ಋಗ್ವೇದ ಸಂಹಿತೆ

[ಋಗ್ವೇದ ಸಂಹಿತಾ (ಸಾಯಣಭಾಷ್ಯ ಸಮೇತ, ಕರ್ಣಾಟಕ ಭಾಷಾರ್ಥಾನುವಾದವಿವರಣೆಗಳೊಂದಿಗೆ) ಭಾಗ 30 ಎಂಟನೆಯ ಅಷ್ಟಕದ ಅಧ್ಯಾಯಗಳು 5-8 ಹತ್ತನೆಯ ಮಂಡಲದ ಸೂಕ್ತಗಳು 95-191, ಅನುವಾದಕರು ಆಸ್ಥಾನಮಹಾವಿದ್ವಾನ್ ಹೆಚ್. ಪಿ. ವೆಂಕಟರಾವ್, ಶ್ರೀ ಜಯಚಾಮರಾಜೇಂದ್ರ ವೇದರತ್ನಮಾಲಾ, ಸಂಖ್ಯೆ 30, ಶ್ರೀ ಶಾರದಾ ಪ್ರೆಸ್, ಮೈಸೂರು, 1955]

ಋಗ್ವೇದ ಸಂಹಿತೆಯ ಹತ್ತನೇ ಮಂಡಲದ 81, 82, 90, 129, 130 ಮತ್ತು 190 ಸೂಕ್ತಗಳಲ್ಲಿ ಸೃಷ್ಟಿ ವಿಷಯಕ ವರ್ಣನೆಗಳಿವೆ. ಉಪನಿಷತ್ತುಗಳಲ್ಲಿಯೂ ವೇದಾಂತ ಗ್ರಂಥಗಳಲ್ಲಿಯೂ ಹೇಳಲ್ಪಟ್ಟಿರುವ ತತ್ತ್ವಗಳಿಗೂ ವೇದಾಂತ ವಿಷಯಗಳಿಗೂ ಈ ಸೂಕ್ತಗಳೇ ಆಧಾರವಾಗಿವೆ. ಇವುಗಳ ಆಧಾರದ ಮೇಲೆಯೇ ಪರಬ್ರಹ್ಮವಸ್ತುವನ್ನು ವರ್ಣಿಸುವ ಉಪನಿಷತ್ತುಗಳು – ಅದರಲ್ಲಿಯೂ ಮುಖ್ಯವಾಗಿ ದಶೋಪನಿಷತ್ತುಗಳು ರಚಿತವಾಗಿವೆ. ಈ ಉಪನಿಷತ್ತುಗಳಲ್ಲಿ ಬ್ರಹ್ಮದ ಸ್ವರೂಪ, ಅಸತ್, ಸತ್, ಪ್ರಕೃತಿ, ಪುರುಷ, ಆತ್ಮ, ಪರಮಾತ್ಮ, ಜಗತ್ ಸೃಷ್ಟಿಗೆ ಪೂರ್ವದಲ್ಲಿದ್ದ ಸ್ಥಿತಿ, ನಂತರ ಜಗತ್ಸೃಷ್ಟಿಯ ಕಾರಣ, ಜಗತ್ಸೃಷ್ಟಿಯಾದ ವಿಚಾರ, ಸ್ಥಿತಿ, ಲಯ, ಇತ್ಯಾದಿ ವಿಷಯಗಳು ನಾನಾ ರೀತಿಗಳಲ್ಲಿ ವರ್ಣಿಸಲ್ಪಟ್ಟಿವೆ.

