ಐತರೇಯೋಪನಿಷತ್ತು
Contents
Toggleಪ್ರಥಮೋಧ್ಯಾಯೇ ತೃತೀಯ ಖಂಡಃ
ಓಂ ವಾಙ್ಮೇ ಮನಸಿ ಪ್ರತಿಷ್ಠಿತಾ । ಮನೋ ಮೇ ವಾಚಿ ಪ್ರತಿಷ್ಠಿತಮ್ । ಆವಿರಾವೀರ್ಮ ಏಧಿ । ವೇದಸ್ಯ ಮ ಆಣೀಸ್ಥಃ । ಶ್ರುತಂ ಮೇ ಮಾಪ್ರಹಾಸೀಃ । ಅನೇನಾಧೀತೇನ । ಅಹೋರಾತ್ರಾನ್ ಸಂದಧಾಮಿ । ಋತಂ ವದಿಷ್ಯಾಮಿ । ಸತ್ಯಂ ವದಿಷ್ಯಾಮಿ । ತನ್ಮಾಮವತು । ತದ್ವಕ್ತಾರಮವತು । ಅವತು ಮಾಮ್ । ಅವತು ವಕ್ತಾರಮ್ । ಆವತು ವಕ್ತಾರಮ್ ।। ಓಂ ಶಾಂತಿಃ ಶಾಂತಿಃ ಶಾಂತಿಃ ।।
ಸ ಈಕ್ಷತೇಮೇ ನು ಲೋಕಾಶ್ಚ ಲೋಕಪಾಲಾಶ್ಚಾನ್ನಮೇಭ್ಯಃ ಸೃಜಾ ಇತಿ ।। 1 ।।
“ಈ ಲೋಕಗಳು ಮತ್ತು ಲೋಕಪಾಲಕರಿಗಾಗಿ ಅನ್ನವನ್ನು ಸೃಷ್ಟಿಮಾಡುತ್ತೇನೆ ಎಂದು ಅವನು ಆಲೋಚಿಸಿದನು.
ಹಸಿವು-ಬಾಯಾರಿಕೆಗಳಿಂದ ಕೂಡಿಸಿರುವ ಈ ಲೋಕಗಳು ಮತ್ತು ಲೋಕಪಾಲರು ಅನ್ನವಿಲ್ಲದೇ ಇರಲಾರರು. ಆದ್ದರಿಂದ ಲೋಕಪಾಲರಿಗೆ ಅನ್ನವನ್ನು ಸೃಷ್ಟಿಸುತ್ತೇನೆ ಎಂದು ಈಶ್ವರನು ಆಲೋಚಿಸಿದನು.
ಒಡೆಯರಾಗಿರುವವರು ತಮ್ಮ ಸೇವಕರಿಗೆ ಅನುಗ್ರಹ ಮತ್ತು ದಂಡನೆ ಎರಡನ್ನೂ ಮಾಡುವುದರಲ್ಲಿ ಸ್ವತಂತ್ರರಾಗಿರುವುದರಿಂದ ಈಶ್ವರನು ದೇವತೆಗಳ ವಿಷಯದಲ್ಲಿಯೂ ಅನುಗ್ರಹ-ದಂಡನೆಗಳನ್ನು ಮಾಡುವುದರಲ್ಲಿ ಸ್ವತಂತ್ರನು.
