ಶ್ರೀ ಮಾರ್ಕಂಡೇಯ ಮಹಾಪುರಾಣ: ಅಧ್ಯಾಯ 42 – ಬ್ರಹ್ಮೋತ್ಪತ್ತಿನಿರೂಪಣಮ್

ಜೈಮಿನಿರುವಾಚ

ಸಮ್ಯಗೇತನ್ಮಮಾಖ್ಯಾತಂ ಭವದ್ಭಿರ್ದ್ವಿಜಸತ್ತಮಾಃ

ಪ್ರವೃತ್ತಂ ಚ ನಿವೃತ್ತಂ ಚ ದ್ವಿವಿಧಂ ಕರ್ಮ ವೈದಿಕಮ್ ।। 1 ।।

ಅಹೋ ಪಿತೃಪ್ರಸಾದೇನ ಭವತಾಂ ಜ್ಞಾನಮೀದೃಶಮ್

ಯೇನ ತಿರ್ಯಕ್ತ್ವಮಪ್ಯೇತತ್ ಪ್ರಾಪ್ಯ ಮೋಹಸ್ತಿರಸ್ಕೃತಃ ।। 2 ।।

ಧನ್ಯಾ ಭವಂತಃ ಸಂಸಿದ್ಧ್ಯೈ ಪ್ರಾಗವಸ್ಥಾಸ್ಥಿತಂ ಯತಃ

ಭವತಾಂ ವಿಷಯೋದ್ಭೂತೈರ್ನ ಮೋಹೈಶ್ಚಾಲ್ಯತೇ ಮನಃ ।। 3 ।।

ದಿಷ್ಟ್ಯಾ ಭಗವತಾ ತೇನ ಮಾರ್ಕಂಡೇಯೇನ ಧೀಮತಾ

ಭವಂತೋ ವೈ ಸಮಾಖ್ಯಾತಾಃ ಸರ್ವಸಂದೇಹಹೃತ್ತಮಾಃ ।। 4 ।।

ಸಂಸಾರೇಽಸ್ಮಿನ್ಮನುಷ್ಯಾಣಾಂ ಭ್ರಮತಾಮತಿಸಂಕಟೇ

ಭವದ್ವಿಧೈಃ ಸಮಂ ಸಂಗೋ ಜಾಯತೇ ನಾತಪಸ್ವಿನಾಮ್ ।। 5 ।।

ಯದ್ಯಹಂ ಸಂಗಮಾಸಾದ್ಯ ಭವದಿಭರ್ಜ್ಞಾನದೃಷ್ಟಿಭಿಃ

ನ ಸ್ಯಾಂ ಕೃತಾರ್ಥಸ್ತನ್ನೂನಂ ನ ಮೇಽನ್ಯತ್ರ ಕೃತಾರ್ಥತಾ ।। 6 ।।

ಪ್ರವೃತೇ ಚ ನಿವೃತ್ತೇ ಚ ಭವತಾಂ ಜ್ಞಾನಕರ್ಮಣಿ

ಮತಿಮಸ್ತಮಲಾಂ ಮನ್ಯೇ ಯಥಾ ನಾನ್ಯಸ್ಯ ಕಸ್ಯಚಿತ್ ।। 7 ।।

ಯದಿ ತ್ವನುಗ್ರಹವತೀ ಮಯೀ ಬುದ್ಧಿರ್ದ್ವಿಜೋತ್ತಮಾಃ

ಭವತಾಂ ತತ್ಸಮಾಖ್ಯಾತುಮರ್ಹತೇದಮಶೇಷತಃ ।। 8 ।।

ಜೈಮಿನಿಯು ಹೇಳಿದನು: “ಪಕ್ಷಿಶ್ರೇಷ್ಠರೇ! ವೇದವಿಹಿತ ಕರ್ಮಗಳಲ್ಲಿ ಪ್ರವೃತ್ತಿ ಮತ್ತು ನಿವೃತ್ತಿ ಎಂಬ ಎರಡು ವಿಧಗಳಿವೆಯೆಂದು ನೀನು ಚೆನ್ನಾಗಿ ಹೇಳಿದಿರಿ. ಅಹೋ! ನಿಮ್ಮ ತಂದೆಯ ಅನುಗ್ರಹದಿಂದ ನಿಮಗೆ ಇಂತಹ ಜ್ಞಾನವುಂಟಾಗಿದೆ! ಇದರಿಂದಾಗಿ ತಿರ್ಯಗ್ಯೋನಿಯನ್ನು ಹೊಂದಿದ್ದರೂ ನೀವು ಅಜ್ಞಾನವನ್ನು ತಿರಸ್ಕರಿಸಿದ್ದೀರಿ. ನೀವು ಧನ್ಯರು! ನಿಮ್ಮ ಮನಸ್ಸು ಈ ಪಕ್ಷಿಜನ್ಮದ ಪ್ರಾಪ್ತಿಯ ಮೊದಲಿನ ಅವಸ್ಥೆಯಲ್ಲಿದ್ದಂತೆ ವಿಷಯಭೋಗದಿಂದ ಉಂಟಾಗುವ ಮೋಹವಿಕಾರದಿಂದ ಚಂಚಲವಾಗಿಲ್ಲ. ಧೀಮತ ಭಗವಾನ್ ಮಾರ್ಕಂಡೇಯನು ಸರ್ವ ಸಂದೇಹಗಳನ್ನು ಹೋಗಲಾಡಿಸಲು ನಿಮ್ಮನ್ನು ನನಗೆ ಗುರುಗಳನ್ನಾಗಿ ತಿಳಿಸಿದುದು ನನ್ನ ಭಾಗ್ಯವೇ ಸರಿ. ಅತಿ ಸಂಕಟಗಳಿಂದ ತುಂಬಿರುವ ಈ ಸಂಸಾರಚಕ್ರಕ್ಕೆ ಸಿಲುಕಿ ಭ್ರಮಿಸುತ್ತಿರುವ ಮನುಷ್ಯರಿಗೆ ನಿಮ್ಮಂಥವರ ಸಂಗವು ತಪಸ್ವಿಗಳಲ್ಲದವರಿಗೆ ದೊರೆಯುವುದಿಲ್ಲ. ಪೂಜ್ಯರಾದ ನಿಮ್ಮ ಸಂಗವನ್ನು ಪಡೆದು ನಿಮ್ಮ ಜ್ಞಾನದೃಷ್ಟಿಯಿಂದ ಇಂದು ನಾನು ಕೃತಾರ್ಥನಾಗದೇ ಇದ್ದರೆ ಬೇರೆ ಎಲ್ಲಿಯೂ ನನಗೆ ಕೃತಾರ್ಥತೆಯುಂಟಾಗುವುದಿಲ್ಲ ಎನ್ನುವುದು ನಿಜ. ಪ್ರವೃತ್ತಿ ಮತ್ತು ನಿವೃತ್ತಿಮಾರ್ಗಗಳಲ್ಲಿ ಹಾಗೂ ಜ್ಞಾನ ಮತ್ತು ಕರ್ಮಗಳ ವಿಷಯಗಳಲ್ಲಿ ನಿಮ್ಮಲ್ಲಿದ್ದಷ್ಟು ನಿಷ್ಕಲಂಕ ಪ್ರತಿಭೆಯು ಬೇರೊಬ್ಬರಲ್ಲಿ ಇಲ್ಲ ಎಂದು ನನಗನಿಸುತ್ತದೆ. ಪಕ್ಷಿಶ್ರೇಷ್ಠರೇ! ನನಗೆ ಅನುಗ್ರಹಿಸಬೇಕೆಂಬ ಮನಸ್ಸಿದ್ದರೆ ನಾನು ಕೇಳುವ ವಿಷಯಗಳನ್ನು ನೀವು ಸಮಗ್ರವಾಗಿ ತಿಳಿಸಬೇಕು.

