ಶ್ರೀಲಿಂಗಮಹಾಪುರಾಣ
ನಮೋ ರುದ್ರಾಯ ಹರಯೇ ಬ್ರಹ್ಮಣೇ ಪರಮಾತ್ಮನೇ । ಪ್ರಧಾನ ಪುರುಷೇಶಾಯ ಸರ್ಗ ಸ್ಥಿತ್ಯಂತಕಾರಿಣೇ ।।
[ಶ್ರೀಲಿಂಗಮಹಾಪುರಾಣಂ (ಸಂಸ್ಕೃತಮೂಲ, ಕನ್ನಡದಲ್ಲಿ ಅರ್ಥಾನುವಾದ,ವಿವರಣೆಗಳೊಡನೆ, 6 ಭಾಗಗಳಲ್ಲಿ), ಅನುವಾದಕ ಎಡತೊರೆ ಚಂದ್ರಶೇಖರ ಶಾಸ್ತ್ರೀ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 19, ಮೈಸೂರು, ಬೆಂಗಳೂರು ಪ್ರೆಸ್ ಬ್ರಾಂಚ್, 1945]
ಮತ್ಸ್ಯಪುರಾಣದ 53ನೇ ಅಧ್ಯಾಯದ 37ನೇ ಶ್ಲೋಕದ ಪ್ರಕಾರ ಯತ್ರಾಗ್ನಿಲಿಂಗಮಧ್ಯಸ್ಥಃ ಪ್ರಾಹ ದೇವೋ ಮಹೇಶ್ವರಃ । ಧರ್ಮಾರ್ಥಕಾಮಮೋಕ್ಷಾರ್ಥಮಾಗ್ನೇಯಮಧಿಕೃತ್ಯ ಚ । ಕಲ್ಪಾಂತೇ ಲೈಂಗಮಿತ್ಯುಕ್ತಂ ಪುರಾಣಂ ಬ್ರಹ್ಮಣಾ ಸ್ವಯಮ್ ।। ಅರ್ಥಾತ್: ಅಗ್ನಿಲಿಂಗದ ಮಧ್ಯದಲ್ಲಿ ನಿಂತು ಮಹೇಶ್ವರನು ಕುಮಾರನಿಗೆ ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ನಾಲ್ಕುಬಗೆಯ ಪುರುಷಾರ್ಥಗಳ ಸಿದ್ಧಿಗಾಗಿ ಕಲ್ಪಾಂತದಲ್ಲಿ ಹೇಳಿದ ಪುರಾಣವನ್ನು ಸಾಕ್ಷಾತ್ ಬ್ರಹ್ಮನು ಲೈಂಗ ಪುರಾಣವೆಂದು ಕರೆದನು.
ಸುಮಾರು 9400 ಶ್ಲೋಕಗಳಿರುವ ಲಿಂಗಪುರಾಣವು ಪೂರ್ವ ಮತ್ತು ಉತ್ತರಗಳೆಂಬ ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ಪೂರ್ವಭಾಗದಲ್ಲಿ 108 ಅಧ್ಯಾಯಗಳೂ ಉತ್ತರಭಾಗದಲ್ಲಿ 55 ಅಧ್ಯಾಯಗಳೂ ಇವೆ.
