ಹದಿನೇಳನೇ ದಿನದ ಯುದ್ಧ - ೭: ದುಃಶಾಸನ-ವೃಷಸೇನರ ವಧೆ

ಬೇಸಗೆಯ ಕೊನೆಯಲ್ಲಿ ಮೇಘಗಣಗಳು ಹೇಗೆ ಸೇರಿಕೊಳ್ಳುವವೋ ಹಾಗೆ ದೊಡ್ಡ ದೊಡ್ಡ ಧ್ವಜಗಳನ್ನುಳ್ಳ ಕೌರವ-ಪಾಂಡವರ ಸಮೃದ್ಧ ಸೇನೆಗಳು ಭೇರೀನಿನಾದಗಳನ್ನು ಮಾಡಿ ಗರ್ಜಿಸುತ್ತಾ ರಣದಲ್ಲಿ ಬಂದು ಸೇರಿದವು. ಮಹಾಗಜಗಳ ಸಮೂಹಗಳು ಮೇಘಗಳಂತಿದ್ದವು. ರಣವಾದ್ಯಗಳ ಮತ್ತು ರಥಚಕ್ರಗಳ ಶಬ್ಧವು ಗುಡುಗಿನ ಶಬ್ಧಗಳಂತಿದ್ದವು. ಮಹಾರಥರಿಂದ ಪ್ರಯೋಗಿಸಲ್ಪಟ್ಟ ಬಂಗಾರದ ಬಣ್ಣಗಳ ಆಯುಧಗಳು ಶಬ್ಧಮಾಡಿ ಮಿಂಚಿನಂತೆ ಹೊಳೆಯುತ್ತಿದ್ದವು. ಆ ಭೀಮವೇಗದಿಂದ ಬೀಳುತ್ತಿದ್ದ, ರಕ್ತದ ಪ್ರವಾಹವನ್ನೇ ಹರಿಸುತ್ತಿದ್ದ, ಕ್ಷತ್ರಿಯರ ಜೀವವನ್ನು ಹರಿಸುತ್ತಿದ್ದ ಆ ಖಡ್ಗಗಳ ಕ್ರೂರವಾದ ಅನಿಷ್ಟ ವೃಷ್ಟಿಯು ಆರ್ತರಾದ ಪ್ರಜೆಗಳ ಸಂಹಾರಕವಾಗಿತ್ತು. ಅಲ್ಲಿ ಪಾರ್ಥನು ಶರೌಘಗಳಿಂದ ಸಾರಥಿಗಳೊಂದಿಗೆ ರಥಗಳನ್ನೂ, ಸವಾರಿಗಳೊಂದಿಗೆ ಆನೆಗಳನ್ನೂ, ಸವಾರರೊಂದಿಗೆ ಕುದುರೆಗಳನ್ನೂ ಮತ್ತು ಪದಾತಿ ಸಂಘಗಳನ್ನೂ ಮೃತ್ಯುವಶರನ್ನಾಗಿ ಮಾಡಿದನು. ರಣದಲ್ಲಿ ಕೃಪನು ಶಿಖಂಡಿಯೊಡನೆಯೂ, ದುರ್ಯೋಧನನು ಸಾತ್ಯಕಿಯೊಡನೆಯೂ, ಶ್ರುತಶ್ರವನು ದ್ರೋಣಸುತನೊಡನೆಯೂ ಮತ್ತು ಯುಧಾಮನ್ಯುವು ಚಿತ್ರಸೇನನೊಡನೆಯೂ ಯುದ್ಧಮಾಡುತ್ತಿದ್ದರು. ಕರ್ಣನ ಪುತ್ರ ಸುಷೇಣನನ್ನು ಉತ್ತಮೌಜಸನು ಎದುರಿಸಿದನು. ಹಸಿದ ಸಿಂಹವು ಮಹಾ ಹೋರಿಯನ್ನು ಹೇಗೋ ಹಾಗೆ ಸಹದೇವನು ಗಾಂಧಾರರಾಜನನ್ನು ಆಕ್ರಮಣಿಸಿದನು. ನಾಕುಲಿ ಶತಾನೀಕನು ಕರ್ಣಪುತ್ರ ವೃಷಸೇನನನ್ನು ಶರೌಘಗಳಿಂದ ಪ್ರಹರಿಸಿದನು. ವೀರ ಕರ್ಣಸುತನೂ ಕೂಡ ಪಾಂಚಾಲಿಯ ಆ ಮಗನನ್ನು ಅನೇಕ ಶರವರ್ಷಗಳಿಂದ ಪ್ರಹರಿಸಿದನು. ನಕುಲನು ಕೃತವರ್ಮನನ್ನು ಆಕ್ರಮಣಿಸಿದನು. ಧೃಷ್ಟದ್ಯುಮ್ನನು ಕರ್ಣನನ್ನು ಆಕ್ರಮಣಿಸಿದನು. ದುಃಶಾಸನನು ಸಂಶಪ್ತಕರ ಸಮೃದ್ಧ ಸೇನೆಗಳೊಂದಿಗೆ ಭೀಮನನ್ನು ಆಕ್ರಮಣಿಸಿದನು.

ಆಗ ಉತ್ತಮೌಜಸನು ಬಲವನ್ನುಪಯೋಗಿಸಿ ಕರ್ಣಾತ್ಮಜನ ಶಿರವನ್ನು ಭೂಮಿಗೆ ಕೆಡವಿ ಜೋರಾಗಿ ಗರ್ಜಿಸಿ ಭೂಮ್ಯಾಕಾಶಗಳನ್ನು ಮೊಳಗಿಸಿದನು. ಸುಷೇಣನ ಶಿರವು ಭೂಮಿಯ ಮೇಲೆ ಬಿದ್ದುದನ್ನು ನೋಡಿ ಆರ್ತರೂಪನಾದ ಕರ್ಣನು ಕ್ರೋಧದಿಂದ ಉತ್ತಮೌಜಸನ ಕುದುರೆಗಳನ್ನೂ, ರಥವನ್ನೂ, ಧ್ವಜವನ್ನೂ ನಿಶಿತವಾದ ಹರಿತ ಮೊಲಗುಗಳುಳ್ಳ ಬಾಣಗಳಿಂದ ಕತ್ತರಿಸಿದನು. ಉತ್ತಮೌಜಸನಾದರೋ ನಿಶಿತ ಪೃಷತ್ಕಗಳಿಂದ ಮತ್ತು ಹೊಳೆಯುತ್ತಿರುವ ಖಡ್ಗದಿಂದ ಕೃಪನ ಪಾರ್ಷ್ಣಿಯನ್ನೂ ಕುದುರೆಗಳನ್ನೂ ಸಂಹರಿಸಿ ಶಿಖಂಡಿಯ ರಥವನ್ನೇರಿದನು. ಕೃಪನು ವಿರಥನಾಗಿರುವುದನ್ನು ನೋಡಿ ರಥಸ್ಥನಾಗಿದ್ದ ಶಿಖಂಡಿಯು ಶರಗಳಿಂದ ಅವನನ್ನು ಪ್ರಹರಿಸಲು ಇಚ್ಛಿಸಲಿಲ್ಲ. ಆಗ ದ್ರೌಣಿಯು ಕೆಸರಿನಲ್ಲಿ ಸಿಲುಕಿಕೊಂಡಿರುವ ಹಸುವನ್ನು ಹೇಗೋ ಹಾಗೆ ಕೃಪನ ರಥವನ್ನು ಎತ್ತಿ ಉದ್ಧರಿಸಿದನು. ಆಗ ಬಂಗಾರದ ಕವಚವನ್ನು ಧರಿಸಿದ್ದ ಅನಿಲಾತ್ಮಜ ಭೀಮನು ಮಧ್ಯಾಹ್ನದಲ್ಲಿ ಶುಚಿಯಾದ ಆಗಸದಲ್ಲಿರುವ ಸೂರ್ಯನಂತೆ ನಿಶಿತ ಬಾಣಗಳಿಂದ ಧೃತರಾಷ್ಟ್ರನ ಮಕ್ಕಳನ್ನು ಸಂಕಟಕ್ಕೀಡುಮಾಡಿದನು.

ಅರ್ಜುನನು ರಣಕ್ಕೆ ಇನ್ನೂ ಹಿಂದಿರುಗಲಿಲ್ಲವೆಂದು ಚಿಂತಿಸುತ್ತಿದ್ದ ಭೀಮಸೇನ-ವಿಶೋಕರ ಸಂವಾದ; ಭೀಮಸೇನನು ಅರ್ಜುನನು ಹಿಂದಿರುಗಿದುದನ್ನು ನೋಡಿದುದು

ಅನೇಕ ವೈರಿಗಳಿಂದ ಸಮಾವೃತನಾಗಿ ಏಕಾಂಗಿಯಾಗಿ ಮರ್ದಿಸಲ್ಪಡುತ್ತಿದ್ದ ಭೀಮನು ಧಾರ್ತರಾಷ್ಟ್ರರ ಸೇನೆಯನ್ನು ತಡೆಯುತ್ತಾ ಮಹಾಭಯದಿಂದ ಸಾರಥಿಗೆ ಸಾರಥೇ! ನೀನು ವೇಗದಿಂದ ರಥವನ್ನು ಕೊಂಡೊಯ್ಯಿ! ಈ ಧಾರ್ತರಾಷ್ಟ್ರರನ್ನು ಯಮಲೋಕಕ್ಕೆ ಕಳುಹಿಸೋಣ!” ಎಂದು ಹೇಳಿದನು. ಭೀಮಸೇನನಿಂದ ಪ್ರಚೋದಿತನಾದ ಸಾರಥಿಯು ಭೀಮನು ಯಾವ ಸೇನೆಯ ಕಡೆ ಹೋಗಲು ಬಯಸಿದ್ದನೋ ಆ ಸೇನೆಯ ಬಳಿ ರಥವನ್ನು ಕೊಂಡೊಯ್ದನು. ಅನಂತರ ಕುರುಗಳು ಆನೆ-ರಥ-ಕುದುರೆ-ಪದಾತಿಗಳೊಂದಿಗೆ ಉದಾರವೇಗದಲ್ಲಿದ್ದ ಭೀಮನ ರಥವನ್ನು ಎಲ್ಲಕಡೆಗಳಿಂದ ಆಕ್ರಮಣಿಸಿ ಬಾಣಗಣಗಳಿಂದ ಸುತ್ತಲೂ ಹೊಡೆದರು. ಅವನು ಮೇಲೆ ಬೀಳುತ್ತಿದ್ದ ಬಾಣಗಳನ್ನು ಸುವರ್ಣಮಯಪುಂಖಗಳಿಂದ ಕೂಡಿದ್ದ ಬಾಣಗಳಿಂದ ಕತ್ತರಿಸಿದನು. ಅವರ ಬಾಣಗಳು ಭೀಮನ ಬಾಣಗಳಿಂದ ಕತ್ತರಿಸಲ್ಪಟ್ಟು ಎರಡು ಅಥವಾ ಮೂರು ಭಾಗಗಳಾಗಿ ಬೀಳುತ್ತಿದ್ದವು. ಆಗ ವಜ್ರಗಳಿಂದ ಹತಗೊಂಡ ಪರ್ವತಗಳಂತೆ ಭೀಮನಿಂದ ಹತರಾದ ಗಜಾಶ್ವರಥಪದಾತಿ ಸೇನೆಗಳ ಘೋರ ನಿನಾದವುಂಟಾಯಿತು. ಭೀಮಸೇನನ ಶ್ರೇಷ್ಠ ಬಾಣಗಳಿಂದ ವಧಿಸಲ್ಪಟ್ಟು ಗಾಯಗೊಂಡಿರುವ ಆ ನರೇಂದ್ರಮುಖ್ಯರು ಸಮರದಲ್ಲಿ ಪಕ್ಷಿಗಳು ಪುಷ್ಪಕ್ಕಾಗಿ ವೃಕ್ಷವನ್ನು ಮುತ್ತಿಗೆ ಹಾಕುವಂತೆ ಎಲ್ಲಕಡೆಗಳಿಂದ ಭೀಮನನ್ನು ಮುತ್ತಿಗೆ ಹಾಕಿದರು. ಹಾಗೆ ಸೈನ್ಯಮಧ್ಯದಲ್ಲಿ ಆಕ್ರಮಣಕ್ಕೊಳಗಾದ ಅತಿವೇಗಶಾಲೀ ಭೀಮನು ಪ್ರಳಯಕಾಲದಲ್ಲಿ ದಂಡಧರ ಕಾಲನು ಪ್ರಪಂಚವನ್ನೇ ದಹಿಸುವ ಇಚ್ಛೆಯಿಂದ ವೇಗವಾಗಿ ಕಾರ್ಯಪ್ರವೃತ್ತನಾಗುವಂತೆ ಆಕ್ರಮಣಿಸಿದನು. ಪ್ರಳಯಕಾಲದಲ್ಲಿ ಪ್ರಜೆಗಳ ಪ್ರಾಣಗಳನ್ನು ಅಪಹರಿಸುವ ಬಾಯಿಕಳೆದ ಕಾಲನಿಂದ ಹೇಗೋ ಹಾಗೆ, ರಣದಲ್ಲಿ ಅತಿವೇಗಿಯಾಗಿದ್ದ ಅವನ ಆ ಅತಿವೇಗವನ್ನು ಸಹಿಸಿಕೊಳ್ಳಲು ಕೌರವರಿಗೆ ಸಾಧ್ಯವಾಗಲಿಲ್ಲ. ಸಮರದಲ್ಲಿ ಭೀಮನಿಂದ ಹಾಗೆ ಸುಡಲ್ಪಡುತ್ತಿದ್ದ ಭಾರತರ ಸೇನೆಯು ಭೀತಿಗೊಂಡು ಚಂಡಮಾರುತದಿಂದ ಚದುರಿಹೋಗುವ ಮೋಡಗಳ ಗುಂಪುಗಳಂತೆ ದಿಕ್ಕಾಪಾಲಾಗಿ ಓಡಿ ಹೋಯಿತು. ಆಗ ಭೀಮಸೇನನು ಹೃಷ್ಟನಾಗಿ ಪುನಃ ಸಾರಥಿಗೆ ಹೇಳಿದನು: “ಸೂತ! ಒಟ್ಟಾಗಿ ಮೇಲೆ ಬೀಳುತ್ತಿರುವ ಈ ರಥಧ್ವಜಗಳು ಶತ್ರುಗಳದ್ದೋ ಅಥವಾ ನಮ್ಮವರದ್ದೋ ಎನ್ನುವುದು ತಿಳಿಯದಂತಾಗಿದೆ! ಏಕೆಂದರೆ ಯುದ್ಧದಲ್ಲಿ ತೊಡಗಿರುವಾಗ ನನಗೆ ಏನೊಂದೂ ತಿಳಿಯುತ್ತಿಲ್ಲ! ನಾನು ನನ್ನದೇ ಸೇನೆಯನ್ನು ಬಾಣಗಳಿಂದ ಹೊಡೆಯಬಾರದಲ್ಲ! ಸುತ್ತಲೂ ನೋಡಿದರೆ ಚಿಂತೆಯು ನನ್ನ ಮನಸ್ಸನ್ನು ತುಂಬಾ ಕಾಡುತ್ತಿದೆ. ಯುಧಿಷ್ಠಿರನನ್ನು ನೋಡಲು ಹೋಗಿದ್ದ ಕಿರೀಟಿಯು ಇನ್ನೂ ಬರಲಿಲ್ಲವೆಂದು ಬಹಳ ದುಃಖಿತನಾಗಿದ್ದೇನೆ! ಧರ್ಮರಾಜನು ನನ್ನನ್ನು ಬಿಟ್ಟು ಶತ್ರುಗಳ ಮಧ್ಯದಲ್ಲಿ ಹೋದಾಗಲೇ ನನಗೆ ದುಃಖವಾಗಿತ್ತು. ಈಗ ಅವನು ಅಥವಾ ಬೀಭತ್ಸುವು ಬದುಕಿರುವನೋ ಇಲ್ಲವೋ ಎನ್ನುವುದನ್ನೂ ನಾನು ತಿಳಿಯದಂತಾಗಿದ್ದೇನೆ. ಏನೇ ಆದರೂ ನಾನು ಶತ್ರುಗಳ ಈ ಉಗ್ರಕಲ್ಪ ಸೇನೆಯನ್ನು ವಿನಾಶಗೊಳಿಸುತ್ತೇನೆ. ರಣಮಧ್ಯದಲ್ಲಿ ಸೇರಿರುವ ಇವರನ್ನು ಇಂದು ನಿನ್ನ ಸಹಾಯದಿಂದ ಸಂಹರಿಸಿ ಪ್ರೀತನಾಗುತ್ತೇನೆ. ನನ್ನ ರಥದಲ್ಲಿರುವ ತೂಣೀರಗಳನ್ನೂ ಮಾರ್ಗಣಗಳನ್ನೂ ಸಾಯಕಗಳನ್ನೂ ನೋಡಿ ಯಾವ ಯಾವ ಜಾತಿಯ ಬಾಣಗಳು ಎಷ್ಟು ಪ್ರಮಾಣಗಳಲ್ಲಿವೆಯೆನ್ನುವುದನ್ನು ತಿಳಿದುಕೊಂಡು ನನಗೆ ಹೇಳು!”

ವಿಶೋಕನು ಹೇಳಿದನು: “ವೀರ! ನಿನ್ನಲ್ಲಿ ಅರುವತ್ತು ಸಾವಿರ ಮಾರ್ಗಣಗಳೂ, ಹತ್ತು ಸಾವಿರ ಕ್ಷುರಗಳೂ, ಹತ್ತುಸಾವಿರ ಭಲ್ಲಗಳೂ, ಎರಡು ಸಾವಿರ ನಾರಾಚಗಳೂ ಮತ್ತು ಮೂರು ಸಾವಿರ ಪ್ರದರಣಗಳೂ ಇವೆ. ನಿನ್ನಲ್ಲಿ ಎಷ್ಟು ಆಯುಧಗಳು ಉಳಿದಿವೆಯೆಂದರೆ ಅವುಗಳನ್ನು ಒಂದು ಗಾಡಿಯಲ್ಲಿ ತುಂಬಿಸಿದರೆ ಆರು ಎತ್ತುಗಳಿಗೂ ಆ ಗಾಡಿಯನ್ನು ಎಳೆದುಕೊಂಡು ಹೋಗುವುದಿಕ್ಕಾಗುವುದಿಲ್ಲ! ಇದಕ್ಕೆ ಹೊರತಾಗಿ ನಿನ್ನಲ್ಲಿ ಗದೆ, ಖಡ್ಗ ಮತ್ತು ಬಾಹುಬಲವೂ ಇದೆಯೆಂದು ತಿಳಿದು ಸಹಸ್ರಸಂಖ್ಯೆಗಳಲ್ಲಿ ಬಾಣಗಳನ್ನು ಪ್ರಯೋಗಿಸು!”

ಭೀಮನು ಹೇಳಿದನು: “ಸೂತ! ನೀನು ಇಂದು ಭೀಮಪ್ರಮುಕ್ತ ವೇಗಯುಕ್ತ ಆಶುಗಗಳಿಂದ ಚಿಂದಿಚಿಂದಿಗೊಳ್ಳುವ ಪಾರ್ಥಿವರನ್ನೂ, ಉಗ್ರ ಬಾಣಗಳಿಂದ ಸೂರ್ಯನನ್ನೂ ಮುಚ್ಚಿ ಆಕಾಶವನ್ನು ಘೋರರೂಪದ ಮೃತ್ಯುಲೋಕಕ್ಕೆ ಸಮನಾಗಿ ಮಾಡುವುದನ್ನು ನೋಡು! ಇಂದು ಭೀಮಸೇನನು ಸಮರದಲ್ಲಿ ಮುಳುಗಿಹೋದನು ಅಥವಾ ಸಮರದಲ್ಲಿ ಒಬ್ಬನೇ ಕುರುಗಳನ್ನು ಜಯಿಸಿದನು ಎನ್ನುವ ಈ ವಾರ್ತೆಯು ಬಾಲಕರಿಂದ ಹಿಡಿದು ವೃದ್ಧರವರೆಗಿನ ಎಲ್ಲ ರಾಜರಿಗೂ ತಿಳಿಯುತ್ತದೆ! ಸರ್ವಕುರುಗಳೂ ಯುದ್ಧದಲ್ಲಿ ಬಿದ್ದರು ಅಥವಾ ಎಲ್ಲರೂ ಒಂದಾಗಿ ನನ್ನನ್ನು ಕೆಳಗೆ ಬೀಳಿಸಿದರು ಅಥವಾ ಎಲ್ಲರೂ ಭೀಮಸೇನನನ್ನು ಪೀಡಿಸಿದರು ಎಂದು ಬಾಲಕರಿಂದ ಹಿಡಿದು ವೃದ್ಧರವರೆಗಿನ ಜನರು ಮಾತನಾಡಿಕೊಳ್ಳಲಿ! ಉತ್ತಮ ಕರ್ಮಗಳನ್ನು ಆಶಿಸುವ ದೇವತೆಗಳು ನನ್ನ ಕೇವಲ ಈ ಇಚ್ಛೆಯನ್ನು ಸಾಧಿಸಿಕೊಡಲಿ! ಯಜ್ಞದಲ್ಲಿ ಆಹ್ವಾನಿಸಲ್ಪಟ್ಟೊಡನೆಯೇ ಇಂದ್ರನು ಬಹಳ ಬೇಗ ಬರುವಂತೆ ಶತ್ರುಘಾತೀ ಅರ್ಜುನನು ಇಲ್ಲಿಗೆ ಕೂಡಲೇ ಬರಲಿ! ಅಲ್ಲಿ ನೋಡು! ಭಾರತೀ ಸೇನೆಯು ಒಡೆದು ಹೀಗೆ ಏಕೆ ನರೇಂದ್ರರು ಪಲಾಯನಮಾಡುತ್ತಿದ್ದಾರೆ? ನರಾಗ್ರ್ಯ ಸವ್ಯಸಾಚಿಯು ಇವರ ಸೈನ್ಯವನ್ನು ಆಶುಗ ಬಾಣಗಳಿಂದ ಮುಸುಕಿದ್ದಾನೆಂದು ವ್ಯಕ್ತವಾಗುತ್ತಿದೆ! ರಣದಲ್ಲಿ ಓಡಿಹೋಗುತ್ತಿರುವ ಧ್ವಜಗಳನ್ನೂ, ಆನೆಗಳನ್ನೂ, ಕುದುರೆಗಳನ್ನೂ, ಪದಾತಿಸಂಘಗಳನ್ನೂ ನೋಡು! ಶರ-ಶಕ್ತಿಗಳಿಂದ ಪೀಡಿತವಾಗಿ ಒಡೆದು ಹೋದ ರಥಗಳನ್ನೂ ರಥಿಗಳನ್ನೂ ನೋಡು! ಈ ಕೌರವೀ ಸೇನೆಯು ಮಿಂಚಿನವೇಗವುಳ್ಳ ಧನಂಜಯನ ಸುವರ್ಣಮಯ ನವಿಲಿನ ರೆಕ್ಕೆಗಳನ್ನುಳ್ಳ ಶರಗಳಪ್ರಹಾರದಿಂದ ಬಹಳವಾಗಿ ಗಾಯಗೊಂಡಿದೆ. ರಥ-ಕುದುರೆ-ಆನೆಗಳು ಮತ್ತು ಪದಾತಿಸಂಘಗಳು ಮರ್ದಿಸಲ್ಪಟ್ಟು ಓಡಿ ಹೋಗುತ್ತಿವೆ. ಸರ್ವ ಕೌರವರೂ ಬುದ್ಧಿಗೆಟ್ಟವರಂತಾಗಿದ್ದಾರೆ. ಆನೆಗಳು ರಣದಲ್ಲಿ ಭಯಭೀತರಾಗಿ ಹಾಹಾಕಾರಗೈಯುತ್ತಾ ಓಡಿಹೋಗುತ್ತಿವೆ. ಗಜೇಂದ್ರಗಳು ಜೋರಾಗಿ ಘೀಳಿಡುತ್ತಿವೆ!”

ವಿಶೋಕನು ಹೇಳಿದನು: “ಪಾಂಡವ! ನಿನ್ನ ಸರ್ವಕಾಮಗಳನ್ನೂ ಪೂರೈಸಲು ಹಸ್ತಿಸೇನೆಯಲ್ಲಿ ಕಪಿಧ್ವಜನು ಕಾಣಿಸಿಕೊಂಡಿದ್ದಾನೆ. ಮೇಘದಂತಿರುವ ಧನುಸ್ಸಿನಲ್ಲಿ ಮಿಂಚಿನಂತಿರುವ ಅವನ ಮೌರ್ವಿಯನ್ನು ನೋಡು. ಧನುಸ್ಸಿನ ಠೇಂಕಾರವನ್ನು ಕೇಳು! ಧನಂಜಯನ ಧ್ವಜವನ್ನೇರಿದ ಕಪಿಯು ಸುತ್ತಲೂ ನೋಡುತ್ತಿದ್ದಾನೆ. ಅರ್ಜುನನ ಕಿರೀಟದ ಮೇಲಿರುವ ದಿವ್ಯ ಮಣಿಯು ದಿವಾಕರನ ಪ್ರಕಾಶದಿಂದ ಹೊಳೆಯುತ್ತಿದೆ! ಅವನ ಪಕ್ಕದಲ್ಲಿ ಬಿಳಿಯ ಮೋಡದ ಪ್ರಕಾಶವುಳ್ಳ ಸುಘೋಷ ದೇವದತ್ತವನ್ನು ನೋಡುತ್ತಿದ್ದೇವೆ. ಜನಾರ್ದನನ ಕೈಯಲ್ಲಿ ಶತ್ರುಗಳ ಸೇನೆಯನ್ನು ನುಗ್ಗಿಹೋಗುವ ಕುದುರೆಗಳ ಲಗಾಮಿರುವುದನ್ನು ನೋಡು! ಜನಾರ್ದನನ ಪಕ್ಕದಲ್ಲಿ ನಿಂತಿರುವ, ಯದುಗಳು ಸದಾ ಅರ್ಚಿಸುವ, ಕೇಶವನ ಯಶಸ್ಸನ್ನು ವರ್ಧಿಸುವ, ರವಿಪ್ರಭೆಯುಳ್ಳ, ವಜ್ರನಾಭೀ, ಕ್ಷುರಾಂತ ಚಕ್ರವನ್ನು ನೋಡು!”

ಭೀಮನು ಹೇಳಿದನು:  “ಸಾರಥೇ! ಪ್ರಿಯವಾರ್ತೆಯನ್ನು ಹೇಳಿದುದಕ್ಕೆ ಸುಪ್ರಸನ್ನನಾಗಿ ನಿನಗೆ ಹದಿನಾಲ್ಕು ಶ್ರೇಷ್ಠ ಗ್ರಾಮಗಳನ್ನು ನೀಡುತ್ತೇನೆ! ಅರ್ಜುನನು ಬಂದಿರುವುದನ್ನು ತಿಳಿಸಿದುದಕ್ಕೆ ನಿನಗೆ ನೂರು ದಾಸಿಯರನ್ನೂ ಇಪ್ಪತ್ತು ರಥಗಳನ್ನೂ ಕೊಡುತ್ತೇನೆ!”

