ಐತರೇಯೋಪನಿಷತ್ತು
ಓಂ ವಾಙ್ಮೇ ಮನಸಿ ಪ್ರತಿಷ್ಠಿತಾ । ಮನೋ ಮೇ ವಾಚಿ ಪ್ರತಿಷ್ಠಿತಮ್ । ಆವಿರಾವೀರ್ಮ ಏಧಿ । ವೇದಸ್ಯ ಮ ಆಣೀಸ್ಥಃ । ಶ್ರುತಂ ಮೇ ಮಾಪ್ರಹಾಸೀಃ । ಅನೇನಾಧೀತೇನ । ಅಹೋರಾತ್ರಾನ್ ಸಂದಧಾಮಿ । ಋತಂ ವದಿಷ್ಯಾಮಿ । ಸತ್ಯಂ ವದಿಷ್ಯಾಮಿ । ತನ್ಮಾಮವತು । ತದ್ವಕ್ತಾರಮವತು । ಅವತು ಮಾಮ್ । ಅವತು ವಕ್ತಾರಮ್ । ಆವತು ವಕ್ತಾರಮ್ ।। ಓಂ ಶಾಂತಿಃ ಶಾಂತಿಃ ಶಾಂತಿಃ ।।
[ಆಧಾರಗ್ರಂಥಗಳು: (1) ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು, ಶ್ರೀಶಾಂಕರಭಾಷ್ಯಸಮೇತ ಐತರೇಯೋಪನಿಷತ್ತು, ಅಧ್ಯಾತ್ಮಪ್ರಕಾಶಕಾರ್ಯಾಲಯ, ಹೊಳೆನರಸೀಪುರ, 2005; (2) ಸ್ವಾಮಿ ಆದಿದೇವಾನಂದ, ಐತರೇಯೋಪನಿಷತ್, ಶ್ರೀರಾಮಕೃಷ್ಣ ಆಶ್ರಮ, ಮೈಸೂರು, 2015; (3) ಸ್ವಾಮಿ ಸೋಮನಾಥಾನಂದ, ಉಪನಿಷತ್ ಭಾವಧಾರೆ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು, 2021 (3) ಋಗ್ವೇದ ಸಂಹಿತಾ (ಸಾಯಣಭಾಷ್ಯ ಸಮೇತ, ಕರ್ಣಾಟಕ ಭಾಷಾರ್ಥಾನುವಾದವಿವರಣೆಗಳೊಂದಿಗೆ) ಭಾಗ 29 ಎಂಟನೆಯ ಅಷ್ಟಕದ ಅಧ್ಯಾಯಗಳು 3-4 ಹತ್ತನೆಯ ಮಂಡಲದ ಸೂಕ್ತಗಳು 72-94, ಅನುವಾದಕರು ಆಸ್ಥಾನಮಹಾವಿದ್ವಾನ್ ಹೆಚ್. ಪಿ. ವೆಂಕಟರಾವ್, ಶ್ರೀ ಜಯಚಾಮರಾಜೇಂದ್ರ ವೇದರತ್ನಮಾಲಾ, ಸಂಖ್ಯೆ 29, ಶ್ರೀ ವಿನಾಯಕ ಪ್ರಿಂಟಿಂಗ್ ವರ್ಕ್ಸ್, ಮೈಸೂರು, 1954]
ಋಗ್ವೇದದ ಐತರೇಯಾರಣ್ಯಕದ ದ್ವಿತೀಯಾರಣ್ಯಕದ ಏಳು ಅಧ್ಯಾಯಗಳು ಮತ್ತು ತೃತೀಯಾರಣ್ಯಕದ ಮೊದಲ ಎರಡು ಅಧ್ಯಾಯಗಳು (ಒಟ್ಟು ಒಂಬತ್ತು ಅಧ್ಯಾಯಗಳು) ಐತರೇಯ ಉಪನಿಷತ್ತು (ಅಥವಾ ಬಹ್ವ್ರೀಕ ಉಪನಿಷತ್ತು ಅಥವಾ ಮಹಾಐತರೇಯ ಉಪನಿಷತ್ತು) ಎಂದು ಕರೆಯಲ್ಪಟ್ಟರೂ ಋಗ್ವೇದದ ಐತರೇಯಾರಣ್ಯಕದ ದ್ವಿತೀಯಾರಣ್ಯಕದ ಮೂರು (4-6) ಅಧ್ಯಾಯಗಳಿಗೇ ಶ್ರೀ ಶಂಕರಾಚಾರ್ಯರು ಭಾಷ್ಯಗಳನ್ನು ನೀಡಿದುದರಿಂದ ಈ ಮೂರು ಅಧ್ಯಾಯಗಳನ್ನೇ ಐತರೇಯೋಪನಿಷತ್ತು ಎಂದು ತಿಳಿದಿದ್ದಾರೆ. ಐತರೇಯ ಅರಣ್ಯಕದ ಎರಡನೇ ಅಧ್ಯಾಯದ ಮೊದಲ ಮೂರು ಅಧ್ಯಾಯಗಳು ಪ್ರಾಣದ ಉಪಾಸನೆಯ ಕುರಿತಾಗಿವೆ. ಎರಡನೇ ಅಧ್ಯಾಯದ ಅಧ್ಯಾಯ 4-6 ಬ್ರಹ್ಮಜ್ಞಾನವಿಷಯಕವಾಗಿವೆ. ಮೂರನೇ ಅರಣ್ಯಕವು ಸಂತಾನ-ಸಂಪತ್ತುಗಳನ್ನು ಪಡೆಯುವುದರ ಕುರಿತಾಗಿದೆ.