ಸೋಽಪೋಽಭ್ಯತಪತ್ ತಾಭ್ಯೋಽಭಿತಪ್ತಾಭ್ಯೋ ಮೂರ್ತಿರಜಾಯತ । ಯಾ ವೈ ಸಾ ಮೂರ್ತಿರಜಾಯತಾನ್ನಂ ವೈ ತತ್ ।। 2 ।। ತದೇನತ್ ಸೃಷ್ಟಂ ಪರಾಙತ್ಯಜಿಘಾಂಸತ್ ತದ್ವಾಚಾಽಜಿಘೃಕ್ಷತ್ ತನ್ನಾಶಕ್ನೋದ್ವಾಚಾ ಗ್ರಹೀತುಮ್ । ಸ ಯದ್ಧೈನದ್ವಾಚಾಽಗ್ರಹೈಷ್ಯದಭಿವ್ಯಾಹೃತ್ಯ ಹೈವಾನ್ನಮತ್ರಪ್ಸ್ಯತ್ ।। 3 ।। ತತ್ಘ್ರಾಣೇನಾಜಿಘೃಕ್ಷತ್ ತನ್ನಾಶಕ್ನೋತ್ ಘ್ರಾಣೇನ ಗ್ರಹೀತಮ್ । ಸ ಯದ್ಧೈನತ್ ಘ್ರಾಣೇನಾಗ್ರಹೈಷ್ಯದಭಿಪ್ರಾಣ್ಯ ಹೈವಾನ್ನಮತ್ರಪ್ಸ್ಯತ್ ।। 4 ।। ತಚ್ಚಕ್ಷುಷಾಽಜಿಘೃಕ್ಷತ್ ತನ್ನಾಶಕ್ನೋಚ್ಚಕ್ಷುಷಾ ಗ್ರಹೀತುಮ್ । ಸ ಯದ್ಧೈನಚ್ಚಕ್ಷುಷಾಽಗ್ರಹೈಷ್ಯದ್ದೃಷ್ಟ್ವಾ ಹೈವಾನಮತ್ರಪ್ಸ್ಯತ್ ।। 5 ।। ತಚ್ಛ್ರೋತ್ರೇಣಾಜಿಘೃಕ್ಷತ್ ತನ್ನಾಶಕ್ನೋಚ್ಛ್ರೋತ್ರೇಣ ಗ್ರಹೀತುಮ್ । ಸ ಯದ್ಧೈನಚ್ಛ್ರೋತೇಣಾಗ್ರಹೈಷ್ಯಚ್ಛ್ರುತ್ವಾ ಹೈವಾನ್ನಮತ್ರಪ್ಸ್ಯತ್ ।। 6 ।। ತತ್ತ್ವಚಾಽಜಿಘೃಕ್ಷತ್ ತನ್ನಾಶಕ್ನೋತ್ತ್ವಚಾ ಗ್ರಹೀತಮ್ । ಸ ಯದ್ಧೈನತ್ತ್ವಚಾಽಗ್ರಹೈಷ್ಯತ್ ಸ್ಪೃಷ್ಟ್ವಾ ಹೈವಾನ್ನಮತ್ರಪ್ಸ್ಯತ್ ।। 7 ।। ತನ್ಮನಸಾಽಜಿಘೃಕ್ಷತ್ ತನ್ನಾಶಕ್ನೋನ್ಮನಸಾ ಗ್ರಹೀತುಮ್ । ಸ ಯದ್ಧೈನನ್ಮನಸಾಽಗ್ರಹೈಷ್ಯದ್ಧ್ಯಾತ್ವಾ ಹೈವಾನ್ನಮತ್ರಪ್ಸ್ಯತ್ ।। 8 ।। ತಚ್ಛಿಶ್ನೇನಾಜಿಘೃಕ್ಷತ್ ತನ್ನಾಶಕ್ನೋಚ್ಛಿಶ್ನೇನ ಗ್ರಹೀತಮ್ । ಸ ಯದ್ಧೈನಚ್ಛಿಶ್ನೇನಾಗ್ರಹೈಷ್ಯದ್ವಿತ್ಸೃಜ್ಯ ಹೈವಾನಮತ್ರಪ್ಸ್ಯತ್ ।। 9 ।। ತದಪಾನೇನಾಜಿಘೃಕ್ಷತ್ ತದಾವಯತ್ । ಸೈಷೋಽನ್ನಸ್ಯ ಗ್ರಹೋ ಯದ್ವಾಯುರನಾಯುರ್ವಾ ಏಷ ಯದ್ವಾಯುಃ ।। 10 ।।
ಅವನು ಆಪ್ಸನ್ನು ಉದ್ದೇಶಿಸಿ ತಪಸ್ಸು ಮಾಡಿದನು. ಹಾಗೆ ಅಭಿತಪ್ತವಾದ ಅದರಿಂದ ಒಂದು ಮೂರ್ತಿಯುಂಟಾಯಿತು. ಉಂಟಾದ ಮೂರ್ತಿಯೇ ಅನ್ನವು. ಸೃಷ್ಟಿಯಾದ ಅನ್ನವು ಆಚೆ ದಾಟಿ ಹೋಗುವುದಕ್ಕೆ ತೊಡಗಿದಾಗ ಪುರುಷನು ಅದನ್ನು ವಾಕ್ಕಿನಿಂದ ಹಿಡಿಯುವುದಕ್ಕೆ ಪ್ರಯತ್ನಿಸಿದನು. ಆದರೆ ಅದನ್ನು ವಾಕ್ಕಿನಿಂದ ಹಿಡಿದುಕೊಳ್ಳಲು ಅವನು ಶಕ್ತನಾಗಲಿಲ್ಲ. ಅದನ್ನು