ಸ್ಕಂದ ಪುರಾಣ

ಸ್ಕಂದ ಪುರಾಣ

ಯಸ್ಯಾಜ್ಞಯಾ ಜಗತ್ಸ್ರಷ್ಟಾ ವಿರಿಂಚಿಃ ಪಾಲಕೋ ಹರಿಃ । ಸಂಹರ್ತಾ ಕಾಲರುದ್ರಾಖ್ಯೋ ನಮಸ್ತಸ್ಮೈ ಪಿನಾಕಿನೇ ।।

ಯಾರ ಆಜ್ಞೆಯಂತೆ ಜಗತ್ತನ್ನು ಬ್ರಹ್ಮನು ಸೃಷ್ಟಿಸುತ್ತಾನೋ, ಹರಿಯು ಪಾಲಿಸುತ್ತಾನೋ ಮತ್ತು ಕಾಲರುದ್ರನೆನ್ನುವವನು ಸಂಹರಿಸುತ್ತಾನೋ ಅ ಪಿನಾಕಿನಿಗೆ ನಮಸ್ಕಾರವು.

[ಶ್ರೀಸ್ಕಾಂದಮಹಾಪುರಾಣಂ (ಕನ್ನಡ ಅನುವಾದ ವಿವರಣೆಗಳೊಡನೆ, 30 ಭಾಗಗಳಲ್ಲಿ), ಅನುವಾದಕ ಮೋಟಗಾನಗಳ್ಳಿ ಸುಬ್ರಹ್ಮಣ್ಯಶಾಸ್ತ್ರೀ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 14, ಬೆಂಗಳೂರು ಪ್ರೆಸ್, ಮೈಸೂರು ರೋಡು, ಬೆಂಗಳೂರು ಸಿಟಿ, 1944]

ಮತ್ಸ್ಯಪುರಾಣದ 53ನೇ ಅಧ್ಯಾಯದ 42-43ನೇ ಶ್ಲೋಕಗಳ ಪ್ರಕಾರ ಯತ್ರ ಮಾಹೇಶ್ವರಾಂಧರ್ಮಾನಧಿಕೃತ್ಯ ಚ ಷಣ್ಮುಖಃ ಕಲ್ಪೇ ತತ್ಪುರುಷಂ ವೃತ್ತಂ ಚರಿತೈರುಪಬೃಂಹಿತಮ್ ।। ಸ್ಕಾಂದಂ ನಾಮ ಪುರಾಣಂ ಚ ಹ್ಯೇಕಾಶೀತಿರ್ನಿಗದ್ಯತೇ ಸಹಸ್ರಾಣಿ ಶತಂ ಚೈಕಮಿತಿ ಮರ್ತ್ಯೇಷು ಗದ್ಯತೇ ।। ಅರ್ಥಾತ್: ಕುಮಾರಸ್ವಾಮಿಯು ಮಹೇಶ್ವರಧರ್ಮಗಳನ್ನು ಪ್ರತಿಪಾದಿಸಿ ತತ್ಪುರುಷ ಕಲ್ಪದ ವೃತ್ತಾಂತವನ್ನೂ ಚರಿತೆಗಳನ್ನೂ ವಿಸ್ತರಿಸಿ ಹೇಳಿದ ಪುರಾಣವನ್ನು ಸ್ಕಾಂದ ಎನ್ನುತ್ತಾರೆ. ಅದು 81,100 ಶ್ಲೋಕಗಳಿಂದ ಕೂಡಿದೆಯೆಂದು ಮನುಷ್ಯಲೋಕದಲ್ಲಿ ಹೇಳುತ್ತಾರೆ.

