ಐತರೇಯೋಪನಿಷತ್ತು

ಪ್ರಥಮೋಧ್ಯಾಯೇ ದ್ವಿತೀಯ ಖಂಡಃ

ಓಂ ವಾಙ್ಮೇ ಮನಸಿ ಪ್ರತಿಷ್ಠಿತಾ । ಮನೋ ಮೇ ವಾಚಿ ಪ್ರತಿಷ್ಠಿತಮ್ । ಆವಿರಾವೀರ್ಮ ಏಧಿ । ವೇದಸ್ಯ ಮ ಆಣೀಸ್ಥಃ । ಶ್ರುತಂ ಮೇ ಮಾಪ್ರಹಾಸೀಃ । ಅನೇನಾಧೀತೇನ । ಅಹೋರಾತ್ರಾನ್ ಸಂದಧಾಮಿ । ಋತಂ ವದಿಷ್ಯಾಮಿ । ಸತ್ಯಂ ವದಿಷ್ಯಾಮಿ । ತನ್ಮಾಮವತು । ತದ್ವಕ್ತಾರಮವತು । ಅವತು ಮಾಮ್ । ಅವತು ವಕ್ತಾರಮ್ । ಆವತು ವಕ್ತಾರಮ್ ।। ಓಂ ಶಾಂತಿಃ ಶಾಂತಿಃ ಶಾಂತಿಃ ।।

ತಾ ಏತಾ ದೇವತಾಃಸೃ ಷ್ಟಾ ಅಸ್ಮಿನ್ ಮಹತ್ಯರ್ಣವೇ ಪ್ರಾಪತನ್ ತಮಶನಾಪಿಪಾಸಾಭ್ಯಾಮನ್ವವಾರ್ಜತ್ ತಾ ಏನಮಬ್ರುವನ್ನಾಯತನಂ ನಃ ಪ್ರಜಾನೀಹಿ ಯಸ್ಮಿನ್ ಪ್ರತಿಷ್ಠಿತಾ ಅನ್ನಮದಾಮೇತಿ ।। 1 ।।

ಹೀಗೆ ಸೃಷ್ಟರಾದ ಆ ದೇವತೆಗಳು ಈ ಮಹಾಸಾಗರದಲ್ಲಿ ಬಿದ್ದರು. ಅವರನ್ನು ಹಸಿವು-ತೃಷೆಗಳಿಂದ ಕೂಡಿಸಿದನು. ಅವರು ಅವನನ್ನು “ಎಲ್ಲಿ ಇದ್ದುಕೊಂಡು ನಾವು ಅನ್ನವನ್ನು ತಿನ್ನಬಹುದೋ ಆ ಸ್ಥಳವನ್ನು ಆಲೋಚಿಸು” ಎಂದರು.

ಈ ಆತ್ಮನಿಂದ ಸೃಷ್ಟರಾದ ಸಕಲ ದೇವತೆಗಳೂ ಮಹಾಸಾಗರದಲ್ಲಿ ಬಿದ್ದರು. ಆಗ ಅವರನ್ನು ಕ್ಷುದ್ಬಾಧೆಯು ಆವರಿಸಿತು. ದೇವತೆಗಳು ಈ ಆತ್ಮನಿಗೆ “ನಮಗೆ ಒಂದು ವಸತಿಯನ್ನು ಕಲ್ಪಿಸು. ನಾವು ಅಲ್ಲಿ ಸುಖವಾಗಿದ್ದು ಅನ್ನವನ್ನು ಭುಜಿಸುವ ಸೌಕರ್ಯವನ್ನು ಕಲ್ಪಿಸು” ಎಂದು ಯಾಚಿಸಿದರು.

