Virata Parva: Chapter 55

ವಿರಾಟ ಪರ್ವ: ಗೋಹರಣ ಪರ್ವ

೫೫

ಅರ್ಜುನ-ಕರ್ಣರ ಪುನರ್ಯುದ್ಧ

ರಣರಂಗದಲ್ಲಿ ಎದುರಾದ ಕರ್ಣಾರ್ಜುನರ ಸಂವಾದ (೧-೧೪). ಅರ್ಜುನನ ಬಾಣದ ಹೊಡೆತದ ವೇದನೆಯನ್ನು ತಡೆಯಲಾರದೇ ಕರ್ಣನು ರಣದಿಂದ ಓಡಿ ಹೋದುದು (೧೫-೨೫).

04055001 ಅರ್ಜುನ ಉವಾಚ|

04055001a ಕರ್ಣ ಯತ್ತೇ ಸಭಾಮಧ್ಯೇ ಬಹು ವಾಚಾ ವಿಕತ್ಥಿತಂ|

04055001c ನ ಮೇ ಯುಧಿ ಸಮೋಽಸ್ತೀತಿ ತದಿದಂ ಪ್ರತ್ಯುಪಸ್ಥಿತಂ||

ಅರ್ಜುನನು ಹೇಳಿದನು: “ಕರ್ಣ! ಯುದ್ಧದಲ್ಲಿ ನನಗೆ ಸರಿಸಮಾನರಿಲ್ಲ ಎಂದು ನೀನು ಸಭೆಯ ನಡುವೆ ಬಹಳ ಮಾತುಗಳಿಂದ ಜಂಬ ಕೊಚ್ಚಿದೆಯಲ್ಲ! ಆ ಕಾಲವು ಇದೋ ಬಂದಿದೆ!

04055002a ಅವೋಚಃ ಪರುಷಾ ವಾಚೋ ಧರ್ಮಮುತ್ಸೃಜ್ಯ ಕೇವಲಂ|

04055002c ಇದಂ ತು ದುಷ್ಕರಂ ಮನ್ಯೇ ಯದಿದಂ ತೇ ಚಿಕೀರ್ಷಿತಂ||

ನೀನು ಧರ್ಮವನ್ನು ಸಂಪೂರ್ಣವಾಗಿ ತೊರೆದು ಕಠಿಣ ಮಾತುಗಳನ್ನಾಡಿದೆ. ನೀನು ಮಾಡಬಯಸುತ್ತಿರುವ ಈ ಕಾರ್ಯವು ನಿನಗೆ ದುಷ್ಕರವೆಂದು ಭಾವಿಸುತ್ತೇನೆ.

04055003a ಯತ್ತ್ವಯಾ ಕಥಿತಂ ಪೂರ್ವಂ ಮಾಮನಾಸಾದ್ಯ ಕಿಂ ಚನ|

04055003c ತದದ್ಯ ಕುರು ರಾಧೇಯ ಕುರುಮಧ್ಯೇ ಮಯಾ ಸಹ||

ಕರ್ಣ! ನನ್ನನ್ನು ಎದುರಿಸುವ ಮುನ್ನವೇ ಕೌರವರ ನಡುವೆ ನೀನು ಏನೋ ಆಡಿದ್ದೆಯಲ್ಲ. ಅದನ್ನೀಗ ನನ್ನೊಡನೆ ಮಾಡಿ ತೋರಿಸು!

04055004a ಯತ್ಸಭಾಯಾಂ ಸ್ಮ ಪಾಂಚಾಲೀಂ ಕ್ಲಿಶ್ಯಮಾನಾಂ ದುರಾತ್ಮಭಿಃ|

04055004c ದೃಷ್ಟವಾನಸಿ ತಸ್ಯಾದ್ಯ ಫಲಮಾಪ್ನುಹಿ ಕೇವಲಂ||

ಸಭೆಯಲ್ಲಿ ದ್ರೌಪದಿಯು ದುರಾತ್ಮರಿಂದ ಕ್ಲೇಶಗೊಂಡಿದುದನ್ನು ನೀನು ನೋಡಿದೆ. ಅದರ ಫಲವನ್ನೀಗ ಸಂಪೂರ್ಣವಾಗಿ ಅನುಭವಿಸು.