ಶ್ರೀಸ್ಕಾಂದಮಹಾಪುರಾಣವು 81,000 ಶ್ಲೋಕಗಳನ್ನೊಳಗೊಂಡು ಎಲ್ಲ ಪುರಾಣಗಳಿಗಿಂತ ದೊಡ್ಡದೆನಿಸಿಕೊಂಡಿದೆ. ಈ ಪುರಾಣವು ಖಂಡಾತ್ಮಕ ಮತ್ತು ಸಂಹಿತಾತ್ಮಕ ಎಂದು ಎರಡು ಬಗೆಯಲ್ಲಿದೆ. ಮಹಾಪುರಾಣವೆಂದು ಪರಿಗಣಿಸಲ್ಪಟ್ಟಿರುವ ಖಂಡಾತ್ಮಕ ಸ್ಕಾಂದಪುರಾಣದಲ್ಲಿ ಏಳು ಖಂಡಗಳಿವೆ: (1) ಮಾಹೇಶ್ವರ (2) ವೈಷ್ಣವ (3) ಬ್ರಾಹ್ಮ (4) ಕಾಶೀ (5) ಆವಂತ್ಯ (6) ನಾಗರ ಮತ್ತು (7) ಪ್ರಭಾಸ. ಉಪಪುರಾಣವೆಂದು ಪರಿಗಣಿಸಲ್ಪಟ್ಟಿರುವ ಸಂಹಿತಾತ್ಮಕ ಸ್ಕಾಂದದಲ್ಲಿ ಆರು ಸಂಹಿತೆಗಳಿವೆ: (1) ಸನತ್ಕುಮಾರ (2) ಸೂತ (3) ಶಂಕರ (4) ವೈಷ್ಣವ (5) ಬ್ರಾಹ್ಮ ಮತ್ತು (6) ಸೌರ. ಜಯಜಾಮರಾಜೇಂದ್ರ ಗ್ರಂಥಮಾಲೆಯಲ್ಲಿ ಪ್ರಕಟಿತವಾಗಿರುವ ಸ್ಕಾಂದಪುರಾಣವು ಖಂಡಾತ್ಮಕ ಸ್ಕಾಂದವನ್ನು ಆಧರಿಸಿದೆ.

ಮೊದಲನೆಯ ಮಾಹೇಶ್ವರಖಂಡದಲ್ಲಿ ಕೇದಾರ, ಕೌಮಾರಿಕಾ ಮತ್ತು ಅರುಣಾಚಲಮಹಾತ್ಮೆ ಎಂಬ ಮೂರು ಉಪಖಂಡಗಳಿವೆ. ಎರಡನೆಯ ವೈಷ್ಣವಖಂಡದಲ್ಲಿ ವೇಂಕಟಾಚಲ, ಪುರುಷೋತ್ತಮ, ಬದರಿಕಾಶ್ರಮ, ಕಾರ್ತೀಕಮಾಸ, ಮಾರ್ಗಶೀರ್ಷಮಾಸ, ಶ್ರೀಮದ್ಭಾಗವತ, ವೈಶಾಖಮಾಸ, ಅಯೋಧ್ಯಾ, ಮತ್ತು ವಾಸುದೇವಮಹಾತ್ಮೆಗಳೆಂಬ 9 ಉಪಖಂಡಗಳಿವೆ. ಮೂರನೆಯ ಬ್ರಹ್ಮಖಂಡದಲ್ಲಿ ಸೇತು, ಧರ್ಮಾರಣ್ಯ ಮತ್ತು ಬ್ರಹ್ಮೋತ್ತರಗಳೆಂಬ ಮೂರು ಉಪಖಂಡಗಳಿವೆ. ಹಾಗೆಯೇ ಐದನೆಯ ಆವಂತ್ಯಖಂಡದಲ್ಲಿ ಅವಂತೀಕ್ಷೇತ್ರ, ಚತುರಶೀತಿಲಿಂಗ, ಮತ್ತು ರೇವಾಖಂಡಗಳೆಂಬ ಮೂರು ಉಪಖಂಡಗಳಿವೆ. ಏಳನೆಯ ಪ್ರಭಾಸಖಂಡದಲ್ಲಿ ಪ್ರಭಾಸಕ್ಷೇತ್ರ, ವಸ್ತ್ರಾಪಥಕ್ಷೇತ್ರ, ಅರ್ಬುದಖಂಡ ಮತ್ತು ದ್ವಾರಕಾಮಹಾತ್ಮೆಗಳೆಂಬ ನಾಲ್ಕು ಉಪಖಂಡಗಳಿವೆ.  ನಾಲ್ಕನೆಯ ಮತ್ತು ಆರನೆಯ ಖಂಡಗಳಾದ ಕಾಶೀಖಂಡ ಮತ್ತು ನಾಗರಖಂಡಗಳಲ್ಲಿ ಉಪಖಂಡಗಳು ಇಲ್ಲ.

