ಶ್ರೀಬ್ರಹ್ಮಮಹಾಪುರಾಣ: ಅಧ್ಯಾಯ 2 ಸೃಷ್ಟಿಕಥನವರ್ಣನಮ್
ಲೋಮಹರ್ಷಣ ಉವಾಚ । ಸ ಸೃಷ್ಟ್ವಾ ತು ಪ್ರಜಾಸ್ತ್ವೇವಮಾಪವೋ ವೈ ಪ್ರಜಾಪತಿಃ । ಲೇಭೇ ವೈ ಪುರುಷಃ ಪತ್ನೀಂ ಶತರೂಪಾಮಯೋನಿಜಾಮ್ ।। 1 ।। ಆಪವಸ್ಯ ಮಹಿಮ್ನಾ ತು ದಿವಮಾವೃತ್ಯ ತಿಷ್ಠತಃ । ಧರ್ಮೇಣೈವ ಮುನಿಶ್ರೇಷ್ಠಾಃ ಶತರೂಪಾ ವ್ಯಜಾಯತ ।। 2 ।। ಸಾ ತು ವರ್ಷಾಯುತಂ ತಪ್ತ್ವಾ ತಪಃ ಪರಮದುಶ್ಚರಮ್ । ಭರ್ತಾರಂ ದೀಪ್ತತಪಸಂ ಪುರುಷಂ ಪ್ರತ್ಯಪದ್ಯತ ।। 3 ।। ಸ ವೈ ಸ್ವಾಯಂಭುವೋ ವಿಪ್ರಾಃ ಪುರುಷೋ ಮನುರುಚ್ಯತೇ । ತಸ್ಯೈಕಸಪ್ತತಿಯುಗಂ ಮನ್ವಂತರಮಿಹೋಚ್ಯತೇ ।। 4 ।।
ಲೋಮಹರ್ಷಣನು ಹೇಳಿದನು: “ಪ್ರಜೇಶ್ವರ ಮನುವಿಗೆ “ಆಪವ” ಎಂಬ ಹೆಸರೂ ಇದೆ. ಆ ಮನುವು ಅಯೋನಿಜೆಯಾದ ಶತರೂಪಾ ಎನ್ನುವವಳನ್ನು ಮದುವೆಯಾದನು. ಆ ಮನುವಿನ ಧರ್ಮದ ಮಹಿಮೆಯು ಸ್ವರ್ಗವನ್ನೂ ವ್ಯಾಪಿಸಿತ್ತು. ಇಂತಹ ಮನುವಿನ ಧರ್ಮಮಹಿಮೆಯಿಂದಲೇ ಶತರೂಪಾದೇವಿಯು ಜನಿಸಿದಳು. ಆ ಶತರೂಪೆಯು ನೂರು ವರ್ಷಗಳವರೆಗೆ ಘೋರ ತಪಸ್ಸನ್ನಾಚರಿಸಿ ಮಹಾತೇಜಸ್ವೀ ಪುರುಷನೋರ್ವನನ್ನು ಪತಿಯನ್ನಾಗಿ ಪಡೆದಳು. ಆ ಪುರುಷನೇ ಸ್ವಾಯಂಭುವ ಮನುವು. ಒಂದೊಂದು ಮನ್ವಂತರದಲ್ಲಿ ಎಪ್ಪತ್ತೊಂದು ಮಹಾಯುಗಗಳಿವೆ. ಇಂತಹ ಹದಿನಾಲ್ಕು ಮನ್ವಂತರಗಳಿವೆ.
ವೈರಾಜಾತ್ಪುರುಷಾದ್ವೀರಂ ಶತರೂಪಾ ವ್ಯಜಾಯತ । ಪ್ರಿಯವ್ರತೋತ್ತಾನಪಾದೌ ವೀರಾತ್ಕಾಮ್ಯಾ ವ್ಯಜಾಯತ ।। 5 ।। ಕಾಮ್ಯಾ ನಾಮ ಸುತಾ ಶ್ರೇಷ್ಠಾ ಕರ್ದಮಸ್ಯ ಪ್ರಜಾಪತೇಃ । ಕಾಮ್ಯಾಪುತ್ರಾಸ್ತು ಚತ್ವಾರಃ ಸಮ್ರಾಟ್ಕುಕ್ಷಿರ್ವಿರಾಟ್ಪ್ರಭುಃ ।। 6 ।।
ವಿರಾಟ್ಪುರುಷನ ಮಗ ಮನುವಿನಿಂದ ಶತಾರೂಪೆಯು ವೀರನೆಂಬ ಕುಮಾರನ್ನು ಹಡೆದಳು. ಆ ಕುಮಾರನಿಂದ ಕಾಮ್ಯೆಯು ಪ್ರಿಯವ್ರತ-ಉತ್ತಾನಪಾದರೆಂಬ ಇಬ್ಬರು ಮಕ್ಕಳನ್ನು ಹಡೆದಳು. ಕಾಮ್ಯೆಯು ಕರ್ದಮನೆಂಬ ಪ್ರಜಾಪತಿಯ ಹಿರಿಯ ಮಗಳು. ಅವಳಿಂದ ಸಾಮ್ರಾಟ್, ಕುಕ್ಷಿ, ವಿರಾಟ ಮತ್ತು ಪ್ರಭುಗಳೆಂಬ ನಾಲ್ವರು ಮಕ್ಕಳು ಜನಿಸಿದರು.