ಲೋಕಪಾಲರಾಗಲೆಂದು ಸಂಕಲ್ಪಿಸಿ ಈಶ್ವರನಿಂದ ಸೃಷ್ಟರಾದ ಆ ಅಗ್ನಿಯೇ ಮೊದಲಾದ ದೇವತೆಗಳು ಈ ಆರ್ಣವದಲ್ಲಿ ಎಂದರೆ ಸಂಸಾರ ಸಾಗರದಲ್ಲಿ, ಮಹಾ ಸಾಗರದಲ್ಲಿ ಎಂದರೆ ಅವಿದ್ಯೆ, ಕಾಮ, ಕರ್ಮ – ಇವುಗಳಿಂದಾಗುವ ದುಃಖವೆಂಬ ನೀರಿರುವ, ತಡೆಯಲಾಗದ ಬೇನೆಗಳು, ಮುಪ್ಪು, ಸಾವು ಎಂಬ ದೊಡ್ಡ ಮೊಸಳೆಗಳಿಂದ ಕೂಡಿರುವ, ಮೊದಲಿಲ್ಲದೇ ಕೊನೆಯಿಲ್ಲದೇ ಪಾರವಿಲ್ಲದೇ ಇರುವ, ಆಶ್ರಯವಿಲ್ಲದಿರುವ, ವಿಷಯೇಂದ್ರಿಯಗಳಿಂದ ಆಗುವ ಒಂದಿಷ್ಟು ಸುಖವೆಂಬ ವಿಶ್ರಾಂತಿಧಾಮಗಳಿರುವ, ಐದು ಇಂದ್ರಿಯಾರ್ಥಗಳ ಬಯಕೆಯೆಂಬ ಭಿರುಗಾಳಿಯ ಹೊಡೆತದಿಂದ ಎದ್ದ ಅನರ್ಥಗಳೆಂಬ ನೂರಾರು ಮಹಾ ಅಲೆಗಳಿಂದಲೂ, ಮಹಾರೌರವವೇ ಮೊದಲಾದ ನರಕಗಳಲ್ಲಿರುವ ಹಾ ಹಾ ಎಂಬ ಕೂಗುಗಳಿಂದಲೂ ಬೈಗುಳಗಳಿಂದಲೂ ಉಂಟಾದ ದೊಡ್ಡ ಗದ್ದಲದಿಂದಿರುವ, ಸತ್ಯ-ಆರ್ಜವ-ದಾನ-ದಯೆ-ಅಹಿಂಸೆ-ಶಮ-ದಮ-ಧೃತಿ ಮೊದಲಾದ ಆತ್ಮಗುಣಗಳೆಂಬ ದಾರಿಯ ಬುತ್ತಿಯಿಂದ ಕೂಡಿರುವ ಜ್ಞಾನವೆಂಬ ದೋಣಿಯುಳ್ಳ, ಸತ್ಸಂಗ-ಸರ್ವತ್ಯಾಗಗಳೆಂಬ ಮಾರ್ಗಗಳಿರುವ, ಮೋಕ್ಷವೆಂಬ ದಡವಿರುವ ಈ ದೊಡ್ಡ ಸಂಸಾರ ಸಾಗರದಲ್ಲಿ ಬಿದ್ದರು.

ಅವನನ್ನು ಎಂದರೆ ಅಧಿಷ್ಠಾನಗಳು, ಕರಣಗಳು ಮತ್ತು ದೇವತೆಗಳು ಹುಟ್ಟಲು ಕಾರಣನಾದ ಆ ಮೊದಲು ಸೃಷ್ಟಿಸಿದ ಪುರುಷನನ್ನು – ಮುದ್ದೆಯ ರೂಪದ ಆತ್ಮನನ್ನು – ಹಸಿವು-ತೃಷೆಗಳಿಂದ ಕೂಡಿಸಿದನು. ಅನ್ವವಾರ್ಜತ್ ಎಂದರೆ ಹಿಂಬಾಲಿಸುವಂತೆ ಮಾಡಿದನು, ಅವುಗಳೊಡನೆ ಸೇರಿಸಿದನು ಎಂದರ್ಥ. ಕಾರಣನಾದ ಮೂಲಪಿಂಡಾತ್ಮನು ಹಸಿವು ಮೊದಲಾದ ದೋಷವುಳ್ಳವನ್ನಾದ್ದರಿಂದ ಅವನ ಕಾರ್ಯವಾದ ದೇವತೆಗಳೂ ಕೂಡ ಹಸಿವು ಮೊದಲಾದವುಗಳುಳ್ಳವರಾದರು.