ಕಥಮೇತತ್ಸಮುದ್ಭೂತಂ ಜಗತ್ ಸ್ಥಾವರಜಂಗಮಮ್

ಕಥಂ ಚ ಪ್ರಲಯಂ ಕಾಲೇ ಪುನರ್ಯಾಸ್ಯತಿ ಸತ್ತಮಾಃ ।। 9 ।।

ಕಥಂ ಚ ವಂಶಾಃ ದೇವರ್ಷಿಪಿತೃಭೂತಾದಿಸಂಭವಾಃ

ಮನ್ವಂತರಾಣಿ ಚ ಕಥಂ ವಂಶಾನುಚರಿತಂ ಚ ಯತ್ ।। 10 ।।

ಯಾವತ್ಯಃ ಸೃಷ್ಟಯಶ್ಚೈವ ಯಾವಂತಃ ಪ್ರಲಯಾಸ್ತಥಾ

ಯಥಾ ಕಲ್ಪವಿಭಾಗಶ್ಚ ಯಾ ಚ ಮನ್ವಂತರಸ್ಥಿತಿಃ ।। 11 ।।

ಯಥಾ ಚ ಕ್ಷಿತಿಸಂಸ್ಥಾನಂ ಯತ್ಪ್ರಮಾಣಂ ಚ ವೈ ಭುವಃ

ಯಥಾಸ್ಥಿತಿ ಸಮುದ್ರಾದ್ರಿನಿಮ್ನಗಾಃ ಕಾನನಾನಿ ಚ ।। 12 ।।

ಭೂರ್ಲೋಕಾದಿಸ್ವರ್ಲೋಕಾನಾಂ ಗಣಃ ಪಾತಾಲಸಂಶ್ರಯಃ

ಗತಿಸ್ತಥಾರ್ಕಸೋಮಾದಿಗ್ರಹರ್ಕ್ಷಜ್ಯೋತಿಷಾಮಪಿ ।। 13 ।।

ಶ್ರೋತುಮಿಚ್ಚಾಮ್ಯಹಂ ಸರ್ವಮೇತದಾಹೂತಸಂಪ್ಲವಮ್

ಉಪಸಂಹೃತೇ ಚ ಯಚ್ಚೇಷಂ ಜಗತ್ಯಸ್ಮಿನ್ಭವಿಷ್ಯತಿ ।। 14 ।।

ಸತ್ತಮರೇ! ಸ್ಥಾವರ-ಜಂಗಮಯುಕ್ತವಾದ ಈ ಜಗತ್ತು ಹೇಗುಂಟಾಯಿತು? ಮತ್ತು ಇದು ಕಾಲಾಂತರದಲ್ಲಿ ಹೇಗೆ ಪ್ರಲಯಹೊಂದಿ ಪುನಃ ಬರುತ್ತದೆ? ದೇವರ್ಷಿ-ಪಿತೃಗಳು ಮತ್ತು ಭೂತಾದಿಗಳ ವಂಶಗಳು ಹೇಗೆ ಹುಟ್ಟಿದವು? ಮನ್ವಂತರಗಳು ಹೇಗಿರುತ್ತವೆ ಮತ್ತು ವಂಶಾನುಚರಿತೆಗಳು ಹೇಗಿವೆ? ಸೃಷ್ಟಿಗಳು ಎಷ್ಟು? ಪ್ರಲಯಗಳು ಎಷ್ಟು? ಕಲ್ಪವಿಭಾಗಗಳು ಎಷ್ಟು? ಮನ್ವಂತರಗಳ ಸ್ಥಿತಿಯು ಹೇಗಿರುವುದು? ಈ ಭೂಮಂಡಲವು ಹೇಗಿದೆ? ಭೂಮಿಯ ಪರಿಮಾಣವೆಷ್ಟು? ಈ ಭೂಮಿಯ ಸಮುದ್ರಗಳು, ನದಿಗಳು ಮತ್ತು ಕಾನನಗಳ ಸ್ಥಿತಿಯು ಹೇಗಿದೆ? ಭೂರ್ಲೋಕಾದಿ ಎಲ್ಲ ಲೋಕಗಳ ಗಣ, ಪಾತಾಲದಲ್ಲಿರುವ ಲೋಕಗಳು, ಮತ್ತು ಸೂರ್ಯ-ಚಂದ್ರ-ಗ್ರಹ-ನಕ್ಷತ್ರ ಮೊದಲಾದ ತೇಜೋಮಂಡಲದ ಗತಿಯಾವುದು? ಸೃಷ್ಟಿಯ ಆದಿಯಿಂದ ಸಮಸ್ತ ಭೂತಗಳ ಲಯವಾಗುವ ಪ್ರಲಯದವರೆಗಿನ ಸಮಸ್ತ ವಿಷಯವನ್ನೂ ಕೇಳಬಯಸುತ್ತೇನೆ. ಮತ್ತು ಈ ಜಗತ್ತು ಪ್ರಲಯವಾದ ಬಳಿಕ ಉಳಿಯುವ ಸತ್ಯವಾಸ್ತುವಾದರೂ ಯಾವುದು?”

ಪಕ್ಷಿಣ ಊಚುಃ

ಪ್ರಶ್ನಭಾರೋಽಯಮತುಲೋ ಯಸ್ತ್ವಯಾ ಮುನಿಸತ್ತಮ

ಪೃಷ್ಟಸ್ತಂ ತೇ ಪ್ರವಕ್ಷ್ಯಾಮಸ್ತಚ್ಛೃಣುಷ್ವೇಹ ಜೈಮಿನೇ ।। 15 ।।

ಮಾರ್ಕಂಡೇಯೇನ ಕಥಿತಂ ಪುರಾ ಕ್ರೌಷ್ಟುಕಯೇ ಯಥಾ

ದ್ವಿಜಪುತ್ರಾಯ ಶಾಂತಾಯ ವ್ರತಸ್ನಾತಾಯ ಧೀಮತೇ ।। 16 ।।

ಮಾರ್ಕಂಡೇಯಂ ಮಹಾತ್ಮಾನಮುಪಾಸೀನಂ ದ್ವಿಜೋತ್ತಮೈಃ

ಕ್ರೌಷ್ಟುಕಿಃ ಪರಿಪಪ್ರಚ್ಚ ಯದೇತತ್ಪೃಷ್ಟವಾನ್ ಪ್ರಭೋ ।। 17 ।।

ತಸ್ಯ ಚಾಕಥಯತ್ಪ್ರೀತ್ಯಾ ಯನ್ಮುನಿರ್ಭೃಗುನಂದನಃ

ತತ್ತೇ ಪ್ರಕಥಯಿಷ್ಯಾಮಃ ಶೃಣು ತ್ವಂ ದ್ವಿಜಸತ್ತಮ ।। 18 ।।

ಪ್ರಣಿಪತ್ಯ ಜಗನ್ನಾಥಂ ಪದ್ಮಯೋನಿಂ ಪಿತಾಮಹಮ್ ।। 19 ।।

ಜಗದ್ಯೋನಿಂ ಸ್ಥಿತಂ ಸೃಷ್ಟೌ ಸ್ಥಿತೌ ವಿಷ್ಣುಸ್ವರೂಪಿಣಮ್

ಪ್ರಲಯೇ ಚಾಂತಕರ್ತಾರಂ ರೌದ್ರಂ ರುದ್ರಸ್ವರೂಪಿಣಮ್ ।। 20 ।।

ಪಕ್ಷಿಗಳು ಹೇಳಿದವು: “ಮುನಿಸತ್ತಮ! ಜೈಮಿನೇ! ನಿನ್ನ ಈ ಅತುಲ ಪ್ರಶ್ನೆಗಳು ಭಾರವುಳ್ಳವುಗಳು. ನಿನ್ನ ಪ್ರಶ್ನೆಗಳಿಗೆ ಉತ್ತರವನ್ನು ಹೇಳುತ್ತೇವೆ. ನೀನೀಗ ಅದನ್ನು ಕೇಳು. ಹಿಂದೆ ಶಾಂತಸ್ವಭಾವದವನೂ, ವ್ರತಸ್ನಾತನೂ ಆದ ಕ್ರೌಷ್ಟುಕಿ ಎಂಬ ದ್ವಿಜಪುತ್ರನಿಗೆ ಧೀಮತ ಮಾರ್ಕಂಡೇಯನು ಇದನ್ನು ಹೇಳಿದ್ದನು. ಪ್ರಭೋ! ನೀನು ಕೇಳಿದ ಪ್ರಶ್ನೆಗಳನ್ನೇ ಕ್ರೌಷ್ಟುಕಿಯು ದ್ವಿಜೋತ್ತಮರೊಡನೆ ಕುಳಿತಿದ್ದ ಮಹಾತ್ಮಾ ಮಾರ್ಕಂಡೇಯನಲ್ಲಿ ಕೇಳಿದನು. ದ್ವಿಜಸತ್ತಮ! ಮುನಿ ಭೃಗುನಂದನನು ಪ್ರೀತಿಯಿಂದ ಅವನಿಗೆ ಏನನ್ನು ಹೇಳಿದ್ದನೋ ಅದನ್ನೇ ನಿನಗೂ ಹೇಳುತ್ತೇವೆ. ಕೇಳು. ಜಗನ್ನಾಥ ಪದ್ಮಯೋನಿ ಪಿತಾಮಹ ಬ್ರಹ್ಮನಿಗೆ, ಸೃಷ್ಟಿಕಾಲದಲ್ಲಿ ಸ್ಥಿತನಾದ ಜಗದ್ಯೋನಿ ವಿಷ್ಣುಸ್ವರೂಪಿಗೆ ಮತ್ತು ಪ್ರಲಯದ ಸಮಯದಲ್ಲಿ ರೌದ್ರವಾಗಿ ಅಂತ್ಯಗೊಳಿಸುವ ರುದ್ರಸ್ವರೂಪಿಗೆ ನಮಸ್ಕರಿಸಿ ಮಾರ್ಕಂಡೇಯನು ಹೇಳಿದನು.