ಉತ್ತಾನಪಾದಂ ಜಗ್ರಾಹ ಪುತ್ರಮತ್ರಿಃ ಪ್ರಜಾಪತಿಃ । ಉತ್ತಾನಪಾದಾಚ್ಚತುರಃ ಸೂನೃತಾ ಸುಷುವೇ ಸುತಾನ್ ।। 7 ।। ಧರ್ಮಸ್ಯ ಕನ್ಯಾ ಸುಶ್ರೋಣೀ ಸೂನೃತಾ ನಾಮ ವಿಶ್ರುತಾ । ಉತ್ಪನ್ನಾ ವಾಜಿಮೇಧೇನ ಧ್ರುವಸ್ಯ ಜನನೀ ಶುಭಾ ।। 8 ।। ಧ್ರುವಂ ಚ ಕೀರ್ತಿಮಂತಂ ಚ ಆಯುಷ್ಮಂತಂ ವಸುಂ ತಥಾ । ಉತ್ತಾನಪಾದೋಽಜನಯತ್ಸೂನೃತಾಯಾಂ ಪ್ರಜಾಪತಿಃ ।। 9 ।। ಧ್ರುವೋ ವರ್ಷಸಹಸ್ರಾಣಿ ತ್ರೀಣಿ ದಿವ್ಯಾನಿ ಭೋ ದ್ವಿಜಾಃ । ತಪಸ್ತೇಪೇ ಮಹಾಭಾಗಃ ಪ್ರಾರ್ಥಯನ್ಸುಮಹದ್ಯಶಃ ।। 10 ।। ತಸ್ಮೈ ಬ್ರಹ್ಮಾ ದದೌ ಪ್ರೀತಃ ಸ್ಥಾನಮಾತ್ಮಸಮಂ ಪ್ರಭುಃ । ಅಚಲಂ ಚೈವ ಪುರತಃ ಸಪ್ತರ್ಷೀಣಾಂ ಪ್ರಜಾಪತಿಃ ।। 11 ।। ತಸ್ಯಾಭಿಮಾನಮೃದ್ಧಿಂ ಚ ಮಹಿಮಾನಂ ನಿರೀಕ್ಷ್ಯ ಚ । ದೇವಾಸುರಾಣಾಮಾಚಾರ್ಯಃ ಶ್ಲೋಕಂ ಪ್ರಾಗುಶನಾ ಜಗೌ ।। 12 ।। ಅಹೋಽಸ್ಯ ತಪಸೋ ವೀರ್ಯಮಹೋ ಶ್ರುತಮಹೋಽದ್ಭುತಮ್ । ಯಮದ್ಯ ಪುರತಃ ಕೃತ್ವಾ ಧ್ರುವಂ ಸಪ್ತರ್ಷಯಃ ಸ್ಥಿತಾಃ ।। 13 ।।
ಉತ್ತಾನಪಾದನನ್ನು ಅತ್ರಿ ಪ್ರಜಾಪತಿಯು ತನ್ನ ಮಗನಾಗಿ ದತ್ತು ತೆಗೆದುಕೊಂಡನು. ಈ ಉತ್ತಾನಪಾದನಿಂದ ಸೂನೃತೆಯು ನಾಲ್ಕು ಮಕ್ಕಳನ್ನು ಹಡೆದಳು. ಸೂನೃತೆಯು ಧರ್ಮನ ಮಗಳು. ಅಶ್ವಮೇಧಯಾಗವನ್ನು ಮಾಡಿ ಧರ್ಮನು ಆ ಪುತ್ರಿಯನ್ನು ಪಡೆದಿದ್ದನು. ಅವಳೇ ಪ್ರಸಿದ್ಧ ಧ್ರುವಕುಮಾರನ ಮಾತೆಯು. ಪುರಾಣಗಳಲ್ಲಿ ಅವಳಿಗೆ ಸುನೀತಿ ಎಂಬ ಹೆಸರೂ ಇದೆ. ಉತ್ತಾನಪಾದನು ಸೂನೃತೆಯಲ್ಲಿ ಧ್ರುವ, ಕೀರ್ತಿಮಂತ, ಆಯುಷ್ಮಂತ ಮತ್ತು ವಸು ಎಂಬ ನಾಲ್ವರು ಮಕ್ಕಳನ್ನು ಪಡೆದನು. ಭೋ ದ್ವಿಜರೇ! ಮಹಾಭಾಗ ಧ್ರುವನು ಮೂರುಸಾವಿರ ದಿವ್ಯ ವರ್ಷಗಳ ವರೆಗೆ ಮಹಾಯಶಸ್ಸನ್ನು ಪ್ರಾರ್ಥಿಸಿ ತಪಸ್ಸನ್ನು ತಪಿಸಿದನು. ಪ್ರಜಾಪತಿ ಪ್ರಭುವು ಪ್ರೀತನಾಗಿ ಅವನಿಗೆ ತನಗೆ ಸಮನಾದ ಅಚಲ ಸ್ಥಾನವನ್ನು ಸಪ್ತರ್ಷಿಗಳ ಮೇಲ್ಭಾಗದಲ್ಲಿ ಕೊಟ್ಟನು. ಧ್ರುವನ ವೃದ್ಧಿ ಮತ್ತು ಮಹಿಮೆಗಳನ್ನು ನೋಡಿ ದೇವಾಸುರರ ಆಚಾರ್ಯ ಉಶನನು ಅಭಿಮಾನದಿಂದ ಹೀಗೆ ಹಾಡಿದನು: “ಅಹೋ! ಇವನ ತಪಸ್ಸೇನು! ಅಹೋ ಇವನ ವೀರ್ಯವೇನು! ಅಹೋ ಅದ್ಭುತವೆಂದು ಕೇಳಿದ್ದೇನೆ. ಸಪ್ತರ್ಷಿಗಳೂ ಕೂಡ ಈ ಧ್ರುವನನ್ನು ಮುಂದಿಟ್ಟುಕೊಂಡಿರುವರು!”