ಇಲ್ಲಿ ನಾನು ಬ್ರಹ್ಮಜ್ಞಾನವನ್ನು ಪ್ರತಿಪಾದಿಸುವ, ದ್ವಿತೀಯಾರಣ್ಯಕದ ಮೂರು (4-6) ಅಧ್ಯಾಯಗಳ ಕಿರುಪರಿಚಯವನ್ನು ನೀಡಿದ್ದೇನೆ.
ಅಧ್ಯಾಯ 1: ಮೊದಲನೇ ಅಧ್ಯಾಯದಲ್ಲಿ ಮೂರು ಖಂಡಗಳಿವೆ.
- ಖಂಡ 1: ಮೊದಲು ಆತ್ಮನೊಬ್ಬನೇ ಇದ್ದನು. ಅವನಿಗಿಂತ ಬೇರೆಯಾಗಿ ಮತ್ತೇನೂ ಇರಲಿಲ್ಲ. ಅವನು ಲೋಕಗಳನ್ನು ಸೃಷ್ಟಿಸುತ್ತೇನೆ ಎಂದು ಆಲೋಚಿಸಿ ಅಂಭೋಲೋಕ (ದೇವತೆಗಳ ಲೋಕದ ಆಚೆಯಿರುವುದು), ಮರೀಚಿಲೋಕ (ಸೂರ್ಯನ ಕಿರಣಗಳು ನಮಗೆ ಎಲ್ಲಿಂದ ಬರುತ್ತವೆಯೋ ಆ ಅಂತರಿಕ್ಷ), ಮರಲೋಕ (ಮೃತರಾಗುವ ಮನುಷ್ಯರಿರುವ ಪೃಥ್ವಿ) ಮತ್ತು ಆಪೋಲೋಕ (ನಮ್ಮ ಕೆಳಗಿರುವ ಪಾತಾಳಲೋಕ) ಗಳನ್ನು ಸೃಷ್ಟಿಸಿದನು. ನಂತರ ಈ ಲೋಕಗಳನ್ನು ಕಾಪಾಡುವ ದೇವತೆಗಳನ್ನು ಸೃಷ್ಟಿಸುತ್ತೇನೆ ಎಂದುಕೊಂಡು ಅದೇ ಪಂಚಭೂತಗಳಿಂದ ಒಬ್ಬ ಪುರುಷನ ಆಕೃತಿಯನ್ನು ಮಾಡಿ ಅದರ ಕುರಿತು ಧ್ಯಾನಿಸಲು ಅದರಿಂದ ಮುಖ, ವಾಕ್ಕು, ಅಗ್ನಿ, ವಾಯು, ಕಣ್ಣು, ಚಕ್ಷುರಿಂದ್ರಿಯ, ಆದಿತ್ಯ, ಕಿವಿ, ಶ್ರೋತ್ರೇಂದ್ರಿಯ, ದಿಗ್ದೇವತೆ-ಗಳು, ಚರ್ಮ, ಕೂದಲು, ಔಷಧಿ ವನಸ್ಪತಿದೇವತೆಗಳು, ಹೃದಯ, ಮನಸ್ಸು, ಚಂದ್ರ, ಹೊಕ್ಕಳು, ಅಪಾನ, ಮೃತ್ಯು, ಶಿಶ್ನ, ರೇತಸ್ಸು, ಆಪ್ಸು – ಹೀಗೆ ಅವಯವಗಳೂ, ಇಂದ್ರಿಯಗಳೂ, ಮತ್ತು ದೇವತೆಗಳೂ ಉಂಟಾದರು.
