ಶ್ರೀಪದ್ಮಪುರಾಣ: ಸೃಷ್ಟಿಖಂಡ, ಅಧ್ಯಾಯ 2

 

ಸೂತ ಉವಾಚ । ನಮಸ್ಯೇ ಸರ್ವಭೂತಾನಾಂ ವಿಶ್ವಸ್ಯ ಜಗತಃ ಪತಿಮ್ । ಯ ಇಮಂ ಕುರುತೇ ಭಾವಂ ಸೃಷ್ಟಿರೂಪಪ್ರಧಾನವಿತ್ ।। 1 ।। ಲೋಕಕೃಲ್ಲೋಕತತ್ವಜ್ಞೋ ಯೋಗಮಾಸ್ಥಾಯ ಯೋಗವಿತ್ । ಅಸೃಜತ್ಸರ್ವಭೂತಾನಿ ಸ್ಥಾವರಾಣಿ ಚರಾಣಿ ಚ ।। 2 ।। ತಮಜಂ ವಿಶ್ವಕರ್ಮಾಣಂ ವಿತ್ಪತಿಂ ಲೋಕಸಾಕ್ಷಿಣಮ್ । ಪುರಾಣಾಖ್ಯಾನಜಿಜ್ಞಾಸುರ್ವ್ರಜಾಮಿ ಶರಣಂ ವಿಭುಮ್ ।। 3 ।। ಬ್ರಹ್ಮವಿಷ್ಣುಗಿರೀಶೇಭ್ಯೋ ನಮಸ್ಕೃತ್ವಾ ಸಮಾಹಿತಃ । ಇಂದ್ರಾಯ ಲೋಕಪಾಲೇಭ್ಯಃ ಸವಿತ್ರೇ ಚ ಸಮಾಧಿನಾ ।। 4 ।। ಮುನೀನಾಂ ಚ ವರಿಷ್ಠಾಯ ವಸಿಷ್ಠಾಯ ಮಹಾತ್ಮನೇ । ತಸ್ಮೈ ಭಗವತೇ ನತ್ವಾ ವೇದವ್ಯಾಸಾಯ ವೇಧಸೇ ।। 5 ।। ಪುರುಷಾಯ ಪುರಾಣಾಯ ಭೃಗುವಾಕ್ಯಾನುವರ್ತಿನೇ । ತಸ್ಮಾದಹಮುಪಾಶ್ರಿತ್ಯ ಪುರಾಣಂ ಬ್ರಹ್ಮವಾದಿನಃ ।। 6 ।। ಸರ್ವಜ್ಞಾತ್ಸರ್ವಲೋಕೇಷು ಪೂಜಿತಾದ್ದೀಪ್ತತೇಜಸಃ

ಸೂತನು ಹೇಳಿದನು: “ಸರ್ವಭೂತಗಳ ಮತ್ತು ವಿಶ್ವದ ಸೃಷ್ಟಿರೂಪಪ್ರಧಾನಜ್ಞಾನಿ ಹಾಗೂ ಇವೆಲ್ಲವನ್ನೂ ಭಾವಿಸುವ ಜಗತ್ಪತಿಗೆ ನಮಸ್ಕಾರಗಳು. ಲೋಕಕೃತ್, ಲೋಕತತ್ತ್ವಜ್ಞ ಯೋಗವಿದುವು ಯೋಗವನ್ನು ಆಶ್ರಯಿಸಿ ಸ್ಥಾವರ-ಜಂಗಮಾದಿ ಸರ್ವಭೂತಗಳನ್ನೂ ಸೃಷ್ಟಿಸಿದನು. ಆ ಅಜ, ವಿಶ್ವನಿರ್ಮಾತೃ, ಜ್ಞಾನಕ್ಕೆ ಒಡೆಯನಾದ, ಲೋಕಸಾಕ್ಷಿ ವಿಭುವನ್ನು ಪುರಾಣಾಖ್ಯಾನಗಳನ್ನು ತಿಳಿಯಲಿಚ್ಛಿಸಿ ಶರಣುಹೊಗುತ್ತೇನೆ. ಬ್ರಹ್ಮ, ವಿಷ್ಣು, ಶಿವರಿಗೆ ಒಂದೇ ಮನಸ್ಸಿನಿಂದ ನಮಸ್ಕರಿಸಿ ಇಂದ್ರನೇ ಮೊದಲಾದ ಲೋಕಪಾಲರಿಗೆ ಮತ್ತು ಸೂರ್ಯನಿಗೆ ಸಮಾಧಿಪೂರ್ವಕವಾಗಿ ನಮಸ್ಕರಿಸುತ್ತೇನೆ. ಮುನಿಗಳಲ್ಲಿ ವರಿಷ್ಠನಾದ ವಸಿಷ್ಠನಿಗೂ ಬ್ರಹ್ಮರೂಪನಾದ ವೇದವ್ಯಾಸನಿಗೂ ನಮಸ್ಕರಿಸುತ್ತೇನೆ. ಪುರಾಣಪುರುಷನೂ, ಭೃಗುವಿನ ಮಾತಿನಂತೆ ನಡೆಯುವವನೂ ಆದ ವೇದವ್ಯಾಸನನ್ನು ಸಮಸ್ಕರಿಸುತ್ತೇನೆ. ಯಾವ ಬ್ರಹ್ಮವಾದಿಯಿಂದ ನಾನು ಈ ಪುರಾಣಗಳನ್ನು ಕೇಳಿದೆನೋ ಆ ಸರ್ವಜ್ಞ, ಸರ್ವಲೋಕಪೂಜಿತಾದ ಮತ್ತು ದೀಪ್ತತೇಜಸನಾದ ವ್ಯಾಸನಿಗೆ ನಮಸ್ಕರಿಸುತ್ತೇನೆ.

ಅವ್ಯಕ್ತಂ ಕಾರಣಂ ಯತ್ತನ್ನಿತ್ಯಂ ಸದಸದಾತ್ಮಕಮ್ ।। 7 ।। ಮಹದಾದಿವಿಶೇಷಾಂತಂ ಸೃಜತೀತಿ ವಿನಿಶ್ಚಯಃ । ಅಂಡೇ ಹಿರಣ್ಮಯೇ ಪೂರ್ವಂ ಬ್ರಹ್ಮಣಸ್ಸೂತಿಮುತ್ತಮಾಮ್ ।। 8 ।। ಅಂಡಸ್ಯಾವರಣಂ ಚಾದ್ಭಿರಪಾಮಪಿ ಚ ತೇಜಸಾ । ವಾಯುನಾ ತಸ್ಯ ವಾಯೋಃ ಖಂ ತದ್ಭೂತಾದಿಭಿರಾವೃತಮ್ ।। 9 ।। ಭೂತಾದಿರ್ಮಹತಾ ವಾಪಿ ಅವ್ಯಕ್ತೇನಾವೃತೋ ಮಹಾನ್ । ಪ್ರಾದುರ್ಭಾವಶ್ಚ ಲೋಕಾನಾಮಂಡಮೇವೋಪವರ್ಣಿತಮ್ ।। 10 ।। ನದೀನಾಂ ಪರ್ವತಾನಾಂ ಚ ಪ್ರಾದುರ್ಭಾವೋಽನುವರ್ಣ್ಯತೇ । ಮನ್ವಂತರಾಣಾಂ ಸಂಕ್ಷೇಪಾತ್ಕಲ್ಪಾನಾಂ ಚೋಪವರ್ಣನಮ್ ।। 11 ।। 

ಅವ್ಯಕ್ತನಾದ ಕಾರಣನಾದ ನಿತ್ಯನಾದ ಸದಸಾತ್ಮಕನಾದ ಪರಮಾತ್ಮನು ಮಹತ್ತಿನಿಂದ ಮೊದಲ್ಗೊಂಡು ವಿಶೇಷಗಳಿಂದ ಕೊನೆಗೊಳ್ಳುವ ಸೃಷ್ಟಿಯನ್ನು ಮಾಡುತ್ತಾನೆ ಎನ್ನುವುದು ಸುನಿಶ್ಚಿತವು. ಹಿಂದೆ ಹಿರಣ್ಮಯ ಉತ್ತಮ ಅಂಡವನ್ನು ಬ್ರಹ್ಮನ ಹುಟ್ಟಿಗಾಗಿ ಮಾಡಿದನು. ನೀರು ಆ ಬ್ರಹ್ಮಾಂಡದ ಆವರಣವಾಗಿತ್ತು. ನೀರಿಗೆ ತೇಜಸ್ಸು ಆವರಣವಾಗಿತ್ತು. ತೇಜಸ್ಸಿಗೆ ವಾಯುವೂ, ವಾಯುವಿಗೆ ಆಕಾಶವೂ ಆವರಣವಾಗಿತ್ತು. ಈ ಪಂಚಭೂತಗಳಿಗೆ ಮಹತ್ತತ್ತ್ವವು ಆವರಣವಾಗಿತ್ತು, ಮತ್ತು ಮಹತ್ತತ್ತ್ವಕ್ಕೆ ಅವ್ಯಕ್ತವೂ ಆವರಣವಾಗಿತ್ತು. ಆ ಬ್ರಹ್ಮಾಂಡದಲ್ಲಿಯೇ ಲೋಕಗಳು ಪ್ರಾದುರ್ಭವಿಸಿದವು ಎಂದು ವರ್ಣಿತವಾಗಿದೆ. ನದಿ-ಪರ್ವತಗಳ ಉತ್ಪತ್ತಿ, ಮನ್ವಂತರಗಳ ಮತ್ತು ಕಲ್ಪಗಳ ಸಂಕ್ಷೇಪ ವರ್ಣನೆಯೂ ಆ ಬ್ರಹ್ಮಾಂಡಕ್ಕೇ ಸಂಬಂಧಿಸಿದೆ.

ಬ್ರಹ್ಮಪದ್ಮಸ್ಯ ಯೋ ಬ್ರಹ್ಮಾ ಪ್ರಜಾಸರ್ಗೋಪವರ್ಣನಮ್ । ಕಲ್ಪಾನಾಂ ಸಂಚರಶ್ಚೈವ ಜಗತಃ ಸ್ಥಾಪನಂ ತಥಾ ।। 12 ।। ಶಯನಂ ಚ ಹರೇರಪ್ಸು ಪೃಥಿವ್ಯುದ್ಧರಣಂ ಪುನಃ । ದಶಧಾ ಜನ್ಮಸಂಚಾರೋ ಭೃಗುಶಾಪೇನ ಕೇಶವೇ ।। 13 ।। 

ಬ್ರಹ್ಮಪದ್ಮಕ್ಕೆ ಯಾರು ಬ್ರಹ್ಮನೋ ಅವನ ಮತ್ತು ಅವನು ಮಾಡಿದ ಪ್ರಜಾಸೃಷ್ಟಿಯ ವರ್ಣನೆಯಿದೆ. ಕಲ್ಪಗಳ ವ್ಯತ್ಯಾಸವೂ ಜಗತ್ತಿನ ಸ್ಥಾಪನೆಯೂ ಹೇಳಲ್ಪಟ್ಟಿದೆ. ಹರಿಯು ಕ್ಷೀರಸಾಗರದಲ್ಲಿ ಮಲಗಿದ್ದುದು, ಪುನಃ ಅವನು ಭೂಮಿಯನ್ನು ಮೇಲೆ ಎತ್ತಿದುದು, ಭೃಗುವಿನ ಶಾಪದಿಂದ ಕೇಶವ ಹರಿಯು ಹತ್ತು ಜನ್ಮಗಳನ್ನು ತಾಳಿದುದರ ವರ್ಣನೆಯೂ ಇದೆ.

ಸನ್ನಿವೇಶೋ ಯುಗಾದೀನಾಂ ಸರ್ವಾಶ್ರಮವಿಭಾಜನಮ್ । ಸ್ವರ್ಗಸ್ಥಾನವಿಭಾಗಶ್ಚ ಮರ್ತ್ಯಾನಾಂ ಸ್ವರ್ಗಚಾರಿಣಾಂ ।। 14 ।। ಪಶೂನಾಂ ಪಕ್ಷಿಣಾಂ ಚೈವ ಸಂಭವಃ ಪರಿಕೀರ್ತಿತಃ । ತಥಾ ನಿರ್ವಚನಂ ಕಲ್ಪಂ ಸ್ವಾಧ್ಯಾಯಸ್ಯ ಪರಿಗ್ರಹಃ ।। 15 ।। ಪ್ರತಿಸರ್ಗಾಃ ಪುನಃ ಪ್ರೋಕ್ತಾ ಬ್ರಹ್ಮಣಾ ಬುದ್ಧಿಪೂರ್ವಕಮ್ । ತ್ರಯೋನ್ಯೇಽಬುದ್ಧಿಪೂರ್ವಾಸ್ತೇ ತಥಾ ಲೋಕಾನಕಲ್ಪಯತ್ ।। 16 ।।

ಯುಗವೇ ಮುಂತಾದವುಗಳ ಸನ್ನಿವೇಶ, ಸರ್ವ ಆಶ್ರಮಗಳ ವಿಭಜನೆ, ಮನುಷ್ಯರು ಮತ್ತು ದೇವತೆಗಳ ಸ್ವರ್ಗಾದಿ ಸ್ಥಾನ ವಿಭಾಗಗಳು, ಮತ್ತು ಪಶು-ಪಕ್ಷಿಗಳ ಉತ್ಪತ್ತಿ ಇವನ್ನು ವರ್ಣಿಸಿದೆ. ಕಲ್ಪಗಳ ವಿವರಣೆ, ಸ್ವಾಧ್ಯಾಯದ ಸ್ವೀಕಾರ, ಬ್ರಹ್ಮನು ಬುದ್ಧಿಪೂರ್ವಕವಾಗಿ ಮಾಡಿದ ಪ್ರತಿಸರ್ಗ – ಈ ಮೂರನ್ನೂ ಬುದ್ಧಿಪೂರ್ವಕವಾಗಿಯೇ ಬ್ರಹ್ಮನು ಹೇಳಿದ್ದಾನೆ.