ತಸ್ಮಾಚ್ಛ್ಲಿಷ್ಟಿಂ ಚ ಭವ್ಯಂ ಚ ಧ್ರುವಾಚ್ಛಂಭುರ್ವ್ಯಜಾಯತ । ಶ್ಲಿಷ್ಟೇರಾಧತ್ತ ಸುಚ್ಛಾಯಾ ಪಂಚ ಪುತ್ರಾನಕಲ್ಮಷಾನ್ ।। 14 ।। ರಿಪುಂ ರಿಪುಂಜಯಂ ವೀರಂ ವೃಕಲಂ ವೃಕತೇಜಸಮ್ । ರಿಪೋರಾಧತ್ತ ಬೃಹತೀ ಚಕ್ಷುಷಂ ಸರ್ವತೇಜಸಮ್ ।। 15 ।। ಅಜೀಜನತ್ಪುಷ್ಕರಿಣ್ಯಾಂ ವೈರಿಣ್ಯಾಂ ಚಾಕ್ಷುಷಂ ಮನುಮ್ । ಪ್ರಜಾಪತೇರಾತ್ಮಜಾಯಾಂ ವೀರಣ್ಯಸ್ಯ ಮಹಾತ್ಮನಃ ।। 16 ।। ಮನೋರಜಾಯಂತ ದಶ ನಡ್ವಲಾಯಾಂ ಮಹೌಜಸಃ । ಕನ್ಯಾಯಾಂ ಮುನಿಶಾರ್ದೂಲಾ ವೈರಾಜಸ್ಯ ಪ್ರಜಾಪತೇಃ ।। 17 ।। ಕುತ್ಸಃ ಪುರುಃ ಶತದ್ಯುಮ್ನಸ್ತಪಸ್ವೀ ಸತ್ಯವಾಕ್ಕವಿಃ । ಅಗ್ನಿಷ್ಟುದತಿರಾತ್ರಶ್ಚ ಸುದ್ಯುಮ್ನಶ್ಚೇತಿ ತೇ ನವ ।। 18 ।। ಅಭಿಮನ್ಯುಶ್ಚ ದಶಮೋ ನಡ್ವಲಾಯಾಂ ಮಹೌಜಸಃ ।
ಧ್ರುವನಿಂದ ಶಂಭುವು ಶ್ಲಿಷ್ಟಿ ಮತ್ತು ಭವ್ಯರೆಂಬ ಇಬ್ಬರು ಮಕ್ಕಳನ್ನು ಪಡೆದಳು. ಶ್ಲಿಷ್ಟಿಯಿಂದ ಸುಚ್ಛಾಯೆಯು ಐದು ಅಕಲ್ಮಷ ಪುತ್ರರನ್ನು ಪಡೆದಳು: ರಿಪು, ರುಪುಂಜಯ, ವೀರ, ವೃಕಲ ಮತ್ತು ವೃಕತೇಜಸ. ರಿಪುವಿನಿಂದ ಬೃಹತಿಯು ಸರ್ವತೇಜಸ್ವೀ ಚಕ್ಷುಷನನ್ನು ಪಡೆದಳು. ಚಕ್ಷುಷನು ಮಹಾತ್ಮಾ ವೀರಣ ಪ್ರಜಾಪತಿಯ ಮಗಳಾದ ಪುಷ್ಕರಿಣಿಯಲ್ಲಿ ಚಾಕ್ಷುಷ ಮನುವನ್ನು ಪಡೆದನು. ಮುನಿಶಾರ್ದೂಲರೇ! ಮಹೌಜಸ ಚಾಕ್ಷುಷ ಮನುವು ವೈರಾಜ ಪ್ರಜಾಪತಿಯ ಮಗಳು ನಡ್ವಲೆಯಿಂದ ಹತ್ತು ಮಕ್ಕಳನ್ನು ಪಡೆದನು: ಕುತ್ಸ, ಪುರು, ಶತದ್ಯುಮ್ನ, ತಪಸ್ವೀ, ಸತ್ಯವಾಕ್ವ, ಕವಿ, ಅಗ್ನಿಷ್ಟುತ್, ಅತಿರಾತ್ರ, ಸುದ್ಯುಮ್ನ, ಮತ್ತು ಅಭಿಮನ್ಯು. ಇವರು ನಡ್ವಲೆಯ ಮಹೌಜಸ ಮಕ್ಕಳು.
ಪುರೋರಜನಯತ್ಪುತ್ರಾನ್ಷಡಾಗ್ನೇಯೀ ಮಹಾಪ್ರಭಾನ್ ।। 19 ।। ಅಂಗಂ ಸುಮನಸಂ ಸ್ವಾತಿಂ ಕ್ರತುಮಂಗಿರಸಂ ಮಯಮ್ । ಅಂಗಾತ್ಸುನೀಥಾಪತ್ಯಂ ವೈ ವೇನಮೇಕಂ ವ್ಯಜಾಯತ ।। 20 ।। ಅಪಚಾರೇಣ ವೇನಸ್ಯ ಪ್ರಕೋಪಃ ಸುಮಹಾನಭೂತ್ । ಪ್ರಜಾರ್ಥಮೃಷಯೋ ಯಸ್ಯ ಮಮಂಥುರ್ದಕ್ಷಿಣಂ ಕರಮ್ ।। 21 ।। ವೇನಸ್ಯ ಮಥಿತೇ ಪಾಣೌ ಸಂಬಭೂವ ಮಹಾನ್ನೃಪಃ । ತಂ ದೃಷ್ಟ್ವಾ ಮುನಯಃ ಪ್ರಾಹುರೇಷ ವೈ ಮುದಿತಾಃ ಪ್ರಜಾಃ ।। 22 ।।
ಪುರುವಿನಿಂದ ಆಗ್ನೇಯಿಯು ಅಂಗ, ಸುಮನಸ, ಸ್ವಾತಿ, ಕ್ರತು, ಅಂಗಿರಸ, ಮಯರೆಂಬ ಆರು ಮಕ್ಕಳನ್ನು ಪಡೆದಳು. ಅಂಗನಿಂದ ಸುನೀಥೆಯಲ್ಲಿ ವೇನನೊಬ್ಬನೇ ಹುಟ್ಟಿದನು. ವೇನನ ಅಪಚಾರದಿಂದ ಋಷಿಗಳು ಅತ್ಯಂತ ಕುಪಿತರಾದರು. ಲೋಕಕ್ಷೇಮಕ್ಕಾಗಿ ಆ ವೇನನನ್ನು ಋಷಿಗಳು ಸಂಹರಿಸಿದರು. ವೇನನಿಗೆ ಮಕ್ಕಳಿರಲಿಲ್ಲ. ಮಕ್ಕಳಿಗಾಗಿ ಋಷಿಗಳು ವೇನನ ಬಲಗೈಯನ್ನು ಕಡೆದರು. ಆ ಕೈಯಿಂದ ತೇಜಸ್ವೀ ಕುಮಾರನೋರ್ವನು ಜನಿಸಿದನು. ಅವನನ್ನು ನೋಡಿ ಮುನಿಗಳು “ಜ್ವಲಿಸುವ ಅಗ್ನಿಯಂತೆ ತೇಜಸ್ವಿಯಾಗಿರುವ ಈ ಕುಮಾರನು ಉತ್ತಮ ಬಿಲ್ಲುಗಾರನೂ ವಜ್ರಕವಚಧಾರಿಯೂ ಆಗಿದ್ದು ಪ್ರಜೆಗಳಅನ್ನು ಸುಖವಾಗಿ ರಕ್ಷಿಸುತ್ತಾನೆ ಮತ್ತು ಮಹತ್ತಾದ ಯಶಸ್ಸನ್ನು ಸಂಪಾದಿಸುತ್ತಾನೆ” ಎಂದರು.
