ಅರ್ಜುನನಿಂದ ನಿವಾತಕವಚರ ವಧೆ ಮತ್ತು ಹಿರಣ್ಯಪುರಿಯ ನಾಶ

ಇತ್ತ ಇಂದ್ರಲೋಕದಲ್ಲಿ ಅರ್ಜುನನು ಅಸ್ತ್ರಗಳನ್ನು ಕಲಿತು ವಿಶ್ವಾಸಗೊಂಡ ನಂತರ ಹರಿವಾಹನ ಇಂದ್ರನು ಅವನ ನೆತ್ತಿಯ ಮೇಲೆ ತನ್ನ ಎರಡೂ ಕೈಗಳನ್ನಿಟ್ಟು ಹೇಳಿದನು: “ಇಂದು ನಿನ್ನನ್ನು ಸುರಗಣಗಳೂ ಜಯಿಸಲು ಶಕ್ಯವಿಲ್ಲ. ಇನ್ನು ಕೃತಾತ್ಮರಾಗಿರದ ಮನುಷ್ಯಲೋಕದ ಮನುಷ್ಯರೆಲ್ಲಿ? ನೀನು ಅಪ್ರಮೇಯ. ಯುದ್ಧದಲ್ಲಿ ಅಪ್ರತಿಮ ಮತ್ತು ದುರ್ಧರ್ಷನಾಗಿದ್ದೀಯೆ.” ಪುನಃ ಆ ದೇವನು ಮೈನವಿರೇಳಿಸುವಷ್ಟು ಸಂತೋಷಗೊಂಡು ಅರ್ಜುನನಿಗೆ ಹೇಳಿದನು: “ವೀರ! ಅಸ್ತ್ರಯುದ್ಧದಲ್ಲಿ ನಿನಗೆ ಸಮನಾಗಿರುವವರು ಯಾರೂ ಇರುವುದಿಲ್ಲ. ನೀನು ಸದಾ ಅಪ್ರಮತ್ತ, ದಕ್ಷ, ಸತ್ಯವಾದೀ, ಜಿತೇಂದ್ರಿಯ, ಬ್ರಹ್ಮಣ್ಯ ಮತ್ತು ಅಸ್ತ್ರಗಳನ್ನು ತಿಳಿದುಕೊಂಡಿರುವ ಶೂರ. ನೀನು ಹದಿನೈದು ಅಸ್ತ್ರಗಳ ಐದೂ ವಿಧಿಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದೀಯೆ. ನಿನ್ನ ಸಮನಾದವರಿಲ್ಲ. ನೀನು ಈ ಎಲ್ಲವುಗಳ ಪ್ರಯೋಗ-ಉಪಸಂಹಾರ-ಆವೃತ್ತಿ-ಪ್ರಾಯಶ್ಚಿತ್ತ-ಪ್ರತಿಘಾತಗಳನ್ನು ಅರಿತಿದ್ದೀಯೆ. ಈಗ ಗುರುದಕ್ಷಿಣೆಯ ಸಮಯವು ಬಂದೊದಗಿದೆ. ಮಾಡುತ್ತೇನೆಂದು ಭರವಸೆಯನ್ನು ನೀಡು. ನಂತರ ಮಾಡುವುದೇನೆಂದು ಹೇಳುತ್ತೇನೆ.”

ಆಗ ಅರ್ಜುನನು ದೇವರಾಜನಿಗೆ “ನಾನು ಆ ಕೆಲಸವನ್ನು ಮಾಡಬಹುದಾದರೆ ಅದನ್ನು ನನಗೆ ಹೇಳು” ಎಂದನು. ಆಗ ಇಂದ್ರನು ನಸುನಗುತ್ತಾ ಹೇಳಿದನು: “ಈಗ ಮೂರು ಲೋಕಗಳಲ್ಲಿ ಯಾವುದೂ ನಿನಗೆ ಅಸಾಧ್ಯವೆನಿಸುವುದಿಲ್ಲ. ನಿವಾತಕವಚರೆನ್ನುವ ದಾನವರು ನನ್ನ ಶತ್ರುಗಳು. ಅವರು ದುರ್ಗಮವಾದ ಸಮುದ್ರದ ಹೊಟ್ಟೆಯನ್ನು ಆಶ್ರಯಿಸಿ ಅಲ್ಲಿ ವಾಸಿಸುತ್ತಿದ್ದಾರೆ. ಮೂವತ್ತು ಕೋಟಿಯ ಅವರಲ್ಲಿ ಎಲ್ಲರೂ ಒಂದೇ ಸಮನಾದ ಆಕಾರ-ಬಲ-ಪ್ರಭೆಗಳನ್ನು ಹೊಂದಿದ್ದಾರೆ. ಅವರನ್ನು ಅಲ್ಲಿಯೇ ಕೊಲ್ಲು. ಅದು ನಿನ್ನ ಗುರುದಕ್ಷಿಣೆ!”

ಆಗ ಅವನು ಅರ್ಜುನನಿಗೆ ಮಾತಲಿಸಂಯುಕ್ತ ನವಿಲಿನ ರೆಕ್ಕೆಗಳ ಬಣ್ಣದ ಕುದುರೆಗಳನ್ನು ಕಟ್ಟಿದ ಮಹಾಪ್ರಭೆಯ ದಿವ್ಯ ರಥವನ್ನಿತ್ತನು. ಅವನ ನೆತ್ತಿಗೆ ಉತ್ತಮ ಕಿರೀಟವನ್ನು ಕಟ್ಟಿದನು ಮತ್ತು ತಾನು ಧರಿಸಿದ್ದ ಆಭರಣಗಳಂತೆಯೇ ಇದ್ದ ಆಭರಣಗಳನ್ನು, ಮುಟ್ಟಲು ಮತ್ತು ನೋಡಲು ಸಂದರವಾಗಿದ್ದ ಅಭೇದ್ಯ ಕವಚವನ್ನು ಕಟ್ಟಿದನು ಮತ್ತು ಗಾಂಡೀವಕ್ಕೆ ಜೀರ್ಣವಾಗದ ಶಿಂಜಿನಿಯನ್ನು ಕಟ್ಟಿದನು.

ಅನಂತರ ಅರ್ಜುನನು ಹಿಂದೆ ದೇವರಾಜನು ಬಲಿಯನ್ನು ಜಯಿಸಿದ್ದ ಆ ಹೊಳೆಯುವ ರಥದಲ್ಲಿ ಕುಳಿತು ಹೊರಟನು. ಅದರ ಘೋಷವನ್ನು ಕೇಳಿ ಅಲ್ಲಿ ಸೇರಿದ್ದ ಎಲ್ಲರೂ ಅರ್ಜುನನೇ ಇಂದ್ರನೆಂದು ತಿಳಿದರು. ಅವನನ್ನು ನೋಡಿ “ಫಲ್ಗುನ! ಏನು ಮಾಡುತ್ತಿರುವೆ?” ಎಂದು ಕೇಳಿದರು. ಅವರಿಗೆ ಅರ್ಜುನನು “ಯುದ್ಧದಲ್ಲಿ ನಿವಾತಕವಚರ ವಧೆಗಾಗಿ ಹೊರಟಿದ್ದೇನೆ. ನನಗೆ ಮಂಗಳವಾಗಲೆಂದು ಆಶೀರ್ವದಿಸಿ!” ಎಂದನು. ಪುರಂದರನಂತೆ ಅವರು ಪ್ರಸನ್ನರಾಗಿ ಅರ್ಜುನನಿಗೆ ತುಷ್ಟಿಗಳನ್ನು ಹೇಳಿದರು: “ಇದೇ ರಥದಲ್ಲಿ ಕುಳಿತು ಮಘವನು ಯುದ್ಧದಲ್ಲಿ ಶಂಬರನನ್ನು ಜಯಿಸಿದನು. ನಮುಚಿ-ಬಲ-ವೃತ್ರ-ಪ್ರಹ್ಲಾದ ಮತ್ತು ನರಕರಂಥ ಬಹಳಷ್ಟು ಸಹಸ್ರ-ಅರ್ಬುದ ದೈತ್ಯರನ್ನೂ ಇದೇ ರಥದಲ್ಲಿ ಕುಳಿತು ಅವನು ಜಯಿಸಿದನು. ಕೌಂತೇಯ! ಮಘವಾನನಂತೆ ನೀನೂ ಕೂಡ ಇದರಿಂದ ರಣದಲ್ಲಿ ನಿವಾತಕವಚರನ್ನು ವಿಕ್ರಮದಿಂದ ಗೆಲ್ಲುತ್ತೀಯೆ. ಇದು ಶಂಖಗಳಲ್ಲಿ ಶ್ರೇಷ್ಠವಾದುದು. ಇದರಿಂದ ದಾನವರನ್ನು ಗೆಲ್ಲುವೆ. ಇದರಿಂದ ಶಕ್ರನೂ ಕೂಡ ಲೋಕಗಳನ್ನು ಗೆದ್ದಿದ್ದನು.” ಆಗ ಅರ್ಜುನನು ದೇವತೆಗಳಿಂದ ಆ ಜಲೋದ್ಭವ ದೇವದತ್ತವನ್ನು ಸ್ವೀಕರಿಸಿದನು. ಜಯವನ್ನು ತರುವ ಅಮರರ ಸ್ತುತಿಗಳನ್ನೂ ಸ್ವೀಕರಿಸಿದನು. ಆ ಶಂಖ-ಕವಚ-ಬಿಲ್ಲು-ಬಾಣಗಳನ್ನು ಹಿಡಿದು ಯುದ್ಧೋತ್ಸುಕನಾಗಿ ಅವನು ಅತ್ಯುಗ್ರ ದಾನವಾಲಯದ ಕಡೆ ಹೊರಟನು.

