 ।। ಸತ್ರಮಾರೇಭಿರೇ ಕರ್ತ್ತುಂ ಪೃಥ್ವೀವತ್ಸಾತ್ಮಮೂರ್ತಯಃ ।
ಮಹಾತ್ಮ ನಹುಷನ ತಂದೆಯೆಂದು ಪ್ರಸಿದ್ಧನಾದ ಔರ್ವಶೇಯ ನೃಪನು ಆಗ ಅಲ್ಲಿಯೇ ಯುದ್ಧವನ್ನು ನಡೆಸಿದನು. ಆದರೆ ಆ ಮಹೀಪತಿಯು ಅವಭೃಥಪರ್ಯಂತ ಕರ್ಮಾನುಷ್ಠಾನದಲ್ಲಿ ಧರ್ಮಶೀಲನಾಗಿದ್ದನು. ಆದ್ದರಿಂದ ಆ ನರೋತ್ತಮನು ಆ ಸತ್ರದಿಂದ ಆಯುರೈಶ್ವರ್ಯಾದಿಗಳನ್ನು ಪಡೆದುಕೊಂಡನು. ರಾಜನನ್ನು ಶಾಂತಗೊಳಿಸಿ ಬ್ರಹ್ಮವಿದರು ಪೃಥ್ವಿಯಂತೆ ಸಮತ್ವಬುದ್ಧಿಯಿಂದ ಕೂಡಿ ಸತ್ರವನ್ನು ಮಾಡಲಾರಂಭಿಸಿದರು.
ಬಭೂವ ಸತ್ರೇ ತೇಷಾಂ ತು ಬ್ರಹ್ಮಚರ್ಯಂ ಮಹಾತ್ಮನಾಮ್ ।। 26 ।। ವಿಶ್ವಂ ಸಿಸೃಕ್ಷಮಾಣಾನಾಂ ಪುರಾ ವಿಶ್ವಸೃಜಾಮಿವ । ವೈಖಾನಸೈಃ ಪ್ರಿಯಸಖೈರ್ವಾಲಖಿಲ್ಯೈರ್ಮರೀಚಿಭಿಃ ।। 27 ।। ಅಜೈಶ್ಚ ಮುನಿಭಿರ್ಜಾತಂ ಸೂರ್ಯವೈಶ್ವಾನರಪ್ರಭೈಃ । ಪಿತೃದೇವಾಪ್ಸರಃಸಿದ್ಧೈರ್ಗಂಧರ್ವೋರಗಚಾರಣೈಃ ।। 28 ।। ಭಾರತೈಃ ಶುಶುಭೇ ರಾಜಾ ದೇವೈರಿಂದ್ರಸಮೋ ಯಥಾ । ಸ್ತೋತ್ರಶಸ್ತ್ರೈರ್ಗೃಹೈರ್ದೇವಾನ್ಪಿತೄನ್ಪಿತ್ರ್ಯೈಶ್ಚ ಕರ್ಮಭಿಃ ।। 29 ।। ಆನರ್ಚುಃ ಸ್ಮ ಯಥಾಜಾತಿ ಗಂಧರ್ವಾದೀನ್ ಯಥಾವಿಧಿ । ಆರಾಧನೇ ಸ ಸಸ್ಮಾರ ತತಃ ಕರ್ಮಾಂತರೇಷು ಚ ।। 30 ।। ಜಗುಃ ಸಾಮಾನಿ ಗಂಧರ್ವಾ ನನೃತುಶ್ಚಾಪ್ಸರೋಗಣಾಃ । ವ್ಯಾಜಹ್ರುರ್ಮುನಯೋ ವಾಚಂ ಚಿತ್ರಾಕ್ಷರಪದಾಂ ಶುಭಾಮ್ ।। 31 ।। ಮಂತ್ರಾದಿ ತತ್ರ ವಿದ್ವಾಂಸೋ ಜಜಪುಶ್ಚ ಪರಸ್ಪರಮ್ । ವಿತಂಡಾವಚನೈಶ್ಚೈವ ನಿಜಘ್ನುಃ ಪ್ರತಿವಾದಿನಃ ।। 32 ।। ಋಷಯಶ್ಚೈವ ವಿದ್ವಾಂಸಃ ಶಬ್ದಾರ್ಥನ್ಯಾಯಕೋವಿದಾಃ । ನ ತತ್ರ ಹಾರಿತಂ ಕಿಂಚಿದ್ವಿವಿಶುರ್ಬ್ರಹ್ಮರಾಕ್ಷಸಾಃ ।। 33 ।। ನೈವ ಯಜ್ಞಹರಾ ದೈತ್ಯಾ ನೈವ ದಾಜಮುಖಾಸ್ತ್ರಿಣಃ । ಪ್ರಾಯಶ್ಚಿತ್ತಂ ದರಿದ್ರಂ ಚ ನ ತತ್ರ ಸಮಜಾಯತ ।। 34 ।।
