Virata Parva: Chapter 45

ವಿರಾಟ ಪರ್ವ: ಗೋಹರಣ ಪರ್ವ

೪೫

ದ್ರೌಣಿ ವಾಕ್ಯ

ಅಶ್ವತ್ಥಾಮನು ಆತ್ಮಶ್ಲಾಘನೆ ಮಾಡಿಕೊಳ್ಳುತ್ತಿದ್ದ ಕರ್ಣನನ್ನು ನಿಂದಿಸಿ, ಕುಪಿತನಾದ ಅರ್ಜುನನು ಎಲ್ಲವನ್ನೂ ನಾಶಮಾಡುತ್ತಾನೆಂದೂ, ತಾನು ಅವನೊಂದಿಗೆ ಯುದ್ಧಮಾಡುವುದಿಲ್ಲವೆಂದೂ ಹೇಳುವುದು (೧-೨೬).

04045001 ಅಶ್ವತ್ಥಾಮೋವಾಚ|

04045001a ನ ಚ ತಾವಜ್ಜಿತಾ ಗಾವೋ ನ ಚ ಸೀಮಾಂತರಂ ಗತಾಃ|

04045001c ನ ಹಾಸ್ತಿನಪುರಂ ಪ್ರಾಪ್ತಾಸ್ತ್ವಂ ಚ ಕರ್ಣ ವಿಕತ್ಥಸೇ||

ಅಶ್ವತ್ಥಾಮನು ಹೇಳಿದನು: “ಕರ್ಣ! ಗೋವುಗಳನ್ನು ಇನ್ನೂ ಗೆದ್ದುಕೊಂಡಿಲ್ಲ. ಅವು ಇನ್ನೂ ಗಡಿದಾಟಿಲ್ಲ ಮತ್ತು ಹಸ್ತಿನಾಪುರವನ್ನು ಸೇರಿಲ್ಲ. ಆಗಲೇ ನೀನು ಜಂಬ ಕೊಚ್ಚಿಕೊಳ್ಳುತ್ತಿರುವೆ!

04045002a ಸಂಗ್ರಾಮಾನ್ಸುಬಹೂನ್ಜಿತ್ವಾ ಲಬ್ಧ್ವಾ ಚ ವಿಪುಲಂ ಧನಂ|

04045002c ವಿಜಿತ್ಯ ಚ ಪರಾಂ ಭೂಮಿಂ ನಾಹುಃ ಕಿಂ ಚನ ಪೌರುಷಂ||

ಹಲವಾರು ಯುದ್ಧಗಳನ್ನು ಗೆದ್ದು ವಿಪುಲ ಧನವನ್ನು ಗಳಿಸಿ ಶತ್ರುರಾಜ್ಯವನ್ನು ಜಯಿಸಿದರೂ ನಿಜವಾದ ಶೂರರು ಪೌರುಷವನ್ನು ಸ್ವಲ್ಪವೂ ಹೇಳಿಕೊಳ್ಳುವುದಿಲ್ಲ.

04045003a ಪಚತ್ಯಗ್ನಿರವಾಕ್ಯಸ್ತು ತೂಷ್ಣೀಂ ಭಾತಿ ದಿವಾಕರಃ|

04045003c ತೂಷ್ಣೀಂ ಧಾರಯತೇ ಲೋಕಾನ್ವಸುಧಾ ಸಚರಾಚರಾನ್||

ಅಗ್ನಿ ಮಾತಿಲ್ಲದೇ ಬೇಯಿಸುತ್ತಾನೆ, ಸೂರ್ಯ ಸದ್ದಿಲ್ಲದೇ ಬೆಳಗುತ್ತಾನೆ. ಭೂಮಿ ಸದ್ದಿಲ್ಲದೇ ಸಚರಾಚರ ಸೃಷ್ಟಿಯನ್ನು ಹೊರುತ್ತದೆ.