ಬ್ರಹ್ಮಣೋ ವದನೇಭ್ಯಶ್ಚ ಭೃಗ್ವಾದೀನಾಂ ಸಮುದ್ಭವಃ । ಕಲ್ಪಯೋರಂತರಂ ಪ್ರೋಕ್ತಂ ಪ್ರತಿಸಂಧಿಶ್ಚ ಸರ್ಗಯೋಃ ।। 17 ।। ಭೃಗ್ವಾದೀನಾಮೃಷೀಣಾಂ ಚ ಪ್ರಜಾಸರ್ಗೋಪವರ್ಣನಮ್ । ವಸಿಷ್ಠಸ್ಯ ಚ ಬ್ರಹ್ಮರ್ಷೇರ್ಬ್ರಹ್ಮತ್ತ್ವಂ ಪರಿಕೀರ್ತಿತಮ್ ।। 18 ।। ಸ್ವಾಯಂಭುವಸ್ಯ ಚ ಮನೋರ್ವಂಶಸ್ಯಾಪ್ಯನುಕೀರ್ತನಮ್ । ಉಕ್ತೋ ನಾಭೇತಿಸರ್ಗಶ್ಚ ರಜಸಶ್ಚ ಮಹಾತ್ಮನಃ ।। 19 ।। 

ಬ್ರಹ್ಮನ ಮುಖದಿಂದ ಭೃಗುವೇ ಮೊದಲಾದ ಋಷಿಗಳು ಹುಟ್ಟಿದುದನ್ನೂ, ಕಲ್ಪಗಳ ವ್ಯತ್ಯಾಸವನ್ನೂ, ಅವಾಂತರ ಸೃಷ್ಟಿಯ ಕ್ರಮವನ್ನೂ ಹೇಳಿದ್ದಾನೆ. ಭೃಗುವೇ ಮೊದಲಾದ ಋಷಿಗಳು ಪ್ರಜೆಗಳನ್ನು ಸೃಷ್ಟಿಸಿದುದನ್ನು, ಬ್ರಹ್ಮರ್ಷಿ ವಸಿಷ್ಠ ಬ್ರಹ್ಮತ್ವವನ್ನೂ ಹೇಳಿದ್ದಾನೆ. ಸ್ವಾಯಂಭು ಮನುವಿನ ವಂಶವನ್ನು ವರ್ಣಿಸಿದ್ದಾನೆ. ನಾಭಿ ಮತ್ತು ಮಹಾತ್ಮನ ರಜಸ್ಸನ ಸೃಷ್ಟಿಯ ಕುರಿತೂ ಹೇಳಿದ್ದಾನೆ.

ದ್ವೀಪಾನಾಂ ಚ ಸಮುದ್ರಾಣಾಂ ಪರ್ವತಾನಾಂ ಚ ಕೀರ್ತನಮ್ । ದ್ವೀಪಭೇದಸಮುದ್ರಾಣಾಮಂತರ್ಭಾವಶ್ಚ ಸಪ್ತಸು ।। 20 ।। ಕೀರ್ತ್ಯಂತೇ ಯೇ ಜನಾಗ್ರೇಣ ಯೇ ಚ ತತ್ರ ನಿವಾಸಿನಃ । ಭಾರತಾದೀನಿ ವರ್ಷಾಣಿ ನದೀಭಿಃ ಪರ್ವತೈಃ ಸಹ ।। 21 ।। ಜಂಬೂದ್ವೀಪಾದಯೋ ದ್ವೀಪಾಃ ಸಮುದ್ರೈಃ ಸಪ್ತಭಿರ್ವೃತಾಃ । ಅಂಡಸ್ಯಾಂತಸ್ತ್ವಿಮೇಲೋಕಾಃ ಸಪ್ತದ್ವೀಪಾ ಚ ಮೇದಿನೀ ।। 22 ।।

ದ್ವೀಪಗಳು, ಸಮುದ್ರಗಳು ಮತ್ತು ಪರ್ವತಗಳ ಕುರಿತು ಹೇಳಿದ್ದಾನೆ. ಆ ಏಳು ದ್ವೀಪಗಳ ಭೇದ ಮತ್ತು ಏಳು ಸಮುದ್ರಗಳ ಅಂತರ್ಭಾವವನ್ನೂ ಹೇಳಿದ್ದಾನೆ. ಜನರು ಯಾವುದನ್ನು ಶ್ರೇಷ್ಠವೆಂದು ಹೇಳುತ್ತಾರೋ ಆ ಭಾರತವೇ ಮೊದಲಾದ ವರ್ಷಗಳನ್ನು ಅವುಗಳಲ್ಲಿರುವ ನದಿ-ಪರ್ವತಗಳೊಂದಿಗೆ ವರ್ಣಿಸಲಾಗಿದೆ. ಜಂಬೂದ್ವೀಪವೇ ಮೊದಲಾದ ಏಳು ದ್ವೀಪಗಳು ಏಳು ಸಮುದ್ರಗಳಿಂದ ಆವೃತವಾಗಿವೆ. ಈ ಲೋಕಗಳು ಬ್ರಹ್ಮಾಂಡದ ಒಳಗೇ ಇವೆ. ಮೇದಿನಿಯು ಸಪ್ತದ್ವೀಪಗಳನ್ನು ಹೊಂದಿದೆ.

ಸೂರ್ಯಾಚಂದ್ರಮಸೋಶ್ಚಾರೋ ಗ್ರಹಾಣಾಂ ಜ್ಯೋತಿಷಾಂ ತಥಾ । ಕೀರ್ತ್ಯತೇ ಧ್ರುವಸಾಮರ್ಥ್ಯಾತ್ಪ್ರಜಾನಾಂ ಚ ಶುಭಾಶುಭಮ್ ।। 23 ।। ಬ್ರಹ್ಮಣಾ ನಿರ್ಮಿತಸ್ಸೌರಃ ಸ್ಯಂದನೋಽರ್ಥವಶಾತ್ಸ್ವಯಮ್ । ಕಲ್ಪಿತೋ ಭಗವಾಂಸ್ತೇನ ಪ್ರಸರ್ಪತಿ ದಿವಾಕರಃ ।। 24 ।। ಸೂರ್ಯಾದೀನಾಂ ಸ್ಯಂದನಾನಾಂ ಧ್ರುವಾದೇವ ಪ್ರವರ್ತನಂ । ಕೀರ್ತ್ಯತೇ ಶಿಂಶುಮಾರಶ್ಚ ಯಸ್ಯ ಪುಚ್ಚೇ ಧ್ರುವಃ ಸ್ಥಿತಃ ।। 25 ।।

ಸೂರ್ಯಚಂದ್ರಾದಿ ಗ್ರಹಗಳೂ, ಜೋತೀರೂಪವಾದ ನಕ್ಷತ್ರಗಳೂ ದ್ರುವನಕ್ಷತ್ರವನ್ನು ಬಲಗಡೆಯಿಂದ ಸುತ್ತುತ್ತಿರುವುದನ್ನು ಹೇಳಿದೆ. ಇದರಿಂದ ಪ್ರಜೆಗಳಿಗುಂಟಾಗುವ ಶುಭಾಶುಭಗಳನ್ನೂ ಹೇಳಿದೆ. ಬ್ರಹ್ಮನು ಸೂರ್ಯನ ರಥವನ್ನು ಅರ್ಥವಶಾತ್ ಸ್ವಯಂ ತಾನೇ ತಿರುಗುವಂತೆ ನಿರ್ಮಿಸಿದನು. ಅದರಂತೆ ಭಗವಾನ್ ದಿವಾಕರನು ಅದರಲ್ಲಿ ಕುಳಿತು ತಿರುಗುತ್ತಿರುತ್ತಾನೆ. ಸೂರ್ಯ-ಚಂದ್ರಾದಿಗಳ ರಥಗಳು ಧ್ರುವನಿಗೆ ಅಧೀನವಾಗಿ ಸೆಳೆಯಲ್ಪಟ್ಟು ಸುತ್ತುತ್ತಿರುತ್ತವೆ. ಯಾವುದರ ಬಾಲದಲ್ಲಿ ಧ್ರುವನಿರುವನೋ ಆ ಶಿಂಶುಮಾರವೆಂಬ ದೊಡ್ಡ ಮೀನಿನ ವರ್ಣನೆಯಿದೆ.

ಸಂಭವಾಂತೇ ಚ ಸಂಹಾರಃ ಸಂಹಾರಾಂತೇ ಚ ಸಂಭವಃ । ದೇವತಾನಾಮೃಷೀಣಾಂ ಚ ಮನೋಃ ಪಿತೃಗಣಸ್ಯ ಚ ।। 26 ।। ನ ಶಕ್ಯಂ ವಿಸ್ತರಾದ್ವಕ್ತುಮಿತ್ಯುಕ್ತಂ ಚ ಸಮಾಸತಃ । ಅತೀತಾನಾಗತಾನಾಂ ವೈ ಸ್ವಯಂ ಸ್ವಾಯಂಭುವೇನ ತು ।। 27 ।।

ಹುಟ್ಟಿದ ಮೇಲೆ ನಾಶ, ನಾಶದ ನಂತರ ಹುಟ್ಟು, ಹೀಗೆ ದೇವತೆಗಳು, ಋಷಿಗಳು, ಮನುಗಳು, ಪಿತೃಗಣಗಳು ಇವುಗಳ ಸೃಷ್ಟಿ-ಲಯಗಳನ್ನು ಹೇಳಿದ್ದಾನೆ. ಇದನ್ನು ವಿಸ್ತಾರವಾಗಿ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಸಂಕ್ಷಿಪ್ತವಾಗಿಯೇ ಹೇಳಿದ್ದಾನೆ. ಆಗಿಹೋದ ಮತ್ತು ಮುಂದೆ ಆಗುವ ವಿಷಯಗಳನ್ನು ಸ್ವಯಂ ಸ್ವಾಯಂಭುವೇ ಹೇಳಿದ್ದಾನೆ.

ಮನ್ವಂತರೇಷು ದೇವಾನಾಂ ಪ್ರಜೇಶಾನಾಂ ಚ ಕೀರ್ತನಮ್ । ನೈಮಿತ್ತಿಕಃ ಪ್ರಾಕೃತಿಕಸ್ತಥೈವಾತ್ಯಂತಿಕಃ ಸ್ಮೃತಃ ।। 28 ।। ತ್ರಿವಿಧಃ ಸರ್ವಭೂತಾನಾಂ ಕೀರ್ತ್ಯತೇ ಪ್ರತಿಸಂಚರಃ । ಅನಾವೃಷ್ಟಿರ್ಭಾಸ್ಕರಾಚ್ಚ ಘೋರಸ್ಸಂವರ್ತಕಾನಲಃ ।। 29 ।। ಮೇಘಾಶ್ಚೈಕಾರ್ಣವಾ ಯೇಷು ತಥಾ ರಾತ್ರಿರ್ಮಹಾತ್ಮನಃ । ಸಂಧ್ಯಾಲಕ್ಷಣಮುದ್ದಿಷ್ಟಂ ತಥಾ ಬ್ರಾಹ್ಮಂ ವಿಶೇಷತಃ ।। 30 ।। ಭೂತಾನಾಂ ಚಾಪಿ ಲೋಕಾನಾಂ ಸಪ್ತಾನಾಮನುವರ್ಣನಮ್ । ಸಂಕೀರ್ತ್ಯಂತೇ ಮಯಾ ಚಾತ್ರ ಪಾಪಾನಾಂ ರೌರವಾದಯಃ ।। 31 ।। ಸರ್ವೇಷಾಮೇವ ಸತ್ತ್ವಾನಾಂ ಪರಿಣಾಮವಿನಿರ್ಣಯಃ । ಬ್ರಹ್ಮಣಃ ಪ್ರತಿಸರ್ಗಶ್ಚ ಸರ್ವಸಂಹಾರವರ್ಣನಮ್ ।। 32 ।।

ಮನ್ವಂತರಗಳಲ್ಲಿ ದೇವತೆಗಳ ಮತ್ತು ರಾಜರ ವರ್ಣನೆಯಿದೆ. ನೈಮಿತ್ತಿಕ, ಪ್ರಾಕೃತಿಕ ಮತ್ತು ಆತ್ಯಂತಿಕ ಎಂಬ ಮೂರು ವಿಧದ ಸರ್ವಭೂತಗಳ ಲಯಗಳ ಕುರಿತು ಹೇಳಿದ್ದಾನೆ. ಅನಾವೃಷ್ಟಿ, ಸೂರ್ಯನ ತಾಪ, ಪ್ರಳಯಕಾಲದ ಸಂವರ್ತಕ ಎಂಬ ಅಗ್ನಿ, ಮೇಘವರ್ಷದಿಂದ ಸಮುದ್ರಗಳೆಲ್ಲವೂ ಒಂದಾಗುವುದು ಮತ್ತು ಬ್ರಹ್ಮನ ರಾತ್ರಿಯಾಗುವುದರ ಕುರಿತ ವರ್ಣನೆಯಿದೆ. ಸಂಧ್ಯಾಕಾಲದ ಲಕ್ಷಣ ಮತ್ತು ಬ್ರಾಹ್ಮೀ ಮುಹೂರ್ತದ ವಿಶೇಷ ವರ್ಣನೆಯಿದೆ. ಭೂತಗಳ ವರ್ಣನೆ, ಏಳು ಲೋಕಗಳ ವರ್ಣನೆ, ಪಾಪಗಳ ಮತ್ತು ರೌರವಾದಿ ನರಕಗಳ ವಿಷಯವನ್ನು ನಾನು ಹೇಳುತ್ತೇನೆಂದು ಹೇಳಿದ್ದಾನೆ. ಎಲ್ಲ ಪ್ರಾಣಿಗಳಿಗೂ ಕೊನೆಯಲ್ಲಿ ಉಂಟಾಗುವ ಸ್ಥಿತಿ, ಬ್ರಹ್ಮನ ಉತ್ಪತ್ತಿ ಮತ್ತು ಎಲ್ಲದರ ನಾಶ ಇವುಗಳ ವರ್ಣನೆಗಳನ್ನೂ ನೀಡಿದ್ದಾನೆ.