ಮಾರ್ಕಂಡೇಯ ಉವಾಚ

ಉತ್ಪನ್ನಮಾತ್ರಸ್ಯ ಪುರಾ ಬ್ರಹ್ಮಣೋಽವ್ಯಕ್ತಜನ್ಮನಃ

ಪುರಾಣಮೇತದ್ವೇದಾಶ್ಚ ಮುಖೇಭ್ಯೋಽನುವಿನಿಃ ಸೃತಾಃ ।। 21 ।।

ಪುರಾಣಸಂಹಿತಾಶ್ಚಕ್ರುರ್ಬಹುಲಾಃ ಪರಮರ್ಷಯಃ

ವೇದಾನಾಂ ಪ್ರವಿಭಾಗಶ್ಚ ಕೃತಸ್ತೈಸ್ತು ಸಹಸ್ರಶಃ ।। 22 ।।

ಮಾರ್ಕಂಡೇಯನು ಹೇಳಿದನು: “ಹಿಂದೆ ಅವ್ಯಕ್ತದಿಂದ ಬ್ರಹ್ಮನು ಹುಟ್ಟಿದ ಕೂಡಲೇ ಅವನ ಮುಖಗಳಿಂದ ಪುರಾಣ-ವೇದರೂಪವಾದ ವಾಕ್ಕು ಹುಟ್ಟಿಬಂದಿತು. ನಂತರ ಪರಮ ಋಷಿಗಳು ಅನೇಕ ಪುರಾಣಸಂಹಿತೆಗಳನ್ನು ರಚಿಸಿದರು ಮತ್ತು ವೇದಗಳನ್ನು ಸಹಸ್ರಾರು ಶಾಖೆಗಳನ್ನಾಗಿ ಮಾಡಿದರು.

ರ್ಮೋ ಜ್ಞಾನಂ ಚ ವೈರಾಗ್ಯಮೈಶ್ವರ್ಯಂ ಚ ಮಹಾತ್ಮನಃ

ತಸ್ಯೋಪದೇಶೇನ ವಿನಾ ನ ಹಿ ಸಿದ್ಧಂ ಚತುಷ್ಟಯಮ್ ।। 23 ।।

ವೇದಾನ್ ಸಪ್ತರ್ಷಯಸ್ತಸ್ಮಾಜ್ಜಗೃಹುಸ್ತಸ್ಯ ಮಾನಸಾಃ

ಪುರಾಣಂ ಜಗೃಹುಶ್ಚಾದ್ಯಾ ಮುನಯಸ್ತಸ್ಯ ಮಾನಸಾಃ ।। 24 ।।

ಭೃಗೋಃ ಸಕಾಶಾಚ್ಚ್ಯವನಸ್ತೇನೋಕ್ತಂಚ ದ್ವಿಜನ್ಮನಾಮ್

ಋಷಿಭಿಶ್ಚಾಪಿ ದಕ್ಷಾಯ ಪ್ರೋಕ್ತಮೇತನ್ಮಹಾತ್ಮಭಿಃ ।। 25 ।।

ದಕ್ಷೇಣ ಚಾಪಿ ಕಥಿತಮಿದಮಾಸೀತ್ತದಾ ಮಮ

ತತ್ತುಭ್ಯಂ ಕಥಯಾಮ್ಯದ್ಯ ಕಲಿಕಲ್ಮಷನಾಶನಮ್ ।। 26 ।।

ಸರ್ವಮೇತನ್ಮಹಾಭಾಗ  ಶ್ರೂಯತಾಂ ಮೇ ಸಮಾಧಿನಾ

ಯಥಾಶ್ರುತಂ ಮಯಾ ಪೂರ್ವಂ ದಕ್ಷಸ್ಯ ಗದತೋ ಮುನೇ ।। 27 ।।

ಧರ್ಮ-ಜ್ಞಾನ-ವೈರಾಗ್ಯ ಮತ್ತು ಐಶ್ವರ್ಯವೆಂಬ ನಾಲ್ಕು ಮಹಿಮೆಗಳು ಬ್ರಹ್ಮನಲ್ಲಿ ಜನ್ಮಸಿದ್ಧವಾಗಿದ್ದರೂ ಅವನ ಉಪದೇಶವಿಲ್ಲದೇ ಇತರರಲ್ಲಿ ಆ ಮಹಿಮೆಗಳು ಸಿದ್ಧಿಸುವುದಿಲ್ಲ. ಬ್ರಹ್ಮನ ಮಾನಸಪುತ್ರರಾದ ಸಪ್ತರ್ಷಿಗಳು ಅವನ ಉಪದೇಶದಿಂದ ವೇದಗಳನ್ನು ಪಡೆದುಕೊಂಡರು ಮತ್ತು ಅವನ ಮಾನಸಪುತ್ರರಾದ ಮುನಿಗಳು ಪುರಾಣಗಳನ್ನೂ ಪಡೆದುಕೊಂಡರು. ಭೃಗುವಿನಿಂದ ಚ್ಯವನನು ಕಲಿತು ಅವನು ಅನೇಕ ಋಷಿಗಳಿಗೆ ಉಪದೇಶಿಸಿದನು. ಆ ಮಹಾತ್ಮ ಋಷಿಗಳು ದಕ್ಷನಿಗೆ ಹೇಳಿದರು. ದಕ್ಷನು ಇದನ್ನು ನನಗೆ ಉಪದೇಶಿಸಿದನು. ಮಹಾಭಾಗ! ಮುನೇ! ಹಿಂದೆ ದಕ್ಷನು ಹೇಳಿದುದನ್ನು ಹೇಗೆ ಕೇಳಿದ್ದೆನೋ ಆ ಕಲಿಕಲ್ಮಷನಾಶಕ ವಿಷಯವನ್ನು ನಿನಗೆ ಇಂದು ಹೇಳುತ್ತೇನೆ.

ಪ್ರಣಿಪತ್ಯ ಜಗದ್ಯೋನಿಮಜಮವ್ಯಯಮಾಶ್ರಯಮ್

ಚರಾಚರಸ್ಯ ಜಗತೋ ಧಾತಾರಂ ಪರಮಂ ಪದಮ್ ।। 28 ।।

ಬ್ರಹ್ಮಾಣಮಾದಿಪುರುಷಮುತ್ಪತ್ತಿಸ್ಥಿತಿಸಂಯಮೇ

ಯತ್ಕಾರಣಮನೌಪಮ್ಯಂ ಯತ್ರ ಸರ್ವಂ ಪ್ರತಿಷ್ಠಿತಮ್ ।। 29 ।।

ತಸ್ಮೈ ಹಿರಣ್ಯಗರ್ಭಾಯ ಲೋಕತಂತ್ರಾಯ ಧೀಮತೇ

ಪ್ರಣಮ್ಯ ಸಮ್ಯಗ್ವಕ್ಷ್ಯಾಮಿ ಭೂತವರ್ಗಮನುತ್ತಮಮ್ ।। 30 ।।

ಮಹದಾದ್ಯಂ ವಿಶೇಷಾಂತಂ ಸವೈರುಪ್ಯಂ ಸಲಕ್ಷಣಮ್

ಪ್ರಮಾಣೈಃ ಪಂಚಭಿರ್ಗಮ್ಯಂ ಸ್ತ್ರೋತೋಭಿಃ ಷಡ್ಭಿರನ್ವಿತಮ್ ।। 31 ।।

ಪುರುಷಾಧಿಷ್ಠಿತಂ ನಿತ್ಯಮನಿತ್ಯಮಿವ ಚ ಸ್ಥಿತಮ್

ಚ್ಛ್ರೂಯತಾಂ ಮಹಾಭಾಗ  ಪರಮೇಣ ಸಮಾಧಿನಾ ।। 32 ।।

ಜಗದ್ಯೋನಿಯೂ, ಅಜನೂ, ಅವ್ಯಯನೂ, ಚರಾಚರಜಗತ್ತಿಗೆ ಆಶ್ರಯನೂ, ಸೃಷ್ಟಿಕರ್ತನೂ ಆ ಆ ಪರಮಪದ ಸ್ವರೂಪನಿಗೆ ನಮಸ್ಕರಿಸುತ್ತೇನೆ. ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣನೂ, ಉಪಮಾನ ರಹಿತನೂ, ಸಮಸ್ತ ಜಗತ್ತಿಗೆ ನೆಲೆಯಾದವನೂ ಆದ ಆ ಆದಿಪುರುಷ ಬ್ರಹ್ಮನಿಗೆ ನಮಸ್ಕರಿಸುತ್ತೇನೆ. ಲೋಕಪ್ರವರ್ತಕನಾಗಿರುವ ಧೀಮತ ಹಿರಣ್ಯಗರ್ಭನಿಗೆ ನಮಸ್ಕರಿಸಿ ಅನುತ್ತಮ ಭೂತಸೃಷ್ಟಿಯನ್ನು ವರ್ಣಿಸುತ್ತೇನೆ. ಮಹತ್ತತ್ತ್ವವು ಆದಿಯಾಗಿ ಮಹಾಭೂತವಿಕಾರವೇ ಅಂತವಾಗಿರುವ, ಸಮಾನ-ವಿಷಮ ಲಕ್ಷಣಗಳಿಂದ ಕೂಡಿರುವ, ಪ್ರತ್ಯಕ್ಷ ಮೊದಲಾದ ಐದು ಪ್ರಮಾಣಗಳಿಗೆ ವೇದ್ಯವಾಗುವ ಮತ್ತು ಜನ್ಮ ಮೊದಲಾದ ಆರು ವಿಕಾರಗಳಿಂದ ಕೂಡಿದ ಭೂತಗಳ ಸೃಷ್ಟಿಯನ್ನು ವರ್ಣಿಸುತ್ತೇನೆ. ಮಹಾಭಾಗ! ನಿತ್ಯನಾದ ಪುರುಷನಿಂದ ಮಾಡಲ್ಪಟ್ಟು ಅನಿತ್ಯವಾದಂತೆ ತೋರುತ್ತಿರುವ ಈ ಜಗತ್ತಿನ ಕುರಿತು ಪರಮ ಏಕಾಗ್ರತೆಯಿಂದ ಕೇಳು.

