ಶ್ರೀವಿಷ್ಣುಮಹಾಪುರಾಣ

ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ । ಸದೈಕರೂಪರೂಪಾಯ ವಿಷ್ಣವೇ ಸರ್ವಜಿಷ್ಣವೇ ।।

[ವಿಷ್ಣುಪುರಾಣಂ (ಕನ್ನಡ ಅನುವಾದಸಹಿತ, 3 ಭಾಗಗಳಲ್ಲಿ), ಅನುವಾದಕ ಪಂಡಿತ ಗಂಜಾಂ ತಿಮ್ಮಣ್ಣಯ್ಯ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 49, ಮೈಸೂರು, ಶ್ರೀವಿನಾಯಕ್ ಪ್ರಿಂಟಿಂಗ್ ಪ್ರೆಸ್, 1948]

ಮತ್ಸ್ಯಪುರಾಣದ 63ನೇ ಅಧ್ಯಾಯದ 16ನೇ ಶ್ಲೋಕದ ಪ್ರಕಾರ ವಾರಾಹಕಲ್ಪವೃತ್ತಾಂತಮಧಿಕೃತ್ಯ ಪರಾಶರ ಯತ್ಪ್ರಾಹ ಧರ್ಮಾನಖಿಲಾಂಸ್ತದ್ಯುಕ್ತಂ ವೈಷ್ಣವಂ ವಿದುಃ ।। ಅರ್ಥಾತ್: ವಾರಾಹಕಲ್ಪದ ವೃತ್ತಾಂತವನ್ನು ಪರಾಶರನು ಹೇಳಿದ ಪುರಾಣವನ್ನು ವಿಷ್ಣುಪುರಾಣ ಎನ್ನುತ್ತಾರೆ. ಇದರಲ್ಲಿ ಸಕಲ ಧರ್ಮಗಳೂ ಪ್ರತಿಪಾದಿತಗೊಂಡಿವೆ. ನಾರದೀಯಪುರಾಣದ ಪ್ರಕಾರ ವಿಷ್ಣುಪುರಾಣದಲ್ಲಿ 23,000 ಶ್ಲೋಕಗಳಿವೆ. ಪರಾಶರ-ಮೈತ್ರೇಯ ಸಂವಾದರೂಪವಾಗಿರುವ ಇದರಲ್ಲಿ ಎರಡುಭಾಗಗಳಿವೆ. ಮೊದಲನೇ ಭಾಗದಲ್ಲಿ ಆರು ಅಂಶಗಳಿವೆ.[1]