ಕರಿಷ್ಯತಿ ಮಹಾತೇಜಾ ಯಶಶ್ಚ ಪ್ರಾಪ್ಸ್ಯತೇ ಮಹತ್ । ಸ ಧನ್ವೀ ಕವಚೀ ಜಾತೋ ಜ್ವಲಜ್ಜ್ವಲನಸನ್ನಿಭಃ ।। 23 ।। ಪೃಥುರ್ವೈನ್ಯಸ್ತಥಾ ಚೇಮಾಂ ರರಕ್ಷ ಕ್ಷತ್ರಪೂರ್ವಜಃ । ರಾಜಸೂಯಾಭಿಷಿಕ್ತಾನಾಮಾದ್ಯಃ ಸ ವಸುಧಾಪತಿಃ ।। 24 ।। ತಸ್ಮಾಚ್ಚೈವ ಸಮುತ್ಪನ್ನೌ ನಿಪುಣೌ ಸೂತಮಾಗಧೌ । ತೇನೇಯಂ ಗೌರ್ಮುನಿಶ್ರೇಷ್ಠಾ ದುಗ್ಧಾ ಸಸ್ಯಾನಿ ಭೂಭೃತಾ ।। 25 ।।
ಲೋಕಕ್ಷೇಮಕ್ಕಾಗಿ ಆ ವೇನನನ್ನು ಋಷಿಗಳು ಸಂಹರಿಸಿದರು. ವೇನನಿಗೆ ಮಕ್ಕಳಿರಲಿಲ್ಲ. ಮಕ್ಕಳಿಗಾಗಿ ಋಷಿಗಳು ವೇನನ ಬಲಗೈಯನ್ನು ಕಡೆದರು. ಆ ಕೈಯಿಂದ ತೇಜಸ್ವೀ ಕುಮಾರನೋರ್ವನು ಜನಿಸಿದನು. ಅವನನ್ನು ನೋಡಿ ಮುನಿಗಳು “ಜ್ವಲಿಸುವ ಅಗ್ನಿಯಂತೆ ತೇಜಸ್ವಿಯಾಗಿರುವ ಈ ಕುಮಾರನು ಉತ್ತಮ ಬಿಲ್ಲುಗಾರನೂ ವಜ್ರಕವಚಧಾರಿಯೂ ಆಗಿದ್ದು ಪ್ರಜೆಗಳಅನ್ನು ಸುಖವಾಗಿ ರಕ್ಷಿಸುತ್ತಾನೆ ಮತ್ತು ಮಹತ್ತಾದ ಯಶಸ್ಸನ್ನು ಸಂಪಾದಿಸುತ್ತಾನೆ” ಎಂದರು. ಕ್ಷತ್ರಿಯರಲ್ಲಿ ಮೊದಲಿಗನಾದ ಪೃಥುವೆಂಬ ಆ ವೇನಕುಮಾರನು ಪ್ರಜೆಗಳನ್ನು ಧರ್ಮದಿಂದ ಪಾಲಿಸಿದನು. ರಾಜಸೂಯಯಾಗವನ್ನು ಮಾಡಿದವರಲ್ಲಿ ಇವನು ಮೊದಲನೆಯವನು. ಅವನಿಂದಲೇ ಸೂತ-ಮಾಗಧರೆಂಬ ನಿಪುಣರು ಉತ್ಪನ್ನರಾದರು. ಮುನಿಶ್ರೇಷ್ಠರೇ! ಈ ಪೃಥುವೇ ಹಸುವಿನ ರೂಪವನ್ನು ಧರಿಸಿದ ಭೂಮಿಯಿಂದ ಪ್ರಜೆಗಳ ಜೀವನಕ್ಕಾಗಿ ಸಸ್ಯವೇ ಮೊದಲಾದವುಗಳನ್ನು ಕರೆದನು.
ಪ್ರಜಾನಾಂ ವೃತ್ತಿಕಾಮೇನ ದೇವೈಃ ಸರ್ಷಿಗಣೈಃ ಸಹ । ಪಿತೃಭಿರ್ದಾನವೈಶ್ಚೈವ ಗಂಧರ್ವೈರಪ್ಸರೋಗಣೈಃ ।। 26 ।। ಸರ್ಪೈಃ ಪುಣ್ಯಜನೈಶ್ಚೈವ ವೀರುದ್ಭಿಃ ಪರ್ವತೈಸ್ತಥಾ । ತೇಷು ತೇಷು ಚ ಪಾತ್ರೇಷು ದುಹ್ಯಮಾನಾ ವಸುಂಧರಾ ।। 27 ।। ಪ್ರಾದಾದ್ಯಥೇಪ್ಸಿತಂ ಕ್ಷೀರಂ ತೇನ ಪ್ರಾಣಾನಧಾರಯನ್ । ಪೃಥೋಸ್ತು ಪುತ್ರೌ ಧರ್ಮಜ್ಞೌ ಯಜ್ಞಾಂತೇಽಂತರ್ಧಿಪಾತಿನೌ ।। 28 ।। ಶಿಖಂಡಿನೀ ಹವಿರ್ಧಾನಮಂತರ್ಧಾನಾದ್ವ್ಯಜಾಯತ । ಹವಿರ್ಧಾನಾತ್ಷಡಾಗ್ನೇಯೀ ಧಿಷಣಾಜನಯತ್ಸುತಾನ್ ।। 29 ।। ಪ್ರಾಚೀನಬರ್ಹಿಷಂ ಶುಕ್ರಂ ಗಯಂ ಕೃಷ್ಣಂ ವ್ರಜಾಜಿನೌ ।
ಅಲ್ಲದೇ ಆಗ ದೇವತೆಗಳು, ಋಷಿಗಳು, ಪಿತೃಗಳು, ದಾನವರು, ಗಂಧರ್ವರು, ಅಪ್ಸರೆಯರು, ದೈತ್ಯರು, ಲತೆಗಳು, ಪರ್ವತಗಳು ಎಲ್ಲವೂ ಗೋರೂಪಿಯಾದ ಭೂಮಿಯನ್ನು ತಮ್ಮ ತಮ್ಮ ಪಾತ್ರೆಗಳಲ್ಲಿ ಕರೆದರು. ಭೂಮಿಯು ಅವರೆಲ್ಲರಿಗೂ ಬೇಕಾದ ವಸ್ತುಗಳನ್ನು ಹಾಲಿನಂತೆ ಕೊಟ್ಟಿತು. ಅದರಿಂದ ಅವರೆಲ್ಲರೂ ಜೀವನವನ್ನು ನಡೆಸುವಂಥಾದರು. ರಾಜಸೂಯ ಯಾಗದ ಅಂತ್ಯದಲ್ಲಿ ಪೃಥುವಿಗೆ ಅಂತರ್ಧಿ-ಪಾತಿ ಎಂಬ ಇಬ್ಬರು ಧರ್ಮಜ್ಞ ಮಕ್ಕಳು ಜನಿಸಿದರು. ಅಂತರ್ಧಿಯಿಂದ ಶಿಖಂಡಿನಿಯಲ್ಲಿ ಹವಿರ್ಧಾನನು ಜನಿಸಿದನು. ಹವಿರ್ಧಾನನು ಆಗ್ನೇಯಿಯಲ್ಲಿ ಪ್ರಾಚೀನಬರ್ಹಿಷ, ಶುಕ್ರ, ಗಯ, ಕೃಷ್ಣ, ವ್ರಜ ಮತ್ತು ಅಜಿನರೆಂಬ ಆರು ಮಕ್ಕಳನ್ನು ಪಡೆದನು.
