Related imageಚಿತ್ರಾಂಗದ-ವಿಚಿತ್ರವೀರ್ಯ

ವಿವಾಹಕಾರ್ಯಗಳು ಮುಗಿದ ನಂತರ ನೃಪ ಶಂತನು ರಾಜನು ಆ ರೂಪಸಂಪನ್ನ ಕನ್ಯೆಯೊಂದಿಗೆ ಕೂಡಿ ತನ್ನ ಮನೆಯಲ್ಲಿ ವಾಸಿಸತೊಡಗಿದನು. ಶಂತನುವಿಗೆ ಸತ್ಯವತಿಯು ವೀರತೆಯಲ್ಲಿ ಮನುಷ್ಯರೆಲ್ಲರನ್ನೂ ಮೀರಿದ ಚಿತ್ರಾಂಗದ ಎನ್ನುವ ಧೀಮಂತ ವೀರ ಪುತ್ರನಿಗೆ ಜನ್ಮವಿತ್ತಳು. ನಂತರ ಪುನಃ ಆ ಮಹೇಷ್ವಾಸ ಪ್ರಭುವು ಸತ್ಯವತಿಯಲ್ಲಿ ವಿಚಿತ್ರವೀರ್ಯನೆನ್ನುವ ವೀರ್ಯವಂತ ರಾಜಪುತ್ರನನ್ನು ಪಡೆದನು. ಅವರು ಯೌವನವನ್ನು ಹೊಂದುವುದರೊಳಗೇ ಆ ಧೀಮಾನ್ ರಾಜ ಶಂತನುವು ಕಾಲಧರ್ಮಕ್ಕೊಳಗಾದನು. ಶಂತನುವು ಸ್ವರ್ಗವಾಸಿಯಾದ ನಂತರ ಭೀಷ್ಮನು, ಸತ್ಯವತಿಯ ಇಚ್ಛೆಯಂತೆ, ಅರಿಂದಮ ಚಿತ್ರಾಂಗದನನ್ನು ರಾಜಸಿಂಹಾಸನದಲ್ಲಿ ಕೂರಿಸಿದನು. ಚಿತ್ರಾಂಗದನಾದರೂ ತನ್ನ ಶೌರ್ಯದಿಂದ ಪೃಥ್ವಿಯ ಸರ್ವ ಪಾರ್ಥಿವರನ್ನೂ ಮನುಷ್ಯರಲ್ಲಿ ತನ್ನ ಸದೃಶ ಯಾರೂ ಇಲ್ಲವೇನೋ ಎನ್ನುವಂತೆ ಗೆದ್ದನು. ಈ ರೀತಿ ಅವನು ಎಲ್ಲ ಸುರರು, ಮನುಷ್ಯರು, ಅಸುರರೆಲ್ಲರನ್ನೂ ಗೆದ್ದಾಗ, ಅದೇ ಹೆಸರನ್ನು ಪಡೆದಿದ್ದ, ಬಲವಂತ ಗಂಧರ್ವರಾಜನು ಅವನನ್ನು ಎದುರಿಸಿದನು. ಅವರೀವರ್ವರ ಮಧ್ಯೆ ಕುರುಕ್ಷೇತ್ರದಲ್ಲಿ ಮಹಾ ಯುದ್ಧವೇ ನಡೆಯಿತು. ಆ ಬಲವಂತ ಗಂಧರ್ವ-ಕುರುಮುಖ್ಯರ ನಡುವೆ ಹಿರಣ್ವತೀ ನದೀತೀರದಲ್ಲಿ ಮೂರು ವರ್ಷಗಳ ಕಾಲ ಯುದ್ಧ ನಡೆಯಿತು. ಒಂದೇ ಸಮನೆ ಶಸ್ತ್ರವೃಷ್ಠಿಯಾಗುತ್ತಿದ್ದ ಆ ಘೋರ ಯುದ್ಧದಲ್ಲಿ ಅಧಿಕ ಮಾಯೆಯ ವೀರ ಗಂಧರ್ವನು ಕುರುಸತ್ತಮನನ್ನು