04055005a ಧರ್ಮಪಾಶನಿಬದ್ಧೇನ ಯನ್ಮಯಾ ಮರ್ಷಿತಂ ಪುರಾ|

04055005c ತಸ್ಯ ರಾಧೇಯ ಕೋಪಸ್ಯ ವಿಜಯಂ ಪಶ್ಯ ಮೇ ಮೃಧೇ||

ಕರ್ಣ! ಹಿಂದೆ ನಾನು ಧರ್ಮಪಾಶಕ್ಕೆ ಕಟ್ಟುಬಿದ್ದು ಸಹಿಸಿಕೊಂಡ ಕೋಪದ ಗೆಲುವನ್ನು ಈಗ ಯುದ್ಧದಲ್ಲಿ ನೋಡು.

04055006a ಏಹಿ ಕರ್ಣ ಮಯಾ ಸಾರ್ಧಂ ಪ್ರತಿಪದ್ಯಸ್ವ ಸಂಗರಂ|

04055006c ಪ್ರೇಕ್ಷಕಾಃ ಕುರವಃ ಸರ್ವೇ ಭವಂತು ಸಹಸೈನಿಕಾಃ||

ಬಾ ಕರ್ಣ! ನನ್ನೊಡನೆ ಯುದ್ಧಮಾಡಲು ಒಪ್ಪಿಕೋ! ಕೌರವರೆಲ್ಲರೂ ಸೈನಿಕರ ಸಹಿತ ಪ್ರೇಕ್ಷಕರಾಗಲಿ.”

04055007 ಕರ್ಣ ಉವಾಚ|

04055007a ಬ್ರವೀಷಿ ವಾಚಾ ಯತ್ಪಾರ್ಥ ಕರ್ಮಣಾ ತತ್ಸಮಾಚರ|

04055007c ಅತಿಶೇತೇ ಹಿ ವೈ ವಾಚಂ ಕರ್ಮೇತಿ ಪ್ರಥಿತಂ ಭುವಿ||

ಕರ್ಣನು ಹೇಳಿದನು: “ಪಾರ್ಥ! ಮಾತಿನಲ್ಲಿ ಆಡಿದುದನ್ನು ಕಾರ್ಯದಲ್ಲಿ ಮಾಡಿತೋರು. ಕಾರ್ಯವು ಮಾತಿಗಿಂತ ಮಿಗಿಲಾಗಿದುದೆಂದು ಲೋಕಪ್ರಸಿದ್ಧವಾಗಿದೆ.

04055008a ಯತ್ತ್ವಯಾ ಮರ್ಷಿತಂ ಪೂರ್ವಂ ತದಶಕ್ತೇನ ಮರ್ಷಿತಂ|

04055008c ಇತಿ ಗೃಹ್ಣಾಮಿ ತತ್ಪಾರ್ಥ ತವ ದೃಷ್ಟ್ವಾಪರಾಕ್ರಮಂ||

ಪಾರ್ಥ! ನಿನ್ನ ಹೇಡಿತನವನ್ನು ನೋಡಿ ಹಿಂದೆ ನೀನು ಕೋಪವನ್ನು ಸಹಿಸಿಕೊಂಡಿದ್ದುದು ಅಶಕ್ತಿಯಿಂದ ಎಂದು ನನಗನ್ನಿಸುತ್ತದೆ.

04055009a ಧರ್ಮಪಾಶನಿಬದ್ಧೇನ ಯದಿ ತೇ ಮರ್ಷಿತಂ ಪುರಾ|

04055009c ತಥೈವ ಬದ್ಧಮಾತ್ಮಾನಮಬದ್ಧಮಿವ ಮನ್ಯಸೇ||

ಧರ್ಮಪಾಶಕ್ಕೆ ಬದ್ಧನಾಗಿ ಹಿಂದೆ ನೀನು ಕೋಪವನ್ನು ಸಹಿಸಿಕೊಂಡಿದ್ದೆಯಾದರೆ ಈಗಲೂ ನೀನು ಅದೇರೀತಿ ಬದ್ಧನಾಗಿದ್ದೀಯೆ. ಆದರೆ ನೀನು ಸ್ವತಂತ್ರನೆಂದು ಭಾವಿಸಿದ್ದೀಯೆ.

04055010a ಯದಿ ತಾವದ್ವನೇ ವಾಸೋ ಯಥೋಕ್ತಶ್ಚರಿತಸ್ತ್ವಯಾ|

04055010c ತತ್ತ್ವಂ ಧರ್ಮಾರ್ಥವಿತ್ಕ್ಲಿಷ್ಟಃ ಸಮಯಂ ಭೇತ್ತುಮಿಚ್ಛಸಿ||

ನೀನು ಹೇಳಿದಂತೆ ವನದಲ್ಲಿ ವಾಸಮಾಡಿದ್ದ ಪಕ್ಷದಲ್ಲಿ, ಧರ್ಮಾರ್ಥವಿದ ಕ್ಲೇಶಪೀಡಿತ ನೀನು ಹೇಗೆತಾನೆ ಪ್ರತಿಜ್ಞೆಯನ್ನು ಮುರಿಯಬಯಸುವೆ?

