Virata Parva: Chapter 4

ವಿರಾಟ ಪರ್ವ: ವೈರಾಟ ಪರ್ವ 

ಧೌಮ್ಯನ ಉಪದೇಶ

ರಾಜನ ಅರಮನೆಯಲ್ಲಿ/ಆಸ್ಥಾನದಲ್ಲಿ ಸಾಮಾನ್ಯನಾಗಿ ಹೇಗಿರಬೇಕಾಗುತ್ತದೆ ಎಂದು ಧೌಮ್ಯನು ಪಾಂಡವರಿಗೆ ಉಪದೇಶಿಸುವುದು (೧-೪೪). ಅಗ್ನಿಕಾರ್ಯವನ್ನು ಮಾಡಿ ಬ್ರಾಹ್ಮಣರನ್ನು ನಮಸ್ಕರಿಸಿ ಪಾಂಡವರು ಹೊರಟಿದ್ದಿದು (೪೫-೪೯).

04004001 ಯುಧಿಷ್ಠಿರ ಉವಾಚ|

04004001a ಕರ್ಮಾಣ್ಯುಕ್ತಾನಿ ಯುಷ್ಮಾಭಿರ್ಯಾನಿ ತಾನಿ ಕರಿಷ್ಯಥ|

04004001c ಮಮ ಚಾಪಿ ಯಥಾಬುದ್ಧಿ ರುಚಿತಾನಿ ವಿನಿಶ್ಚಯಾತ್||

ಯುಧಿಷ್ಠಿರನು ಹೇಳಿದನು: “ನೀವು ಹೇಳಿದ ಕೆಲಸಗಳನ್ನೇ ಮಾಡಿ. ನನಗೆ ಕೂಡ ಆಲೋಚಿಸಿದ ಈ ವಿನಿಶ್ಚಯವು ಹಿಡಿಸುತ್ತದೆ.

04004002a ಪುರೋಹಿತೋಽಯಮಸ್ಮಾಕಮಗ್ನಿಹೋತ್ರಾಣಿ ರಕ್ಷತು|

04004002c ಸೂದಪೌರೋಗವೈಃ ಸಾರ್ಧಂ ದ್ರುಪದಸ್ಯ ನಿವೇಶನೇ||

ಈ ನಮ್ಮ ಪುರೋಹಿತನು ಅಡುಗೆಯವರೊಡನೆ ದ್ರುಪದನ ಅರಮನೆಯನ್ನು ಸೇರಿ ಅಗ್ನಿಹೋತ್ರಗಳನ್ನು ರಕ್ಷಿಸಲಿ.

04004003a ಇಂದ್ರಸೇನಮುಖಾಶ್ಚೇಮೇ ರಥಾನಾದಾಯ ಕೇವಲಾನ್|

04004003c ಯಾಂತು ದ್ವಾರವತೀಂ ಶೀಘ್ರಮಿತಿ ಮೇ ವರ್ತತೇ ಮತಿಃ||

ಇಂದ್ರಸೇನಮೊದಲಾದವರು ಬರಿದಾದ ರಥಗಳನ್ನು ತೆಗೆದುಕೊಂಡು ಶೀಘ್ರವೇ ದ್ವಾರವತಿಗೆ ಹೋಗಲಿ ಎಂದು ನನಗನ್ನಿಸುತ್ತದೆ.

04004004a ಇಮಾಶ್ಚ ನಾರ್ಯೋ ದ್ರೌಪದ್ಯಾಃ ಸರ್ವಶಃ ಪರಿಚಾರಿಕಾಃ|

04004004c ಪಾಂಚಾಲಾನೇವ ಗಚ್ಛಂತು ಸೂದಪೌರೋಗವೈಃ ಸಹ||

ದ್ರೌಪದಿಯ ಸರ್ವ ಸ್ತ್ರೀ ಪರಿಚಾರಿಕೆಯರೂ ಸಹ ಅಡುಗೆಯವರೊಂದಿಗೆ ಪಾಂಚಾಲಕ್ಕೇ ಹೋಗಲಿ.

04004005a ಸರ್ವೈರಪಿ ಚ ವಕ್ತವ್ಯಂ ನ ಪ್ರಜ್ಞಾಯಂತ ಪಾಂಡವಾಃ|

04004005c ಗತಾ ಹ್ಯಸ್ಮಾನಪಾಕೀರ್ಯ ಸರ್ವೇ ದ್ವೈತವನಾದಿತಿ||

ಎಲ್ಲರೂ ಕೂಡ ಪಾಂಡವರು ಎಲ್ಲಿದ್ದಾರೆಂದು ನಮಗೆ ಗೊತ್ತಿಲ್ಲ. ಅವರೆಲ್ಲರೂ ನಮ್ಮನ್ನು ತೊರೆದು ದ್ವೈತವನದಿಂದ ಹೊರಟು ಹೋದರು ಎಂದು ಹೇಳಬೇಕು.”

04004006 ಧೌಮ್ಯ ಉವಾಚ|

04004006a ವಿದಿತೇ ಚಾಪಿ ವಕ್ತವ್ಯಂ ಸುಹೃದ್ಭಿರನುರಾಗತಃ|

04004006c ಅತೋಽಹಮಪಿ ವಕ್ಷ್ಯಾಮಿ ಹೇತುಮಾತ್ರಂ ನಿಬೋಧತ||

ಧೌಮ್ಯನು ಹೇಳಿದನು: “ತಿಳಿದಿದ್ದರೂ ಸ್ನೇಹಿತರು ಪ್ರೀತಿಯಿಂದ ಹೇಳುತ್ತಾರೆ. ಹಾಗೆ ನಾನು ಕೂಡ ಹೇತುಮಾತ್ರವಾಗಿ ಹೇಳುತ್ತೇನೆ. ತಿಳಿದುಕೊಳ್ಳಿ.