ರಣರಂಗದಲ್ಲಿ ರಥನಿರ್ಘೋಷವನ್ನೂ ಸಿಂಹನಾದವನ್ನು ಕೇಳಿದ ಅರ್ಜುನನು ಕುದುರೆಗಳನ್ನು ಶೀಘ್ರವಾಗಿ ಓಡಿಸುವಂತೆ ಗೋವಿಂದನಿಗೆ ಹೇಳಿದನು. ಅರ್ಜುನನ ಮಾತನ್ನು ಕೇಳಿ ಗೋವಿಂದನು ಇಗೋ ಭೀಮನೆಲ್ಲಿರುವನೋ ಅಲ್ಲಿಗೆ ಕ್ಷಿಪ್ರವಾಗಿ ಹೋಗುತ್ತೇನೆ!” ಎಂದು ಅರ್ಜುನನಿಗೆ ಹೇಳಿದನು. ಹಿಮಶಂಖವರ್ಣದ ಕುದುರೆಗಳನ್ನು ಕಟ್ಟಿದ್ದ, ಸುವರ್ಣ ಮುಕ್ತಾಮಣಿಗಳ ಜಾಲಗಳಿಂದ ಅಲಂಕೃತವಾಗಿದ್ದ ರಥದಲ್ಲಿ ಜಂಭಾಸುರನನನ್ನು ಸಂಹರಿಸಲು ವಜ್ರವನ್ನು ಹಿಡಿದು ಬರುತ್ತಿರುವ ದೇವೇಂದ್ರನಂತೆ ಜಯಕ್ಕಾಗಿ ಉಗ್ರಕೋಪದಿಂದ ಬರುತ್ತಿರುವ ಜಯನನ್ನು ಕ್ರುದ್ಧ ನರಸಿಂಹರು ರಥ-ಕುದುರೆ-ಮಾತಂಗ-ಪದಾತಿಸಂಘಗಳಿಂದ ಮತ್ತು ಬಾಣಗಳ ಶಬ್ಧ, ರಥಚಕ್ರಗಳ ಶಬ್ಧಗಳೊಂದಿಗೆ ಭೂಮಿ-ದಿಕ್ಕುಗಳನ್ನು ಮೊಳಗಿಸುತ್ತಾ ಆಕ್ರಮಣಿಸಿದರು. ತ್ರೈಲೋಕ್ಯಕ್ಕಾಗಿ ಅಸುರರಿಗೂ ಮತ್ತು ವಿಜಯಿಗಳಲ್ಲಿ ಶ್ರೇಷ್ಠ ದೇವ ವಿಷ್ಣುವಿಗೂ ಹೇಗೆ ಯುದ್ಧವು ನಡೆಯಿತೋ ಹಾಗೆ ಕೌರವರ ಮತ್ತು ಪಾರ್ಥರ ನಡುವೆ ದೇಹ-ಪ್ರಾಣ-ಪಾಪಗಳ ವಿನಾಶಕಾರೀ ಮಹಾ ಯುದ್ಧವು ನಡೆಯಿತು. ಅವರು ಬಿಡುತ್ತಿದ್ದ ವಿವಿಧಬಗೆಯ ಆಯುಧಸಂಘಗಳನ್ನು ಕಿರೀಟಮಾಲಿಯೊಬ್ಬನೇ ತುಂಡರಿಸಿದನು. ಅರ್ಧಚಂದ್ರದ ಕ್ಷುರಗಳು ಮತ್ತು ನಿಶಿತ ಬಾಣಗಳಿಂದ ಅವರ ಅನೇಕ ಶಿರಗಳನ್ನೂ ಬಾಹುಗಳನ್ನೂ, ಚತ್ರಗಳನ್ನೂ, ವಾಲವ್ಯಜನಗಳನ್ನೂ, ಧ್ವಜಗಳನ್ನೂ, ಅಶ್ವಗಳನ್ನೂ, ರಥಗಳನ್ನೂ, ಪದಾತಿಗಣಗಳನ್ನೂ, ಆನೆಗಳನ್ನೂ ತುಂಡರಿಸಿದನು. ವನದಲ್ಲಿ ಚಂಡಮಾರುತಕ್ಕೆ ಸಿಲುಕಿದ ಮರಗಳಂತೆ ಅವುಗಳು ಅನೇಕ ಸಂಖ್ಯೆಗಳಲ್ಲಿ ವಿರೂಪಗೊಂಡು ನೆಲದ ಮೇಲೆ ಬಿದ್ದವು. ಸುವರ್ಣಜಾಲಗಳಿಂದ ಮತ್ತು ವೈಜಯಂತೀ ಧ್ವಜಗಳಿಂದ ಅಲಂಕೃತಗೊಂಡು ಯೋಧರಿಂದ ಸಜ್ಜುಗೊಳಿಸಿದ್ದ ಮಹಾ ಗಜಗಳು ಅರ್ಜುನನ ಸುವರ್ಣಪುಂಖಗಳ ಬಾಣಗಳಿಂದ ಚುಚ್ಚಲ್ಪಟ್ಟು ಪ್ರಜ್ವಲಿಸುವ ಪರ್ವತಗಳಂತೆ ಕಾಣುತ್ತಿದ್ದವು. ಹಿಂದೆ ಬಲಭೇದನೆಗೆ ಮರುತ್ವಾನನು ಬರುವಂತೆ ವಾಸವನ ವಜ್ರಸನ್ನಿಭ ಉತ್ತಮ ಶರಗಳಿಂದ ಆನೆ-ರಥ-ಕುದುರೆಗಳನ್ನು ಸೀಳುತ್ತಾ ಅರ್ಜುನನು ಕರ್ಣನನ್ನು ಸಂಹರಿಸಲು ಉತ್ಸುಕನಾಗಿ ಬಹುಬೇಗ ಬಂದನು. ಆಗ ಆ ಮಹಾಬಾಹುವು ಮೊಸಳೆಯು ಸಾಗರವನ್ನು ಹೇಗೋ ಹಾಗೆ ಸೂತ ಕರ್ಣನ ಸೈನ್ಯವನ್ನು ಪ್ರವೇಶಿಸಿದನು. ಅವನನ್ನು ನೋಡಿ ಕೌರವರು ಅನೇಕ ರಥ-ಪದಾತಿ-ಆನೆ-ಕುದುರೆಗಳ ಸವಾರರೊಂದಿಗೆ ಪಾಂಡವನನ್ನು ಆಕ್ರಮಣಿಸಿದರು. ಉಕ್ಕಿ ಬರುತ್ತಿರುವ ಸಾಗರದ ಅಲೆಗಳ ಭೋರ್ಗರೆತದಂತೆ ಪಾರ್ಥನ ಮೇಲೆ ಬೀಳುತ್ತಿದ್ದ ಆ ಸೇನೆಗಳ ಕೋಲಾಹಲ ಶಬ್ಧವು ಸರ್ವತ್ರ ವ್ಯಾಪ್ತವಾಯಿತು. ಸಂಗ್ರಾಮದಲ್ಲಿ ಪ್ರಾಣಭಯವನ್ನೂ ತೊರೆದು ಆ ಮಹಾರಥರು ಹುಲಿಗಳಂತೆ ಪುರುಷವ್ಯಾಘ್ರ ಅರ್ಜುನನನ್ನು ಆಕ್ರಮಣಿಸಿದರು. ಮೇಲೆ ಬೀಳುತ್ತಿರುವ ಆ ಸೇನೆಯನ್ನು ಅರ್ಜುನನು ಶರವರ್ಷಗಳಿಂದ ಮುಚ್ಚಿ ಚಂಡಮಾರುತವು ಮೋಡಗಳನ್ನು ಹೇಗೋ ಹಾಗೆ ವಧಿಸಿದನು.

ಆ ಪ್ರಹಾರಿಗಳು ರಥಸಮೂಹಗಳೊಡನೆ ಸಂಘಟಿತರಾಗಿ ನಿಶಿತ ಶರಗಳಿಂದ ಅರ್ಜುನನನ್ನು ಪ್ರಹರಿಸಿದರು. ಆಗ ವಿಶಿಖಗಳಿಂದ ಅರ್ಜುನನು ಸಹಸ್ರಾರು ರಥ-ಆನೆ-ಕುದುರೆಗಳನ್ನು ಯಮಸದನಕ್ಕೆ ಕಳುಹಿಸಿದನು. ಪಾರ್ಥನ ಚಾಪದಿಂದ ಬಿಡಲ್ಪಟ್ಟ ಬಾಣಗಳಿಂದ ವಧಿಸಲ್ಪಡುತ್ತಿದ್ದ ಆ ಮಹಾರಥರು ಸಮರದಲ್ಲಿ ಭಯಗೊಂಡು ಅಲ್ಲಲ್ಲಿಯೇ ಅಡಗಿಕೊಳ್ಳುತ್ತಿದ್ದರು. ಪ್ರಯತ್ನಪಡುತ್ತಿದ್ದ ಆ ನಾಲ್ಕು ನೂರು ವೀರ ಮಹಾರಥರನ್ನು ಅರ್ಜುನನು ನಿಶಿತ ಬಾಣಗಳಿಂದ ಯಮಸದನಕ್ಕೆ ಕಳುಹಿಸಿದನು. ಸಮರದಲ್ಲಿ ನಾನಾ ರೀತಿಯ ನಿಶಿತ ಶರಗಳಿಂದ ವಧಿಸಲ್ಪಡುತ್ತಿದ್ದ ಅವರು ಭಯದಿಂದ ಅರ್ಜುನನನ್ನು ಬಿಟ್ಟು ದಿಕ್ಕಾಪಾಲಾಗಿ ಓಡಿ ಹೋದರು. ವಾಹಿನೀಮುಖದಲ್ಲಿ ಓಡಿ ಹೋಗುತ್ತಿದ್ದ ಅವರ ಶಬ್ಧವು ಮಹಾಪ್ರವಾಹದೊಂದಿಗೆ ಗಿರಿಯನ್ನು ಅಪ್ಪಳಿಸಿ ಮುಂದೆ ಹೋಗಲಾರದೇ ಭಾಗಗಳಾಗಿ ಹರಿದುಹೋಗುವ ನದಿಯಂತೆ ಮಹತ್ತರವಾಗಿತ್ತು. ಆ ಸೇನೆಯನ್ನು ಶರಗಳಿಂದ ಚೆನ್ನಾಗಿ ಹೊಡೆದು ಓಡಿಸಿ ಪಾರ್ಥ ಅರ್ಜುನನು ಸೂತ ಕರ್ಣನ ಸೇನೆಗೆ ಅಭಿಮುಖವಾಗಿ ಮುಂದುವರೆದನು. ಶತ್ರುಗಳನ್ನು ಎದುರಿಸಿ ಹೋಗುತ್ತಿದ್ದ ಅವನ ಶಬ್ಧವು ಹಿಂದೆ ಪನ್ನಗಗಳಿಗಾಗಿ ಗರುಡನು ಎರಗಿ ಬಿದ್ದಂತೆ ಅತಿ ಭಯಂಕರವಾಗಿತ್ತು. ಆ ಶಬ್ಧವನ್ನು ಕೇಳಿದ ಭೀಮಸೇನನು ಅತ್ಯಂತ ಹರ್ಷಗೊಂಡನು. ಪಾರ್ಥನು ಬರುತ್ತಿರುವುದನ್ನು ಕೇಳಿಯೇ ಪ್ರತಾಪವಾನ್ ಭೀಮಸೇನನು ಪ್ರಾಣಗಳನ್ನೂ ತ್ಯಜಿಸಿ ಕೌರವ ಸೇನೆಯನ್ನು ಮರ್ದಿಸಿದನು. ವಾಯುವೇಗಸಮನಾದ ಆ ವಾಯುವೇಗಪ್ರತಿಮ ವಾಯುಪುತ್ರ ಭೀಮನು ವಾಯುವಿನಂತೆಯೇ ಸಂಚರಿಸುತ್ತಿದ್ದನು. ಅವನಿಂದ ಮರ್ದಿಸಲ್ಪಡುತ್ತಿದ್ದ ಕೌರವ ಸೈನ್ಯವು ಸಾಗರಮಧ್ಯದಲ್ಲಿ ಒಡೆದು ಹೋಗುವ ನೌಕೆಯಂತೆ ಒಡೆದುಹೋಯಿತು.

ಭೀಮಸೇನನಿಂದ ಶಕುನಿಯ ಪರಾಜಯ

ಆಗ ಭೀಮನು ತನ್ನ ಹಸ್ತಲಾಘವವನ್ನು ತೋರಿಸುತ್ತಾ ಉಗ್ರಶರಗಳಿಂದ ಆ ಸೇನೆಯನ್ನು ತುಂಡರಿಸಿ ಯಮಕ್ಷಯಕ್ಕೆ ಕಳುಹಿಸಿದನು. ಅಲ್ಲಿ ಭೀಮನ ಅತಿಮಾನುಷ ಬಲವನ್ನು ಕಂಡು ಯೋಧರು ಯುಗಕ್ಷಯದಲ್ಲಿ ಕಾಲನಿಂದ ಓಡಿಹೋಗುವಂತೆ ರಣದಲ್ಲಿ ಓಡತೊಡಗಿದರು. ಭೀಮಬಲ ಭೀಮಸೇನನಿಂದ ಹಾಗೆ ಆರ್ದಿತರಾದವರನ್ನು ನೋಡಿ ರಾಜಾ ದುರ್ಯೋಧನನು ಸೈನಿಕ ಯೋಧರನ್ನು ಆಹ್ವಾನಿಸುತ್ತಾ ಈ ಮಾತನ್ನಾಡಿದನು: “ನೀವೆಲ್ಲರೂ ಸಂಘಟಿತರಾಗಿ ಭೀಮನನ್ನು ಸಂಹರಿಸಿರಿ! ಅವನೊಬ್ಬನು ಹತನಾದರೆ ಪಾಂಡವರ ಸರ್ವಸೇನ್ಯವೂ ಹತವಾದಂತೆ ಎಂದು ತಿಳಿಯಿರಿ!” ಅವನ ಆಜ್ಞೆಯನ್ನು ಸ್ವೀಕರಿಸಿ ಪಾರ್ಥಿವರು ಭೀಮನನ್ನು ಶರವರ್ಷಗಳಿಂದ ಸುತ್ತಲೂ ಮುತ್ತಿಗೆ ಹಾಕಿದರು. ಜಯವನ್ನು ಬಯಸಿದ್ದ ಅನೇಕ ನರರು, ರಥರು ಮತ್ತು ಕುದುರೆಗಳು ವೃಕೋದರನನ್ನು ಸುತ್ತುವರೆದರು. ಶೂರರಿಂದ ಪರಿವೃತನಾಗಿದ್ದ ಆ ಶೂರ ಭೀಮಸೇನನು ನಕ್ಷತ್ರಗಳಿಂದ ಸುತ್ತುವರೆಯಲ್ಪಟ್ಟಿದ್ದ ಚಂದ್ರಮನಂತೆ ಶೋಭಿಸಿದನು. ಹಾಗೆ ರಣದಲ್ಲಿ ಆ ನರೋತ್ತಮನು, ವಿಜಯ ಅರ್ಜುನನಂತೆಯೇ, ನೋಡಲು ಸುಂದರನಾಗಿ ಕಾಣುತ್ತಿದ್ದನು. ಅವರಿಬ್ಬರಲ್ಲಿ ವ್ಯತ್ಯಾಸವೇ ಕಾಣುತ್ತಿರಲಿಲ್ಲ. ಅಲ್ಲಿ ಕ್ರೋಧದಿಂದ ರಕ್ತೇಕ್ಷಣರಾಗಿದ್ದ ಕ್ರೂರ ಪಾರ್ಥಿವರೆಲ್ಲರೂ ವೃಕೋದರನನ್ನು ಕೊಲ್ಲಲು ಬಯಸಿ ಶರವೃಷ್ಟಿಗಳನ್ನು ಸೃಷ್ಟಿಸಿದರು. ಆದರೆ ನೀರಿನಲ್ಲಿ ಮೀನು ಬಲೆಯಿಂದ ಹೊರಬರುವಂತೆ ಭೀಮನು ಸನ್ನತಪರ್ವ ಶರಗಳಿಂದ ಮಹಾಸೇನೆಯನ್ನು ಸೀಳಿ ರಣದಿಂದ ಹೊರಬಂದನು.

ಹತ್ತು ಸಾವಿರ ಆನೆಗಳನ್ನೂ, ಎರಡು ಲಕ್ಷದ ಎರಡು ನೂರು ಪದಾತಿಗಳನ್ನೂ, ಐದುಸಾವಿರ ಕುದುರೆಗಳನ್ನೂ ಮತ್ತು ಒಂದು ನೂರು ರಥಿಗಳನ್ನೂ ಸಂಹರಿಸಿ ರಕ್ತ ಮಾಂಸಗಳ ನದಿಯನ್ನೇ ಭೀಮನು ಹರಿಸಿದನು. ಯುದ್ಧದಲ್ಲಿ ಯೋಧರನ್ನು ಯಮಸಾದನದ ಕಡೆ ಕೊಂಡೊಯ್ದು ಹರಿಯುತ್ತಿದ್ದ ಆ ನದಿಯಲ್ಲಿ ರಕ್ತವೇ ನೀರಾಗಿತ್ತು. ರಥಗಳು ಸುಳಿಗಳಾಗಿದ್ದವು. ಆನೆಗಳು ದೊಡ್ಡ ಮೊಸಳೆಗಳಂತಿದ್ದವು. ಪದಾತಿಗಳು ಮೀನುಗಳಂತಿದ್ದರು. ಕುದುರೆಗಳು ನಕ್ರಗಳಂತಿದ್ದವು. ಕೂದಲುಗಳು ಪಾಚಿಯಂತಿದ್ದವು. ತುಂಡಾದ ಭುಜಗಳು ಸರ್ಪಗಳಂತಿದ್ದವು. ಅನೇಕ ರತ್ನಗಳನ್ನು ನದಿಯು ಕೊಚ್ಚಿಕೊಂಡು ಹೋಗುತ್ತಿತ್ತು. ತೊಡೆಗಳು ಮೊಸಳೆಗಳಂತಿದ್ದವು. ಮಾಂಸವೇ ಕೆಸರಾಗಿತ್ತು. ಶಿರಗಳು ಕಲ್ಲುಬಂಡೆಗಳಂತಿದ್ದವು. ಧನುಸ್ಸುಗಳು ಜೊಂಡುಹುಲ್ಲುಗಳಂತಿದ್ದವು. ಬಾಣಗಳು ಜೊಂಡುಹುಲ್ಲಿನ ಚಿಗುರುಗಳಂತಿದ್ದವು. ಹದೆಗಳು ಪರಿಘಗಳು ನಾಗರಹಾವುಗಳಂತಿದ್ದವು.  ಆ ಪುರುಷವ್ಯಾಘ್ರನು ಕ್ಷಣದಲ್ಲಿಯೇ ಉಗ್ರವಾದ, ಅಕೃತಾತ್ಮರಿಗೆ ದುಸ್ತರವಾದ ವೈತರಣಿಯಂತಿದ್ದ ನದಿಯನ್ನು ಸೃಷ್ಟಿಸಿದನು. ರಥಸತ್ತಮ ಪಾಂಡವೇಯನು ಎಲ್ಲೆಲ್ಲಿ ಹೋಗುತ್ತಿದ್ದನೋ ಅಲ್ಲಲ್ಲಿ ನೂರಾರು ಸಹಸ್ರಾರು ಯೋಧರನ್ನು ಕೆಳಗುರುಳಿಸುತ್ತಿದ್ದನು. ಭೀಮಸೇನನು ಯುದ್ಧದಲ್ಲಿ ಮಾಡುತ್ತಿದ್ದ ಈ ಕರ್ಮಗಳನ್ನು ನೋಡಿ ದುರ್ಯೋಧನನು ಶಕುನಿಗೆ ಹೇಳಿದನು: “ಮಾವ! ಸಂಗ್ರಾಮದಲ್ಲಿ ಮಹಾಬಲ ಭೀಮಸೇನನನ್ನು ಜಯಿಸು. ಈ ಪಾಂಡವೇಯನನ್ನು ಗೆದ್ದರೆ ನಾವು ಗೆದ್ದಂತೆಯೇ!”

ಆಗ ಪ್ರತಾಪವಾನ್ ಸೌಬಲೇಯನು ಸಹೋದರರಿಂದ ಪರಿವಾರಿತನಾಗಿ ಮಹಾ ಸೇನೆಯೊಂದಿಗೆ ಯುದ್ಧಕ್ಕೆ ಹೊರಟನು. ಸಂಗ್ರಾಮದಲ್ಲಿ ಅವನು ಭೀಮಪರಾಕ್ರಮಿ ಭೀಮನನ್ನು ಎದುರಿಸಿ ಆ ವೀರನನ್ನು ದಡವು ಸಮುದ್ರವನ್ನು ತಡೆಯುವಂತೆ ತಡೆದು ನಿಲ್ಲಿಸಿದನು. ನಿಶಿತ ಶರಗಳಿಂದ ತಡೆಯಲ್ಪಟ್ಟ ಭೀಮನು ಅವನನ್ನು ಎದುರಿಸಿದನು. ಶಕುನಿಯು ರುಕ್ಮಪುಂಖಗಳುಳ್ಳ ಶಿಲಾಶಿತ ನಾರಾಚಗಳನ್ನು ಅವನ ವಕ್ಷಃಸ್ಥಳದ ಎಡಭಾಗಕ್ಕೆ ಪ್ರಯೋಗಿಸಿದನು. ಆ ಬಾಣಗಳು ಮಹಾತ್ಮನ ಸುವರ್ಣ ಕವಚವನ್ನು ಭೇದಿಸಿ ಶರೀರದೊಳಗೆ ನಾಟಿಕೊಂಡವು. ಹಾಗೆ ಅತಿಯಾಗಿ ಗಾಯಗೊಂಡ ಭೀಮನು ತಕ್ಷಣವೇ ಹೇಮವಿಭೂಷಿತ ಶರವನ್ನು ಸೌಬಲನ ಮೇಲೆ ಪ್ರಯೋಗಿಸಿದನು. ತನ್ನ ಮೇಲೆ ಬೀಳುತ್ತಿದ್ದ ಆ ಘೋರ ಶರವನ್ನು ಶಕುನಿಯು ನೂರುಭಾಗಗಳಾಗಿ ತುಂಡರಿಸಿದನು. ಅದು ಭೂಮಿಯ ಮೇಲೆ ಬೀಳಲು ಕ್ರುದ್ಧನಾದ ಭೀಮನು ನಗುತ್ತಾ ಭಲ್ಲದಿಂದ ಸೌಬಲನ ಧನುಸ್ಸನ್ನು ತುಂಡರಿಸಿದನು. ತುಂಡಾದ ಧನುಸ್ಸನ್ನು ಎಸೆದು ಸೌಬಲೇಯನು ವೇಗದಿಂದ ಇನ್ನೊಂದು ಧನುಸ್ಸನ್ನೂ ಹದಿನಾರು ಭಲ್ಲಗಳನ್ನೂ ಕೈಗೆತ್ತಿಕೊಂಡನು. ಆ ಸನ್ನತಪರ್ವಗಳಲ್ಲಿ ನಾಲ್ಕರಿಂದ ಭೀಮನ ಸಾರಥಿಯನ್ನೂ, ಐದರಿಂದ ಭೀಮನನ್ನೂ ಹೊಡೆದನು. ಸುಬಲಾತ್ಮಜನು ಒಂದರಿಂದ ಧ್ವಜವನ್ನೂ, ಎರಡರಿಂದ ಚತ್ರವನ್ನೂ, ನಾಲ್ಕರಿಂದ ನಾಲ್ಕು ಕುದುರೆಗಳನ್ನೂ ಹೊಡೆದನು.

ಆಗ ಕ್ರುದ್ಧನಾದ ಭೀಮಸೇನನು ಬಂಗಾರದ ದಂಡವನ್ನು ಹೊಂದಿದ್ದ ಲೋಹಮಯ ಶಕ್ತಿಯನ್ನು ಶಕುನಿಯಮೇಲೆ ಎಸೆದನು. ಭೀಮನ ಭುಜದಿಂದ ಹೊರಟ ಹಾವಿನ ನಾಲಿಗೆಯಂತೆ ಚಂಚಲವಾಗಿದ್ದ ಆ ಶಕ್ತಿಯು ತಕ್ಷಣವೇ ಸೌಬಲನ ರಥದ ಮೇಲೆ ಬಿದ್ದಿತು. ಕ್ರುದ್ಧರೂಪ ಶಕುನಿಯು ಕನಕಭೂಷಣವಾಗಿದ್ದ ಅದೇ ಶಕ್ತಿಯನ್ನು ಹಿಡಿದು ಭೀಮಸೇನನ ಮೇಲೆ ಎಸೆದನು. ಅದು ಪಾಂಡವನ ಎಡಭುಜವನ್ನು ಭೇದಿಸಿ ಆಕಾಶದಿಂದ ಬಿದ್ದ ಸಿಡಿಲಿನಂತೆ ನೆಲದಮೇಲೆ ಬಿದ್ದಿತು. ಆಗ ಸುತ್ತುವರೆದಿದ್ದ ಧಾರ್ತಷ್ಟ್ರರ ಉತ್ಕೃಷ್ಟ ಸಿಂಹನಾದವನ್ನು ಭೀಮನು ಸಹಿಸಿಕೊಳ್ಳಲಿಲ್ಲ. ಆಗ ಆ ಮಹಾಬಲನು ತ್ವರೆಮಾಡಿ ಪ್ರಾಣದ ಹಂಗನ್ನೇ ತೊರೆದು ಸಜ್ಜಾಗಿದ್ದ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಮುಹೂರ್ತಮಾತ್ರದಲ್ಲಿ ಸೌಬಲನ ಸೇನೆಗಳನ್ನು ಸಾಯಕಗಳಿಂದ ಮುಚ್ಚಿಬಿಟ್ಟನು. ತ್ವರೆಮಾಡಿ ಆ ಪರಾಕ್ರಮಿಯು ಶಕುನಿಯ ನಾಲ್ಕೂ ಕುದುರೆಗಳನ್ನು ಮತ್ತು ಸೂತನನ್ನು ಸಂಹರಿಸಿ ಭಲ್ಲದಿಂದ ಅವನ ಧ್ವಜವನ್ನೂ ತುಂಡರಿಸಿದನು. ಕ್ರೋಧದಿಂದ ರಕ್ತಾಕ್ಷನಾಗಿದ್ದ ಶಕುನಿಯು ಕುದುರೆಗಳನ್ನು ಕಳೆದುಕೊಂಡ ರಥವನ್ನು ಬಿಟ್ಟು ಅವಸರದಿಂದ ಕೆಳಗಿಳಿದು ನಿಟ್ಟುಸಿರುಬಿಡುತ್ತಾ ಧನುಸ್ಸನ್ನು ಟೇಂಕರಿಸಿ ನಿಂತುಕೊಂಡೇ ಅನೇಕ ಶರಗಳಿಂದ ಭೀಮನನ್ನು ಎಲ್ಲಕಡೆ ಮುಚ್ಚಿದನು. ಭೀಮಸೇನನು ವೇಗದಿಂದ ಅವುಗಳನ್ನು ನಾಶಗೊಳಿಸಿ ಸಂಕ್ರುದ್ಧನಾಗಿ ಅವನ ಧನುಸ್ಸನ್ನು ತುಂಡರಿಸಿದನು ಮತ್ತು ನಿಶಿತ ಶರಗಳಿಂದ ಪ್ರಹರಿಸಿದನು. ಶಕುನಿಯು ಶತ್ರುವಿನಿಂದ ಹಾಗಿ ಬಲವಾಗಿ ಗಾಯಗೊಂಡು ಅಲ್ಪಪ್ರಾಣನಾಗಿ ಭೂಮಿಯ ಮೇಲೆ ಬಿದ್ದನು. ಶಕುನಿಯು ವಿಹ್ವಲನಾಗಿರುವುದನ್ನು ತಿಳಿದು ದುರ್ಯೋಧನನು ಭೀಮಸೇನನು ನೋಡುತ್ತಿರುವಂತೆಯೇ ಅವನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಹೊರಟುಹೋದನು.

