ಶ್ರೀಬ್ರಹ್ಮಮಹಾಪುರಾಣ: ಅಧ್ಯಾಯ 3 ದೇವಾಸುರಾಣಾಮುತ್ಪತ್ತಿಕಥನಮ್

 

ಮುನಯ ಊಚುಃ । ದೇವಾನಾಂ ದಾನವಾನಾಂ ಚ ಗಂಧರ್ವೋರಗರಕ್ಷಸಾಮ್ । ಉತ್ಪತ್ತಿಂ ವಿಸ್ತರೇಣೈವ ಲೋಮಹರ್ಷಣ ಕೀರ್ತಯ ।। 1 ।।

ಮುನಿಗಳು ಹೇಳಿದರು: “ಲೋಮಹರ್ಷಣ! ದೇವತೆಗಳ, ದಾನವರ, ಗಂಧರ್ವ-ಉರಗ-ರಾಕ್ಷಸರ ಉತ್ಪತ್ತಿಯ ಕುರಿತು ವಿಸ್ತಾರವಾಗಿ ಹೇಳು.”

ಲೋಮಹರ್ಷಣ ಉವಾಚ । ಪ್ರಜಾಃ ಸೃಜೇತಿ ವ್ಯಾದಿಷ್ಟಃ ಪೂರ್ವಂ ದಕ್ಷಃ ಸ್ವಯಂಭುವಾ । ಯಥಾ ಸಸರ್ಜ ಭೂತಾನಿ ತಥಾ ಶೃಣುತ ಭೋ ದ್ವಿಜಾಃ ।। 2 ।। ಮಾನಸಾನ್ಯೇವ ಭೂತಾನಿ ಪೂರ್ವಮೇವಾಸೃಜತ್ಪ್ರಭುಃ । ಋಷೀಂದೇವಾನ್ಸಗಂಧರ್ವಾನಸುರಾನ್ಯಕ್ಷರಾಕ್ಷಸಾನ್ ।। 3 ।। ಯದಾಸ್ಯ ಮಾನಸೀ ವಿಪ್ರಾ ನ ವ್ಯವರ್ಧತ ವೈ ಪ್ರಜಾ । ತದಾ ಸಂಚಿಂತ್ಯ ಧರ್ಮಾತ್ಮಾ ಪ್ರಜಾಹೇತೋಃ ಪ್ರಜಾಪತಿಃ ।। 4 ।।

ಲೋಮಹರ್ಷಣನು ಹೇಳಿದನು: “ಭೋ ದ್ವಿಜರೇ! ಪೂರ್ವಕಾಲದಲ್ಲಿ ಸ್ವಯಂಭು ಬ್ರಹ್ಮನು ಪ್ರಜೆಗಳನ್ನು ಸೃಷ್ಟಿಸೆಂದು ದಕ್ಷನಿಗೆ ಆದೇಶವನ್ನು ನೀಡಲು ಅವನು ಹೇಗೆ ಪ್ರಜೆಗಳನ್ನು ಸೃಷ್ಟಿಸಿದನು ಎನ್ನುವುದನ್ನು ಕೇಳಿ. ಆ ಪ್ರಭುವು ಮೊದಲು ಮನಸ್ಸಿನಿಂದಲೇ ಋಷಿಗಳು, ದೇವತೆಗಳು, ಗಂಧರ್ವರು, ಅಸುರರು, ಮತ್ತು ಯಕ್ಷ-ರಾಕ್ಷಸರನ್ನು ಸೃಷ್ಟಿಸಿದನು. ವಿಪ್ರರೇ! ಆದರೆ ಅವನ ಆ ಮಾನಸಸೃಷ್ಟಿಯ ಪ್ರಜೆಗಳು ವೃದ್ಧಿಹೊಂದಲಿಲ್ಲ. ಆಗ ಧರ್ಮಾತ್ಮಾ ಪ್ರಜಾಪತಿಯು ಪ್ರಜೆಗಳ ಕುರಿತು ಆಲೋಚಿಸಿದನು.

ಸ ಮೈಥುನೇನ ಧರ್ಮೇಣ ಸಿಸೃಕ್ಷುರ್ವಿವಿಧಾಃ ಪ್ರಜಾಃ । ಅಸಿಕ್ನೀಮಾವಹತ್ಪತ್ನೀಂ ವೀರಣಸ್ಯ ಪ್ರಜಾಪತೇಃ ।। 5 ।। ಸುತಾಂ ಸುತಪಸಾ ಯುಕ್ತಾಂ ಮಹತೀಂ ಲೋಕಧಾರಿಣೀಮ್ । ಅಥ ಪುತ್ರಸಹಸ್ರಾಣಿ ವೈರಣ್ಯಾಂ ಪಂಚ ವೀರ್ಯವಾನ್ ।। 6 ।। ಅಸಿಕ್ನ್ಯಾಂ ಜನಯಾಮಾಸ ದಕ್ಷ ಏವ ಪ್ರಜಾಪತಿಃ । ತಾಂಸ್ತು ದೃಷ್ಟ್ವಾ ಮಹಾಭಾಗಾನ್ಸಂವಿವರ್ಧಯಿಷೂನ್ಪ್ರಜಾಃ ।। 7 ।। ದೇವರ್ಷಿಃ ಪ್ರಿಯಸಂವಾದೋ ನಾರದಃ ಪ್ರಾಬ್ರವೀದಿದಮ್ । ನಾಶಾಯ ವಚನಂ ತೇಷಾಂ ಶಾಪಾಯೈವಾತ್ಮನಸ್ತಥಾ ।। 8 ।। ಯಂ ಕಶ್ಯಪಃ ಸುತವರಂ ಪರಮೇಷ್ಠೀ ವ್ಯಜೀಜನತ್ । ದಕ್ಷಸ್ಯ ವೈ ದುಹಿತರಿ ದಕ್ಷಶಾಪಭಯಾನ್ಮುನಿಃ ।। 9 ।। ಪೂರ್ವಂ ಸ ಹಿ ಸಮುತ್ಪನ್ನೋ ನಾರದಃ ಪರಮೇಷ್ಠಿನಃ । ಅಸಿಕ್ನ್ಯಾಮಥ ವೈರಣ್ಯಾಂ ಭೂಯೋ ದೇವರ್ಷಿಸತ್ತಮಃ ।। 10 ।। ತಂ ಭೂಯೋ ಜನಯಾಮಾಸ ಪಿತೇವ ಮುನಿಪುಂಗವಮ್

ಮೈಥುನ ಧರ್ಮದಿಂದಲೇ ವಿವಿಧ ಪ್ರಜೆಗಳನ್ನು ಸೃಷ್ಟಿಸಬೇಕೆಂದು ಅವನು ಪ್ರಜಾಪತಿ ವೀರಣನ ಪುತ್ರಿ, ಮಹಾತಪಸ್ವಿನೀ ಮಹಾ ಲೋಕಧಾರಿಣೀ ಅಸಿಕ್ನಿಯನ್ನು ಪತ್ನಿಯನ್ನಾಗಿ ಮಾಡಿಕೊಂಡನು. ಆ ವೈರಿಣ್ಯೆಯಲ್ಲಿ ದಕ್ಷ ಪ್ರಜಾಪತಿಯು ಐದು ಸಾವಿರ ವೀರ್ಯವಾನ್ ಪುತ್ರರನ್ನು ಹುಟ್ಟಿಸಿದನು. ಪ್ರಜೆಗಳನ್ನು ವೃದ್ಧಿಗೊಳಿಸಲು ಇಚ್ಛಿಸಿದ್ದ ಆ ಮಹಾಭಾಗರನ್ನು ನೋಡಿ ಪ್ರಿಯಸಂವಾದಗೈಯುವ ದೇವರ್ಷಿನಾರದನು ಅವರನ್ನು ನಾಶಗೊಳಿಸುವ ಮತ್ತು ತನಗೆ ಶಾಪವನ್ನು ತರುವ ಮಾತನ್ನಾಡಿದನು. ಬ್ರಹ್ಮನ ಮಾನಸಪುತ್ರನಾದ ನಾರದನು ಕಶ್ಯಪನಿಗಿಂತಲೂ ಮೊದಲು ಜನಿಸಿದ್ದನು. ಆದರೂ ಮುಂದೆ ದಕ್ಷನ ಶಾಪಭಯದಿಂದ ಆ ಮುನಿಯು ದಕ್ಷನ ಪತ್ನಿಯಲ್ಲಿ ಹುಟ್ಟಿದನು. ಮತ್ತೊಂದು ಸಾರಿ ದಕ್ಷಪುತ್ರಿಯಲ್ಲಿ ಕಶ್ಯಪನಿಂದ ಜನ್ಮತಾಳಿದನು.

ತೇನ ದಕ್ಷಸ್ಯ ವೈ ಪುತ್ರಾ ಹರ್ಯಶ್ವಾ ಇತಿ ವಿಶ್ರುತಾಃ ।। 11 ।। ನಿರ್ಮಥ್ಯ ನಾಶಿತಾಃ ಸರ್ವೇ ವಿಧಿನಾ ಚ ನ ಸಂಶಯಃ । ತಸ್ಯೋದ್ಯತಸ್ತದಾ ದಕ್ಷೋ ನಾಶಾಯಾಮಿತವಿಕ್ರಮಃ ।। 12 ।। ಬ್ರಹ್ಮರ್ಷೀನ್ಪುರತಃ ಕೃತ್ವಾ ಯಾಚಿತಃ ಪರಮೇಷ್ಠಿನಾ । ತತೋಽಭಿಸಂಧಿಶ್ಚಕ್ರೇ ವೈ ದಕ್ಷಸ್ಯ ಪರಮೇಷ್ಠಿನಾ ।। 13 ।। ಕನ್ಯಾಯಾಂ ನಾರದೋ ಮಹ್ಯಂ ತವ ಪುತ್ರೋ ಭವೇದಿತಿ । ತತೋ ದಕ್ಷಃ ಸುತಾಂ ಪ್ರಾದಾತ್ಪ್ರಿಯಾಂ ವೈ ಪರಮೇಷ್ಠಿನೇ । ಸ ತಸ್ಯಾಂ ನಾರದೋ ಜಜ್ಞೇ ಭೂಯಃ ಶಾಪಭಯಾದೃಷಿಃ ।। 14 ।।

ಆ ನಾರದನು ಹರ್ಯಶ್ವರೆಂದು ವಿಶ್ರುತರಾಗಿದ್ದ ದಕ್ಷನ ಪುತ್ರರನ್ನು ಎಲ್ಲರನ್ನೂ ಉಪದೇಶದಿಂದ ನಾಶಪಡಿಸಿದನು. ಅದು ವಿಧಿವಿಹಿತವಾಗಿತ್ತು ಎನ್ನುವುದರಲ್ಲಿ ಸಂಶಯವಿಲ್ಲ. ಆಗ ಅಮಿತವಿಕ್ರಮಿ ದಕ್ಷನು ನಾರದನನ್ನು ನಾಶಪಡಿಸಲು ಉದ್ಯುಕ್ತನಾದಾಗ ಬ್ರಹ್ಮರ್ಷಿ ಪರಮೇಷ್ಠಿ ಕಶ್ಯಪನನ್ನು ಮುಂದೆಮಾಡಿಕೊಂಡು ನಾರದನು ಬೇಡಿಕೊಂಡನು. ಆಗ “ನಾರದನು ನನ್ನ ಕನ್ಯೆಯಲ್ಲಿ ನಿನ್ನ ಮಗನಾಗಿ ಹುಟ್ಟುತ್ತಾನೆ” ಎಂದು ದಕ್ಷನು ಕಶ್ಯಪನೊಡನೆ ಒಪ್ಪಂದ ಮಾಡಿಕೊಂಡನು. ನಂತರ ದಕ್ಷನು ತನ್ನ ಮಗಳನ್ನು ಕಶ್ಯಪನಿಗೆ ಕೊಟ್ಟಾಗ ಶಾಪಭಯದಿಂದ ನಾರದನು ಅವಳಲ್ಲಿ ಪುನಃ ಹುಟ್ಟಿದನು.”

ಮುನಯ ಊಚುಃ । ಕಥಂ ಪ್ರಣಾಶಿತಾಃ ಪುತ್ರಾ ನಾರದೇನ ಮಹರ್ಷಿಣಾ । ಪ್ರಜಾಪತೇಃ ಸೂತವರ್ಯ ಶ್ರೋತುಮಿಚ್ಛಾಮ ತತ್ತ್ವತಃ ।। 15 ।।

ಮುನಿಗಳು ಹೇಳಿದರು: “ಸೂತವರ್ಯ! ಮಹರ್ಷಿ ನಾರದನು ಪ್ರಜಾಪತಿಯ ಪುತ್ರರನ್ನು ಹೇಗೆ ನಾಶಪಡಿಸಿದನು ಎನ್ನುವುದನ್ನು ತತ್ವತಃ ಕೇಳ ಬಯಸುತ್ತೇವೆ.”