ಕಲ್ಪೇ ಕಲ್ಪೇ ಚ ಭೂತಾನಾಂ ಮಹತಾಮಪಿ ಸಂಕ್ಷಯಃ । ಸುಸಂಖ್ಯಾಯ ಚ ಬುದ್ಧ್ವಾ ವೈ ಬ್ರಹ್ಮಣಶ್ಚಾಪ್ಯನಿತ್ಯತಾಮ್ ।। 33 ।। ದೌರಾತ್ಮ್ಯಂ ಚೈವ ಭೋಗಾನಾಂ ಸಂಸಾರಸ್ಯ ಚ ಕಷ್ಟತಾಮ್ । ದುರ್ಲ್ಲಭತ್ವಂ ಚ ಮೋಕ್ಷಸ್ಯ ವೈರಾಗ್ಯಾದ್ದೋಷದರ್ಶನಮ್ ।। 34 ।। ವ್ಯಕ್ತಾವ್ಯಕ್ತಂ ಪರಿತ್ಯಜ್ಯ ಸತ್ತ್ವಂ ಬ್ರಹ್ಮಣಿ ಸಂಸ್ಥಿತಮ್ । ನಾನಾತ್ವದರ್ಶನಾತ್ಸಸ್ಥಸ್ತತಸ್ತದಭಿವರ್ತತೇ ।। 35 ।। ತತಸ್ತಾಪತ್ರಯಾತೀತೋ ವಿರೂಪಾಕ್ಷೋ ನಿರಂಜನಃ । ಆನಂದಂ ಬ್ರಹ್ಮಣಃ ಪ್ರಾಪ್ತೋ ನ ಬಿಭೇತಿ ಕುತಶ್ಚನ ।। 36 ।। ಇತಿ ಕೃತ್ಯಸಮುದ್ದೇಶಃ ಪ್ರಮಾಣಸ್ಯೋಪವರ್ಣಿತಃ । ಕೀರ್ತ್ಯಂತೇ ಜಗತೋ ಯತ್ರ ಸರ್ಗಪ್ರಲಯವಿಕ್ರಿಯಾಃ ।। 37 ।। ಪ್ರವೃತ್ತಿಶ್ಚಾಪಿ ಭೂತಾನಾಂ ನಿವೃತ್ತೀನಾಂ ಫಲಾನಿ ಚ

ಕಲ್ಪ ಕಲ್ಪದಲ್ಲಿಯೂ ಮಹಾಭೂತಗಳೂ ಮಹತ್ತೂ ನಾಶವಾಗುತ್ತದೆ ಎಂದು ಆಲೋಚಿಸಿ, ಬ್ರಹ್ಮನೂ ಕೂಡ ಶಾಶ್ವತನಲ್ಲವೆಂದು ತಿಳಿದು, ಭೋಗಗಳ ದುಷ್ಟತನವನ್ನು ನೋಡಿ, ಸಂಸಾರವು ಕಷ್ಟವೆನ್ನುವುದನ್ನು ಮನನಮಾಡಿಕೊಂಡು ಎಲ್ಲದರಲ್ಲಿಯೂ ದೋಷವನ್ನು ತಿಳಿಯಬೇಕು. ಇಂದ್ರಿಯಗಳಿಗೆ ಗೋಚರವಾದುದು ಮತ್ತು ಗೋಚರವಾಗದೇ ಇರುವುದು ಎಲ್ಲವೂ ನಶ್ವರವೆಂದು ಬಿಟ್ಟು, ಬ್ರಹ್ಮಸ್ವರೂಪದಲ್ಲಿರುವ ಶಾಶ್ವತ್ವವನ್ನು ಸಿದ್ಧಾಂತಪಡಿಸಿಕೊಂಡು ಸುಖವನ್ನು ತಿಳಿದವನಾಗಿ ಅದನ್ನು ಅನುಸರಿಸಬೇಕು. ಅಂಥವನು ಅಧ್ಯಾತ್ಮಿಕ, ಆಧಿಭೌತಿಕ ಮತ್ತು ಅಧಿದೈವಿಕವೆಂಬ ತಾಪತ್ರಯಗಳನ್ನು ಕಳೆದುಕೊಂಡು ಯಾವುದಕ್ಕೂ ಅಂಟಿಕೊಳ್ಳದೇ ಬ್ರಹ್ಮಾನಂದವನ್ನು ಹೊಂದಿ ಯಾವುದಕ್ಕೂ ಹೆದರುವುದಿಲ್ಲ. ಇದೇ ಮಾಡಬೇಕಾದ್ದುದು ಎನ್ನುವುದನ್ನು ಉದ್ದೇಶಿಸಿಯೇ ಪುರಾಣವು ಪ್ರಮಾಣಗಳನ್ನು ವರ್ಣಿಸಿ ಜಗತ್ತಿನ ಸೃಷ್ಟಿ ಮತ್ತು ಲಯಗಳ ವ್ಯಾಪಾರವನ್ನೂ, ಪ್ರಾಣಿಗಣ ಪ್ರವೃತ್ತಿ-ನಿವೃತ್ತಿಗಳ ಫಲಗಳನ್ನೂ ಹೇಳಿದೆ.

ಪ್ರಾದುರ್ಭಾವೋ ವಸಿಷ್ಠಸ್ಯ ಶಕ್ತೇರ್ಜನ್ಮ ತಥೈವ ಚ ।। 38 ।। ಸೌದಾಸಾನ್ನಿಗ್ರಹಸ್ತಸ್ಯ ವಿಶ್ವಾಮಿತ್ರಕೃತೇನ ಚ । ಪರಾಶರಸ್ಯ ಚೋತ್ಪತ್ತಿರದೃಶ್ಯಂತ್ಯಾಂ ಯಥಾ ವಿಭೋಃ ।। 39 ।। ಜಜ್ಞೇ ಪಿತೄಣಾಂ ಕನ್ಯಾಯಾಂ ವ್ಯಾಸಶ್ಚಾಪಿ ಯಥಾ ಮುನಿಃ । ಶುಕಸ್ಯ ಚ ಯಥಾ ಜನ್ಮ ಪುತ್ರಸ್ಯ ಸಹಧೀಮತಃ ।। 40 ।।

ಈ ಪುರಾಣದಲ್ಲಿ ವಸಿಷ್ಠನ ಉತ್ಪತ್ತಿ, ಶಕ್ತಿಯ ಜನ್ಮ, ವಿಶ್ವಾಮಿತ್ರನು ಕೊಟ್ಟ ತೊಂದರೆಯಿಂದ ಸೌದಾಸನ ನಿಗ್ರಹ, ಶಕ್ತಿಯ ಪತ್ನಿ ಅದೃಶ್ಯಂತಿಯಲ್ಲಿ ಪರಾಶರನ ಉತ್ಪತ್ತಿ, ಅವನಿಂದ ಪಿತೃಕನ್ಯೆ ಸತ್ಯವತಿಯಲ್ಲಿ ವ್ಯಾಸನ ಉತ್ಪತ್ತಿ, ಮತ್ತು ವ್ಯಾಸನ ಪುತ್ರ ಧೀಮತ ಶುಕನ ಜನ್ಮ ಇವುಗಳ ವರ್ಣನೆಗಳಿವೆ.

ಪರಾಶರಸ್ಯ ವಿದ್ವೇಷೋ ವಿಶ್ವಾಮಿತ್ರಕೃತೋ ಯಥಾ । ವಸಿಷ್ಠಸಂಭೃತಶ್ಚಾಗ್ನಿರ್ವಿಶ್ವಾಮಿತ್ರಜಿಘಾಂಸಯಾ ।। 41 ।। ಸಂಧಾನಹೇತೋರ್ವಿಭುನಾ ಜೀರ್ಣಃ ಕಣ್ವೇನ ಧೀಮತಾ । ದೇವೇನ ವಿಪ್ರಾ ವಿಪ್ರಾಣಾಂ ವಿಶ್ವಾಮಿತ್ರಹಿತೈಷಿಣಾ ।। 42 ।।

ಪರಾಶರನಿಗೂ ವಿಶ್ವಾಮಿತ್ರನಿಗೂ ಉಂಟಾದ ವೈರ, ವಿಶ್ವಾಮಿತ್ರನನ್ನು ಕೊಲ್ಲಬೇಕೆಂದು ವಸಿಷ್ಠನು ಹೋಮಾದಿಗಳನ್ನು ಮಾಡಿದುದು, ಕಣ್ವಋಷಿಯು ಅವರಿಬ್ಬರಿಗೂ ಸಮಾಧಾನ ಹೇಳಿ ಆ ಅಗ್ನಿಯನ್ನು ಶಮನಮಾಡಿದುದು, ಮತ್ತು ದೇವತೆಗಳೂ ಕೂಡ ಬ್ರಾಹ್ಮಣರ ಹಿತಾಪೇಕ್ಷೆಯಿಂದ ಅವರನ್ನು ಸೇರಿದಿದು – ಇವೆಲ್ಲವನ್ನೂ ಇದರಲ್ಲಿ ಹೇಳಿದೆ.

ತಸ್ಯ ಶಿಷ್ಯಪ್ರಶಿಷ್ಯೈಶ್ಚ ಶಾಖಾಭೇದಾಃ ಪುನಃ ಕೃತಾಃ । ಪ್ರಯಾಗೇ ಷಟ್ಕುಲೀಯೈಶ್ಚ ಯಥಾ ಪೃಷ್ಟಃ ಸ್ವಯಂ ಪ್ರಭುಃ ।। 43 ।। ಏಕಂ ವೇದಂ ಚತುಷ್ಪಾದಂ ಚತುರ್ಧಾ ಪುನರೀಶ್ವರಃ । ಯಥಾ ಬಿಭೇದ ಭಗವಾನ್ ವ್ಯಾಸಃ ಶರ್ವಾದನುಗ್ರಹಾತ್ ।। 44 ।। ಕೃಷ್ಣೇನ ಚಾನುಶಾಸ್ತಾಸ್ತೇ ಮುನಯೋ ಧರ್ಮಕಾಂಕ್ಷಿಣಃ । ಏತತ್ಸರ್ವಂ ಯಥಾತತ್ತ್ವಮಾಖ್ಯಾತಂ ದ್ವಿಜಸತ್ತಮಾಃ ।। 45 ।।

ದ್ವಿಜಸತ್ತಮರೇ! ಪ್ರಭು ವ್ಯಾಸನು ಒಂದೇ ವೇದವನ್ನು ನಾಲ್ಕು ಭಾಗಗಳನ್ನಾಗಿ ಮಾಡಿದುದು, ಈಶ್ವರನ ಅನುಗ್ರಹದಿಂದ ಅದನ್ನು ತಿಳಿದುಕೊಂಡಿದುದು, ವ್ಯಾಸನ ಶಿಷ್ಯರು, ಅವರ ಶಿಷ್ಯರು, ಇವರೆಲ್ಲರಿಂದ ಅನೇಕಬಗೆಯಾಗಿ ವೇದಗಳ ಶಾಖೆಗಳು ವಿಂಗಡಿಸಲ್ಪಟ್ಟಿದುದು, ಮತ್ತು ಪ್ರಯಾಗದಲ್ಲಿ ಷಟ್ಕುಲೀಯರು ವ್ಯಾಸನನ್ನು ಪ್ರಶ್ನಿಸಿದುದು – ಇವೆಲ್ಲವೂ ವರ್ಣಿತವಾಗಿವೆ. ಧರ್ಮಾಕಾಂಕ್ಷೀ ಋಷಿಗಳಿಗೆ ಕೃಷ್ಣದ್ವೈಪಾಯನ ವ್ಯಾಸನು ಹೇಳಿದ ವಿಷಯ ಇವೆಲ್ಲವೂ ನಡೆದಂತೆ ಹೇಳಲ್ಪಟ್ಟಿವೆ.