ಹಿಂದೆ ವಿಶ್ವವನ್ನು ಸೃಷ್ಟಿಸಿದ ವಿಶ್ವಸೃಜರು ಆಚರಿಸಿದ ಬ್ರಹ್ಮಚರ್ಯವನ್ನು ಆ ಸತ್ರದಲ್ಲಿದ್ದ ಮಹಾತ್ಮರೂ ಪಾಲಿಸಿದರು. ಆ ಸತ್ರದಲ್ಲಿ ಸೂರ್ಯಾಗ್ನಿತೇಜಸ್ವಿಗಳಾದ ವಾಲಖಿಲ್ಯ, ಪ್ರಿಯಸಖ, ವೈಖಾನಸ, ಮರೀಚಿ ಮತ್ತು ಅಜರೆಂಬ ಮುನಿಗಳೂ, ಪಿತೃ-ದೇವತೆಗಳು, ಅಪ್ಸರೆಯರು, ಸಿದ್ಧರು, ಗಂಧರ್ವ-ಉರಗ-ಚಾರಣರಿಂದಲೂ ಮತ್ತು ಭಾರತೀಯರಿಂದ ಸುತ್ತುವರೆಯಲ್ಪಟ್ಟು ಕುಳಿತಿದ್ದ ರಾಜನು ದೇವತೆಗಳ ಮಧ್ಯದಲ್ಲಿದ್ದ ಇಂದ್ರನಂತೆ ಶೋಭಿಸಿದನು. ಸ್ತೋತ್ರಶಸ್ತ್ರಗಳಿಂದಲೂ, ದೇವ-ಪಿತೃ ಕಾರ್ಯಗಳಿಂದಲೂ ಯಥಾಜಾತಿ ಯಥಾವಿಧಿಯಾಗಿ ಅರ್ಚಿಸಿದರು. ನಂತರ ಕರ್ಮಾಂತರಗಳಲ್ಲಿ ಗಂಧರ್ವಾದಿಗಳ ಸೇವೆಯನ್ನು ಸ್ಮರಿಸಿದನು. ಗಂಧರ್ವರು ಸಾಮವೇದವನ್ನು ಹಾಡಿದರು. ಅಪ್ಸರಗಣಗಳು ನರ್ತಿಸಿದರು. ಮುನಿಗಳು ಚಿತ್ರಾಕ್ಷರಪದಗಳ ಶುಭ ವಚನಗಳನ್ನಾಡಿದರು. ಮಂತ್ರಗಳ ವಿದ್ವಾಂಸರು ಪರಸ್ಪರ ಮಂತ್ರಜಪವನ್ನಾಚರಿಸಿದರು. ವಿತಂಡಾಕ್ಷೇಪಗಳಿಂದ ಒಬ್ಬರನ್ನೊಬ್ಬರು ಗೆದ್ದರು. ಶಬ್ದಾರ್ಥನ್ಯಾಯಕೋವಿದರಾಗಿದ್ದ ಋಷಿಗಳು ವಿದ್ವಾಂಸರಾಗಿದ್ದರು. ಯಜ್ಞಫಲವನ್ನು ಅಪಹರಿಸಲು ಯಾವ ಬ್ರಹ್ಮರಾಕ್ಷಸರಿಗೂ ಅವಕಾಶವೊದಗಲಿಲ್ಲ. ಅಲ್ಲಿ ಯಜ್ಞವನ್ನು ಅಪಹರಿಸುವ ದೈತ್ಯರಿರಲಿಲ್ಲ. ಕರ್ಮಕ್ಕೆ ಲೋಪಬಂದು ಅದಕ್ಕೆ ಪ್ರಾಯಶ್ಚಿತ್ತವಾಗಲೀ ನ್ಯೂನತೆಯಾಗಲೀ ಉಂಟಾಗಲಿಲ್ಲ.