04004007a ಹಂತೇಮಾಂ ರಾಜವಸತಿಂ ರಾಜಪುತ್ರಾ ಬ್ರವೀಮಿ ವಃ|

04004007c ಯಥಾ ರಾಜಕುಲಂ ಪ್ರಾಪ್ಯ ಚರನ್ಪ್ರೇಷ್ಯೋ ನ ರಿಷ್ಯತಿ||

ರಾಜಪುತ್ರರೇ! ಅರಮನೆಯ ಸೇವಕನಾದವನು ಅರಮನೆಯಲ್ಲಿದ್ದುಕೊಂಡು ವಿಪತ್ತಿಗೀಡಾಗದಂತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ನಿಮಗೆ ಹೇಳುತ್ತೇನೆ.

04004008a ದುರ್ವಸಂ ತ್ವೇವ ಕೌರವ್ಯಾ ಜಾನತಾ ರಾಜವೇಶ್ಮನಿ|

04004008c ಅಮಾನಿತೈಃ ಸುಮಾನಾರ್ಹಾ ಅಜ್ಞಾತೈಃ ಪರಿವತ್ಸರಂ||

ಸುಮನಾರ್ಹ ಕೌರವರೇ! ನೀವು ಬಲ್ಲವರಿಗೆ ಅಜ್ಞಾತರಾಗಿ ರಾಜಗೃಹದಲ್ಲಿ ಒಂದು ವರ್ಷ ವಾಸ ಮಾಡುವುದು ಕಷ್ಟವೇ ಸರಿ.

04004009a ದಿಷ್ಟದ್ವಾರೋ ಲಭೇದ್ದ್ವಾರಂ ನ ಚ ರಾಜಸು ವಿಶ್ವಸೇತ್|

04004009c ತದೇವಾಸನಮನ್ವಿಚ್ಛೇದ್ಯತ್ರ ನಾಭಿಷಜೇತ್ಪರಃ||

ಬಾಗಿಲಲ್ಲಿ ಅಪ್ಪಣೆಪಡೆದು ಹೋಗಬೇಕು. ರಾಜನಲ್ಲಿ ವಿಶ್ವಾಸವಿಡಬಾರದು. ಬೇರೆಯವರು ಬಯಸದ ಆಸನವನ್ನೇ ಬಯಸಬೇಕು.

04004010a ನಾಸ್ಯ ಯಾನಂ ನ ಪರ್ಯಂಕಂ ನ ಪೀಠಂ ನ ಗಜಂ ರಥಂ|

04004010c ಆರೋಹೇತ್ಸಮ್ಮತೋಽಸ್ಮೀತಿ ಸ ರಾಜವಸತಿಂ ವಸೇತ್||

ಅವನಿಗೆ ಸಮ್ಮತನೆಂದು ತಿಳಿದು ಅವನ ವಾಹನವನ್ನಾಗಲೀ, ಹಾಸಿಗೆಯನ್ನಾಗಲೀ, ಪೀಠವನ್ನಾಗಲೀ, ಗಜವನ್ನಾಗಲೀ, ರಥವನ್ನಾಗಲೀ ಏರದಿರುವವನು ರಾಜನ ಅರಮನೆಯಲ್ಲಿ ವಾಸಿಸಬಹುದು.

04004011a ಅಥ ಯತ್ರೈನಮಾಸೀನಂ ಶಂಕೇರನ್ದುಷ್ಟಚಾರಿಣಃ|

04004011c ನ ತತ್ರೋಪವಿಶೇಜ್ಜಾತು ಸ ರಾಜವಸತಿಂ ವಸೇತ್||

ಮತ್ತು ಎಲ್ಲಿ ಕುಳಿತುಕೊಂಡರೆ ದುಷ್ಟಚಾರಿಗಳು ಸಂಶಯಪಡುತ್ತಾರೋ ಅಲ್ಲಿ ಕುಳಿತುಕೊಳ್ಳದೇ ಇರುವವನು ರಾಜವಸತಿಯಲ್ಲಿ ವಾಸಿಸಬಹುದು.

04004012a ನ ಚಾನುಶಿಷ್ಯೇದ್ರಾಜಾನಮಪೃಚ್ಛಂತಂ ಕದಾ ಚನ|

04004012c ತೂಷ್ಣೀಂ ತ್ವೇನಮುಪಾಸೀತ ಕಾಲೇ ಸಮಭಿಪೂಜಯನ್||

ಕೇಳದೇ ರಾಜನಿಗೆ ಉಪದೇಶವನ್ನು ನೀಡಬಾರದು. ಕಾಲೋಚಿತವಾಗಿ ಗೌರವಿಸುತ್ತಾ, ಸುಮ್ಮನೇ ಅವನ ಸೇವೆ ಮಾಡುತ್ತಿರಬೇಕು.