ಸೃಷ್ಟಿಯು ಒಂದೇ ಸಾರಿ ಆಗುವುದಲ್ಲ. ಸೃಷ್ಟಿಯ ನಂತರ ಸ್ಥಿತಿ ಅಂದರೆ ಸೃಷ್ಟಿಸಲ್ಪಟ್ಟ ಜಗದಾದಿಗಳು ಕೆಲವು ಕಾಲ ಅದೇ ಸ್ಥಿತಿಯಲ್ಲಿರುತ್ತವೆ. ನಂತರ ಅವು ನಾಶವಾಗಿ ಸೃಷ್ಟಿಯ ಪೂರ್ವದಲ್ಲಿ ಯಾವ ಸ್ಥಿತಿಯಲ್ಲಿದ್ದವೋ ಅದೇ ಸ್ಥಿತಿಗೆ ಬರುತ್ತವೆ. ಕೆಲವು ಕಾಲ ಅದೇ ಸ್ಥಿತಿಯಲ್ಲಿದ್ದು ಪುನಃ ಸೃಷ್ಟಿ, ಪುನಃ ಸ್ಥಿತಿ, ಪುನಃ ನಾಶ (ಲಯ) ವು ನಡೆಯುತ್ತದೆ. ಅಂದರೆ ಸೃಷ್ಟಿ-ಸ್ಥಿತಿ-ಲಯಗಳು ಒಂದಾವರ್ತಿ ಮಾತ್ರ ನಡೆಯುವುದಿಲ್ಲ. ಚಕ್ರಪರಿಭ್ರಮಣದಂತೆ ಒಂದಾಗುತ್ತಲೊಂದು ಎಡೆಬಿಡದೇ ನಡೆದುಕೊಂಡು ಬರುತ್ತಿರುತ್ತವೆ. ಆದ್ದರಿಂದ ಇಲ್ಲಿ ವರ್ಣಿಸಿದ ಜಗತ್ಸೃಷ್ಟಿಯು ಹಿಂದೆ ಅನೇಕಾವರ್ತಿ ಸಂಭವಿಸಿದೆ. ಮುಂದೆಯೂ ಸಂಭವಿಸುತ್ತದೆ. ಸೃಷ್ಟಿ, ಸ್ಥಿತಿ, ಲಯ ಮತ್ತು ಲಯದ ನಂತರ ಸ್ಥಿತಿ, ಪುನಃ ಸೃಷ್ಟಿ ಇವೆಲ್ಲವೂ ಒಂದಾಗುತ್ತಲೊಂದರಂತೆ ಅಸಂಖ್ಯಾತವಾಗಿ ನಡೆದು ಬರುತ್ತಿದೆ. ಇದಕ್ಕೆ ಆದಿಯೂ ಇಲ್ಲ. ಅಂತ್ಯವೂ ಇಲ್ಲ. ಅಂತಹ ಅಸಂಖ್ಯಾತವಾದ ಸ್ಥಿತಿಗಳಲ್ಲಿ ಇಲ್ಲಿ ವರ್ಣಿಸಿರುವ ಸ್ಥಿತಿಯು ಒಂದು ಸಲ ನಡೆದ ಸ್ಥಿತಿಮಾತ್ರ. ಇವೆಲ್ಲವೂ ಒಂದೇ ವಿಧವಾಗಿರುವುದರಿಂದ ಒಂದಾವರ್ತಿ ನಡೆದುದನ್ನು ವರ್ಣಿಸಿದುದರಿಂದ ಎಲ್ಲವನ್ನೂ ವರ್ಣಿಸಿದಂತಾಗುತ್ತದೆ.

ಋಗ್ವೇದ ಸಂಹಿತೆಯ ಈ ಕೆಳಗಿನ ಭಾಗಗಳಲ್ಲಿ ಸೃಷ್ಟಿ-ಲಯಗಳ ವಿಚಾರಗಳು ಬರುತ್ತವೆ:

  1. ಮಂಡಲ 10, ಅನುವಾಕ 6, ಸೂಕ್ತ 81
  2. ಮಂಡಲ 10, ಅನುವಾಕ 6, ಸೂಕ್ತ 82
  3. ಮಂಡಲ 10, ಅನುವಾಕ 7, ಸೂಕ್ತ 90
  4. ಮಂಡಲ 10, ಅನುವಾಕ 11, ಸೂಕ್ತ 129

 

Leave a Reply

Your email address will not be published. Required fields are marked *