ಈಗ ನಮಗೆ ದೊರಕಿರುವ ವಿಷ್ಣುಪುರಾಣವು ಆರು ಅಂಶಗಳಲ್ಲಿ ವಿಭಜನೆಗೊಂಡಿದೆ. ಮೊದಲನೇ ಎರಡು ಅಂಶಗಳಲ್ಲಿ ಪ್ರಪಂಚವು ಸೃಷ್ಟಿಯಾಗುವ ಬಗೆ, ಮನ್ವಂತರಗಳು, ವರಾಹಾವತಾರ, ಭೂಮಂಡಲದ ಸ್ವರೂಪ, ಸೂರ್ಯಾದಿಗ್ರಹಗಳು ಮತ್ತು ನಕ್ಷತ್ರಗಳ ಸಂಚಾರಕ್ರಮ ಇವುಗಳನ್ನು ವಿವರಿಸಿ ಕೊನೆಯಲ್ಲಿ ಋಭು-ನಿದಾಘರ ಉಪಾಖ್ಯಾನದಲ್ಲಿ ಅದ್ವೈತ ತತ್ವದ ಸ್ವರೂಪದ ವರ್ಣನೆಯಿದೆ. ವಿಷ್ಣುಪುರಾಣದ ಮೂರನೆಯ ಮತ್ತು ನಾಲ್ಕನೆಯ ಅಂಶಗಳಲ್ಲಿ ಸ್ವಾಯಂಭುವ ಮನುವಿನಿಂದ ಪ್ರಾರಂಭಿಸಿ ವೈವಸ್ವತ ಮನುವಿನವರೆಗಿನ ಮನುಗಳ ಅಧಿಕಾರಗಳು, ವೇದಶಾಖಾವಿಭಾಗಗಳು, ಆಖ್ಯಾನ-ಉಪಾಖ್ಯಾನಗಳ ಸ್ವರೂಪಗಳು, ವಿಷ್ಣುತತ್ವಸ್ವರೂಪ, ವಿಷ್ಣುಪೂಜಾವಿಧಾನ, ಆಶ್ರಮಧರ್ಮಗಳು, ನಿತ್ಯನೈಮಿತ್ತಿಕಾದಿಕರ್ಮಗಳು, ಸದಾಚಾರಗಳು ಮತ್ತು ರಾಜವಂಶವರ್ಣನೆಗಳಿವೆ. ಐದನೆಯ ಅಂಶದಲ್ಲಿ ಕೃಷ್ಣಾವತಾರದ ಬಾಲಲೀಲೆಯಿಂದ ಹಿಡಿದು ಯದುವಂಶದ ಉಪಸಂಹಾರದ ವರೆಗಿನ ವರ್ಣನೆಯಿದೆ. ಶ್ರೀಕೃಷ್ಣನು ಹಿಂದಿನ ಜನ್ಮದಲ್ಲಿ ರಾಕ್ಷಸರಾಗಿದ್ದು ಈಗ ಕ್ಷತ್ರಿಯರಾಗಿ ಹುಟ್ಟಿದ ದುಷ್ಟರನ್ನು ಶಿಕ್ಷಿಸಿದುದಲ್ಲದೇ ತಾನು ಹುಟ್ಟಿ ಪವಿತ್ರಗೊಳಿಸಿದ ಯದುವಂಶವನ್ನೇ ಉಪಸಂಹರಿಸಿದುದನ್ನು ಸಕಾರಣವಾಗಿ ವಿವರಿಸಿ ಕೊನೆಯಲ್ಲಿ ಭಕ್ತರಾದ ಜೀವರಿಗೆ ಪರಮಾತ್ಮ ಸಾಕ್ಷಾತ್ಕಾರರೂಪದ ತತ್ತ್ವವನ್ನು ಉಪದೇಶವನ್ನು ಮಾಡುತ್ತಾನೆ. ಆರನೆಯ ಅಂಶದಲ್ಲಿ ಕಲಿಯುಗದಲ್ಲಿ ಮುಂದೆ ಬರುವ ರಾಜರ ವಿಷಯವೂ, ಕಲಿಧರ್ಮನಿರೂಪಣೆಯೂ, ನೈಮಿತ್ತಿಕ, ಪ್ರಾಕೃತಿಕ. ಆತ್ಯಂತಿಕ ಪ್ರಳಯಸ್ವರೂಪಗಳೂ, ಭಗವಂತನ ಸ್ವರೂಪವೂ, ಖಾಂಡಿಕ್ಯ-ಕೇಶಿಧ್ವಜರ ಸಂವಾದರೂಪದಾದ ರಾಜಧರ್ಮವೂ, ಯೋಗಮಾರ್ಗೋಪದೇಶವೂ ಹೇಳಿರುವುದಲ್ಲದೇ ಕೊನೆಯಲ್ಲಿ ವಿಷ್ಣುಪುರಾಣದ ಶ್ರವಣ-ಪಾರಾಯಣಾದಿಗಳ ಫಲವನ್ನೂ ಹೇಳಿದೆ.

ಪ್ರಥಮಾಂಶದ ಮೊದಲನೇ ಅಧ್ಯಾಯದ ಕೊನೆಯಲ್ಲಿ ಬಂದಿರುವಂತೆ ವಿಷ್ಣುಪುರಾಣವು ಬ್ರಹ್ಮಾಂಡ ಮಹಾಪುರಾಣದ ಪರಾಶರ ಸಂಹಿತೆಯ ಸಂಗ್ರಹವು. ಮೂರನೇ ಅಂಶದ ಆರನೇ ಅಧ್ಯಾಯದ ಪ್ರಕಾರ ಸೂತರ ಆರು ಶಿಷ್ಯರು ರಚಿಸಿದ ಪುರಾಣಸಂಹಿತೆಯ ಸಾರವನ್ನು ಸಂಗ್ರಹಿಸಿ ವಿಷ್ಣುಪುರಾಣವನ್ನು ರಚಿಸಿರುವೆನೆಂದು ಪರಾಶರನೇ ಹೇಳುತ್ತಾರೆ. ಪರಾಶರನು ವೈವಸ್ವತ ಮನ್ವಂತರದ 26ನೇ ದ್ವಾಪರಯುಗದಲ್ಲಿ ವೇದವಿಭಾಗಕರ್ತನಾಗಿ ವ್ಯಾಸಾಧಿಕಾರವನ್ನು ಪಡೆದಿದ್ದನೆಂದೂ ಹೇಳಿದೆ. ಪರಶರನ ಮಗ ಕೃಷ್ಣದ್ವೈಪಾಯನನೇ 28ನೆಯ ವ್ಯಾಸನು. ಕೃಷ್ಣದ್ವೈಪಾಯನನು ತನ್ನ ಶಿಷ್ಯ ಸೂತನಿಗೆ ವಿಷ್ಣುಪುರಾಣವನ್ನು ಕಲಿಸಲು, ಆ ಸೂತನ ಶಿಷ್ಯರು ರಚಿಸಿದ ಪುರಾಣಗಳ ಸಾರವನ್ನು ಪರಾಶರನು ಪರಿಕ್ಷಿತರಾಜನ ಕಾಲದಲ್ಲಿ ತನ್ನ ಶಿಷ್ಯ ಮೈತ್ರೇಯನಿಗೆ ಇದನ್ನು ಹೇಳಿದನೆಂದು ತಿಳಿಯುತ್ತದೆ.