ಮುನೀನಾಂ ಧರ್ಮನಿತ್ಯಾನಾಂ ಲೋಕತಂತ್ರಮನುತ್ತಮಮ್ । ಬ್ರಹ್ಮಣಾ ಯತ್ಪುರಾ ಪ್ರೋಕ್ತಂ ಪುಲಸ್ತ್ಯಾಯ ಮಹಾತ್ಮನೇ ।। 46 ।। ಪುಲಸ್ತ್ಯೇನಾಥ ಭೀಷ್ಮಾಯ ಗಂಗಾದ್ವಾರೇ ಪ್ರಭಾಷಿತಮ್ । ಧನ್ಯಂ ಯಶಸ್ಯಮಾಯುಷ್ಯಂ ಸರ್ವಪಾಪಪ್ರಣಾಶನಮ್ ।। 47 ।। ಕೀರ್ತನಂ ಶ್ರವಣಂ ಚಾಸ್ಯ ಧಾರಣಂ ಚ ವಿಶೇಷತಃ । ಸೂತೇನಾನುಕ್ರಮೇಣೇದಂ ಪುರಾಣಂ ಸಂಪ್ರಕಾಶಿತಮ್ ।। 48 ।। ಬ್ರಾಹ್ಮಣೇಷು ಪುರಾ ಯಚ್ಚ ಬ್ರಹ್ಮಣೋಕ್ತಂ ಸವಿಸ್ತರಮ್ । ಪಾದಮಸ್ಯ ವಿದನ್ಸಮ್ಯಗ್ಯೋಧೀಯೀತ ಜಿತೇಂದ್ರಿಯಃ ।। 49 ।। ತೇನಾಧೀತಂ ಪುರಾಣಂ ಸ್ಯಾತ್ಸರ್ವಂ ನಾಸ್ತ್ಯತ್ರ ಸಂಶಯಃ । ಯೋ ವಿದ್ಯಾಚ್ಚತುರೋ ವೇದಾನ್ಸಾಂಗೋಪನಿಷದೋ ದ್ವಿಜಃ ।। 50 ।। ಪುರಾಣಂ ಚ ವಿಜಾನಾತಿ ಯಸ್ಸ ತಸ್ಮಾದ್ವಿಚಕ್ಷಣಃ । 

ಧರ್ಮನಿತ್ಯರಾದ ಮುನಿಗಳಿಗೆ ಈ ಅನುತ್ತಮ ಲೋಕತಂತ್ರವು ಉಪದೇಶಿಸಲ್ಪಟ್ಟಿತು. ಮೊದಲು ಬ್ರಹ್ಮನು ಮಹಾತ್ಮ ಪುಲಸ್ತ್ಯನಿಗೆ ಇದನ್ನು ಹೇಳಿದನು. ಪುಲಸ್ತ್ಯನು ಗಂಗಾದ್ವಾರದಲ್ಲಿ ಭೀಷ್ಮನಿಗೆ ಇದನ್ನು ಹೇಳಿದನು. ಈ ಪುರಾಣದ ಕೀರ್ತನೆ, ಶ್ರವಣ ಮತ್ತು ವಿಶೇಷತಃ ನೆನಪಿನಲ್ಲಿಟ್ಟುಕೊಳ್ಳುವುದು ಧನ-ಯಶಸ್ಸು-ಆಯುಸ್ಸನ್ನು ನೀಡುತ್ತದೆ. ಸರ್ವಪಾಪಗಳನ್ನು ನಾಶಗೊಳಿಸುತ್ತದೆ. ಕ್ರಮೇಣವಾಗಿ ಸೂತನು ಈ ಪುರಾಣವನ್ನು ಪ್ರಕಾಶಿಸಿದನು. ಹಿಂದೆ ಬ್ರಹ್ಮನು ಬ್ರಾಹ್ಮಣರಿಗೆ ಸವಿಸ್ತಾರವಾಗಿ ಹೇಳಿದ ಇದರ ಒಂದು ಕಾಲುಭಾಗವನ್ನಾದರೂ ಚೆನ್ನಾಗಿ ತಿಳಿದುಕೊಂಡು ಜಿತೇಂದ್ರಿಯನಾಗಿ ಅಧ್ಯಯಮಾಡಿದವನಿಗೆ ಪುರಾಣವೆಲ್ಲವನ್ನೂ ಅಧ್ಯಯನಮಾಡಿದಂತಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಅಂಗಗಳು ಮತ್ತು ಉಪನಿಷತ್ತುಗಳೊಂದಿಗೆ ವೇದಗಳನ್ನು ಅಧ್ಯಯನ ಮಾಡುವವನು ಚತುರನು. ಪುರಾಣ-ಇತಿಹಾಸಗಳನ್ನು ಅಧ್ಯಯನ ಮಾಡುವವನು ವಿಚಕ್ಷಣನು.

ಇತಿಹಾಸಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್ ।। 51 ।। ಬಿಭೇತ್ಯಲ್ಪಶ್ರುತಾದ್ವೇದೋ ಮಾಮಯಂ ಪ್ರಹರಿಷ್ಯತಿ । ಅಧೀತ್ಯ ಚೈಕಮಧ್ಯಾಯಂ ಸ್ವಯಂ ಪ್ರೋಕ್ತಂ ಸ್ವಯಂಭುವಾ ।। 52 ।। ಆಪದಃ ಪ್ರಾಪ್ಯ ಮುಚ್ಯೇತ ಯಥೇಷ್ಟಾಂ ಪ್ರಾಪ್ನುಯಾದ್ಗತಿಮ್ । ಪುರಾಪರಂಪರಾಂ ವಷ್ಟಿ ಪುರಾಣಂ ತೇನ ವೈ ಸ್ಮೃತಮ್ ।। 53 ।। ನಿರುಕ್ತಿಮಸ್ಯ ಯೋ ವೇದ ಸರ್ವಪಾಪೈಃ ಪ್ರಮುಚ್ಯತೇ

ಇತಿಹಾಸ-ಪುರಾಣಗಳು ವೇದವನ್ನು ಚೆನ್ನಾಗಿ ವಿಸ್ತರಿಸುತ್ತವೆ. ಅಲ್ಪವೇ ಅಧ್ಯಯನಮಾಡಿದವನಿಗೆ ವೇದಗಳು “ಇವನು ನನ್ನನ್ನು ಅಪಾರ್ಥಮಾಡಿಕೊಂಡು ನಾಶಮಾಡುತ್ತಾನೆ” ಎಂದು ಅವನಿಗೆ ಹೆದರುತ್ತವೆ. ಸ್ವಯಂ ಸ್ವಯಂಭುವೇ ಹೇಳಿದ ಈ ಒಂದು ಅಧ್ಯಾಯವನ್ನು ಓದಿದವನು ಬಂದಿರುವ ಆಪತ್ತುಗಳಿಂದ ಮುಕ್ತನಾಗುತ್ತಾನೆ ಮತ್ತು ಇಷ್ಟ ಗತಿಯನ್ನು ಪಡೆಯುತ್ತಾನೆ. ಹಿಂದಿನ ಪರಂಪರೆಗಳನ್ನು ಹೇಳುವುದರಿಂದ ಇದು ಪುರಾಣವೆಂದೆನಿಸಿಕೊಂಡಿದೆ. ಪುರಾಣ ಶಬ್ದದ ಈ ಅರ್ಥವನ್ನು ತಿಳಿದುಕೊಂಡವನೂ ಕೂಡ ಸರ್ವಪಾಪಗಳಿಂದ ಮುಕ್ತನಾಗುತ್ತಾನೆ.”

ಋಷಯೋಽಪ್ಯಬ್ರುವನ್ಸೂತಂ ಕಥಂ ಭೀಷ್ಮೇಣ ಧೀಮತಾ ।। 54 ।। ಬ್ರಹ್ಮಣೋ ಮಾನಸಃ ಪುತ್ರಃ ಪುಲಸ್ತ್ಯೋ ಭಗವಾನೃಷಿಃ । ದುರ್ಲಭಂ ದರ್ಶನಂ ಯಸ್ಯ ನರೈಃ ಪಾಪಸಮನ್ವಿತೈಃ ।। 55 ।। ಅತ್ಯಾಶ್ಚರ್ಯಮಿದಂ ಸೂತ ಕ್ಷತ್ರಿಯೇಣ ಕಥಂ ಮುನಿಃ । ಆರಾಧಿತೋ ಬೃಹದ್ಭೂತಸ್ತನ್ನೋ ವದ ಮಹಾಮುನೇ ।। 56 ।। ಕೀದೃಶಂ ವಾ ತಪಸ್ತೇನ ಕೋ ವಾನ್ಯೋ ನಿಯಮಃ ಕೃತಃ । ಯೇನ ತುಷ್ಟೋ ಮುನಿರ್ಬ್ರಾಹ್ಮಸ್ತಥಾ ತೇನ ಪ್ರಭಾಷಿತಃ ।। 57 ।। ಪರ್ವಂ ವಾಪ್ಯರ್ಧಪರ್ವಂ ವಾ ಸಮಗ್ರಂ ವಾ ಪ್ರಭಾಷಿತಮ್ । ಯಸ್ಮಿನ್ಸ್ಥಾನೇ ಯಥಾ ಪೃಷ್ಟಃ ಪುಲಸ್ತ್ಯೋ ಭಗವಾನೃಷಿಃ । ತನ್ನೋ ವದ ಮಹಾಭಾಗ ಕಲಾಸ್ಸ್ಮ ಶ್ರವಣೇ ವಯಮ್ ।। 58 ।।

ಆಗ ಋಷಿಗಳು ಸೂತನಿಗೆ ಹೇಳಿದರು: “ಸೂತ! ಪಾಪಸಮನ್ವಿತ ನರರಿಗೆ ದುರ್ಲಭವಾದ ಬ್ರಹ್ಮಮಾನಸ ಪುತ್ರ ಭಗವಾನ್ ಪುಲಸ್ತ್ಯ ಋಷಿಯ ದರ್ಶನವು ಧೀಮತ ಭೀಷ್ಮನಿಗೆ ಹೇಗೆ ದೊರೆಯಿತು? ಇದೊಂದು ಆಶ್ಚರ್ಯವೇ ಸರಿ! ಮಹಾಮುನೇ! ಬೃಹದ್ಭೂತನಾದ ಪುಲಸ್ತ್ಯಮುನಿಯು ಕ್ಷತ್ರಿಯನಾದ ಭೀಷ್ಮನಿಂದ ಹೇಗೆ ಆರಾಧಿಸಲ್ಪಟ್ಟನು? ಅದನ್ನು ಹೇಳು. ಆ ಬ್ರಹ್ಮಮಾನಸಪುತ್ರ ಪುಲಸ್ತ್ಯನು ಸಂತೋಷಪಟ್ಟು ಭೀಷ್ಮನೊಡನೆ ಮಾತನಾಡುವಷ್ಟು ಭೀಷ್ಮನು ಯಾವ ತಪಸ್ಸನ್ನಾಗಲೀ ಅಥವಾ ವ್ರತಗಳನ್ನಾಗಲೀ ಮಾಡಿದ್ದನು? ಭಗವಾನ್ ಋಷಿ ಪುಲಸ್ತ್ಯನು ಒಂದು ಪರ್ವವನ್ನು ಹೇಳಿದನೇ ಅಥವಾ ಅರ್ಧ ಪರ್ವವನ್ನು ಹೇಳಿದನೇ ಅಥವಾ ಸಮಗ್ರ ಪುರಾಣವನ್ನೇ ಹೇಳಿದನೇ? ಯಾವ ಸ್ಥಾನದಲ್ಲಿ ಭೀಷ್ಮನು ಇದನ್ನು ಕೇಳಿದನು? ಹೇಗೆ ಕೇಳಿದನು? ಮಹಾಭಾಗ! ಅದನ್ನು ನಮಗೆ ಹೇಳು. ಅದನ್ನು ಕೇಳುವುದರಲ್ಲಿ ನಾವು ಬಹು ಆಸಕ್ತರಾಗಿದ್ದೇವೆ.”