ಭೀಮಸೇನನು ರಥದಲ್ಲಿಯೇ ಕುಳಿತಿರಲು ಭೀಮನಿಂದ ಉಂಟಾದ ಮಹಾಭಯದಿಂದಾಗಿ ಧಾರ್ತರಾಷ್ಟ್ರರು ಪರಾಙ್ಮುಖರಾಗಿ ದಿಕ್ಕಾಪಾಲಾಗಿ ಓಡಿ ಹೋದರು. ಭೀಮಸೇನನಿಂದ ಸೌಬಲನು ಸೋತುಹೋಗಲು ಮಹಾಭಯದಿಂದ ದುರ್ಯೋಧನನು ಭಗ್ನನಾಗಿಹೋದನು. ವೇಗದ ಕುದುರೆಗಳೊಂದಿಗೆ ಅವನು ಸೋದರಮಾವನನ್ನು ಉಳಿಸಿಕೊಳ್ಳುವ ಸಲುವಾಗಿ ಅಲ್ಲಿಂದ ಹೊರಟುಹೋದನು. ರಾಜನು ಪರಾಙ್ಮುಖನಾಗಿರುವುದನ್ನು ಕಂಡು ಎಲ್ಲ ಸೈನಿಕರೂ ದ್ವೈರಥಯುದ್ಧವನ್ನು ಬಿಟ್ಟು ಎಲ್ಲ ಕಡೆ ಓಡಿಹೋದರು. ಆ ಎಲ್ಲ ಧಾರ್ತರಾಷ್ಟ್ರ ಅತಿರಥರೂ ಪರಾಙ್ಮುಖರಾದುದನ್ನು ನೋಡಿ ಭೀಮನು ಅನೇಕ ನೂರು ಬಾಣಗಳನ್ನು ಎರಚುತ್ತಾ ವೇಗದಿಂದ ಅವರನ್ನು ಹಿಂಬಾಲಿಸಿ ಹೋದನು. ಭೀಮನಿಂದ ವಧಿಸಲ್ಪಡುತ್ತಿದ್ದ ಆ ಧಾರ್ತರಾಷ್ಟ್ರರು ಪರಾಙ್ಮುಖರಾಗಿ ಕರ್ಣನನ್ನು ಸೇರಿ ರಣದಲ್ಲಿ ಅವನನ್ನು ಸುತ್ತುವರೆದು ನಿಂತರು. ಆ ಮಹಾವೀರ್ಯ ಮಹಾಬಲನೇ ಅವರ ದ್ವೀಪದಂತಿದ್ದನು. ನೌಕೆಯು ಒಡೆದುಹೋಗಲು ನಾವಿಕರು ದ್ವೀಪವನ್ನು ಸೇರಿ ಸಂತುಷ್ಟರಾಗುವಂತೆ ಕೌರವರು ಕರ್ಣನನ್ನು ಸೇರಿ ಪರಸ್ಪರರಿಗೆ ಆಶ್ವಾಸನೆಗಳನ್ನು ನೀಡುತ್ತಾ ಸಂಪ್ರಹೃಷ್ಟರಾದರು. ಮೃತ್ಯುವನ್ನೇ ಹಿಂದಿರುಗುವ ಗುರಿಯನ್ನಾಗಿರಿಸಿಕೊಂಡ ಅವರು ಯುದ್ಧಕ್ಕೆ ಪುನಃ ಮುಂದಾದರು.

ಕರ್ಣನ ಯುದ್ಧ

ಭೀಮಸೇನನಿಂದ ಬಲವು ಪಲಾಯನಗೊಳ್ಳುತ್ತಿರುವುದನ್ನು ನೋಡಿ ಕರ್ಣನು ಸಾರಥಿಗೆ “ಪಾಂಚಾಲರಿರುವಲ್ಲಿಗೆ ನನ್ನನ್ನು ಕೊಂಡೊಯ್ಯಿ!” ಎಂದನು. ಆಗ ಮದ್ರರಾಜ ಶಲ್ಯನು ಮಹಾವೇಗವುಳ್ಳ ಶ್ವೇತಾಶ್ವಗಳನ್ನು ಚೇದಿ-ಪಾಂಚಾಲ-ಕರೂಷರಿದ್ದಲ್ಲಿಗೆ ಓಡಿಸಿದನು. ಅವರ ಸೇನೆಗಳನ್ನು ಪ್ರವೇಶಿಸಿ ಶಲ್ಯನು ಹೃಷ್ಟನಾಗಿ ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಕುದುರೆಗಳನ್ನು ಕೊಂಡೊಯ್ದು ನಿಲ್ಲಿಸುತ್ತಿದ್ದನು. ವ್ಯಾಘ್ರಚರ್ಮದಿಂದ ಆಚ್ಛಾದಿತವಾಗಿದ್ದ ಮೇಘಸದೃಶ ಆ ರಥವನ್ನು ನೋಡಿ ಪಾಂಡು-ಪಾಂಚಾಲರಲ್ಲಿ ಭಯವುಂಟಾಯಿತು. ಕರ್ಣನ ರಥದ ನಿರ್ಘೋಷವು ಗುಡುಗಿನ ಸಮನಾಗಿತ್ತು ಮತ್ತು ಪರ್ವತವೇ ಸೀಳಿಹೋಗುತ್ತಿವೆಯೋ ಎಂಬಂತ್ತಿತ್ತು. ಕರ್ಣನು ಕಿವಿಯವರೆಗೂ ಸೆಳೆದು ಬಿಡುತ್ತಿದ್ದ ನೂರಾರು ತೀಕ್ಷ್ಣ ಶರಗಳಿಂದ ಪಾಂಡವ ಸೇನೆಯನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಸಂಹರಿಸಿದನು. ಹಾಗೆ ಸಮರದಲ್ಲಿ ಅತಿ ಅಮಾನುಷ ಕರ್ಮಗಳನ್ನೆಸಗುತ್ತಿರುವ ಕರ್ಣನನ್ನು ಪಾಂಡವರು ಸುತ್ತುವರೆದರು. ಶಿಖಂಡೀ, ಭೀಮ, ಧೃಷ್ಟದ್ಯುಮ್ನ, ನಕುಲ, ಸಹದೇವ, ಮತ್ತು ಸಾತ್ಯಕಿಯೊಡನೆ ದ್ರೌಪದೇಯರು ರಾಧೇಯನನ್ನು ಕೊಲ್ಲಲು ಬಯಸಿ ಅವನನ್ನು ಶರವೃಷ್ಟಿಗಳೊಂದಿಗೆ ಸುತ್ತುವರೆದು ಆಕ್ರಮಣಿಸಿದರು. ಸಾತ್ಯಕಿಯಾದರೋ ರಣದಲ್ಲಿ ಕರ್ಣನನ್ನು ಜತ್ರುದೇಶಕ್ಕೆ ಗುರಿಯಿಟ್ಟು ಇಪ್ಪತ್ತು ನಿಶಿತ ಶರಗಳಿಂದ ಪ್ರಹರಿಸಿದನು. ಶಿಖಂಡಿಯು ಇಪ್ಪತ್ತೈದು, ಧೃಷ್ಟದ್ಯುಮ್ನನು ಐದು, ದ್ರೌಪದೇಯರು ಅರವತ್ನಾಲ್ಕು, ಸಹದೇವನು ಏಳು ಮತ್ತು ನಕುಲನು ನೂರು ಸಾಯಕಗಳಿಂದ ಕರ್ಣನನ್ನು ಹೊಡೆದರು. ಭೀಮಸೇನನಾದರೋ ಕ್ರುದ್ಧನಾಗಿ ರಾಧೇಯನ ಜತ್ರುಪ್ರದೇಶಕ್ಕೆ ಗುರಿಯಿಟ್ಟು ತೊಂಭತ್ತು ನತಪರ್ವಣಗಳನ್ನು ಪ್ರಯೋಗಿಸಿದನು.

ಆಗ ಆಧಿರಥಿಯು ಜೋರಾಗಿ ನಕ್ಕು ಉತ್ತಮ ಧನುಸ್ಸನ್ನು ಟೇಂಕರಿಸಿ ಅವರನ್ನು ಪೀಡಿಸುತ್ತಾ ನಿಶಿತ ಬಾಣಗಳನ್ನು ಪ್ರಯೋಗಿಸಿದನು. ರಾಧೇಯನು ಪ್ರತಿಯೊಬ್ಬರನ್ನೂ ಐದೈದು ಬಾಣಗಳಿಂದ ತಿರುಗಿ ಹೊಡೆದನು. ಆ ಪುರುಷರ್ಷಭನು ಸಾತ್ಯಕಿಯ ಧನುಸ್ಸು-ಧ್ವಜಗಳನ್ನು ತುಂಡರಿಸಿ ಒಂಭತ್ತು ಬಾಣಗಳಿಂದ ಅವನ ವಕ್ಷಸ್ಥಳಕ್ಕೆ ಹೊಡೆದನು. ಅನಂತರ ಪರಂತಪನು ಕ್ರುದ್ಧನಾಗಿ ಭೀಮಸೇನನನ್ನು ಮೂವತ್ತು ಶರಗಳಿಂದ ಹೊಡೆದು ಮೂರು ಬಾಣಗಳಿಂದ ಅವನ ಸಾರಥಿಯನ್ನು ಸಂಹರಿಸಿದನು. ಆ ಪುರುಷರ್ಷಭನು ದ್ರೌಪದೇಯರನ್ನೂ ವಿರಥರನ್ನಾಗಿ ಮಾಡಿದನು. ಇವೆಲ್ಲವನ್ನೂ ಅವನು ನಿಮಿಷಮಾತ್ರದಲ್ಲಿ ಮಾಡಲು ಅದೊಂದು ಅದ್ಭುತವಾಗಿತ್ತು! ಅವರೆಲ್ಲರನ್ನೂ ಸನ್ನತಪರ್ವ ಶರಗಳಿಂದ ವಿಮುಖರನ್ನಾಗಿ ಮಾಡಿ ಶೂರ ಕರ್ಣನು ಪಾಂಚಾಲ-ಚೇದಿಗಳ ಮಹಾರಥರನ್ನು ಸಂಹರಿಸಿದನು. ಸಮರದಲ್ಲಿ ಅವನಿಂದ ವಧಿಸಲ್ಪಡುತ್ತಿರುವ ಚೇದಿ-ಮತ್ಸ್ಯರು ಕರ್ಣನೊಬ್ಬನನ್ನೇ ಶರಸಂಘಗಳಿಂದ ಮರ್ದಿಸುತ್ತಾ ಮುತ್ತಿಗೆ ಹಾಕಿದರು. ಸೂತಪುತ್ರನು ಅವರನ್ನು ನಿಶಿತ ಬಾಣಗಳಿಂದ ಸಂಹರಿಸಿದನು. ಸಮರದಲ್ಲಿ ತುಂಬಾ ಪ್ರಯತ್ನಪಡುತ್ತಾ ಶಕ್ತಿಯುತವಾಗಿ ಹೋರಾಡುತ್ತಿದ್ದ ಶೂರ ಪಾಂಡವರನ್ನು ರಣದಲ್ಲಿ ಏಕಾಂಗಿಯಾಗಿ ತಡೆಹಿಡಿದ ಆ ಪ್ರತಾಪವಾನ್ ಧನ್ವಿ ಸೂತಪುತ್ರ ಕರ್ಣನ ಆ ಕರ್ಮವು ಅದ್ಭುತವಾಗಿತ್ತು! ಅಲ್ಲಿ ಮಹಾತ್ಮ ಕರ್ಣನ ಹಸ್ತಲಾಘವದಿಂದ ದೇವತೆಗಳೆಲ್ಲರೂ, ಸಿದ್ಧ-ಪರಮ ಋಷಿಗಳೂ ಸಂತುಷ್ಟರಾದರು. ಧಾರ್ತರಾಷ್ಟ್ರರೂ ಆ ಕರ್ಣನನ್ನು ಗೌರವಿಸಿದರು.

ಆಗ ಬೇಸಿಗೆಯ ಕಾಲದಲ್ಲಿ ಹುಲ್ಲುಮೆದೆಗೆ ಹೊತ್ತಿಕೊಂಡ ಬೆಂಕಿಯು ಕ್ಷಣಮಾತ್ರದಲ್ಲಿ ಪ್ರಜ್ಚಲಿಸಿ ಎಲ್ಲವನ್ನೂ ಭಸ್ಮಮಾಡುವಂತೆ ಕರ್ಣನು ರಿಪುವಾಹಿನಿಯನ್ನು ಸುಟ್ಟುಹಾಕಿದನು. ಕರ್ಣನಿಂದ ವಧಿಸಲ್ಪಡುತ್ತಿದ್ದ ಪಾಂಡವೇಯರು ರಣದಲ್ಲಿ ಮಹಾಬಲ ಕರ್ಣನನ್ನು ನೋಡಿ ಭೀತರಾಗಿ ಎಲ್ಲೆಲ್ಲೋ ಓಡ ತೊಡಗಿದರು. ಕರ್ಣನ ಶ್ರೇಷ್ಠಧನುಸ್ಸಿನಿಂದ ಹೊರಟ ತೀಕ್ಷ್ಣ ಸಾಯಕಗಳಿಂದ ವಧಿಸಲ್ಪಡುತ್ತಿದ್ದ ಪಾಂಚಾಲರ ಆಕ್ರಂದವು ಜೋರಾಗಿತ್ತು. ಆ ಶಬ್ಧದಿಂದ ಪಾಂಡವರ ಮಹಾಸೇನೆಯು ಭಯದಿಂದ ನಡುಗಿತು. ಆ ರಣದಲ್ಲಿ ಕರ್ಣನೊಬ್ಬನೇ ಯೋಧನೆಂದು ಶತ್ರುಗಳು ಭಾವಿಸಿದರು. ಪಾಂಡವರೆಲ್ಲರಲ್ಲಿ ಒಬ್ಬನೂ ಕರ್ಣನನ್ನು ತಲೆಯೆತ್ತಿ ನೋಡಲು ಸಮರ್ಥನಾಗಿರಲಿಲ್ಲ. ಅಂಥಹ ಪರಮ ಅದ್ಭುತವನ್ನು ಶತ್ರುಕರ್ತನ ರಾಧೇಯನು ತೋರಿಸಿದನು. ಪ್ರವಾಹವು ಶ್ರೇಷ್ಠ ಪರ್ವತದ ಬಳಿಬಂದು ಅದರಿಂದ ತಡೆಯಲ್ಪಟ್ಟು ಅನೇಕ ಕವಲುಗಳಾಗಿ ಹೇಗಿ ಒಡೆದುಹೋಗುತ್ತದೆಯೋ ಹಾಗೆ ಪಾಂಡವರ ಸೇನೆಯು ಕರ್ಣನನ್ನು ಸಂಧಿಸಿ ಕವಲುಗಳಾಗಿ ಒಡೆದು ಹೋಯಿತು. ಮಹಾಬಾಹು ಕರ್ಣನೂ ಕೂಡ ಹೊಗೆಯಿಲ್ಲದ ಅಗ್ನಿಯಂತೆ ಪ್ರಜ್ವಲಿಸುತ್ತಾ ಪಾಂಡವರ ಮಹಾಸೇನೆಯನ್ನು ಸುಡುತ್ತಿದ್ದನು. ವೀರ ಕರ್ಣನು ವೀರರ ಶಿರಗಳನ್ನೂ, ಚಂಚಲ ಕುಂಡಲಗಳನ್ನೂ, ಮತ್ತು ಬಾಹುಗಳನ್ನೂ ಬಾಣಗಳಿಂದ ಬೇಗ ತುಂಡರಿಸುತ್ತಿದ್ದನು. ಯೋಧವ್ರತ ನಿರತನಾಗಿದ್ದ ಕರ್ಣನು ಆನೆಯದಂತಗಳ ಹಿಡಿಯಿದ್ದ ಖಡ್ಗಗಳನ್ನೂ, ಧ್ವಜಗಳನ್ನೂ, ಶಕ್ತಿಗಳನ್ನು, ಕುದುರೆ-ಆನೆಗಳನ್ನು, ವಿವಿಧ ರಥಗಳನ್ನು, ಪತಾಕೆ-ವ್ಯಜನಗಳನ್ನು, ಅಚ್ಚುಮರಗಳನ್ನೂ, ರಥಮೂಕಿಗಳನ್ನೂ, ವಿವಿಧ ಚಕ್ರಗಳನ್ನೂ ನೂರಾರು ತುಂಡುಗಳನ್ನಾಗಿ ಕತ್ತರಿಸಿದನು. ಕರ್ಣನಿಂದ ಆನೆ-ಕುದುರೆಗಳು ಹತಗೊಳ್ಳುತ್ತಿರಲು ಮಾಂಸ-ರಕ್ತಗಳಿಂದ ಕೆಸರಾಗಿದ್ದ ರಣಭೂಮಿಯು ಅಗಮ್ಯವಾಗಿ ತೋರುತ್ತಿತ್ತು. ಹತರಾದ ಆನೆ-ರಥ-ಕುದುರೆ-ಪದಾತಿಗಳಿಂದ ತುಂಬಿದ ರಣಭೂಮಿಯಲ್ಲಿ ಹಳ್ಳ-ತಿಟ್ಟುಗಳೊಂದೂ ಕಾಣುತ್ತಲೇ ಇರಲಿಲ್ಲ. ಕರ್ಣಾಸ್ತ್ರವು ವಿಜೃಂಭಿಸುತ್ತಿರಲು ಬಾಣಗಳಿಂದ ಘೋರ ಅಂಧಕಾರವು ಮುಸುಕಿ ಕೌರವರು ಮತ್ತು ಶತ್ರುಗಳು ಪರಸ್ಪರರನ್ನು ಗುರಿತಿಸಲೂ ಸಾಧ್ಯವಾಗುತ್ತಿರಲಿಲ್ಲ. ರಾಧೇಯನ ಧನುಸ್ಸಿನಿಂತ ಹೊರಟ ಕಾಂಚನ ಭೂಷಿತ ಶರಗಳಿಂದ ಮಹಾರಥರು ಮುಚ್ಚಿಹೋಗಿದ್ದರು. ಮಹಾರಥ ಪಾಂಡವೇಯರನ್ನು ಕರ್ಣನು ಪುನಃ ಪುನಃ ಭಗ್ನಗೊಳಿಸುತ್ತಿದ್ದನು. ವನದಲ್ಲಿ ಕ್ರುದ್ಧಸಿಂಹವು ಮೃಗಗುಂಪುಗಳನ್ನು ಓಡಿಸುವಂತೆ ಮಹಾಯಶಸ್ವಿ ಕರ್ಣನು ಯೋಧರನ್ನು ಎಲ್ಲಕಡೆ ಓಡಿಸುತ್ತಿದ್ದನು. ತೋಳವು ಪಶುಸಮೂಹವನ್ನು ಹೇಗೋ ಹಾಗೆ ಪಾಂಡವ ಸೇನೆಯನ್ನು ಕದಡಿಬಿಟ್ಟನು.

ಪಾಂಡವೀ ಸೇನೆಯು ಪರಾಙ್ಮುಖವಾಗುತ್ತಿದ್ದುದನ್ನು ನೋಡಿ ಮಹೇಷ್ವಾಸ ಧಾರ್ತರಾಷ್ಟ್ರರು ಭೈರವ ಕೂಗುಗಳನ್ನು ಕೂಗುತ್ತಾ ಕರ್ಣನಿದ್ದಲ್ಲಿಗೆ ಬಂದರು. ದುರ್ಯೋಧನನು ಪರಮ ಹರ್ಷದಿಂದ ಸಂಹೃಷ್ಟನಾಗಿ ನಾನಾ ವಾದ್ಯಗಳನ್ನು ಎಲ್ಲಕಡೆ ಮೊಳಗಿಸಿದನು. ಪುನಃ ಪುನಃ ಭಗ್ನರಾದ ಶೂರ ಪಾಂಚಾಲರೂ ಕೂಡ ಮೃತ್ಯುವನ್ನೇ ಹಿಂದಿರುಗುವ ತಾಣವನ್ನಾಗಿರಿಕೊಂಡು ಯುದ್ಧಕ್ಕೆ ಹಿಂದಿರುಗಿದರು. ಹಾಗೆ ರಣಕ್ಕೆ ಹಿಂದಿರುಗಿ ಬಂದ ಶೂರರನ್ನು ರಾಧೇಯನು ಹಲವು ಬಾರಿ ಭೇದಿಸಿದನು. ಅಲ್ಲಿ ಕರ್ಣನು ಕ್ರೋಧಗೊಂಡು ಇಪ್ಪತ್ತು ಪಾಂಚಾಲ ರಥರನ್ನೂ, ನೂರಕ್ಕೂ ಹೆಚ್ಚು ಚೇದಿಯೋಧರನ್ನೂ ಮತ್ತು ಕುದುರೆ ಸವಾರರನ್ನೂ ಸಂಹರಿಸಿದನು. ರಥ ಮತ್ತು ಕುದುರೆಯ ಬೆನ್ನುಗಳನ್ನು ಕುಳಿತುಕೊಳ್ಳುವವರು ಇಲ್ಲದಂತೆ ಶೂನ್ಯಮಾಡಿದನು. ಆನೆಯ ಬೆನ್ನುಗಳ ಮೇಲೆ ಮನುಷ್ಯರಿಲ್ಲದಿರುವಂತೆ ಮಾಡಿದನು ಮತ್ತು ಓಡಿಹೋಗುತ್ತಿರುವ ಪದಾತಿಗಳನ್ನು ಸಂಹರಿಸಿದನು. ಮಧ್ಯಾಹ್ನದ ಸೂರ್ಯನಂತಿದ್ದ ಆ ಪರಂತಪನನ್ನು ನೋಡಲೂ ಆಗುತ್ತಿರಲಿಲ್ಲ. ಕಾಲಾಂತಕನ ರೂಪವನ್ನು ಧರಿಸಿ ಕ್ರೂರ ಸೂತಪುತ್ರನು ಸಂಚರಿಸುತ್ತಿದ್ದನು. ಹೀಗೆ ಆನೆ-ರಥ-ಕುದುರೆ-ಪದಾತಿಗಳನ್ನು ಸಂಹರಿಸುತ್ತಾ ಮಹೇಷ್ವಾಸ ಕರ್ಣನು ರಣದಲ್ಲಿ ನಿಂತಿದ್ದನು. ಮಹಾಬಲ ಕಾಲನು ಹೇಗೆ ಭೂತಗಣಗಳನ್ನು ಸಂಹರಿಸಿ ನಿಲ್ಲುತ್ತಾನೋ ಹಾಗೆ ಮಹಾರಥ ಕರ್ಣನು ಒಬ್ಬನೇ ಸೋಮಕರನ್ನು ಸಂಹರಿಸಿ ನಿಂತಿದ್ದನು.

ಅಲ್ಲಿ ಪಾಂಚಾಲರ ಅದ್ಭುತ ಪರಾಕ್ರವು ಕಂಡುಬಂದಿತು. ಕರ್ಣನಿಂದ ವಧಿಸಲ್ಪಡುತ್ತಿದ್ದರು ಅವರು ರಣರಂಗವನ್ನು ಮಾತ್ರ ಬಿಟ್ಟು ಹೋಗಲಿಲ್ಲ. ದುರ್ಯೋಧನ, ದುಃಶಾಸನ, ಕೃಪ, ಅಶ್ವತ್ಥಾಮ, ಕೃತವರ್ಮ, ಮತ್ತು ಶಕುನಿ ಇವರು ಪಾಂಡವೀ ಸೇನೆಯನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ವಧಿಸಿದರು. ಕರ್ಣಪುತ್ರ ಸಹೋದರರಿಬ್ಬರೂ ಅಲ್ಲಲ್ಲಿ ಪಾಂಚಾಲರನ್ನು ಸಂಹರಿಸುತ್ತಿದ್ದರು. ಆಗ ಅಲ್ಲಿ ಮಹಾ ವಿನಾಶಕಾರೀ ಯುದ್ಧವು ನಡೆಯಿತು. ಹಾಗೆಯೇ ಪಾಂಡವ ಶೂರರೂ, ಧೃಷ್ಟದ್ಯುಮ್ನ-ಶಿಖಂಡಿಯರೂ, ದ್ರೌಪದೇಯರೂ ಸಂಕ್ರುದ್ಧರಾಗಿ ಕೌರವ ಸೇನೆಯನ್ನು ಆಕ್ರಮಣಿಸುತ್ತಿದ್ದರು. ಹೀಗೆ ಪಾಂಡವರ ವಿನಾಶವು ನಡೆಯುತ್ತಿರಲು ಆ ರಣಕ್ಕೆ ಮಹಾಬಲ ಭೀಮನು ಬಂದು ಕೌರವರನ್ನು ನಾಶಗೊಳಿಸಿದನು.