ಲೋಮಹರ್ಷಣ ಉವಾಚ । ದಕ್ಷಸ್ಯ ಪುತ್ರಾ ಹರ್ಯಶ್ವಾ ವಿವರ್ಧಯಿಷವಃ ಪ್ರಜಾಃ । ಸಮಾಗತಾ ಮಹಾವೀರ್ಯಾ ನಾರದಸ್ತಾನುವಾಚ ಹ ।। 16 ।।

ಲೋಮಹರ್ಷಣನು ಹೇಳಿದನು: “ದಕ್ಷನ ಮಹಾವೀರ್ಯ ಪುತ್ರರಾದ ಹರ್ಯಶ್ವರು ಪ್ರಜೆಗಳನ್ನು ವೃದ್ಧಿಪಡಿಸ ಬಯಸಿದಾಗ ನಾರದನು ಅವರ ಬಳಿಹೋಗಿ ಹೇಳಿದನು.

ನಾರದ ಉವಾಚ । ಬಾಲಿಶಾ ಬತ ಯೂಯಂ ವೈ ನಾಸ್ಯಾ ಜಾನೀತ ವೈ ಭುವಃ । ಪ್ರಮಾಣಂ ಸ್ರಷ್ಟುಕಾಮಾ ವೈ ಪ್ರಜಾಃ ಪ್ರಾಚೇತಸಾತ್ಮಜಾಃ ।। 17 ।। ಅಂತರೂರ್ಧ್ವಮಧಶ್ಚೈವ ಕಥಂ ಸೃಜಥ ವೈ ಪ್ರಜಾಃ

ನಾರದನು ಹೇಳಿದನು: “ಪ್ರಾಚೇತಸನ ಮಕ್ಕಳೇ! ನಿಮಗೆ ತಿಳುವಳಿಕೆಯೇ ಇಲ್ಲವಲ್ಲಾ. ಈ ಭೂಮಿಯ ಪ್ರಮಾಣವನ್ನು ತಿಳಿಯದೇ ನೀವು ಈ ಭೂಮಿಯ ಮೇಲೆ, ಕೆಳಗೆ ಮತ್ತು ಮಧ್ಯೆ ಪ್ರಜೆಗಳನ್ನು ಹೇಗೆ ಸೃಷ್ಟಿಸುತ್ತೀರಿ?”

ತೇ ತು ತದ್ವಚನಂ ಶ್ರುತ್ವಾ ಪ್ರಯಾತಾಃ ಸರ್ವತೋ ದಿಶಃ ।। 18 ।। ಅದ್ಯಾಪಿ ನ ನಿವರ್ತಂತೇ ಸಮುದ್ರೇಭ್ಯ ಇವಾಪಗಾಃ

ಅವನ ಮಾತನ್ನು ಕೇಳಿ ಹರ್ಯಶ್ವರು ಭೂಮಿಯ ಪ್ರಮಾಣವನ್ನು ತಿಳಿಯಲು ದಿಕ್ಕುದಿಕ್ಕುಗಳಿಗೆ ಹೊರಟುಹೋದರು. ಕಡಲನ್ನು ಸೇರಿದ ನದಿಗಳಂತೆ ಅವರು ಇಂದಿಗೂ ಹಿಂದಿರುಗಿ ಬರಲಿಲ್ಲ.

ಹರ್ಯಶ್ವೇಷ್ವಥ ನಷ್ಟೇಷು ದಕ್ಷಃ ಪ್ರಾಚೇತಸಃ ಪುನಃ ।। 19 ।। ವೈರಣ್ಯಾಮಥ ಪುತ್ರಾಣಾಂ ಸಹಸ್ರಮಸೃಜತ್ಪ್ರಭುಃ । ವಿವರ್ಧಯಿಷವಸ್ತೇ ತು ಶಬಲಾಶ್ವಾಸ್ತಥಾ ಪ್ರಜಾಃ ।। 20 ।। ಪೂರ್ವೋಕ್ತಂ ವಚನಂ ತೇ ತು ನಾರದೇನ ಪ್ರಚೋದಿತಾಃ । ಅನ್ಯೋನ್ಯಮೂಚುಸ್ತೇ ಸರ್ವೇ ಸಮ್ಯಗಾಹ ಮಹಾನೃಷಿಃ ।। 21 ।। ಭ್ರಾತೄಣಾಂ ಪದವೀಂ ಜ್ಞಾತುಂ ಗಂತವ್ಯಂ ನಾತ್ರ ಸಂಶಯಃ । ಜ್ಞಾತ್ವಾ ಪ್ರಮಾಣಂ ಪೃಥ್ವ್ಯಾಶ್ಚ ಸುಖಂ ಸ್ರಕ್ಷ್ಯಾಮಹೇ ಪ್ರಜಾಃ ।। 22 ।। ತೇಽಪಿ ತೇನೈವ ಮಾರ್ಗೇಣ ಪ್ರಯಾತಾಃ ಸರ್ವತೋ ದಿಶಮ್ । ಅದ್ಯಾಪಿ ನ ನಿವರ್ತಂತೇ ಸಮುದ್ರೇಭ್ಯ ಇವಾಪಗಾಃ ।। 23 ।। ತದಾ ಪ್ರಭೃತಿ ವೈ ಭ್ರಾತಾ ಭ್ರಾತುರನ್ವೇಷಣೇ ದ್ವಿಜಾಃ । ಪ್ರಯಾತೋ ನಶ್ಯತಿ ಕ್ಷಿಪ್ರಂ ತನ್ನ ಕಾರ್ಯಂ ವಿಪಶ್ಚಿತಾ ।। 24 ।।

ಹರ್ಯಶ್ವರು ನಷ್ಟರಾಗಲು ಪ್ರಭು ಪ್ರಾಚೇತಸ ದಕ್ಷನು ಪುನಃ ವೈರಣ್ಯೆಯಲ್ಲಿ ಸಾವಿರ ಪುತ್ರರನ್ನು ಸೃಷ್ಟಿಸಿದನು. ಆ ಶಬಲಾಶ್ವರು ಪ್ರಜೆಗಳನ್ನು ವರ್ಧಿಸಲು ಬಯಸಿದರು. ಅವರಿಗೂ ಕೂಡ ನಾರದನು ಹಿಂದೆ ಹರ್ಯಶ್ವರಿಗೆ ಹೇಳಿದಂತೆಯೇ ಹೇಳಿದನು. ಆಗ ಅವರೆಲ್ಲರೂ ಅನ್ಯೋನ್ಯರಲ್ಲಿ “ಮಹಾನೃಷಿಯು ಸತ್ಯವನ್ನೇ ಹೇಳಿದ್ದಾನೆ. ಭೂಮಿಯ ಪ್ರಮಾಣವನ್ನು ತಿಳಿದುಕೊಳ್ಳಲು ನಮ್ಮ ಸಹೋದರರ ಮಾರ್ಗದಲ್ಲೇ ಹೋಗಬೇಕು. ನಂತರ ಪ್ರಜೆಗಳನ್ನು ಸುಖವಾಗಿ ಸೃಷ್ಟಿಸಬಲ್ಲೆವು. ಅದರಲ್ಲಿ ಸಂಶಯವಿಲ್ಲ” ಎಂದುಕೊಂಡು ಅವರೂ ಕೂಡ ಹರ್ಯಶ್ವರ ಮಾರ್ಗದಲ್ಲಿ ಸರ್ವ ದಿಕ್ಕುಗಳಲ್ಲಿ ಹೊರಟುಹೋದರು. ಕಡಲನ್ನು ಸೇರಿದ ನದಿಗಳಂತೆ ಅವರು ಇಂದಿಗೂ ಹಿಂದಿರುಗಿ ಬರಲಿಲ್ಲ. ದ್ವಿಜರೇ! ಅಂದಿನಿಂದ ಸಹೋದರನು ಮರೆಯಾದ ಸಹೋದರನನ್ನು ಹುಡುಕಿಕೊಂಡು ಹೋದರೆ ಅವನೂ ತಿರುಗಿಬರುವುದಿಲ್ಲ. ತಿಳಿದವರು ಆ ಕಾರ್ಯವನ್ನು ಮಾಡಬಾರದು.

ತಾಂಶ್ಚೈವ ನಷ್ಟಾನ್ವಿಜ್ಞಾಯ ಪುತ್ರಾಂದಕ್ಷಃ ಪ್ರಜಾಪತಿಃ । ಷಷ್ಟಿಂ ತತೋಽಸೃಜತ್ಕನ್ಯಾ ವೈರಣ್ಯಾಮಿತಿ ನಃ ಶ್ರುತಮ್ ।। 25 ।। ತಾಸ್ತದಾ ಪ್ರತಿಜಗ್ರಾಹ ಭಾರ್ಯಾರ್ಥಂ ಕಶ್ಯಪಃ ಪ್ರಭುಃ । ಸೋಮೋ ಧರ್ಮಶ್ಚ ಭೋ ವಿಪ್ರಾಸ್ತಥೈವಾನ್ಯೇ ಮಹರ್ಷಯಃ ।। 26 ।। ದದೌ ಸ ದಶ ಧರ್ಮಾಯ ಕಶ್ಯಪಾಯ ತ್ರಯೋದಶ । ಸಪ್ತವಿಂಶತಿ ಸೋಮಾಯ ಚತಸ್ರೋಽರಿಷ್ಟನೇಮಿನೇ ।। 27 ।। ದ್ವೇ ಚೈವ ಬಹುಪುತ್ರಾಯ ದ್ವೇ ಚೈವಾಂಗಿರಸೇ ತಥಾ । ದ್ವೇ ಕೃಶಾಶ್ವಾಯ ವಿದುಷೇ ತಾಸಾಂ ನಾಮಾನಿ ಮೇ ಶೃಣು ।। 28 ।।

ಆ ಪುತ್ರರೂ ನಷ್ಟರಾಗಲು ಪ್ರಜಾಪತಿ ದಕ್ಷನು ವೈರಣ್ಯೆಯಲ್ಲಿ ಅರವತ್ತು ಕನ್ಯೆಯರನ್ನು ಸೃಷ್ಟಿಸಿದನು ಎಂದು ಕೇಳಿದ್ದೇವೆ. ಭೋ ವಿಪ್ರರೇ! ಅವರಲ್ಲಿ ಕೆಲವರನ್ನು ಪ್ರಭು ಕಶ್ಯಪ, ಸೋಮ, ಧರ್ಮ ಮತ್ತು ಅನ್ಯ ಮಹರ್ಷಿಗಳು ಸ್ವೀಕರಿಸಿದರು. ಅವರಲ್ಲಿ ಹತ್ತು ಮಂದಿಯನ್ನು ಧರ್ಮನಿಗೆ, ಹದಿಮೂರು ಕನ್ಯೆಯರನ್ನು ಕಶ್ಯಪನಿಗೆ, ಇಪ್ಪತ್ತೇಳನ್ನು ಸೋಮನಿಗೆ, ನಾಲ್ವರನ್ನು ಅರಿಷ್ಟನೇಮಿಗೆ, ಇಬ್ಬರನ್ನು ಬಹುಪುತ್ರನಿಗೆ, ಇಬ್ಬರನ್ನು ಅಂಗಿರಸನಿಗೆ, ಇಬ್ಬರನ್ನು ವಿದುಷಿ ಕೃಶಾಶ್ವನಿಗೆ ಕೊಟ್ಟನು. ಅವರ ಹೆಸರುಗಳನ್ನು ಕೇಳಿ.