04004013a ಅಸೂಯಂತಿ ಹಿ ರಾಜಾನೋ ಜನಾನನೃತವಾದಿನಃ|

04004013c ತಥೈವ ಚಾವಮನ್ಯಂತೇ ಮಂತ್ರಿಣಂ ವಾದಿನಂ ಮೃಷಾ||

ಸುಳ್ಳುಹೇಳುವ ಜನರನ್ನು ರಾಜರು ಸಹಿಸುವುದಿಲ್ಲ. ಹಾಗೆಯೇ ಸುಳ್ಳುಹೇಳುವ ಮಂತ್ರಿಗಳನ್ನು ಅವರು ಅವಮಾನಿಸುತ್ತಾರೆ.

04004014a ನೈಷಾಂ ದಾರೇಷು ಕುರ್ವೀತ ಮೈತ್ರೀಂ ಪ್ರಾಜ್ಞಃ ಕಥಂ ಚನ|

04004014c ಅಂತಃಪುರಚರಾ ಯೇ ಚ ದ್ವೇಷ್ಟಿ ಯಾನಹಿತಾಶ್ಚ ಯೇ||

ಪ್ರಾಜ್ಞರು ಯಾವಕಾರಣಕ್ಕೂ ಇವರ ಪತ್ನಿಯರೊಂದಿಗಾಗಲೀ ಅಂತಃಪುರದ ಜನರೊಡನೆಯಾಗಲೀ, ದ್ವೇಷಿಗಳೊಡನೆಯಾಗಲೀ, ಅಹಿತರೊಡನೆಯಾಗಲೀ ಮೈತ್ರಿಯನ್ನು ಮಾಡುವುದಿಲ್ಲ.

04004015a ವಿದಿತೇ ಚಾಸ್ಯ ಕುರ್ವೀತ ಕಾರ್ಯಾಣಿ ಸುಲಘೂನ್ಯಪಿ|

04004015c ಏವಂ ವಿಚರತೋ ರಾಜ್ಞೋ ನ ಕ್ಷತಿರ್ಜಾಯತೇ ಕ್ವ ಚಿತ್||

ಅತ್ಯಂತ ಹಗುರಾದ ಕೆಲಸವನ್ನೂ ಕೂಡ ಅವನಿಗೆ ತಿಳಿಯುವಂತೆಯೇ ಮಾಡಬೇಕು. ರಾಜನೊಡನೆ ಹೀಗೆ ನಡೆದುಕೊಳ್ಳುವವನಿಗೆ ಯಾವಾಗಲೂ ಹಾನಿಯುಂಟಾಗುವುದಿಲ್ಲ.

04004016a ಯತ್ನಾಚ್ಚೋಪಚರೇದೇನಮಗ್ನಿವದ್ದೇವವಚ್ಚ ಹ|

04004016c ಅನೃತೇನೋಪಚೀರ್ಣೋ ಹಿ ಹಿಂಸ್ಯಾದೇನಮಸಂಶಯಂ||

ಅಗ್ನಿ ದೇವನಂತೆ ಅವನನ್ನು ಯತ್ನಪೂರ್ವಕವಾಗಿ ಉಪಚರಿಸಬೇಕಾಗುತ್ತದೆ. ನಿಸ್ಸಂಶಯವಾಗಿಯೂ ಅವನು ಹುಸಿ ಉಪಚಾರಮಾಡುವವನನ್ನು ಹಿಂಸಿಸುತ್ತಾನೆ.

04004017a ಯಚ್ಚ ಭರ್ತಾನುಯುಂಜೀತ ತದೇವಾಭ್ಯನುವರ್ತಯೇತ್|

04004017c ಪ್ರಮಾದಮವಹೇಲಾಂ ಚ ಕೋಪಂ ಚ ಪರಿವರ್ಜಯೇತ್||

ಒಡೆಯನು ಏನನ್ನು ವಿಧಿಸುತ್ತಾನೋ ಅದನ್ನೇ ಅನುಸರಿಸಬೇಕು. ಪ್ರಮಾದ, ಅವಹೇಳನೆ ಮತ್ತು ಕೋಪವನ್ನು ಬಿಟ್ಟುಬಿಡಬೇಕು.

04004018a ಸಮರ್ಥನಾಸು ಸರ್ವಾಸು ಹಿತಂ ಚ ಪ್ರಿಯಮೇವ ಚ|

04004018c ಸಂವರ್ಣಯೇತ್ತದೇವಾಸ್ಯ ಪ್ರಿಯಾದಪಿ ಹಿತಂ ವದೇತ್||

ಸಮರ್ಥನೆ ನೀಡಬೇಕಾಗಿ ಬಂದಾಗಲೆಲ್ಲಾ ಹಿತ ಮತ್ತು ಪ್ರಿಯವಾದುದನ್ನೇ ಪ್ರತಿಪಾದಿಸಬೇಕು. ಅದರಲ್ಲೂ ಪ್ರಿಯವಾದುದಕ್ಕಿಂತ ಹಿತವಾದುದನ್ನು ಹೇಳಬೇಕು.

04004019a ಅನುಕೂಲೋ ಭವೇಚ್ಚಾಸ್ಯ ಸರ್ವಾರ್ಥೇಷು ಕಥಾಸು ಚ|

04004019c ಅಪ್ರಿಯಂ ಚಾಹಿತಂ ಯತ್ಸ್ಯಾತ್ತದಸ್ಮೈ ನಾನುವರ್ಣಯೇತ್||

ಎಲ್ಲ ವಿಷಯಗಳಲ್ಲಿಯೂ ಮಾತುಕಥೆಗಳಲ್ಲಿಯೂ ಅನುಕೂಲಕರನಾಗಿರಬೇಕು. ಅಪ್ರಿಯವೂ ಅಹಿತವೂ ಆಗಿದ್ದುದನ್ನು ಹೇಳಬಾರದು.