ಅಲ್ಲಲ್ಲಿ ಮಹರ್ಷಿಗಳು ಸ್ತುತಿಸುತ್ತಿರಲು ಅರ್ಜುನನು ವರುಣನ ಮಹಾಭಯಂಕರ ಸಾಗರವನ್ನು ಕಂಡನು. ಬಹುಎತ್ತರಕ್ಕೆ ಹಾರಾಡುತ್ತಾ ಮತ್ತು ಹೊಡೆಯುತ್ತ ಬರುತ್ತಿದ್ದ ನೊರೆಯೊಂದಿಗಿನ ಅಲೆಗಳು ಚಲಿಸುತ್ತಿರುವ ಪರ್ವತಗಳಂತೆ ತೋರುತ್ತಿದ್ದವು. ರತ್ನಭರಿತ ಸಹಸ್ರಾರು ಹಡಗುಗಳು ಎಲ್ಲೆಡೆಯೂ ಕಾಣುತ್ತಿದ್ದವು. ತಿಮಿಂಗಿಲ-ಆಮೆ-ತಿಮಿತಿಮಿಂಗಿಲಗಳು ಮತ್ತು ಮೊಸಳೆಗಳು ನೀರಿನಲ್ಲಿ ಮುಳುಗಿದ ಬೆಟ್ಟಗಳಂತೆ ಕಾಣುತ್ತಿದ್ದವು. ನೀರಿನಲ್ಲಿ ಮುಳುಗಿದ್ದ ಸಹಸ್ರಾರು ಶಂಖಗಳು ತೆಳುಮೋಡಕವಿದ ರಾತ್ರಿಯಲ್ಲಿ ಕಾಣುವ ನಕ್ಷತ್ರಗಳಂತೆ ತೋರುತ್ತಿದ್ದವು. ಸಹಸ್ರಾರು ಮುತ್ತುಗಳ ಗುಚ್ಚಗಳು ನೀರಿನಲ್ಲಿ ತೇಲುತ್ತಿದ್ದವು. ಭಯಂಕರ ಭಿರುಗಾಳಿಯು ಬೀಸುತ್ತಿದ್ದ ಆ ಅಲೆಗಳು ಅದ್ಭುತವಾಗಿದ್ದವು. ಮಹಾವೇಗದಿಂದ ಎಲ್ಲ ಸಾಗರಗಳೂ ಸೇರುವ ಆ ಉತ್ತಮ ಪ್ರದೇಶವನ್ನು ದಾಟಿ ಅರ್ಜುನನು ಹತ್ತಿರದಲ್ಲಿಯೇ ದಾನವರಿಂದ ತುಂಬಿದ್ದ ದೈತ್ಯಪುರವನ್ನು ಕಂಡನು. ಮಾತಲಿಯು ಅಲ್ಲಿಯೇ ಇಳಿದು ರಥಘೋಷದಿಂದ ಭೂಮಿಯನ್ನೇ ಮೊಳಗಿಸುತ್ತಾ ಆ ಪುರವನ್ನು ತಲುಪಿದನು. ಅಂಬರದಲ್ಲಿ ಸಿಡಿಲು ಬಡಿಯಿತೋ ಎನ್ನುವಂತಿದ್ದ ಆ ರಥಘೋಷವನ್ನು ಕೇಳಿ ದೇವರಾಜನೇ ಬಂದನೆಂದು ಯೋಚಿಸಿ ಆ ದಾನವರು ಸಂವಿಗ್ನರಾದರು. ಅವರೆಲ್ಲರೂ ಬಿಲ್ಲು-ಬಾಣಗಳನ್ನೂ, ಶೂಲ-ಖಡ್ಗ-ಕೊಡಲಿ-ದೊಣ್ಣೆ-ಮುಸಲಗಳನ್ನು ಹಿಡಿದು ನಿಂತರು. ಅವರ ಚೇತನವು ಕಂಪಿಸುತ್ತಿರಲು ಆ ದಾನವರು ದ್ವಾರಗಳನ್ನು ಮುಚ್ಚಿ ರಕ್ಷಣೆಗೆ ನಿಂತರು. ಅಲ್ಲಿ ಯಾರೂ ಕಾಣ ಬರುತ್ತಿರಲಿಲ್ಲ. ಆಗ ಅರ್ಜುನನು ಮಹಾಸ್ವನಿ ದೇವದತ್ತ ಶಂಖವನ್ನು ಎತ್ತಿ ಊದುತ್ತಾ ಮೆಲ್ಲಗೆ ಆ ಪುರಕ್ಕೆ ಸುತ್ತುಹಾಕಿದನು. ಶಂಖದ ಆ ಧ್ವನಿಯು ಆಕಾಶವನ್ನು ಸ್ತಬ್ಧಗೊಳಿಸಿ ಪ್ರತಿಧ್ವನಿಗೈದು ಮಹಾಕಾಯದ ಭೂತಗಳು ಕೂಡ ನಡುಗುವಂತೆ ಮಾಡಿತು. ಆಗ ಎಲ್ಲೆಡೆಯಲ್ಲಿಯೂ ಸಾವಿರ ಸಂಖ್ಯೆಗಳಲ್ಲಿ ದಿತಿಯ ಪುತ್ರರಾದ ನಿವಾತಕವಚರೆಲ್ಲರೂ ವಿವಿಧ ಆಯುಧಗಳಿಂದ ಮತ್ತು ಅಸ್ತ್ರಗಳಿಂದ ರಕ್ಷಿತರಾಗಿ ಕಾಣಿಸಿಕೊಳ್ಳತೊಡಗಿದರು. ಅವರು ಮಹಾಶೂಲ-ಗದೆ-ಮುಸಲ-ಪಟ್ಟಿಷ-ಕರವಾಲ-ರಥಚಕ್ರಗಳನ್ನು ಬೀಸುತ್ತಿದ್ದರು. ಸುಂದರ ಅಲಂಕೃತ ಖಡ್ಗ-ಭುಶುಂಡಿ-ಶತಘ್ನಿಗಳನ್ನು ಹಿಡಿದಿದ್ದರು.

ಮಾತಲಿಯು ಬಹುವಿಧದ ರಥಮಾರ್ಗಗಳನ್ನು ವಿಚಾರಿಸಿ ಹಯಗಳನ್ನು ಸಮಪ್ರದೇಶದ ಕಡೆ ಪ್ರಚೋದಿಸಿದನು. ಅವನ ಕೈಚಳಕದಿಂದ ಕುದುರೆಗಳು ಅರ್ಜುನನಿಗೆ ಏನಾಯಿತೆಂದೂ ತಿಳಿಯದಷ್ಟು ವೇಗವಾಗಿ ಹೋದವು. ಅದೊಂದು ಅದ್ಭುತವಾಗಿತ್ತು. ಆಗ ದಾನವರು ಅನೇಕ ಸಂಖ್ಯೆಗಳಲ್ಲಿ ವಿಕೃತ ಸ್ವರೂಪಗಳ ಯೋಧರೆಲ್ಲರನ್ನೂ ಒಂದುಗೂಡಿಸಿದರು. ಅವರ ಮಹಾಶಬ್ಧದಿಂದ ಸಮುದ್ರದಲ್ಲಿ ಪರ್ವತಗಳಂತಿದ್ದ ಸಹಸ್ರಾರು ಮೀನುಗಳು ಸತ್ತ್ವವನ್ನು ಕಳೆದುಕೊಂಡು ತೇಲತೊಡಗಿದವು. ನೂರಾರು ಸಹಸ್ರಾರು ದಾನವರು ಹರಿತ ಬಾಣಗಳನ್ನು ಪ್ರಯೋಗಿಸುತ್ತಾ ಮಹಾವೇಗದಿಂದ ಅರ್ಜುನನೆಡೆಗೆ ಧಾವಿಸಿದರು. ಆಗ ಅರ್ಜುನ ಮತ್ತು ಅವರ ನಡುವೆ, ನಿವಾತಕವಚರ ಅಂತ್ಯವೆನಿಸುವ. ಸಂಪ್ರಹಾರ ತುಮುಲ ಮಹಾಘೋರ ಯುದ್ಧವು ನಡೆಯಿತು. ಆಗ ದೇವರ್ಷ-ದಾನವರ್ಷಿ-ಬ್ರಹ್ಮರ್ಷಿಗಣಗಳು ಮತ್ತು ಸಿದ್ಧರು ಆ ಮಯಾಯುದ್ಧದಲ್ಲಿ ಒಟ್ಟು ಸೇರಿದರು. ತಾರಕಾ ಯುದ್ಧದಲ್ಲಿ ಇಂದ್ರನಿಗೆ ಹೇಗೋ ಹಾಗೆ ಆ ಮುನಿಗಳು ಅರ್ಜುನನ ಜಯವನ್ನು ಬಯಸಿ ಅವನನ್ನು ಮಧರವಾಗಿ ಹೊಗಳಿ ಸ್ತುತಿಸಿದರು.

ಆಗ ನಿವಾತಕವಚರು ಆಯುಧಗಳನ್ನು ಹಿಡಿದು ಎಲ್ಲರೂ ಒಟ್ಟಾಗಿ ವೇಗದಿಂದ ರಣದಲ್ಲಿ ಅರ್ಜುನನ ಕಡೆ ಧಾವಿಸಿದರು. ಅವನ ರಥಮಾರ್ಗವನ್ನು ಕತ್ತರಿಸಿ ಜೋರಾಗಿ ಕೂಗುತ್ತಾ ಅವನನ್ನು ಎಲ್ಲಕಡೆಗಳಿಂದ ಮುತ್ತಿ ಶರಗಳ ಮಳೆಯನ್ನು ಸುರಿಸಿದರು. ಇತರ ಮಹಾವೀರ್ಯ ದಾನವರು ಅವನ ಮೇಲೆ ಶೂಲ-ಪಟ್ಟಿಷಗಳನ್ನೂ ಭುಷಂಡಿಗಳನ್ನೂ ಹಿಡಿದು ಎಸೆದರು. ಅವನ ರಥದ ಮೇಲೆ ಗದೆ-ಶಕ್ತಿಗಳ ಆ ಮಹಾ ಶೂಲವರ್ಷವು ಒಂದೇ ಸಮನೆ ಬೀಳತೊಡಗಿತು. ಇತರ ರೌದ್ರ-ಕಾಲರೂಪೀ ನಿವಾತಕವಚ ಪ್ರಹಾರಿಗಳು ಹರಿತ ಅಸ್ತ್ರ-ಆಯುಧಗಳನ್ನು ಹಿಡಿದು ಅರ್ಜುನನ ಮೇಲೆ ಎರಗಿದರು. ಆಗ ಅರ್ಜುನನು ಅವರಲ್ಲಿ ಪ್ರತಿಯೊಬ್ಬರನ್ನೂ ತನ್ನ ಗಾಂಡೀವದಿಂದ ಪ್ರಯೋಗಿಸಿದ ಜಿಹ್ಮಗ ಬಾಣಗಳಿಂದ ಹೊಡೆದನು. ಅವನ ಆ ಶಿಲಾಶಿತ ಬಾಣಗಳು ಅವರೆಲ್ಲರನ್ನೂ ವಿಮುಖರನ್ನಾಗಿಸಿದವು.

ಆಗ ಮಾತಲಿಯು ಕುದುರೆಗಳನ್ನು ಪ್ರಚೋದಿಸಲು ಅವನ ನಿರ್ದೇಶನದಂತೆ ಅವು ಅನೇಕ ನೆಗೆತಗಳನ್ನು ಹಾರಿ ಹಲವಾರು ದೈತ್ಯರನ್ನು ತುಳಿದವು. ನೂರು ನೂರು ಕುದುರೆಗಳನ್ನು ಆ ರಥಕ್ಕೆ ಕಟ್ಟಿದ್ದರೂ ಮಾತಲಿಯು ಕೆಲವೇ ಕುದುರೆಗಳಿವೆಯೋ ಎನ್ನುವಂತೆ ತಿರುಗಿಸಿ ನಡೆಸುತ್ತಿದ್ದನು. ಆ ಕುದುರೆಗಳ ಕಾಲ ತುಳಿತದಿಂದ, ರಥಘೋಷದಿಂದ ಮತ್ತು ಅರ್ಜುನನ ಬಾಣಗಳಿಂದ ನೂರಾರು ಅಸುರರು ಹತರಾದರು. ಜೀವ-ಸಾರಥಿಗಳನ್ನು ಕಳೆದುಕೊಂಡ ಅನ್ಯ ಧನುಷ್ಪಾಣಿಗಳನ್ನು ಅವರವರ ಕುದುರೆಗಳು ಎತ್ತಿಕೊಂಡು ಹೋದವು.

