ಶ್ರೀಬ್ರಹ್ಮಮಹಾಪುರಾಣ: ಅಧ್ಯಾಯ 1 ಸೃಷ್ಟಿಕಥನವರ್ಣನಮ್
ಯಸ್ಮಾತ್ಸರ್ವಮಿದಂ ಪ್ರಪಂಚರಚಿತಮ್ ಮಾಯಾಜಗಜ್ಜಾಯತೇ । ಯಸ್ಮಿಂಸ್ತಿಷ್ಠತಿ ಯಾತಿ ಚಾಂತಸಮಯೇ ಕಲ್ಪಾನುಕಲ್ಪೇ ಪುನಃ । ಯಂ ಧ್ಯಾತ್ವಾ ಮುನಯಃ ಪ್ರಪಂಚರಹಿತಂ ವಿಂದಂತಿ ಮೋಕ್ಷಂ ಧ್ರುವಮ್। ತಂ ವಂದೇ ಪುರುಷೋತ್ತಮಾಖ್ಯಮಮಲಮ್ ನಿತ್ಯಂ ವಿಭುಂ ನಿಶ್ಚಲಮ್ ।। 1 ।।
ಯಾವ ಪರಮಾತ್ಮನಿಂದ ಈ ಸಮಸ್ತ ಪ್ರಪಂಚವೂ ಉತ್ಪತ್ತಿಯಾಗುವುದೋ, ನಮ್ಮ ದೃಷ್ಟಿಗೆ ಗೋಚರವಾಗುವ ಈ ಚರಾಚರಾತ್ಮಕ ಮಯಾಪ್ರಪಂಚವೆಲ್ಲವೂ ಯಾವ ಪರಮಾತ್ಮನಲ್ಲಿ ನೆಲೆಸಿದೆಯೋ, ಪ್ರತಿಕಲ್ಪದ ಪ್ರಳಯಕಾಲದಲ್ಲಿಯೂ ಅದು ಯಾರಲ್ಲಿ ಲೀನವಾಗುತ್ತದೆಯೋ ಆ ಸರ್ವೇಶ್ವರನನ್ನು ನಮಸ್ಕರಿಸುತ್ತೇನೆ. ಪ್ರಪಂಚದಿಂದ ಭಿನ್ನನಾದ ಯಾವ ಪರಮಾತ್ಮನನ್ನು ಧ್ಯಾನಮಾಡಿ ತಪಸ್ವಿಗಳು ಶಾಶ್ವತಮೋಕ್ಷಪದವಿಯನ್ನು ಪಡೆಯುತ್ತಾರೋ ಆ ಪುರುಷಶ್ರೇಷ್ಠನೂ, ನಿರ್ಮಲನೂ, ಸನಾತನನೂ, ಆದ್ಯಂತರಹಿತನೂ, ಸಮಸ್ತ ಜಗತ್ತಿನ ಸ್ವಾಮಿಯೂ ಆದ ಆ ಪರಮಪುರುಷನನ್ನು ಭಕ್ತಿಯಿಂದ ನಮಸ್ಕರಿಸುತ್ತೇನೆ.
ಯಂ ಧ್ಯಾಯಂತಿ ಬುಧಾಃ ಸಮಾಧಿಸಮಯೇ ಶುದ್ಧಂ ವಿಯತ್ಸನ್ನಿಭಮ್ । ನಿತ್ಯಾನಂದಮಯಂ ಪ್ರಸನ್ನಮಮಲಂ ಸರ್ವೇಶ್ವರಂ ನಿರ್ಗುಣಮ್ । ವ್ಯಕ್ತಾವ್ಯಕ್ತಪರಂ ಪ್ರಪಂಚರಹಿತಂ ಧ್ಯಾನೈಕಗಮ್ಯಂ ವಿಭುಮ್ । ತಂ ಸಂಸಾರವಿನಾಶಹೇತುಮಜರಂ ವಂದೇ ಹರಿಂ ಮುಕ್ತಿದಮ್ ।। 2 ।।
ಯಾವ ಶುದ್ಧನೂ, ಆಕಾಶದಂತೆ ಆಕಾರಹೀನನೂ ಆದ ಪರಮೇಶ್ವರನನ್ನು ತಪಸ್ವಿಗಳು ಸಮಾಧಿಯೋಗದಲ್ಲಿ ಧ್ಯಾನಿಸುತ್ತಾರೋ, ಆ ನಿತ್ಯಾನಂದಮಯ, ಪ್ರಸನ್ನ, ಅಮಲ, ಸರ್ವೇಶ್ವರ, ನಿರ್ಗುಣ, ವ್ಯಕ್ತಾವ್ಯಕ್ತಗಳನ್ನೂ ಮೀರಿದ, ಪ್ರಪಂಚರಹಿತನಾದ, ಕೇವಲ ಧ್ಯಾನದಿಂದಲೇ ಗಮ್ಯನಾದ, ಸಂಸಾರದ ವಿನಾಶಕ್ಕೆ ಕಾರಣನಾದ, ಅಜರ ಮುಕ್ತಿದಾಯಕ ವಿಭು ಹರಿಯನ್ನು ವಂದಿಸುತ್ತೇನೆ.
