ಕ್ರೌಷ್ಟುಕಿರುವಾಚ ।
ಸಮಾಸಾತ್ಕಥಿತಾ ಸೃಷ್ಟಿಃ ಸಮ್ಯಗ್ಭಗವತಾ ಮಮ ।
ದೇವಾದೀನಾಂ ಭವಂ ಬ್ರಹ್ಮನ್ವಿಸ್ತರಾತ್ತು ಬ್ರವೀಹಿ ಮೇ ।। 1 ।।
ಕ್ರೌಷ್ಟುಕಿಯು ಹೇಳಿದನು: “ಬ್ರಹ್ಮನ್! ಪೂಜ್ಯನಾದ ನೀನು ನನಗೆ ಸೃಷ್ಟಿಕ್ರಮವನ್ನು ಚೆನ್ನಾಗಿ ಸಂಕ್ಷಿಪ್ತವಾಗಿ ಹೇಳಿದ್ದೀಯೆ. ದೇವಾದಿಗಳ ಸೃಷ್ಟಿಯನ್ನು ವಿಸ್ತಾರವಾಗಿ ಹೇಳು.”
ಮಾರ್ಕಂಡೇಯ ಉವಾಚ ।
ಕುಶಲಾಕುಶಲೈರ್ಬ್ರಹ್ಮನ್ ಭಾವಿತಾ ಪೂರ್ವಕಮರ್ಮಭಿಃ ।
ಖ್ಯಾತಾ ತಥಾ ಹ್ಯನಿರ್ಮುಕ್ತಾಃ ಪ್ರಲಯೇ ಹ್ಯುಪಸಂಹೃತಾಃ ।। 2 ।।
ದೇವಾದ್ಯಾಃ ಸ್ಥಾವರಾಂತಾಶ್ಚ ಪ್ರಜಾ ಬ್ರಹ್ಮಂಶ್ಚತುರ್ವಿಧಾಃ ।
ಬ್ರಹ್ಮಣಃ ಕುರ್ವತಃ ಸೃಷ್ಟಿಂ ಜಜ್ಞಿರೇ ಮಾನಸಾಸ್ತದಾ ।। 3 ।।
ತತೋ ದೇವಾಸುರಾನ್ ಪಿತೄನ್ಮಾನುಷಾಂಶ್ಚ ಚತುಷ್ಟಯಮ್ ।
ಸಿಸೃಕ್ಷುರಂಭಸ್ಯೇತಾನಿ ಸ್ವಮಾತ್ಮಾನಮಯೂಯುಜತ್ ।। 4 ।।
ಯುಕ್ತಾತ್ಮನಸ್ತಮೋಮಾತ್ರಾ ಉದ್ರಿಕ್ತಾಭೂತ್ ಪ್ರಜಾಪತೇಃ ।
ಸಿಸೃಕ್ಷೋರ್ಜಘನಾತ್ ಪೂರ್ವಮಸುರಾ ಜಜ್ಞಿರೇ ತತಃ ।। 5 ।।
ಉತ್ಸಸರ್ಜ ತತಸ್ತಾಂತು ತಮೋಮಾತ್ರಾತ್ಮಿಕಾಂ ತನುಮ್ ।
ಸಾಪಿ ವಿದ್ಧಾ ತನುಸ್ತೇನ ಸದ್ಯೋ ರಾತ್ರಿರಜಾಯತ ।। 6 ।।
ಮಾರ್ಕಂಡೇಯನು ಹೇಳಿದನು: “ಬ್ರಹ್ಮನ್! ಶುಭಾಶುಭರೂಪವಾದ ತಮ್ಮ ಪೂರ್ವಕರ್ಮಗಳ ವಾಸನೆಯನ್ನು ಕಳೆದುಕೊಳ್ಳದೆಯೇ ಮತ್ತು ತಮಗೆ ಆಗಬೇಕಾಗಿದ್ದ ಭವಿಷ್ಯಫಲಭೋಗಗಳನ್ನು ಸಂಪೂರ್ಣವಾಗಿ ಅನುಭವಿಸದೆಯೇ ಹಿಂದಿನ ಕಲ್ಪದ ಪ್ರಜೆಗಳು ಪ್ರಲಯದಲ್ಲಿ ಸಂಹಾರಹೊಂದಿದರು. ಸೃಷ್ಟಿಮಾಡುವಾಗ ಬ್ರಹ್ಮನು ಸ್ಥಾವರಗಳು ಮತ್ತು ದೇವಾದಿ ನಾಲ್ಕು ವಿಧದ ಮಾನಸ ಪ್ರಜೆಗಳನ್ನು ಹುಟ್ಟಿಸಿದನು. ದೇವತೆಗಳು, ಅಸುರರು, ಪಿತೃಗಳು ಮತ್ತು ಮನುಷ್ಯರು ಎಂಬ ಚತುರ್ವಿಧ ಪ್ರಜೆಗಳನ್ನು ಸೃಷ್ಟಿಸುವ ಸಂಕಲ್ಪದಿಂದ ಬ್ರಹ್ಮನ್ ಜಲರಾಶಿಯಲ್ಲಿ ಕುಳಿತು ತನ್ನ ಮನಸ್ಸನ್ನು ಸೃಷ್ಟಿಧ್ಯಾನದಲ್ಲಿರಿಸಿದನು. ಯುಕ್ತಾತ್ಮನಾಗಿ ಧ್ಯಾನದಲ್ಲಿದ್ದ ಪ್ರಜಾಪತಿಯಲ್ಲಿ ತಮೋಮಾತ್ರವು ಉದ್ರಿಕಗೊಂಡಿತು. ಆಗ ಅವನ ಜಘನದಿಂದ ಮೊದಲು ಅಸುರರು ಹುಟ್ಟಿದರು. ನಂತರ ಅವನು ತನ್ನ ತಮೋಮಾತ್ರ ಶರೀರವನ್ನು ವಿಸರ್ಜಿಸಿದನು. ಅವನು ತೊರೆದ ಅವನ ಶರೀರವು ಕೂಡಲೇ ರಾತ್ರಿಯಾಯಿತು.