ಮಾಹೇಶ್ವರಖಂಡ – ಕೇದಾರಖಂಡ (35 ಅಧ್ಯಾಯಗಳು): ದಕ್ಷಯಜ್ಞ (ಅಧ್ಯಾಯ 1-4), ಶಿವಭಕ್ತಿ-ಲಿಂಗಪೂಜೆ (5-8), ಸಮುದ್ರಮಥನ (9-13), ವಾಮನಾವತಾರ (14-19), ಶಿವ-ಪಾರ್ವತೀ ವಿವಾಹ (20-26), ಕಾರ್ತೀಕೇಯೋತ್ಪತ್ತಿ-ತಾರಕಾಸುರವಧೆ (27-30), ಶ್ವೇತರಾಜಚರಿತ್ರೆ, ಶಿವಪಾರ್ವತೀ ದ್ಯೂತವರ್ಣನೆ (31-35)

ಮಾಹೇಶ್ವರಖಂಡ – ಕೌಮಾರಿಕಾಖಂಡ (66 ಅಧ್ಯಾಯಗಳು): ಅರ್ಜುನನು ಐವರು ಅಪ್ಸರೆಯರನ್ನು ಉದ್ಧರಿಸಿದುದು (ಅಧ್ಯಾಯ 1), ಅರ್ಜುನ-ನಾರದ ಸಂವಾದದಲ್ಲಿ ತೀರ್ಥಕ್ಷೇತ್ರಮಹಾತ್ಮೆ (2-12), ಲೋಮಶವೃತ್ತಾಂತ (13), ಕುಮಾರೇಶ್ವರಮಹಾತ್ಮೆ (14-32), ಇತರ ತೀರ್ಥಕ್ಷೇತ್ರಗಳ ಮಹಾತ್ಮೆ (33-57), ಅರ್ಜುನತೀರ್ಥಯಾತ್ರಾ ಸಮಾಪ್ತಿವರ್ಣನೆ (58), ಬರ್ಬರೀಕೋಪಾಖ್ಯಾನ – ಘಟೋತ್ಕಚ (59-66).

ಮಾಹೇಶ್ವರಖಂಡ – ಅರುಣಾಚಲಮಹಾತ್ಮೆ (24 ಅಧ್ಯಾಯಗಳು): ಜ್ಯೋತಿರ್ಲಿಂಗಪ್ರಾದುರ್ಭಾವವರ್ಣನೆ, ಅರುಣಾಚಲ ಸ್ಥಾನಮಹಾತ್ಮೆವರ್ಣನೆ (1-7), ಸೃಷ್ಟಿವರ್ಣನೆ, ಶಿವ-ವಿಷ್ಣುವಿವಾದ, ತೇಜೋಮಯಲಿಂಗ ಪ್ರಾದುರ್ಭಾವ, ವಿಷ್ಣುವು ಲಿಂಗದ ಮೂಲವನ್ನು ಹುಡುಕಿದುದು, ಬ್ರಹ್ಮನು ಲಿಂಗದ ಶಿರೋಭಾಗವನ್ನು ಹುಡುಕಿದುದು, ಬ್ರಹ್ಮನು ಕೇತಕೀ ಪತ್ರವನ್ನು ಸಾಕ್ಷಿಗಾಗಿ ಕರೆದುದು, ಶಂಕರನು ಬ್ರಹ್ಮ-ವಿಷ್ಣುಗಳಿಗೆ ಪ್ರತ್ಯಕ್ಷನಾದುದು, ಅರುಣಚಲೇಶ್ವರನ ವರ್ಣನೆ (8-16), ಶಿವಪಾರ್ವತೀ ವಿಹಾರ, ಮಹಿಷಾಸುರ ವಧೆ (17-21), ವಜ್ರಾಂಗದ ವೃತ್ತಾಂತ (22-24).