ಸುಪುಣ್ಯೇ ನೈಮಿಷಾರಣ್ಯೇ ಪವಿತ್ರೇ ಸುಮನೋಹರೇ । ನಾನಾಮುನಿಜನಾಕೀರ್ಣೇ ನಾನಾಪುಷ್ಪೋಪಶೋಭಿತೇ ।। 3 ।। ಸರಲೈಃ ಕರ್ಣಿಕಾರೈಶ್ಚ ಪನಸೈರ್ಧವಖಾದಿರೈಃ । ಆಮ್ರಜಂಬೂಕಪಿತ್ಥೈಶ್ಚ ನ್ಯಗ್ರೋಧೈರ್ದೇವದಾರುಭಿಃ ।। 4 ।। ಅಶ್ವತ್ಥೈಃ ಪಾರಿಜಾತೈಶ್ಚ ಚಂದನಾಗುರುಪಾಟಲೈಃ । ವಕುಲೈಃ ಸಪ್ತಪರ್ಣೈಶ್ಚ ಪುನ್ನಾಗೈರ್ನಾಗಕೇಸರೈಃ ।। 5 ।। ಶಾಲೈಸ್ತಾಲೈಸ್ತಮಾಲೈಶ್ಚ ನಾರಿಕೇಲೈಸ್ತಥಾರ್ಜುನೈಃ । ಅನ್ಯೈಶ್ಚ ಬಹುಭಿರ್ವೃಕ್ಷೈಶ್ಚಂಪಕಾದ್ಯೈಶ್ಚ ಶೋಭಿತೇ ।। 6 ।। ನಾನಾಪಕ್ಷಿಗಣಾಕೀರ್ಣೇ ನಾನಾಮೃಗಗಣೈರ್ಯುತೇ । ನಾನಾಜಲಾಶಯೈಃ ಪುಣ್ಯೈರ್ದೀರ್ಘಿಕಾದ್ಯೈರಲಂಕೃತೇ ।। 7 ।। ಬ್ರಾಹ್ಮಣೈಃ ಕ್ಷತ್ರಿಯೈರ್ವೈಶ್ಯೈಃ ಶೂದ್ರೈಶ್ಚಾನ್ಯೈಶ್ಚ ಜಾತಿಭಿಃ । ವಾನಪ್ರಸ್ಥೈರ್ಗೃಹಸ್ಥೈಶ್ಚ ಯತಿಭಿರ್ಬ್ರಹ್ಮಚಾರಿಭಿಃ ।। 8 ।। ಸಂಪನ್ನೈರ್ಗೋಕುಲೈಶ್ಚೈವ ಸರ್ವತ್ರ ಸಮಲಂಕೃತೇ । ಯವಗೋಧೂಮಚಣಕೈರ್ಮಾಷಮುದ್ಗತಿಲೇಕ್ಷುಭಿಃ ।। 9 ।। ಚೀನಕಾದ್ಯೈಸ್ತಥಾ ಮೇಧ್ಯೈಃ ಸಸ್ಯೈಶ್ಚಾನ್ಯೈಶ್ಚ ಶೋಭಿತೇ ।
ನಾನಾ ಪುಷ್ಪಗಳಿಂದ ಉಪಶೋಭಿತವಾದ ಪವಿತ್ರ ಪುಣ್ಯಕ್ಷೇತ್ರವಾದ ಸುಮನೋಹರ ನೈಮಿಷಾರಣ್ಯದಲ್ಲಿ ಅನೇಕಮುನಿಜನರು ಸೇರಿದ್ದರು. ಆ ಅರಣ್ಯದಲ್ಲಿ ಸರಲ, ಕರ್ಣಿಕಾರ, ಹಲಸು, ಧವ, ಖಾದಿರ, ಮಾವು, ನೇರಳೆ, ಬೇಲ, ಆಲ, ದೇವದಾರು, ಅಶ್ವತ್ಥ, ಪಾರಿಜಾತ, ಚಂದನ, ಅಗರು, ಪಾದಲ, ವಕುಲ, ಬಾಳೆ, ಪುನ್ನಾಗ, ನಾಗಕೇಸರ, ಶಾಲಿ, ತಾಲ, ತಮಾಲ, ತೆಂಗು, ಅಡಿಕೆ, ಅರ್ಜುನ, ಸಂಪಿಗೆ – ಇವೇ ಮೊದಲಾದ ಅನೇಕ ಬಗೆಯ ವೃಕ್ಷಗಳು ಸದಾ ಫಲಪುಷ್ಪಭರಿತಗಳಾಗಿ ಶೋಭಿಸುತ್ತಿದ್ದವು. ಆ ಅರಣ್ಯವು ನಾನಾ ಪಕ್ಷಿಗಳಿಂದಲೂ, ನಾನಾಮೃಗಗಳಿಂದಲೂ, ನಾನಾ ಪುಣ್ಯ ಜಲಾಶಯಗಳಿಂದಲೂ ಅಲಂಕೃತವಾಗಿತ್ತು. ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರು ಮತ್ತು ಅನ್ಯ ಜಾತಿಯವರು, ವಾನಪ್ರಸ್ಥರು, ಗೃಹಸ್ಥರು, ಯತಿಗಳು ಮತ್ತು ಬ್ರಹ್ಮಚಾರಿಗಳು ಅಲ್ಲಿ ವಾಸಿಸುತ್ತಿದ್ದರು. ಎಲ್ಲಕಡೆಯೂ ಗೋಕುಲಗಳಿಂದ ಸಂಪನ್ನವಾಗಿ ಅಲಂಕೃತಗೊಂಡಿತ್ತು. ಭತ್ತ, ಗೋಧಿ, ಕಡಲೆ, ಉದ್ದು, ಹೆಸರು, ಎಳ್ಳು, ಕಬ್ಬು ಮೊದಲಾದ ಸಸ್ಯಗಳಿಂದಲೂ ಕರ್ಪೂರದ ಗಿಡವೇ ಮೊದಲಾದ ಸುವಾಸನಾ ವೃಕ್ಷಗಳಿಮ್ದಲೂ, ತಿನ್ನಲು ಯೋಗ್ಯವಾದ ಗೆಡ್ಡೆ-ಗೆಣಸು ಮೊದಲಾದ ವಿಧವಿಧದ ವನಸ್ಪತಿಗಳಿಂದಲೂ ಆ ಅರಣ್ಯವು ಸಮೃದ್ಧವಾಗಿತ್ತು.
ತತ್ರ ದೀಪ್ತೇ ಹುತವಹೇ ಹೂಯಮಾನೇ ಮಹಾಮಖೇ ।। 10 ।। ಯಜತಾಂ ನೈಮಿಷೇಯಾಣಾಂ ಸತ್ತ್ರೇ ದ್ವಾದಶವಾರ್ಷಿಕೇ । ಆಜಗ್ಮುಸ್ತತ್ರ ಮುನಯಸ್ತಥಾನ್ಯೇಽಪಿ ದ್ವಿಜಾತಯಃ ।। 11 ।। ತಾನಾಗತಾಂದ್ವಿಜಾಂಸ್ತೇ ತು ಪೂಜಾಂ ಚಕ್ರುರ್ಯಥೋಚಿತಾಮ್ । ತೇಷು ತತ್ರೋಪವಿಷ್ಟೇಷು ಋತ್ವಿಗ್ಭಿಃ ಸಹಿತೇಷು ಚ ।। 12 ।। ತತ್ರಾಜಗಾಮ ಸೂತಸ್ತು ಮತಿಮಾಂಲ್ಲೋಮಹರ್ಷಣಃ । ತಂ ದೃಷ್ಟ್ವಾ ತೇ ಮುನಿವರಾಃ ಪೂಜಾಂ ಚಕ್ರುರ್ಮುದಾನ್ವಿತಾಃ ।। 13 ।। ಸೋಽಪಿ ತಾನ್ಪ್ರತಿಪೂಜ್ಯೈವ ಸಂವಿವೇಶ ವರಾಸನೇ । ಕಥಾಂ ಚಕ್ರುಸ್ತದಾನ್ಯೋನ್ಯಂ ಸೂತೇನ ಸಹಿತಾ ದ್ವಿಜಾಃ ।। 14 ।। ಕಥಾಂತೇ ವ್ಯಾಸಶಿಷ್ಯಂ ತೇ ಪಪ್ರಚ್ಛುಃ ಸಂಶಯಂ ಮುದಾ । ಋತ್ವಿಗ್ಭಿಃ ಸಹಿತಾಃ ಸರ್ವೇ ಸದಸ್ಯೈಃ ಸಹ ದೀಕ್ಷಿತಾಃ ।। 15 ।।