ಅರುಂಧತೀ ವಸುರ್ಯಾಮೀ ಲಂಬಾ ಭಾನುರ್ಮರುತ್ವತೀ । ಸಂಕಲ್ಪಾ ಚ ಮುಹೂರ್ತಾ ಚ ಸಾಧ್ಯಾ ವಿಶ್ವಾ ಚ ಭೋ ದ್ವಿಜಾಃ ।। 29 ।। ಧರ್ಮಪತ್ನ್ಯೋ ದಶ ತ್ವೇತಾಸ್ತಾಸ್ವಪತ್ಯಾನಿ ಬೋಧತ । ವಿಶ್ವೇದೇವಾಸ್ತು ವಿಶ್ವಾಯಾಃ ಸಾಧ್ಯಾ ಸಾಧ್ಯಾನ್ವ್ಯಜಾಯತ ।। 30 ।। ಮರುತ್ವತ್ಯಾಂ ಮರುತ್ವಂತೋ ವಸೋಸ್ತು ವಸವಃ ಸುತಾಃ । ಭಾನೋಸ್ತು ಭಾನವಃ ಪುತ್ರಾ ಮುಹೂರ್ತಾಸ್ತು ಮುಹೂರ್ತಜಾಃ ।। 31 ।। ಲಂಬಾಯಾಶ್ಚೈವ ಘೋಷೋಽಥ ನಾಗವೀಥೀ ಚ ಯಾಮಿಜಾ । ಪೃಥಿವೀ ವಿಷಯಂ ಸರ್ವಮರುಂಧತ್ಯಾಂ ವ್ಯಜಾಯತ ।। 32 ।।

ಭೋ ದ್ವಿಜರೇ! ಅರುಂಧತೀ, ವಸು, ಯಾಮಿ, ಲಂಬಾ, ಭಾನು, ಮರುತ್ವತೀ, ಸಂಕಲ್ಪಾ, ಮುಹೂರ್ತಾ, ಸಾಧ್ಯಾ ಮತ್ತು ವಿಶ್ವಾ – ಇವರು ಧರ್ಮನ ಪತ್ನಿಯರು. ಅವರ ಮಕ್ಕಳಕುರಿತು ಕೇಳಿ. ವಿಶ್ವೇದೇವರು ವಿಶ್ವೆಯ ಮಕ್ಕಳು. ಸಾಧ್ಯರು ಸಾಧ್ಯೆಯಲ್ಲಿ ಹುಟ್ಟಿದರು. ಮರುತ್ವತಿಯಲ್ಲಿ ಮರುತ್ವಂತರು ಹುಟ್ಟಿದರು. ವಸುಗಳು ವಸುವಿನ ಮಕ್ಕಳು. ಭಾನುಗಳು ಭಾನುವಿನ ಮಕ್ಕಳು. ಮುಹೂರ್ತೆಯಿಂದ ಮೂಹೂರ್ತಗಳು ಹುಟ್ಟಿದವು. ಲಂಬೆಯಿಂದ ಘೋಷವು ಜನಿಸಿತು. ಯಾಮಿಯಿಂದ ನಾಗವೀಥಿಯು ಜನಿಸಿತು. ಜಗತ್ತಿನ ಸರ್ವ ವಿಷಯಗಳೂ ಅರುಂಧತಿಯಿಂದ ಹುಟ್ಟಿದವು.

ಸಂಕಲ್ಪಾಯಾಸ್ತು ವಿಶ್ವಾತ್ಮಾ ಜಜ್ಞೇ ಸಂಕಲ್ಪ ಏವ ಹಿ । ನಾಗವೀಥ್ಯಾಂ ಚ ಯಾಮಿನ್ಯಾಂ ವೃಷಲಶ್ಚ ವ್ಯಜಾಯತ ।। 33 ।। ಪರಾ ಯಾಃ ಸೋಮಪತ್ನೀಶ್ಚ ದಕ್ಷಃ ಪ್ರಾಚೇತಸೋ ದದೌ । ಸರ್ವಾ ನಕ್ಷತ್ರನಾಮ್ನ್ಯಸ್ತಾ ಜ್ಯೋತಿಷೇ ಪರಿಕೀರ್ತಿತಾಃ ।। 34 ।। ಯೇ ತ್ವನ್ಯೇ ಖ್ಯಾತಿಮಂತೋ ವೈ ದೇವಾ ಜ್ಯೋತಿಷ್ಪುರೋಗಮಾಃ । ವಸವೋಽಷ್ಟೌ ಸಮಾಖ್ಯಾತಾಸ್ತೇಷಾಂ ವಕ್ಷ್ಯಾಮಿ ವಿಸ್ತರಮ್ ।। 35 ।। ಆಪೋ ಧ್ರುವಶ್ಚ ಸೋಮಶ್ಚ ಧವಶ್ಚೈವಾನಿಲೋಽನಲಃ । ಪ್ರತ್ಯೂಷಶ್ಚ ಪ್ರಭಾಸಶ್ಚ ವಸವೋ ನಾಮಭಿಃ ಸ್ಮೃತಾಃ ।। 36 ।।

ಪ್ರಾಚೇತಸ ದಕ್ಷನು ಕೊಟ್ಟ ಉಳಿದ ಸೋಮಪತ್ನಿಯರು ನಕ್ಷತ್ರಗಳೆಂಬ ಹೆಸರಿನಿಂದ ಜ್ಯೋತಿಃಶಾಸ್ತ್ರದಲ್ಲಿ ಕೀರ್ತಿತರಾಗಿದ್ದಾರೆ. ಖ್ಯಾತಿವಂತರಾದ ಜ್ಯೋತಿಯೇ ಮೊದಲಾದ ದೇವತೆಗಳ ಮತ್ತು ಅಷ್ಟವಸುಗಳ ಕುರಿತು ವಿಸ್ತಾರವಾಗಿ ಹೇಳುತ್ತೇನೆ. ಆಪ, ಧ್ರುವ, ಸೋಮ, ಧವ, ಅನಿಲ, ಅನಲ, ಪ್ರತ್ಯೂಷ, ಪ್ರಭಾಸ – ಇವು ಅಷ್ಟವಸುಗಳ ಹೆಸರುಗಳು.

ಆಪಸ್ಯ ಪುತ್ರೋ ವೈತಂಡ್ಯಃ ಶ್ರಮಃ ಶ್ರಾಂತೋ ಮುನಿಸ್ತಥಾ । ಧ್ರುವಸ್ಯ ಪುತ್ರೋ ಭಗವಾನ್ಕಾಲೋ ಲೋಕಪ್ರಕಾಲನಃ ।। 37 ।। ಸೋಮಸ್ಯ ಭಗವಾನ್ವರ್ಚಾ ವರ್ಚಸ್ವೀ ಯೇನ ಜಾಯತೇ । ಧವಸ್ಯ ಪುತ್ರೋ ದ್ರವಿಣೋ ಹುತಹವ್ಯವಹಸ್ತಥಾ । ಮನೋಹರಾಯಾಃ ಶಿಶಿರಃ ಪ್ರಾಣೋಽಥ ರಮಣಸ್ತಥಾ ।। 38 ।। ಅನಿಲಸ್ಯ ಶಿವಾ ಭಾರ್ಯಾ ತಸ್ಯಾಃ ಪುತ್ರೋ ಮನೋಜವಃ । ಅವಿಜ್ಞಾತಗತಿಶ್ಚೈವ ದ್ವೌ ಪುತ್ರಾವನಿಲಸ್ಯ ಚ ।। 39 ।। ಅಗ್ನಿಪುತ್ರಃ ಕುಮಾರಸ್ತು ಶರಸ್ತಂಬೇ ಶ್ರಿಯಾ ವೃತಃ । ತಸ್ಯ ಶಾಖೋ ವಿಶಾಖಶ್ಚ ನೈಗಮೇಯಶ್ಚ ಪೃಷ್ಠಜಃ ।। 40 ।। ಅಪತ್ಯಂ ಕೃತ್ತಿಕಾನಾಂ ತು ಕಾರ್ತ್ತಿಕೇಯ ಇತಿ ಸ್ಮೃತಃ । 

ಆಪನ ಪುತ್ರರು ವೈತಂಡ್ಯ, ಶ್ರಮ, ಶ್ರಾಂತ ಮತ್ತು ಮುನಿ. ಗಣನೆಯಿಂದ ಲೋಕವನ್ನೇ ಬದಲಾಯಿಸುವ ಭಗವಾನ್ ಕಾಲಪುರುಷನು ಧ್ರುವನ ಮಗನು. ಸೋಮನ ಮಗನು ಭಗವಾನ್ ವರ್ಚನು. ಅವನಿಂದಲೇ ವರ್ಚಸ್ವಿಯಾಗುತ್ತಾರೆ. ಧವನಿಗೆ ಮನೋಹರೆಯಲ್ಲಿ ದ್ರವಿಣ, ಹುತಹವ್ಯವಹ, ಶಿಶಿರ, ಪ್ರಾಣ ಮತ್ತು ರಮಣರೆಂಬ ಪುತ್ರರು. ಅನಿಲನ ಪತ್ನಿ ಶಿವೆಯಲ್ಲಿ ಈರ್ವರು ಪುತ್ರರಾದರು: ಮನೋಜವ ಮತ್ತು ಅವಿಜ್ಞಾತಗತಿ. ಇವರಿಬ್ಬರೂ ಅನಿಲನ ಪುತ್ರರು. ಶರಸ್ತಂಬದಲ್ಲಿ ಕಾಂತಿಯಿಂದ ಜನಿಸಿದ ಕುಮಾರನು ಅಗ್ನಿಪುತ್ರನು. ಅವನ ತಮ್ಮಂದಿರು ಶಾಖ, ವಿಶಾಖ ಮತ್ತು ನೈಗಮೇಯ. ಕೃತ್ತಿಕೆಯರ ಪೋಷಣೆಯಿಂದ ಬೆಳೆದುದರಿಂದ ಅವನು ಕಾರ್ತಿಕೇಯನೆಂದಾದನು.

ಪ್ರತ್ಯೂಷಸ್ಯ ವಿದುಃ ಪುತ್ರಮೃಷಿಂ ನಾಮ್ನಾಥ ದೇವಲಮ್ ।। 41 ।। ದ್ವೌ ಪುತ್ರೌ ದೇವಲಸ್ಯಾಪಿ ಕ್ಷಮಾವಂತೌ ಮನೀಷಿಣೌ । ಬೃಹಸ್ಪತೇಸ್ತು ಭಗಿನೀ ವರಸ್ತ್ರೀ ಬ್ರಹ್ಮವಾದಿನೀ ।। 42 ।। ಯೋಗಸಿದ್ಧಾ ಜಗತ್ಕೃತ್ಸ್ನಮಸಕ್ತಾ ವಿಚಚಾರ ಹ । ಪ್ರಭಾಸಸ್ಯ ತು ಸಾ ಭಾರ್ಯಾ ವಸೂನಾಮಷ್ಟಮಸ್ಯ ತು ।। 43 ।। ವಿಶ್ವಕರ್ಮಾ ಮಹಾಭಾಗೋ ಯಸ್ಯಾಂ ಜಜ್ಞೇ ಪ್ರಜಾಪತಿಃ । ಕರ್ತಾ ಶಿಲ್ಪಸಹಸ್ರಾಣಾಂ ತ್ರಿದಶಾನಾಂ ಚ ವಾರ್ಧಕಿಃ ।। 44 ।। ಭೂಷಣಾನಾಂ ಚ ಸರ್ವೇಷಾಂ ಕರ್ತಾ ಶಿಲ್ಪವತಾಂ ವರಃ । ಯಃ ಸರ್ವೇಷಾಂ ವಿಮಾನಾನಿ ದೈವತಾನಾಂ ಚಕಾರ ಹ ।। 45 ।। ಮಾನುಷಾಶ್ಚೋಪಜೀವಂತಿ ಯಸ್ಯ ಶಿಲ್ಪಂ ಮಹಾತ್ಮನಃ

ದೇವಲನೆಂಬ ಋಷಿಯು ಪ್ರತ್ಯೂಷನ ಮಗನು. ದೇವಲನಿಗೆ ಕ್ಷಮಾವಂತರೂ ವಿದ್ಯಾವಂತರೂ ಆದ ಇಬ್ಬರು ಪುತ್ರರು. ನಿರಸಕ್ತಳಾಗಿ ಜಗತ್ತನ್ನೆಲ್ಲಾ ಸುತ್ತುತ್ತಿದ್ದ ಬೃಹಸ್ಪತಿಯ ಸಹೋದರಿ ವರಸ್ತ್ರೀ ಬ್ರಹ್ಮವಾದಿನೀ ಯೋಗಸಿದ್ಧೆ ವರಸ್ತ್ರೀಯು ವಸುಗಳಲ್ಲಿ ಎಂಟನೆಯವನಾದ ಪ್ರಭಾಸನ ಪತ್ನಿಯು. ಆ ಮಹಾಭಾಗೆಯಲ್ಲಿ ಸಹಸ್ರಾರು ಶಿಲ್ಪಗಳನ್ನು ನಿರ್ಮಿಸಿದ ದೇವತೆಗಳ ಶಿಲ್ಪಿ ಪ್ರಜಾಪತಿ ವಿಶ್ವಕರ್ಮನು ಹುಟ್ಟಿದನು. ಶಿಲ್ಪಿಗಳಲ್ಲಿಯೇ ಶ್ರೇಷ್ಠನಾದ ಅವನು ಎಲ್ಲರ ಭೂಷಣಗಳನ್ನೂ, ಎಲ್ಲ ದೇವತೆಗಳ ವಿಮಾನಗಳನ್ನೂ ನಿರ್ಮಿಸಿದನು. ಆ ಮಹಾತ್ಮನ ಶಿಲ್ಪಕರ್ಮದಿಂದ ಮನುಷ್ಯರೂ ಜೀವನನಡೆಸುತ್ತಾರೆ.

