ಶ್ರೀಕೂರ್ಮಪುರಾಣ: ಅಧ್ಯಾಯ 96

 

 

ಸೂತ ಉವಾಚ । ಇದಂ ತ್ರೈಲೋಕ್ಯವಿಖ್ಯಾತಂ ತೀರ್ಥಂ ನೈಮಿಷಮುತ್ತಮಮ್ । ಮಹಾದೇವಪ್ರಿಯಕರಂ ಮಹಾಪಾತಕನಾಶನಮ್ ।। 1 ।। ಮಹಾದೇವಂ ದಿದೃಕ್ಷೂಣಾಮೃಷೀಣಾಂ ಪರಮೇಷ್ಠಿನಾ । ಬ್ರಹ್ಮಣಾ ನಿರ್ಮಿತಂ ಸ್ಥಾನಂ ತಪಸ್ತಪ್ತುಂ ದ್ವಿಜೋತ್ತಮಾಃ ।। 2 ।। ಮರೀಚಯೋಽತ್ರಯೋ ವಿಪ್ರಾ ವಸಿಷ್ಠಾಃ ಕ್ರತವಸ್ತಥಾ । ಭೃಗವೋಽಂಗಿರಸಃ ಪೂರ್ವಂ ಬ್ರಹ್ಮಾಣಂ ಕಮಲೋದ್ಭವಮ್ ।। 3 ।। ಸಮೇತ್ಯ ಸರ್ವವರದಂ ಚತುರ್ಮೂರ್ತಿಂ ಚತುರ್ಮುಖಮ್ । ಪೃಚ್ಛಂತಿ ಪ್ರಣಿಪತ್ಯೈನಂ ವಿಶ್ವಕರ್ಮಾಣಮವ್ಯಯಮ್ ।। 4 ।।

ಸೂತನು ಹೇಳಿದನು: “ಮಹಾದೇವನಿಗೆ ಪ್ರಿಯಕರವಾದ, ಮಹಾಪಾತಕಗಳನ್ನು ನಾಶಪಡಿಸುವ ಈ ಉತ್ತಮ ನೈಮಿಷ ತೀರ್ಥವು ತ್ರೈಲೋಕ್ಯವಿಖ್ಯಾತವು. ದ್ವಿಜೋತ್ತಮರೇ! ಮಹಾದೇವನನ್ನು ಸಂದರ್ಶಿಸಬಯಸಿದ ಋಷಿಗಳಿಗೆ ತಪಸ್ಸನ್ನು ತಪಿಸಲು ಪರಮೇಷ್ಠಿ ಬ್ರಹ್ಮನು ಈ ಸ್ಥಾನವನ್ನು ನಿರ್ಮಿಸಿದನು. ಪೂರ್ವಕಾಲದಲ್ಲಿ ಮರೀಚಿ, ಅತ್ರಿ, ವಸಿಷ್ಠ, ಕ್ರತು, ಭೃಗು, ಮತ್ತು ಆಂಗಿರಸ ವಿಪ್ರರು ಒಟ್ಟಾಗಿ ಕಮಲೋದ್ಭವ, ಸರ್ವವರದ, ಚತುರ್ಮೂರ್ತಿ, ಚತುರ್ಮುಖ, ವಿಶ್ವಕರ್ಮ, ಅವ್ಯಯ ಬ್ರಹ್ಮನನ್ನು ನಮಸ್ಕರಿಸಿ ಕೇಳಿದರು.

ಷಟ್ಕುಲೀಯಾ ಊಚುಃ । ಭಗವನ್ ದೇವಮೀಶಾನಂ ತಮೇವೈಕಂ ಕಪರ್ದಿನಮ್ । ಕೇನೋಪಾಯೇನ ಪಶ್ಯಾಮೋ ಬ್ರೂಹಿ ದೇವ ನಮಸ್ತವ ।। 5 ।।

ಷಟ್ಕುಲೀಯರು ಹೇಳಿದರು: “ಭಗವನ್! ದೇವ! ನಿನಗೆ ನಮಸ್ಕಾರವು! ಕಪರ್ದಿ ಅದ್ವಿತೀಯ ದೇವ ಈಶಾನನನ್ನು ನಾವು ಯಾವ ಉಪಾಯದಿಂದ ನೋಡಬಲ್ಲೆವು, ಹೇಳು.”