ವಧಿಸಿದನು. ವಿಚಿತ್ರ ಶರಕಾರ್ಮುಕ ಕುರುಶ್ರೇಷ್ಠ ಚಿತ್ರಾಂಗದನನ್ನು ಕೊನೆಗೊಳಿಸಿ ಗಂಧರ್ವನು ದೇವಲೋಕವನ್ನು ಸೇರಿದನು. ಆ ಭೂರಿವರ್ಚಸ ನೃಪತಿಶಾರ್ದೂಲನು ತೀರಿಕೊಂಡ ನಂತರ ಬೀಷ್ಮ ಶಾಂತನವನು ಅವನ ಪ್ರೇತಕಾರ್ಯಗಳನ್ನು ನೆರವೇರಿಸಿದನು. ಆ ಮಹಾಬಾಹುವು ಇನ್ನೂ ಯೌವನವನ್ನು ಪಡೆಯದಿದ್ದ ಬಾಲಕ ವಿಚಿತ್ರವೀರ್ಯನನ್ನು ಕುರುರಾಜನನ್ನಾಗಿ ಅಭಿಷೇಕಿಸಿದನು. ವಿಚಿತ್ರವೀರ್ಯನಾದರೂ ಭೀಷ್ಮನ ವಚನವನ್ನು ಪರಿಪಾಲಿಸುತ್ತಾ ತನ್ನ ಪಿತ ಪಿತಾಮಹರ ರಾಜ್ಯವನ್ನು ಆಳಿದನು. ಆ ಧರ್ಮಶಾಸ್ತ್ರಕುಶಲ ನೃಪನು ಭೀಷ್ಮ ಶಾಂತನವನನ್ನು ಪೂಜಿಸುತ್ತಾ ಧರ್ಮದಿಂದ ರಾಜ್ಯವಾಳಿದನು.

ಚಿತ್ರಾಂಗದನು ಹತನಾದ ನಂತರ ಅನಘ ಭೀಷ್ಮನು, ಸತ್ಯವತಿಯ ಮತದಂತೆ, ತನ್ನ ಬಾಲಕ ತಮ್ಮನ ಮೂಲಕ ಆ ರಾಜ್ಯವನ್ನು ಪಾಲಿಸಿದನು. ತನ್ನ ತಮ್ಮನಿಗೆ ಯೌವನಪ್ರಾಪ್ತಿಯಾದುದನ್ನು ಕಂಡ ಧೀಮಂತರಲ್ಲಿ ಶ್ರೇಷ್ಠ ಭೀಷ್ಮನು ವಿಚಿತ್ರವೀರ್ಯನ ವಿವಾಹಮಾಡಬೇಕೆಂದು ನಿರ್ಧರಿಸಿದನು. ಆಗ ಭೀಷ್ಮನು ಕಾಶಿಪತಿಗೆ ಮೂವರು ಅಪ್ಸರಸಮ ಕನ್ಯೆಯರಿದ್ದಾರೆ ಮತ್ತು ಅವರು ಒಟ್ಟಿಗೇ ಸ್ವಯಂವರದಲ್ಲಿ ವರರನ್ನು ಆರಿಸುವವರಿದ್ದಾರೆ ಎಂದು ಕೇಳಿದನು. ಅವನ ತಾಯಿಯ ಅನುಮತಿಯನ್ನು ಪಡೆದು, ಆ ರಥಿಗಳಲ್ಲಿ ಶ್ರೇಷ್ಠನು, ಆಯುಧ-ಕವಚಗಳನ್ನು ಧರಿಸಿ, ರಥವನ್ನೇರಿ ಒಬ್ಬನೇ ವಾರಣಾಸೀ ಪುರಕ್ಕೆ ಹೋದನು. ಅಲ್ಲಿ ಶಂತನುನಂದನ ಭೀಷ್ಮನು ಎಲ್ಲಕಡೆಯಿಂದಲೂ ಬಂದು ಸೇರಿದ್ದ ಶ್ರೀಮಂತ ರಾಜಕುಮಾರರ ಮಧ್ಯೆ ಮೂವರು ಕನ್ಯೆಯರನ್ನು ನೋಡಿದನು. ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ರಾಜರುಗಳ ಹೆಸರುಗಳನ್ನು ಹೇಳುತ್ತಿದ್ದ ಹಾಗೆಯೇ ಆ ಪ್ರಭು ಭೀಷ್ಮನು ಅವರನ್ನು ವರಿಸಿದನು. ಖಡ್ಗಧಾರಿಗಳಲ್ಲಿ ಶ್ರೇಷ್ಠ ಭೀಷ್ಮನು ಆ ಕನ್ಯೆಯರನ್ನು ರಥದ ಮೇಲೇರಿಸುತ್ತಾ ಮಹೀಪಾಲರನ್ನುದ್ದೇಷಿಸಿ ಗುಡುಗಿನ ಸ್ವರದಲ್ಲಿ ಕೂಗಿ ಹೇಳಿದನು:

ಗುಣವಂತರನ್ನು ಆಮಂತ್ರಿಸಿ ಕನ್ಯೆಯನ್ನು ದಾನವಾಗಿ ಕೊಡಬೇಕು ಎಂದು ತಿಳಿದವರು ಹೇಳುತ್ತಾರೆ. ಅಥವಾ ಅವರನ್ನು ಯಥಾಶಕ್ತಿ ಅಲಂಕರಿಸಿ ಧನವನ್ನಿತ್ತು ಕೊಡಬೇಕು ಎನ್ನುತ್ತಾರೆ. ಕೆಲವರು ತಮ್ಮ ಕನ್ಯೆಯರನ್ನು ಗೋವಿನ ಜೋಡಿಗೂ ಮದುವೆ ಮಾಡಿ ಕೊಡುತ್ತಾರೆ. ಅನ್ಯರು ವಿತ್ತದ ಕುರಿತು ಮಾತನಾಡಿ ಒಯ್ಯುತ್ತಾರಾದರೆ ಇನ್ನು ಕೆಲವರು ಬಲವಂತದಿಂದ ಕರೆದೊಯ್ಯುತ್ತಾರೆ. ಕೆಲವರು ಪ್ರಮತ್ತರಾದಾಗ ಮದುವೆಯಾಗುತ್ತಾರೆ, ಇನ್ನು ಕೆಲವರು ಸ್ವಯಂ ಹುಡುಕಿ ಮದುವೆಯಾಗುತ್ತಾರೆ. ಕವಿಗಳು ಹೇಳಿದ, ರಾಜರಲ್ಲಿ ಪ್ರಶಂಸನೀಯ ರೂಢಿಯಲ್ಲಿರುವ ಸ್ವಯಂವರವು ಎಂಟನೆಯ ವಿವಾಹ ವಿಧಿಯೆಂದು ತಿಳಿಯಿರಿ. ಆದರೆ ಧರ್ಮವಾದಿಗಳು ಅಪಹರಿಸಿ ಮದುವೆಯಾಗುವುದೇ ಶ್ರೇಷ್ಠವೆಂದು ಹೇಳುತ್ತಾರೆ. ಇಲ್ಲಿರುವ ಪೃಥಿವೀಪಾಲರೇ! ನಾನು ಇವರನ್ನು ಬಲತ್ಕಾರವಾಗಿ ಕೊಂಡೊಯ್ಯುತ್ತಿದ್ದೇನೆ. ಯಾರಿಗಾದರೂ ಪರಮ ಶಕ್ತಿಯಿದ್ದರೆ ಬನ್ನಿ. ನನ್ನನ್ನು ಸೋಲಿಸಿ ಅಥವಾ ನನ್ನಿಂದ ಸೋಲನ್ನು ಹೊಂದಿ. ಪೃಥಿವೀಪಾಲರೇ! ಯುದ್ಧದ ನಿಶ್ಚಯಮಾಡಿಯೇ ನಾನಿಲ್ಲಿ ಬಂದಿದ್ದೇನೆ.