ಸೂತ ಉವಾಚ । ಯತ್ರ ಗಂಗಾ ಮಹಾಭಾಗಾ ಸಾಧೂನಾಂ ಹಿತಕಾರಿಣೀ । ವಿಭಿದ್ಯ ಪರ್ವತಂ ವೇಗಾನ್ನಿಃಸೃತಾ ಲೋಕಪಾವನೀ ।। 59 ।। ಗಂಗಾದ್ವಾರೇ ಮಹಾತೀರ್ಥೇ ಭೀಷ್ಮಃ ಪಿತೃಪರಾಯಣಃ । ಶುಶ್ರೂಷುಸ್ಸುಚಿರಂ ಕಾಲಂ ಮಹತಾಂ ನಿಯಮೇ ಸ್ಥಿತಃ ।। 60 ।। ಯಾವದ್ವರ್ಷಶತಂ ಸಾಗ್ರಂ ಪರಮೇಣ ಸಮಾಧಿನಾ । ಧ್ಯಾಯಮಾನಃ ಪರಂ ಬ್ರಹ್ಮ ತ್ರಿಕಾಲಂ ಸ್ನಾನಮಾಚರನ್ ।। 61 ।। ಪಿತೄಂದೇವಾಂಸ್ತರ್ಪಯತಃ ಸ್ವಾಧ್ಯಾಯೇನ ಮಹಾತ್ಮನಃ । ಆತ್ಮಾನಂ ಕರ್ಷತಶ್ಚಾಸ್ಯ ತುಷ್ಟೋ ದೇವಃ ಪಿತಾಮಹಃ । ಉವಾಚ ತನಯಂ ಬ್ರಹ್ಮಾ ಪುಲಸ್ತ್ಯಮೃಷಿಸತ್ತಮಮ್ ।। 62 ।।

ಸೂತನು ಹೇಳಿದನು: “ಸಾಧುಗಳ ಹಿತಕಾರಿಣಿಯಾದ ಮಹಾಭಾಗೆ ಲೋಕಪಾವನೀ ಗಂಗೆಯು ವೇಗದಿಂದ ಪರ್ವತವನ್ನು ಕೊರೆದುಕೊಂಡು ಹೊರಬರುತ್ತಾಳೋ ಆ ಮಹಾತೀರ್ಥವಾದ ಗಂಗಾದ್ವಾರದಲ್ಲಿ ಪಿತೃಪರಾಯಣನಾದ ಭೀಷ್ಮನು ದೀರ್ಘಕಾಲದ ವರೆಗೆ ಮಹಾ ನಿಯಮಸ್ಥನಾಗಿದ್ದನು. ಅವನು ತ್ರಿಕಾಲವೂ ಸ್ನಾನಮಾಡುತ್ತಾ ನೂರು ವರ್ಷಗಳ ವರೆಗೆ ಪರಮ ಸಮಾಧಿಯುಕ್ತನಾಗಿ ಪರಬ್ರಹ್ಮನನ್ನು ಧ್ಯಾನಿಸುತ್ತಿದ್ದನು. ಆ ಮಹಾತ್ಮನು ಸ್ವಾಧ್ಯಾಯದಿಂದ ಪಿತೃಗಳನ್ನೂ ದೇವತೆಗಳನ್ನೂ ತೃಪ್ತಿಪಡಿಸುತ್ತಿದ್ದನು. ದೇಹವನ್ನು ಶೋಷಿಸುತ್ತಾ ವ್ರತಪರನಾಗಿದ್ದ ಅವನನ್ನು ನೋಡಿ ದೇವ ಪಿತಾಮಹನು ಪ್ರಸನ್ನನಾದನು. ಆಗ ಬ್ರಹ್ಮನು ಪುತ್ರ ಋಷಿಸತ್ತಮ ಪುಲಸ್ತ್ಯನಿಗೆ ಹೇಳಿದನು.

ಬ್ರಹ್ಮೋವಾಚ । ಸ ತ್ವಂ ದೇವವ್ರತಂ ಭೀಷ್ಮಂ ವೀರಂ ಕುರುಕುಲೋದ್ಭವಮ್ । ತಪಸಸ್ಸಂನಿವರ್ತ್ತಸ್ವ ಕಾರಣಂ ಚಾಸ್ಯ ಕೀರ್ತಯ ।। 63 ।। ಪಿತೃಭಕ್ತ್ಯಾ ಮಹಾಭಾಗೋ ಧ್ಯಾಯಮಾನಸ್ಸಮಾಸ್ಥಿತಃ । ಯೋ ಹ್ಯಸ್ಯ ಮನಸಃ ಕಾಮಸ್ತಂ ಸಂಪಾದಯ ಮಾ ಚಿರಮ್ ।। 64 ।।

ಬ್ರಹ್ಮನು ಹೇಳಿದನು: “ಆ ಕುರುಕುಲೋದ್ಭವ ವೀರ ದೇವವ್ರತ ಭೀಷ್ಮನ ತಪಸ್ಸನ್ನು ನಿಲ್ಲಿಸು. ಅದಕ್ಕೆ ಕಾರಣವನ್ನೂ ಹೇಳು. ಪಿತೃಭಕ್ತಿಯಿಂದ ಧ್ಯಾನದಲ್ಲಿ ತೊಡಗಿರುವ ಆ ಮಹಾಭಾಗನ ಮನೋಕಾಮನೆಯನ್ನು ಪೂರ್ಣಗೊಳಿಸು. ತಡಮಾಡಬೇಡ.”

ಪಿತಾಮಹವಚಚ್ಛ್ರುತ್ವಾ ಪುಲಸ್ತ್ಯೋ ಮುನಿಸತ್ತಮಃ । ಗಂಗಾದ್ವಾರಮಥಾಗತ್ಯ ಭೀಷ್ಮಂ ವಚನಮಬ್ರವೀತ್ ।। 65 ।। 

ಪಿತಾಮಹನ ಮಾತನ್ನು ಕೇಳಿ ಮುನಿಸತ್ತಮ ಪುಲಸ್ತ್ಯನು ಗಂಗಾದ್ವಾರಕ್ಕೆ ಆಗಮಿಸಿ ಭೀಷ್ಮನಿಗೆ ಈ ಮಾತನ್ನಾಡಿದನು.

ಪುಲಸ್ತ್ಯ ಉವಾಚ । ವರಂ ವರಯ ಭದ್ರಂ ತೇ ಯತ್ತೇ ಮನಸಿ ವರ್ತತೇ । ತುಷ್ಟಸ್ತೇ ತಪಸಾ ವೀರ ಸಾಕ್ಷಾದ್ದೇವಃ ಪಿತಾಮಹಃ ।। 66 ।। ಬ್ರಹ್ಮಣಾ ಪ್ರೇಷಿತಸ್ತೇಽಹಂ ವರಾಂದಾಸ್ಯಾಮಿ ಕಾಂಕ್ಷಿತಾನ್ ।। 67 ।।

ಪುಲಸ್ತ್ಯನು ಹೇಳಿದನು: “ನಿನಗೆ ಮಂಗಳವಾಗಲಿ! ನಿನ್ನ ಮನಸ್ಸಿನಲ್ಲಿರುವ ವರವನ್ನು ಕೇಳು. ವೀರ! ನಿನ್ನ ತಪಸ್ಸಿನಿಂದ ಸಾಕ್ಷಾತ್ ಪಿತಾಮಹ ಬ್ರಹ್ಮದೇವನು ಪ್ರಸನ್ನನಾಗಿದ್ದಾನೆ. ಬ್ರಹ್ಮನು ಕಳುಹಿಸಿದ ನಾನು ಕಾಂಕ್ಷಿತ ವರಗಳನ್ನು ಕೊಡುತ್ತೇನೆ.”

ಭೀಷ್ಮೋಽಪಿ ತದ್ವಚಃ ಶ್ರುತ್ವಾ ಮನಃಶ್ರೋತ್ರಸುಖಾವಹಮ್ । ಉನ್ಮೀಲ್ಯ ನಯನೇ ದೃಷ್ಟ್ವಾ ಪುಲಸ್ತ್ಯಂ ಪುರತಃ ಸ್ಥಿತಮ್ ।। 68 ।। ಅಷ್ಟಾಂಗಪ್ರಣಿಪಾತೇನ ನತ್ವಾ ತಂ ಮುನಿಸತ್ತಮಮ್ । ಉವಾಚ ಪ್ರಣತೋ ಭೂತ್ವಾ ಸರ್ವಾಂಗಾಲಿಂಗಿತಾವನಿಃ ।। 69 ।।

ಮನಸ್ಸಿಗೂ ಕಿವಿಗೂ ಸುಖವನ್ನುಂಟುಮಾಡುವ ಆ ಮಾತನ್ನು ಕೇಳಿ ಭೀಷ್ಮನು ಕಣ್ಣುಗಳನ್ನು ತೆರೆದು ಎದುರಿಗಿದ್ದ ಪುಲಸ್ತ್ಯನನ್ನು ನೋಡಿ, ಆ ಮುನಿಸತ್ತಮನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಸರ್ವಾಂಗಪೂರ್ವಕವಾಗಿ ನಮಸ್ಕಾರಮಾಡುತ್ತಲೇ ಹೇಳಿದನು.

ಭೀಷ್ಮ ಉವಾಚ । ಅದ್ಯ ಮೇ ಸಫಲಂ ಜನ್ಮ ದಿನಂ ಚೇದಂ ಸುಶೋಭನಮ್ । ಭವತಶ್ಚರಣೌ ದೃಷ್ಟೌ ಜಗದ್ವಂದ್ಯೌ ಮಯಾ ತ್ವಿಹ ।। 70 ।। ತಪಸಶ್ಚ ಫಲಂ ಸರ್ವಂ ಯದ್ದೃಷ್ಟೋ ಭಗವಾನ್ಮಯಾ । ವರಪ್ರದೋ ವಿಶೇಷೇಣ ಸಂಪ್ರಾಪ್ತಶ್ಚ ನದೀತಟೇ ।। 71 ।। ಇಯಂ ಬ್ರಸೀ ಮಯಾ ಕ್ಲೃಪ್ತಾ ಆಸ್ಯತಾಂ ಸುಖದಾ ಕೃತಾ । ಅರ್ಘ್ಯಪಾತ್ರೇ ತು ಪಾಲಾಶೇ ದೂರ್ವಾಕ್ಷತಸುಮೈಃ ಕುಶೈಃ ।। 72 ।। ಸರ್ಷಪೈಶ್ಚ ದಧಿಕ್ಷೌದ್ರೈರ್ಯವೈಶ್ಚ ಪಯಸಾ ಸಹ । ಅಷ್ಟಾಂಗೋ ಹ್ಯೇಷ ನಿರ್ದ್ದಿಷ್ಟೋ ಹ್ಯರ್ಘೋ ಹಿ ಮುನಿಭಿಃ ಪುರಾ ।। 73 ।।

ಭೀಷ್ಮನು ಹೇಳಿದನು: “ಇಂದು ನನ್ನ ಜನ್ಮವು ಸಫಲವಾಯಿತು. ಜಗದ್ವಂದ್ಯನಾದ ನಿನ್ನ ಚರಣಗಳನ್ನು ನೋಡಿದ ಇಂದಿನ ದಿನವು ಸುದಿನವು. ಭಗವನ್! ನಿನ್ನನ್ನು ನೋಡುವುದು ನನ್ನ ಎಲ್ಲ ತಪಸ್ಸಿನ ಫಲವು. ಈ ನದೀತಟಕ್ಕೆ ವರವನ್ನು ಕೊಡಲು ಬಂದಿದ್ದೀಯೆ ಎಂದರೆ ಇದು ನನ್ನ ತಪಸ್ಸಿನ ವಿಶೇಷವೇ ಸರಿ. ಇಗೋ ಈ ದರ್ಭಾಸನವನ್ನು ಕೊಟ್ಟಿದ್ದೇನೆ. ಸುಖಾಸೀನನಾಗಬೇಕು. ಮುನಿಗಳಿಗೆ ಅರ್ಘ್ಯವ್ಯಾವುದೆಂದು ಹಿಂದೆ ಹೇಳಿದ್ದರೋ ಆ ಎಂಟು ವಸ್ತುಗಳನ್ನು - ದೂರ್ವೆ, ಅಕ್ಷತೆ, ಹೂ, ದರ್ಭೆಗಳು, ಬಿಳಿಸಾಸಿವೆ, ಮೊಸರು, ಜೇನು, ಮತ್ತು ಹಾಲು - ಮುತ್ತುಗದ ಅರ್ಘ್ಯಪಾತ್ರೆಯಲ್ಲಿ ಇರಿಸಿದ್ದೇನೆ.”

ಶ್ರುತ್ವೈತದ್ವಚನಂ ತಸ್ಯ ಭೀಷ್ಮಸ್ಯಾಮಿತತೇಜಸಃ । ಉಪವಿಷ್ಟೋ ಬ್ರಹ್ಮಸುತಃ ಪುಲಸ್ತ್ಯೋ ಭಗವಾನೃಷಿಃ ।। 74 ।। ವಿಷ್ಟರಂ ಸಹ ಪಾದ್ಯೇನ ಅರ್ಘಪಾತ್ರಂ ಮುದಾನ್ವಿತಃ । ತುತೋಷ ಭಗವಾನ್ಪ್ರೀತಃ ಸದಾಚಾರೇಣ ತೇನ ತು ।। 75 ।।

ಅಮಿತತೇಜಸ್ವಿ ಭೀಷ್ಮನ ಆ ಮಾತನ್ನು ಕೇಳಿ ಬ್ರಹ್ಮಸುತ ಭಗವಾನ್ ಋಷಿ ಪುಲಸ್ತ್ಯನು ಕುಳಿತುಕೊಂಡನು. ಮುದಾನ್ವಿತನಾಗಿ ಆಸನದಲ್ಲಿ ಕುಳಿತು ಪಾದ್ಯ ಮತ್ತು ಅರ್ಘ್ಯಗಳನ್ನು ಸ್ವೀಕರಿಸಿದನು. ಅವನ ಸದಾಚಾರಗಳಿಂದ ಭಗವಾನ್ ಪುಲಸ್ತ್ಯನು ಸಂತುಷ್ಟನಾದನು.