ಅನ್ಯಾಂ ತನುಮುಪಾದಾಯ ಸಿಸೃಕ್ಷುಃ ಪ್ರೀತಿಮಾಪ ಸಃ ।
ಸತ್ತ್ವೋದ್ರೇಕಾಸ್ತತೋ ದೇವಾ ಮುಖತಸ್ತಸ್ಯ ಜಜ್ಞಿರೇ ।। 7 ।।
ಉತ್ಸಸರ್ಜ ಚ ಭೂತೇಶಸ್ತನುಂ ತಾಮಪ್ಯಥೇಶ್ವರಃ ।
ಸಾ ಚಾಪವಿದ್ಧಾ ದಿವಸಂ ಸತ್ತ್ವಪ್ರಾಯಮಜಾಯತ ।। 8 ।।
ಸತ್ತ್ವಮಾತ್ರಾತ್ಮಿಕಾಮೇವ ತತೋಽನ್ಯಾಂ ಜಗೃಹೇ ತನುಮ್ ।
ಪಿತೃವನ್ಮನ್ಯಮಾನಸ್ಯ ಪಿತರಸ್ತಸ್ಯ ಜಜ್ಞಿರೇ ।। 9 ।।
ಸೃಷ್ಟ್ವಾ ಪಿತೄನುತ್ಸಸರ್ಜ ತನುಂ ತಾಮಪಿ ಸ ಪ್ರಭುಃ ।
ಸಾ ಚೋತ್ಸೃಷ್ಟಾಭವತ್ಸಂಧ್ಯಾ ದಿವನನಕ್ತಾಂತರಸ್ಥಿತಾ ।। 10 ।।
ರಜೋಮಾತ್ರಾತ್ಮಿಕಾಮನ್ಯಾಂ ತನುಂ ಭೇಜೇಽಥ ಸ ಪ್ರಭುಃ ।
ತತೋ ಮನುಷ್ಯಾಃ ಸಂಭೂತಾ ರಜೋಮಾತ್ರಾಸಮುದ್ಭವಾಃ ।। 11 ।।
ಸೃಷ್ಟ್ವಾ ಮನುಷ್ಯಾನ್ಸ ವಿಭುರುತ್ಸಸರ್ಜ ತನುಂ ತತಃ ।
ಜ್ಯೋತ್ಸ್ನಾ ಸಮಭವತ್ಸಾ ಚ ನಕ್ತಾಂತೇಽಹರ್ಮುಖೇ ಚ ಯಾ ।। 12 ।।
ಅನ್ಯ ಶರೀರವನ್ನು ಪಡೆದುಕೊಂಡು ಸೃಷ್ಟಿಮಾಡ ಬಯಸಿದಾಗ ಅವನು ಪ್ರೀತಿಯುಳ್ಳವನಾದನು. ಸತ್ತ್ವಗುಣದ ಉದ್ರೇಕದಿಂದ ಅವನ ಮುಖದಿಂದ ದೇವತೆಗಳು ಹುಟ್ಟಿದರು. ಭೂತೇಶ ಈಶ್ವರನು ಆ ತನುವನ್ನೂ ತ್ಯಜಿಸಿದನು. ಎಸೆಯಲ್ಪಟ್ಟ ಆ ಶರೀರದಿಂದ ಸತ್ತ್ವಗುಣಪ್ರಾಯವಾದ ಹಗಲು ಹುಟ್ಟಿತು. ನಂತರ ಅವನು ಸತ್ತ್ವಗುಣದಿಂದಲೇ ಪೂರ್ಣವಾದ ಮತ್ತೊಂದು ದೇಹವನ್ನು ಸ್ವೀಕರಿಸಿದನು. ಪಿತೃಸೃಷ್ಟಿಯ ಅಭಿಮಾನದಿಂದ ಕೂಡಿದ್ದ ಆ ಶರೀರದಿಂದ ಪಿತೃಗಳು ಹುಟ್ಟಿದರು. ಆ ಪ್ರಭುವು ಪಿತೃಗಳನ್ನು ಸೃಷ್ಟಿಸಿ ಆ ತನುವನ್ನೂ ತೊರೆದನು. ಅವನು ತ್ಯಜಿಸಿದ ಆ ಶರೀರವು ಹಗಲು-ರಾತ್ರಿಗಳ ನಡುವಿರುವ ಸಂಧ್ಯಾಕಾಲದ ರೂಪವಾಗಿ ಪರಿಣಮಿಸಿತು. ಪ್ರಭು ಬ್ರಹ್ಮನು ಆಗ ರಜೋಮಾತ್ರಾತ್ಮಿಕವಾದ ಇನ್ನೊಂದು ತನುವನ್ನು ತೆಗೆದುಕೊಂಡನು. ಆಗ ರಜೋಮಾತ್ರದಿಂದ ಉತ್ಪನ್ನರಾದ ಮನುಷ್ಯರು ಹುಟ್ಟಿಕೊಂಡರು. ನಂತರ ವಿಭುವು ಮನುಷ್ಯರನ್ನು ಸೃಷ್ಟಿಸಿ ಆ ತನುವನ್ನೂ ವಿಸರ್ಜಿಸಿದನು. ಅದು ರಾತ್ರಿಯ ಅಂತ್ಯ ಮತ್ತು ಹಗಲಿನ ಆದಿಯಲ್ಲಿ ಪ್ರಕಾಶಿಸುವ ಬೆಳಗಿನ ಪ್ರಭಾತ ರೂಪವಾಗಿ ಪರಿಣಮಿಸಿತು.