ಪ್ರಧಾನಂ ಕಾರಣಂ ಯತ್ತದವ್ಯಕ್ತಾಖ್ಯಂ ಮಹರ್ಷಯಃ

ಯದಾಹುಃ ಪ್ರಕೃತಿಂ ಸೂಕ್ಷ್ಮಾಂ ನಿತ್ಯಾಂ ಸದಸದಾತ್ಮಿಕಾಮ್ ।। 33 ।।

ಧ್ರುವಮಕ್ಷಯ್ಯಮಜರಮಮೇಯಂ ನಾನ್ಯಸಂಶ್ರಯಮ್

ಗಂಧರೂಪರಸೈರ್ಹೀನಂ ಶಬ್ದಸ್ಪರ್ಶವಿವರ್ಜಿತಮ್ ।। 34 ।।

ಅನಾದ್ಯಂತಂ ಜಗದ್ಯೋನಿಂ ತ್ರಿಗುಣಪ್ರಭವಾಪ್ಯಯಮ್

ಅಸಾಂಪ್ರತಮವಿಜ್ಞೇಯಂ ಬ್ರಹ್ಮಾಗ್ರೇ ಸಮವರ್ತತ ।। 35 ।।

ಜಗತ್ತಿನ ಪ್ರವಾಹದಲ್ಲಿ ಪ್ರಧಾನವೆಂಬ ತತ್ತ್ವವು ಕಾರಣವು. ಮಹರ್ಷಿಗಳು ಇದನ್ನು ಸೂಕ್ಷ್ಮವೂ ನಿತ್ಯವೂ ಸತ್-ಅಸತ್ ರೂಪದ ಪರಿಣಾಮವುಳ್ಳದ್ದೂ ಆದ ಪ್ರಕೃತಿ ಅಥವಾ ಅವ್ಯಕ್ತ ತತ್ತ್ವ ಎಂದು ಕರೆಯುತ್ತಾರೆ. ಆ ಪ್ರಕೃತಿ ತತ್ತ್ವವು ಶಾಶ್ವತವು. ನಾಶವಿಲ್ಲದಿರುವುದು. ಮುಪ್ಪಿಲ್ಲದುದು. ಅಳೆಯಲು ಸಾಧ್ಯವಿಲ್ಲದ್ದು. ಅದು ಇನ್ನೊಂದನ್ನು ಆಶ್ರಯಿಸಿಲ್ಲ. ಹಾಗೂ ಅದು ಗಂಧ-ರೂಪ-ರಸಹೀನವೂ ಶಬ್ದ-ಸ್ಪರ್ಶ ವಿವರ್ಜಿತವಾಗಿಯೂ ಇದೆ. ಆ ಪ್ರಕೃತಿಯು ಅನಾದಿಯೂ, ಅನಂತವಾಗಿಯೂ, ಜಗದ್ಯೋನಿಯೂ, ಸತ್ತ್ವಾದಿ ತ್ರಿಗುಣಗಳ ಮೂಲವೂ, ತಿಳಿಯಲು ಗಹನವೂ ಆಗಿದೆ. ಅದರಿಂದ ಮೊದಲು ಬ್ರಹ್ಮನು ಜನಿಸಿದನು.

ಪ್ರಲಯಸ್ಯಾನು ತೇನೇದಂ ವ್ಯಾಪ್ತಮಾಸೀದಶೇಷತಃ

ಗುಣಸಾಮ್ಯಾತ್ತತಸ್ತಸ್ಮಾತ್ ಕ್ಷೇತ್ರಜ್ಞಾಧಿಷ್ಠಿತಾನ್ಮುನೇ ।। 36 ।।

ಗುಣಭಾವಾತ್ಸೃಜ್ಯಮಾನಾತ್ಸರ್ಗಕಾಲೇ ತತಃ ಪುನಃ

ಪ್ರಧಾನಂ ತತ್ತ್ವಮುದ್ಭೂತಂ ಮಹಾಂತಂ ತತ್ಸಮಾವೃಣೋತ್ ।। 37 ।।

ಯಥಾ ಬೀಜಂ ತ್ವಚಾ ತದ್ವದವ್ಯಕ್ತೇನಾವೃತೋ ಮಹಾನ್

ಸಾತ್ತ್ವಿಕೋ ರಾಜಸಶ್ಚೈವ ತಾಮಸಶ್ಚ ತ್ರಿಧೋದಿತಃ ।। 38 ।।

ತತಸ್ತಸ್ಮಾದಹಂಕಾರಸ್ತ್ರಿವಿಧೋ ವೈ ವ್ಯಜಾಯತ

ವೈಕಾರಿಕಸ್ತೈಜಸಶ್ಚ ಭೂತಾದಿಶ್ಚ ಸತಾಮಸಃ ।। 38 ।।

ಮುನೇ! ಹಿಂದಿನ ಪ್ರಲಯದಲ್ಲಿ ಆ ಪ್ರಧಾನ ತತ್ತ್ವವು ಗುಣಸಾಮ್ಯರೂಪದಲ್ಲಿ ಕ್ಷೇತ್ರಜ್ಞನಲ್ಲಿಯೇ ಸಂಪೂರ್ಣವಾಗಿ ಸೇರಿಕೊಂಡಿತ್ತು. ನಂತರ ಪುನಃ ಸೃಷ್ಟಿಕಾಲದಲ್ಲಿ ಪ್ರಧಾನ ತತ್ತ್ವವು ಗುಣಸಾಮ್ಯಾವಸ್ಥೆಯನ್ನು ಬಿಟ್ಟು ಮಹತ್ತತ್ತ್ವವನ್ನು ಆವರಿಸಿಕೊಂಡಿತು. ಬೀಜವು ಹೊರಭಾಗದಲ್ಲಿ ಸಿಪ್ಪೆಯಿಂದ ಆವರಿಸಿಕೊಂಡಿರುವಂತೆ ಮಹತ್ತತ್ತ್ವವು ಪ್ರಧಾನದಿಂದ ಆವರಿಸಲ್ಪಟ್ಟಿತು. ಹಾಗೆ ಆವರಿಸಿಕೊಂಡ ಪ್ರಧಾನವು ಸಾತ್ತ್ವಿಕ, ರಾಜಸ ಮತ್ತು ತಾಮಸಗಳೆಂಬ ತ್ರಿಗುಣಯುಕ್ತವಾದುದು. ಆ ಮೂರು ಗುಣಗಳಿಂದ ಮೂರು ವಿಧದ ಅಹಂಕಾರಗಳು ಹುಟ್ಟಿದವು: ವೈಕಾರಿಕ, ತೈಜಸ ಮತ್ತು ತಾಮಸ ಅಥವಾ ಭೂತಾದಿ.