ಆ ಪ್ರಹಾರಿಗಳು ದಿಕ್ಕುಗಳ ಎಲ್ಲಕೋನೆಗಳನ್ನೂ ಎಲ್ಲ ರೀತಿಯ ಶಸ್ತ್ರಗಳಿಂದ ಹೊಡೆದು ಅರ್ಜುನನ ಮನಸ್ಸನ್ನು ವ್ಯಥಿತಗೊಳಿಸಿದರು. ಆಗ ಅವನು ವೇಗದಲ್ಲಿ ಹೋಗುತ್ತಿರುವ ಕುದುರೆಗಳನ್ನು ನಿಯಂತ್ರಿಸುವ ಮಾತಲಿಯ ಪರಮಾಧ್ಭುತ ಯತ್ನವನ್ನು ನೋಡಿದನು. ಅರ್ಜುನನು ವಿಚಿತ್ರ ಲಘು ಬಾಣಗಳನ್ನು ಬಿಟ್ಟು ರಣದಲ್ಲಿ ಆಯುಧಪಾಣಿ ಅಸುರರನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಕಡಿದುರಿಳಿಸಿದನು. ಹೀಗೆ ಅವನು ಸರ್ವಯತ್ನದಿಂದ ನಡೆಯುತ್ತಿರಲು ಶಕ್ರನ ವೀರ ಸಾರಥಿ ಮಾತಲಿಯು ಸಂತೋಷಗೊಂಡನು. ಕುದುರೆ-ರಥಗಳೊಂದಿಗೆ ಹಲವಾರು ನಿವಾತಕವಚರು ಹತರಾದರು ಮತ್ತು ಕೆಲವರು ಯುದ್ಧಮಾಡುವುದನ್ನು ನಿಲ್ಲಿಸಿದರು. ರಣದಲ್ಲಿ ಅರ್ಜುನನೊಂದಿಗೆ ಸ್ಪರ್ಧಿಸುತ್ತಿರುವರೋ ಎನ್ನುವಂತೆ ನಿವಾತಕವಚರು ಶರವರ್ಷಗಳಿಂದ ಅವನನ್ನು ಎಲ್ಲ ಕಡೆಯಿಂದಲೂ ಮುತ್ತಿಗೆಹಾಕಿದರು. ಆಗ ಅರ್ಜುನನು ಲಘುವಾದ ವಿಚಿತ್ರ ಬಾಣಗಳನ್ನು ಬ್ರಹ್ಮಾಸ್ತ್ರದಿಂದ ಅಭಿಮಂತ್ರಿಸಿ ಅವರನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ವಧಿಸಿದನು. ಪೀಡಿತರಾಗಿ ಕ್ರೋಧಾವಿಷ್ಟರಾದ ಆ ಮಹಾಸುರರು ಅವನನ್ನು ಶರ, ಶೂಲ ಮತ್ತು ಶಿಲೆಗಳ ಮಳೆಯಿಂದ ಹೊಡೆಯತೊಡಗಿದರು. ಆಗ ಅರ್ಜುನನು ಪರಮ ತಿಗ್ಮತೇಜಸ್ಸಿನ ದೇವರಾಜನಿಗೆ ಪ್ರಿಯವಾದ ಮಾಧವ ಎಂಬ ಹೆಸರಿನ ಅಸ್ತ್ರವನ್ನು ಹಿಡಿದನು. ಆ ಅಸ್ತ್ರದ ವೀರ್ಯದಿಂದ ಅವನು ಅವರು ಪ್ರಯೋಗಿಸಿದ ಸಹಸ್ರಾರು ಖಡ್ಗ, ತ್ರಿಶೂಲ ಮತ್ತು ತೋಮರಗಳನ್ನು ನೂರಾರು ತುಂಡುಗಳನ್ನಾಗಿ ಕತ್ತರಿಸಿದನು. ಅವರ ಪ್ರಹರಣಗಳನ್ನು ತುಂಡರಿಸಿ ಅವನು ಅವರೆಲ್ಲರಿಗೂ ಪ್ರತಿಯೊಬ್ಬರಿಗೆ ಹತ್ತರಂತೆ ರೋಷದಿಂದ ಬಾಣಗಳಿಂದ ಚುಚ್ಚಿದನು. ಆ ಯುದ್ಧದಲ್ಲಿ ಗಾಂಡೀವದಿಂದ ಜೇನುಹುಳುಗಳ ಗುಂಪಿನಂತೆ ಬಾಣಗಳು ಹೊರಬರುತ್ತಿದ್ದುದನ್ನು ನೋಡಿ ಮಾತಲಿಯು ಪ್ರೋತ್ಸಾಹಿಸಿದನು. ಅವರು ಕೂಡ ಬಹು ಮಿಡಿತೆಗಳಂತೆ ಬಾಣಗಳಿಂದ ಅರ್ಜುನನನ್ನು ಮುಚ್ಚಿದರು. ಆದರೆ ಅವನು ಅವುಗಳನ್ನು ತನ್ನ ಬಲದ ಶರಗಳಿಂದ ಚದುರಿಸಿದನು. ಈ ಆಕ್ರಮಣದಡಿಯಲ್ಲಿ ನಿವಾತಕವಚರು ಪುನಃ ಅರ್ಜುನನ ಸುತ್ತಲೂ ಶರವರ್ಷಗಳಿಂದ ಮುತ್ತಿಗೆ ಹಾಕಿದರು. ವೇಗವಾಗಿ ಬರುತ್ತಿದ್ದ ಆ ಶರಗಳನ್ನು ಅವನು ಜ್ವಲಿಸುವ, ಪರಮಶೀಘ್ರವಾಗಿ ಹೋಗಬಲ್ಲ, ಸಹಸ್ರಾರು ಅಸ್ತ್ರಗಳಿಂದ ತುಂಡರಿಸಿದನು. ಅವರ ತುಂಡಾದ ದೇಹಗಳಿಂದ ಚಿಮ್ಮಿದ ರಕ್ತವು ಮಳೆಗಾಲಲ್ಲಿ ಸಿಡಿಲಿಗಿ ಸಿಲುಕಿದ ಪರ್ವತ ಶಿಖರಗಳಂತೆ ಕಂಡುಬಂದವು. ಇಂದ್ರನ ವಜ್ರಸಮಾನವಾದ ಅರ್ಜುನನ ಶೀಘ್ರ, ನೇರವಾಗಿ ಹೋದ ಬಾಣಗಳಿಂದ ಹೊಡೆಯಲ್ಪಟ್ಟ ದಾನವರು ಉದ್ವಿಗ್ನರಾದರು. ಅವರ ದೇಹ ಮತ್ತು ಕರುಳುಗಳು ನೂರಾರು ತುಂಡುಗಳಾಗಿ, ಅವರ ಆಯುಧಗಳು ಸತ್ವವನ್ನು ಕಳೆದುಕೊಳ್ಳಲು, ನಿವಾತಕವಚರು ಅವನೊಂದಿಗೆ ಮಾಯಾಯುದ್ಧವನ್ನು ಪ್ರಾರಂಭಿಸಿದರು.