ಇತ್ಯೇತಾಸ್ತನವಸ್ತಸ್ಯ ದೇವದೇವಸ್ಯ ಧೀಮತಃ ।
ಖ್ಯಾತಾ ರಾತ್ರ್ಯಹನೀ ಚೈವ ಸಂಧ್ಯಾ ಜ್ಯೋತ್ಸ್ನಾ ಚ ವೈ ದ್ವಿಜ ।। 13 ।।
ಜ್ಯೋತ್ಸ್ನಾ ಸಂಧ್ಯಾ ತಥೈವಾಹಃ ಸತ್ತ್ವಮಾತ್ರಾತ್ಮಕಂ ತ್ರಯಮ್ ।
ತಮೋಮಾತ್ರಾತ್ಮಿಕಾ ರಾತ್ರಿಃ ಸಾ ವೈ ತಸ್ಮಾತ್ತಮೋಽಧಿಕಾಃ ।। 14 ।।
ತಸ್ಮಾದ್ದೇವಾ ದಿವಾ ರಾತ್ರಾವಸುರಾಸ್ತು ಬಲಾನ್ವಿತಾಃ ।
ಜ್ಯೋತ್ಸ್ನಾಗಮೇ ಚ ಮನುಜಾಃ ಸಂಧ್ಯಾಯಾಂ ಪಿತರಸ್ತಥಾ ।। 15 ।।
ಭವಂತಿ ಬಲಿನೋಽಧೃಷ್ಯಾ ವಿಪಕ್ಷಾಣಾಂ ನ ಸಂಶಯಃ ।
ತದ್ವಿಪರ್ಯಯಮಾಸಾದ್ಯ ಪ್ರಯಾಂತಿ ಚ ವಿಪರ್ಯಯಮ್ ।। 16 ।।
ದ್ವಿಜ! ಧೀಮತ ದೇವದೇವನ ಈ ನಾಲ್ಕು ತನುಗಳು ರಾತ್ರಿ, ಹಗಲು, ಸಂಧ್ಯಾ ಮತ್ತು ಜ್ಯೋತ್ಸಾ ಎಂಬ ರೂಪಗಳಿಂದ ಕಾಣುತ್ತವೆ. ಜ್ಯೋತ್ಸ್ನಾ, ಸಂಧ್ಯಾ ಮತ್ತು ಹಗಲು ಈ ಮೂರು ಸತ್ತ್ವಮಾತ್ರಾತ್ಮಕಗಳು. ರಾತ್ರಿಯು ತಮೋಮಾತ್ರತ್ಮಿಕವು. ಅದರಲ್ಲಿ ತಮೋಗುಣವು ಅಧಿಕವಾಗಿದೆ. ಆದ್ದರಿಂದ ದೇವತೆಗಳು ಹಗಲಿನಲ್ಲಿ, ಅಸುರರು ರಾತ್ರಿವೇಳೆಯಲ್ಲಿ, ಬೆಳಗಾಗುತ್ತಲೇ ಮನುಷ್ಯರು ಮತ್ತು ಸಂಜೆಯ ವೇಳೆ ಪಿತೃಗಳು ಬಲಾನ್ವಿತರಾಗಿರುತ್ತಾರೆ. ಆಯಾ ಸಮಯಗಳಲ್ಲಿ ಅವರು ಬಲಿಷ್ಠರೂ ಶತ್ರುಗಳ ಆಕ್ರಮಣಕ್ಕೆ ಒಳಗಾಗದವರೂ ಆಗಿರುತ್ತಾರೆ. ಆ ಸಮಯಗಳನ್ನು ಬಿಟ್ಟರೆ ಅವರು ಬಲವಿಲ್ಲದೇ ಶತ್ರುಗಳಿಗೆ ಸೋಲುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.