ಅವರು ಆಗ ಹಸಿವು ಬಾಯಾರಿಕೆಗಳಿಂದ ಸಂಕಟಪಡುತ್ತಾ ಸೃಷ್ಟಿಕರ್ತನಾದ ಈ ಪಿತಾಮಹನನ್ನು “ಯಾವ ಆಯತನದಲ್ಲಿದ್ದುಕೊಂಡು ನಾವು ಸಮರ್ಥರಾಗಿ ಅನ್ನವನ್ನು ತಿನ್ನಬಹುದೋ ಅಂಥಹ ಆಯತನವನ್ನು ಎಂದರೆ ಆಶ್ರಯವನ್ನು ನಮಗೆ ಆಲೋಚಿಸು ಎಂದರೆ ಗೊತ್ತುಪಡಿಸು” ಎಂದರು.

ತಾಭ್ಯೋ ಗಾಮಾನಯತ್ ತಾ ಅಬ್ರುವನ್ ನ ವೈ ನೋಽಯಮಲಮಿತಿ ತಾಭ್ಯೋಽಶ್ವಮಾನಯತ್ ತಾ ಅಬ್ರುವನ್ ನ ವೈ ನೋಽಯಮಲಮಿತಿ ।। 2 ।।

ಅವರಿಗೆ ಗೋವನ್ನು ತಂದನು. ಅವರು “ಇದು ನಮಗೆ ಸಾಲದೇ ಸಾಲದು” ಎಂದರು. ಅವರಿಗೆ ಅಶ್ವವನ್ನು ತಂದನು. ಅವರು “ಇದು ನಮಗೆ ಸಾಲದೇ ಸಾಲದು” ಎಂದರು.

ಆ ದೇವತೆಗಳಿಗೆ ಗೋವನ್ನು ಎಂದರೆ ಗೋವಿನ ಆಕಾರದ ಮುದ್ದೆಯನ್ನು ಮೊದಲಿನಂತೆ ಅದೇ ಆಪ್ಸಿನಿಂದ ಎತ್ತಿ ಒಟ್ಟುಗೂಡಿಸಿ ತಂದನು ಅಥವಾ ತಂದು ತೋರಿಸಿದನು. ಆದರೆ ಅವರು ಗೋವಿನ ಆಕೃತಿಯನ್ನು ಕಂಡು ಹೇಳಿದರು: “ಈ ಮುದ್ದೆಯು ನಮಗೆ ಇದ್ದುಕೊಂಡು ಅನ್ನವನ್ನು ತಿನ್ನಲು ಸಾಲದೇ ಸಾಲದು. ನ ಅಲಮ್ – ಸಾಲದು ಎಂದರೆ ತಿನ್ನುವುದಕ್ಕೆ ಸಾಕಷ್ಟು ಅಲ್ಲ ಎಂದರ್ಥ. ಗೋವನ್ನು ಅವರು ಬೇಡವೆನ್ನಲು ಅವರಿಗೆ ಅಶ್ವವನ್ನು ತಂದನು. ಅದಕ್ಕೂ ಅವರು ಇದು ನಮಗೆ ಸಾಲದೇ ಸಾಲದು ಎಂದರು.

ತಾಭ್ಯಃ ಪುರುಷಮಾನಯತ್ ತಾ ಅಬ್ರುವನ್ ಸುಕೃತಂ ಬತೇತಿ ಪುರುಷೋ ವಾವ ಸುಕೃತಮ್ ತಾ ಅಬ್ರವೀದ್ಯಥಾಯತನಂ ಪ್ರವಿಶತೇತಿ ।। 3 ।।

ಅವರಿಗೆ ಪುರುಷನನ್ನು ತಂದನು. ಅವರು “ಭಲೇ! ಸುಕೃತವಾಯಿತು” ಎಂದರು. ಪುರುಷನೇ ಸುಕೃತವು. “ಆಯತನಕ್ಕೆ ತಕ್ಕಂತೆ ಪ್ರವೇಶಿಸಿರಿ” ಎಂದು ಅವರಿಗೆ ಹೇಳಿದನು.