ಪುಲಸ್ತ್ಯ ಉವಾಚ । ಸತ್ಯವಾಂದಾನಶೀಲೋಽಸಿ ಸತ್ಯಸಂಧಿರ್ನರೇಶ್ವರಃ । ಹ್ರೀಮಾನ್ಮೈತ್ರಃ ಕ್ಷಮಾಶೀಲೋ ವಿಕ್ರಾಂತಃ ಶತ್ರುಶಾಸನೇ ।। 76 ।। ಧರ್ಮಜ್ಞಸ್ತ್ವಂ ಕೃತಜ್ಞಸ್ತ್ವಂ ದಯಾವಾನ್ಪ್ರಿಯಭಾಷಿತಾ । ಮಾನ್ಯಮಾನಯಿತಾ ವಿಜ್ಞೋ ಬ್ರಹ್ಮಣ್ಯಃ ಸಾಧುವತ್ಸಲಃ ।। 77 ।। ತುಷ್ಟಸ್ತೇಽಹಂ ಸದಾ ವತ್ಸ ಪ್ರಣಿಪಾತಪರಸ್ಯ ವೈ । ಪ್ರಬ್ರೂಹಿ ತ್ವಂ ಮಹಾಭಾಗ ಕಥನಂ ತೇ ವದಾಮ್ಯಹಮ್ ।। 78 ।।

ಪುಲಸ್ತ್ಯನು ಹೇಳಿದನು: “ನರೇಶ್ವರ! ಸತ್ಯವಾದಿಯೂ ದಾನಶೀಲನೂ ಸತ್ಯಸಂಧನೂ ಆಗಿದ್ದೀಯೆ. ಲಜ್ಜಾಸ್ವಭಾವದವನೂ, ಕ್ಷಮಾಶೀಲನೂ,  ಶತ್ರುಗಳನ್ನು ನಿಗ್ರಹಿಸುವುದರಲ್ಲಿ ವಿಕ್ರಾಂತನೂ ಆಗಿದ್ದೀಯೆ. ನೀನು ಧರ್ಮಜ್ಞನು. ಕೃತಜ್ಞನು. ದಯಾವಂತನೂ ಪ್ರಿಯಭಾಷಿತನೂ ಆಗಿದ್ದೀಯೆ. ಗೌರವಕ್ಕೆ ಅರ್ಹನು ಮತ್ತು ಗೌರವವನ್ನು ಕೊಡುವವನು. ವಿಷಯಗಳನ್ನು ತಿಳಿದಿದ್ದೀಯೆ. ಬ್ರಹ್ಮಜ್ಞಾನವನ್ನು ಪಡೆದಿದ್ದೀಯೆ. ಸಾಧುವತ್ಸಲನಾಗಿದ್ದೀಯೆ. ವತ್ಸ! ನಮಸ್ಕರಿಸುತ್ತಿರುವ ನಿನ್ನ ಮೇಲೆ ಸದಾ ಸಂತೃಪ್ತನಾಗಿದ್ದೇನೆ. ಮಹಾಭಾಗ! ಏನು ಹೇಳಬೇಕೆಂದು ಬೇಕೆಂದು ಹೇಳು. ಅದನ್ನೇ ಹೇಳುತ್ತೇನೆ.”

ಭೀಷ್ಮ ಉವಾಚ । ಭಗವನ್ಭಗವಾನ್ಬ್ರಹ್ಮಾ ಕಸ್ಮಿನ್ಕಾಲೇ ಸ್ಥಿತೋ ವಿಭುಃ । ಸೃಷ್ಟಿಂ ಚಕಾರ ವೈ ಪೂರ್ವಂ ದೇವಾದೀನಾಂ ವದಸ್ವ ಮೇ ।। 79 ।। ಕಥಂ ವಾ ಭಗವಾನ್ವಿಷ್ಣುಃ ಕಥಂ ರುದ್ರಸ್ಸಮಾನಿ ಚ । ಕಥಂ ವಾ ಪರ್ವತಾಂಶ್ಚೋಗ್ರಾನರಣ್ಯಾನಿ ಪುರಾಣ ಚ ।। 80 ।। ಮುನೀನ್ಪ್ರಜಾಪತೀಂಶ್ಚೈವ ಸಪ್ತರ್ಷೀನ್ಪ್ರವರಾನಪಿ । ವರ್ಣಾನ್ವಾಯುಂ ಪುರಾಸ್ಥಾನಂ ಗಂಧರ್ವಾನ್ಯಕ್ಷರಾಕ್ಷಸಾನ್ ।। 81 ।। ತೀರ್ಥಾನಿ ಸರಿತೋ ವಾಥ ಸೂರ್ಯಾದೀನ್ಗ್ರಹತಾರಕಾನ್ । ಯಥಾ ಸಸರ್ಜ ಭಗವಾಂಸ್ತಥಾ ಮೇ ತ್ವಂ ವದಸ್ವ ಹ ।। 82 ।।

ಭೀಷ್ಮನು ಹೇಳಿದನು: “ಭಗವನ್! ಭಗವಾನ್ ವಿಭು ಬ್ರಹ್ಮನು ಯಾವ ಸ್ಥಳದಲ್ಲಿದ್ದಾನೆ? ಅವನು ಹಿಂದೆ ಮಾಡಿದ ದೇವಾದಿಗಳ ಸೃಷ್ಟಿಯ ಕುರಿತು ನನಗೆ ಹೇಳು. ಭಗವಾನ್ ವಿಷ್ಣು ಮತ್ತು ರುದ್ರರು ಹೇಗೆ ಸಮನಾಗುತ್ತಾರೆ? ಪರ್ವತಗಳು, ಉಗ್ರ ಅರಣ್ಯಗಳು, ಪುರಾಣ ಮುನಿಗಳು, ಪ್ರಜಾಪತಿಗಳು, ಶ್ರೇಷ್ಠ ಸಪ್ತರ್ಷಿಗಳು, ಬ್ರಹ್ಮ-ಕ್ಷತ್ರಿಯ-ವೈಶ್ಯ-ಶೂದ್ರವರ್ಣಗಳೂ, ವಾಯು, ವಾಯು, ಗಂಧರ್ವ, ಯಕ್ಷರು, ರಾಕ್ಷಸರು, ತೀರ್ಥಗಳನ್ನು, ನದಿಗಳನ್ನು, ಸೂರ್ಯಾದಿ ಗ್ರಹನಕ್ಷತ್ರಗಳನ್ನು ಭಗವಾನ್ ಬ್ರಹ್ಮನು ಹೇಗೆ ಸೃಷ್ಟಿಸಿದನು ಎನ್ನುವುದನ್ನು ನನಗೆ ಹೇಳು.”

ಪುಲಸ್ತ್ಯ ಉವಾಚ । ಪರಃ ಪರಾಣಾಂ ಪರಮಃ ಪರಮಾತ್ಮಾ ಪಿತಾಮಹಃ । ರೂಪವರ್ಣಾದಿರಹಿತೋ ವಿಶೇಷಣ ವಿವರ್ಜಿತಃ ।। 83 ।। ಅಪಿ ವೃದ್ಧಿವಿನಾಶಾಭ್ಯಾಂ ಪರಿಣಾಮವಿಜನ್ಮಭಿಃ । ಗುಣೈರ್ವಿವರ್ಜಿತಃ ಸರ್ವೈಃ ಸ ಭಾತೀತಿ ಹಿ ಕೇವಲಮ್ ।। 84 ।। ಸರ್ವತ್ರಾಸೌ ಸಮಶ್ಚಾಪಿ ವಸನ್ನನುಪಮೋ ಮತಃ । ಭಾವಯನ್ಬ್ರಹ್ಮರೂಪೇಣ ವಿದ್ವದ್ಭಿಃ ಪರಿಪಠ್ಯತೇ ।। 85 ।। ತಂ ಗುಹ್ಯಂ ಪರಮಂ ನಿತ್ಯಮಜಮಕ್ಷಯಮವ್ಯಯಮ್ । ತಥಾ ಪುರುಷರೂಪೇಣ ಕಾಲರೂಪೇಣ ಸಂಸ್ಥಿತಮ್ ।। 86 ।। ತಂ ನತ್ವಾಽಹಂ ಪ್ರವಕ್ಷ್ಯಾಮಿ ಯಥಾ ಸೃಷ್ಟಿಂ ಚಕಾರ ಹ

ಪುಲಸ್ತ್ಯನು ಹೇಳಿದನು: “ಪಿತಾಮಹ ಬ್ರಹ್ಮನು ಉತ್ತಮನು. ಉತ್ತಮರಲ್ಲಿಯೂ ಉತ್ತಮನು. ಪರಮಾತ್ಮನು. ಅವನಿಗೆ ರೂಪವರ್ಣಗಳಿಲ್ಲ. ಯಾವುದೇ ವಿಶೇಷಗಳಿಂದಲೂ ವಿವರ್ಜಿತನು. ಅವನಿಗೆ ವೃದ್ಧಿ-ವಿನಾಶಗಳಿಲ್ಲ. ಇಂದಿಗೂ ನಾಳೆಗೂ ಆಗುವ ವ್ಯತ್ಯಾಸವು ಅವನಿಗಿಲ್ಲ. ಜನ್ಮವಿಲ್ಲ. ಯಾವ ಗುಣವೂ ಅವನಿಗಿಲ್ಲ. ಅವನು ಕೇವಲ ಪ್ರಕಾಶ ಮಾತ್ರ. ಎಲ್ಲದರಲ್ಲಿಯೂ ಒಂದೇ ರೀತಿಯಲ್ಲಿದ್ದಾನೆ. ಮತ್ತು ಎಲ್ಲರಲ್ಲಿಯೂ ಅದು ಸಾಯುವವರೆಗೂ ಇರುತ್ತಾನೆ. ವಿದ್ವಾಂಸರು ಅವನನ್ನು ಬ್ರಹ್ಮರೂಪದಿಂದ ಭಾವಿಸಿ ಬ್ರಹ್ಮನೆಂದೇ ಹೇಳುತ್ತಾರೆ. ಯಾರಿಗೂ ತಿಳಿಯದವನು, ಉಚ್ಛಸ್ಥಾನದಲ್ಲಿರುವವನು, ಯಾವಾಗಲೂ ಇರುವವನು, ಹುಟ್ಟುವಿಕೆಯಿಲ್ಲದವನು, ನಾಶವಿಲ್ಲದವನು, ಕ್ಷಯಿಸದವನು, ಆದರೂ ಪುರುಷನಂತೆಯೂ, ಕಾಲರೂಪನಾಗಿಯು ಇರುವವನು. ಅಂತಹ ಬ್ರಹ್ಮನನ್ನು ನಮಸ್ಕರಿಸಿ ಅವನು ಹೇಗೆ ಸೃಷ್ಟಿಸಿದನು ಎನ್ನುವುದನ್ನು ಹೇಳುತ್ತೇನೆ.

ಪೂರ್ವಂ ತು ಪದ್ಮಶಯನಾದುತ್ಥಾಯ ಜಗತಃ ಪ್ರಭುಃ ।। 87 ।। ಗುಣವ್ಯಂಜನಸಂಭೂತಃ ಸರ್ಗಕಾಲೇ ನರಾಧಿಪ । ಸಾತ್ತ್ವಿಕೋ ರಾಜಸಶ್ಚೈವ ತಾಮಸಶ್ಚ ತ್ರಿಧಾ ಮಹತ್ ।। 88 ।। ಪ್ರಧಾನತತ್ತ್ವೇನ ಸಮಂ ತಥಾ ಬೀಜಾದಿಭಿರ್ವೃತಮ್ । ವೈಕಾರಿಕಸ್ತೈಜಸಶ್ಚ ಭೂತಾದಿಶ್ಚೈವ ತಾಮಸಃ ।। 89 ।। ತ್ರಿವಿಧೋಯಮಹಂಕಾರೋ ಮಹತ್ತತ್ತ್ವಾದಜಾಯತ । ಭೂತೇಂದ್ರಿಯಾಣಾಂ ಪಂಚಾನಾಂ ತಥಾ ಕರ್ಮೇಂದ್ರಿಯೈಃ ಸಹ ।। 90 ।। ಪೃಥಿವ್ಯಾಪಸ್ತಥಾ ತೇಜೋ ವಾಯುರಾಕಾಶಮೇವ ಚ । ಏಕೈಕಸ್ಯ ಸ್ವರೂಪೇಣ ಕಥಯಾಮಿ ಯಥೋತ್ತರಮ್ ।। 91 ।।

ನರಾಧಿಪ! ಆ ಜಗತ್ಪ್ರಭುವು ಸೃಷ್ಟಿಮಾಡುವ ಕಾಲದಲ್ಲಿ ಗುಣಗಳಿಂದಲೂ ಆಕಾರದಿಂದಲೂ ಇರುವವನಾಗಿ ಪದ್ಮದಿಂದ ಎದ್ದು ಕಾಣಿಸಿಕೊಂಡನು. ಮಹತ್ತತ್ತ್ವವು ಸಾತ್ತ್ವಿಕ, ರಾಜಸ ಮತ್ತು ತಾಮಸವೆಂದು ಮೂರು ಬಗೆಯಾಯಿತು. ಆ ಮೂರು ಗುಣಗಳು ಬೀಜರೂಪದಿಂದ ಪ್ರಧಾನತತ್ತ್ವವನ್ನು ಆವರಿಸಿಕೊಂಡವು. ಆಗ ವೈಕಾರಿಕ, ತೈಜಸ ಮತ್ತು ಭೂತಾದಿ ತಾಮಸವೆಂಬ ಮೂರುವಿಧದ ಅಹಂಕಾರಗಳು ಮಹತ್ತತ್ತ್ವದಿಂದ ಹುಟ್ಟಿದವು. ಪಂಚಭೂತಗಳೂ, ಪಂಚಜ್ಞಾನೇಂದ್ರಿಯಗಳೂ, ಪಂಚಕರ್ಮೇಂದ್ರಿಯಗಳೂ ಮಹತ್ತತ್ತ್ವದಿಂದಲೇ ಉಂಟಾದವು. ಭೂಮಿ, ನೀರು, ತೇಜಸ್ಸು, ವಾಯು ಮತ್ತು ಆಕಾಶ – ಇವು ಪಂಚಭೂತಗಳು. ಇವುಗಳಲ್ಲಿ ಒಂದೊಂದರ ಸ್ವರೂಪವನ್ನೂ ಕ್ರಮವಾಗಿ ಹೇಳುತ್ತೇನೆ.

