Virata Parva: Chapter 57

ವಿರಾಟ ಪರ್ವ: ಗೋಹರಣ ಪರ್ವ

೫೭

ಸಂಕುಲಯುದ್ಧ

ಕೌರವ ಮಹಾರಥರೆಲ್ಲ ಒಟ್ಟಾಗಿ ಸೇರಿ ಅರ್ಜುನನನ್ನು ಆಕ್ರಮಿಸಲು, ಅವನು ಕುರುಸೇನೆಯನ್ನು ಧ್ವಂಸಮಾಡಿದುದರ ವರ್ಣನೆ (೧-೧೯).

04057001 ವೈಶಂಪಾಯನ ಉವಾಚ|

04057001a ಅಥ ಸಂಗಮ್ಯ ಸರ್ವೇ ತು ಕೌರವಾಣಾಂ ಮಹಾರಥಾಃ|

04057001c ಅರ್ಜುನಂ ಸಹಿತಾ ಯತ್ತಾಃ ಪ್ರತ್ಯಯುಧ್ಯಂತ ಭಾರತ||

ವೈಶಂಪಾಯನನು ಹೇಳಿದನು: “ಭಾರತ! ಅನಂತರ ಕೌರವ ಮಹಾರಥರೆಲ್ಲ ಒಟ್ಟಾಗಿ ಸೇರಿ ಅರ್ಜುನನ ಮೇಲೆ ಬಲವಾಗಿ ಆಕ್ರಮಣ ಮಾಡಿದರು.

04057002a ಸ ಸಾಯಕಮಯೈರ್ಜಾಲೈಃ ಸರ್ವತಸ್ತಾನ್ಮಹಾರಥಾನ್|

04057002c ಪ್ರಾಚ್ಛಾದಯದಮೇಯಾತ್ಮಾ ನೀಹಾರ ಇವ ಪರ್ವತಾನ್||

ಮಂಜು ಪರ್ವತಗಳನ್ನು ಕವಿಯುವಂತೆ ಆ ಅಮೇಯಾತ್ಮನು ಆ ಮಹಾರಥರನ್ನೆಲ್ಲಾ ಬಾಣಗಳ ಜಾಲದಿಂದ ಮುಚ್ಚಿಬಿಟ್ಟನು.

04057003a ನದದ್ಭಿಶ್ಚ ಮಹಾನಾಗೈರ್ಹೇಷಮಾಣೈಶ್ಚ ವಾಜಿಭಿಃ|

04057003c ಭೇರೀಶಂಖನಿನಾದೈಶ್ಚ ಸ ಶಬ್ದಸ್ತುಮುಲೋಽಭವತ್||

ಮಹಾಗಜಗಳ ಘೀಂಕಾರದಿಂದಲೂ, ಕುದುರೆಗಳ ಹೇಷಾರವದಿಂದಲೂ, ಭೇರಿ-ಶಂಖಗಳ ನಿನಾದದಿಂದಲೂ ತುಮುಲ ಶಬ್ಧವುಂಟಾಯಿತು.

04057004a ನರಾಶ್ವಕಾಯಾನ್ನಿರ್ಭಿದ್ಯ ಲೋಹಾನಿ ಕವಚಾನಿ ಚ|

04057004c ಪಾರ್ಥಸ್ಯ ಶರಜಾಲಾನಿ ವಿನಿಷ್ಪೇತುಃ ಸಹಸ್ರಶಃ||

ಪಾರ್ಥನ ಸಾವಿರಾರು ಬಾಣ ಸಮೂಹಗಳು ಮನುಷ್ಯರ ಮತ್ತು ಕುದುರೆಗಳ ಶರೀರಗಳನ್ನೂ, ಲೋಹಕವಚಗಳನ್ನೂ ಭೇದಿಸಿ ಹೊರಬೀಳುತ್ತಿದ್ದವು.

04057005a ತ್ವರಮಾಣಃ ಶರಾನಸ್ಯನ್ಪಾಂಡವಃ ಸ ಬಭೌ ರಣೇ|

04057005c ಮಧ್ಯಂದಿನಗತೋಽರ್ಚಿಷ್ಮಾಂ ಶರದೀವ ದಿವಾಕರಃ||

ತ್ವರೆಯಿಂದ ಬಾಣಗಳನ್ನು ಬಿಡುತ್ತಿದ್ದ ಆ ಅರ್ಜುನನು ಶರತ್ಕಾಲದ ನಡುಹಗಲಿನಲ್ಲಿ ಜ್ವಲಿಸುವ ಸೂರ್ಯನಂತೆ ಸಮರದಲ್ಲಿ ಶೋಭಿಸುತ್ತಿದ್ದನು.