ಈ ರೀತಿ ಕಾಶಿರಾಜ ಮತ್ತು ಮಹೀಪಾಲರಿಗೆ ಹೇಳಿ ಎಲ್ಲ ಕನ್ಯೆಯರನ್ನೂ ಸ್ವತಃ ತಾನೇ ರಥವನ್ನೇರಿಸಿ, ಅವರೆಲ್ಲರನ್ನೂ ಆಮಂತ್ರಿಸುತ್ತಾ ಆ ಕೌರವ್ಯನು ಕನ್ಯೆಯರನ್ನು ಎತ್ತಿಕೊಂಡು ಶೀಘ್ರವಾಗಿ ರಥವನ್ನೋಡಿಸಿದನು. ಆಗ ಸರ್ವ ಪಾರ್ಥಿವರೂ ರೋಷಗೊಂಡು, ತಮ್ಮ ಬಾಹುಗಳನ್ನು ಉಬ್ಬಿಸಿ ಹಲ್ಲು ಕಡೆಯುತ್ತಾ ಮೇಲೆದ್ದರು. ಅವರವರ ಆಭರಣಗಳನ್ನು ಎಸೆದು ಅಸ್ತ್ರ ಕವಚಗಳನ್ನು ಧರಿಸುವಾಗ ಎಲ್ಲೆಡೆಯೂ ಅತಿ ಸಂಭ್ರಮದ ಗದ್ದಲವಾಯಿತು. ಶುಭ್ರ ಭೂಷಣ-ಕವಚಗಳು ಎಲ್ಲೆಡೆಯಿಂದ ತಾರೆಗಳಂತೆ ಬಿದ್ದವು. ಆ ವೀರರೆಲ್ಲರೂ ಆಭರಣ ಭೂಷಣ ಮತ್ತು ಮುತ್ತು-ರತ್ನಗಳನ್ನು ಉದುರಿಸುತ್ತಾ, ರೋಷದಿಂದ ಹುಬ್ಬು ಕಟ್ಟಿ, ಮುಖ ಕೆಂಪುಮಾಡಿಕೊಂಡು, ಸಾರಥಿಗಳು ಸರ್ವ ಅಸ್ತ್ರಗಳನ್ನೂ ಹೇರಿಸಿ ತಯಾರುಮಾಡಿ ನಿಲ್ಲಿಸಿದ್ದ ರಥಗಳಲ್ಲಿ ಏರಿದರು. ಆಯುಧಗಳನ್ನು ಮೇಲೆತ್ತಿ ಅವರೆಲ್ಲರೂ ಏಕಾಂಗಿ ಕೌರವ್ಯನನ್ನು ಬೆನ್ನುಹತ್ತಿದರು. ಆಗ ಆ ಏಕಾಂಗಿ ಮತ್ತು ಬಹುಸಂಖ್ಯೆಯಲ್ಲಿದ್ದ ಅವರ ನಡುವೆ ಘೋರ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು. ಅವರು ದಶಸಹಸ್ರ ಬಾಣಗಳನ್ನು ಒಂದೇ ಕ್ಷಣದಲ್ಲಿ ಬಿಟ್ಟರೆ ಅವು ತನ್ನನ್ನು ಹೊಡೆಯುವುದರೊಳಗೇ ಭೀಷ್ಮನು ತುಂಡುಮಾಡಿದನು. ಆಗ ಸರ್ವ ಪಾರ್ಥಿವರೂ ಅವನನ್ನು ಎಲ್ಲಾ ಕಡೆಯಿಂದಲೂ ಸುತ್ತುವರೆದು ಮೋಡಗಳು ಪರ್ವತದ ಮೇಲೆ ಮಳೆಸುರಿಸುವಂತೆ ಬಾಣಗಳ ಮಳೆಯನ್ನೇ ಸುರಿಸಿದರು. ಅವನಾದರೂ ಆ ಬಾಣಗಳ ಮಳೆಯನ್ನು ತನ್ನದೇ ಬಾಣದಿಂದ ನಿವಾರಿಸಿದನು ಮತ್ತು ಎಲ್ಲಕಡೆಗೂ ಎಲ್ಲ ಮಹೀಪಾಲರಿಗೂ ಅವರವರ ಒಂದೊಂದು ಬಾಣಕ್ಕೂ ಮೂರುಬಾಣಗಳನ್ನು ಬಿಟ್ಟನು. ಅನ್ಯ ರಥಚಾರಿಗಳಿಗೆ ಹೋಲಿಸಿದರೆ ಆ ಪುರುಷನಲ್ಲಿ ಲಘುತ್ವವಿತ್ತು. ಅವನು ತನ್ನನ್ನು ತಾನು ರಕ್ಷಣೆಮಾಡಿ ಕೊಳ್ಳುತ್ತಿರುವ ರೀತಿಯನ್ನು ನೋಡಿದ ಬಹಳಷ್ಟು ಶತ್ರುಗಳೂ ಅವನನ್ನು ಹೊಗಳತೊಡಗಿದರು. ಅವರೆಲ್ಲರನ್ನೂ ರಣದಲ್ಲಿ ಸೋಲಿಸಿದ ಆ ಸರ್ವಶಸ್ತ್ರವಿಶಾರದ ಭರತನು ಕನ್ಯೆಗಳ ಸಹಿತ ಭಾರತನಗರದ ಕಡೆ ಹೊರಟನು.

