ಕೂರ್ಮ ಪುರಾಣ
[ಕೂರ್ಮಪುರಾಣಂ, (4 ಸಂಪುಟಗಳಲ್ಲಿ) ಅನುವಾದಕ ಪಾಟಣಕರ ಚಂದ್ರಶೇಖರಭಟ್ಟ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 40, ಮೈಸೂರು, ಶ್ರೀ ವಿನಾಯಕ ಪ್ರಿಂಟಿಂಗ್ ಪ್ರೆಸ್, 1947]
ಮತ್ಸ್ಯಪುರಾಣದ 53ನೇ ಅಧ್ಯಾಯದ 47-48ನೇ ಶ್ಲೋಕಗಳ ಪ್ರಕಾರ ಯತ್ರ ಧರ್ಮಾರ್ಥಕಾಮಾನಾಂ ಮೋಕ್ಷಸ್ಯ ಚ ರಸಾತಲೇ । ಮಾಹಾತ್ಮ್ಯಂ ಕಥಯಾಮಾಸ ಕೂರ್ಮರೂಪೀ ಜನಾರ್ದನಃ ।। ಇಂದ್ರದ್ಯುಮ್ನಪ್ರಸಂಗೇನ ಋಷಿಭ್ಯಃ ಶಕ್ರಸಂನಿಧೌ । ಅಷ್ಟಾದಶ ಸಹಸ್ರಾಣಿ ಲಕ್ಷ್ಮೀಕಲ್ಪಾನುಷಂಗಿಕಮ್ ।। ಅರ್ಥಾತ್: ಕೂರ್ಮರೂಪವನ್ನು ಧರಿಸಿದ ಮಹಾವಿಷ್ಣುವು ಇಂದ್ರದ್ಯುಮ್ನನ ಪ್ರಸಂಗದಿಂದ ಇಂದ್ರನೆದುರ್ನಲ್ಲಿ, ಋಷಿಗಳಿಗೆ ಧರ್ಮಾರ್ಥಕಾಮಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳ ಮಾಹಾತ್ಮ್ಯವನ್ನು ಪಾತಾಳಲೋಕದಲ್ಲಿ ಹೇಳಿದನು. ಅದೇ ಕೂರ್ಮಪುರಾಣವು. ಅದು ಲಕ್ಷ್ಮೀಕಲ್ಪಕ್ಕೆ ಸಂಬಂಧಿಸಿದ ಆ ಪುರಾಣದಲ್ಲಿ 18,000 ಶ್ಲೋಕಗಳಿವೆ.
ಜಯಚಾಮರಾಜೇಂದ್ರ ಗ್ರಂಥಮಾಲೆಯ ಪ್ರಕಾರ ಈ ಪುರಾಣದಲ್ಲಿ ಒಟ್ಟು 99 ಅಧ್ಯಾಯಗಳಿವೆ ಮತ್ತು 5,967 ಶ್ಲೋಕಗಳಿವೆ. ಈ ಪುರಾಣ-ದಲ್ಲಿ ಬರುವ ಮುಖ್ಯವಿಷಯಗಳು ಹೀಗಿವೆ: ಇಂದ್ರದ್ಯುಮ್ನ ಮೋಕ್ಷಪ್ರಾಪ್ತಿ ಮತ್ತು ಇಂದ್ರದ್ಯುಮ್ನ-ಕೂರ್ಮರ ಸಂವಾದದೊಂದಿಗೆ ಕೂರ್ಮಪುರಾಣದ ಪ್ರಾರಂಭ, ವರ್ಣಾಶ್ರಮವರ್ಣನೆ, ಸೃಷ್ಟಿ, ದೇವೀಮಹಾತ್ಮೆ, ದಕ್ಷಯಜ್ಞವಿಧ್ವಂಸ, ತ್ರಿವಿಕ್ರಮಚರಿತ್ರೆ, ರಾಜವಂಶಾನುಕೀರ್ತನೆ, ಕಲಿಯುಗವರ್ಣನೆ, ವಾರಣಸೀಮಹಾತ್ಮೆ, ಪ್ರಯಾಗಮಹಾತ್ಮೆ, ಮನ್ವಂತರವರ್ಣನೆ, ಈಶ್ವರಗೀತೆ, ವ್ಯಾಸನಿಂದ ಆಶ್ರಮಧರ್ಮಗಳ ನಿರೂಪಣೆ, ಪಾತಕಗಳು ಮತ್ತು ಪ್ರಾಯಶ್ಚಿತ್ತ-ಪರಿಹಾರಗಳು, ನರ್ಮದಾಮಹಾತ್ಮೆ, ಮತ್ತು ಪ್ರಲಯವರ್ಣನೆ.
- ಅಧ್ಯಾಯ 96 (ಶ್ಲೋಕ 1-16)