ಎಲ್ಲವನ್ನೂ ಬೇಡವೆನ್ನಲು ಅವರಿಗೆ ಅವರ ಕಾರಣನಾದ ಪುರುಷನನ್ನು ಎತ್ತಿ ತಂದನು. ಅವರು ತಮ್ಮ ಕಾರಣನಾದ ಪುರುಷನನ್ನು ನೋಡಿ ಹರ್ಷದಿಂದ “ಸುಕೃತವಾಯಿತು! ಈ ಆಶ್ರಯವು ಉತ್ತಮವಾಗಿದೆ. ಭಲೇ!” ಎಂದರು. ಆದ್ದರಿಂದ ಪುರುಷನೇ ಸುಕೃತವು. ಏಕೆಂತರ ಅವನು ಎಲ್ಲಾ ಪುಣ್ಯಕರ್ಮಗಳಿಗೂ ಕಾರಣನಾಗಿರುತ್ತಾನೆ. ಅಥವಾ ತಾನೇ ತನ್ನಿಂದಲೇ (ಸ್ವ) ಆತ್ಮನು ತನ್ನ ಮಾಯೆಗಳಿಂದ ಮಾಡಲ್ಪಡುವು (ಕೃತನಾಗಿರುವು) ದರಿಂದ ಅವನು ಸುಕೃತನೆನೆಸಿರುತ್ತಾನೆ.

ಈ ಅಧಿಷ್ಠಾನವು ಅವರಿಗೆ ಇಷ್ಟವಾಗಿದೆ ಮತ್ತು ಎಲ್ಲರೂ ತಮ್ಮ ತಮ್ಮ ಕಾರಣಗಳಲ್ಲಿ ಪ್ರೀತಿಯಿಟ್ಟಿರುತ್ತಾರೆ ಎಂದು ತಿಳಿದುಕೊಂಡು ಈಶ್ವರನು ಆ ದೇವತೆಗಳಿಗೆ “ಸ್ಥಾನಕ್ಕೆ ತಕ್ಕಂತೆ ಎಂದರೆ ಯಾರಿಗೆ ಯಾವುದು ಎಂದರೆ ಮಾತನಾಡುವುದೇ ಮೊದಲಾದ ಕೆಲಸಕ್ಕೆ ತಕ್ಕ ಸ್ಥಾನವಾಗಿರುವುದೋ ಅದನ್ನು ಪ್ರವೇಶಿಸಿ” ಎಂದನು.

ಅಗ್ನಿರ್ವಾಗ್ಭೂತ್ವಾ ಮುಖಂ ಪ್ರಾವಿಶದ್ವಾಯುಃ ಪ್ರಾಣೋ ಭೂತ್ವಾ ನಾಸಿಕೇ ಪ್ರಾವಿಶದಾದಿತ್ಯಶ್ಚಕ್ಷುರ್ಭೂತ್ವಾಽಕ್ಷಿಣೀ ಪ್ರಾವಿಶಾದ್ದಿಶಃ ಶ್ರೋತ್ರಂ ಭೂತ್ವಾ ಕರ್ಣೌ ಪ್ರಾವಿಶನ್ನೋಷಧಿವನಸ್ಪತಯೋ ಲೋಮಾನಿ ಭೂತ್ವಾ ತ್ವಚಂ ಪ್ರಾವಿಶಂಶ್ಚಂದ್ರಮಾ ಮನೋ ಭೂತ್ವಾ ಹೃದಯಂ ಪ್ರಾವಿಶನ್ಮೃತ್ಯುರಪಾನೋ ಭೂತ್ವಾ ನಾಭಿಂ ಪ್ರಾವಿಶದಾಪೋ ರೇತೋ ಭೂತ್ವಾ ಶಿಶ್ನಂ ಪ್ರಾವಿಶನ್ ।। 4 ।।

