Virata Parva: Chapter 49

ವಿರಾಟ ಪರ್ವ: ಗೋಹರಣ ಪರ್ವ

೪೯

ಅರ್ಜುನ-ಕರ್ಣರ ಯುದ್ಧ

ಕುರುಸೇನೆಯ ಮಧ್ಯ ಪ್ರವೇಶಿಸಿ ಅರ್ಜುನನು ಧ್ವಂಸಗೊಳಿಸುತ್ತಾ, ಕರ್ಣನನ್ನು ಪಲಾಯನಗೈಯುವಂತೆ ಮಾಡಿದುದು (೧-೨೩).

04049001 ವೈಶಂಪಾಯನ ಉವಾಚ|

04049001a ಸ ಶತ್ರುಸೇನಾಂ ತರಸಾ ಪ್ರಣುದ್ಯ|

         ಗಾಸ್ತಾ ವಿಜಿತ್ಯಾಥ ಧನುರ್ಧರಾಗ್ರ್ಯಃ|

04049001c ದುರ್ಯೋಧನಾಯಾಭಿಮುಖಂ ಪ್ರಯಾತೋ|

         ಭೂಯೋಽರ್ಜುನಃ ಪ್ರಿಯಮಾಜೌ ಚಿಕೀರ್ಷನ್||

ವೈಶಂಪಾಯನನು ಹೇಳಿದನು: “ಧನುರ್ಧರರಲ್ಲಿ ಶ್ರೇಷ್ಠ ಆ ಅರ್ಜುನನು ಶತ್ರುಸೈನ್ಯವನ್ನು ಕೂಡಲೆ ಚೆಲ್ಲಾಪಿಲ್ಲಿಮಾಡಿ ಆ ಗೋವುಗಳನ್ನು ಗೆದ್ದು ಅನಂತರ ಮತ್ತೆ ಯುದ್ಧದಲ್ಲಿ ಪ್ರಿಯವಾದುದನ್ನು ಮಾಡಬಯಸಿ, ದುರ್ಯೋಧನನತ್ತ ಹೊರಟನು.

04049002a ಗೋಷು ಪ್ರಯಾತಾಸು ಜವೇನ ಮತ್ಸ್ಯಾನ್|

         ಕಿರೀಟಿನಂ ಕೃತಕಾರ್ಯಂ ಚ ಮತ್ವಾ|

04049002c ದುರ್ಯೋಧನಾಯಾಭಿಮುಖಂ ಪ್ರಯಾಂತಂ|

         ಕುರುಪ್ರವೀರಾಃ ಸಹಸಾಭಿಪೇತುಃ||

ಗೋವುಗಳು ವೇಗವಾಗಿ ಮತ್ಸ್ಯನಗರದತ್ತ ಹೋಗುತ್ತಿರಲು ಅರ್ಜುನನು ಕೃತಕೃತ್ಯನಾದನೆಂದು ತಿಳಿದು ಕುರುವೀರರು ದುರ್ಯೋಧನನತ್ತ ಹೋಗುತ್ತಿದ್ದ ಅವನ ಮೇಲೆ ಥಟ್ಟನೆ ಎರಗಿದರು.

04049003a ತೇಷಾಮನೀಕಾನಿ ಬಹೂನಿ ಗಾಢಂ|

         ವ್ಯೂಢಾನಿ ದೃಷ್ಟ್ವಾ ಬಹುಲಧ್ವಜಾನಿ|

04049003c ಮತ್ಸ್ಯಸ್ಯ ಪುತ್ರಂ ದ್ವಿಷತಾಂ ನಿಹಂತಾ|

         ವೈರಾಟಿಮಾಮಂತ್ರ್ಯ ತತೋಽಭ್ಯುವಾಚ||

ಆಗ ದಟ್ಟವಾಗಿ ವ್ಯೂಹಗೊಂಡಿದ್ದ ಬಹಳ ಬಾವುಟಗಳಿಂದ ಕೂಡಿದ್ದ ಅವರ ಬಹುಸೇನೆಯನ್ನು ನೋಡಿ ಶತ್ರುನಾಶಕ ಅರ್ಜುನನು ಮತ್ಸ್ಯರಾಜ ವಿರಾಟನ ಮಗನನ್ನು ಕುರಿತು ಹೀಗೆಂದನು:

04049004a ಏತೇನ ತೂರ್ಣಂ ಪ್ರತಿಪಾದಯೇಮಾಂ|

         ಶ್ವೇತಾನ್ ಹಯಾನ್ಕಾಂಚನರಶ್ಮಿಯೋಕ್ತ್ರಾನ್|

04049004c ಜವೇನ ಸರ್ವೇಣ ಕುರು ಪ್ರಯತ್ನಂ|

         ಆಸಾದಯೈತದ್ರಥಸಿಂಹವೃಂದಂ||

“ಚಿನ್ನದ ಕಡಿವಾಣಗಳನ್ನು ಬಿಗಿದ ಈ ಕುದುರೆಗಳನ್ನು ಇದೇ ಮಾರ್ಗದಲ್ಲಿ ವೇಗವಾಗಿ ಓಡಿಸು. ಸರ್ವ ವೇಗದಿಂದಲೂ ಪ್ರಯತ್ನಿಸು. ಆ ರಥಿಕಸಿಂಹ ಸಮೂಹವನ್ನು ಹಿಡಿ.

04049005a ಗಜೋ ಗಜೇನೇವ ಮಯಾ ದುರಾತ್ಮಾ|

         ಯೋ ಯೋದ್ಧುಮಾಕಾಮ್ಕ್ಷತಿ ಸೂತಪುತ್ರಃ|

04049005c ತಮೇವ ಮಾಂ ಪ್ರಾಪಯ ರಾಜಪುತ್ರ|

         ದುರ್ಯೋಧನಾಪಾಶ್ರಯಜಾತದರ್ಪಂ||

ರಾಜಪುತ್ರ! ಆನೆಯು ಆನೆಯೊಡನೆ ಹೋರಾಡಬಯಸುವಂತೆ ನನ್ನೊಡನೆ ಹೋರಾಡಬಯಸುವ, ದುರ್ಯೋಧನನ ಆಶ್ರಯದಿಂದ ದರ್ಪಿಷ್ಠನಾಗಿರುವ, ಆ ದುರಾತ್ಮ ಕರ್ಣನಲ್ಲಿಗೇ ನನ್ನನ್ನು ಕರೆದೊಯ್ಯಿ.”

04049006a ಸ ತೈರ್ಹಯೈರ್ವಾತಜವೈರ್ಬೃಹದ್ಭಿಃ|

         ಪುತ್ರೋ ವಿರಾಟಸ್ಯ ಸುವರ್ಣಕಕ್ಷ್ಯೈಃ|

04049006c ವಿಧ್ವಂಸಯಂಸ್ತದ್ರಥಿನಾಮನೀಕಂ|

         ತತೋಽವಹತ್ಪಾಂಡವಮಾಜಿಮಧ್ಯೇ||

ವಿರಾಟಪುತ್ರನು ಗಾಳಿಯ ವೇಗವನ್ನುಳ್ಳ, ಚಿನ್ನದ ಜೀನುಗಳನ್ನು ಹೊದಿಸಿದ ದೊಡ್ಡ ಕುದುರೆಗಳಿಂದ ಆ ರಥಿಕರ ಸೇನೆಯನ್ನು ಧ್ವಂಸಮಾಡಿ ಆಮೇಲೆ ಅರ್ಜುನನನ್ನು ರಣರಂಗದ ಮಧ್ಯಕ್ಕೆ ಒಯ್ದನು.