ಅದೇ ಸಮಯದಲ್ಲಿ ಮಹಾರಥಿ ರಾಜ ಶಾಲ್ವರಾಜನು ಕಾವಿನಲ್ಲಿರುವ ಗಂಡು ಆನೆಯು ತನ್ನ ಪ್ರೇಯಸಿಯ ಮೇಲೆ ಹತ್ತುತ್ತಿದ್ದ ಪ್ರತಿಸ್ಪರ್ಧಿಯನ್ನು ಹಿಂದಿನಿಂದ ತನ್ನ ದಾಡೆಗಳಿಂದ ಆಕ್ರಮಿಸುವಂತೆ ಭೀಷ್ಮ ಶಾಂತನವನನ್ನು ಆಕ್ರಮಣಿಸಿದನು. ಸ್ತ್ರೀ ಕಾಮಿ ಭೀಷ್ಮ! ನಿಲ್ಲು! ನಿಲ್ಲು! ಎಂದು ಮಹಾಬಾಹು ಪಾರ್ಥಿವ ಶಾಲ್ವರಾಜನು ಸಿಟ್ಟಿನಿಂದ ಜೋರಾಗಿ ಕೂಗಿದನು. ಆ ಪುರುಷವ್ಯಾಘ್ರ ಪರಬಲಾರ್ದನ ಭೀಷ್ಮನು ಈ ಮಾತುಗಳನ್ನು ಕೇಳಿ ಕ್ರೋಧದಿಂದ ಹೊಗೆಯಿಲ್ಲದ ಅಗ್ನಿಯಂತೆ ಉರಿಯುತ್ತಾ, ಕ್ಷತ್ರಧರ್ಮವನ್ನು ಅನುಸರಿಸಿ, ಸ್ವಲ್ಪವೂ ಭಯ ಉದ್ವೇಗಳಿಲ್ಲದೇ ತನ್ನ ರಥವನ್ನು ಮಹಾರಥಿ ಶಾಲ್ವನ ಕಡೆ ತಿರುಗಿಸಿದನು. ಹಿಂದಿರುಗಿ ಬರುತ್ತಿದ್ದ ಅವನನ್ನು ನೋಡಿದ ಸರ್ವ ರಾಜರೂ ಕೂಡ ಭೀಷ್ಮ-ಶಾಲ್ವರ ಎದುರಾಟವನ್ನು ನೋಡಲು ಪ್ರೇಕ್ಷಕರಾಗಿ ನಿಂತರು. ಕಾವಿನಲ್ಲಿದ್ದ ಹಸುವಿನ ಮುಂದೆ ಬಡಿದಾಡುವ ಎರಡು ಬಲಶಾಲಿ ಹೋರಿಗಳಂತೆ ಅವರಿಬ್ಬರೂ ಬಲವಿಕ್ರಮಶಾಲಿಗಳು ಪರಸ್ಪರರ ಮೇಲೆ ಎರಗಿದರು. ನರಶ್ರೇಷ್ಠ ಶಾಲ್ವರಾಜನು ಭೀಷ್ಮ ಶಾಂತನವನ ಮೇಲೆ ಅತಿವೇಗದ ನೂರಾರು ಸಹಸ್ರಾರು ಬಾಣಗಳನ್ನು ಸುರಿಸಿದನು. ಮೊದಲೇ ಭೀಷ್ಮನನ್ನು ಸುತ್ತುವರೆದ ಶಾಲ್ವನನ್ನು ನೋಡಿ ಆ ನೃಪರೆಲ್ಲರು