ಮತ್ಸ್ಯಮಹಾಪುರಾಣ
ಪ್ರಚಂಡತಾಂಡವಾಟೋಪೇ ಪ್ರಕ್ಷಿಪ್ತಾ ಯೇನ ದಿಗ್ಗಜಾಃ । ಭವಂತು ವಿಘ್ನಭಂಗಾಯ ಭವಸ್ಯ ಚರಣಾಂಬುಜಾಃ ।।
[ಶ್ರೀಮತ್ಸ್ಯಮಹಾಪುರಾಣಂ (ಸಂಸ್ಕೃತದಲ್ಲಿ ಮೂಲ, ಕನ್ನಡ ಅರ್ಥಾನುವಾದವಿವರಣೆಗಳೊಡನೆ, 7 ಭಾಗಗಳಲ್ಲಿ), ಅನುವಾದಕ ವಾಜಪೇಯಂ ಶ್ರೀರಂಗಾಚಾರ್, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 33, ಮೈಸೂರು, ಶ್ರೀನಿವಾಸ್ ಎಲೆಕ್ಟ್ರಿಕ್ ಪ್ರೆಸ್, 1946]
ಮತ್ಸ್ಯಪುರಾಣದ 53ನೇ ಅಧ್ಯಾಯದ 5—51ನೇ ಶ್ಲೋಕಗಳ ಪ್ರಕಾರ ಶ್ರುತೀನಾಂ ಯತ್ರ ಕಲ್ಪಾದೌ ಪ್ರವೃತ್ತ್ಯರ್ಥಂ ಜನಾರ್ದನಃ । ಮತ್ಸ್ಯರೂಪೇಣ ಮನವೇ ನರಸಿಂಹೋಪವರ್ಣನಮ್ ।। ಅಧಿಕೃತ್ಯಾಬ್ರವೀತ್ಸಪ್ತಕಲ್ಪವೃತ್ತಂ ಮುನೀಶ್ವರಾಃ । ತನ್ಮಾತ್ಸ್ಯಮಿತಿ ಜಾನೀಧ್ವಂ ಸಹಸ್ರಾಣಿ ಚತುರ್ದಶ ।। ಅರ್ಥಾತ್: ವೇದಗಳನ್ನು ಉದ್ಧರಿಸುವುದಕ್ಕಾಗಿ ಮತ್ಸ್ಯರೂಪವನ್ನು ಧರಿಸಿ ಶ್ರೀಮಹಾವಿಷ್ಣುವು ಈಗ ನಡೆಯುತ್ತಿರುವ ಶ್ವೇತವರಾಹಕಲ್ಪದ ಆದಿಯಲ್ಲಿ ವೈವಸ್ವತ ಮನುವಿಗೆ ಹೇಳಿದ ಪುರಾಣಕ್ಕೆ ಮತ್ಸ್ಯಪುರಾಣವೆಂದು ಹೆಸರು. ಇದರಲ್ಲಿ ನರಸಿಂಹಾವತಾರವನ್ನು ವರ್ಣಿಸಿದೆ. ಏಳು ಕಲ್ಪಗಳ ವೃತ್ತಾಂತಗಳೂ ಪ್ರತಿಪಾದಿತಗೊಂಡಿವೆ. ಇದು 14,000 ಶ್ಲೋಕಗಳಿಂದ ಕೂಡಿದೆ.
ಈಗ ಇರುವ ಮತ್ಸ್ಯಪುರಾಣದಲ್ಲಿ 291 ಅಧ್ಯಾಯಗಳಿವೆ ಮತ್ತು 13,157 ಶ್ಲೋಕಗಳಿವೆ. ಈ ಪುರಾಣದಲ್ಲಿ ಬರುವ ಮುಖ್ಯವಿಷಯಗಳು ಹೀಗಿವೆ: ಆದಿಸೃಷ್ಟಿ, ಮನ್ವಂತರಾನುಕೀರ್ತನ, ಸೂರ್ಯವಂಶಾನುಕೀರ್ತನ, ಪಿತೃವಂಶಾನ್ವಯ, ಶ್ರಾದ್ಧಕಲ್ಪ, ಸೋಮವಂಶಾಖ್ಯಾನ, ಯಯಾತಿಚರಿತ, ಯದು-ಅಂಧಕ-ವೃಷ್ಣಿ-ಪೌರವ ವಂಶಕೀರ್ತನ, ಪೌರಾಣಾನುಕ್ರಮಣಿಕೆ, ವಿವಿಧವ್ರತಗಳು, ದಾನಗಳು ಮತ್ತು ಮಹಾದಾನಗಳು, ಪ್ರಯಾಗ, ವಾರಣಸೀ ಮತ್ತು ನರ್ಮದಾ ತೀರ್ಥಮಹಾತ್ಮೆಗಳು, ಭೂಗೋಳ-ಖಗೋಳಗಳ ವರ್ಣನೆ, ತ್ರಿಪುರೋಪಾಖ್ಯಾನ, ತಾರಕಾಸುರೋಪಾಖ್ಯಾನ, ನರಸಿಂಹಾವತಾರವರ್ಣನೆ, ಪಾದ್ಮಕಲ್ಪವೃತ್ತಾಂತ, ತಾರಕಾಮಯಸಂಗ್ರಾಮವರ್ಣನೆ, ಅಂಧಕವಧೆ, ಪ್ರವರಾನುಕೀರ್ತನ, ಸಾವಿತ್ರೀ ಚರಿತ್ರೆ, ರಾಜಧರ್ಮ, ವಾಮನಾವತಾರ ವೃತ್ತಾಂತ, ವರಾಹಚರಿತೆ, ಅಮೃತಮಥನವೃತ್ತಾಂತ, ವಾಸ್ತುಶಾಸ್ತ್ರ, ಮತ್ತು ಕಲ್ಪಕಥನ.