ಅಲ್ಲಿ ನೈಮಿಷಾರಣ್ಯವಾಸಿಗಳು ಹನ್ನೆರಡು ವರ್ಷಗಳ ದೀರ್ಘ ಸತ್ರದಲ್ಲಿ ದೊಡ್ಡಯಾಗದಲ್ಲಿ ಅಗ್ನಿಪ್ರತಿಷ್ಠಾಮನಾದಿಗಳನ್ನು ಮಾಡಿ ಪ್ರಜ್ವಲಿತ ಅಗ್ನಿಯಲ್ಲಿ ಹೋಮಮಾಡುತ್ತಿದ್ದರು. ಆಗ ಆ ಯಜ್ಞವನ್ನು ನೋಡಲು ನಾನಾದಿಕ್ಕುಗಳಿಂದ ಮುನಿಗಳೂ ದ್ವಿಜಾತಿಯವರೂ ಆಗಮಿಸಿದರು. ಆಗಮಿಸಿದ ದ್ವಿಜರನ್ನು ನೈಮಿಷಾರಣ್ಯವಾಸಿಗಳು ಯಥೋಚಿತವಾಗಿ ಪೂಜೆ-ಸತ್ಕಾರಗಳನ್ನು ಮಾಡಿದರು. ಋತ್ವಿಜರ ಸಹಿತ ಅವರು ಅಲ್ಲಿ ಕುಳಿತುಕೊಂಡಿರಲು ಅಲ್ಲಿಗೆ ಮತಿಮಾನ್ ಸೂತ ಲೋಮಹರ್ಷಣನು ಆಗಮಿಸಿದನು. ಅವನನ್ನು ನೋಡಿ ಆ ಮುನಿವರರು ಮುದಾನ್ವಿತರಾಗಿ ಅವನನ್ನು ಸತ್ಕರಿಸಿದರು. ಅವನೂ ಕೂಡ ಅವರನ್ನು ಪ್ರತಿವಂದಿಸಿ, ವರಾಸನದಲ್ಲಿ ಕುಳಿತುಕೊಂಡನು. ಸೂತನೊಡನೆ ದ್ವಿಜರು ಅನ್ಯೋನ್ಯ ಮಾತುಕಥೆಗಳನ್ನು ನಡೆಸಿದರು. ಮಾತಿನ ಕೊನೆಯಲ್ಲಿ, ದೀಕ್ಷಿತರು ಮತ್ತು ಋತ್ವಿಜರೊಂದಿಗೆ ಸರ್ವಸದಸ್ಯರೂ ಸೇರಿ ಮುದದಿಂದ ವ್ಯಾಸಶಿಷ್ಯನಿಗೆ ತಮ್ಮ ಸಂಶಯವನ್ನು ಕೇಳಿದರು.
ಮುನಯ ಊಚುಃ । ಪುರಾಣಾಗಮಶಾಸ್ತ್ರಾಣಿ ಸೇತಿಹಾಸಾನಿ ಸತ್ತಮ । ಜಾನಾಸಿ ದೇವದೈತ್ಯಾನಾಂ ಚರಿತಂ ಜನ್ಮ ಕರ್ಮ ಚ ।। 16 ।। ನ ತೇಽಸ್ತ್ಯವಿದಿತಂ ಕಿಂಚಿದ್ವೇದೇ ಶಾಸ್ತ್ರೇ ಚ ಭಾರತೇ । ಪುರಾಣೇ ಮೋಕ್ಷಶಾಸ್ತ್ರೇ ಚ ಸರ್ವಜ್ಞೋಽಸಿ ಮಹಾಮತೇ ।। 17 ।।
ಮುನಿಗಳು ಹೇಳಿದರು: “ಸತ್ತಮ! ನೀನು ಪುರಾಣ-ಆಗಮ ಶಾಸ್ತ್ರಗಳನ್ನೂ, ಇತಿಹಾಸಗಳನ್ನೂ, ದೇವತೆಗಳು ಮತ್ತು ದೈತ್ಯರ ಜನ್ಮ-ಕರ್ಮ ಚರಿತ್ರೆಗಳನ್ನೂ ತಿಳಿದಿದ್ದೀಯೆ. ಮಹಾಮತೇ! ವೇದ, ಶಾಸ್ತ್ರ, ಮತ್ತು ಭಾರತಗಳಲ್ಲಿ ನಿನಗೆ ತಿಳಿಯದೇ ಇದ್ದುದು ಯಾವುದೂ ಇಲ್ಲ. ಪುರಾಣ ಮತ್ತು ಮೋಕ್ಷಶಾಸ್ತ್ರಗಳಲ್ಲಿ ಸರ್ವಜ್ಞನಾಗಿದ್ದೀಯೆ.
ಯಥಾಪೂರ್ವಮಿದಂ ಸರ್ವಮುತ್ಪನ್ನಂ ಸಚರಾಚರಮ್ । ಸಸುರಾಸುರಗಂಧರ್ವಂ ಸಯಕ್ಷೋರಗರಾಕ್ಷಸಮ್ ।। 18 ।। ಶ್ರೋತುಮಿಚ್ಛಾಮಹೇ ಸೂತ ಬ್ರೂಹಿ ಸರ್ವಂ ಯಥಾ ಜಗತ್ । ಬಭೂವ ಭೂಯಶ್ಚ ಯಥಾ ಮಹಾಭಾಗ ಭವಿಷ್ಯತಿ ।। 19 ।। ಯತಶ್ಚೈವ ಜಗತ್ಸೂತ ಯತಶ್ಚೈವ ಚರಾಚರಮ್ । ಲೀನಮಾಸೀತ್ತಥಾ ಯತ್ರ ಲಯಮೇಷ್ಯತಿ ಯತ್ರ ಚ ।। 20 ।।
ಸುರಾಸುರಗಂಧರ್ವ ಯಕ್ಷೋರಗರಾಕ್ಷಸರಿಂದ ಕೂಡಿರುವ ಈ ಸಚರಾಚರ ಜಗತ್ತು ಹುಟ್ಟುವ ಮೊದಲು ಹೇಗಿದ್ದಿತು? ಮಹಾಭಾಗ! ಈ ಜಗತ್ತು ಹೇಗುಂಟಾಯಿತು? ಹಿಂದೆ ಹೇಗಿದ್ದಿತು? ಮತ್ತು ಮುಂದೆ ಹೇಗಿರುತ್ತದೆ? ಇವೆಲ್ಲವನ್ನೂ ಕೇಳಬಯಸುತ್ತೇವೆ. ಸೂತ! ಹೇಳು. ಸೂತ! ಚರಾಚರಾತ್ಮಕವಾದ ಈ ಜಗತ್ತು ಯಾವುದರಿಂದ ಉತ್ಪನ್ನವಾಯಿತು? ಮತ್ತು ಯಾವುದರಲ್ಲಿ ಲೀನಗೊಳ್ಳುತ್ತದೆ? ಯಾವುದರಲ್ಲಿ ಲಯಗೊಳ್ಳುತ್ತದೆ?”