ಸುರಭೀ ಕಶ್ಯಪಾದ್ರುದ್ರಾನೇಕಾದಶ ವಿನಿರ್ಮಮೇ ।। 46 ।। ಮಹಾದೇವಪ್ರಸಾದೇನ ತಪಸಾ ಭಾವಿತಾ ಸತೀ । ಅಜೈಕಪಾದಹಿರ್ಬುಧ್ನ್ಯಸ್ತ್ವಷ್ಟಾ ರುದ್ರಶ್ಚ ವೀರ್ಯವಾನ್ ।। 47 ।। ಹರಶ್ಚ ಬಹುರೂಪಶ್ಚ ತ್ರ್ಯಂಬಕಶ್ಚಾಪರಾಜಿತಃ । ವೃಷಾಕಪಿಶ್ಚ ಶಂಭುಶ್ಚ ಕಪರ್ದೀ ರೈವತಸ್ತಥಾ ।। 48 ।। ಮೃಗವ್ಯಾಧಶ್ಚ ಶರ್ವಶ್ಚ ಕಪಾಲೀ ಚ ದ್ವಿಜೋತ್ತಮಾಃ । ಏಕಾದಶೈತೇ ವಿಖ್ಯಾತಾ ರುದ್ರಾಸ್ತ್ರಿಭುವನೇಶ್ವರಾಃ ।। 49 ।। ಶತಂ ತ್ವೇವಂ ಸಮಾಖ್ಯಾತಂ ರುದ್ರಾಣಾಮಮಿತೌಜಸಾಮ್ । ಪುರಾಣೇ ಮುನಿಶಾರ್ದೂಲಾ ಯೈರ್ವ್ಯಾಪ್ತಂ ಸಚರಾಚರಮ್ ।। 50 ।। 

ದ್ವಿಜೋತ್ತಮರೇ! ಸತೀ ಸುರಭಿಯು ತಪಸ್ಸಿನಿಂದ ಮಹಾದೇವನನ್ನು ಪ್ರಸನ್ನಗೊಳಿಸಿ ಅವನ ಪ್ರಸಾದದಿಂದ ಹನ್ನೊಂದು ರುದ್ರರನ್ನು ಪಡೆದಳು. ಅಜೈಕಪಾದ, ಅಹಿರ್ಬುಧ್ನ್ಯ, ತ್ವಷ್ಟಾ, ವೀರ್ಯವಾನ್ ರುದ್ರ, ಬಹುರೂಪೀ ಹರ, ಜಯಶಾಲೀ ತ್ರ್ಯಂಬಕ, ವೃಷಾಕಪಿ, ಶಂಭು, ಕಪರ್ದಿ, ರೈವತ, ಮೃಗವ್ಯಾಧ, ಮತ್ತು ಕಪಾಲವನ್ನು ಧರಿಸಿದ ಶರ್ವ – ಈ ಹನ್ನೊಂದು ಜನರು ಜಗದೊಡೆಯರಾದ ರುದ್ರರು. ಮುನಿಶಾರ್ದೂಲರೇ! ಮಹಾತೇಜಸ್ವಿಗಳಾದ ಈ ರುದ್ರರು ನೂರು ಎಂದು ಪುರಾಣಗಳು ಹೇಳುತ್ತವೆ. ಅವರು ಸಚರಾಚರ ಜಗತ್ತನ್ನೇ ವ್ಯಾಪಿಸಿದ್ದಾರೆ.

ದಾರಾನ್ ಶೃಣುಧ್ವಂ ವಿಪ್ರೇಂದ್ರಾಃ ಕಶ್ಯಪಸ್ಯ ಪ್ರಜಾಪತೇಃ । ಅದಿತಿರ್ದಿತಿರ್ದನುಶ್ಚೈವ ಅರಿಷ್ಟಾ ಸುರಸಾ ಖಸಾ ।। 51 ।। ಸುರಭಿರ್ವಿನತಾ ಚೈವ ತಾಮ್ರಾ ಕ್ರೋಧವಶಾ ಇರಾ । ಕದ್ರುರ್ಮುನಿಶ್ಚ ಭೋ ವಿಪ್ರಾಸ್ತಾಸ್ವಪತ್ಯಾನಿ ಬೋಧತ ।। 52 ।। ಪೂರ್ವಮನ್ವಂತರೇ ಶ್ರೇಷ್ಠಾ ದ್ವಾದಶಾಸನ್ಸುರೋತ್ತಮಾಃ । ತುಷಿತಾ ನಾಮ ತೇಽನ್ಯೋನ್ಯಮೂಚುರ್ವೈವಸ್ವತೇಽಂತರೇ ।। 53 ।। ಉಪಸ್ಥಿತೇಽತಿಯಶಸಶ್ಚಾಕ್ಷುಷಸ್ಯಾಂತರೇ ಮನೋಃ । ಹಿತಾರ್ಥಂ ಸರ್ವಲೋಕಾನಾಂ ಸಮಾಗಮ್ಯ ಪರಸ್ಪರಮ್ ।। 54 ।। ಆಗಚ್ಛತ ದ್ರುತಂ ದೇವಾ ಅದಿತಿಂ ಸಂಪ್ರವಿಶ್ಯ ವೈ । ಮನ್ವಂತರೇ ಪ್ರಸೂಯಾಮಸ್ತನ್ನಃ ಶ್ರೇಯೋ ಭವಿಷ್ಯತಿ ।। 55 ।।

ವಿಪ್ರೇಂದ್ರರೇ! ಕಶ್ಯಪ ಪ್ರಜಾಪತಿಯ ಪತ್ನಿಯರ ಹೆಸರುಗಳನ್ನು ಕೇಳಿ: ಅದಿತಿ, ದಿತಿ, ದನು, ಅರಿಷ್ಟಾ, ಸುರಸಾ, ಖಸಾ, ಸುರಭಿ, ವಿನತಾ, ತಾಮ್ರಾ, ಕ್ರೋಧವಶಾ, ಇರಾ, ಕದ್ರು ಮತ್ತು ಮುನಿ. ಭೋ ವಿಪ್ರರೇ! ಅವರ ಮಕ್ಕಳ ಕುರಿತು ಕೇಳಿ. ಹಿಂದಿನ ಮನ್ವಂತರದಲ್ಲಿ ತುಷಿತಾ ಎಂಬ ಹೆಸರಿನ ಶ್ರೇಷ್ಠ 12 ಸುರೋತ್ತಮರು ವೈವಸ್ವತ ಮನ್ವಂತರದ ಪ್ರಾರಂಭದಲ್ಲಿ ಅನ್ಯೋನ್ಯರೊಡನೆ ಹೀಗೆ ಮಾತನಾಡಿಕೊಂಡರು: “ಚಾಕ್ಷುತ ಮನ್ವಂತರದ ನಂತರ ಅತಿ ಯಶಸ್ಕರವಾದ ವೈವಸ್ವತ ಮನ್ವಂತರವು ಬರಲಿದೆ. ಸರ್ವಲೋಕಗಳ ಹಿತಕ್ಕಾಗಿ ನಾವೆಲ್ಲ ಪರಸ್ಪರ ಸೇರಿ ಬೇಗನೆ ಹೋಗಿ ಅದಿತಿಯನ್ನು ಪ್ರವೇಶಿಸಿ ಪುನಃ ಜನ್ಮವೆತ್ತೋಣ. ಇದರಿಂದ ನಮಗೆ ತುಂಬಾ ಶ್ರೇಯಸ್ಸುಂಟಾಗುತ್ತದೆ.””

ಲೋಮಹರ್ಷಣ ಉವಾಚ । ಏವಮುಕ್ತ್ವಾ ತು ತೇ ಸರ್ವೇ ಚಾಕ್ಷುಷಸ್ಯಾಂತರೇ ಮನೋಃ । ಮಾರೀಚಾತ್ಕಶ್ಯಪಾಜ್ಜಾತಾಸ್ತ್ವದಿತ್ಯಾ ದಕ್ಷಕನ್ಯಯಾ ।। 56 ।। ತತ್ರ ವಿಷ್ಣುಶ್ಚ ಶಕ್ರಶ್ಚ ಜಜ್ಞಾತೇ ಪುನರೇವ ಹಿ । ಅರ್ಯಮಾ ಚೈವ ಧಾತಾ ಚ ತ್ವಷ್ಟಾ ಪೂಷಾ ತಥೈವ ಚ ।। 57 ।। ವಿವಸ್ವಾನ್ಸವಿತಾ ಚೈವ ಮಿತ್ರೋ ವರುಣ ಏವ ಚ । ಅಂಶೋ ಭಗಶ್ಚಾತಿತೇಜಾ ಆದಿತ್ಯಾ ದ್ವಾದಶ ಸ್ಮೃತಾಃ ।। 58 ।। ಸಪ್ತವಿಂಶತಿ ಯಾಃ ಪ್ರೋಕ್ತಾಃ ಸೋಮಪತ್ನ್ಯೋ ಮಹಾವ್ರತಾಃ । ತಾಸಾಮಪತ್ಯಾನ್ಯಭವಂದೀಪ್ತಾನ್ಯಮಿತತೇಜಸಃ ।। 59 ।। ಅರಿಷ್ಟನೇಮಿಪತ್ನೀನಾಮಪತ್ಯಾನೀಹ ಷೋಡಶ । ಬಹುಪುತ್ರಸ್ಯ ವಿದುಷಶ್ಚತಸ್ರೋ ವಿದ್ಯುತಃ ಸ್ಮೃತಾಃ ।। 60 ।।

ಲೋಮಹರ್ಷಣನು ಹೇಳಿದನು: “ಹೀಗೆ ಅಂದುಕೊಂಡು ಚಾಕ್ಷುಷಮನ್ವಂತರದ ಕೊನೆಯಲ್ಲಿ ಅವರೆಲ್ಲರೂ ಮರೀಚಿಯ ಮಗ ಕಶ್ಯಪನಿಗೆ ದಕ್ಷಕನ್ಯೆ ಅದಿತಿಯಲ್ಲಿ ಹುಟ್ಟಿದರು. ವಿಷ್ಣು ಮತ್ತು ಶಕ್ರರು ಪುನಃ ಅಲ್ಲಿ ಹುಟ್ಟಿಕೊಂಡರು. ಹಾಗೆಯೇ ಆರ್ಯಮ, ಧಾತೃ, ತ್ವಷ್ಟಾ, ಪೂಷ, ವಿವಸ್ವಾನ್, ಸವಿತೃ, ಮಿತ್ರ, ವರುಣ, ಅಂಶ, ಮತ್ತು ಭಗ – ಈ ಹನ್ನೆರಡು ಅತಿತೇಜಸ್ವಿಗಳು ಆದಿತ್ಯರೆಂದು ಕರೆಯಲ್ಪಡುತ್ತಾರೆ. ಹಿಂದೆ ಹೇಳಿದ ಮಹಾವ್ರತೆಯರಾದ ಸೋಮಪತ್ನಿಯರು ಅಮಿತ ತೇಜಸ್ವಿಗಳಾಗಿ ಬೆಳಗುವ ಅನೇಕ ಮಕ್ಕಳನ್ನು ಪಡೆದರು. ಅರಿಷ್ಟನೇಮಿಯ ಪತ್ನಿಯರಲ್ಲಿ ಹದಿನಾರು ಪುತ್ರರು ಜನಿಸಿದರು. ವಿದ್ವಾನ್ ಬಹುಪುತ್ರನಿಗೆ ವಿದ್ಯುತ್ತುಗಳೆಂಬ ನಾಲ್ವರು ಮಕ್ಕಳಾದರು.