ವೈಷ್ಣವಖಂಡ – ಶ್ರೀವೇಂಕಟಾಚಲಮಹಾತ್ಮೆ (40 ಅಧ್ಯಾಯಗಳು): ಶ್ರೀನಿವಾಸ-ಪದ್ಮಾವತೀ ಪರಿಣಯ (1-8), ತೀರ್ಥಕ್ಷೇತ್ರಗಳ ವರ್ಣನೆ (9-40).

ವೈಷ್ಣವಖಂಡ – ಪುರುಷೋತ್ತಮ (ಜಗನ್ನಾಥ) ಕ್ಷೇತ್ರಮಹಾತ್ಮೆ (49 ಅಧ್ಯಾಯಗಳು): ಇಂದ್ರದ್ಯುಮ್ನನ ಯಜ್ಞವರ್ಣನೆ, ದಾರುಮೂರ್ತಿಯ ಆವಿರ್ಭಾವ ವರ್ಣನೆ, ಭಗವಂತನ ಆಜ್ಞೆಯಂತೆ ಇಂದ್ರದ್ಯುಮ್ನನಿಂದ ದಾರುಮೂರ್ತಿ ಸ್ಥಾಪನೆ (1-29), ವ್ರತ-ಉತ್ಸವಗಳ ವರ್ಣನೆ (30-49).

ವೈಷ್ಣವಖಂಡ – ಬದರಿಕಾಶ್ರಮಮಹಾತ್ಮೆ (8 ಅಧ್ಯಾಯಗಳು): ಬದರಿಕಾ ಯಾತ್ರವಿಧಾನ, ಆ ಕ್ಷೇತ್ರದ ಉತ್ಪತ್ತಿ, ಅಲ್ಲಿಯ ತೀರ್ಥಮಾಹಾತ್ಯಗಳು.

ವೈಷ್ಣವಖಂಡ – ಕಾರ್ತೀಕಮಾಸಮಹಾತ್ಮೆ (36 ಅಧ್ಯಾಯಗಳು): ಕಾರ್ತೀಕಮಾಸದಲ್ಲಿ ಮನುಷ್ಯನು ವ್ರತಿಯಾಗಿ ಮಾಡಬೇಕಾದ ವಿವಿಧ ಕರ್ಯವ್ಯವಿಧಿಗಳು, ವತ್ಸದ್ವಾದಶೀ, ಯಮತ್ರಯೋದಶೀ, ನರಕಚತುರ್ದಶೀ, ಕೌಮುದೀ ಮಹೋತ್ಸವ, ಬಲಿಪಾಡ್ಯಮಿ, ಗೋಕ್ರೀಡೋತ್ಸವ, ಯಮದ್ವಿತೀಯಾ, ಭೀಷ್ಮಪಂಚಕ, ಕಾರ್ತಿಕೋದ್ಯಾಪನವಿಧಿ, ವೈಕುಂಠಚತುರ್ದಶೀ ಮೊದಲಾದ ವ್ರತ ವಿಶೇಷಗಳ ವರ್ಣನೆಗಳು.