ಶಬ್ದಮಾತ್ರಂ ತಥಾಕಾಶಂ ಭೂತಾದಿಃ ಖಂ ಸಮಾವೃಣೋತ್ । ಬಲವಾನೇವ ವೈ ವಾಯುಸ್ತಸ್ಯ ಸ್ಪರ್ಶೋ ಗುಣೋಮತಃ ।। 92 ।। ತತೋ ವಾಯುರ್ವಿಕುರ್ವಾಣೋ ರೂಪಮಾತ್ರಂ ಸಸರ್ಜ ಹ । ಜ್ಯೋತೀರೂಪಂತು ತದ್ವಾಯುಸ್ತದ್ರೂಪಗುಣಮುಚ್ಯತೇ ।। 93 ।। ಸ್ಪರ್ಶರೂಪಸ್ತು ವೈ ವಾಯೂ ರೂಪಮಾತ್ರಂ ಸಮಾವೃಣೋತ್ । ಜ್ಯೋತಿಶ್ಚಾಪಿ ವಿಕುರ್ವಾಣಂ ರಸಮಾತ್ರಂ ಸಸರ್ಜ ಹ ।। 94 ।। ಸಂಭವಂತಿ ತತೋಂಭಾಂಸಿ ರೂಪಮಾತ್ರಂ ಸಮಾವೃಣೋತ್ । ವಿಕುರ್ವಾಣಾನಿ ಚಾಂಭಾಂಸಿ ಗಂಧಮಾತ್ರಂ ಸಸರ್ಜಿರೇ ।। 95 ।। ಸಂಘಾತೋ ಜಾಯತೇ ತಸ್ಮಾತ್ತಸ್ಯ ಗಂಧೋ ಮತೋ ಗುಣಃ

ಭೂತಾದಿ ತಮಸ್ಸಾಹಂಕರದಿಂದ ಶಬ್ದತನ್ಮಾತ್ರದ ಆಕಾಶವು ಎಲ್ಲವನ್ನೂ ಆವರಿಸಿತು. ಆಗ ಬಲಿಷ್ಟ ವಾಯುವು ಉತ್ಪನ್ನವಾಯಿತು. ಅದರ ಗುಣವು ಸ್ಪರ್ಶ. ವಾಯುವು ವಿಕಾರಹೊಂದಲು ರೂಪತನ್ಮಾತ್ಮವನ್ನು ಸೃಷ್ಟಿಸಿತು. ವಾಯುತತ್ತ್ವದಿಂದ ರೂಪವುಂಟಾಯಿತು. ಜ್ಯೋತಿರೂಪವಾದ ಆ ಭೂತಕ್ಕೆ ರೂಪವು ಗುಣವೆಂದು ಹೇಳುತ್ತಾರೆ. ಸ್ಪರ್ಶರೂಪದ ವಾಯುವು ರೂಪತನ್ಮಾತ್ರವನ್ನು ಆವರಿಸಿತು. ಜ್ಯೋತಿಯು ವಿಕಾರಹೊಂದಲು ರಸ ತನ್ಮಾತ್ರದ ಸೃಷ್ಟಿಯಾಯಿತು. ಆಗ ಹುಟ್ಟಿದ ಜಲವು ರೂಪತನ್ಮಾತ್ರವನ್ನು ಆವರಿಸಿತು. ಜಲದಲ್ಲಿ ವಿಕಾರವುಂಟಾಗಿ ಗಂಧ ತನ್ಮಾತ್ರವು ಹುಟ್ಟಿತು. ಅದರ ಸಂಘಾತದಿಂದ ಆದ ಭೂಮಿಯ ಗುಣವು ಗಂಧವೆಂದು ಹೇಳುತ್ತಾರೆ.

[1]ತೈಜಸಾನೀಂದ್ರಿಯಾಣ್ಯಾಹುರ್ದೇವಾ ವೈಕಾರಿಕಾ ದಶ ।। 96 ।। ಏಕಾದಶಂ ಮನಶ್ಚಾತ್ರ ದೇವಾ ವೈಕಾರಿಕಾಃ ಸ್ಮೃತಾಃ । ತ್ವಕ್ಚಕ್ಷುರ್ನಾಸಿಕಾ ಜಿಹ್ವಾ ಶ್ರೋತ್ರಮತ್ರ ಚ ಪಂಚಮಮ್ ।। 97 ।। ಶಬ್ದಾದಿಜ್ಞಾನಸಿದ್ಧ್ಯರ್ಥಾಂ ಬುದ್ಧಿಯುಕ್ತಾನಿ ಪಂಚ ವೈ । ಪಾಯೂಪಸ್ಥಂ ಹಸ್ತಪಾದೌ ಕೀರ್ತಿತಾ ವಾಕ್ಚ ಪಂಚಮೀ ।। 98 ।। ವಿಸರ್ಗಶಿಲ್ಪಗತ್ಯುಕ್ತಿರ್ಗುಣದೋಷೌ ಚ ಕಥ್ಯತೇ

ತೈಜಸ ಅಹಂಕಾರದಿಂದ ಇಂದ್ರಿಯಗಳು ಹುಟ್ಟಿದವೆಂದು ಹೇಳುತ್ತಾರೆ. ವೈಕಾರಿಕ ಅಹಂಕಾರದಿಂದ ಹತ್ತು ದೇವತೆಗಳು ಹುಟ್ಟಿದರೆಂದು ಹೇಳುತ್ತಾರೆ. ಹನ್ನೊಂದನೆಯ ಮನಸ್ಸೂ ಮತ್ತು ದೇವತೆಗಳೂ ವೈಕಾರಿಕ ಅಹಂಕಾರದಿಂದಾದರೆಂದು ಹೇಳುತ್ತಾರೆ. ಚರ್ಮ, ಕಣ್ಣು, ಮೂಗು, ನಾಲಿಗೆ, ಕಿವಿ – ಇವು ಐದು ಜ್ಞಾನೇಂದ್ರಿಯಗಳು. ಈ ಐದು ಇಂದ್ರಿಯಗಳೂ ಬುದ್ಧಿಯಿಂದ ಕೂಡಿಕೊಂಡು ಶಬ್ದಸ್ಪರ್ಶಾದಿ ಜ್ಞಾನವನ್ನುಂಟುಮಾಡುತ್ತವೆ. ಪಾಯು, ಉಪಸ್ಥ, ಹಸ್ತ, ಪಾದ, ವಾಕ್ – ಈ ಅದು ಕರ್ಮೇಂದ್ರಿಯಗಳು. ಹೊರಕ್ಕೆ ಬಿಡುವುದು, ಕೈಕೆಲಸ, ನಡೆಯುವುದು, ಮಾತನಾಡುವುದು ಮತ್ತು ಗುಣ-ದೋಷಯುಕ್ತ ಕ್ರಿಯೆಗಳು ಇವುಗಳ ಕಾರ್ಯಗಳೆಂದು ಹೇಳಿದ್ದಾರೆ.

ಆಕಾಶವಾಯುತೇಜಾಂಸಿ ಸಲಿಲಂ ಪೃಥಿವೀ ತಥಾ ।। 99 ।। ಶಬ್ದಾದಿಭಿರ್ಗುಣೈರ್ವೀರ ಯುಕ್ತಾನೀತ್ಯುತ್ತರೋತ್ತರೈಃ । ಶಾಂತಾ ಘೋರಾಶ್ಚ ಮೂಢಾಶ್ಚ ವಿಶೇಷಾಸ್ತೇನ ತೇ ಸ್ಮೃತಾಃ ।। 100 ।। ನಾನಾವೀರ್ಯಾಃ ಪೃಥಗ್ಭೂತಾಸ್ತತಸ್ತೇ ಸಂಹತಿಂ ವಿನಾ । ನಾಶಕ್ನುವನ್ಪ್ರಜಾಸ್ಸ್ರಷ್ಟುಮಸಮಾಗಮ್ಯ ಕೃತ್ಸ್ನಶಃ ।। 101 ।। ಸಮೇತ್ಯಾನ್ಯೋನ್ಯಸಂಯೋಗಾತ್ಪರಸ್ಪರಸಮಾಶ್ರಯಾತ್

ಆಕಾಶ, ವಾಯು, ತೇಜಸ್ಸು, ಜಲ, ಮತ್ತು ಪೃಥ್ವೀ – ಇವು ಐದು ಪಂಚಭೂತಗಳು. ವೀರ! ಕ್ರಮವಾಗಿ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳಲ್ಲಿ ಒಂದು, ಎರಡು, ಮೂರು, ನಾಲ್ಕು ಮತ್ತು ಐದನ್ನು ಈ ಪಂಚಭೂತಗಳು ಹೊಂದುತ್ತವೆ[2]. ಅವುಗಳಲ್ಲಿ ಶಾಂತ, ಘೋರ, ಮೂಢ ಮತ್ತು ವಿಶೇಷಗಳೆಂಬ ಭೇದಗಳಿವೆ. ಬೇರೆ ಬೇರೆ ಭೂತಗಳು ಭಿನ್ನ ಭಿನ್ನ ಶಕ್ತಿಯುಳ್ಳವುಗಳು. ಈ ಪಂಚಭೂತಗಳು ಒಂದಾಗದೇ ಪ್ರಜೆಗಳನ್ನು ಸೃಷ್ಟಿಸಲು ಅಸಮರ್ಥರು. ಇವುಗಳ ಒಂದಾಗಿ ಪರಸ್ಪರ ಆಶ್ರಯದಿಂದ ಸೃಷ್ಟಿಯಾಗುತ್ತದೆ.

ಏಕಸಂಘಾತಲಕ್ಷಾಶ್ಚ ಸಂಪ್ರಾಪ್ಯೈಕ್ಯಮಶೇಷತಃ ।। 102 ।। ಪುರುಷಾಧಿಷ್ಠಿತತ್ವಾಚ್ಚ ವ್ಯಕ್ತಾನುಗ್ರಹಣೇ ತಥಾ । ಮಹದಾದಯೋ ವಿಶೇಷಾಂತಾ ಹ್ಯಂಡಮುತ್ಪಾದಯಂತಿ ವೈ ।। 103 ।। ತತ್ಕ್ರಮೇಣ ವಿವೃದ್ಧಂ ತು ಜಲಬುದ್ಬುದವತ್ಸಮಮ್ । ತತ್ರಾವ್ಯಕ್ತಸ್ವರೂಪೋಸೌ ವ್ಯಕ್ತರೂಪೀ ಜನಾರ್ದನಃ ।। 104 ।। ಬ್ರಹ್ಮಾ ಬ್ರಹ್ಮಸ್ವರೂಪೇಣ ಸ್ವಯಮೇವ ವ್ಯವಸ್ಥಿತಃ । ಮೇರುರುಲ್ಬಮಭೂತ್ತಸ್ಯ ಜರಾಯುಶ್ಚ ಮಹೀಧರಾಃ ।। 105 ।। ಗರ್ಭೋದಕಂ ಸಮುದ್ರಾಶ್ಚ ತಸ್ಯಾಽಽಸಂಶ್ಚ ಮಹಾತ್ಮನಃ । ತತ್ರ ದ್ವೀಪಾಃ ಸಮುದ್ರಾಶ್ಚ ಸಜ್ಯೋತಿರ್ಲೋಕಸಂಗ್ರಹಃ ।। 106 ।। ತಸ್ಮಿನ್ನಂಡೇಽಭವನ್ವೀರ ಸದೇವಾಸುರಮಾನುಷಾಃ

ಈ ಭೂತಗಳು ಒಂದು ಗುಂಪಾಗಿ ಪರಸ್ಪರ ಭೇದವನ್ನಡಗಿಸಿಕೊಂಡು ಪುರುಷನ ಅಧಿಷ್ಟಾತೃತ್ವದಲ್ಲಿ ಪ್ರಧಾನನ ಅನುಗ್ರಹದಿಂದ ಸೃಷ್ಟಿಸುತ್ತವೆ. ಮಹತ್ತು ಮತ್ತು ವಿಶೇಷಭೂತಗಳು ಸೇರಿ ಅಂಡವನ್ನು ಉತ್ಪಾದಿಸುತ್ತವೆ. ಈ ಅಂಡವು ವೃದ್ಧಿಯಾಗಿ ನೀರಿನ ಗುಳ್ಳೆಯಂತೆ ಒಂದಾಗಿ ಕಾಣಿಸುತ್ತದೆ. ಆ ಮೊಟ್ಟೆಯಲ್ಲಿ ಅವ್ಯಕ್ತರೂಪನಾದ ಜನಾರ್ದನನು ಸ್ವಯಂ ತಾನೇ ಬ್ರಹ್ಮರೂಪವನ್ನು ತಾಳಿ ವ್ಯವಸ್ಥಿತನಾಗುತ್ತಾನೆ. ಮಹದ್ರೂಪವನ್ನು ತಾಳಿದ ಆ ವಿಷ್ಣುವಿನ ಸ್ವೇದೋದಕವೇ ಅಂಡವಾಯಿತು. ಗರ್ಭವೇಷ್ಟನ ಚೀಲವೇ ಪರ್ವತಗಳಾದವು. ಗರ್ಭೋದಕವೇ ಸಮುದ್ರವಾಯಿತು. ವೀರ! ಆ ಅಂಡದಲ್ಲಿ ಪರ್ವತಗಳೂ, ದ್ವೀಪಗಳೂ, ಸಮುದ್ರಗಳೂ, ಜ್ಯೋತಿರ್ಲೋಕಗಳೂ, ದೇವಾಸುರ ಮನುಶ್ಯರೂ ಮತ್ತು ಎಲ್ಲ ಲೋಕಗಳೂ ಉಂಟಾದವು.