ಚಾಕ್ಷುಷಸ್ಯಾಂತರೇ ಪೂರ್ವೇ ಋಚೋ ಬ್ರಹ್ಮರ್ಷಿಸತ್ಕೃತಾಃ । ಕೃಶಾಶ್ವಸ್ಯ ಚ ದೇವರ್ಷೇರ್ದೇವಪ್ರಹರಣಾಃ ಸ್ಮೃತಾಃ ।। 61 ।। ಏತೇ ಯುಗಸಹಸ್ರಾಂತೇ ಜಾಯಂತೇ ಪುನರೇವ ಹಿ । ಸರ್ವೇ ದೇವಗಣಾಶ್ಚಾತ್ರ ತ್ರಯಸ್ತ್ರಿಂಶತ್ತು ಕಾಮಜಾಃ ।। 62 ।। ತೇಷಾಮಪಿ ಚ ಭೋ ವಿಪ್ರಾ ನಿರೋಧೋತ್ಪತ್ತಿರುಚ್ಯತೇ । ಯಥಾ ಸೂರ್ಯಸ್ಯ ಗಗನ ಉದಯಾಸ್ತಮಯಾವಿಹ ।। 63 ।। ಏವಂ ದೇವನಿಕಾಯಾಸ್ತೇ ಸಂಭವಂತಿ ಯುಗೇ ಯುಗೇ

ಹಿಂದೆ ಚಾಕ್ಷುಷಮನ್ವಂತರಲ್ಲಿಯೇ ಬ್ರಹ್ಮರ್ಷಿಗಳು ಸತ್ಕರಿಸಿದ್ದ ಋಕ್ಕುಗಳು ದೇವರ್ಷಿ ಕೃಶಾಶ್ವನ ದೇವಪ್ರಹರಣಗಳೆಂಬ ಮಕ್ಕಳಾದವು. ಈ ಅಸ್ತ್ರಮಂತ್ರಗಳೂ ಸಾವಿರ ಯುಗಗಳು ಕಳೆಯಲು ಮತ್ತೆ ಜನಿಸುತ್ತವೆ. ಈ ಎಲ್ಲ 33 ದೇವತೆಗಳೂ ಸ್ತ್ರೀ-ಪುರುಷರ ಮೈಥುನದಿಂದಲೇ ಜನಿಸಿದರು. ಭೋ ವಿಪ್ರರೇ! ಗಗನದಲ್ಲಿ ಸೂರ್ಯನಿಗೆ ಉದಯಾಸ್ತಗಳಿರುವಂತೆ ಈ ದೇವತೆಗಳಿಗೂ ಯುಗ-ಯುಗಗಳಲ್ಲಿ ಜನ್ಮ-ನಾಶಗಳಿವೆ.

ದಿತ್ಯಾಃ ಪುತ್ರದ್ವಯಂ ಜಜ್ಞೇ ಕಶ್ಯಪಾದಿತಿ ನಃ ಶ್ರುತಮ್ ।। 64 ।। ಹಿರಣ್ಯಕಶಿಪುಶ್ಚೈವ ಹಿರಣ್ಯಾಕ್ಷಶ್ಚ ವೀರ್ಯವಾನ್ । ಸಿಂಹಿಕಾ ಚಾಭವತ್ಕನ್ಯಾ ವಿಪ್ರಚಿತ್ತೇಃ ಪರಿಗ್ರಹಃ ।। 65 ।। ಸೈಂಹಿಕೇಯಾ ಇತಿ ಖ್ಯಾತಾ ಯಸ್ಯಾಃ ಪುತ್ರಾ ಮಹಾಬಲಾಃ । ಹಿರಣ್ಯಕಶಿಪೋಃ ಪುತ್ರಾಶ್ಚತ್ವಾರಃ ಪ್ರಥಿತೌಜಸಃ ।। 66 ।। ಹ್ರಾದಶ್ಚ ಅನುಹ್ರಾದಶ್ಚ ಪ್ರಹ್ರಾದಶ್ಚೈವ ವೀರ್ಯವಾನ್ । ಸಂಹ್ರಾದಶ್ಚ ಚತುರ್ಥೋಽಭೂದ್ಧ್ರಾದಪುತ್ರೋ ಹ್ರದಸ್ತಥಾ ।। 67 ।। ಹ್ರದಸ್ಯ ಪುತ್ರೌ ದ್ವೌ ವೀರೌ ಶಿವಃ ಕಾಲಸ್ತಥೈವ ಚ । ವಿರೋಚನಶ್ಚ ಪ್ರಾಹ್ರಾದಿರ್ಬಲಿರ್ಜಜ್ಞೇ ವಿರೋಚನಾತ್ ।। 68 ।। ಬಲೇಃ ಪುತ್ರಶತಮಾಸೀದ್ಬಾಣಜ್ಯೇಷ್ಠಂ ತಪೋಧನಾಃ । ಧೃತರಾಷ್ಟ್ರಶ್ಚ ಸೂರ್ಯಶ್ಚ ಚಂದ್ರಮಾಶ್ಚಂದ್ರತಾಪನಃ ।। 69 ।। ಕುಂಭನಾಭೋ ಗರ್ದಭಾಕ್ಷಃ ಕುಕ್ಷಿರಿತ್ಯೇವಮಾದಯಃ । ಬಾಣಸ್ತೇಷಾಮತಿಬಲೋ ಜ್ಯೇಷ್ಠಃ ಪಶುಪತೇಃ ಪ್ರಿಯಃ ।। 70 ।। ಪುರಾ ಕಲ್ಪೇ ತು ಬಾಣೇನ ಪ್ರಸಾದ್ಯೋಮಾಪತಿಂ ಪ್ರಭುಮ್ । ಪಾರ್ಶ್ವತೋ ವಿಹರಿಷ್ಯಾಮಿ ಇತ್ಯೇವಂ ಯಾಚಿತೋ ವರಃ ।। 71 ।। ಹಿರಣ್ಯಾಕ್ಷಸುತಾಶ್ಚೈವ ವಿದ್ವಾಂಸಶ್ಚ ಮಹಾಬಲಾಃ । ಭರ್ಭರಃ ಶಕುನಿಶ್ಚೈವ ಭೂತಸಂತಾಪನಸ್ತಥಾ ।। 72 ।। ಮಹಾನಾಭಶ್ಚ ವಿಕ್ರಾಂತಃ ಕಾಲನಾಭಸ್ತಥೈವ ಚ

ಕಶ್ಯಪನಿಂದ ದಿತಿಯಲ್ಲಿ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರೆಂಬ ಇಬ್ಬರು ವೀರ್ಯವಾನ್ ಪುತ್ರರಾದರು ಎಂದು ಕೇಳಿದ್ದೇವೆ. ಅವಳಿಗೆ ಸಿಂಹಿಕಾ ಎಂಬ ಕನ್ಯೆಯೂ ಇದ್ದಳು. ಅವಳನ್ನು ವಿಪ್ರಚಿತ್ತಿಯು ಮದುವೆಯಾದನು. ಸೈಂಹಿಕೇಯರೆಂದು ಖ್ಯಾತರಾದ ಮಹಾಬಲರು ಸಿಂಹಿಕೆಯ ಪುತ್ರರು. ಹಿರಣ್ಯಕಶಿಪುವಿಗೆ ಹ್ರಾದ, ಅನುಹ್ರಾದ, ಪ್ರಹ್ರಾದ ಮತ್ತು ವೀರ್ಯವಾನ್ ಸಂಹ್ರಾದರೆಂಬ ಪರಾಕ್ರಮೀ ನಾಲ್ವರು ಪುತ್ರರಾದರು. ಅವರಲ್ಲಿ ನಾಲ್ಕನೆಯ ಹ್ರಾದನ ಮಗನು ಹ್ರದನು. ಹ್ರದನಿಗೆ ಶಿವ ಮತ್ತು ಕಾಲರೆಂಬ ಇಬ್ಬರು ವೀರ ಪುತ್ರರಿದ್ದರು. ಪ್ರಹ್ರಾದ-ನ ಮಗನು ವಿರೋಚನನು. ವಿರೋಚನನಿಂದ ಬಲಿಯು ಹುಟ್ಟಿದನು. ತಪೋಧನರೇ! ಬಲಿಗೆ ಧೃತರಾಷ್ಟ್ರ, ಸೂರ್ಯ, ಚಂದ್ರ, ಚಂದ್ರತಾಪನ, ಕುಂಭನಾಭ, ಗರ್ದಭಾಕ್ಷ, ಕುಕ್ಷಿ ಮೊದಲಾದ ನೂರು ಮಕ್ಕಳಿದ್ದರು. ಬಾಣನು ಅವರಲ್ಲಿ ಹಿರಿಯನು. ಮಹಾಬಲಶಾಲಿಯಾಗಿದ್ದ ಜ್ಯೇಷ್ಠ ಬಾಣನು ಪಶುಪತಿಗೆ ಪ್ರಿಯನಾಗಿದ್ದನು. ಹಿಂದಿನ ಕಲ್ಪದಲ್ಲಿ ಬಾಣನು ಪ್ರಭು ಉಮಾಪತಿಯನ್ನು ತಪಸ್ಸಿನಿಂದ ಪ್ರಸನ್ನಗೊಳಿಸಿ ಅವನ ಸಮೀಪದಲ್ಲಿಯೇ ವಿಹರಿಸುವ ವರವನ್ನು ಕೇಳಿಕೊಂಡಿದ್ದನು. ಹಿರಣ್ಯಾಕ್ಷನಿಗೆ ವಿದ್ವಾಂಸರೂ ಮಹಾಬಲಶಾಲಿಗಳೂ ಆದ ಭರ್ಭರ, ಶಕುನಿ, ಭೂತಸಂತಪನ, ಮಹಾನಾಭ, ವಿಕ್ರಾಂತ ಮತ್ತು ಕಾಲನಾಭರೆಂಬ ಮಕ್ಕಳಿದ್ದರು.

ಅಭವಂದನುಪುತ್ರಾಶ್ಚ ಶತಂ ತೀವ್ರಪರಾಕ್ರಮಾಃ ।। 73 ।। ತಪಸ್ವಿನೋ ಮಹಾವೀರ್ಯಾಃ ಪ್ರಾಧಾನ್ಯೇನ ಬ್ರವೀಮಿ ತಾನ್ । ದ್ವಿಮೂರ್ಧಾ ಶಂಕುಕರ್ಣಶ್ಚ ತಥಾ ಹಯಶಿರಾ ವಿಭುಃ ।। 74 ।। ಅಯೋಮುಖಃ ಶಂಬರಶ್ಚ ಕಪಿಲೋ ವಾಮನಸ್ತಥಾ । ಮಾರೀಚಿರ್ಮಘವಾಂಶ್ಚೈವ ಇಲ್ವಲಃ ಸ್ವಸೃಮಸ್ತಥಾ ।। 75 ।। ವಿಕ್ಷೋಭಣಶ್ಚ ಕೇತುಶ್ಚ ಕೇತುವೀರ್ಯಶತಹ್ರದೌ । ಇಂದ್ರಜಿತ್ಸರ್ವಜಿಚ್ಚೈವ ವಜ್ರನಾಭಸ್ತಥೈವ ಚ ।। 76 ।। ಏಕಚಕ್ರೋ ಮಹಾಬಾಹುಸ್ತಾರಕಶ್ಚ ಮಹಾಬಲಃ । ವೈಶ್ವಾನರಃ ಪುಲೋಮಾ ಚ ವಿದ್ರಾವಣಮಹಾಶಿರಾಃ ।। 77 ।। ಸ್ವರ್ಭಾನುರ್ವೃಷಪರ್ವಾ ಚ ವಿಪ್ರಚಿತ್ತಿಶ್ಚ ವೀರ್ಯವಾನ್ । ಸರ್ವ ಏತೇ ದನೋಃ ಪುತ್ರಾಃ ಕಶ್ಯಪಾದಭಿಜಜ್ಞಿರೇ ।। 78 ।। ವಿಪ್ರಚಿತ್ತಿಪ್ರಧಾನಾಸ್ತೇ ದಾನವಾಃ ಸುಮಹಾಬಲಾಃ । ಏತೇಷಾಂ ಪುತ್ರಪೌತ್ರಂ ತು ನ ತಚ್ಛಕ್ಯಂ ದ್ವಿಜೋತ್ತಮಾಃ ।। 79 ।। ಪ್ರಸಂಖ್ಯಾತುಂ ಬಹುತ್ವಾಚ್ಚ ಪುತ್ರಪೌತ್ರಮನಂತಕಮ್

ದನುವಿಗೆ ತೀವ್ರಪರಾಕ್ರಮಿಗಳಾದ ನೂರು ಪುತ್ರರಾದರು. ತಪಸ್ವಿಗಳೂ ಮಹಾವೀರ್ಯರೂ ಆದ ಅವರಲ್ಲಿ ಪ್ರಧಾನರಾಗಿರುವವರ ಹೆಸರುಗಳನ್ನು ಹೇಳುತ್ತೇನೆ. ದ್ವಿಮೂರ್ಧ, ಶಂಕುಕರ್ಣ, ಹಯಶಿರ, ಅಯೋಮುಖ, ಶಂಬಲ, ಕಪಿಲ, ವಾಮನ, ಮಾರೀಚಿ, ಮಘವಂತ, ಇಲ್ವಲ, ಸ್ವಸೃಮ, ವಿಕ್ಷೋಭಣ, ಕೇತು, ಕೇತುವೀರ್ಯ, ಶತಹ್ರದ, ಇಂದ್ರಜಿತು, ಸರ್ವಜಿತು, ವಜ್ರನಾಭ, ಏಕಚಕ್ರ, ತಾರಕ, ವೈಶ್ವಾನರ, ಪುಲೋಮ, ವಿದ್ರಾವಣ, ಸ್ವರ್ಭಾನು, ವೃಷಪರ್ವ, ವಿಪ್ರಚಿತ್ತಿ – ಈ ಎಲ್ಲ ಮಹಾಪರಾಕ್ರಮಿಗಳೂ ದನುವಿನಲ್ಲಿ ಹುಟ್ಟಿದ ಕಶ್ಯಪಪುತ್ರರು. ಆ ಮಹಾಬಲಶಾಲೀ ದಾನವರಲ್ಲಿ ವಿಪ್ರಚಿತ್ತಿಯು ಮುಖ್ಯನು. ದ್ವಿಜೋತ್ತಮರೇ! ಅವರ ಪುತ್ರ-ಪೌತ್ರರು ಬಹುಸಂಖ್ಯೆಗಳಲ್ಲಿ ಇರುವುದರಿಂದ ಅವರೆಲ್ಲರನ್ನೂ ಎಣಿಸಿ ಹೇಳಲು ಶಕ್ಯವಿಲ್ಲ.