04055011a ಯದಿ ಶಕ್ರಃ ಸ್ವಯಂ ಪಾರ್ಥ ಯುಧ್ಯತೇ ತವ ಕಾರಣಾತ್|

04055011c ತಥಾಪಿ ನ ವ್ಯಥಾ ಕಾ ಚಿನ್ಮಮ ಸ್ಯಾದ್ವಿಕ್ರಮಿಷ್ಯತಃ||

ಪಾರ್ಥ! ಸ್ವಯಂ ದೇವೇಂದ್ರನೇ ನಿನಗಾಗಿ ಯುದ್ಧಮಾಡಿದರೂ ಗೆಲ್ಲಲಿರುವ ನನಗೆ ಸ್ವಲ್ಪವೂ ವ್ಯಥೆಯಿಲ್ಲ.

04055012a ಅಯಂ ಕೌಂತೇಯ ಕಾಮಸ್ತೇ ನಚಿರಾತ್ಸಮುಪಸ್ಥಿತಃ|

04055012c ಯೋತ್ಸ್ಯಸೇ ತ್ವಂ ಮಯಾ ಸಾರ್ಧಮದ್ಯ ದ್ರಕ್ಷ್ಯಸಿ ಮೇ ಬಲಂ||

ಅರ್ಜುನ! ನಿನ್ನ ಈ ಬಯಕೆ ಶೀಘ್ರದಲ್ಲಿ ಈಡೇರಲಿ. ನೀನೀಗ ನನ್ನೊಡನೆ ಹೋರಾಡುತ್ತೀಯೆ ಮತ್ತು ನನ್ನ ಬಲವನ್ನು ನೋಡುತ್ತೀಯೆ.”

04055013 ಅರ್ಜುನ ಉವಾಚ|

04055013a ಇದಾನೀಮೇವ ತಾವತ್ತ್ವಮಪಯಾತೋ ರಣಾನ್ಮಮ|

04055013c ತೇನ ಜೀವಸಿ ರಾಧೇಯ ನಿಹತಸ್ತ್ವನುಜಸ್ತವ||

ಅರ್ಜುನನು ಹೇಳಿದನು: “ರಾಧೇಯ! ಈಗತಾನೇ ನೀನು ನನ್ನೊಡನೆ ಹೋರಾಡುತ್ತಿದ್ದು ಯುದ್ಧದಿಂದ ಓಡಿಹೋಗಿದ್ದೆ. ಆದ್ದರಿಂದಲೇ ನೀನು ಇನ್ನೂ ಬದುಕಿದ್ದೀಯೆ. ನಿನ್ನ ತಮ್ಮನಾದರೋ ಹತನಾದನು.

04055014a ಭ್ರಾತರಂ ಘಾತಯಿತ್ವಾ ಚ ತ್ಯಕ್ತ್ವಾ ರಣಶಿರಶ್ಚ ಕಃ|

04055014c ತ್ವದನ್ಯಃ ಪುರುಷಃ ಸತ್ಸು ಬ್ರೂಯಾದೇವಂ ವ್ಯವಸ್ಥಿತಃ||

ನೀನಲ್ಲದೆ ಮತ್ತ್ಯಾರು ತಾನೇ ತನ್ನ ತಮ್ಮನನ್ನು ಕೊಲ್ಲಿಸಿ ರಣರಂಗವನ್ನು ಬಿಟ್ಟು ಓಡಿಹೋಗಿ ನಂತರ ಸತ್ಪುರುಷರ ನಡುವೆ ನಿಂತು ಹೀಗೆ ಮಾತನಾಡಿಯಾನು?””

04055015 ವೈಶಂಪಾಯನ ಉವಾಚ|

04055015a ಇತಿ ಕರ್ಣಂ ಬ್ರುವನ್ನೇವ ಬೀಭತ್ಸುರಪರಾಜಿತಃ|

04055015c ಅಭ್ಯಯಾದ್ವಿಸೃಜನ್ಬಾಣಾನ್ಕಾಯಾವರಣಭೇದಿನಃ||

ವೈಶಂಪಾಯನನು ಹೇಳಿದನು: “ಸೋಲಿಲ್ಲದ ಅರ್ಜುನನು ಕರ್ಣನಿಗೆ ಹೀಗೆ ನುಡಿಯುತ್ತಲೇ, ಕವಚವನ್ನು ಭೇದಿಸುವಂತ ಬಾಣಗಳನ್ನು ಬಿಡುತ್ತಾ ಮುನ್ನುಗ್ಗಿದನು.