ಆಗ ಎಲ್ಲಕಡೆಗಳಿಂದಲೂ ಕಲ್ಲುಬಂಡೆಗಳ ಸುರಿಮಳೆಯು ಕಂಡುಬಂದಿತು. ಪರ್ವತಗಳಷ್ಟು ದೊಡ್ಡದಾಗಿ ಘೋರವಾಗಿದ್ದ ಅವು ಅರ್ಜುನನನ್ನು ಒತ್ತಿಹಿಡಿದು ಪೀಡಿಸಿದವು. ಆದರೆ ಅವನು ಇಂದ್ರಾಸ್ತ್ರದಿಂದ ಪ್ರಚೋದಿತಗೊಂಡ ವಜ್ರಸಂಕಾಶ ವೇಗ ಶರಗಳಿಂದ ಪ್ರತಿಯೊಂದನ್ನೂ ನೂರಾರು ಚೂರುಗಳನ್ನಾಗಿ ಪುಡಿಮಾಡಿದನು. ಸುರಿಯುತ್ತಿರುವ ಕಲ್ಲುಬಂಡೆಗಳು ಚೂರಾದಾಗ ಅಲ್ಲಿ ಬೆಂಕಿಯು ಹುಟ್ಟಿತು, ಮತ್ತು ಕಲ್ಲುಚೂರುಗಳು ಆ ಅಗ್ನಿಯಲ್ಲಿ ಕಿಡಿಗಳಂತೆ ಬಿದ್ದವು. ಆ ಶಿಲಾವರ್ಷವು ತಣ್ಣಗಾಗಲು, ಒನಕೆಯ ಗಾತ್ರದ ಧಾರೆಗಳ ಮಹತ್ತರ ಜಲವರ್ಷವು ಅವನ ಮೇಲೆ ಸುರಿಯಲಾರಂಭಿಸಿತು. ನಭದಿಂದ ಸಹಸ್ರಾರು ಧಾರೆಗಳು ಅತಿ ಬಲದಿಂದ ಸುರಿದು ದಿಕ್ಕು ಉಪದಿಕ್ಕುಗಳೊಂದಿಗೆ ವ್ಯೋಮವನ್ನು ಎಲ್ಲ ಕಡೆಗಳಿಂದಲೂ ಆವರಿಸಿತು. ಸುರಿಯುತ್ತಿರುವ ಧಾರೆಗಳು, ಭುಸುಗುಟ್ಟುತ್ತಿರುವ ಗಾಳಿ, ಮತ್ತು ದೈತ್ಯರ ಗರ್ಜನೆಯಿಂದ ಏನೂ ತಿಳಿಯದಾಯಿತು. ದಿವಿ ಮತ್ತು ಭೂಮಿಯ ನಡುವೆ ನೀರಿನ ಧಾರೆ ಮಾತ್ರವಿತ್ತು. ನಿರಂತರವಾಗಿ ಭೂಮಿಯಮೇಲೆ ಸುರಿಯುತ್ತಿರುವ ಧಾರೆಯು ಅರ್ಜುನನನ್ನು ಮೂರ್ಛೆಗೊಳಿಸಿದವು. ಆಗ ಅವನು ಇಂದ್ರನು ಉಪದೇಶಿಸಿದ ವಿಶೇಷವಾದ ದಿವ್ಯಾಸ್ತ್ರವನ್ನು ಪ್ರಯೋಗಿಸಿದನು. ಬಿಟ್ಟ ಘೋರವಾಗಿ ಉರಿಯುತ್ತಿರುವ ಅದು ನೀರನ್ನು ಒಣಗಿಸಿತು. ಶಿಲಾವರ್ಷವನ್ನು ಮುಗಿಸಿ ಅವನು ಜಲಾವರ್ಷವನ್ನೂ ಒಣಗಿಸಲು ದಾನವರು ಮಾಯೆಯಿಂದ ಅಗ್ನಿ ಮತ್ತು ವಾಯುವನ್ನು ಬಿಡುಗಡೆಮಾಡಿದರು. ಆಗ ಅರ್ಜುನನು ಎಲ್ಲ ಬೆಂಕಿಯನ್ನೂ ಸಲಿಲಾಸ್ತ್ರಗಳಿಂದ ಆರಿಸಿದನು ಮತ್ತು ಮಹಾ ಶೈಲಾಸ್ತ್ರದಿಂದ ವಾಯುವಿನ ವೇಗವನ್ನು ತಡೆದನು. ಆ ಮಾಯೆಯನ್ನೂ ಎದುರಿಸಲು, ಯುದ್ಧದುರ್ಮದರಾದ ದಾನವರು ಒಂದೇ ಸಮನೆ ವಿವಿಧ ಮಾಯೆಗಳನ್ನು ಪ್ರಯೋಗಿಸಿದರು. ಆಗ ಅತಿದೊಡ್ಡದಾದ, ಮೈನವಿರೇಳಿಸುವ, ಅಸ್ತ್ರಗಳ ಘೋರರೂಪದ ಅಗ್ನಿ, ವಾಯು ಮತ್ತು ಶಿಲೆಗಳ ಮಳೆಯು ಹುಟ್ಟಿಕೊಂಡಿತು. ಯುದ್ಧದಲ್ಲಿ ಆ ಮಯಾಮಯಿ ಮಳೆಯು ಅರ್ಜುನನನ್ನು ಪೀಡಿಸಲು, ಎಲ್ಲೆಡೆಯೂ ಘೋರವಾದ ಕತ್ತಲೆಯುಂಟಾಯಿತು. ಲೋಕವು ಘೋರವಾದ ದಟ್ಟವಾದ ಕತ್ತಲೆಯಿಂದ ಆವೃತಗೊಳ್ಳಲು ಕುದುರೆಗಳು ಹಿಂದೆಸರಿದವು ಮತ್ತು ಮಾತಲಿಯು ಮುಕ್ಕರಿಸಿದನು. ಅವನ ಕೈಯಿಂದ ಬಂಗಾರದ ಬಾರಿಕೋಲು ನೆಲದ ಮೇಲೆ ಬೀಳಲು ಭೀತನಾಗಿ ಎಲ್ಲಿದ್ದೀಯೆ? ಎಲ್ಲಿದ್ದೀಯೆ? ಎಂದು ಅರ್ಜುನನನ್ನು ಕೇಳತೊಡಗಿದನು. ಹೀಗೆ ಅವನು ತನ್ನ ಬುದ್ಧಿಯನ್ನು ಕಳೆದುಕೊಂಡಾಗ ತೀವ್ರವಾದ ಭೀತಿಯು ಅರ್ಜುನನನ್ನು ಹಿಡಿಯಿತು. ವಿಗತಜ್ಞಾನನಾದ ಅವನು ನಡುಗುತ್ತಾ ಹೇಳಿದನು: “ಪಾರ್ಥ! ಹಿಂದೆ ಅಮೃತಕ್ಕಾಗಿ ಸುರಾಸುರರಲ್ಲಿ ನಡೆದ ಮಹಾ ಸಂಗ್ರಾಮವನ್ನು ನೋಡಿದ್ದೆ. ಶಂಭರನ ವಧೆಯಲ್ಲಿಯೂ ಕೂಡ ಮಹಾ ಸಂಗ್ರಾಮವು ನಡೆಯಿತು. ಅಲ್ಲಿಯೂ ಕೂಡ ನಾನು ದೇವರಾಜನ ಸಾರಥ್ಯವನ್ನು ಮಾಡಿದ್ದೆನು. ಹೀಗೆ ವೃತ್ರನ ವಧೆಯಲ್ಲಿಯೂ ನಾನೇ ಕುದುರೆಗಳನ್ನು ಹಿಡಿದಿದ್ದೆ. ವೈರೋಚನನ ಸುದಾರುಣ ಯುದ್ಧವನ್ನೂ ಕೂಡ ನಾನು ನೋಡಿದ್ದೇನೆ. ಈ ಎಲ್ಲ ಮಹಾಘೋರ ಸಂಗ್ರಾಮಗಳನ್ನು ನಾನು ವೀಕ್ಷಿಸಿದ್ದರೂ ಕೂಡ ಇದಕ್ಕೂ ಮೊದಲು ನಾನು ನನ್ನ ಬುದ್ಧಿಯನ್ನು ಕಳೆದುಕೊಂಡಿರಲಿಲ್ಲ. ನಿಶ್ಚಿತವಾಗಿಯೂ ಪಿತಾಮಹನು ಪ್ರಜೆಗಳ ಸಂಹಾರವನ್ನು ವಿಧಿಸಿರಬಹುದು. ಯಾಕೆಂದರೆ ಈ ಯುದ್ಧವು ಜಗತ್ತಿನ ಕ್ಷಯವನ್ನು ಸೂಚಿಸುವಂತಿದೆ.”

ಅವನ ಆ ಮಾತುಗಳನ್ನು ಕೇಳಿ ಅರ್ಜುನನು ತನ್ನನ್ನು ತಾನು ಹಿಡಿತದಲ್ಲಿ ತಂದುಕೊಂಡನು ಮತ್ತು ದಾನವರ ಮಾಯಾಮಯ ಬಲವನ್ನು ಸೋಲಿಸಲು ಮನಸ್ಸು ಮಾಡಿದನು. ಭೀತನಾಗಿದ್ದ ಮಾತಲಿಗೆ ಅವನು ಹೇಳಿದನು: “ನನ್ನ ಭುಜಗಳ ಬಲವನ್ನು, ನನ್ನ ಗಾಂಡೀವಧನುಸ್ಸನ್ನೂ ಅಸ್ತ್ರಗಳ ಪ್ರಭಾವವನ್ನೂ ನೋಡು! ಇಂದು ನನ್ನ ಅಸ್ತ್ರಗಳ ಮಾಯೆಯಿಂದ ಈ ಸುದಾರುಣ ಮಾಯೆಯನ್ನು ಮತ್ತು ಉಗ್ರ ಕತ್ತಲೆಯನ್ನು ಕಳೆಯುತ್ತೇನೆ. ಸೂತ! ಸ್ಥಿರವಾಗಿರು!”

ಹೀಗೆ ಹೇಳಿ ಅವನು ದೇವತೆಗಳ ಹಿತಕ್ಕಾಗಿ ಸರ್ವಶತ್ರುಗಳನ್ನು ಮೋಹಿಸುವ ಮೋಹಿನೀ ಅಸ್ತ್ರವನ್ನು ಪ್ರಯೋಗಿಸಿದನು. ಈ ಮಾಯೆಗಳಿಂದ ಪೀಡಿತರಾದ ಆ ಅಮಿತೌಜಸ ಅಸುರೇಶ್ವರರು ಪುನಃ ಬಹುವಿಧದ ಮಾಯೆಗಳನ್ನು ತೋರಿಸಿದರು. ಈಗ ಬೆಳಕಾದರೆ ಪುನಃ ಕತ್ತಲೆಯು ಅದನ್ನು ನುಂಗುತ್ತಿತ್ತು. ಈಗ ಲೋಕವು ಅದೃಶ್ಯವಾದರೆ ಪುನಃ ಅದು ಸಮುದ್ರದಲ್ಲಿ ಮುಳುಗಿಹೋಗುತ್ತಿತ್ತು. ಬೆಳಕಾದಾಗ ಮಾತಲಿಯು ಉತ್ತಮವಾಗಿ ಹೋಗುತ್ತಿರುವ ಕುದುರೆಗಳಿರುವ ರಥವನ್ನು ಮೈನವಿರೇಳಿಸುವ ಸಂಗ್ರಾಮದ ಕಡೆ ಕೊಂಡೊಯ್ದನು. ಆಗ ಉಗ್ರ ನಿವಾತಕವಚರು ಅರ್ಜುನನ ಮೇಲೆ ಮುತ್ತಿಗೆ ಹಾಕಿದರು, ಮತ್ತು ಅವನು ತೆರವು ಕಂಡಾಗಲೆಲ್ಲಾ ಅವರನ್ನು ಯಮಸಾದನಕ್ಕೆ ಅಟ್ಟಿದನು. ವರ್ತಮಾನದಲ್ಲಿ ನಿವಾತಕವಚರ ಅಂತ್ಯವನ್ನು ಸೂಚಿಸುವ ಯುದ್ಧವು ನಡೆಯುತ್ತಿರಲು, ತಕ್ಷಣವೇ ಎಲ್ಲ ದಾನವರೂ ಮಾಯೆಯಿಂದ ಆವೃತರಾಗಿ ಕಾಣದಂತಾದರು.