ಪ್ರಥಮಾಂಶ (22 ಅಧ್ಯಾಯಗಳು):

ಮೈತ್ರೇಯ ಮುನಿಯು ಪರಾಶರನನ್ನು ಪ್ರಶ್ನಿಸಲು ತಾನು ಮಾಡಿದ ರಾಕ್ಷಸ ಯಾಗವನ್ನು ವಿವರಿಸಿ, ವಿಷ್ಣುಪುರಾಣವನ್ನು ರಚಿಸುವುದಕ್ಕೆ ಕಾರಣವನ್ನು ಹೇಳುತ್ತಾನೆ (ಅಧ್ಯಾಯ 1). ವಿಷ್ಣುಸ್ತೋತ್ರ, ಪರಬ್ರಹ್ಮತತ್ತ್ವದ ವಿವರಣೆ, ಪ್ರಪಂಚದ ಸೃಷ್ಟಿಕ್ರಮ ವಿಷ್ಣುವೇ ಪ್ರಪಂಚ ಸ್ವರೂಪನೆಂಬ ವಿವರಣೆ (2). ಕಾಲದ ಸ್ವರೂಪ, ಅಳತೆ, ದೇವಮಾನ, ಮನುಷ್ಯಮಾನ, ಚತುರ್ಯುಗಪ್ರಮಾಣ, ಮನ್ವಂತರ, ಪ್ರಳಯಗಳ ಸ್ವರೂಪ (3). ವರಾಹಕಲ್ಪದ ಆದಿಯಲ್ಲಿ ಸೃಷ್ಟಿಕ್ರಮ, ವರಾಹಾವತಾರ ವರ್ಣನೆ (4). ಸ್ಥಾವರತಿರ್ಯಗ್ಯೋನಿ ಮನುಷ್ಯಸೃಷ್ಟಿಗಳ ವರ್ಣನೆ, ಪ್ರಕೃತಿ-ವಿಕೃತ್, ಊರ್ಧ್ವಾರ್ವಾಕ್ ಸ್ರೋತ, ರಾಕ್ಷಸ-ಪಿತೃಗಳ ಸೃಷ್ಟಿ ಕ್ರಮ, ಧರ್ಮಾಧರ್ಮಸ್ವರೂಪಗಳ ವಿವರಣೆ (5). ಬ್ರಾಹ್ಮಣಾದಿ ವರ್ಣಗಳ ಸೃಷ್ಟಿಕ್ರಮ, ಚತುರ್ಯುಗಗಳ ಧರ್ಮಾಚರಣೆ ಮತ್ತು ಶಕ್ತಿಗಳ ವಿವರಣೆ (6). ಬ್ರಹ್ಮಮಾನಸಪುತ್ರರು, ಅವರ ಪತ್ನಿಯರು, ಏಕಾದಶರುದ್ರರು, ಮನು-ಶತರೂಪೆಯರ ಉತ್ಪತ್ತಿ ಮತ್ತು ವಂಶವರ್ಣನೆ, ತಿವಿಧ ಪ್ರಳಯಗಳ ಸ್ವರೂಪ ವರ್ಣನೆ (7). ಸಮುದ್ರಮಥನ (9). ಭೃಗು, ಮರೀಚಿ, ಅಂಗಿರಸ, ಪುಲಸ್ತ್ಯ, ಕ್ರತು, ಮತ್ತು ವಸಿಷ್ಠರ ವಂಶವರ್ಣನೆ, ದಕ್ಷಪುತ್ರಿಯರ ಸಂತತಿಯ ವರ್ಣನೆ (10). ಧ್ರುವೋಪಾಖ್ಯಾನ (11-12). ಧ್ರುವನ ವಂಶವರ್ಣನೆ, ಪೃಥುವಿನ ವಂಶವಿಸ್ತಾರ, ದಕ್ಷಪ್ರಜಾಪತಿಯ ಜನನ, ದಿತಿಯ ವಂಶವರ್ಣನೆ (13-15). ಪ್ರಹ್ಲಾದಚರಿತ್ರೆ (16-20). ಪ್ರಹ್ಲಾದ ಮತ್ತು ಕಶ್ಯಪ ವಂಶವರ್ಣನೆ, ವಿಷ್ಣುವು ಸೃಷ್ಟಿ, ಸ್ಥಿತಿ, ಲಯಗಳನ್ನು ಮಾಡುವ ಬಗೆ (21-22).