04055016a ಪ್ರತಿಜಗ್ರಾಹ ತಾನ್ಕರ್ಣಃ ಶರಾನಗ್ನಿಶಿಖೋಪಮಾನ್|

04055016c ಶರವರ್ಷೇಣ ಮಹತಾ ವರ್ಷಮಾಣ ಇವಾಂಬುದಃ||

ಅಗ್ನಿಜ್ವಾಲೆಗಳಂತಹ ಆ ಬಾಣಗಳನ್ನು ಕರ್ಣನು ಮಳೆಗರೆಯುವ ಮೋಡಗಳಂತಿದ್ದ ದೊಡ್ಡ ಶರವರ್ಷದಿಂದ ಎದುರಿಸಿದನು.

04055017a ಉತ್ಪೇತುಃ ಶರಜಾಲಾನಿ ಘೋರರೂಪಾಣಿ ಸರ್ವಶಃ|

04055017c ಅವಿಧ್ಯದಶ್ವಾನ್ಬಾಹ್ವೋಶ್ಚ ಹಸ್ತಾವಾಪಂ ಪೃಥಕ್ ಪೃಥಕ್||

ಘೋರರೂಪಿ ಬಾಣಸಮೂಹಗಳು ಎಲ್ಲೆಡೆಯಲ್ಲಿಯೂ ಬಿದ್ದು, ಕುದುರೆಗಳನ್ನೂ, ತೋಳುಗಳನ್ನೂ, ಕೈಗವಸುಗಳನ್ನೂ ಬೇರೆಬೇರೆಯಾಗಿ ಭೇದಿಸಿದವು.

04055018a ಸೋಽಮೃಷ್ಯಮಾಣಃ ಕರ್ಣಸ್ಯ ನಿಷಂಗಸ್ಯಾವಲಂಬನಂ|

04055018c ಚಿಚ್ಛೇದ ನಿಶಿತಾಗ್ರೇಣ ಶರೇಣ ನತಪರ್ವಣಾ||

ಸಹಿಸಲಾರದ ಅರ್ಜುನನು ಹರಿತ ತುದಿಯುಳ್ಳ ಮತ್ತು ನೇರ್ಪಡಿಸಿದ ಗಿಣ್ಣುಗಳ ಬಾಣದಿಂದ ಕರ್ಣನ ಬತ್ತಳಿಕೆಯ ದಾರವನ್ನು ಕತ್ತರಿಸಿದನು.

04055019a ಉಪಾಸಂಗಾದುಪಾದಾಯ ಕರ್ಣೋ ಬಾಣಾನಥಾಪರಾನ್|

04055019c ವಿವ್ಯಾಧ ಪಾಂಡವಂ ಹಸ್ತೇ ತಸ್ಯ ಮುಷ್ಟಿರಶೀರ್ಯತ||

ಆಗ ಕರ್ಣನು ಬತ್ತಳಿಕೆಯಿಂದ ಬೇರೆ ಬಾಣಗಳನ್ನು ತೆಗೆದುಕೊಂಡು ಅರ್ಜುನನ ಕೈಗೆ ಹೊಡೆದನು. ಅರ್ಜುನನ ಮುಷ್ಟಿ ಸಡಿಲವಾಯಿತು.

04055020a ತತಃ ಪಾರ್ಥೋ ಮಹಾಬಾಹುಃ ಕರ್ಣಸ್ಯ ಧನುರಚ್ಛಿನತ್|

04055020c ಸ ಶಕ್ತಿಂ ಪ್ರಾಹಿಣೋತ್ತಸ್ಮೈ ತಾಂ ಪಾರ್ಥೋ ವ್ಯಧಮಚ್ಚರೈಃ||

ಬಳಿಕ ಮಹಾಬಾಹು ಪಾರ್ಥನು ಕರ್ಣನ ಬಿಲ್ಲನ್ನು ತುಂಡರಿಸಿದನು. ಅವನು ಶಕ್ತ್ಯಾಯುಧವನ್ನು ಪ್ರಯೋಗಿಸಲು, ಪಾರ್ಥನು ಅದನ್ನು ಬಾಣಗಳಿಂದ ಕತ್ತರಿಸಿದನು.