ವೈಷ್ಣವಖಂಡ – ಮಾರ್ಗಶೀರ್ಷಮಾಸಮಹಾತ್ಮೆ (17 ಅಧ್ಯಾಯಗಳು): ತ್ರಿಪುಂಡ್ರಧಾರಣವಿಧಿ, ಗೋಪೀಚಂದನ ಮಹಾತ್ಮೆ, ಶಂಖಪೂಜಾವಿಧಿ, ಘಂಟಾನಾದ, ದೀಪದಾನ, ನೈವೇದ್ಯವಿಧಿ, ಏಕಾದಶೀ ವ್ರತ, ಶ್ರೀಕೃಷ್ಣನಾಮಮಹಾತ್ಮೆ, ಮೊದಲಾದ ವಿಷಯಗಳು.

ವೈಷ್ಣವಖಂಡ – ಶ್ರೀಮದ್ಭಾಗವತಮಹಾತ್ಮೆ (4 ಅಧ್ಯಾಯಗಳು): ವ್ರಜಭೂಮಿಮಹಾತ್ಮೆ, ಭಾಗವತ ಮಹಾತ್ಮೆ, ಸ್ವರೂಪ, ಪ್ರಮಾಣ, ಪುರಾಣಶ್ರವಣ, ಶ್ರೋತೃವರ್ಣನೆ.

ವೈಷ್ಣವಖಂಡ – ವೈಶಾಖಮಾಸಮಹಾತ್ಮೆ (25 ಅಧ್ಯಾಯಗಳು): ವೈಶಾಖಸ್ನಾನ, ದಾನ, ಮಹಾತ್ಮೆ, ದಕ್ಷಯಜ್ಞ, ಕುಮಾರೋತ್ಪತ್ತಿ, ಯಮದುಃಖನಿರೂಪಣ, ವ್ಯಾಧೋಪಾಖ್ಯಾನ (18), ವಾಲ್ಮೀಕೀಜನ್ಮಕಥನ (21), ಅಕ್ಷಯತೃತೀಯಾಮಹಾತ್ಮೆ ಮೊದಲಾದ ವಿಷಯಗಳು.

ವೈಷ್ಣವಖಂಡ – ಅಯೋಧ್ಯಾಮಹಾತ್ಮೆ (10 ಅಧ್ಯಾಯಗಳು): ಅಯೋಧ್ಯೆಯ ತೀರ್ಥಗಳ ವರ್ಣನೆ ಮತ್ತು ಅಯೋಧ್ಯಾಯಾತ್ರಾವಿಧಿಕ್ರಮ ವರ್ಣನೆ.

ವೈಷ್ಣವಖಂಡ – ವಾಸುದೇವಮಹಾತ್ಮೆ (32 ಅಧ್ಯಾಯಗಳು): ನಾರದ-ನಾರಾಯಣರ ಸಮಾಗಮ, ಉಪರಿಚರನ ಕಥೆ, ದೇವೇಂದ್ರನ ಶಾಪ, ಹಿಂಸಾಯಜ್ಞಪ್ರವೃತ್ತಿ ಹೇತುನಿರೂಪಣ (1-10), ಅಮೃಥಮಥನ – ವಿಷೋತ್ಪತ್ತಿ, ಚತುರ್ದಶರತ್ನೋತ್ಪತ್ತಿ, ಅಮೃತಪಾನ, ಶ್ರೀಲಕ್ಷ್ಮೀನಾರಾಯಣವಿವಾಹಮಹೋತ್ಸವ (11-15), ಗೋಲೋಕವರ್ಣನೆ, ವರ್ಣಾಶ್ರಮಧರ್ಮ, ಜ್ಞಾನಸ್ವರೂಪ, ವೈರಾಗ್ಯಭಕ್ತಿ, ಅಷ್ಟಾಂಗಯೋಗನಿರೂಪಣ, ಶ್ರೀನರನಾರಾಯಣಸ್ತುತಿನಿರೂಪಣ (16-32)

ಬ್ರಹ್ಮಖಂಡ – ಸೇತುಮಹಾತ್ಮೆ (52 ಅಧ್ಯಾಯಗಳು): ಶ್ರೀರಾಮೇಶ್ವರಕ್ಷೇತ್ರ ಮಹಾತ್ಮೆ, ಧನುಷ್ಕೋಟಿ ಮಹಾತ್ಮೆ, ಇತರ ತೀರ್ಥಗಳ ಮಹಾತ್ಮೆ.