ಅವನು ವಾಕ್ಕಿನಿಂದ ಹಿಡಿದುಕೊಂಡಿದ್ದರೆ ಅನ್ನದ ಕುರಿತು ಮಾತನಾಡಿಯೇ ಅವನು ತೃಪ್ತನಾಗಬಹುದಾಗಿತ್ತು. ಅದನ್ನು ಘ್ರಾಣದಿಂದ ಹಿಡಿಯಲು ಪ್ರಯತ್ನಿಸಿದನು. ಘ್ರಾಣದಿಂದಲೂ ಅದನ್ನು ಹಿಡಿಯಲು ಶಕ್ತನಾಗಲಿಲ್ಲ. ಅದನ್ನು ಘ್ರಾಣದಿಂದ ಹಿಡಿದುಕೊಂಡಿದ್ದರೆ ಅನ್ನವನ್ನು ಮೂಸುವುದರಿಂದಲೇ ಅವನು ತೃಪ್ತನಾಗಬಹುದಾಗಿತ್ತು. ಅದನ್ನು ಚಕ್ಷುವಿನಿಂದ ಹಿಡಿಯುವುದಕ್ಕೆ ಪ್ರಯತ್ನಿಸಿದನು. ಚಕ್ಷುವಿನಿಂದಲೂ ಅದನ್ನು ಹಿಡಿಯಲು ಶಕ್ತನಾಗಲಿಲ್ಲ. ಚಕ್ಷುವಿನಿಂದ ಅದನ್ನು ಹಿಡಿದುಕೊಂಡಿದ್ದರೆ ಅನ್ನವನ್ನು ನೋಡುವುದರಿಂದಲೇ ಅವನು ತೃಪ್ತನಾಗಬಹುದಾಗಿತ್ತು. ಅದನ್ನು ಶ್ರೋತ್ರುವಿನಿಂದ ಹಿಡಿಯುವುದಕ್ಕೆ ಎಣಿಸಿದನು. ಆದರೆ ಶ್ರೋತ್ರುವಿನಿಂದಲೂ ಅದನ್ನು ಹಿಡಿಯಲು ಶಕ್ತನಾಗಲಿಲ್ಲ. ಶ್ರೋತ್ರುವಿನಿಂದ ಅದನ್ನು ಹಿಡಿದುಕೊಂಡಿದ್ದರೆ ಅನ್ನದ ಕುರಿತು ಕೇಳುವುದರಿಂದಲೇ ಅವನು ತೃಪ್ತನಾಗಬಹುದಾಗಿತ್ತು. ಅದನ್ನು ತ್ವಕ್ಕಿನಿಂದ ಹಿಡಿಯುವುದಕ್ಕೆ ಬಯಸಿದನು. ಆದರೆ ತ್ವಕ್ಕಿನಿಂದಲೂ ಅದನ್ನು ಹಿಡಿಯಲು ಶಕ್ತನಾಗಲಿಲ್ಲ. ತ್ವಕ್ಕಿನಿಂದ ಅದನ್ನು ಹಿಡಿದುಕೊಂಡಿದ್ದರೆ ಅನ್ನವನ್ನು ಮುಟ್ಟುವುದರಿಂದಲೇ ಅವನು ತೃಪ್ತನಾಗಿಬಿಡುತ್ತಿದ್ದನು. ಅದನ್ನು ಮನಸ್ಸಿನಿಂದ ಹಿಡಿಯಲು ಪ್ರಯತ್ನಿಸಿದನು. ಆದರೆ ಮನಸ್ಸಿನಿಂದಲೂ ಅದನ್ನು ಹಿಡಿಯಲು ಶಕ್ತನಾಗಲಿಲ್ಲ. ಮನಸ್ಸಿನಿಂದ ಅದನ್ನು ಹಿಡಿದುಕೊಂಡಿದ್ದರೆ ಅನ್ನದ ಕುರಿತು ಯೋಚಿಸುವುದರಿಂದಲೇ ಅವನು ತೃಪ್ತನಾಗಬಹುದಾಗಿತ್ತು. ಅದನ್ನು ಶಿಶ್ನದಿಂದ ಹಿಡಿಯಲು ಪ್ರಯತ್ನಿಸಿದನು. ಆದರೆ ಶಿಶ್ನದಿಂದಲೂ ಹಿಡಿಯಲು ಶಕ್ತನಾಗಲಿಲ್ಲ. ಶಿಶ್ನದಿಂದ ಅದನ್ನು ಹಿಡಿದುಕೊಂಡಿದ್ದರೆ ಅನ್ನವನ್ನು ಹೊರಕ್ಕೆ ಬಿಡುವುದರಿಂದಲೇ ತೃಪ್ತನಾಗಬಹುದಾಗಿತ್ತು. ಅದನ್ನು ಅಪಾನದಿಂದ ಹಿಡಿಯುವುದಕ್ಕೆ ಎಣಿಸಿದನು. ಅಪಾನದಿಂದ ಅನ್ನವನ್ನು ಒಳಕ್ಕೆ ಎಳೆದುಕೊಂಡನು. ಆ ವಾಯುವೇ ಅನ್ನದ ಗ್ರಹವು. ಅದೇ ಅನ್ನಾಯುವು.