ಜ್ಯೋತ್ಸ್ನೋ ರಾತ್ರ್ಯಹನೀ ಸಂಧ್ಯಾ ಚತ್ವಾರ್ಯೇತಾನಿ ವೈ ಪ್ರಭೋಃ ।
ಬ್ರಹ್ಮಣಸ್ತು ಶರೀರಾಣಿ ತ್ರಿಗುಣೋಪಸೃತಾನಿ ತು ।। 17 ।।
ಚತ್ವಾರ್ಯೇತಾನ್ಯಥೋತ್ಪಾದ್ಯ ತನುಮನ್ಯಾಂ ಪ್ರಜಾಪತಿಃ ।
ರಜಸ್ತಮೋಮಯೀಂ ರಾತ್ರೌ ಜಗೃಹೇ ಕ್ಷುತ್ತೃಡನ್ವಿತಃ ।। 18 ।।
ತದಂಧಕಾರೇ ಕ್ಷುತ್ಕ್ಷಾಮಾನಸೃಜದ್ ಭಗವಾನಜಃ ।
ವಿರೂಪಾನ್ ಶ್ಮಶ್ರುಲಾನತ್ತುಮಾರಬ್ಧಾಸ್ತೇ ಚ ತಾಂ ತನುಮ್ ।। 19 ।।
ರಕ್ಷಾಮ ಇತಿ ತೇಭ್ಯೋಽನ್ಯೇ ಯ ಊಚುಸ್ತೇ ತು ರಾಕ್ಷಸಾಃ ।
ಖಾದಾಮ ಇತಿ ಯೇ ಚೋಚುಸ್ತೇ ಯಕ್ಷಾ ಯಕ್ಷಣಾದ್ದ್ವಿಜ ।। 20 ।।
ತಾನ್ ದೃಷ್ಟ್ವಾ ಹ್ಯಪ್ರಿಯೇಣಾಸ್ಯ ಕೇಶಾಃ ಶೀರ್ಯಂತ ವೇಧಸಃ ।
ಸಮಾರೋಹಣಹೀನಾಶ್ಚ ಶಿರಸೋ ಬ್ರಹ್ಮಣಸ್ತು ತೇ ।। 21 ।।
ಜ್ಯೋತ್ಸ್ನಾ, ರಾತ್ರಿ, ಹಗಲು ಮತ್ತು ಸಂಧ್ಯಾ ಈ ನಾಲ್ಕು ಪ್ರಭು ಬ್ರಹ್ಮನ ತ್ರಿಗುಣಗಳಿಂದ ಆಗಿರುವ ಶರೀರಗಳು. ಈ ನಾಲ್ಕು ಪ್ರಜಾವರ್ಗಗಳನ್ನು ಉತ್ಪಾದಿಸಿ ಪ್ರಜಾಪತಿಯು ರಾತ್ರಿಯ ವೇಳೆಯಲ್ಲಿ ಹಸಿವು-ಬಾಯಾರಿಕೆಗಳಿಂದ ಬಳಲಿದ ರಸಸ್ಸು ಮತ್ತು ತಮೋಮಯ ಶರೀರವನ್ನು ಸ್ವೀಕರಿಸಿದನು. ಆ ರಾತ್ರಿಯ ಕತ್ತಲೆಯಲ್ಲಿ ಭಗವಾನ್ ಅಜನು ಹಸಿವೆಯಿಂದ ಕೃಶರಾದವರೂ, ವಿಕಾರ ರೂಪಿಗಳೂ, ಅಧಿಕ ಗಡ್ಡ-ಮೀಸೆಗಳಿಂದ ಕೂಡಿದ ಪ್ರಜೆಗಳನ್ನು ಸೃಷ್ಟಿಸಿದನು. ಅವರು ಬ್ರಹ್ಮನ ಆ ಶರೀರವನ್ನು ತಿಂದುಹಾಕಲು ಪ್ರಾರಂಭಸಿದರು. ಅವರಲ್ಲಿ ರಕ್ಷಿಸುತ್ತೇವೆ ಎಂದು ಹೇಳಿದವರು ರಾಕ್ಷಸರಾದರು. ತಿಂದುಹಾಕುತ್ತೇವೆ ಎಂದು ಹೇಳಿದವರು ತಿನ್ನುವ ಯಜ್ಞವನ್ನು ಮಾಡಿದ್ದರಿಂದ ಯಕ್ಷರಾದರು. ಆ ಯಕ್ಷ-ರಾಕ್ಷಸರನ್ನು ನೋಡಿ ಅಪ್ರಿಯಭಾವವನ್ನು ಹೊಂದಿದ ಬ್ರಹ್ಮನ ತಲೆಯಿಂದ ಬೆಳೆಯದೇ ಇದ್ದ ಕೂದಲುಗಳು ಅಲ್ಲಲ್ಲಿ ಉದುರಿದವು.