ಲೋಮಹರ್ಷಣ ಉವಾಚ । ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ । ಸದೈಕರೂಪರೂಪಾಯ ವಿಷ್ಣವೇ ಸರ್ವಜಿಷ್ಣವೇ ।। 21 ।। ನಮೋ ಹಿರಣ್ಯಗರ್ಭಾಯ ಹರಯೇ ಶಂಕರಾಯ ಚ । ವಾಸುದೇವಾಯ ತಾರಾಯ ಸರ್ಗಸ್ಥಿತ್ಯಂತಕರ್ಮಣೇ ।। 22 ।। ಏಕಾನೇಕಸ್ವರೂಪಾಯ ಸ್ಥೂಲಸೂಕ್ಷ್ಮಾತ್ಮನೇ ನಮಃ । ಅವ್ಯಕ್ತವ್ಯಕ್ತಭೂತಾಯ ವಿಷ್ಣವೇ ಮುಕ್ತಿಹೇತವೇ ।। 23 ।। ಸರ್ಗಸ್ಥಿತಿವಿನಾಶಾಯ ಜಗತೋ ಯೋಽಜರಾಮರಃ । ಮೂಲಭೂತೋ ನಮಸ್ತಸ್ಮೈ ವಿಷ್ಣವೇ ಪರಮಾತ್ಮನೇ ।। 24 ।। ಆಧಾರಭೂತಂ ವಿಶ್ವಸ್ಯಾಪ್ಯಣೀಯಾಂಸಮಣೀಯಸಾಮ್ । ಪ್ರಣಮ್ಯ ಸರ್ವಭೂತಸ್ಥಮಚ್ಯುತಂ ಪುರುಷೋತ್ತಮಮ್ ।। 25 ।। ಜ್ಞಾನಸ್ವರೂಪಮತ್ಯಂತಂ ನಿರ್ಮಲಂ ಪರಮಾರ್ಥತಃ । ತಮೇವಾರ್ಥಸ್ವರೂಪೇಣ ಭ್ರಾಂತಿದರ್ಶನತಃ ಸ್ಥಿತಮ್ ।। 26 ।। ವಿಷ್ಣುಂ ಗ್ರಸಿಷ್ಣುಂ ವಿಶ್ವಸ್ಯ ಸ್ಥಿತೌ ಸರ್ಗೇ ತಥಾ ಪ್ರಭುಮ್ । ಸರ್ವಜ್ಞಂ ಜಗತಾಮೀಶಮಜಮಕ್ಷಯಮವ್ಯಯಮ್ ।। 27 ।। ಆದ್ಯಂ ಸುಸೂಕ್ಷ್ಮಂ ವಿಶ್ವೇಶಂ ಬ್ರಹ್ಮಾದೀನ್ಪ್ರಣಿಪತ್ಯ ಚ ।
ಲೋಮಹರ್ಷಣನು ಹೇಳಿದನು: “ಅವಿಕಾರನೂ ಶುದ್ಧನೂ ನಿತ್ಯನೂ ಆದ ಪರಮಾತ್ಮನಿಗೆ ನಮಸ್ಕಾರ! ಸದಾ ಏಕರೂಪದಲ್ಲಿರುವ ವಿಷ್ಣು, ಸರ್ವಜಿಷ್ಣುವಿಗೆ ನಮಸ್ಕಾರ! ಹಿರಣ್ಯಗರ್ಭ, ಹರಿ ಮತ್ತು ಶಂಕರರಿಗೆ ನಮಸ್ಕಾರ! ಸೃಷ್ಟಿ-ಸ್ಥಿತಿ-ಲಯಗಳನ್ನು ನಡೆಸುವ ಮತ್ತು ಅವುಗಳಿಂದ ಮುಕ್ತಿನೀಡುವ ವಾಸುದೇವನಿಗೆ ನಮಸ್ಕಾರ! ಏಕಾನೇಕಸ್ವರೂಪನಿಗೆ, ಸ್ಥೂಲಸೂಕ್ಷ್ಮಾತ್ಮನಿಗೆ, ಅವ್ಯಕ್ತವ್ಯಕ್ತಭೂತನಿಗೆ, ಮುಕ್ತಿಹೇತು ವಿಷ್ಣುವಿಗೆ ನಮಸ್ಕಾರ! ಜಗತ್ತಿನ ಸೃಷ್ಟಿ-ಸ್ಥಿತಿ-ವಿನಾಶಕರ್ತೃ, ಅಜರಾಮರ, ಮೂಲಭೂತ, ವಿಷ್ಣು ಪರಮಾತ್ಮನಿಗೆ ನಮಸ್ಕಾರ! ವಿಶ್ವದ ಆಧಾರಭೂತ, ಅತಿ ಸೂಕ್ಷ್ಮವಸ್ತುವಿಗಿಂತಲೂ ಸೂಕ್ಷ್ಮನಾಗಿರುವ, ಸರ್ವಭೂತಗಳಲ್ಲಿ ನೆಲೆಸಿರುವ ಅಚ್ಯುತ ಪುರುಷೋತ್ತಮನನ್ನು ನಮಿಸುತ್ತೇನೆ. ಜ್ಞಾನಸ್ವರೂಪನೂ, ಅತ್ಯಂತನೂ, ನಿರ್ಮಲನೂ, ಪರಮಾರ್ಥನು, ವ್ಯಕ್ತರೂಪದಿಂದ ಗೋಚರಿಸಿದರೂ ಸ್ವಭಾವತಃ ಜ್ಞಾನಸ್ವರೂಪನಾದವನಿಗೆ ನಮಸ್ಕಾರ! ವಿಶ್ವದ ಸೃಷ್ಟಿ-ಸ್ಥಿತಿ-ಲಯಗಳನ್ನು ಮಾಡುವ ಪ್ರಭು, ವಿಷ್ಣು, ಸರ್ವಜ್ಞ, ಜಗತ್ತಿನ ಈಶ, ಅಜ, ಅಕ್ಷಯ, ಅವ್ಯಯ, ಆದ್ಯ, ಸುಸೂಕ್ಷ್ಮ, ವಿಶ್ವೇಶ ಬ್ರಹ್ಮಾದಿಗಳಿಗೆ ನಮಿಸುತ್ತೇನೆ.
