ಐತರೇಯೋಪನಿಷತ್ತು

ಪ್ರಥಮೋಧ್ಯಾಯೇ ಪ್ರಥಮ ಖಂಡಃ

ಓಂ ವಾಙ್ಮೇ ಮನಸಿ ಪ್ರತಿಷ್ಠಿತಾ । ಮನೋ ಮೇ ವಾಚಿ ಪ್ರತಿಷ್ಠಿತಮ್ । ಆವಿರಾವೀರ್ಮ ಏಧಿ । ವೇದಸ್ಯ ಮ ಆಣೀಸ್ಥಃ । ಶ್ರುತಂ ಮೇ ಮಾಪ್ರಹಾಸೀಃ । ಅನೇನಾಧೀತೇನ । ಅಹೋರಾತ್ರಾನ್ ಸಂದಧಾಮಿ । ಋತಂ ವದಿಷ್ಯಾಮಿ । ಸತ್ಯಂ ವದಿಷ್ಯಾಮಿ । ತನ್ಮಾಮವತು । ತದ್ವಕ್ತಾರಮವತು । ಅವತು ಮಾಮ್ । ಅವತು ವಕ್ತಾರಮ್ । ಆವತು ವಕ್ತಾರಮ್ ।। ಓಂ ಶಾಂತಿಃ ಶಾಂತಿಃ ಶಾಂತಿಃ ।।

 

ಓಂ ಆತ್ಮಾ ವಾ ಇದಮೇಕ ಏವಾಗ್ರ ಆಸೀನ್ನಾನ್ಯತ್ಕಿಂಚನ ಮಿಷತ್ ಸ ಈಕ್ಷತ ಲೋಕಾನ್ನು ಸೃಜಾ ಇತಿ ।। 1 ।।

ಆದಿಯಲ್ಲಿ ಕೇವಲ ಶುದ್ಧರೂಪವಾದ ಆತ್ಮತತ್ತ್ವವೊಂದು ಮಾತ್ರ ಇದ್ದಿತು. ಇದನ್ನುಳಿದು ಇನ್ನ್ಯಾವ ತತ್ತ್ವವೂ ಇರಲಿಲ್ಲ. ಆಗ ಈ ವಿಶ್ವಾತ್ಮವು ನಾನು ನಾಮರೂಪಗಳಿಂದ ಯುಕ್ತವಾದ ಜಗತ್ತನ್ನು ನಿರ್ಮಿಸಬೇಕು ಎಂದು ಇಚ್ಛಿಸಿತು.

ಆತ್ಮ ಎಂಬ ಶಬ್ದವು ಆಪ್ (ವ್ಯಾಪಿಸು), ಅದ್ (ತಿನ್ನು), ಅಥವಾ ಅತ್ (ಸತತವಾಗಿ ಹೋಗಿರು) ಎಂಬ ಧಾತುಗಳಿಂದ ಬಂದಿರುವುದರಿಂದ ಆತ್ಮನು ಎಂದರೆ ಸರ್ವಜ್ಞನೂ, ಸರ್ವಶಕ್ತಿಯುಳ್ಳವನೂ, ಹಸಿವು ಮೊದಲಾದ ಯಾವ ಸಂಸಾರಧರ್ಮವೂ ಇಲ್ಲದವನೂ, ನಿತ್ಯಶುದ್ಧಬುದ್ಧಮುಕ್ತ ಸ್ವಭಾವದವನೂ, ಹುಟ್ಟಿಲ್ಲದವನೂ, ಮುಪ್ಪಿಲ್ಲದವನೂ, ಸಾವಿಲ್ಲದವನೂ, ನಾಶವಾಗದ ಸ್ವಭಾವದವನೂ, ಅಂಜಿಕೆಯಿಲ್ಲದವನೂ, ತನಗೆರಡನೆಯದಿಲ್ಲದವನೂ ಆದ ಪರಮಾತ್ಮನು.

ಇದಕ್ಕಿಂತ ಎಂದರೆ ನಾಮ, ರೂಪ, ಕರ್ಮ ಎಂಬ ಭೇದಗಳಿಂದ ವಿಂಗಡಿಸಿಕೊಂಡಿರುವ ಜಗತ್ತು.