ಪುರುಷರ್ಷಭ ಅರ್ಜುನನಾದರೋ ಸೇನೆಯನ್ನು ಚದುರಿಸಿ, ಮಹಾರಣದಲ್ಲಿ ಅತಿಕ್ರುದ್ಧ ಸೂತಪುತ್ರನನ್ನು ನೋಡಿ, ರಣಭೂಮಿಯಲ್ಲಿ ರಕ್ತವೇ ನೀರಾದ ಮಾಂಸಮಜ್ಜಗಳನ್ನೇ ತೇಲಿಸಿಕೊಂಡು ಹೋಗುತ್ತಿರುವ ನದಿಯನ್ನು ಸೃಷ್ಟಿಸಿ ವಾಸುದೇವನಿಗೆ ಈ ಮಾತನ್ನಾಡಿದನು: “ಕೃಷ್ಣ! ಅಗೋ ರಣದಲ್ಲಿ ಸೂತಪುತ್ರನ ಧ್ವಜವು ಕಾಣುತ್ತಿದೆ! ಭೀಮಸೇನನೇ ಮೊದಲಾದ ಮಹಾರಥರು ಯುದ್ಧಮಾಡುತ್ತಿದ್ದಾರೆ. ಅಗೋ ಕರ್ಣನಿಗೆ ಹೆದರಿ ಪಾಂಚಾಲರು ಓಡಿಹೋಗುತ್ತಿದ್ದಾರೆ! ಕರ್ಣನಿಂದ ಭಗ್ನರಾದ ಪಾಂಚಾಲರನ್ನು ಓಡಿಸುತ್ತಿರುವ ರಾಜಾ ದುರ್ಯೋಧನನು ತನ್ನ ಬೆಳಗುತ್ತಿರುವ ಶ್ವೇತಛತ್ರದಡಿಯಲ್ಲಿ ಬಹಳವಾಗಿ ಶೋಭಿಸುತ್ತಿದ್ದಾನೆ! ಕೃಪ, ಕೃತವರ್ಮ ಮತ್ತು ದ್ರೌಣಿಯರು ಸೂತಪುತ್ರನ ರಕ್ಷಣೆಯಡಿಯಲ್ಲಿ ರಾಜನನ್ನು ರಕ್ಷಿಸುತ್ತಿದ್ದಾರೆ. ನಮ್ಮಿಂದ ಅವಧ್ಯರಾದ ಅವರು ಸೋಮಕರನ್ನು ಘಾತಿಗೊಳಿಸುತ್ತಿದ್ದಾರೆ. ಇಗೋ ರಥದಲ್ಲಿ ಕುಳಿತಿರುವ ಶಲ್ಯನು ಸೂತಪುತ್ರನ ರಥವನ್ನು ನಡೆಸುತ್ತಾ ಬಹಳವಾಗಿ ಶೋಭಿಸುತ್ತಿದ್ದಾನೆ! ಅಲ್ಲಿಗೆ ಹೋಗಲು ನಿಶ್ಚಯಿಸಿದ್ದೇನೆ. ಅಲ್ಲಿಗೆ ಮಹಾರಥವನ್ನು ನಡೆಸು! ಸಮರದಲ್ಲಿ ಕರ್ಣನನ್ನು ಸಂಹರಿಸದೇ ಯಾವುದೇ ಕಾರಣದಿಂದಲೂ ನಾನು ಹಿಂದಿರುಗುವುದಿಲ್ಲ! ಅನ್ಯಥಾ ರಾಧೇಯನು ಪಾರ್ಥ-ಸೃಂಜಯರನ್ನು ಸಮರದಲ್ಲಿ, ನಾವಿಬ್ಬರೂ ನೋಡುತ್ತಿದ್ದಂತೆಯೇ, ನಿಃಶೇಷರನ್ನಾಗಿ ಮಾಡಿಬಿಡುತ್ತಾನೆ.”

ಆಗ ಕೇಶವನು ಕರ್ಣನೊಡನೆ ದ್ವೈರಥಕ್ಕೆಂದು ಸವ್ಯಸಾಚಿಯನ್ನು ಕೌರವ ಕಡೆ ಕರೆದುಕೊಂಡುಹೋದನು. ಪಾಂಡವನ ಅನುಜ್ಞೆಯಂತೆ ಹೋಗುತ್ತಿದ್ದ ಹರಿಯು ರಥದಿಂದಲೇ ಎಲ್ಲಕಡೆ ಪಾಂಡುಸೇನೆಗಳಿಗೆ ಆಶ್ವಾಸನೆಯನ್ನು ನೀಡುತ್ತಿದ್ದನು. ಸಂಗ್ರಾಮದಲ್ಲಿ ಪಾಂಡವೇಯನ ರಥಘೋಷವು ವಾಸವನ ವಜ್ರಾಯುಧದ ಧ್ವನಿಗೆ ಸಮನಾಗಿತ್ತು ಮತ್ತು ಮಹಾಮೇಘದ ಗರ್ಜನೆಯನ್ನು ಅನುಕರಿಸುತ್ತಿತ್ತು. ಮಹಾ ರಥಘೋಷದೊಂದಿಗೆ ಸತ್ಯವಿಕ್ರಮ ಅಪ್ರಮೇಯಾತ್ಮ ಪಾಂಡವನು ನಿನ್ನ ಸೇನೆಯನ್ನು ಗೆಲ್ಲಲು ಆಗಮಿಸಿದನು.

ಶ್ವೇತಾಶ್ವ ಕೃಷ್ಣಸಾರಥಿಯು ಬರುತ್ತಿರುವುದನ್ನು ಮತ್ತು ಅವನ ಧ್ವಜವನ್ನು ನೋಡಿದೊಡನೆಯೇ ಮದ್ರರಾಜನು ಕರ್ಣನಿಗೆ ಹೇಳಿದನು: “ಕರ್ಣ! ಸಮರದಲ್ಲಿ ಯಾರ ಕುರಿತು ಕೇಳುತ್ತಿದ್ದೆಯೋ ಆ ಶ್ವೇತಾಶ್ವ ಕೃಷ್ಣಸಾರಥಿಯ ರಥವು, ಶತ್ರುಗಳನ್ನು ಸಂಹರಿಸುತ್ತಾ, ಇಗೋ ಬರುತ್ತಿದೆ! ಕೌಂತೇಯನು ಗಾಂಡೀವ ಧನುಸ್ಸನ್ನು ಹಿಡಿದು ನಿಂತಿದ್ದಾನೆ! ಇಂದು ನೀನು ಅವನನ್ನು ಸಂಹರಿಸಿದ್ದೇ ಆದರೆ ನಿನಗೆ ಶ್ರೇಯಸ್ಸುಂಟಾಗುತ್ತದೆ! ಅನೇಕ ಶತ್ರುಗಳನ್ನು ಸಂಹರಿಸುತ್ತಿರುವ ಅರ್ಜುನನ ಭಯದಿಂದ ಧಾರ್ತರಾಷ್ಟ್ರೀ ಸೇನೆಯು ಬೇಗನೆ ಚದುರಿ ಎಲ್ಲ ಕಡೆ ಓಡಿಹೋಗುತ್ತಿದೆ! ಅವನ ಶರೀರವು ಉಬ್ಬಿರುವುದನ್ನು ನೋಡಿದರೆ ಧನಂಜಯನು ಎಲ್ಲ ಸೇನೆಗಳನ್ನೂ ಬಿಟ್ಟು ನಿನಗೋಸ್ಕರವಾಗಿ ಇಲ್ಲಿಗೆ ತ್ವರೆಮಾಡಿ ಬರುತ್ತಿದ್ದಾನೆ ಎಂದು ನನಗನ್ನಿಸುತ್ತಿದೆ. ವೃಕೋದರನು ನಿನ್ನಿಂದ ಪೀಡೆಗೊಳಗಾಗಿರಲು ಕ್ರೋಧದಿಂದ ಉರಿಯುತ್ತಿರುವ ಪಾರ್ಥನು ನಿನ್ನನ್ನಲ್ಲದೇ ಬೇರೆ ಯಾರೊಡನೆಯೋ ಯುದ್ಧಕ್ಕೆ ನಿಲ್ಲುವವನಲ್ಲ. ನಿನ್ನಿಂದ ಧರ್ಮರಾಜ, ಶಿಖಂಡಿ, ಸಾತ್ಯಕಿ, ಧೃಷ್ಟದ್ಯುಮ್ನ, ದ್ರೌಪದೇಯರು, ಯುಧಾಮನ್ಯು, ಉತ್ತಮೌಜಸ, ಸಹೋದರರಾದ ನಕುಲ ಸಹದೇವರಿಬ್ಬರೂ ವಿರಥರಾಗಿದ್ದುದನ್ನು ಮತ್ತು ಅತಿಯಾಗಿ ಗಾಯಗೊಂಡಿರುವುದನ್ನು ನೋಡಿ ಕ್ರುದ್ಧನಾಗಿ ಕ್ರೋಧದಿಂದ ರಕ್ತಗಳನ್ನು ಕೆಂಪುಮಾಡಿಕೊಂಡು ಪಾರ್ಥನು ಒಂದೇರಥದ ಸಹಾಯದಿಂದ ಸರ್ವಧನ್ವಿಗಳನ್ನು ಸಂಹರಿಸಲು ಇಚ್ಛಿಸಿ ನಿನ್ನಕಡೆಯೇ ಬರುತ್ತಿದ್ದಾನೆ! ಕರ್ಣ! ನಿಸ್ಸಂಶಯವಾಗಿಯೂ ಆ ಧನುರ್ಧರನು ಅನ್ಯ ಸೇನೆಗಳನ್ನು ಬಿಟ್ಟು ಅತ್ಯಂತ ವೇಗವಾಗಿ ಬಂದು ನಿನ್ನಮೇಲೆಯೇ ಎರಗುತ್ತಿದ್ದಾನೆ. ಈ ಲೋಕದಲ್ಲಿ ನಿನ್ನ ಹೊರತಾಗಿ ಉಕ್ಕಿಬರುತ್ತಿರುವ ಸಮುದ್ರವನ್ನು ತಡೆದು ನಿಲ್ಲಿಸುವ ತೀರಪ್ರದೇಶದಂತೆ ಸಮರದಲ್ಲಿ ಕ್ರುದ್ಧನಾಗಿರುವ ಅರ್ಜುನನನ್ನು ಎದುರಿಸುವ ಬೇರೆ ಯಾವ ಧನುರ್ಧರನನ್ನೂ ನಾನು ಕಾಣೆ! ಅವನ ಪಾರ್ಶ್ವಗಳಲ್ಲಿಯೂ ಹಿಂದೆಯೂ ರಕ್ಷಕರನ್ನು ನಾನು ಕಾಣುತ್ತಿಲ್ಲ. ಅವನೊಬ್ಬನೇ ಬರುತ್ತಿದ್ದಾನೆ. ನೋಡು! ನಿನ್ನ ಆತ್ಮಸಾಫಲ್ಯವಾಗಲಿಕ್ಕಿದೆ! ರಣದಲ್ಲಿ ಆ ಕೃಷ್ಣರಿಬ್ಬರನ್ನೂ ಎದುರಿಸಲು ನೀನೊಬ್ಬನೇ ಶಕ್ಯನಾಗಿರುವೆ. ನಿನ್ನ ಮೇಲೆಯೇ ಇದರ ಭಾರವಿದೆ! ಧನಂಜಯನನ್ನು ಎದುರಿಸಿ ಯುದ್ಧಮಾಡು! ಭೀಷ್ಮ, ದ್ರೋಣ, ದ್ರೌಣಿ, ಕೃಪರಿಗಿಂತ ನೀನು ಸಮರ್ಥನಾಗಿರುವೆ! ಆದುದರಿಂದ ಪಾಂಡವ ಸವ್ಯಸಾಚಿಯ ರಥದ ಕಡೆ ಹೊರಡು! ಸರ್ಪದಂತೆ ಕಟವಾಯಿಯನ್ನು ನೆಕ್ಕಿಕೊಳ್ಳುತ್ತಿರುವ, ಗೂಳಿಯಂತೆ ಗರ್ಜಿಸುತ್ತಿರುವ, ಅರಣ್ಯದಲ್ಲಿರುವ ವ್ಯಾಘ್ರದಂತಿರುವ ಧನಂಜಯನನ್ನು ಸಂಹರಿಸು! ಇಗೋ ಸಮರದಲ್ಲಿ ಅರ್ಜುನನ ಭಯದಿಂದ ಧಾರ್ತರಾಷ್ಟ್ರರ ಮಹಾರಥ ಜನಾಧಿಪರು ನಿರಪೇಕ್ಷರಾಗಿ ಬೇಗನೇ ಓಡಿಹೋಗುತ್ತಿದ್ದಾರೆ. ನಿನ್ನನ್ನು ಬಿಟ್ಟರೆ ಬೇರೆ ಯಾವ ಮಾನವನೂ ಹೀಗೆ ಓಡಿಹೋಗುತ್ತಿರುವ ಅವರ ಭಯವನ್ನು ಹೋಗಲಾಡಿಸಬಲ್ಲನು! ಈ ಎಲ್ಲ ಕುರುಗಳೂ ಯುದ್ಧದಲ್ಲಿ ದ್ವೀಪದಂತಿರುವ ನಿನ್ನ ಆಶ್ರಯವನ್ನು ಪಡೆಯಲು ಬಯಸಿ ನಿಂತಿದ್ದಾರೆ! ಯುದ್ಧದಲ್ಲಿ ಹಿಂದೆ ನೀನು ಯಾವ ಧೈರ್ಯದಿಂದ ದುರ್ಜಯರಾದ ವೈದೇಹ-ಅಂಬಷ್ಟ-ಕಾಂಬೋಜ-ನಗ್ನಜಿತ-ಗಾಂಧಾರರನ್ನು ಗೆದ್ದಿದ್ದೆಯೋ ಅದೇ ಧೃತಿಯಿಂದ ಪಾಂಡವನನ್ನು ಮತ್ತು ಕಿರೀಟಿಗೆ ಪ್ರಿಯಕರನಾದ ವಾರ್ಷ್ಣೇಯ ವಾಸುದೇವನನ್ನು ಸಂಹರಿಸು!”

ಕರ್ಣನು ಹೇಳಿದನು: “ಶಲ್ಯ! ಈಗ ನೀನು ನಿನ್ನ ಸ್ವಭಾವಕ್ಕೆ ಸಮ್ಮತನಾಗಿದ್ದು ಪ್ರಕಾಶಿಸುತ್ತಿರುವೆ! ಧನಂಜಯನಿಗೆ ಭಯಪಡುವ ಕಾರಣವಿಲ್ಲ! ನನ್ನ ಈ ಬಾಹುಗಳ ಬಲವನ್ನು ನೋಡು! ಇಂದು ನನ್ನ ಶಿಕ್ಷಣದ ಶಕ್ತಿಯನ್ನು ನೋಡು! ನಾನೊಬ್ಬನೇ ಪಾಂಡವರ ಮಹಾಸೇನೆಯನ್ನು ವಿನಾಶಗೊಳಿಸುತ್ತೇನೆ! ಆ ಇಬ್ಬರು ಕೃಷ್ಣರೂ ಪುರುಷವ್ಯಾಘ್ರರು. ಯುದ್ಧದಲ್ಲಿ ಆ ಇಬ್ಬರು ವೀರರನ್ನೂ ಸಂಹರಿಸದೇ ನಾನು ಯುದ್ಧದಿಂದ ಹಿಂದಿರುಗುವುದಿಲ್ಲ! ಅಥವಾ ಅವರಿಬ್ಬರಿಂದ ಹತನಾಗಿ ರಣದಲ್ಲಿ ಮಲಗುತ್ತೇನೆ! ರಣದಲ್ಲಿ ಜಯವು ಅಸತ್ಯವಾದುದು. ಅವರನ್ನು ಸಂಹರಿಸಿಯಾದರೂ ಅಥವಾ ಅವರಿಂದ ಹತನಾಗಿಯಾದರೂ ನಾನು ಕೃತಾರ್ಥನಾಗುತ್ತೇನೆ! ಇವನಂತಹ ರಥೋತ್ತಮನು ಲೋಕದಲ್ಲಿ ಹುಟ್ಟಿರಲಿಲ್ಲ ಮತ್ತು ಇಂಥವನಿದ್ದನೆಂದು ನಾನು ಕೇಳಿಯೂ ಇಲ್ಲ. ಅಂತಹ ಪಾರ್ಥನನ್ನು ಎದುರಿಸಿ ಯುದ್ಧಮಾಡುತ್ತೇನೆ! ಮಹಾರಣದಲ್ಲಿ ನನ್ನ ಪೌರುಷವನ್ನು ನೋಡು! ಈ ರಥಪ್ರವೀರ ಕೌರವರಾಜಪುತ್ರನು ಶೀಘ್ರ ಹಯಗಳಿಂದ ಯುಕ್ತನಾಗಿ ರಥದಲ್ಲಿ ಸಂಚರಿಸುತ್ತಾನೆ. ಇಂದು ಅವನು ಅಥವಾ ನಾನು ಅವನನ್ನು ಸಂಕಟಕ್ಕೀಡುಮಾಡುವವರಿದ್ದೇವೆ. ಕರ್ಣನ ಅಂತ್ಯವಾಯಿತೆಂದರೆ ಎಲ್ಲರ ಅಂತ್ಯವಾದಂತೆಯೇ! ಆ ರಾಜಪುತ್ರನ ಕೈಗಳು ಬೆವರುವುದಿಲ್ಲ ಮತ್ತು ನಡುಗುವುದಿಲ್ಲ. ಅವನ ತೋಳುಗಳು ದೀರ್ಘವಾಗಿಯೂ ದಷ್ಟಪುಷ್ಟವಾಗಿಯೂ ಇವೆ. ದೃಢಾಯುಧ, ಅಸ್ತ್ರಶಾಸ್ತ್ರನಿಪುಣ ಮತ್ತು ಕ್ಷಿಪ್ರಹಸ್ತನಾದ ಪಾಂಡವೇಯನಿಗೆ ಸಮನಾದ ಯೋಧನಿಲ್ಲ! ಅವನು ಅನೇಕ ಕಂಕಪತ್ರ ಶರಗಳನ್ನು ಹಿಡಿದು ಅವು ಒಂದೇ ಬಾಣವೋ ಎಂಬಂತೆ ಧನುಸ್ಸಿಗೆ ಜೋಡಿಸಿ, ಸೆಳೆದು ಬಿಟ್ಟ ಬಾಣಗಳು ಒಂದು ಕ್ರೋಶದವರೆಗೂ ಹೋಗಿ ವಿಫಲವಾಗದೇ ಗುರಿಗಳ ಮೇಲೆ ಬೀಳುತ್ತವೆ. ಅಂಥಹ ಅವನಿಗೆ ಸಮನಾದ ಯೋಧನು ಭೂಮಿಯಲ್ಲಿಯೇ ಯಾರಿದ್ದಾನೆ? ಆ ಅತಿರಥ ತರಸ್ವೀ ಪಾಂಡವೇಯನು ಎರಡನೆ ಕೃಷ್ಣನನ್ನೊಡಗೂಡಿ ಹುತಾಶನನನ್ನು ತೃಪ್ತಿಪಡೆಸಿದನು. ಅಲ್ಲಿ ಮಹಾತ್ಮ ಕೃಷ್ಣನು ಚಕ್ರವನ್ನೂ ಪಾಂಡವ ಸವ್ಯಸಾಚಿಯು ಗಾಂಡಿವ ಧನುಸ್ಸನ್ನೂ ಪಡೆದರು. ಆ ಮಹಾಬಾಹು ಅದೀನಸತ್ತ್ವನು ಶ್ವೇತಾಶ್ವಗಳಿಂದ ಯುಕ್ತವಾದ, ಉತ್ತಮ ಧ್ವನಿಯನ್ನುಂಟುಮಾಡುವ, ಅಗ್ರಣೀಯ ರಥವನ್ನೂ, ದಿವ್ಯರೂಪದ ಎರಡು ಅಕ್ಷಯ ಬತ್ತಳಿಕೆಗಳನ್ನೂ, ದಿವ್ಯ ಶಸ್ತ್ರಗಳನ್ನೂ ಹವ್ಯವಾಹನನಿಂದ ಪಡೆದನು. ಹಾಗೆಯೇ ಅವನು ಇಂದ್ರಲೋಕದಲ್ಲಿ ಅಸಂಖ್ಯ ಕಾಲಕೇಯ ದೈತ್ಯರೆಲ್ಲರನ್ನೂ ಸಂಹರಿಸಿದನು. ಅಲ್ಲಿ ಅವನು ದೇವದತ್ತ ಶಂಖವನ್ನು ಪಡೆದನು. ಅವನಿಗಿಂಥ ಅಧಿಕನಾಗಿರುವವನು ಈ ಭೂಮಿಯಲ್ಲಿ ಯಾರಿದ್ದಾರೆ? ಆ ಮಹಾನುಭಾವನು ಉತ್ತಮ ಯುದ್ಧದಿಂದ ಸಾಕ್ಷಾತ್ ಮಹಾದೇವನನ್ನು ತೃಪ್ತಿಗೊಳಿಸಿದನು. ಅನಂತರ ಸುಘೋರವೂ ತ್ರೈಲೋಕ್ಯ ಸಂಹಾರಕವೂ ಆದ ಮಹಾ ಪಾಶುಪತಾಸ್ತ್ರವನ್ನು ಪಡೆದುಕೊಂಡನು. ಜೊತೆಗೆ ಲೋಕಪಾಲಕರು ಪ್ರತ್ಯೇಕ ಪ್ರತ್ಯೇಕವಾಗಿ ಅಪ್ರಮೇಯ ಅಸ್ತ್ರಗಳನ್ನು ದಯಪಾಲಿಸಿದರು. ಅವುಗಳಿಂದಲೇ ಅರ್ಜನನು ರಣದಲ್ಲಿ ಕಾಲಖಂಜ ಅಸುರ ನರಸಿಂಹರನ್ನು ಒಟ್ಟಿಗೇ ಸಂಹರಿಸಿದನು. ಹಾಗೆಯೇ ವಿರಾಟ ಪುರದಲ್ಲಿ ಒಟ್ಟಾಗಿದ್ದ ನಮ್ಮೆಲ್ಲರನ್ನೂ ಒಂದೇ ರಥದಿಂದ ಗೆದ್ದು ಅವನು ರಣಮಧ್ಯದಲ್ಲಿ ಆ ಗೋಧನವನ್ನು ಬಿಡಿಸಿಕೊಂಡು ಹೋದನು ಮತ್ತು ಮಹಾರಥರ ವಸ್ತ್ರಗಳನ್ನೂ ಕೊಂಡೊಯ್ದನು. ಇಂತಹ ವೀರ್ಯಗುಣಸಂಪನ್ನನಾದ ಈ ಎರಡನೆಯ ಕೃಷ್ಣ ರಣದಲ್ಲಿ ಯುದ್ಧಕ್ಕೆ ಆರಿಸಿಕೋ! ಹತ್ತು ಸಾವಿರ ವರ್ಷಗಳ ಪರ್ಯಂತವಾಗಿ ಎಲ್ಲ ಲೋಕಗಳ ಎಲ್ಲ ಜನರೂ ಒಟ್ಟಾಗಿ ಸೇರಿಕೊಂಡು ಹೇಳಿದರೂ ಯಾವನ ಅನಂತ ವೀರ್ಯಗಳನ್ನು ಪೂರ್ಣವಾಗಿ ಹೇಳಿ ಮುಗಿಸಲು ಸಾಧ್ಯವಾಗುವುದಿಲ್ಲವೋ ಅಂತಹ ಮಹಾತ್ಮ, ಶಂಖ-ಚಕ್ರ-ಖಡ್ಗಗಳನ್ನು ಹಿಡಿದಿರವ ವಿಷ್ಣು ಜಿಷ್ಣು ವಸುದೇವಾತ್ಮಜ ನಾರಾಯಣನಿಂದ ಅವನು ರಕ್ಷಿತನಾಗಿದ್ದಾನೆ!  ಶಲ್ಯ! ಕೃಷ್ಣರಿಬ್ಬರೂ ಒಂದೇ ರಥದಲ್ಲಿ ಒಟ್ಟಾಗಿರುವುದನ್ನು ನೋಡಿದೊಡನೆಯೇ ನನಗೆ ಭಯವುಂಟಾಗುತ್ತದೆ! ಇಬ್ಬರೂ ಶೂರರೂ, ಬಲಿಷ್ಟರೂ, ದೃಢಾಯುಧರೂ, ಮಹಾರಥರೂ, ಒಳ್ಳೆಯ ಮೈಕಟ್ಟುಳ್ಳವರೂ ಆಗಿದ್ದಾರೆ. ಇಂಥಹ ಫಲ್ಗುನ-ವಾಸುದೇವರನ್ನು ನನ್ನನ್ನು ಬಿಟ್ಟು ಬೇರೆ ಯಾರು ತಾನೇ ಎದುರಿಸಬಲ್ಲರು? ಇಂದಿನ ಯುದ್ಧದಲ್ಲಿ ನಾನು ಆ ಕೃಷ್ಣರಿಬ್ಬರನ್ನು ಕೆಡವುತ್ತೇನೆ ಅಥವಾ ಅವರು ನನ್ನನ್ನು ಸಂಹರಿಸುತ್ತಾರೆ!”

ಶಲ್ಯನಿಗೆ ಹೀಗೆ ಹೇಳಿ ಅಮಿತ್ರಹಂತ ಕರ್ಣನು ರಣದಲ್ಲಿ ಮೇಘದಂತೆ ಗರ್ಜಿಸಿದನು.

ಆಗ ದುರ್ಯೋಧನನು ಅವನ ಬಳಿ ಬಂದು ಅಭಿನಂದಿಸಿದನು. ಅನಂತರ ಅವನು ಕೃಪ-ಭೋಜರನ್ನೂ, ಹಾಗೆಯೇ ಅನುಜರೊಂದಿಗೆ ಗಾಂಧಾರನೃಪನನ್ನೂ, ಗುರುಸುತ ಅಶ್ವತ್ಥಾಮನನ್ನೂ, ತನ್ನ ತಮ್ಮ ದುಃಶಾಸನನ್ನೂ, ಇತರ ಪದಾತಿ-ಗಜಸೇನೆ-ಅಶ್ವಸೇನೆಗಳನ್ನು ಒಟ್ಟಾಗಿ ಸೇರಿಸಿ ಹೇಳಿದನು: “ಭೂಮಿಪರೇ! ಅಚ್ಯುತ-ಅರ್ಜುನರನ್ನು ತಡೆಯಿರಿ. ಎಲ್ಲಕಡೆಗಳಿಂದ ಬಾಣಗಳ ಮಳೆಗರೆಯುತ್ತಾ ಅವರ ಮೇಲೆ ಆಕ್ರಮಣಮಾಡಿರಿ! ನಿಮ್ಮಿಂದ ಕ್ಷತವಿಕ್ಷತರಾದ ಅವರಿಬ್ಬರನ್ನೂ ಸುಲಭವಾಗಿ ಇಂದು ಸಂಹರಿಸಬಹುದು!”