04045004a ಚಾತುರ್ವರ್ಣ್ಯಸ್ಯ ಕರ್ಮಾಣಿ ವಿಹಿತಾನಿ ಮನೀಷಿಭಿಃ|

04045004c ಧನಂ ಯೈರಧಿಗಂತವ್ಯಂ ಯಚ್ಚ ಕುರ್ವನ್ನ ದುಷ್ಯತಿ||

ವಿದ್ವಾಂಸರು ನಾಲ್ಕು ವರ್ಣಗಳಿಗೂ ಅವು ಮಾಡಬೇಕಾದ ಕರ್ಮಗಳನ್ನು ವಿಧಿಸಿದ್ದಾರೆ. ಅವುಗಳನ್ನು ಅ ವರ್ಣಗಳು ಯಾವುದೇ ದೋಷಕ್ಕೊಳಗಾಗದಂತೆ ಆಚರಿಸಿ ಧನವನ್ನು ಪಡೆಯಬೇಕು.

04045005a ಅಧೀತ್ಯ ಬ್ರಾಹ್ಮಣೋ ವೇದಾನ್ಯಾಜಯೇತ ಯಜೇತ ಚ|

04045005c ಕ್ಷತ್ರಿಯೋ ಧನುರಾಶ್ರಿತ್ಯ ಯಜೇತೈವ ನ ಯಾಜಯೇತ್|

04045005e ವೈಶ್ಯೋಽಧಿಗಮ್ಯ ದ್ರವ್ಯಾಣಿ ಬ್ರಹ್ಮಕರ್ಮಾಣಿ ಕಾರಯೇತ್||

ಬ್ರಾಹ್ಮಣನು ವೇದಾಧ್ಯಯಮಾಡಿ ಯಜ್ಞಗಳನ್ನು ಮಾಡಬೇಕು ಮತ್ತು ಮಾಡಿಸಬೇಕು. ಕ್ಷತ್ರಿಯನು ಧನುಸ್ಸನ್ನು ಆಶ್ರಯಿಸಿ ಯಜ್ಞಗಳನ್ನು ಸ್ವತಃ ಮಾಡಬೇಕು. ಮಾಡಿಸತಕ್ಕದ್ದಲ್ಲ. ವೈಶ್ಯನು ದ್ರವ್ಯವನ್ನು ಆರ್ಜಿಸಿ, ಬ್ರಹ್ಮಕರ್ಮಗಳನ್ನು ಮಾಡಿಸಬೇಕು.

04045006a ವರ್ತಮಾನಾ ಯಥಾಶಾಸ್ತ್ರಂ ಪ್ರಾಪ್ಯ ಚಾಪಿ ಮಹೀಮಿಮಾಂ|

04045006c ಸತ್ಕುರ್ವಂತಿ ಮಹಾಭಾಗಾ ಗುರೂನ್ಸುವಿಗುಣಾನಪಿ||

ಮಹಾಭಾಗ್ಯಶಾಲಿಗಳಾದವರು ಶಾಸ್ತ್ರಾನುಗುಣವಾಗಿ ನಡೆದುಕೊಳ್ಳುತ್ತ ಈ ಭೂಮಿಯನ್ನು ಪಡೆದು ಕೂಡ ಗುರುಗಳನ್ನು ಗುಣವಿಹೀನರಾಗಿದ್ದರೂ ಸತ್ಕರಿಸುತ್ತಾರೆ.

04045007a ಪ್ರಾಪ್ಯ ದ್ಯೂತೇನ ಕೋ ರಾಜ್ಯಂ ಕ್ಷತ್ರಿಯಸ್ತೋಷ್ಟುಮರ್ಹತಿ|

04045007c ತಥಾ ನೃಶಂಸರೂಪೇಣ ಯಥಾನ್ಯಃ ಪ್ರಾಕೃತೋ ಜನಃ||

ಬೇರೆ ಯಾವ ಕ್ಷತ್ರಿಯನು ತಾನೇ ಸಾಮಾನ್ಯನಂತೆ ಕ್ರೂರ ಜೂಜಿನಿಂದ ರಾಜ್ಯವನ್ನು ಪಡೆದು ಸಂತೋಷಪಡಬಲ್ಲ?

04045008a ತಥಾವಾಪ್ತೇಷು ವಿತ್ತೇಷು ಕೋ ವಿಕತ್ಥೇದ್ವಿಚಕ್ಷಣಃ|

04045008c ನಿಕೃತ್ಯಾ ವಂಚನಾಯೋಗೈಶ್ಚರನ್ವೈತಂಸಿಕೋ ಯಥಾ||

ಈ ರೀತಿಯಲ್ಲಿ ಕಟುಕತನದಿಂದ ವಂಚನೆಗಳ ಆಶ್ರಯದಿಂದ ಧನವನ್ನು ಸಂಪಾದಿಸಿ ಯಾವ ವಿಚಕ್ಷಣನು ತಾನೇ ಬೇಡನಂತೆ ಜಂಬ ಕೊಚ್ಚುತ್ತಾನೆ?