ಬ್ರಹ್ಮೋವಾಚ । ಸತ್ರಂ ಸಹಸ್ರಮಾಸಧ್ವಂ ವಾಙ್ಮನೋದೋಷವರ್ಜಿತಾಃ । ದೇಶಂ ಚ ವಃ ಪ್ರವಕ್ಷ್ಯಾಮಿ ಯಸ್ಮಿನ್ ದೇಶೇ ಚರಿಷ್ಯಥ ।। 6 ।। ಮುಕ್ತ್ವಾ ಮನೋಮಯಂ ಚಕ್ರಂ ಸ ಸೃಷ್ಟ್ವಾ ತಾನುವಾಚ ಹ । ಕ್ಷಿಪ್ತಮೇತನ್ಮಯಾ ಚಕ್ರಮನುವ್ರಜತ ಮಾ ಚಿರಮ್ ।। 7 ।। ಯತ್ರಾಸ್ಯ ನೇಮಿಃ ಶೀರ್ಯೇತ ಸ ದೇಶಸ್ತಪಸಃ ಶುಭಃ । ತತೋ ಮುಮೋಚ ತಚ್ಚಕ್ರಂ ತೇ ಚ ತತ್ಸಮನುವ್ರಜನ್ ।। 8 ।। ತಸ್ಯ ವೈ ವ್ರಜತಃ ಕ್ಷಿಪ್ರಂ ಯತ್ರ ನೇಮಿರಶೀರ್ಯತ । ನೈಮಿಷಂ ತತ್ಸ್ಮೃತಂ ನಾಮ್ನಾ ಪುಣ್ಯಂ ಸರ್ವತ್ರ ಪೂಜಿತಮ್ ।। 9 ।। ಸಿದ್ಧಚಾರಣಸಂಪೂರ್ಣಂ ಯಕ್ಷಗಂಧರ್ವಸೇವಿತಮ್ । ಸ್ಥಾನಂ ಭಗವತಃ ಶಂಭೋರೇತನ್ನೈಮಿಷಮುತ್ತಮಮ್ ।। 10 ।।

ಬ್ರಹ್ಮನು ಹೇಳಿದನು: “ನೀವು ವಾಙ್ಮನೋದೋಷವರ್ಜಿತರಾಗಿ ಸಹಸ್ರ ಸಂವತ್ಸರಗಳವರೆಗೆ ಸತ್ರವನ್ನು ನಡೆಸಿರಿ. ಯಾವ ಸ್ಥಳದಲ್ಲಿ ಅದನ್ನು ಮಾಡಬೇಕೋ ಅದನ್ನು ನಿಮಗೆ ಹೇಳುತ್ತೇನೆ.” ಮನೋಮಯ ಚಕ್ರವೊಂದನ್ನು ಸೃಷ್ಟಿಸಿ ಅದನ್ನು ಉರುಳಿಸಿ ಅವರಿಗೆ ಹೇಳಿದನು: “ನಾನು ಎಸೆದ ಈ ಚಕ್ರವನ್ನು ಹಿಂಬಾಲಿಸಿ ಹೋಗಿ. ತಡಮಾಡಬೇಡಿ. ಯಾವಸ್ಥಳದಲ್ಲಿ ಇದರ ಪಟ್ಟಿಯು ಕಳಚಿ ಬೀಳುವುದೋ ಅದು ತಪಸ್ಸಿಗೆ ಯೋಗ್ಯವೂ ಶುಭವೂ ಆದುದು.” ನಂತರ ಆ ಚಕ್ರವನ್ನು ಬಿಟ್ಟನು ಮತ್ತು ಅವರು ಅದನ್ನು ಅನುಸರಿಸಿದರು. ಕ್ಷಿಪ್ರವಾಗಿ ಹೋಗುತ್ತಿದ್ದ ಅದರ ನೇಮಿಯು ಎಲ್ಲಿ ಜೀರ್ಣವಾಯಿತೋ ಆ ಸ್ಥಳಕ್ಕೆ ನೈಮಿಷ ಎಂಬ ಹೆಸರಾಯಿತು. ಅದು ಪುಣ್ಯವೂ ಸರ್ವತ್ರ ಪೂಜಿತವೂ ಆಗಿದೆ.  ಸಿದ್ಧ-ಚಾರಣರಿಂದ ತುಂಬಿಯೂ, ಯಕ್ಷ-ಗಂಧರ್ವರಿಂದ ಸೇವಿತವೂ ಆದ ಆ ನೈಮಿಷವು ಭಗವಂತ ಶಂಭುವಿನ ಉತ್ತಮ ಸ್ಥಾನವು.