ಪ್ರಾಚೀನಬರ್ಹಿರ್ಭಗವಾನ್ಮಹಾನಾಸೀತ್ಪ್ರಜಾಪತಿಃ ।। 30 ।। ಹವಿರ್ಧಾನಾನ್ಮುನಿಶ್ರೇಷ್ಠಾ ಯೇನ ಸಂವರ್ಧಿತಾಃ ಪ್ರಜಾಃ । ಪ್ರಾಚೀನಬರ್ಹಿರ್ಭಗವಾನ್ಪೃಥಿವೀತಲಚಾರಿಣೀಃ ।। 31 ।। ಸಮುದ್ರತನಯಾಯಾಂ ತು ಕೃತದಾರೋಽಭವತ್ಪ್ರಭುಃ । ಮಹತಸ್ತಪಸಃ ಪಾರೇ ಸವರ್ಣಾಯಾಂ ಪ್ರಜಾಪತಿಃ ।। 32 ।। ಸವರ್ಣಾಧತ್ತ ಸಾಮುದ್ರೀ ದಶ ಪ್ರಾಚೀನಬರ್ಹಿಷಃ । ಸರ್ವಾನ್ಪ್ರಚೇತಸೋ ನಾಮ ಧನುರ್ವೇದಸ್ಯ ಪಾರಗಾನ್ ।। 33 ।।
ಭಗವಾನ್ ಪ್ರಾಚೀನಬರ್ಹಿಷನು ಮಹಾ ಪ್ರಜಾಪತಿಯಾಗಿದ್ದನು. ಮುನಿಶ್ರೇಷ್ಠರೇ! ಅವನಿಂದ ಹವಿರ್ಧಾನನ ಮಕ್ಕಳು ವೃದ್ಧಿಹೊಂದಿದರು. ಪೃಥ್ವಿಯಮೇಲೆ ಸಂಚರಿಸುತ್ತಿದ್ದ ಭಗವಾನ್ ಪ್ರಭು ಪ್ರಜಾಪತಿ ಪ್ರಾಚೀನಬರ್ಹಿಷನು ಮಹಾ ತಪಸ್ಸಿನ ನಂತರ ಸಮುದ್ರತನಯೆ ಸವರ್ಣೆಯನ್ನು ಮದುವೆಯಾದನು. ಸಮುದ್ರನ ಮಗಳು ಸವರ್ಣೆಯು ಪ್ರಾಚೀನಬರ್ಹಿಷನಿಗೆ ಪ್ರಚೇತಸರೆಂಬ ಹೆಸರಿನ ಎಲ್ಲಾ ಧನುರ್ವೇದಪಾರಂಗತರಾದ ಹತ್ತು ಮಕ್ಕಳನ್ನಿತ್ತಳು.
ಅಪೃಥಗ್ಧರ್ಮಚರಣಾಸ್ತೇಽತಪ್ಯಂತ ಮಹತ್ತಪಃ । ದಶ ವರ್ಷಸಹಸ್ರಾಣಿ ಸಮುದ್ರಸಲಿಲೇಶಯಾಃ ।। 34 ।। ತಪಶ್ಚರತ್ಸು ಪೃಥಿವೀಂ ಪ್ರಚೇತಃಸು ಮಹೀರುಹಾಃ । ಅರಕ್ಷಮಾಣಾಮಾವವ್ರುರ್ಬಭೂವಾಥ ಪ್ರಜಾಕ್ಷಯಃ ।। 35 ।। ನಾಶಕನ್ಮಾರುತೋ ವಾತುಂ ವೃತಂ ಖಮಭವದ್ದ್ರುಮೈಃ । ದಶ ವರ್ಷಸಹಸ್ರಾಣಿ ನ ಶೇಕುಶ್ಚೇಷ್ಟಿತುಂ ಪ್ರಜಾಃ ।। 36 ।। ತದುಪಶ್ರುತ್ಯ ತಪಸಾ ಯುಕ್ತಾಃ ಸರ್ವೇ ಪ್ರಚೇತಸಃ । ಮುಖೇಭ್ಯೋ ವಾಯುಮಗ್ನಿಂ ಚ ಸಸೃಜುರ್ಜಾತಮನ್ಯವಃ ।। 37 ।। ಉನ್ಮೂಲಾನಥ ವೃಕ್ಷಾಂಸ್ತು ಕೃತ್ವಾ ವಾಯುರಶೋಷಯತ್ । ತಾನಗ್ನಿರದಹದ್ಘೋರ ಏವಮಾಸೀದ್ದ್ರುಮಕ್ಷಯಃ ।। 38 ।।
ಆ ಹತ್ತುಮಂದಿ ಪ್ರಚೇತಸರೂ ಸಾಗರದ ನೀರಿನಲ್ಲಿ ನಿಂತು ಹತ್ತು ಸಾವಿರ ವರ್ಷಗಳ ವರೆಗೆ ಘೋರವಾದ ತಪಸ್ಸನ್ನು ತಪಿಸಿದರು. ಪ್ರಚೇತಸರು ಹೀಗೆ ಘೋರ ತಪಸ್ಸನ್ನಾಚರಿಸುತ್ತಿರಲು ಭೂಮಿಯು ಮರಗಳಿಂದ ತುಂಬಿಹೋಯಿತು. ಅನೇಕ ಪ್ರಜೆಗಳು ನಷ್ಟರಾದರು. ಆಕಾಶವು ಎತ್ತರ ಮರಗಳಿಂದ ತುಂಬಿ ಗಾಳಿಯೂ ಬೀಸಲಾರದಾಯಿತು. ಹತ್ತು ಸಾವಿರವರ್ಷಗಳವರೆಗೆ ಪ್ರಜೆಗಳಿಗೆ ಚಲಿಸಲೂ ಆಗುತ್ತಿರಲಿಲ್ಲ. ಇದನ್ನು ಕೇಳಿ ಕುಪಿತರಾದ ತಪಸ್ಸನ್ನಾಚಿರಿಸುತ್ತಿದ್ದ ಎಲ್ಲ ಪ್ರಚೇತಸರೂ ತಮ್ಮ ಮುಖಗಳಿಂದ ವಾಯುವನ್ನೂ ಅಗ್ನಿಯನ್ನೂ ಸೃಷ್ಟಿಸಿದರು. ಆ ವಾಯುವು ಮರಗಳೆಲ್ಲವನ್ನೂ ಬುಡಸಹಿತ ಕಿತ್ತುಹಾಕಿತು. ಅಗ್ನಿಯು ಆ ಮರಗಳೆಲ್ಲವನ್ನೂ ಸುಟ್ಟುಹಾಕಿತು. ಹೀಗೆ ಮರಗಳು ನಾಶವಾದವು.