04045009a ಕತಮದ್ದ್ವೈರಥಂ ಯುದ್ಧಂ ಯತ್ರಾಜೈಷೀರ್ಧನಂಜಯಂ|

04045009c ನಕುಲಂ ಸಹದೇವಂ ಚ ಧನಂ ಯೇಷಾಂ ತ್ವಯಾ ಹೃತಂ||

ಯಾವ ದ್ವಂದ್ವರಥಯುದ್ಧದಲ್ಲಿ ನೀನು ಧನಂಜಯನನ್ನಾಗಲೀ, ನಕುಲನನ್ನಾಗಲೀ ಸಹದೇವನನ್ನಾಗಲೀ ಜಯಿಸಿದ್ದೀಯೆ? ಆದರೆ ಅವರ ಸಂಪತ್ತನ್ನು ನೀನು ಅಪಹರಿಸಿರುವೆ.

04045010a ಯುಧಿಷ್ಠಿರೋ ಜಿತಃ ಕಸ್ಮಿನ್ಭೀಮಶ್ಚ ಬಲಿನಾಂ ವರಃ|

04045010c ಇಂದ್ರಪ್ರಸ್ಥಂ ತ್ವಯಾ ಕಸ್ಮಿನ್ಸಂಗ್ರಾಮೇ ನಿರ್ಜಿತಂ ಪುರಾ||

ಯಾವ ಯುದ್ಧದಲ್ಲಿ ನೀನು ಯುಧಿಷ್ಠಿರನನ್ನೂ ಬಲಶಾಲಿಗಳಲ್ಲಿ ಶ್ರೇಷ್ಠ ಭೀಮನನ್ನೂ ಗೆದ್ದಿದ್ದೀಯೆ? ಯಾವುದರಿಂದ ಹಿಂದೆ ಇಂದ್ರಪ್ರಸ್ಥವನ್ನು ಜಯಿಸಿದೆ?

04045011a ತಥೈವ ಕತಮಂ ಯುದ್ಧಂ ಯಸ್ಮಿನ್ಕೃಷ್ಣಾ ಜಿತಾ ತ್ವಯಾ|

04045011c ಏಕವಸ್ತ್ರಾ ಸಭಾಂ ನೀತಾ ದುಷ್ಟಕರ್ಮನ್ರಜಸ್ವಲಾ||

ಅಂತೆಯೇ ಕೃಷ್ಣೆಯನ್ನು ನೀನು ಗೆದ್ದುದು ಯಾವ ಯುದ್ಧದಲ್ಲಿ? ದುಷ್ಟಕರ್ಮಿ! ಏಕವಸ್ತ್ರವುಳ್ಳವಳೂ ರಜಸ್ವಲೆಯೂ ಆದ ಅವಳನ್ನು ಸಭೆಗೆ ಎಳೆದು ತರಲಾಯಿತು.

04045012a ಮೂಲಮೇಷಾಂ ಮಹತ್ಕೃತ್ತಂ ಸಾರಾರ್ಥೀ ಚಂದನಂ ಯಥಾ|

04045012c ಕರ್ಮ ಕಾರಯಿಥಾಃ ಶೂರ ತತ್ರ ಕಿಂ ವಿದುರೋಽಬ್ರವೀತ್||

ಸಾರವನ್ನು ಬಯಸುವವನು ಚಂದನ ವೃಕ್ಷವನ್ನು ಕಡಿಯುವಂತೆ ನೀನು ಅವರ ದೊಡ್ಡ ಬೇರನ್ನೇ ಕತ್ತರಿಸಿಹಾಕಿದೆ. ಶೂರ! ಆ ಕಾರ್ಯವನ್ನು ನೀನು ಮಾಡಿಸಿದೆ. ಆಗ ವಿದುರನು ಹೇಳಿದ್ದೇನು?