- ಖಂಡ 2: ಈ ದೇವತೆಗಳು ಸಂಸಾರಕ್ಕೆ ಒಳಗಾದರು. ಮೊದಲು ಸೃಷ್ಟಿಸಿದ್ದ ವಿರಾಟ್ಪುರುಷನಿಗೆ ಆತ್ಮನು ಹಸಿವು-ಬಾಯಾರಿಕೆಗಳನ್ನು ಕೂಡಿಸಿದ್ದರಿಂದ ಆ ಪುರುಷನಿಂದಾದ ದೇವತೆಗಳಿಗೂ ಹಸಿವು-ಬಾಯಾರಿಕೆಗಳಾದವು. ಅವುಗಳನ್ನು ತೀರಿಸಿಕೊಳ್ಳಲು ತಕ್ಕ ಶರೀರವನ್ನು ಕೊಡಬೇಕೆಂದು ಬೇಡಿಕೊಳ್ಳಲು ಪರಮಾತ್ಮನು ಕ್ರಮವಾಗಿ ಎಲ್ಲ ಪ್ರಾಣಿಗಳನ್ನೂ ಸೃಷ್ಟಿಸಿದನು. ಅವುಗಳಲ್ಲಿ ಯಾವುದರ ಶರೀರವೂ ತಮಗೆ ತಕ್ಕದ್ದಲ್ಲವೆಂದು ದೇವತೆಗಳು ಹೇಳಲು ಈಶ್ವರನು ಮನುಷ್ಯನನ್ನು ಸೃಷ್ಟಿಸಿದನು. ಅವರು ಇದು ಚೆನ್ನಾಗಿದೆ ಎಂದು ಮೆಚ್ಚಿ ಈಶ್ವರನ ಅಪ್ಪಣೆಯಂತೆ ಮನುಷ್ಯ ಶರೀರವನ್ನು ಹೊಕ್ಕರು. ವಿರಾಟ್ಪುರುಷನ ಯಾವ ಇಂದ್ರಿಯದಿಂದ ಯಾವ ದೇವತೆಯು ಹೊರಬಂದಿದ್ದನೋ ಮನುಷ್ಯಶರೀರದ ಅದೇ ಇಂದ್ರಿಯವನ್ನು ಆ ದೇವತೆಯು ಒಳಹೊಕ್ಕನು.
- ಖಂಡ 3: ನಂತರ ಲೋಕಪಾಲಕರಿಗೋಸ್ಕರ ಈಶ್ವರನು ಅದೇ ಪಂಚಭೂತಗಳಿಂದ ಅನ್ನವೆಂಬ ಒಂದು ಆಕಾರವನ್ನು ಸೃಷ್ಟಿಸಿದನು. ಆದರೆ ಅದು ಓಡತೊಡಗಿತು. ಲೋಕಪಾಲಕರ ಒಟ್ಟಾದ ವಿರಾಟ್ಪುರುಷನಿಗೆ ಅದನ್ನು ಯಾವ ಇಂದ್ರಿಯದಿಂದಲೂ ಹಿಡಿಯಲಿಕ್ಕಾಗಲಿಲ್ಲ. ಒಂದೊಂದಾಗಿ ಪರೀಕ್ಷಿಸಿ ನೋಡಿ ಕೊನೆಯಲ್ಲಿ ಬಾಯಿಯಿಂದ ಎಳೆದುಕೊಳ್ಳುವುದಕ್ಕೆ ಅನುಕೂಲವಾದ ಅಪಾನವಾಯುವಿನಿಂದ ಅನ್ನವನ್ನು ಎಳೆದುಕೊಂಡನು. ಆದ್ದರಿಂದ ವಿರಾಟ್ಪುರುಷನಿಂದ ಹುಟ್ಟಿದ ಜೀವಿಗಳೆಲ್ಲವೂ ಅನ್ನವನ್ನು ಹಾಗೆಯೇ ಎಳೆದುಕೊಳ್ಳುತ್ತವೆ. ನಂತರ ಇಂದ್ರಿಯಗಳು ತಮ್ಮ ತಮ್ಮ ಕೆಲಸವನ್ನು ಯಾರಿಗೋಸ್ಕರ ಮಾಡಬೇಕೋ ಆ ಸ್ವತಂತ್ರನಾದ ಒಡೆಯನು ಶರೀರದಲ್ಲಿರಬೇಕೆನ್ನನು ಆತ್ಮನು ತಾನೇ ಜೀವರೂಪದಿಂದ ಶರೀರದ ಒಳಹೊಕ್ಕನು. ಪ್ರಾಣನು ಶರೀರವನ್ನು