04057006a ಉಪಪ್ಲವಂತ ವಿತ್ರಸ್ತಾ ರಥೇಭ್ಯೋ ರಥಿನಸ್ತದಾ|

04057006c ಸಾದಿನಶ್ಚಾಶ್ವಪೃಷ್ಠೇಭ್ಯೋ ಭೂಮೌ ಚಾಪಿ ಪದಾತಯಃ||

ಆಗ ಹೆದರಿದ ರಥಿಕರು ರಥಗಳಿಂದಲೂ, ಅಶ್ವಸೈನಿಕರು ಕುದುರೆಗಳಿಂದಲೂ ಧುಮುಕುತ್ತಿದ್ದರು ಮತ್ತು ಕಾಲಾಳುಗಳು ನೆಲಕ್ಕೆ ಬೀಳುತ್ತಿದ್ದರು.

04057007a ಶರೈಃ ಸಂತಾಡ್ಯಮಾನಾನಾಂ ಕವಚಾನಾಂ ಮಹಾತ್ಮನಾಂ|

04057007c ತಾಮ್ರರಾಜತಲೋಹಾನಾಂ ಪ್ರಾದುರಾಸೀನ್ಮಹಾಸ್ವನಃ||

ಬಾಣಗಳು ತಾಗಿದ ಮಹಾವೀರರ ತಾಮ್ರ, ಬೆಳ್ಳಿ, ಮತ್ತು ಉಕ್ಕುಗಳ ಕವಚಗಳಿಂದ ಮಹಾ ಶಬ್ಧವುಂಟಾಯಿತು.

04057008a ಚನ್ನಮಾಯೋಧನಂ ಸರ್ವಂ ಶರೀರೈರ್ಗತಚೇತಸಾಂ|

04057008c ಗಜಾಶ್ವಸಾದಿಭಿಸ್ತತ್ರ ಶಿತಬಾಣಾತ್ತಜೀವಿತೈಃ||

ಮಡಿದವರ ದೇಹಗಳಿಂದಲೂ, ಹರಿತ ಬಾಣಗಳಿಂದ ಪ್ರಾಣನೀಗಿದ ಗಜಾರೋಹೀ, ಅಶ್ವಾರೋಹಿಗಳಿಂದಲೂ ಆ ರಣರಂಗವೆಲ್ಲ ಮುಸುಕಿಹೋಯಿತು.

04057009a ರಥೋಪಸ್ಥಾಭಿಪತಿತೈರಾಸ್ತೃತಾ ಮಾನವೈರ್ಮಹೀ|

04057009c ಪ್ರನೃತ್ಯದಿವ ಸಂಗ್ರಾಮೇ ಚಾಪಹಸ್ತೋ ಧನಂಜಯಃ||

ರಥದಿಂದುರುಳಿ ಬಿದ್ದ ಮಾನವರಿಂದ ಭೂಮಿಯು ತುಂಬಿಹೋಯಿತು. ಧನಂಜಯನು ಕೈಯಲ್ಲಿ ಬಿಲ್ಲನ್ನು ಹಿಡಿದು ಯುದ್ಧದಲ್ಲಿ ಕುಣಿಯುತ್ತಿರುವಂತೆ ತೋರುತ್ತಿತ್ತು.

04057010a ಶ್ರುತ್ವಾ ಗಾಂಡೀವನಿರ್ಘೋಷಂ ವಿಸ್ಫೂರ್ಜಿತಮಿವಾಶನೇಃ|

04057010c ತ್ರಸ್ತಾನಿ ಸರ್ವಭೂತಾನಿ ವ್ಯಗಚ್ಛಂತ ಮಹಾಹವಾತ್||

ಸಿಡಿಲಿನ ಶಬ್ಧದಂತಿದ್ದ ಗಾಂಡೀವದ ನಿರ್ಘೋಷವನ್ನು ಕೇಳಿ ಎಲ್ಲ ಜೀವಿಗಳೂ ಆ ಮಹಾಯುದ್ಧಕ್ಕೆ ಹೆದರಿ ಓಡಿಹೋದವು.