04045013a ಯಥಾಶಕ್ತಿ ಮನುಷ್ಯಾಣಾಂ ಶಮಮಾಲಕ್ಷಯಾಮಹೇ|

04045013c ಅನ್ಯೇಷಾಂ ಚೈವ ಸತ್ತ್ವಾನಾಮಪಿ ಕೀಟಪಿಪೀಲಿಕೇ||

ಮನುಷ್ಯರು ಮತ್ತು ಇತರ ಜೀವಿಗಳಲ್ಲೂ ಹುಳು ಮತ್ತು ಇರುವೆಗಳಲ್ಲಿಯೂ ಸಾಧ್ಯವಾದ ಮಟ್ಟಿಗೆ ಸಹನೆ ಕಂಡುಬರುತ್ತದೆ.

04045014a ದ್ರೌಪದ್ಯಾಸ್ತಂ ಪರಿಕ್ಲೇಶಂ ನ ಕ್ಷಂತುಂ ಪಾಂಡವೋಽರ್ಹತಿ|

04045014c ದುಃಖಾಯ ಧಾರ್ತರಾಷ್ಟ್ರಾಣಾಂ ಪ್ರಾದುರ್ಭೂತೋ ಧನಂಜಯಃ||

ಆದರೆ ದ್ರೌಪದಿಯ ಆ ಪರಿಕ್ಲೇಶವನ್ನು ಪಾಂಡವನು ಕ್ಷಮಿಸಲಾರನು. ಧನಂಜಯನು ಧೃತರಾಷ್ಟ್ರಪುತ್ರರಿಗೆ ದುಃಖವನ್ನುಂಟುಮಾಡುವುದಕ್ಕಾಗಿಯೇ ಬಂದಿದ್ದಾನೆ.

04045015a ತ್ವಂ ಪುನಃ ಪಂಡಿತೋ ಭೂತ್ವಾ ವಾಚಂ ವಕ್ತುಮಿಹೇಚ್ಛಸಿ|

04045015c ವೈರಾಂತಕರಣೋ ಜಿಷ್ಣುರ್ನ ನಃ ಶೇಷಂ ಕರಿಷ್ಯತಿ||

ಮತ್ತೆ ನೀನು ಪಂಡಿತನಾಗಿ ಇಲ್ಲಿ ಮಾತನಾಡಬಯಸುತ್ತಿರುವೆ. ವೈರವನ್ನು ಕೊನೆಗೊಳಿಸುವ ಅರ್ಜುನನು ನಮ್ಮಲ್ಲಿ ಯಾರನ್ನೂ ಉಳಿಸುವುದಿಲ್ಲ.

04045016a ನೈಷ ದೇವಾನ್ನ ಗಂಧರ್ವಾನ್ನಾಸುರಾನ್ನ ಚ ರಾಕ್ಷಸಾನ್|

04045016c ಭಯಾದಿಹ ನ ಯುಧ್ಯೇತ ಕುಂತೀಪುತ್ರೋ ಧನಂಜಯಃ||

ದೇವತೆಗಳೊಡೆಯನಾಗಲೀ ಗಂಧರ್ವರೊಡೆಯನಾಗಲೀ ಅಸುರರೊಡೆಯನಾಗಲೀ, ರಾಕ್ಷಸರೊಡೆಯನಾಗಲೀ ಕುಂತೀಪುತ್ರ ಈ ಧನಂಜಯನು ಹೆದರಿ ಯುದ್ಧಮಾಡದಿರುವುದಿಲ್ಲ.

04045017a ಯಂ ಯಮೇಷೋಽಭಿಸಂಕ್ರುದ್ಧಃ ಸಂಗ್ರಾಮೇಽಭಿಪತಿಷ್ಯತಿ|

04045017c ವೃಕ್ಷಂ ಗರುಡವೇಗೇನ ವಿನಿಹತ್ಯ ತಮೇಷ್ಯತಿ||

ಇವನು ಯುದ್ಧದಲ್ಲಿ ಕ್ರುದ್ಧನಾಗಿ ಯಾರ ಯಾರ ಮೇಲೆ ಬೀಳುತ್ತಾನೋ ಅವರನ್ನು ಗರುಡನ ವೇಗದಿಂದ ಮರವನ್ನು ಹೇಗೋ ಹಾಗೆ ಹೊಡೆದು ಹೋಗುತ್ತಾನೆ.