04004020a ನಾಹಮಸ್ಯ ಪ್ರಿಯೋಽಸ್ಮೀತಿ ಮತ್ವಾ ಸೇವೇತ ಪಂಡಿತಃ|

04004020c ಅಪ್ರಮತ್ತಶ್ಚ ಯತ್ತಶ್ಚ ಹಿತಂ ಕುರ್ಯಾತ್ಪ್ರಿಯಂ ಚ ಯತ್||

ಪಂಡಿತನಾದವನು ನಾನು ಇವನಿಗೆ ಪ್ರಿಯನಾದವನಲ್ಲ ಎಂದು ತಿಳಿದುಕೊಂಡೇ ಸೇವಿಸುತ್ತಾನೆ. ಅಪ್ರಮತ್ತನಾಗಿದ್ದುಕೊಂಡು ಸಂಯಮದಿಂದ ಹಿತವನ್ನೂ ಪ್ರಿಯವನ್ನೂ ಉಂಟುಮಾಡಬೇಕು.

04004021a ನಾಸ್ಯಾನಿಷ್ಟಾನಿ ಸೇವೇತ ನಾಹಿತೈಃ ಸಹ ಸಂವಸೇತ್|

04004021c ಸ್ವಸ್ಥಾನಾನ್ನ ವಿಕಂಪೇತ ಸ ರಾಜವಸತಿಂ ವಸೇತ್||

ಅವನಿಗೆ ಇಷ್ಟವಲ್ಲದ್ದನ್ನು ಮಾಡಕೂಡದು. ಅಹಿತರಾದವರೊಡನೆ ಇರಕೂಡದು. ಸ್ವಸ್ಥಾನದಿಂದ ಕದಲಬಾರದು. ಅಂಥವನು ರಾಜವಸತಿಯಲ್ಲಿ ವಾಸಿಸಬಹುದು.

04004022a ದಕ್ಷಿಣಂ ವಾಥ ವಾಮಂ ವಾ ಪಾರ್ಶ್ವಮಾಸೀತ ಪಂಡಿತಃ|

04004022c ರಕ್ಷಿಣಾಂ ಹ್ಯಾತ್ತಶಸ್ತ್ರಾಣಾಂ ಸ್ಥಾನಂ ಪಶ್ಚಾದ್ವಿಧೀಯತೇ||

04004022e ನಿತ್ಯಂ ವಿಪ್ರತಿಷಿದ್ಧಂ ತು ಪುರಸ್ತಾದಾಸನಂ ಮಹತ್||

ಪಂಡಿತನು ರಾಜನ ಪಕ್ಕ ಎಡಗಡೆ ಅಥವಾ ಬಲಗಡೆ ಕುಳಿತುಕೊಳ್ಳುಬೇಕು. ಶಸ್ತ್ರಧಾರಿ ರಕ್ಷಕರ ಸ್ಥಾನವು ಹಿಂದುಗಡೆ. ಎದುರುಗಡೆಯ ಎತ್ತರದ ಆಸನವು ಎಂದೂ ನಿಷಿದ್ಧವಾದುದು.

04004023a ನ ಚ ಸಂದರ್ಶನೇ ಕಿಂ ಚಿತ್ಪ್ರವೃದ್ಧಮಪಿ ಸಂಜಪೇತ್|

04004023c ಅಪಿ ಹ್ಯೇತದ್ದರಿದ್ರಾಣಾಂ ವ್ಯಲೀಕಸ್ಥಾನಮುತ್ತಮಂ||

ಸಂದರ್ಶನದ ಸಮಯದಲ್ಲಿ ಅತಿ ದೊಡ್ಡ ಮಾತುಗಳನ್ನು ಆಡಬಾರದು. ಇದು ಅತ್ಯಂತ ದರಿದ್ರ ಮತ್ತು ಕೆಳಸ್ಥಾನಕ್ಕೆ ಕಾರಣವಾಗುತ್ತದೆ.

04004024a ನ ಮೃಷಾಭಿಹಿತಂ ರಾಜ್ಞೋ ಮನುಷ್ಯೇಷು ಪ್ರಕಾಶಯೇತ್|

04004024c ಯಂ ಚಾಸೂಯಂತಿ ರಾಜಾನಃ ಪುರುಷಂ ನ ವದೇಚ್ಚ ತಂ||

ರಾಜನಾಡಿದ ಸುಳ್ಳನ್ನು ಜನರಮುಂದೆ ಪ್ರಕಟಿಸಬಾರದು. ರಾಜನು ಸೈರಿಸದ ವ್ಯಕ್ತಿಯೊಡನೆ ಮಾತನಾಡಕೂಡದು.