ಸರ್ಪಣಾತ್ತೇಽಭವನ್ ಸರ್ಪಾ ಹೀನತ್ವಾದಹಯಃ ಸ್ಮೃತಾಃ ।
ಸರ್ಪಾನ್ದೃಷ್ಟ್ವಾ ತತಃ ಕ್ರೋಧಾತ್ಕ್ರೋಧಾತ್ಮಾನೋ ವಿನಿರ್ಮಮೇ ।। 22 ।।
ವರ್ಣೇನ ಕಪಿಲೇನೋಗ್ರಾಸ್ತೇ ಭೂತಾಃ ಪಿಶಿತಾಶನಾಃ ।
ಧ್ಯಾಯತೋ ಗಾಂ ತತಸ್ತಸ್ಯ ಗಂಧರ್ವಾ ಜಜ್ಞಿರೇ ತದಾ ।। 23 ।।
ಜಜ್ಞಿರೇಽಪಿ ತತೋ ವಾಚಂ ಗಂಧರ್ವಾಸ್ತೇನ ತೇ ಸ್ಮೃತಾಃ ।
ಅಷ್ಟಾಸ್ವೇತಾಸು ಸೃಷ್ಟಾಸು ದೇವಯೋನಿಷು ಸ ಪ್ರಭುಃ ।। 24 ।।
ಬಿದ್ದ ಕೂದಲುಗಳು ಹರಿದುಹೋದದ್ದರಿಂದ “ಸರ್ಪ” ಎಂದೂ ಬಿದ್ದು ಹೋದುದರಿಂದ “ಅಹಿ” ಎಂದೂ ಪ್ರಸಿದ್ಧವಾದ ಪ್ರಾಣಿಗಳಾದವು. ಆ ಸರ್ಪಗಳನ್ನು ನೋಡಿ ಕ್ರೋಧಿತನಾದ್ದರಿಂದ ಅವನಿಂದ ಕ್ರೋಧಾತ್ಮರು ಹೊರಬಂದರು. ಕಪಿಲವರ್ಣದ ಅ ಉಗ್ರಭೂತಗಳು ಮಾಂಸಾಹಾರಿ ಪಿಶಾಚಿಗಳಾದವು. ನಂತರ ಅವನು ವಾಣಿಯನ್ನು ಧ್ಯಾನಿಸಲು ಅವನಿಂದ ಗಂಧರ್ವರು ಜನಿಸಿದರು. ಗೀತವಾಣಿಯನ್ನು ತಿಳಿದು ಹುಟ್ಟಿದುದರಿಂದ ಅವರು ಗಂಧರ್ವರೆಂದಾದರು. ಹೀಗೆ ಪ್ರಭುವ ಎಂಟು ವಿಧದ ದೇವಯೋನಿ ಪ್ರಜೆಗಳನ್ನು ಸೃಷ್ಟಿಸಿದನು.
ತತಃ ಸ್ವದೇಹತೋಽನ್ಯಾನಿ ವಯಾಂಸಿ ಪಶವೋಽಸೃಜತ್ ।
ಮುಖತೋಽಜಾಃ ಸಸರ್ಜಾಥ ವಕ್ಷಸಶ್ಚಾವಯೋಽಸೃಜತ್ ।। 25 ।।
ಗಾಶ್ಚೈವೋದರತೋ ಬ್ರಹ್ಮಾ ಪಾರ್ಶ್ವಾಭ್ಯಾಂ ಚ ವಿನಿರ್ಮಮೇ ।
ಪದ್ಭ್ಯಾಂ ಚಾಶ್ವಾನ್ಸಮಾತಂಗಾನ್ರಾಸಬಾನ್ ಶಶಕಾನ್ಮೃಗಾನ್ ।। 26 ।।
ಉಷ್ಟ್ರಾನಶ್ವತರಾಂಶ್ಚೈವ ನಾನಾರೂಪಾಶ್ಚ ಜಾತಯಃ ।
ಓಷಧ್ಯಃ ಫಲಮೂಲಿನ್ಯೋ ರೋಮಭ್ಯಸ್ತಸ್ಯ ಜಜ್ಞಿರೇ ।। 27 ।।
ಏವಂ ಪಶ್ವೋಷಧೀಃ ಸೃಷ್ಟ್ವಾ ಹ್ಯಯಜಚ್ಚಾಧ್ವರೇ ವಿಭುಃ ।
ತಸ್ಮಾದಾದೌ ತು ಕಲ್ಪಸ್ಯ ತ್ರೇತಾಯುಗಮುಖೇ ತದಾ ।। 28 ।।
ನಂತರ ಅವನು ತನ್ನದೇ ದೇಹದಿಂದ ಅನ್ಯ ಪಶು-ಪಕ್ಷಿಗಳನ್ನು ಸೃಷ್ಟಿಸಿದನು. ಮುಖದಿಂದ ಆಡುಗಳನ್ನೂ ಎದೆಯಿಂದ ಕುರಿಗಳನ್ನೂ ಸೃಷ್ಟಿಸಿದನು. ನಂತರ ಬ್ರಹ್ಮನ ಹೊಟ್ಟೆಯಿಂದ ಗೋವುಗಳೂ, ಎರಡೂ ಪಾರ್ಶ್ವಗಳಿಂದ ಮತ್ತು ಕಾನುಗಳಿಂದ ಕುದುರೆಗಳು, ಆನೆಗಳು, ಕತ್ತೆ, ಮೊಲ ಮೊದಲಾದ ಪ್ರಾಣಿಗಳೂ ಹೊರಬಿದ್ದವು. ಒಂಟೆ, ಹೇಸರಗತ್ತೆ ಮತ್ತು ಅನ್ಯ ನಾರಾರೂಪದ ಜಾತಿಗಳ ಪ್ರಾಣಿಗಳನ್ನು ಸೃಷ್ಟಿಸಿದನು. ಮತ್ತು ಅವನ ರೋಮಗಳಿಂದ ಓಷಧಿಗಳು ಮತ್ತು ಫಲ-ಮೂಲಗಳು ಹುಟ್ಟಿದವು. ಹೀಗೆ ವಿಭುವ್ ಈ ಕಲ್ಪದ ಆದಿಯುಗವಾಗಿದ್ದ ತ್ರೇತಾಯುಗದ ಪ್ರಾರಂಭದಲ್ಲಿ ಪಶು-ಓಷಧಿಗಳನ್ನು ಸೃಷ್ಟಿಸಿ ಅವುಗಳನ್ನು ಉಪಯೋಗಿಸಿ ಯಜ್ಞಮಾಡಿದನು.