ಲೋಕಪಾಲರ ಎದುರಿಗೆ ಸೃಷ್ಟವಾದ ಅನ್ನವು ಬೆಕ್ಕಿನ ಮುಂದೆ ಇರುವ ಇಲಿಯಂತೆ “ಇವರು ನನಗೆ ಮೃತ್ಯುವಾಗುತ್ತಾರೆ” ಎಂದು ಅವರಿಗಿಂತ ದೂರ ಓಡ ತೊಡಗಿತು. ಅನ್ನದ ಆ ಅಭಿಪ್ರಾಯವನ್ನು ಕಂಡ ಲೋಕಪಾಲಕರು ಒಟ್ಟು ಸೇರಿದ ದೇಹೇಂದ್ರಿಯಗಳ ಸ್ವರೂಪವಾದ ಪಿಂಡಾತ್ಮನು ಮೊದಲು ಹುಟ್ಟಿದವನಾದ್ದರಿಂದ ತನಗಿಂತ ಬೇರೆ ಅನ್ನವನ್ನು ತಿನ್ನುವವರನ್ನು ಯಾರನ್ನೂ ಕಾಣದೇ ಆ ಅನ್ನವನ್ನು ವಾಕ್ಕಿನಿಂದ ಅಂದರೆ ಮಾತನಾಡುವುದೆಂಬ ಕರ್ಮದಿಂದ ಹಿಡಿಯಲು ಇಚ್ಛಿಸಿತು. ಆದರೆ ಅದಕ್ಕೆ ವಾಕ್ಕಿನಿಂದ ಅನ್ನವನ್ನು ಹಿಡಿದುಕೊಳ್ಳಲು ಸಾಧ್ಯವಾಗಲಿಲ್ಲ. ಆ ಮೊದಲು ಹುಟ್ಟಿದ ಶರೀರಿಯು ಅನ್ನವನ್ನು ವಾಕ್ಕಿನಿಂದ ಹಿಡಿದುಕೊಂಡಿದ್ದರೆ ಪ್ರತಿಯೊಬ್ಬ ಮನುಷ್ಯನೂ ಅನ್ನದ ಕುರಿತು ಮಾತನಾಡಿಯೇ ತೃಪ್ತನಾಗಬಹುದಾಗಿತ್ತು. ಆದರೆ ಹೀಗಿಲ್ಲ. ಹೀಗೆ ಅದನ್ನು ಘ್ರಾಣದಿಂದ, ಚಕ್ಷುವಿನಿಂದ, ಶ್ರೋತ್ರದಿಂದ, ತ್ವಕ್ಕಿನಿಂದ, ಮನಸ್ಸಿನಿಂದ ಮತ್ತು ಶಿಶ್ನದಿಂದ – ಆಯಾ ಕರಣದ ವ್ಯಾಪಾರದಿಂದ – ಅನ್ನವನ್ನು ಹಿಡಿಯಲಿಕ್ಕಾಗದೇ, ಕೊನೆಗೆ – ಅಪಾನದಿಂದ ಎಂದರೆ ಅಪಾನವಾಯುವಿನ ಸಹಾಯದಿಂದ ಬಾಯಿಯ ಬಿಲದ ಮಾರ್ಗವಾಗಿ ಆ ಅನ್ನವನ್ನು ಹಿಡಿಯಲು ಪ್ರಯತ್ನಿಸಿದನು. ಅದನ್ನು ಒಳಗೆ ತೆಗೆದುಕೊಂಡನು ಎಂದರೆ ಅನ್ನವನ್ನು ಹೀಗೆ ಹಿಡಿದುಕೊಂಡು ತಿಂದನು. ಆದ್ದರಿಂದ ಈ ಅಪಾನವಾಯುವು ಅನ್ನದ ಗ್ರಹ ಅಂದರೆ ಅನ್ನವನ್ನು ಹಿಡಿಯತಕ್ಕದ್ದು. ಇದು ಅನ್ನಾಯು ಅಂದರೆ ಅನ್ನಕ್ಕೆ ಕಟ್ಟುಬಿದ್ದು ಅನ್ನದಿಂದಲೇ ಬದುಕಿರತಕ್ಕದ್ದು ಎಂದು ಪ್ರಸಿದ್ಧವಾಗಿರುತ್ತದೆ.