ವಿಸ್ಮಿತರಾಗಿ “ಸಾಧು! ಸಾಧು!” ಎಂದು ಉದ್ಗರಿಸಿ, ಪ್ರಶಂಸಿದರು. ಅವನ ಲಘುತ್ವವನ್ನು ನೋಡಿ, ಅಲ್ಲಿ ಸೇರಿದ್ದ ಸರ್ವ ಪಾರ್ಥಿವರೂ ಹರ್ಷಗೊಂಡು ನರಾಧಿಪ ಶಾಲ್ವನನ್ನು ಹೊಗಳಿ ಪ್ರೋತ್ಸಾಹಿಸಿದರು. ಕ್ಷತ್ರಿಯರ ಈ ಕೂಗುಗಗಳನ್ನು ಕೇಳಿ ಕೃದ್ಧನಾದ ಪರಪುರಂಜಯ ಶಾಂತನವ ಭೀಷ್ಮನು “ನಿಲ್ಲು! ನಿಲ್ಲು!” ಎಂದು ಕೂಗಿದನು. ಕೃದ್ಧನಾಗಿ ತನ್ನ ಸಾರಥಿಗೆ ಹೇಳಿದನು:

ಪಕ್ಷಿರಾಜನು ಭುಜಂಗಗಳನ್ನು  ಕೊಲ್ಲುವಂತೆ ಅವನನ್ನು ಕೊಲ್ಲುತ್ತೇನೆ. ಆ ಪಾರ್ಥಿವನಿದ್ದಲ್ಲಿಗೆ ರಥವನ್ನು ಕೊಂಡೊಯ್ಯಿ!

ಆಗ ಆ ಕೌರವನು ವಾರುಣಾಸ್ತ್ರವನ್ನು ಹೂಡಿ ಶಾಲ್ವರಾಜನ ನಾಲ್ಕೂ ಕುದುರೆಗಳನ್ನೂ ಸಂಹರಿಸಿದನು. ನಂತರ ಆ ಕೌರವ ನೃಪತಿಶಾರ್ದೂಲ ಭೀಷ್ಮನು ಅಸ್ತ್ರದ ಮೇಲೆ ಅಸ್ತ್ರಗಳನ್ನು ಬಿಟ್ಟು ಶಾಲ್ವರಾಜನ ಸಾರಥಿಯನ್ನು ಕೆಳಗುರುಳಿಸಿದನು. ಮತ್ತು ಒಂದೇ ಒಂದು ಅಸ್ತ್ರದಿಂದ ಅವನ ಉತ್ತಮ ತುರಗಗಳನ್ನೂ ಕೆಳಗುರುಳಿಸಿದನು. ನರಶ್ರೇಷ್ಠ ಶಾಂತನವ ಭೀಷ್ಮನು ಕನ್ಯೆಯರಿಗಾಗಿ ಆ ನೃಪಸತ್ತಮನನ್ನು ಗೆದ್ದು ಜೀವಂತ ಉಳಿಸಿ ಕಳುಹಿಸಿದನು. ನಂತರ ಶಾಲ್ವನು ತನ್ನ ನಗರಕ್ಕೆ ಹಿಂದಿರುಗಿದನು. ಸ್ವಯಂವರವನ್ನು ನೋಡಲು ಬಂದಿದ್ದ ರಾಜರೂ ಕೂಡ ತಮ್ಮ ತಮ್ಮ ನಗರಗಳಿಗೆ ತೆರಳಿದರು.