ಬ್ರಹ್ಮಖಂಡ – ಶ್ರೀಧರ್ಮಾರಣ್ಯಮಹಾತ್ಮೆ (40 ಅಧ್ಯಾಯಗಳು): ಧರ್ಮಾರಣ್ಯ ಮತ್ತು ಇತರ ತೀರ್ಥಗಳ ವರ್ಣನೆ, ಮಹಾತ್ಮೆ.

ಬ್ರಹ್ಮಖಂಡ – ಬ್ರಹ್ಮೋತ್ತರಖಂಡ (22 ಅಧ್ಯಾಯಗಳು): ಗೋಕರ್ಣಮಹಾತ್ಮೆ, ಸೋಮವಾರವ್ರತವರ್ಣನೆ, ಭಸ್ಮಮಹಾತ್ಮೆ, ರುದ್ರಾಕ್ಷಮಹಿಮೆ, ರುದ್ರಾಧ್ಯಾಯ ಮಹಿಮೆ.

ಕಾಶೀಖಂಡ (100 ಅಧ್ಯಾಯಗಳು): ವಿಂಧ್ಯಪರ್ವತವರ್ಧನ, ಸತ್ಯಲೋಕವರ್ಣನೆ, ಅಗಸ್ತ್ಯಾಶ್ರಮವರ್ಣನೆ, ಪತಿವ್ರತಾಖ್ಯಾನ, ಅಗಸ್ತ್ಯಪ್ರಸ್ಥಾನ, ತೀರ್ಥಾಧ್ಯಾಯ, ಸಪ್ತಪುರೀವರ್ಣನೆ, ಯಮಲೋಕ, ಅಪ್ಸರಲೋಕ, ಇಂದ್ರಾಗ್ನಿಲೋಕ, ವಹ್ನಿಲೋಕ, ನಿರ್ಋತಿ ವರುಣಲೋಕ, ಗಂಧವತೀ ಅಲಕಾಪುರ, ಸೋಮಲೋಕ, ನಕ್ಷತ್ರಲೋಕ, ಶುಕ್ರಲೋಕ, ಅಂಗಾರಕ ಗುರು ಶನಿಲೋಕ, ಸಪ್ತರ್ಷಿಲೋಕ, ಮತ್ತು ಧ್ರುವಲೋಕಗಳ ವರ್ಣನೆ (1-18), ಧ್ರುವಾಖ್ಯಾನ (19-21), ಕಾಶೀಪ್ರಶಂಸೆ, ಗಂಗಾಮಹಿಮಾನುವರ್ಣನ, ಗಂಗಾಸಹಸ್ರನಾಮ (29), ಕಾಶೀವರ್ಣನ, ಮತ್ತು ಇತರ ವಿಷಯಗಳು (22-100), .

ಆವಂತ್ಯಖಂಡ – ಅವಂತೀಕ್ಷೇತ್ರಮಹಾತ್ಮೆ (71 ಅಧ್ಯಾಯಗಳು): ಅವಂತೀ ದೇಶ (ಈಗಿನ ಉಜ್ಜಯನಿ) ದಲ್ಲಿರುವ ಸುಪ್ರಸಿದ್ಧ ಶಿವ-ವಿಷ್ಣ್ವಾದಿ ದೇವತಾಕ್ಷೇತ್ರಗಳ ಮತ್ತು ಪುಣ್ಯತೀರ್ಥಗಳ ವರ್ಣನೆ, ಕಪಾಲಮೋಕ್ಷ, ವಿಷ್ಣುಸಹಸ್ರನಾಮಕಥನ (ಅಧ್ಯಾಯ 63).