ಸ ಈಕ್ಷತ ಕಥಂ ನ್ವಿದಂ ಮದೃತೇ ಸ್ಯಾದಿತಿ । ಸ ಈಕ್ಷತ ಕತರೇಣ ಪ್ರಪದ್ಯಾ ಇತಿ । ಸ ಈಕ್ಷತ ಯದಿ ವಾಚಾಽಭಿವ್ಯಾಹೃತಂ ಯದಿ ಘ್ರಾಣೇನಾಭಿಘ್ರಾಣಿತಂ ಯದಿ ಚಕ್ಷುಷಾ ದೃಷ್ಟಂ ಯದಿ ಶ್ರೋತ್ರೇಣ ಶ್ರುತಂ ಯದಿ ತ್ವಚಾ ಸ್ಪೃಷ್ಟಂ ಯದಿ ಮನಸಾ ಧ್ಯಾತಂ ಯದ್ಯಪಾನೇನಾಭ್ಯಪಾನಿತಂ ಯದಿ ಶಿಶ್ನೇನ ವಿಸೃಷ್ಟಮಥ ಕೋಽಹಮಿತಿ ।। 11 ।।
“ನಾನಿಲ್ಲದೇ ಇದು ಹೇಗೆ ತಾನೇ ಇದ್ದೀತು?” ಎಂದು ಅವನು ಆಲೋಚಿಸಿದನು. “ನಾನು ಯಾವುದರಿಂದ ಇದನ್ನು ಪಡೆದುಕೊಳ್ಳಲಿ?” ಎಂದು ಆಲೋಚಿಸಿದನು. “ವಾಕ್ಕಿನಿಂದ ಮಾತನಾಡಿದರೆ, ಘ್ರಾಣದಿಂದ ಮೂಸಿದರೆ, ಚಕ್ಷುವಿನಿಂದ ನೋಡಿದರೆ, ಶ್ರೋತ್ರುವಿನಿಂದ ಕೇಳಿದರೆ, ತ್ವಕ್ಕಿನಿಂದ ಮುಟ್ಟಿದರೆ, ಮನಸ್ಸಿನಿಂದ ಧ್ಯಾನಿಸಿದರೆ, ಅಪಾನದಿಂದ ಒಳಕ್ಕೆ ಎಳೆದುಕೊಂಡರೆ, ಶಿಶ್ನದಿಂದ ಹೊರಕ್ಕೆ ಬಿಟ್ಟರೆ, ಆಗ ನಾನು ಯಾರು?” ಎಂದು ಆಲೋಚಿಸಿದನು.
ಆತ್ಮನು ಈ ರೀತಿ ಲೋಕಗಳು, ಲೋಕಪಾಲಕರನ್ನು – ಪುರ, ಪುರನಿವಾಸಿಗಳು ಮತ್ತು ಅವರನ್ನು ಕಾಪಾಡುವವರನ್ನು ಅನ್ನನಿಮಿತ್ತದಿಂದ ಏರ್ಪಡಿಸಿ ಆಲೋಚಿಸಿದನು: “ಹೇಗೆತಾನೇ ಇದು ನಾನಿಲ್ಲದೇ, ಪುರಸ್ವಾಮಿಯಾದ ನನ್ನನ್ನು ಬಿಟ್ಟು, ಇದ್ದೀತು?”