ಅಗ್ನಿಯು ವಾಕ್ಕಾಗಿ ಮುಖವನ್ನು ಹೊಕ್ಕನು. ವಾಯವು ಪ್ರಾಣವಾಗಿ ಮೂಗಿನ ಸೊಳ್ಳೆಗಳನ್ನು ಹೊಕ್ಕನು. ಆದಿತ್ಯನು ಚಕ್ಷುರಿಂದ್ರಿಯವಾಗಿ ಕಣ್ಣುಗಳನ್ನು ಹೊಕ್ಕನು. ದಿಗ್ದೇವತೆಗಳು ಶ್ರೋತ್ರವಾಗಿ ಕಿವಿಗಳನ್ನು ಹೊಕ್ಕರು. ಓಷಧಿ-ವನಸ್ಪತಿ ದೇವತೆಗಳು ಕೂದಲುಗಳಾಗಿ ಚರ್ಮವನ್ನು ಹೊಕ್ಕರು. ಚಂದ್ರನು ಮನಸ್ಸಾಗಿ ಹೃದಯವನ್ನು ಹೊಕ್ಕನು. ಮೃತ್ಯುವು ಅಪಾನವಾಗಿ ನಾಭಿಯನ್ನು ಹೊಕ್ಕನು. ಅಬ್ದೇವತೆಗಳು ರೇತಸ್ಸಾಗಿ ಶಿಶ್ನವನ್ನು ಹೊಕ್ಕರು.

ಹಾಗೆಯೇ ಆಗಲಿ ಎಂದು ಈಶ್ವರನ ಅನುಮತಿಯನ್ನು ಪಡೆದು ಸೇನಾಧಿಪತಿಯೇ ಮೊದಲಾದವರು ನಗರವನ್ನು ಪ್ರವೇಶಿಸುವಂತೆ ವಾಕ್ಕಿಗೆ ಅಭಿಮಾನ ದೇವತೆಯಾದ ಅಗ್ನಿಯು ವಾಕ್ಕೇ ಆಗಿ ತನ್ನ ಯೋನಿಯಾದ ಮುಖವನ್ನು ಹೊಕ್ಕನು. ಉಳಿದದ್ದನ್ನು ಹೀಗೆಯೇ ಅರ್ಥಮಾಡಿಕೊಳ್ಳಬೇಕು. ವಾಯುವು ಮೂಗಿನ ಸೊಳ್ಳೆಗಳನ್ನೂ, ಆದಿತ್ಯನು ಕಣ್ಣುಗಳನ್ನೂ, ದಿಕ್ಕುಗಳು ಕಿವಿಗಳನ್ನೂ, ಓಷಧಿ-ವನಸ್ಪತಿಗಳು ಚರ್ಮವನ್ನೂ, ಚಂದ್ರನು ಹೃದಯವನ್ನೂ, ಮೃತ್ಯುವು ಹೊಕ್ಕಳನ್ನೂ, ಆಪ್ಸುವು ಶಿಶ್ನವನ್ನೂ ಹೊಕ್ಕರು.

ದೇವತೆಗಳು ಯಾವ ಯಾವ ಸ್ಥಾನಗಳಿಂದ ಹೊರಬಂದಿದ್ದರೋ ಅವೇ ಸ್ಥಾನಗಳ ಒಳಹೊಕ್ಕರು ಅಥವಾ ಅವೇ ಸ್ಥಾನಗಳಿಗೆ ಹಿಂದಿರುಗಿದರು.

ತಮಶನಾಯಾ ಪಿಪಾಸೇ ಅಬ್ರೂತಾಮಾವಾಭ್ಯಾಮಭಿಪ್ರಜಾನೀಹೀತಿ ತೇ ಅಬ್ರವೀದೇತಾಸ್ವೇವ ವಾಂ ದೇವತಾಸ್ವಾಭಜಾಮ್ಯೇತಾಸು ಭಾಗಿನ್ನ್ಯೌ ಕರೋಮೀತಿ ತಸ್ಮಾದ್ಯಸ್ಯೈ ಕಸ್ಯೈ ಚ ದೇವತಾಯೈ ಹವಿರ್ಗೃಹ್ಯತೇ ಭಾಗಿನ್ಯಾವೇವಾಸ್ಯಾಮಶನಾಯಾಪಿಪಾಸೇ ಭವತಃ ।। 5 ।।