ಅರ್ಜುನನ ಯುದ್ಧ

ಹಾಗೆಯೇ ಆಗಲೆಂದು ಹೇಳಿ ತ್ವರೆಮಾಡಿ ಅರ್ಜುನನನ್ನು ಸಂಹರಿಸಲಿಚ್ಛಿಸಿ ಆ ಮಹಾವೀರರು ಹೊರಟರು. ಆದರೆ ಅಪಾರ ಜಲರಾಶಿಯುಳ್ಳ ಸಮುದ್ರವು ನದೀನದಗಳನ್ನು ನುಂಗಿಹಾಕುವಂತೆ ಸಮರದಲ್ಲಿ ಅರ್ಜುನನು ಅವರೆಲ್ಲರನ್ನೂ ನುಂಗಿಬಿಟ್ಟನು. ಅವನು ಶರಗಳನ್ನು ಸಂಧಾನಮಾಡುತ್ತಿರುವುದಾಗಲೀ ಬಿಡುತ್ತಿರುವುದಾಗಲೀ ಶತ್ರುಗಳಿಗೆ ಕಾಣಿಸುತ್ತಿರಲಿಲ್ಲ. ಆದರೆ ಧನಂಜಯನ ಶರಗಳಿಂದ ಸೀಳಲ್ಪಟ್ಟು ಹತರಾದ ಮನುಷ್ಯ-ಕುದುರೆ-ಆನೆಗಳು ಮಾತ್ರ ಕೆಳಕ್ಕೆ ಬೀಳುತ್ತಿದ್ದವು. ಗಾಂಡೀವವನ್ನು ಮಂಡಲಾಕಾರದಲ್ಲಿ ಸೆಳೆದು ಬಾಣಗಳನ್ನು ಬಿಡುತ್ತಿದ್ದ ಅರ್ಜುನನು ಯುಗಾಂತದ ಸೂರ್ಯನಂತೆ ಅಪ್ರತಿಮ ತೇಜಸ್ವಿಯಾಗಿದ್ದನು. ಕಣ್ಣುಬೇನೆಯಿರುವ ಜನರು ರವಿಯನ್ನು ನೋಡಲು ಶಕ್ಯರಾಗದಂತೆ ಅರ್ಜುನನನ್ನು ನೋಡಲು ಕೌರವರಿಗೆ ಸಾಧ್ಯವಾಗುತ್ತಿರಲಿಲ್ಲ. ಆಗ ಕೃಪ, ಭೋಜ, ಮತ್ತು ಸ್ವಯಂ ದುರ್ಯೋಧನ ಇವರು ಬಾಣಗಳನ್ನು ಪ್ರಯೋಗಿಸುತ್ತಾ ಅವನನ್ನು ಆಕ್ರಮಣಿಸಿದರು. ಸಂಹರಿಸಲು ಬಯಸಿ ಪ್ರಯತ್ನಪಟ್ಟು ಕುಶಲವಾಗಿ ಬಿಡುತ್ತಿದ್ದ ಅವರ ಉತ್ತಮ ಶರಗಳನ್ನು ಪಾಂಡವನು ತ್ವರೆಮಾಡಿ ಶರಗಳಿಂದಲೇ ತುಂಡರಿಸಿ ತನ್ನ ಶತ್ರುಗಳನ್ನು ಮೂರು ಮೂರು ಬಾಣಗಳಿಂದ ಗಾಯಗೊಳಿಸಿದನು. ಗಾಂಡೀವವನ್ನು ಪೂರ್ಣಮಂಡಲಾಕಾರದಲ್ಲಿ ಸೆಳೆದು ಶತ್ರುಗಳನ್ನು ಸುಡುತ್ತಿದ್ದ ಅರ್ಜುನನು ಜ್ಯೇಷ್ಠ-ಆಷಾಢ ಮಾಸಗಳ ಮಧ್ಯೆ ವರ್ತುಲಾಕರದ ಪ್ರಭೆಯಿಂದ ಕೂಡಿದ ಭಾಸ್ಕರ ಸೂರ್ಯನಂತೆಯೇ ಕಾಣುತ್ತಿದ್ದನು.

ಆಗ ದ್ರೋಣಸುತನು ಧನಂಜಯನನ್ನು ಹತ್ತು ಬಾಣಗಳಿಂದ ಹೊಡೆದು ಅಚ್ಯುತನನ್ನು ಮೂರುಗಳಿಂದಲೂ, ನಾಲ್ಕು ಬಾಣಗಳಿಂದ ನಾಲ್ಕು ಕುದುರೆಗಳನ್ನೂ ಪ್ರಹರಿಸಿ ನಾರಾಚ ಶರಗಳಿಂದ ಕಪಿಯನ್ನು ಮುಸುಕಿದನು. ಅದಕ್ಕೆ ಪ್ರತಿಯಾಗಿ ಧನಂಜಯನು ಮೂರು ಶರಗಳಿಂದ ದ್ರೌಣಿಯ ಧನುಸ್ಸನ್ನು ತುಂಡರಿಸಿ, ಕ್ಷುರದಿಂದ ಅವನ ಸಾರಥಿಯ ಶಿರವನ್ನು ತುಂಡರಿಸಿ, ನಾಲ್ಕು ಬಾಣಗಳಿಂದ ಅವನ ನಾಲ್ಕು ಕುದುರೆಗಳನ್ನು ಸಂಹರಿಸಿ ಮೂರರಿಂದ ಅವನ ಧ್ವಜವನ್ನು ರಥದಿಂದ ಕೆಳಕ್ಕೆ ಬೀಳಿಸಿದನು. ಅದರಿಂದ ರೋಷಪೂರ್ಣನಾದ ಅಶ್ವತ್ಥಾಮನು ಮಣಿ-ವಜ್ರ-ಸುವರ್ಣಗಳಿಂದ ಅಲಂಕೃತವಾದ ತಕ್ಷಕನ ಹೆಡೆಯಂತೆ ಪ್ರಕಾಶಿಸುತ್ತಿದ್ದ, ಬಹುಮೂಲ್ಯವಾದ ಮತ್ತೊಂದು ಧನುಸ್ಸನು ಪರ್ವತದ ತಪ್ಪಲಿನಲ್ಲಿದ್ದ ಮಹಾಸರ್ಪವನ್ನು ಕೈಗೆತ್ತಿಕೊಳ್ಳುವಂತೆ ಕೈಗೆತ್ತಿಕೊಂಡನು. ತನ್ನ ಆಯುಧವನ್ನು ಭೂಮಿಯ ಮೇಲೆ ಬಿಸುಟು ಹೊಸಧನುಸ್ಸನ್ನು ಸಿದ್ಧಗೊಳಿಸಿ ಅಧಿಕ ಗುಣವುಳ್ಳ ದ್ರೌಣಿಯು ಉತ್ತಮ ಶರಗಳಿಂದ ಹತ್ತಿರದಿಂದಲೇ ಒಂದೇ ರಥದಲ್ಲಿ ಕುಳಿತಿದ್ದ ನರೋತ್ತಮರೀರ್ವರನ್ನೂ ಪ್ರಹರಿಸಿದನು.

ಕೃಪ, ಭೋಜ ಮತ್ತು ದುರ್ಯೋಧನರು ಮೋಡಗಳು ಮಳೆಸುರಿಸುವಂತೆ ಅರ್ಜುನನ ಮೇಲೆ ಎರಗಿದರು. ಪಾರ್ಥನು ಪರ್ತಿಗಳಿಂದ ಕೃಪನ ಧನುಸ್ಸನ್ನೂ, ಕುದುರೆಗಳನ್ನೂ, ಧ್ವಜವನ್ನೂ, ಸಾರಥಿಯನ್ನೂ ನಾಶಗೊಳಿಸಿದನು. ಅರ್ಜುನನು ದುರ್ಯೋಧನನ ಧ್ವಜ-ಧನುಸ್ಸುಗಳನ್ನು ಕತ್ತರಿಸಿ ಗರ್ಜಿಸಿದನು. ಕೃತವರ್ಮನ ಕುದುರೆಗಳನ್ನು ಸಂಹರಿಸಿ ಅವನ ಧ್ವಜವನ್ನೂ ತುಂಡರಿಸಿದನು. ಅನಂತರ ಅವನು ಸಾರಥಿ-ಅಶ್ವ-ಧನುಸ್ಸು-ಧ್ವಜಗಳಿಂದ ಕೂಡಿದ ರಥಗಳನ್ನೂ, ಗಜಾಶ್ವರಥಗಳನ್ನೂ ಸಂಹರಿಸಿದನು. ಅಣೆಕಟ್ಟು ಒಡೆದುಹೋಗಲು ನೀರಿನ ಪ್ರವಾಹವು ಹರಿಯುವಂತೆ ಕೌರವ ಸೇನೆಯು ಚೆಲ್ಲಾಪಿಲ್ಲಿಯಾಯಿತು. ಆಗ ಕೇಶವನು ಅರ್ಜುನನ ರಥವನ್ನು ಆತುರರಾಗಿದ್ದ ಶತ್ರುಗಳನ್ನು ಬಲಭಾಗಕ್ಕೆ ಇಟ್ಟುಕೊಂಡು ಕೊಂಡೊಯ್ದನು. ಹಾಗೆ ತ್ವರೆಮಾಡಿ ಹೋಗುತ್ತಿರುವ ಧನಂಜಯನನ್ನು ವೃತ್ರನನ್ನು ಸಂಹರಿಸಲು ಹೊರಟಿರುವ ಶತಕ್ರತುವನ್ನು ಹೇಗೋ ಹಾಗೆ ಇತರ ಯುದ್ಧಾಕಾಂಕ್ಷೀ ಯೋಧರು ಸುಸಜ್ಜಿತ ರಥಗಳಲ್ಲಿ ಕುಳಿತು ಪುನಃ ಆಕ್ರಮಣಿಸಿದರು. ಧನಂಜಯನ ರಥದ ಮೇಲೆ ಪುನಃ ಧಾಳಿಯಿಡುತ್ತಿದ್ದ ಆ ಶತ್ರುಗಳನ್ನು ಶಿಖಂಡಿ-ಶೈನೇಯ-ನಕುಲ-ಸಹದೇವರು ನಿಶಿತ ಶರಗಳಿಂದ ಹೊಡೆದು ತಡೆದು ಭೈರವವಾಗಿ ಗರ್ಜಿಸಿದರು. ಆಗ ಕುಪಿತ ಕುರುಪ್ರವೀರರು ಸೃಂಜಯರನ್ನು ವೇಗಯುಕ್ತ ನಿಶಿತ ಬಾಣಗಳಿಂದ ಹಿಂದೆ ಅಸುರರು ದೇವತೆಗಳೊಂದಿಗೆ ಹೇಗೋ ಹಾಗೆ ಪರಸ್ಪರರನ್ನು ಪ್ರಹರಿಸುತ್ತಾ ಯುದ್ಧಮಾಡಿದರು. ವಿಜಯವನ್ನು ಬಯಸಿದ್ದ, ಸ್ವರ್ಗಗಮನಕ್ಕೆ ಉತ್ಸುಕರಾಗಿದ್ದ ಆನೆ-ಅಶ್ವ-ರಥಗಳು ಉಚ್ಚಬಲಗಳಿಂದ ಪರಸ್ಪರರನ್ನು ಪ್ರತ್ಯೇಕವಾದ ಶರಗಳಿಂದ ಹೊಡೆದು ಆಕ್ರಮಣಿಸುತ್ತಿದ್ದರು. ಮಹಾಯುದ್ಧದಲ್ಲಿ ಪರಸ್ಪರ ಹೋರಾಡುತ್ತಿರುವ ಮಹಾತ್ಮ ಯೋಧಶ್ರೇಷ್ಠರ ಶರಗಳಿಂದ ಅಂಧಕಾರವೇ ಕವಿಯಿತು. ದಿಕ್ಕು-ಉಪದಿಕ್ಕುಗಳೂ, ಸೂರ್ಯನ ಪ್ರಭೆಯೂ ಶರಾಂಧಕಾರದಿಂದ ಮುಚ್ಚಿಹೋದವು.

ಕುರುಗಳ ಬಲಿಷ್ಠ ಸೇನೆಯ ಆಕ್ರಮಣಕ್ಕೊಳಗಾಗಿ ಮುಳುಗಿಹೋಗುತ್ತಿರುವಂತಿದ್ದ ಭೀಮ ಕೌಂತೇಯನನ್ನು ಮೇಲೆತ್ತಲು ಬಯಸಿದ ಧನಂಜಯನು ಸೂತಪುತ್ರನ ಸೇನೆಯನ್ನು ಸಾಯಕಗಳಿಂದ ಸದೆಬಡಿದು ಪರವೀರರನ್ನು ಮೃತ್ಯುಲೋಕಗಳಿಗೆ ಕಳುಹಿಸಿದನು. ಆ ಶರಜಾಲಗಳು ಭಾಗಶಃ ಆಕಾಶವನ್ನು ಮುಸುಕಿ ಅದೃಶ್ಯವಾಗಿ ಅನ್ಯ ಭಾಗವು ಕೌರವ ಸೇನೆಯನ್ನು ಸಂಹರಿಸುತ್ತಿದ್ದವು. ಸಾಲುಸಾಲಾಗಿ ಹೋಗುತ್ತಿರುವ ಪಕ್ಷಿಸಮೂಹಗಳಂತಿದ್ದ ಶರಗಳಿಂದ ಆಕಾಶವನ್ನು ಮುಚ್ಚಿ ಧನಂಜಯನು ಕುರುಗಳಿಗೆ ಯಮಪ್ರಾಯನಾದನು. ಪಾರ್ಥನು ಆಗ ಭಲ್ಲ-ಕ್ಷುರಪ್ರ-ವಿಮನ ನಾರಾಚಗಳಿಂದ ಅವರ ಶರೀರಗಳನ್ನು ಗಾಯಗೊಳಿಸಿ ಶಿರಗಳನ್ನು ಕತ್ತರಿಸುತ್ತಿದ್ದನು. ತುಂಡಾದ ಕವಚ-ಶಿರಗಳಿಲ್ಲದ ಶರೀರಗಳಿಂದ, ಬೀಳುತ್ತಿರುವ ಮತ್ತು ಬಿದ್ದಿರುವ ಯೋಧರಿಂದ ರಣಭೂಮಿಯು ತುಂಬಿಹೋಯಿತು. ಧನಂಜಯನ ಶರಗಳಿಂದ ಬಿದ್ದ ರಥ-ಅಶ್ವ-ಪದಾತಿ-ಆನೆಗಳಿಂದ ರಣಭೂಮಿಯು ಮಹಾ ವೈತರಣೀ ನದಿಯಂತೆ ದಾಟಲಸಾಧ್ಯವಾಗಿತ್ತು. ಈಷಾದಂಡ-ಚಕ್ರ-ಅಚ್ಚುಮರಗಳು ಮುರಿದುಹೋಗಿದ್ದ, ಕುದುರೆಗಳಿದ್ದ, ಕುದುರೆಗಳಿಲ್ಲದ, ಸೂತರಿದ್ದ, ಸೂತರಿಲ್ಲದ, ರಥಗಳಿಂದ ರಣಭೂಮಿಯು ತುಂಬಿಹೋಯಿತು. ಕ್ರುದ್ಧರಾಗಿದ್ದ ಮಹಾಗಾತ್ರದ ನಿತ್ಯವೂ ಮದಿಸಿದ್ದ ಆನೆಗಳು ಸುವರ್ಣಮಯ ಕವಚಗಳನ್ನು ಧರಿಸಿ ಕನಕಭೂಷಣಗಳಿಂದ ಅಲಂಕೃತ ಮಾವಟಿಗ ಯೋಧರ ರಕ್ಷಣೆಗೊಳಗಾಗಿ ಕ್ರೋಧದಿಂದ ಅರ್ಜುನನ ಮೇಲೆ ಬೀಳುತ್ತಿದ್ದವು. ಅಂತಹ ನಾಲ್ಕು ನೂರು ಆನೆಗಳನ್ನು ಕಿರೀಟಿಯು ಶರವರ್ಷಗಳಿಂದ ಕೆಳಗುರುಳಿಸಿದನು. ಅವುಗಳು ಜೀವಜಂತುಗಳೊಡನೆ ಕೆಳಗುರುಳಿದ ಮಹಾಗಿರಿ ಶೃಂಗಗಳಂತೆ ತೋರುತ್ತಿದ್ದವು. ಕವಿದ ಮೋಡಗಳನ್ನು ಸೀಳಿ ಹೊರಬರುವ ಅಂಶುಮಾನ್ ಸೂರ್ಯನಂತೆ ಧನಂಜಯನು ಶರಗಳಿಂದ ಶ್ರೇಷ್ಠ ಆನೆಗಳ ಆ ಸೇನೆಯನ್ನು ಭೇದಿಸಿ ರಥದಲ್ಲಿ ಮುಂದುವರೆದನು.

ಹತರಾದ ಅನೇಕ ಆನೆ-ಮನುಷ್ಯ-ಅಶ್ವಗಳಿಂದ ಮತ್ತು ಭಗ್ನವಾದ ರಥಗಳಿಂದ, ಶಸ್ತ್ರ-ಕವಚ-ಯಂತ್ರಗಳಿಂದ ವಿಹೀನರಾಗಿ ಅಸುನೀಗಿದ್ದ ಯುದ್ಧಶೌಂಡರಿಂದಲೂ, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಆಯುಧಗಳಿಂದಲೂ ಫಲ್ಗುನನ ಆ ಮಾರ್ಗವು ಮುಚ್ಚಿಹೋಗಿತ್ತು. ಮೋಡಗಳು ಆಕಾಶದಲ್ಲಿ ಸಿಡಿಲಿನ ಶಬ್ಧವುಂಟುಮಾಡುವಂತೆ ಅರ್ಜುನನು ತನ್ನ ಗಾಂಡೀವವನ್ನು ಟೇಂಕರಿಸಿ ಮಹಾ ಭೈರವ ಘೋರ ನಿನಾದವನ್ನುಂಟುಮಾಡಿದನು. ಆಗ ಧನಂಜಯನ ಶರಗಳಿಂದ ಹತಗೊಂಡ ಸೇನೆಯು ಮಹಾ ಚಂಡಮಾರುತಕ್ಕೆ ಸಿಲುಕಿದ ಸಾಗರದಲ್ಲಿದ್ದ ಮಹಾನೌಕೆಯಂತೆ ಒಡೆದು ಹೋಯಿತು. ಗಾಂಡೀವದಿಂದ ಹೊರಟ ಕೊಳ್ಳಿ, ಧೂಮಕೇತು ಮತ್ತು ಮಿಂಚುಗಳಿಗೆ ಸಮಾನವಾದ ಶರಗಳ ಪ್ರಹಾರಗಳಿಂದ ಕೌರವ ಸೇನೆಯು ಸುಟ್ಟುಹೋಯಿತು. ರಾತ್ರಿಯ ಹೊತ್ತಿನಲ್ಲಿ ಮಹಾಗಿರಿಯಲ್ಲಿರುವ ಬಿದಿರಿನ ವನವು ಹತ್ತಿಕೊಂಡು ಉರಿಯುವಂತೆ ಕೌರವ ಮಹಾಸೇನೆಯು ಅರ್ಜುನನ ಶರಗಳಿಂದ ಪೀಡಿತಗೊಂಡು ಉರಿದುಹೋಗುತ್ತಿತ್ತು. ಕಿರೀಟಿಯಿಂದ ಕೌರವ ಸೇನೆಯು ಮುದ್ದೆಮುದ್ದೆಯಾಯಿತು, ಸುಟ್ಟುಹೋಯಿತು ಮತ್ತು ಧ್ವಂಸಗೊಂಡಿತು. ಬಾಣಗಳ ಪ್ರಹಾರದಿಂದ ಅಳಿದುಳಿದ ಕೌರವ ಸೇನೆಯು ದಿಕ್ಕಾಪಾಲಾಗಿ ಓಡತೊಡಗಿತು. ಮಹಾವನದಲ್ಲಿ ಕಾಡ್ಗಿಚ್ಚಿಗೆ ಸಿಲುಕಿದ ಮೃಗಗಣಗಳಂತೆ ಸವ್ಯಸಾಚಿಯಿಂದ ಸುಡದೇ ಇದ್ದ ಕುರುಗಳು ದಿಕ್ಕುಕಾಣದೇ ಓಡುತ್ತಿದ್ದರು. ಭೀಮಸೇನನನ್ನು ರಣದಲ್ಲಿಯೇ ಬಿಟ್ಟು ಕುರುಗಳ ಸೇನೆಯೆಲ್ಲವೂ ಉದ್ವಿಗ್ನಗೊಂಡು ಪರಾಙ್ಮುಖವಾಯಿತು.

ಕುರುಗಳು ಭಗ್ನರಾಗಿಹೋಗಲು ಬೀಭತ್ಸುವು ಭೀಮಸೇನನ ಬಳಿಸಾರಿ ಸ್ವಲ್ಪಹೊತ್ತು ಅಲ್ಲಿಯೇ ಇದ್ದನು. ಫಲ್ಗುನನು ಭೀಮನನ್ನು ಸಂಧಿಸಿ ಸಮಾಲೋಚನೆಗೈದು ಯುಧಿಷ್ಠಿರನ ಶರೀರದಿಂದ ಬಾಣಗಳನ್ನು ತೆಗೆದುದರ ಮತ್ತು ಅವನು ಕುಶಲನಾಗಿರುವುದರ ಕುರಿತು ಹೇಳಿದನು. ಅನಂತರ ಭೀಮಸೇನನ ಅನುಜ್ಞೆಯನ್ನು ಪಡೆದು ಧನಂಜಯನು ರಥಘೋಷದಿಂದ ಪೃಥ್ವಿ-ಆಕಾಶಗಳನ್ನು ಮೊಳಗಿಸುತ್ತಾ ಮುಂದೆ ನಡೆದನು. ಆಗ ಧನಂಜಯನು ಧೃತರಾಷ್ಟ್ರನ ಹತ್ತು ಮಕ್ಕಳಿಂದ ಸುತ್ತುವರೆಯಲ್ಪಟ್ಟನು. ಅವರು ಕ್ರೂರವಾಗಿ ನರ್ತಿಸುತ್ತಾ ಪಂಜುಗಳಿಂದ ಆನೆಯನ್ನು ಪೀಡಿಸುವಂತೆ ಅವರು ಸೆಳೆದ ಧನುಸ್ಸುಗಳಿಂದ ಹೊರಟ ಶರಗಳಿಂದ ಅವನನ್ನು ಪೀಡಿಸಿದರು. ಮಧುಸೂದದನು ರಥವನ್ನು ಅವರ ಎಡಭಾಗದಿಂದ ಮುಂದೆ ಕೊಂಡೊಯ್ಯಲು ಆ ಶೂರರು ಪರಾಙ್ಮುಖನಾಗುತ್ತಿದ್ದ ಅರ್ಜುನನನ್ನು ಆಕ್ರಮಣಿಸಿದರು. ಮೇಲೆ ಬೀಳುತ್ತಿದ್ದ ಅವರ ಧ್ವಜಗಳನ್ನೂ, ರಥಗಳನ್ನೂ, ಧನುಸ್ಸು-ಸಾಯಕಗಳನ್ನೂ ಪಾರ್ಥನು ಕ್ಷಿಪ್ರವಾಗಿ ಅರ್ಧಚಂದ್ರ ನಾರಾಚಗಳಿಂದ ಕೆಳಗುರುಳಿಸಿದನು. ಹೀಗೆ ಶತ್ರುಹಂತಕ ಅರ್ಜುನನು ಸುವರ್ಣಮಯ ಸುವರ್ಣಪುಂಖಗಳಿದ್ದ ಮಹಾವೇಗದ ಹತ್ತು ಭಲ್ಲಗಳಿಂದ ಆ ಕೌರವರನ್ನು ಗಾಯಗೊಳಿಸಿ ಮುನ್ನಡೆದನು.

ಮಹಾವೇಗದ ಅಶ್ವಗಳೊಡನೆ ಬರುತ್ತಿದ್ದ ಆ ಕಪಿವರಧ್ವಜನನ್ನು ತೊಂಭತ್ತು ವೀರ ಕುರುಗಳು ಯುದ್ಧಮಾಡುತ್ತಾ ಅಕ್ರಮಣಿಸಿದರು. ರಣದಲ್ಲಿ ಆ ನರವ್ಯಾಘ್ರರು ಅರ್ಜುನನನ್ನು ಸುತ್ತುವರೆದರು. ಕೃಷ್ಣನು ಮಹಾವೇಗಯುಕ್ತವಾದ ಕನಕಭೂಷಣಗಳಿಂದ ಅಲಂಕೃತವಾದ, ಮುತ್ತಿನ ಬಲೆಗಳಿಂದ ಆಚ್ಛಾದಿತಗೊಂದಿದ್ದ ಶ್ವೇತ ಕುದುರೆಗಳನ್ನು ಕರ್ಣನ ರಥದ ಕಡೆ ಕೊಂಡೊಯ್ದನು. ಆಗ ಶತ್ರುಗಳನ್ನು ಸಂಹರಿಸುತ್ತಾ ಕರ್ಣನ ರಥದ ಕಡೆ ಹೋಗುತ್ತಿದ್ದ ಧನಂಜಯನನ್ನು ಸಂಶಪ್ತಕ ರಥಯೋಧರು ಬಾಣವೃಷ್ಟಿಗಳನ್ನು ಸುರಿಸುತ್ತಾ ಆಕ್ರಮಣಿಸಿದರು. ಅರ್ಜುನನಾದರೋ ನಿಶಿತ ಶರಗಳಿಂದ ಆ ತೊಂಭತ್ತು ಮಂದಿ ವೀರರೆಲ್ಲರನ್ನೂ ಸಾರಥಿ-ಧನುಸ್ಸು-ಧ್ವಜಗಳೊಂದಿಗೆ ಸಂಹರಿಸಿದನು. ಕಿರೀಟಿಯ ನಾನಾರೂಪಗಳ ಬಾಣಗಳಿಂದ ಹತರಾದ ಅವರು ಪುಣ್ಯವು ಕ್ಷಯವಾಗಿ ಸಿದ್ಧರು ವಿಮಾನಗಳೊಂದಿಗೆ ಸ್ವರ್ಗದಿಂದ ಹೇಗೋ ಹಾಗೆ ಕೆಳಗುರುಳಿದರು. ಕುರುಗಳು ರಥ-ಆನೆ-ಅಶ್ವಗಳೊಡನೆ ನಿರ್ಭಯರಾಗಿ ಭರತಶ್ರೇಷ್ಠ ಫಲ್ಗುನನನ್ನು ಆಕ್ರಮಣಿಸಿದರು. ಆಗ ಧನಂಜಯನು ಅಸ್ತ್ರವನ್ನು ಪ್ರಯೋಗಿಸಿ ಆ ಶ್ರೇಷ್ಠ ಆನೆಗಳಿಂದ ಕೂಡಿದ್ದ ಕೌರವ ಮಹಾಸೇನೆಯನ್ನು ಸಂಹರಿಸಿದನು. ಕುರುಗಳು ಕುರುನಂದನನನ್ನು ಶಕ್ತಿ-ಋಷ್ಟಿ-ತೋಮರ-ಪ್ರಾಸ-ಗದೆ-ಖಡ್ಗ-ಸಾಯಕಗಳಿಂದ ಮುಚ್ಚಿಬಿಟ್ಟರು. ಸೂರ್ಯನು ಕಿರಣಗಳಿಂದ ಕತ್ತಲೆಯನ್ನು ಹೇಗೋ ಹಾಗೆ ಪಾಂಡವನು ಎಲ್ಲಕಡೆಗಳಿಂದ ಬೀಳುತ್ತಿದ್ದ ಕುರುಗಳ ಆ ಶರವೃಷ್ಟಿಯನ್ನು ಬಾಣಗಳಿಂದ ನಾಶಗೊಳಿಸಿದನು. ಆಗ ದುರ್ಯೋಧನನ ಶಾಸನದಂತೆ ಮ್ಲೇಚ್ಛರು ಹದಿನೂರು ನೂರು ಆನೆಗಳೊಡನೆ ಪಾರ್ಥನನ್ನು ಎರಡೂ ಕಡೆಗಳಿಂದ ಆಕ್ರಮಣಿಸತೊಡಗಿದರು. ಅವರು ಕರ್ಣಿ-ನಾಲೀಕ-ನಾರಾಚ-ತೋಮರ-ಪ್ರಾಸ-ಶಕ್ತಿ-ಕಂಪನ-ಭಿಂಡಿಪಾಲಗಳಿಂದ ರಥಸ್ಥನಾಗಿದ್ದ ಪಾರ್ಥನನ್ನು ಪ್ರಹರಿಸಿದರು. ಆನೆಗಳ ಸವಾರಿಮಾಡಿದ್ದ ಯವನರಿಂದ ಪ್ರಯೋಗಿಸಲ್ಪಟ್ಟ ಆ ಅಸ್ತ್ರವೃಷ್ಟಿಯನ್ನು ಫಲ್ಗುನನು ನಗುತ್ತಾ ನಿಶಿತ ಅರ್ಧಚಂದ್ರ ಭಲ್ಲಗಳಿಂದ ಕತ್ತರಿಸಿದನು. ಅರ್ಜುನನು ಆ ಆನೆಗಳೆಲ್ಲವನ್ನೂ ಪತಾಕೆ-ಆರೋಹಿಗಳೊಂದಿಗೆ ವಜ್ರದಿಂದ ಗಿರಿಗಳನ್ನು ಹೇಗೋ ಹಾಗೆ ನಾನಾ ಚಿಹ್ನೆಯ ಮಹಾಶರಗಳಿಂದ ಹೊಡೆದು ಕೆಳಗುರುಳಿಸಿದನು.