ಗೌರಜಃ ಪುರುಷೋ ಮೇಷೋ ಅಶ್ವಾಶ್ವತರಗರ್ದಭಾಃ ।
ಏತಾನ್ಗ್ರಾಮ್ಯಾನ್ ಪಶೂನಾಹುರಾರಣ್ಯಾಂಶ್ಚ ನಿಬೋಧ ಮೇ ।। 29 ।।
ಶ್ವಾಪದಂ ದ್ವಿಖುರಂ ಹಸ್ತೀ ವಾನರಾಃ ಪಕ್ಷಿಪಂಚಮಾಃ ।
ಔದಕಾಃ ಪಶವಃ ಷಷ್ಠಾಃ ಸಪ್ತಮಾಸ್ತು ಸರೀಸೃಪಾಃ ।। 30 ।।
ಹಸು, ಆಡು, ಮನುಷ್ಯ, ಟಗರು, ಕುದುರೆ, ಕತ್ತೆ ಮತ್ತು ಹೇಸರಗತ್ತೆ – ಇವುಗಳನ್ನು ಗ್ರಾಮ್ಯ ಪಶುಗಳೆಂದು ಕರೆಯುತ್ತಾರೆ. ಇನ್ನು ಅರಣ್ಯಪಶುಗಳ ಕುರಿತು ಕೇಳು. ಎರಡು ಗೊರಸಿನ ಪ್ರಾಣಿಗಳು, ತೋಳ, ಆನೆ, ಕಪಿ, ಮತ್ತು ಪಕ್ಷಿ – ಈ ಐದು ಅರಣ್ಯಪಶುಗಳೆಂದು ಕರೆಯಲ್ಪಟ್ಟಿವೆ. ಆರನೆಯ ವರ್ಗವಾಗಿ ಜಲಜಂತುಗಳೂ ಮತ್ತು ಏಳನೇ ವರ್ಗವಾಗಿ ಹರಿಯುವ ಪ್ರಾಣಿಗಳು ಇದೇ ಅರಣ್ಯಪಶುಗಳೆಂಬ ಗುಂಪಿಗೆ ಸೇರಿವೆ.
ಗಾಯತ್ರೀಂ ಚ ಋಚಂ ಚೈವ ತ್ರಿವೃತ್ಸಾಮ ರಥಂತರಮ್ ।
ಅಗ್ನಿಷ್ಟೋಮಂ ಚ ಯಜ್ಞಾನಾಂ ನಿರ್ಮಮೇ ಪ್ರಥಮಾನ್ಮುಖಾತ್ ।। 31 ।।
ಯಜೂಂಷಿ ತ್ರೈಷ್ಟುಭಂ ಛಂದಃ ಸ್ತೋಮಂ ಪಂಚದಶಂ ತಥಾ ।
ಬೃಹತ್ಸಾಮ ತಥೋಕ್ತಂ ಚ ದಕ್ಷಿಣಾದಸೃಜನ್ಮುಖಾತ್ ।। 32 ।।
ಸಾಮಾನಿ ಜಗತೀಛಂದಃ ಸ್ತೋಮಂ ಸಪ್ತದಶಂ ತಥಾ ।
ವೈರೂಪಮತಿರಾತ್ರಂ ಚ ನಿರ್ಮಮೇ ಪಶ್ಚಿಮಾನ್ಮುಖಾತ್ ।। 33 ।।
ಏಕವಿಂಶಮಥರ್ವಾಣಮಾಪ್ತೋರ್ಯಾಮಾಣಮೇವ ಚ ।
ಅನುಷ್ಟುಭಂ ಸವೈರಾಜಮುತ್ತರಾದಸೃಜನ್ಮುಖಾತ್ ।। 34 ।।
ವಿದ್ಯುತೋಽಶನಿಮೇಘಾಂಶ್ಚ ರೋಹಿತೇಂದ್ರಧನೂಂಷಿ ಚ ।
ವಯಾಂಸಿ ಚ ಸಸರ್ಜಾದೌ ಕಲ್ಪಸ್ಯ ಭಗವಾನ್ವಿಭುಃ ।। 35 ।।
ಅವನು ತನ್ನ ಮೊದಲನೇ ಮುಖದಿಂದ ಗಾಯತ್ರೀ, ಋಚ, ವ್ರಿವೃತ್ಸಾಮ, ರಥಂತರಸಾಮ ಮತ್ತು ಯಜ್ಞಗಳಲ್ಲಿ ಅಗ್ನಿಷ್ಟೋಮವನ್ನು ನಿರ್ಮಿಸಿದನು. ಯಜುರ್ಮಂತ್ರ, ತ್ರಿಷ್ಟುಭ್ ಚಂದಸ್ಸು, ಪಂಚದಶಸ್ತೋಮ, ಬೃಹತ್ಸಾಮ ಮತ್ತು ಉಕ್ಥ್ಯವನ್ನು ತನ್ನ ಬಲಭಾಗದ ಮುಖದಿಂದ ಸೃಷ್ಟಿಸಿದನು. ಸಾಮವೇದ, ಜಗತೀ ಛಂದಸ್ಸು, ಸಪ್ತದಶಸ್ತೋಮ, ವೈರೂಪಸಾಮ ಮತ್ತು ಅತಿರಾತ್ರಗಳನ್ನು ತನ್ನ ಪಶ್ಚಿಮ ಮುಖದಿಂದ ಸೃಷ್ಟಿಸಿದನು. ಬ್ರಹ್ಮನು ತನ್ನ ಉತ್ತರದಿಕ್ಕಿನ ಮುಖದಿಂದ ಅಥರ್ವವೇದ, ಅನುಷ್ಟುಭ್ ಛಂದಸ್ಸು, ಏಕವಿಂಶಸ್ತೋಮ, ವೈರಾಜಸಾಮ ಮತ್ತು ಅಪ್ತೋರ್ಯಾಮಗಳನ್ನು ಸೃಷ್ಟಿಸಿದನು. ಭಗವಾನ್ ವಿಭುವು ಕಲ್ಪದ ಆದಿಯಲ್ಲಿ ಮಿಂಚು, ಸಿಡಿಲು, ಮೋಡ, ಕಾಮನಬಿಲ್ಲು, ರೋಹಿತ ಎನ್ನುವ ರೂಪಾಂತರ ಮತ್ತು ಪಕ್ಷಿಗಳನ್ನು ಸೃಷ್ಟಿಸಿದನು.