ಮೊದಲು ಎಂದರೆ ಜಗತ್ತು ಸೃಷ್ಟಿಯಾಗುವ ಮೊದಲು ಆತ್ಮನೊಬ್ಬನೇ ಆಗಿತ್ತು ಎಂದರ್ಥ.

ಈಗಲೂ ಅವನೊಬ್ಬನೇ ಆದರೂ “ಆಗಿತ್ತು” ಎಂದು ಹೇಳುವುದರಲ್ಲಿ ಒಂದು ವಿಶೇಷವಿದೆ. ಜಗತ್ತು ಹುಟ್ಟುವುದಕ್ಕೆ ಮೊದಲು ನಾಮ-ರೂಪಗಳೆಂಬ ಭೇದವು ವಿಂಗಡಣೆಯಾಗಿರಲಿಲ್ಲವಾದುದರಿಂದ ಆತ್ಮನೊಬ್ಬನೇ ಆಗಿತ್ತು ಎಂದು ಹೇಳಿದೆ. ಹೇಗೆ ನೀರಿಗಿಂತ ಬೇರೆಯಾಗಿ ನೊರೆಯೆಂಬ ನಾಮ-ರೂಪಗಳು ವಿಂಗಡವಾಗುವುದಕ್ಕೆ ಮೊದಲು “ನೀರು” ಎಂಬ ಒಂದೇ ಶಬ್ದವು ಬಳಕೆಯಾಗುತ್ತದೆಯೋ, ಯಾವಾಗ ನೀರಿಗಿಂತ ಬೇರೆಯಾಗಿ ನೊರೆಯೆಂಬ ನಾಮ-ರೂಪಗಳಿಂದ ವಿಂಗಡವಾಗುವುದೋ ಆಗ ನೊರೆಯು “ನೀರು” ಮತ್ತು “ನೊರೆ” ಎಂದು ಅನೇಕ ಶಬ್ದಗಳಿಂದ ಕರೆಯಲ್ಪಡುತ್ತದೆಯೋ ಹಾಗೆಯೇ ನಾಮ-ರೂಪಗಳಿಂದ ಬೇರೆಯಾಗಿರುವ ಈ ಜಗತ್ತು ಆತ್ಮನೇ ಆಗಿದ್ದರೂ, ಈ ಜಗತ್ತು ಆತ್ಮನಿಗಿಂತ ಭಿನ್ನವಾಗಿ ತೋರುವ ಮೊದಲು ನಾಮ-ರೂಪರಹಿತನಾದ ಆತ್ಮನು ಒಬ್ಬನೇ ಇದ್ದನು ಎಂದಿದೆ.

ಮಿಷತ್ ಎಂದರೆ ಕಣ್ಣುಪಿಳಕಿಸುವ, ಅಲುಗಾಡುವ ಅಥವಾ ಬೇರೆಯಾದ ಇನ್ನೊಂದು ಯಾವುದೂ ಇರಲಿಲ್ಲ. ಆತ್ಮನೊಬ್ಬನೇ ಇದ್ದನು.

ಸ ಈಕ್ಷತ ಎಂದರೆ ಆತ್ಮನು ಆಲೋಚಿಸಿದನು, ಆಲೋಚಿಸಿ ನೋಡಿದನು. ಸೃಷ್ಟಿಯ ಪೂರ್ವದಲ್ಲಿ ಶರೀರವಾಗಲೀ ಇಂದ್ರಿಯಗಳಾಗಲೀ ಇಲ್ಲದಿದ್ದಾಗ ಅವನು ಹೇಗೆ ನೋಡಿದನು ಎಂಬ ಪ್ರಶ್ನೆಯುಂಟಾಗುತ್ತದೆ. ಆತ್ಮನು ಸರ್ವಜ್ಞಸ್ವಭಾವದವನಾದ್ದರಿಂದ (ಅವನೊಬ್ಬನೇ ಇದ್ದುದರಿಂದ ಬೇರೆ ಯಾವುದೂ ಇಲ್ಲದಿದ್ದ ಕಾರಣದಿಂದ ಅವನಿಗೆ ಎಲ್ಲವೂ ತಿಳಿದಿತ್ತು) ಶ್ವೇತೋಪನಿಷತ್ತಿನಲ್ಲಿ ಹೇಳಿರುವಂತೆ “ಕೈಕಾಲುಗಳಿಲ್ಲದೇ ವೇಗವಾಗಿ ನಡೆಯುತ್ತಾನೆ, ಹಿಡಿದುಕೊಳ್ಳುತ್ತಾನೆ.[1]