ಶಕ್ತಿಪ್ರಜ್ಞಾಕ್ರಿಯಾಯೋಗೈರ್ವಿಧಿರಾಶೀಃಷ್ವನುಷ್ಠಿತಃ । ಏವಂ ಚ ವವೃಧೇ ಸತ್ರಂ ದ್ವಾದಶಾಬ್ದಂ ಮನೀಷಿಣಾಮ್ ।। 35 ।। ಋಷೀಣಾಂ ನೈಮಿಷೀಯಾಣಾಂ ತದಭೂದಿವ ವಜ್ರಿಣಃ । ವೃದ್ಧಾದ್ಯಾ ಋತ್ವಿಜೋ ವೀರಾ ಜ್ಯೋತಿಷ್ಟೋಮಾನ್ಪೃಥಕ್ಪೃಥಕ್ ।। 36 ।। ಚಕ್ರಿರೇ ಪೃಷ್ಠಗಮನಾಃ ಸರ್ವಾನಯುತದಕ್ಷಿಣಾನ್ । ಸಮಾಪ್ತಯಜ್ಞೋ ಯತ್ರಾಸ್ತೇ ವಾಸುದೇವಂ ಮಹಾಧಿಪಮ್ ।। 37 ।। ಪಪ್ರಚ್ಛುರಮಿತಾತ್ಮಾನಂ ಭವದ್ಭಿರ್ಯದಹಂ ದ್ವಿಜಃ । ಪ್ರಚೋದಿತಃ ಸ್ವವಂಶಾರ್ಥಂ ಸ ಚ ತಾನಬ್ರವೀತ್ಪ್ರಭುಃ ।। 38 ।।
ಶಕ್ತಿ, ಪ್ರಜ್ಞೆ, ಕ್ರಿಯೆ ಮತ್ತು ಯೋಗವಿಧಿಗಳಿಂದ ಅನುಷ್ಠಾನಗೊಂಡ ಮನೀಷಿಣರ ಆ ಸತ್ರವು 12 ವರ್ಷಗಳ ಕಾಲ ಬೆಳೆಯಿತು. ನೈಮಿಷೀಯ ಋಷಿಗಳ ಆ ಯಜ್ಞವು ದೇವೇಂದ್ರನ ಯಜ್ಞದಂತೆ ಸಮೃದ್ಧಿಯಿಂದ ಕೂಡಿತ್ತು. ವೃದ್ಧಾದಿ ವೀರ ಋತ್ವಿಜರು ಪೃಷ್ಠ ಸ್ತೋತ್ರಗಳಿಂದ ಅಯುತ ಸಂಖ್ಯೆಯ ದಕ್ಷಿಣೆಗಳನ್ನಿತ್ತು ಪ್ರತ್ಯೇಕ ಪ್ರತ್ಯೇಕವಾಗಿ ಜ್ಯೋತಿಷ್ಟೋಮಯಾಗಗಳನ್ನು ಮಾಡಿದರು. ಯಜ್ಞವು ಸಮಾಪ್ತಗೊಳ್ಳಲು ದ್ವಿಜರು ಮಹಾಧಿಪ ಅಮಿತಾತ್ಮ ವಾಸುದೇವ ವಾಯುವನ್ನು ನೀವು ನನ್ನನ್ನು ಹೇಗೋ ಹಾಗೆ ಪ್ರಶ್ನಿಸಿದರು. ತನ್ನ ವಂಶದ ಕುರಿತು ಪ್ರಶ್ನಿಸಲ್ಪಟ್ಟ ಆ ಪ್ರಭುವು ಅವರಿಗೆ ಹೇಳಿದನು.