04049007a ತಂ ಚಿತ್ರಸೇನೋ ವಿಶಿಖೈರ್ವಿಪಾಠೈಃ|

         ಸಂಗ್ರಾಮಜಿಚ್ಚತ್ರುಸಹೋ ಜಯಶ್ಚ|

04049007c ಪ್ರತ್ಯುದ್ಯಯುರ್ಭಾರತಮಾಪತಂತಂ|

         ಮಹಾರಥಾಃ ಕರ್ಣಮಭೀಪ್ಸಮಾನಾಃ||

ಚಿತ್ರಸೇನ, ಸಂಗ್ರಾಮಜಿತ್, ಶತ್ರುಸಹ, ಜಯ - ಈ ಮಹಾರಥರು ಕರ್ಣನಿಗೆ ನೆರವಾಗ ಬಯಸಿ ಮೇಲೆ ಬೀಳುತ್ತಿದ್ದ ಅರ್ಜುನನತ್ತ ವಿಶಿಖ ವಿಪಾಠಗಳೆಂಬ ಬಾಣಗಳನ್ನು ಹಿಡಿದು ಧಾವಿಸಿದರು.

04049008a ತತಃ ಸ ತೇಷಾಂ ಪುರುಷಪ್ರವೀರಃ|

         ಶರಾಸನಾರ್ಚಿಃ ಶರವೇಗತಾಪಃ|

04049008c ವ್ರಾತಾನ್ರಥಾನಾಮದಹತ್ಸ ಮನ್ಯುರ್|

         ವನಂ ಯಥಾಗ್ನಿಃ ಕುರುಪುಂಗವಾನಾಂ||

ಆ ಪುರುಷಶ್ರೇಷ್ಠನು ಕೋಪಗೊಂಡು ಬಿಲ್ಲೆಂಬ ಬೆಂಕಿಯಿಂದಲೂ ಶರವೇಗವೆಂಬ ತಾಪದಿಂದಲೂ ಕೂಡಿದವನಾಗಿ ಅಗ್ನಿಯು ವನವನ್ನು ಸುಡುವಂತೆ ಕುರುಶ್ರೇಷ್ಠರ ರಥಸಮೂಹವನ್ನು ಸುಟ್ಟುಹಾಕಿದನು.

04049009a ತಸ್ಮಿಂಸ್ತು ಯುದ್ಧೇ ತುಮುಲೇ ಪ್ರವೃತ್ತೇ|

         ಪಾರ್ಥಂ ವಿಕರ್ಣೋಽತಿರಥಂ ರಥೇನ|

04049009c ವಿಪಾಠವರ್ಷೇಣ ಕುರುಪ್ರವೀರೋ|

         ಭೀಮೇನ ಭೀಮಾನುಜಮಾಸಸಾದ||

ಅನಂತರ ತುಮುಲ ಯುದ್ಧವು ಮೊದಲಾಗಲು ಕುರುವೀರ ವಿಕರ್ಣನು ರಥದ ಮೇಲೆ ಕುಳಿತು ಭಯಂಕರ ಕವಲುಬಾಣಗಳ ಮಳೆಗರೆಯುತ್ತ ಅತಿರಥ ಅರ್ಜುನನನ್ನು ಸಮೀಪಿಸಿದನು.

04049010a ತತೋ ವಿಕರ್ಣಸ್ಯ ಧನುರ್ವಿಕೃಷ್ಯ|

         ಜಾಂಬೂನದಾಗ್ರ್ಯೋಪಚಿತಂ ದೃಢಜ್ಯಂ|

04049010c ಅಪಾತಯದ್ಧ್ವಜಮಸ್ಯ ಪ್ರಮಥ್ಯ|

         ಚಿನ್ನಧ್ವಜಃ ಸೋಽಪ್ಯಪಯಾಜ್ಜವೇನ||

ಆಗ ಅರ್ಜುನನು ದೃಢ ಹೆದೆಯಿಂದಲೂ ಚಿನ್ನದ ತುದಿಗಳಿಂದಲೂ ಕೂಡಿದ ವಿಕರ್ಣನ ಬಿಲ್ಲನ್ನು ಸೆಳೆದುಕೊಂಡು ಅವನ ಬಾವುಟವನ್ನು ಚಿಂದಿಮಾಡಿ ಬೀಳಿಸಿದನು. ಬಾವುಟವು ಚಿಂದಿಯಾಗಲು ಆ ವಿಕರ್ಣನು ವೇಗವಾಗಿ ಪಲಾಯನಮಾಡಿದನು.