ನಾರದೀಯಪುರಾಣದ ಪ್ರಕಾರ ಪೂರ್ವಭಾಗದ ಮೊದಲನೆಯ ಅಂಶದಲ್ಲಿ ಪುರಾಣದ ಅವತಾರಿಕೆ, ಆದಿಕಾರಣಸೃಷ್ಟಿ, ದೇವತೆ ಮೊದಲಾದವರ ಜನ್ಮ, ಸಮುದ್ರಮಥನೋಪಾಖ್ಯಾನ, ದಕ್ಷಾದಿಗಳ ವಂಶ, ಧ್ರುವಚರಿತ್ರೆ, ಪೃಥುಚರಿತ್ರೆ, ಪ್ರಾಚೇತಸೋಪಾಖ್ಯಾನ, ಪ್ರಹ್ಲಾದ ಚರಿತ್ರೆ, ಮತ್ತು ರಾಜ್ಯಾಧಿಕಾರದ ವಿಚಾರಗಳಿವೆ.[2]

ದ್ವಿತೀಯಾಂಶ (16 ಅಧ್ಯಾಯಗಳು):

ಭೂಮಂಡಲ, ಭಾರತವರ್ಷ, ಜಂಬೂದ್ವೀಪಾದಿ ಸಪ್ತದ್ವೀಪಗಳ ವರ್ಣನೆ (1-4). ಪಾತಾಳಲೋಕಗಳ ವರ್ಣನೆ, ಅನಂತನ ಮಹಿಮೆ, ನರಕವರ್ಣನೆ (5-6). ಭುವರ್ಲೋಕಾದಿ-ಗಳ ವರ್ಣನೆ (7-12). ಭರತೋಪಾಖ್ಯಾನ, ಋಭು-ನಿದಾಘಸಂವಾದ, ಅದ್ವೈತ ತತ್ವೋಪದೇಶ (13-16).

ನಾರದೀಯಪುರಾಣದ ಪ್ರಕಾರ ಪೂರ್ವಭಾಗದ ಎರಡನೆಯ ಅಂಶದಲ್ಲಿ ಪ್ರಿಯವ್ರತವಂಶಚರಿತ್ರೆ, ದ್ವೀಪಖಂಡನಿರೂಪಣೆ, ಪಾತಾಲನರಕಾಖ್ಯಾನ, ಸಪ್ತಸ್ವರ್ಗನಿರೂಪಣೆ, ಸೂರ್ಯಾದಿವಾರವಿಚಾರ, ಮೋಕ್ಷಮಾರ್ಗಪ್ರದ-ರ್ಶಕವಾದ ಭರತಚರಿತ್ರೆ, ನಿದಾಘ-ಋಭು ಸಂವಾದ ಇವು ಉಕ್ತವಾಗಿವೆ.[3]

ತೃತೀಯಾಂಶ (18 ಅಧ್ಯಾಯಗಳು):