ಸ್ವರ್ಭಾನೋಸ್ತು ಪ್ರಭಾ ಕನ್ಯಾ ಪುಲೋಮ್ನಸ್ತು ಶಚೀ ಸುತಾ ।। 80 ।। ಉಪದೀಪ್ತಿರ್ಹಯಶಿರಾಃ ಶರ್ಮಿಷ್ಠಾ ವಾರ್ಷಪರ್ವಣೀ । ಪುಲೋಮಾ ಕಾಲಿಕಾ ಚೈವ ವೈಶ್ವಾನರಸುತೇ ಉಭೇ ।। 81 ।। ಬಹ್ವಪತ್ಯೇ ಮಹಾಪತ್ಯೇ ಮರೀಚೇಸ್ತು ಪರಿಗ್ರಹಃ । ತಯೋಃ ಪುತ್ರಸಹಸ್ರಾಣಿ ಷಷ್ಟಿರ್ದಾನವನಂದನಾಃ ।। 82 ।। ಚತುರ್ದಶಶತಾನನ್ಯಾನ್ಹಿರಣ್ಯಪುರವಾಸಿನಃ । ಮರೀಚಿರ್ಜನಯಾಮಾಸ ಮಹತಾ ತಪಸಾನ್ವಿತಃ ।। 83 ।। ಪೌಲೋಮಾಃ ಕಾಲಕೇಯಾಶ್ಚ ದಾನವಾಸ್ತೇ ಮಹಾಬಲಾಃ । ಅವಧ್ಯಾ ದೇವತಾನಾಂ ಹಿ ಹಿರಣ್ಯಪುರವಾಸಿನಃ ।। 84 ।। ಪಿತಾಮಹಪ್ರಸಾದೇನ ಯೇ ಹತಾಃ ಸವ್ಯಸಾಚಿನಾ

ಪ್ರಭೆಯು ಸ್ವರ್ಭಾನುವಿನ ಕನ್ಯೆಯು. ಶಚಿಯು ಪುಲೋಮನ ಮಗಳು. ಉಪದೀಪ್ತಿಯು ಹಯಶಿರಸ್ಸಿನ ಮಗಳು. ವೃಷಪರ್ವನ ಮಗಳು ಶರ್ಮಿಷ್ಠೆಯು. ಪುಲೋಮಾ ಮತ್ತು ಕಾಲಿಕಾ ಇಬ್ಬರೂ ವೈಶ್ವಾನರನ ಪುತ್ರಿಯರು. ಇವರನ್ನು ಮರೀಚಿಯು ಮದುವೆಯಾದನು. ಅನೇಕ ಪುತ್ರರ ತಾಯಿಯರಾದ ಇವರಿಗೆ 60,000 ದಾನವರು ಮಕ್ಕಳಾದರು. ಮಹಾ ತಪಸ್ವಿಯಾಗಿದ್ದ ಮರೀಚಿಯು 1,400 ಹಿರಣ್ಯಪುರವಾಸಿಗಳನ್ನು ಹುಟ್ಟಿಸಿದನು. ಪೌಲೋಮರು, ಕಾಲಕೇಯರು ಮತ್ತು ಹಿರಣ್ಯಪುರವಾಸೀ ಮಹಾಬಲಶಾಲೀ ದಾನವರು ದೇವತೆಗಳಿಗೂ ಅವಧ್ಯರು. ಬ್ರಹ್ಮನ ಪ್ರಸಾದದಿಂದ ಇವರು ಸವ್ಯಸಾಚಿ ಅರ್ಜುನನಿಂದ ಹತರಾದರು.

ತತೋಽಪರೇ ಮಹಾವೀರ್ಯಾ ದಾನವಾಸ್ತ್ವತಿದಾರುಣಾಃ ।। 85 ।। ಸಿಂಹಿಕಾಯಾಮಥೋತ್ಪನ್ನಾ ವಿಪ್ರಚಿತ್ತೇಃ ಸುತಾಸ್ತಥಾ । ದೈತ್ಯದಾನವಸಂಯೋಗಾಜ್ಜಾತಾಸ್ತೀವ್ರಪರಾಕ್ರಮಾಃ ।। 86 ।। ಸೈಂಹಿಕೇಯಾ ಇತಿ ಖ್ಯಾತಾಸ್ತ್ರಯೋದಶ ಮಹಾಬಲಾಃ । ವಂಶ್ಯಃ ಶಲ್ಯಶ್ಚ ಬಲಿನೌ ನಲಶ್ಚೈವ ತಥಾ ಬಲಃ ।। 87 ।। ವಾತಾಪಿರ್ನಮುಚಿಶ್ಚೈವ ಇಲ್ವಲಃ ಸ್ವಸೃಮಸ್ತಥಾ । ಅಂಜಿಕೋ ನರಕಶ್ಚೈವ ಕಾಲನಾಭಸ್ತಥೈವ ಚ ।। 88 ।। ಸರಮಾನಸ್ತಥಾ ಚೈವ ಸ್ವರಕಲ್ಪಶ್ಚ ವೀರ್ಯವಾನ್ । ಏತೇ ವೈ ದಾನವಾಃ ಶ್ರೇಷ್ಠಾ ದನೋರ್ವಂಶವಿವರ್ಧನಾಃ ।। 89 ।। ತೇಷಾಂ ಪುತ್ರಾಶ್ಚ ಪೌತ್ರಾಶ್ಚ ಶತಶೋಽಥ ಸಹಸ್ರಶಃ । ಸಂಹ್ರಾದಸ್ಯ ತು ದೈತ್ಯಸ್ಯ ನಿವಾತಕವಚಾಃ ಕುಲೇ ।। 90 ।। ಸಮುತ್ಪನ್ನಾಃ ಸುಮಹತಾ ತಪಸಾ ಭಾವಿತಾತ್ಮನಃ । ತಿಸ್ರಃ ಕೋಟ್ಯಃ ಸುತಾಸ್ತೇಷಾಂ ಮಣಿವತ್ಯಾಂ ನಿವಾಸಿನಃ ।। 91 ।। ಅವಧ್ಯಾಸ್ತೇಽಪಿ ದೇವಾನಾಮರ್ಜುನೇನ ನಿಪಾತಿತಾಃ

ಇನ್ನೂ ಅನೇಕ ಮಹಾವೀರ್ಯವಂತ ಅತಿದಾರುಣ ದಾನವರಿದ್ದಾರೆ. ದೈತ್ಯ-ದಾನವರ ಸಂಯೋಗದಿಂದ ಸಿಂಹಿಕೆಯಲ್ಲಿ ವಿಪ್ರಚಿತ್ತಿಯಿಂದ ತೀವ್ರಪರಾಕ್ರಮೀ ಮಕ್ಕಳು ಹುಟ್ಟಿದರು. ಮಹಾಬಲಶಾಲಿಗಳಾದ ಈ ಹದಿಮೂರು ಮಂದಿ ಸೈಂಹಿಕೇಯರೆಂದು ಖ್ಯಾತರಾದರು: ವಂಶ್ಯ, ಶಲ್ಯ, ನಲ, ಬಲ, ವಾತಾಪಿ, ನಮುಚಿ, ಇಲ್ವಲ, ಸ್ವಸೃಮ, ಅಂಜಿಕ, ನರಕ, ಕಾಲನಾಭ, ಸರಮಾನ ಮತ್ತು ಸ್ವರಕಲ್ಪ. ಈ ದಾನವಶ್ರೇಷ್ಠರಿಂದ ದನುವಿನ ವಂಶವು ವೃದ್ಧಿಯಾಯಿತು. ಅವರ ಪುತ್ರ-ಪೌತ್ರರು ನೂರಾರು ಸಹಸ್ರಾರು. ದೈತ್ಯ ಭಾವಿತಾತ್ಮ ಸಂಹ್ರಾದನು ಮಹಾ ತಪಸ್ಸಿನಿಂದ ನಿವಾತಕವಚರನ್ನು ಹುಟ್ಟಿಸಿದನು. ಮಣಿಪುರಿಯಲ್ಲಿ ವಾಸಿಸುವ ಅವರಿಗೆ ಮೂರು ಕೋಟಿ ಮಕ್ಕಳು. ದೇವತೆಗಳಿಗೂ ಅವಧ್ಯರಾಗಿದ್ದ ಅವರನ್ನು ಅರ್ಜುನನು ಕೆಳಗುರುಳಿಸಿದನು.

ಷಟ್ಸುತಾಃ ಸುಮಹಾಭಾಗಾಸ್ತಾಮ್ರಾಯಾಃ ಪರಿಕೀರ್ತಿತಾಃ ।। 92 ।। ಕ್ರೌಂಚೀ ಶ್ಯೇನೀ ಚ ಭಾಸೀ ಚ ಸುಗ್ರೀವೀ ಶುಚಿಗೃಧ್ರಿಕಾ । ಕ್ರೌಂಚೀ ತು ಜನಯಾಮಾಸ ಉಲೂಕಪ್ರತ್ಯುಲೂಕಕಾನ್ ।। 93 ।। ಶ್ಯೇನೀ ಶ್ಯೇನಾಂಸ್ತಥಾ ಭಾಸೀ ಭಾಸಾನ್ಗೃಧ್ರಾಂಶ್ಚ ಗೃಧ್ರ್ಯಪಿ । ಶುಚಿರೌದಕಾನ್ಪಕ್ಷಿಗಣಾನ್ಸುಗ್ರೀವೀ ತು ದ್ವಿಜೋತ್ತಮಾಃ ।। 94 ।। ಅಶ್ವಾನುಷ್ಟ್ರಾನ್ಗರ್ದಭಾಂಶ್ಚ ತಾಮ್ರಾವಂಶಃ ಪ್ರಕೀರ್ತಿತಃ

ತಾಮ್ರೆಗೆ ಕ್ರೌಂಚೀ, ಶ್ಯೇನೀ, ಭಾಸೀ, ಸುಗ್ರೀವಿ, ಶುಚಿ ಮತ್ತು ಗೃಧ್ರಿಕಾ ಎಂಬ ಆರು ಪುತ್ರಿಯರು ಎಂದು ಹೇಳುತ್ತಾರೆ. ದ್ವಿಜೋತ್ತಮರೇ! ಕ್ರೌಂಚಿಯು ಗೂಬೆಗಳನ್ನು ಹಡೆದಳು. ಶ್ಯೇನಿಯು ಗಿಡುಗಗಳನ್ನೂ, ಭಾಸಿಯು ಭಾಸಗಳನ್ನೂ, ಗೃಧ್ರಿಯು ಹದ್ದುಗಳನ್ನೂ ಹಡೆದರು. ಶುಚಿಯು ನೀರುಹಕ್ಕಿಗಳನ್ನು ಹಡೆದಳು. ಸುಗ್ರೀವಿಯು ಕುದುರೆ, ಒಂಟೆಗಳು ಮತ್ತು ಕತ್ತೆಗಳನ್ನು ಹಡೆದಳು. ಇವರು ತಾಮ್ರಾಳ ವಂಶದಲ್ಲಿ ಹುಟ್ಟಿದವರೆಂದು ಹೇಳುತ್ತಾರೆ.