ಪೂರ್ವಭಾಗ: ಸೃಷ್ಟಿಕಥನ (ಅಧ್ಯಾಯ 1-6), ಪಾಶುಪತಯೋಗ (7-17), ವಿಷ್ಣು-ಬ್ರಹ್ಮರಿಂದ ಶಿವನ ಸ್ತುತಿ, ಲಿಂಗಾರ್ಚನೆಯ ಕ್ರಮ, ದಾರುಕವನದಲ್ಲಿ ಋಷಿಪತ್ನಿಯರು ಶಿವನಿಂದ ಮೋಹಿತರಾದ ಕಥೆ, ಶ್ವೇತಮುನಿಯ ಕಥೆ, ದಧೀಚಿಗೆ ಶಿವಪ್ರಸಾದದಿಂದ ವಜ್ರಾಸ್ಥಿಪ್ರಾಪ್ತಿ (18-36), ನಂದಿಯ ಉತ್ಪತ್ತಿ, ಯುಗಗಳು, ವರ್ಣಾಶ್ರಮ ಧರ್ಮಗಳು (36-44), ಪಾತಾಳಾದಿ ಲೋಕಗಳ ವರ್ಣನೆ, ಭೂಲೋಕವರ್ನನೆ, ಸ್ವರ್ಗಮೊದಲಾದ ಊರ್ಧ್ವಲೋಕಗಳ ವರ್ಣನೆ, ನರಕ ವರ್ಣನೆ (45-53), ಸೂರ್ಯ-ಚಂದ್ರರ ಮತ್ತು ಇತರ ಗ್ರಹಗಳ ಚನಲವಲನ ವಿಚಾರ (54-61), ಧ್ರುವಚರಿತ್ರೆ (62), ವಸಿಶ್ಠೋಪಾಖ್ಯಾನ (63-64), ಬ್ರಹ್ಮಪುತ್ರ ತಂಡಿಕೃತ ರುದ್ರಸಹಸ್ರನಾಮಸ್ತೋತ್ರ (65), ಚಂದ್ರವಂಶವರ್ಣನೆಯಲ್ಲಿ ಯಯಾತಿ ಚರಿತೆ (66-67), ಯದುವಂಶವರ್ಣನೆ, ಕೃಷ್ಣಚರಿತ್ರೆ, ಆದಿಸರ್ಗ (68-70), ತ್ರಿಪುರದಹನ (70-73), ಲಿಂಗಗಳ ಬಗೆಗಳು, ಪೂಜೆ, ಫಲಗಳು, ಪಂಚಾಕ್ಷರಜಪ (74-87), ಯೋಗಾಂಗಗಳು (88-91), ಕಾಶೀಕ್ಷೇತ್ರಮಹಿಮೆ, ಅಂಧಕಾಸುರವಧೆ, ಶರಭಾವತಾರದ ಕಥೆ, ಜಲಂಧರನ ಕಥೆ, ವಿಷ್ಣುವು ಶಿವನಿಂದ ಸುದರ್ಶನವನ್ನು ಪಡೆದ ಕಥೆ, ದಕ್ಷಯಜ್ಞ, ಸತೀದೇವಿಯು ಪಾರ್ವತಿಯಾದ ಕಥೆ, ಪಾರ್ವತಿಯ ತಪಸ್ಸು, ಶಿವಪಾರ್ವತೀ ವಿವಾಹ, ಗಣಪತಿಯ ಆವಿರ್ಭಾವ, ತಾಂಡವೇಶ್ವರನ ಕಥೆ, ಉಪಮನ್ಯುವಿನ ಕಥೆ, ಶ್ರೀಕೃಷ್ಣನು ಉಪಮನ್ಯುವಿನಿಂದ ಪಾಶುಪತವ್ರತದ ಕ್ರಮವನ್ನು ತಿಳಿದುಕೊಂಡಿದುದು (92-108).
ಉತ್ತರಭಾಗ: ಭಗವದ್ಭಕ್ತ ನಾರದನು ಗಾನವಿದ್ಯೆಯನ್ನು ಕಲಿತುದರ ಕುರಿತಾದ ಕಥೆ (ಅಧ್ಯಾಯ 3), ಅಂಬರೀಷ ಚರಿತ್ರೆ (5), ಜ್ಯೇಷ್ಠಾದೇವಿಯ ಕಥೆ (6), ಐತರೇಯ ಬ್ರಾಹ್ಮಣನ ಕಥೆ, ವಾಸುದೇವ ಮಂತ್ರ, ಪಂಚಾಕ್ಷರ-ಷಡಕ್ಷರ ಮಂತ್ರಗಳು, ಶಿವತತ್ತ್ವವಿಚಾರ, ಶಿವಾರ್ಚನೆ, ದಾನಗಳು, ಮತ್ತು ತ್ರ್ಯಂಬಕಮಂತ್ರ.