ಆವಂತ್ಯಖಂಡ – ಚತುರಶೀತಿಲಿಂಗಮಹಾತ್ಮೆ (84 ಅಧ್ಯಾಯಗಳು): 84 ಶಿವಲಿಂಗಗಳ ಮಹಾತ್ಮೆಗಳ ವರ್ಣನೆ.

ಆವಂತ್ಯಖಂಡ – ರೇವಾಖಂಡ (229 ಅಧ್ಯಾಯಗಳು): ನರ್ಮದಾ ಮಹಾತ್ಮೆ, ವಾರಾಹಕಲ್ಪವೃತ್ತಾಂತವರ್ಣನ, ಕಾವೇರೀಸಂಗಮ ಮಹಾತ್ಮೆ, ಮತ್ತು ಇತರ ತೀರ್ಥಕ್ಷೇತ್ರಗಳ ಮಹಾತ್ಮೆ.

ನಾಗರಖಂಡ – ಹಾಟಕೇಶ್ವರಕ್ಷೇತ್ರಮಾಹಾತ್ಮ್ಯೆ (279 ಅಧ್ಯಾಯಗಳು): ತ್ರಿಶಂಕೂಪಾಖ್ಯಾನ (2-7), ಜಮದಗ್ನಿವಧ-ಸಹಸ್ರಾರ್ಜುನವಧ (66-67), ಕಾರ್ತಿಕೇಯೋತ್ಪತ್ತಿ (70), ಶ್ರಾದ್ಧವಿಷಯ (215-225) ಗಳ ಜೊತೆಗೆ ಅನೇಕ ತೀರ್ಥಕ್ಷೇತ್ರಗಳ ಮಹಾತ್ಮೆ-ವೃತ್ತಾಂತಗಳು, ಮತ್ತು ವ್ರತಗಳು.

ಪ್ರಭಾಸಖಂಡ – ಪ್ರಭಾಸಕ್ಷೇತ್ರಮಾಹಾತ್ಮ್ಯೆ (365 ಅಧ್ಯಾಯಗಳು): ಪ್ರಭಾಸಕ್ಷೇತ್ರದಲ್ಲಿರುವ ತೀರ್ಥಗಳ ಮಹಾತ್ಮೆ-ವರ್ಣನೆಗಳು.

ಪ್ರಭಾಸಖಂಡ – ವಸ್ತ್ರಾಪಥ (ಗಿರಿನಾರ) ಕ್ಷೇತ್ರಮಾಹಾತ್ಮ್ಯೆ (19 ಅಧ್ಯಾಯಗಳು): ಗಿರಿನಾರಕ್ಷೇತ್ರದಲ್ಲಿರುವ ಅನೇಕ ತೀರ್ಥಗಳ ಮಹಾತ್ಮೆ-ವರ್ಣನೆಗಳು.

ಪ್ರಭಾಸಖಂಡ – ಅರ್ಬುದಖಂಡ (63 ಅಧ್ಯಾಯಗಳು): ವಸಿಷ್ಠಾಶ್ರಮ ಸಮೀಪವಿರುವ ಕ್ಷೇತ್ರದ ತೀರ್ಥಗಳ ವರ್ಣನೆ-ಮಹಾತ್ಮ್ಯೆ.

ಪ್ರಭಾಸಖಂಡ – ದ್ವಾರಕಾಮಾಹಾತ್ಮ್ಯ (44 ಅಧ್ಯಾಯಗಳು): ದ್ವಾರಕಾನಗರಿ ಮತ್ತು ಆ ಪ್ರದೇಶದ ಅನೇಕ ತೀರ್ಥಗಳ ಮಹಾತ್ಮೆ-ವರ್ಣನೆಗಳು.

 

Leave a Reply

Your email address will not be published. Required fields are marked *