ವಿನತಾಯಾಸ್ತು ದ್ವೌ ಪುತ್ರೌ ವಿಖ್ಯಾತೌ ಗರುಡಾರುಣೌ ।। 95 ।। ಗರುಡಃ ಪತತಾಂ ಶ್ರೇಷ್ಠೋ ದಾರುಣಃ ಸ್ವೇನ ಕರ್ಮಣಾ । ಸುರಸಾಯಾಃ ಸಹಸ್ರಂ ತು ಸರ್ಪಾಣಾಮಮಿತೌಜಸಾಮ್ ।। 96 ।। ಅನೇಕಶಿರಸಾಂ ವಿಪ್ರಾಃ ಖಚರಾಣಾಂ ಮಹಾತ್ಮನಾಮ್ । ಕಾದ್ರವೇಯಾಸ್ತು ಬಲಿನಃ ಸಹಸ್ರಮಮಿತೌಜಸಃ ।। 97 ।। ಸುಪರ್ಣವಶಗಾ ನಾಗಾ ಜಜ್ಞಿರೇ ನೈಕಮಸ್ತಕಾಃ । ಯೇಷಾಂ ಪ್ರಧಾನಾಃ ಸತತಂ ಶೇಷವಾಸುಕಿತಕ್ಷಕಾಃ ।। 98 ।। ಐರಾವತೋ ಮಹಾಪದ್ಮಃ ಕಂಬಲಾಶ್ವತರಾವುಭೌ । ಏಲಾಪತ್ತ್ರಶ್ಚ ಶಂಖಶ್ಚ ಕರ್ಕೋಟಕಧನಂಜಯೌ ।। 99 ।। ಮಹಾನೀಲಮಹಾಕರ್ಣೌ ಧೃತರಾಷ್ಟ್ರಬಲಾಹಕೌ । ಕುಹರಃ ಪುಷ್ಪದಂಷ್ಟ್ರಶ್ಚ ದುರ್ಮುಖಃ ಸುಮುಖಸ್ತಥಾ ।। 100 ।। ಶಂಖಶ್ಚ ಶಂಖಪಾಲಶ್ಚ ಕಪಿಲೋ ವಾಮನಸ್ತಥಾ । ನಹುಷಃ ಶಂಖರೋಮಾ ಚ ಮಣಿರಿತ್ಯೇವಮಾದಯಃ ।। 101 ।। ತೇಷಾಂ ಪುತ್ರಾಶ್ಚ ಪೌತ್ರಾಶ್ಚ ಶತಶೋಽಥ ಸಹಸ್ರಶಃ । ಚತುರ್ದಶಸಹಸ್ರಾಣಿ ಕ್ರೂರಾಣಾಮನಿಲಾಶಿನಾಮ್ ।। 102 ।। ಗಣಂ ಕ್ರೋಧವಂಶಂ ವಿಪ್ರಾಸ್ತಸ್ಯ ಸರ್ವೇ ಚ ದಂಷ್ಟ್ರಿಣಃ

ವಿಖ್ಯಾತರಾದ ಗರುಡ ಮತ್ತು ಅರುಣರು ವಿನತೆಯ ಇಬ್ಬರು ಮಕ್ಕಳು. ಪಕ್ಷಿಗಳಲ್ಲಿಯೇ ಶ್ರೇಷ್ಠ ಗರುಡನು ತನ್ನ ಕರ್ಮಗಳಿಂದ ದಾರುಣನು. ವಿಪ್ರರೇ! ಅನೇಕ ಹೆಡೆಗಳುಳ್ಳ ಆಕಾಶದಲ್ಲಿ ಸಂಚರಿಸುವ ಮಹಾತ್ಮಾ ಅಮಿತ ತೇಜಸ್ವೀ ಸಹಸ್ರಾರು ಸರ್ಪಗಳು ಸುರಸೆಯ ಮಕ್ಕಳು. ಸತತವೂ ಗರುಡನ ವಶದಲ್ಲಿರುವ, ಒಂದೇ ಹೆಡೆಗಳಿಲ್ಲದ, ಬಲಶಾಲೀ ಅಮಿತತೇಜಸ್ವೀ ಸಹಸ್ರಾರು ನಾಗಗಳು ಕದ್ರುವಿಗೆ ಹುಟ್ಟಿದ ಮಕ್ಕಳು. ಇವರಲ್ಲಿ ಪ್ರಧಾನರು: ಶೇಷ, ವಾಸುಕಿ, ತಕ್ಷಕ, ಐರಾವತ, ಮಹಾಪದ್ಮ, ಕಂಬಲ, ಅಶ್ವತರ, ಏಲಾಪತ್ರ, ಶಂಖ, ಕರ್ಕೋಟಕ, ಧನಂಜಯ, ಮಹಾನೀಲ, ಮಹಾಕರ್ಣ, ಧೃತರಾಷ್ಟ್ರ, ಬಲಾಹಕ, ಕುಹರ, ಪುಷ್ಪದಂಷ್ಟ್ರ, ದುರ್ಮುಖ, ಸುಮುಖ, ಶಂಖ, ಶಂಖಪಾಲ, ಕಪಿಲ, ವಾಮನ, ನಹುಷ, ಶಂಖರೋಮಾ ಮತ್ತು ಮಣಿ ಮೊದಲಾದವರು. ವಿಪ್ರರೇ! ಅವರ ಪುತ್ರರು-ಪೌತ್ರರು ನೂರಾರು, ಸಹಸ್ರಾರು. ಈ ಕ್ರೂರ ಮತ್ತು ಬೆಂಕಿಯನ್ನು ಕಾರುವ, ಕ್ರೋಧವಶ ವಿಷಮಯ ಹಲ್ಲುಗಳಿರುವ ಸರ್ಪಗಳ ಗಣಗಳು ಒಟ್ಟು 14,000.

ಸ್ಥಲಜಾಃ ಪಕ್ಷಿಣೋಽಬ್ಜಾಶ್ಚ ಧರಾಯಾಃ ಪ್ರಸವಾಃ ಸ್ಮೃತಾಃ ।। 103 ।। ಗಾಸ್ತು ವೈ ಜನಯಾಮಾಸ ಸುರಭಿರ್ಮಹಿಷೀಸ್ತಥಾ । ಇರಾ ವೃಕ್ಷಲತಾ ವಲ್ಲೀಸ್ತೃಣಜಾತೀಶ್ಚ ಸರ್ವಶಃ ।। 104 ।। ಖಸಾ ತು ಯಕ್ಷರಕ್ಷಾಂಸಿ ಮುನಿರಪ್ಸರಸಸ್ತಥಾ । ಅರಿಷ್ಟಾ ತು ಮಹಾಸಿದ್ಧಾ ಗಂಧರ್ವಾನಮಿತೌಜಸಃ ।। 105 ।। ಏತೇ ಕಶ್ಯಪದಾಯಾದಾಃ ಕೀರ್ತಿತಾಃ ಸ್ಥಾಣುಜಂಗಮಾಃ । ಯೇಷಾಂ ಪುತ್ರಾಶ್ಚ ಪೌತ್ರಾಶ್ಚ ಶತಶೋಽಥ ಸಹಸ್ರಶಃ ।। 106 ।।

ನೆಲದ ಮೇಲೆ ಮತ್ತು ನೀರಿನಲ್ಲಿ ವಾಸಿಸುವ ಪಕ್ಷಿಗಳೆಲ್ಲವೂ ಧರೆಯಿಂದ ಹುಟ್ಟಿದವೆಂದು ಹೇಳುತ್ತಾರೆ. ಗೋವುಗಳು ಮತ್ತು ಎಮ್ಮೆಗಳು ಸುರಭಿಯಿಂದ ಹುಟ್ಟಿದವು. ಇರೆಯು ಎಲ್ಲ ವೃಕ್ಷ-ಲತೆ-ಹುಲ್ಲುಗಳನ್ನು ಸೃಷ್ಟಿಸಿದಳು. ಖಸೆಯು ಯಕ್ಷ-ರಾಕ್ಷಸರನ್ನೂ, ಮುನಿಯು ಅಪ್ಸರೆಯರನ್ನೂ, ಅರಿಷ್ಟೆಯು ಮಹಾಸಿದ್ಧರನ್ನೂ ಅಮಿತೌಜಸ ಗಂಧರ್ವರನ್ನೂ ಹಡೆದರು. ಹಿಂದೆ ಹೇಳಿದ ಸ್ಥಾವರ-ಜಂಗಮಗಳೆಲ್ಲವೂ ಕಶ್ಯಪನ ಸಂತತಿಗಳು. ಇವರ ಪುತ್ರ-ಪೌತ್ರರು ನೂರಾರು ಸಹಸ್ರಾರು.

ಏಷ ಮನ್ವಂತರೇ ವಿಪ್ರಾಃ ಸರ್ಗಃ ಸ್ವಾರೋಚಿಷೇ ಸ್ಮೃತಃ । ವೈವಸ್ವತೇಽತಿಮಹತಿ ವಾರುಣೇ ವಿತತೇ ಕ್ರತೌ ।। 107 ।। ಜುಹ್ವಾನಸ್ಯ ಬ್ರಹ್ಮಣೋ ವೈ ಪ್ರಜಾಸರ್ಗ ಇಹೋಚ್ಯತೇ । ಪೂರ್ವಂ ಯತ್ರ ಸಮುತ್ಪನ್ನಾನ್ಬ್ರಹ್ಮರ್ಷೀನ್ಸಪ್ತ ಮಾನಸಾನ್ ।। 108 ।। ಪುತ್ರತ್ವೇ ಕಲ್ಪಯಾಮಾಸ ಸ್ವಯಮೇವ ಪಿತಾಮಹಃ । ತತೋ ವಿರೋಧೇ ದೇವಾನಾಂ ದಾನವಾನಾಂ ಚ ಭೋ ದ್ವಿಜಾಃ ।। 109 ।। ದಿತಿರ್ವಿನಷ್ಟಪುತ್ರಾ ವೈ ತೋಷಯಾಮಾಸ ಕಶ್ಯಪಮ್ । ಕಶ್ಯಪಸ್ತು ಪ್ರಸನ್ನಾತ್ಮಾ ಸಮ್ಯಗಾರಾಧಿತಸ್ತಯಾ ।। 110 ।। ವರೇಣ ಚ್ಛಂದಯಾಮಾಸ ಸಾ ಚ ವವ್ರೇ ವರಂ ತದಾ । ಪುತ್ರಮಿಂದ್ರವಧಾರ್ಥಾಯ ಸಮರ್ಥಮಮಿತೌಜಸಮ್ ।। 111 ।। ಸ ಚ ತಸ್ಮೈ ವರಂ ಪ್ರಾದಾತ್ಪ್ರಾರ್ಥಿತಃ ಸುಮಹಾತಪಾಃ । ದತ್ತ್ವಾ ಚ ವರಮತ್ಯುಗ್ರೋ ಮಾರೀಚಃ ಸಮಭಾಷತ ।। 112 ।। ಇಂದ್ರಂ ಪುತ್ರೋ ನಿಹಂತಾ ತೇ ಗರ್ಭಂ ವೈ ಶರದಾಂ ಶತಮ್ । ಯದಿ ಧಾರಯಸೇ ಶೌಚ-ತತ್ಪರಾ ವ್ರತಮಾಸ್ಥಿತಾ ।। 113 ।। ತಥೇತ್ಯಭಿಹಿತೋ ಭರ್ತಾ ತಯಾ ದೇವ್ಯಾ ಮಹಾತಪಾಃ । ಧಾರಯಾಮಾಸ ಗರ್ಭಂ ತು ಶುಚಿಃ ಸಾ ಮುನಿಸತ್ತಮಾಃ ।। 114 ।। ತತೋಽಭ್ಯುಪಾಗಮದ್ದಿತ್ಯಾಂ ಗರ್ಭಮಾಧಾಯ ಕಶ್ಯಪಃ । ರೋಧಯನ್ವೈ ಗಣಂ ಶ್ರೇಷ್ಠಂ ದೇವಾನಾಮಮಿತೌಜಸಮ್ ।। 115 ।। ತೇಜಃ ಸಂಹೃತ್ಯ ದುರ್ಧರ್ಷಮವಧ್ಯಮಮರೈರಪಿ । ಜಗಾಮ ಪರ್ವತಾಯೈವ ತಪಸೇ ಸಂಶಿತವ್ರತಾ ।। 116 ।।