ಮಹತಾ ಚಾವೃತಃ ಸೋಽಪಿ ಯಥಾವ್ಯರಕ್ತೇನ ವೈ ಮಹಾನ್

ಭೂತಾದಿಸ್ತು ವಿಕುರ್ವಾಣಃ ಶಬ್ದತನ್ಮಾತ್ರಕಂ ತತಃ ।। 40 ।।

ಸಸರ್ಜ ಶಬ್ದತನ್ಮಾತ್ರಾದಾಕಾಶಂ ಶಬ್ದಲಕ್ಷಣಮ್

ಆಕಾಶಂ ಶಬ್ದಮಾತ್ರಂ ತು ಭೂತಾದಿಶ್ಚಾವೃಣೋತ್ತತಃ ।। 41 ।।

ಸ್ಪರ್ಶತನ್ಮಾತ್ರಮೇವೇಹ ಜಾಯತೇ ನಾತ್ರ ಸಂಶಯಃ

ಬಲವಾನ್ ಜಾಯತೇ ವಾಯುಸ್ತಸ್ಯ ಸ್ಪರ್ಶಗುಣೋ ಮತಃ ।। 42 ।।

ವಾಯುಶ್ಚಾಪಿ ವಿಕುರ್ವಾಣೋ ರೂಪಮಾತ್ರಂ ಸಸರ್ಜ ಹ

ಜ್ಯೋತಿರುತ್ಪದ್ಯತೇ ವಾಯೋಸ್ತದ್ರೂಪಗುಣಮುಚ್ಯತೇ ।। 43 ।।

ಮಹತ್ತತ್ತ್ವವು ಅವ್ಯಕ್ತ ಅಥವಾ ಪ್ರಧಾನ ತತ್ತ್ವದಿಂದ ಹೇಗೆ ಆವರಿಸಲ್ಪಟ್ಟಿದೆಯೋ ಹಾಗೆ ಮಹತ್ತತ್ತ್ವದಿಂದ ಆವರಿಸಲ್ಪಟ್ಟ ಭೂತಾದಿ ಅಥವಾ ತಾಮಸ ಅಹಂಕಾರವು ಸೃಷ್ಟಿಯಲ್ಲಿ ತೊಡಗಿ ಶಬ್ದತನ್ಮಾತ್ರವನ್ನು ಸೃಷ್ಟಿಸಿತು. ಶಬ್ದತನ್ಮಾತ್ರದಿಂದ ಅದು ಶಬ್ದಲಕ್ಷಣದ ಆಕಾಶವನ್ನು ಸೃಷ್ಟಿಸಿತು. ನಂತರ ಭೂತಾದಿ ಅಥವಾ ತಮಾಸಾಹಂಕಾರವು ತಾನು ಸೃಷ್ಟಿಸಿದ ಶಬ್ದತನ್ಮಾತ್ರ-ಆಕಾಶಗಳನ್ನು ಆವರಿಸಿಕೊಂಡಿತು. ಆಕಾಶದಿಂದಲೇ ಸ್ಪರ್ಶ ತನ್ಮಾತ್ರವು ಹುಟ್ಟಿತು ಎನ್ನುವುದರಲ್ಲಿ ಸಂಶಯವಿಲ್ಲ. ಆ ಸ್ಪರ್ಶತನ್ಮಾತ್ರದಿಂದ ಸ್ಪರ್ಶಗುಣಯುವಾದ ಬಲವಾನ್ ವಾಯುವು ಹುಟ್ಟುತ್ತದೆ. ವಾಯುವೂ ಕೂಡ ವಿಕಾರಹೊಂದಿ ರೂಪತನ್ಮಾತ್ರವನ್ನು ಸೃಷ್ಟಿಸಿತು. ವಾಯುವಿನಿಂದ ರೂಪಗುಣಯುಕ್ತವಾದ ಜ್ಯೋತಿಯು ಉತ್ಪತ್ತಿಯಾಗುತ್ತದೆ ಎಂದು ಹೇಳುತ್ತಾರೆ.

ಸ್ಪರ್ಶಮಾತ್ರಸ್ತು ವೈ ವಾಯೂ ರೂಪಮಾತ್ರಂ ಸಮಾವೃಣೋತ್

ಜ್ಯೋತಿಶ್ಚಾಪಿ ವಿಕುರ್ವಾಣಂ ರಸಮಾತ್ರಂ ಸಸರ್ಜ ಹ ।। 44 ।।

ಸಂಭವಂತಿ ತತೋ ಹ್ಯಾಪಶ್ಚಾಸನ್ವೈತಾ ರಸಾತ್ಮಿಕಾಃ

ರಸಮಾತ್ರಂ ತು ತಾ ಹ್ಯಾಪೋ ರೂಪಮಾತ್ರಂ ಸಮಾವೃಣೋತ್ ।। 45 ।।

ಆಪಶ್ಚಾಪಿ ವಿಕುರ್ವತ್ಯೋ ಗಂಧಮಾತ್ರಂ ಸಸರ್ಜಿರೇ

ಸಂಘಾತೋ ಜಾಯತೇ ತಸ್ಮಾತ್ತಸ್ಯ ಗಂಧೋ ಗುಣೋ ಮತಃ ।। 46 ।।

ತಸ್ಮಿಂಸ್ತಸ್ಮಿಂಸ್ತು ತನ್ಮಾತ್ರಂ ತೇನ ತನ್ಮಾತ್ರತಾ ಸ್ಮೃತಾ

ಅವಿಶೇಷವಾಚಕತ್ವಾದವಿಶೇಷಾಸ್ತತಶ್ಚ ತೇ ।। 47 ।।

ನ ಶಾಂತಾ ನಾಪಿ ಘೋರಾಸ್ತೇ ನ ಮೂಢಾಶ್ಚಾವಿಶೇಷತಃ

ಭೂತತನ್ಮಾತ್ರಸರ್ಗೋಽಯಮಹಂಕಾರಾತ್ತು ತಾಮಸಾತ್ ।। 48 ।।

ಸ್ಪರ್ಶತನ್ಮಾತ್ರ ವಾಯುವು ರೂಪತನ್ಮಾತ್ರ-ಜ್ಯೋತಿಗಳನ್ನು ಆವರಿಸಿಕೊಂಡು ವಿಕಾರಹೊಂದಿ ರಸತನ್ಮಾತ್ರವನ್ನು ಸೃಷ್ಟಿಸಿತು. ಅದರಿಂದ ರಸಾತ್ಮಿಕವಾದ ಜಲತತ್ತ್ವವು ಹುಟ್ಟುತ್ತದೆ. ರಸತನ್ಮಾತ್ರಸ್ವರೂಪೀ ಜಲವನ್ನು ರೂಪತನ್ಮಾತ್ರಸ್ವರೂಪೀ ಜ್ಯೋತಿಯು ಆವರಿಸಿಕೊಂಡಿತು. ಜಲತತ್ತ್ವವೂ ವಿಕಾರಹೊಂದಿ ಗಂಧ ತನ್ಮಾತ್ರವನ್ನು ಸೃಷ್ಟಿಸಿತು. ತನ್ಮೂಲಕವಾಗಿ ಸಂಘಾತರೂಪದ ಪೃಥ್ವಿಯು ಹುಟ್ಟಿತು. ಪೃಥ್ವಿಯಲ್ಲಿ ಗಂಧವೆಂಬ ಗುಣವಿದೆಯೆಂದು ಮತವು. ಆಕಾಶ ಮೊದಲಾದ ಭೂತತತ್ತ್ವಗಳಲ್ಲಿ ನಿಜವಾಗಿ ಶಬ್ದ ಮೊದಲಾದವುಗಳು ಮಾತ್ರ ಇರುವುದರಿಂದ ಅವುಗಳಿಗೆ ತನ್ಮಾತ್ರಗಳೆಂಬ ಹೆಸರಿವೆ. ಆ ತನ್ಮಾತ್ರಗಳು ಯಾವುದೇ ವಿಶೇಷವನ್ನು ತಿಳಿಸದೇ ಇರುವುದರಿಂದ ಅವಕ್ಕೆ ಅವಿಶೇಷಗಳು ಎಂಬ ಹೆಸರೂ ಇದೆ. ಆ ತನ್ಮಾತ್ರಗಳು ಶಾಂತ-ಘೋರ-ಮೂಡ ಎಂದೆನಿಸಿಕೊಳ್ಳುವುದಿಲ್ಲ. ಅವುಗಳಲ್ಲಿ ಅನ್ಯೋನ್ಯ ವಿಲಕ್ಷಣತೆಯನ್ನು ತೋರಿಸುವ ವಿಶೇಷವಿರುವುದಿಲ್ಲ. ಹೀಗೆ ತಾಮಸಾಹಂಕಾರದಿಂದ ತನ್ಮಾತ್ರಗಳಿಂದ ಕೂಡಿದ ಪಂಚಭೂತಗಳ ಉತ್ಪತ್ತಿಯಾಗುತ್ತದೆ.