04045018a ತ್ವತ್ತೋ ವಿಶಿಷ್ಟಂ ವೀರ್ಯೇಣ ಧನುಷ್ಯಮರರಾಟ್ಸಮಂ|

04045018c ವಾಸುದೇವಸಮಂ ಯುದ್ಧೇ ತಂ ಪಾರ್ಥಂ ಕೋ ನ ಪೂಜಯೇತ್||

ಶೌರ್ಯದಲ್ಲಿ ನಿನಗಿಂತ ಮೇಲಾದ, ಬಿಲ್ಗಾರಿಕೆಯಲ್ಲಿ ದೇವೇಂದ್ರನಿಗೆ ಸಮಾನನಾದ, ಯುದ್ಧದಲ್ಲಿ ವಾಸುದೇವನಿಗೆಣೆಯಾದ ಆ ಪಾರ್ಥನನ್ನು ಯಾರು ತಾನೇ ಗೌರವಿಸುವುದಿಲ್ಲ?

04045019a ದೈವಂ ದೈವೇನ ಯುಧ್ಯೇತ ಮಾನುಷೇಣ ಚ ಮಾನುಷಂ|

04045019c ಅಸ್ತ್ರೇಣಾಸ್ತ್ರಂ ಸಮಾಹನ್ಯಾತ್ಕೋಽರ್ಜುನೇನ ಸಮಃ ಪುಮಾನ್||

ದೈವಾಸ್ತ್ರವನ್ನು ದೈವಾಸ್ತ್ರದಿಂದ, ಮಾನುಷಾಸ್ತ್ರವನ್ನು ಮಾನುಷಾಸ್ತ್ರದಿಂದ ನಿಗ್ರಹಿಸುವ ಅರ್ಜುನನಿಗೆ ಸಮಾನ ಗಂಡಸು ಯಾರು?

04045020a ಪುತ್ರಾದನಂತರಃ ಶಿಷ್ಯ ಇತಿ ಧರ್ಮವಿದೋ ವಿದುಃ|

04045020c ಏತೇನಾಪಿ ನಿಮಿತ್ತೇನ ಪ್ರಿಯೋ ದ್ರೋಣಸ್ಯ ಪಾಂಡವಃ||

ಮಗನಿಗೂ ಶಿಷ್ಯನಿಗೂ ಅಂತರವಿಲ್ಲವೆಂದು ಧರ್ಮಜ್ಞರು ತಿಳಿಯುತ್ತಾರೆ. ಈ ಕಾರಣದಿಂದಲೂ ಪಾಂಡವ ಅರ್ಜುನನು ದ್ರೋಣನಿಗೆ ಪ್ರಿಯನಾಗಿದ್ದಾನೆ.

04045021a ಯಥಾ ತ್ವಮಕರೋರ್ದ್ಯೂತಮಿಂದ್ರಪ್ರಸ್ಥಂ ಯಥಾಹರಃ|

04045021c ಯಥಾನೈಷೀಃ ಸಭಾಂ ಕೃಷ್ಣಾಂ ತಥಾ ಯುಧ್ಯಸ್ವ ಪಾಂಡವಂ||

ನೀನು ಹೇಗೆ ಜೂಜನ್ನಾಡಿದೆಯೋ, ಇಂದ್ರಪ್ರಸ್ಥವನ್ನು ಹೇಗೆ ಕಿತ್ತುಕೊಂಡೆಯೋ, ಕೃಷ್ಣೆಯನ್ನು ಹೇಗೆ ಸಭೆಗೆಳೆದುತಂದೆಯೋ ಹಾಗೆಯೇ ಅರ್ಜುನನೊಡನೆ ಯುದ್ಧ ಮಾಡು!

04045022a ಅಯಂ ತೇ ಮಾತುಲಃ ಪ್ರಾಜ್ಞಃ ಕ್ಷತ್ರಧರ್ಮಸ್ಯ ಕೋವಿದಃ|

04045022c ದುರ್ದ್ಯೂತದೇವೀ ಗಾಂಧಾರಃ ಶಕುನಿರ್ಯುಧ್ಯತಾಮಿಹ||

ಪ್ರಾಜ್ಞನೂ, ಕ್ಷತ್ರಧರ್ಮದಲ್ಲಿ ಕೋವಿದನೂ, ಕೆಟ್ಟ ಜೂಜಿನಲ್ಲಿ ಚತುರನೂ, ಗಾಂಧರದೇಶವನೂ ಆದ ಈ ನಿನ್ನ ಮಾವ ಶಕುನಿಯು ಈಗ ಯುದ್ಧಮಾಡಲಿ.