ಇತಿಹಾಸಪುರಾಣಜ್ಞಂ ವೇದವೇದಾಂಗಪಾರಗಮ್ ।। 28 ।। ಸರ್ವಶಾಸ್ತ್ರಾರ್ಥತತ್ತ್ವಜ್ಞಂ ಪರಾಶರಸುತಂ ಪ್ರಭುಮ್ । ಗುರುಂ ಪ್ರಣಮ್ಯ ವಕ್ಷ್ಯಾಮಿ ಪುರಾಣಂ ವೇದಸಮ್ಮಿತಮ್ ।। 29 ।। ಕಥಯಾಮಿ ಯಥಾ ಪೂರ್ವಂ ದಕ್ಷಾದ್ಯೈರ್ಮುನಿಸತ್ತಮೈಃ । ಪೃಷ್ಟಃ ಪ್ರೋವಾಚ ಭಗವಾನಬ್ಜಯೋನಿಃ ಪಿತಾಮಹಃ ।। 30 ।। ಶೃಣುಧ್ವಂ ಸಂಪ್ರವಕ್ಷ್ಯಾಮಿ ಕಥಾಂ ಪಾಪಪ್ರಣಾಶಿನೀಮ್ । ಕಥ್ಯಮಾನಾಂ ಮಯಾ ಚಿತ್ರಾಂ ಬಹ್ವರ್ಥಾಂ ಶ್ರುತಿವಿಸ್ತರಾಮ್ ।। 31 ।। ಯಸ್ತ್ವಿಮಾಂ ಧಾರಯೇನ್ನಿತ್ಯಂ ಶೃಣುಯಾದ್ವಾಪ್ಯಭೀಕ್ಷ್ಣಶಃ । ಸ್ವವಂಶಧಾರಣಂ ಕೃತ್ವಾ ಸ್ವರ್ಗಲೋಕೇ ಮಹೀಯತೇ ।। 32 ।।
ಇತಿಹಾಸಪುರಾಣಜ್ಞ, ವೇದವೇದಾಂಗಪಾರಂಗತ, ಸರ್ವಶಾಸ್ತ್ರಾರ್ಥತತ್ತ್ವಜ್ಞ, ಪರಾಶರಸುತ, ಪ್ರಭು ಗುರುವಿನ ನಮಸ್ಕರಿಸಿ ವೇದಸಮ್ಮಿತವಾದ ಪುರಾಣವನ್ನು ಹೇಳುತ್ತೇನೆ. ಹಿಂದೆ ದಕ್ಷಾದಿ ಮುನಿಸತ್ತಮರು ಭಗವಾನ್ ಅಬ್ಜಯೋನಿ ಪಿತಾಮಹನನ್ನು ಕೇಳಿದಾಗ ಬ್ರಹ್ಮನು ಇದನ್ನು ಹೇಳಿದನು. ಈ ಪಾಪಪ್ರಣಾಶಿನೀ ಕಥೆಯನ್ನು ಹೇಳುತ್ತೇನೆ. ನಾನು ಹೇಳುವ ವಿಚಿತ್ರ ಮತ್ತು ಅನೇಕಾರ್ಥಗಳುಳ್ಳ, ವೇದವನ್ನು ವಿಸ್ತರಿಸುವ ಇದನ್ನು ಕೇಳಿ. ನಿತ್ಯವೂ ಇದನ್ನು ಭಕ್ತಿಯಿಂದ ಕೇಳುವ ಮನುಷ್ಯನು ತನ್ನ ವಂಶವನ್ನು ಉದ್ಧರಿಸಿ ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ.
ಅವ್ಯಕ್ತಂ ಕಾರಣಂ ಯತ್ತನ್ನಿತ್ಯಂ ಸದಸದಾತ್ಮಕಮ್ । ಪ್ರಧಾನಂ ಪುರುಷಸ್ತಸ್ಮಾನ್ನಿರ್ಮಮೇ ವಿಶ್ವಮೀಶ್ವರಃ ।। 33 ।।
ಸೃಷ್ಟಿಗೆ ಮೊದಲು ಸದಸದಾತ್ಮಕವಾದ ಅವ್ಯಕ್ತರೂಪವೊಂದೇ ಇದ್ದಿತು. ಅದೇ ಸಮಸ್ತಕ್ಕೂ ಮೂಲಕಾರಣವು. ಅದರಿಂದಲೇ ಸರ್ವೇಶ್ವರನು ಈ ಸಮಸ್ತ ವಿಶ್ವವನ್ನೂ ನಿರ್ಮಿಸಿದನು. ಇಲ್ಲಿ ಸೃಷ್ಟಿಗೆ ಮೊದಲು ಇದ್ದ ಸ್ಥಿತಿಯನ್ನು ಶ್ರುತಿಯು ಹೀಗೆ ವರ್ಣಿಸಿರುವುದುದು. “ನಾಸದಾಸೀನ್ನೋಸದಾಸೀತ್ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್” ಅರ್ಥಾತ್ ಸೃಷ್ಟಿಗೆ ಮೊದಲು ಪರಬ್ರಹ್ಮವು ಅವ್ಯಕ್ತ ರೂಪದಿಂದ ಇದ್ದಿತು. ಆಗ ಸತ್-ಅಸತ್ ಎಂದು ವ್ಯಕ್ತಾವ್ಯಕ್ತರೂಪಗಳೊಂದೂ ಇಲ್ಲದೇ ವಿಶ್ವವೆಲ್ಲವೂ ಏಕಾಕಾರವಾಗಿ ಸೂಕ್ಷ್ಮರೂಪದ ಬ್ರಹ್ಮವಸ್ತುವಿನಿಂದ ಆವೃತವಾಗಿತ್ತು. ಪೃಥಿವ್ಯಾದಿ ಸ್ಥೂಲ ಪ್ರಪ್ರಂಚವೂ, ಆಕಾಶವೂ ಯಾವುದೂ ಇರಲಿಲ್ಲ. ಸೂರ್ಯ-ಚಂದ್ರರಿರಲಿಲ್ಲ. ರಾತ್ರಿ-ಹಗಲುಗಳಿರಲಿಲ್ಲ. ಎಲ್ಲೆಲ್ಲಿಯೂ ಗಾಢಾಂಧಕಾರವೇ ವ್ಯಾಪಿಸಿತ್ತು. ನಂತರ “ಅಸದ್ವಾ ಇದಮಗ್ರ ಆಸೀತ್ । ತತೋ ವೈ ಸದಜಾಯತ ।” ಅರ್ಥಾತ್ ಮೊದಲು ಅಸತ್ ಎಂಬ ಅವ್ಯಕ್ತ ರೂಪವೊಂದೇ ಇದ್ದಿತು. ಅದರಿಂದ ಸತ್ ಅಂತರೆ ವ್ಯಕ್ತರೂಪವುಂಟಾಯಿತು. ಹೀಗೆ ವೇದಗಳಲ್ಲಿಯೂ ಉಪನಿಷತ್ತುಗಳಲ್ಲಿಯೂ ಜಗತ್ಸೃಷ್ಟಿಯು ಸೂಕ್ಷ್ಮವಾಗಿ ವಿವರಿಸಲ್ಪಟ್ಟಿದೆ.