ದ್ರುಮಕ್ಷಯಮಥೋ ಬುದ್ಧ್ವಾ ಕಿಂಚಿಚ್ಛಿಷ್ಟೇಷು ಶಾಖಿಷು । ಉಪಗಮ್ಯಾಬ್ರವೀದೇತಾಂಸ್ತದಾ ಸೋಮಃ ಪ್ರಜಾಪತೀನ್ ।। 39 ।। ಕೋಪಂ ಯಚ್ಛತ ರಾಜಾನಃ ಸರ್ವೇ ಪ್ರಾಚೀನಬರ್ಹಿಷಃ । ವೃಕ್ಷಶೂನ್ಯಾ ಕೃತಾ ಪೃಥ್ವೀ ಶಾಮ್ಯೇತಾಮಗ್ನಿಮಾರುತೌ ।। 40 ।। ರತ್ನಭೂತಾ ಚ ಕನ್ಯೇಯಂ ವೃಕ್ಷಾಣಾಂ ವರವರ್ಣಿನೀ । ಭವಿಷ್ಯಂ ಜಾನತಾ ತಾತ ಧೃತಾ ಗರ್ಭೇಣ ವೈ ಮಯಾ ।। 41 ।। ಮಾರಿಷಾ ನಾಮ ನಾಮ್ನೈಷಾ ವೃಕ್ಷಾಣಾಮಿತಿ ನಿರ್ಮಿತಾ । ಭಾರ್ಯಾ ವೋಽಸ್ತು ಮಹಾಭಾಗಾಃ ಸೋಮವಂಶವಿವರ್ಧಿನೀ ।। 42 ।। ಯುಷ್ಮಾಕಂ ತೇಜಸೋಽರ್ಧೇನ ಮಮ ಚಾರ್ಧೇನ ತೇಜಸಃ । ಅಸ್ಯಾಮುತ್ಪತ್ಸ್ಯತೇ ವಿದ್ವಾಂದಕ್ಷೋ ನಾಮ ಪ್ರಜಾಪತಿಃ ।। 43 ।। ಸ ಇಮಾಂ ದಗ್ಧಭೂಯಿಷ್ಠಾಂ ಯುಷ್ಮತ್ತೇಜೋಮಯೇನ ವೈ । ಅಗ್ನಿನಾಗ್ನಿಸಮೋ ಭೂಯಃ ಪ್ರಜಾಃ ಸಂವರ್ಧಯಿಷ್ಯತಿ ।। 44 ।।
ಮರಗಳು ನಾಶವಾಗಿ ಕೆಲವೇ ಮರಗಳು ಉಳಿದುಕೊಂಡಿವೆಯೆಂದು ತಿಳಿದ ಸೋಮನು ಪ್ರಜಾಪತಿಗಳ ಬಳಿಬಂದು ಹೇಳಿದನು: “ಕ್ಷತ್ರಿಯರಾದ ಎಲ್ಲ ಪ್ರಾಚೀನಬರ್ಹಿಷರೇ! ಕೋಪವನ್ನು ಬಿಡಿ. ಭೂಮಿ-ಯನ್ನು ವೃಕ್ಷಶೂನ್ಯವನ್ನಾಗಿ ಮಾಡುವ ಈ ಅಗ್ನಿ-ವಾಯುಗಳನ್ನು ಶಾಂತಗೊಳಿಸಿ. ಮಕ್ಕಳೇ! ಭವಿಷ್ಯವನ್ನು ತಿಳಿದಿದ್ದ ನಾನು ವೃಕ್ಷಗಳ ಕನ್ಯೆಯಾದ ಈ ರತ್ನದಂತಿರುವ ವರವರ್ಣಿನಿಯನ್ನು ನನ್ನ ಗರ್ಭದಲ್ಲಿ ಧರಿಸಿದ್ದೆನು. ವೃಕ್ಷಕನ್ಯೆಯಾದ ಇವಳ ಹೆಸರು ಮಾರಿಷಾ. ಮಹಾಭಾಗರೇ! ಇವಳು ನಿಮ್ಮ ಭಾರ್ಯೆಯಾಗಿ ಸೋಮವಂಶವನ್ನು ಬೆಳೆಸುತ್ತಾಳೆ. ನಿಮ್ಮ ಅರ್ಧ ತೇಜಸ್ಸಿನಿಂದಲೂ ನನ್ನ ಅರ್ಧ ತೇಜಸ್ಸಿನಿಂದಲೂ ಇವಳಲ್ಲಿ ವಿದ್ವಾಂಸನಾದ ದಕ್ಷ ಎಂಬ ಪ್ರಜಾಪತಿಯು ಹುಟ್ಟುತ್ತಾನೆ. ನಿಮ್ಮ ತೇಜಸ್ಸಿನ ಅಗ್ನಿಯಿಂದ ಸುಟ್ಟುಹೋಗಿರುವ ಈ ಭೂಮಿ ಮತ್ತು ಪ್ರಜೆಗಳನ್ನು ಅಗ್ನಿಸಮನಾದ ಅವನು ವೃದ್ಧಿಪಡಿಸುತ್ತಾನೆ.”