ವಾಗ್ವ್ಯವಹಾರ ಮೊದಲಾದವುಗಳು ಪಟ್ಟಣದವರೂ, ಹೊಗಳುಭಟ್ಟರೇ ಮೊದಲಾದವರೂ ಒಪ್ಪಿಸುವ ಕಾಣಿಕೆ, ಹೊಗಳಿಕೆಗಳು. ಒಡೆಯನಿಲ್ಲದೇ ಇರುವಾಗ ಈ ವ್ಯವಹಾರಗಳು ಹೇಗೆ ನಿರರ್ಥಕವಾಗಿ ತಮ್ಮಷ್ಟಕ್ಕೆ ತಾವೇ ಇರಲಾರವೋ ಹಾಗೆ ಒಡೆಯನಿಗಾಗಿರುವುದರಿಂದ ಒಡೆಯನಿಲ್ಲದೇ ನಿರರ್ಥಕವಾಗುವುದರಿಂದ ಎಂದಿಗೂ ತಾವೇ ಇದ್ದುಕೊಂಡಿರಲಾರವು. ಆದ್ದರಿಂದ ಪುರಕ್ಕೆ ರಾಜನು ಹೇಗೋ ಹಾಗೆ ನಾನು ಇವಕ್ಕಿಂತ ಬೇರೆಯವನೂ, ಒಡೆಯನೂ, ಆಳುವವನೂ, ಮಾಡಿದ ಮತ್ತು ಮಾಡದೇ ಇರುವ ಕರ್ಮಫಲಕ್ಕೆ ಸಾಕ್ಷಿಯಾದ ಭೋಕ್ತನೂ ಆಗಿರಬೇಕು ಎಂದು ಆಲೋಚಿಸಿದನು.
ಒಂದು ವೇಳೆ ಈ ಒಟ್ಟುಗೂಡಿದ ಕಾರ್ಯವು ಮತ್ತೊಬ್ಬರಿಗಾಗಿದ್ದರೂ ಇದಕ್ಕಿಂತ ಬೇರೆಯಾದ ಅರ್ಥಿಯಾದ ಚೇತನನಾದ ನಾನಿಲ್ಲದೇ ಪುರದ ಮತ್ತು ಪುರನಿವಾಸಿಗಳ ಕಾರ್ಯವು ಅವರ ಒಡೆಯನಿಲ್ಲದೆಯೇ ಆಗುವಂತೆ ಆಗುವುದಾದರೆ ಆಗ ನಾನು ಯಾರು? ನನ್ನ ಸ್ವರೂಪವೇನು? ನಾನು ಯಾರಿಗೆ ಒಡೆಯನು? ನಾನು ಕಾರ್ಯಕರಣಸಂಘಾತವನ್ನು ಒಳಹೊಕ್ಕು ವಾಕ್ಕೇ ಮೊದಲಾದ ಕರಣಗಳು ಮಾಡುವ ಮಾತನಾಡುವುದೇ ಮೊದಲಾದ ಕಾರ್ಯಗಳ ಫಲವನ್ನು, ಅರಸನು ಪುರವನ್ನು ಹೊಕ್ಕು ಅಧಿಕಾರಿಗಳು ಮಾಡಿದ್ದರ ಮತ್ತು ಮಾಡದೇ ಇದ್ದುದರ ಫಲವನ್ನು ಅನುಭವಿಸುವಂತೆ, ಅರಿತುಕೊಳ್ಳದೇ ಇದ್ದರೆ, ಯಾರೂ ಕೂಡ “ಇವನು ಇದ್ದಾನೆ ಮತ್ತು ಇವನ ಸ್ವರೂಪವು ಹೀಗಿದೆ” ಎಂದು ತಿಳಿದುಕೊಳ್ಳಲಾರರು. ಆದರೆ ನಾನು ಇದರ ಒಳಹೊಕ್ಕು ಎಲ್ಲವನ್ನೂ ಅರಿತುಕೊಂಡರೆ ಕರಣಗಳು ಮಾಡುವ ಮತ್ತು ಮಾಡದೇ ಇರುವ ಕಾರ್ಯಗಳನ್ನು ಅರಿತುಕೊಳ್ಳುವವನು ಇದ್ದಾನೆ ಮತ್ತು ಅವನು ಜ್ಞಾನರೂಪಿಯಾಗಿದ್ದಾನೆ ಎಂದು ನನ್ನನ್ನು ಅರಿತುಕೊಳ್ಳಬಹುದು. ಹೇಗೆ ಕಂಬ, ಗೋಡೆ ಮೊದಲಾದವುಗಳು ಉಪ್ಪರಿಗೆಯೇ ಮೊದಲಾದವುಗಳೊಡನೆ ಒಟ್ಟು ಕೂಡಿಕೊಂಡಿರುವುದರಿಂದ ತಮ್ಮ ಅವಯವಗಳೊಡನೆ ಕೂಡಿಕೊಳ್ಳದೇ ಇರುವ ಮತ್ತೊಬ್ಬನಿಗಾಗಿಯೇ ಇರುವಂತೆ ಈ ವಾಕ್ಕೇ ಮೊದಲಾದವುಗಳ ಮಾತನಾಡುವುದೇ ಮೊದಲಾದವುಗಳು ಒಟ್ಟಾಗಿ ಇರುವುದು.