ಮುಂಗಾಲುಗಳ ಮೂಲಕ ಹೊಕ್ಕಿದ್ದರಿಂದ ಆತ್ಮನು ತಲೆಯ ಬೈತಲೆಯನ್ನು ಸೀಳಿಕೊಂಡು ಅದರ ಮೂಲಕ ಶರೀರವನ್ನು ಪ್ರವೇಶಿಸಿದನು. ಇದರಿಂದ ಆತ್ಮನನ್ನು ಅರಿತುಕೊಳ್ಳಲು ಒಂದು ಸಾಧನವು ದೊರಕಿದಂತಾಯಿತು. ಶರೀರವನ್ನು ಹೊಕ್ಕ ಜೀವನಿಗೆ ಇಂದ್ರಿಯ, ಮನಸ್ಸು ಮತ್ತು ಹೃದಯಾಕಾಶ ಎಂಬ ಮೂರು ಸ್ಥಾನಗಳಿವೆ; ಎಚ್ಚರ, ಕನಸು ಮತ್ತು ತನಿನಿದ್ರೆ ಎಂಬ ಮೂರು ಸ್ವಪ್ನಗಳಾಗುತ್ತವೆ. ಜೀವನು ಈ ಮೂರನ್ನೂ ಇದೊಂದು ಇದೊಂದು ಎಂದು ಅನುಭವಿಸುತ್ತಿರುತ್ತಾನೆ. ಹೀಗೆ ಜೀವನಾದ ನಂತರ ಆತ್ಮನು ಭೂತಗಳೆಲ್ಲವನ್ನೂ ವಿಂಗಡಿಸಿ ನೋಡಿ ಮತ್ತೆ ಯಾವುದನ್ನೂ ಕಾಣದೇ ತನ್ನ ಸ್ವರೂಪವೇ ಎಲ್ಲವನ್ನೂ ವ್ಯಾಪಿಸಿರುವುದನ್ನು ಕಂಡುಕೊಂಡನು.
ಅಧ್ಯಾಯ 2: ಎರಡನೇ ಅಧ್ಯಾಯದಲ್ಲಿರುವ ಒಂದೇ ಖಂಡದಲ್ಲಿ ಜೀವನಿಗೆ ಜನನ-ಮರಣಗಳು ನದಿಯ ಸ್ರೋತದಂತೆ ಪುನಃ ಪುನಃ ಉಂಟಾಗುತ್ತದೆ ಎಂದು ಹೇಳಿ ಜೀವನು ಹೊಂದುವ ಮೂರು ಅವಸ್ಥೆಗಳನ್ನು ಇಲ್ಲಿ ವರ್ಣಿಸಿದೆ: ರೇತೋರೂಪದಿಂದ ಗರ್ಭವಾಗುವುದು ಜೀವದ ಮೊದಲನೆಯ ಅವಸ್ಥೆಯು; ಅನಂತರ ಗರ್ಭದಿಂದ ಶಿಶುರೂಪದಲ್ಲಿ ಹೊರಗೆ ಬರುವುದು ಎರಡನೆಯ ಅವಸ್ಥೆಯು; ಕೊನೆಗೆ ಜರಾಜೀರ್ಣನಾಗಿ ಜೀವನವನ್ನು ಮುಗಿಸಿ ಶರೀರವನ್ನು ಬಿಟ್ಟಮೇಲೆ ಮತ್ತೊಂದು ಶರೀರವನ್ನು ಪಡೆದುಕೊಳ್ಳುವುದು ಮೂರನೇ ಅವಸ್ಥೆಯು. ಆದರೆ ಯಾವುದೇ ಅವಸ್ಥೆಯಲ್ಲಿಯೇ ಆಗಲೀ ಜೀವಿಯು ತನ್ನ ಆತ್ಮಸ್ವರೂಪವನ್ನು ಅರಿತುಕೊಂಡರೆ ಸರ್ವಸಂಸಾರ ಬಂಧನಗಳಿಂದ ಮುಕ್ತನಾಗುತ್ತಾನೆ. ವಾಮದೇವನು ಗರ್ಭದಲ್ಲಿರುವಾಗಲೇ ಆತ್ಮಜ್ಞಾನವನ್ನು ಹೊಂದಿ ಅವಿದ್ಯಾಕೃತವಾದ ಶರೀರವನ್ನು ನಾಶಪಡಿಸಿಕೊಂಡು ಅಮೃತನಾದನೆಂದು ಈ ಅಧ್ಯಾಯದಲ್ಲಿ ಬರುತ್ತದೆ.