ತತಃ ಸೋಮಸ್ಯ ವಚನಾಜ್ಜಗೃಹುಸ್ತೇ ಪ್ರಚೇತಸಃ । ಸಂಹೃತ್ಯ ಕೋಪಂ ವೃಕ್ಷೇಭ್ಯಃ ಪತ್ನೀಂ ಧರ್ಮೇಣ ಮಾರಿಷಾಮ್ ।। 45 ।। ದಶಭ್ಯಸ್ತು ಪ್ರಚೇತೋಭ್ಯೋ ಮಾರಿಷಾಯಾಂ ಪ್ರಜಾಪತಿಃ । ದಕ್ಷೋ ಜಜ್ಞೇ ಮಹಾತೇಜಾಃ ಸೋಮಸ್ಯಾಂಶೇನ ಭೋ ದ್ವಿಜಾಃ ।। 46 ।। ಅಚರಾಂಶ್ಚ ಚರಾಂಶ್ಚೈವ ದ್ವಿಪದೋಽಥ ಚತುಷ್ಪದಃ । ಸ ಸೃಷ್ಟ್ವಾ ಮನಸಾ ದಕ್ಷಃ ಪಶ್ಚಾದಸೃಜತ ಸ್ತ್ರಿಯಃ ।। 47 ।। ದದೌ ದಶ ಸ ಧರ್ಮಾಯ ಕಶ್ಯಪಾಯ ತ್ರಯೋದಶ । ಶಿಷ್ಟಾಃ ಸೋಮಾಯ ರಾಜ್ಞೇ ಚ ನಕ್ಷತ್ರಾಖ್ಯಾ ದದೌ ಪ್ರಭುಃ ।। 48 ।। ತಾಸು ದೇವಾಃ ಖಗಾ ಗಾವೋ ನಾಗಾ ದಿತಿಜದಾನವಾಃ । ಗಂಧರ್ವಾಪ್ಸರಸಶ್ಚೈವ ಜಜ್ಞಿರೇಽನ್ಯಾಶ್ಚ ಜಾತಯಃ ।। 49 ।। ತತಃ ಪ್ರಭೃತಿ ವಿಪ್ರೇಂದ್ರಾಃ ಪ್ರಜಾ ಮೈಥುನಸಂಭವಾಃ । ಸಂಕಲ್ಪಾದ್ದರ್ಶನಾತ್ಸ್ಪರ್ಶಾತ್ಪೂರ್ವೇಷಾಂ ಪ್ರೋಚ್ಯತೇ ಪ್ರಜಾ ।। 50 ।।
ನಂತರ ಸೋಮನ ಮಾತಿನಂತೆ ಪ್ರಚೇತಸರು ಕೋಪವನ್ನು ತೊರೆದು ವೃಕ್ಷಕನ್ಯೆ ಮಾರಿಷೆಯನ್ನು ಪತ್ನಿಧರ್ಮಪೂರ್ವಕವಾಗಿ ಸ್ವೀಕರಿಸಿದರು. ಭೋ ದ್ವಿಜರೇ! ಆ ಹತ್ತು ಪ್ರಚೇತಸರಿಂದ ಮತ್ತು ಸೋಮನ ಅಂಶದಿಂದ ಮಾರಿಷೆಯಲ್ಲಿ ಮಹಾತೇಜಸ್ವೀ ದಕ್ಷನು ಜನಿಸಿದನು. ಆ ದಕ್ಷನು ಮನಸಾ ಅಚರ ಮತ್ತು ಚರವಸ್ತುಗಳನ್ನೂ, ದ್ವಿಪದ-ಚತುಷ್ಪದ ಪ್ರಾಣಿಗಳನ್ನೂ ಸೃಷ್ಟಿಸಿ ನಂತರ ಸ್ತ್ರೀಯರನ್ನು ಸೃಷ್ಟಿಸಿದನು. ಪ್ರಭುವು ಅವರಲ್ಲಿ ಹತ್ತು ಕನ್ಯೆಯರನ್ನು ಧರ್ಮನಿಗೆ, ಹದಿಮೂರನ್ನು ಕಶ್ಯಪನಿಗೆ, ಮತ್ತು ನಕ್ಷತ್ರಗಳೆಂದು ಕರೆಯಲ್ಪಡುವ ಉಳಿದವರನ್ನು ರಾಜಾ ಸೋಮನಿಗೆ ಕೊಟ್ಟನು. ಅವರಲ್ಲಿ ದೇವತೆಗಳು, ಪಕ್ಷಿಗಳು, ಗೋವುಗಳು, ನಾಗಗಳು, ದೈತ್ಯರು, ದಾನವರು, ಗಂಧರ್ವರು, ಅಪ್ಸರೆಯರು ಮತ್ತು ಅನ್ಯ ಜಾತಿಯವರು ಜನಿಸಿದರು. ವಿಪ್ರೇಂದ್ರರೇ! ಅಂದಿನಿಂದ ಪ್ರಜೆಗಳು ಸ್ತ್ರೀ-ಪುರುಷರ ಮೈಥುನದಿಂದ ಹುಟ್ಟತೊಡಗಿದರು. ಹೀಗೆ ಮೊದಲು ಮನಸ್ಸಂಕಲ್ಪದಿಂದಲೂ, ನಂತರ ನೋಟದಿಂದಲೂ ಪ್ರಜೆಗಳು ಹುಟ್ಟುತ್ತಿದ್ದರು ಎಂದು ಹೇಳುತ್ತಾರೆ.”