04049011a ತಂ ಶಾತ್ರವಾಣಾಂ ಗಣಬಾಧಿತಾರಂ|

         ಕರ್ಮಾಣಿ ಕುರ್ವಾಣಮಮಾನುಷಾಣಿ|

04049011c ಶತ್ರುಂತಪಃ ಕೋಪಮಮೃಷ್ಯಮಾಣಃ|

         ಸಮರ್ಪಯತ್ಕೂರ್ಮನಖೇನ ಪಾರ್ಥಂ||

ಆಮೇಲೆ ಶತ್ರುಂತಪನು ಕೋಪವನ್ನು ತಡೆಯಲಾರದೆ ಶತ್ರುಗಣಬಾಧಕ ಅತಿಮಾನುಷ ಕಾರ್ಯಗಳನ್ನು ಮಾಡಿದ ಆ ಪಾರ್ಥನ ಮೇಲೆ ಕೂರ್ಮನಖ ಬಾಣಗಳನ್ನು ಪ್ರಯೋಗಿಸತೊಡಗಿದನು.

04049012a ಸ ತೇನ ರಾಜ್ಞಾತಿರಥೇನ ವಿದ್ಧೋ|

         ವಿಗಾಹಮಾನೋ ಧ್ವಜಿನೀಂ ಕುರೂಣಾಂ|

04049012c ಶತ್ರುಂತಪಂ ಪಂಚಭಿರಾಶು ವಿದ್ಧ್ವಾ|

         ತತೋಽಸ್ಯ ಸೂತಂ ದಶಭಿರ್ಜಘಾನ||

ಆ ಅತಿರಥ ರಾಜನಿಂದ ಹೊಡೆಯಲ್ಪಟ್ಟು, ಕುರುಸೈನ್ಯದಲ್ಲಿ ಮುಳುಗಿಹೋದ ಅರ್ಜುನನು ಶತ್ರುಂತಪನನ್ನು ಬೇಗ ಐದು ಬಾಣಗಳಿಂದ ಭೇದಿಸಿ ಅನಂತರ ಅವನ ಸಾರಥಿಯನ್ನು ಹತ್ತು ಬಾಣಗಳಿಂದ ಕೊಂದನು.

04049013a ತತಃ ಸ ವಿದ್ಧೋ ಭರತರ್ಷಭೇಣ|

         ಬಾಣೇನ ಗಾತ್ರಾವರಣಾತಿಗೇನ|

04049013c ಗತಾಸುರಾಜೌ ನಿಪಪಾತ ಭೂಮೌ|

         ನಗೋ ನಗಾಗ್ರಾದಿವ ವಾತರುಗ್ಣಃ||

ಆಗ ಭರತಶ್ರೇಷ್ಠ ಅರ್ಜುನನು ಕವಚವನ್ನು ಭೇದಿಸಬಲ್ಲ ಬಾಣದಿಂದ ಆ ವಿಕರ್ಣನನ್ನು ಹೊಡೆಯಲು ಬಿರುಗಾಳಿಯಿಂದ ಮುರಿದು ಬೆಟ್ಟದ ತುದಿಯಿಂದ ಉರುಳುವ ಮರದಂತೆ ಅವನು ರಣರಂಗದಲ್ಲಿ ನೆಲದ ಮೇಲೆ ಸತ್ತುಬಿದ್ದನು.