ತಂ ಬುಧ್ಯಧ್ವಂ ಮುನಿಶ್ರೇಷ್ಠಾ ಬ್ರಹ್ಮಾಣಮಮಿತೌಜಸಮ್ । ಸ್ರಷ್ಟಾರಂ ಸರ್ವಭೂತಾನಾಂ ನಾರಾಯಣಪರಾಯಣಮ್ ।। 34 ।। ಅಹಂಕಾರಸ್ತು ಮಹತಸ್ತಸ್ಮಾದ್ಭೂತಾನಿ ಜಜ್ಞಿರೇ । ಭೂತಭೇದಾಶ್ಚ ಭೂತೇಭ್ಯ ಇತಿ ಸರ್ಗಃ ಸನಾತನಃ ।। 35 ।। ವಿಸ್ತರಾವಯವಂ ಚೈವ ಯಥಾಪ್ರಜ್ಞಂ ಯಥಾಶ್ರುತಿ । ಕೀರ್ತ್ಯಮಾನಂ ಶೃಣುಧ್ವಂ ವಃ ಸರ್ವೇಷಾಂ ಕೀರ್ತಿವರ್ಧನಮ್ ।। 36 ।। ಕೀರ್ತಿತಂ ಸ್ಥಿರಕೀರ್ತೀನಾಂ ಸರ್ವೇಷಾಂ ಪುಣ್ಯವರ್ಧನಮ್ । ತತಃ ಸ್ವಯಂಭೂರ್ಭಗವಾನ್ಸಿಸೃಕ್ಷುರ್ವಿವಿಧಾಃ ಪ್ರಜಾಃ ।। 37 ।। ಆಪ ಏವ ಸಸರ್ಜಾದೌ ತಾಸು ವೀರ್ಯಮಥಾಸೃಜತ್ ।
ಆ ಪ್ರಧಾನವೇ ಸೃಷ್ಟಿಕರ್ತನಾದ ಬ್ರಹ್ಮನಾಯಿತು. ಮಹಾತೇಜಸ್ವೀ ಬ್ರಹ್ಮನು ನಾರಾಯಣನ ಅನುಗ್ರಹದಿಂದ ಈ ಜಗತ್ತೆಲ್ಲವನ್ನೂ ಸೃಷ್ಟಿಸಿದನು. ಅವನಿಗೆ ಮಹತ್ ಎಂಬ ಹೆಸರಿದೆ. ಆ ಮಹತ್ತಿನಿಂದ ಅಂದರೆ ಬ್ರಹ್ಮನಿಂದ ಅಹಂಕಾರವು ಜನಿಸಿತು. ಅಹಂಕಾರದಿಂದ ಐದು ಸೂಕ್ಷ್ಮಭೂತಗಳು ಜನಿಸಿದವು. ಅವುಗಳಿಂದ ಪೃಥ್ವಿ, ಜಲ, ತೇಜಸ್ಸು, ವಾಯು, ಆಕಾಶಗಳೆಂಬ ಐದು ಮಹಾಭೂತಗಳು ಜನಿಸಿದವು. ಇದು ಆದಿಸೃಷ್ಟಿಯ ಕ್ರಮವು. ಸೃಷ್ಟಿಯ ಕ್ರಮವನ್ನು ಯಥಾವತ್ತಾಗಿ ನನಗೆ ತಿಳಿದಿರುವಷ್ಟುಮಟ್ಟಿಗೆ ಹೇಳುತ್ತೇನೆ. ಎಲ್ಲರೂ ಕೇಳಿ. ಇದರಿಂದ ಕೀರ್ತಿಯು ವರ್ಧಿಸುತ್ತದೆ. ಈ ಕಥೆಯನ್ನು ಕೇಳಿ ಎಷ್ಟೋ ಜನರು ಕೀರ್ತಿವಂತರಾಗಿದ್ದಾರೆ. ನಂತರ ಭಗವಾನ್ ಬ್ರಹ್ಮನು ಪ್ರಜೆಗಳನ್ನು ಸೃಷ್ಟಿಸಲು ಮೊದಲು ಜಲವನ್ನು ಸೃಷ್ಟಿಸಿದನು. ಆ ಜಲದಲ್ಲಿ ತನ್ನ ವೀರ್ಯವನ್ನು ವಿಸರ್ಜಿಸಿದನು.
ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ನರಸೂನವಃ ।। 38 ।। ಅಯನಂ ತಸ್ಯ ತಾಃ ಪೂರ್ವಂ ತೇನ ನಾರಾಯಣಃ ಸ್ಮೃತಃ । ಹಿರಣ್ಯವರ್ಣಮಭವತ್ತದಂಡಮುದಕೇಶಯಮ್ ।। 39 ।। ತತ್ರ ಜಜ್ಞೇ ಸ್ವಯಂ ಬ್ರಹ್ಮಾ ಸ್ವಯಂಭೂರಿತಿ ನಃ ಶ್ರುತಮ್ । ಹಿರಣ್ಯವರ್ಣೋ ಭಗವಾನುಷಿತ್ವಾ ಪರಿವತ್ಸರಮ್ ।। 40 ।। ತದಂಡಮಕರೋದ್ದ್ವೈಧಂ ದಿವಂ ಭುವಮಥಾಪಿ ಚ । ತಯೋಃ ಶಕಲಯೋರ್ಮಧ್ಯ ಆಕಾಶಮಕರೋತ್ಪ್ರಭುಃ ।। 41 ।। ಅಪ್ಸು ಪಾರಿಪ್ಲವಾಂ ಪೃಥ್ವೀಂ ದಿಶಶ್ಚ ದಶಧಾ ದಧೇ । ತತ್ರ ಕಾಲಂ ಮನೋ ವಾಚಂ ಕಾಮಂ ಕ್ರೋಧಮಥೋ ರತಿಮ್ ।। 42 ।। ಸಸರ್ಜ ಸೃಷ್ಟಿಂ ತದ್ರೂಪಾಂ ಸ್ರಷ್ಟುಮಿಚ್ಛನ್ಪ್ರಜಾಪತೀನ್ । ಮರೀಚಿಮತ್ರ್ಯಂಗಿರಸೌ ಪುಲಸ್ತ್ಯಂ ಪುಲಹಂ ಕ್ರತುಮ್ ।। 43 ।। ವಸಿಷ್ಠಂ ಚ ಮಹಾತೇಜಾಃ ಸೋಽಸೃಜತ್ಸಪ್ತ ಮಾನಸಾನ್ । ಸಪ್ತ ಬ್ರಹ್ಮಾಣ ಇತ್ಯೇತೇ ಪುರಾಣೇ ನಿಶ್ಚಯಂ ಗತಾಃ ।। 44 ।। ನಾರಾಯಣಾತ್ಮಕಾನಾಂ ತು ಸಪ್ತಾನಾಂ ಬ್ರಹ್ಮಜನ್ಮನಾಮ್ ।