04004025a ಶೂರೋಽಸ್ಮೀತಿ ನ ದೃಪ್ತಃ ಸ್ಯಾದ್ಬುದ್ಧಿಮಾನಿತಿ ವಾ ಪುನಃ|

04004025c ಪ್ರಿಯಮೇವಾಚರನ್ರಾಜ್ಞಃ ಪ್ರಿಯೋ ಭವತಿ ಭೋಗವಾನ್||

ನಾನು ಶೂರ, ಬುದ್ಧಿವಂತ ಎಂದು ಅಹಂಕಾರ ಪಡಬಾರದು. ರಾಜನಿಗೆ ಮೆಚ್ಚಿಗೆಯಾಗುವಂತೆ ನಡೆದುಕೊಳ್ಳುವವನು ಸುಖಿಯೂ ಭೋಗವಂತನೂ ಆಗುತ್ತಾನೆ.

04004026a ಐಶ್ವರ್ಯಂ ಪ್ರಾಪ್ಯ ದುಷ್ಪ್ರಾಪಂ ಪ್ರಿಯಂ ಪ್ರಾಪ್ಯ ಚ ರಾಜತಃ|

04004026c ಅಪ್ರಮತ್ತೋ ಭವೇದ್ರಾಜ್ಞಃ ಪ್ರಿಯೇಷು ಚ ಹಿತೇಷು ಚ||

ಪಡೆಯಲಾಗದ ಐಶ್ವರ್ಯವನ್ನೂ ಪ್ರೀತಿಯನ್ನೂ ರಾಜನಿಂದ ಪಡೆದು, ರಾಜನಿಗೆ ಪ್ರಿಯವಾದವುಗಳಲ್ಲಿ ಮತ್ತು ಹಿತವಾದವುಗಳಲ್ಲಿ ಅಪ್ರಮತ್ತನಾಗಿರಬೇಕು.

04004027a ಯಸ್ಯ ಕೋಪೋ ಮಹಾಬಾಧಃ ಪ್ರಸಾದಶ್ಚ ಮಹಾಫಲಃ|

04004027c ಕಸ್ತಸ್ಯ ಮನಸಾಪೀಚ್ಛೇದನರ್ಥಂ ಪ್ರಾಜ್ಞಸಮ್ಮತಃ||

ಯಾರ ಕೋಪವು ಮಹಾಬಾಧೆಯೂ ಪ್ರಸಾದವು ಮಹಾಫಲವೂ ಆಗಿರುತ್ತದೆಯೋ ಅವನಿಗೆ ಪ್ರಾಜ್ಞಸಮ್ಮತನಾದ ಯಾರು ತಾನೇ ಮನಸ್ಸಿನಲ್ಲಿಯಾದರೂ ಅನರ್ಥವನ್ನು ಬಯಸುತ್ತಾನೆ?

04004028a ನ ಚೋಷ್ಠೌ ನಿರ್ಭುಜೇಜ್ಜಾತು ನ ಚ ವಾಕ್ಯಂ ಸಮಾಕ್ಷಿಪೇತ್|

04004028c ಸದಾ ಕ್ಷುತಂ ಚ ವಾತಂ ಚ ಷ್ಠೀವನಂ ಚಾಚರೇಚ್ಚನೈಃ||

ರಾಜನ ಮುಂದೆ ತುಟಿಗಳನ್ನು ಕಚ್ಚಬಾರದು, ಸುಮ್ಮನೇ ಬಾಯಿ ಹಾಕಬಾರದು, ಮತ್ತು ಯಾವಾಗಲೂ ಮೆಲ್ಲಗೆ ಸೀನಬೇಕು, ಹೂಸಬೇಕು ಮತ್ತು ಉಗುಳಬೇಕು. 

04004029a ಹಾಸ್ಯವಸ್ತುಷು ಚಾಪ್ಯಸ್ಯ ವರ್ತಮಾನೇಷು ಕೇಷು ಚಿತ್|

04004029c ನಾತಿಗಾಢಂ ಪ್ರಹೃಷ್ಯೇತ ನ ಚಾಪ್ಯುನ್ಮತ್ತವದ್ಧಸೇತ್||

ಅವನೇನಾದರೂ ಹಾಸ್ಯಾಸ್ಪದವಾಗಿ ನಡೆದುಕೊಂಡರೆ, ಜೋರಾಗಿ ನಗಬಾರದು ಮತ್ತು ಉನ್ಮತ್ತನಂತೆ ಖುಷಿಪಡಬಾರದು.

04004030a ನ ಚಾತಿಧೈರ್ಯೇಣ ಚರೇದ್ಗುರುತಾಂ ಹಿ ವ್ರಜೇತ್ತಥಾ|

04004030c ಸ್ಮಿತಂ ತು ಮೃದುಪೂರ್ವೇಣ ದರ್ಶಯೇತ ಪ್ರಸಾದಜಂ||

ಅತಿ ಧೈರ್ಯದಿಂದ ವರ್ತಿಸಬಾರದು ಮತ್ತು ಗಾಂಭೀರ್ಯವನ್ನು ತಾಳಬಾರದು. ಪ್ರಸನ್ನತೆಯ ಮೃದುವಾದ ನಸುನಗೆಯನ್ನು ತೋರಿಸಬೇಕು.

04004031a ಲಾಭೇ ನ ಹರ್ಷಯೇದ್ಯಸ್ತು ನ ವ್ಯಥೇದ್ಯೋಽವಮಾನಿತಃ|

04004031c ಅಸಮ್ಮೂಢಶ್ಚ ಯೋ ನಿತ್ಯಂ ಸ ರಾಜವಸತಿಂ ವಸೇತ್||

ಲಾಭವಾದಾಗ ಹಿಗ್ಗದವನು, ಅವಮಾನವಾದಾಗ ವ್ಯಥೆಪಡೆದಿರುವವನು, ಯಾವಾಗಲೂ ಜಾಗರೂಕನಾಗಿರುವವನು ರಾಜವಸತಿಯಲ್ಲಿ ವಾಸಿಸಬಲ್ಲನು.