ಅತ್ರ ದೇವಾಃ ಸಗಂಧರ್ವಾಃ ಸಯಕ್ಷೋರಗರಾಕ್ಷಸಾಃ । ತಪಸ್ತಪ್ತ್ವಾ ಪುರಾ ದೇವಾ ಲೇಭಿರೇ ಪ್ರವರಾನ್ವರಾನ್ ।। 11 ।। ಇಮಂ ದೇಶಂ ಸಮಾಶ್ರಿತ್ಯ ಷಟ್ಕುಲೀಯಾಃ ಸಮಾಹಿತಾಃ । ಸತ್ರೇಣಾರಾಧ್ಯ ದೇವೇಶಂ ದೃಷ್ಟವಂತೋ ಮಹೇಶ್ವರಮ್ ।। 12 ।। ಅನ್ನದಾನಂ ತಪಸ್ತಪ್ತಂ ಶ್ರಾದ್ಧಯಾಗಾದಿಕಂ ಚ ಯತ್ । ಏಕೈಕಂ ನಾಶಯೇತ್ ಪಾಪಂ ಸಪ್ತಜನ್ಮಕೃತಂ ತಥಾ ।। 13 ।। ಅತ್ರ ಪೂರ್ವಂ ಸ ಭಗವಾನೃಷೀಣಾಂ ಸತ್ರಮಾಸತಾಮ್ । ಸ ವೈ ಪ್ರೋವಾಚ ಬ್ರಹ್ಮಾಂಡಂ ಪುರಾಣಂ ಬ್ರಹ್ಮಭಾವಿತಮ್ ।। 14 ।। ಅತ್ರ ದೇವೋ ಮಹಾದೇವೋ ರುದ್ರಾಣ್ಯಾ ಕಿಲ ವಿಶ್ವಧೃಕ್ । ರಮತೇಽದ್ಯಾಪಿ ಭಗವಾನ್ ಪ್ರಮಥೈಃ ಪರಿವಾರಿತಃ ।। 15 ।। ಅತ್ರ ಪ್ರಾಣಾನ್ ಪರಿತ್ಯಜ್ಯ ನಿಯಮೇನ ದ್ವಿಜಾತಯಃ । ಬ್ರಹ್ಮಲೋಕಂ ಗಮಿಷ್ಯಂತಿ ಯತ್ರ ಗತ್ವಾ ನ ಜಾಯತೇ ।। 16 ।।

ಪೂರ್ವಕಾಲದಲ್ಲಿ ಇಲ್ಲಿ ಯಕ್ಷ-ಉರಗ-ರಾಕ್ಷಸರೊಡನೆ, ಗಂಧರ್ವರೊಡನೆ ದೇವತೆಗಳು ತಪಸ್ಸನ್ನು ತಪಿಸಿ ಶ್ರೇಷ್ಠ ವರಗಳನ್ನು ಪಡೆದರು. ಇದೇ ಸ್ಥಳವನ್ನಾಶ್ರಯಿಸಿ ಷಟ್ಕುಲೀಯರು ಸಮಾಹಿತರಾಗಿ ಸತ್ರದಿಂದ ದೇವೇಶನನ್ನು ಆರಾಧಿಸಿ ಮಹೇಶ್ವರನನ್ನು ಸಾಕ್ಷಾತ್ಕರಿಸಿದರು. ಇಲ್ಲಿ ಮಾಡಿದ ಅನ್ನದಾನ, ತಪಿಸಿದ ತಪಸ್ಸು ಶ್ರಾದ್ಧ-ಯಾಗಾದಿಗಳು ಒಂದೊಂದೂ ಏಳುಜನ್ಮಗಳಲ್ಲಿ ಮಾಡಿದ ಪಾಪಗಳನ್ನು ನಾಶಪಡಿಸುತ್ತವೆ. ಪೂರ್ವಕಾಲದಲ್ಲಿ ಅಲ್ಲಿ ಋಷಿಗಳು ಸತ್ರದಲ್ಲಿ ತೊಡಗಿದ್ದಾಗ ಭಗವಂತನು ಬ್ರಹ್ಮಭಾವವನ್ನುಂಟುಮಾಡುವ ಬ್ರಹ್ಮಾಂಡ ಪುರಾಣವನ್ನು ಹೇಳಿದನು. ಈಗಲೂ ಅಲ್ಲಿ ದೇವ ಮಹಾದೇವ ವಿಶ್ವಧೃಕ್ ಭಗವಂತನು ರುದ್ರಾಣಿಯೊಡನೆ ಪ್ರಮಥರಿಂದ ಪರಿವಾರಿತನಾಗಿ ರಮಿಸುತ್ತಾನೆ. ಅಲ್ಲಿ ನಿಯಮದಿಂದ ಪ್ರಾಣಗಳನ್ನು ತ್ಯಜಿಸಿ ದ್ವಿಜಾತಿಯರು ಎಲ್ಲಿಗೆ ಹೋದರೆ ಪುನಃ ಹುಟ್ಟುವುದಿಲ್ಲವೋ ಆ ಬ್ರಹ್ಮಲೋಕಕ್ಕೆ ಹೋಗುತ್ತಾರೆ.

Leave a Reply

Your email address will not be published. Required fields are marked *