ಹೀಗೆಂದು ಆಲೋಚಿಸಿ, “ಯಾವ ಮಾರ್ಗದಿಂದ ಈ ಪುರುಷನನ್ನು ಪ್ರವೇಶಿಸಲಿ? ಮುಂಗಾಲು, ನೆತ್ತಿ – ಈ ಎರಡೂ ಪ್ರವೇಶಕ್ಕೆ ದಾರಿಗಳು, ಇವೆರಡರಲ್ಲಿ ಯಾವ ದಾರಿಯಿಂದ ಕಾರ್ಯ-ಕರಣ-ಸಂಘಾತರೂಪವಾದ ಪುರವನ್ನು ಹೊಗಲಿ?” ಎಂದು ಅವನು ಆಲೋಚಿಸಿದನು.
ಸ ಏತಮೇವ ಸೀಮಾನಂ ವಿದರ್ಯೈತಯಾ ದ್ವಾರಾ ಪ್ರಾಪದ್ಯತ । ಸೈಷಾ ವಿದೃತಿರ್ನಾಮ ದ್ವಾಸ್ತದೇತನ್ನಾಽಂದನಮ್ । ತಸ್ಯ ತ್ರಯ ಆವಸಥಾಸ್ತ್ರಯಃ ಸ್ವಪ್ನಾಃ । ಅಯಮಾವಸಥೋಽಯಮಾವಸಥೋಽಯಮಾವಸಥ ಇತಿ ।। 12 ।।
ಅವನು ಬೈತಲೆಯನ್ನು ಸೀಳಿಕೊಂಡು ಆ ದ್ವಾರದಿಂದ ಸೇರಿದನು. ಅದು ವಿದೃತಿ ಎಂಬ ಹೆಸರಿನ ದ್ವಾರವು. ಅದು ನಾಂದನವು. ಅವನಿಗೆ ಮೂರು ವಸತಿಗಳು, ಮೂರು ಸ್ವಪ್ನಗಳು. ಇದು ಒಂದು ವಸತಿ, ಇದು ಒಂದು ವಸತಿ ಮತ್ತು ಇದು ಒಂದು ವಸತಿ.
ಹೀಗೆ ಆಲೋಚಿಸಿಕೊಂಡು “ನನ್ನ ಭೃತ್ಯನಾಗಿ ನನಗೆ ಬೇಕಾದ ಕೆಲಸಗಳಿಗೆಲ್ಲಾ ಅಧಿಕಾರಿಯಾಗಿರುವ ಪ್ರಾಣನು ಹೊಕ್ಕ ಮಾರ್ಗದಿಂದ, ಅಂದರೆ ಕೆಳಗಡೆಯಿಂದ ಮುಂಗಾಲುಗಳ ಮೂಲಕವಾಗಿ, ನಾನು ಸೇರುವುದಿಲ್ಲ. ಇನ್ನು ಉಳಿದಿರುವ ಈ ಶರೀರದ ನೆತ್ತಿಯನ್ನು ಸೀಳಿಕೊಂದು ಸೇರುತ್ತೇನೆ ಎಂದು ವಿಚಾರಪೂರ್ವಕವಾಗಿ ಕೆಲಸಮಾಡುವವರಂತ ಆ ಸೃಷ್ಟೃವಾದ ಈಶ್ವರನು ಈ ತಲೆಯ ಬೈತಲೆಯನ್ನು, ಅಂದರೆ, ಕೂದಲನ್ನು ಬಾಚಿ ವಿಂಗಡಿಸುವ ಸ್ಥಳವನ್ನು, ಸೀಳಿ, ರಂಧ್ರವನ್ನು ಮಾಡಿಕೊಂಡು, ಆ ಮಾರ್ಗದಿಂದ ಈ ಕಾರ್ಯ-ಕರಣಸಂಘಾತವೆಂಬ ಲೋಕವನ್ನು ಸೇರಿದನು ಅಥವಾ ಒಳಹೊಕ್ಕನು.