ಅದೃಶ್ಯರಾಗಿ ಆ ದೈತ್ಯರು ಅರ್ಜುನನೊಡನೆ ಮಾಯೆಯಿಂದ ಯುದ್ಧಮಾಡಿದರು; ಆದರೆ ಅವನು ಆದೃಶ್ಯವಾಗಿರುವವರೊಡನೆ ಅಸ್ತ್ರವೀರ್ಯದಿಂದ ಹೋರಾಡಿದನು. ಗಾಂಡೀವದಿಂದ ಬಿಟ್ಟ ಸರಿಯಾಗಿ ಅಸ್ತ್ರಗಳಿಂದ ಪ್ರಚೋದಿತ ಬಾಣಗಳು ಅವರ ಶಿರಗಳನ್ನು ಎಲ್ಲೆಲ್ಲಿ ಇದ್ದವೋ ಅಲ್ಲಿಯೇ ತುಂಡರಿಸಿದವು. ಯುದ್ಧದಲ್ಲಿ ಅರ್ಜುನನಿಂದ ಹೊಡೆಯಲ್ಪಟ್ಟ ನಿವಾತಕವಚರು ಒಮ್ಮೆಗೇ ಮಾಯೆಯನ್ನು ತೊರೆದು ತಮ್ಮ ಪುರವನ್ನು ಪ್ರವೇಶಿಸಿದರು. ದೈತ್ಯರು ಹೋಗಿ ಪುನ ಕಾಣಿಸುವಂತಾದಾಗ ಅರ್ಜುನನು ಅಲ್ಲಿ ಹತರಾಗಿದ್ದ ನೂರಾರು ಸಾವಿರಾರು ದಾನವರನ್ನು ನೋಡಿದನು. ಅಲ್ಲಿ ಅವರ ಶಸ್ತ್ರಗಳು ಮತ್ತು ಆಭರಣಗಳು ಚದುರಿ ಬಿದ್ದಿದ್ದವು; ದೇಹಗಳು ಮತ್ತು ಕವಚಗಳು ರಾಶಿರಾಶಿಯಾಗಿ ಬಿದ್ದಿರುವುದು ಕಂಡುಬಂದಿತು. ಕುದುರೆಗಳಿಗೆ ಒಂದು ಕಾಲನ್ನು ಚಲಿಸಲೂ ಸ್ಥಳವಿರಲಿಲ್ಲ. ಒಮ್ಮೆಲೇ ಹಾರಿ ಅವು ಅಂತರಿಕ್ಷಗಾಮಿಗಳಾದವು. ಆಗ ನಿವಾತಕವಚರೂ ಕೂಡ ಇಡೀ ವ್ಯೋಮವನ್ನು ತುಂಬಿ, ಅದೃಶ್ಯರಾಗಿಯೇ ದೊಡ್ಡ ಶಿಲೆಗಳನ್ನು ಬೀರಿ ಆಕ್ರಮಣಮಾಡಿದರು. ಭೂಮಿಯ ಒಳಗೆ ಹೋಗಿದ್ದ ಅವರಲ್ಲಿಯೇ ಕೆಲವು ಘೋರ ದಾನವರು ಕುದುರೆಗಳ ಕಾಲುಗಳನ್ನು ಮತ್ತು ರಥಚಕ್ರಗಳನ್ನು ಎಳೆದು ತಡೆದರು. ಆ ಹರಿ ಕುದುರೆಗಳನ್ನು ಮತ್ತು ಯುದ್ಧಮಾಡುತ್ತಿರುವ ಅರ್ಜುನನ ರಥವನ್ನು ಹಿಡಿದು ಅವರು ಎಲ್ಲ ಕಡೆಯಿಂದ ರಥದೊಡನೆ ಅವನ ಮೇಲೆ ಎಲ್ಲಕಡೆಯಿಂದಲೂ ಮುಚ್ಚಿ ಪರ್ವತಗಳನ್ನು ಒಟ್ಟುಹಾಕಿದರು. ಬಿದ್ದಿರುವ ಮತ್ತು ಇನ್ನೂ ಬೀಳುತ್ತಿರುವ ಪರ್ವತಗಳಿಂದ ಅವರಿರುವ ಪ್ರದೇಶವು ಗುಹೆಯಂತೆ ಆಯಿತು. ಸಂಪೂರ್ಣವಾಗಿ ಪರ್ವತಗಳಿಂದ ಮುಚ್ಚಲ್ಪಟ್ಟು, ಕುದುರೆಗಳು ಚಲಿಸಲಾಗದಿರುವಾಗ ಅರ್ಜುನನು ಪರಮ ಚಿಂತಿತನಾದನು. ಅವನು ಹೆದರಿದುದನ್ನು ಗಮನಿಸಿ ಮಾತಲಿಯು ಹೇಳಿದನು: “ಅರ್ಜುನ! ಹೆದರಬೇಡ! ಈಗ ವಜ್ರಾಸ್ತ್ರವನ್ನು ಬಿಡು!” ಅವನ ಆ ಮಾತನ್ನು ಕೇಳಿ ಅರ್ಜುನನು ದೇವರಾಜನಿಗೆ ಪ್ರಿಯವಾದ ವಜ್ರಾಸ್ತ್ರವನ್ನು ಬಿಟ್ಟನು. ಅಚಲವಾದ ಗೋಡೆಗಳಿಂದ ಆವೃತ ಸ್ಥಳವನ್ನು ಸೇರಿ ವಜ್ರದ ಪರಿಣಾಮವುಳ್ಳ ಹರಿತ ಉಕ್ಕಿನ ಶರಗಳನ್ನು ಪ್ರಯೋಗಿಸಲು ಪ್ರಾರಂಭಿಸಿದನು. ವಜ್ರದಿಂದ ಪ್ರಚೋದಿತ ಆ ಬಾಣಗಳು ವಜ್ರದಂತೆಯೇ ಆಗಿ ನಿವಾತಕವಚರ ಆ ಎಲ್ಲ ಮಾಯೆಗಳನ್ನು ಭೇದಿಸಿದವು. ಆ ವೇಗವಾದ ವಜ್ರಗಳ ಹೊಡೆತಕ್ಕೆ ಸಿಲುಕಿದ ಪರ್ವತೋಪಮ ದಾನವರು ಇತರರನ್ನು ಅಪ್ಪಿಕೊಂಡು ಭೂಮಿಯ ಮೇಲೆ ಬಿದ್ದರು. ಆ ಬಾಣಗಳು ಭೂಮಿಯ ಒಳಗೆ ಇದ್ದು ರಥ ಕುದುರೆಗಳನ್ನು ಹಿಡಿದಿದ್ದ ದಾನವರನ್ನೂ ಹುಡುಕಿ ಯಮಸಾದನಕ್ಕೆ ಕಳುಹಿಸಿದವು. ಆ ಪ್ರದೇಶವು ಚದುರಿದ ಪರ್ವತಗಳಂತೆ ಪರ್ವತೋಪಮ ನಿವಾತಕವಚರ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಶವಗಳಿಂದ ತುಂಬಿಹೋಯಿತು. ಆದರೆ ಕುದುರೆಗಳಾಗಲೀ, ರಥವಾಗಲೀ, ಮಾತಲಿಯಾಗಲೀ ಅಥವಾ ಅರ್ಜುನನಾಗಲೀ ಸ್ವಲ್ಪವೂ ಚ್ಯುತಿಯನ್ನು ಹೊಂದಲಿಲ್ಲ. ಇದೊಂದು ಅದ್ಭುತವೇ ನಡೆಯಿತು. ಆಗ ಮಾತಲಿಯು ನಗುತ್ತಾ ಅರ್ಜುನನಿಗೆ ಹೇಳಿದನು: “ಅರ್ಜುನ! ನಿನ್ನಲ್ಲಿ ಕಂಡುಬರುವ ವೀರ್ಯವು ದೇವತೆಗಳಲ್ಲಿಯೂ ಇಲ್ಲ.”

ಆ ಅಸುರರ ಗುಂಪುಗಳು ಹತರಾಗಲು ಅವರ ಪತ್ನಿಯರೆಲ್ಲರೂ ನಗರದಲ್ಲಿ ಶರದೃತುವಿನ ಸಾರಂಗಗಳಂತೆ ರೋದಿಸತೊಡಗಿದರು. ಮಾತಲಿಯೊಂದಿಗೆ ಅರ್ಜುನನು ನಿವಾತಕವಚ ಸ್ತ್ರೀಯರನ್ನು ರಥಘೋಷದಿಂದ ನಡುಗಿಸುತ್ತಾ ಆ ಪುರದೊಳಗೆ ಹೋದನು. ಹತ್ತುಸಾವಿರ ನವಿಲಿನ ಬಣ್ಣಗಳ ಕುದುರೆಗಳನ್ನು ಮತ್ತು ರವಿಸಂಕಾಶ ರಥವನ್ನು ನೋಡಿ ಸ್ತ್ರೀಯರು ಗುಂಪುಗುಂಪಾಗಿ ಓಡಿದರು. ಆಭರಣಗಳೊಂದಿಗೆ ವಿಭೀತರಾದ ಸ್ತ್ರೀಯರು ಮಾಡಿದ ಶಬ್ಧವು ಪರ್ವತದಿಂದ ಹಾಸಿಗಲ್ಲುಗಳು ಕೆಳಗೆ ಬೀಳುತ್ತಿರುವಂತೆ ಕೇಳಿಸಿತು. ಬೆದರಿ ನಡುಗುತ್ತ ಆ ದೈತ್ಯನಾರಿಯರು ವಿಚಿತ್ರ ಬಹುರತ್ನಗಳಿಂದ ಮತ್ತು ಬಂಗಾರದಿಂದ ನಿರ್ಮಿಸಲ್ಪಟ್ಟಿದ್ದ ತಮ್ಮ ಮನೆಗಳನ್ನು ಪ್ರವೇಶಿಸಿದರು. ಆ ಅದ್ಭುತಾಕಾರದ, ದೇವನಗರವನ್ನೂ ಮೀರಿದ ವಿಶಿಷ್ಠವಾದ ಉತ್ತಮ ನಗರವನ್ನು ನೋಡಿ ಅರ್ಜುನನು ಮಾತಲಿಗೆ ಹೇಳಿದನು: “ದೇವತೆಗಳು ಏಕೆ ಈ ಅಮೋಘ ಸ್ಥಳದಲ್ಲಿ ವಾಸಿಸುವುದಿಲ್ಲ? ಇದು ಪುರಂದರನ ಪುರಕ್ಕಿಂತಲೂ ವಿಶಿಷ್ಠವಾಗಿದೆ ಎಂದು ನನಗನ್ನಿಸುತ್ತದೆ.”

ಮಾತಲಿಯು ಹೇಳಿದನು: “ಪಾರ್ಥ! ಇದು ಹಿಂದೆ ನಮ್ಮ ದೇವರಾಜನದೇ ಪುರವಾಗಿತ್ತು. ಆದರೆ ನಿವಾತಕವಚರಿಂದ ಸುರರು ಹೊರಗಟ್ಟಲ್ಪಟ್ಟಿದ್ದರು. ಅವರು ಮಹಾತೀವ್ರ ತಪಸ್ಸನ್ನು ತಪಿಸಿ ಪಿತಾಮಹನ ಪ್ರಸಾದಕ್ಕೊಳಗಾದರು. ಇಲ್ಲಿಯೇ ವಾಸಿಸಿ ಯುದ್ಧದಲ್ಲಿ ದೇವತೆಗಳಿಂದ ಅಭಯವೇ ಅವರ ವರವಾಗಿತ್ತು. ಆಗ ಶಕ್ರನು ಭಗವಾನ್ ಸ್ವಯಂಭುವಿನ ಮೊರೆಹೊಕ್ಕನು. “ಭಗವಾನ್! ನಿನ್ನದೇ ಹಿತಕ್ಕಾಗಿ ಈ ವಿಷಯದಲ್ಲಿ ವಿಧಿಸು!” ಈ ವಿಷಯದಲ್ಲಿ ದೈವದಂತಾಗುವುದನ್ನು ಭಗವಾನನು ವಾಸವನಿಗೆ ಹೇಳಿದನು: “ವೃತ್ರಹನ್! ನೀನೇ ಇವರ ಅಂತ್ಯಕ್ಕೆ ಕಾರಣನಾಗುತ್ತೀಯೆ. ಆದರೆ ಬೇರೆಯೇ ದೇಹದಲ್ಲಿ!” ಆದುದರಿಂದ ಇವರ ವಧೆಗಾಗಿ ಶಕ್ರನು ನಿನಗೆ ಅಸ್ತ್ರಗಳನ್ನು ನೀಡಿದನು. ನೀನು ಸಂಹರಿಸಿದ ಇವರನ್ನು ಸುರರು ಸಂಹರಿಸಲು ಸಾಧ್ಯವಾಗುತ್ತಿರಲಿಲ್ಲ. ಕಾಲದ ಪರಿಣಾಮವಾಗಿ, ಇವರನ್ನು ಮುಗಿಸಲು ನೀನು ಇಲ್ಲಿಗೆ ಬಂದೆ ಮತ್ತು ಅದನ್ನು ಮಾಡಿದೆ ಕೂಡ. ದಾನವರ ವಿನಾಶಕ್ಕಾಗಿ ಮಹೇಂದ್ರನು ನಿನಗೆ ಉತ್ತಮವಾದ, ಮಹಾಬಲವಾದ ಮಹಾಸ್ತ್ರಗಳನ್ನು ನೀಡಿದನು.”