ಲೋಕಾನ್ ಲೋಕಗಳನ್ನು ಅಂದರೆ ಪ್ರಾಣಿಗಳು ಕರ್ಮದ ಫಲವನ್ನು ಉಪಭೋಗಿಸುವ ಸ್ಥಾನಗಳನ್ನು ಸೃಜೇ ನಾನು ಸೃಷ್ಟಿಸುತ್ತೇನೆ ಎಂದು ಆಲೋಚಿಸಿ ನೋಡಿದನು. 

ಸ ಇಮಾನ್ ಲ್ಲೋಕಾನಸೃಜತ ಅಂಬೋ ಮರೀಚೀರ್ಮರಮಾಪೋಽದೋಽಂಬಃ ಪರೇಣ ದಿವಂ ದ್ಯೌಃ ಪ್ರತಿಷ್ಠಾಽಂತರಿಕ್ಷಂ ಮರೀಚಯಃ ಪೃಥಿವೀ ಮರೋ ಯಾ ಅಧಸ್ತಾತ್ ತಾ ಆಪಃ ।। 2 ।।

ಅವನು ಈ ಲೋಕಗಳನ್ನು ಸೃಷ್ಟಿಸಿದನು: ಅಂಭಸ್ಸು, ಮರೀಚಿ, ಮರ, ಆಪ್ಸು. ದ್ಯುಲೋಕದ ಆಚೆಯಿರುವುದು ಅಂಭಸ್ಸು. ದ್ಯುಲೋಕವು ಅದಕ್ಕೆ ಒತ್ತು. ಅಂತರಿಕ್ಷವೇ ಮರೀಚಿ. ಪೃಥ್ವಿಯೇ ಮರ. ಕೆಳಗಿರುವುದು ಆಪ್ಸು.

ಆಗ ತದಿಚ್ಛಾನುಸಾರವಾಗಿ ಈ ಲೋಕಗಳನ್ನು ಸೃಷ್ಟಿಸಿದನು. ಇವುಗಳೊಂದಿಗೆ ತೇಜಸ್ಸು, ಸಲಿಲ, ಮೃತ್ಯು ಇವುಗಳನ್ನೂ ಉತ್ಪನ್ನಮಾಡಿದನು. ಇದರಿಂದ ಸೃಷ್ಟವಾದ ಸಲಿಲವು ದ್ಯುಲೋಕದ ಮೇಲಿರುತ್ತದೆ. ದ್ಯುಲೋಕವೇ ಇದರ ಅಧಾರ. ತೇಜೋರಶ್ಮಿಗಳೇ ಅಂತರಿಕ್ಷವು. ಪೃಥ್ವಿಯೇ ಮೃತ್ಯುರೂಪವು. ಇದಕ್ಕಿಂತಲೂ ಕೆಳಭಾಗದಲ್ಲಿರುವುದೂ ಉದಕವೇ ಆಗಿದೆ.

ಹೀಗೆ ಆಲೋಚಿಸಿ ಆತ್ಮನು ಈ ಲೋಕಗಳನ್ನು ಸೃಷ್ಟಿಸಿದನು. ಇಲ್ಲಿ ಹೇಗೆ ಬುದ್ಧಿವಂತನಾದ ಬಡಗಿ ಅಥವಾ ಶಿಲ್ಪಿಯು “ಈ ರೀತಿಯ ಮಹಡಿಗಳನ್ನು ನಿರ್ಮಿಸುತ್ತೇನೆ” ಎಂದು ಆಲೋಚಿಸಿ ಅದರಂತೆಯೇ ಮಹಡಿಗಳನ್ನು ನಿರ್ಮಿಸುತ್ತಾನೋ ಹಾಗೆ ಆತ್ಮನು ಲೋಕಗಳನ್ನು ಕಲ್ಪಿಸಿಕೊಂಡು ಹಾಗೆಯೇ ಸೃಷ್ಟಿಸಿದನು.