ಹೇಮಮಾಲೆಗಳನ್ನು ಧರಿಸಿದ್ದ ಆ ಮಹಾ ಆನೆಗಳು ಹೇಮಪುಂಖಗಳಿದ್ದ ಬಾಣಗಳಿಂದ ಹೊಡೆಯಲ್ಪಟ್ಟು ಹತರಾಗಿ ಅಗ್ನಿಜ್ವಾಲೆಯಿಂದ ಕೂಡಿದ ಪರ್ವತಗಳಂತೆ ಕೆಳಕ್ಕೆ ಬಿದ್ದವು. ಆಗ ಗಾಂಡೀವ ನಿರ್ಘೋಷವೂ, ಮನುಷ್ಯ-ಆನೆ-ಕುದುರೆಗಳ ಆರ್ತನಾದಗಳೂ, ಚೀತ್ಕಾರಗಳೂ ಜೋರಾಗಿ ಕೇಳಿಬಂದವು. ಹತಗೊಂಡ ಆನೆಗಳು ಮತ್ತು ಆರೋಹಿಗಳು ಹತರಾದ ಕುದುರೆಗಳು ಹತ್ತೂ ದಿಕ್ಕುಗಳಲ್ಲಿ ಓಡತೊಡಗಿದವು. ರಥಿಗಳಿಂದಲೂ ಕುದುರೆಗಳಿಂದಲೂ ವಿಹೀನವಾಗಿದ್ದ ಗಂಧರ್ವನಗರಾಕಾರದ ಸಹಸ್ರಾರು ರಥಗಳು ಅಲ್ಲಿ ಕಾಣುತ್ತಿದ್ದವು. ಅಶ್ವಾರೋಹಿಗಳು ಅಲ್ಲಿಂದಲ್ಲಿಗೆ ಓಡುತ್ತಿರುವಾಗ ಪಾರ್ಥನ ಸಾಯಕಗಳಿಂದ ಹೊಡೆಯಲ್ಪಟ್ಟು ಅಲ್ಲಲ್ಲಿಯೇ ಬೀಳುತ್ತಿರುವುದು ಕಂಡಿತು. ಆ ಕ್ಷಣದಲ್ಲಿ – ಅಶ್ವಾರೋಹಿಗಳನ್ನೂ, ಆನೆಗಳನ್ನೂ, ರಥಗಳನ್ನೂ ಯುದ್ಧದಲ್ಲಿ ಏಕಾಕಿಯಾಗಿ ಸೋಲಿಸಿದ - ಪಾಂಡವನ ಬಾಹುಗಳ ಬಲವು ಕಂಡುಬಂದಿತು. ಗಜಾಶ್ವಸೈನಿಕರ ಮಹಾ ಸೇನೆಯಿಂದ ಪರಿವೃತನಾದ ಕಿರೀಟಿಯನ್ನು ನೋಡಿ ಭೀಮಸೇನನು ಅಳಿದುಳಿದಿದ್ದ ಕೌರವ ರಥಗಳನ್ನು ಬಿಟ್ಟು ವೇಗದಿಂದ ಧನಂಜಯನ ರಥದ ಕಡೆ ಧಾವಿಸಿದನು. ಅರ್ಜುನನನ್ನು ಆಕ್ರಮಣಿಸಿದ್ದ ಸೇನೆಯಲ್ಲಿ ಅಳಿದುಳಿದವರು ಆತುರಗೊಂಡು ಓಡಿ ಹೋದುದನ್ನು ನೋಡಿ ಭೀಮನು ತಮ್ಮನ ಬಳಿ ಧಾವಿಸಿದನು. ಅರ್ಜುನನಿಂದ ಅಳಿದುಳಿದ ಕುದುರೆಗಳನ್ನು ಗದಾಪಾಣಿ ಭೀಮನು ಭ್ರಾಂತಿಗೊಳ್ಳದೇ ಸಂಹರಿಸಿದನು. ಕಾಲರಾತ್ರಿಯಂತೆ ಉಗ್ರವಾಗಿದ್ದ, ಮನುಷ್ಯ-ಆನೆ-ಕುದುರೆಗಳೇ ಭೋಜನವಾಗಿದ್ದ, ಪ್ರಾಕಾರಗಳನ್ನೂ, ಉಪ್ಪರಿಗೆ ಮನೆಗಳನ್ನೂ, ಪುರದ್ವಾರಗಳನ್ನೂ ಭೇದಿಸಲು ಸಮರ್ಥವಾದ ದಾರುಣ ಗದೆಯನ್ನು ಭೀಮನು ಮನುಷ್ಯ-ಆನೆ-ಕುದುರೆಗಳ ಮೇಲೆ ಪ್ರಯೋಗಿಸಲು ಅದು ಅನೇಕ ಕುದುರೆಗಳನ್ನೂ ಅಶ್ವಾರೋಹಿಗಳನ್ನೂ ಸಂಹರಿಸಿತು. ಭೀಮಸೇನನು ಕಬ್ಬಿಣದಿಂದ ಮಾಡಲ್ಪಟ್ಟ ಕವಚಗಳಿದ್ದ ಪದಾತಿಗಳನ್ನೂ ಮತ್ತು ಕುದುರೆಗಳನ್ನೂ ಗದೆಯಿಂದ ಸದೆಬಡಿಯಲು ಅವುಗಳು ಆರ್ತನಾದಗೈಯುತ್ತಾ ಹತಗೊಂಡು ಕೆಳಕ್ಕುರುಳಿದವು.

ಆ ಗಜಸೇನೆಯನ್ನು ಸಂಹರಿಸಿ ಮಹಾಬಲ ಭೀಮಸೇನನು ಪುನಃ ತನ್ನ ರಥದಲ್ಲಿ ಕುಳಿತು ಅರ್ಜುನನ ಹಿಂದೆ ಹೋದನು. ಶಸ್ತ್ರಗಳಿಂದ ಪ್ರಹರಿಸಲ್ಪಟ್ಟ ಕೌರವ ಸೇನೆಯು ಪ್ರಾಯಶಃ ನಿರುತ್ಸಾಹಗೊಂಡು ಜಡವಾಗಿ ಪರಾಙ್ಮುಖವಾಗುತ್ತಿತ್ತು. ಜಡವಾಗಿ ಉದ್ಯೋಗಶೂನ್ಯವಾಗಿದ್ದ ಆ ಸೇನೆಯನ್ನು ನೋಡಿ ಅರ್ಜುನನು ಪ್ರಾಣಗಳನ್ನು ಸುಡುವ ಬಾಣಗಳಿಂದ ಮುಚ್ಚಿಬಿಟ್ಟನು. ಆಗ ಅರ್ಜುನನ ಬಾಣಗಳಿಂದ ವಧಿಸಲ್ಪಡುತ್ತಿದ್ದ ಕುರುಗಳ ರಥ-ಕುದುರೆ-ಆನೆಗಳಲ್ಲಿ ಆರ್ತನಾದವುಂಟಾಯಿತು. ತುಂಬಾ ಹಾಹಾಕಾರ ಮಾಡುತ್ತಾ ಪರಸ್ಪರರನ್ನು ಆಲಂಗಿಸಿಕೊಂಡು ಆ ಸೇನೆಯು ನಿಂತಿತ್ತು ಮತ್ತು ಚಕ್ರದಂತೆ ಸುತ್ತಲೂ ತಿರುಗುತ್ತಿತ್ತು. ಬಾಣಗಳಿಂದ ಛಿನ್ನವಾದ ಕವಚಗಳಿಂದ ಆ ಸೇನೆಯು ಹತ್ತಿಕೊಂಡು ಉರಿಯುತ್ತಿರುವಂತೆ ಮತ್ತು ತಮ್ಮದೇ ರಕ್ತದಿಂದ ತೋಯ್ದು ಹೋಗಿ ಹೂಬಿಟ್ಟ ಅಶೋಕ ವನದಂತೆ ಕಾಣುತ್ತಿತ್ತು. ಅಲ್ಲಿ ಸವ್ಯಸಾಚಿಯ ಆ ವಿಕ್ರಮವನ್ನು ನೋಡಿ ಕುರುಗಳು ಎಲ್ಲರೂ ಕರ್ಣನು ಜೀವಿಸಿರುವ ವಿಷಯದಲ್ಲಿ ನಿರಾಶೆಗೊಂಡರು. ಪಾರ್ಥನ ಶರಸಂಘಾತವನ್ನು ಸಹಿಸಲಸಾಧ್ಯವೆಂದು ತಿಳಿದು ಗಾಂಡೀವಧನ್ವಿಯಿಂದ ಪರಾಜಿತರಾದ ಕುರುಗಳು ಹಿಮ್ಮೆಟ್ಟಿದರು.

ಅವರು ಸಾಯಕಗಳಿಂದ ವಧಿಸುತ್ತಿದ್ದ ಪಾರ್ಥನನ್ನು ಸಮರದಲ್ಲಿ ಬಿಟ್ಟು ಭೀತರಾಗಿ ಸೂತಜನನ್ನು ಕೂಗಿ ಕರೆಯುತ್ತಾ ದಿಕ್ಕಾಪಾಲಾಗಿ ಓಡಿ ಹೋದರು. ಪಾರ್ಥನು ಅನೇಕ ನೂರು ಬಾಣಗಳನ್ನು ಎರಚುತ್ತಾ ಅವರನ್ನು ಆಕ್ರಮಣಿಸಿ ಭೀಮಸೇನನೇ ಮೊದಲಾದ ಪಾಂಡವ ಯೋಧರನ್ನು ಹರ್ಷಗೊಳಿಸಿದನು. ಧೃತರಾಷ್ಟ್ರ ಪುತ್ರರಾದರೋ ಕರ್ಣನ ರಥದ ಕಡೆ ಹೋದರು. ಅಗಾಧ ಸಾಗರದಲ್ಲಿ ಮುಳುಗುತ್ತಿದ್ದ ಅವರಿಗೆ ಕರ್ಣನು ದ್ವೀಪಪ್ರಾಯನಾಗಿದ್ದನು. ಗಾಂಡಿವಧನ್ವಿಯ ಭಯದಿಂದ ವಿಷರಹಿತ ಸರ್ಪಗಳಂತೆ ಕುರುಗಳು ಕರ್ಣನನ್ನೇ ಆಶ್ರಯಿಸಿ ನಿಂತಿದ್ದರು. ಸರ್ವಭೂತಗಳೂ ಮೃತ್ಯುವಿನ ಭಯದಿಂದ ಧರ್ಮವನ್ನೇ ಅವಲಂಬಿಸಿ ಕರ್ಮಗಳನ್ನು ಮಾಡುವಂತೆ ಕೌರವ ಪುತ್ರರು ಪಾಂಡವನಿಗೆ ಹೆದರಿ ಕರ್ಣನನ್ನೇ ಅವಲಂಬಿಸಿದ್ದರು. ರಕ್ತದಿಂದ ತೋಯ್ದುಹೋಗಿದ್ದ ಶರಗಳ ಭಯದಿಂದ ನಡುಗುತ್ತಿದ್ದ ಅವರನ್ನು ಕರ್ಣನು “ಹೆದರಬೇಡಿರಿ! ನನ್ನ ಬಳಿ ಬನ್ನಿ!” ಎಂದು ಕೂಗಿ ಕರೆಯುತ್ತಿದ್ದನು.

ಪಾರ್ಥನಿಂದ ಕೌರವ ಸೇನೆಯು ಭಗ್ನವಾದುದನ್ನು ನೋಡಿ ಕರ್ಣನು ಶತ್ರುಗಳನ್ನು ಸಂಹರಿಸಲು ಬಯಸಿ ಧನುಸ್ಸನ್ನು ಟೇಂಕರಿಸಿ ಸವ್ಯಸಾಚಿಯು ನೋಡುತ್ತಿದ್ದಂತೆಯೇ ಪುನಃ ಪಾಂಚಾಲರನ್ನು ಆಕ್ರಮಣಿಸಿದನು. ಆಗ ಕ್ಷಣದಲ್ಲಿಯೇ ಗಾಯಗೊಂಡ ಪಾಂಚಾಲ ರಾಜರು ಮೇಘಗಳು ಪರ್ವತದ ಮೇಲೆ ಹೇಗೋ ಹಾಗೆ ಕರ್ಣನ ಮೇಲೆ ಬಾಣಗಳನ್ನು ಸುರಿಸಿದರು. ಆಗ ಕರ್ಣನಿಂದ ಹೊರಟ ಸಹಸ್ರಾರು ಬಾಣಗಳು ಪಾಂಚಾಲರಿಂದ ಪ್ರಾಣಗಳನ್ನು ಪ್ರತ್ಯೇಕಿಸಿದವು. ಮಿತ್ರನಿಗಾಗಿ ಶತ್ರುಘಾತಿ ಪಾಂಚಾಲರನ್ನು ವಧಿಸುತ್ತಿದ್ದ ಸೂತಪುತ್ರನಿಗಾಗಿ ರಣದಲ್ಲಿ ಮಹಾ ಹಾಹಾಕಾರವುಂಟಾಯಿತು.

ಕುರುಗಳು ಪಲಾಯನಮಾಡುತ್ತಿರಲು ಸೂತಪುತ್ರ ಕರ್ಣನು ಶ್ವೇತಹಯಯುಕ್ತವಾದ ರಥದಲ್ಲಿ ಕುಳಿತು ದೊಡ್ಡ ಬಾಣಗಳಿಂದ ಚಂಡಮಾರುತವು ಮೋಡಗಳ ಸಮೂಹವನ್ನು ಚೆಲ್ಲಪಿಲ್ಲಿಯಾಗಿ ಮಾಡುವಂತೆ ಪಾಂಚಾಲಪುತ್ರರನ್ನು ವಧಿಸಿದನು. ಅಂಜಲಿಕದಿಂದ ಜನಮೇಜಯನ ಕುದುರೆಗಳನ್ನು ಕೊಂದು ಸಾರಥಿಯನ್ನು ಕೆಳಗುರುಳಿಸಿದನು. ಭಲ್ಲಗಳಿಂದ ಶತಾನೀಕ ಮತ್ತು ಸುತಸೋಮರನ್ನು ಮುಚ್ಚಿ, ಅವರ ಧನುಸ್ಸುಗಳನ್ನು ಕತ್ತರಿಸಿದನು. ಬಳಿಕ ಸೂತಪುತ್ರನು ಆರು ಬಾಣಗಳಿಂದ ಧೃಷ್ಟದ್ಯುಮ್ನನನ್ನು ಪ್ರಹರಿಸಿ, ರಣದಲ್ಲಿ ಅವನ ಬಲಗಡೆಯಿದ್ದ ಸಾತ್ಯಕಿಯ ಕುದುರೆಗಳನ್ನೂ ಸಂಹರಿಸಿ, ಕೈಕೇಯಪುತ್ರ ವಿಶೋಕನನ್ನು ಸಂಹರಿಸಿದನು. ಕುಮಾರನು ಹತನಾಗಲು ಕೈಕೇಯಸೇನಾಪತಿ ಉಗ್ರಧನ್ವನು ಮುನ್ನುಗ್ಗಿ ಅತ್ಯಂತ ವೇಗಯುಕ್ತವಾದ ಶರಗಳಿಂದ ಕರ್ಣನ ಮಗ ಸುಷೇಣನನ್ನು ಬಹಳವಾಗಿ ಪೀಡಿಸಿದನು. ಕರ್ಣನು ಜೋರಾಗಿ ನಗುತ್ತಾ ಮೂರು ಅರ್ಧಚಂದ್ರಬಾಣಗಳಿಂದ ಅವನ ಬಾಹುಗಳನ್ನೂ ಶಿರವನ್ನೂ ಕತ್ತರಿಸಿದನು. ಕೊಡಲಿಯಿಂದ ಕತ್ತರಿಸಲ್ಪಟ್ಟ ಶಾಲವೃಕ್ಷದಂತೆ ಪ್ರಾಣಗಳನ್ನು ತೊರೆದು ಅವನು ರಥದಿಂದ ಕೆಳಕ್ಕೆ ಬಿದ್ದನು. ರಣದಲ್ಲಿ ನರ್ತಿಸುತ್ತಿರುವನೋ ಎನ್ನುವಂತೆ ಸೌತಿಪುತ್ರ ಸುಷೇಣನು ಅಶ್ವಗಳನ್ನು ಕಳೆದುಕೊಂಡಿದ್ದ ಸಾತ್ಯಕಿಯನ್ನು ಶೀಘ್ರವಾಗಿ ಹೋಗುವ ನಿಶಿತ ಪೃಷತ್ಕಗಳಿಂದ ಮುಚ್ಚಿದನು. ಆದರೆ ಶೈನೇಯನ ಬಾಣಗಳಿಂದ ಹೊಡೆಯಲ್ಪಟ್ಟು ಕೆಳಗುರುಳಿದನು. ಪುತ್ರನು ಹತನಾಗಲು ವಿಪರೀತವಾಗಿ ಕೋಪಗೊಂಡ ಕರ್ಣನು ಶಿನಿಗಳ ವೃಷಭ ಸಾತ್ಯಕಿಯನ್ನು ಕೊಲ್ಲಲು ಬಯಸಿ ಶೈನೇಯ! ನೀನು ಸತ್ತೆ!” ಎಂದು ಹೇಳುತ್ತ ಬಾಣವನ್ನು ಪ್ರಯೋಗಿಸಿದನು. ಅವನ ಆ ಶರವನ್ನು ಶಿಖಂಡಿಯು ಕತ್ತರಿಸಿ ಮೂವತ್ಮೂರು ಬಾಣಗಳಿಂದ ಕರ್ಣನನ್ನು ಪ್ರತಿಯಾಗಿ ಹೊಡೆದನು. ಅದಕ್ಕೆ ಪ್ರತಿಯಾಗಿ ಕರ್ಣನು ಚೆನ್ನಾಗಿ ಪ್ರಯೋಗಿಸಿದ ಎರಡು ಬಾಣಗಳಿಂದ ಶಿಖಂಡಿಯ ಧನುಸ್ಸನ್ನೂ ಧ್ವಜವನ್ನೂ ಕತ್ತರಿಸಿ ಕೆಳಕ್ಕೆ ಬೀಳಿಸಿದನು. ಆ ಉಗ್ರ ಕರ್ಣನು ಶಿಖಂಡಿಯನ್ನು ಆರು ಬಾಣಗಳಿಂದ ಹೊಡೆದು ಧೃಷ್ಟದ್ಯುಮ್ನನ ಮಗನ ಶಿರವನ್ನು ಕತ್ತರಿಸಿದನು. ಅನಂತರ ಆಧಿರಥಿಯು ಶರಗಳಿಂದ ಸುತಸೋಮನನ್ನು ಆಕ್ರಮಣಿಸಿದನು. ಧೃಷ್ಟದ್ಯುಮ್ನನ ಮಗನು ಹತನಾಗಿ ತುಮುಲ ಆಕ್ರಂದವು ನಡೆಯುತ್ತಿರಲು ಕೃಷ್ಣನು “ಪಾರ್ಥ! ಕರ್ಣನು ರಣಭೂಮಿಯನ್ನು ಪಾಂಚಾಲ್ಯರಿಲ್ಲದಿರುವಂತೆ ಮಾಡುತ್ತಿದ್ದಾನೆ. ಹೋಗಿ ಕರ್ಣನನ್ನು ಸಂಹರಿಸು!” ಎಂದು ಹೇಳಿದನು.

ಆಗ ರಥಯೂಥಪ ಕರ್ಣನಿಂದ ಪ್ರಹರಿಸಲ್ಪಟ್ಟು ಭಯಗೊಂಡಿರುವ ಅವರನ್ನು ರಕ್ಷಿಸಲು ಬಯಸಿ ಸುಬಾಹು ನರಪ್ರವೀರ ಅರ್ಜುನನು ನಗುತ್ತಾ ತನ್ನ ರಥದಲ್ಲಿ ಕುಳಿತು ಆಧಿರಥನ ರಥದ ಬಳಿ ಬಂದನು. ಉಗ್ರಘೋಷವುಳ್ಳ ಗಾಂಡೀವವನ್ನು ಹಿಡಿದು ಮೌರ್ವಿಯಿಂದ ಎಳೆದು ಟೇಂಕರಿಸಿ, ಅರ್ಜುನನು ಕೂಡಲೇ ಬಾಣಾಂಧಕರವನ್ನು ಸೃಷ್ಟಿಸಿ, ಆನೆ-ಕುದುರೆ-ರಥ-ಪದಾತಿಗಳನ್ನು ಸಂಹರಿಸಿದನು. ಆ ಪಾಂಡವ ಏಕವೀರನನ್ನು ಹಿಂಬಾಗದಿಂದ ರಕ್ಷಿಸುತ್ತಾ ಭೀಮಸೇನನು ರಥದಿಂದ ಹಿಂಬಾಲಿಸಿ ಬಂದನು. ಆ ಇಬ್ಬರು ರಾಜಪುತ್ರರೂ ತ್ವರೆಮಾಡಿ ರಥಗಳಿಂದ ಕರ್ಣನ ರಥದ ಕಡೆ ಧಾವಿಸಿ ಆಕ್ರಮಣಿಸಿದರು.

ಅದರ ಮಧ್ಯದಲ್ಲಿ ಸೂತಪುತ್ರನು ಸೋಮಕರನ್ನು ಮರ್ದಿಸುತ್ತಾ ಜೋರಾಗಿ ಯುದ್ಧಮಾಡುತ್ತಿದ್ದನು. ಅವನು ರಥ-ಅಶ್ವ-ಮಾತಂಗ ಗಣಗಳನ್ನು ಸಂಹರಿಸಿ, ಶರಗಳಿಂದ ದಿಕ್ಕುಗಳನ್ನು ಆಚ್ಛಾದಿಸಿದನು. ಅದಕ್ಕೆ ಪ್ರತಿಯಾಗಿ ಉತ್ತಮೌಜಸ, ಜನಮೇಜಯ, ಕ್ರುದ್ಧರಾದ ಯುಧಾಮನ್ಯು-ಶಿಖಂಡಿಯರು ಧೃಷ್ಟದ್ಯುಮ್ನನನ್ನೊಡಗೂಡಿ ಪೃಷತ್ಕಗಳಿಂದ ಕರ್ಣನನ್ನು ಮರ್ದಿಸುತ್ತಾ ಸಿಂಹನಾದಗೈದರು. ಕರ್ಣನನ್ನು ಆಕ್ರಮಣಿಸುತ್ತಿದ್ದ ಆ ಐವರು ಪಾಂಚಾಲಮಹಾರಥರು ಜಿತೇಂದ್ರಿಯನನ್ನು ಸ್ಥೈರ್ಯದಿಂದ ಕದಲಿಸಲು ಶಕ್ಯವಲ್ಲದ ಪಂಚೇಂದ್ರಿಯಗಳಂತೆ ಕರ್ಣನನ್ನು ರಥದಿಂದ ಕದಲಿಸಲು ಶಕ್ಯರಾಗಲಿಲ್ಲ. ಅವರ ಧನುಸ್ಸು, ಧ್ವಜ, ಕುದುರೆಗಳು, ಸಾರಥಿಗಳು, ಪತಾಕೆಗಳನ್ನು ಬಾಣಗಳಿಂದ ಕತ್ತರಿಸಿ ಕರ್ಣನು ಆ ಐವರನ್ನೂ ಪೃಷತ್ಕಗಳಿಂದ ಪ್ರಹರಿಸಿ ಸಿಂಹನಂತೆ ಗರ್ಜಿಸಿದನು. ಮೌರ್ವಿ-ಬಾಣಗಳನ್ನು ಹಿಡಿದು ನಿರಂತರವಾಗಿ ಬಾಣಗಳನ್ನು ಪ್ರಯೋಗಿಸಿ ಶತ್ರುಗಳನ್ನು ಸಂಹರಿಸುತ್ತಿದ್ದ ಅವನ ಧನುಸ್ಸಿನ ಟೇಂಕಾರ ಶಬ್ಧದಿಂದ ಗಿರಿವೃಕ್ಷಗಳೊಂದಿಗೆ ಭೂಮಿಯು ಸೀಳಿಹೋಗುತ್ತಿದೆಯೋ ಎಂದು ತಿಳಿದು ಜನರು ಖಿನ್ನರಾದರು. ಆಧಿರಥಿಯು ಶಕ್ರಚಾಪದಂತಿರುವ ಧನುಸ್ಸಿನಿಂದ ಅನವರತವಾಗಿ ಅನೇಕ ಶರಗಳನ್ನು ಸೃಷ್ಟಿಸುತ್ತಾ ಮರೀಚಿಮಂಡಲದಲ್ಲಿ ಉರಿಯುತ್ತಿರುವ ಅಂಶುಮಾಲೀ ಸೂರ್ಯನಂತೆಯೇ ರಣದಲ್ಲಿ ಪ್ರಕಾಶಿಸುತ್ತಿದ್ದನು. ಅವನು ಶಿಖಂಡಿಯನ್ನು ಹನ್ನೆರಡು ಶರಗಳಿಂದ, ಉತ್ತಮೌಜಸನನ್ನು ಆರು ನಿಶಿತ ಬಾಣಗಳಿಂದಲೂ, ಯುಧಾಮನ್ಯುವನ್ನು ಮೂರು ಬಾಣಗಳಿಂದ ಹೊಡೆದು ಮೂರು ಮೂರರಿಂದ ಜನಮೇಜಯ-ಧೃಷ್ಟದ್ಯುಮ್ನರನ್ನು ಪ್ರಹರಿಸಿದನು. ಜಿತೇಂದ್ರಿಯ ಆತ್ಮವತನಿಂದ ಇಂದ್ರಿಯಗಳು ಹೇಗೋ ಹಾಗೆ ಮಹಾಹವದಲ್ಲಿ ಸೂತಸುತನಿಂದ ಪರಾಜಿತರಾದ ಆ ಐವರು ಮಹಾರಥರು ನಿಶ್ಚೇಷ್ಟರಾಗಿ ನಿಂತಿದ್ದರು. ಸಮುದ್ರದಲ್ಲಿ ಒಡೆದುಹೋದ ನಾವೆಯಲ್ಲಿರುವ ವಣಿಜರಂತೆ ಕರ್ಣಸಾಗರದಲ್ಲಿ ಮುಳುಗಿಹೋಗುತ್ತಿರುವ ತಮ್ಮ ಸೋದರ ಮಾವಂದಿರನ್ನು ದ್ರೌಪದಿಯ ಐವರು ಮಕ್ಕಳು ಸಾಗರದಲ್ಲಿ ಹೊಸ ನಾವೆಗಳಂತಿರುವ ಸುಸಜ್ಜಿತ ರಥಗಳಿಂದ ಉದ್ಧರಿಸಿದರು.