04045023a ನಾಕ್ಷಾನ್ ಕ್ಷಿಪತಿ ಗಾಂಡೀವಂ ನ ಕೃತಂ ದ್ವಾಪರಂ ನ ಚ|

04045023c ಜ್ವಲತೋ ನಿಶಿತಾನ್ಬಾಣಾಂಸ್ತೀಕ್ಷ್ಣಾನ್ ಕ್ಷಿಪತಿ ಗಾಂಡಿವಂ||

ಗಾಂಡೀವ ಧನುಸ್ಸು ಕೃತ-ದ್ವಾಪರವೆಂಬ ದಾಳಗಳನ್ನು ಎಸೆಯುವುದಿಲ್ಲ. ಅದು ನಿಶಿತವೂ ತೀಕ್ಷ್ಣವೂ ಆದ ಉರಿಯುವ ಬಾಣಗಳನ್ನು ಎಸೆಯುತ್ತದೆ.

04045024a ನ ಹಿ ಗಾಂಡೀವನಿರ್ಮುಕ್ತಾ ಗಾರ್ಧ್ರಪತ್ರಾಃ ಸುತೇಜನಾಃ|

04045024c ಅಂತರೇಷ್ವವತಿಷ್ಠಂತಿ ಗಿರೀಣಾಮಪಿ ದಾರಣಾಃ||

ಗಾಂಡೀವದಿಂದ ಬಿಡಲಾಗುವ ಹದ್ದಿನ ಗರಿಗಳನ್ನುಳ್ಳ ಪರ್ವತಗಳನ್ನೂ ಸೀಳಿಹಾಕುವ ತೀಕ್ಷ್ಣ ಬಾಣಗಳು ಮಧ್ಯದಲ್ಲಿಯೇ ನಿಂತುಬಿಡುವುದಿಲ್ಲ.

04045025a ಅಂತಕಃ ಶಮನೋ ಮೃತ್ಯುಸ್ತಥಾಗ್ನಿರ್ವಡವಾಮುಖಃ|

04045025c ಕುರ್ಯುರೇತೇ ಕ್ವ ಚಿಚ್ಚೇಷಂ ನ ತು ಕ್ರುದ್ಧೋ ಧನಂಜಯಃ||

ಎಲ್ಲವನ್ನೂ ನಾಶಮಾಡುವ ಅಂತಕ ಮೃತ್ಯು ಮತ್ತು ಬಡಬಾಗ್ನಿ ಇವರು ಸ್ವಲ್ಪವನ್ನಾದರೂ ಉಳಿಸುತ್ತಾರೆ. ಆದರೆ ಕೋಪಗೊಂಡ ಧನಂಜಯನು ಏನನ್ನೂ ಉಳಿಸುವುದಿಲ್ಲ.

04045026a ಯುಧ್ಯತಾಂ ಕಾಮಮಾಚಾರ್ಯೋ ನಾಹಂ ಯೋತ್ಸ್ಯೇ ಧನಂಜಯಂ|

04045026c ಮತ್ಸ್ಯೋ ಹ್ಯಸ್ಮಾಭಿರಾಯೋಧ್ಯೋ ಯದ್ಯಾಗಚ್ಛೇದ್ಗವಾಂ ಪದಂ||

ಇಷ್ಟವಿದ್ದರೆ ಆಚಾರ್ಯರು ಯುದ್ಧಮಾಡಲಿ. ನಾನು ಧನಂಜಯನೊಡನೆ ಯುದ್ಧಮಾಡುವುದಿಲ್ಲ. ಮತ್ಸ್ಯರಾಜನೇನಾದರೂ ಹಸುಗಳ ಹಾದಿಗೆ ಬಂದರೆ ಅವನೊಡನೆ ನಾವು ಹೋರಾಡಬೇಕು.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ದ್ರೌಣಿವಾಕ್ಯೇ ಪಂಚಚತ್ವಾರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ದ್ರೌಣಿವಾಕ್ಯದಲ್ಲಿ ನಲ್ವತ್ತೈದನೆಯ ಅಧ್ಯಾಯವು.

Related image

Comments are closed.