ಅಧ್ಯಾಯ 3: ಮುಂಗಾಲುಗಳ ಮೂಲಕ ಶರೀರವನ್ನು ಹೊಕ್ಕ ಪ್ರಾಣ ಮತ್ತು ಬೈತಲೆಯನ್ನು ಸೀಳಿಕೊಂಡು ಒಳಹೊಕ್ಕ ಇನ್ನೊಬ್ಬನು – ಇವರಿಬ್ಬರಲ್ಲಿ ನಿಜವಾದ ಆತ್ಮನು ಯಾರು ಎಂಬ ಜಿಜ್ಞಾಸೆಯು ಈ ಅಧ್ಯಾಯದ ವಿಷಯ. ಮುಂಗಾಲುಗಳಿಂದ ಹೊಕ್ಕಿರುವ ಪ್ರಾಣನು ಅಂತಃಕರಣವೃತ್ತಿಗಳಿಂದ ಬೇರೆ ಬೇರೆ ವಿಷಯಗಳನ್ನು ಅರಿಯುವುದಕ್ಕೆ ಸಾಧನವಾಗಿರುತ್ತಾನೆ. ನೋಡುವುದು, ಕೇಳುವುದು, ಮೂಸುವುದು, ಮಾತನಾಡುವುದು, ಸವಿಯುವುದು – ಎಲ್ಲವೂ ಈ ಪ್ರಾಣಾತ್ಮನಿಂದಲೇ ಆಗುತ್ತವೆ. ಅವನು ಕರಣರೂಪನಾಗಿರುವುದರಿಂದ ನಿಜವಾದ ಆತ್ಮನಲ್ಲ. ಕರಣವು ಕರ್ತೃವಿಗಾಗಿರುತ್ತದೆ. ಆದ್ದರಿಂದ ಈ ನೋಡುವುದು ಕೇಳುವುದು ಮೊದಲಾದ ಕ್ರಿಯೆಗಳನ್ನು ಮಾಡುವವನೇ ಆತ್ಮನೆನ್ನುವುದು ಸರಿ. ಈ ಮುಖ್ಯಾತ್ಮನು ಪ್ರಜ್ಞಾನದ ಅಂದರೆ ಕೇವಲ ಅರಿವಿನ ಸ್ವರೂಪನಾಗಿದ್ದಾನೆ. ಎಚ್ಚರವಿರುವುದು, ಸ್ವತಂತ್ರನೆಂದು ಭಾವಿಸುವುದು, ಕಲಾದಿಗಳ ವಿಜ್ಞಾನ – ಮೊದಲಾದ ಅರಿವಿನ ಭೇದಗಳು ಅಂತಃಕರಣಕ್ಕೆ ಸಂಬಂಧಿಸಿವೆಯೇ ಹೊರತು ಪ್ರಜ್ಞಾನರೂಪಕ್ಕೆ ಸಂಬಂಧಿಸಿಲ್ಲ. ಹಿರಣ್ಯಗರ್ಭನೆಂಬ ಈ ಪ್ರಜ್ಞಾನವೆಂಬ ಶುದ್ಧ ಚೈತನ್ಯದಲ್ಲೇ ಭೂತಭೌತಿಕಗಳೆಲ್ಲವೂ ಇದ್ದುಕೊಂಡು ಹುಟ್ಟು, ಇರವು ಮತ್ತು ಸಾವುಗಳನ್ನು ಕಾಣುತ್ತವೆ. ಪ್ರಜ್ಞಾನಕ್ಕಿಂತ ಬೇರೆ ಯಾವುದೂ ಇಲ್ಲವಾದ್ದರಿಂದ ಪ್ರಜ್ಞಾನವೇ ಬ್ರಹ್ಮ (ಪ್ರಜ್ಞಾನಂ ಬ್ರಹ್ಮ). ಪ್ರಜ್ಞಾನರೂಪವಾಗಿರುವ ಈ ಆತ್ಮಸ್ವರೂಪವನ್ನು ಜ್ಞಾನದಿಂದ ಪಡೆದುಕೊಂಡವನು ಅವಿದ್ಯಾಕೃತವಾದ ಈ ಲೋಕವನ್ನು ದಾಟಿ ಆನಂದರೂಪನಾಗಿರುವ ಪರಮಾತ್ಮನ ರೂಪದಿಂದ ಸರ್ವಕಾಮಗಳನ್ನೂ ಪಡೆದು ಅಮೃತನಾಗುತ್ತಾನೆ.