ಅರ್ಜುನನು ಆ ನಗರವನ್ನು ಪ್ರವೇಶಿಸಿ ದಾನವರನ್ನು ಕೊಂದು ಪುನಃ ಮಾತಲಿಯೊಂದಿಗೆ ದೇವಪೀಠಕ್ಕೆ ಬಂದನು

ಹಿರಣ್ಯಪುರಿಯ ನಾಶ

ಹಿಂದಿರುಗಿ ಬರುತ್ತಿರುವಾಗ ಅರ್ಜುನನು ದಿವ್ಯವಾದ, ಮನಬಂದಲ್ಲಿ ಹೋಗುವ, ಅಗ್ನಿ ಸೂರ್ಯರಿಗೆ ಸಮನಾದ ಪ್ರಭೆಯನ್ನು ಹೊಂದಿದ್ದ, ರತ್ನಮಯ ವೃಕ್ಷಗಳಿಂದ ಮತ್ತು ಬಣ್ಣಬಣ್ಣದ ಪಕ್ಷಿಗಳ, ನಿತ್ಯವೂ ಸಂತೋಷದಿಂದಿರುವ ಪೌಲೋಮ ಕಾಲಕೇಯರಿಂದ ಕೂಡಿದ್ದ, ಅಭೇದ್ಯವಾದ ಗೋಪುರಗಳಿಂದ, ದುರಾಸದವಾದ ನಾಲ್ಕು ದ್ವಾರಗಳಿಂದ ಕೂಡಿದ, ಸರ್ವರತ್ನಮಯವಾದ, ದಿವ್ಯವಾಗಿ ಅದ್ಭುತವಾಗಿ ಕಾಣುತ್ತಿರುವ, ಪುಷ್ಪಫಲಗಳಿಂದ ದಿವ್ಯರತ್ನಗಳಿಂದ ಆವೃತವಾದ ವೃಕ್ಷಗಳಿಂದ ಕೂಡಿದ ಇನ್ನೊಂದು ಮಹಾಪುರಿಯನ್ನು ನೋಡಿದನು. ಅದು ಸುಮನೋಹರ ದಿವ್ಯಪಕ್ಷಿಗಳಿಂದ ತುಂಬಿತ್ತು. ನಿತ್ಯವೂ ಸಂತೋಷದಿಂದಿರುವ, ಶೂಲ, ಈಟಿ, ಮುಸಲಾಯುಧಗಳನ್ನು ಹಾರಗಳನ್ನೂ ಧರಿಸಿರುವ, ಚಾಪಮುದ್ರಗಳನ್ನು ಕೈಯಲ್ಲಿ ಹಿಡಿದಿರುವ ಅಸುರರಿಂದ ಎಲ್ಲೆಡೆಯೂ ತುಂಬಿತ್ತು. ನೋಡಲು ಅದ್ಭುತವಾಗಿದ್ದ ದೈತ್ಯರ ಆ ಪುರವನ್ನು ನೋಡಿ ಅರ್ಜುನನು ಮಾತಲಿಯನ್ನು “ಕಾಣುತ್ತಿರುವ ಇದೇನಿದು?” ಎಂದು ಕೇಳಿದನು.

ಮಾತಲಿಯು ಹೇಳಿದನು: “ಪುಲೋಮ ಎಂಬ ಹೆಸರಿನ ಮಹಾಸುರೀ ದೈತ್ಯೆಯು ಸಹಸ್ರ ದಿವ್ಯವರ್ಷಗಳ ಪರ್ಯಂತ ಪರಮ ತಪವನ್ನು ನಡೆಸಿದಳು. ತಪಸ್ಸಿನ ಅಂತ್ಯದಲ್ಲಿ ಸ್ವಯಂಭುವು ಅವಳಿಗೆ ವರವನ್ನಿತ್ತನು. ಅವಳು ತನ್ನ ಮಕ್ಕಳು ಅಲ್ಪವೇ ದುಃಖವನ್ನನುಭವಿಸಲಿ, ಸುರ-ರಾಕ್ಷಸ-ಪನ್ನಗಗಳಿಗೆ ಅವಧ್ಯರಾಗಲಿ ಎಂದು ವರವನ್ನು ಬೇಡಿದಳು. ರಮಣೀಯವಾದ, ಆಕಾಶದಲ್ಲಿ ಸಂಚರಿಸುವ, ಸುಕೃತ ಪ್ರಭೆಯುಳ್ಳ, ಸರ್ವರತ್ನಗಳಿಂದ ತುಂಬಿದ, ಅಮರರಿಗೂ, ಯಕ್ಷಗಂಧರ್ವಗಣಗಳೊಂದಿಗೆ ಪನ್ನಗ-ಅಸುರ-ರಾಕ್ಷಸರಿಗೂ ದುರ್ಧರ್ಷವಾದ, ಸರ್ವಕಾಮಗಳನ್ನು ಪೂರೈಸುವ ಗುಣಗಳುಳ್ಳ, ಶೋಕವನ್ನು ನೀಗುವ, ಅನಾಮಯ ಈ ಪುರಿಯನ್ನು ಬ್ರಹ್ಮನು ಕಾಲಕೇಯರಿಗಾಗಿ ನಿರ್ಮಿಸಿದನು. ಅಮರರಿಗೆ ವರ್ಜಿತವಾದ ಈ ದಿವ್ಯ ಆಕಾಶಗಾಮಿಯಲ್ಲಿ ವೀರ ಪೌಲೋಮ ಕಾಲಕೇಯ ದಾನವರು ವಾಸಿಸುತ್ತಾರೆ. ಮಹಾಸುರ ಕಾಲಕೇಯರಿಂದ ಮತ್ತು ಪೌಲೋಮರಿಂದ ರಕ್ಷಿತವಾದ ಈ ಮಹಾನಗರಿಯು ಹಿರಣ್ಯಪುರಿಯೆಂದು ಖ್ಯಾತಿಯಾಗಿದೆ. ಇವರು ನಿತ್ಯವೂ ಸಂತೋಷದಿಂದಿರುತ್ತಾರೆ ಮತ್ತು ಸರ್ವದೇವತೆಗಳಿಗೂ ಅವಧ್ಯರು. ಇಲ್ಲಿ ಅವರು ಉದ್ವೇಗಗಳನ್ನು ನೀಗಿ, ನಿರುತ್ಸಾಹಕರಾಗಿ ವಾಸಿಸುತ್ತಿದ್ದಾರೆ. ಆದರೆ ಮನುಷ್ಯನು ಇವರ ಮೃತ್ಯು ಎಂದು ಹಿಂದೆ ಬ್ರಹ್ಮನು ನಿರ್ದೇಶಿಸಿದ್ದನು.”