ಆಗ ಸಾತ್ಯಕಿಯು ಕರ್ಣನು ಪ್ರಯೋಗಿಸಿದ ಅನೇಕ ಬಾಣಗಳನ್ನು ಕತ್ತರಿಸಿ, ಕರ್ಣನನ್ನು ನಿಶಿತ ಆಯಸಗಳಿಂದ ಗಾಯಗೊಳಿಸಿ, ದುರ್ಯೋಧನನನ್ನು ಎಂಟು ಬಾಣಗಳಿಂದ ಹೊಡೆದನು. ಕೂಡಲೇ ಕೃಪ, ಭೋಜ, ದುರ್ಯೋಧನ ಮತ್ತು ಸ್ವಯಂ ಕರ್ಣರು ಅವನನ್ನು ನಿಶಿತ ಬಾಣಗಳಿಂದ ಹೊಡೆದರು. ಆ ಯದೂತ್ತಮನಾದರೋ ಹಿಂದೆ ದೈತ್ಯಪತಿಯು ದಿಕ್ಪಾಲಕರನ್ನು ಎದುರಿಸಿದಂತೆ ಆ ನಾಲ್ವರನ್ನು ಎದುರಿಸಿ ಯುದ್ಧಮಾಡಿದನು. ಸಮಾನ ನಿಸ್ವನದಿಂದ ಟೇಂಕರಿಸುತ್ತಿರುವ ಅಮಿತ ಬಾಣಗಳ ಮಳೆಗರೆಯುತ್ತಿರುವ ಆ ಧನುಸ್ಸನ್ನು ಹಿಡಿದ ಸಾತ್ಯಕಿಯು ಶರತ್ಕಾಲದಲ್ಲಿ ಆಕಾಶದ ಮಧ್ಯಗತನಾಗಿದ್ದ ರವಿಯಂತೆ ದುರ್ಧರ್ಷನಾದನು. ಅರಿನಿಗ್ರಹದಲ್ಲಿ ಶಕ್ರನನ್ನು ಮರುದ್ಗಣಗಳು ಹೇಗೋ ಹಾಗೆ ಪುನಃ ಉತ್ತಮ ರಕ್ಷಣೆಯುಳ್ಳ ರಥಗಳನ್ನು ಪಡೆದು ಪರಂತಪ ಪಾಂಚಾಲರಥರು ಒಂದಾಗಿ ಮಹಾರಣದಲ್ಲಿ ಶಿನಿಪ್ರವೀರನನ್ನು ರಕ್ಷಿಸಲು ಬಂದರು. ಆಗ ಪಾಂಡವರು ಮತ್ತು ಕೌರವರ ಸೈನಿಕರ ನಡುವೆ ಹಿಂದೆ ಸುರಾಸುರರ ನಡುವೆ ನಡೆದಂತೆ ರಥ-ಅಶ್ವ-ಮಾತಂಗ ವಿನಾಶಕಾರಕ ಅತೀವ ದಾರುಣ ಯುದ್ಧವು ನಡೆಯಿತು. ರಥಗಳು, ಆನೆಗಳು, ಕುದುರೆಗಳು, ಮತ್ತು ಪದಾತಿಗಳು ನಾನಾವಿಧದ ಶಸ್ತ್ರಗಳಿಂದ ಪ್ರಹರಿಸಲ್ಪಟ್ಟು ತಿರುಗುತ್ತಿದ್ದು, ಪರಸ್ಪರರಿಂದ ಅಭಿಹತರಾಗಿ ಭಯಪಟ್ಟು, ಆರ್ತರಾಗಿ ಕೂಗುತ್ತಾ ದುಃಖಿತರಾಗಿ ಕೆಳಗೆ ಬೀಳುತ್ತಿದ್ದವು.

ದುಃಶಾಸನ ವಧೆ

ಹೀಗೆ ಯುದ್ಧವು ನಡೆಯುತ್ತಿರಲು ದುಃಶಾಸನನು ಭಯರಹಿತನಾಗಿ ಬಾಣಗಳನ್ನು ಎರಚುತ್ತಾ ಭೀಮಸೇನನನ್ನು ಸಮೀಪಿಸಿದನು. ಮಹಾರುರುವಿನ ಮೇಲೆ ಸಿಂಹವು ಹೇಗೋ ಹಾಗೆ ತ್ವರೆಮಾಡಿ ಬರುತ್ತಿದ್ದ ಅವನ ಮೇಲೆ ವೃಕೋದರನು ಎರಗಿದನು. ಆಗ ಪ್ರಾಣಗಳನ್ನೇ ಪಣವನ್ನಾಗಿಟ್ಟ ಪರಸ್ಪರರ ಮೇಲೆದ್ದ ರೋಷದಿಂದ ತುಂಬಿಹೋಗಿದ್ದ ಅವರಿಬ್ಬರ ನಡುವೆ ಹಿಂದೆ ಶಂಬರ-ಶಕ್ರರ ನಡುವೆ ನಡೆದ ಮಹಾಸಂಗ್ರಾಮದಂತೆ ಅತೀವ ಅಮಾನುಷವಾದ ಯುದ್ಧವು ನಡೆಯಿತು. ಮದೋದಕಗಳನ್ನು ಸುರಿಸುತ್ತಿರುವ ಮನ್ಮಥಸಕ್ತಚೇತಸ ಮಹಾಗಜಗಳೆರಡು ರತಿಸುಖವನ್ನಪೇಕ್ಷಿಸಿ ನಿಂತಿರುವ ಹೆಣ್ಣಾನೆಯ ಸಮೀಪದಲ್ಲಿ ಹೋರಾಡುವಂತೆ ಅವರಿಬ್ಬರೂ ಹರಿತವಾಗಿದ್ದ ಶರೀರಗಳಿಗೆ ನೋವನ್ನುಂಟು ಮಾಡುವ ಶರಗಳನ್ನು ಅನ್ಯೋನ್ಯರನ್ನು ಬಹಳವಾಗಿ ಗಾಯಗೊಳಿಸುತ್ತಿದ್ದರು. ಆಗ ವೃಕೋದರನು ತ್ವರೆಮಾಡಿ ಕ್ಷುರಗಳೆರಡರಿಂದ ದುಃಶಾಸನನ ಧನುಸ್ಸನ್ನೂ ಧ್ವಜವನ್ನೂ ಕತ್ತರಿಸಿದನು. ಪತ್ರಿಯಿಂದ ಅವನ ಹಣೆಗೂ ಹೊಡೆದು ಅವನ ಸಾರಥಿಯ ಶಿರವನ್ನು ಶರೀರದಿಂದ ಬೇರ್ಪಡಿಸಿದನು. ಆ ರಾಜಪುತ್ರನು ಅನ್ಯ ಧನುಸ್ಸನ್ನು ತೆಗೆದುಕೊಂಡು ವೃಕೋದರನನ್ನು ಹನ್ನೆರಡು ಬಾಣಗಳಿಂದ ಪ್ರಹರಿಸಿದನು. ತಾನೇ ಸ್ವತಃ ಕುದುರೆಗಳನ್ನು ನಿಯಂತ್ರಿಸುತ್ತಾ ಜಿಹ್ಮಗ ಶರಗಳನ್ನು ಭೀಮನ ಮೇಲೆ ಪುನಃ ಸುರಿಸಿದನು.

ತುಮುಲದಲ್ಲಿ ಯುದ್ಧಮಾಡುತ್ತಿದ್ದ ರಾಜಪುತ್ರ ದುಃಶಾಸನನು ದುಷ್ಕರವಾದುದನ್ನು ಮಾಡಿದನು. ಅವನು ಕ್ಷುರದಿಂದ ಭೀಮನ ಧನುಸ್ಸನ್ನು ತುಂಡರಿಸಿದನು ಮತ್ತು ಆರು ಶರಗಳಿಂದ ಸಾರಥಿಯನ್ನು ಕೆಳಗುರುಳಿಸಿದನು. ಆಗ ಆ ಮಹಾತ್ಮನು ಕ್ಷಿಪ್ರವಾಗಿ ಅನೇಕ ಶ್ರೇಷ್ಠ ಬಾಣಗಳಿಂದ ಭೀಮಸೇನನನ್ನು ಹೊಡೆದನು. ಭೀಮನು ಗಾಯಗೊಂಡ ಮದಿಸಿದ ಆನೆಯಂತೆ ತುಮುಲದಲ್ಲಿ ಉಕ್ಕಿನ ಗದೆಯನ್ನು ಎಸೆದನು. ಅದರಿಂದ ದುಃಶಾಸನನನ್ನು ಹತ್ತು ಧನುಸ್ಸುಗಳಷ್ಟು ಹಿಂದೆ ತಳ್ಳಿ ಭೀಮಸೇನನು ಜೋರಾಗಿ ನಕ್ಕನು. ವೇಗವುಳ್ಳ ಆ ಗದೆಯಿಂದ ಪ್ರಹೃತನಾದ ದುಃಶಾಸನನು ನಡುಗುತ್ತಾ ಕೆಳಗೆ ಬಿದ್ದನು. ಮೇಲೆಬಿದ್ದ ಗದೆಯು ಅವನ ಕುದುರೆಗಳನ್ನೂ, ಸಾರಥಿಯನ್ನೂ, ರಥವನ್ನೂ ನುಚ್ಚುನೂರಾಗಿಸಿತು. ಕವಚ ವಸ್ತ್ರಾಭರಣಗಳು ಚದುರಿಹೋಗಿದ್ದ ದುಃಶಾಸನನು ಅತ್ಯಂತ ವೇದನೆಯಿಂದ ಆರ್ತನಾಗಿ ಉರುಳತೊಡಗಿದನು. ಆಗ ತರಸ್ವೀ ಭೀಮಸೇನನು ತನ್ನ ಪತ್ನಿಯ ಕುರಿತು ದುಃಶಾಸನನು ಮಾಡಿದುದನ್ನು ಸ್ಮರಿಸಿಕೊಂಡು ರಥದಿಂದ ನೆಲಕ್ಕೆ ಹಾರಿ ಪ್ರಯತ್ನಪಟ್ಟು ಅವನ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿದನು. ಹರಿತ ಶುದ್ಧ ಖಡ್ಗವನ್ನು ಮೇಲಿತ್ತಿ ಉರುಳಾಡುತ್ತಿದ್ದ ಅವನ ಕುತ್ತಿಗೆಯನ್ನು ಮೆಟ್ಟಿ ಕತ್ತರಿಸಿ ಭೂಮಿಯಮೇಲೆ ಬಿದ್ದವನ ಎದೆಯನ್ನು ಮೇಲೆತ್ತಿ ಸುರಿಯುತ್ತಿದ್ದ ಅವನ ರಕ್ತವನ್ನು ಕುಡಿದನು.

ರಕ್ತದ ರುಚಿಯನ್ನು ಪುನಃ ಪುನಃ ಆಸ್ವಾದಿಸುತ್ತಾ ದುಃಶಾಸನನನ್ನೇ ನೋಡುತ್ತಾ ಪರಮ ಕ್ರುದ್ಧನಾಗಿ ಹೇಳಿದನು:ತಾಯಿಯ ಮೊಲೆಹಾಲಿಗಿಂತಲೂ, ತುಪ್ಪ-ಜೇನುತುಪ್ಪಗಳ ಮಿಶ್ರಣಕ್ಕಿಂತಲೂ, ಚೆನ್ನಾಗಿ ಮಾಡಲ್ಪಟ್ಟ ದ್ರಾಕ್ಷಾರಸದ ಪಾನೀಯಕ್ಕಿಂತಲೂ, ದಿವ್ಯವಾದ ತೋಯರಸದ ಪಾನೀಯಕ್ಕಿಂತಲೂ, ಹಾಲು-ಮೊಸರನ್ನು ಕಡೆದು ಮಾಡಿದ ಮಜ್ಜಿಗೆಗಿಂತಲೂ ಮತ್ತು ಎಲ್ಲ ಪಾನೀಯಗಳಿಗಿಂತಲೂ ನನ್ನ ಶತ್ರುವಿನ ರಕ್ತವು ಅಧಿಕ ರುಚಿಯನ್ನು ಹೊಂದಿದೆಯೆಂದು ನನಗನ್ನಿಸುತ್ತಿದೆ!” ಹೀಗೆ ಹೇಳುತ್ತಾ ರಕ್ತವನ್ನು ಕುಡಿತು ಅತಿಪ್ರಹೃಷ್ಟನಾಗಿ ಪುನಃ ಪುನಃ ಕೂಗಿ ಕುಣಿದು ಕುಪ್ಪಳಿಸುತ್ತಿದ್ದ ಆ ಭೀಮಸೇನನನ್ನು ನೋಡಿದವರೆಲ್ಲರೂ ವ್ಯಥಿತರಾಗಿ ಕುಸಿದುಬಿದ್ದರು. ಅಲ್ಲಿ ಭಯದಿಂದ ನಡುಗುತ್ತಿದ್ದ ಮನುಷ್ಯರ ಕೈಗಳಿಂದ ಶಸ್ತ್ರಗಳು ಕೆಳಗೆ ಬಿದ್ದವು. ಭಯದಿಂದ ವಿಕಾರಸ್ವರದಲ್ಲಿ ಸಹಾಯಕ್ಕೆಂದು ಕೂಗಿಕೊಳ್ಳುತ್ತಿದ್ದರು. ಕೆಲವರು ಅವನನ್ನು ನೋಡಲಿಕ್ಕಾಗದೇ ಕಣ್ಣುಗಳನ್ನೇ ಮುಚ್ಚಿಕೊಂಡರು. ದುಃಶಾಸನನ ರಕ್ತವನ್ನು ಕುಡಿಯುತ್ತಿದ್ದ ಭೀಮಸೇನನನ್ನು ಎಲ್ಲಕಡೆಗಳಿಂದ ನೋಡುತ್ತಿದ್ದವರು ಎಲ್ಲರೂ ಇವನು ಮನುಷ್ಯನಲ್ಲ!” ಎಂದು ಮಾತನಾಡಿಕೊಳ್ಳುತ್ತಾ ಭಯಾರ್ದಿತರಾಗಿ ಪಲಾಯನಗೈದರು. ಲೋಕವೀರರಿಗೆ ಕೇಳುವಂತೆ ಭೀಮಸೇನನು ಈ ಮಾತನ್ನಾಡಿದನು: “ಪುರುಷಾಧಮ! ನಿನ್ನ ಈ ರಕ್ತವನ್ನು ಕಂಠದಿಂದ ಕುಡಿಯುತ್ತಿದ್ದೇನೆ. ಈಗ ಸಂರಬ್ಧನಾಗಿ ಗೌಃ ಗೌಃಎಂದು ಪುನಃ ಹೇಳು ನೋಡೋಣ! ತನ್ನ ಮಕ್ಕಳೂಸೇರಿ ಧೃತರಾಷ್ಟ್ರನು ನಮ್ಮ ಮೇಲೆ ಸದಾ ಇಟ್ಟಿರುವ ದುರಾತ್ಮತೆಯಿಂದ ಪ್ರಮಾಣಕೋಟಿಯಲ್ಲಿ ಕಾಲಕೂಟವನ್ನು ಉಣಿಸಿ ಮಲಗಿಸಿ ಸರ್ಪಗಳಿಂದ ಕಚ್ಚಿಸಿ ಕಷ್ಟವನ್ನಿತ್ತುದುದು, ಜತುಗೃಹದಲ್ಲಿ ಸುಟ್ಟಿದ್ದುದು, ದ್ಯೂತದಲ್ಲಿ ರಾಜ್ಯವನ್ನು ಅಪಹರಿಸಿದುದು, ಅರಣ್ಯದಲ್ಲಿ ವಸತಿಮಾಡಿಸಿದುದು, ಸಂಗ್ರಾಮದಲ್ಲಿ ಬಾಣ-ಅಸ್ತ್ರಗಳನ್ನು ಪ್ರಯೋಗಿಸಿದುದು, ಅರಮನೆಯಲ್ಲಿ ಸುಖವಾಗಿರಲು ಅವಕಾಶಕೊಡದೇ ಇದ್ದುದು, ಈ ಇಲ್ಲ ದುಃಖವನ್ನೇ ತಿಳಿದಿದ್ದೇವೆಯೇ ಹೊರತು ಎಂದು ಸುಖವೇನೆಂಬುದನ್ನು ತಿಳಿಯಲಿಲ್ಲ!” ಹೀಗೆ ಹೇಳಿ ವೃಕೋದರನು ಜಯವನ್ನು ಹೊಂದಿದನು. ಪುನಃ ನಗುತ್ತಾ ಕೇಶವಾರ್ಜುನರಿಗೆ ಹೇಳಿದನು: “ವೀರರೇ! ದುಃಶಾಸನನ ಕುರಿತು ನಾನು ಏನೆಲ್ಲ ಪ್ರತಿಜ್ಞೆ ಮಾಡಿದ್ದೆನೋ ಅವೆಲ್ಲವನ್ನೂ ಇಂದು ರಣದಲ್ಲಿ ಮಾಡಿ ತೋರಿಸಿದ್ದೇನೆ! ಎರಡನೆಯ ಯಜ್ಞಪಶುವಾದ ದುರ್ಯೋಧನನನ್ನು ಕೂಡ ಇಲ್ಲಿಯೇ ಹಿಸುಕಿ ಬಲಿಕೊಡುತ್ತೇನೆ! ಕೌರವರ ಸಮಕ್ಷಮದಲ್ಲಿ ಆ ದುರಾತ್ಮನ ಶಿರವನ್ನು ತುಳಿದೇ ಶಾಂತಿಯನ್ನು ಪಡೆಯುತ್ತೇನೆ!” ಪ್ರಹೃಷ್ಟನಾಗಿ ಹೀಗೆ ಹೇಳಿ ರಕ್ತದಿಂದ ತೋಯ್ದುಹೋಗಿದ್ದ ಮಹಾತ್ಮ ಅತಿಬಲ ಭೀಮಸೇನನು ವೃತ್ರನನ್ನು ಸಂಹರಿಸಿದ ಸಹಸ್ರನೇತ್ರನಂತೆ ಜೋರಾಗಿ ಕೂಗಿ ನರ್ತಿಸಿದನು.

ದುಃಶಾಸನನು ಹತನಾಗಲು ಸಮರದಲ್ಲಿ ಪಲಾಯನಗೈಯದ ಮಹಾಕ್ರೋಧವಿಷರಾದ ಧೃತರಾಷ್ಟ್ರನ ಹತ್ತು ಮಕ್ಕಳು ಮಹಾವೀರ್ಯದಿಂದ ಭೀಮಸೇನನನ್ನು ಶರಗಳಿಂದ ಮುಚ್ಚಿದರು. ಭ್ರಾತೃವ್ಯಸದಿಂದ ಪೀಡಿತರಾಗಿದ್ದ ಕವಚಿ, ನಿಷಂಗಿ, ಪಾಶೀ, ದಂಡಧಾರ, ಧನುರ್ಧರ, ಅಲೋಲುಪ, ಶಲ, ಸಂಧ, ವಾತವೇಗ ಮತ್ತು ಸುವರ್ಚಸ ಇವರು ಒಟ್ಟಾಗಿ ಭೀಮಸೇನನನ್ನು ಮಾರ್ಗಣಗಳಿಂದ ಮುತ್ತಿಗೆ ಹಾಕಿದರು. ಮಹಾರಥರ ವಿಶಿಖಗಳಿಂದ ಹೀಗೆ ಎಲ್ಲ ಕಡೆಗಳಿಂದ ತಡೆಯಲ್ಪಟ್ಟ ಭೀಮನು ಕ್ರೋಧದಿಂದ ರಕ್ತಾಕ್ಷನಾಗಿ ಕ್ರುದ್ಧನಾದ ಕಾಲನಂತೆಯೇ ಆದನು. ರುಕ್ಮಾಂಗದ ರುಕ್ಮಪುಂಖಗಳುಳ್ಳ ಹತ್ತು ಹತ್ತು ನಿಶಿತವಾದ ಮತ್ತು ಮಹಾವೇಗಗಳುಳ್ಳ ಭಲ್ಲಗಳಿಂದ ಅವರನ್ನು ಪಾರ್ಥನು ಯಮಕ್ಷಯಕ್ಕೆ ಕಳುಹಿಸಿದನು. ಆ ವೀರರು ಹತರಾಗಲು ಸೂತಪುತ್ರ ಮತ್ತು ಪಾಂಡವರು ನೋಡುತ್ತಿದ್ದಂತೆಯೇ ಭಯಾರ್ದಿತವಾದ ಕೌರವ ಸೇನೆಯು ಪಲಾಯನಗೈಯಿತು.

ಪ್ರಜೆಗಳ ಅಂತಕನಿಗಿರುವಂಥಹ ಭೀಮನ ವಿಕ್ರಾಂತವನ್ನು ನೋಡಿ ಕರ್ಣನು ಮಹಾರಣವನ್ನು ಪ್ರವೇಶಿಸಿದನು. ಅವನ ಆಕಾರಭಾವವನ್ನು ತಿಳಿದ ಶಲ್ಯನು ಇದು ಸರಿಯಾದ ಕಾಲವೆಂದು ತಿಳಿದು ಕರ್ಣನಿಗೆ ಹೇಳಿದನು: “ರಾಧೇಯ! ವ್ಯಥೆಪಡಬೇಡ! ಇದು ನಿನಗೆ ಸರಿಗಾಣುವುದಿಲ್ಲ! ಭೀಮಸೇನನಿಂದ ಭಯಾರ್ದಿತರಾದ ರಾಜರು ಇಗೋ ಓಡಿಹೋಗುತ್ತಿದ್ದಾರೆ! ಭ್ರಾತೃವ್ಯಸನದಿಂದ ದುಃಖಿತನಾಗಿ ದುರ್ಯೋಧನನಾದರೋ ಸಮ್ಮೂಢನಾಗಿದ್ದಾನೆ! ಆ ಮಹಾತ್ಮನು ದುಃಶಾಸನನ ರಕ್ತವನ್ನು ಕುಡಿಯಲು ಶೋಕ-ಕೋಪಗಳಿಂದ ಪೀಡಿತನಾಗಿ, ಚೇತನವನ್ನು ಕಳೆದುಕೊಂಡು ನಡುಗುತ್ತಿರುವ ದುರ್ಯೋಧನನನ್ನು ಕೃಪನೇ ಮೊದಲಾದವರು ಮತ್ತು ಅಳಿದುಳಿದ ಸಹೋದರರು ಎಲ್ಲಕಡೆಗಳಿಂದ ಸುತ್ತುವರೆದು ಉಪಚರಿಸುತ್ತಿದ್ದಾರೆ! ಧನಂಜಯನೇ ಮೊದಲಾದ ಲಬ್ಧಲಕ್ಷ್ಯ ಶೂರ ಪಾಂಡವರು ನಿನ್ನನ್ನೇ ಎದುರಿಸಿ ಯುದ್ಧಮಾಡಲು ಸಿದ್ಧರಾಗಿದ್ದಾರೆ! ಕ್ಷತ್ರಧರ್ಮವನ್ನು ಪಾಲಿಸಿ ಮಹಾಪೌರುಷವಿರುವ ನೀನು ಧನಂಜಯನನ್ನು ಎದುರಿಸು! ಧಾರ್ತರಾಷ್ಟ್ರರ ಸರ್ವ ಭಾರವೂ ನಿನ್ನ ಮೇಲೆ ಸಮರ್ಪಿತಗೊಂಡಿದೆ! ನೀನು ಯಥಾಶಕ್ತಿಯಾಗಿ ಯಥಾಬಲವನ್ನುಪಯೋಗಿಸಿ ಯುದ್ಧಮಾಡು! ಜಯವಾದರೆ ವಿಪುಲ ಕೀರ್ತಿಯು ಮತ್ತು ಪರಾಜಿತನಾದರೆ ಸ್ವರ್ಗವು ನಿಶ್ಚಯವಾಗಿದೆ! ಸಂಕ್ರುದ್ಧನಾದ ನಿನ್ನ ಮಗ ವೃಷಸೇನನಾದರೋ ನೀನು ಮೋಹಸಂಪನ್ನನಾಗಿರುವುದನ್ನು ನೋಡಿ ಪಾಂಡವರನ್ನು ಎದುರಿಸಿ ಯುದ್ಧಮಾಡುತ್ತಿದ್ದಾನೆ!”

ಶಲ್ಯನ ಈ ಮಾತನ್ನು ಕೇಳಿ ಕರ್ಣನ ಹೃದಯದಲ್ಲಿ ಯುದ್ಧದಲ್ಲಿ ಸುಸ್ಥಿರವಾದ ಮಾನುಷ್ಯಕ ಭಾವವುಂಟಾಯಿತು.

ವೃಷಸೇನವಧೆ

ಅಗ ಕ್ರುದ್ಧನಾದ ವೃಷಸೇನನು ಸ್ವರಥದಲ್ಲಿ ಕುಳಿತು ಶತ್ರುಗಳನ್ನು ಕೊಲ್ಲುತ್ತಿದ್ದ, ದಂಡವನ್ನು ಹಿಡಿದ ಕಾಲನಂತೆ ಕೈಯಲ್ಲಿ ಗದೆಯನ್ನು ಹಿಡಿದು ಕೌರವರನ್ನು ಸದೆಬಡಿಯುತ್ತಿರುವ ವೃಕೋದರನನ್ನು ಆಕ್ರಮಣಿಸಿದನು. ಸಮರದಲ್ಲಿ ಪ್ರಹೃಷ್ಟನಾಗಿ ಮುನ್ನುಗ್ಗಿ ಬರುತ್ತಿರುವ ಆ ಕರ್ಣ-ಪುತ್ರನನ್ನು ನಕುಲನು ರೋಷದಿಂದ ಕೊಂದು ಗೆಲ್ಲಲು ಮಘವತನು ಜಂಭನನ್ನು ಹೇಗೋ ಹಾಗೆ ಹರಿತ ಬಾಣಗಳಿಂದ ತಡೆದನು. ನಕುಲನು ಕ್ಷುರಗಳಿಂದ ಅವನ ಸ್ಪಟಿಕದ ಧ್ವಜಕಂಬವನ್ನು ತುಂಡರಿಸಿದನು. ಹಾಗೇಯೇ ಕರ್ಣಾತ್ಮಜನ ಬಂಗಾರದ ಪಟ್ಟಿಯಿಂದ ಅಲಂಕೃತವಾಗಿದ್ದ ಧನುಸ್ಸನ್ನೂ ತುಂಡರಿಸಿದನು. ಕೂಡಲೇ ಕರ್ಣಾತ್ಮಜನು ಸುಶೀಘ್ರವಾಗಿ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಪಾಂಡವನನ್ನು ಆಕ್ರಮಣಿಸಿದನು. ದುಃಶಾಸನನ ಸೇಡನ್ನು ತೀರಿಸಿಕೊಳ್ಳಲು ಮಹಾಸ್ತ್ರಗಳನ್ನು ತಿಳಿದಿದ್ದ ಅವನು ನಕುಲನನ್ನು ದಿವ್ಯವಾದ ಮಹಾಸ್ತ್ರಗಳಿಂದ ಪ್ರಹರಿಸಿದನು. ಆಗ ಕ್ರುದ್ಧನಾದ ನಕುಲನು ಮಹಾ ಉಲ್ಕೆಗಳಸಮಾನವಾಗಿದ್ದ ಶರಗಳಿಂದ ಅವನನ್ನು ಪ್ರತಿಯಾಗಿ ಹೊಡೆದನು. ಕರ್ಣನ ಮಗನೂ ಕೂಡ ಅವನನ್ನು ದಿವಾಸ್ತ್ರಗಳಿಂದ ಪ್ರತಿಯಾಗಿ ಪ್ರಹರಿಸಿದನು. ಕರ್ಣನ ಪುತ್ರನು ಶೀಘ್ರವಾಗಿ ಉತ್ತಮ ಅಸ್ತ್ರಗಳಿಂದ ನಕುಲನ ಕುದುರೆಗಳೆಲ್ಲವನ್ನೂ ಸಂಹರಿಸಿದನು.