04049014a ರಥರ್ಷಭಾಸ್ತೇ ತು ರಥರ್ಷಭೇಣ|

         ವೀರಾ ರಣೇ ವೀರತರೇಣ ಭಗ್ನಾಃ|

04049014c ಚಕಂಪಿರೇ ವಾತವಶೇನ ಕಾಲ|

         ಪ್ರಕಂಪಿತಾನೀವ ಮಹಾವನಾನಿ||

ಆ ರಥಿಕಶ್ರೇಷ್ಠ ವೀರರು ಆ ರಥಿಕಶ್ರೇಷ್ಠ ವೀರತರನಿಂದ ಯುದ್ಧದಲ್ಲಿ ಭಗ್ನರಾಗಿ ಪ್ರಳಯ ಕಾಲದ ಬಿರುಗಾಳಿಗೆ ಸಿಕ್ಕಿ ಕಂಪಿಸುವ ಮಹಾ ವನಗಳಂತೆ ಕಂಪಿಸಿದರು.

04049015a ಹತಾಸ್ತು ಪಾರ್ಥೇನ ನರಪ್ರವೀರಾ|

         ಭೂಮೌ ಯುವಾನಃ ಸುಷುಪುಃ ಸುವೇಷಾಃ|

04049015c ವಸುಪ್ರದಾ ವಾಸವತುಲ್ಯವೀರ್ಯಾಃ|

         ಪರಾಜಿತಾ ವಾಸವಜೇನ ಸಂಖ್ಯೇ|

04049015e ಸುವರ್ಣಕಾರ್ಷ್ಣಾಯಸವರ್ಮನದ್ಧಾ|

         ನಾಗಾ ಯಥಾ ಹೈಮವತಾಃ ಪ್ರವೃದ್ಧಾಃ||

ಐಶ್ವರ್ಯವನ್ನು ಕೊಡತಕ್ಕವರೂ, ದೇವೇಂದ್ರಸಮಾನ ವೀರ್ಯವುಳ್ಳವರೂ, ಸುವರ್ಣಖಚಿತ ಉಕ್ಕಿನ ಕವಚಗಳನ್ನು ತೊಟ್ಟವರೂ, ಒಳ್ಳೆಯ ವಸ್ತ್ರಧರಿಸಿದವರೂ, ವೀರಶ್ರೇಷ್ಠರೂ ಆದ ಆ ತರುಣರು ದೇವೇಂದ್ರಪುತ್ರ ಪಾರ್ಥನಿಂದ ಯುದ್ಧದಲ್ಲಿ ಪರಾಜಿತರೂ ಹತರೂ ಆಗಿ ಹಿಮಾಲಯದ ದೊಡ್ಡ ಆನೆಗಳಂತೆ ನೆಲದ ಮೇಲೊರಗಿದರು.

04049016a ತಥಾ ಸ ಶತ್ರೂನ್ಸಮರೇ ವಿನಿಘ್ನನ್|

         ಗಾಂಡೀವಧನ್ವಾ ಪುರುಷಪ್ರವೀರಃ|

04049016c ಚಚಾರ ಸಂಖ್ಯೇ ಪ್ರದಿಶೋ ದಿಶಶ್ಚ|

         ದಹನ್ನಿವಾಗ್ನಿರ್ವನಮಾತಪಾಂತೇ||

ಹಾಗೆ ಆ ಗಾಂಡೀವಧನುರ್ಧಾರಿ ವೀರಶ್ರೇಷ್ಠ ಅರ್ಜುನನು ಯುದ್ಧದಲ್ಲಿ ಶತ್ರುಗಳನ್ನು ಕೊಲ್ಲುತ್ತ ಬೇಸಗೆಯ ಕಡೆಯಲ್ಲಿ ವನವನ್ನು ಸುಡುವ ಬೆಂಕಿಯಂತೆ ರಣರಂಗದಲ್ಲಿ ದಿಕ್ಕು ದಿಕ್ಕುಗಳಲ್ಲಿಯೂ ಸಂಚರಿಸುತ್ತಿದ್ದನು.