ಖಡ್ಗಪ್ರಹರಿಗಳಲ್ಲಿ ಶ್ರೇಷ್ಠ ಭೀಷ್ಮನು ಕನ್ಯೆಯರನ್ನು ಗೆದ್ದು ರಾಜ ಕೌರವನಿರುವ ಹಸ್ತಿನಾಪುರದ ಕಡೆ ತಿರುಗಿದನು. ತನ್ನ ಅಕ್ಷಯ್ಯ ಬಲದಿಂದ ಸಂಖ್ಯೆಯಿಲ್ಲದಷ್ಟು ವೈರಿಗಳನ್ನು ಸೋಲಿಸಿ, ಸ್ವಲ್ಪವೇ ಸಮಯದಲ್ಲಿ ವನ, ನದಿ, ಗಿರಿ ಮತ್ತು ವಿವಿಧ ದ್ರುಮಗಳನ್ನು ಅತಿಕ್ರಮಿಸಿ ಆ ಸಾಗರಗೆಯ ಸುತ ಧರ್ಮಾತ್ಮನು ಕಾಶಿಯ ಕನ್ಯೆಯರೊಡನೆ ತನ್ನ ಸೊಸೆಗಳಂತೆ ಅಥವಾ ತಂಗಿಯರಂತೆ ಅಥವಾ ಮಕ್ಕಳಂತೆ ವ್ಯವಹರಿಸುತ್ತಾ ಅವರನ್ನು ಕರೆದುಕೊಂಡು ಕುರುವಂಶದ ಮನೆಗೆ ಕರೆತಂದನು. ಬಲವಂತವಾಗಿ ಕರೆತಂದ ಆ ಸರ್ವ ಗುಣಸಂಪನ್ನರನ್ನೂ ಅಣ್ಣ ಭೀಷ್ಮನು ತನ್ನ ತಮ್ಮ ವಿಚಿತ್ರವೀರ್ಯನಿಗೆ ಕೊಡಲು ನಿರ್ಧರಿಸಿದನು. ಅಮಾನುಷ ಕೃತ್ಯವನ್ನೆಸಿಗಿದ ಆ ಧರ್ಮಜ್ಞ, ದೃಢನಿಶ್ಚಯಿ ಧರ್ಮನಿರತನು ಸತ್ಯವತಿಯೊಡನೆ ಸಮಾಲೋಚಿಸಿ ತಮ್ಮ ವಿಚಿತ್ರವೀರ್ಯನ ವಿವಾಹ ತಯಾರಿಯನ್ನು ನಡೆಸಿದನು. ವಿವಾಹದ ತಯಾರಿ ನಡೆಯುತ್ತಿರುವಾಗ ಕಾಶೀಪತಿಯ ಮಕ್ಕಳಲ್ಲಿ ಜ್ಯೇಷ್ಠ ಸತಿಯು ಭೀಷ್ಮನನ್ನು ಉದ್ದೇಶಿಸಿ ಈ ಮಾತುಗಳನ್ನಾಡಿದಳು:

ಈ ಹಿಂದೆಯೇ ನಾನು ಸೌಭಪತಿಯನ್ನು ಮನಸಾ ಪತಿಯನ್ನಾಗಿ ವರಿಸಿದ್ದೇನೆ. ಅವನೂ ನನ್ನನ್ನು ವರಿಸಿದ್ದಾನೆ. ಮತ್ತು ಇದು ನನ್ನ ತಂದೆಯ ಬಯಕೆಯೂ ಆಗಿತ್ತು. ಆ ಸ್ವಯಂವರದಲ್ಲಿ ನಾನು ಶಾಲ್ವನನ್ನು ವರಿಸುವವಳಿದ್ದೆ. ಧರ್ಮಜ್ಞ! ಇದನ್ನು ತಿಳಿದು ಧರ್ಮದ ಪ್ರಕಾರ ಏನು ಮಾಡಬೇಕೋ ಮಾಡು.