ವೈಕಾರಿಕಾದಹಂಕಾರಾತ್ಸತ್ತ್ವೋದ್ರಿಕ್ತಾತ್ತು ಸಾತ್ತ್ವಿಕಾತ್

ವೈಕಾರಿಕಃ ಸ ಸರ್ಗಸ್ತು ಯುಗಪತ್ಸಂಪ್ರವರ್ತತೇ ।। 49 ।।

ಬುದ್ಧೀಂದ್ರಿಯಾಣಿ ಪಂಚೈವ ಪಂಚ ಕರ್ಮೇಂದ್ರಿಯಾಣಿ ಚ

ತೈಜಸಾನೀಂದ್ರಿಯಾಣ್ಯಾಹುರ್ದೇವಾ ವೈಕಾರಿಕಾ ದಶ ।। 50 ।।

ಏಕಾದಶಂ ಮನಸ್ತತ್ರ ದೇವಾ ವೈಕಾರಿಕಾಃ ಸ್ಮೃತಾಃ

ಶ್ರೋತ್ರಂ ತ್ವಕ್ಚಕ್ಷುಷೀ ಜಿಹ್ವಾ ನಾಸಿಕಾ ಚೈವ ಪಂಚಮೀ ।। 51 ।।

ಶಬ್ದಾದೀನಾಮವಾಪ್ತ್ಯರ್ಥಂ ಬುದ್ಧಿಯುಕ್ತಾನಿ ವಕ್ಷ್ಯತೇ

ಪಾದೌ ಪಾಯುರುಪಸ್ಥಶ್ಚ ಹಸ್ತೌ ವಾಕ್ ಪಂಚಮೀ ಭವೇತ್ ।। 52 ।।

ಗತಿರ್ವಿಸರ್ಗೋ ಹ್ಯಾನಂದಃ ಶಿಲ್ಪಂ ವಾಕ್ಯಂಚ ಕರ್ಮ ತತ್

ಸತ್ತ್ವಗುಣದ ಉದ್ರೇಕವಿರುವುದರಿಂದ ಸಾತ್ತ್ವಿಕವೆಂದು ಕರೆಯಲ್ಪಡುವ ವೈಕಾರಿಕ ಅಹಂಕಾರದಿಂದ ಬುದ್ಧಿಯ ವೈಕಾರಿಕಸೃಷ್ಟಿಯು ಒಟ್ಟಿಗೇ ನಡೆಯುತ್ತದೆ. ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳು ತೈಜಸ ಅಹಂಕಾರದಿಂದ ಹುಟ್ಟಿದವೆ ಎಂದು ಹೇಳುತ್ತಾರೆ. ಅವುಗಳಿಗೆ ಸಂಬಂಧಿಸಿದ ಹತ್ತು ಶಕ್ತಿಗಳನ್ನು ವೈಕಾರಿಕ ದೇವತೆಗಳೆಂದೂ ಹೇಳುತ್ತಾರೆ. ಮನಸ್ಸನ್ನೂ ಸೇರಿಸಿ ಹನ್ನೊಂದು ವೈಕಾರಿಕ ದೇವತೆಗಳೆಂದು ಹೇಳಿದ್ದಾರೆ. ಶ್ರೋತ್ರ, ತ್ವಕ್, ಚಕ್ಷು, ಜಿಹ್ವಾ ಮತ್ತು ನಾಸಿಕಾ ಇವು ಐದು ಜ್ಞಾನೇಂದ್ರಿಯಗಳು. ಶಬ್ದ ಮೊದಲಾದ ವಿಷಯಗಳನ್ನು ಗ್ರಹಿಸುವುದಕ್ಕಾಗಿ ಶ್ರೋತ್ರಾದಿ ಇಂದ್ರಿಯಗಳಿರುವುದರಿಂದ ಅವುಗಳನ್ನು ಜ್ಞಾನೇಂದ್ರಿಯಗಳೆಂದು ಹೇಳುತ್ತಾರೆ. ಪಾದ-ಪಾಯು-ಉಪಸ್ಥ-ಪಾಣಿ ಮತ್ತು ವಾಕ್ ಇವು ಐದು ಕರ್ಮೇಂದ್ರಿಯಗಳು. ಈ ಕರ್ಮೇಂದ್ರಿಯಗಳಿಗೆ ಕ್ರಮವಾಗಿ ಗಮನ-ವಿಸರ್ಜನೆ-ಆನಂದ-ಶಿಲ್ಪಕರ್ಮ ಮತ್ತು ವಾಕ್ಯ ಎನ್ನುವ ಐದು ಕರ್ಮಗಳಿವೆ.

ಆಕಾಶಂ ಶಬ್ದಮಾತ್ರಂ ತು ಸ್ಪರ್ಶಮಾತ್ರಂ ಸಮಾವಿಶತ್ ।। 53 ।।

ದ್ವಿಗುಣೋ ಜಾಯತೇ ವಾಯುಸ್ತಸ್ಯ ಸ್ಪರ್ಶೋ ಗುಣೋ ಮತಃ

ರೂಪಂ ತಥೈವಾವಿಶತಃ ಶಬ್ದಸ್ಪರ್ಶಗುಣಾವುಭೌ ।। 54 ।।

ತ್ರಿಗುಣಸ್ತು ತತಶ್ಚಾಗ್ನಿಃ ಸ ಶಬ್ದಸ್ಪರ್ಶರೂಪವಾನ್

ಶಬ್ದಃ ಸ್ಪರ್ಶಶ್ಚ ರೂಪಂಚ ರಸಮಾತ್ರಂ ಸಮಾವಿಶತ್ ।। 55 ।।

ತಸ್ಮಾಚ್ಚತುರ್ಗುಣಾ ಹ್ಯಾಪೋ ವಿಜ್ಞೇಯಾಸ್ತಾ ರಸಾತ್ಮಿಕಾಃ

ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧಂ ಸಮಾವಿಶತ್ ।। 56 ।।

ಸಂಹತಾ ಗಂಧಮಾತ್ರೇಣ ಆವೃಣ್ವಂಸ್ತೇ ಮಹೀಮಿಮಾಮ್

ತಸ್ಮಾತ್ಪಂಚಗುಣಾ ಭೂಮಿಃ ಸ್ಥೂಲಾ ಭೂತೇಷು ದೃಶ್ಯತೇ ।। 57 ।।

ಶಾಂತಾ ಘೋರಾಶ್ಚ ಮೂಢಾಶ್ಚ ವಿಶೇಷಾಸ್ತೇನ ತೇ ಸ್ಮೃತಾಃ

ಪರಸ್ಪರಾನುಪ್ರವೇಶಾದ್ಧಾರಯಂತಿ ಪರಸ್ಪರಮ್ ।। 58 ।।

ಭೂಮೇರಂತಸ್ತ್ವಿದಂ ಸರ್ವಂ ಲೋಕಾಲೋಕಂ ಘನಾವೃತಮ್ ।। 59 ।।

ಆಕಾಶದ ಶಬ್ದತನ್ಮಾತ್ರವು ಸ್ಪರ್ಶತನ್ಮಾತ್ರವನ್ನು ಸೇರಿದುದರಿಂದ ವಾಯುವಿಗ ಇರಡು ಗುಣಗಳು-  ಶಬ್ದ ಮತ್ತು ಸ್ಪರ್ಶ – ಇವೆ ಎಂದಿದೆ. ಹಾಗೆಯೇ ಶಬ್ದ ಮತ್ತು ಸ್ಪರ್ಶಗುಣಗಳು ರೂಪತನ್ಮಾತ್ರವನ್ನು ಆವೇಶಗೊಳ್ಳಲು ಅಗ್ನಿಯು ಶಬ್ದ, ಸ್ಪರ್ಶ ಮತ್ತು ರೂಪಗಳೆಂಬ ಮೂರು ಗುಣಗಳುಳ್ಳದ್ದಾಗುತ್ತದೆ. ಶಬ್ದ, ಸ್ಪರ್ಶ ಮತ್ತು ರೂಪಗಳು ರಸವನ್ನು ಪ್ರವೇಶಿಸುತ್ತವೆಯಾದ್ದರಿಂದ ರಸಾತ್ಮಿಕವಾದ ಜಲವು ಈ ನಾಲ್ಕೂ ಗುಣಗಳನ್ನು (ಶಬ್ದ, ಸ್ಪರ್ಶ, ರೂಪ ಮತ್ತು ರಸ) ಹೊಂದಿದೆ ಎಂದು ತಿಳಿಯಬೇಕು. ಶಬ್ದ, ಸ್ಪರ್ಶ, ರೂಪ ಮತ್ತು ರಸ ತನ್ಮಾತ್ರಗಳು ಗಂಧತನ್ಮಾತ್ರದಲ್ಲಿ ಆವೇಶಗೊಂಡವು. ಇವುಗಳಿಂದ ಕೂಡಿದ ಗಂಧತನ್ಮಾತ್ರವು ಈ ಭೂಮಿಯನ್ನು ಆವರಿಸಿದವು. ಅದರಿಂದಾದ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧವೆಂಬ ಐದು ಗುಣಗಳಿಂದ ಕೂಡಿದ ಭೂಮಿಯು ಪಂಚಭೂತಗಳಲ್ಲಿ ಸ್ಥೂಲವಾಗಿ ಕಾಣುತ್ತದೆ. ಶಾಂತ, ಘೋರ ಮತ್ತು ಮೂಢರೂಪವಾದ ಭೂತತತ್ತ್ವಗಳು ಪರಸ್ಪರರನ್ನು ಪ್ರವೇಶಿಸಿ ಪರಸ್ಪರರನ್ನು ಉದ್ಧರಿಸಿರುತ್ತವೆ. ಈ ಭೂಮಿಯು ಅದನ್ನು ಆವರಿಸಿರುವ ಘನವಾದ ಲೋಕಾಲೋಕಪರ್ವತದಲ್ಲಿ ಕೊನೆಗೊಳ್ಳುತ್ತದೆ.