ಮನ್ವಂತರಗಳ ವರ್ಣನೆ (1-2), ವೈವಸ್ವತ ಮನ್ವಂತರದ 29 ದ್ವಾಪರಯುಗಗಳ ವೇದವ್ಯಾಸರ ಹೆಸರುಗಳು (3), ಕೃಷ್ಣದ್ವೈಪಾಯನನು ಮಾಡಿದ ವೇದವಿಭಾಗ, ಪೈಲನ ಋಗ್ವೇದಸಂಹಿತಾ, ವೈಶಂಪಾಯನನ ಯಜುರ್ವೇದವಿಭಾಗಗಳು, ಯಾಜ್ಞವಲ್ಕ್ಯನ ಚರಿತ್ರೆ ಮತ್ತು ವಾಸಸನೇಯ ಶಾಖೆಯು ಬಂದ ಬಗೆ, ಜೈಮಿನಿಯ ಸಾಮವೇದದ ಶಾಖೆಗಳು, ಸುಮಂತುವಿನ ಅಥರ್ವಣ ವೇದದ ಶಾಖಾಭೇದಗಳು, ಸೂತನ ಪುರಾಣಸಂಹಿತೆ (4-6), ಭೀಷ್ಮ-ನಕುಲರ ಸಂವಾದದಲ್ಲಿ ವಿಷ್ಣುತತ್ತ್ವವರ್ಣನೆ (7), ಔರ್ವ-ಸಗರರ ಸಂವಾದದಲ್ಲಿ ವಿಷ್ಣುಪೂಜಾವಿಧಾನ, ವರ್ಣಧರ್ಮಗಳು, ಆಶ್ರಮಧರ್ಮಗಳು, ನಿತ್ಯನೈಮಿತ್ತಿಕಕರ್ಮಗಳು, ಗರ್ಭಾದಾನಾದಿ ಸಂಸ್ಕಾರ ಸ್ವರೂಪಗಳು ಮತ್ತು ಫಲಗಳು, ಗೃಹಸ್ಥಾಶ್ರಮ ವಿಧಿ ಮತ್ತು ಸದಾಚಾರ, ಶ್ರಾದ್ಧಕ್ರಮಗಳು ಮತ್ತು ಮಹಿಮೆ (8-16), ಮಾಯಾಮೋಹನಿಂದ ದೈತ್ಯರಿಗೆ ಅನೇಕಾಂತವಾದದ ಉಪದೇಶ, ಅಶ್ವಮೇಧಯಜ್ಞದ ಮಹಿಮೆ (17-18).

ನಾರದೀಯಪುರಾಣದ ಪ್ರಕಾರ ಪೂರ್ವಭಾಗದ ಮೂರನೆಯ ಅಂಶದಲ್ಲಿ ಮನ್ವಂತರಕಥೆ, ವೇದವ್ಯಾಸಾವತಾರ, ನರಕದಿಂದ ಉದ್ಧರಿಸುವಂತಹ ಕರ್ಮ, ಸಗರ ಮತ್ತು ಔರ್ವರ ಸಂವಾದರೂಪವಾದ ಸರ್ವಧರ್ಮ-ನಿರೂಪಣೆ, ಶ್ರಾದ್ಧಕಲ್ಪ, ವರ್ಣಾಶ್ರಮ ನಿಬಂಧನೆ, ಸದಾಚಾರ, ಮಾಯಾ-ಮೋಹಕಥೆ ಇವುಗಳು ಉಕ್ತವಾಗಿವೆ.[4]

ಚತುರ್ಥಾಂಶ (24 ಅಧ್ಯಾಯಗಳು):

ಇಕ್ಷ್ವಾಕು ವಂಶ, ಚಂದ್ರವಂಶದಲ್ಲಿ ಪುರೂರವನ ವಂಶಗಳು. ನಾರದೀಯಪುರಾಣದಲ್ಲಿಯೂ ನಾಲ್ಕನೇ ಅಂಶದ ವಿಷಯವು ಪುಣ್ಯಕರವಾದ ಸೂರ್ಯವಂಶಕಥನ ಮತ್ತು ನಾನಾರಾಜರ ಕಥೆಗಳಿಂದೊಡಗೂಡಿದ ಚಂದ್ರವಂಶಾನುಕೀರ್ತನೆ ಎಂದು ಹೇಳಿದೆ.[5]

ಪಂಚಮಾಂಶ (38 ಅಧ್ಯಾಯಗಳು):

ಕೃಷ್ಣನ ಬಾಲಲೀಲೆಗಳು ಮತ್ತು ಕಂಸವಧೆ (ಅಧ್ಯಾಯ 1-20), ಜರಾಸಂಧನೊಡನೆ ಯುದ್ಧ, ಕೃಷ್ಣ-ಬಲರಾಮರ ವಿದ್ಯಾಭ್ಯಾಸ, ಕಾಲಯವನ ವಧೆ, ಯಮುನಾಕರ್ಶಣ, ರುಕ್ಮಿಣೀ ವಿವಾಹ, ಶಂಬರವಧೆ, ರುಕ್ಮಿವಧೆ, ನರಕಾಸುರವಧೆ, ಪಾರಿಜಾತಾಪಹರಣ (ಅಧ್ಯಾಯ 21-31), ಬಾಣನಿಗ್ರಹ, ಪೌಂಡ್ರಕವಧೆ, ಹಸ್ತಿನಾಪುರವನ್ನು ಬಲರಾಮನು ಸೆಳೆದುದು, ಯದುವಂಶ ಉಪಸಂಹಾರ (32-38).