ಬಡಗಿ ಅಥವಾ ಶಿಲ್ಪಿಗೆ ಮಹಡಿಗಳನ್ನು ನಿರ್ಮಿಸಲು ತನಗಿಂತಲೂ ಬೇರೆಯಾದ ಉಪಾದಾನವಸ್ತುಗಳು ಅಥವಾ ಸಲಕರಣೆಗಳು ಇರುತ್ತವೆ. ಆದರೆ ಯಾವುದೇ ಸಲಕರಣೆಗಳಿಲ್ಲದ, ತಾನೊಬ್ಬನೇ ಇದ್ದಿದ್ದ ಆತ್ಮನು ಹೇಗೆ ಯಾವ ಉಪಾದಾನವಸ್ತುಗಳೂ ಇಲ್ಲದೇ ಲೋಕಗಳನ್ನು ಸೃಷ್ಟಿಸುತ್ತಾನೆ? ನೀರು ಹೇಗೆ, ಬೇರೆ ಯಾವ ಉಪಾದಾನವಸ್ತುಗಳೂ ಇಲ್ಲಡೆ, ನೊರೆಯಾಗಿ, ನೀರಿಗಿಂತ ಭಿನ್ನವಾಗಿ ತೋರುತ್ತದೆಯೋ ಹಾಗೆಯೇ ನಾಮರೂಪಗಳಾಗಿ ಭಿನ್ನಭಿನ್ನವಾಗಿ ತೋರುವ ಈ ಜಗತ್ತಿಗೂ ಆತ್ಮನೇ ಉಪಾದಾನವಸ್ತುವಾಗಿರಬಹುದು. ಹೇಗೆ ಕುಶಲ ಜಾದುಗಾರನು ಯಾವ ಉಪಾದಾನವೂ ಇಲ್ಲದೇ ತನ್ನನ್ನೇ ಆಕಾಶದಲ್ಲಿ ನಡೆಯುತ್ತಿರುವ ಮತ್ತೊಬ್ಬನಂತೆ ನಿರ್ಮಿಸಿಕೊಳ್ಳುತ್ತಾನೋ ಅದರಂತೆ ಸರ್ವಶಕ್ರಿಗಳೂ ಇರುವ ಮಹಾಮಾಯಾವಿಯಾದ ದೇವನು ತನ್ನನ್ನೇ ಮತ್ತೊಂದು ರೂಪದ ಜಗತ್ತಿನ ರೂಪದಿಂದ ನಿರ್ಮಿಸಿಕೊಳ್ಳುತ್ತಾನೆ.

ಇಲ್ಲಿ ಆತ್ಮನು ಐದು ಲೋಕಗಳನ್ನು ಸೃಷ್ಟಿಸಿದನು ಎಂದಿದೆ: ಎಲ್ಲಕ್ಕೂ ಮೊದಲು ಅಂಭಸ್ಸು (ನೀರಿನಿಂದ ಕೂಡಿರುವುದು), ಅದರ ಕೆಳಗೆ, ಅದಕ್ಕೆ ಒತ್ತಿಕೊಂಡು ದ್ಯುಲೋಕ. ದ್ಯುಲೋಕದ ಕೆಳಗೆ ಅಂತರಿಕ್ಷ ಅಥವಾ ಮರೀಚಿ ಲೋಕ. ಈ ಲೋಕವು ಒಂದೇ ಆದರೂ ಬೇರೆ ಬೇರೆ ಸ್ಥಾನಗಳಿರುವುದರಿಂದ ಮರೀಚಯಃ ಎಂದು ಬಹುವಚನದಲ್ಲಿದೆ. ಅಥವಾ ಮರೀಚಿಗಳೊಡನೆ ಅಂದರೆ ಕಿರಣಗಳೊಡನೆ ಸಂಬಂಧವಿರುವುದರಿಂದ ಇದಕ್ಕೆ ಮರೀಚಯಃ ಎಂಬ ಬಹುವಚನದ ಹೆಸರು ಬಂದಿದೆ. ಅಂತರಿಕ್ಷದ ಕೆಳಗೆ ಇರುವ ಭೂಲೋಕವೇ ಮರಲೋಕವು. ಇಲ್ಲಿ ಪ್ರಾಣಿಗಳು ಮೃತರಾಗುತ್ತಾರೆ. ಆದ್ದರಿಂದ ಇದಕ್ಕೆ ಮರ ಎಂಬ ಹೆಸರು. ಭೂಲೋಕದ ಕೆಳಗೆ ಆಪ್ಸು ಲೋಕ. ಆಪ್ (ಪಡೆ) ಎಂಬ ಧಾತುವಿನಿಂದ ಆಪ್ಸು ಎಂಬ ಶಬ್ದವು ಹುಟ್ಟಿದೆ.