ವಿಶೇಷಾಶ್ಚೇಂದ್ರಿಯಗ್ರಾಹ್ಯಾ ನಿಯತತ್ವಾಚ್ಚ ತೇ ಸ್ಮೃತಾಃ

ಗುಣಂ ಪೂರ್ವಸ್ಯ ಪೂರ್ವಸ್ಯ ಪ್ರಾಪ್ನುವಂತ್ಯುತ್ತರೋತ್ತರಮ್ ।। 60 ।।

ನಾನಾವೀರ್ಯಾಃ ಪೃಥಗ್ಭೂತಾಃ ಸಪ್ತೈತೇ ಸಂಹತಿಂ ವಿನಾ

ನಾಶಕ್ನುವನ್ ಪ್ರಜಾಃ ಸ್ತ್ರಷ್ಟುಮಸಮಾಗಮ್ಯ ಕೃತ್ಸ್ನಶಃ ।। 61 ।।

ಸಮೇತ್ಯಾನ್ಯೋನ್ಯಸಂಯೋಗಮನ್ಯೋನ್ಯಾಶ್ರಯಿಣಶ್ಚ ತೇ

ಏಕಸಂಘಾತಚಿಹ್ನಾಶ್ಚ ಸಂಪ್ರಾಪ್ಯೈಕ್ಯಮಶೇಷತಃ ।। 62 ।।

ಪುರುಷಾಧಿಷ್ಠಿತತ್ವಾಚ್ಚ ಅವ್ಯಕ್ತಾನುಗ್ರಹೇಣ ಚ

ಮಹದಾದ್ಯಾ ವಿಶೇಷಾಂತಾ ಹ್ಯಂಡಮುತ್ಪಾದಯಂತಿ ತೇ ।। 63 ।।

ಇಂದ್ರಿಯಗಳಿಗೆ ಗ್ರಾಹ್ಯಗಳಾದ ಶಬ್ದ, ಸ್ಪರ್ಶ ಮೊದಲಾದ ತನ್ಮಾತ್ರಗಳು ಆಯಾಯಾ ಇಂದ್ರಿಯಗಳಿಗೆ ಮಾತ್ರ ನಿಯಮಿತವಾಗಿದ್ದುಕೊಂಡು ವೇದ್ಯವಾಗುವುದರಿಂದ ಅವುಗಳನ್ನು ವಿಶೇಷಗಳೆಂದು ಕರೆಯುತ್ತಾರೆ. ನಂತರ ಬರುವ ತನ್ಮಾತ್ರಗಳು ಅವುಗಳ ಹಿಂದಿನ ತನ್ಮಾತ್ರಗಳ ಗುಣಗಳನ್ನು ಪಡೆಯುತ್ತವೆ. [1] ನಾನಾ ವೀರ್ಯಗಳನ್ನುಳ್ಳ ಈ ಏಳು ತತ್ತ್ವಗಳು[2] ಒಂದರಲ್ಲಿ ಮತ್ತೊಂದು ಸಂಪೂರ್ಣವಾಗಿ ಬೆರೆತು ಸಂಘಾತರೂಪವನ್ನು ಪಡೆಯದ ವಿನಃ ಬೇರೆ ಬೇರೆಯಾಗಿದ್ದುಕೊಂಡು ಪ್ರಜಾಸೃಷ್ಟಿಯನ್ನು ಮಾಡಲು ಅಸಮರ್ಥವಾಗುತ್ತವೆ. ಅನ್ಯೋನ್ಯರನ್ನು ಸೇರಿ ಅನ್ಯೋನ್ಯರ ಸಂಯೋಗದಿಂದ ಅನ್ಯೋನ್ಯರ ಗುಣಗಳನ್ನು ಪಡೆದು ಒಂದು ಸಂಘಾತರೂಪದ ಚಿಹ್ನೆಯನ್ನು ಹೊಂದಿ ಸಂಪೂರ್ಣವಾಗಿ ಐಕ್ಯವನ್ನು ಹೊಂದಿರುತ್ತವೆ. ಹೀಗೆ ಸಂಪೂರ್ಣವಾಗಿ ಐಕ್ಯವನ್ನು ಹೊಂದಿದ ಮಹತ್ತತ್ವ ಮೊದಲಾದ ತತ್ತ್ವಗಳು ಮೂಲಕಾರಣವಾದ ಅವ್ಯಕ್ತತತ್ತ್ವದ ಅನುಗ್ರಹದಿಂದಲೂ, ಪುರುಷತತ್ತ್ವದ ನಿಯಾಮಕತ್ವದಿಂದಲೂ ಬ್ರಹ್ಮಾಂಡವನ್ನು ಸೃಷ್ಟಿಮಾಡುತ್ತದೆ.

ಜಲಬುದ್ಬುದವತ್ತತ್ರ ಕ್ರಮಾದ್ವೈ ವೃದ್ಧಿಮಾಗತಮ್

ಭೂತೇಭ್ಯೋಽಂಡಂ ಮಹಾಬುದ್ಧೇ ಬೃಹತ್ತದುದಕೇಶಯಮ್ ।। 64 ।।

ಪ್ರಾಕೃತೇಽಂಡೇ ವಿವೃದ್ಧಃ ಸನ್ ಕ್ಷೇತ್ರಜ್ಞೋ ಬ್ರಹ್ಮಸಂಜ್ಞಿತಃ ।। 65 ।।

ಸ ವೈ ಶರೀರೀ ಪ್ರಥಮಃ ಸ ವೈ ಪುರುಷ ಉಚ್ಯತೇ

ಆದಿಕರ್ತಾ ಚ ಭೂತಾನಾಂ ಬ್ರಹ್ಮಾಗ್ರೇ ಸಮವರ್ತತ ।। 66 ।।

ತೇನ ಸರ್ವಮಿದಂ ವ್ಯಾಪ್ತಂ ತ್ರೈಲೋಕ್ಯಂ ಸಚರಾಚರಮ್

ಮೇರುಸ್ತಸ್ಯಾನುಸಂಭೂತೋ ಜರಾಯುಶ್ಚಾಪಿ ಪರ್ವತಾಃ ।। 67 ।।

ಸಮುದ್ರಾ ಗರ್ಭಸಲಿಲಂ ತಸ್ಯಾಂಡಸ್ಯ ಮಹಾತ್ಮನಃ

ತಸ್ಮಿನ್ನಂಡೇ ಜಗತ್ಸರ್ವಂ ಸದೇವಾಸುರಮಾನುಷಮ್ ।। 68 ।।

ದ್ವೀಪಾದ್ಯದ್ರಿಸಮುದ್ರಾಶ್ಚ ಜ್ಯೋತಿರ್ಲೋಕಸಂಗ್ರಹಃ ।। 69 ।।

ಮಹಾಬುದ್ಧೇ! ಈ ಭೂತತತ್ತ್ವಗಳಿಂದಾದ, ಆ ಅಪಾರನೀರಿನಲ್ಲಿ ಬೃಹದಾಕರದ ಬ್ರಹ್ಮಾಂಡವು ನೀರಿನ ಗುಳ್ಳೆಯಂತೆ ಕ್ರಮೇಣವಾಗಿ ವೃದ್ಧಿಯನ್ನು ಹೊಂದಿತು. ಪ್ರಾಕೃತವಾದ ಆ ಅಂಡದಲ್ಲಿ ಬ್ರಹ್ಮ ಎಂಬ ಹೆಸರಿನ ಕ್ಷೇತ್ರಜ್ಞನು ವೃದ್ಧಿಹೊಂದಿದನು. ಅವನೇ ಪ್ರಥಮ ಶರೀರಿಯೆಂದೂ ಪುರುಷನೆಂದೂ ಹೇಳುತ್ತಾರೆ. ಹೀಗೆ ಸರ್ವ ಭೂತಗಳ ಆದಿಕರ್ತ ಬ್ರಹ್ಮನು ಮೊದಲು ಜನಿಸಿದನು. ಸಚರಾಚರ ಈ ಮೂರು ಲೋಕಗಳೂ ಅವನಿಂದ ವ್ಯಾಪ್ತವಾಗಿವೆ. ಹಾಗೆ ಆವಿರ್ಭವಿಸಿದ ಬ್ರಹ್ಮನಲ್ಲಿ ಮೇರು ಮತ್ತು ಇತರ ಪರ್ವತಗಳು ಗರ್ಭಕೋಶದಂತೆ ಬೆಳೆದವು. ಮಹಾತ್ಮನಾದ ಅವನ ಅಂಡಕ್ಕೆ ಸಮುದ್ರಗಳು ಗರ್ಭೋದಕದಂತಿದ್ದವು. ಆ ಅಂಡದಲ್ಲಿ ದೇವಾಸುರಮನುಷ್ಯರನ್ನು ಹೊಂದಿರುವ ಈ ಜಗತ್ತೆಲ್ಲವೂ ಕಾಣಿಸಿತು. ಈ ಲೋಕಸಂಗ್ರಹವು ದ್ವೀಪಗಳು, ಪರ್ವತಗಳು, ಸಮುದ್ರಗಳು, ಮತ್ತು ಜ್ಯೋತಿರ್ಮಂಡಲಗಳನ್ನು ಕೂಡಿದೆ.

ಜಲಾನಿಲಾನಲಾಕಾಶೈಸ್ತತೋ ಭೂತಾದಿನಾ ಬಹಿಃ

ವೃತಮಂಡಂ ದಶಗುಣೈರೇಕೇಕೈಕತ್ವೇನ ತೈಃ ಪುನಃ ।। 70 ।।

ಮಹತಾ ತತ್ಪ್ರಮಾಣೇನ ಸಹೈವಾನೇನ ವೇಷ್ಟಿತಃ

ಮಹಾಂಸ್ತೈಃ ಸಹಿತಃ ಸರ್ವೈರವ್ಯಕ್ತೇನ ಸಮಾವೃತಃ ।। 71 ।।

ಏಭಿರಾವರಣೈರಂಡಂ ಸಪ್ತಭೈಃ ಪ್ರಾಕೃತೈರ್ವೃತಮ್

ಅನ್ಯೋನ್ಯಮಾವೃತ್ಯ ಚ ತಾ ಅಷ್ಟೌ ಪ್ರಕೃತಯಃ ಸ್ಥಿತಾಃ ।। 72 ।।

ಪುನಃ ಈ ಬ್ರಹ್ಮಾಂಡವು ಹೊರವಲಯದಲ್ಲಿ ಕ್ರಮವಾಗಿ ಜಲ, ತೇಜಸ್ಸು, ವಾಯು, ಆಕಾಶ ಮತ್ತು ಭೂತಾದಿ ತತ್ತ್ವಗಳಿಂದ, ಒಂದೊಂದೂ ಹತ್ತತ್ತು ಪಟ್ಟು ಆವರಿಸಲ್ಪಟ್ಟಿದೆ. ಭೂತಾದಿಯಿಂದ ಆವರಿಸಲ್ಪಟ್ಟ ವಲಯವು ಹಾಗೆಯೇ ಹತ್ತುಪಟ್ಟು ಮಹತ್ತತ್ತ್ವದಿಂದ ಆವರಿಸಲ್ಪಟ್ಟಿದೆ. ಸಮಸ್ತ ತತ್ತ್ವಗಳಿಂದ ಗರ್ಭಿತವಾದ ಮಹತ್ತತ್ತ್ವವು ಹೊರಗಡೆಯಿಂದ ಅವ್ಯಕ್ತತತ್ತ್ವದಿಂದ ಆವರಿಸಲ್ಪಟ್ಟಿದೆ. ಹೀಗೆ ಪ್ರಾಕೃತವಾದ ಏಳು ಬಾಹ್ಯಾವರಣಗಳಿಂದ ಬ್ರಹ್ಮಾಂಡವು ಸುತ್ತುವರೆಯಲ್ಪಟ್ಟಿದೆ. ಅವ್ಯಕ್ತತತ್ತ್ವವೂ ಸೇರಿ ಎಂಟು ತತ್ತ್ವಗಳು ಅನ್ಯೋನ್ಯವಾಗಿ ಆವರಿಸಿಕೊಂಡಿದ್ದು ಸಮಸ್ತ ಜಗತ್ತಿಗೆ ಕಾರಣಗಳಾಗಿರುವವು.