ಶಿಷ್ಯಃ ಸ್ವಯಂಭುವೋ ದೇವಃ ಸರ್ವಂ ಪ್ರತ್ಯಕ್ಷದೃಗ್ವಶೀ । ಅಣಿಮಾದಿಭಿರಷ್ಟಾಭಿಃ ಸೂಕ್ಷ್ಮೈರಂಗೈಃ ಸಮನ್ವಿತಃ ।। 39 ।। ತಿರ್ಯಗ್ವಾತಾದಿಭಿರ್ವರ್ಷೈಃ ಸರ್ವಾನ್ ಲ್ಲೋಕಾನ್ಬಿಭರ್ತಿ ಯಃ । ಸಪ್ತಸ್ಕಂಧಾ ಭೃತಾಃ ಶಾಖಾಃ ಸರ್ವತೋಯಾಜರಾಜರಾನ್ ।। 40 ।। ವಿಷಯೈರ್ಮರುತೋ ಯಸ್ಯ ಸಂಸ್ಥಿತಾಃ ಸಪ್ತಸಪ್ತಕಾಃ । ವ್ಯೂಹತ್ರಯಾಣಾಂ ಭೂತಾನಾಂ ಕುರ್ವನ್ಸತ್ರಂ ಮಹಾಬಲಃ ।। 41 ।। ತೇಜಸಶ್ವಾಪ್ಯುಪಾಯಾನಾಂ ದಧಾತೀಹ ಶರೀರಿಣಃ । ಪ್ರಾಣಾದ್ಯಾ ವೃತ್ತಯಃ ಪಂಚ ಧಾರಣಾನಾಂ ಸ್ವವೃತ್ತಿಭಿಃ ।। 42 ।। ಪೂರ್ಯಮಾಣಃ ಶರೀರಾಣಾಂ ಧಾರಣಂ ಯಸ್ಯ ಕುರ್ವತೇ । ಆಕಾಶಯೋನಿರ್ದ್ವಿಗುಣಃ ಶಬ್ದಸ್ಪರ್ಶಸಮನ್ವಿತಃ ।। 43 ।। ವಾಚೋರಣಿಃ ಸಮಾಖ್ಯಾತಾ ಶಬ್ದಶಾಸ್ತ್ರವಿಚಕ್ಷಣೈಃ ।
ಬ್ರಹ್ಮನ ಶಿಷ್ಯನಾದ ಆ ದೇವನು ಸರ್ವವನ್ನೂ ಪ್ರತ್ಯಕ್ಷ ಸಾಕ್ಷಾತ್ಕರಿಸಿದವನು. ಅಣಿಮಾದಿ ಅಷ್ಟೈಶ್ವರ್ಯಗಳಿಂದ ಸೂಕ್ಷ್ಮ ವಿಭೂತಿ ಅಂಗಗಳಿಂದ ಸಮನ್ವಿತನಾಗಿರುವನು. ಅಡ್ಡವಾಗಿ ಬೀಸುವ ಗಾಳಿ-ಮಳೆಗಳಿಂದ ಸರ್ವಲೋಕಗಳನ್ನೂ ರಕ್ಷಿಸುವವನು. ಜರಾಮೃತ್ಯುಗಳಿಲ್ಲದೇ ಸಪ್ತಸ್ಕಂಧಗಳೆಂಬ ಶಾಖೆಗಳನ್ನು ಧರಿಸಿರುವವನು. ವಾಯು ವಿಭೂತಿಗಳು ಏಳು ಭಾಗಗಳಿಂದ ಕೂಡಿದ ಏಳು ವೃಂದರೂಪಗಳಾಗಿ ಆಯಾಯಾ ವಿಷಯಗಳನ್ನು ವ್ಯಾಪಿಸಿವೆ. ಪೃಥ್ವೀ, ಜಲ, ತೇಜ ಎಂಬ ಭೂತತ್ರಯಗಳ ವ್ಯೂಹಗಳನ್ನು ರಚಿಸಿದವನು ವಾಯುದೇವನು. ಪ್ರಾಣಿಗಳಲ್ಲಿ ಜಠರಾಗ್ನಿ ರೂಪದ ತೇಜಸ್ಸನ್ನು ಪೋಷಿಸುತ್ತಾನೆ. ತಮ್ಮ ತಮ್ಮ ವೃತ್ತಿಗಳಿರುವ ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನಗಳೆಂಬ ಐದು ಪ್ರಾಣವನ್ನು ಧರಿಸಿ, ಶರೀರಗಳನ್ನು ತುಂಬಿ ಧಾರಣಕಾರ್ಯವನ್ನು ಮಾಡುವನು. ಆಕಾಶಯೋನಿಯಿಂದ ಹುಟ್ಟಿ ಶಬ್ದ-ಸ್ಪರ್ಶಗಳೆಂಬ ಗುಣಗಳಿಂದ ಸಮನ್ವಿತನಾಗಿರುವನು. ಶಬ್ದಶಾಸ್ತ್ರವಿಚಕ್ಷಣರು ಇವನನ್ನು ವಾಕ್ಕಿನ ಅರಣಿಎಂದು ಹೇಳುತ್ತಾರೆ.