ನಾರದೀಯಪುರಾಣದ ಪ್ರಕಾರ ಪೂರ್ವಭಾಗದ ಐದನೆಯ ಅಂಶದಲ್ಲಿ ಕೃಷ್ಣಾವತಾರಕಥೆ, ಗೋಕುಲಕಥೆ, ಬಾಲ್ಯದಲ್ಲಿ ಪೂತನಾದಿಗಳ ವಧೆ, ಕೌಮಾರದಲ್ಲಿ ಅಘಾದಿ ಹಿಂಸೆ, ಕಂಸಹನನ, ಮಥುರಾಚರಿತ್ರೆ, ಯೌವನದಲ್ಲಿ ದ್ವಾರಕೆಯಲ್ಲಿ ನಡೆಸಿದ ಲೀಲೆ, ಸಕಲ ದೈತ್ಯವಧೆ, ನಾನಾವಿಧವಿವಾಹಗಳು, ಶತುಹನನಾದಿಗಳಿಂದ ಭೂಭಾರಹರಣ, ಅಷ್ಟವಕ್ರೋಪಾಖ್ಯಾನ ಇವುಗಳು ಉಕ್ತವಾಗಿವೆ.[6]

ಷಷ್ಠಾಂಶ (8 ಅಧ್ಯಾಯಗಳು):

ಕಲಿಧರ್ಮನಿರೂಪಣೆ (1-2), ನೈಮಿತ್ತಿಕ, ಪ್ರಾಕೃತ ಪ್ರಳಯಗಳ ವರ್ಣನೆ (3-4), ಖಾಂಡಿಕ್ಯ-ಕೇಶಿಧ್ವಜರ ಸಂವಾದ (1-8). ನಾರದೀಯಪುರಾಣದ ಪ್ರಕಾರ ಪೂರ್ವಭಾಗದ ಆರನೆಯ ಅಂಶದಲ್ಲಿ ಕಲಿಚರಿತ್ರೆ, ನಾಲ್ಕುವಿಧದ ಪ್ರಳಯಗಳು, ಕೇಶಿಧ್ವಜನಿಂದ ಖಾಂಡಿಕ್ಯನಿಗೆ ಬ್ರಹ್ಮಜ್ಞಾನೋಪದೇಶ ಇವುಗಳು ಉಕ್ತವಾಗಿವೆ.[7]

ಮೈಸೂರು ಅರಮನೆಯ ಪ್ರಕಾಶನ ಮತ್ತು ಅನೇಕ ಇತರ ಪ್ರಕಾಶನಗಳ ವಿಷ್ಣುಪುರಾಣದಲ್ಲಿ ಮೇಲೆ ಹೇಳಿದ ಆರು ಅಂಶಗಳೇ ಇವೆ. ಆದರೆ ನಾರದೀಯಪುರಾಣದ ಪ್ರಕಾರ ವಿಷ್ಣುಪುರಾಣದ ಉತ್ತರಭಾಗದಲ್ಲಿ ಸೂತ-ಶೌನಕ ಸಂವಾದದಲ್ಲಿ ವಿಷ್ಣುಧರ್ಮೋತ್ತರವೆಂಬ ನಾನಾ ಧರ್ಮಕಥೆಗಳು, ವ್ರತ, ನಿಯಮ, ಯಮ, ಧರ್ಮಶಾಸ್ತ್ರ, ಅರ್ಥಶಾಸ್ತ್ರ, ವೇದಾಂತ, ಜ್ಯೋತಿಷ, ವಂಶಾಖ್ಯಾನ, ಸ್ತೋತ್ರ, ಮನು, ಸಕಲಲೋಕಗಳಿಗೂ ಹಿತಕರವಾದ ನಾನಾವಿದ್ಯೆಗಳ ಕುರಿತು ಉಕ್ತವಾಗಿವೆ.[8] ಕೆಲವರು ವಿಷ್ಣುಧರ್ಮೋತ್ತರವನ್ನು ಒಂದು ಸ್ವತಂತ್ರಪುರಾಣವೆಂದೇ ಪರಿಗಣಿಸಿ ಅದೊಂದು ಉಪಪುರಾಣವೆಂದೂ ಹೇಳುತ್ತಾರೆ.