04004032a ರಾಜಾನಂ ರಾಜಪುತ್ರಂ ವಾ ಸಂವರ್ತಯತಿ ಯಃ ಸದಾ|

04004032c ಅಮಾತ್ಯಃ ಪಂಡಿತೋ ಭೂತ್ವಾ ಸ ಚಿರಂ ತಿಷ್ಠತಿ ಶ್ರಿಯಂ||

ರಾಜನನ್ನು ರಾಜಪುತ್ರರನ್ನು ಸದಾ ಅನುಸರಿಸುವ ಪಂಡಿತನು ಅಮಾತ್ಯನಾಗಿ ಚಿರವಾದ ಸಂಪತ್ತನ್ನು ಹೊಂದುತ್ತಾನೆ.

04004033a ಪ್ರಗೃಹೀತಶ್ಚ ಯೋಽಮಾತ್ಯೋ ನಿಗೃಹೀತಶ್ಚ ಕಾರಣೈಃ|

04004033c ನ ನಿರ್ಬಧ್ನಾತಿ ರಾಜಾನಂ ಲಭತೇ ಪ್ರಗ್ರಹಂ ಪುನಃ||

ಪುರಸ್ಕೃತನಾಗಿದ್ದ ಅಮಾತ್ಯನು ಯಾವುದೋ ಕಾರಣಗಳಿಂದ ತಿರಸ್ಕೃತನಾಗಿದ್ದರೆ, ಅದಕ್ಕಾಗಿ ರಾಜನನ್ನು ವಿರೋಧಿಸದಿದ್ದರೆ ಅವನು ಪುನಃ ಅನುಗ್ರಹವನ್ನು ಪಡೆಯುವನು.

04004034a ಪ್ರತ್ಯಕ್ಷಂ ಚ ಪರೋಕ್ಷಂ ಚ ಗುಣವಾದೀ ವಿಚಕ್ಷಣಃ|

04004034c ಉಪಜೀವೀ ಭವೇದ್ರಾಜ್ಞೋ ವಿಷಯೇ ಚಾಪಿ ಯೋ ವಸೇತ್||

ರಾಜನ ಉಪಜೀವಿಯಾಗಿ ಅವನ ನಾಡಿನಲ್ಲಿ ವಾಸಿಸುವ ವಿಚಕ್ಷಣನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅವನ ಗುಣವಾದಿಯಾಗಿರಬೇಕು.

04004035a ಅಮಾತ್ಯೋ ಹಿ ಬಲಾದ್ಭೋಕ್ತುಂ ರಾಜಾನಂ ಪ್ರಾರ್ಥಯೇತ್ತು ಯಃ|

04004035c ನ ಸ ತಿಷ್ಠೇಚ್ಚಿರಂ ಸ್ಥಾನಂ ಗಚ್ಛೇಚ್ಚ ಪ್ರಾಣಸಂಶಯಂ||

ಬಲವಂತದಿಂದ ಭೋಗಿಸಲು ರಾಜನನ್ನು ಪ್ರಾರ್ಥಿಸುವ ಅಮಾತ್ಯನು ಬಹುಕಾಲ ಸ್ಥಾನದಲ್ಲಿರುವುದಿಲ್ಲ ಮತ್ತು ಪ್ರಾಣಾಪಾಯಕ್ಕೆ ಗುರಿಯಾಗುವನು.

04004036a ಶ್ರೇಯಃ ಸದಾತ್ಮನೋ ದೃಷ್ಟ್ವಾ ಪರಂ ರಾಜ್ಞಾ ನ ಸಂವದೇತ್|

04004036c ವಿಶೇಷಯೇನ್ನ ರಾಜಾನಂ ಯೋಗ್ಯಾಭೂಮಿಷು ಸರ್ವದಾ||

ತನ್ನ ಶ್ರೇಯಸ್ಸನ್ನೇ ನೋಡಿಕೊಂಡು ರಾಜನ ಶತ್ರುವಿನೊಡನೆ ಎಂದೂ ಮಾತನಾಡಬಾರದು. ಯೋಗ್ಯತೆಯ ವಿಷಯದಲ್ಲಿ ರಾಜನನ್ನು ಎಂದೂ ಕೀಳಾಗಿ ಕಾಣಬಾರದು.

04004037a ಅಮ್ಲಾನೋ ಬಲವಾನ್ ಶೂರಶ್ಚಾಯೇವಾನಪಗಃ ಸದಾ|

04004037c ಸತ್ಯವಾದೀ ಮೃದುರ್ದಾಂತಃ ಸ ರಾಜವಸತಿಂ ವಸೇತ್||

ಕಳೆಗುಂದದವನು, ಬಲವಂತನು, ಶೂರನು, ನೆರಳಿನಂತೆ ಸದಾ ಒಡನಿರುವವನು, ಸತ್ಯವಾದೀ, ಮೃದು, ಮತ್ತು ಸಂಯಮಿಯಾದವನು ರಾಜವಸತಿಯಲ್ಲಿ ವಾಸಿಸಬಲ್ಲನು.