ವಿಪ್ರಸಂಸದಿಯಲ್ಲಿ ಹೇಳಿದ ಕನ್ಯೆಯ ಈ ಮಾತುಗಳನ್ನು ಕೇಳಿ ವೀರ ಭೀಷ್ಮನು ಇದಕ್ಕೆ ತಕ್ಕುದಾಗಿ ಏನು ಮಾಡಬೇಕೆಂದು ಯೋಚಿಸಿದನು. ಬ್ರಾಹ್ಮಣ ವೇದಪಾರಂಗತರೊಡಗೂಡಿ ನಿಶ್ಚಯಿಸಿದ ಆ ಧರ್ಮಜ್ಞನು ಕಾಶಿಪತಿಯ ಜ್ಯೇಷ್ಠ ಪುತ್ರಿ ಅಂಬೆಗೆ ಹೋಗಲು ಅನುಮತಿಯನ್ನಿತ್ತನು.

ನಂತರ ಭೀಷ್ಮನು ತನ್ನ ತಮ್ಮ ವಿಚಿತ್ರವೀರ್ಯನಿಗೆ ಅಂಬಿಕೆ ಮತ್ತು ಅಂಬಾಲಿಕೆಯರನ್ನು ಪತ್ನಿಯರನ್ನಾಗಿತ್ತು ವಿಧಿಪೂರ್ವಕ ವಿವಾಹ ಕಾರ್ಯವನ್ನು ನೆರವೇರಿಸಿದನು. ಅವರ ಪಾಣಿಗ್ರಹಣ ಮಾಡಿಕೊಂಡ ರೂಪಯೌವನ ದರ್ಪಿತ ಧರ್ಮಾತ್ಮ ವಿಚಿತ್ರವೀರ್ಯನು ಕಾಮಸುಖದಲ್ಲಿಯೇ ತೊಡಗಿದನು. ಎತ್ತರವಾಗಿದ್ದ, ಶ್ಯಾಮವರ್ಣದ, ನೀಲಿ ಗುಂಗುರು ಕೂದಲುಗಳನ್ನು ಹೊಂದಿದ್ದ, ಮೊನಚಾದ ಕೆಂಪು ಉಗುರುಗಳನ್ನು ಹೊಂದಿದ್ದ, ಪೀನಶ್ರೋಣಿ ಪಯೋಧರೆಯರಾದರೂ ತಮಗೆ ಪ್ರತಿರೂಪ ಪತಿಯು ದೊರಕಿದನೆಂದು ತಿಳಿದು ಕಲ್ಯಾಣ ವಿಚಿತ್ರವೀರ್ಯನನ್ನು ಪೂಜಿಸತೊಡಗಿದರು. ರೂಪದಲ್ಲಿ ಅಶ್ವಿನಿಯರನ್ನು ಹೋಲುತ್ತಿದ್ದ ಆ ದೇವಸತ್ವಪರಾಕ್ರಮಿಯು ಸರ್ವ ನಾರಿಯರ ಚಿತ್ತಗಳನ್ನು ಕಡೆಯುವಂತಿದ್ದನು. ಆ ತರುಣ ಪೃಥಿವೀಪತಿ ವಿಚಿತ್ರವೀರ್ಯನು ಏಳು ವರ್ಷಗಳ ಪರ್ಯಂತ ಅವರೊಡನೆ ವಿಹರಿಸುತ್ತಿದ್ದು, ರೋಗಕ್ಕೆ ಬಲಿಯಾದನು. ಸುಹೃದಯರು ಮತ್ತು ಆಪ್ತ ಚಿಕಿತ್ಸಕರು ಎಷ್ಟು ಪ್ರಯತ್ನಿಸಿದರೂ ಮುಳುಗುತ್ತಿರುವ ಸೂರ್ಯನಂತೆ ಕೌರವ್ಯನು ಯಮಸಾದನವನ್ನು ಸೇರಿದನು. ಸತ್ಯವತಿಯ ಸೂಚನೆಗಳಂತೆ, ಕುರುಪುಂಗವ ಬೀಷ್ಮನು ಸರ್ವ ಋತ್ವಿಗರೊಡಗೂಡಿ ರಾಜ ವಿಚಿತ್ರವೀರ್ಯನ ಪ್ರೇತಕಾರ್ಯಗಳೆಲ್ಲವನ್ನೂ ನೆರವೇರಿಸಿದನು.

Leave a Reply

Your email address will not be published. Required fields are marked *