04055021a ತತೋಽಭಿಪೇತುರ್ಬಹವೋ ರಾಧೇಯಸ್ಯ ಪದಾನುಗಾಃ|

04055021c ತಾಂಶ್ಚ ಗಾಂಡೀವನಿರ್ಮುಕ್ತೈಃ ಪ್ರಾಹಿಣೋದ್ಯಮಸಾದನಂ||

ಅನಂತರ ಕರ್ಣನ ಬಹುಮಂದಿ ಅನುಚರರು ಅವನ ಮೇಲೇರಿ ಬಂದರು. ಅವನು ಅವರನ್ನು ಗಾಂಡೀವದಿಂದ ಬಿಟ್ಟ ಬಾಣಗಳಿಂದ ಯಮಸದನಕ್ಕೆ ಅಟ್ಟಿದನು.

04055022a ತತೋಽಸ್ಯಾಶ್ವಾಂ ಶರೈಸ್ತೀಕ್ಷ್ಣೈರ್ಬೀಭತ್ಸುರ್ಭಾರಸಾಧನೈಃ|

04055022c ಆಕರ್ಣಮುಕ್ತೈರಭ್ಯಘ್ನಂಸ್ತೇ ಹತಾಃ ಪ್ರಾಪತನ್ ಭುವಿ||

ಆಗ ಅರ್ಜುನನು ತೀಕ್ಷ್ಣ ಪರಿಣಾಮಕಾರಿ ಬಾಣಗಳನ್ನು ಕಿವಿಯವರೆಗೂ ಎಳೆದು ಬಿಟ್ಟು ಕರ್ಣನ ಕುದುರೆಗಳಿಗೆ ಹೊಡೆಯಲು, ಅವು ಹತವಾಗಿ ನೆಲದಮೇಲೆ ಬಿದ್ದವು.

04055023a ಅಥಾಪರೇಣ ಬಾಣೇನ ಜ್ವಲಿತೇನ ಮಹಾಭುಜಃ|

04055023c ವಿವ್ಯಾಧ ಕರ್ಣಂ ಕೌಂತೇಯಸ್ತೀಕ್ಷ್ಣೇನೋರಸಿ ವೀರ್ಯವಾನ್||

ಆಗ ವೀರ್ಯಶಾಲಿ ಮಹಾಭುಜ ಅರ್ಜುನನು ಜ್ವಲಿಸುವ ಮತ್ತೊಂದು ತೀಕ್ಷ್ಣ ಬಾಣದಿಂದ ಕರ್ಣನ ಎದೆಗೆ ಹೊಡೆದನು.

04055024a ತಸ್ಯ ಭಿತ್ತ್ವಾ ತನುತ್ರಾಣಂ ಕಾಯಮಭ್ಯಪತಚ್ಚರಃ|

04055024c ತತಃ ಸ ತಮಸಾವಿಷ್ಟೋ ನ ಸ್ಮ ಕಿಂ ಚಿತ್ಪ್ರಜಜ್ಞಿವಾನ್||

ಆ ಬಾಣವು ಅವನ ಕವಚವನ್ನು ಭೇದಿಸಿ ಶರೀರವನ್ನು ಹೊಕ್ಕಿತು. ಆಗ ಕತ್ತಲೆ ಕವಿದ ಅವನಿಗೆ ಏನೊಂದೂ ತಿಳಿಯದಾಯಿತು.

04055025a ಸ ಗಾಢವೇದನೋ ಹಿತ್ವಾ ರಣಂ ಪ್ರಾಯಾದುದಮ್ಮುಖಃ|

04055025c ತತೋಽರ್ಜುನ ಉಪಾಕ್ರೋಶದುತ್ತರಶ್ಚ ಮಹಾರಥಃ||

ಗಾಢವೇದನೆಯಿಂದ ಅವನು ಯುದ್ಧವನ್ನು ತ್ಯಜಿಸಿ ಉತ್ತರಕ್ಕೆ ಓಡಿಹೋದನು. ಆಗ ಮಹಾರಥ ಅರ್ಜುನನೂ ಉತ್ತರನೂ ಧಿಕ್ಕಾರಹಾಕಿದರು.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಕರ್ಣಾಪಯಾನೇ ಪಂಚಪಂಚಾಶತ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಕರ್ಣಾಪಯಾನದಲ್ಲಿ ಐವತ್ತೈದನೆಯ ಅಧ್ಯಾಯವು.

Image result for flowers against white background

Comments are closed.