04057011a ಕುಂಡಲೋಷ್ಣೀಷಧಾರೀಣಿ ಜಾತರೂಪಸ್ರಜಾನಿ ಚ|

04057011c ಪತಿತಾನಿ ಸ್ಮ ದೃಶ್ಯಂತೇ ಶಿರಾಂಸಿ ರಣಮೂರ್ಧನಿ||

ಕುಂಡಲ-ಕಿರೀಟಗಳನ್ನೂ, ಚಿನ್ನದ ಹಾರಗಳನ್ನೂ ಧರಿಸಿದ ರುಂಡಗಳು ರಣರಂಗದಲ್ಲಿ ಬಿದ್ದಿರುವುದು ಕಂಡುಬರುತ್ತಿದ್ದವು.

04057012a ವಿಶಿಖೋನ್ಮಥಿತೈರ್ಗಾತ್ರೈರ್ಬಾಹುಭಿಶ್ಚ ಸಕಾರ್ಮುಕೈಃ|

04057012c ಸಹಸ್ತಾಭರಣೈಶ್ಚಾನ್ಯೈಃ ಪ್ರಚ್ಛನ್ನಾ ಭಾತಿ ಮೇದಿನೀ||

ಬಾಣಗಳಿಂದ ಗಾಸಿಗೊಂಡ ದೇಹಗಳಿಂದಲೂ, ಬಿಲ್ಲುಗಳು ಚುಚ್ಚಲ್ಪಟ್ಟ ತೋಳುಗಳಿಂದಲೂ, ಆಭರಣಗಳ ಸಹಿತ ಕೈಗಳಿಂದಲೂ ಭೂಮಿಯು ಮುಚ್ಚಿಹೋಗಿ ಶೋಭಿಸುತ್ತಿತ್ತು.

04057013a ಶಿರಸಾಂ ಪಾತ್ಯಮಾನಾನಾಮಂತರಾ ನಿಶಿತೈಃ ಶರೈಃ|

04057013c ಅಶ್ಮವೃಷ್ಟಿರಿವಾಕಾಶಾದಭವದ್ ಭರತರ್ಷಭ||

ಭರತರ್ಷಭ! ಆಕಾಶದಿಂದ ಕಲ್ಲುಗಳ ಮಳೆಸುರಿದಂತೆ ಹರಿತ ಬಾಣಗಳಿಂದ ರುಂಡಗಳು ಸತತವಾಗಿ ಬೀಳುತ್ತಿದ್ದವು.

04057014a ದರ್ಶಯಿತ್ವಾ ತಥಾತ್ಮಾನಂ ರೌದ್ರಂ ರುದ್ರಪರಾಕ್ರಮಃ|

04057014c ಅವರುದ್ಧಶ್ಚರನ್ಪಾರ್ಥೋ ದಶವರ್ಷಾಣಿ ತ್ರೀಣಿ ಚ|

04057014e ಕ್ರೋಧಾಗ್ನಿಮುತ್ಸೃಜದ್ಘೋರಂ ಧಾರ್ತರಾಷ್ಟ್ರೇಷು ಪಾಂಡವಃ||

ಹದಿಮೂರು ವರ್ಷ ತಡೆದುಕೊಂಡಿದ್ದ ರುದ್ರಪರಾಕ್ರಮಿ ಪಾಂಡವ ಪಾರ್ಥನು ತನ್ನ ರೌದ್ರವನ್ನು ಹಾಗೆ ಪ್ರದರ್ಶಿಸುತ್ತಾ, ಸಂಚರಿಸುತ್ತಾ, ಆ ಭಯಂಕರ ಕೋಪಾಗ್ನಿಯನ್ನು ಧಾರ್ತರಾಷ್ಟ್ರರ ಮೇಲೆ ಸುರಿಸಿದನು.

04057015a ತಸ್ಯ ತದ್ದಹತಃ ಸೈನ್ಯಂ ದೃಷ್ಟ್ವಾ ಚೈವ ಪರಾಕ್ರಮಂ|

04057015c ಸರ್ವೇ ಶಾಂತಿಪರಾ ಯೋಧಾ ಧಾರ್ತರಾಷ್ಟ್ರಸ್ಯ ಪಶ್ಯತಃ||

ಅವನಿಂದ ಸುಟ್ಟು ಹೋಗುತ್ತಿದ್ದ ಸೈನ್ಯವನ್ನೂ ಮತ್ತು ಅವನ ಪರಾಕ್ರಮವನ್ನು ನೋಡಿ ಎಲ್ಲ ಯೋಧರೂ ಧಾರ್ತರಾಷ್ಟ್ರನ ಕಣ್ಣೆದುರಿಗೇ ಮೂಕರಾದರು.