ಸುರಾಸುರರಿಂದ ಅವರು ಅವಧ್ಯರೆಂದು ತಿಳಿದ ನಂತರ ಅರ್ಜುನನು ಸಂತೋಷದಿಂದ ಮಾತಲಿಗೆ ಹೇಳಿದನು: “ಬೇಗನೇ ಆ ಪುರಕ್ಕೆ ಹೋಗು. ತ್ರಿದಶೇಶ ವೈರಿಗಳಾದ ಅವರನ್ನು ನಾನು ಅಸ್ತ್ರಗಳಿಂದ ಕ್ಷಯಗೊಳಿಸುತ್ತೇನೆ. ಸುರರ ವೈರಿಗಳಾದ ಈ ಪಾಪಿಗಳು ನನಗೆ ಅವಧ್ಯರಲ್ಲ ಎಂದು ನನಗೆ ತಿಳಿಯಿತು.” ಮಾತಲಿಯು ದಿವ್ಯ ಕುದುರೆಗಳನ್ನು ಕಟ್ಟಿದ್ದ ಆ ರಥವನ್ನು ಶೀಘ್ರವಾಗಿ ಆ ಹಿರಣ್ಯಪುರಿಯ ಹತ್ತಿರ ಕೊಂಡೊಯ್ದನು. ವಿಚಿತ್ರವಾದ ಆಭರಣಗಳನ್ನೂ ಬಟ್ಟೆಗಳನ್ನೂ ಉಟ್ಟಿದ್ದ ಆ ದೈತ್ಯರು ಅರ್ಜುನನನ್ನು ನೋಡಿ ಮಹಾವೇಗದಲ್ಲಿ ಒಂದಾಗಿ ಕವಚಗಳನ್ನು ಧರಿಸಿ ರಥಗಳನ್ನೇರಿದರು. ಆ ತೀವ್ರಪರಾಕ್ರಮಿ ದಾನವೇಂದ್ರರು ಕೃದ್ಧರಾಗಿ ಅವನ ಮೇಲೆ ಈಟಿ, ಕಬ್ಬಿಣದ ಬಾಣಗಳು, ಶಕ್ತಿ, ವೃಷ್ಠಿ ತೋಮರಗಳಿಂದ ಆಕ್ರಮಣ ಮಾಡಿದರು. ಅದನ್ನು ಅರ್ಜುನನು ಅಸ್ತ್ರಗಳ ಮಹಾವರ್ಷದಿಂದ ತಡೆದನು. ಆ ಮಹಾಶಸ್ತ್ರವರ್ಷವು ಅವನ ವಿದ್ಯಾಬಲವನ್ನಾಶ್ರಯಿಸಿತ್ತು. ರಣದಲ್ಲಿ ತನ್ನ ರಥದ ಚಲನೆಯಿಂದ ಅರ್ಜುನನು ಅವರೆಲ್ಲರನ್ನೂ ಮರುಳು ಮಾಡಿದನು. ಸಮ್ಮೂಢರಾದ ಆ ದಾನವರು ಅನ್ಯೋನ್ಯರನ್ನು ಹೊಡೆಯುತ್ತಿದ್ದರು. ವಿಮೂಢರಾಗಿ ಅನ್ಯೋನ್ಯರನ್ನು ಆಕ್ರಮಣಮಾಡುತ್ತಿದ್ದ ಅವರ ನೂರಾರು ಶಿರಗಳನ್ನು ಅರ್ಜುನನು ಉರಿಯುತ್ತಿರುವ ಮೊನೆಗಳ ಬಾಣಗಳಿಂದ ಕತ್ತರಿಸಿದನು. ದೈತ್ಯರು ವಧಿಸಲ್ಪಡುತ್ತಿರಲು ಅವರು ಪುನಃ ಆ ಪುರವನ್ನು ಸೇರಿ, ದಾನವೀಯ ಮಾಯೆಯಿಂದ ನಗರದೊಂದಿಗೆ ಆಕಾಶವನ್ನೇರಿದರು. ಆಗ ಅರ್ಜುನನು ಮಹಾ ಶರವರ್ಷದಿಂದ ದೈತ್ಯರ ಮಾರ್ಗವನ್ನು ಆವರಿಸಿ ತಡೆದು ಅವರ ಚಲನೆಯನ್ನು ನಿಲ್ಲಿಸಿದನು. ದೈತ್ಯರಿಗೆ ಕೊಟ್ಟಿರುವ ವರದಿಂದಾಗಿ ಅವರು ಆ ದಿವ್ಯವಾದ, ದಿವ್ಯವರ್ಚಸ್ಸಿನ, ಬೇಕಾದಲ್ಲಿ ಹೋಗಬಹುದಾದ, ಆಕಾಶಗಾಮಿ ಪುರವನ್ನು ಸುಲಭವಾಗಿ ಹಿಡಿದುಕೊಂಡಿದ್ದರು.  ಭೂಮಿಯೊಳಗೆ ಬೀಳುತ್ತಿತ್ತು, ಮತ್ತೆ ಪುನಃ ಮೇಲೆ ನಿಲ್ಲುತ್ತಿತ್ತು, ಪುನಃ ಓರೆಯಾಗಿ ಹಾರುತ್ತಿತ್ತು ಮತ್ತೆ ಪುನಃ ನೀರಿನಲ್ಲಿ ಮುಳುಗುತ್ತಿತ್ತು. ಅಮರಾವತಿಯಂತಿರುವ ಬೇಕಾದಲ್ಲಿ ಹೋಗಬಲ್ಲ ಆ ಪುರಿಯನ್ನು ಅರ್ಜುನನು ಬಹುವಿಧದ ಅಸ್ತ್ರಗಳಿಂದ ಆಕ್ರಮಣ ಮಾಡಿದನು. ಆಗ ಅವನು ದೈತ್ಯರೊಂದಿಗೆ ಆ ಪುರವನ್ನು ದಿವ್ಯಾಸ್ತ್ರಗಳಿಂದ ಹೊರಟ ಶರಜಾಲದಿಂದ ಮುಚ್ಚಿದನು. ಅವನು ಬಿಟ್ಟ ನೇರವಾಗಿ ಹೋಗುತ್ತಿದ್ದ ಉಕ್ಕಿನ ಬಾಣಗಳಿಂದ ಗಾಯಗೊಂಡ ಆ ಅಸುರಪುರಿಯು ಪುಡಿಯಾಗಿ ಭೂಮಿಯ ಮೇಲೆ ಬಿದ್ದಿತು. ಮಿಂಚಿನ ವೇಗದ ಅವನ ಉಕ್ಕಿನ ಬಾಣಗಳ ಹೊಡತಕ್ಕೆ ಸಿಲುಕಿದ ಅಸುರರು ಕಾಲಚೋದಿತರಾಗಿ ಸುತ್ತಲೂ ತಿರುಗುತ್ತಿದ್ದರು. ಆ ಪುರವು ಮುರಿದು ಬೀಳುತ್ತಿರಲು ಮಾತಲಿಯು ಆದಿತ್ಯವರ್ಚಸವಾದ ರಥವನ್ನು ಕ್ಷಿಪ್ರವಾಗಿ ಒಂದೇಸಮನೆ ಭೂಮಿಗಿಳಿಸಿದನು. ಆಗ ಯುದ್ಧಮಾಡುತ್ತಿರುವ ಆ ಅಮರ್ಷಿಗಳ ಅರವತ್ತು ಸಾವಿರ ರಥಗಳು ಅರ್ಜುನನನ್ನು ಸುತ್ತುವರೆದಿರಲು ಆ ಯುದ್ಧದಲ್ಲಿ ಅವನು ಅವುಗಳನ್ನು ಹದ್ದಿನ ರೆಕ್ಕೆಯ ವಾಜಿಗಳಿಂದ ಕೂಡಿದ ನಿಶಿತ ಬಾಣಗಳಿಂದ ಹೊಡೆದನು. ಅವರು ಅಲೆಗಳಂತೆ ಸಮುದ್ರಕ್ಕೆ ಬಿದ್ದರು. ಇವರನ್ನು ಯುದ್ಧದಲ್ಲಿ ಯಾವ ಮನುಷ್ಯನಿಗೂ ಸೋಲಿಸಲು ಸಾಧ್ಯವಿಲ್ಲವೆಂದು ಯೋಚಿಸಿ ಅರ್ಜುನನು ಒಂದಾದ ಮೇಲೊಂದರಂತೆ ಅವನ ಎಲ್ಲ ಅಸ್ತ್ರಗಳನ್ನೂ ಬಳಸಿದನು. ಕ್ರಮೇಣವಾಗಿ ಆ ಚಿತ್ರಯೋಧಿಗಳ ಸಹಸ್ರರಥಗಳು ಮತ್ತು ಅವನ ದಿವ್ಯಾಸ್ತ್ರಗಳು ಪರಸ್ಪರರನ್ನು ನಾಶಪಡಿಸಿದವು. ಆ ಸಂಗ್ರಾಮದಲ್ಲಿ ವಿಚಿತ್ರ ರಥಮಾರ್ಗಗಳಲ್ಲಿ ಚಲಿಸುತ್ತಿರುವ ನೂರಾರು ಸಾವಿರಾರು ಮಹಾರಥಿಗಳು ಕಂಡುಬಂದರು. ವಿಚಿತ್ರ ಮುಕುಟ-ಪೇಟಗಳು, ವಿಚಿತ್ರ ಕವಚ ಧ್ವಜಗಳು, ಮತ್ತು ವಿಚಿತ್ರ ಆಭರಣಗಳು ಅರ್ಜುನನ ಮನಸ್ಸಿಗೆ ಅತೀವ ಆನಂದವನ್ನು ನೀಡಿದವು. ಆದರೆ ರಣದಲ್ಲಿ ಅಸ್ತ್ರಗಳಿಂದ ಬಿಡಲ್ಪಟ್ಟ ಶರವರ್ಷಗಳಿಂದಲೂ ಅವನು ಅವರನ್ನು ಪೀಡಿಸಲು ಶಕ್ತನಾಗಲಿಲ್ಲ. ಅವರಿಗೂ ಕೂಡ ಅರ್ಜುನನನ್ನು ಪೀಡಿಸಲಾಗಲಿಲ್ಲ. ಯುದ್ದದಲ್ಲಿ ಕುಶಲರೂ ಕೃತಾಸ್ತ್ರರೂ ಆದ ಬಹಳಷ್ಟು ಮಂದಿ ಅವರಿಂದ ಪೀಡಿತನಾದ ಅರ್ಜುನನು ಆ ಮಹಾಯುದ್ಧದಲ್ಲಿ ವ್ಯಥಿತನಾದನು ಮತ್ತು ಮಹಾಭಯವು ಅವನನ್ನು ತುಂಬಿಕೊಂಡಿತು. ಆಗ ಅವನು ರಣದಲ್ಲಿ ದೇವದೇವೇಶ ರುದ್ರನಿಗೆ ನಮಸ್ಕರಿಸಿದನು. ಇರುವವುಗಳಿಗೆ ಮಂಗಳವಾಗಲಿ ಎಂದು ರೌದ್ರವೆಂದು ಖ್ಯಾತವಾದ, ಸರ್ವಶತ್ರುಗಳನ್ನೂ ನಾಶಪಡಿಸಬಲ್ಲ ಮಹಾಸ್ತ್ರವನ್ನು ಹೂಡಿದನು.