ಲೋಕಗಳು ಐದು ಭೂತಗಳಿಂದ ಆಗಿರುವವಾದರೂ ನೀರು ಬಹಳವಾಗಿರುವುದರಿಂದ ಅಂಭಸ್ಸು, ಮರೀಚಿ, ಮರ, ಅಪ್ಸು – ಎಂದು ನೀರಿನ ಹೆಸರುಗಳಿಂದಲೇ ಕರೆಯಿಸಿಕೊಂಡಿವೆ.

ಸ ಈಕ್ಷತೇಮೇ ನು ಲೋಕಾ ಲೋಕಪಾಲಾನ್ನು ಸೃಜಾ ಇತಿ ಸೋಽದ್ಭ್ಯ ಏವ ಪುರುಷಂ ಸಮುದ್ಧೃತ್ಯಾಮೂರ್ಛಯತ್ ।। 3 ।।

ಅವನು ಲೋಕಗಳನ್ನು ನೋಡಿ ಲೋಕಪಾಲಕರನ್ನು ಸೃಷ್ಟಿಸುತ್ತೇನೆ ಎಂದು ಆಲೋಚಿಸಿದನು. ಅವನು ಅಪ್ಸಿನಿಂದಲೇ ಪುರುಷನನ್ನು ಮೇಲಕ್ಕೆತ್ತಿ ಒಟ್ಟುಗೂಡಿಸಿದನು.

ಈ ಮೂರು ಲೋಕಗಳನ್ನೂ ಈಗ ನಿರ್ಮಿಸಿದ್ದಾಯಿತು. ಇನ್ನು ಈ ಲೋಕಗಳನ್ನು ರಕ್ಷಿಸುವ ಲೋಕಪಾಲಕರನ್ನು ನಿರ್ಮಿಸಬೇಕು ಎಂದು ಇಚ್ಛಿಸಿ ತನ್ನಿಂದ ಸೃಷ್ಟವಾದ ಉದಕದಿಂದಲೇ ಒಂದು ಪುರುಷರೂಪವನ್ನು ನಿರ್ಮಿಸಿ ಅದಕ್ಕೆ ಒಂದು ಆಕಾರವನ್ನು ಕೊಟ್ಟಿತು.

ಸರ್ವಪ್ರಾಣಿಗಳೂ ಕರ್ಮಫಲವನ್ನು ಹೊಂದುವುದಕ್ಕೆ ಆಶ್ರಯವಾದ ಲೋಕಗಳನ್ನು ಸೃಷ್ಟಿಸಿ ಆ ಈಶ್ವರನು ನೋಡಿ ಮತ್ತೆ ಆಲೋಚಿಸಿದನು. “ನಾನು ಸೃಷ್ಟಿಸಿರುವ ಈ ಅಂಭಸ್ಸು ಮೊದಲಾದ ಲೋಕಗಳು ಕಾಪಾಡುವವರಿಲ್ಲದೇ ನಾಶವಾದಾವು! ಆದ್ದರಿಂದ ಇವುಗಳನ್ನು ಕಾಪಾಡುವುದಕ್ಕಗಿ ಲೋಕಪಾಲಕರನ್ನು ಸೃಷ್ಟಿಸುತ್ತೇನೆ” ಎಂದು ಆಲೋಚಿಸಿದನು.