ವಾರಿವಹ್ನ್ಯನಿಲಾಕಾಶೈರ್ವೃತೈರ್ಭೂತಾದಿನಾ ಬಹಿಃ ।। 107 ।। ವೃತಂ ದಶಗುಣೈರಂಡಂ ಭೂತಾದಿರ್ಮಹತಾ ತಥಾ । ಅವ್ಯಕ್ತೇನಾವೃತೋ ರಾಜಂಸ್ತೈಃ ಸರ್ವೈಸ್ಸಹಿತೋ ಮಹಾನ್ ।। 108 ।। ಏಭಿರಾವರಣೈಃ ಸರ್ವೈಃ ಸರ್ವಭೂತೈಶ್ಚ ಸಂಯುತಮ್ । ನಾರಿಕೇಲಫಲಂ ಯದ್ವದ್ಬೀಜಂ ಬಾಹ್ಯಫಲೈರಿವ ।। 109 ।।

ರಾಜನ್! ಈ ಅಂಡವು ಹೊರಗಿನಿಂದ ಜಲ, ಅಗ್ನಿ, ಆಕಾಶ – ಈ ಭೂತಗಳಿಂದಲೂ, ಈ ಭೂತಗಳಿಗೂ ಹತ್ತು ಗುಣ ಮಹತ್ತಿನಿಂದಲೂ, ಆ ಮಹತ್ತು ಅವ್ಯಕ್ತದಿಂದಲೂ ಸುತ್ತಲೂ ಆವೃತವಾಗಿದೆ. ನಾರಿಕೇಲ ಫಲದಲ್ಲಿ ಒಳಗಿರುವ ಬೀಜವನ್ನು ಹೊರಗಿನ ಫಲಾದಿಗಳು ಆವರಿಸಿಕೊಂದಿರುವಂತೆ ಸರ್ವಲೋಕಗಳೂ ಈ ಸರ್ವಭೂತಗಳಿಂದ ಆವರಣರೂಪದಲ್ಲಿ ಆವೃತಗೊಂಡಿವೆ.

ಬ್ರಹ್ಮಾ ಸ್ವಯಂ ಚ ಜಗತೋ ವಿಸೃಷ್ಟೌ ಸಂಪ್ರವರ್ತತೇ । ಸೃಷ್ಟಿಂ ಚ ಪಾತ್ಯನುಯುಗಂ ಯಾವತ್ಕಲ್ಪವಿಕಲ್ಪನಾ ।। 110 ।। ಸ ಸಂಜ್ಞಾಂ ಯಾತಿ ಭಗವಾನೇಕ ಏವ ಜನಾರ್ದನಃ । ಸತ್ವಭುಗ್ಗುಣವಾಂದೇವೋ ಹ್ಯಪ್ರಮೇಯಪರಾಕ್ರಮಃ ।। 111 ।। ತಮೋದ್ರೇಕಂ ಚ ಕಲ್ಪಾಂತೇ ರೂಪಂ ರೌದ್ರಂ ಕರೋತಿ ಚ । ರಾಜೇಂದ್ರಾಖಿಲಭೂತಾನಿ ಭಕ್ಷಯತ್ಯತಿಭೀಷಣಃ ।। 112 ।। ಭಕ್ಷಯಿತ್ವಾ ಚ ಭೂತಾನಿ ಜಗತ್ಯೇಕಾರ್ಣವೀಕೃತೇ । ನಾಗಪರ್ಯಂಕಶಯನೇ ಶೇತೇ ಸರ್ವಸ್ವರೂಪಧೃಕ್ ।। 113 ।।

ಬ್ರಹ್ಮನು ತಾನಾಗಿಯೇ ಪ್ರಪಂಚದ ಸೃಷ್ಟಿಯಲ್ಲಿ ತೊಡಗುತ್ತಾನೆ. ಕಲ್ಪವು ಮುಗಿಯುವವರೆಗೂ ಅವನು ಯುಗಯುಗದಲ್ಲಿಯೂ ಹೀಗೆ ಸೃಷ್ಟಿಯನ್ನು ಮಾಡುತ್ತಿರುತ್ತಾನೆ. ಭಗವಾನ್ ಜನರ್ದನನೊಬ್ಬನೇ ಬ್ರಹ್ಮನೆಂಬ ಸಂಜ್ಞೆಯನ್ನು ಪಡೆಯುತ್ತಾನೆ. ಸತ್ವಗುಣದ ಉದ್ರೇಕದಿಂದ ಆ ಅಪ್ರಮೇಯ ಪರಾಕ್ರಮಿ ದೇವನು ವಿಷ್ಣುವಾಗಿ ಜಗತ್ತನ್ನು ಪಾಲಿಸುತ್ತಾನೆ. ಕಲ್ಪಾಂತದಲ್ಲಿ ತಮೋಗುಣ ಉದ್ರೇಕದಿಂದ ಅವನೇ ರುದ್ರನ ರೂಪವನ್ನು ಧರಿಸುತ್ತಾನೆ. ರಾಜೇಂದ್ರ! ಆಗ ಅತಿಭೀಷಣನಾಗಿ ಅಖಿಲ ಭೂತಗಳನ್ನೂ ಭಕ್ಷಿಸುತ್ತಾನೆ. ಭೂತಗಳೆಲ್ಲವನ್ನೂ ಭಕ್ಷಿಸಿ ಜಗತ್ತನ್ನು ಏಕಾರ್ಣವವನ್ನಾಗಿ ಮಾಡಿಕೊಂಡು ಆ ಸರ್ವಸ್ವರೂಪಧರನು ನಾಗಪರ್ಯಂಕಶಯನದಲ್ಲಿ ನಿದ್ರಿಸುತ್ತಾನೆ.

ಪ್ರಬುದ್ಧಶ್ಚ ಪುನಃ ಸೃಷ್ಟಿಂ ಪ್ರಕರೋತಿ ಚ ರೂಪಧೃಕ್ । ಸೃಷ್ಟಿಸ್ಥಿತ್ಯಂತಕರಣಾದ್ಬ್ರಹ್ಮವಿಷ್ಣುಶಿವಾತ್ಮಕಃ ।। 114 ।। ಸ್ರಷ್ಟಾ ಸೃಜತಿ ಚಾತ್ಮಾನಂ ವಿಷ್ಣುಃ ಪಾಲ್ಯಂ ಚ ಪಾತಿ ಚ । ಉಪಸಂಹ್ರೀಯತೇ ಚಾಪಿ ಸಂಹರ್ತಾ ಚ ಸ್ವಯಂ ಪ್ರಭುಃ ।। 115 ।। ಪೃಥಿವ್ಯಾಪಸ್ತಥಾ ತೇಜೋ ವಾಯುರಾಕಾಶಮೇವ ಚ । ಸ ಏವ ಸರ್ವಭೂತೇಶೋ ವಿಶ್ವರೂಪೋ ಯತೋವ್ಯಯಃ । ಸರ್ಗಾದಿಕಂ ತತೋಸ್ಯೈವ ಭೂತಸ್ಥಮುಪಕಾರಕಮ್ ।। 116 ।।

ಎಚ್ಚೆತ್ತು ಪುನಃ ಸೃಷ್ಟಿ-ಸ್ಥಿತಿ-ಅಂತ್ಯಗೊಳಿಸುವ ಬ್ರಹ್ಮ-ವಿಷ್ಣು-ಶಿವಾತ್ಮಕ ರೂಪಧರನಾಗಿ ಪುನಃ ಸೃಷ್ಟಿಯನ್ನು ಮಾಡುತ್ತಾನೆ. ಬ್ರಹ್ಮನಾಗಿ ತನ್ನನ್ನೂ ಮತು ಸರ್ವವನ್ನೂ ಉತ್ಪತ್ತಿಮಾಡುತ್ತಾನೆ. ವಿಷ್ಣುವಾಗಿ ರಕ್ಷಿಸಬೇಕಾದುದನ್ನು ರಕ್ಷಿಸುತ್ತಾನೆ. ಮತ್ತು ರುದ್ರನಾಗಿ ಸ್ವಯಂ ಪ್ರಭುವೇ ಸಂಹರಿಸುತ್ತಾನೆ. ಭೂಮಿ, ಜಲ, ತೇಜಸ್ಸು, ವಾಯು ಮತ್ತು ಆಕಾಶ ಎಲ್ಲವೂ ಆ ಸರ್ವಭೂತೇಶ ವಿಶ್ವರೂಪ ಅವ್ಯಯನೇ. ಸೃಷ್ಟಿ ಮೊದಲಾದವುಗಳನ್ನು ಅವನೇ ಮಾಡುತ್ತಾನೆ ಮತ್ತು ಸರ್ವ ಭೂತಗಳಲ್ಲಿದ್ದು ಅವುಗಳಿಗೆ ಉಪಕಾರಮಾಡುತ್ತಾನೆ.

ಸ ಏವ ಸೃಜ್ಯಃ ಸ ಚ ಸರ್ಗಕರ್ತಾ ಸ ಏವ ಪಾಲ್ಯಂ ಪ್ರತಿಪಾಲ್ಯತೇ ಗತಃ । ಬ್ರಹ್ಮಾದ್ಯವಸ್ಥಾಭಿರಶೇಷಮೂರ್ತಿರ್ಬ್ರಹ್ಮಾ ವರಿಷ್ಠೋ ವರದೋ ವರೇಣ್ಯಃ ।। 117 ।।

ಉತ್ಪತ್ತಿಹೊಂದುವವನೂ ಅವನೇ. ಉತ್ಪತ್ತಿಮಾಡುವವನೂ ಅವನೇ. ಕಾಪಾಡಿಕೊಳ್ಳಬೇಕಾದವನೂ ಅವನೇ. ಕಾಪಾಡುವವನೂ ಅವನೇ.  ಆ ವರಿಷ್ಠ, ವರದ, ವರೇಣ್ಯ ಬ್ರಹ್ಮನೇ ಬ್ರಹ್ಮ-ವಿಷ್ಣು-ರುದ್ರಾದಿ ಅವಸ್ಥೆಗಳನ್ನು ಹೊಂದುತ್ತಾನೆ.”

ಇತಿ ಶ್ರೀ ಮಹಾಪುರಾಣೇ ಪಾದ್ಮೇ ಪಂಚಮೇ ಸೃಷ್ಠಿಖಂಡೇ ಸೃಷ್ಟಿಕರಣಂ ನಾಮ ದ್ವಿತೀಯೋಽಧ್ಯಾಯಃ ।।

[1] ಈ ಶ್ಲೋಕವೂ ಸೇರಿ ಮುಂದಿನ 10 ಶ್ಲೋಕಗಳು ಇದೇ ಪದ್ಮಪುರಾಣದ ಆದಿಖಂಡದ ಅಧ್ಯಾಯ 2ರಲ್ಲಿ ಬರುವ ಶ್ಲೋಕಗಳಿಗೆ ಹೋಲುತ್ತವೆ.

[2] ಮೊದಲು ಉತ್ಪತ್ತಿಯಾದ ಆಕಾಶಕ್ಕೆ ಶಬ್ದವೊಂದೇ ಗುಣವು, ಎರಡನೆಯ ವಾಯುವಿಗೆ ಶಬ್ದ ಮತ್ತು ಸ್ಪರ್ಶಗಳೆಂಬ ಎರಡು ಗುಣಗಳು. ಮೂರನೆಯ ತೇಜಸ್ಸಿಗೆ ಶಬ್ದ, ಸ್ಪರ್ಶ ಮತ್ತು ರೂಪಗಳೆಂಬ ಮೂರು ಗುಣಗಳು. ನಾಲ್ಕನೆಯ ಜಲಕ್ಕೆ ಶಬ್ದ, ಸ್ಪರ್ಶ, ರೂಪ ಮತ್ತು ರಸಗಳೆಂಬ ನಾಲ್ಕು ಗುಣಗಳು. ಐದನೆಯ ಪೃಥ್ವಿಗೆ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳೆಂಬ ಐದೂ ಗುಣಗಳು.

 

Leave a Reply

Your email address will not be published. Required fields are marked *