ಏಷಾ ಸಾ ಪ್ರಕೃತಿರ್ನಿತ್ಯಾ ಯದಂತಃ ಪುರುಷಶ್ಚ ಸಃ

ಬ್ರಹ್ಮಾಖ್ಯಃ ಕಥಿತೋ ಯಸ್ತೇ ಸಮಾಸಾಚ್ಛ್ರೂಯತಾಂ ಪುನಃ ।। 73 ।।

ಯಥಾ ಮಗ್ನೋ ಜಲೇ ಕಶ್ಚಿದುನ್ಮಜ್ಜನ್ ಜಲಸಂಭವಃ

ಜಲಂಚ ಕ್ಷಿಪತಿ ಬ್ರಹ್ಮಾ ಸ ತಥಾ ಪ್ರಕೃತಿರ್ವಿಭು ।। 74 ।।

ಅವ್ಯಕ್ತಂ ಕ್ಷೇತ್ರಮುದಿಷ್ಟಂ ಬ್ರಹ್ಮಾ ಕ್ಷೇತ್ರಜ್ಞ ಉಚ್ಯತೇ

ಏತತ್ಸಮಸ್ತಂ ಜಾನೀಯಾತ್ ಕ್ಷೇತ್ರಕ್ಷೇತ್ರಜ್ಞಲಕ್ಷಣಮ್ ।। 75 ।।

ಇತ್ಯೇಷ ಪ್ರಾಕೃತಃ ಸರ್ಗಃ ಕ್ಷೇತ್ರಜ್ಞಾಧಿಷ್ಠಿತಸ್ತು ಸಃ

ಅಬುದ್ಧಿಪೂರ್ವಃ ಪ್ರಥಮಃ ಪ್ರಾದುರ್ಭೂತಸ್ತಡಿದ್ಯಥಾ ।। 76 ।।

ಇಂಥಹ ತತ್ತ್ವಸಮಷ್ಟಿರೂಪವಾದ ಪ್ರಕೃತಿಯು ನಿತ್ಯವಾದುದು. ಅದರ ಒಳಗೆ ಇರುವುದು ಕ್ಷೇತ್ರಜ್ಞನೆನಿಸಿರುವ ಪುರುಷನು ನಿತ್ಯಸ್ವರೂಪನಾಗಿದ್ದಾನೆ. ಬ್ರಹ್ಮನೆಂಬ ನಾಮಾಂಕನವಿರುವ ಕ್ಷೇತ್ರಜ್ಞನ ವಿಷಯದಲ್ಲಿ ಮತ್ತೊಂದು ಸಂಗ್ರಹ ವಚನವನ್ನು ಕೇಳು. ನೀರಿನಲ್ಲಿ ಮುಳುಗಿರುವವನು ನೀರಿನಿಂದ ಮೇಲಕ್ಕೆ ಏಳುವ ಸಮಯದಲ್ಲಿ ಹೇಗೆ ನೀರಿನ ವಲಯವನ್ನು ಸೃಷ್ಟಿಸುತ್ತಾನೋ ಅದರಂತೆ ಬ್ರಹ್ಮನು ತನ್ನ ಹೊರಗೆ ವ್ಯಾಪಿಸಿರುವ ಪ್ರಕೃತಿತತ್ತ್ವಗಳಲ್ಲಿ ಸೃಷ್ಟಿಸುತ್ತಾನೆ. ಮೂಲಕಾರಣವಾದ ಅವ್ಯಕ್ತತತ್ತ್ವವು ಕ್ಷೇತ್ರವೆಂದು ಕರೆಯಲ್ಪಟ್ಟಿದೆ. ಬ್ರಹ್ಮನು ಕ್ಷೇತ್ರಜ್ಞ ಎಂದಿದೆ. ಹೀಗೆ ಕ್ಷೇತ್ರ-ಕ್ಷೇತ್ರಜ್ಞಗಳ ಲಕ್ಷಣವನ್ನು ಸಂಪೂರ್ಣವಾಗಿ ಅರಿಯಬೇಕು. ಕ್ಷೇತ್ರಜ್ಞನ ಸಮಾವೇಶದಿಂದ ಪ್ರಕೃತಿಗಳಿಂದ ಆಗುವ ಸೃಷ್ಟಿಯು ಪ್ರಾಕೃತಸೃಷ್ಟಿಯು. ಇದು ಬುದ್ಧಿಪೂರ್ವಕವಾಗಿಲ್ಲದ ಮೊದಲನೇ ಸೃಷ್ಟಿಯು. ಮೋಡದಲ್ಲಿ ಕಾಣಿಸಿಕೊಂಡ ಮಿಂಚಿನಂತೆ ಈ ಸೃಷ್ಟಿಯು ಕಂಡುಬರುತ್ತದೆ.”

 

ಇತಿ ಶ್ರೀಮಾರ್ಕಂಡೇಯಪುರಾಣೇ ಬ್ರಹ್ಮೋತ್ಪತಿರ್ನಾಮ ದ್ವಿಚತ್ವಾರಿಂಶೋಽಧ್ಯಾಯಃ ।।

[1] ಶ್ರೋತ್ರೇಂದ್ರಿಯವು ಕೇವಲ ಶಬ್ದವನ್ನು ಕೇಳಬಲ್ಲದೇ ಹೊರತು ರೂಪವನ್ನು ನೋಡಲಿಕ್ಕಾಗುವುದಿಲ್ಲ. ಒಂದರ ಕೆಲಸವನ್ನು ಇನ್ನೊಂದು ಮಾಡುವುದಿಲ್ಲ. ಆದರೆ ಶಬ್ದಕ್ಕೆ ಕಾರಣವಾದ ಆಕಾಶತತ್ತ್ವವು ಕೇವಲ ಶಬ್ದಗುಣವನ್ನು ಹೊಂದಿದೆ. ಅದರ ನಂತರದ ವಾಯುತತ್ತ್ವವು ಶಬ್ದ ಮತ್ತು ಸ್ಪರ್ಶಗುಣಗಳೆರಡನ್ನೂ ಪಡೆದಿದೆ. ಹಾಗೆಯೇ ನಂತರದ ಅಗ್ನಿತತ್ತ್ವವು ತನ್ನದೇ ಗುಣವಾದ ರೂಪದ ಜೊತೆಗೆ ತನ್ನ ಹಿಂದಿನ ತತ್ತ್ವಗಳಾದ ಆಕಾಶ ಮತ್ತು ವಾಯುತತ್ತ್ವಗಳ ಗುಣಗಳಾದ ಶಬ್ದ ಮತ್ತು ಸ್ಪರ್ಶಗುಣಗಳನ್ನೂ ಹೊಂದಿದೆ. ಹೀಗೆಯೇ ಕೊನೆಯ ತತ್ತ್ವವಾದ ಪೃಥ್ವೀತತ್ತ್ವವು ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಈ ಐದೂ ಗುಣಗಳನ್ನು ಹೊಂದಿರುತ್ತದೆ.

[2] ಆಕಾಶ, ವಾಯು, ಅಗ್ನಿ, ಜಲ, ಮತ್ತು ಪೃಥಿವೀ ಈ ಐದು ತತ್ತ್ವಗಳು, ಆರನೆಯದಾಗಿ ಅವುಗಳನ್ನು ಆವರಿಸಿರುವ ಪ್ರಧಾನ ಮತ್ತು ಏಳನೆಯದಾಗಿ ಪ್ರಧಾನವನ್ನು ಆವರಿಸಿಕೊಂಡಿರುವ ಮಹತ್ತತ್ವ.

ಶ್ರೀಮಾರ್ಕಂಡೇಯ ಮಹಾಪುರಾಣದ ಇತರ ಅಧ್ಯಾಯಗಳು:
  1. ಅಧ್ಯಾಯ 43: ಬ್ರಹ್ಮಾಯುಪ್ರಮಾಣಕಥನಮ್

Leave a Reply

Your email address will not be published. Required fields are marked *