Virata Parva: Chapter 33

ವಿರಾಟ ಪರ್ವ: ಗೋಹರಣ ಪರ್ವ

೩೩

ಕುರುಗಳಿಂದ ವಿರಾಟನ ಗೋಗ್ರಹಣ

ಕೌರವರು ಉತ್ತರದಿಕ್ಕಿನಿಂದ ಬಂದು ವಿರಾಟನ ಗೋವುಗಳನ್ನು ಹಿಡಿದುದು (೧-೫). ಗೋಪಾಲಕನು ವಿಷಯವನ್ನು ಅರಮನೆಯ ಸ್ತ್ರೀಯರ ಮಧ್ಯದಲ್ಲಿದ್ದ ವಿರಾಟನ ಮಗ ಭೂಮಿಂಜಯನಿಗೆ ನಿವೇದಿಸುವುದು (೬-೨೧).

04033001 ವೈಶಂಪಾಯನ ಉವಾಚ|

04033001a ಯಾತೇ ತ್ರಿಗರ್ತಂ ಮತ್ಸ್ಯೇ ತು ಪಶೂಂಸ್ತಾನ್ಸ್ವಾನ್ಪರೀಪ್ಸತಿ|

04033001c ದುರ್ಯೋಧನಃ ಸಹಾಮಾತ್ಯೋ ವಿರಾಟಮುಪಯಾದಥ||

ವೈಶಂಪಾಯನನು ಹೇಳಿದನು: “ಮತ್ಸ್ಯರಾಜನು ಆ ತನ್ನ ಹಸುಗಳನ್ನು ಬಿಡಿಸಿಕೊಳ್ಳುವುದಕ್ಕಾಗಿ ತ್ರಿಗರ್ತರಾಜನೆಡೆಗೆ ಹೋಗಿರಲು, ಇತ್ತ ದುರ್ಯೋಧನನು ಮಂತ್ರಿಗಳೊಡನೆ ವಿರಾಟನ ಮೇಲೆ ಧಾಳಿಮಾಡಿದನು.

04033002a ಭೀಷ್ಮೋ ದ್ರೋಣಶ್ಚ ಕರ್ಣಶ್ಚ ಕೃಪಶ್ಚ ಪರಮಾಸ್ತ್ರವಿತ್|

04033002c ದ್ರೌಣಿಶ್ಚ ಸೌಬಲಶ್ಚೈವ ತಥಾ ದುಃಶಾಸನಃ ಪ್ರಭುಃ||

04033003a ವಿವಿಂಶತಿರ್ವಿಕರ್ಣಶ್ಚ ಚಿತ್ರಸೇನಶ್ಚ ವೀರ್ಯವಾನ್|

04033003c ದುರ್ಮುಖೋ ದುಃಸಹಶ್ಚೈವ ಯೇ ಚೈವಾನ್ಯೇ ಮಹಾರಥಾಃ||

04033004a ಏತೇ ಮತ್ಸ್ಯಾನುಪಾಗಮ್ಯ ವಿರಾಟಸ್ಯ ಮಹೀಪತೇಃ|

04033004c ಘೋಷಾನ್ವಿದ್ರಾವ್ಯ ತರಸಾ ಗೋಧನಂ ಜಹ್ರುರೋಜಸಾ||

ಭೀಷ್ಮ, ದ್ರೋಣ, ಕರ್ಣ, ಶ್ರೇಷ್ಠ ಅಸ್ತ್ರಗಳನ್ನು ಬಲ್ಲ ಕೃಪ, ಅಶ್ವತ್ಥಾಮ, ಸೌಬಲ, ಪ್ರಭು ದುಃಶಾಸನ, ವಿವಿಂಶತಿ, ವಿಕರ್ಣ, ವೀರ್ಯವಂತ ಚಿತ್ರಸೇನ, ದುರ್ಮುಖ, ದುಃಸಹ, ಮತ್ತು ಇತರ ಮಹಾರಥರು ಇವರೆಲ್ಲರೂ ಮತ್ಸ್ಯದ ಮೇಲೆ ಎರಗಿ, ವಿರಾಟರಾಜನ ತುರುಹಟ್ಟಿಗಳನ್ನು ತ್ವರಿತವಾಗಿ ಆಕ್ರಮಿಸಿ, ಗೋಧನವನ್ನು ಬಲಾತ್ಕಾರವಾಗಿ ವಶಪಡಿಸಿಕೊಂಡರು.

04033005a ಷಷ್ಟಿಂ ಗವಾಂ ಸಹಸ್ರಾಣಿ ಕುರವಃ ಕಾಲಯಂತಿ ತೇ|

04033005c ಮಹತಾ ರಥವಂಶೇನ ಪರಿವಾರ್ಯ ಸಮಂತತಃ||

ಆ ಕುರುಗಳು ದೊಡ್ದ ರಥಸಮೂಹದೊಡನೆ ಸುತ್ತಲೂ ಮುತ್ತಿ ಅರವತ್ತು ಸಾವಿರ ಗೋವುಗಳನ್ನು ಹಿಡಿದುಕೊಂಡರು.