ಭಾರತ್ಯಾ ಶ್ಲಕ್ಷ್ಣಯಾ ಸರ್ವಾನ್ಮುನೀನ್ಪ್ರಹ್ಲಾದಯನ್ನಿವ ।। 44 ।। ಪುರಾಣಜ್ಞಾಃ ಸುಮನಸಃ ಪುರಾಣಾಶ್ರಯಯುಕ್ತಯಾ । ಪುರಾಣನಿಯತಾ ವಿಪ್ರಾಃ ಕಥಾಮಕಥಯದ್ವಿಭುಃ ।। 45 ।। ಏತತ್ಸರ್ವಂ ಯಥಾವೃತ್ತಮಾಖ್ಯಾನಂ ದ್ವಿಜಸತ್ತಮಾಃ । ಋಷೀಣಾಂ ಚ ಪರಂ ಚೈತಲ್ಲೋಕತತ್ತ್ವಮನುತ್ತಮಮ್ ।। 46 ।। ಬ್ರಹ್ಮಣಾ ಯತ್ಪುರಾ ಪ್ರೋಕ್ತಂ ಪುರಾಣಂ ಜ್ಞಾನಮುತ್ತಮಮ್ । ದೇವತಾನಾಮೃಷೀಣಾಂ ಚ ಸರ್ವಪಾಪಪ್ರಮೋಚನಮ್ ।। 47 ।। ವಿಸ್ತರೇಣಾನುಪೂರ್ವ್ಯಾ ಚ ತಸ್ಯ ವಕ್ಷ್ಯಾಮ್ಯನುಕ್ರಮಮ್ ।। 48 ।।
ವಿಪ್ರರೇ! ದ್ವಿಜಸತ್ತಮರೇ! ಪುರಾಣಜ್ಞರಾದ ಸುಮನಸರಾದ ಸರ್ವಮುನಿಗಳನ್ನೂ ಸಂತೋಷಪಡಿಸಲು ಮೃದುಭಾಷೆಯಲ್ಲಿ ವಿಭು ವಾಯುದೇವನು ಋಷಿಗಳ ಪರಮ ಲೋಕತತ್ತ್ವರೂಪಕವಾದ ಉತ್ತಮ ಪುರಾಣನಿಯತ ಕಥೆಗಳನ್ನು ಹೇಳಿದನು. ಹಿಂದೆ ಬ್ರಹ್ಮನು ದೇವತೆಗಳು ಮತ್ತು ಋಷಿಗಳಿಗೆ ಹೇಳಿದ್ದುದನ್ನೇ ವಾಯುವು ಹೇಳಿದ ಸರ್ವಪಾಪಗಳನ್ನೂ ಧ್ವಂಸಮಾಡುವ ಪುರಾಣಜ್ಞಾನವನ್ನು ವಿಸ್ತಾರವಾಗಿ ಕ್ರಮಬದ್ಧವಾಗಿ ಹೇಳುತ್ತೇನೆ.”
ಇತಿ ಶ್ರೀಬ್ರಹ್ಮಾಂಡೇ ಮಹಾಪುರಾಣೇ ವಾಯುಪ್ರೋಕ್ತೇ ಪೂರ್ವಭಾಗೇ ಪ್ರಥಮೇ ಪ್ರಕ್ರಿಯಾಪಾದೇ ನೈಮಿಷಾಖ್ಯಾನಕಥನಂ ನಾಮ ದ್ವಿತೀಯೋಽಧ್ಯಾಯಃ ।।
[1] ಶಾಮಿತ್ರ ಎಂದರೆ ಯಜ್ಞಪಶುಬಂಧನ ಅಥವಾ ಯಜ್ಞಪಶುವಧೆ (ಸಂಸ್ಕೃತ-ಕನ್ನಡ ನಿಘಂಟು, ಜಿ.ಎನ್. ಚಕ್ರವರ್ತಿ, ಗೀತಾ ಬುಕ್ ಹೌಸ್, ಮೈಸೂರು, 2009).