ಶ್ಲೋಕಸಹಿತ ಕನ್ನಡ ಅನುವಾದ

  1. ಪ್ರಥಮಾಂಶ, ಅಧ್ಯಾಯ 2
  2. ಪ್ರಥಮಾಂಶ, ಅಧ್ಯಾಯ 3
  3. ಪ್ರಥಮಾಂಶ, ಅಧ್ಯಾಯ 4
  4. ಪ್ರಥಮಾಂಶ, ಅಧ್ಯಾಯ 5
  5. ಪ್ರಥಮಾಂಶ, ಅಧ್ಯಾಯ 6
  6. ಪ್ರಥಮಾಂಶ, ಅಧ್ಯಾಯ 7
  7. ಪ್ರಥಮಾಂಶ, ಅಧ್ಯಾಯ 8

______________________________

[1] ಶೃಣು ವತ್ಸ ಪ್ರವಕ್ಷ್ಯಾಮಿ ಪುರಾಣಂ ವೈಷ್ಣವಂ ಮಹತ್ । ತ್ರಯೋವಿಂಶತಿ-ಸಾಹಸ್ರಂ ಸರ್ವಪಾತಕನಾಶನಮ್ ।। 1 ।। ಯತ್ರಾದಿಭಾಗೇ ನಿರ್ದಿಷ್ಟಾಃ ಷಡಂಶಾಃ ಶಕ್ತಿಜೇನ ಹ । ಮೈತ್ರೇಯಾಯಾದಿಮೇ ತತ್ರ ಪುರಾಣಸ್ಯಾವತಾರಿಕಾಮ್ ।। 2 ।। (ನಾರದೀಯಪುರಾಣಂ, ಅಧ್ಯಾಯ 94).

[2] ಆದಿಕಾರಣಸರ್ಗಶ್ಚ ದೇವಾದೀನಾಂ ಚ ಸಂಭವಃ । ಸಮುದ್ರಮಥನಾಖ್ಯಾನಂ ದಕ್ಷಾದೀನಾಂ ತತೋಽನ್ವಯಃ ।। 3 ।। ಧ್ರುವಸ್ಯ ಚರಿತಂ ಚೈವ ಪೃಥೋಶ್ಚರಿತ-ಮೇವ ಚ । ಪ್ರಾಚೇತಸಂ ತಥಾಖ್ಯಾನಂ ಪ್ರಹ್ಲಾದಸ್ಯ ಕಥಾನಕಮ್ ।। 4 ।। ಪೃಥಗ್ರಾಜ್ಯಾಧಿಕಾರಾಖ್ಯಾ ಪ್ರಥಮೋಂಶ ಈರಿತಃ । (ನಾರದೀಯಪುರಾಣಂ, ಅಧ್ಯಾಯ 94).

[3] ಪ್ರಿಯವ್ರತಾಽನ್ವಯಾಖ್ಯಾನಂ ದ್ವೀಪವರ್ಷನಿರೂಪಣಮ್ । ಪಾತಾಲನರಕಾ-ಖ್ಯಾನಂ ಸಪ್ತಸ್ವರ್ಗನಿರೂಪಣಮ್ । ಸೂರ್ಯಾದಿವಾರಕಥನಂ ಪೃಥಗ್ಲಕ್ಷಣಸಂ-ಯುತಮ್ ।। 6 ।। ಚರಿತಂ ಭರತಸ್ಯಾಥ ಮುಕ್ತಿಮಾರ್ಗನಿದರ್ಶನಮ್ । ನಿದಾಘ-ಋಭುಸಂವಾದೋ ದ್ವಿತೀಯೋಂಶ ಉದಾಹೃತಃ ।। 7 ।। (ನಾರದೀಯಪುರಾಣಂ, ಅಧ್ಯಾಯ 94).

[4] ಮನ್ವಂತರಸಮಾಖ್ಯಾನಂ ವೇದವ್ಯಾಸಾವತಾರಕಮ್ । ನರಕೋದ್ಧಾರಕಂ ಕರ್ಮ ಗದಿತಂ ಚ ತತಃ ಪರಮ್ ।। 8 ।। ಸಗರಸ್ಯೌರ್ವಸಂವಾದೇ ಸರ್ವಧರ್ಮ-ನಿರೂಪಣಮ್ । ಶ್ರಾದ್ಧಕಲ್ಪಂ ತತೋದ್ದಿಷ್ಟಂ ವರ್ಣಾಶ್ರಮನಿಬಂಧನಮ್ ।। 9 ।। ಸದಾಚಾರಶ್ಚ ಕಥಿತೋ ಮಾಯಾಮೋಹಕಥಾ ತತಃ । ತೃತೀಯೋಂಶೋಯಮು-ದಿತಃ ಸರ್ವಪಾಪಪ್ರಣಾಶನಃ ।। 10 ।। (ನಾರದೀಯಪುರಾಣಂ, ಅಧ್ಯಾಯ 94).