ವಿಪ್ರರೇ! ಈ ಸೃಷ್ಟಿಯು ಸ್ವಾರೋಚಿಷ ಮನ್ವಂತರದಲ್ಲಿ ನಡೆದುದು ಎಂದು ಹೇಳುತ್ತಾರೆ. ಮುಂದೆ ವೈವಸ್ವತ ಮನ್ವಂತರದಲ್ಲಿ ವರುಣನ ಯಜ್ಞದಲ್ಲಿ ಹೋತೃವಾದ ಬ್ರಹ್ಮನು ಮಾಡಿದ ಪ್ರಜಾಸೃಷ್ಟಿಯನ್ನು ಈಗ ಹೇಳುತ್ತೇನೆ. ಈ ಮನ್ವಂತರದಲ್ಲಿ ಸ್ವಯಂ ಪಿತಾಹಮ ಬ್ರಹ್ಮನು ತನಗೆ ಮೊದಲು ಜನಿಸಿದ್ದ ಮಾನಸ ಬ್ರಹ್ಮರ್ಷಿಗಳನ್ನೇ ಪುತ್ರರನ್ನಾಗಿ ಕಲ್ಪಿಸಿಕೊಂಡನು. ಭೋ ದ್ವಿಜರೇ! ನಂತರ ದೇವತೆಗಳು ಮತ್ತು ದಾನವರ ನಡುವೆ ವಿರೋಧವುಂಟಾಗಲು ಪುತ್ರರನ್ನು ಕಳೆದುಕೊಂಡ ದಿತಿಯು ಕಶ್ಯಪನನ್ನು ಪ್ರಸನ್ನಗೊಳಿಸಿದಳು. ಅವಳಿಂದ ಚೆನ್ನಾಗಿ ಆರಾಧಿಸಲ್ಪಟ್ಟ ಕಶ್ಯಪನು ಪ್ರಸನ್ನನಾಗಿ ವರವನ್ನು ಕೇಳು ಎಂದನು. ಆಗ ಅವಳು ಇಂದ್ರನ ವಧೆಗೆ ಸಮರ್ಥನಾದ ಅಮಿತೌಜಸ ಪುತ್ರನನ್ನು ವರವಾಗಿ ಬೇಡಿದಳು. ಮಹಾತಪಸ್ವಿ ಮಾರೀಚ ಕಶ್ಯಪನು ಅವಳಿಗೆ ಕೇಳಿದ ಆ ಅತ್ಯುಗ್ರ ವರವನ್ನಿತ್ತು “ಪರಿಶುದ್ಧಳಾಗಿದ್ದು ನಿಯಮದಿಂದ ನೂರು ವರ್ಷಗಳ ವರೆಗೆ ಈ ಗರ್ಭವನ್ನು ಧರಿಸಿದರೆ ಇಂದ್ರನನ್ನು ಕೊಲ್ಲುವಂತಹ ಮಗನು ಜನಿಸುತ್ತಾನೆ” ಎಂದು ಹೇಳಿದನು. ಮುನಿಸತ್ತಮರೇ! ಹಾಗೆಯೇ ಆಗಲೆಂದು ಪತಿಗೆ ಹೇಳಿ ಮಹಾತಪಸ್ವೀ ದೇವಿಯು ಶುಚಿಯಾಗಿದ್ದುಕೊಂಡೇ ಆ ಗರ್ಭವನ್ನು ಧರಿಸಿದಳು. ಆಗ ಸಂಶಿತವ್ರತ ಕಶ್ಯಪನು ಅಮಿತೌಜಸ ಶ್ರೇಷ್ಠ ದೇವತೆಗಳ ಗಣವನ್ನು ವಿರೋಧಿಸುವ ಅಮರರಿಗೂ ಅವಧ್ಯವಾದ ಮತ್ತು ಸಹಿಸಲಸಾಧ್ಯವಾದ ತೇಜಸ್ಸನ್ನು ತೆಗೆದು ದಿತಿಯ ಗರ್ಭದಲ್ಲಿರಿಸಿ ತಪಸ್ಸಿಗಾಗಿ ಪರ್ವತಕ್ಕೆ ಹೊರಟುಹೋದನು.

ತಸ್ಯಾಶ್ಚೈವಾಂತರಪ್ರೇಪ್ಸುರಭವತ್ಪಾಕಶಾಸನಃ । ಜಾತೇ ವರ್ಷಶತೇ ಚಾಸ್ಯಾ ದದರ್ಶಾಂತರಮಚ್ಯುತಃ ।। 117 ।। ಅಕೃತ್ವಾ ಪಾದಯೋಃ ಶೌಚಂ ದಿತಿಃ ಶಯನಮಾವಿಶತ್ । ನಿದ್ರಾಂ ಚಾಹಾರಯಾಮಾಸ ತಸ್ಯಾಂ ಕುಕ್ಷಿಂ ಪ್ರವಿಶ್ಯ ಸಃ ।। 118 ।। ವಜ್ರಪಾಣಿಸ್ತತೋ ಗರ್ಭಂ ಸಪ್ತಧಾ ತಂ ನ್ಯಕೃಂತಯತ್ । ಸ ಪಾಟ್ಯಮಾನೋ ಗರ್ಭೋಽಥ ವಜ್ರೇಣ ಪ್ರರುರೋದ ಹ ।। 119 ।। ಮಾ ರೋದೀರಿತಿ ತಂ ಶಕ್ರಃ ಪುನಃ ಪುನರಥಾಬ್ರವೀತ್ । ಸೋಽಭವತ್ಸಪ್ತಧಾ ಗರ್ಭಸ್ತಮಿಂದ್ರೋ ರುಷಿತಃ ಪುನಃ ।। 120 ।। ಏಕೈಕಂ ಸಪ್ತಧಾ ಚಕ್ರೇ ವಜ್ರೇಣೈವಾರಿಕರ್ಷಣಃ । ಮರುತೋ ನಾಮ ತೇ ದೇವಾ ಬಭೂವುರ್ದ್ವಿಜಸತ್ತಮಾಃ ।। 121 ।। ಯಥೋಕ್ತಂ ವೈ ಮಘವತಾ ತಥೈವ ಮರುತೋಽಭವನ್ । ದೇವಾಶ್ಚೈಕೋನಪಂಚಾಶತ್ಸಹಾಯಾ ವಜ್ರಪಾಣಿನಃ ।। 122 ।।

ಪಾಕಶಾಸನ ಅಚ್ಯುತ ಇಂದ್ರನು ಆ ಗರ್ಭವನ್ನು ನಾಶಮಾಡಲು ಅನುಕೂಲವಾದ ಸಮಯವನ್ನು ಕಾಯುತ್ತಿದ್ದನು. ನೂರು ವರ್ಷಗಳು ಕಳೆಯಲು ಅವನಿಗೆ ಅನುಕೂಲ ಸಮಯವು ದೊರಕಿತು. ಕಾಲುಗಳನ್ನು ತೊಳೆದುಕೊಳ್ಳದೇ ದಿತಿಯು ಹಾಸಿಗೆಯಲ್ಲಿ ಮಲಗಿ ನಿದ್ರಿಸಿದಳು. ಆಗ ಇಂದ್ರನು ಅವಳ ಉದರವನ್ನು ಪ್ರವೇಶಿಸಿದನು. ವಜ್ರಪಾಣಿಯು ಆ ಗರ್ಭವನ್ನು ಏಳು ಭಾಗವಾಗಿ ಕತ್ತರಿಸಿದನು. ವಜ್ರದಿಂದ ಅವನು ಕತ್ತರಿಸುತ್ತಿದ್ದಾಗ ಆ ಗರ್ಭವು ಜೋರಾಗಿ ಅಳತೊಡಗಿತು. ಆಗ ಇಂದ್ರನು “ಮಾ ರೋದಿಃ” ಎಂದು ಪುನಃ ಪುನಃ ಹೇಳಿದರೂ ಗರ್ಭವು ಅಳುತ್ತಲೇ ಇದ್ದುದರಿಂದ ಕೋಪದಿಂದ ಅವನು ಆ ಏಳುಭಾಗಗಳಲ್ಲಿ ಪ್ರತಿಯೊಂದನ್ನೂ ಮತ್ತೆ ಏಳೇಳು ಭಾಗಗಳನ್ನಾಗಿ ಕತ್ತರಿಸಿದನು. ರೋದಿಸುತ್ತಿದ್ದಾಗ ಮಾ ರುದಃ ಎಂದು ಮಘವತ ಇಂದ್ರನು ಹೇಳಿದುದರಿಂದ ಅವ್ರ “ಮರುತ್ತ”ರಾದರು. ಈ ನವತ್ತೊಂಬತ್ತು ಮರುತರೂ ದೇವತೆಗಳಾಗಿ ವಜ್ರಪಾಣಿಯ ಸಹಾಯಕರಾದರು.

ತೇಷಾಮೇವಂ ಪ್ರವೃತ್ತಾನಾಂ ಭೂತಾನಾಂ ದ್ವಿಜಸತ್ತಮಾಃ । ರೋಚಯನ್ವೈ ಗಣಶ್ರೇಷ್ಠಾಂದೇವಾನಾಮಮಿತೌಜಸಾಮ್ ।। 123 ।। ನಿಕಾಯೇಷು ನಿಕಾಯೇಷು ಹರಿಃ ಪ್ರಾದಾತ್ಪ್ರಜಾಪತೀನ್ । ಕ್ರಮಶಸ್ತಾನಿ ರಾಜ್ಯಾನಿ ಪೃಥುಪೂರ್ವಾಣಿ ಭೋ ದ್ವಿಜಾಃ ।। 124 ।। ಸ ಹರಿಃ ಪುರುಷೋ ವೀರಃ ಕೃಷ್ಣೋ ಜಿಷ್ಣುಃ ಪ್ರಜಾಪತಿಃ । ಪರ್ಜನ್ಯಸ್ತಪನೋಽನಂತಸ್ತಸ್ಯ ಸರ್ವಮಿದಂ ಜಗತ್ ।। 125 ।। ಭೂತಸರ್ಗಮಿಮಂ ಸಮ್ಯಗ್ಜಾನತೋ ದ್ವಿಜಸತ್ತಮಾಃ । ನಾವೃತ್ತಿಭಯಮಸ್ತೀಹ ಪರಲೋಕಭಯಂ ಕುತಃ ।। 126 ।।

ದ್ವಿಜಸತ್ತಮರೇ! ಹೀಗೆ ಜನಿಸಿದ ಪ್ರಜೆಗಳು ಮತ್ತು ದೇವತೆಗಳೆಲ್ಲರನ್ನೂ ಒಂದೊಂದು ಗಣಗಳನ್ನಾಗಿ ಮಾಡಿ ಹರಿಯು ಒಂದೊಂದು ಗಣಕ್ಕೂ ಒಬ್ಬೊಬ್ಬ ಪ್ರಜಾಪತಿಯನ್ನು ನಿಯಮಿಸಿದನು. ಮುಂದೆ ಅವರು ರಾಜ್ಯಗಳನ್ನು ಕಟ್ಟಿಕೊಂಡು ಆಳತೊಡಗಿದರು. ಅವರಲ್ಲಿ ಮನು, ಪೃಥು ಮೊದಲಾದವರು ಮುಖ್ಯರು. ಆ ಪುರುಷ ಹರಿ ವೀರ ಕೃಷ್ಣ ಜಿಷ್ಣು ಪ್ರಜಾಪತಿ ಪರ್ಜನ್ಯ ತಪನ ಅನಂತನು ಈ ಜಗತ್ತೆಲ್ಲವನ್ನೂ ಆವರಿಸಿರುವನು. ದ್ವಿಜಸತ್ತಮರೇ! ಈ ಭೂತಸೃಷ್ಟಿಯನ್ನು ಚೆನ್ನಾಗಿ ತಿಳಿದುಕೊಂಡವರಿಗೆ ಇಲ್ಲಿ ಪುನಃ ಬರುವ ಭಯವಿರುವುದಿಲ್ಲ. ಇನ್ನು ಪರಲೋಕದ ಭಯವು ಎಲ್ಲಿಂದ?”


ಇತಿ ಶ್ರೀಮಹಾಪುರಾಣೇ ಆದಿಬ್ರಹ್ಮೇ ದೇವಾಸುರಾಣಾಮುತ್ಪತ್ತಿಕಥನಂ ನಾಮ ತೃತೀಯೋಽಧ್ಯಾಯಃ ।।

Leave a Reply

Your email address will not be published. Required fields are marked *