ವಾಮನ ಪುರಾಣ
ತ್ರೈಲೋಕ್ಯರಾಜ್ಯಮಾಚ್ಛಿದ್ಯ ಬಲೇರಿಂದ್ರಾಯ ಯೋದದೌ । ನಮಸ್ತಸ್ಮೈಸುರೇಶಾಯ ಸದಾ ವಾಮನ ರೂಪಿಣೇ ।।
[ಶ್ರೀವಾಮನಪುರಾಣಂ (ಸಂಸ್ಕೃತದಲ್ಲಿ ಮೂಲ, ಕನ್ನಡ ಅರ್ಥಾನುವಾದವಿವರಣೆಗಳೊಡನೆ, 3 ಭಾಗಗಳಲ್ಲಿ), ಅನುವಾದಕ ಸಂಕೀಘಟ್ಟಂ ವೆಂಕಟಾಚಾರ್ಯ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 25, ಮೈಸೂರು, ಶ್ರೀ ಶಾರದಾ ಎಲೆಕ್ಟ್ರಿಕ್ ಪ್ರೆಸ್, 1946]
ಮತ್ಯ್ಸಪುರಾಣದ 53ನೇ ಅಧ್ಯಾಯದ 45ನೇ ಶ್ಲೋಕದ ಪ್ರಕಾರ ತ್ರಿವಿಕ್ರಮಸ್ಯ ಮಾಹಾತ್ಮ್ಯಮಧಿಕೃತ್ಯ ಚತುರ್ಮುಖಃ । ತ್ರಿವರ್ಗಮಭ್ಯಧಾತ್ತಚ್ಚ ವಾಮನಂ ಪರಿಕೀರ್ತಿತಮ್ । ಪುರಾಣಂ ದಶಸಾಹಸ್ರಂ ಕೂರ್ಮಕಲ್ಪಾನುಗಂ ಶಿವಮ್ ।। ಅರ್ಥಾತ್: ಬ್ರಹ್ಮನು ತ್ರಿವಿಕ್ರಮನ ಮಾಹಾತ್ಮೆಯನ್ನು ಅವಲಂಬಿಸಿ ಧರ್ಮಾರ್ಥಕಾಮಗಳ ಸ್ವರೂಪವನ್ನು ಪ್ರತಿಪಾದಿಸಿದ ಪುರಾಣವು ವಾಮನವೆನಿಸಿದೆ. ಕೂರ್ಮಕಲ್ಪದ ವೃತ್ತಾಂತವನ್ನು ತಿಳಿಸುವ ಅದರಲ್ಲಿ 10,000 ಶ್ಲೋಕಗಳಿವೆ.
ಜಯಚಾಮರಾಜೇಂದ್ರ ಗ್ರಂಥಮಾಲೆಯ ಪ್ರಕಾರ ಈ ಪುರಾಣದಲ್ಲಿ ಒಟ್ಟು 95 ಅಧ್ಯಾಯಗಳಿವೆ ಮತ್ತು 5,805 ಶ್ಲೋಕಗಳಿವೆ. ನಾರದ-ಪುಲಸ್ತ್ಯರ ಸಂವಾದರೂಪದಲ್ಲಿ ಪ್ರಮುಖವಾಗಿ ವಾಮನಪ್ರಾದುರ್ಭಾವದ ಕುರಿತಾಗಿರುವ ಈ ಪುರಾಣದಲ್ಲಿ ಹರಿಭಕ್ತನಾಗಿದ್ದರೂ ಪ್ರಹ್ಲಾದನು ದೇವತೆಗಳೊಡನೆ ಏಕೆ ಯುದ್ಧವನ್ನು ಮಾಡಿದನು, ಮತ್ತು ಅವನ ಮೊಮ್ಮಗನಾದ ಬಲಿಯನ್ನು ಹರಿಯು ಏಕೆ ನಿಗ್ರಹಿಸಿದನು ಎಂಬ ವಿಷಯವು ಸಂಕ್ಷಿಪ್ತವಾಗಿ ಮತ್ತು ವಿಸ್ತಾರವಾಗಿ ಬಂದಿದೆ. ವಾಮನಚರಿತೆಯಲ್ಲದೇ ಈ ಪುರಾಣದಲ್ಲಿ ಬರುವ ಇನ್ನೂ ಅನೇಕ ವಿಷಯಗಳು ಹೀಗಿವೆ: ಹರಲಲಿತೆಯೆಂಬ ಭಾಗದಲ್ಲಿ ದಕ್ಷಯಜ್ಞ, ದೇವೀಮಾಹಾತ್ಮೆ, ಸರೋಮಹಾತ್ಮೆ, ಗೌರೀವಿವಾಹ, ವಿನಾಯಕ ಮತ್ತು ಕಾರ್ತಿಕೇಯರ ಉತ್ಪತ್ತಿ, ದಂಡೋಪಾಖ್ಯಾನ, ಅಂಧಕವರಪ್ರದಾನ, ಪ್ರಹ್ಲಾದನ ತೀರ್ಥಯಾತ್ರೆ.