[2] ಶಕ್ತಿಯು ವಸಿಷ್ಠನ ಜ್ಯೇಷ್ಠ ಪುತ್ರನೆಂದು ಇತರ ಪುರಾಣ-ಇತಿಹಾಸಗಳಲ್ಲಿದೆ. ಆದರೂ ಈ ಶ್ಲೋಕದಲ್ಲಿ ಜ್ಯೇಷ್ಠಾ ಮತ್ತು ಸುತಾ ಎಂಬ ಸ್ತ್ರೀಲಿಂಗ ವಾಚಕ ಪದಗಳಿವೆ ಎನ್ನುವುದನ್ನು ಗಮನಿಸಬೇಕು. ಈ ಶ್ಲೋಕವನ್ನು ವಾಯುಪುರಾಣದ ಅಧ್ಯಾಯ 2 ರ 9ನೇ ಶ್ಲೋಕಕ್ಕೆ ಹೋಲಿಸಿ: ಶಕ್ತಿರ್ಜ್ಯೇಷ್ಠಃ ಸಮಭವದ್ವಸಿಷ್ಠಸ್ಯ ಮಹಾತ್ಮನಃ । ಅರುಂಧ್ಯತ್ಯಾಃ ಸುತಾ ಯತ್ರ ಶತಮುತ್ತಮತೇಜಸಃ ।। ಅರ್ಥಾತ್: ಯಾವ ಸ್ಥಳದಲ್ಲಿ ಮಹಾತ್ಮಾ ವಸಿಷ್ಠನಿಗೆ ಅರುಂಧರಿಯಲ್ಲಿ ಮಹಾತೇಜಸ್ವಿಗಳಾದ ನೂರು ಮಕ್ಕಳು ಜನಿಸಿದರೋ ಮತ್ತು ಅವರಲ್ಲಿ ಶಕ್ತಿ ಎನ್ನುವವನು ಹಿರಿಯ ಮಗನಾಗಿದ್ದನೋ... (ಶ್ರೀಮದ್ವಾಯುಪುರಾಣಂ, ಸಂಚಿಕೆ 1, ಅನುವಾದಕ ಆರ್. ಸೇತುಮಾಧವಾಚಾರ್, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ, ಸಂಖ್ಯೆ 38, ಶ್ರೀಶಾರದಾ ಎಲೆಕ್ಟ್ರಿಕ್ ಪ್ರೆಸ್, ಮೈಸೂರು).
[3] ವಾಯುಪುರಾಣದ 2ನೇ ಅಧ್ಯಾಯದ 10ನೇ ಶ್ಲೋಕವು ಈ ಶ್ಲೋಕಕ್ಕೆ ಹೋಲುತ್ತದೆ ಮತ್ತು ಅಲ್ಲಿ ಶಕ್ರಃ ಎನ್ನುವುದಕ್ಕೆ ಬದಲಾಗಿ ಶಪ್ತಃ ಎಂಬ ಪದವಿದೆ: ಕಲ್ಮಾಷಪಾದೋ ನೃಪತಿಃ ಯತ್ರ ಶಪ್ತಶ್ಚ ಶಕ್ತಿನಾ । ಯತ್ರ ವೈರಂ ಸಮಭವದ್ವಿಶ್ವಾಮಿತ್ರವಸಿಷ್ಠಯೋಃ ।।
[4] ಮೈಸೂರಿನ ಗ್ರಂಥಮಾಲೆಯಲ್ಲಿ ಪರಾಭವೋ ವಸಿಷ್ಠಸ್ಯ ಯಸ್ಯ ಜ್ಞಾನೇ ಹ್ಯವರ್ತಯತ್ । ಎನ್ನುವುದಕ್ಕೆ ಜ್ಞಾನಪರೀಕ್ಷೆಯಲ್ಲಿ ವಸಿಷ್ಠರಿಗೆ ಪರಾಜಯವು ಯಾವಸ್ಥಳದಲ್ಲಿ ಪ್ರಾಪ್ತವಾಯಿತೋ ಅದು ನೈಮಿಷಾರಣ್ಯವು” ಎಂಬ ಅನುವಾದವಿದೆ. ಮಹಾಭಾರತದ ಆದಿಪರ್ವದ ಅಧ್ಯಾಯ 167ರ ಪ್ರಕಾರ ಪರಾಶರನು ಗರ್ಭದಲ್ಲಿರುವಾಗಲೇ ವೇದಾಧ್ಯಯನವನ್ನು ಮಾಡುತ್ತಿದ್ದನು ಎಂದಿದೆ. ಆದರೆ ಅವನು 12 ವರ್ಷಗಳ ಪರ್ಯಂತ ವೇದಾಧ್ಯಯನ ಮಾಡುತ್ತಾ ಗರ್ಭದಲ್ಲಿಯೇ ಇದ್ದನು ಎನ್ನುವುದು ವಸಿಷ್ಠನಿಗೆ ಗೊತ್ತೇ ಇರಲಿಲ್ಲ ಎಂದೂ ಇದೆ.