ಹೀಗೆ ಆಲೋಚಿಸಿ ಅವನು ಆಪ್ಸಿನಿಂದಲೇ ಅಂದರೆ ಆಪ್ಸು ಮುಖ್ಯವಾಗಿರುವ ಪಂಚಭೂತಗಳಿಂದಲೇ – ಯಾವ ಭೂತಗಳಿಂದ ಅಂಭಸ್ಸು ಮೊದಲಾದ ಲೋಕಗಳನ್ನು ಸೃಷ್ಟಿಸಿದ್ದನೋ ಅವುಗಳಿಂದಲೇ – ಪುರುಷನನ್ನು ಅಂದರೆ ತಲೆ, ಕೈ ಮೊದಲಾದವುಗಳುಳ್ಳ ಪುರುಷಾಕಾರವನ್ನು, ಮೇಲಕ್ಕಿತ್ತಿ, ನೀರಿನಿಂದ ತೆಗೆದುಕೊಂಡು, ಕುಂಬಾರನು ನೆಲದಿಂದ ಮಣ್ಣಿನ ಮುದ್ದೆಯನ್ನು ಎತ್ತಿಕೊಳ್ಳುವಂತೆ ಎತ್ತಿ ತೆಗೆದುಕೊಂಡು ಒಟ್ಟುಮಾಡಿದನು. ಅಂದರೆ ಅದರ ಅವಯವಗಳನ್ನು ಜೋಡಿಸಿ ದುಂಡುಮಾಡಿದನು ಎಂದರ್ಥ.

ತಮಭ್ಯತಪತ್ ತಸ್ಯಾಭಿತಪ್ತಸ್ಯ ಮುಖಂ ನಿರಭಿದ್ಯತ ಯಥಾಽಂಡಮ್ ಮುಖಾದ್ವಾಗ್ವಾಚೋಽಗ್ನಿರ್ನಾಸಿಕೇ ನಿರಭಿದ್ಯೇತಾಂ ನಾಸಿಕಾಭ್ಯಾಂ ಪ್ರಾಣಃ ಪ್ರಾಣಾದ್ವಾಯುರಕ್ಷಿಣೀ ನಿರಭಿದ್ಯೇತಮಕ್ಷೀಭ್ಯಾಂ ಚಕ್ಷುಶ್ಚಕ್ಷುಷ ಆದಿತ್ಯಃ ಕರ್ಣೌ ನಿರಭಿದ್ಯೇತಾಂ ಕರ್ಣಾಭ್ಯಾಂ ಶ್ರೋತ್ರಂ ಶ್ರೋತ್ರದ್ದಿಶಸ್ತ್ವಙ್ ನಿರಭಿದ್ಯತ ತ್ವಚೋ ಲೋಮಾನಿ ಲೋಮಭ್ಯ ಓಷಧಿವನಸ್ಪತಯೋ ಹೃದಯಂ ನಿರಭಿದ್ಯತ ಹೃದಯಾನ್ಮನೋ ಮನಸಶ್ಚಂದ್ರಮಾ ನಾಭಿರ್ನಿರಭಿದ್ಯತ ನಾಭ್ಯಾ ಅಪಾನೋಽಪಾನಾನ್ಮೃತ್ಯುಃ ಶಿಶ್ನಂ ನಿರಭಿದ್ಯತ ಶಿಶ್ನಾದ್ರೇತೋ ರೇತಸ ಆಪಃ ।। 4 ।।