ಆದಿನರನಾದ ಬ್ರಹ್ಮನಿಂದ ಮೊದಲು ಜನಿಸಿದುದರಿಂದ ಜಲಕ್ಕೆ “ನಾರ” ಎಂಬ ಹೆಸರಾಯಿತು. ಆ ನಾರ(ಜಲ)ನಿಧಿಯಲ್ಲಿ ವಾಸಿಸುವುದರಿಂದ ಹರಿಗೆ ನಾರಾಯಣನೆಂದು ಹೆಸರಾಯಿತು. ಬ್ರಹ್ಮನು ನೀರಿನಲ್ಲಿ ವಿಸರ್ಜಿಸಿದ ವೀರ್ಯವು ಚಿನ್ನದ ಬಣ್ಣದ ಗೋಳವಾಯಿತು – ಬ್ರಹ್ಮಾಂಡವಾಯಿತು. ಆ ಬ್ರಹ್ಮಾಂಡದಲ್ಲಿಯೇ ಚತುರ್ಮುಖ ಬ್ರಹ್ಮನು ಜನಿಸಿದನೆಂದು ಕೇಳಿರುವೆವು. ಭಗವಾನ್ ಹಿರಣ್ಯಗರ್ಭನು ಆ ಗೋಳದಲ್ಲಿ ಒಂದು ವರ್ಷ ಕಾಲವಿದ್ದು ಅದನ್ನು ಸ್ವರ್ಗ-ಭೂಮಿ ಎಂದು ಭಾಗವಾಗಿ ಮಾಡಿದನು. ಆ ಸ್ವರ್ಗ ಮತ್ತು ಭೂಮಿಗಳ ನಡುವೆ ಆಕಾಶವನ್ನು ಕಲ್ಪಿಸಿದನು. ಜಲರಾಶಿಯ ಮೇಲೆ ದ್ವೀಪದಂತೆ ಭೂಮಿಯನ್ನಿರಿಸಿದನು. ನಂತರ ಎಂಟು ದಿಕ್ಕುಗಳನ್ನು ಕಲ್ಪಿಸಿದನು. ನಂತರ ಮನಸ್ಸು, ಕಾಲ, ವಾಕ್ಕು, ಕಾಮ, ಕ್ರೋಧ, ರತಿಗಳನ್ನೂ ಇವುಗಳುಳ್ಳ ಪ್ರಜೆಗಳನ್ನೂ ಸೃಷ್ಟಿಸಿದನು. ಮುಂದೆ ಸೃಷ್ಟಿಯು ಮುಂದುವರೆಯಲು ಪ್ರಜಾಪತಿಗಳನ್ನು ಸೃಷ್ಟಿಸಿದನು. ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತು ಮತ್ತು ವಸಿಷ್ಠ ಎಂಬ ಏಳು ಮಾನಸಪುತ್ರರನ್ನು ಸೃಷ್ಟಿಸಿದನು. ಇವರು ಸಪ್ತಬ್ರಹ್ಮರು ಎಂದು ಪುರಾಣಗಳಲ್ಲಿ ಹೇಳುತ್ತಾರೆ. ನಾರಾಯಣಾತ್ಮಕರಾದ ಈ ಏಳುಮಂದಿಯೂ ಬ್ರಹ್ಮಜನ್ಮರು.
ತತೋಽಸೃಜತ್ಪುರಾ ಬ್ರಹ್ಮಾ ರುದ್ರಂ ರೋಷಾತ್ಮಸಂಭವಮ್ ।। 45 ।। ಸನತ್ಕುಮಾರಂ ಚ ವಿಭುಂ ಪೂರ್ವೇಷಾಮಪಿ ಪೂರ್ವಜಮ್ । ಸಪ್ತಸ್ವೇತಾ ಅಜಾಯಂತ ಪ್ರಜಾ ರುದ್ರಾಶ್ಚ ಭೋ ದ್ವಿಜಾಃ ।। 46 ।। ಸ್ಕಂದಃ ಸನತ್ಕುಮಾರಶ್ಚ ತೇಜಃ ಸಂಕ್ಷಿಪ್ಯ ತಿಷ್ಠತಃ । ತೇಷಾಂ ಸಪ್ತ ಮಹಾವಂಶಾ ದಿವ್ಯಾ ದೇವಗಣಾನ್ವಿತಾಃ ।। 47 ।। ಕ್ರಿಯಾವಂತಃ ಪ್ರಜಾವಂತೋ ಮಹರ್ಷಿಭಿರಲಂಕೃತಾಃ ।
ನಂತರ ಬ್ರಹ್ಮನು ತನ್ನ ಕೋಪದಿಂದ ಕ್ರೋಧಮೂರ್ತಿಯಾದ ರುದ್ರನನ್ನು ಸೃಷ್ಟಿಸಿದನು. ಮತ್ತು ಸನತ್ಕುಮಾರನೆಂಬ ಮಹಾಜ್ಞಾನಿಯನ್ನು ಸೃಷ್ಟಿಸಿದನು. ಇವನು ಎಲ್ಲರಿಗಿಂತಲೂ ಹಿರಿಯನು. ನಂತರ ಏಳು ಮಾನಸಪುತ್ರರು ಪ್ರಜೆಗಳನ್ನು ಸೃಷ್ಟಿಸಿದರು. ರುದ್ರನೂ ಕೆಲವರನ್ನು ಸೃಷ್ಟಿಸಿದನು. ರುದ್ರಪುತ್ರನಾದ ಸ್ಕಂದ ಮತ್ತು ಸನತ್ಕುಮಾರರು ಜಿತೇಂದ್ರಿಯರಾಗಿದ್ದು ಪ್ರಜಾಸೃಷ್ಟಿಯನ್ನು ಮಾಡಲಿಲ್ಲ. ಮರೀಚಿಯೇ ಮೊದಲಾದ ಏಳು ಮಾನಸಕುಮಾರರಿಂದ ದೇವತೆಗಳು ಮೊದಲಾದ ಏಳು ವಂಶಗಳು ಜನಿಸಿದವು. ಆ ವಂಶಗಳಲ್ಲಿ ಜಿತೇಂದ್ರಿಯರಾದ ಮಹರ್ಷಿಗಳು ಜನಿಸಿದರು. ಪ್ರಜೆಗಳೆಲ್ಲರೂ ಕರ್ಮನಿಷ್ಠರು. ಅವರಿಂದ ಉತ್ತಮ ಪ್ರಜೆಗಳು ಜನಿಸಿದರು.
