ಶ್ರೀವರಾಹಮಹಾಪುರಾಣ
ನಮಸ್ತಸ್ಮೈ ವರಾಹಾಯ ಲೀಲಯೋದ್ಧರತೇ ಮಹೀಮ್ । ಖುರಮಧ್ಯಗತೋ ಯಸ್ಯ ಮೇರುಃ ಖಣಖಣಾಯತೇ ।।
[ಶ್ರೀವರಾಹಮಹಾಪುರಾಣಂ (ಕನ್ನಡ ಅನುವಾದ ವಿವರಣೆಗಳೊಡನೆ, 5 ಭಾಗಗಳಲ್ಲಿ), ಅನುವಾದಕ ಮ. ರ. ವರದಾಚಾರ್ಯ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 31, ಮೈಸೂರು, ಶ್ರೀ ಹನುಮಾನ್ ಪ್ರೆಸ್, 1946]
ಮತ್ಸ್ಯಪುರಾಣದ 53ನೇ ಅಧ್ಯಾಯದ 39-40ನೇ ಶ್ಲೋಕಗಳ ಪ್ರಕಾರ ಮಹಾವರಾಹಸ್ಯ ಪುನರ್ಮಾಹಾತ್ಮ್ಯಮಧಿಕೃತ್ಯ ಚ । ವಿಷ್ಣುನಾಭಿಹಿತಂ ಕ್ಷೋಣ್ಯೈ ತದ್ವಾರಾಹಮಿಹೋಚ್ಯತೇ ।। ಮಾನವಸ್ಯ ಪ್ರಸಂಗೇನ ಕಲ್ಪಸ್ಯ ಮುನಿಸತ್ತಮಾಃ । ಚತುರ್ವಿಂಶತ್ಸಹಸ್ರಾಣಿ ತತ್ಪುರಾಣಮಿಹೋಚ್ಯತೇ ।। ಅರ್ಥಾತ್: ಪರಮಪವಿತ್ರವಾದ ವರಾಹ ರೂಪವನ್ನು ಧರಿಸಿದ ಭಗವಂತನ ಮಹಾತ್ಮೆಯ ಕುರಿತು ವಿಷ್ಣುವು ಭೂದೇವಿಗೆ ಹೇಳಿದ ಪುರಾಣವನ್ನು ವಾರಹವೆನ್ನುತ್ತಾರೆ. ಮಾನವಕಲ್ಪದ ಪ್ರಸಂಗವನ್ನೊಳಗೊಂಡಿರುವ ಈ ಪುರಾಣದಲ್ಲಿ 24,000 ಶ್ಲೋಕಗಳಿವೆ.
ಜಯಚಾಮರಾಜೇಂದ್ರ ಗ್ರಂಥಮಾಲೆಯ ವರಾಹಪುರಾಣವು ಮುಖ್ಯವಾಗಿ ಎರಡು ಮೂಲಪ್ರತಿಗಳನ್ನು ಆಧರಿಸಿದೆ: ಮುಂಬಯಿಯ ಶ್ರೀವೆಂಕಟೇಶ್ವರ ಯಂತ್ರಾಲಯದಲ್ಲಿ ಮುದ್ರಿತವಾಗಿರುವ ಪ್ರತಿ ಮತ್ತು ಕಲ್ಕತ್ತಾದ ಸಂಸ್ಕೃತಕಾಲೇಜಿನ ಸಂಸ್ಕೃತವಿಶಾರದರಾದ ಪಂಡಿತ್ ಹೃಷೀಕೇಶ ಶಾಸ್ತ್ರಿಗಳಿಂದ ಕಲ್ಕತ್ತಾದಲ್ಲಿ ಮುದ್ರಿತವಾಗಿರುವ ಪ್ರತಿ. ಈ ಎರಡು ಪ್ರತಿಗಳಲ್ಲಿ ಪಾಠವು ಭಿನ್ನವಾಗಿದ್ದಾಗ ಯಾವುದು ಉತ್ತಮಮೆಂದು ತೋರುವುದೋ ಅದನ್ನೇ ಇಲ್ಲಿ ಅನುವಾದಕರು ಅಳವಡಿಸಿಕೊಂಡಿದ್ದಾರೆ. ಎರಡರಲ್ಲಿಯೂ ಅರ್ಥವಾಗದ ಕಡೆಗಳಲ್ಲಿ ಮೈಸೂರು ಪ್ರಾಚ್ಯಕೋಶಾಲಯದಲ್ಲಿ ಕೆಲವು ಅಧ್ಯಾಯಗಳು ಮಾತ್ರವೇ ಇರುವ ಗ್ರಂಥಾಕ್ಷರದ ತಾಳಪ್ರತಿಯ ಪಾಠವನ್ನು ಬಳಸಲಾಗಿದೆ.
ಶ್ರೀವರಾಹಪುರಾಣದಲ್ಲಿ ಕಾಂಡ ಅಥವ ಖಂಡವಿಭಾಗವಿಲ್ಲ. ಒಟ್ಟು 218 ಅಧ್ಯಾಯಗಳಿವೆ. ವರಾಹಪುರಾಣದ ಶ್ಲೋಕಸಂಖ್ಯೆ 24,000 ವೆಂದು ದೇವೀಭಾಗವತ ಮತ್ತು ಮತ್ಸ್ಯಪುರಾಣಗಳಲ್ಲಿ ಹೇಳಿದ್ದರೂ ಈಗಿರುವ ಎರಡು ಪ್ರತಿಗಳಲ್ಲಿರುವ ಗದ್ಯವನ್ನು ಪರಿಗಣಿಸಿದರೂ 12,000 ಗ್ರಂಥಕ್ಕಿಂತಲೂ ಕಡಿಮೆಯೇ ಇದೆ.