ಉಚ್ಚಾವಚಾನಿ ಭೂತಾನಿ ಗಾತ್ರೇಭ್ಯಸ್ತಸ್ಯ ಜಜ್ಞಿರೇ ।
ಸೃಷ್ಟ್ವಾ ಚತುಷ್ಟಯಂ ಪೂರ್ವಂ ದೇವಾಸುರಪಿತೄನ್ ಪ್ರಜಾಃ ।। 36 ।।
ತತೋಽಸೃಜತ್ ಸ ಭೂತಾನಿ ಸ್ಥಾವರಾಣಿ ಚರಾಣಿ ಚ ।
ಯಕ್ಷಾನ್ಪಿಶಾಚಾನ್ಗಂಧರ್ವಾಂಸ್ತಥೈವಾಪ್ಸರಸಾಂ ಗಣಾನ್ ।। 37 ।।
ನರಕಿನ್ನರರಕ್ಷಾಂಸಿ ವಯಃ ಪಶುಮೃಗೋರಗಾನ್ ।
ಅವ್ಯಯಂ ಚ ವ್ಯಯಂ ಚೈವ ಯದಿದಂ ಸ್ಥಾಣು ಜಂಗಮಮ್ ।। 38 ।।
ತೇಷಾಂ ಯೇ ಯಾನಿ ಕರ್ಮಾಣಿ ಪ್ರಾಕ್ ಸೃಷ್ಟೇಃ ಪ್ರತಿಪೇದಿರೇ ।
ತಾನ್ಯೇವ ಪ್ರತಿಪದ್ಯಂತೇ ಸೃಜ್ಯಮಾನಾಃ ಪುನಃ ಪುನಃ ।। 39 ।।
ಹಿಂಸ್ರಾಹಿಂಸ್ರೇ ಮೃದುಕ್ರೂರೇ ಧರ್ಮಾಧರ್ಮಾವೃತಾನೃತೇ ।
ತದ್ಭಾವಿತಾಃ ಪ್ರಪದ್ಯಂತೇ ತಸ್ಮಾತ್ತತ್ತಸ್ಯ ರೋಚತೇ ।। 40 ।।
ಮೇಲೆ ಹೇಳಿದಂತೆ ನಾಲ್ಕು ಪ್ರಕಾರದ ಪ್ರಜಾವರ್ಗಗಳನ್ನು – ಅಸುರರು, ದೇವತೆಗಳು, ಪಿತೃಗಳು ಮತ್ತು ಮನುಷ್ಯರನ್ನು – ತನ್ನ ಶರೀರದಿಂದಲೇ ಹುಟ್ಟಿಸಿದನು. ನಂತರ ಅವನು ಸ್ಥಾವರ-ಜಂಗಮ ಭೂತಗಳನ್ನು ಸೃಷ್ಟಿಸಿದನು – ಯಕ್ಷರು, ಪಿಶಾಚಿಗಳು, ಗಂಧರ್ವರು, ಹಾಗೆಯೇ ಅಪ್ಸರೆಯರ ಗಣಗಳು, ನರರು, ಕಿನ್ನರರು, ರಾಕ್ಷಸರು, ಪಕ್ಷಿಗಳು, ಪಶುಗಳು, ಮೃಗಗಳು ಮತ್ತು ಸರ್ಪಗಳು. ಹೀಗೆ ಬೇಗ ನಶಿಸುವ ಮತ್ತು ಚಿರಕಾಲ ಬದುಕಿರುವ ಸ್ಥಾವರ-ಜಂಗಮ ರೂಪದ ಜೀವಿಗಳ ಸೃಷ್ಟಿಯು ನಡೆಯಿತು. ಹಿಂದಿನ ಕಲ್ಪದಲ್ಲಿ ಯಾರು ಯಾವ ಕರ್ಮ-ಸ್ವಭಾವಗಳನ್ನು ಹೊಂದಿದ್ದರೋ ಅದನ್ನೇ ಪುನಃ ಪುನಃ ಸೃಷ್ಟಿಯಾಗುವಾಗಲೂ ಹೊಂದಿಕೊಂಡಿರುತ್ತವೆ. ಹಿಂಸೆ-ಅಹಿಂಸೆ, ಕ್ರೂರತ್ವ-ಮೃದುತ್ವ, ಧರ್ಮ-ಅಧರ್ಮ, ಸತ್ಯ-ಅಸತ್ಯ ಮೊದಲಾದ ಕರ್ಮಸಂಸ್ಕಾರಗಳಿಂದ ಕುಡಿದ ಜೀವಿಗಳು ಹಾಗೆಯೇ ಜನ್ಮತಾಳುತ್ತವೆ. ಆದ್ದರಿಂದ ಆಯಾಯಾ ಪ್ರಾಣಿಗಳಿಗೆ ಆಯಾಯಾ ಕರ್ಮವು ರುಚಿಸುತ್ತದೆ.