ವಿದ್ಯುತೋಽಶನಿಮೇಘಾಂಶ್ಚ ರೋಹಿತೇಂದ್ರಧನೂಂಷಿ ಚ ।। 48 ।। ವಯಾಂಸಿ ಚ ಸಸರ್ಜಾದೌ ಪರ್ಜನ್ಯಂ ಚ ಸಸರ್ಜ ಹ । ಋಚೋ ಯಜೂಂಷಿ ಸಾಮಾನಿ ನಿರ್ಮಮೇ ಯಜ್ಞಸಿದ್ಧಯೇ ।। 49 ।। ಸಾಧ್ಯಾನಜನಯದ್ದೇವಾನಿತ್ಯೇವಮನುಸಂಜಗುಃ । ಉಚ್ಚಾವಚಾನಿ ಭೂತಾನಿ ಗಾತ್ರೇಭ್ಯಸ್ತಸ್ಯ ಜಜ್ಞಿರೇ ।। 50 ।। ಆಪವಸ್ಯ ಪ್ರಜಾಸರ್ಗಂ ಸೃಜತೋ ಹಿ ಪ್ರಜಾಪತೇಃ । ಸೃಜ್ಯಮಾನಾಃ ಪ್ರಜಾ ನೈವ ವಿವರ್ಧಂತೇ ಯದಾ ತದಾ ।। 51 ।।
ನಂತರ ಬ್ರಹ್ಮನು ಮಿಂಚು, ಸಿಡಿಲು, ಮೇಘ, ನಾನಾಬಣ್ಣದ ಕಾಮನ ಬಿಲ್ಲು, ನೀರು, ಮಳೆಗಳನ್ನು ಸೃಷ್ಟಿಸಿದನು. ಯಜ್ಞಗಳಿಗಾಗಿ ಋಗ್ವೇದ, ಯಜುರ್ವೇದ, ಸಾಮವೇದಗಳನ್ನು ಹೊರಗೆಡಹಿದನು. ಸಾಧ್ಯರೆಂಬ ದೇವತೆಗಳನ್ನೂ ಬ್ರಹ್ಮನು ಸೃಜಿಸಿದನೆಂದು ಹೇಳುತ್ತಾರೆ. ಮುಂದೆ ಅವನ ಶರೀರಗಳಿಂದ ನಾನಾಜಾತಿಯ ಪ್ರಾಣಿಗಳು ಜನಿಸಿದವು. ಹೀಗೆ ಜಲವನ್ನು ಮೊದಲ್ಗೊಂಡು ಬ್ರಹ್ಮನು ಸೃಷ್ಟಿಮಾಡುತ್ತಿರಲು ಅವನು ಸೃಷ್ಟಿಸಿದಷ್ಟೇ ಪ್ರಜೆಗಳಾದರು. ಮುಂದೆ ಬೆಳೆಯಲೇ ಇಲ್ಲ.
ದ್ವಿಧಾ ಕೃತ್ವಾತ್ಮನೋ ದೇಹಮರ್ಧೇನ ಪುರುಷೋಽಭವತ್ । ಅರ್ಧೇನ ನಾರೀ ತಸ್ಯಾಂ ತು ಸೋಽಸೃಜದ್ದ್ವಿವಿಧಾಃ ಪ್ರಜಾಃ ।। 52 ।। ದಿವಂ ಚ ಪೃಥಿವೀಂ ಚೈವ ಮಹಿಮ್ನಾ ವ್ಯಾಪ್ಯ ತಿಷ್ಠತಿ । ವಿರಾಜಮಸೃಜದ್ವಿಷ್ಣುಃ ಸೋಽಸೃಜತ್ಪುರುಷಂ ವಿರಾಟ್ ।। 53 ।। ಪುರುಷಂ ತಂ ಮನುಂ ವಿದ್ಯಾತ್ತಸ್ಯ ಮನ್ವಂತರಂ ಸ್ಮೃತಮ್ । ದ್ವಿತೀಯಂ ಮಾನಸಸ್ಯೈತನ್ಮನೋರಂತರಮುಚ್ಯತೇ ।। 54 ।। ಸ ವೈರಾಜಃ ಪ್ರಜಾಸರ್ಗಂ ಸಸರ್ಜ ಪುರುಷಃ ಪ್ರಭುಃ । ನಾರಾಯಣವಿಸರ್ಗಸ್ಯ ಪ್ರಜಾಸ್ತಸ್ಯಾಪ್ಯಯೋನಿಜಾಃ ।। 55 ।। ಆಯುಷ್ಮಾನ್ಕೀರ್ತಿಮಾನ್ಪುಣ್ಯ-ಪ್ರಜಾವಾಂಶ್ಚ ಭವೇನ್ನರಃ । ಆದಿಸರ್ಗಂ ವಿದಿತ್ವೇಮಂ ಯಥೇಷ್ಟಾಂ ಚಾಪ್ನುಯಾದ್ಗತಿಮ್ ।। 56 ।।
ವಿಷ್ಣುವು ಸ್ವರ್ಗ-ಭೂಮಿಗಳನ್ನು ವ್ಯಾಪಿಸಿರುವ ಮಹಾಮಹಿಮ ವಿರಾಟ್ಪುರುಷನನ್ನು ಸೃಜಿಸಿದನು. ಆ ವಿರಾಟ್ಪುರುಷನು ಪುರುಷನೋರ್ವನನ್ನು ಸೃಜಿಸಿದನು. ಆ ಪುರುಷನೇ ಮನುಚಕ್ರವರ್ತಿಯು. ಅವನ ಹೆಸರಿನಿಂದಲೇ ಮನ್ವಂತರಗಳಾದವು. ಈಗ ವಿಷ್ಣುಮಾನಸಕುಮಾರನಾದ ಆ ಮನುವಿನ ಎರಡನೆಯ ಮನ್ವಂತರವು ನಡೆಯುತ್ತಿದೆ. ವಿರಾಟ್ಪುರುಷನ ಮಗನಾದ ಮನುವೂ ಪ್ರಜೆಗಳನ್ನು ಸೃಷ್ಟಿಸಿದನು. ನಾರಾಯಣದ ವಂಶಜ ಆ ಮನುವಿನ ಪ್ರಜೆಗಳು ಅಯೋನಿಜರು, ಮಾನಸಪುತ್ರರು. ಸ್ತ್ರೀ ಸಂಪರ್ಕದಿಂದ ಜನಿಸಿದವರಲ್ಲ. ಈ ಆದಿಸೃಷ್ಟಿಯನ್ನು ಕೇಳಿದವರು ದೀರ್ಘಾಯುಸ್ಸುಳ್ಳವರಾಗುತ್ತಾರೆ. ಕೀರ್ತಿವಂತರಾಗುತ್ತಾರೆ. ಪುಣ್ಯವಂತರಾಗುತ್ತಾರೆ. ಉತ್ತಮ ಮಕ್ಕಳನ್ನು ಪಡೆಯುತ್ತಾರೆ. ಪರದಲ್ಲಿ ಉತ್ತಮ ಗತಿಯನ್ನು ಪಡೆಯುತ್ತಾರೆ.”
ಇತಿ ಶ್ರೀಮಹಾಪುರಾಣೇ ಆದಿಬ್ರಹ್ಮೇ ಸೃಷ್ಟಿಕಥನವರ್ಣನಂ ನಾಮ ಪ್ರಥಮೋಽಧ್ಯಾಯಃ ।।