ಮುನಯ ಊಚುಃ । ದೇವಾನಾಂ ದಾನವಾನಾಂ ಚ ಗಂಧರ್ವೋರಗರಕ್ಷಸಾಮ್ । ಸಂಭವಸ್ತು ಶ್ರುತೋಽಸ್ಮಾಭಿರ್ದಕ್ಷಸ್ಯ ಚ ಮಹಾತ್ಮನಃ ।। 51 ।। ಅಂಗುಷ್ಠಾದ್ಬ್ರಹ್ಮಣೋ ಜಜ್ಞೇ ದಕ್ಷಃ ಕಿಲ ಶುಭವ್ರತಃ । ವಾಮಾಂಗುಷ್ಠಾತ್ತಥಾ ಚೈವಂ ತಸ್ಯ ಪತ್ನೀ ವ್ಯಜಾಯತ ।। 52 ।। ಕಥಂ ಪ್ರಾಚೇತಸತ್ವಂ ಸ ಪುನರ್ಲೇಭೇ ಮಹಾತಪಾಃ । ಏತಂ ನಃ ಸಂಶಯಂ ಸೂತ ವ್ಯಾಖ್ಯಾತುಂ ತ್ವಮಿಹಾರ್ಹಸಿ । ದೌಹಿತ್ರಶ್ಚೈವ ಸೋಮಸ್ಯ ಕಥಂ ಶ್ವಶುರತಾಂ ಗತಃ ।। 53 ।।
ಮುನಿಗಳು ಹೇಳಿದರು: “ದೇವತೆಗಳು, ದಾನವರು, ಗಂಧರ್ವರು, ಉರಗರು, ರಾಕ್ಷಸರು ಮಹಾತ್ಮ ದಕ್ಷನಿಂದ ಉಂಟಾದರು ಎಂದು ಕೇಳಿದೆವು. ಆದರೆ ಶುಭವ್ರತ ದಕ್ಷನು ಬ್ರಹ್ಮನ ಬಲ ಹೆಬ್ಬೆರಳಿನಿಂದ ಮತ್ತು ಅವನ ಪತ್ನಿಯು ಎಡಹೆಬ್ಬರಿಣಿನಿಂದ ಹುಟ್ಟಿದರಲ್ಲವೇ? ಹೀಗಿರುವಾಗ ಹೇಗೆ ಅವನು ಮಹಾತಪಸ್ವೀ ಪ್ರಾಚೇತಸರಿಗೆ ಮಗನಾದನು? ಸೋಮನ ಮಗಳ ಮಗನಾದ ಅವನು ಹೇಗೆ ಸೋಮನಿಗೇ ಹೆಣ್ಣುಕೊಟ್ಟ ಮಾವನಾದನು? ಇದು ನಮಗೆ ಸಂಶಯವನ್ನುಂಟುಮಾಡಿದೆ. ಸೂತ! ಅದನ್ನು ಹೇಳಬೇಕು.”
ಲೋಮಹರ್ಷಣ ಉವಾಚ । ಉತ್ಪತ್ತಿಶ್ಚ ನಿರೋಧಶ್ಚ ನಿತ್ಯಂ ಭೂತೇಷು ಭೋ ದ್ವಿಜಾಃ । ಋಷಯೋಽತ್ರ ನ ಮುಹ್ಯಂತಿ ವಿದ್ಯಾವಂತಶ್ಚ ಯೇ ಜನಾಃ ।। 54 ।। ಯುಗೇ ಯುಗೇ ಭವಂತ್ಯೇತೇ ಪುನರ್ದಕ್ಷಾದಯೋ ನೃಪಾಃ । ಪುನಶ್ಚೈವ ನಿರುಧ್ಯಂತೇ ವಿದ್ವಾಂಸ್ತತ್ರ ನ ಮುಹ್ಯತಿ ।। 55 ।। ಜ್ಯೈಷ್ಠ್ಯಂ ಕಾನಿಷ್ಠಮಪ್ಯೇಷಾಂ ಪೂರ್ವಂ ನಾಸೀದ್ದ್ವಿಜೋತ್ತಮಾಃ । ತಪ ಏವ ಗರೀಯೋಽಭೂತ್ಪ್ರಭಾವಶ್ಚೈವ ಕಾರಣಮ್ ।। 56 ।। ಇಮಾಂ ವಿಸೃಷ್ಟಿಂ ದಕ್ಷಸ್ಯ ಯೋ ವಿದ್ಯಾತ್ಸಚರಾಚರಾಮ್ । ಪ್ರಜಾವಾನಾಯುರುತ್ತೀರ್ಣಃ ಸ್ವರ್ಗಲೋಕೇ ಮಹೀಯತೇ ।। 57 ।।
ಲೋಮಹರ್ಷಣನು ಹೇಳಿದನು: “ಭೋ ದ್ವಿಜರೇ! ಜೀವಿಗಳು ನಿತ್ಯವೂ ಹುಟ್ಟುತ್ತಿರುತ್ತವೆ ಮತ್ತು ಸಾಯುತ್ತಿರುತ್ತವೆ. ಋಷಿಗಳೇ! ವಿದ್ಯಾವಂತರು ಈ ವಿಷಯದಲ್ಲಿ ಸಂಶಯಪಟ್ಟುಕೊಳ್ಳುವುದಿಲ್ಲ. ದಕ್ಷನೇ ಮೊದಲಾದ ನೃಪರು ಯುಗ ಯುಗದಲ್ಲಿ ಆಗುತ್ತಾರೆ ಮತ್ತು ಪುನಃ ಸಾಯುತ್ತಾರೆ. ವಿದ್ವಾಂಸನು ಈ ವಿಷಯದಲ್ಲಿ ಸಂದೇಹಪಡುವುದಿಲ್ಲ. ದ್ವಿಜೋತ್ತಮರೇ! ಪೂರ್ವಕಾಲದಲ್ಲಿ ಹಿರಿಯ ಮತ್ತು ಕಿರಿಯ ಎನ್ನುವುದಿರಲಿಲ್ಲ. ತಪಸ್ಸು ಮತ್ತು ಪ್ರಭಾವಗಳ ಕಾರಣದಿಂದಲೇ ಹಿರಿಯನೆನಿಸಿಕೊಳ್ಳುತ್ತಿದ್ದರು. ದಕ್ಷನ ಈ ಚರಾಚರ ಸೃಷ್ಟಿಯನ್ನು ತಿಳಿದವನು ಸಂತಾನವಂತನೂ, ದೀರ್ಘಾಯುವೂ ಆಗಿ ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ.”
ಇತಿ ಶ್ರೀಮಹಾಪುರಾಣೇ ಆದಿಬ್ರಹ್ಮೇ ಸೃಷ್ಟಿಕಥನವರ್ಣನಂ ನಾಮ ದ್ವಿತೀಯೋಽಧ್ಯಾಯಃ ।।