04033006a ಗೋಪಾಲಾನಾಂ ತು ಘೋಷೇಷು ಹನ್ಯತಾಂ ತೈರ್ಮಹಾರಥೈಃ|

04033006c ಆರಾವಃ ಸುಮಹಾನಾಸೀತ್ಸಂಪ್ರಹಾರೇ ಭಯಂಕರೇ||

ಭಯಂಕರ ಹೊಡೆದಾಟದಲ್ಲಿ ಆ ಮಹಾರಥರಿಂದ ಪೆಟ್ಟು ತಿಂದ ಗೋಪಾಲರ ಬೊಬ್ಬೆ ತುರುಹಟ್ಟಿಗಳಲ್ಲಿ ಜೋರಾಯಿತು.

04033007a ಗವಾಧ್ಯಕ್ಷಸ್ತು ಸಂತ್ರಸ್ತೋ ರಥಮಾಸ್ಥಾಯ ಸತ್ವರಃ|

04033007c ಜಗಾಮ ನಗರಾಯೈವ ಪರಿಕ್ರೋಶಂಸ್ತದಾರ್ತವತ್||

ಆಗ ಹೆದರಿದ ಗೋಮುಖ್ಯಸ್ಥನಾದರೋ ಬೇಗ ರಥವನ್ನೇರಿ, ಆರ್ತನಂತೆ ಹುಯ್ಯಲಿಡುತ್ತಾ ನಗರಕ್ಕೆ ಹೋದನು.

04033008a ಸ ಪ್ರವಿಶ್ಯ ಪುರಂ ರಾಜ್ಞೋ ನೃಪವೇಶ್ಮಾಭ್ಯಯಾತ್ತತಃ|

04033008c ಅವತೀರ್ಯ ರಥಾತ್ತೂರ್ಣಮಾಖ್ಯಾತುಂ ಪ್ರವಿವೇಶ ಹ||

ಅವನು ರಾಜನ ಪುರವನ್ನು ಹೊಕ್ಕು, ಅರಮನೆಗೆ ಹೋಗಿ, ಬಳಿಕ ರಥದಿಂದ ಬೇಗ ಇಳಿದು, ನಡೆದುದೆಲ್ಲವನ್ನೂ ಹೇಳಲು ಒಳಹೊಕ್ಕನು.

04033009a ದೃಷ್ಟ್ವಾ ಭೂಮಿಂಜಯಂ ನಾಮ ಪುತ್ರಂ ಮತ್ಸ್ಯಸ್ಯ ಮಾನಿನಂ|

04033009c ತಸ್ಮೈ ತತ್ಸರ್ವಮಾಚಷ್ಟ ರಾಷ್ಟ್ರಸ್ಯ ಪಶುಕರ್ಷಣಂ||

ಭೂಮಿಂಜಯನೆಂಬ ಹೆಸರಿನ ಮತ್ಸ್ಯರಾಜನ ಮಾನವಂತ ಮಗನನ್ನು ಕಂಡು ಅವನಿಗೆ ನಾಡಿನ ಗೋವುಗಳ ಸೂರೆಯ ಕುರಿತು ಎಲ್ಲವನ್ನೂ ತಿಳಿಸಿದನು:

04033010a ಷಷ್ಟಿಂ ಗವಾಂ ಸಹಸ್ರಾಣಿ ಕುರವಃ ಕಾಲಯಂತಿ ತೇ|

04033010c ತದ್ವಿಜೇತುಂ ಸಮುತ್ತಿಷ್ಠ ಗೋಧನಂ ರಾಷ್ಟ್ರವರ್ಧನಂ||

“ಕುರುಗಳು ನಿನ್ನ ಅರವತ್ತು ಸಾವಿರ ಗೋವುಗಳನ್ನು ಹಿಡಿದೊಯ್ಯುತ್ತಿದ್ದಾರೆ. ರಾಷ್ಟ್ರವರ್ಧಕ ಆ ಗೋಧನವನ್ನು ಗೆದ್ದು ತರಲು ಎದ್ದೇಳು!