04049017a ಪ್ರಕೀರ್ಣಪರ್ಣಾನಿ ಯಥಾ ವಸಂತೇ|

         ವಿಶಾತಯಿತ್ವಾತ್ಯನಿಲೋ ನುದನ್ಖೇ|

04049017c ತಥಾ ಸಪತ್ನಾನ್ವಿಕಿರನ್ಕಿರೀಟೀ|

         ಚಚಾರ ಸಂಖ್ಯೇಽತಿರಥೋ ರಥೇನ||

ವಸಂತದಲ್ಲಿ ಬಿರುಗಾಳಿಯು ಉದುರಿದ ಎಲೆಗಳನ್ನು ಆಗಸಕ್ಕೆ ಹಾರಿಸಿ ಚದುರಿಸುವಂತೆ ಆ ಅತಿರಥ ಅರ್ಜುನನು ರಥದಲ್ಲಿ ಕುಳಿತು ಶತ್ರುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಾ ರಣರಂಗದಲ್ಲಿ ಸಂಚರಿಸುತ್ತಿದ್ದನು.

04049018a ಶೋಣಾಶ್ವವಾಹಸ್ಯ ಹಯಾನ್ನಿಹತ್ಯ|

         ವೈಕರ್ತನಭ್ರಾತುರದೀನಸತ್ತ್ವಃ|

04049018c ಏಕೇನ ಸಂಗ್ರಾಮಜಿತಃ ಶರೇಣ|

         ಶಿರೋ ಜಹಾರಾಥ ಕಿರೀಟಮಾಲೀ||

ಆ ಮಹಾಸತ್ವ ಕಿರೀಟಧಾರಿ ಅರ್ಜುನನು ಕರ್ಣನ ಸೋದರ ಸಂಗ್ರಾಮಜಿತ್ತಿನ ಕೆಂಪು ರಥಕ್ಕೆ ಕಟ್ಟಿದ ಕುದುರೆಗಳನ್ನು ಕೊಂದು, ಅನಂತರ ಅವನ ತಲೆಯನ್ನು ಒಂದೇ ಬಾಣದಿಂದ ಹಾರಿಸಿದನು.

04049019a ತಸ್ಮಿನ್ ಹತೇ ಭ್ರಾತರಿ ಸೂತಪುತ್ರೋ|

         ವೈಕರ್ತನೋ ವೀರ್ಯಮಥಾದದಾನಃ|

04049019c ಪ್ರಗೃಹ್ಯ ದಂತಾವಿವ ನಾಗರಾಜೋ|

         ಮಹರ್ಷಭಂ ವ್ಯಾಘ್ರ ಇವಾಭ್ಯಧಾವತ್||

ತನ್ನ ಆ ಸೋದರನು ಹತನಾಗಲು ಸೂರ್ಯಪುತ್ರ ಕರ್ಣನು ತನ್ನ ಬಲವನ್ನು ಒಗ್ಗೂಡಿಸಿಕೊಂಡು ದಂತಗಳನ್ನು ಮುಂಚಾಚಿ ನುಗ್ಗುವ ಗಜರಾಜನಂತೆ, ದೊಡ್ಡ ಗೂಳಿಯತ್ತ ಧಾವಿಸುವ ಹುಲಿಯಂತೆ ಅರ್ಜುನನತ್ತ ಧಾವಿಸಿದನು.

04049020a ಸ ಪಾಂಡವಂ ದ್ವಾದಶಭಿಃ ಪೃಷತ್ಕೈರ್|

         ವೈಕರ್ತನಃ ಶೀಘ್ರಮುಪಾಜಘಾನ|

04049020c ವಿವ್ಯಾಧ ಗಾತ್ರೇಷು ಹಯಾಂಶ್ಚ ಸರ್ವಾನ್|

         ವಿರಾಟಪುತ್ರಂ ಚ ಶರೈರ್ನಿಜಘ್ನೇ||

ಕರ್ಣನು ಅರ್ಜುನನನ್ನು ಹನ್ನೆರಡು ಬಾಣಗಳಿಂದ ಶೀಘ್ರವಾಗಿ ಹೊಡೆದನು. ಎಲ್ಲ ಕುದುರೆಗಳ ಶರೀರಗಳಿಗೂ ಬಾಣಗಳಿಂದ ಹೊಡೆದನು. ಉತ್ತರನನ್ನೂ ಬಾಣಗಳಿಂದ ಘಾತಿಸಿದನು.