04004038a ಅನ್ಯಸ್ಮಿನ್ಪ್ರೇಷ್ಯಮಾಣೇ ತು ಪುರಸ್ತಾದ್ಯಃ ಸಮುತ್ಪತೇತ್|

04004038c ಅಹಂ ಕಿಂ ಕರವಾಣೀತಿ ಸ ರಾಜವಸತಿಂ ವಸೇತ್||

ಇನ್ನೊಬ್ಬನನ್ನು ಕಳುಹಿಸುತ್ತಿರುವಾಗ ಮುಂದೆ ಬಂದು ನಾನೇನು ಮಾಡಲಿ ಎಂದು ಕೇಳುವವನು ರಾಜವಸತಿಯಲ್ಲಿ ವಾಸಿಸಬಲ್ಲನು.

04004039a ಉಷ್ಣೇ ವಾ ಯದಿ ವಾ ಶೀತೇ ರಾತ್ರೌ ವಾ ಯದಿ ವಾ ದಿವಾ|

04004039c ಆದಿಷ್ಟೋ ನ ವಿಕಲ್ಪೇತ ಸ ರಾಜವಸತಿಂ ವಸೇತ್||

ಬೇಸಿಗೆಯಲ್ಲಾಗಲೀ, ಛಳಿಯಲ್ಲಾಗಲೀ, ರಾತ್ರಿಯಾಗಲೀ, ದಿನವಾಗಲೀ, ಅಪ್ಪಣೆ ಕೊಟ್ಟಾಗ ಹಿಂದೆಮುಂದೆ ನೋಡದವನು ರಾಜವಸತಿಯಲ್ಲಿ ವಾಸಿಸಬಲ್ಲನು.

04004040a ಯೋ ವೈ ಗೃಹೇಭ್ಯಃ ಪ್ರವಸನ್ಪ್ರಿಯಾಣಾಂ ನಾನುಸಂಸ್ಮರೇತ್|

04004040c ದುಃಖೇನ ಸುಖಮನ್ವಿಚ್ಛೇತ್ಸ ರಾಜವಸತಿಂ ವಸೇತ್||

ಮನೆಯಿಂದ ದೂರವಿದ್ದೂ ಪ್ರಿಯರನ್ನು ನೆನೆಯದೆ ದುಃಖ ಮತ್ತು ಸುಖವನ್ನು ಅನುಭವಿಸುವವನು ರಾಜವಸತಿಯಲ್ಲಿ ವಾಸಿಸಬಲ್ಲನು.

04004041a ಸಮವೇಷಂ ನ ಕುರ್ವೀತ ನಾತ್ಯುಚ್ಚೈಃ ಸನ್ನಿಧೌ ಹಸೇತ್|

04004041c ಮಂತ್ರಂ ನ ಬಹುಧಾ ಕುರ್ಯಾದೇವಂ ರಾಜ್ಞಃ ಪ್ರಿಯೋ ಭವೇತ್||

ತನ್ನಹಾಗಿನ ವಸ್ತ್ರವನ್ನು ಧರಿಸದ, ತನ್ನ ಸನ್ನಿಧಿಯಲ್ಲಿ ಗಟ್ಟಿಯಾಗಿ ನಗದ, ಮಂತ್ರಾಲೋಚನೆಯನ್ನು ಬಯಲು ಮಾಡದವನು ರಾಜನಿಗೆ ಪ್ರಿಯಕರನಾಗಿರುತ್ತಾನೆ.

04004042a ನ ಕರ್ಮಣಿ ನಿಯುಕ್ತಃ ಸನ್ಧನಂ ಕಿಂ ಚಿದುಪಸ್ಪೃಶೇತ್|

04004042c ಪ್ರಾಪ್ನೋತಿ ಹಿ ಹರನ್ದ್ರವ್ಯಂ ಬಂಧನಂ ಯದಿ ವಾ ವಧಂ||

ಕೆಲಸದಲ್ಲಿ ನಿಯುಕ್ತನಾದವನು ಎಂದೂ ಸ್ವಲ್ಪವೂ ಧನವನ್ನು ಮುಟ್ಟಬಾರದು. ದ್ರವ್ಯಾಪಹರಣ ಮಾಡಿದವನು ಬಂಧನ ಅಥವಾ ವಧೆಗೆ ಗುರಿಯಾಗುತ್ತಾನೆ.

04004043a ಯಾನಂ ವಸ್ತ್ರಮಲಂಕಾರಂ ಯಚ್ಚಾನ್ಯತ್ಸಂಪ್ರಯಚ್ಛತಿ|

04004043c ತದೇವ ಧಾರಯೇನ್ನಿತ್ಯಮೇವಂ ಪ್ರಿಯತರೋ ಭವೇತ್||

ಅವನು ಕೊಟ್ಟ ವಾಹನ, ವಸ್ತ್ರ, ಅಲಂಕಾರ ಮತ್ತು ಇತರ ವಸ್ತುಗಳನ್ನು ಯಾವಾಗಲೂ ಬಳಸಬೇಕು. ಇದರಿಂದ ಅವನಿಗೆ ಪ್ರಿಯಕನರಾಗುತ್ತಾನೆ.