ಆಗ ಅರ್ಜುನನು ಮೂರುಶಿರಗಳ, ಒಂಭತ್ತು ಕಣ್ಣುಗಳ, ಮೂರು ಮುಖಗಳ, ಆರು ಭುಜಗಳ, ರೋಮರೋಮಗಳಲ್ಲಿ ಸೂರ್ಯನ ಜ್ವಾಲೆಯಂತೆ ಉರಿಯುತ್ತಿರುವ, ತಲೆಯು ನಾಲಿಗೆಯನ್ನು ಚಾಚಿರುವ ಮಹಾನಾಗಗಳಿಂದ ಆವೃತವಾಗಿರುವ ಪುರುಷನನ್ನು ನೋಡಿದನು. ಸನಾತನವಾದ ಘೋರವಾದ ಆ ರೌದ್ರಾಸ್ತ್ರವನ್ನು ಕಂಡು ಅರ್ಜುನನು ವಿಭೀತನಾಗಿ, ಅದನ್ನು ತನ್ನ ಗಾಂಡೀವದ ಮೇಲಿರಿಸಿದನು. ದಾನಾವೇಂದ್ರರ ಪರಾಭವಕ್ಕೆಂದು ತ್ರಿನೇತ್ರ, ಶರ್ವ ಅಮಿತತೇಜಸ್ವಿಗೆ ನಮಸ್ಕರಿಸಿ ಅದನ್ನು ಬಿಟ್ಟನು. ಅದನ್ನು ಬಿಟ್ಟಕೂಡಲೇ ಅಲ್ಲಿ ಸಹಸ್ರಾರು ರೂಪಗಳು ರಣದಲ್ಲಿ ಎಲ್ಲೆಡೆ ಕಾಣಿಸಿಕೊಂಡವು - ಜಿಂಕೆಗಳು, ಸಿಂಹಗಳು, ಹುಲಿಗಳು, ಕರಡಿಗಳು, ಎಮ್ಮೆಗಳು, ಹಾವುಗಳು, ಗೋವುಗಳು, ಆನೆಗಳು, ಸೂಮರಗಳು, ಶರಭಗಳು, ಹೋರಿಗಳು, ಹಂದಿಗಳು, ಕಪಿಗಳು, ಹಯೀನಗಳು, ಪ್ರೇತಗಳು, ಭುರುಂಡಗಳು, ಹದ್ದುಗಳು, ಗರುಡಗಳು, ಮೊಸಳೆಗಳು, ಪಿಶಾಚಿಗಳು, ಯಕ್ಷರು, ಸುರದ್ವಿಶರು, ಗುಹ್ಯಕರು, ನೈರುತ್ತರು, ಆನೆಯ ಮುಖದ ಮೀನುಗಳು, ಗೂಬೆಗಳು, ಮೀನು-ಆಮೆಗಳ ಸಮೂಹಗಳು, ನಾನಾಶಸ್ತ್ರಗಳನ್ನು ಹಿಡಿದಿರುವ, ಗದಾ ಮುದ್ಗರಗಳನ್ನು ಧರಿಸಿರುವ ಯೋಧರೂ, ಮತ್ತು ಹೀಗಿರುವ ಅನ್ಯ ಬಹುಸಂಖ್ಯೆಯ ನಾನಾರೂಪಗಳನ್ನು ಧರಿಸಿರುವವು ಆ ಅಸ್ತ್ರವನ್ನು ವಿಸರ್ಜಿಸಿದಾಗ ಸರ್ವಜಗತ್ತನ್ನೂ ವ್ಯಾಪಿಸಿದವು. ಅಲ್ಲಿ ಸೇರಿದ್ದ ದಾನವರನ್ನು ವಧಿಸಿ, ಮಾಂಸ, ಕೊಬ್ಬು ಮತ್ತು ಎಲುಬುಗಳನ್ನು ಭಕ್ಷಿಸುತ್ತಿರುವ ಮೂರುಶಿರಗಳ, ನಾಲ್ಕು ದಾಡೆಗಳ, ನಾಲ್ಕು ಮುಖಗಳ, ನಾಲ್ಕು ಭುಜಗಳ ಅನೇಕ ರೂಪಗಳು ಕಂಡುಬಂದವು. ಉರಿಯುತ್ತಿರುವ ಸೂರ್ಯನ ತೇಜಸ್ಸನ್ನು ಹೊಂದಿದ್ದ, ಮಿಂಚಿನಂತೆ ಹೊಳೆಯುತ್ತಿದ್ದ, ಕಲ್ಲುಬಂಡೆಗಳಂತೆ ಗಟ್ಟಿಯಾಗಿದ್ದ, ಅರಿಗಳನ್ನು ಪೀಡಿಸಬಲ್ಲ ಅನ್ಯ ಬಾಣಗಳಿಂದ ಆ ದಾನವರೆಲ್ಲರನ್ನೂ ಅರ್ಜುನನು ಕ್ಷಣದಲ್ಲಿ ಸಂಹರಿಸಿದನು. ಗಾಂಡೀವದಿಂದ ಹೊರಟ ಅಸ್ತ್ರಗಳಿಂದ ಹೊಡೆಯಲ್ಪಟ್ಟು ನಭದಿಂದ ಸತ್ತು ಕೆಳಗೆ ಅವರು ಬೀಳುತ್ತಿರುವುದನ್ನು ನೋಡಿ ಅರ್ಜುನನು ಪುನಃ ತ್ರಿಪುರಘ್ನನಿಗೆ ನಮಸ್ಕರಿಸಿದನು. ದಿವ್ಯಾಭರಣ ಭೂಷಿತ ರಾಕ್ಷಸರು ರೌದ್ರಾಸ್ತ್ರದಿಂದ ಪುಡಿಪುಡಿಯಾದುದನ್ನು ನೋಡಿ ದೇವಸಾರಥಿಯು ಪರಮ ಹರ್ಷವನ್ನು ತಾಳಿದನು. ದೇವತೆಗಳಿಗೂ ದುರಾಸದವಾದ ಕೆಲಸವನ್ನು ಅರ್ಜುನನು ಮಾಡಿದುದನ್ನು ನೋಡಿ ಶಕ್ರಸಾರಥಿ ಮಾತಲಿಯು ಅವನನ್ನು ಗೌರವಿಸಿದನು. ಕೈಗಳನ್ನು ಮುಗಿದು ಪ್ರೀತಿಯಿಂದ ಈ ಮಾತುಗಳನ್ನಾಡಿದನು: “ನೀನು ಸಾಧಿಸಿದ್ದುದು ಸುರಾಸುರರಿಗೂ ಕಷ್ಟಸಾದ್ಯವಾದುದು. ಸುರೇಶ್ವರನಿಗೂ ಕೂಡ ಯುದ್ದದಲ್ಲಿ ಇದನ್ನು ಮಾಡಲು ಆಗುತ್ತಿರಲಿಲ್ಲ. ಸುರಾಸುರರಿಂದಲೂ ಅವಧ್ಯವಾದ ಆಕಾಶದಲ್ಲಿರುವ ಈ ಮಹಾ ಪುರವನ್ನು ನೀನು ನಿನ್ನ ವೀರ್ಯ, ಅಸ್ತ್ರ ಮತ್ತು ತಪೋಬಲಗಳಿಂದ ಪುಡಿಮಾಡಿದ್ದೀಯೆ.”

ಆ ಪುರವು ಧ್ವಂಸಗೊಳ್ಳಲು ಮತ್ತು ಅಲ್ಲಿದ್ದ ದಾನವರು ಹತರಾಗಲು ರೋದಿಸುತ್ತಿರುವ ಸ್ತ್ರೀಯರೆಲ್ಲರೂ ನಗರದಿಂದ ಹೊರಬಂದರು. ಕೆದರಿದ ಕೂದಲುಗಳ, ವ್ಯಥಿತರಾಗಿ ಕುರವಗಳಂತೆ ದುಃಖಿತರಾಗಿದ್ದ ಅವರು ನೆಲದಮೇಲೆ ಬಿದ್ದು ಪುತ್ರರು, ಪಿತರು ಮತ್ತು ಭ್ರಾತೃಗಳಿಗಾಗಿ ಶೋಕಿಸುತ್ತಾ ಅಳುತ್ತಿದ್ದರು. ಎದೆಯನ್ನು ಕೈಗಳಿಂದ ಹೊಡೆಯುತ್ತಾ, ಹಾರ ಆಭರಣಗಳನ್ನು ಕಿತ್ತು ಬಿಸಾಡುತ್ತಾ, ದೀನಕಂಠದಲ್ಲಿ ಹತರಾದ ಒಡೆಯರ ಕುರಿತು ರೋದಿಸುತ್ತಿದ್ದರು. ಶೋಕಯುಕ್ತವಾದ, ಶ್ರೀಯನ್ನು ಕಳೆದುಕೊಂಡ, ದುಃಖ-ದೈನ್ಯದಿಂದ ಕೂಡಿದ ಆ ದಾನವಪುರವು ವೈಭವವನ್ನು ಕಳೆದುಕೊಂಡು ಒಡೆಯರನ್ನು ಕಳೆದುಕೊಂಡು ಹೊಳೆಯಲಿಲ್ಲ. ಗಂದರ್ವನಗರಿಯಂತಿದ್ದ ಆ ಪುರವು ಆನೆಗಳನ್ನು ಕಳೆದುಕೊಂಡ ಸರೋವರದಂತೆ, ಒಣಗಿದ ಮರಗಳನ್ನುಳ್ಳ ಅರಣ್ಯದಂತೆ ಅದೃಷ್ಯವಾಯಿತು. ಅರ್ಜುನನು ಕೃತಕರ್ಮನಾದೆನೆಂದು ಸಂಹೃಷ್ಟಮನಸ್ಕನಾದ ಮಾತಲಿಯು ಬೇಗನೇ ದೇವರಾಜನ ಭವನಕ್ಕೆ ಕರೆತಂದನು. ಹಿರಣ್ಯಪುರವನ್ನು ಧ್ವಂಸಗೊಳಿಸಿ, ಮಹಾಸುರ ನಿವಾತಕವಚರನ್ನೂ ಸಂಹರಿಸಿ ಅರ್ಜುನನು ಶಕ್ರನಲ್ಲಿಗೆ ಬಂದನು. ದೇವೇಂದ್ರನಿಗೆ ಮಾತಲಿಯು ಅರ್ಜುನನು ಮಾಡಿದುದನ್ನು ಹಿರಣ್ಯಪುರವನ್ನು ಧ್ವಂಸಗೊಳಿಸಿದುದು, ಮಾಯೆಗಳ ನಿವಾರಣೆ, ಯುದ್ಧದಲ್ಲಿ ಮಹೌಜಸರಾದ ನಿವಾತಕವಚರ ವಧೆ ಎಲ್ಲವನ್ನೂ ವಿಸ್ತಾರವಾಗಿ ಹೇಗೆ ನಡೆಯಿತೋ ಹಾಗೆ ಹೇಳಿದನು. ಅದನ್ನು ಕೇಳಿ ಪ್ರೀತನಾದ ಭಗವಾನ್ ಸಹಸ್ರಾಕ್ಷ, ಶ್ರೀಮಾನ್ ಪುರಂದರನು ಮರುದ್ಗಣಗಳೊಂದಿಗೆ “ಸಾಧು! ಸಾಧು!” ಎಂದು ಹೇಳಿದನು. ದೇವರಾಜನು ಪುನಃ ಪುನಃ ಅರ್ಜುನನನ್ನು ಹುರಿದುಂಬಿಸುತ್ತಾ ವಿಬುಧರ ಜೊತೆಗೆ ಈ ಸುಮಧುರ ಮಾತುಗಳನ್ನಾಡಿದನು: “ದೇವಾಸುರರಿಗೂ ಅತಿಯಾದ ಕರ್ಮವನ್ನು ನೀನು ರಣದಲ್ಲಿ ಮಾಡಿದ್ದೀಯೆ. ಪಾರ್ಥ! ನನ್ನ ಶತ್ರುಗಳನ್ನು ನಾಶಪಡಿಸಿ ಮಹಾ ಗುರುದಕ್ಷಿಣೆಯನ್ನು ಇತ್ತಿದ್ದೀಯೆ. ನೀನು ಸದಾ ಸಮರದಲ್ಲಿ ಸ್ಥಿರಭಾವದಲ್ಲಿರುವೆ. ಸಮ್ಮೂಢನಾಗದೇ ಅಸ್ತ್ರಗಳ ಕರ್ತವ್ಯವನ್ನು ಅರ್ಥಮಾಡಿಕೊಂಡಿರುವೆ. ರಣದಲ್ಲಿ ನಿನ್ನನ್ನು ದೇವ, ದಾನವ, ರಾಕ್ಷಸರು, ಯಕ್ಷ, ಅಸುರ, ಗಂಧರ್ವ, ಪಕ್ಷಿಗಣ ಮತ್ತು ಪನ್ನಗಗಳೊಂದಿಗೆ ಸಹಿಸಲಾರರು. ನಿನ್ನ ಬಾಹುಬಲದಿಂದ ಗಳಿಸುವ ವಸುಧೆಯನ್ನು ಧರ್ಮಾತ್ಮ ಕುಂತೀಪುತ್ರ ಯುಧಿಷ್ಠಿರನು ಪಾಲಿಸುತ್ತಾನೆ.”

Leave a Reply

Your email address will not be published. Required fields are marked *