ಅದರ ಕುರಿತು ತಪಸ್ಸು ಮಾಡಿದನು. ಹೀಗೆ ತಪ್ತವಾದ ಅದಕ್ಕೆ ಅಂಡದಂತೆ ಮುಖವು ಒಡೆದುಕೊಂಡಿತು. ಮುಖದಿಂದ ವಾಕ್ಕು, ವಾಕ್ಕಿನಿಂದ ಅಗ್ನಿ. ನಾಸಿಕಗಳು ಒಡೆದುಕೊಂಡವು. ನಾಸಿಕಗಳಿಂದ ಪ್ರಾಣವು, ಪ್ರಾಣದಿಂದ ವಾಯು. ಕಣ್ಣುಗಳು ಒಡೆದುಕೊಂಡವು. ಕಣ್ಣುಗಳಿಂದ ಚಕ್ಷುಸ್ಸು, ಚಕ್ಷುಸ್ಸಿನಿಂದ ಆದಿತ್ಯ. ಕಿವಿಗಳು ಒಡೆದುಕೊಂಡವು. ಕಿವಿಗಳಿಂದ ಶ್ರೋತ್ರವು, ಶ್ರೋತ್ರದಿಂದ ದಿಕ್ಕುಗಳು. ಚರ್ಮವು ಒಡೆದುಕೊಂಡಿತು. ಚರ್ಮದಿಂದ ಲೋಮಗಳು, ಲೋಮದಿಂದ ಮರಗಿಡಗಳು. ಹೃದಯವು ಒಡೆದುಕೊಂಡಿತು. ಹೃದಯದಿಂದ ಮನಸ್ಸು, ಮನಸ್ಸಿನಿಂದ ಚಂದ್ರ. ಹೊಕ್ಕುಳು ಒಡೆದುಕೊಂಡಿತು. ಹೊಕ್ಕುಳಿನಿಂದ ಅಪಾನ, ಅಪಾನದಿಂದ ಮೃತ್ಯು. ಶಿಶ್ನವು ಒಡೆದುಕೊಂಡಿತು. ಶಿಶ್ನದಿಂದ ರೇತಸ್ಸು. ರೇತಸ್ಸಿನಿಂದ ಆಪ್ಸು.

ಪುರುಷಾಕಾರದ ಮುದ್ದೆಯ ಕುರಿತು ತಪಸ್ಸುಮಾಡಿದನು ಎಂದರೆ  ಧ್ಯಾನ ಅಥವಾ ಸಂಕಲ್ಪ ಮಾಡಿದನು ಎಂದು ಅರ್ಥೈಸಬೇಕು. ಹಾಗೆ ತಪ್ತವಾದ ಅಥವಾ ಈಶ್ವರನ ಸಂಕಲ್ಪವೆಂಬ ತಪಸ್ಸಿನಿಂದ ಬಿಸಿಯಾದ ಆ ಮುದ್ದೆಗೆ ಮುಖವು ಒಡೆದುಕೊಂಡಿತು – ಮುಖದ ಆಕಾರವು ಕಾಣಿಸಿಕೊಂಡಿತು. ಹಕ್ಕಿಯ ಮೊಟ್ಟೆಯು ಹೇಗೆ ಒಡೆದುಕೊಳ್ಳುತ್ತದೆಯೋ ಹಾಗೆ ಒಡೆದುಕೊಂಡಿತು. ಹಾಗೆ ಒಡೆದುಕೊಂಡ ಮುಖದಿಂದ ವಾಕ್ಕೆಂಬ ಕರಣ ಅಥವಾ ಇಂದ್ರಿಯವು ಉಂಟಾಯಿತು. ಆ ವಾಕ್ಕಿನಿಂದ ಅದನ್ನು ಆಳುವ ಅಗ್ನಿ ಎಂಬ ಲೋಕಪಾಲನು ಹುಟ್ಟಿದನು.

ಹಾಗೆಯೇ ಮೂಗಿನ ಸೊಳ್ಳೆಗಳು ಒಡೆದುಕೊಂಡವು. ಮೂಗಿನ ಸೊಳ್ಳೆಗಳಿಂದ ಪ್ರಾಣ ಮತ್ತು ಪ್ರಾಣದಿಂದ ವಾಯು – ಹೀಗೆ ಎಲ್ಲ ಕಡೆಯಲ್ಲಿಯೂ ಅಧಿಷ್ಠಾನ, ಕರಣ, ದೇವತೆ – ಈ ಮೂರೂ ಕ್ರಮವಾಗಿ ಒಡೆದುಕೊಂಡವು ಎಂದು ಅರ್ಥೈಸಬೇಕು.

ಇತ್ಯೈತರೇಯೋಪನಿಷದಿ ಪ್ರಥಮೋಧ್ಯಾಯೇ ಪ್ರಥಮಃ ಖಂಡಃ ।।

[1] ಅಪಾಣಿಪಾದೋ ಜವನೋ ಗ್ರಹೀತಾ (ಶ್ವೇತೋಪನಿಷತ್ತು, 3-19)

Leave a Reply

Your email address will not be published. Required fields are marked *