ಹಸಿವು-ಬಾಯಾರಿಕೆಗಳು “ನಮಗೆ ಒಂದು ಸ್ಥಾನವನ್ನು ಆಲೋಚಿಸು” ಎಂದು ಅವನಿಗೆ ಹೇಳಲು “ಇದೇ ದೇವತೆಗಳಲ್ಲಿ ನಿಮ್ಮನ್ನು ಸೇರಿಸುತ್ತೇನೆ. ಇವರಲ್ಲಿ ಭಾಗವುಳ್ಳವರನ್ನಾಗಿ ಮಾಡುತ್ತೇನೆ” ಎಂದನು. ಆದ್ದರಿಂದ ಯಾವ ದೇವತೆಗಳಿಗೆ ಹವಿಸ್ಸನ್ನು ಕೊಡುವುದಕ್ಕೆ ತೆಗೆದುಕೊಂಡರೂ ಆ ದೇವತೆಯಲ್ಲಿ ಹಸಿವು-ಬಾಯಾರಿಕೆಗಳು ಭಾಗವುಳ್ಳವೇ ಆಗಿರುತ್ತವೆ.

ಹಸಿವು ಬಾಯಾರಿಕೆಗಳು ಈಶ್ವರನಿಗೆ ಹೇಳಿದನು: “ನಮ್ಮಿಬ್ಬರಿಗೂ ಒಂದು ಸ್ಥಾನವನ್ನು ಆಲೋಚಿಸು” ಎಂದವು. ಆಗ ಈಶ್ವರನು ಅವರಿಗೆ “ನೀವು ಧರ್ಮಸ್ವರೂಪರಾಗಿರುವುದರಿಂದ ಚೈತನ್ಯವುಳ್ಳ ವಸ್ತುಗಳನ್ನು ಆಶ್ರಯಿಸದೇ ಅನ್ನವನ್ನು ಸ್ವತಂತ್ರವಾಗಿ ತಿನ್ನಲು ನಿಮಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಅಗ್ನಿಯೇ ಮೊದಲಾದ ದೇವತೆಗಳಲ್ಲಿ[1] ನಿಮ್ಮಿಬ್ಬರನ್ನೂ ಸೇರಿಸುತ್ತೇನೆ. ನಿಮ್ಮ ವ್ಯಾಪಾರವನ್ನು ಅವರಲ್ಲಿ ಹಂಚಿ ನಿಮಗೆ ಅನುಗ್ರಹಿಸುತ್ತೇನೆ. ಇವರಲ್ಲಿ ಭಾಗವುಳ್ಳವರಾಗಿ ಯಾವ ಹವಿಸ್ಸು ಯಾವ ದೇವತೆಗಾಗಿರುವುದೋ ಆ ದೇವತೆಯ ಭಾಗವೇ ನಿಮ್ಮ ಭಾಗವೂ ಆಗುವಂತೆ ಮಾಡುತ್ತೇನೆ.”

ಸೃಷ್ಟಿಯ ಆದಿಯಲ್ಲಿ ಈಶ್ವರನು ಹೀಗೆಂದು ವಿಧಾನ ಮಾಡಿದನು. ಆ ಕಾರಣದಿಂದ ಈಗಲೂ ಯಾವ ದೇವತೆಗೆಂದು ಚರು, ಪುರೋಡಾಶ ಮೊದಲಾದ ಹವಿಸ್ಸನ್ನು ಕೊಡುತ್ತೇವೋ ಅದು ಆಯಾ ದೇವತೆಗಳಲ್ಲಿರುವ ಹಸಿವು-ಬಾಯಾರಿಕೆಗಳೇ ಆಗಿರುತ್ತವೆ.

ಇತ್ಯೈತರೇಯೋಪನಿಷದಿ ಪ್ರಥಮಾಧ್ಯಾಯೇ ದ್ವಿತೀಯಃ ಖಂಡಃ ।।

[1] ಈ ದೇವತೆಗಳು ಆಧ್ಯಾತ್ಮವಾಗಿ ಮನುಷ್ಯನೇ ಮೊದಲಾದ ಜೀವರಲ್ಲಿರುತ್ತಾರೆ. ಅಧಿದೈವತವಾಗಿ ವಿರಾಟ್ಪುರುಷನಲ್ಲಿರುತ್ತಾರೆ. ಇಬ್ಬರಿಗೂ ಹಸಿವು ಬಾಯಾರಿಕೆಗಳಿವೆ.

Leave a Reply

Your email address will not be published. Required fields are marked *