04033011a ರಾಜಪುತ್ರ ಹಿತಪ್ರೇಪ್ಸುಃ ಕ್ಷಿಪ್ರಂ ನಿರ್ಯಾಹಿ ವೈ ಸ್ವಯಂ|

04033011c ತ್ವಾಂ ಹಿ ಮತ್ಸ್ಯೋ ಮಹೀಪಾಲಃ ಶೂನ್ಯಪಾಲಮಿಹಾಕರೋತ್||

ರಾಜಪುತ್ರ! ರಾಜ್ಯದ ಹಿತಾಕಾಂಕ್ಷಿಯಾಗಿ ನೀನು ಸ್ವತಃ ಬೇಗ ಹೊರಡು. ದೊರೆ ಮತ್ಸ್ಯನು ನಿನ್ನನ್ನಿಲ್ಲಿ ಶೂನ್ಯನಗರಕ್ಕೆ ರಕ್ಷಕನನ್ನಾಗಿ ಮಾಡಿದ್ದಾನೆ.

04033012a ತ್ವಯಾ ಪರಿಷದೋ ಮಧ್ಯೇ ಶ್ಲಾಘತೇ ಸ ನರಾಧಿಪಃ|

04033012c ಪುತ್ರೋ ಮಮಾನುರೂಪಶ್ಚ ಶೂರಶ್ಚೇತಿ ಕುಲೋದ್ವಹಃ||

04033013a ಇಷ್ವಸ್ತ್ರೇ ನಿಪುಣೋ ಯೋಧಃ ಸದಾ ವೀರಶ್ಚ ಮೇ ಸುತಃ|

04033013c ತಸ್ಯ ತತ್ಸತ್ಯಮೇವಾಸ್ತು ಮನುಷ್ಯೇಂದ್ರಸ್ಯ ಭಾಷಿತಂ||

ಆ ರಾಜನು ಸಭೆಯ ನಡುವೆ ನನ್ನ ಮಗ ನನಗೆ ಅನುರೂಪನಾದವನು. ಶೂರ, ಕುಲೋದ್ಧಾರಕ, ಬಾಣಗಳಲ್ಲಿಯೂ ಅಸ್ತ್ರಗಳಲ್ಲಿಯೂ ನಿಪುಣನಾದ ಯೋಧ. ನನ್ನ ಮಗ ಯಾವಾಗಲೂ ವೀರ ಎಂದು ನಿನ್ನನ್ನು ಹೊಗಳುತ್ತಿರುತ್ತಾನೆ. ದೊರೆಯ ಆ ಮಾತು ಸತ್ಯವೇ ಆಗಲಿ.

04033014a ಆವರ್ತಯ ಕುರೂಂ ಜಿತ್ವಾ ಪಶೂನ್ಪಶುಮತಾಂ ವರ|

04033014c ನಿರ್ದಹೈಷಾಮನೀಕಾನಿ ಭೀಮೇನ ಶರತೇಜಸಾ||

ಗೋಸಂಪತ್ತುಗಳುಳ್ಳವರಲ್ಲಿ ಶ್ರೇಷ್ಠನೇ! ಕುರುಗಳನ್ನು ಗೆದ್ದು ಗೋವುಗಳನ್ನು ಮರಳಿಸು. ನಿನ್ನ ಭಯಂಕರ ಶರತೇಜಸ್ಸಿನಿಂದ ಅವರ ಸೈನ್ಯವನ್ನು ಸುಟ್ಟುಹಾಕು!

04033015a ಧನುಶ್ಚ್ಯುತೈ ರುಕ್ಮಪುಂಖೈಃ ಶರೈಃ ಸಂನತಪರ್ವಭಿಃ|

04033015c ದ್ವಿಷತಾಂ ಭಿಂಧ್ಯನೀಕಾನಿ ಗಜಾನಾಮಿವ ಯೂಥಪಃ||

ಬಿಲ್ಲಿನಿಂದ ಬಿಟ್ಟ, ಚಿನ್ನದ ಗರಿಯುಳ್ಳ, ಗೆಣ್ಣನ್ನು ನೇರ ಮಾಡಿದ ಬಾಣಗಳಿಂದ ಶತ್ರುಸೈನ್ಯಗಳನ್ನು ಗಜೇಂದ್ರನಂತೆ ಭೇದಿಸು.

04033016a ಪಾಶೋಪಧಾನಾಂ ಜ್ಯಾತಂತ್ರೀಂ ಚಾಪದಂಡಾಂ ಮಹಾಸ್ವನಾಂ|

04033016c ಶರವರ್ಣಾಂ ಧನುರ್ವೀಣಾಂ ಶತ್ರುಮಧ್ಯೇ ಪ್ರವಾದಯ||

ಎರಡು ತುಡಿಗಟ್ಟುಗಳೇ ಉಪಧಾನವಾಗಿರುವ, ಹೆದೆಯೆಂಬ ತಂತಿಯನ್ನೂ, ಚಾಪವೆಂಬ ದಂಡವನ್ನೂ, ಬಾಣಗಳೆಂಬ ವರ್ಣಗಳನ್ನೂ ಉಳ್ಳ ಮಹಾನಾದವನ್ನುಂಟುಮಾಡುವ ನಿನ್ನ ಧನುಸ್ಸೆಂಬ ವೀಣೆಯನ್ನು ವೈರಿಗಳ ನಡುವೆ ಮಿಡಿಸು.