[5] ಸೂರ್ಯವಂಶಕಥಾ ಪುಣ್ಯಾ ಸೋಮವಂಶಾನುಕೀರ್ತನಮ್ । ಚತುರ್ಧೇಂಶೇ ಮುನಿಶ್ರೇಷ್ಠ ನಾನಾರಾಜಕಥಾನ್ವಿತಮ್ ।। 11 ।। (ನಾರದೀಯಪುರಾಣಂ, ಅಧ್ಯಾಯ 94).

[6] ಕೃಷ್ಣಾವತರಸಂಪ್ರಶ್ನೋ ಗೋಕುಲೀಯಾ ಕಥಾ ತತಃ । ಪೂತನಾದಿವಧೋ ಬಾಲ್ಯೇ ಕೌಮಾರೇಽಘಾದಿಹಿಂಸನಮ್ ।। 12 ।। ಕೈಶೋರೇ ಕಂಸಹನನಂ ಮಾಥು-ರಂ ಚರಿತಂ ತಥಾ । ತತಸ್ತು ಯೌವ್ವನೇ ಪ್ರೋಕ್ತಾ ಲೀಲಾ ದ್ವಾರವತೀಭವಾ ।। 13 ।। ಸರ್ವದೈತ್ಯವಧೋ ಯತ್ರ ವಿವಾಹಾಶ್ಚ ಪೃಥಗ್ವಿಧಾಃ । ಯತ್ರ ಸ್ಥಿತ್ವಾ ಜಗನ್ನಾ-ಥಃ ಕೃಷ್ಣೋ ಯೋಗೇಶ್ವರೇಶ್ವರಃ ।। 14 ।। ಭೂಭಾರಹರಣಂ ಚಕ್ರೇ ಪರೇಷಾಂ ಹನನಾದಿಭಿಃ । ಅಷ್ಟಾವಕ್ರೀಯಮಾಖ್ಯಾನಂ ಪಂಚಮೋಂಶ ಇತೀರಿತಃ ।। 15 ।। (ನಾರದೀಯಪುರಾಣಂ, ಅಧ್ಯಾಯ 94).

[7] ಕಲಿಜಂ ಚರಿತಂ ಪ್ರೋಕ್ತಂ ಚಾತುರ್ವಿಧ್ಯಂ ಲಯಸ್ಯ ಚ । ಬ್ರಹ್ಮಜ್ಞಾನಸಮು-ದ್ದೇಶಃ ಖಾಂಡಿಕ್ಯಸ್ಯ ನಿರೂಪಿತಃ ।। 16 ।। ಕೇಶಿಧ್ವಜೇನ ಚೇತ್ಯೇಷ ಷಷ್ಠೋಂಶಃ ಪರಿಕೀರ್ತಿತಃ । (ನಾರದೀಯಪುರಾಣಂ, ಅಧ್ಯಾಯ 94).

[8] ಅತಃ ಪರಂ ತು ಸೂತೇನ ಶೌನಕಾದಿಭಿರಾದರಾತ್ ಪೃಷ್ಟೇಣ ಚೋದಿತಾಃ ಶಶ್ವದ್ವಿಷ್ಣುಧರ್ಮೋತ್ತರಾಹ್ವಯಾಃ ನಾನಾಧರ್ಮಕಥಾಃ ಪುಣ್ಯಾ ವ್ರತಾನಿ ನಿಯಮಾ ಯಮಾಃ ।। 18 ।। ಧರ್ಮಶಾಸ್ತ್ರಂ ಚಾರ್ಥಶಾಸ್ತ್ರಂ ವೇದಾಂತಂ ಜ್ಯೋತಿಷಂ ತಥಾ । ವಂಶಾಖ್ಯಾನಂ ಪ್ರಕರಣಾತ್ ಸ್ತೋತ್ರಾಣಿ ವಾನವಸ್ತಥಾ ।। 19 ।। ನಾನಾವಿದ್ಯಾಸ್ತಥಾ ಪ್ರೋಕ್ತಾಃ ಸರ್ವಲೋಕೋಪಕಾರಿಕಾಃ । (ನಾರದೀಯ-ಪುರಾಣಂ, ಅಧ್ಯಾಯ 94).

Leave a Reply

Your email address will not be published. Required fields are marked *