ಆಗ ನಕುಲನು ಅಶ್ವಗಳು ಹತಗೊಂಡ ರಥದಿಂದ ಇಳಿದು ಸುಂದರವಾದ ಎಂಟು ಚಂದ್ರಗಳುಳ್ಳ ಗುರಾಣಿಯನ್ನೂ ಆಕಾಶಸಂಕಾಶದ ಖಡ್ಗವನ್ನೂ ಹಿಡಿದು ಪಕ್ಷಿಯಂತೆ ರಣರಂಗದಲ್ಲಿ ಹಾರಾಡತೊಡಗಿದನು. ಅಂತರಿಕ್ಷದ ವಿಚಿತ್ರ ಮಾರ್ಗಗಳಲ್ಲಿ ಸಂಚರಿಸುತ್ತಾ ಅವನು ಅನೇಕ ಕುದುರೆ ಆನೆಗಳನ್ನು ತುಂಡರಿಸಿದನು. ಅಶ್ವಮೇಧದಲ್ಲಿ ಶಮಿತ್ರನ ಪ್ರಹಾರದಿಂದ ಪಶುಗಳು ಹೇಗೋ ಹಾಗೆ ಅವನ ಖಡ್ಗಕ್ಕೆ ಸಿಲುಕಿದ ಪ್ರಾಣಿಗಳು ತೊಪತೊಪನೆ ಕೆಳಗೆ ಬಿದ್ದವು. ನಕುಲನೊಬ್ಬನಿಂದಲೇ ಆಗ ಶೀಘ್ರವಾಗಿ ನಾನಾದೇಶದ ದಷ್ಟಪುಷ್ಟಾದ ಸತ್ಯಸಂಧರಾದ ಉತ್ತಮ ಚಂದನಗಳನ್ನು ಲೇಪಿಸಿಕೊಂಡಿದ್ದ ವಿಜಯೇಚ್ಛುಗಳಾದ ಎರಡುಸಾವಿರ ಯುದ್ಧಶೌಂಡರು ಕತ್ತರಿಸಲ್ಪಟ್ಟು ಕೆಳಗುರುಳಿದರು. ಹಾಗೆ ಸೇನೆಯನ್ನು ಕೆಳಗುರುಳುಸಿತ್ತಿದ್ದ ನಕುಲನನ್ನು ವೃಷಸೇನನು ಎಲ್ಲಕಡೆಗಳಿಂದಲೂ ಸಾಯಕಗಳಿಂದ ಹೊಡೆದು ಆಕ್ರಮಣಿಸಿದನು. ಹಾಗೆ ಗಾಯಗೊಂಡ ನಕುಲನು ಕೋಪದಿಂದ ಆ ವೀರನನ್ನು ಪೃಷತ್ಕಗಳಿಂದ ಹೊಡೆದು ಗಾಯಗೊಳಿಸಿದನು. ಒಬ್ಬನೇ ಅನೇಕ ಪದಾತಿ, ಕುದುರೆ, ಆನೆ ಮತ್ತು ರಥಗಳನ್ನು ಆಟವಾದುವವನಂತೆ ಧ್ವಂಸಮಾಡುತ್ತಿರುವುದನ್ನು ನೋಡಿ ಕರ್ಣಪುತ್ರನು ಕೋಪಗೊಂಡು ವೀರ ನಕುಲನನ್ನು ಹದಿನೆಂಟು ಪೃಷತ್ಕಗಳಿಂದ ಪ್ರಹರಿಸಿದನು. ಕರ್ಣಾತ್ಮಜನನ್ನು ಸಂಹರಿಸಲು ನರವೀರ ಪಾಂಡುಸುತನು ಆಕ್ರಮಣಿಸಲು ಕರ್ಣಪುತ್ರನು ಮಹಾರಣದಲ್ಲಿ ನಕುಲ ಸಹಸ್ರತಾರೆಗಳುಳ್ಳ ಗುರಾಣಿಯನ್ನು ಬಾಣಗಳಿಂದ ಹೊಡೆದನು. ಆಗ ವೃಷಸೇನನು ನಿಶಿತವಾದ ಕ್ಷಿಪ್ರವಾಗಿ ಒಂದೇ ಧಾರೆಯಂತೆ ಹೋಗುತ್ತಿದ್ದ ಆರು ಕ್ಷಿಪ್ರ ಶರಗಳಿಂದ ನಕುಲನ ನಿಶಿತವಾದ, ತೀಕ್ಷ್ಣ ಅಲಗುಳ್ಳ, ಉತ್ತಮ ಕೋಶದೊಳಗಿದ್ದ, ಅತಿಯಾದ ಭಾರವನ್ನೂ ಹೊರಬಲ್ಲ, ಶತ್ರುಗಳ ಶರೀರವನ್ನು ಅಪಹರಿಸಬಲ್ಲ, ಘೋರವಾದ, ಸರ್ಪದಂತೆ ಉಗ್ರರೂಪದ ಖಡ್ಗವನ್ನು ತುಂಡರಿಸಿದನು. ಪುನಃ ಹಿತ್ತಾಳೆಯ ನಿಶಿತ ಪೃಷತ್ಕಗಳಿಂದ ಅವನ ಎದೆಗೆ ಗಾಢವಾಗಿ ಪ್ರಹರಿಸಿದನು. ಕರ್ಣಸುತನಿಂದ ಪೀಡಿತನಾದ, ಅಶ್ವಗಳನ್ನು ಕಳೆದುಕೊಂಡಿದ್ದ ನಕುಲನು, ಧನಂಜಯನು ನೋಡುತ್ತಿದ್ದಂತೆಯೇ, ಭೀಮಸೇನನ ರಥಕ್ಕೆ ಸಿಂಹವು ಗಿರಿಶಿಖರವನ್ನು ಏರುವಂತೆ ಹಾರಿ ಏರಿದನು.

ಕರ್ಣಪುತ್ರನಿಂದ ಬಾಣ-ಖಡ್ಗಗಳನ್ನು ಕತ್ತರಿಸಿಕೊಂಡು ವಿರಥನನಾಗಿ ಅಸ್ತ್ರಭಗ್ನನಾಗಿ ನಕುಲನು ಅರಿಶರಗಳಿಂದ ಆರ್ತನಾಗಿರುವುದನ್ನು ತಿಳಿದು ಅರ್ಜುನನು ಪವನಧುತಪತಾಕೆಯುಳ್ಳ ಮತ್ತು ವರಪುರುಷನು ನಡೆಸುತ್ತಿದ್ದ ರಥದಲ್ಲಿ ಶೀಘ್ರವಾಗಿ ವೃಷಸೇನನಿದ್ದಲ್ಲಿಗೆ ನಡೆದನು. ಐವರು ದ್ರುಪದಸುತರು, ಆರನೆಯವನು ಸಾತ್ಯಕಿ, ಐವರು ದ್ರುಪದನ ಪುತ್ರಿಯ ಪುತ್ರರು ಈ ಹನ್ನೊಂದು ಮಂದಿ ಪದಾತಿ-ರಥ-ಗಜ-ಅಶ್ವ ಸೇನೆಗಳಿಂದ ಭುಜಗಪತಿಸಮಾನ ಮಾರ್ಗಣಗಳಿಂದ ಮತ್ತು ಅಸ್ತ್ರಗಳಿಂದ ಕೌರವರನ್ನು ಸದೆಬಡಿಯುತ್ತಾ ಆಕ್ರಮಣಿಸಿದರು. ಕೂಡಲೇ ತ್ವರೆಮಾಡಿ ಕೌರವ ರಥಮುಖ್ಯರಾದ ಕೃತವರ್ಮ, ಕೃಪ, ದ್ರೌಣಿ, ದುರ್ಯೋಧನ, ಉಲೂಕ, ವೃಕ, ಕ್ರಾಥ, ಮತ್ತು ದೇವಾವೃಧರು ಮೋಡಗಳಂತೆ ಗುಡುಗುವ ರಥಗಳಲ್ಲಿ ಕುಳಿತು ಕಾರ್ಮುಕಗಳನ್ನು ಹಿಡಿದು ಎದುರಾಗಿ ಬಂದರು. ಆ ನರವರರು ಅವರ ಕಡೆಯ ಆ ಹನ್ನೊಂದು ವೀರರನ್ನು ಶ್ರೇಷ್ಠ ಶರವರಾಗ್ರಗಳಿಂದ ಹೊಡೆಯುತ್ತಾ ಅವರ ಗಮನವನ್ನು ಪ್ರತಿರೋಧಿಸಲು ಹೊಸಮೋಡದ ಸಮಾನ ಬಣ್ಣಗಳ ಪರ್ವತಶಿಖಸದೃಶವಾದ ಭಯಂಕರ ವೇಗವುಳ್ಳ ಆನೆಗಳಮೇಲೆ ಕುಳಿತ ಕುಳಿಂದರು ಅವರನ್ನು ಆಕ್ರಮಣಿಸಿದರು. ಹಿಮವತ್ಪರ್ವತ ಪ್ರದೇಶದವುಗಳಾಗಿದ್ದ ಆ ಆನೆಗಳು ಸುಂದರವಾಗಿ ಸಜ್ಜಾಗಿದ್ದವು, ಮದೋದಕವನ್ನು ಸುರಿಸುತ್ತಿದ್ದವು, ರಣದಲ್ಲಿ ಹೋರಾಡಲು ಬಯಸುತ್ತಿದ್ದವು ಮತ್ತು ರಣಕುಶಲಯೋಧರು ಅವುಗಳ ಮೇಲೆ ಕುಳಿತಿದ್ದರು. ಸುವರ್ಣಜಾಲಗಳಿಂದ ಅಲಂಕೃತಗೊಂಡಿದ್ದ ಆ ಆನೆಗಳು ಮಿಂಚಿನಿಂದ ಕೂಡಿದ ಮೇಘಗಳಂತೆ ಕಾಣುತ್ತಿದ್ದವು. ಕುಣಿಂದಪುತ್ರನು ಹತ್ತು ಮಹಾಯಸಗಳಿಂದ ಕೃಪನನ್ನು ಅವನ ಸಾರಥಿ-ಕುದುರೆಗಳೊಂದಿಗೆ ಬಹಳವಾಗಿ ಪೀಡಿಸಿದನು. ಆಗ ಶರದ್ವತಸುತನು ಸಾಯಕಗಳಿಂದ ಒಮ್ಮೆಲೇ ಅವನನ್ನು ಆನೆಯೊಂದಿಗೆ ಭೂತಲಕ್ಕೆ ಕೆಡವಿದನು. ಕುಣಿಂದಪುತ್ರಾವರಜನಾದರೋ ತೋಮರಗಳಿಂದ ಮತ್ತು ದಿವಾಕರನ ಕಿರಣಗಳಂತಿದ್ದ ಅಯಸ್ಮಗಳಿಂದ ಗಾಂಧಾರಪತಿಯ ರಥವನ್ನು ವಿಕ್ಷೋಭಗೊಳಿಸಿ ಗರ್ಜಿಸಲು ಗಾಂಧಾರಪತಿಯು ಅವನ ಶಿರವನ್ನು ಕತ್ತರಿಸಿದನು.

ಕುಣಿಂದರು ಹಾಗೆ ಹತರಾಗಲು ಪ್ರಹೃಷ್ಟರೂಪರಾದ ಕೌರವ ಮಹಾರಥರು ಶಂಖಗಳನ್ನು ಜೋರಾಗಿ ಊದಿದರು ಮತ್ತು ಅನೇಕ ಬಾಣಗಳಿಂದ ಶತ್ರುಗಳನ್ನು ಪುನಃ ಆಕ್ರಮಣಿಸಿದರು. ಆಗ ಪಾಂಡು-ಸೃಂಜಯರೊಡನೆ ಕುರುಗಳ, ಬಾಣ-ಖಡ್ಗ-ಶಕ್ತಿ-ಋಷ್ಟಿ-ಗದೆ-ಪರಶುಗಳಿಂದ ಪದಾತಿ-ಕುದುರೆ-ಆನೆಗಳ ಅನೇಕ ಗುಂಪುಗಳ ಸಂಹಾರಕ್ರಿಯೆಯ ಅತೀವ ದಾರುಣ ಯುದ್ಧವು ಪುನಃ ಪ್ರಾರಂಭವಾಯಿತು. ಉಗ್ರ ಚಂಡಮಾರುತಕ್ಕೆ ಸಿಲುಕಿದ ಮೋಡಗಳು ದಿಕ್ಕುದಿಕ್ಕುಗಳಿಗೆ ಚದುರಿ ಹೋಗುವಂತೆ ಪರಸ್ಪರರನ್ನು ಪ್ರಹರಿಸುತ್ತಿದ್ದ ಪದಾತಿ-ಆನೆ-ಕುದುರೆ-ರಥಗಳು ಅಸುಗಳನ್ನು ತೊರೆದು ತಂಡ ತಂಡವಾಗಿ ರಣದಲ್ಲಿ ಬೀಳುತ್ತಿದ್ದವು. ಆಗ ಶತಾನೀಕನು ಕೌರವರ ಕಡೆಯ ಮಹಾಗಜಗಳನ್ನೂ, ಹಾಗೆಯೇ ರಥಗಳನ್ನೂ ಪದಾತಿಗಣಗಳನ್ನೂ ನಾಶಗೊಳಿಸಲು ಕೃತವರ್ಮನು ಆನೆ ಕುದುರೆಗಳನ್ನು ಶಸ್ತ್ರದಿಂದ ಕತ್ತರಿಸಿ ಕೆಳಗುರುಳಿಸಿದನು. ಇನ್ನೊಂದು ಕಡೆ ದ್ರೌಣಿಯು ಆಯುಧ, ಯೋಧ ಮತ್ತು ಧ್ವಜ ಈ ಎಲ್ಲವನ್ನೂ ಸೇರಿಸಿ ಮೂರು ಆನೆಗಳನ್ನು ಶರಗಳಿಂದ ಸಂಹರಿಸಿ ವಜ್ರದಿಂದ ಹತವಾದ ಮಹಾಗಿರಿಗಳಂತೆ ಭೂಮಿಯಮೇಲೆ ಅಲ್ಲಲ್ಲಿ ಬೀಳಿಸಿ ಹರಡಿದನು. ಅನಂತರ ಕುಣಿಂದರಾಜನ ತಮ್ಮನು ದುರ್ಯೋಧನನ ವಕ್ಷಃಸ್ಥಳಕ್ಕೆ ಗುರಿಯಿಟ್ಟು ಶ್ರೇಷ್ಠ ಪತ್ರಿಗಳಿಂದ ಹೊಡೆದನು. ಅದಕ್ಕೆ ಪ್ರತಿಯಾಗಿ ದುರ್ಯೋಧನನು ನಿಶಿತ ಶರಗಳಿಂದ ಅವನ ಶರೀರವನ್ನು ಮತ್ತು ಅವನ ಆನೆಯನ್ನು ಭೀದಿಸಿದನು. ವರ್ಷಾಕಾಲದಲ್ಲಿ ಇಂದ್ರನ ವಜ್ರಾಯುಧದಿಂದ ಪ್ರಹೃತವಾದ ಗೈರಿಕಪರ್ವತವು ಕೆಂಪುಬಣ್ಣದ ನೀರನ್ನು ಸುರಿಸುವಂತೆ ಆ ಮಹಾಗಜವು ರಾಜಪುತ್ರನೊಂದಿಗೆ ಎಲ್ಲ ಕಡೆ ಗಾಯಗೊಂಡು ರಕ್ತವನ್ನು ಸುರಿಸುತ್ತಾ ಕೆಳಗೆ ಬಿದ್ದಿತು.

ಕುಣಿಂದಪುತ್ರನಿಂದ ಕಳುಹಿಸಲ್ಪಟ್ಟ ಇನ್ನೊಂದು ಆನೆಯು ಸಾರಥಿ-ಕುದ್ರೆಗಳೊಂದಿಗೆ ಶುಕನ ರಥವನ್ನು ನಾಶಪಡಿಸಿತು. ಆಗ ಕ್ರಾಥನ ಶರಗಳಿಂದ ಪ್ರಹರಿಸಲ್ಪಟ್ಟ ಆ ಆನೆಯು ಒಡೆಯನೊಂದಿಗೆ ವರ್ಜದಿಂದ ಹತವಾದ ಗಿರಿಯಂತೆ ಕೆಳಗೆ ಉರುಳಿ ಬಿದ್ದಿತು. ಆದರೆ ಆನೆಯ ಮೇಲೆ ಕುಳಿತಿದ್ದ ಪರ್ವತಪ್ರದೇಶದ ರಥಿಯ ಶರಗಳಿಂದ ಪ್ರಹೃತನಾಗಿ ದುರ್ಜಯ ಕ್ರಾಥಾಧಿಪನು ಕುದುರೆ-ಸಾರಥಿ-ಧನುಸ್ಸು-ಧ್ವಜಗಳೊಡನೆ ಚಂಡಮಾರುತಕ್ಕೆ ಸಿಲುಕಿದ ಮಹಾವೃಕ್ಷದಂತೆ ಕೆಳಗುರುಳಿ ಬಿದ್ದನು.

ಆಗ ವೃಕನು ಆ ಆನೆಯ ಮೇಲೆ ಕುಳಿತಿದ್ದ ಗಿರಿರಾಜವಾಸಿಯನ್ನು ಹನ್ನೆರಡು ಬಾಣಗಳಿಂದ ಜೋರಾಗಿ ಪ್ರಹರಿಸಿದನು. ಆದರೆ ಆ ಅನೆಯು ತನ್ನ ನಾಲ್ಕೂ ಕಾಲುಗಳಿಂದ ಮಹಾವೇಗವುಳ್ಳ ಕುದುರೆ-ರಥಗಳೊಡನೆ ವೃಕನನ್ನು ತುಳಿದು ಧ್ವಂಸಮಾಡಿತು. ಆ ಮಹಾಗಜವು ತನ್ನ ನಿಯಂತ್ರಕನೊಡನೆ ಬಭ್ರುಸುತನ ಬಾಣಗಳಿಂದ ಜೋರಾಗಿ ಹೊಡೆಯಲ್ಪಟ್ಟು ಕೆಳಗುರುಳಿತು. ಮತ್ತು ದೇವಾವೃಧನ ಮಗನು ಸಹದೇವನ ಮಗನಿಂದ ಪ್ರಹರಿಸಲ್ಪಟ್ಟು ಕೆಳಗುರುಳಿದನು. ತನ್ನ ದಂತಗಳಿಂದಲೇ ಶತ್ರುಗಳ ಶರೀರಗಳನ್ನು ಸಂಹರಿಸಬಲ್ಲ ಆನೆಯೊಂದಿಗೆ ಕುಣಿಂದನ ಮಗನು ಶಕುನಿಯನ್ನು ಸಂಹರಿಸಲು ವೇಗದಿಂದ ಮುಂದಾಗಿ ಅವನನ್ನು ಬಹಳವಾಗಿ ಪೀಡಿಸಿದನು. ಆಗ ಗಾಂಧಾರಪತಿಯು ಅವನ ಶಿರವನ್ನೇ ಅಪಹರಿಸಿದನು. ಆಗ ಶತಾನೀಕನಿಂದ ಹತಗೊಂಡ ಕೌರವರ ಕಡೆಯ ಮಹಾಗಜಗಳು, ಕುದುರೆ-ರಥ-ಪದಾತಿಗಣಗಳು ಗರುಡನ ರೆಕ್ಕೆಗಳ ರಭಸದಿಂದುಂಟಾದ ಚಂಡಮಾರುತಕ್ಕೆ ಸಿಲುಕಿದ ನಾಗಗಳಂತೆ ಪ್ರಾಣಗಳನ್ನು ತೊರೆದು ತುಂಡು-ತುಂಡುಗಳಾಗಿ ನೆಲದಮೇಲೆ ಬೀಳುತ್ತಿದ್ದವು. ಆಗ ಕುಣಿಂದಪುತ್ರನು ನಸುನಗುತ್ತಾ ನಕುಲಾತ್ಮಜನನ್ನು ಅನೇಕ ನಿಶಿತ ಶರಗಳಿಂದ ಬಹಳವಾಗಿ ಗಾಯಗೊಳಿಸಿದನು. ಆಗ ನಾಕುಲಿಯು ಕ್ಷುರದಿಂದ ಕಮಲದಂತಿದ್ದ ಅವನ ಮುಖವನ್ನು ಶರೀರದಿಂದ ಬೇರ್ಪಡಿಸಿದನು. ಕರ್ಣಸುತನು ಶತಾನೀಕನನ್ನು ಮೂರು ಆಶುಗಗಳಿಂದ, ಅರ್ಜುನನನ್ನು ಮೂರರಿಂದ, ಭೀಮನನ್ನು ಮೂರರಿಂದ, ನಕುಲನನ್ನು ಏಳರಿಂದ ಮತ್ತು ಜನಾರ್ದನನನ್ನು ಹನ್ನೆರಡು ಸಾಯಕಗಳಿಂದ ಹೊಡೆದನು. ಅವನ ಆ ಅತಿಮನುಷ್ಯಕರ್ಮವನ್ನು ನೋಡಿ ಹೃಷ್ಟರಾದ ಕುರುಗಳು ಅವನನ್ನು ಗೌರವಿಸಿದರು. ಆದರೆ ಧನಂಜಯನ ಪರಾಕ್ರಮವನ್ನು ತಿಳಿದಿದ್ದವರು ಇವನು ಈಗ ಅಗ್ನಿಯಲ್ಲಿ ಹುತನಾಗಿಹೋದನೆಂದೇ ಭಾವಿಸಿದರು.

ಆಗ ಪರವೀರಘಾತೀ ಕಿರೀಟಿಯು ಕುದುರೆಗಳನ್ನು ಸಂಹರಿಸಿದ್ದ ಆ ನರಪ್ರವೀರನನ್ನು ನೋಡಿ ವೃಷಸೇನನನ್ನು ಆಕ್ರಮಣಿಸಿದನು. ಆಗ ಅವನು ಸೂತಜ ಕರ್ಣನ ಮುಂದಿದ್ದನು. ಮಹಾಹವದಲ್ಲಿ ಆಕ್ರಮಣಿಸುತ್ತಿದ್ದ ಆ ಉಗ್ರನರವೀರ, ಸಹಸ್ರಬಾಣಧಾರಿ ಅರ್ಜುನನನ್ನು ಮಹಾರಥ ಕರ್ಣಸುತನು ಹಿಂದೆ ಇಂದ್ರನು ನಮುಚಿಯನ್ನು ಹೇಗೋ ಹಾಗೆ ಎದುರಿಸಿದನು. ಆಗ ಸೂತಪುತ್ರನ ಆ ಮಹಾನುಭಾವ ಪುತ್ರನು ಅದ್ಭುತವಾಗಿ ಪಾರ್ಥನನ್ನು ಒಂದು ನೂರು ಬಾಣಗಳಿಂದ ಹೊಡೆದು ಹಿಂದೆ ಶಕ್ರನನ್ನು ಹೊಡೆದ ನಮುಚಿಯಂತೆ ಸಿಂಹನಾದಗೈದನು. ವೃಷಸೇನನು ಪುನಃ ಉಗ್ರ ಬಾಣಗಳಿಂದ ಪಾರ್ಥನ ಭುಜಮೂಲದ ಮಧ್ಯಕ್ಕೆ ಹೊಡೆದು ಹಾಗೆಯೇ ಒಂಭತ್ತು ಶಿತಾಗ್ರ ಬಾಣಗಳಿಂದ ಕೃಷ್ಣನನ್ನೂ ಪುನಃ ಹತ್ತರಿಂದ ಪಾರ್ಥನನ್ನೂ ಹೊಡೆದನು. ಆಗ ರಣಮೂರ್ಧನಿಯಲ್ಲಿ ಕಿರೀಟಿಯು ಕೋಪದಿಂದ ಹಣೆಯಲ್ಲಿ ಮೂರು ಗೆರೆಗಳುಂಟಾಗುವಂತೆ ಹುಬ್ಬನ್ನು ಗಂಟಿಕ್ಕಿ ಸೂತಪುತ್ರನನ್ನು ವಧಿಸಲು ವಿಶಿಖ ಬಾಣಗಳನ್ನು ಪ್ರಯೋಗಿಸಿದನು. ಕಿರೀಟಿಯು ಹತ್ತು ಪೃಷತ್ಕಗಳಿಂದ ವೃಷಸೇನನ ಮರ್ಮಸ್ಥಳಕ್ಕೆ ಜೋರಾಗಿ ಹೊಡೆದು, ಉಗ್ರವಾದ ನಾಲ್ಕು ಕ್ಷುರಗಳಿಂದ ಅವನ ಧನುಸ್ಸನ್ನೂ, ಎರಡು ಭುಜಗಳನ್ನೂ ಮತ್ತು ಶಿರಸ್ಸನ್ನೂ ಕತ್ತರಿಸಿದನು. ಪಾರ್ಥನ ಬಾಣಗಳಿಂದ ಹೊಡೆಯಲ್ಪಟ್ಟ ವೃಷಸೇನನು ಹೂಬಿಟ್ಟ ಎಲೆಗಳಿಂದ ತುಂಬಿದ್ದ ವಿಶಾಲವಾದ ಶಾಲವೃಕ್ಷವು ಭಿರುಗಾಳಿಗೆ ಸಿಲುಕಿ ಪರ್ವತಶಿಖರದ ಮೇಲಿಂದ ಬೀಳುವಂತೆ ರಥದಿಂದ ಬಾಹು-ಶಿರಗಳನ್ನು ಕಳೆದುಕೊಂಡು ಭೂಮಿಯಮೇಲೆ ಬಿದ್ದನು.

ಬಾಣದಿಂದ ಹತನಾಗಿ ರಥದಿಂದ ಕೆಳಕ್ಕೆ ಬಿದ್ದ ಮಗನನ್ನು ನೋಡಿ ಕ್ಷಿಪ್ರಕಾರೀ ಸೂತಜ ಕರ್ಣನು ಪುತ್ರವಧೆಯಿಂದ ಪರಿತಪಿಸುತ್ತಾ ವೇಗದಿಂದ ತನ್ನ ರಥದಲ್ಲಿ ಕಿರೀಟಿಯ ರಥದ ಬಳಿ ಧಾವಿಸಿದನು.

Leave a Reply

Your email address will not be published. Required fields are marked *