04033017a ಶ್ವೇತಾ ರಜತಸಂಕಾಶಾ ರಥೇ ಯುಜ್ಯಂತು ತೇ ಹಯಾಃ|

04033017c ಧ್ವಜಂ ಚ ಸಿಂಹಂ ಸೌವರ್ಣಮುಚ್ಛ್ರಯಂತು ತವಾಭಿಭೋಃ||

ಪ್ರಭೂ! ಬೆಳ್ಳಿಯಂತಹ ನಿನ್ನ ಬಿಳಿಯ ಕುದುರೆಗಳನ್ನು ರಥಕ್ಕೆ ಹೂಡು. ಅದರ ಮೇಲೆ ನಿನ್ನ ಚಿನ್ನದ ಸಿಂಹಧ್ವಜವನ್ನು ಹಾರಿಸು.

04033018a ರುಕ್ಮಪುಂಖಾಃ ಪ್ರಸನ್ನಾಗ್ರಾ ಮುಕ್ತಾ ಹಸ್ತವತಾ ತ್ವಯಾ|

04033018c ಚಾದಯಂತು ಶರಾಃ ಸೂರ್ಯಂ ರಾಜ್ಞಾಮಾಯುರ್ನಿರೋಧಿನಃ||

ನಿನ್ನ ದೃಢ ಬಾಹುಗಳಿಂದ ಬಿಟ್ಟ ಚಿನ್ನದ ಗರಿಗಳುಳ್ಳ, ಹೊಳೆಯುವ ಮೊನೆಗಳನ್ನುಳ್ಳ, ರಾಜರ ಆಯುಷ್ಯವನ್ನು ಮುಗಿಸುವ ಬಾಣಗಳು ಸೂರ್ಯನನ್ನು ಮುಚ್ಚಲಿ.

04033019a ರಣೇ ಜಿತ್ವಾ ಕುರೂನ್ಸರ್ವಾನ್ವಜ್ರಪಾಣಿರಿವಾಸುರಾನ್|

04033019c ಯಶೋ ಮಹದವಾಪ್ಯ ತ್ವಂ ಪ್ರವಿಶೇದಂ ಪುರಂ ಪುನಃ||

ಇಂದ್ರನು ರಾಕ್ಷಸರನ್ನು ಗೆದ್ದಂತೆ ಕುರುಗಳನ್ನೆಲ್ಲ ಯುದ್ಧದಲ್ಲಿ ಗೆದ್ದು ಮಹಾಯಶವನ್ನು ಪಡೆದು ಮತ್ತೆ ಈ ಪುರವನ್ನು ಪ್ರವೇಶಿಸು.

04033020a ತ್ವಂ ಹಿ ರಾಷ್ಟ್ರಸ್ಯ ಪರಮಾ ಗತಿರ್ಮತ್ಸ್ಯಪತೇಃ ಸುತಃ|

04033020c ಗತಿಮಂತೋ ಭವಂತ್ವದ್ಯ ಸರ್ವೇ ವಿಷಯವಾಸಿನಃ||

ಮತ್ಸ್ಯರಾಜ ಪುತ್ರನಾದ ನೀನೇ ಈಗ ರಾಷ್ಟ್ರಕ್ಕೆ ಪರಮಗತಿ. ದೇಶವಾಸಿಗಳೆಲ್ಲ ಇಂದು ಗತಿಯುಳ್ಳವರಾಗಲಿ.”

04033021a ಸ್ತ್ರೀಮಧ್ಯ ಉಕ್ತಸ್ತೇನಾಸೌ ತದ್ವಾಕ್ಯಮಭಯಂಕರಂ|

04033021c ಅಂತಃಪುರೇ ಶ್ಲಾಘಮಾನ ಇದಂ ವಚನಮಬ್ರವೀತ್||

ಅಂತಃಪುರದಲ್ಲಿ ಹೆಂಗಸರ ನಡುವೆ ಅವನು ಹೀಗೆ ಹೇಳಲು, ಭೂಮಿಂಜಯನು ಧೈರ್ಯಕೊಡುವ ಆ ಮಾತನ್ನು ಹೊಗಳುತ್ತಾ, ಈ ಮಾತುಗಳನ್ನಾಡಿದನು.

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಗೋಪವಾಕ್ಯೇ ತ್ರಯಸ್ತ್ರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಗೋಪವಾಕ್ಯದಲ್ಲಿ ಮೂವತ್ಮೂರನೆಯ ಅಧ್ಯಾಯವು.

Image result for flowers against white background

Comments are closed.