04057016a ವಿತ್ರಾಸಯಿತ್ವಾ ತತ್ಸೈನ್ಯಂ ದ್ರಾವಯಿತ್ವಾ ಮಹಾರಥಾನ್|

04057016c ಅರ್ಜುನೋ ಜಯತಾಂ ಶ್ರೇಷ್ಠಃ ಪರ್ಯವರ್ತತ ಭಾರತ||

ಭಾರತ! ಜಯಶಾಲಿಗಳಲ್ಲಿ ಶ್ರೇಷ್ಠ ಅರ್ಜುನನು ಆ ಸೈನ್ಯವನ್ನು ಹೆದರಿಸುತ್ತಾ, ಮಹಾರಥಿಗಳನ್ನು ಓಡಿಸುತ್ತಾ ಸುತ್ತಾಡಿದನು.

04057017a ಪ್ರಾವರ್ತಯನ್ನದೀಂ ಘೋರಾಂ ಶೋಣಿತೌಘತರಂಗಿಣೀಂ|

04057017c ಅಸ್ಥಿಶೈವಲಸಂಬಾಧಾಂ ಯುಗಾಂತೇ ಕಾಲನಿರ್ಮಿತಾಂ||

ರಕ್ತಪ್ರವಾಹದ ಅಲೆಗಳನ್ನುಳ್ಳ, ಮೂಳೆಗಳ ಪಾಚಿಯಿಂದ ತುಂಬಿದ, ಪ್ರಳಯಕಾಲದಲ್ಲಿ ಯಮನು ನಿರ್ಮಿಸಿದಂತಿದ್ದ ಘೋರ ನದಿಯನ್ನು ಹರಿಸಿದನು.

04057018a ಶರಚಾಪಪ್ಲವಾಂ ಘೋರಾಂ ಮಾಂಸಶೋಣಿತಕರ್ದಮಾಂ|

04057018c ಮಹಾರಥಮಹಾದ್ವೀಪಾಂ ಶಂಖದುಂದುಭಿನಿಸ್ವನಾಂ|

04057018e ಚಕಾರ ಮಹತೀಂ ಪಾರ್ಥೋ ನದೀಮುತ್ತರಶೋಣಿತಾಂ||

ಬಿಲ್ಲು ಬಾಣಗಳ ದೋಣಿಗಳನ್ನುಳ್ಳ, ರಕ್ತ ಮಾಂಸಗಳ ಕೆಸರನ್ನುಳ್ಳ, ಮಹಾರಥರ ಮಹಾದ್ವೀಪಗಳನ್ನುಳ್ಳ, ಶಂಖದುಂದುಭಿಗಳ ಶಬ್ಧಗಳ, ಘೋರವಾಗಿ ಉಕ್ಕುತ್ತಿದ್ದ ನೆತ್ತರ ನದಿಯನ್ನು ಪಾರ್ಥನು ನಿರ್ಮಿಸಿದನು.

04057019a ಆದದಾನಸ್ಯ ಹಿ ಶರಾನ್ಸಂಧಾಯ ಚ ವಿಮುಂಚತಃ|

04057019c ವಿಕರ್ಷತಶ್ಚ ಗಾಂಡೀವಂ ನ ಕಿಂ ಚಿದ್ದೃಶ್ಯತೇಽಂತರಂ||

ಅವನು ಬಾಣಗಳನ್ನು ತೆಗೆಯುವುದಕ್ಕೂ, ಹೂಡುವುದಕ್ಕೂ, ಗಾಂಡೀವವನ್ನೆಳೆದು ಬಿಡುವುದಕ್ಕೂ ನಡುವೆ ಯಾವುದೇ ಅಂತರವು ಕಾಣುತ್ತಿರಲಿಲ್ಲ.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಅರ್ಜುನಸಂಕುಲಯುದ್ಧೇ ಸಪ್ತಪಂಚಾಶತ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಅರ್ಜುನಸಂಕುಲಯುದ್ಧದಲ್ಲಿ ಐವತ್ತೇಳನೆಯ ಅಧ್ಯಾಯವು.

Related image

Comments are closed.