ಇಂದ್ರಿಯಾರ್ಥೇಷು ಭೂತೇಷು ಶರೀರೇಷು ಚ ಸ ಪ್ರಭುಃ ।
ನಾನಾತ್ವಂ ವಿನಿಯೋಗಂ ಚ ಧಾತೈವ ವ್ಯದಧಾತ್ ಸ್ವಯಮ್ ।। 41 ।।
ನಾಮ ರೂಪಂ ಚ ಭೂತಾನಾಂ ಕೃತ್ಯಾನಾಂ ಚ ಪ್ರಪಂಚನಮ್ ।
ವೇದಶಬ್ದೇಭ್ಯ ಏವಾದೌ ದೇವಾದೀನಾಂ ಚಕಾರ ಸಃ ।। 42 ।।
ಋಷೀಣಾಂ ನಾಮಧೇಯಾನಿ ಯಾಶ್ಚ ದೇವೇಷು ಸೃಷ್ಟಯಃ ।
ಶರ್ವರ್ಯಂತೇ ಪ್ರಸೂತಾನಾಮನ್ಯೇಷಾಂ ಚ ದದಾತಿ ಸಃ ।। 43 ।।
ಯಥರ್ತಾವೃತುಲಿಂಗಾನಿ ನಾನಾರೂಪಾಣಿ ಪರ್ಯಯೇ ।
ದೃಶ್ಯಂತೇ ತಾನಿ ತಾನ್ಯೇವ ತಥಾ ಭಾವಾ ಯುಗಾದಿಷು ।। 44 ।।
ಏವಂವಿಧಾಃ ಸೃಷ್ಟಯಸ್ತು ಬ್ರಹ್ಮಣೋಽವ್ಯಕ್ತಜನ್ಮನಃ ।
ಶರ್ವರ್ಯಂತೇ ಪ್ರಬುದ್ಧಸ್ಯ ಕಲ್ಪೇ ಕಲ್ಪೇ ಭವಂತಿ ವೈ ।। 45 ।।
ನಂತರ ಸ್ವಯಂ ಪ್ರಭುವು ಇಂದ್ರಿಯಗಳ ವಿಷಯಗಳಲ್ಲಿ, ಭೂತಗಳಲ್ಲಿ ಮತ್ತು ಶರೀರಗಳಲ್ಲಿ ನಾನಾತ್ವವನ್ನೂ ಪರಸ್ಪರ ಸಂಪರ್ಕರೂಪವಾದ ವಿನಿಯೋಗವನ್ನೂ ರಚಿಸಿದನು. ಅವನು ದೇವತೆಗಳು ಮೊದಲಾದವರ ನಾಮ-ರೂಪಗಳನ್ನು, ಭೂತವಿಸ್ತಾರಗಳನ್ನೂ ಮತ್ತು ಕರ್ಮವಿಸ್ತಾರಗಳನ್ನೂ ವೇದಶಬ್ದಗಳ ಮೂಲಕ ಧ್ಯಾನಿಸಿಯೇ ಈ ಕಲ್ಪದ ಆದಿಯಲ್ಲಿ ಸೃಷ್ಟಿಸಿದನು. ರಾತ್ರಿಯು ಕಳೆದು ಪ್ರಭಾತವಾಗಲು ಅವನು ಸೃಷ್ಟಿಸಿದ ದೇವತೆಗಳಿಗೆ ಮತ್ತು ಋಷಿಗಳಿಗೆ ಹಾಗೂ ಇತರ ಭೂತಗಳಿಗೆ ಹಿಂದೆ ಇದ್ದ ನಾಮಧೇಯಗಳನ್ನೇ ಕೊಡುತ್ತಾನೆ. ಋತುಗಳು ಬದಲಾದಂತೆ ಹೇಗೆ ನಾನಾರೂಪಗಳೂ ಬದಲಾಗುತ್ತವೆಯೋ ಮತ್ತು ಆ ಋತುವಿನ ಚಿಹ್ನೆಗಳು ತೋರಿಬರುತ್ತವೆಯೋ ಹಾಗೆ ಕಲ್ಪಾದಿಯ ಯುಗದ ಪ್ರಾರಂಭದಲ್ಲಿ ಆಯಾಯಾ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಹೀಗೆ ಅವ್ಯಕ್ತದಿಂದ ಹುಟ್ಟಿದ ಬ್ರಹ್ಮನು ಸೃಷ್ಟಿಯನ್ನು ಮಾಡಿದನು. ಕಲ್ಪ ಕಲ್ಪದಲ್ಲಿಯೂ ರಾತ್ರಿಕಳೆದು ಎಚ್ಚೆತ್ತ ಬ್ರಹ್ಮನು ಹೀಗೆ ಸೃಷ್ಟಿಮಾಡುತ್ತಿರುತ್ತಾನೆ.
ಇತಿ ಶ್ರೀಮಾರ್ಕಂಡೇಯ ಮಹಾಪುರಾಣೇ ಸೃಷ್ಟಿಪ್ರಕಾರಣೇ ಪಂಚಚತ್ವಾರಿಂಶೋಽಧ್ಯಾಯಃ ।।