04004044a ಸಂವತ್ಸರಮಿಮಂ ತಾತ ತಥಾಶೀಲಾ ಬುಭೂಷವಃ|

04004044c ಅಥ ಸ್ವವಿಷಯಂ ಪ್ರಾಪ್ಯ ಯಥಾಕಾಮಂ ಚರಿಷ್ಯಥ||

ಮಕ್ಕಳೇ! ಈ ವರ್ಷವನ್ನು ಹೀಗೆಯೇ ನಡೆದುಕೊಂಡು ಕಳೆಯಿರಿ. ನಂತರ ಸ್ವದೇಶವನ್ನು ಸೇರಿ ನಿಮಗಿಷ್ಟಬಂದಂತೆ ನಡೆದುಕೊಳ್ಳಬಹುದು.”

04004045 ಯುಧಿಷ್ಠಿರ ಉವಾಚ|

04004045a ಅನುಶಿಷ್ಟಾಃ ಸ್ಮ ಭದ್ರಂ ತೇ ನೈತದ್ವಕ್ತಾಸ್ತಿ ಕಶ್ಚನ|

04004045c ಕುಂತೀಮೃತೇ ಮಾತರಂ ನೋ ವಿದುರಂ ಚ ಮಹಾಮತಿಂ||

ಯುಧಿಷ್ಠಿರನು ಹೇಳಿದನು: “ಮಾತೆ ಕುಂತಿ ಮತ್ತು ಮಹಾಮತಿ ವಿದುರನನ್ನು ಬಿಟ್ಟು ಇದನ್ನೆಲ್ಲ ನಮಗೆ ಹೇಳುವವರು ಬೇರೆ ಯಾರೂ ಇಲ್ಲ. ನಿನ್ನಿಂದ ಅನುಶಿಷ್ಟರಾಗಿದ್ದೇವೆ. ನಿನಗೆ ಮಂಗಳವಾಗಲಿ.

04004046a ಯದೇವಾನಂತರಂ ಕಾರ್ಯಂ ತದ್ಭವಾನ್ಕರ್ತುಮರ್ಹತಿ|

04004046c ತಾರಣಾಯಾಸ್ಯ ದುಃಖಸ್ಯ ಪ್ರಸ್ಥಾನಾಯ ಜಯಾಯ ಚ||

ದುಃಖವನ್ನು ದಾಟಲು ಈ ಪ್ರಯಾಣವು ವಿಜಯವಾಗಲೆಂದು ಮುಂದಿನ ಕಾರ್ಯಗಳನ್ನು ನೀನು ನಡೆಸಿಕೊಡಬೇಕು.””

04004047 ವೈಶಂಪಾಯನ ಉವಾಚ|

04004047a ಏವಮುಕ್ತಸ್ತತೋ ರಾಜ್ಞಾ ಧೌಮ್ಯೋಽಥ ದ್ವಿಜಸತ್ತಮಃ|

04004047c ಅಕರೋದ್ವಿಧಿವತ್ಸರ್ವಂ ಪ್ರಸ್ಥಾನೇ ಯದ್ವಿಧೀಯತೇ||

ವೈಶಂಪಾಯನನು ಹೇಳಿದನು: “ರಾಜನು ಹೀಗೆ ಹೇಳಲು ದ್ವಿಜಸತ್ತಮ ಧೌಮ್ಯನು ಪ್ರಸ್ಥಾನವೇಳೆಗೆ ತಕ್ಕುದಾದ ಎಲ್ಲವನ್ನೂ ವಿಧಿವತ್ತಾಗಿ ನೆರವೇರಿಸಿದನು.

04004048a ತೇಷಾಂ ಸಮಿಧ್ಯ ತಾನಗ್ನೀನ್ಮಂತ್ರವಚ್ಚ ಜುಹಾವ ಸಃ|

04004048c ಸಮೃದ್ಧಿವೃದ್ಧಿಲಾಭಾಯ ಪೃಥಿವೀವಿಜಯಾಯ ಚ||

ಅವರ ಸಮೃದ್ಧಿ, ವೃದ್ಧಿ, ಲಾಭ ಮತ್ತು ಪಥ್ವೀವಿಜಯಕ್ಕಾಗಿ ಉರಿಯುತ್ತಿರುವ ಅಗ್ನಿಯಲ್ಲಿ ಮಂತ್ರವತ್ತಾಗಿ ಹೋಮ ಮಾಡಿಸಿದನು.

04004049a ಅಗ್ನಿಂ ಪ್ರದಕ್ಷಿಣಂ ಕೃತ್ವಾ ಬ್ರಾಹ್ಮಣಾಂಶ್ಚ ತಪೋಧನಾನ್|

04004049c ಯಾಜ್ಞಸೇನೀಂ ಪುರಸ್ಕೃತ್ಯ ಷಡೇವಾಥ ಪ್ರವವ್ರಜುಃ||

ಅಗ್ನಿಯನ್ನೂ ತಪೋಧನ ಬ್ರಾಹ್ಮಣರನ್ನೂ ಪ್ರದಕ್ಷಿಣೆಮಾಡಿ ಯಾಜ್ಞಸೇನಿಯನ್ನು ಮುಂದಿಟ್ಟುಕೊಂಡು ಆ ಆರು ಮಂದಿಯೂ ಹೊರಟರು.” 

ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಧೌಮ್ಯೋಪದೇಶೇ ಚತುರ್ಥೋಽಧ್ಯಾಯಃ||

ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಧೌಮ್ಯೋಪದೇಶದಲ್ಲಿ ನಾಲ್ಕನೆಯ ಅಧ್ಯಾಯವು.

Related image

Comments are closed.