04049021a ಸ ಹಸ್ತಿನೇವಾಭಿಹತೋ ಗಜೇಂದ್ರಃ|

         ಪ್ರಗೃಹ್ಯ ಭಲ್ಲಾನ್ನಿಶಿತಾನ್ನಿಷಂಗಾತ್|

04049021c ಆಕರ್ಣಪೂರ್ಣಂ ಚ ಧನುರ್ವಿಕೃಷ್ಯ|

         ವಿವ್ಯಾಧ ಬಾಣೈರಥ ಸೂತಪುತ್ರಂ||

ಅರ್ಜುನನು ಸಾಮಾನ್ಯ ಆನೆಯಿಂದ ಪೆಟ್ಟುತಿಂದ ಗಜೇಂದ್ರನಂತೆ ಬತ್ತಳಿಕೆಯಿಂದ ಹರಿತ ಭಲ್ಲವೆಂಬ ಬಾಣಗಳನ್ನು ತೆಗೆದು ಕಿವಿಯವರೆಗೂ ಬಿಲ್ಲನ್ನೆಳೆದು ಕರ್ಣನನ್ನು ಆ ಬಾಣಗಳಿಂದ ಹೊಡೆದನು.

04049022a ಅಥಾಸ್ಯ ಬಾಹೂರುಶಿರೋಲಲಾಟಂ|

         ಗ್ರೀವಾಂ ರಥಾಂಗಾನಿ ಪರಾವಮರ್ದೀ|

04049022c ಸ್ಥಿತಸ್ಯ ಬಾಣೈರ್ಯುಧಿ ನಿರ್ಬಿಭೇದ|

         ಗಾಂಡೀವಮುಕ್ತೈರಶನಿಪ್ರಕಾಶೈಃ||

ಅನಂತರ ಆ ಶತ್ರುನಾಶಕನು ಯುದ್ಧದಲ್ಲಿ ಸಿಡಿಲಿನ ಕಾಂತಿಯ ಬಾಣಗಳನ್ನು ಗಾಂಡೀವದಿಂದ ಬಿಟ್ಟು ರಣದಲ್ಲಿದ್ದ ಕರ್ಣನ ತೋಳು, ತೊಡೆ, ತಲೆ, ಹಣೆ, ಕೊರಳುಗಳನ್ನೂ, ರಥದ ಚಕ್ರಗಳನ್ನೂ ಭೇದಿಸಿದನು.

04049023a ಸ ಪಾರ್ಥಮುಕ್ತೈರ್ವಿಶಿಖೈಃ ಪ್ರಣುನ್ನೋ|

         ಗಜೋ ಗಜೇನೇವ ಜಿತಸ್ತರಸ್ವೀ|

04049023c ವಿಹಾಯ ಸಂಗ್ರಾಮಶಿರಃ ಪ್ರಯಾತೋ|

         ವೈಕರ್ತನಃ ಪಾಂಡವಬಾಣತಪ್ತಃ||

ಪಾರ್ಥನು ಬಿಟ್ಟ ಬಾಣಗಳಿಂದ ಅಲ್ಲಾಡಿಹೋದ, ಪಾಂಡವ ಬಾಣತಪ್ತ ಕರ್ಣನು ಆನೆಗೆ ಸೋತುಹೋದ ಆನೆಯಂತೆ ಯುದ್ಧದ ಮಂಚೂಣಿಯನ್ನು ತೊರೆದು ಬೇಗ ಹೊರಟುಹೋದನು.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಕರ್ಣಾಪಯಾನೇ ಏಕೋನಪಂಚಾಶತ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಕರ್ಣಾಪಯಾನದಲ್ಲಿ ನಲ್ವತ್ತೊಂಭತ್ತನೆಯ ಅಧ್ಯಾಯವು.

Image result for flowers against white background

Comments are closed.