ಈ ದ್ವಾರವು ವಿದೃತಿ – ಸೀಳಿಕೊಂಡಿದ್ದರಿಂದ ವಿದೃತಿ ಎಂದೇ ಪ್ರಸಿದ್ಧವಾಯಿತು. ಉಳಿದ ಶ್ರೋತೃವೇ ಮೊದಲಾದವುಗಳು ಭೃತ್ಯರ ಸಮಾನರಾಗಿರುವುದರಿಂದ ಅವುಗಳ ಹೊಕ್ಕ ಮಾರ್ಗಗಳು ಸಮೃದ್ಧವಾಗಿರುವುದಿಲ್ಲ, ಆನಂದಕ್ಕೆ ಕಾರಣವಾಗಿರುವುದಿಲ್ಲ. ಆದರೆ ವಿದೃತಿಯು ಪರಮೇಶ್ವರನೊಬ್ಬನಿಗೇ ದಾರಿಯಾಗಿರುವುದರಿಂದ ನಾಂದನ ಅಥವಾ ನಂದನವೇ ಆಗಿರುತ್ತದೆ. “ನಾಂದನಮ್” ಶಬ್ದದಲ್ಲಿ ದೀರ್ಘವನ್ನು ಬಳಸಿರುವುದು ವೈದಿಕಪ್ರಯೋಗವು. ಈ ದ್ವಾರದಿಂದ ಪ್ರಾಣಬಿಡುವವನು ಬ್ರಹ್ಮದಲ್ಲಿ ಆನಂದಿಸುತ್ತಾನೆ. ಆದ್ದರಿಂದ ಇದಕ್ಕೆ ನಾಂದನ ಎಂಬ ಹೆಸರು.
ಹೀಗೆ ಜಗತ್ತನ್ನು ಸೃಷ್ಟಿಸಿ ಪುರವನ್ನು ಪ್ರವೇಶಿಸಿದ ರಾಜನಂತೆ ಜೀವರೂಪದಲ್ಲಿ ಒಳಪ್ರವೇಶಿಸಿದ ಆತ್ಮನಿಗೆ ಮೂರು ವಸತಿಗಳು: ಎಚ್ಚರದ ಕಾಲದಲ್ಲಿ ಇಂದ್ರಿಯಸ್ಥಾನವಾದ ಬಲಗಣ್ಣು, ಕನಸಿನ ಕಾಲದಲ್ಲಿ ಒಳಗಿನ ಮನಸ್ಸು, ಮತ್ತು ತನಿನಿದ್ರೆಯ ಕಾಲದಲ್ಲಿ ಹೃದಯಾಕಾಶವು.
ಸ ಜಾತೋ ಭೂತಾನ್ಯಭಿವ್ಯೈಖ್ಯತ್ ಕಿಮಿಹಾನ್ಯಂ ವಾವದಿಷದಿತಿ । ಸ ಏತಮೇವ ಪುರುಷಂ ಬ್ರಹ್ಮ ತತಮಮಪಶ್ಯದಿದಮದರ್ಶಮಿತೀ ।। 13 ।।
ಅವನು ಹುಟ್ಟಿ, ಭೂತಗಳನ್ನು ವಿಂಗಡಿಸಿ ಹೇಳಿದನು: “ಇಲ್ಲಿ ಯಾವುದು ಬೇರೆ ಎಂದು ಹೇಳಲಿ?” ಅವನು ಇದೇ ಪುರುಷನಾದ ಬ್ರಹ್ಮವನ್ನು ಎಲ್ಲೆಲ್ಲಿಯೂ ವ್ಯಾಪಿಸಿರುವುದಾಗಿ “ಆಹಾ! ಇದನ್ನು ಕಂಡೆನು!” ಎಂದು ಕಂಡುಕೊಂಡನು.
ಅವನು ಹುಟ್ಟಿ, ಎಂದರೆ, ಜೀವರೂಪದಿಂದ ಶರೀರದಲ್ಲಿ ಹೊಕ್ಕು, ಭೂತಗಳನ್ನು ವಿಂಗಡಿಸಿ – ಅಂದರೆ ಆಯಾ ನಾಮರೂಪಗಳನ್ನು ಬಿಡಿಸಿ – ಹೇಳಿದನು.
ತಸ್ಮಾದಿದಂದ್ರೋ ನಾಮೇದಂದ್ರೋ ಹ ವೈ ನಾಮ । ತಮಿದಂದ್ರಂ ಸಂತಮಿಂದ್ರ ಇತ್ಯಾಚಕ್ಷತೇ ಪರೋಕ್ಷೇಣ । ಪರೋಕ್ಷಪ್ರಿಯಾ ಇವ ಹಿ ದೇವಾಃ ಪರೋಕ್ಷಪ್ರಿಯಾ ಇವ ಹಿ ದೇವಾಃ ।। 14 ।।
ಇತ್ಯೈತರೇಯೋಪನಿಷದಿ ಪ್ರಥಮೋಧ್ಯಾಯೇ ತೃತೀಯಃ ಖಂಡಃ ।।